Skip to main content

ಕನ್ನಡ ಗುರುವಿನ ಮರೆಯದ ಸ್ಮರಣೆ

ಸರಿಯಾಗಿ ಐವತ್ತು ವರ್ಷಗಳ ಹಿಂದೆ ಸೊರಬದ ಪುರ ಪ್ರೌಢಶಾಲೆಯಲ್ಲಿ  ಕನ್ನಡ ಗುರುಗಳಾಗಿದ್ದವರು ಬಿವಿ ಎಂದು ಪರಿಚಿತರಾಗಿದ್ದ ಕನ್ನಡ ಪಂಡಿತರು. ಶಾಲೆಗೆ ಬರುವಾಗ ಪಂಚೆ, ದೊಡ್ಡ ಅಂಗಿ, ಸಾಮಾನ್ಯವಾಗಿ ಒಂದು ಕೈ ಚೀಲ, ಸಂಪ್ರದಾಯಸ್ದ  ವ್ಯಕ್ತಿ. ಇವರೇ ನಮ್ಮ ಬೀವಿ ಭಟ್ಟರು. ನಾನು ಹೊರ ಊರಿನಿಂದ ಬಂದಿದ್ದು, ಈ  ಶಾಲೆ ಯಲ್ಲಿ ಓದಿದ್ದು ಮೂರೇ ವರ್ಷಗಳಾದರೂ  ನನ್ನ ಜೀವನದ ಉದ್ದಕ್ಕೂ  ಸಾವಿರಾರು ಬಾರಿ ನೆನಪಿಗೆ ಬಂದಿದ್ದಾರೆ. ಅವರು ಕನ್ನಡ ಪಾಠದಲ್ಲಿನ ವ್ಯಾಕರಣ,ಸಂಧಿ ಸಮಾಸಗಳ ಪರಿಚಯ ಮಾಡುವಾಗ,
ಜೈಮಿನಿ ವಚನ ಚಂದ್ರಿಕೆ ಯಲ್ಲಿ ವಿವರಿಸುತ್ತಿದ್ದ ಅಶ್ವಮೇಧದ ಕುದುರೆ, ಅದನ್ನು ಕಟ್ಟಿಹಾಕುವ ವಿವಿಧ ಅರಸರು, ಹಂಸಧ್ವಜ ಸುಧನ್ವರ ಬಗ್ಗೆ ವಿವರಿಸುವ ವೈಖರಿ, ಕಥೆಯಲ್ಲಿ ಬರುವ ಗ್ರಾಮಸಿಂಹಗಳ, ಗ್ರಾಮಕನ್ನಿಕೆಯರ  ಕುರಿತ ಹಾಸ್ಯ ಭರಿತ ವರ್ಣನೆ, ಅರವಟ್ಟಿಗೆಯನ್ನು ತಿಳಿಸುವಾಗ ಸಮಾಜಕ್ಕೆ ನಾವು ಮಾಡಬಹುದಾದ ಕೆಲಸಗಳು, ಬಿಜ್ಜಳನ ರಾಜ್ಯವನ್ನು ವರ್ಣಿಸುವ ಕಾಡು ಇಲ್ಲೇ ಹೊಸಬಾಳೆಗೆ  ಹೋಗುವಾಗ ಸಿಗುವ ಚೀಲನೂರನ ಬಳಿ  ಇದ್ದ ಉದಾಹರಣೆಗಳು, ಉದ್ಧಾಲಕನ ಸಮಾಧಾನ ಮನೋಭಾವ, ಚಂಡಿಯ ಹಠದ ವಿವರಣೆ ಇವುಗಳಿಂದ ಕಥಾ ಸನ್ನಿವೇಶದಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳುತ್ತಿದ್ದ  ರೀತಿ ಈಗಲೂ ನಮಗೆ ರೋಚಕವೇ. ಕಾಗದ ಪತ್ರಗಳನ್ನು, ಅರ್ಜಿಗಳನ್ನು ಬರೆಯುವ ರೀತಿ, ಹಾಗೆ ತಪ್ಪಾಗಿ ಬರೆದಿದ್ದು ಅನರ್ಥ ತರುವ ಉದಾಹರಣೆಗಳು, ನನಗಂತೂ ಬಾಳಿನ ಅನೇಕ ಸನ್ನಿವೇಶಗಳಲ್ಲಿ ಉಪಯೋಗವಾಗಿದೆ. "ಬರೆದು ಕೊಂಡ ಅರ್ಜಿ ಏನೆಂದರೆ..." ಎಂಬುದನ್ನು ಇಂಗ್ಲೀಷಿನಲ್ಲಿ ಯಥಾರೀತಿ ತರ್ಜುಮೆ ಮಾಡಿದಾಗ "wrote bought petition what said if..." ಎಂದು ಬರದಂತಾಗಬಾರದು ಎಂದಿದ್ದು ಇಂದಿಗೂ ಹಚ್ಚಹಸಿರು. ಅವರೇ ಬರೆದಿದ್ದ ಪದ್ಯದ ಸಾಲುಗಳು, ಅದರ ಪ್ರತಿ ಪ್ಯಾರದ ಮೊದಲ ಅಕ್ಷರವನ್ನು ಕೂಡಿಸಿ ಓದಿದರೆ ಶ್ರೀಧರಸ್ವಾಮಿ  ಎಂತಾದಾಗ ಆ ಕೃತಿಯ ರಚನೆ ನಮಗೆ ಗುರುಗಳ ಬಗ್ಗೆ ಹೆಮ್ಮೆ ತರಿಸಿದ್ದು ಸಹಜವೇ!
  ಆದಾಗ್ಯೂ ಬೇರೆ ಗುರುಗಳ ಪೀರಿಯಡ್ನಲ್ಲಿ ಮಾಡದ ಗಲಾಟೆಯನ್ನು ಇವರು ಕೊಟ್ಟ ಸದರದ ದುರುಪಯೋಗದಿಂದಾಗಿ  ಇವರ ಪೀರಿಯಡ್ ನಲ್ಲಿ ಮಾಡುತ್ತಿದ್ದುದರಿಂದ
ಅನೇಕ ಬಾರಿ ಹೆಡ್ ಮಾಸ್ಟರ್ ಎಫ್ವಿ ಕಾಶಿಪತಿ ಯವರಿಂದ  ಬೈಗುಳ ತಿನ್ನಬೇಕಾಗಿರುತ್ತಿತ್ತು  .
ಪ್ರತ್ಯೇಕ ಸಂಸ್ಕೃತ ಪರೀಕ್ಷೆಗೆ ಪಾಠ ಸುಬ್ಬಾ ಜೊಯಿಸರ ಮನೆ ಮಹಡಿಯಲ್ಲಿ, ಸಂಜೆ ವೇಳೆಯಲ್ಲಿ. ಪಾಠ ರಂಗನಾಥರಿಂದ. ಅಮರಕೋಶ, ರಘುವಂಶದ ದಿಲೀಪ. ಅತಿಶೀಘ್ರವಾಗಿ ಸರಿಯಾಗಿ ಕಲಿಯುತ್ತಿದ್ದವರು ಕೇಶವ ಮೂರ್ತಿ ಕುಲಕರ್ಣಿ ಇತರರು. ಎಲ್ಲರೊಂದಿಗೆ ಸ್ಪರ್ಧಿಸಲಾಗದ ನನ್ನ ಮನೋಭಾವ ಗೈರುಹಾಜರಾಗಲು ದಾರಿ. ಪರೀಕ್ಷೆಗೆ   ಹಾಜರಾಗಲು ಹಿಂದೇಟು ಹೊಡೆದು ಕುಳಿತಾಗ  ರಂಗನಾಥರೊಂದಿಗೆ ಮನೆಗೆ ಬಂದು ಧೈರ್ಯ ಹೇಳಿ ಪರೀಕ್ಷೆಗೆ ಕೂಡಿಸಿದ್ದು. ಇಂಥಾ ಹಲವು ನನ್ನ ಕೆಲವು ನೆನಪುಗಳು.  ಅವರ ಪಾಠ ಮಾಡುವ ಆಸಕ್ತಿ, ತಿಳಿಸಿ ಹೇಳುವ ಅವರ  ಜಾಣ್ಮೆ, ವಿದ್ಯಾರ್ಥಿಗಳ ಬಗ್ಗೆ ಇರುವ ಕಳಕಳಿಯನ್ನು ತೋರಿಸುತ್ತದೆ.
ಎಸ್ಸೆಸ್ಸಲ್ಸಿಯಲ್ಲಿ ಫೇಲಾದ ಮುಖ ಹೊತ್ತು ಅವರ ಮನೆಗೆ ಹೋದಾಗ ಅವರು ಹೇಳಿದ ಸಾಂತ್ವನ, ಮುಂದೆಂದೂ ಹೀಗೆ ಆಗದಂತೆ ಓದಿಕೊಳ್ಳಲು ಹೇಳಿದ ಬುದ್ಧಿವಾದದ ರೀತಿ, ಅದರಂತೆ ಅದನ್ನು ಪಾಲಿಸಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಕೆಲಸ ಮಾಡಿ ಈಗ ವಿಶ್ರಾಂತ ಜೀವನಕ್ಕೆ ಸೇರಿದರೂ ಶಾಲಾ ದಿನಗಳಲ್ಲಿ ಸರಿಯಾಗಿ ನಡೆದು ಕೊಳ್ಳದಿರುವುದರ ಬಗ್ಗೆ ನಮಗೇ ನಾಚಿಕೆಯಾಗುತ್ತಿದೆ. ಅಲ್ಲದೆ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಿಲ್ಲ, ಅವರನ್ನು ಸರಿಯಾಗಿ ಗೌರವಿಸಲಿಲ್ಲ ಎಂಬ ನೋವು ನನ್ನಂತೆ ಹಲವರಿಗೂ ಇದ್ದರೆ ಸೋಜಿಗವೇನಲ್ಲ.

ಅವರೊಂದಿಗಿನ ಒಡನಾಟ ಅವರು ಒಬ್ಬ ಯೋಗ್ಯ ಗುರುವಷ್ಟೇ ಅಲ್ಲ, ಎಲ್ಲರ ತಂದೆಯಂತಿದ್ದ, ಸಮಾಜ ಕಳಕಳಿಯ ಮುಗ್ಧ ವ್ಯಕ್ತಿ ಎಂಬುದು ನನ್ನ ಅನಿಸಿಕೆ.

 ನೆನಪಿನಾಳಕ್ಕೆ ಇಳಿದಾಗ ಅಂದಿನ ಸಮಕಾಲೀನ ಅಧ್ಯಾಪಕರು ಗಳಾದ  ವಿಜ್ಞಾನದ ಮತ್ತು ಎನ್ಸಿಸಿಯ ಎಚ್.ನಾರಾಯಣರಾವ್, ಇಂಗ್ಲಿಷ್ ನ ಸಂಘಮಿತ್ರ, ಸಮಾಜ ಪರಿಚಯದ ಎಎಸ್ ವಸಂತ, ಭೌತಶಾಸ್ತ್ರ ವಿಜ್ಞಾನದ ಎ.ಎಸ್. ರಾಮಚಂದ್ರ, ಗಣಿತದ ("ನಿಮಗೆ ಆಲ್ಜೀಬ್ರಾ ದ ಗಂಧವೇ ಇಲ್ಲ " ಎನ್ನುತ್ತಿದ್ದ) ಕೆ.ಭೀಮಾಚಾರ್, ಹೆಡ್ ಮಾಸ್ಟರ್ ಕಾಶೀಪತಿಯವರು,  ಹಿಂದಿ ಯ ಅಚ್ಚುತ ಭಟ್ಟ ಭಾವೆ ಇವರುಗಳು ನೆನಪಿಗೆ ಬರುತ್ತಾರೆ. ಜೊತೆಗೆ ಸಹಪಾಠಿಗಳಾದ  ಬಹುತೇಕ,  ಈಗ ಸಂಪರ್ಕದಲ್ಲಿ ಇಲ್ಲದ  ವಿಶ್ವನಾಥ ಭಾವೆ, ಪ್ರಕಾಶ್ ರಾವ್ ಬಾಪಟ್, ಗಣಪತಿ, ಬೆನ್ನೂರು ಮಂಜುನಾಥ, ಅಂಡಿಗೆ ರಾಮಣ್ಣ, ಕುಮ್ಮೂರು ತೇಜಪ್ಪ, ಕಾನುಕೇರಿ ಶಿವದೇವ, ಕೇಶವಮೂರ್ತಿ ಕುಲಕರ್ಣಿ ಮುಂತಾದವರು.

ಸೊರಬವನ್ನು ಬಿಟ್ಟು ಹಲವು ದಶಕಗಳಾದರೂ  ನನ್ನ ಶಾಲಾಗುರುಗಳ ಬಗ್ಗೆ  ಬರೆಯುವಾಗ ಮನದಲ್ಲಿ ಮೂಡಿಬಂದ ಎಲ್ಲ ಗುರುಗಳ ನೆನಪಿಗೆ ನಮಸ್ಕಾರಗಳು.

Comments

  1. ಆದಿನ ಗಳಲ್ಲಿ ಶಾಲೆಗಳಲ್ಲಿ ನಡೆಯುವ ಘಟನೆ ಗಳೇ ಬಹಳ ರೋಚಕ.ಗುರು ಶಿಷ್ಯರ ಸಂಬಂದ ಕೂಡ ಅಷ್ಟೇ ಸ್ಮರಣೀಯ,ಬಹಳ ಚೆನ್ನಾಗಿ ನೆನಪನ್ನು ಬಿಚ್ಚಿಟ್ಟಿದ್ದಾರೆ,ಕೆ ಬಿ ರಾಮಚಂದ್ರ ರವರು...

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  2. ಸ್ಮರಣೆಯಲ್ಲಿರುವುದನ್ನು ಲೇಖನರೂಪಕ್ಕೆ ಇಳಿಸಿ ಕಾಪಿಡುವುದು ಸುಲಭವಲ್ಲ. ಅದಾಗದಿರುವುದಕ್ಕೆಂದೇ ಸಣ್ಣಪುಟ್ಟ ಅಡಚಣೆಗಳು ಕ್ಯೂ ಹಚ್ಚಿ ಕಾದಿರುತ್ತವೆ (ಸ್ವಾನುಭವ!) ಅವೆಲ್ಲವನ್ನೂ ನಿವಾರಿಸಿಕೊಂಡು ಈ ಬ್ಲಾಗ್ ಅನ್ನು ರೂಪಿಸಿ ಅದರಲ್ಲಿ ತಮ್ಮ ಮೊದಲ ಲೇಖನವನ್ನು ಕಾಣಿಸಿರುವ ಶ್ರೀ ರಾಮಚಂದ್ರ ಅವರಿಗೆ ಅಭಿನಂದನೆಗಳು!

    ReplyDelete
  3. ನಿನ್ನ ಸ್ಮರಣ ಶಕ್ತಿ ಶ್ಲಾಘನೀಯ

    ReplyDelete
  4. ನಿಮ್ಮ ಗುರುಗಳ ಬಗ್ಗೆ ಇಷ್ಟು ವರ್ಷಗಳ ನಂತರವೂ ನೆನಪಿನಿಂದ ಇಷ್ಟೊಂದು ವಿವರಗಳನ್ನು ಬರೆದಿರುವುದು ಹೆಚ್ಚಿನದು. ಲೇಖನ ಚೆನ್ನಾಗಿದೆ.

    ReplyDelete
  5. ಅಂತಹ ಶ್ರೇಷ್ಠ ಗುರುಗಳನ್ನು ಪಡೆದ ನೀವೆಷ್ಟು ಪುಣ್ಯ ಶಾಲಿಗಳೋ ಅಷ್ಟೇ ಇನ್ನೂ ಅವರನ್ನು ನೆನಪಿಟ್ಟುಕೊಂಡು ಗೌರವ ಸಲ್ಲಿಸುವಂಥ ಅಂತರಂಗದ ಶಿಷ್ಯರ ವೃಂದವನ್ನು ಪಡೆದ ಗುರುಗಳೂ ಪುಣ್ಯ ಶಾಲಿಗಳು. ಸುಂದರ ಬರೆಹ. ಧನ್ಯವಾದಗಳು
    -ವಸುಮತಿ

    ReplyDelete
  6. ನಿಮ್ಮ ನೆನಪಿನ ಶಕ್ತಿಗೆ ಜೈ. ಅದೆಷ್ಟು ಆಳ ಅದು. ಎಲ್ಲ ಗುರುಗಳು ನೆನಪಷ್ಟೇ ಅಲ್ಲದೆ, ಅವರ ಪಾಠದ ಜೊತೆಗೇ ವಿಚಾರವೈಖರಿಗಳನ್ನೂ ಪ್ರೀತಿಯಿಂದ
    ಧಾರೆ ಎರೆದಿದ್ದಾರೆ. ಅದನ್ನು ನೀವು ಉಳಿಸಿ ಬೆಳೆಸಿ ಕೊಂಡಿರುವುದಕ್ಕೆ ಸಾಕ್ಷಿ ಈ ನಿಮ್ಮ ಲೇಖನ. ಅಂತಹ ಗುರುಗಳನ್ನು ಪಡೆದ ನೀವು, ನಿಮ್ಮಂಥ ಶಿಷ್ಯರನ್ನು ಪಡೆದ ಗುರುಗಳು ಅದೆಷ್ಟು ಭಾಗ್ಯವಂತರೋ. ಆ ಅನುಭವಗಳನ್ನು ಕೃತಿಗಿಳಿಸಿದ ನಿಮಗೆ ಅಭಿನಂದನೆಗಳು.

    ReplyDelete
  7. ಬಹುಶಃ, ಇಂತಹ ಅನುಭವಗಳಿಂದಲೇ ಯಾವುದೇ ವ್ಯಕ್ತಿ ಸಮತೋಲನ ಗಳಿಸುತ್ತಾನೆ. ನೀವೇ ಉದಾಹರಣೆ.
    "ಗುರುಬ್ಯೊ ನಮಹಃ"

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...