Skip to main content

ಕೊಡದ ಮಲ ಕೆಡಿಸಿತು ಜಲ


    ೧೯೬೦ , ಒಂದು ರಾತ್ರಿ ಘಂಟೆ ೯ಆಗಿದೆ.ಪ್ರತಿರಾತ್ರಿ ೯.೩೦ ಆದರೂ ಹೊರಡದ ೮.೩೦ರ ಬಸ್ ಅದೇಕೋ ಇಂದು ಬೇಗ ಹೋಗಿಬಿಟ್ಟಿದೆ .ಇದೇ ಸಾಗರದಿಂದ  ಜೋಗಕ್ಕೆ ಹೊರಡುವ  ಕಡೆಯ ಬಸ್.ಅವರು ಬಂದ ಹಳ್ಳಿಯಿಂದ ಸಾಗರ ನಾಲ್ಕೇ ಮೈಲು.ಕಾಲಿಲ್ಲದ ಸೋದರಳಿಯನನ್ನು ಸೈಕಲ್ ನಲ್ಲಿ ಕೂಡಿಸಿ ಕೊಂಡು ತಳ್ಳಿಕೊಂಡು ಬರುವ ವೇಳೆಗೆ ಎರಡು ಘಂಟೆಗಳ ಪ್ರಯಾಣವಾಗಿತ್ತು.ತುಂಬಾ ಆಯಾಸವಾಗಿತ್ತು.ಕೇಳಿ ನೋಡಿದರೆ ಇನ್ಯಾವುದೂ ಬಸ್ ಇಲ್ಲ.

    ಈ ಹುಡುಗನಿಗೆ ಇನ್ನು ಮೂರು ದಿನಕ್ಕೆ ಪರೀಕ್ಷೆ. ಶಿವರಾತ್ರಿ ಪ್ರಯುಕ್ತ  ಊರಿನಲ್ಲಿ ತೇರು.ಸೋದರಳಿಯನ ಮೇಲೆ ಏನೋ ವಿಶೇಷ ಪ್ರೀತಿ.ಆದ್ದರಿಂದ ತೇರನ್ನುಅವನೂ ನೋಡಲಿ ಎಂದು  ಆಸೆ . ಇದರಿಂದಾಗಿ ಅವನು ಪರೀಕ್ಷೆ ಗೆ ಇಲ್ಲಿದ್ದೇ ತಯಾರಾಗುತ್ತಾನೆ ಎಂದು ಅಕ್ಕ ಭಾವಗೆ  ಹೇಳಿ ಅವನನ್ನು ಮನೆಗೆ ಕರೆತಂದು ೧೫ದಿನ ಆಗಿತ್ತು. ಆದರೆ ಅವನು ಓದಿದ್ದು ಅಷ್ಟಕ್ಕಷ್ಟೇ. ಆತನೋ  ಕಾಲಿಲ್ಲದ ಹುಡುಗ. ಬಲು ಚೇಷ್ಟೆ.ಆದರೂ ಪ್ರೀತಿಯೋ ಅನುಕಂಪವೋ, ಆಕ್ಷೇಪಿಸುವವರು  ಕಡಿಮೆ. ಅದು ಅವನಿಗೆ ಬಾಲ ಬಿಚ್ಚಲು ಹೆಚ್ಚು ಸ್ವಾತಂತ್ರ್ಯವಾಗಿತ್ತು.

   ಕಳೆದ ಚೌತಿ ಹಬ್ಬದಲ್ಲಿ ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿ  ಅದರ ಪೇಚಾಟವನ್ನು ನೋಡಿ ಆನಂದಿಸಿ ಊರವರಿಂದ ಬೈಸಿಕೊಂಡಿದ್ದ. ಮೂರು ತಿಂಗಳ ಹಿಂದೆ ಬಂದಾಗ ಮನೆ ಮುಂದೆ ರೋಗದಿಂದ ನರುಳುತ್ತಾ ಮಲಗಿದ್ದ ಒಂದು ನಾಯಿ , ಉರಿಯುತ್ತಿದ್ದ ಚರ್ಮವನ್ನು ಮೇಲಿಂದ ಮೇಲೆ ತುರಿಸಿಕೊಂಡು ಹೋದಲ್ಲೆಲ್ಲ ಕೂದಲು ಉದುರಿಸಿಕೊಂಡು ಓಡಾಡುತ್ತಿತ್ತು. ಆ ಸಮಯದಲ್ಲಿ   ಚರಂಡಿಗೆ ಡಿಡಿಟಿ ಔಷಧಿ ಸಿಂಪಡಿಸುವವ ಬಂದಿದ್ದ.  ಈ ಪಟಿಂಗ  ಅವನಿಗೆ ಹೇಳಿ  ಆ ನಾಯಿ ಮೈಗೆಲ್ಲ ಔಷಧಿ ಹೊಡಿಸಿದ್ದ. ಕುಯ್ಯೋ ಮರ್ರೋ ಎಂದು ಬಡಕೊಂಡರೂ ಆ ನಾಯಿನ ಬಿಡಲಿಲ್ಲ. ನೋಡಿದರೆ ಅಯ್ಯೋ ಎನಿಸುತ್ತಿತ್ತು. ಹೇಳಿದರೆ ಕೆಲವು ಬಾರಿ ಕೇಳುತ್ತಲೇ ಇರಲಿಲ್ಲ.ಹೀಗೆಯೇ ಏನೋ ತರಲೆ ಮಾಡುತಿದ್ದ. ಇವನೇನೋ ಪ್ರತ್ಯೇಕ ರೀ ,ಒಂದು ರೀತಿಯಿಂದ ಬುದ್ದಿವಂತ ಎಂದು ಅವರಿವರು ಹೇಳಿದಾಗೇನೋ ಸಂತೋಷವಾಗುತ್ತಿತ್ತು,ಆದರೂ ಏನೋ ಅವನ ಬಗ್ಗೆ,ಅವನ ಭವಿಷ್ಯದ ಬಗ್ಗೆ ಅವ್ಯಕ್ತ ಭಯ, ಹೆಮ್ಮೆಯೊಂದಿಗೆ.  

   ಹುಡುಗನನ್ನು ರಾತ್ರಿ ಕಡೇ ಬಸ್ಸಿಗೆ ಕಳಿಸು, ಅವನನ್ನು ಜೋಗದಲ್ಲಿ ಇಳಿಸಿ ಕೊಳ್ಳುತ್ತೇವೆ ಎಂದು ಅಕ್ಕ ಹೇಳಿದ್ದಾಳೆ. ಸಾಲದೆಂದು ಸದಾ ದೂರ್ವಾಸನಂತಿರುವ ಭಾವ, ಹುಡುಗನ್ನ ಕಳಿಸೋದು ತಡ ಮಾಡಬೇಡಿ ಎಂಬ ಕಾಳಜಿಯ ಎಚ್ಚರಿಕೆ ಹೇಳಿ ಕಳಿಸಿದ್ದಾರೆ. ಇವೆಲ್ಲ ಯೋಚಿಸುತ್ತಾ ಬಂದರೆ ಬಸ್ ಹೊರಟು ಹೋಗಿದೆ. ಬೆಳಿಗಿನ ಐದರ ಮಲಬಾರ್ ಎಕ್ಸ್ ಪ್ರೆಸ್ ಬಸ್ಸೇ ಮೊದಲ ಬಸ್. ಅದಕ್ಕೆ ಹೋದರೆ ಜೋಗ್ ಹೋಗೋ ಹೊತ್ತಿಗೆ ಬೆಳಗಾಗಿರುತ್ತೆ. ಇವನೇ ಯಾರ ಸಹಾಯವಿಲ್ಲದೆ ಮನೆಗೆ ಹೋಗುತ್ತಾನೆ. ಅದಕ್ಕೇ ಕಳಿಸೋದು ಸರಿ ಎಂದು ಕೊಂಡ. ಆದರೆ ಈ ರಾತ್ರಿ ಎಲ್ಲಿರೋದು ,ಇವನನ್ನ ಎಲ್ಲಿ ಬಿಡೋದು ,ಪುನಃ ಇವನನ್ನು ಈಗ ಕರೆದುಕೊಂಡು ಹೋಗಿ ಬೆಳಿಗ್ಗೆ ಬರೋದು ಕಷ್ಟ ಎಂದು ಯೋಚಿಸುತ್ತಾ ಬಾಗಿಲು ಹಾಕುತ್ತಿದ್ದ ಹೋಟೆಲಿನತ್ತ ನೋಡಿದ.ಏನೋ ಯೋಚಿಸುತ್ತಾ ಅದರ ಒಳ ಪ್ರವೇಶಿಸಿದ.

   ಯಾವಾಗಲೋ ಕುಡಿದ  ಕಾಫಿಯ ಸಲುಗೆ ಮೇಲೆ, ಯಜಮಾನರಿಗೆ ನಮಸ್ಕಾರ ಹೇಳುತ್ತಾ ":ಯಜಮಾನರೇ ಒಂದು ಕೆಲಸವಾಗಬೇಕಲ್ಲಾ" ಎಂದು ಪೀಠಿಕೆ ಹಾಕಿದ. ಹೇಳು ಎಂಬ ಅವರ ಮುಖಭಾವ ತಿಳಿದು, ಇವನು ನನ್ನ ಹುಡುಗ, ಜೋಗಕ್ಕೆ ಹೋಗೋ ಬಸ್ಸಿಗೆ ಕಳಿಸಲು ಕರೆತಂದೆ.ಈ ದಿನ ಬೇಗ ಬಸ್ ಹೋಗಿ ಬಿಟ್ಟಿದೆ.ಬೆಳಿಗಿನ ಮೊದಲ ಬಸ್ ಗೆ ಹೋಗಬೇಕು.ಈಗ ರಾತ್ರಿ.ಊರಿಗೆ ಹೋಗಿ ಅವನನ್ನು ಮತ್ತೆ ಬೆಳಿಗ್ಗೆ ಕರೆತರುವುದು ಕಷ್ಟ ಎಂದು ಒಂದೇ ಉಸಿರಿನಲ್ಲಿ ಹೇಳಲು ಪ್ರಯತ್ನ ಪಟ್ಟ. ಇವನ ಮಗನತ್ತ ಒಂದು ಆಳವಾದ  ದೃಷ್ಟಿ ಹಾಕಿದ ಅವರು ಹೂಂ. ಅದಕ್ಕೇ. ಏನಾಗಬೇಕು ಎಂದರು.  ಬಹುಶಃ ಇವನೇನು ಕೇಳುತ್ತಾನೆ ಎಂದು ಅವರಿಗೆ ಗೊತ್ತಾಗಿರಬಹುದೆನಿಸಿತು. ಆದರೂ  ಕೈಮುಗಿದು " ಸ್ವಾಮಿ,ಈ ರಾತ್ರಿ ಇವನಿಗೆ ಮಲಗಲು ಅವಕಾಶ ಕೊಡಿ. ಬೆಳಿಗ್ಗೆ ಜೋಗಕ್ಕೆ ಹೋಗುತ್ತಾನೆ.ಇವನು ಆ ಬಸ್ಸಿಗೆ ಕಳಿಸಲು ಸಹಾಯ ಬೇಕು.ನಿಮ್ಮ ಸಪ್ಲೈಯರ್ ಯಾರಿಗಾದರೂ ಹೇಳ್ತೀರಾ. ಎಂಬ ಅವನ ದೈನ್ಯವಾಕ್ಯ ಜೊತೆಗೆ ಕಾಲಿಲ್ಲದ ಹುಡುಗ, ಕತ್ತಲು ರಾತ್ರಿ, ಈ ಪರಿಸ್ಥಿತಿ ಎಲ್ಲಾ ಏಕ ಕಾಲದಲ್ಲಿ ಅವರ ಮನಸ್ಸಿನಲ್ಲಿ   ಕೆಲಸ ಮಾಡಿತೇನೋ,ಅವರ ಮನ ಕರಗಿಸಿತು.ಏನೂ ಹೇಳದೇ ನಾರಾಯಣಾ,ಬಾರೋ, ಎಂದು ಆಪ್ತ ಭಂಟ ಸಪ್ಲೈಯರ್ ಒಬ್ಬನನ್ನು ಕರೆದು , ಇವನು ಅಡಿಗೆ ಮನೇಲಿ ಮಲಗಲಿ, ಬೆಳಗಿನ ಬಸ್ ಗೆ ಅವನ ಹತ್ತಿಸು  ಎಂದು ಅವನಿಗೆ ಒಪ್ಪಿಸಿ,ನಡೀರಿ ಆಯ್ತಲ್ಲ ಅಂತ ಇವನನ್ನು ಕಳಿಸಿದರು.

     ಎರಡು ಮೂರು ಗೋಣಿಚೀಲ,ತಲೆದಿಂಬಿಗೆಂದು ಒಂದು ಮಣೆಕೊಟ್ಟು ಮಲಗಲು ಹೇಳಿದ ನಾರಾಯಣ. ಬೆಳಿಗ್ಗೆ ಎಬ್ಬಿಸಿದ ಕೂಡಲೇ ಏಳಬೇಕೆಂದು ತಾಕೀತು ಮಾಡಿದ.ಒಂದು ಸೀಮೆಎಣ್ಣೆ   ಬೆಡ್ ಲ್ಯಾಂಪ್ಪ್  ಹಚ್ಚಿಟ್ಟು ಬಾಗಿಲು ಹಾಕಿ ಕೊಂಡು ಹೋದ.ಆಕಡೆಯಿಂದ ಚಿಲಕ ಹಾಕಿದ್ದು ಕೇಳಿಸಿತು.ಹುಡುಗ ಮಲಗಲು ತಯಾರಾದ.ಕುತೂಹಲದಿಂದ ಆ ಕತ್ತಲು ಕತ್ತಲು ಬೆಳಕಿನಲ್ಲೇ ತೆವಳುತ್ತಾ ಹೋಗಿ ಹಿಂದುಗಡೆ ನೋಡಿದ .ಅಲ್ಲಿ ಇದೇ ರೀತಿ ಇನ್ನೊಂದು ಹಾಲ್.ಅಲ್ಲಿಗೆ ಹೋಗುವ ಬಾಗಿಲೂ ಆ ಕಡೆಯಿಂದ ಹಾಕಿರುವಂತಿದೆ. ಸರಿ ನನಗೇಕೆ, ಎಂದು ಕೊಂಡು ಮಲಗಿದ.ಹೊರಗಡೆ ಎಲ್ಲೋ ಮಾತಾಡೋದು ಕೇಳಿಸುತ್ತಿದ್ದರೂ ಹೇಗೋ ನಿದ್ದೆ ಬಂತು.

     ಕೆಲವು ಘಂಟೆಗಳು ಕಳೆದಿರಬಹುದು.ಹುಡುಗನಿಗೆ ಹೊಟ್ಟೆ ಗುಡುಗುಡು ಎನ್ನುತ್ತಿದೆ.ನೀರು ಕುಡಿಯುವ ಮನಸ್ಸಾಗಿ ಅಲ್ಲೇ ಇದ್ದ ನೀರನ್ನು ಕುಡಿದ. ಇದ್ದಕ್ಕಿದ್ದಂತೆ  ವಿಸರ್ಜನೆಗೆ ಅವಸರವಾಯ್ತು. ಎಲ್ಲಿ ಹೋಗೋದು.ಹೊರಗಿನ ಬಾಗಿಲು ತಟ್ಟಿದ.ಉಪಯೋಗವಾಗಲಿಲ್ಲ, ಕೂಗಿದ.ಯಾರೂ ಓ ಗೊಟ್ಟಿದ್ದು   ಕೇಳಿಸಲಿಲ್ಲ . ಹಿಂದಿನ ಬಾಗಿಲ ವಿಷಯ ತಿಳಿಯದು.
 ಅರ್ಜೆಂಟ್ ಆಯ್ತು.
ಸುತ್ತ ಕಣ್ಣಾಡಿಸಿದ.ಎತ್ತನೋಡಿದರಲ್ಲಿ  ಪಾತ್ರೆಗಳು.
 ತಕ್ಷಣ ತಲೆಗೊಂದು ಯೋಚನೆ ಬಂತು.
ಅಲ್ಲೇ ಇದ್ದ ಖಾಲಿ ಕೊಡವೊಂದರಲ್ಲಿ ವಿಸರ್ಜಿಸಿ ಹಗುರ ಮಾಡಿಕೊಂಡು ಒಂದು ತಟ್ಟೆಯಲ್ಲಿ ಶುಚಿಮಾಡಿಕೊಂಡು ಆ ನೀರನ್ನೂ ಕೊಡಕ್ಕೆ ಸುರಿದ.ಕೊಡದ ಮೇಲೊಂದು ದೊಡ್ಡ ಲೋಟವನ್ನು ಬಿಟ್ಟ. ಮಲಗಿಕೊಂಡ.

    ಸ್ವಲ್ಪ ಹೊತ್ತಿನಲ್ಲೇ ಬಂದ ನಾರಾಯಣ ತಮ್ಮಾ ಏಳೋ, ಬಸ್ ಹೊರಡುತ್ತದೆ, ಬಾ .!ಎಂದು ಹುಡುಗನನ್ನು ಕರೆದೊಯ್ದು ಬ್ಯಾಗನ್ನು ಬಸ್ ಗೆ ಹಾಕಿ ,ಇವನನ್ಳು.  ಕೂಡಿಸಿದ.ಬಸ್ ಹೊರಟಿತು.ನಾರಾಯಣ ಉಳಿದ ನಿದ್ದೆ ಮುಗಿಸಲು ಮಹಡಿಗೆ ಹೋದ    ಇತ್ತ  ಬಸ್  ಊರು ತಲುಪಿತು.ಇವನು ಮನೆಗೆ ತಲುಪಿದ.

ಇತ್ತ ಹೋಟೆಲ್ ನಲ್ಲಿ  ಐದೂವರೆಗೆ ಕೆಲಸ ಪ್ರಾರಂಭ.ಬೆಳಗಿನ ಪಾಳಿಯು ಕಿಟ್ಟನದು ನೀರಿನ ಕೆಲಸ.ಹಳೇ ನೀರನ್ನು ಬಾಗಿಲಿಗೆ ಚಿಮುಕಿಸಿ ಗುಡಿಸಿದ.ಹೆಚ್ಚಿನ ನೀರಿಗೆ ಬಾವಿಗೆ ಬಿಡಲು ಕೊಡಕ್ಕೆ ಕೈಹಾಕಿದ.ಮೇಲೆ ಇದ್ದ ಲೋಟ ತೆಗೆದ.ಕೊಡದ ಕುತ್ತಿಗೆಗೆ ಭಾವಿ ಹಗ್ಗದ ಕುಣಿಕೆ ಬಿಗಿದು ಬಾವಿಗೆ ಬಿಟ್ಟ. ಕತ್ತಲಿದ್ದುದರಿಂದ ಕೊಡ  ತುಂಬಿದ್ದು ಕಾಣದು. ಪದೇ ಪದೇ ಕೊಡವನ್ನು ಎತ್ತಿ ಬಿಟ್ಟು ಎತ್ತಿ ಬಿಟ್ಟು ತುಂಬಿದೆ ಎಂದ ಮೇಲೆ ಎಳೆದುಕೊಂಡ.ಅಲ್ಲಿಯ ಹಂಡೆಗೆ ನೀರು ಸುರಿದ.ಆ ನಸುಕಿನಲ್ಲಿ ಏನೋ ತೇಲುತ್ತಿದೆ.ಕೈನಲ್ಲಿ ಹಿಡಿದು ಪರೀಕ್ಷಿಸಿ ವಾಕರಿಸಿದ.ನನಗೇಕೆ.ಆ ಮೇಲೇ ಎಲ್ಲರೂ ಬಂದ ಮೇಲೇ ನೀರೆಳೆಯೋಣ ಎಂದು ಎಳೆದು ನೀರನ್ನೂ ಬಾವಿಗೆ ಸುರಿದು ಬೇರೆ ಕೆಲಸಕ್ಕೆ ಹೋದ.

    ಗರಿಗರಿ ಪೈಜಾಮ ಜುಬ್ಬಾಲಂಕೃತ ಶ್ವೇತ ವಸ್ತ್ರಧಾರಿ ಹೋಟೇಲ್ ಮಾಲೀಕರು , ತಡವಾಯಿತು ಎಂದು ಕೊಂಡೇ ಸ್ಕೂಟರ್ ನಿಂದ ಇಳಿದರು.ಹೋಟೇಲ್ ಬಾಗಿಲು ತೆರೆದೇ ಇಲ್ಲ, ಏಳು ಘಂಟೆ ಆಯ್ತು. ಏಕಿರಬಹುದು ಅಂದು ಕೊಂಡು ಪ್ರವೇಶಿಸುವ ಮುನ್ನವೇ ನಾರಾಯಣ ಓಡಿಕೊಂಡು ಬಂದು ಕಿವೀಲಿ ಹೇಳಿದ.ಬಾವಿಗೆ ಎಲ್ಲಿಂದಲೋ ಬಂದು ಹೊಲಸು ಸೇರುತ್ತಿದೆ.ಈಗಂತೂ ಹನಿ ನೀರಿಲ್ಲ.ಬೇರೆ ವ್ಯವಸ್ಥೆ ಮಾಡಬೇಕು ಎಂದ.ಹೊಲಸಾದ ನೀರು ಎಂದು ಪ್ರಚಾರ ವಾದರೆ   ಹೋಟೆಲ್ ವ್ಯವಹಾರದ ಕತೆ ಅಷ್ಟೇ.ತುಟಿ ಮೇಲೆ ಬೆರಳಿಟ್ಟು ಎಲ್ಲರಿಗೂ ಸುಮ್ಮನಿರಲು ತಾಕೀತು ಮಾಡಿದರು ಮಾಲೀಕರು.

   ರಸ್ತೆಯಲ್ಲಿ ಗಾಡಿ ಎಳೆಯುತ್ತಿರುವ ಹಮಾಲಿ ಶೀನನತ್ತ ದೃಷ್ಟಿ ಹಾಕಿದ ಯಜಮಾನರು ಅವನಿಗೆ ಕರೆಕಳಿಸಿದರು. ಅವನು ಬರೋ ವರೆಗೂ ತಲೆಯಲ್ಲಿ ಯೋಚನೆ.  ಅದೇ ಮೊದಲ ಬಾರಿಗೆ ನೀರಿಗೆ ತೊಂದರೆ ಆಗಿದ್ದು.ಬಾವಿ ನೀರು ಒಣಗಿದ್ದೂ ಇಲ್ಲ.ಕೊಳಕಾಗಿದ್ದೂ ಇಲ್ಲ.ಅಲ್ಲದೆ ಸಿಹಿ ನೀರು ಎಂದು ಪ್ರಖ್ಯಾತ.ತಥ್, ಏನಾಗಿರಬಹುದು.ಎಂದು ಕೊಂಡು ನೋಡಿದರೆ ಶೀನ.ನೋಡಯ್ಯಾ, ಗಾಡಿಯಲ್ಲಿ ಹಂಡೆ ತೆಗೆದು ಕೊಂಡು ಹೋಗಿ ಗಣಪತಿ ಕೆರೆಯಿಂದ ನೀರು ತರಬೇಕು.ನಮ್ಮ ಬಾವಿ ನೀರು ಏಕೋ ಸಣ್ಣಗೆ ವಾಸನೆ ಇದೆ.ಗಿರಾಕಿಗಳಿಗೂ ತೊಂದರೆ ಆಗಬಾರದಲ್ಲವೇ.ಎಂದು ಸತ್ಯವನ್ನು ಹೇಳಿದಂತೂ ಆಗಬೇಕು,ಮುಚ್ಚಿಟ್ಟಂತೂ ಆಗಬೇಕು.ಹಾಗೆ ಹೇಳಿದರು.ಅಂದೇ ಆ ಸಾಗರ ಪೇಟೆಯಲ್ಲಿ ಮೊದಲ ನೀರು ಸಾಗಣೆ.ಎಲ್ಲರಿಗೂ ಹೊಸ ವಿಷಯ. ನೀರಿನ ಅನುಕೂಲವಾಗೋ ಹೊತ್ತಿಗೆ ಮಧ್ಯಾಹ್ನ ಮೂರು ಆಗಿತ್ತು.ಭಾನುವಾರವೂ ರಜಾ ಮಾಡದ ಯಜಮಾನರಿಗೆ ಭಾರೀ ನಷ್ಟದ ಆತಂಕ ತಂದ ನೀರು.ಅಂತೂ ಬಾವಿ ನೀರೆಲ್ಲ ಎತ್ತಿ ಪೂರ್ತಿ ಖಾಲಿ ಮಾಡಿ ಸಹಜ ಸ್ಥಿತಿಗೆ ಬರಲು ವಾರವೇ ಬೇಕಾಯಿತು.ಆದರೂ ಆಪ್ತರಲ್ಲಿ ಮಾತನಾಡುತ್ತಾ ಅವರ ಉಳಿದ ಪ್ರಶ್ನೆ ಯಾರೂ ಬರಲು ಅಸಾಧ್ಯವಾದ ಜಾಗದಲ್ಲಿನ   ಈ ಕಲ್ಲಿನ ಬಾವಿಗೆ ಹೊಲಸು ಬಂದಿದ್ದು ಹೇಗೆ , ಜೊತೆಗೇ ಬಿಡಿ ಸರಿ ಆಯ್ತಲ್ಲ ಎಂಬ ಸಮಾಧಾನದೊಂದಿಗೆ ಯೋಚನೆಯ ಅಂತ್ಯ.ಈಗ ವ್ಯಾಪಾರ ಮಾಮೂಲಿನಂತೆ ಇದೆ.


    ಹಲವು ವರ್ಷಗಳ ನಂತರ ನೀರು ಕೆಡಿಸಿದ ಮಹನೀಯ ಸಂಬಂದಿಗಳಲ್ಲಿ ವಿವರಿಸುತ್ತಿದ್ದ.    
ಅನಿವಾರ್ಯ ಕ್ಷಣದಲ್ಲಿ ಮಲ ವಿಸರ್ಜಿಸಿದ ರೀತಿ. ಯಾರಿಗೂ ಹೇಳಬೇಡಿ ಎಂದು ಹೇಳಿದ್ದಾನೆ. ನೀವು ಅಷ್ಟೇ ಯಾರಿಗೂ ಹೇಳಬೇಡಿ.
 ಆಪತ್ಕಾಲದಲ್ಲಿ ಬಳಸಿದ ಆತನ  ಜಾಣತನವನ್ನು ಮೆಚ್ಚಲೋ , ಉಪಕಾರಿ ಹೋಟೆಲ್ ಮಾಲಿಕರ ಬಗ್ಗೆ ಅಯ್ಯೋ ಎನ್ನಲೋ, ಎಂದುಕೊಳ್ಳುತ್ತಾ ಹೇಗೋ ಸಾರ್ವಜನಿಕರಿಗೆ ಏನೂ ಆಗಲಿಲ್ಲವಲ್ಲಾ ಎಂದು ಸಮಾಧಾನ ಪಟ್ಟುಕೊಂಡಿದ್ದೇನೆ.

Comments

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...