ಅನಾರೋಗ್ಯ ಪರ್ವ-೨
ಅಂದು ಗೌರಿಬಿದನೂರಿನಲ್ಲಿ ಹಿರಿಯರೊಬ್ಭರ ಶ್ರಾದ್ಧ. ಅನಿ ವಾರ್ಯವಾಗಿ ಬೆಳಿಗ್ಗೆ ಹೋಗಿ ಸಂಜೆ ಬಂದಿದ್ದೆ. ರಸ್ತೆ ಕಾಮಗಾರಿಯಿಂದಾಗಿ ಅಸ್ತವ್ಯಸ್ತ ವಾಗಿದ್ದು ಕಾರು ಪ್ರಯಾಣ ಪ್ರಯಾಸವಾಗಿತ್ತು. ಆ ರಾತ್ರಿ ಮನೆಯಲ್ಲೊಬ್ಬನೇ ಮಲಗಿದ್ದೆ.
ರಾತ್ರಿ ಒಂದು ಘಂಟೆ ಇರಬಹುದು. ಇದ್ದಕ್ಕಿದ್ದ೦ತೆ ಎಚ್ಚರವಾಯಿತು. ಎದೆಯ ಭಾಗದಲ್ಲಿ ನೋವು ಅರಿವಿಗೆ ಬ೦ತು. ನಿದ್ರೆ ಹಾರಿಹೋಯಿತು. ಕೆಲಹೊತ್ತು ಏನೂ ತೋಚಲಿಲ್ಲ. ಮನದಲ್ಲಲ್ಲೋ ಕಳವಳದ ಸುಳಿವು.......
ಬೇಗನೆ ಮನಸ್ಸು ತಹಬ೦ದಿಗೆ ಬ೦ದಿತು. ಮಿದುಳು ಕೆಲಸ ಮಾಡಿತು. ನೋವಿನ ಸರಿಯಾದ ಜಾಗವನ್ನು ಗುರುತಿಸಿ ಕೊಂಡೆ. ಕೆಲವು ಬಾರಿ ಯಾವುದೋ ನೋವಿಗೆ ವೈದ್ಯರ ಬಳಿ ಹೋಗಿರುತ್ತೀರಿ. ಅವರು ಎಲ್ಲಿನೋವೆಂದು ಕೇಳಿದಾಗ ಸರಿಯಾಗಿ ಹೇಳಲು ತಡವರಿಸಿದ್ದುಂಟು. ಹಾಗೆ ಹೋದಾಗ ನೋವು ಕಾಣದೆ ಮನೆಗೆ ಬಂದ ನಂತರ ಅತೀವ ನೋವಾದ ಅನುಭವವೂ ಇದೆ. ಇಂತಹ ಪರಿಸ್ಥಿತಿಯನ್ನು ನೆನೆದು ನೋವಾದ ಜಾಗವನ್ನು ಮನಸ್ಸಿನಲ್ಲಿ ಗುರುತಿಸಿ ಕೊಂಡೆ. ಯಾವುದೋ ನೋವಿನ ಮಾತ್ರೆ. ಸೇವಿಸಿದೆ. ಬಿಸಿನೀರು ಕುಡಿದರೆ ಒಳ್ಳೆಯದೆಂದು ಅದನ್ನೂ ಕುಡಿದು ಮಲಗಿದೆ. ಮರುದಿನ ಮರೆಯದೆ ಹೃದಯ ವೈದ್ಯರನ್ನು ನೋಡಬೇಕೆಂದು ಕೊಂಡು ಮಲಗಿದೆ. ಧಾರಾಳವಾಗಿ ನಿದ್ದೆ ಬಂದಿತು.
ಮರುದಿನ ಎಂದಿನಂತೆ ಕೆಲಸಕ್ಕೆ ಹೋದೆ. ಎಡೆಬಿಡದ ಕೆಲಸದ ಮಧ್ಯೆ ನೋವಿನ ವಿಚಾರ ಮರತೇ ಹೋಗಿತ್ತು. ಸಂಜೆ ಏಳರ ವೇಳೆಗೆ ನೋವಿನ ಜ್ಞಾಪಕ. ಈ ರಾತ್ರಿ ಯೂ ನೋವು ಬಂದರೆ?! ತತ್ ಕ್ಷಣ ಕೆಆರ್ ರಸ್ತೆ ಯ ಪ್ರಖ್ಯಾತ ನರ್ಸಿಂಗ್ ಹೋಂ ಕಡೆ ಹೊರಟೆ. ಓಡುತ್ತಾ ಹೋದರೂ, ಸಮಯವಾದ್ದರಿಂದ ಹೃದಯ ತಜ್ಞರು ಹೊರಟು ಹೋಗಿದ್ದರು. ಇನ್ನು ನಾಳೆಯೇ ಬರುವುದು. ಆದರೆ ಅಲ್ಲಿಯವರೆಗೆ ನಾನು ಕಾಯಲೊಲ್ಲೆ. ಯೋಚಿಸುತ್ತಿರುವಾಗ ಅಲ್ಲಿಂದ ಒಂದೆರಡು ಕಿಲೋಮೀಟರ್ ದೂರದಲ್ಲಿನ, ಹೃದಯಕ್ಕೆಂದೇ ಇರುವ ಆಸ್ಪತ್ರೆ ನೆನಪಿಗೆ ಬಂದಿತು. ಅದು ಯಾವಾಗಲೂ ತೆರೆದಿರುವ ಆಸ್ಪತ್ರೆಎಂದು ಗೊತ್ತಿದ್ದರೂ ಆಕಸ್ಮಿಕವಾಗಿ ಅಲ್ಲಿಯೂ ವೈದ್ಯರಿಲ್ಲವಾದರೆ ಎಂಬ ಆತಂಕದಿಂದಲೇ ಹೋಗಲು ಆಟೋಗೆ ಪ್ರಯತ್ನ ಮಾಡಿದೆ. ಇ೦ಥಾ ಸಮಯದಲ್ಲಿ ಆಟೋಗಳು ಸಿಗುವುದಿಲ್ಲ. ಸಿಕ್ಕರೂ ಹೇಳಿದ ಸ್ಥಳಕ್ಕೆ ಅವರು ಬರುವುದೂ ಇಲ್ಲ. ಬರಲೂ ಇಲ್ಲ. ವೇಗವಾಗಿ ನಡೆದೇ ಹೋಗಬೇಕಾಯಿತು.
ಆಸ್ಪತ್ರೆಗೆ ತಲುಪಿ ಕರ್ತವ್ಯದಮೇಲಿದ್ದ ವೈದ್ಯರ ಬಳಿ ನನಗಾಗಿದ್ದನ್ನೆಲ್ಲಾ ಹೇಳಿಕೊ೦ಡೆ. ನನ್ನ ನಿರೂಪಣೆಯಾಗುತ್ತಿದ್ದ೦ತೆಯೇ ಫೈಲ್ ತಯಾರಾಯಿತು. ಇಸಿಜಿ ಪರೀಕ್ಷೆಯಾಗಲೆ೦ದು ಚೀಟಿ ಬರೆದರು. ಅದನ್ನು ಮಾಡಿಮುಗಿಸಲು ನರ್ಸ್ ಗೆ ಆತುರ. ಆಕೆಯ ಮರ್ಜಿಯ೦ತೆ ಪರೀಕ್ಷೆ ಮುಗಿಯಿತು. ಮತ್ತೆ ಹೃದಯ ವೈದ್ಯರ ಭೇಟಿ. ಅವರು ಇಸಿಜಿಯನ್ನು ಪರಿಶೀಲಿಸಿ ತಲೆ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಆಡಿಸುತ್ತಾ ತುಟಿ ಕಚ್ಚಿ ಯೋಚಿಸುತ್ತಿರುವುದನ್ನು ನೋಡಿ ಏನೋ ಕೆಲಸ ಕೆಟ್ಟಿದೆ ಎಂದು ಕೊಂಡೆ. ಅಂದು ಕೊಂಡಂತೆ ಗಂಭೀರ ಮತ್ತು ಆತಂಕದ ವಿಷಯವೇ!
"ಈಕೋ ಪರೀಕ್ಷೆ ಮಾಡಿ ನೋಡೋಣ."
ಅಂದರು.
ಪರೀಕ್ಷೆಗಾಗುವಷ್ಟು ಹಣ ನನ್ನಲ್ಲಿದೆ ಎಂದು ಮನಗಂಡು ಆಗಲೆಂದೆ. ಆ ಪರೀಕ್ಷೆಗಳೆಲ್ಲವೂ ನನಗೆ ಹೊಸತು. ಇನ್ನೊಂದು ರೂಂನಲ್ಲಿ ಮಗ್ಗುಲಲ್ಲಿ ಮಲಗಿಸಿದರು. ಹೊಸ ಉಪಕರಣವನ್ನು ಎದೆಯ ಮೇಲೆ ಓಡಾಡಿಸಿದರು. ಏನೆಂದು ಗೊತ್ತಾಗದಿದ್ದರೂ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ಎನಿಸತೊಡಗಿತು.
ಇಕೋ ಪರೀಕ್ಷೆ ಮುಗಿಯಿತು. ಎದ್ದು ಬಟ್ಟೆ ಸರಿಮಾಡಿ ಕೊಂಡು ಹೊರಗೆ ಕುಳಿತೆ. ರಾತ್ರಿ ೯.೩೦.
ಒಳಹೋಗಲು ವೈದ್ಯರ ಕರೆಬ೦ತು. ದೊಡ್ಡ ಉಸಿರು ಬಿಡುತ್ತಾ ಒಳ ಹೋಗಿ ಕುಳಿತೆ. ಅಪಾದ ಮಸ್ತಕವಾಗಿ ನೋಡುತ್ತಾ ನನ್ನ ಉದ್ಯೋಗ, ಕುಟುಂಬದ ಹಿನ್ನೆಲೆ ಯನ್ನು ವೈದ್ಯರು ಕೇಳಿದ್ದು ನನ್ನ ಆತ೦ಕವನ್ನು ಇಮ್ಮಡಿಸಿತು. ನಂತರ "ನೋಡಿ, ನಿಮಗೆ ಹಾರ್ಟ್ ಅಟ್ಯಾಕ್ ಆಗಿದೆ. ನಿಜವಾಗಿಯೂ ಡೇಂಜರ್ ನಲ್ಲಿದ್ದೀರಿ. ಅದೃಷ್ಟಕ್ಕೇನೂ ಆಗಿಲ್ಲ. ಹಾಗೆಂದು ಬಿಡಲೂ ಆಗಲ್ಲ. ಮನೆಗೆ ಫೋನ್ ಮಾಡಿ ಹೇಳಿ. ನಾಳೆ ಬೆಳಿಗ್ಗೆ ಏಂಜಿಯೋಗ್ರಾಂ ಮಾಡಬೇಕು".
ಎಂದರಲ್ಲದೆ ಅವರ ಸಿಬ್ಬಂದಿ ಕಡೆ ತಿರುಗಿ ಇವರನ್ನು ರೂಂ ನಂಬರ್ ೧೦ಕ್ಕೆ ಅಡ್ಮಿಟ್ ಮಾಡಿ ಎಂದು ಹೇಳಿ, ಅದನ್ನು ಫೈಲಿನಲ್ಲಿ ಬರೆದು ಹೊರಟೇಬಿಟ್ಟರು!
ನನಗೆ ಅರೆಕ್ಷಣ ಏನೂ ತೋಚಲಿಲ್ಲ. ಅದು ಹೇಗೋ ಸಾವರಿಸಿಕೊ೦ಡು,
"ಈಗ ಅಡ್ಮಿಟ್ ಆಗುವುದಿಲ್ಲ ನಾಳೆ ಬರುತ್ತೇನೆ"
ಎಂದೆ.
"ಸಾಧ್ಯವಿಲ್ಲಾರೀ! ಏನಾದರೂ ಆದರೆ ಯಾರು ಜವಾಬ್ದಾರಿ?"
ಎಂದು ದೊಡ್ಡದನಿಯಲ್ಲಿ ಉದ್ಗಾರ ತೆಗೆದರು ಹೃದಯ ತಜ್ನರು.
ಚತುರ ಡಾಕ್ಟರು, ಆಸ್ಪತ್ರೆಗೆ ಪೇಷೆ೦ಟ್ ಗಳನ್ನು ಸ೦ಪಾದಿಸುವ ಕಲೆಗಾರ ಅನ್ನಿಸಿತು. ಜೊತೆಗೆ ಭಯವೂ ಆಯಿತು. ಅವರಮಾತೇ ನಿಜವಾದರೆ?! ಆದರೂ ಸುಧಾರಿಸಿಕೊಂಡು ಹೇಳಿದೆ.
"ಇಲ್ಲಿಗೆ ಬರಲು ನನಗೆ ಯಾರೂ ಹೇಳಿಲ್ಲ, ನಾನಾಗಿಯೇ ಬಂದಿದ್ದು. ನಮ್ಮ ಕಂಪನಿ ಡಾಕ್ಟರ್ ಆಗಲೀ ನಮ್ಮ ಮನೆಯವರಾಗಲೀ ಹೇಳಿಲ್ಲ. ಸಾಲದೆಂದು ಅವರಿಗೆ ಗೊತ್ತೂ ಇಲ್ಲ."
ಎಂದೆ. ಅಲ್ಲದೆ ಅಂಥಾ ಪರಿಸ್ಥಿತಿ ಇದ್ದರೆ ತಕ್ಷಣ ಬರುತ್ತೇನೆಂದೆ. ಒಲ್ಲದ ಮನಸ್ ಸಿನಿಂದ, (ಅಥವಾ ನಿರಾಸೆ ಬೆರೆತ ಅಸಹನೆಯಿ೦ದ)
"ಹೇಳಿದರೂ ಕೇಳದೆ ನೀವೇ ಚಿಕಿತ್ಸೆ ಪಡೆಯದೇ ಹೊರಟು ಹೋದಿರಿ ಎಂದು ಫೈಲಿನಲ್ಲಿ ಬರೆಯುತ್ತೇನೆ!."
ಎಂದು ಫೈಲ್ ನಲ್ಲಿ ಬರೆದು ಕೊಟ್ಟರು. ಆಗಲಿ ಎಂದೇನೋ ಹೇಳಿದೆ. ತಡಮಾಡದೇ ಹೊರಬ೦ದೆ.
ಆಸ್ಪತ್ರೆಯ ಮುಂದೆ ರಸ್ತೆ ಪಕ್ಕದಲ್ಲಿ ನಿಂತಾಗ ಯೋಚನೆ ಪ್ರಾರಂಭ. ಕೈನಲ್ಲಿ ರಕ್ತ ಬಣ್ಣದ ಹೃದಯದ ಚಿತ್ರ ವಿರುವ ಫೈಲು. ಒಳಗೆ ನನ್ನ ಇಸಿಜಿ ಈಕೋ ಚಿತ್ರ ವರದಿ ಗಳು. ತಲೆಯೊಳಗೆ ವಿಚಾರಗಳ ತುಮುಲ. ನಾನು ಮಾಡಿದ್ದು ಸರಿಯೇ, ತಪ್ಪೇ? ಬೇರೆ ಏನು ಮಾಡಬೇಕಾಗಿತ್ತು? ಗಾಬರಿ, ಜೋರಾಗಿ ಹೆಜ್ಜೆ ಇಡಲೂ ಆಗದಷ್ಟು ಕಡಿಮೆಯಾದ ಆತ್ಮವಿಶ್ವಾಸ. ಹಾಗೆಯೇ ಪರಿಚಯದ ವೈದ್ಯಮಿತ್ರರನ್ನು ಸಂಪರ್ಕಿಸಿದೆ. ಅವರು ಆಗ ಆಡಿದ ಭರವಸೆಯ ಮಾತು ಸಮಾಧಾನ ತಂದಿತು. ಮನೆಯಲ್ಲಿದ್ದ ಮಗನನ್ನು ಅಲ್ಲಿಗೆ ಕರೆಸಿಕೊಂಡೆ. ಅವನೊಂದಿಗೆ ವೈದ್ಯಮಿತ್ರರ ಭೇಟಿ. ರಾತ್ರಿ ೧೦ ಘಂಟೆಯಾದರೂ ಅವರು ಸಹನೆಯಿಂದ ಪರೀಕ್ಷಿಸಿ ನನ್ನ ಇನ್ನೊಂದು ಇಸಿಜಿ ತೆಗೆದರು. ಈಗಿನ ಫಲಿತಾಂಶವೇ ಬೇರೆ ಇತ್ತು. ಈಗ ಈ ವೈದ್ಯರಿಂದ ಹಿಂದಿನ ಎರಡು ದಿನಗಳ ದಿನಚರಿ ಬಗ್ಗೆ ವಿಚಾರಣೆ. ಹಿಂದಿನ ದಿನದ ಪ್ರಯಾಣದ ಆಯಾಸ, ತಡವಾಗಿ ನಡೆದ ಊಟ, ಸಾಲದೆಂಬಂತೆ ಉಪ್ಪು, ಮೆಣಸುಗಳ ಹದವಾದ ಮಿಳಿತದಲ್ಲಿ ಸೊಗಸಾಗಿ ಕರಿಯಲ್ಪಟ್ಟಿದ್ದ ಉದ್ದಿನ ವಡೆಗಳ ಬಕಾಸುರ ಸೇವನೆ ಇವುಗಳೆಲ್ಲವೂ ಸೇರಿ ಹೊಟ್ಟೆಯಲ್ಲಿ ನಡೆಸಿದ ಪಿತ್ತ ವಿಕಾರ ಎದೆ ತುಂಬಿದೆನಿಸಿ ಹೃದಯ ವಿಕಾರವೆನಿಸಿದೆ ಎಂದು ನನ್ನ ಖಾಯಿಲೆಯನ್ನು ನಿರ್ಣಯಿಸಿ, ನನ್ನ ಸಮಾಧಾನಕ್ಕಾಗಿ ನಾಲ್ಕು ecospirin ಕೊಟ್ಟು ಕಳಿಸಿದರು.
ಪಿತ್ಥವಿಕಾರ ಹೃದಯವಿಕಾರಕ್ಕೆ ಬಡ್ತಿ ಪಡೆದುಕೊ೦ಡು ಸುಮಾರು ಹೊತ್ತು ಕಾಡಿಸಿದ ಈ ಘಟನೆ ನಡೆದು ಹಲವು ವರ್ಷಗಳಾಗಿವೆ. ಆರೋಗ್ಯವಾಗಿದ್ದೇನೆ.
ಯಾವ ಖಾಯಿಲೆಯಾಗಲಿ, ಚಿಕಿತ್ಸಾಕ್ರಮ ಕೈಗೊಳ್ಳುವ ಮು೦ಚೆ ಎರಡನೇ ಅಭಿಪ್ರಾಯ (second opinion) ಅತಿ ಮುಖ್ಯ
ಇದು ಎಲ್ಲರ ಒಂದೊಂದು ಸಮಯದ ಅನುಭವ ಆದ್ರೂ ಯಾರೂ ನೆನಪಿಸಿಕೊಳ್ಳಲು ಬಯಸುವುದಿಲ್ಲ,a ಖಾಯಿಲೆ ನಿಜವಾದರೆ? ಎಂಬ ಭಯ..
ReplyDeleteI also advised to undergo Cataract operation immediately during 2008. Anyhow I contacted Netralaya after 3 years who told that operation is necessary but after 2 years. Again after 3 years I contacted another Eye specialist who told that I may wait for some more period. Then I visited famous Prabha Eye clinic for treatment of Glucoma. They also recognized the Cataract problem but advised to wait for some more period in my quarterly visits for more than 3 years. Totally even after 11 years doctors not recommending for immediate operation.
ReplyDeleteK.P.Hiriyanna