Skip to main content

ಹೊಸ ಭೂಸುಧಾರಣೆ

ನಮ್ಮ ಭಾರತ ಹಳ್ಳಿಗಳ ದೇಶ. ಇಲ್ಲಿಯ ದೊರೆ ರೈತ  ಭಾರತದ ಬೆನ್ನೆಲುಬು.

ಮೇಲಿನ ವಾಕ್ಯದ್ವಯ  ಕೇಳುವುದಕ್ಕೆ ಏನೋ ಚೆನ್ನಾಗಿದೆ. ಆದರೆ ನಮ್ಮ ದೇಶದಲ್ಲಿ ರೈತನ ಬದುಕು ನಿಜವಾಗಿಯೂ ಶೋಚನೀಯ. ಹೆಚ್ಚಿನ ಕೃಷಿ ಜಮೀನುಗಳು ಮಳೆ ಆಧಾರಿತ. ಸಕಾಲಕ್ಕೆ ಮಳೆ ಬಂದು ಉತ್ತಮ ಬೆಳೆ ಬಂದಾಗ ಅದರ ದರ ಸೂಕ್ತವಾಗಿರುವುದಿಲ್ಲ. ಬೆಳೆ ಹೆಚ್ಚಾದಾಗ ದರ ಕಡಿಮೆಯಾಗುವುದು ಸಹಜವಾದರೂ ಬೆಳೆಯಲು ಆದ ಖರ್ಚನ್ನೂ ಪಡೆಯಲಾಗದ ಪರಿಸ್ಥಿತಿ. ಎಪಿಎಂಸಿ ಎಂಬ (ರೈತರಿಗೆ ಬೆಂಬಲವಾಗಿ ಕಾರ್ಯ ನಿರ್ವಹಿಸಬೇಕಾದ) ಸಂಸ್ಥೆಯಿದ್ದರೂ ಅದರಿಂದ ಉತ್ತಮ ಬೆಲೆ ಪಡೆಯುವುದಾಗಲಿ ಅಥವಾ ಬೆಳೆದ ಬೆಳೆಯನ್ನು ಪೂರ್ತಿಯಾಗಿ ಮಾರಲು ಆಗಲಿ ಅನುಕೂಲವಾಗುತ್ತಿಲ್ಲ. ಹೆಚ್ಚು ಜನರು ಒಂದೇ ಬೆಳೆಯನ್ನು ಬೆಳೆಯುವುದರಿಂದ ಎಲ್ಲಾ ಬೆಳೆಯೂ ಒಮ್ಮೆಯೇ ಕೊಯ್ಲಿಗೆ ಬರುತ್ತದೆ. ಕೃಷಿ ಕೆಲಸಗಳು ಏಕ ಕಾಲಕ್ಕೆ ಎಲ್ಲಾ ಜಮೀನಿನಲ್ಲಿಯೂ ಮಾಡಬೇಕಾಗಿರುವುದರಿಂದ ಆ ಸಮಯದಲ್ಲಿ ಕೃಷಿಕಾರ್ಮಿಕರು ದೊರೆಯುವುದಿಲ್ಲ. ಹಲವು ಬಾರಿ ಬಿತ್ತನೆ ಮಾಡುವಷ್ಟು ಆರ್ಥಿಕ ಅನುಕೂಲತೆ ಇಲ್ಲವಾಗಿ ಜಮೀನನ್ನು ಬೀಳು ಬಿಡಬೇಕಾಗುತ್ತದೆ. ಇಂತಹ ಕಷ್ಟಗಳನ್ನು ನೆನೆದು ತಮ್ಮ ಮಕ್ಕಳಿಗೆ ನಗರದಲ್ಲಿ ಉತ್ತಮ ಉದ್ಯೋಗ ಸಿಗಲಿ ಎಂಬ ಭಾವನೆಯಿಂದ ಮಕ್ಕಳನ್ನು ವ್ಯವಸಾಯಕ್ಕೆ ಬದಲು ಕಾಲೇಜು ಓದಿಗೆ ಹಚ್ಚುವ ಪರಿಪಾಠ ಬೆಳೆದಿದೆ. ಆದರೆನು, ಓದಿದ ಮಕ್ಕಳಿಗೆ ಎಲ್ಲರಿಗೂ ಕೆಲಸ ದೊರೆಯುವುದಿಲ್ಲ. ಆ ಮಕ್ಕಳು ಕೃಷಿ ಕೆಲಸಕ್ಕೆ ಸಹಾಯ ಮಾಡುವುದೂ ಇಲ್ಲ. ಇತ್ತ  ಉದ್ಯೋಗವೂ ಇಲ್ಲ. ಇದು ಹೆಚ್ಚಿನ ರೈತರ ಕುಟುಂಬದ ಪ್ರಚಲಿತ ಸಮಸ್ಯೆ.

ಕಳೆದ ಶತಮಾನದ ಪ್ರಾರಂಭದ ದಿನಗಳಲ್ಲಿ ಇದ್ದ ಒಟ್ಟು ಭೂಮಿಯನ್ನು ರಾಜರ ಕಾಲದಲ್ಲಿ ದಯಪಾಲಿಸಿದ್ದ ಇನಾಂತಿ ಜಮೀನು ಮತ್ತು ಭೂಮಾಲಿಕತ್ವದ ಅಥವಾ ಜಮೀನುದಾರರ ಜಮೀನು ಎಂದು ವಿಂಗಡಿಸಲಾಗಿತ್ತು. ಅಂತಹ ಕೃಷಿ ಭೂಮಿಯಲ್ಲಿ ಭೂಮಾಲೀಕರೊಂದಿಗೆ ಒಮ್ಮೆ ನಡೆದ ಒಪ್ಪಂದದಂತೆ ವಂಶಪಾರಂಪರ್ಯವಾಗಿ ಕೆಲಸ ಮಾಡುತ್ತಿದ್ದರು. ಈ ರೀತಿ ಕೃಷಿ ಮಾಡುವ ಕಾರ್ಮಿಕರನ್ನು ಗೇಣಿದಾರ ಎಂದು ಕರೆಯುತ್ತಿದ್ದರು.

ಈ ರೈತರು ಬೆಳೆದ ಬೆಳೆಯು  ಕೃಷಿ ಭೂಮಿಯ ವಿಸ್ತಾರಕ್ಕೆ ಅನುಗುಣವಾಗಿ ಭೂಮಾಲೀಕರೊಂದಿಗೆ ಹಂಚಿಕೆಯಾಗುತ್ತಿತ್ತು. ಹೀಗೆ ನಡೆಯುತ್ತಿದ್ದ ಹಂಚಿಕೆಯಲ್ಲಿ ಸಾಮಾನ್ಯವಾಗಿ ಭಿನ್ನಾಭಿಪ್ರಾಯವಾಗುತ್ತಿತ್ತು. ಕೃಷಿ ಕೆಲಸ ಮಾಡಿಯೂ ಅವನಿಗೆ ಬರುವ ಪಾಲು ಕಡಿಮೆಯಾಗುತ್ತಿತ್ತು ಇಂತಹಾ ಭೂಲೀಕರ ದಬ್ಬಾಳಿಕೆಯನ್ನು ಪರಿಗಣಿಸಿ ರೈತನ ಹಿತದೃಷ್ಟಿಯಿಂದ ಉಳುವವನೇ ಹೊಲದೊಡೆಯ ಎಂದು ಕರೆದು ಆ ಭೂಮಿಯನ್ನು ಅವನಿಗೇಕೊಡಬೇಕು ಎಂಬ ಬೇಡಿಕೆ ಪ್ರಾರಂಭದಿಂದಲೂ ಇತ್ತು. ಹಾಗೆ ನೋಡಿದರೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ರಚನೆಯ ಸಮಯದಲ್ಲಿ ರಾಷ್ಟ್ರದಲ್ಲಿನ ಸಮಗ್ರ ಕೃಷಿ ಜಮೀನು ದೇಶದ ಆಸ್ತಿಯಾಗಿದ್ದು ಅದನ್ನು ಕೃಷಿ ಕೆಲಸಗಾರರಿಗೆ ಮತ್ತು ಕೃಷಿ ಉದ್ದೇಶಕ್ಕೆ ಮಾತ್ರ ಕೊಡ ಮಾಡಬೇಕು. ಹಾಗೇನಾದರೂ ಕೃಷಿ ಮಾಡದಿದ್ದಲ್ಲಿ ಅದನ್ನು ಅವನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಸಂವಿಧಾನದಲ್ಲಿ ಸೇರಿಸಲು ಯೋಚಿಸಿದ್ದರಂತೆ. ಆ ಸಲಹೆ ರೈತರ ಪರವಾಗಿ ಇದ್ದುದರಿಂದ ಮತ್ತು ಅಂದಿನ ಹೆಚ್ಚಿನ ರಾಜಕೀಯ ನಾಯಕರು ಭೂಮಾಲೀಕರೇ ಆದ್ದರಿಂದ ಒಪ್ಪಿಗೆಯಾಗಲಿಲ್ಲ. ಇದರಿಂದಾಗಿ ಈ ಅಂಶವನ್ನು ಸಂವಿಧಾನದಲ್ಲಿ ಸೇರಿಸಲಾಗಲಿಲ್ಲ.

ಸ್ವಾತಂತ್ರ್ಯದ ನಂತರ ಈ ಭೂ ಮಾಲಿಕತ್ವದ ಬಗ್ಗೆ ಚರ್ಚೆ ಗಂಭೀರವಾಗಿ ಮುನ್ನೆಲೆಗೆ ಬಂದಿತು. ಹಲವು ರಾಜ್ಯಗಳಲ್ಲಿ ಸುಧಾರಿತ ಭೂಸುಧಾರಣೆ ಕಾನೂನು ಜಾರಿಗೂ ಬಂದಿತು. ಜೊತೆಗೆ ಹೆಚ್ಚಿನ ಸಂಖ್ಯೆಯ ಭೂಮಾಲೀಕರ ರೈತರ ಭಿನ್ನಾಭಿಪ್ರಾಯಗಳಿಂದ ಭೂ ವ್ಯಾಜ್ಯಗಳು ನ್ಯಾಯಾಲಯಗಳ ಮೆಟ್ಟಲೇರಿದವು. ಆಸ್ತಿಯ ಹಕ್ಕು ಮೂಲಭೂತ ಹಕ್ಕಾಗಿದ್ದು ಭೂಸುಧಾರಣಾ ಕಾನೂನಿನ ಅನ್ವಯ ಆ ಹಕ್ಕನ್ನು ಕಿತ್ತುಕೊಳ್ಳುವುದು ಸರಿಯಲ್ಲ ಎಂಬ ವಾದವೂ ನ್ಯಾಯಾಲಯದಲ್ಲಿ ಚರ್ಚಿತವಾಗುತ್ತಿತ್ತು. ಹಲವು ರಾಜ್ಯಗಳ ಬಲಿಷ್ಠ ಭೂಮಾಲಿಕರ ವಿರೋಧವು ರಾಜ್ಯಗಳಲ್ಲಿ ಸರ್ಕಾರಗಳನ್ನು ಇಕ್ಕಟ್ಟಿಗೆ ತಂದಿತು. ಆಗ ಕೇಂದ್ರ ಸರ್ಕಾರ ಕಾನೂನು ಹೋರಾಟಗಳನ್ನು ಕೊನೆಗೊಳಿಸುವ ದೃಷ್ಟಿಯಿಂದ ಇದಕ್ಕಾಗಿ ವಿಶೇಷ ಕಾನೂನನ್ನು ಹೊರತಂದಿತು. ಇದರಿಂದಾಗಿ ಇನಾಮ್ತಿ ಜಮೀನುದಾರರಿಗೆ ಒಮ್ಮೆಗೆ ಪರಿಹಾರ ಕೊಡುವುದರ ಮೂಲಕ ಅಂತಹ ಜಮೀನಿನ ಒಡೆತನ ಪೂರ್ತಿಯಾಗಿ ರದ್ದು ಮಾಡಿದರು. ಆಗ ರಾಜ್ಯಗಳ ಬಹಳಷ್ಟು ಶಾಸಕರು ಭೂ ಮಾಲಿಕರೇ ಆಗಿದ್ದರು. ಅವರ ಅಸಹಕಾರದಿಂದ ಭೂಸುಧಾರಣಾ ಕಾನೂನನ್ನು ಯಶಸ್ವಿಯಾಗಿ ಜಾರಿ ಮಾಡಲು ಸಾಧ್ಯವಾಗಲಿಲ್ಲ.

ಅದೇ ಸಮಯದಲ್ಲಿ ಆಚಾರ್ಯ ವಿನೋಬಾ ಭಾವೆ ರವರು ಭೂದಾನ ಚಳುವಳಿ ಎಂದರೆ ಜಮೀನು ಹೆಚ್ಚು ಉಳ್ಳವರು ತಮ್ಮ ವಿಶಾಲ ಮನೋಭಾವದಿಂದ  ಜಮೀನು ಇಲ್ಲದವರಿಗೆ ದಾನ ನೀಡಬೇಕು ಎಂದು ಒತ್ತಾಯಿಸಿ ಚಳುವಳಿಯನ್ನು ಆರಂಭಿಸಿದರು. ಇದು ಸ್ವಲ್ಪಮಟ್ಟಿಗೆ ಯಶಸ್ಸು ಕಂಡರೂ ಭೂಸುಧಾರಣೆಗೆ ವಿರೋಧ ಮುಂದುವರೆಯಿತು.

೧೯೬೦ರ ದಶಕದಲ್ಲಿ ಕರ್ನಾಟಕದಲ್ಲಿ ಗೇಣಿದಾರರ ಪರವಾಗಿ ಭೂ ಮಾಲೀಕರಿಂದ ಅನ್ಯಾಯವಾಗುತ್ತಿದೆ ಎಂಬ ಕೂಗು ಹೆಚ್ಚಾಗಿ, ಹಲವು ರಾಜಕೀಯ ನಾಯಕರ ನೇತೃತ್ವದಲ್ಲಿ ಚಳುವಳಿಯು  ಹೊರಹೊಮ್ಮಿತು. ರಾಜ್ಯದಾದ್ಯಂತ ಹರಡಿದ  ಪರಿಣಾಮಕಾರಿ ಚಳುವಳಿಗೆ ರೈತರ ಪರವಾಗಿಯೇ ಇದ್ದ ಅಂದಿನ ಸರ್ಕಾರ, ೧೯೭೪ರಲ್ಲಿ ಭೂಸುಧಾರಣಾ ಕಾನೂನನ್ನು ಜಾರಿಗೆ ತಂದಿತು. ರಾಜ್ಯದಲ್ಲಿ ಗೇಣಿದಾರ ಪದ್ಧತಿಯನ್ನು ಪೂರ್ತಿಯಾಗಿ ರದ್ದುಮಾಡಿ  ಉಳುವವನೇ ಹೊಲದೊಡೆಯ ಎಂದು ಘೋಷಿಸಿತಲ್ಲದೆ  ಜೊತೆಗೆ ಇದಕ್ಕೆ ಪೋಷಕವಾಗಿ ಹಲವು ಕಠಿಣ ಕಾನೂನುಗಳನ್ನು ಜಾರಿಗೆ ತಂದಿತು. ಇದರ ಅನ್ವಯ ಜಮೀನು ಮಾಲಕತ್ವದ ಪ್ರಮಾಣ, ಕೃಷಿ ಜಮೀನು ಕೃಷಿಗೇ ಬಳಕೆ, ಕೃಷಿಕರಲ್ಲದವರು ಜಮೀನು ಕೊಳ್ಳಲು ನಿಷೇಧ, ಮಠಗಳು, ಟ್ರಸ್ಟ್ ಅಥವಾ ಕಂಪನಿಗಳು ಕೃಷಿ ಜಮೀನನ್ನು ಕೊಳ್ಳುವುದರ ನಿಷೇಧ, ಕೃಷಿ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡದಂತೆ ನಿಷೇಧ  ಹೀಗೆ ಹಲವು ನಿಬಂಧನೆಗಳನ್ನು ಹೇರಿ ಕಡ್ಡಾಯ ಕಾನೂನನ್ನು ಮಾಡಲಾಯಿತು. ಕೆಲವು ರೈತರು ಹೊಂದಬಹುದಾದ ಪ್ರಮಾಣಕ್ಕಿಂತ ಹೆಚ್ಚಿನ ಜಮೀನನ್ನು ಹೊಂದಿದ್ದರು. ಅದನ್ನು ರೈತರಿಗೆ, ದಲಿತರಿಗೆ ಕೊಡಿಸಲಾಯಿತು. ಅಲ್ಲದೆ ಆ ದಲಿತರ ಜಮೀನನ್ನು ಯಾರೂ ಕೊಳ್ಳದಂತೆ ಕಾನೂನು ಮಾಡಲಾಯಿತು.

ನಂತರದ ದಿನಗಳಲ್ಲಿ ನಿಧಾನವಾಗಿ ಹಣವಂತರು ಸಂಬಂಧಿಸಿದ ಅಧಿಕಾರಿಗಳನ್ನು, ಅಧಿಕಾರದಲ್ಲಿಇದ್ದ ನಾಯಕರನ್ನು ಭ್ರಷ್ಟಗೊಳಿಸುವ ಮೂಲಕ  ಕೃಷಿಭೂಮಿಯನ್ನು ಖರೀದಿಸುತ್ತಲೇ ಇದ್ದಾರೆ . ಇರತಕ್ಕ ಕಾನೂನುಗಳನ್ನು ಅಧಿಕಾರಿಗಳು ಜನಗಳಿಗೆ ತೊಂದರೆ ಮಾಡಲು ಬಳಸುತ್ತಿದ್ದಾರೆಯೇ ಹೊರತು ಭೂಸುಧಾರಣಾ ಕಾನೂನಿನ ಧ್ಯೇಯವನ್ನು ಪೂರೈಸುತ್ತಿಲ್ಲ.

ಬದಲಾದ ದಿನದಲ್ಲಿ ಕೃಷಿ ಮಾಡದೆ ಜಮೀನು ಬಿಟ್ಟಿರುವುದು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು, ಪುರಾತನ ಕೃಷಿ ಪದ್ಧತಿಯನ್ನೇ  ಅನುಸರಿಸುತ್ತಿರುವುದು, ಕೃಷಿ ಕೆಲಸಕ್ಕೆ ಕೂಲಿಯಾಳುಗಳು ಸಿಗದಿರುವುದು ಇತ್ಯಾದಿ ವಿಷಯಗಳನ್ನು ಕಾರಣವಾಗಿಟ್ಟುಕೊಂಡು ಸರ್ಕಾರವು ಭೂಮಿಯ ಪೂರ್ತಿ ಸದುಪಯೋಗ ಮಾಡಿಕೊಳ್ಳಲು ಭೂಸುಧಾರಣಾ ಕಾನೂನನ್ನು ಪುನರ್ವಿಮರ್ಶೆಗೆ ಒಳಪಡಿಸುತ್ತಿದೆ. ಹೊಸ  ಕಾನೂನಿನನ್ವಯ ಯಾರು ಬೇಕಾದರೂ ಜಮೀನು ಕೊಳ್ಳಬಹುದು. ಕೃಷಿ ಚಟುವಟಿಕೆಗಳನ್ನು ಮಾಡಬಹುದು.ಇದರಿಂದ ಜಮೀನು ಕೊಂಡವರು ಹಣ ಉಳ್ಳವರೇ  ಆಗಿರುವುದರಿಂದ ಹೊಸ ತಂತ್ರ ಜ್ಞಾನ ಬಳಸಿ ಹೆಚ್ಚು ಬೆಳೆ ಬೆಳೆದು ದೇಶದ ಧಾನ್ಯ ಸಂಪತ್ತು ಹೆಚ್ಚಿಸ ಬಹುದು, ರಪ್ತು ಮಾಡಲೂ ಬಹುದು.ಹೆಚ್ಚು ಕಾರ್ಮಿಕರಿಗೆ ದುಡಿಮೆ ಮಾಡಲು ಅವಕಾಶ. ಹೆಚ್ಚು ಜನರು ಕೃಷಿ ಕೆಲಸಕ್ಕೆ ಆಸಕ್ತಿ ಕೊಡಬಹುದು. ಸ್ಪರ್ಧಾತ್ಮಕ ಬೆಲೆ ಸಿಗುತ್ತದೆ. ಕೃಷಿ ರಹಿತ ಅಥವಾ ಬರಡು ಬಿಡುವ ಜಮೀನು ಕಡಿಮೆಯಾಗುತ್ತದೆ ಇತ್ಯಾದಿ ಆಶಯಗಳು ಸರ್ಕಾರಕ್ಕಿವೆ.

ಆದರೆ ಇದರಿಂದ ಹಲವು ದುಷ್ಪರಿಣಾಮದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈಗಾಗಲೇ ಆರ್ಥಿಕವಾಗಿ ದುರ್ಬಲನಾದ ರೈತ ತಕ್ಷಣದ ಅಗತ್ಯಕ್ಕೆ ಇರುವ ಭೂಮಿಯನ್ನು ತತ್ಕಾಲದ ಅಗತ್ಯಕ್ಕಾಗಿ ಮಾರಿ ಮುಂದಿನ ದಿನಗಳಲ್ಲಿ ತಮ್ಮ ಜಮೀನಿನಲ್ಲಿಯೇ ಕೆಲಸ ಮಾಡಬೇಕಾಗಬಹುದು. ಹೊಸ ರೈತನ ಕೃಷಿ ವಿಧಾನ, ಯಂತ್ರೋಪಕರಣಗಳ ಬಳಕೆಯ ಜೊತೆ ಉಳಿದ ಹಳೆಯ ರೈತರು ಪೈಪೋಟಿ ಮಾಡಲಾಗದ ಸ್ಥಿತಿಯಿಂದ ನಿಧಾನವಾಗಿ ಅವನೂ ಅವರುಗಳೂ ತಮ್ಮ ಜಮೀನುಗಳನ್ನು ಮಾರಬೇಕಾಗುತ್ತದೆ. ಕೈಗಾರಿಕೋದ್ಯಮಗಳು, ಬಹುರಾಷ್ಟ್ರೀಯ ಕಂಪನಿಗಳು, ಅತಿ ಶ್ರೀಮಂತರು ಕೃಷಿ ಜಮೀನು ಕೊಂಡು ಕೈಗಾರಿಕೆಗಳು, ಫಾರಂ ಹೌಸ್, ರಿಸಾರ್ಟ್ ಇತ್ಯಾದಿ  ಕೃಷಿಯೇತರ ಬಳಕೆ ಮಾಡಬಹುದು. ಇದರಿಂದ ಇತ್ತ ಹೇಗೋ ಬೆಳೆ ಬೆಳೆಯುತ್ತಿದ್ದ ಕೃಷಿಕನಿಗೆ ಕೆಲಸವೂ ಇಲ್ಲ, ಅತ್ತ  ಬೆಳೆಯೂ ಇಲ್ಲ.

ಈ ಥರಹದ ಸಂಶಯ, ಅನುಮಾನಗಳು ತಲೆದೋರಿದ್ದು ಹೊಸ ಕಾನೂನಿಗೆ ವಿರೋಧ ವ್ಯಕ್ತವಾಗುತ್ತಿದೆ.  

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ  ಪ್ರತಿಯೊಂದು ಹೊಸ ಕಾನೂನು ಬೆಳೆಯುವವರ ಮೇಲೆ, ಕೃಷಿ ಉತ್ಪನ್ನದ ಮೇಲೆ ಅವಶ್ಯವಾಗಿ ಪರಿಣಾಮ ಬೀರುತ್ತದೆ . ಹೀಗಾಗಿ ಭೂಸುಧಾರಣಾ ಕಾನೂನಿಂದ ಕೃಷಿ ಸಂಪನ್ಮೂಲಗಳಿಗೆ ನಷ್ಟವಾಗುವ ಸಾಧ್ಯತೆ ತಡೆಯಲು ಕೃಷಿ ಜಮೀನನ್ನು  ಕೊಳ್ಳುವವರು ಅದೇ ಉದ್ದೇಶಕ್ಕೆ ಬಳಸಬೇಕೆಂಬ ಕಠಿಣ ಕಾನೂನನ್ನು ಜಾರಿ ಮಾಡಬೇಕಾದುದು  ಅನಿವಾರ್ಯ.

Comments

  1. ಭೂಸುಧಾರಣೆ ವಿಚಾರ ಚೆನ್ನಾಗಿ ಮೂಡಿದೆ

    ReplyDelete
  2. ಎಲ್ಲ ಆಯಾಮ ಗಳಲ್ಲೂ ಕೂಲಂಕುಶವಾಗಿ ವಿಶ್ಲೇಷಿಸಿ ಬರೆದ ವಿಸ್ತ್ರತ ಲೇಖನ. ಬಹಳ ಉತ್ತಮ. ವಾಗಿದೆ..

    ReplyDelete
  3. ಕೃಷಿ ಕ್ಷೇತ್ರದ ಸಮಸ್ಯೆಗಳು, ಅವುಗಳ ನಿವಾರಣೆಗೆ ಉಪಾಯಗಳು, ಕಾಯ್ದೆಗಳ ಅವಶ್ಯಕತೆಗಳ ವಿಚಾರ, ವಿವರಣೆಗಳು ಸೂಕ್ತ ವೇನೋ ಸರಿ, ಸ್ಪಷ್ಟವಾಗಿದೆ. ಆದರೆ "ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?"

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...