ಒಂದು ಸ್ಥಿರ ಉದ್ಯೋಗ ದೊರಕುವ ಮುನ್ನಿನ ದಿನಗಳು. ಆಗ ನಾನು ನಮ್ಮೂರು
ಕೆಳದಿಯಲ್ಲಿದ್ದೆ.೧೯೭೫ರಲ್ಲಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಯಿತು.ಹೊಸ
ಹೊಸ ಕಾನೂನುಗಳು ಬರತೊಡಗಿದವು.ಅದರಲ್ಲಿ ಒಂದು ನನಗೆ ಅನುಕೂಲವಾಗಿ ಪರಿಣಮಿಸಿತು.ಒಂದು
ಕಾನೂನಿನ ಪ್ರಕಾರ ೨೪ಘಂಟೆಗಳು ಅವ್ಯಾಹತವಾಗಿ ನೀರು ಕಾಯಿಸಿದಲ್ಲಿ ಅದು ಬಾಯ್ಲರ್ ಎಂದು
ಕರೆಯಲ್ಪಡುತ್ತದೆ.ಹಾಗೆಯೇ ೨೪ಘಂಟೆಗಳು ಅವ್ಯಾಹತವಾಗಿ ಸಂಸ್ಥೆ ಯಲ್ಲಿ ಕೆಲಸ ನಡೆದರೆ
ಕಾರ್ಖಾನೆ ಎಂದು ಕರೆಯಲ್ಪಡುತ್ತದೆ. ಈ ಹೊಸ ಕಾನೂನು ಪ್ರಕಾರ ಅವಲಕ್ಕಿ,
ಅಕ್ಕಿ ಮಿಲ್ಲುಗಳು ರಾತ್ರಿ ಕಳೆದು ಬೆಳಗಾಗುವುದರಲ್ಲಿ ಕಾರ್ಖಾನೆ ಗಳಾದವು.ಅವುಗಳು
ಕಾರ್ಖಾನೆ ಗಳ ಮತ್ತು ಬಾಯ್ಲರ್ ಗಳ ನಿಯಂತ್ರಣ ಇಲಾಖೆಯಡಿ ನೋಂದಣಿ ಯಾಗ
ಬೇಕಾಯಿತು.ಅದರಂತೆ ಅಂಥಾ ಕಾರ್ಖಾನೆಗಳ ಕಟ್ಟಡ ನಕ್ಷೆ, ಅಪಾಯದ ಸಂದರ್ಭದಲ್ಲಿ
ತಪ್ಪಿಸಿಕೊಂಡು ಹೊರಡಲು ಮಾರ್ಗ,ಆ ಸಂಸ್ಥೆಯ ಕಾರ್ಮಿಕರಿಗಿರುವ ಶೌಚಾಲಯ ಇತ್ಯಾದಿಗಳು
ದಾಖಲಿಸಲ್ಪಟ್ಟು ನೋಂದಣಿ ಯಾಗ ಬೇಕಾಯಿತು.ಈ ಕಾನೂನು ಗಳು ಅನ್ವಯವಾಗುವ ಕಾರ್ಖಾನೆಗಳು
ಇಂಥ ವಿವರಗಳುಳ್ಳ ಕಟ್ಟಡದ ನಕ್ಷೆಯನ್ನು ತುರ್ತಾಗಿ ಸಲ್ಲಿಸ ಬೇಕೆಂದು ಸಂಬಂಧಿಸಿದ
ಇಲಾಖೆಯಿಂದ ಆದೇಶ ಪ್ರಕಟವಾಯಿತು.
ಈ ಸಮಯದಲ್ಲಿ ನಾನು ತಾಂತ್ರಿಕ ನಕ್ಷೆ ತರಬೇತಿ ಪಡೆದಿರುವೆನೆಂದು ಕೆಲವರಿಗೆ
ಗೊತ್ತಾಗಿತ್ತು. ಇಂಥ ವೇಳೆಯಲ್ಲಿ ಸಾಗರದಲ್ಲಿ ನಮ್ಮ ತಂದೆಯ ಪರಿಚಯದ ರೈಸ್ ಮಿಲ್ ನ
ಮಾಲೀಕರೊಂದಿಗೆ ಆಕಸ್ಮಿಕ ವಾಗಿ ಭೇಟಿಯಾಯಿತು.ಅವರು ಯಾವುದೋ ಒಂದು ಕಟ್ಟಡದ ನಕ್ಷೆ
ತೋರಿಸಿ ಈ ರೀತಿ ನಮ್ಮ ಕಟ್ಟಡದ ನಕ್ಷೆ ಮಾಡಿ ಕೊಡಲು ಸಾಧ್ಯವೇ ಎಂದರು. ಆ ದಿನಗಳಲ್ಲಿ
ತಾಲೂಕು ಮಟ್ಟದಲ್ಲಿ ನಕ್ಷೆ ತಯಾರಿಸುವ ಇಂಜಿನಿಯರ್ ಗಳಿರಲಿಲ್ಲ.ನನಗೂ
ಕಟ್ಟಡದಲ್ಲದಿರಬಹುದು,ಆದರೆ ನಕ್ಷೆ ತಯಾರಿಸಿ ಅನುಭವವಿದ್ದುದರಿಂದ ಸ್ವಲ್ಪ ಆಸಕ್ತಿ ಬಂದು
ಆ ನಕ್ಷೆ ಯನ್ನು ಪರಿಶೀಲಿಸಿ ಮಾಡಿ ಕೊಡುವೆನೆಂದೆ. ಕೆಲಸದ ಯಶಸ್ಸಿನ ಬಗ್ಗೆ ಕೊಂಚ
ಆತಂಕವಿದ್ದರೂ ಪ್ರಯತ್ನ ಮಾಡಿದರೆ ಅಸಾಧ್ಯವೇನಲ್ಲ ಎನ್ನಿಸಿತು.ಹಣದ ಅವಶ್ಯಕತೆಯೂ
ಇದ್ದುದರಿಂದ ಅದು ಅನಿವಾರ್ಯ ವೂ ಆಗಿತ್ತು.
ಆಗ ನನ್ನ ಬಳಿ ನಕ್ಷೆ ತಯಾರಿಸಲು ಎರಡು ಸೆಟ್ ಸ್ಕೋಯರ್ ಎಂಬ ಮೂಲೆಮಟ್ಟ, ಪೆನ್ಸಿಲ್
ಬಿಟ್ಟು ಯಾವ ಉಪಕರಣವೂ ಇರಲಿಲ್ಲ. ಅವುಗಳನ್ನು ಕೊಳ್ಳಲು ಹಣವೂ ಇಲ್ಲ. ಹಾಗಂತ ಬಂದ ಕೆಲಸ
ಬಿಡಲು ತಯಾರಿಲ್ಲ. ಮಾಡುವ ಕೆಲಸಕ್ಕೆ ಎಷ್ಟು ಹಣ ಪಡೆಯಬೇಕೆಂದು ಗೊತ್ತಿಲ್ಲ. ಯಾವುದಕ್ಕೂ
ಇರಲಿ ಎಂದು ಎರಡು ದಿನಗಳ ಸಮಯ ತೆಗೆದುಕೊಂಡೆ.
ಇನ್ನೂ
ಯಾರೆಲ್ಲಾ ಇಂಥಾ ನಕ್ಷೆ ಯನ್ನು ಸಲ್ಲಿಸಬೇಕೆಂಬ ವಿಷಯವನ್ನು ಕೇಳಿ ಅವರುಗಳೂ
ನನ್ನಿಂದಲೇ ನಕ್ಷೆ ಯನ್ನು ಮಾಡಿಸಿದಲ್ಲಿ ರಿಯಾಯಿತಿ ದರದಲ್ಲಿ ನಾನು ಮಾಡಿಕೊಡಲು
ಸಿದ್ಧ ಎಂದೆ. ಅದರಂತೆ ಅವರೇ ೪-೫ ಆರ್ಡರ್ ಸಂಗ್ರಹಿಸಿ ಅದಕ್ಕೆ ಬೇಕಾದ ಉಪಕರಣಕ್ಕೆ
ಮುಂಗಡವನ್ನೂ ಕೊಟ್ಟರು. ಹಾಗಾಗಿ ಇದೇ ಸಾಗರದಲ್ಲಿನ ಐದು ಮಿಲ್ ಗಳ ನಕ್ಷೆ ತಯಾರಿಸಿ
ಕೊಡುವ ಹೊಣೆಗಾರಿಕೆ ನನ್ನದಾಯಿತು.
ನಾನು ಮಾಡುವ ನಕ್ಷೆಯಲ್ಲಿ ಬೇರೆ ಏನೇನು ವಿವರಗಳು ಬೇಕು ಇತ್ಯಾದಿ ವಿಷಯಗಳನ್ನು
ಜಿಲ್ಲಾ ಕೇಂದ್ರ ಶಿವಮೊಗ್ಗದ ಲ್ಲಿರುವ ಸಂಬಂಧಿಸಿದ ಅಧಿಕಾರಿಯಲ್ಲಿ ಚರ್ಚಿಸಿ
ಮುಂದುವರೆದಲ್ಲಿ ಸರಿ ಎನಿಸಿತು. ಆದ್ದರಿಂದ ಮರುದಿನ ಶಿವಮೊಗ್ಗಕ್ಕೆ ಹೊರಡಲು
ನಿರ್ಧರಿಸಿದೆ.ಆದರೆ ಕೈಯಲ್ಲಿ ಒಂದು ಪೈಸೆಯೂ ಇಲ್ಲ.ಹೊಸ ಕೆಲಸ ಸಿಕ್ಕ ಸಂತೋಷ, ಉತ್ಸಾಹ
ದಲ್ಲಿದ್ದೆ. ಮನಸ್ಸಿಗೆ ಹರ್ಷ, ದುಡ್ಡಿಲ್ಲದ ಆತಂಕದ ಮಿಶ್ರ ಭಾವನೆಗಳೊಂದಿಗೆ ಮನೆಗೆ
ಬಂದೆ. ಮನೆಯವರೊಂದಿಗೆ ಹೊಸ ಕೆಲಸದ ಅವಕಾಶ, ಸಮರ್ಪಕವಾಗಿ ನಿರ್ವಹಿಸಿದಲ್ಲಿ ಹೊಸ
ಭವಿಷ್ಯವಿದೆ ಎಂದು ಮನದಟ್ಟು ಮಾಡಿದಾಗ ಎಲ್ಲರಿಗೂ ಸಂತೋಷವಾಯಿತು.
ಆದರೆ ತಕ್ಷಣಕ್ಕೆ ಹಣದ ವ್ಯವಸ್ಥೆ ಕಠಿಣವಾದಾಗ ನನ್ನ ತಾಯಿ ದೇವರ ಬಳಿ ಇಟ್ಟಿದ್ದ
ಹತ್ತು ರೂಪಾಯಿ ಕೊಡುವುದಾಗಿಯೂ ಹೇಳಿದರು. ಅದನ್ನು ಬೇರೆ ಯಾವುದಕ್ಕೂಬಳಸುವಂತಿಲ್ಲ ..!
ಅಲ್ಲದೆ ಕೈಗೆ ಹಣ ಬಂದ ಬಳಿಕ ತಕ್ಷಣ ವಾಪಸ್ ಮಾಡಬೇಕೆಂಬ ಕಿವಿಮಾತಿನೊಂದಿಗೆ ಆ ಹಣ
ಕೊಟ್ಟರು.ಅಂತೂ ಹೊಸ ಕೆಲಸದ ಹೊಣೆಯೊಂದಿಗೆ ದೇವರೊಂದಿಗಿನ ಸಾಲದ ಜವಾಬ್ದಾರಿಯೂ ಸೇರಿತು.
ಮರುದಿನ ಶಿವಮೊಗ್ಗಕ್ಕೆ ಭೇಟಿ.ಅಧಿಕಾರಿಗಳೊಂದಿಗೆ ಚರ್ಚೆ ಫಲಪ್ರದ.ಈ ವೇಳೆಯಲ್ಲೇ
ಪಡೆದು ಹೋದ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಲು ಹೋಗಿ ಇರುವ ಹಣವನ್ನೂ ಕಳೆದಕೊಂಡ ಕೆಟ್ಟ
ಅನುಭವ.ನಂತರ ಅಲ್ಲಿ ಇಲ್ಲಿ ಕಾಡಿ ಬೇಡಿ ಊರು ಸೇರಿದ ದುಸ್ತರ ಅನುಭವ ಹೇಳಲು ಪ್ರತ್ಯೇಕ
ಪುಟವೇ ಬೇಕಾದೀತು.
ಈಗ ನನ್ನ ನಕ್ಷೆ ತಯಾರಿಸುವ ಕೆಲಸ ಪ್ರಾರಂಭ.ಸಾಗರದಲ್ಲಿದ್ದ ನನ್ನ ದೊಡ್ಡಪ್ಪನವರ
ಮನೆಯ ಮೂಲೆ ಸೇರಿದ್ದ ಮೇಜಿನ ಮೇಲೆ ಹಲವು ದಿನ ಪತ್ರಿಕೆ ಅಂಟಿಸಿ ಮೃದು ಮೇಲ್ಮೈ ತಯಾರಿಸಿ
ಡ್ರಾಯಿಂಗ್ ಬೋರ್ಡ್ ಎಂದು ಭಾವಿಸಿ ಕೊಂಡೆ. ಮನೆಯಲ್ಲಿದ್ದ ದರ್ಜಿಯ ಅಳತೆ ಪಟ್ಟಿ
ಹಿಡಿದು ಅಳತೆ ಶುರು ಮಾಡಿದುದ ಕಂಡು ಕಟ್ಟಡ ಮಾಲೀಕರಿಗೆ ಗಾಬರಿ.ಈ ಅಳತೆ ಯನ್ನು ಯಾವಾಗ
ಮುಗಿಸುವುದು,ಅದರ ನಿಖರತೆ ಏನು ಎಂದು ಪ್ರಶ್ನಿಸಿ ಎಲ್ಲಿಂದಲೋ ಒಂದು ಐವತ್ತು ಅಡಿ ಅಳತೆ
ಮಾಡಬಹುದಾದ ಟೇಪ್ ತರಿಸಿದರು.ಜೀವನದಲ್ಲಿ ಮೊದಲ ಬಾರಿಗೆ ಅಷ್ಟು ಉದ್ದದ ಟೇಪ್ ಹಿಡಿದು
ಅಳತೆ ಮಾಡಿದ ಸಂಭ್ರಮ , ಹೆಮ್ಮೆ ನನ್ನನ್ನು ಹಲವು ದಿನಗಳು ನನ್ನನ್ನು ಆವರಿಸಿಕೊಂಡವು.
ಅಂತೂ ಈಗಾಗಲೇ ಇದ್ದ ಕಟ್ಟಡ, ಸುತ್ತ ಇರುವ ಬಾವಿ, ಕುಚ್ಚಲಕ್ಕಿ ತಯಾರು ಮಾಡುವ ಬಾಯ್ಲರ್
ಗಳು, ಅಕ್ಕಿ ಮಾಡುವ ಯಂತ್ರ ಗಳ ಸ್ಥಳ, ಕಛೇರಿ,ಭತ್ತ ಮತ್ತು ಅಕ್ಕಿ ಸಂಗ್ರಹಿಸುವ
ವಿಭಾಗಗಳು ಇತ್ಯಾದಿಗಳನ್ನು ಗುರುತಿಸಿ ಕಟ್ಟಡದ ಮೇಲ್ಮೈ ನೋಟ, ಮುಂಭಾಗ ದ ನೋಟ,ಒಳವಿವರ
ತೋರಿಸಲು ಪಾರ್ಶ್ವ ನೋಟ ವಿರುವ ನಕ್ಷೆಯನ್ನು ತಯಾರಿಸಲು , (ಸೂಕ್ತ ಉಪಕರಣ
ಗಳಿಲ್ಲದಿದ್ದುದರಿಂದ) ಸಾಕಷ್ಟು ಆಯಾಸವಾದರೂ ಮೊದಲ ಬಾರಿ ತಯಾರಿಸಿದ ನಕ್ಷೆ
ಯಾದ್ದರಿಂದ ಅದೇ ಊಟ ನಿದ್ರೆ ಗಳ ನಡುವೆ ಕಣ್ಣಮುಂದೆ ಸುಳಿ ದಂತಾಗುತ್ತಿತ್ತು.
ಈ ನಕ್ಷೆಯನ್ನು ನೋಡಿದ ಕಟ್ಟಡದ ಮಾಲೀಕರು ತುಂಬಾ ಸಂತೋಷ ಪಟ್ಟು ಬೇಕಾದ ಎಲ್ಲ
ಡ್ರಾಯಿಂಗ್ ಉಪಕರಣಗಳನ್ನು ಇಂದೇ ಕೊಂಡುಕೊಳ್ಳಿರಿ,ಈ ಊರಿನಲ್ಲಿ ಸಿಗದಿದ್ದರೆ
ಶಿವಮೊಗ್ಗಕ್ಕೆ ಹೋಗಿ ತೆಗೆದುಕೊಂಡು ಬನ್ನಿ ಎಂದರು. ಬಹುಶಃ ಯಾವುದೇ ಹೆಚ್ಚಿನ ಉಪಕರಣ
ಗಳಿಲ್ಲದೇ ಮಾಡಿರುವ ನಕ್ಷೆ, ಸೂಕ್ತ ಉಪಕರಣ ಗಳಿಂದ ಇನ್ನೂ ಚೆನ್ನಾಗಿ ಬರಬಲ್ಲದು ಎಂಬ
ನಂಬಿಕೆ ಯಿಂದಲೋ ನಕ್ಷೆ ಯ ತಯಾರಿಕೆಯಲ್ಲಿ ನಾ ಪಟ್ಟ ಪರಿಪಾಟಲು ಕಂಡೋ ಅಂತೂ ನಾನು
ಕೇಳದಿದ್ದರೂ ಅವರೇ ಮುಂದಾಗಿ ಹಣ ನೀಡಿದ್ದು ಮುಜುಗರ, ಸಡಗರ,ಸಂತಸ ತಂದಿತಲ್ಲದೆ
ಮಾಲೀಕರ ಬಗ್ಗೆ ಗೌರವವನ್ನು ಹೆಚ್ಚಿಸಿತು.ಮರುದಿನವೇ ಅನಿವಾರ್ಯ ವಾಗಿ ಬೇಕಾದ ಟೀ
ಸ್ಕೈಯರ್ , ಪೆನ್,ಟ್ರೇಸಿಂಗ್ ಕ್ಲಾತ್, ಪೇಪರ್ ಗಳನ್ನು ಹವಣಿಸಿಕೊಂಡದ್ದಾಯಿತು.
ಮಾಲೀಕರಿಂದ ಮುಂಗಡವಾಗಿ ಹಣವೇನೋ ಧಾರಾಳವಾಗಿ ಹರಿದುಬಂದರೂ ಅದು ಸಾಲವಲ್ಲವೇ? ಎಂಬ ವಿಚಾರ ಮನದಲ್ಲಿ ಕೊರೆಯುತ್ತಿತ್ತು.
ನೋಡನೋಡುತ್ತಿದ್ದ೦ತೆಯೇ ಸುಮಾರು
ಹತ್ತು ಕಟ್ಟಡಗಳ ನಕ್ಷೆ ಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಿದೆ. ಆ ಮಾಲೀಕರುಗಳೇ ದರ ನಿಗದಿ
ಮಾಡಿ ಹಣ ಕೊಟ್ಟರೂ ಅದು ತೃಪ್ತಿಕರವಾಗಿತ್ತು. ತಾಯಿಯಿಂದ
ಪಡೆದ ಸಾಲವೂ ಸೇರಿದಂತೆ ಮಾಲೀಕರಿಂದ ಪಡೆದ ಮುಂಗಡ ವಾಪಸಾತಿ ನಂತರವೂ ಕೈನಲ್ಲಿ ಹಣ ಉಳಿದು ಮನೆ
ಖರ್ಚಿಗೆ ಕೊಟ್ಟಿದ್ದು ಮನೆಯಲ್ಲಿ ನನಗೆ ಅಪಾರ ಗೌರವ ತಂದಿದ್ದು ಹೆಮ್ಮೆಯ ವಿಷಯ.
ಈ ಒಂದು ಪ್ರಯತ್ನ ನನ್ನ ಜೀವನದ ಮೈಲಿಗಲ್ಲು ಎಂದು ಇಂದೂ ಭಾವಿಸಿದ್ದೇನೆ.
ನಂತರ ಆ
ರೀತಿಯ ನಕ್ಷೆಗಳ ಅಗತ್ಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಂದಿತ್ತಾದರೂ ಕಾಲಕ್ರಮೇಣ ಎಲ್ಲರ
ಅಗತ್ಯಗಳು ಮುಗಿದು ನಂತರ ಪೂರ್ಣ ಇಲ್ಲವಾಯಿತು.
ಈ ಮಧ್ಯೆ
ತಾಳಗುಪ್ಪದಲ್ಲಿನ ಪ್ಲೆವುಡ್ ಕಾರ್ಖಾನೆಯಲ್ಲಿ ಉದ್ಯೋಗಕ್ಕೆ ಸ೦ದರ್ಶನವಾಗಿತ್ತು.ವ್ಯಾಸ೦ಗ ಮಾಡಿ ಬಹಳ ಕಾಲವಾಗಿತ್ತಾದರೂ ಕೆಲಸ ಮಾಡಿ ಕೈ ಪಳಗಿತ್ತಾದ್ದರಿಂದ ಸುಲಭವಾಗಿ ಉದ್ಯೋಗ ದೊರೆಯಿತು.
ನಂತರದ
ವರ್ಷಗಳಲ್ಲಿ ಈ ರೀತಿಯ ನಕ್ಷೆ ತಯಾರಿಸುವ ಅವಕಾಶ ಹಲವು ಬಾರಿ ಒದಗಿ ಬಂದಿದ್ದು ಅದಕ್ಕೆ ಪೂರಕವಾಗಿ ಒಬ್ಬ ಅನುಭವಿ ಹಿರಿಯ
ಇಂಜಿನಿಯರ್ ರವರಿಂದ ಮಾರ್ಗದರ್ಶನವೂ ದೊರೆಯಿತು, ಅವರ ಮೂಲಕ ವಿವಿಧ ರೀತಿಯ ನಕ್ಷೆ ಗಳು, ಹಲವಾರು ಕಛೇರಿಗಳು, ಹೊಸ ಹೊಸ ಗ್ರಾಹಕರು ದೊರೆತು ಈವರೆಗೆ ಸಾವಿರಾರು ಕಟ್ಟಡ ನಕ್ಷೆ ಗಳನ್ನು ತಯಾರಿಸಿದ್ದೇನೆ. ಹಲವು
ಊರುಗಳಲ್ಲಿ ಹಲವಾರು ಸ೦ಸ್ಥೆಗಳಿಗೆ ಸೇವೆ ಸಲ್ಲಿಸಿದ್ದೇನೆ. ಕೆಲವು
ದಶಕಗಳ ಕಾಲ ದುಡಿಮೆಯಲ್ಲಿ ತೊಡಗಿಸಿಕೊ೦ಡು ಈಗ ಸೇವೆಯಿ೦ದ ನಿವೃತ್ತನಾಗಿದೇನೆ. ಕಳೆದ ದಿನಗಳತ್ತ ಒಮ್ಮೆ ತಿರುಗಿ ನೋಡಿದಾಗ ನನ್ನ ತಂಗಿ ತಮ್ಮಂದಿರ
ವಿದ್ಯಾಭ್ಯಾಸ, ವಿವಾಹ ಇತ್ಯಾದಿ ಜವಾಬ್ದಾರಿಗಳನ್ನು ಸಮರ್ಥವಾಗಿ
ನಿರ್ವಹಿಸಲು ಈ ನಕ್ಷೆ ತಯಾರಿಕೆ ಪ್ರಧಾನವಾಗಿ ಸಹಾಯ
ಮಾಡಿದೆ ಎಂಬುದರಲ್ಲಿ ಅನುಮಾನವೇನಿಲ್ಲ. ಒಂದೇ ವಾಕ್ಯದಲ್ಲಿ ಹೇಳುವುದಾದರೆ
" ನಕ್ಷೆ ನನ್ನ ಬಾಳನ್ನು ಬೆಳಗಿದೆ."
ನಕ್ಷೆಯ ಹಿಂದಿರುವ ರಕ್ಷೆ, ನೀವಿಟ್ಟ ದಿಟ್ಟ ಹೆಜ್ಜೆ ಎಲ್ಲರಿಗೂ ಮಾದರಿಯಾಗಿದೆ
ReplyDeleteತಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು
DeleteRamachandra, even My present house's blue print was made by you, including foundation plan. Everybody who comes to our house, likes it.
ReplyDeleteನನಗದು ನೆನಪಿದೆ ನಿನ್ನ ಏಕದಂತ drawing Home,ಸಾಗರದ ಎಸ್ ಪಿ ಎಮ್ ರಸ್ತೆಯ ಬನಶಂಕರಿ ನಿಲಯದ ಮಹಡಿಯಲ್ಲಿ ಪ್ರಾರಂಭ ವಾಗಿದ್ದು....
ReplyDelete