Skip to main content

ಮದುರೈ, ರಾಮೇಶ್ವರಂ,ಸುಚೀಂದ್ರಂ, ಕನ್ಯಾಕುಮಾರಿ

ಪ್ರವಾಸದ ಐದನೇ ದಿನ.ತಂಜಾವೂರಿನಿಂದ  ಬೆಳಿಗ್ಗೆ ಐದಕ್ಕೆ ರಾಮೇಶ್ವರಕ್ಕೆ ಹೊರಟೆವು. ೧೮೯ ಕಿಲೋಮೀಟರ್ ದೂರದಲ್ಲಿರುವ ಮಧುರೈ.ದೇವಾಲಯಕ್ಕೆ ಹೋಗುವ ಮುನ್ನ ಅಲ್ಲಿ ಶರವಣ ಹೋಟೆಲ್ ನಲ್ಲಿ ಉಪಾಹಾರ.

ಅತ್ಯಂತ ಪುರಾತನ ಮೀನಾಕ್ಷಿ  ದೇವಾಲಯವು ವೈಗೈ ನದಿ ತೀರದಲ್ಲಿ ಚೋಳರ ಕಾಲದಲ್ಲಿ ಕಟ್ಟಲಾಗಿದೆ. ವಿವಿಧ ರಾಜರು ತಮ್ಮ ಕಾಲದಲ್ಲಿ ಹಲವು ಅಭಿವೃದ್ಧಿ ಗೋಪುರ ವನ್ನು ಕಟ್ಟಿಸಲಾಗಿ ಏಳು ಗೋಪುರಗಳು ಕಾಣಿಸುತ್ತಿದ್ದು ಅಲ್ಲದೆ ಇನ್ನೂಎರಡು ಚಿನ್ನದ ಗೋಪುರಗಳಿವೆ.ಇದೂ  ಸಹ  ಬೃಹತ್ ದೇವಾಲಯಗಳ ಸಾಲಿಗೆ ಸೇರಬಹುದಾದದ್ದು.ಹಿಂದೆ ಇಂದ್ರ ನು ಬ್ರಹ್ಮ ಹತ್ಯಾ ದೋಷದಿಂದ ಅಲೆದಾಡುತ್ತಿದ್ದಾಗ ಒಂದು ಸ್ವಯಂಭೂ ಲಿಂಗವನ್ನು ಆಕಸ್ಮಿಕ ವಾಗಿ ಪೂಜಿಸಿ ಶಾಪ ವಿಮೋಚನೆ ಯಾಯಿತಂತೆ.ನಂತರದ ದಿನಗಳಲ್ಲಿ ಈ ಸ್ಥಳವು ಪ್ರಸಿದ್ಧಿಯಾಗಿ ಮಲಯ ಧ್ವಜನೆಂಬ ರಾಜನು ಆಳುತ್ತಿದ್ದನು ಆತನಿಗೆ ಮಕ್ಕಳಿರಲಿಲ್ಲ.ಪತ್ನಿ ಕಾಂಚನಮಾಲ ಳೊಂದಿಗೆ ಮಗುವಿಗಾಗಿ ಯಜ್ಞ ಮಾಡಿದಾಗ ಪಾರ್ವತಿಯು ಮೂರು ಸ್ಥನಗಳ ಮಗುವಾಗಿ ಅಗ್ನಿ ಕುಂಡದಿಂದ ಉದ್ಭವಿಸಿದಳು.ಅಪರೂಪಕ್ಕೆ ಪಡೆದ ಮಾಡುವುದಾದರೂ ಅದರ ವಿರೂಪವನ್ನು ಕಂಡು ಚಿಂತಾಕ್ರಾಂತರಾದ ರಾಜದಂಪತಿಗಳಿಗೆ ಈ ಕನ್ಯೆಯನ್ನು ಯಾರು ಮದುವೆಯಾಗುವರೋ ಎಂಬ ಹೊಸ ಚಿಂತೆ ಪ್ರಾರಂಭವಾಯಿತು.ಅವರ ರೋಧನಕ್ಕೆ ಉತ್ತರವಾಗಿ,ಈ ಕನ್ಯೆಯನ್ನು ಯಾರು ಮದುವೆಯಾಗುವರೋ ಅವರ ಮೊದಲ ದರ್ಶನದಿಂದಲೇ ಮೂರನೇ ಸ್ಥನವು ಮಾಯವಾಗುತ್ತದೆ ಎಂದು ಸಮಾಧಾನದ  ಅಶರೀರ ವಾಣಿಯಾಯಿತು.ಮಗುವು ಮಗಳಾಗಿ ಬೆಳೆದು ಸುಂದರಿಯಾಗಿ ಸುಖವಾಗಿ ಬೆಳೆದು ಪೌರಷವಾಗಿ ರಾಜ್ಯವಾಳಿದ್ದಲ್ಲದೆ ರಾಜ್ಯ ವಿಸ್ತಾರ ಕ್ಕಾಗಿ ಕೈಲಾಸಕ್ಕೆ ಹೋಗಿದ್ದಾಗ ಶಿವನು ಇವಳನ್ನು ನೋಡಲಾಗಿ ಮೂರನೇ ಸ್ಥನ ಮಾಯವಾಯಿತೆಂದೂ ಇದರಿಂದ ಅವನೊಂದಿಗೆ ವಿವಾಹ ವಾಯಿತೆಂದು ಸ್ಥಳ ಮಹಾತ್ಮೆ ಹೇಳುತ್ತದೆ.ಅವಳ ಪ್ರೀತಿಯ ಗಿಳಿಯು ಸದಾ ಆವಳ ಬಲಗೈಲಿ ಇರುವುದು, ಮೀನಿನ ಕಣ್ಣುಳ್ಳುವುಳಾದ ದೇವಿಯು ಕಣ್ಣಿನಿಂದಲೇ ವರ ಕೊಡುವ ಮೀನಾಕ್ಷಿ ಯಾಗಿಯೂ ವಿವಾಹವಾದ ಶಿವನು ಸುಂದರೇಶ್ವರನಾಗಿ ಈ ದೇವಾಲಯದಲ್ಲಿ ನೆಲೆಸಿರುತ್ತಾರೆ.ಅಲ್ಲದೆ  ಸುಬ್ರಹ್ಮಣ್ಯ,ಕೇಳುವ ವರವೆಲ್ಲವನ್ನು ದಯಪಾಲಿಸುವ ಪ್ರಸಿದ್ಧ ಮುಕ್ಕುರಣಿ ವಿನಾಯಕ ದೇವರುಗಳಲ್ಲದೆ ವಿಶೇಷ ನಾದಸ್ಥಂಭ ವನ್ನು ನೋಡಬಹುದಾಗಿದೆ.ದರ್ಶನದ ನಂತರ ಸೊಗಸಾದ ಭರ್ಜರಿ ಊಟ ಪೂರೈಸಿ ಅಲ್ಲಿಂದ ೧೭೨ ಕಿಲೋಮೀಟರ್ ದೂರದ ರಾಮೇಶ್ವರಕ್ಕೆ ಪ್ರಯಾಣ ಹೊರಟೆವು.

ರಾಮೇಶ್ವರಂ ರೈಲು ನಿಲ್ದಾಣ ತಲುಪಿದಾಗ ಸಂಜೆ ೫ ಘಂಟೆ. ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ರವರ ಸಮಾಧಿ, ಬಾಹ್ಯಾಕಾಶ ಮತ್ತು ಯುದ್ಧ ಸಾಮಗ್ರಿಗಳ ಅವರ ಸಂಶೋಧನೆ, ಮಕ್ಕಳ ಯುವಜನರ ಜ್ಞಾನ ವೃದ್ಧಿಗೆ ಅವರು ಕೊಟ್ಟ ಉತ್ತೇಜನ ಹೀಗೆ ಅವರ ಜೀವನ ಯಶೋಗಾಥೆಯ ವಸ್ತು ಪ್ರದರ್ಶನ ವನ್ನು ನೋಡಿದೆವು. ಅಲ್ಲಿಂದ ವಿಶೇಷ ಅನುಮತಿ ಪಡೆದಿರುವ ಬಸ್ ನಲ್ಲಿ ರಾಮೇಶ್ವರಂ ದೇಗುಲ ಕ್ಷೇತ್ರಕ್ಕೆ ಪ್ರಯಾಣ.
ದೇಗುಲ ಮುಖ್ಯರಸ್ತೆಯಲ್ಲಿ ಲಾಡ್ಜ್ ದೊರೆಯಿತು.ಅರ್ಧ ಘಂಟೆಯ ತಿಂಡಿ ವಿಶ್ರಾಂತಿ ಗಳ ನಂತರ ದೇವಾಲಯದತ್ತ ನಡೆದೆವು.ಇದೂ ಸಹ ಚೋಳ,ಪಲ್ಲವ,ನಾಯಕರು ಕ್ರಿಸ್ತ ಶಕ ೧೧೦೦ರ ಕಾಲದಲ್ಲಿ ಕಟ್ಟಿದ್ದು ಸುಂದರ ಬೃಹತ್ ವಿಸ್ತಾರವಾದ ದೇವಾಲಯ.ಮಹಾ ಬ್ರಾಹ್ಮಣ ರಾವಣ ಹತ್ಯಾದೋಷ ನಿವಾರಣೆಗೆ ಗೊತ್ತಾದ ಮುಹೂರ್ತದಲ್ಲಿ ಶಿವ ಪೂಜೆ ಮಾಡಬೇಕೆಂದು ಗುರು ವಸಿಷ್ಠ, ವಿಶ್ವಾಮಿತ್ರ ರ ಅಣತಿಯಂತೆ ತಯಾರಾದ ಶ್ರೀಸೀತಾರಾಮರು ವಿಗ್ರಹವನ್ನು ತರಲು ಕೈಲಾಸಕ್ಕೆ ಆಂಜನೇಯ ದೇವರಿಗೆ ಹೇಳಿದರು.ಆತನು ಶಿವ ಲಿಂಗ ವನ್ನು ತರುವಾಗ ಮಾರ್ಗ ಮಧ್ಯೆ ಸಿಕ್ಕ ನಾರದರ ಸಲಹೆಯಂತೆ ಅವನೂ ಒಂದು ವಿಗ್ರಹ ಸ್ಥಾಪನೆ ಮಾಡಲು ಮತ್ತೊಂದು ವಿಗ್ರಹವನ್ನು ತರುವ ವೇಳೆಗೆ ಮುಹೂರ್ತ ಮೀರುತ್ತಿತ್ತು.ಆದ್ದರಿಂದ ಶ್ರೀರಾಮ ನು ಮರಳಿನಿಂದಾದ ಲಿಂಗ ಸ್ಥಾಪನೆ ಮಾಡಿ ಪೂಜೆ ಮುಗಿಸಿದನು.ಇದು ರಾಮನಾಥ ಎಂದು ಕರೆಯಲ್ಪಡುತ್ತಿದೆ.ಇದೇ ಇಲ್ಲಿನ ಪ್ರಧಾನ ದೇವರು. ಆತುರವಾಗಿ ಬಂದ ಆಂಜನೇಯ ಮುಗಿದ ಪೂಜೆಯ ಕಂಡು ಹತಾಶನಾಗಿ ಲಿಂಗವನ್ನು  ಬಾಲದಿಂದ ಸುತ್ತಿ ಎಸೆದ ರಭಸಕ್ಕೆ ಆತನೇ ಬಿದ್ದನು. ಅವನು ತಂದ ಎರಡು ಶಿವಲಿಂಗದಲ್ಲಿ ರಾಮನಿಗಾಗಿ ತಂದಿದ್ದ ಲಿಂಗವನ್ನು ವಿಶ್ವನಾಥ ನೆಂದೂ ಅವನಿಗಾಗಿ ತಂದುಕೊಂಡ ಲಿಂಗವನ್ನು ಆತ್ಮಲಿಂಗ ವೆಂದೂ ಇಂದಿಗೂ ಪೂಜಿಸುತ್ತಾರೆ.ಈ ಎರಡು ಲಿಂಗಗಳನ್ನೂ ಬಿದ್ದಿರುವ ಆಂಜನೇಯನನ್ನೂ ನೋಡಬಹುದಾಗಿದೆ. ಇದಲ್ಲದೆ ಉಪ್ಪಿನಿಂದ ನಿರ್ಮಿತ ಶಿವಲಿಂಗವಿದ್ದು, ಸಾವಿರಾರು ವರ್ಷಗಳಿಂದ ದಿನನಿತ್ಯ ದ ಅಭಿಷೇಕ ದ ನಂತರವೂ ಕರಗದಿರುವುದರಿಂದ ಇದನ್ನು ವಜ್ರಲಿಂಗ ಎಂದು ಕರೆದು ಪೂಜಿಸುತ್ತಾರೆ.ಈ ಶಿವಲಿಂಗ ಗಳನ್ನು ರಾತ್ರಿಯೇ ದರ್ಶನ ಮಾಡಿ ಮರು ದಿನ ಬೆಳಿಗ್ಗೆ ಪುನಃ ಬಂದೆವು.

ಗುರುವಾರ.ಈ ಬೆಳಿಗ್ಗೆ   ಆದಿಶಂಕರಾಚಾರ್ಯರು ಸ್ಥಾಪಿಸಿದ ಸ್ಪಟಿಕ ಲಿಂಗ ದರ್ಶನ ಪಡೆದೆವು.ಈ ಲಿಂಗವನ್ನು  ಸೂರ್ಯೋದಯದ ಮೊದಲು ನೋಡಬೇಕು ಎಂಬ ನಿಯಮವಿದೆ.ಅದರ ದರ್ಶನವನ್ನು ನಿಗದಿಯಂತೆ ಸೂರ್ಯೋದಯದ ಮೊದಲು ಮುಗಿಸಿದೆವು. ಇದರಿಂದಾಗಿ ಐದು ಲಿಂಗಗಳ ದರ್ಶನ ಅಥವಾ ಸಾಮಾನ್ಯವಾಗಿ ಕರೆಯುವ  ಪಂಚಲಿಂಗ ದರ್ಶನವಾಯಿತು . ಸಮುದ್ರತೀರವಾದ್ದರಿಂದ ಗತಿಸಿದ  ಗುರು ಹಿರಿಯರಿಗೆ ತರ್ಪಣ ಅರ್ಘ್ಯಾಧಿಗಳಿಗೆ ಅವಕಾಶವಿದ್ದು ಸಮುದ್ರ ಸ್ನಾನದ ನಂತರ  ಆಚಾರ್ಯರ ರೊಬ್ಬರ ಸಹಾಯದಿಂದ ತರ್ಪಣ ಕಾರ್ಯ ನಡೆಸಿದೆ.ನನ್ನಂತೆ ಹಲವರು ಧಾರ್ಮಿಕ ಕಾರ್ಯವನ್ನು ಮಾಡುತ್ತಿದ್ದರು.ಈ ಸಮುದ್ರದ ಈ ಭಾಗಕ್ಕೆ ಅಗ್ನಿ ತೀರ್ಥ ಎನ್ನುವರು.

ಈ ಸ್ನಾನದ ನಂತರ ವಿವಿಧ ಪವಿತ್ರ ಹೆಸರುಗಳಿಂದ ಗುರುತಿಸಲಾದ ೨೨ ಬಾವಿಗಳಿಂದ ನೀರನ್ನು ಎತ್ತಿ ತಲೆ ಮೇಲೆ ಸುರಿಸಿಕೊಳ್ಳುವ ಸ್ನಾನ.ಇದಕ್ಕೆ ತೀರ್ಥಸ್ನಾನ ಎಂದು ಕರೆಯುತ್ತಾರೆ. ನಂತರ ವಸತಿ ಸ್ಥಳಕ್ಕೆ ತೆರಳಿ ವಿಶ್ರಾಂತಿ ಮತ್ತು ಉಪಾಹಾರ ಮುಗಿಸಿದೆವು.
ನಂತರ  ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ರಾಮ ಪಾದುಕಾ,ರಾಮ ತೀರ್ಥ,ಸೀತಾ ಕುಂಡ, ಲಕ್ಷ್ಮಣ್ ಕುಂಡ,ಪಂಚ ಮುಖಿ ಹನುಮ ಸ್ಥಾನ, ಸೇತುವೆಗೆ ಬಳಸಿರಬಹುದಾದ ತೇಲುವ ಕಲ್ಲುಗಳು ಇತ್ಯಾದಿ ಗಳನ್ನು ನೋಡಿದೆವು.ಈ ಸಮೀಪದಲ್ಲಿಯೇ ಇರುವ ಕಲಾಂ ಮನೆ ಮತ್ತು ಸಂಬಂಧಿಗಳ ಸೀಷೆಲ್ ಸ್ಟೋರ್ ಗೆ ಭೇಟಿ ಕೊಟ್ಟೆವು.

ಮುಂದಿನ ಪ್ರವಾಸ ಸುಚೀಂದ್ರಂ ,ಇದು ಬ್ರಹ್ಮ ವಿಷ್ಣು ಈಶ್ವರರು ದೇವಿ ರೂಪದಲ್ಲಿರುವವರು. ತನುಮಾಲಯನ್ ಎಂದು ಕರೆಯಲ್ಪಡುವ ಈ ದೇವಾಲಯದಲ್ಲಿ ೨೨ ಅಡಿ ಎತ್ತರದ ದಾಖಲೆಯ ಏಕ ಶಿಲಾ ಆಂಜನೇಯ ಹಸನ್ಮುಖಿಯಾಗಿ ನಿಂತಿದ್ದು ಭಕ್ತರ ಎಲ್ಲಾ ಕೋರಿಕೆಗಳನ್ನು ನೆರವೇರಿಸುತ್ತಾನೆ ಎಂಬ ದೃಢ ನಂಬಿಕೆ.ಸಂಗೀತ ನಾದ ಹೊರಡಿಸುವ ಹಲವು ಕಂಬಗಳು ವಿಶೇಷ ಆಕರ್ಷಣೆಯ ವಿಷಯ. ವಿನಾಯಕನ ರೂಪದಲ್ಲಿನ ಶಿವ, ಗಣೇಶ ರೂಪದ ಪಾರ್ವತಿ ವಿಜ್ಞೇಶ್ವರಿ, ದಕ್ಷಿಣಾಮೂರ್ತಿ,ಶಂಖವನ್ನು ಕುಟ್ಟಿದ ಪುಡಿಯಿಂದ ತಯಾರಾದ ನಂದಿ, ಗಣೇಶ ದೇವಾಲಯಗಳೂ ಕಾಣಬಹುದಾದ ವಿಶಿಷ್ಟ ದೇವರುಗಳು.ರಾತ್ರಿ ಯ ವೇಳೆಗೆ ಕನ್ಯಾಕುಮಾರಿ ತಲುಪಿದೆವು.ವಿಶ್ರಾಂತಿ.
ಶುಕ್ರವಾರದ ಈ ದಿನ.ಕನ್ಯಾಕುಮಾರಿಯಲ್ಲಿದ್ದೇವೆ. ಬೆಳಿಗ್ಗೆ ೫.೫೦ ಆಗುತ್ತಿದೆ . ಸೂರ್ಯೋದಯದ ಸಮಯ. ಹೋಟೆಲ್ ನ ಮೇಲ್ಭಾಗದಲ್ಲಿರುವ ಬಯಲು ಪ್ರದೇಶಕ್ಕೆ ಸೂರ್ಯೋದಯ ವನ್ನು  ಮೊಬೈಲ್ ಕಣ್ತುಂಬಿಕೊಳ್ಳಲು  ಆತುರ.ಅಲ್ಲಿ ಕೆಲವೇ ಮಂದಿ ಇದ್ದುದರಿಂದ ಕ್ಯಾಮೆರಾ ಹಿಡಿದು ನಿಂತಿದ್ದಾಗ ಈ ದಿನ ಸೂರ್ಯ ಬರುವುದಿಲ್ಲವೇ ಎಂಬ ಕಾತುರವನ್ನು ಹುಸಿ ಮಾಡದೆ ತಾಮ್ರದ ಬಣ್ಣದಲ್ಲಿ ಹೊಳೆಯುತ್ತಾ ಬಂದ ಅರುಣ .ಅವನ ಸೊಬಗಿಗೆ ಆಯ್ತು ವೀಕ್ಷಕರ ಚಿತ್ತಾಪಹರಣ. ಘಂಟೆ ಎಂಟರ ವೇಳೆಗೆ  ಬಫೆಟ್ ಟಿಫಿನ್.ವಿಜಯನಗರದ ಕೃಷ್ಣ ದೇವರಾಯನ ಕಾಲವನ್ನೂ ನಾಚಿಸುವರೇನೋ ಎಂಬಂತೆ ಮುತ್ತು ರತ್ನ ಖಚಿತ ಆಭರಣಗಳು,ಅದನ್ನು ಕೈತುಂಬಾ ಹಿಡಿದು ಕೊಳ್ಳುವುದರ ಜೊತೆಗೆ ದಾರಿಯಲ್ಲಿ ಬರುವ ಹೋಗುವವರಿಗೆ ಕಾಡುವ ಬೀದಿ ವರ್ತಕರು. ಈಗಾಗಲೇ ಕೊಂಡಿದ್ದೇವಲ್ಲಾ ಇನ್ನೇಕೆ ಎಂಬ ವಿವೇಕದ ಮಧ್ಯೆಯೂ ನನಗಾದರೆ ಆಗಲಿ, ಬೇಡಾದಲ್ಲಿ ಬೇಕಾದವರಿಗೆ ಕೊಡೋಣ ಎಂಬ ಧಾರಾಳತನ, ಮುತ್ತಿನ ಸರ ಸರಿ ಇದೆಯೋ ಇಲ್ಲವೋ,ಇದ್ದರೆ ಹೆಚ್ಚು ಬೆಲೆ ಕೊಟ್ಟು ಮೋಸ ಹೋಗುವೆನೋ ಹೀಗೆ ನೂರಾರು ಯೋಚನೆಗಳ ನಡುವೆ ಕೈಗೆ ಸಿಗಿಸಲಾದ ಸರವನ್ನು ಎಷ್ಟೋ ಹಣ ಕೊಟ್ಟು ವ್ಯಾಪಾರಿಯಿಂದ ಬಿಡುಗಡೆಯಾದ ಸಂತೋಷ ಪಡುವ ಮಹಿಳಾ ಸಹ ಯಾತ್ರಿಕರು.ಆದರೂ ಇನ್ನೂ ಕಡಿಮೆ ದರಕ್ಕೆ ಕೇಳಿದ್ದರೆ ಕೊಡುತ್ತಿದ್ದನೇನೋ ಎಂಬ ಆತಂಕ ಸಮಾಧಾನದ ಮಧ್ಯೆ ಬೇರೆಯವರತ್ತ  ಅವರೇನು ಮಾಡಿದರೆಂಬ ಹೊಸ ನೋಟ.ಹೊಸ ಪ್ರಶ್ನೆ ಗಳು.ಈ ನಡುವೆ ಧಿಡೀರ್ ಆಗಿ ಒಂದು ಗ್ರೂಪ್ ಫೋಟೋ ಮುಗಿಯಿತು. ನಿಧಾನವಾಗಿ ಸಮುದ್ರದತ್ತ ನಡೆದೆವು.ಫೆರಿ,ಜಲಗಾಮಿ ವಾಹನದ ಮೂಲಕ ವಿವೇಕಾನಂದ ಕೇಂದ್ರ (ಧ್ಯಾನ ಮಂದಿರ, ವಾಚನಾಲಯ) ಭೇಟಿ.ನೆಪಕ್ಕೆ ಐದು ನಿಮಿಷ ಧ್ಯಾನ.ಭೇಟಿಯ ಸ್ಮರಣಾರ್ಥ ಒಂದು ಪುಸ್ತಕ ಸಂಗ್ರಹ.ಎರಡು ಘಂಟೆಯ ಸಮುದ್ರ ದರ್ಶನದ ಬಳಿಕ ವಾಪಸ್ ಬಂದು ಕನ್ಯಾಕುಮಾರಿ ದೇವರ ದರ್ಶನ.ಪಾರ್ವತಿಯನ್ನು ಮದುವೆಯಾಗಲು ಮುಹೂರ್ತ ಕ್ಕೆ ಬರಲು ಅಸಮರ್ಥ ನಾದ ಶಿವನ ವರ್ತನೆಯಿಂದ ಬೇಸರವಾಗಿ ಕಡೆಗೂ ಕುಮಾರಿ ಕನ್ಯೆಯಾಗಿಯೇ ಉಳಿದು ಕನ್ಯಾಕುಮಾರಿ ಎನಿಸಿಕೊಂಡರೂ ವಿವಾಹವಾಗಬೇಕಾದ ಕನ್ಯೆಯರ ಕೋರಿಕೆಯನ್ನು ಮನ್ನಿಸಿ ವಿವಾಹ ಕರುಣಿಸುವ ದಯಾಮೂರ್ತಿಯಾಗಿದ್ದಾಳೆ.ಇದು ಹಿಂದುಗಳ ಯಾತ್ರಾಸ್ಥಳ ವಾಗಿದ್ದು ಶಕ್ತಿಪೀಠ ವೆನಿಸಿಕೊಂಡಿದೆ. ಭಾರತದ ಭೂಶಿರ ಎನಿಸಿಕೊಂಡ ಈ ಸ್ಥಳದಲ್ಲಿ ಬಂಗಾಲ ಮಹಾಸಾಗರ, ಅರಬ್ಬಿ ಸಮುದ್ರ ವು ಹಿಂದೂ ಮಹಾ ಸಾಗರವನ್ನು ಸೇರುವ ಪ್ರದೇಶ ರಮಣೀಯ. ಕಂಚಿಕಾಮಕೋಟಿ ಶಂಕರಾಚಾರ್ಯರ ಮಠದ ಶಾಖೆಯೂ ಇದೆ.

Comments

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...