Skip to main content

ಪ್ರವಾಸ ಪೀಠಿಕೆ, ವೆಲ್ಲೂರು, ಕಾಂಚೀಪುರಂ, ಚಿದಂಬರಂ, ತಂಜಾವೂರು.

ವಿವಿಧ ಕಾರಣಗಳಿಂದ ಮುಂದೂಡುತ್ತಿದ್ಧ ದಕ್ಷಿಣ ಭಾರತದ ಪ್ರವಾಸಕ್ಕೆ ಅಂತೂ ದಿನ ನಿರ್ಧಾರವಾಯಿತು.ರಾಜ್ಯದ ಪ್ರಖ್ಯಾತ ಪ್ರವಾಸ ಸಂಸ್ಥೆಯಾದ ನಿರ್ಮಲಾ ಟ್ರಾವೆಲ್ಸ್  ಸುಖಕರ ಸುರಕ್ಷಿತ ಪ್ರವಾಸ ತಜ್ಞರೆಂದು ಬಹಳಷ್ಟು ಮಿತ್ರರು ಶಿಫಾರಸು ಮಾಡಿದ್ದರಿಂದ ಅವರ ಮೂಲಕವೇ ಹೋಗುವುದೆಂದು ನಿಶ್ಚಯಿಸಿದೆವು.
ಈ ಸಂಸ್ಥೆಯ ನಿಗದಿತ ಶುಲ್ಕದಲ್ಲಿ ಪ್ರವಾಸ,ಊಟ ಉಪಹಾರ ಗಳು, ದೇವಾಲಯಗಳ ಸಾಮಾನ್ಯ ಪ್ರವೇಶ ಶುಲ್ಕ, ಗೈಡ್,ಯಾತ್ರಾ ಮಾರ್ಗದರ್ಶನ ಮತ್ತು ವಸತಿಗಾಗಿ ಇಬ್ಬರಿಗಾಗುವ ಸುಸಜ್ಜಿತ ಹೋಟೆಲ್ ಕೊಠಡಿ, ಲಗ್ಗೇಜ್ ಗಳನ್ನು ಬಸ್ ನಿಂದ ಇಳಿಸಿ ರೂಂ ಗೆ ಕಳುಹಿಸುವುದು ಮತ್ತು ಬಸ್ ಗೆ ವಾಪಸ್ ತುಂಬುವುದು ಹೀಗೆ ಇಂಥಾ ಅಗತ್ಯ ಸೇವೆಗಳೂ   ಸೇರಿರುವುದರಿಂದ ಯಾವ ಯೋಚನೆಯನ್ನೂ ಮಾಡದೆ ಸೀಟುಗಳನ್ನು ಕಾದಿರಿಸಿದೆವು. 
ನಿಗದಿತ ದಿನದಂದು ಅನಾರೋಗ್ಯ ಕಾಡಿದರೂ ವೈದ್ಯರೊಂದಿಗೆ ಚರ್ಚಿಸಿ ಇರುವ ಜ್ವರ ಕೆಮ್ಮು ಗಳ ಉಪಚಾರದೊಂದಿಗೆ  ಪತ್ನಿ ಸಹಿತ ಪ್ರವಾಸ ಹೊರಟೆನು. ಇರುವ ಮಳೆ ಚಳಿಯೊಂದಿಗೆ ಬಸವನಗುಡಿಯ ನಿರ್ಮಲಾ ಟ್ರಾವೆಲ್ಸ ಕಛೇರಿಗೆ ಆಗಮಿಸಿದೆವು.ಈ ಬೆಳಿಗ್ಗೆ ಯಾರು ಏಳುತ್ತಾರೆ ಎಂದು ಗೊಣಗಿಕೊಂಡು ಬಂದರೂ ಆ ವೇಳೆಗಾಗಲೇ  ನಮ್ಮನ್ನು ಕಳುಹಿಸಲೆಂದೇ ಬಂದಿದ್ದ ಮಿತ್ರ ಹಾಗೂ ಸಂಬಂಧಿ ರಮೇಶ ದಂಪತಿಗಳು ಬಂದಿದ್ದು ಸಂತಸ ತಂದಿತ್ತು.ಆಗಲೇ ಐದಾರು ಮಹಿಳಾ ಯಾತ್ರಿಕರು ತಮ್ಮ ಪತಿ ಮಹಾಶಯರೊಂದಿಗೆ ಬಂದು ಕಾಯುತ್ತಿದ್ದರು. ಇನ್ನೂ ಬಸ್ ಬಂದಿಲ್ಲವಲ್ಲಾ ಎಂಬ ಚಿಂತೆ ಯಾತ್ರಿಕರಾದರೆ ಬಂದವರು ಇನ್ನೂ ೧೨ದಿನ ಇವರಿಲ್ಲದೆ ಕಾಲ ಹಾಕಬೇಕಲ್ಲ ಎಂದು ಯೋಚಿಸುತ್ತಿದ್ದಾರೇನೋ ಎಂದು ನನಗನಿಸಿತು.ಅದು ನನ್ನ ಯೋಚನೆಯಷ್ಟೇ ಇರಲೂ ಬಹುದು.ಎಂದು ಕೊಳ್ಳುವಾಗಲೇ ನಿರ್ಮಲಾ ಬಸ್ ನ ಆಗಮನ.ಸ್ಥಳ ಹುಡುಕಿಕೊಂಡು ಕುಳಿತರೆ ಒಂದು ಜವಾಬ್ದಾರಿ ಎಂದು ಆತುರದಿಂದ ನಮ್ಮ ಸೀಟು ನಂಬರ್ ೨೭,೨೮ ಹುಡುಕಿ ಹೋದರೆ ಆಗಲೇ ಆ ಸ್ಥಾನದಲ್ಲಿ ಇಬ್ಬರು ಸ್ಥಾಪಿತರಾಗಿದ್ದಾರೆ.ನನ್ನ ಮುಖದಲ್ಲಿ ಗಾಬರಿ ಮೂಡುವ ಮುನ್ನವೇ ಅಲ್ಲಿದ್ದ ಮಹಿಳೆಯೊಬ್ಬಳ ಸಮಾಧಾನದ ಮನವಿ, ನಾವು ಫ್ಯಾಮಿಲಿ ಗ್ರೂಪಲ್ಲಿ ಬಂದಿದ್ದೇವೆ.ಒಟ್ಟಿಗೆ ಇದ್ದರೆ ಚೆಂದ, ಅನುಕೂಲ. ಆದ್ದರಿಂದ  ಸೀಟು ನಂಬರ್ ೩,೪, ಕ್ಕೇ ನೀವು ಕುಳಿತು ಕೊಳ್ಳಬೇಕೆನ್ನುವ ಆಕೆಯ ಆಗ್ರಹ ಪೂರ್ವಕ ವಿನಮ್ರ ಮನವಿ, ಮುಂದಿನ ಸೀಟುಗಳಾದ್ದರಿಂದ ಸಂತೋಷ ವೆನಿಸುವಂತೆ ಕೇಳಿಸಿತು.ಅಂತೂ ಒಬ್ಬೊಬ್ಬರಾಗಿ ಬಸ್ ಸೀಟು ಸೇರುವ ವೇಳೆಗೆ ಸಿಲ್ಕ್ ಬೋರ್ಡ್ ದಾಟಿ ಬೆಂಗಳೂರು ಗಡಿದಾಟಿತ್ತು. ಆತುರದಿಂದ ಬಂದ ಮನೆಯ ರಕ್ಷಣೆ, ಬಿಟ್ಟು ಬಂದ ಕೆಲಸಗಳು ಇಂದಿನಿಂದ ನಡೆಯುವ ಪ್ರವಾಸ ಕಾರ್ಯಕ್ರಮ , ಸುತ್ತ ಅಪರಿಚಿತ ಮುಖಗಳ ಸಾಲು ಸಾಲು. ಆದರೂ ಶೂನ್ಯ ದೃಷ್ಟಿಯಿಂದ ಆದರೂ  ಮನದಲ್ಲಿ  ಮೂಡುವ ಹಲವಾರು ಯೋಚನೆಗಳು.

ಈ ಸಮಯದಲ್ಲೇ ಬಸ್ ನಲ್ಲಿ ಕ್ಯಾಬಿನ್ ಹೊರ ಬಂದ ಟೂರ್ ಮ್ಯಾನೇಜರ್.ಸ್ವಪರಿಚಯದೊಂದಿಗೆ  ಪ್ರವಾಸದಲ್ಲಿ  ಊಟ ತಿಂಡಿ ವಸತಿ ಗಳ ಬಗ್ಗೆ ರೀತಿ ರಿವಾಜುಗಳು,ಚಾಲಕ ಸಹಾಯಕ ವರ್ಗದವರ ಪರಿಚಯ ಇತ್ಯಾದಿ.ಬಂದ ಪ್ರವಾಸಿಗರ ಸ್ವಂತ ಪರಿಚಯಕ್ಕೂ ಅವಕಾಶ.ಇದರಿಂದ ಎಲ್ಲರಿಗೂ ಕನಿಷ್ಠ ಎಲ್ಲರ ಹೆಸರಾದರೂ ಗೊತ್ತಾದಂತಾಯಿತು.

ಮೊದಲ ದಿನದ ಪ್ರವಾಸ  ಬೆಂಗಳೂರಿನಿಂದ ೨೧೦ ಕಿಲೋಮೀಟರ್ ದೂರದ ವೆಲ್ಲೂರು ಮಹಾಲಕ್ಷ್ಮಿ ದೇವಾಲಯ. ಮಾರ್ಗ ಮಧ್ಯೆ ಸಮೀಪಿಸಿದ ಶರವಣ ಭವನದಲ್ಲಿ ಉಪಹಾರ ಸೇವನೆ.ಕೆಲವೇ ಘಂಟೆಗಳಲ್ಲಿ ಪ್ರವಾಸದ ಮೊದಲ ಸ್ಥಳ ವೆಲ್ಲೂರಿನ ಚಿನ್ನದ ಮಹಾಲಕ್ಷ್ಮಿ ದೇವಾಲಯ,ಚಕ್ರ ಕೋನ ವಿನ್ಯಾಸದ ವಿಶೇಷ ಮಾರ್ಗ,೨ಘಂಟೆಗಳ ದರ್ಶನ ಪೂಜೆಗಳನ್ನು ಮುಗಿಸಿದೆವು.ನಂತರ ೬೮ ಕಿಲೋಮೀಟರ್ ದೂರದ ಕಾಂಚಿಪುರಂ ನತ್ತ ಪ್ರಯಾಣ. ಮಾರ್ಗಮಧ್ಯೆ ದೊರೆತ ಹೋಟೆಲ್ನಲ್ಲಿ ಉತ್ತಮ ಊಟ.

ಕಾಂಚೀಪುರಂ ತಲುಪಿದಾಗ ಸಮಯ ಮಧ್ಯಾಹ್ನ ೪ ಘಂಟೆ. ಸಿಲ್ಕ್ ಸೀರೆಗಳ ಪ್ರಖ್ಯಾತ ಅಂಗಡಿಗಳ ಭೇಟಿ.ವ್ಯಾಪಾರಕ್ಕೆ ಅವಕಾಶ. ಕೆಲವರು ಅದರಲ್ಲೇ ಲೀನ.ಮುಂದೆ  ಕಾಂಚಿಪುರಂ ದೇವಾಲಯ.ಅದ್ವೈತ ಪ್ರವರ್ತಕ,ಶ್ರೀ ಆದಿಶಂಕರರ ಪೀಠ ,೮ ನೇ ಶತಮಾನದ ಈ ಕಂಚಿ ದೇವಾಲಯಗಳು. ತಮಿಳುನಾಡಿನ ಪ್ರಮುಖ ದೇವಾಲಯ. ಚೋಳ ಪಲ್ಲವ ಕಾಲದ ಕೆತ್ತನೆ ಕಟ್ಟಡಗಳು ಇತ್ಯಾದಿ.ಮುಖ ಮಂಟಪ,ಆತ್ತಿ ವರದರಾಜರ ಜಲ ಸ್ಥಾಪನ ಮಹಾತ್ಮೆ, ವರದರಾಜ ಸ್ವಾಮಿ ದೇವರ ದರ್ಶನಕ್ಕೆ ಉದ್ದದ ಸಾಲು, ಪಾರ್ವತಿ ಮಾವಿನ ಮರದ ಕೆಳಗೆ ಸ್ಥಾಪಿಸಿ ಪೂಜಿಸಿದ ಖ್ಯಾತಿಯ ಏಕಾಂಬರಂ ದೇವಾಲಯ ದರ್ಶನ . ಮುಜರಾಯಿ ದೇವಾಲಯವಾದ್ದರಿಂದ ದೇವಾಲಯ ವ್ಯವಸ್ಥೆ ಅಷ್ಟಕಷ್ಟೇ. ರಾತ್ರಿ ಉಪಾಸನಾ ಹೋಟೆಲ್ನಲ್ಲಿ  ಸೊಗಸಾದ ಊಟ, ನಿಯಮದಂತೆ ಯಾತ್ರಾ ಸಂಸ್ಥೆಯವರು ವ್ಯವಸ್ಥೆ ಮಾಡಿರುವ  ಎರಡು ಹಾಸಿಗೆಗಳ ಹೋಟೆಲ್ ರೂಂ. ವಿಶ್ರಾಂತಿ.

ಎರಡನೇ ದಿನ.ಬೆಳಿಗ್ಗೆ ಆರು ಘಂಟೆಗೆ ಹೋಟೆಲ್ ನಿಂದ ಹೊರಟೆವು.ಕಾಮಾಕ್ಷಿ ದರ್ಶನ ದಿಂದ ದಿನ ಪ್ರಾರಂಭ.ಈ ದೇವಾಲಯದ ಪ್ರಾಂಗಣ, ಕಲ್ಯಾಣಿ,ಪರಿಸರ ಎಲ್ಲಾ ಸ್ವಚ್ಚ, ನೋಡಲು ರಮಣೀಯ.ಕಾಮಕೋಟಿ ಮಠದಂತಹ ಖಾಸಗಿ ವ್ಯವಸ್ಥಾಪನೆ ಕಾರಣವಿರಬಹುದು.ಈ ದೇವಾಲಯವೂ ೧೧ನೇ ಶತಮಾನದಾಗಿದ್ದು ಭಕ್ತಿ ಕೇಂದ್ರ.ನಂತರ  ಉಪಾಸನಾ ಹೋಟೆಲ್ ನಲ್ಲಿ  ರುಚಿಕರವಾದ ತಿಂಡಿ. ನಂತರ  ೭೫ ಕಿಲೋಮೀಟರ್ ದೂರದ ಚೆನ್ನೈನತ್ತ ಪಯಣ.ಎಡಬಲಗಳಲ್ಲಿ ಕಂಡ ನಗರ ವೀಕ್ಷಣೆ.ಇಂದು ರಜೆಯಾದ್ದರಿಂದ ರಸ್ತೆ ಯಲ್ಲಿ ಅಂಥಾ ಜನಸಂದಣಿ ಇರಲಿಲ್ಲ.ಟ್ರಿಪ್ಲಿಕೇನ್ ಅಥವಾ ತಿರುವಲ್ಲಿಕೇನಿ ಎಂಬ ಚೆನ್ನೈ ಭಾಗದಲ್ಲಿರುವ ೮ನೇ ಶತಮಾನದ ಪಲ್ಲವ ಕಾಲದ ವಿಷ್ಣು ರೂಪಿ ಪಾರ್ಥಸಾರಥಿ ದೇವಾಲಯ, ವೇದವಲ್ಲಿ ಹಾಗೂ ನರಸಿಂಹ ದರ್ಶನ. ಪಾರ್ಥಸಾರಥಿ ದೇವರು ಮೀಸೆ ಹೊತ್ತ ವಿಷ್ಣು ಎಂಬುದೊಂದು ಹಿರಿಮೆ.
ನಂತರ ಮಧ್ಯಾಹ್ನ ಸಂಗೀತ ಹೋಟೆಲ್ ನಲ್ಲಿ ಒಳ್ಳೆಯ ಊಟ.ಸೆಕೆ ತಣಿಸಲು ಬಂದ ಮಳೆ ರಸ್ತೆ ಯಲ್ಲಿ ಕೊಳಕು ನೀರು ಸೇರಲು ಅವಕಾಶವಾಯಿತಷ್ಟೇ.ಆ ನೀರನ್ನೇ ದಾಟುತ್ತಾ ಪೊಂಡಿ ಬಜಾರ್ ಪ್ರದೇಶಲ್ಲಿ ಶಾಪಿಂಗ್. ಸ್ವಚ್ಚ ಭಾರತದ ಹೆಸರಿನಲ್ಲಿ ನಡೆಯುತ್ತಿರುವ ಭಾರೀ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಸಾರ್ವಜನಿಕರಿಗೆ ಕಿರಿಕಿರಿ ಅನುಭವ. ಮುಂದಿನ ಸವಾರಿ ಮರಿನಾ ಬೀಚ್.ನಡಿಗರ ತಿಲಕಂ ಎಂಜಿಆರ್, ಕರುಣಾನಿಧಿ, ಜಯಲಲಿತಾ ಸಮಾಧಿಗಳನ್ನು ದೂರದಿಂದಲೇ ನೋಡಿ ಕಣ್ಣು ತುಂಬಿ ಕೊಂಡೆವು.ಮರಿನಾ ಬೀಚ್ ಎಂಬ ಆಕರ್ಷಕ ಜಾಗ, ಮಕ್ಕಳಿಗೆ ಬೇಕೆನಿಸುವ ಬಲೂನ್,ಆಟದ ಸಾಮಾನುಗಳು,ಕರಿದ ತಿಂಡಿಗಳು,ಸಂತಸ ಕ್ಷಣಗಳಲ್ಲಿ ಮಗ್ನರಾದ ಯುವ ಜೋಡಿಗಳು, ಅಲೆಗಳಷ್ಟು ವಿಷಯ ಹೊತ್ತ ಹಳೆಯ ತಲೆಗಳು, ತದೇಕಚಿತ್ತದಿಂದ ಅಲೆಗಳ ನೋಡುತ್ತಿರುವ ಸಾವಿರಾರು ಕಣ್ಣುಗಳು.ಈ ಮಧ್ಯೆ ನಮ್ಮ ಕಾಲಹರಣ ಮುಗಿಯಿತು.ರಾತ್ರಿ ಉಡುಪಿ ಹೋಟೆಲ್ ಲಾಡ್ಜ.ವಾಸದ ರೂಮಿಗೇ ಬಂದ ಮಿತಭೋಜನವೇ ವಿಶೇಷ.ನಂತರ ಹೋಟೆಲ್ನಲ್ಲಿ ವಿಶ್ರಾಂತಿ.

೩ನೇ ದಿನದ ಪ್ರವಾಸ .ಪಾಂಡಿಚೇರಿಯತ್ತ.ಇದು ಫ್ರೆಂಚ್ ಆಳ್ವಿಕೆಯ ನಂತರದ ಕೇಂದ್ರಾಡಳಿತ ಪ್ರದೇಶ.ವಾಹನಗಳು ಎಲ್ಲೆಂದರಲ್ಲಿ ನಿಲ್ಲುವಂತಿಲ್ಲ.ಇದರಿಂದಾಗಿ ಲಗೇಜ್ ಇಳಿಸಲು ಅಸಾಧ್ಯ ಎಂದು ಅಗತ್ಯಕ್ಕೆ ಬೇಕಾದ ಬಟ್ಟೆಗಳ ಯೋಜಿತ ಪ್ಯಾಕಿಂಗ್. ೬೦ ಕಿಲೋಮೀಟರ್ ದೂರದ ಮಹಾಬಲಿಪುರಂ ಅಥವಾ ಮಾಬಲ್ಲ ಪುರಂ ಪ್ರಯಾಣ.ಉಪಾಹಾರದ ನಂತರ ಪುರ ವೀಕ್ಷಣೆ.ಪಲ್ಲವ ಕಾಲದ ದೇವಾಲಯಗಳು, ಕೆಲವು ವಿಗ್ರಹ ವಿಲ್ಲದ ದೇವಾಲಯವು.ಪಾಂಡವ ದ್ರೌಪದಿ ಕೊಠಡಿಗಳು, ಬೆಣ್ಣೆ ಮುದ್ದೆ ಎಂಬ ಬಂಡೆ. ವರದರಾಜ ದೇವಾಲಯ, ಚೀನಾ ಪಗೋಡ ಮಾದರಿಯ ಶಿಥಿಲ ಶಿವ ದೇವಾಲಯ, ವಿಶಾಲ ಬಂಡೆಯ ಮೇಲಿನ ಸುಮಾರು ೧೫೦ ಉಬ್ಬು ಚಿತ್ರ ಕೆತ್ತನೆಗಳ ಸೂರ್ಯ ವಂಶದಿಂದ ಚಂದ್ರವಂಶದತ್ತ ತೆರಳಿದ ವಿವಿಧ  ಘಟನೆಗಳನ್ನು ನೆನಪಿಸುತ್ತದೆ.ಈ ಶಿಲಾ ಕೆತ್ತನೆಗಳನ್ನು ಮುಂದುವರಿಸಿ ಕೊಂಡು ಬರುವ ಶಾಲೆಗಳಿವೆ. ವಿವಿಧ ಶಿಲ್ಪ ಕೃತಿಗಳು ಕೊಳ್ಳಲು ಇಲ್ಲಿರುವ ಅಂಗಡಿಗಳಲ್ಲಿ ದೊರೆಯುತ್ತದೆ.ಇದೇ ಅಕ್ಟೋಬರ್ ನಲ್ಲಿ ಚೈನಾದ ಪ್ರಧಾನಿಗಳೊಂದಿಗೆ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಭೇಟಿ ಯಿರುವುದರಿಂದ ಭಾರೀ ತಯಾರಿ.ಅನೇಕ ಅಭಿವೃದ್ಧಿ ಕೆಲಸಗಳು, ಸ್ವಚ್ಚತೆಯ ಕಾರ್ಯಗಳು ನಡೆಯುತ್ತಿದೆ.೨೦೦೪ ರ ಸುನಾಮಿ ಎಲ್ಲಾ ಕಡೆ ನಷ್ಟ ಮಾಡಿದರೆ ಇಲ್ಲಿ ಬಿದ್ದ ಕಸಕಡ್ಡಿ ಪಾಳು ದೇವಾಲಯಗಳನ್ನು ತೊಳೆದುಕೊಂಡು ಹೋದರೂ ನಂತರ ಇರುವ ಪ್ರದೇಶದಲ್ಲಿ ಅಭಿವೃದ್ಧಿಯು ಜನಾಂಗಗಳ ಜೀವನಮಟ್ಟ ಹೆಚ್ಚಿಸಲು ಅವಕಾಶ ವಾಯಿತು ಎಂಬುದು ಸಮಾಧಾನದ ವಿಷಯವೇ ಅಲ್ಲವೇ.
ನಂತರ ನಮ್ಮ ಚಿತ್ತ ೯೬ ಕಿಲೋಮೀಟರ್ ದೂರದಲ್ಲಿರುವ ಪಾಂಡಿಚೇರಿಯತ್ತ. ಮಾರ್ಗ ಮಧ್ಯೆ ಊಟ.ಅರಬಿಂದೋ ಆಶ್ರಮ ಬೇಟಿ.ಸಮಾಧಿಬಳಿ ಒಂದೈದು ನಿಮಿಷದ ಅವರವರ ಧ್ಯಾನ, ವಾಚನಾಲಯ ದರ್ಶನ. ಅರಬಿಂದೋ ರವರು ಒಬ್ಬ ಯೋಗಿ, ಗುರು, ರಾಷ್ಟ್ರ ಕಂಡ ಒಬ್ಬ ದಾರ್ಶನಿಕ,೧೮೭೨ರ ಆಗಸ್ಟ್ ೧೫ ರಂದು ಜನನ.ವಿದೇಶದಲ್ಲಿ ಅಭ್ಯಾಸ.ಸ್ವಾತಂತ್ರ ಸಂಗ್ರಾಮದ ವೇಳೆ ಒಂದು ಹಂತದಲ್ಲಿ ಭಾಗಶಃ ಸ್ವಾತಂತ್ರ ಕ್ಕೆ ತಯಾರಿದ್ದ ಕಾಂಗ್ರೆಸ್ ಗೆ ವಿರೋಧಿಸಿ ಪೂರ್ಣ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಚಳುವಳಿ. ೧೯೦೮ರಲ್ಲಿ ನಮ್ಮವರ ಕುಮ್ಮಕ್ಕಿನಿಂದಲೇ ಜೈಲು ವಾಸ ಅನುಭವಿಸಿ ದರು.ಜೈಲಿನಲ್ಲಿನ ಸಾತ್ವಿಕ ನಡೆಗಾಗಿ ಶೀಘ್ರ ಬಿಡುಗಡೆ. ನಂತರ  ಆತ್ಮಸಾಕ್ಷಾತ್ಕಾರಕ್ಕಾಗಿ ಅಂದಿನ ಫ್ರೆಂಚ್ ಪ್ರಾಂತ್ಯ ಪಾಂಡಿಚೇರಿಯಲ್ಲಿ ವಾಸ, ತಪಸ್ಸು  ಆಧ್ಯಾತ್ಮಿಕ ಪ್ರಚಾರ,ಆತ್ಮಶಾಂತಿಗೆ ಯೋಗ ಇತ್ಯಾದಿ ತತ್ವ ಪ್ರಚಾರ ಮಾರ್ಗದರ್ಶನ.ಇದರಿಂದಾಗಿಯೇ ಇಲ್ಲಿ ಅವರ ಆಶ್ರಮ. ನಂತರ ಪ್ರಖ್ಯಾತ ವಿನಾಯಕ ದೇವಸ್ಥಾನ ಭೇಟಿ.ತರುವಾಯ ಇರುವುದರಲ್ಲಿ ಸ್ವಚ್ಚವೆನಿಸುವ ಸಮುದ್ರ ತೀರದಲ್ಲಿ ಓಡಾಟ.ನೀರಾಟ.ರಾತ್ರಿ ಉಪಾಹಾರದ ನಂತರ ವಿಶ್ರಾಂತಿ.

ಹತ್ತಿರದಲ್ಲೇ ಇರುವ ತಿರುನಲ್ಲಾರು ಶನೀಶ್ವರ ದೇವಾಲಯ  ಪ್ರಖ್ಯಾತ.ಆದರೆ ಯಾತ್ರಾ ಸಂಸ್ಥೆಯ ಪಟ್ಟಿ ಯಲ್ಲಿ  ಈ ಸ್ಥಳವು ಇಲ್ಲವಾದ್ದರಿಂದ ಅಲ್ಲಿಗೆ ಹೋಗಲಾಗಲಿಲ್ಲ..

ದಿನ ೪, ಇಂದು ೬೪ ಕಿಲೋಮೀಟರ್ ದೂರದ ಚಿದಂಬರಂ , ನಂತರ ಅಲ್ಲಿಂದ ೧೬೨ ಕಿಲೋಮೀಟರ್ ದೂರದಲ್ಲಿರುವ ಶ್ರೀ ರಂಗಂ ಮೂಲಕ ತಂಜಾವೂರಿನವರೆಗೆ ನಮ್ಮ ಪ್ರವಾಸ. ಚಿದಂಬರಂನ ಶಾರದಾರಾಂ ಹೋಟೆಲ್ ನಲ್ಲಿ  ಬೆಳಗಿನ ಉಪಾಹಾರ.ನಂತರ ಚಿದಂಬರಂನ ವಿಸ್ತಾರವಾದ ಬೃಹತ್ ದೇವಾಲಯ ದರ್ಶನ.ಚಿಕ್ಕದಾಗಿ ಈಶ್ವರ ಪಾರ್ವತಿ ದೇವಾಲಯ ಜೊತೆಗೇ ನೋಡಬಹುದಾದ ಗೋವಿಂದ ರಾಜ ಮತ್ತು ಲಕ್ಷ್ಮೀ ದೇವಾಲಯ ಎಂದರೆ ಏನೂ ಹೇಳಿದಂತಾಗುವುದಿಲ್ಲ..
ಅನೇಕ ವಿಶೇಷಗಳ ಈ ಶಿವ , ಅಂಬರ ಅಥವಾ ಆಕಾಶ ಸ್ವರೂಪಿ ಮನಸ್ಸು ಅಥವಾ ಚಿತ್ತ.ಈ ಚಿತ್ತ ಅಂಬರದೊಂದಿಗೆ ಸೇರಿ ಚಿದಂಬರನಾಗಿದ್ದಾನೆ.ಅಂತೆಯೇ ಶಿವಲಿಂಗ ದ ಬದಲು ಚಿನ್ನದ ಮೂರುದಳದ ಬಿಲ್ವಪತ್ರೆಗಳ ರೂಪದಲ್ಲಿ  ಪಂಚಭೂತಗಳಲ್ಲೊಂದಾದ  ಆಕಾಶವನ್ನು ಪ್ರತಿನಿಧಿಸಿ ಪೂಜೆಯನ್ನು ಪಡೆಯುವ ಈ ಈಶ್ವರನೇ ಚಿದಂಬರಂ. ಕಾಳಹಸ್ತಿಯಲ್ಲಿನ ಈಶ್ವರನು ಗಾಳಿಯನ್ನೂ , ಕಾಂಚಿಪುರಂನ ಏಕಾಂಬರಂ ಪ್ರಥ್ವಿಯನ್ನು ಪ್ರತಿನಿಧಿಸುತ್ತಿದ್ದು ಈ ಮೂರೂ ದೇವಾಲಯಗಳು ಭಾರತ ನಕ್ಷೆಯಲ್ಲಿ  ಒಂದೇ ರೇಖೆಯಲ್ಲಿ ಇರುತ್ತವೆ. ಚಿದಂಬರಂ ದೇವಾಲಯಕ್ಕೆ ಒಂಭತ್ತು ಬಾಗಿಲುಗಳಿದ್ದು ಇದು ಮನುಜನಿಗಿರುವ ನವ ರಂಧ್ರಗಳನ್ನು ತೋರಿಸುತ್ತದೆ.ಪ್ರಾಚೀನ ಕಾಲದಲ್ಲೇ ಜೋಡಿಸಿರುವ ೨೧೬೦೦ ಚಿನ್ನದ ಹೆಂಚುಗಳು ಪ್ರತಿದಿನದ ಉಸಿರಿನ ಸಂಖ್ಯೆಯಲ್ಲಿದ್ದರೆ ಆ ಹೆಂಚುಗಳನ್ನು ಜೋಡಿಸಿರುವ ೭೨೦೦೦ ಮೊಳೆಗಳು ಮನುಷ್ಯನ ಜೀವಂತ ಹಿಡಿದಿಡುವ ನಾಡಿಗಳ ಸಂಖ್ಯೆಯನ್ನು ಹೇಳುತ್ತದೆ.ಪಕ್ಕದ ಪೊನ್ನಬಾಲಮ್ ಮಂದಿರಕ್ಕೆ ೫ ಮೆಟ್ಟಿಲು ನಮಃ ಶಿವಾಯ ಎಂದು ಪಂಚಾಕ್ಷರಿ ಮಂತ್ರವನ್ನು ತಿಳಿಸಿದರೆ ಇರುವ ೪ ಕಂಬಗಳು ೪ ವೇದಗಳನ್ನು ಪ್ರತಿನಿಧಿಸುತ್ತದೆ. ಮಂದಿರದ ೨೮ ಕಂಬಗಳು ೨೮ ರೀತಿಯಲ್ಲಿ ಮಾಡಬಹುದಾದ ಪೂಜೆ ಗಳಾದರೆ ನೃತ್ಯ ಶಾಲೆಯ ೬೪ ತೊಲೆಗಳು ೬೪ ವಿದ್ಯೆ ಗಳನ್ನು ಹೇಳುತ್ತದೆ.ಈ ದೇವಾಲಯವು ಭೂ ಸಮಭಾಜಕ ವೃತ್ತ ರೇಖೆಯ ಆಯಸ್ಕಾಂತೀಯ ಮಧ್ಯ ಬಿಂದುವಿನ ಮೇಲಿದ್ದು ದೇವಾಲಯದ ಮೇಲಿನ ೯ ಕಳಶಗಳು ನವಶಕ್ತಿಗಳನ್ನು, ಮೊದಲ ಮಂಟಪದ ೬ ಕಂಬಗಳು ೬ ಸೂತ್ರಗಳನ್ನು, ಮುಂದಿನ ಮಂಟಪದ ೧೮ ಕಂಬಗಳು ೧೮ ಪುರಾಣಗಳನ್ನು ಹೀಗೆ ಪ್ರತಿನಿಧಿಸುವ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದ್ದು ಇದನ್ನು ಚಿದಂಬರ ರಹಸ್ಯ ಎನ್ನುವರು.

ಅಲ್ಲದೆ ನರ್ತನಾ ಭಂಗಿಯಲ್ಲಿರುವ ಆನಂದ ನಟರಾಜ ಪತ್ನಿ ಶಿವಗಾಮಿ ಸುಂದರಿಯೊಂದಿಗೆ ರಾರಾಜಿಸುತ್ತಿರುವ ದೇವಾಲಯ ಮತ್ತು ನಿಂತ ಸ್ಥಳದಿಂದ ೯೦ಡಿಗ್ರಿಯಷ್ಟು ತಿರುಗಿದರೆ  ದರ್ಶನ ಪಡೆಯಬಹುದಾದ  ಶ್ರೀ ಗೋವಿಂದರಾಜ ದೇವಾಲಯ ಅಂಡಾಳ್- ಲಕ್ಷ್ಮೀ ದೇವಾಲಯ ಗಳು ವಿಶೇಷ.

ಇನ್ನು ಈ ಚಿದಂಬರಂ ದೇವಾಲಯವು ಖಾಸಗಿ ಆಡಳಿತ ದೇವಾಲಯವಾಗಿದ್ದು ಪೂಜಾ ಕೈಂಕರ್ಯಗಳು ಬಹು ಭಕ್ತಿ ಶ್ರದ್ಧೆಗಳಿಂದ  ನಡೆಯುತ್ತಿದೆ ಆದರೂ ದೇವಾಲಯದ ಅಭಿವೃದ್ಧಿಯನ್ನು  ಮಾಡಲು ವಿಪುಲ ಅವಕಾಶಗಳಿವೆ.
ಇಲ್ಲಿಯ ಅರ್ಚಕರು ತಲೆಯ ಕೂದಲನ್ನು  ವಿಶೇಷವಾಗಿ ಎಡಭಾಗದಲ್ಲಿ ಕೂಡಿಸಿ ಶಿಖೆ ಕಟ್ಟುವವರಾಗಿದ್ದು ಅವರನ್ನು ದೀಕ್ಷಿತರ್ ಎಂದು ಕರೆಯುವರು.ಹಾಗೆ ಕೂದಲನ್ನು ತಲೆಯ ಹಿಂಭಾಗ ದಲ್ಲಿ ಕಟ್ಟಿದರೆ ಅವರನ್ನು ಭಟ್ಟರೆಂದೂ, ಬಲಭಾಗದಲ್ಲಿ ಕೂದಲನ್ನು ಕಟ್ಟಿಕೊಂಡರೆ ಆಚಾರ್ಯರು ಎಂದು ಕರೆಯುವರಂತೆ.ಇದು ನನಗೆ ಹೊಸ ಮಾಹಿತಿ.

ಪ್ರವಾಸ ಮುಂದುವರೆದು ತಿರಿಚನಾಪಲ್ಲಿ ರಾಕ್ ಫೋರ್ಟ್ ಮೇಲಿನ ಗಣೇಶ ದೇವಾಲಯ ತಲುಪಿದೆವು.ನೆಲದಿಂದ ಸುಮಾರು ೩೪೪ ಕಡಿದಾದ ಮೆಟ್ಟಿಲುಗಳು,ಮೂರು ಹಂತಗಳಲ್ಲಿ ಪ್ರಯಾಣ.ಪಲ್ಲವ, ಕರ್ನಾಟಕ ದ ಬಿಜಾಪುರ ಅರಸರು ನಾಯಕ ಹಾಗೂ ಮರಾಠರಿಂದ ಕಾಲಾನುಕಾಲಕ್ಕೆ ಅಭಿವೃದ್ಧಿಯಾದ ಕೋಟೆ ದೇವಾಲಯ.ಬಿಸಿಲು ಸೆಕೆಗಳ ಮಧ್ಯೆ ನಡೆದಿದ್ದರಿಂದ ಸ್ವಲ್ಪ ಆಯಾಸವೇ.ದೇವಾಲಯದ ನೆಲ ಮಟ್ಟದಿಂದ ಇಡೀ ತಿರುಚಿ ನಗರವನ್ನು ನೋಡಬಹುದಾದ ದೃಶ್ಯ.ಇಳಿದು ಬಂದ ನಂತರ ಊಟ, ಲಘು ವಿಶ್ರಾಂತಿ.

ಮುಂದಿನ ಭೇಟಿ ಶ್ರೀ ರಂಗಂ , ರಂಗನಾಥಸ್ವಾಮಿ ದರ್ಶನ. ಈ ಬೃಹತ್ ದೇವಾಲಯಕ್ಕೆ ಒಟ್ಟು ಏಳು ಗೋಪುರವಿದ್ದು ಮುಂಭಾಗ ದಲ್ಲಿನ ಗೋಪುರವೇ ಬೃಹತ್ ದಾಗಿದೆ. ದೇವಾಲಯ ದ ಮೇಲಿನ ಗೋಪುರ ಚಿನ್ನದ್ದಾಗಿರುತ್ತದೆ. ಶ್ರೀರಾಮನು ಪೂಜಿಸಿದ ಮಹಾವಿಷ್ಣುವನ್ನು ಶ್ರೀರಾಮನಿಂದ ಉಡುಗೊರೆಯಾಗಿ ಪಡೆದು ವಿಭೀಷಣನು ಲಂಕೆಗೆ ಹೋಗುವಾಗ  ಈ ಸ್ಥಳದಲ್ಲಿ ನಡೆಯುತ್ತಿದ್ದ ಉತ್ಸವ ದಲ್ಲಿ  ಮೈಮರೆತು ಮಹಾವಿಷ್ಣುವಿನ ವಿಗ್ರಹವನ್ನು ಅಲ್ಲೇ ಇಟ್ಟಾಗ ವಿಷ್ಣು ಅಲ್ಲೇ ಪ್ರತಿಷ್ಟಾಪಿತ ಗೊಂಡನಂತೆ. ಲಂಕೆಗೆ ತೆಗೆದು ಕೊಂಡು ಹೋಗಲಾಗದ ಚಿಂತೆಯಲ್ಲಿ ಖಿನ್ನನಾದ ವಿಭೀಷಣ.ಅವನ ಕೋರಿಕೆಯಂತೆ ಶ್ರೀಲಂಕೆಗೆ ಮುಖ ಮಾಡಿ ಸದಾ ವಿಭೀಷಣನಿಗೆ ತಾನು ಸದಾ ಕಾಣುವ ವರವಿತ್ತುದು ದರಿಂದ ದಕ್ಷಿಣಕ್ಕೆ ಮುಖ ಮಾಡಿ ವಿಷ್ಣುವು ಅನಂತಶಯನ ನಾಗಿದ್ದಾನೆ.ವಿಷ್ಣುವಿನ ಮುಂಭಾಗದಲ್ಲಿ ಮರದ ಕೆತ್ತನೆಯ ಸುಂದರ ಗರುಡನ ವಿಗ್ರಹವಿದೆ.ಚೋಳ,ಪಲ್ಲವರು ಕಟ್ಟಿಸಿ ಅಭಿವೃದ್ಧಿಪಡಿಸಿದ ಈ ದೇವಾಲಯ ನೋಡಲು ರಮಣೀಯ.

ಶ್ರೀರಂಗಂನಿಂದ ತಂಜಾವೂರು.ದೇವರ ಹೆಸರಿನಂತೆ ವಿಗ್ರಹವೂ ಬೃಹಧೀಶ್ವರ.ಈಶ್ವರನ ಪೀಠವೇ ೮ಅಡಿ ಇದ್ದು ಲಿಂಗವೇ ೫ ಅಡಿ  ಇರುತ್ತದೆ.ಇದರಿಂದ ಶಿವಲಿಂಗ ದ ಎತ್ತರ ಒಟ್ಟು ೧೩ಅಡಿಗಳು.ಈಶ್ವರನ ಪೀಠ ೫೪ ಅಡಿ ವ್ಯಾಸದ ಭಾರೀ ವಿಗ್ರಹ. ಸುಮಾರು ೨೧೭ ಅಡಿಗಳ ಎತ್ತರದ ಗೋಪುರ, ತುದಿ ಯಲ್ಲಿ ೮೦ ಟನ್ ತೂಕದ ಗ್ರಾನೈಟ್ ನ ಗೋಳಾಕಾರ, ಮೇಲೆ ಶಿಖಿರ. ೭೯೦ ಅಡಿ ಉದ್ದ,೪೫೦ಅಡಿ ಅಗಲದ ತಳಪಾಯದ ಮೇಲೆ ನಿಂತಿರುವ ಈ ದೇವಾಲಯವನ್ನು  ಗರ್ಭಗುಡಿ ಮತ್ತುವಿಮಾನ ಗೋಪುರ, ಪ್ರಾಕಾರ,ನಂದೀ ಪ್ರಾಂಗಣ,ಸಭಾ ಮಂಟಪ ಹಾಗೂ ಮುಖ ಮಂಟಪ ಎಂದು ಐದು ಭಾಗವಾಗಿ ಹೆಸರಿಸಲಾಗಿದೆ. ದೇಶದಲ್ಲೇ ಅತಿ ದೊಡ್ಡ ಈ ದೇವಾಲಯದ ಆವರಣದಲ್ಲಿ ಪಾರ್ವತಿ, ಮುರುಗನ್,ನಂದಿ, ಗಣೇಶ, ದಕ್ಷಿಣಾಮೂರ್ತಿ, ಸುಬ್ರಹ್ಮಣ್ಯ, ಸಭಾಪತಿ,ವಾರಾಹಿ ಮತ್ತು ಚಂಡಿಕೇಶ್ವರ ಗುಡಿಗಳೂ ಇವೆ.ಈ ದೇವಾಲಯವನ್ನು ಪೂರ್ಣ ನೋಡಿ ಅಭ್ಯಸನ ನಡೆಸಲು ತಿಂಗಳೇ ಬೇಕಾದೀತು.ನಂತರ ಹೋಟೆಲ್ ಸೇರಲು ರಾತ್ರಿ ಹತ್ತು ಘಂಟೆಯೇ ಆಯಿತು. ಉಪಾಹಾರದ ನಂತರ  ಹೋಟೆಲ್ ನಲ್ಲಿ  ವಿಶ್ರಾಂತಿ.

ಈ ಪ್ರವಾಸದಲ್ಲಿ ಬೆಳಿಗ್ಗೆ ಐದು ಅಥವಾ ಐದೂವರೆ ಘಂಟೆಗೆ ಪ್ರಯಾಣ ಪ್ರಾರಂಭವಾಗಿ ರಾತ್ರಿ ಎಂಟರ ವೇಳೆಗೆ ಅಂದಿನ ಪ್ರವಾಸ ಮುಗಿಸಿ ಅಲ್ಲಿಯೇ ಹೋಟೆಲ್ ರೂಮಿನಲ್ಲಿ ವಸತಿ ಮಾಡುತ್ತಿದ್ದೆವು. ಪಾಂಡಿಚೇರಿ, ತಂಜಾವೂರು, ರಾಮೇಶ್ವರಂ, ಕನ್ಯಾಕುಮಾರಿ, ಇಂತಹ ಕೆಲವು ಪ್ರದೇಶಗಳಲ್ಲಿ ರಾತ್ರಿ ಊಟದ ಪದ್ದತಿಗಳಿರುವುದಿಲ್ಲ. ಉಪಾಹಾರದ ವ್ಯವಸ್ಥೆಯಿರುವುದು ವಿಶೇಷ.

Comments

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...