ಮಿತ್ರ ನಂಜಪ್ಪನವರ ನೆನಪಿನ ಪುಟಗಳು-೨
ಶಿವರಾತ್ರಿ ಆಚರಣೆ ವಿಭಿನ್ನ ರೀತಿಯಲ್ಲಿ ದೇಶಾದ್ಯಂತ ನಡೆಯುತ್ತದೆ.ಶಿವನ ಭಕ್ತರಿಗೆ ಉಪಚಾರ ಮಾಡುವುದು ನಮ್ಮ ಶಿವರಾತ್ರಿಯ ರೀತಿ. ನಾವು ಕೆಲವು ಮಿತ್ರರೆಲ್ಲಾ ಸೇರಿ ಒಂದು ಸೇವಾ ಸಮಿತಿ ಯನ್ನು ಮಾಡಿ ಕೊಂಡಿದ್ದೇವೆ.ಬೆಟ್ಟದ ಮೇಲಿನ ನಂದೀಶ್ವರನ ಭಕ್ತರೇ ನಮ್ಮ ಸೇವಾ ಬಿಂದು.
ಪ್ರತಿ ಶಿವರಾತ್ರಿಗೆ ರಾಜ್ಯಾದ್ಯಂತ ಹಲವು ಸಾವಿರ ಭಕ್ತರು ಇಲ್ಲಿಗೆ ಬರುತ್ತಾರೆ.ಅದರಲ್ಲೂ ಉತ್ತರ ಕರ್ನಾಟಕದ ಹಳ್ಳಿಗಳಿಂದ ಬರುವ ಭಕ್ತಾದಿಗಳು ಹೆಚ್ಚು.ಅವರಿಗೆ ದೇವರ ಮೇಲಿನ ಭಕ್ತಿ ಯಥೇಚ್ಛವಾಗಿದ್ದರೂ ಊಟ ತಿಂಡಿಗಳಿಗೆ ಈ ಬೆಟ್ಟದ ಮೇಲೆ ತೊಂದರೆಯೇ.ಇವರು ಶಿವನ ಪೂಜೆ ಉಪವಾಸ ವೃತಾಚರಣೆ , ರಾತ್ರಿ ಭಜನೆ ಮೂಲಕ ಜಾಗರಣೆ ಗಳನ್ನು ಅತ್ಯಂತ ಶೃದ್ಧೆ ಭಕ್ತಿ ಗಳಿಂದ ಆಚರಿಸುವರು. ಇಂತಹ ಭಕ್ತರಿಗೆ ಶಿವರಾತ್ರಿಯ ಮರುದಿನ ಪಾರಣೆ ಅಥವಾ ವಿಶೇಷ ಊಟೋಪಚಾರಗಳನ್ನು ನೀಡುವುದೂ ಒಂದು ನಮ್ಮ ಚಟುವಟಿಕೆ. ಇದರಿಂದ ಹೊರ ಊರಿನಿಂದ ಬರುವ ಭಕ್ತಾದಿಗಳ ಜೊತೆಗೆ ಇಲ್ಲಿನ ಬಡ ಜನಗಳಿಗೂ ಅನುಕೂಲವಾಗುತ್ತಿದೆ.
ಈ ಸೇವೆಗಾಗಿ ಧಾನ್ಯಗಳು, ತರಕಾರಿಗಳು, ಕುಡಿಯುವ ನೀರು ಇತ್ಯಾದಿಗಳನ್ನು ಕೊಡುವ ದಾನಿಗಳು ಈ ಬೆಟ್ಟದ ತಪ್ಪಲಿನ ಅನೇಕ ಹಳ್ಳಿಯವರು ಇದ್ದಾರೆ.ಧನದ ರೂಪದಲ್ಲಿ, ವೈಯಕ್ತಿಕವಾಗಿ ಸೇವಾದಾನ ಮಾಡುವವರೂ ಇದ್ದಾರೆ.ಪಡೆದ ವಸ್ತು,ಧನ,ದವಸ ಧಾನ್ಯ ಗಳನ್ನ ಸಂಗ್ರಹಿಸಿ, ಲೆಖ್ಖಿಸಿ ಸೂಕ್ತ ವಾಗಿ ಎಲ್ಲಾ ಭಕ್ತರಿಗೂ ತಲುಪಿಸುವ ಹೊಣೆಗಾರಿಕೆ ಅತ್ಯಂತ ಜವಾಬ್ದಾರಿಯದಾಗಿದೆ. ವರ್ಷ ವರ್ಷಕ್ಕೂ ಹೆಚ್ಚುತ್ತಿರುವ ಭಕ್ತಾದಿಗಳ ಸಂಖ್ಯೆ ಯೋಜನೆಯನ್ನು ದಾಟುತ್ತಿದೆ. ಈ ಸೇವಾ ಕೆಲಸಕ್ಕಾಗಿ ಅನೇಕ ಸ್ವಯಂ ಸೇವಕರಿರುವುದು ಸಂತಸದ ವಿಷಯ. ಅವರ ಸಲಹೆಗಳೂ ಅಮೂಲ್ಯ.
ಕೆಲವು ವರ್ಷಗಳ ಹಿಂದಿನ ಒಂದು ಶಿವರಾತ್ರಿ.ಸೇವಾ ತಯಾರಿಯ ಸಭೆಯಲ್ಲಿ ಒಬ್ಬ ಹಿರಿಯರು ಮಾತನಾಡುತ್ತಾ ಹೆಬ್ಬಾಳ ಸಮೀಪದಲ್ಲಿ ಒಬ್ಬ ಆಗರ್ಭ ಶ್ರೀಮಂತರಿದ್ದಾರೆ. ಆಂಧ್ರದವರು, ಮಹಾ ದೈವಭಕ್ತರು, ಧಾರಾಳಿಗಳು. ಅವರು ಮಹಾ ದಾನಿಗಳೆಂದು ಕೇಳಿದ್ದೇನೆ. ಅವರಲ್ಲಿ ಹೋಗಿ ನಮ್ಮ ಶಿವರಾತ್ರಿ ಕಾರ್ಯಕ್ರಮವನ್ನು ಹೇಳಿದಲ್ಲಿ ಅನುಕೂಲ ವಾಗಬಹುದು ಎಂದು ಹೇಳಿದರು. ನಮಗೂ ಹಲವು ಜನರಲ್ಲಿ ಪದೇ ಪದೇ ಹೋಗಿ ಬೇಡಿ ಸಾಕೆನಿಸಿದ್ದರಿಂದ ಈ ಹೊಸ ಸಲಹೆ ಸರಿಯೆನಿಸಿತು.ಅವರ ಬಳಿ ಹೋಗಲು ನಮ್ಮಲ್ಲೇ ಮೂವರನ್ನು ಆಯ್ಕೆ ಮಾಡಿ ಕೊಂಡೆವು.
ಮರುದಿನ ಅವರ ಕಛೇರಿಗೆ ತಲುಪಿದೆವು. ಹೋ,ಹೋ,ಹೋ. ಅದೇನು ಕಛೇರಿಯ ವೈಭವ.ಭಾರೀ ಮನೆ.ಅತ್ಯಂತ ಬೆಲೆ ಬಾಳುವ ಗೇಟ್,ಎರಡೂ ಕಡೆ ಕುಸುರಿ ಕಲಾಕೃತಿಯ ಸ್ಥಂಭಗಳು, ಅದಕ್ಕೆ ಕೂಡಿದಂತೆ ಇಬ್ಬರು ದ್ವಾರಪಾಲಕರು.ಈ ಜಯವಿಜಯರಿಂದ ಅನುಮತಿ ಪಡೆದು ಪ್ರವೇಶಿಸಿದರೆ ಕೆಂಪು ಹಾಸಿನ ಪಾದಮಾರ್ಗ. ಮನೆಯ ಮುಂದೆಯೇ ಆಪ್ತ ಕಾರ್ಯದರ್ಶಿಯ ಭೇಟಿ.ಅವರು ನಿವೃತ್ತ ಪೋಲಿಸ್ ಹಿರಿಯ ಅಧಿಕಾರಿ . ನಿವೃತ್ತರಾದ ಮೇಲೂ ಐವತ್ತು ಸಾವಿರ ಸಂಬಳ ಪಡೆಯುವ ಚಾಲಾಕಿ ಅಧಿಕಾರಿ.ನೋಡಲು ತುಂಬಾ ಟಿಪ್ ಟಾಪ್ , ಸೂಟ್ ಬೂಟು ಧಾರಿ. ಮಾತೂ ಕರಾರುವಾಕ್. ಕಠಿಣ ದೃಷ್ಟಿ. ಅವರನ್ನು ನೋಡಿಯೇ ಹೆದರಿದ್ದೆವು. ಅವರ ಆಜ್ಞೆ ಯಂತೆ ಮಹಾದಾನಿ ಯ ಕಛೇರಿಯ ಹೊರಗೆ ಭೇಟಿಗಾಗಿ ಕುಳಿತೆವು.
ಇನ್ನು ಒಳಗೆ ಹೋದ ಮೇಲೆ, ನಾವು ಹೇಳಲು ಸರಿಯಾಗಿ ತಯಾರಾಗಿದ್ದೇವೆಯೇ,ಏನು ಮಾತನಾಡಬೇಕು ಎಂಬ ಯೋಚನೆಯಲ್ಲಿದ್ದಾಗಲೇ ನಮಗೆ ಬರಲು ಕರೆ. ಆಪ್ತ ಕಾರ್ಯದರ್ಶಿಗಳ ದಯೆಯಿಂದ ಶೀಘ್ರವಾಗಿ ಮಹಾದಾನಿಗಳ ದರ್ಶನವಾಯಿತು . ಮೊದಲ ಭೇಟಿಯಲ್ಲೇ ನಮ್ಮ ಶಿವರಾತ್ರಿ ಬಗ್ಗೆ ,ಸೇರುವ ಜನರು, ನಮ್ಮ ಸೇವೆಗಳು, ಅವುಗಳ ಸಮಯ, ದೇವರ ಮಹಿಮೆ, ಖ್ಯಾತಿ ಮುಂತಾದವುಗಳನ್ನು ತಿಳಿಸಿದೆವು.ನಾವು ಉತ್ಸಾಹ ದಿಂದ ಹೇಳುವುದನ್ನು ಕೇಳಿ ಸಂತೋಷಿಸಿದ್ದಲ್ಲದೆ ಇನ್ನೂ ವಿವರಗಳನ್ನು ಕೇಳಿ ತಿಳಿದಿದ್ದು ನಮಗಂತೂ ಹೆಚ್ಚಿನ ಸಂತೋಷ ತೃಪ್ತಿ ತಂದಿತು. ಅವರು ತಮ್ಮ ಆಪ್ತ ಕಾರ್ಯದರ್ಶಿ ಯನ್ನು ಕರೆದು ಎಲ್ಲಾ ಖರ್ಚುವೆಚ್ಚಗಳ ಅಂದಾಜು ಪಡೆದು ಅದನ್ನು ಪೂರ್ತಿಯಾಗಿ ಕೊಡಲು ತಿಳಿಸಿದ್ದು ನಮಗೆ ಖುಷಿ ತಂದಿದ್ದಲ್ಲದೆ ಇವರನ್ನು ಮೊದಲೇ ಭೇಟಿ ಮಾಡಬೇಕಿತ್ತು ಎಂದು ನೊಂದು ಕೊಂಡೆವು.ಎಲ್ಲಾ ವ್ಯವಸ್ಥೆ ಗಳನ್ನು ಅವರು ವಹಿಸಿ ಕೊಂಡಿದ್ದರಿಂದ ಬೇರೆ ಯಾರನ್ನೂ ಸಹಾಯಕ್ಕಾಗಿ ಯಾಚಿಸಲಿಲ್ಲ.
ಇನ್ನು ಒಳಗೆ ಹೋದ ಮೇಲೆ, ನಾವು ಹೇಳಲು ಸರಿಯಾಗಿ ತಯಾರಾಗಿದ್ದೇವೆಯೇ,ಏನು ಮಾತನಾಡಬೇಕು ಎಂಬ ಯೋಚನೆಯಲ್ಲಿದ್ದಾಗಲೇ ನಮಗೆ ಬರಲು ಕರೆ. ಆಪ್ತ ಕಾರ್ಯದರ್ಶಿಗಳ ದಯೆಯಿಂದ ಶೀಘ್ರವಾಗಿ ಮಹಾದಾನಿಗಳ ದರ್ಶನವಾಯಿತು . ಮೊದಲ ಭೇಟಿಯಲ್ಲೇ ನಮ್ಮ ಶಿವರಾತ್ರಿ ಬಗ್ಗೆ ,ಸೇರುವ ಜನರು, ನಮ್ಮ ಸೇವೆಗಳು, ಅವುಗಳ ಸಮಯ, ದೇವರ ಮಹಿಮೆ, ಖ್ಯಾತಿ ಮುಂತಾದವುಗಳನ್ನು ತಿಳಿಸಿದೆವು.ನಾವು ಉತ್ಸಾಹ ದಿಂದ ಹೇಳುವುದನ್ನು ಕೇಳಿ ಸಂತೋಷಿಸಿದ್ದಲ್ಲದೆ ಇನ್ನೂ ವಿವರಗಳನ್ನು ಕೇಳಿ ತಿಳಿದಿದ್ದು ನಮಗಂತೂ ಹೆಚ್ಚಿನ ಸಂತೋಷ ತೃಪ್ತಿ ತಂದಿತು. ಅವರು ತಮ್ಮ ಆಪ್ತ ಕಾರ್ಯದರ್ಶಿ ಯನ್ನು ಕರೆದು ಎಲ್ಲಾ ಖರ್ಚುವೆಚ್ಚಗಳ ಅಂದಾಜು ಪಡೆದು ಅದನ್ನು ಪೂರ್ತಿಯಾಗಿ ಕೊಡಲು ತಿಳಿಸಿದ್ದು ನಮಗೆ ಖುಷಿ ತಂದಿದ್ದಲ್ಲದೆ ಇವರನ್ನು ಮೊದಲೇ ಭೇಟಿ ಮಾಡಬೇಕಿತ್ತು ಎಂದು ನೊಂದು ಕೊಂಡೆವು.ಎಲ್ಲಾ ವ್ಯವಸ್ಥೆ ಗಳನ್ನು ಅವರು ವಹಿಸಿ ಕೊಂಡಿದ್ದರಿಂದ ಬೇರೆ ಯಾರನ್ನೂ ಸಹಾಯಕ್ಕಾಗಿ ಯಾಚಿಸಲಿಲ್ಲ.
ಶಿವರಾತ್ರಿಯ ಹಿಂದಿನ ದಿನವೇ ಹತ್ತು ಸಾವಿರಕ್ಕೂ ಮೀರಿದ ಭಕ್ತಾದಿಗಳ ಸೇವೆಗೆ ಲಾರಿಗಳಲ್ಲಿ ಬಂದ ತರಕಾರಿಗಳು, ದಿನಸಿ ವಸ್ತುಗಳು,ತೈಲ ಪ್ಯಾಕೆಟ್ ಗಳು, ನಲವತ್ತು ಬಾಣಸಿಗರು ನಂದಿಬೆಟ್ಟವನ್ನು ತಲುಪಿದರು.ಮಹಾದಾನಿಗಳನ್ನು ಪರಿಚಯಿಸಿದವರ ಬಗ್ಗೆ ಹೆಮ್ಮೆ ಪಡುತ್ತಿರುವಾಗಲೇ ಹಲವಾರು ಕಾರುಗಳು, ಛಾಯಾಗ್ರಾಹಕರು, ವಿಡಿಯೋ, ಪತ್ರಕರ್ತರು ಮುಂತಾದವರು ದಾನಿಗಳ ಆಪ್ತ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಂದಿಳಿದರು.ಜೊತೆಗೇ ಅಪರಿಮಿತ ಹೂಗಳು,ತರಹಾವಾರಿ ಹೂವಿನ ಹಾರಗಳು ಹಣ್ಣು ಹಂಪಲುಗಳೂ ಬಂದಿಳಿದವು. ಅವರೇ ಎಲ್ಲಾ ಅತಿಥಿ ಗೃಹಗಳನ್ನು ಮುಂಗಡವಾಗಿ ಪಡೆದಿದ್ದರು.ವೈಭವೋಪೇತ ದುಬಾರಿ ಅತಿಥಿ ಗೃಹವೂ ಮಹಾದಾನಿಗಳಿಗೆ ಕಾದಿರಿಸಲಾಗಿದೆ ಎಂದು ಯಾರೋ ಹೇಳಿದ್ದು, ಸೂಕ್ತವಾದದ್ದೆ ಎಂದೆನಿಸಿತು.
ಬೆಳಗಿನ ಮೂರು ಘಂಟೆಗೇ ಅಡಿಗೆ ಪ್ರಾರಂಭ.ಎಲ್ಲೆಲ್ಲೂ ಅಡಿಗೆಯ ಪರಿಮಳ, ಜಾಗರಣೆ ಮಾಡುವವರೂ ಅಡಿಗೆ ಮನೆಯತ್ತ ತಿರುಗಿ ನೋಡುವಂತೆ ಮಾಡುತ್ತಿತ್ತು.ಹಿಂದಿನ ದಿನ ಮತ್ತು ರಾತ್ರಿ ಯೆಲ್ಲಾ ಉಪವಾಸ ಇರುವ ಭಕ್ತರಿಗೆ ಬೆಳಿಗ್ಗೆ ಎಂಟರಿಂದಲೇ ಆಹಾರದ ವಿತರಣೆ ಮಾಡಬೇಕೆಂದು ನಮ್ಮ ಯೋಚನೆ.
ಈ ಮಧ್ಯೆ ಹೆಚ್ಚಿನ ಅಗತ್ಯದ ಶಾಮಿಯಾನ, ಪಾತ್ರೆ ಪಡುಗಗಳು,ಊಟದ ಟೇಬಲ್, ಬಾಳೆಎಲೆಗಳು ಕೆಲವು ದಿನಸಿಗಳ ಬೇಡಿಕೆ ಯನ್ನು ಆಪ್ತ ಕಾರ್ಯದರ್ಶಿ ಗೆ ತಿಳಿಸಲಾಗಿ ನೀವೇ ಖರೀದಿಸಿ ರಸೀದಿಯನ್ನು ತಲುಪಿಸಿ,ಕೇಳಿ ಕೊಡಿಸೋಣ ಎಂದಿದ್ದು ಸಮಾಧಾನವಾಯಿತು.ಆದರೆ ಎಂದೂ ಸಾಲದ ಮೇಲೆ ಯಾವುದೇ ವಸ್ತುವನ್ನು ಈ ಸಾರ್ವಜನಿಕ ಕೆಲಸಕ್ಕೆ ತರದ ನಮಗೆ ಕೊಡುವವರಾರು. ಪಾತ್ರೆ ಶಾಮಿಯಾನ ಬಿಟ್ಟರೆ ಉಳಿದ ವ್ಯವಹಾರಸ್ಥರು ,ಚಿಕ್ಕ ವ್ಯವಹಾರಗಳನ್ನು ನಡೆಸುವವರು.ಅವರು ಸಾಲ ಕೊಟ್ಟು ಸುಧಾರಿಸಿ ಕೊಳ್ಳುವವರಲ್ಲ.ಆದರೆ ಆಗುತ್ತಿರುವ ವ್ಯವಹಾರ ಹೆಚ್ಚಿನ ಬೆಲೆಯದು. ಆದ್ದರಿಂದ ಸಮಿತಿಯ ಹಿರಿಯ ಸದಸ್ಯರ ಭರವಸೆಯನ್ವಯ ವರ್ತಕರು ಅನುಮಾನಿಸುತ್ತಲೇ ಬೇಕಾದ ವಸ್ತುಗಳನ್ನು ನೀಡಿದರು.ಆ ಹಣದ ವ್ಯವಸ್ಥೆ ನಮ್ಮ ಜವಾಬ್ದಾರಿಯಾಯಿತು.
ಊಟದ ವಿತರಣೆ ಯ ಉದ್ಘಾಟನೆಯನ್ನು ಮಹಾದಾನಿಗಳಿಂದ ಪ್ರಾರಂಭಿಸಿದಲ್ಲಿ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ, ಮುಂದಿನ ವರ್ಷಕ್ಕೂ ಅವರಿಂದ ಸಹಾಯ ಪಡೆಯುವ ವ್ಯಾವಹಾರಿಕ ಯೋಚನೆ ನಮ್ಮ ಅಧ್ಯಕ್ಷರದು.ಅವರನ್ನು ಆಹ್ವಾನಿಸಲು ಸೂಕ್ತ ಪರಿಕರಗಳಾದ ಹಣ್ಣು ಹೂವಿನ ಹಾರದ ಸಹಿತ ಸಮಿತಿಯವರು ದಾನಿಗಳ ಅತಿಥಿ ಗೃಹ ಸೇರಿದೆವು.ಅಲ್ಲಿ ಸಾಕಷ್ಟು ಸಂಖ್ಯೆಯ ಪರಿವಾರ.ಆಪ್ತ ಕಾರ್ಯದರ್ಶಿಯವರ ಆದೇಶದನ್ವಯ ಕುಳಿತೆವು. ದಾನಿಗಳು ಸ್ನಾನದ ಮನೆಯಲ್ಲಿ ಸೇರಿ ಒಂದು ಘಂಟೆಯಾಯಿತು.ಹೊರ ಬರುವ ಸೂಚನೆ ಇಲ್ಲ.ಆಗಲೇ ಘಂಟೆ ಎಂಟೂವರೆ.ಈ ಹೊತ್ತಿಗೆ ಊಟ ಪ್ರಾರಂಭ ವಾಗಬೇಕಿತ್ತು.ಆತಂಕದಿಂದ ಕಾದು ಕುಳಿತೆವು. ಒಂದೂವರೆ ಘಂಟೆಯ ಅಭ್ಯಂಜನದ ನಂತರ ಮಹಾದಾನಿ ಪ್ರತ್ಯಕ್ಷರಾದರು. ಅಜಾನುಬಾಹು , ಆಕರ್ಷಕ ರೂಪ, ಅಷ್ಟ ಬೆರಳಿಗೂ ಹರಳಿನ ಚಿನ್ನದ ಉಂಗುರ,ಕೈಗಡಗ,ವಜ್ರದ ಕಿವಿಯೋಲೆಗಳು, ಸುಗಂಧಸಾರುವ ರೇಶ್ಮೆ ಶ್ವೇತ ವಸ್ತ್ರಗಳು.ಗಾಂಭೀರ್ಯದಿಂದ ನಮ್ಮತ್ತ ಬಿದ್ದ ಅವರ ನೋಟ ನಮಗೆ ಪಾವನವೆನಿಸಿತು.
ಅವರು ನಮ್ಮ ಉದ್ಘಾಟನೆಯ ಪ್ರಾರ್ಥನೆಗೆ ಓಗೊಟ್ಟು ನಮ್ಮತ್ತ ಹೆಜ್ಜೆ ಹಾಕುತ್ತಾ ಮೊದಲು ದೇವರ ದರ್ಶನ ಮುಗಿಸೋಣ ಎಂದಿದ್ದು,ತಡವಾಗಿತ್ತಾದರೂ ನಾವು ಇಲ್ಲದ ಮನಸ್ಸಿನಿಂದ ಅವರೊಂದಿಗೆ ಹೊರಟೆವು.ತಮ್ಮದೇ ವಿಶೇಷ ಬ್ಯಾಡ್ಜ್ ಧರಿಸಿದ, ದೊಡ್ಡ ಪರಿವಾರದ ನೇತೃತ್ವದಲ್ಲಿ ಹೊರಟ ದಾನಿಯ ಎಲ್ಲಾ ಹೆಜ್ಜೆಗಳೂ ಅವರೇ ಕರೆತಂದ ಛಾಯಾಗ್ರಾಹಕನಿಗೆ ಪ್ರಮುಖವೇ.ವಿಡಿಯೋಗ್ರಾಹಕನಿಗೆ ಪ್ರತಿ ಚಲನೆಯೂ ಸಂಗ್ರಹಾರ್ಹವೇ.ಈಶ್ವರ ದರ್ಶನ ಮೊದಲು.ಅರ್ಚಕನಿಗೂ ಮಹಾದಾನಿಯ ಆಕರ್ಷಣೆ. ಇನ್ನಿಲ್ಲದ ವಿವರಣೆಗಳ ಪೂಜೆ.ಮನೆ ಮಂದಿಯ ಜೊತೆಗೆ ದಾನಿಯ ವಂದಿಮಾಗಧರಿಗೂ ಸಂಕಲ್ಪ ಪೂಜೆಗಳು.ನಮಗೋ ಕ್ಷಣಕ್ಷಣಕ್ಕೂ ಭಕ್ತಾದಿಗಳಿಗೆ ತಡವಾಗುವುದೆಂಬ ಆತಂಕ.ಈ ಮಧ್ಯೆ ಆರತಿ ತಟ್ಟೆ ಬಂದಿತು.ಅಂದಿನ ಹೊಸ ಸಾವಿರದ ಗರಿ ನೋಟು ತಟ್ಟೆಯಲ್ಲಿ ಬಿದ್ದುದ ಕಂಡು ಅರ್ಚಕ ರಿಗೆ ಸ್ಥಳ ಪುರಾಣದ ಕಥೆಗಳು ಜೊತೆಗೇ ದೇವಾಲಯದಲ್ಲಿ ಆಗಬೇಕು ಎನಿಸುವ ಕೆಲಸಗಳು ಹಠಾತ್ತಾಗಿ ನೆನಪಿಗೆ ಬಂದಿತು. ಅವೆಲ್ಲವನ್ನೂ ದಾನಿಗೆ ವಿವರಿಸಿ ಬೇಡಿಕೆ ಯನ್ನಿಟ್ಟು ಹೊರಡುವ ವೇಳೆಗೆ ಸಮಯ ಹನ್ನೊಂದು. ಇನ್ನು ಪಾರ್ವತಿಗೆ ಪೂಜೆ.ನಮ್ಮ ಆತುರ ಆತಂಕ ಗಳು ಸ್ವಲ್ಪ ಬೇಗನೇ ದಾನಿಯನ್ನು ಹೊರಡಿಸಿದ್ದು ಅಲ್ಲಿನ ಅರ್ಚಕರ ಕೆಂಗಣ್ಣಿಗೆ ಗುರಿಮಾಡಿದವು.
ಅಂತೂ ಆಹಾರ ವಿತರಣೆ ಯ ಉದ್ಘಾಟನೆಯನ್ನು ಹಾರತುರಾಯಿಗಳನ್ನು ಸ್ವೀಕರಿಸಿ ಇಪ್ಪತ್ತೈದು ಜನರ ತಟ್ಟೆಗೆ ದಾನಿಗಳಿಂದ ಬಡಿಸುವುದರ ಮೂಲಕ ವಿಜ್ರಂಭಣೆಯಿಂದ ನಡೆಯಿತು.ಈ ಮಧ್ಯೆ ಅವರ ಪರಿವಾರದವರಿಂದ ಅವರೇ ತಂದ ಹಾರಗಳ ಸಮರ್ಪಣೆ. ಯಾವ ಕ್ರಿಯೆಗಳೂ ಛಾಯಾಗ್ರಾಹಕರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮುಂದಿನ ಭಕ್ತಾಧಿಗಳಿಗೆ ನಮ್ಮ ಸಮಿತಿಯ ಬ್ಯಾಡ್ಜ್ ನಲ್ಲಿ ಮುಂದುವರಿದ ಊಟೋಪಚಾರ.ಮಧ್ಯಾಹ್ನ ಒಂದು ಘಂಟೆಗೆ ವಾಪಸ್ ಹೊರಟ ದಾನಿಗಳಿಗೆ ಅಭೂತ ಪೂರ್ವ ಬೀಳ್ಕೊಡುಗೆ ಮುಗಿಯಿತು.ಹೊರಡುವ ಮೊದಲು ಇನ್ನೊಮ್ಮೆ ಉಳಿಕೆ ಬಿಲ್ಲಿನ ಬಾಕಿ ತಿಳಿಸಲಾಯಿತು.
ಈಗಾಗಲೇ ತಿಳಿಸಿದಂತೆ ಮರುದಿನ ಹೋದೆವು. ಆ ಮಹಾದಾನಿಗೆ ಬಹಳ ಕೆಲಸವಿದ್ದದರಿಂದ ಅವರೊಂದಿಗೆ ಭೇಟಿಗೆ ಅವಕಾಶ ಆಗಲಿಲ್ಲ.ಮರುದಿನ ಹೋದಾಗ ಅವರು ಆಂಧ್ರಪ್ರದೇಶದಲ್ಲಿಯ ಯಾವುದೋ ದೇವರ ವಿಶೇಷ ಸೇವೆಗೆ ಹೋಗಿದ್ದರು.ಅವರು ಬರುವ ವರೆಗೂ ಏನೂ ಮಾಡಲಾಗುವುದಿಲ್ಲ ಎಂಬ ಆಪ್ತ ಕಾರ್ಯದರ್ಶಿಯ ವಾಣಿ. ಬಂದ ಮೇಲೆ ವಿಷಯ ತಿಳಿಸಿ ಹಣ ಕೊಡಿಸಲು ಅವರಿಗೇ ನಮ್ಮ ಮನವಿ. ನಂತರ ಮೂರು ದಿನದ ಬಳಿಕ ಹೋದ ನಮಗೆ ಬಂದ ಉತ್ತರ ಕೇಳಿ ನಮ್ಮ ಜಂಘಾಬಲವೇ ಉಡುಗಿತು.ನಮ್ಮ ಕಾರ್ಯಕ್ರಮ ದಲ್ಲಿ ನಾವು ನಮ್ಮ ಬ್ಯಾಡ್ಜ್ ಹಾಕಿಕೊಂಡಿದ್ದು ಅವರಿಗೆ ಮುಜುಗರ ಉಂಟಾಗಿ ಬಹಳ ಬೇಸರವಾಯಿತಂತೆ. ಆದ್ದರಿಂದ ಒಂದು ಪೈಸೆಯನ್ನೂ ಕೊಡಬೇಡಿ,ಮುಂದೆ ಏನಾದರೂ ಸಹಾಯ ಕೇಳಿದರೆ ವಾಪಸ್ ಕಳಿಸಿ ಎಂಬ ಅವರ ಆದೇಶದ ಪಾಲನೆಯನ್ನು ಸರಿಯಾಗಿ ಪಾಲಿಸಿದ ಅವರ ಸಿಬ್ಬಂದಿ ವರ್ಗ ನಮ್ಮನ್ನು ಅವರ ಕಡೆ ತಿರುಗಿ ನೋಡದಂತೆ ಮಾಡಿತು.
ಅದಿರಲಿ ಈಗ ಬಾಕಿ ಇರುವ ಬಿಲ್ಲು, ವಾರ ಕಳೆಯುತ್ತಿರುವುರಿಂದ ಲೆಕ್ಕ ಪಕ್ಕಾ ಇಲ್ಲವೆಂದು ಅಲ್ಲಿಯ ಜನರೆಲ್ಲರೂ ಆಡಿಕೊಳ್ಳುವಂತೆ ಮಾಡಿತ್ತು. ಯಾರನ್ನು ಹಣ ಕೇಳುವುದು.ಸಮಿತಿಯಲ್ಲಿರುವ ನಾವುಗಳು ಅಲ್ಲಿ ಇಲ್ಲಿ ಸಾಲ ಮಾಡಿ ಬಾಕಿ ಇದ್ದ ಹಣ ಒಂದೂವರೆ ಲಕ್ಷ ರೂಪಾಯಿ ತೀರಿಸಿದೆವು.ಇಂತಹ ವಿಷಯ ಗಳನ್ನು ಹೇಳಿದರೆ ಪ್ರಚಾರ ವಾಗುತ್ತದೆ ಅಷ್ಟೇ, ಹೊರತು ಪರಿಹಾರ ವಾಗುವುದಿಲ್ಲ .ಅಂತೂ ಅದೊಂದು ಮರೆಯಲಾಗದ ಶಿವರಾತ್ರಿ.ನೆನೆಸಿಕೊಂಡರೆ ಈಗಲೂ ಜಾಗರಣೆ .
ನಮ್ಮ ಶಿವರಾತ್ರಿ ಆಚರಣೆಯ ವಿವರ ಆಂಧ್ರಪ್ರದೇಶ ದ ಪತ್ರಿಕೆಯಲ್ಲಿ ಎರಡು ಪುಟ ಗಳಲ್ಲಿ ಪ್ರಕಟವಾಗಿದ್ದಾಗಿ ಪರಿಚಯದ ಒಬ್ಬರಿಂದ ತಿಳಿಯಿತು. ಪತ್ರಿಕೆ ತರಿಸಿ ನೋಡಿದಾಗ ಮಹಾದಾನಿಯ ವಿವಿಧ ಭಂಗಿಗಳ ಸಹಿತ ನಮ್ಮ ಶಿವರಾತ್ರಿ ಯನ್ನು ನೋಡಬಹುದಾಗಿತ್ತು. ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡಿದರೆ ಮಹಾದಾನಿಗಳು ಎಂದು ನಾವು ಚರ್ಚಿಸುವಾಗ ಆ ಮಹಾನುಭಾವ ಭೂಮಿ ವ್ಯವಹಾರಗಳಲ್ಲಿ ಭಿನ್ನಾಭಿಪ್ರಾಯ ವೇರ್ಪಟ್ಟು ಆಕಸ್ಮಿಕ ವಾಗಿ ಪ್ರಾಣ ಕಳೆದುಕೊಂಡರು ಎಂದು ತಿಳಿದು ಬೇಸರವೂ ಆಯಿತು.ಇದು ಶಿವರಾತ್ರಿ ಬಂದಾಗ ನೆನಪಿಗೆ ಬರುವ ಕರಾಳ ನೆನಪೊಂದು.
(ಮಿತ್ರ ನಂಜಪ್ಪನವರ ಅನುಮತಿ ಪಡೆದು ಬರೆದು ಪ್ರಕಾಶಿಸಿದ ಲೇಖನ)
Comments
Post a Comment