Skip to main content

ಉರಗ ಕಚ್ಚಿದ ವೃತ್ತಾಂತ

ನಮ್ಮೂರು ಮಲೆನಾಡಿನ ಕೆಳದಿ. ನನಗೆ ಉದ್ಯೋಗ ದೊರಕುವವರೆಗೂ* ರೈತಾಪಿ ಕೆಲಸ ಮಾಡುತ್ತಿದ್ದಾಗಿನ ನೈಜ ಘಟನೆ.

೧೯೭೩ ರ ಡಿಸೆಂಬರ್. ಅಂದು ಭಾನುವಾರ. ಹಿಂದಿನ ದಿನಗಳಲ್ಲಿ ಗದ್ದೆ ಕೊಯ್ದು ತೆನೆಗಳನ್ನು ಗದ್ದೆಯಲ್ಲೇ ನೀರು ಬಸಿಯಲು ಹಾಕಿದ್ದೆವು.  ಅವು ಕಳ್ಳರ, ಬೀಡಾಡಿ ದನಗಳ ಪಾಲಾಗದಂತೆ ಕಾಯಲು ರಾತ್ರಿ ಅಲ್ಲೇ ಮಲಗಿದ್ದೆ. ಡಿಸೆಂಬರ್  ಚಳಿಯಿಂದ ತಪ್ಪಿಸಿಕೊಳ್ಳಲು ಹಳೇ ಬೇಲಿಯ ತುಂಡುಗಳು, ಕಸ ಕಡ್ಡಿಗಳನ್ನು ಸೇರಿಸಿ ಬೆಂಕಿ ಇಟ್ಟು ಕಾಯಿಸಿ ಕೊಳ್ಳುತ್ತಿದ್ದಾಗ ಅದರಲ್ಲಿ ಹಾವೊಂದನ್ನು ಕಂಡೆ. ಹೊರಬಂದು ಎಲ್ಲಿ ಕಚ್ಚುವುದೋ ಎಂಬ  ಭೀತಿಯಿಂದ ಇನ್ನೂ ಅಷ್ಟು ಸೌದೆ ಸೇರಿಸಿ ಬೆಂಕಿ ಹೆಚ್ಚಿಸಿದೆ. ಅದೇನು ಬೆಂದೇ ಹೋಯಿತೋ ಅಥವಾ ಅಲ್ಲೇ ಇದ್ದ ಪೊಟರೆ ಸೇರಿತೋ ಅಂತೂ  ಮಾಯವಾಗಿತ್ತು.

ಆ ರಾತ್ರಿ ಬಲವಾಗಿ ಹೊದಿಕೆ ಹೊದ್ದು ಅಲ್ಲೇ ಮಲಗಿದೆ.

ಮರುದಿನ ಸಂಜೆ ಅಲ್ಲಿಗೆ ಹೋಗಿ ಉಳಿದಿದ್ದ ಕೆಲಸ ಪೂರೈಸಿ ಮನೆಕಡೆ ಹೊರಟೆ.

ಆ ಮುತ್ಸಂಜೆಯಲ್ಲಿ ಅದೆಲ್ಲಿತ್ತೋ, ಹಾವೊಂದು  ಕಾಲು ಸುತ್ತಿಕೊಂಡಿತು.  ಕಾಲು ಕೊಡವಲು ಪಾದದ ಮೇಲ್ಭಾಗದಲ್ಲಿ ಕಚ್ಚಿ ದೂರ ಬಿದ್ದು  ಕತ್ತಲಲ್ಲಿ ಮಾಯವಾಯಿತು. ಆ ಹಾವು ನಿನ್ನೆ  ಬೆಂಕಿಯ ಬಳಿ ಕಂಡಿದ್ದೋ, ಹೊಸತೋ, ವಿಷದ ಹಾವೋ, ಸಾಮಾನ್ಯದ್ದೋ ದೇವರಿಗೇ ಗೊತ್ತು. ಹಗೆಯ ತೀರಿಸಲೆಂದು ಹಾವು ಕಾಯುತ್ತಿರುತ್ತದೆ ಎಂದು ಕೇಳಿದ್ದೆನಾದ್ದರಿಂದ ಸಾವು ಸಮೀಪಿಸುತ್ತಿದೆ ಎಂದೆನಿಸಿತು. ಬದುಕುವ ಆಸೆಯಿಂದ ಅಲ್ಲಿಂದ ಮನೆ ಕಡೆ ಓಡಲು ಪ್ರಾರಂಭಿಸಿದೆ. ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಮನೆ. ಗಾಬರಿ, ಸಾಯುವ ಭಯ, ಬದುಕುವ ಆಸೆ, ಕಣ್ಣಿಗೆ ಕಂಡವರಿಗೆಲ್ಲಾ ಹೇಳಬೇಕೆಂಬ ಕಾತರ. ತಡಮಾಡದೆ ಮನೆಗೆ ಹೋದರೆ ಒಳ್ಳೆಯದು ಎಂದುಕೊಂಡೆ. ದಾರಿಯಲ್ಲಿ ಸಿಕ್ಕ ಪರಿಚಯದ ಮಡಿವಾಳ ಮಂಜನ ಮನೆಗೆ ಹೋಗಿ ತಿಳಿಸಿದೆ. ಅವನು ತಕ್ಷಣ ಕೈಗೆ ಸಿಕ್ಕ ಸೀರೆಯ ಕೆಳ ಅಂಚನ್ನು ಹರಿದು ಹಾವು ಕಚ್ಚಿದ ಜಾಗದ ಬಿಟ್ಟು ಮೇಲೆ ಬಿಗಿಯಾಗಿ ಕಟ್ಟಿದ. ವಿಷ ಮೇಲೇರುವುದಿಲ್ಲ ಎಂದು ಸಮಾಧಾನ ಹೇಳಿ ಮನೆಗೆ ಕರೆತಂದ.

   ಹಾವು ಕಡಿದ ಸಂಗತಿ ಹಾವಿನ ವಿಷಕ್ಕಿಂತ ವೇಗವಾಗಿ  ಹರಡಿತು. ನನಗಿಂತ ಮೊದಲೇ ನಮ್ಮ ಮನೆಯ ಮುಂದೆ ಜನ, ಜನವೋ ಜನ. ಕೆಲವರಿಗೆ ಕುತೂಹಲ, ಕೆಲವರಿಗೆ ಆತಂಕ. ಎಲ್ಲರಿಗೂ ಬೇಕು ಪ್ರಥಮ ಮಾಹಿತಿ ವರದಿ.  ಪ್ರವೇಶಕ್ಕೆ ಮುನ್ನವೇ  ಸಲಹಾ ನೀಡಿಕೆ ಪ್ರಾರಂಭ. ಹಾವು ಕಚ್ಚಿಸಿಕೊಂಡವರು ಮನೆಯ ಸೂರು ಪ್ರವೇಶಿಸ ಬಾರದೆಂದು ಕೆಲವರು,
ಬಳೆ ತೊಟ್ಟಿರುವವರು ಅವರನ್ನು ಮುಟ್ಟಬಾರದೆನ್ನುವರು ಕೆಲವರು.ಅವರ ಮಾತಿಗೆ  ಬೆಲೆ  ಕೊಟ್ಟು ಮನೆ ಮುಂದೆ ಇದ್ದ ಲೈಟ್ ಕಂಬದ ಕೆಳಗೆ ಜಮಖಾನ ಹಾಕಿ ಮಲಗಿಸಿದರು.  ಬುದ್ಧಿವಂತರ ಸಲಹೆಯಂತೆ ನಾನು ಗಾಬರಿಯಾಗಿ ಸತ್ತರೂ ಸರಿ ನೀರನ್ನು ಮಾತ್ರ ಕುಡಿಯುವಂತಿಲ್ಲ. ಹಾವಿಗೆ ಬೇಕಾದ ವಸ್ತುವಾದ್ದರಿಂದ ಹಾಲು ಕುಡಿಯುವುದಿರಲಿ ಅದರ ಹೆಸರೂ ಹೇಳುವಂತಿಲ್ಲ. ಬಂದಿದ್ದ ಊರ ಶ್ಯಾನುಭೋಗರು ಸ್ವಲ್ಪ ಓದಿದವರೂ ತಿಳುವಳಿಕೆಯುಳ್ಳವರೂ ಆದ್ದರಿಂದ  ಅವರ ಮಾತಿನಂತೆ ಹಾವಿನ ವಿಷವನ್ನು ಶಮನ ಮಾಡುವ ಗೆಣಸಿನಕುಣಿ ಹಳ್ಳಿಯ ಪಂಡಿತರಲ್ಲಿಗೆ ಕರೆದೊಯ್ಯುವ ತೀರ್ಮಾನ. ಹೊರಡುವವರೆಗೂ ತಾವೇ ಸಾಧ್ಯವಾದಷ್ಟು ವಿಷ ತೆಗೆಯುವ ಪ್ರಯತ್ನ ಶುರು ಮಾಡಿದರು. ಮನೆಯಲ್ಲಿ ಉಪಯೋಗಿಸಿದ ಶೇವಿಂಗ್ ಬ್ಲೇಡೇ ಅವರ ಉಪಕರಣ. ಹಾವು ಕಚ್ಚಿದ ಗಾಯದ ಸುತ್ತ, ಈಗಾಗಲೇ ರಕ್ತಪರಿಚಲನೆ ಆಗದಂತೆ ಕಟ್ಟಿದ ಸ್ಥಳದ ಭಾಗದಲ್ಲಿ ಬ್ಲೇಡಿನ ಸ್ವಚ್ಛಂಧ ಹರಿದಾಟ. ರಕ್ತ ಬರಲೊಲ್ಲದು, ಇವರು ಬಿಡಲೊಲ್ಲರು. ಬ್ಲೇಡ್ ಪ್ರಯೋಗ ಅವ್ಯಾಹತವಾಗಿ ನಡೆಯಿತು.

ಈಗ ಆರು ಕಿಲೋ ಮೀಟರ್ ದೂರದಲ್ಲಿರುವ ಸಾಗರಕ್ಕೆ ಹೋಗಿ ಕಾರು ತರಬೇಕು. ತಂದೆಯವರಿಗೆ ಗೊತ್ತಾಗುವುದಿಲ್ಲ. ಇರುವ ಅಣ್ಣ ಬೇಸಾಯದ ಎತ್ತು ಕೊಳ್ಳಲು ಆಯನೂರಿನ ಸಂತೆಗೆ ಹೋಗಿದ್ದ. ಮನೆಯಲ್ಲಿರುವ ಇತರರು ಸಣ್ಣವರು.  ಹೆತ್ತ ತಾಯಿಗೆ ಸಂಕಟ. ತಾನೇನೂ ಮಾಡುವಂತಿಲ್ಲ. ಬಳೆ ತೊಟ್ಟಿದ್ದುದರಿಂದ  ಮಗನನ್ನು ಮುಟ್ಟುವಂತಿಲ್ಲ. ದುಃಖ, ಕಣ್ಣೀರೇ ಸದ್ಯಕ್ಕೆ ಅವಳ ಕೆಲಸ. ಕಾರು ತರಿಸುವ ದಾರಿ ಗೊತ್ತಿಲ್ಲ. ಇರುವವರೆಲ್ಲಾ ಸಲಹಾ ವೀರರು.

   ಆ ಸಮಯದಲ್ಲಿ ನಮ್ಮಣ್ಣನ ಪ್ರವೇಶ. ಅವನೇ ಸೈಕಲ್ನಲ್ಲಿ ಕತ್ತಲಲ್ಲಿ ಸಾಗರಕ್ಕೆ ಹೋಗಿ ಕಾರು ತಂದ. ಸಮಯ ರಾತ್ರಿ ಹನ್ನೊಂದು. ನನಗೋ ಬಲು ಬಾಯಾರಿಕೆ. ನೀರು ಕೇಳಿದರೆ ಕುಡಿಯಬಾರದೆಂದು  ಕೆಲವರೆಂದರೆ, ಸೆಗಣಿ ನೀರು  ಸೇವಿಸಬಹುದೆಂದರು ಒಬ್ಬ ಹಿತೈಷಿಗಳು.

ಇನ್ನೇನು ಪಂಡಿತರಲ್ಲಿಗೆ ಹೊರಡಬೇಕು ಎಂದಾಗ, ಅಯ್ಯೋ ಇದರಿಂದ ಏನೂ ಉಪಯೋಗವಿಲ್ಲ, ಹೀಗೇ ಹೋದ ವಾರ ಹೋದ ನಮ್ಮ ಸಂಬಂಧಿಕರ ಮಗ, ಏನೂ ಮಾಡಲಾಗಲಿಲ್ಲ. ದಾರೀಲೇ ಔಟ್  ಎಂದು ಅರ್ಧ ವಾಕ್ಯದಲ್ಲಿ ಪೂರ್ತಿ ಮಾಹಿತಿ ನೀಡಿದರೊಬ್ಬ ವಿವೇಕಿಗಳು, " ಮಂತ್ರಕ್ಕೆಲ್ಲಾ ವಾಸಿಯಾಗೋದಾದರೆ ಡಾಕ್ಟರ್ ಯಾಕ್ರೀ ಓದಬೇಕು. ಈಗಾಗಲೇ ತಡವಾಯ್ತು. ಆಗೋದು ಆಗಲಿ ಮನೇಮುಂದೆನೇ ಆಗಲಿ" ಎಂದು ನನ್ನ ಮರಣಸ್ಥಾನವನ್ನು  ನಿರ್ಧರಿಸಿದವರು ಕೆಲವರು. ಆ ಹಾವನ್ನು ಹುಡುಕಿ ಅದನ್ನೇ ತಕ್ಷಣ ಕಚ್ಚಿಬಿಟ್ಟಿದ್ದರೇ ಇಷ್ಟೊತ್ತಿಗೆ ಆರಾಂ ಆಗಿ ಆಟ ಆಡಿಕೊಂಡು ಇರಬಹುದಾಗಿತ್ತು ಎಂದು ನನ್ನ ಮೇಲೇ ಗೂಬೆ ಕೂರಿಸುವ ಪ್ರಯತ್ನ ಒಬ್ಬ ಮೇಧಾವಿಯದು. ನಂದೇ ನನಗಾಗಿತ್ತು, ನಾನು ಹಾಗೆ ಮಾಡಬಹುದಾಗಿತ್ತೇ ಎಂಬ ಪ್ರಶ್ನೆ ಒಂದೆಡೆಯಾದರೆ ಇರಲಿ ಎಂಬ ಹತಾಶೆಯ ಮನೋಭಾವ ಹೊತ್ತೆ.

ಈ ಮಧ್ಯೆ ಬಹುಮತದ ತೀರ್ಪಿನಂತೆ ನನ್ನನ್ನು ಕರೆದುಕೊಂಡು ಮಂತ್ರವಾದಿಗಳತ್ತ ಪ್ರಯಾಣ. ಬಲು ದಿನದಿಂದ ಕಾರಿನ ಪ್ರಯಾಣಕ್ಕೆ ಹಂಬಲಿಸಿದ್ದ ಮನ, ಅದರಲ್ಲೇ ಪ್ರಧಾನವಾಗಿ ಕುಳಿತರೂ ಹರ್ಷಪಡಬೇಕಾದ ಸ್ಥಿತಿಯಲ್ಲಿಲ್ಲ. ಏನೋ ದುಗುಡ , ಕುತೂಹಲ. ಮಂತ್ರವಾದಿ ವೈದ್ಯರು ನನಗೆ ಗೊತ್ತು, ಈಗಾಗಲೇ ನಾನು ಫೋನ್ ಮಾಡಿ ಹೇಳಿದ್ದೇನೆ, ನಾನು ಹೇಳಿದ ಮೇಲೆ ಕಾದೇ ಕಾಯ್ತಾರೆ, ನಾವು ಬೇಗ ಹೋಗಬೇಕಷ್ಟೇ ಎಂದ ಒಬ್ಬರು. ಅದೇನು ಹೆಚ್ಚುಗಾರಿಕೆಯೊ, ಕಳಕಳಿಯೋ, ಎಚ್ಚರಿಕೆಯೋ, ತಿಳಿಯಲಿಲ್ಲ. ಕಾರಿನಲ್ಲಿ ಕುಳಿತವರಿಂದ ಆ ಮಂತ್ರವಾದಿ ವೈದ್ಯರ ಗುಣಗಾನ ಧೈರ್ಯ ತುಂಬುತಿತ್ತಾದರೆ,ಆದರೂ ತುಂಬಾ ತಡವಾಯ್ತು, ಏನೋ ನೋಡಬೇಕು ಎಂದಿದ್ದು ಚಳಿಯನ್ನು ಹೆಚ್ಚು ಮಾಡುತ್ತಿತ್ತು. ರಸ್ತೆಯ ಪಕ್ಕದ ಕತ್ತಲಿನಲ್ಲಿ ಶೂನ್ಯದತ್ತ ನನ್ನ ಪಿಳಿಪಿಳಿ ನೋಟ.ರಾತ್ರಿ ಒಂದು ಘಂಟೆ.

ಆ ನಡುರಾತ್ರಿಯಲ್ಲೂ ಹೊಸ ಉತ್ಸಾಹದಲ್ಲೇ ಮಂತ್ರವಾದಿಗಳಿಂದ ಪರೀಕ್ಷೆ. ನೀವು ಪೋನ್ ಮಾಡಿದ ಕೂಡಲೇ ಬಳ್ಳಿಗೆ ಗಂಟು ಹಾಕಿದ್ದೇನೆ ನೋಡಿ. ವಿಷ ಏರೇ ಇಲ್ಲ, ಎಂದರಲ್ಲದೆ ನೀರು ನಿವಾಳಿಸಿ ಚೆಲ್ಲಿದರು, ಕುಡಿಯಲು ನೀರು ಕೊಟ್ಟರು. ವಾಸಿ ಆಗುತ್ತೆ. ರಾತ್ರಿ ನಿದ್ದೆ ಮಾಡಿಸಬೇಡಿ  ಎಂದು ಎಚ್ಚರಿಸಿದರು. ಬರೋದು ತಡ ಆದರೂ ತುಂಬಾ ಅದೃಷ್ಟವಂತರು ಎಂದು ನನ್ನ ಭುಜ ತಟ್ಟಿದರು. ನನಗೂ ಏನೋ ಖುಷಿ, ಹುಚ್ಚು ಹೆಮ್ಮೆಯಿಂದ ಜೊತೆಗೆ ಬಂದವರತ್ತ ನೋಟ ಬೀರಿದೆ.

ಮನೆಗೆ ವಾಪಸಾದಾಗ ಸೆೇರಿದ್ದ ಜನ ಖಾಲಿ ಆಗಿದ್ದರು, ಮನೆಯವರಷ್ಟೇ ಊಟವೂ ಮಾಡದೇ ಕಾಯುತ್ತಿದ್ದರು. ಎಲ್ಲರ ಊಟವಾಯಿತು. ಈಗ ನಿದ್ದೆಯ ಸರದಿ. ನಾನು ನಿದ್ದೆ ಮಾಡದಿರಲು ವಿವಿಧ ಕಥೆಗಳು, ಸಂಬಂಧಿಕರ ಕೌಟುಂಬಿಕ ವಿರಸ, ಹೀಗೆಯೇ ಎಲ್ಲಾ ಸ್ವಾರಸ್ಯ ವಿಷಯಗಳು ಚರ್ಚೆ, ಇತ್ಯಾದಿ ಗಳ ಮಧ್ಯೆ ಬೆಳಗಾಗಿದ್ದೇ ಗೊತ್ತಾಗಲಿಲ್ಲ. ಸ್ನಾನ ಮಾಡಿ ಹಿರಿಯರು ಹೇಳಿದಂತೆ ನಾಗಪ್ಪನ ಕಲ್ಲಿಗೆ ಹಾಲೆರೆದು ತಿಂಡಿ ತಿಂದು ವಿಶ್ರಾಂತಿ. ಗದ್ದೆ ಕಡೆ ಹೋಗದಿರಲು ಆದೇಶ. ಹಾವು ಕಚ್ಚಿದ ವಿಷವನ್ನು ತೆಗೆಯಲೆಂದು ಕೊಯ್ದ್ ಜಾಗ ಮಾತ್ರ ವಾಸಿ ಆಗಲು ಒಂದು ವಾರ ಬೇಕಾಯಿತು.

ನಂತರ ಹಲವು ವರ್ಷಗಳ ವರೆಗೆ  ನಾನು ಹಾವು ಕಚ್ಚಿಸಿಕೊಂಡ ವೃತ್ತಾಂತ ಊರಿನಲ್ಲಿ  ಮನೆಮಾತಿಗೆ ಗ್ರಾಸ.

ಆದರೆ ಈಗಲೂ ಒಂದು ಜಿಜ್ಞಾಸೆ.

ನಾನು ಬದುಕಿದ್ದು ಹೇಗೆ?

ಕಚ್ಚಿದ್ದು ವಿಷವಿರದ ಹಾವೋ? ಶ್ಯಾನುಭೋಗರ ಬ್ಲೇಡ್  ಪ್ರಯೋಗವೋ?
ಮಂತ್ರ ಶಕ್ತಿಯೋ?

ಅಥವಾ,

ಸದಾ ನನ್ನಲ್ಲಿ ಸುಪ್ತವಾಗಿ ಮನೆಮಾಡಿದ್ದ  ಆತ್ಮಬಲವೊ?
************************

Comments

  1. ನಿಮ್ಮ ಅಂದಿನ ಭಾವನೆಗಳು, ಅನಿಸಿಕೆಗಳು, ಎದೆ ಝಲ್ಲೆನಿಸುವ ಅನುಭವಗಳು, ಲೋಕದ ರೀತಿ ಎಲ್ಲವೂ ಜೀವಂತವಾಗಿ, ಸರಳವಾಗಿ ಮೂಡಿ ಬಂದಿವೆ. ನಾನು ಓದುಗನೋ/ಅನುಭವಿಸುತ್ತಿರುವವನೋ ಅನಿಸುವಷ್ಟು. ಸತ್ಯಕಥೆ ಓಟ ಚೆನ್ನಾಗಿದೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...