೧೯೭೦ರ ಸಾಲು. ನಾನು ಪರವೂರಿನ ಬಂದುಗಳ ಮನೆಯಲ್ಲಿ ವಾಸವಿದ್ದು ಹತ್ತಿರದ ಪಟ್ಟಣದಲ್ಲಿನ ತಾಂತ್ರಿಕ ತರಬೇತಿಗಾಗಿ ಸಂಸ್ಥೆಯೊಂದಕ್ಕೆ ಸೇರಿದ್ದೆ. ಆ ಊರಿನಲ್ಲಿರುವವರಿಗೆ ನಾನು ಏನೋ ಟೆಕ್ನಿಕಲ್ ವಿಷಯ ಕಲಿಯುತ್ತಿದ್ದೇನೆ ಎಂಬುದು ಗೊತ್ತು ಹೊರತು ವಿವರ ಗೊತ್ತಿರಲಿಲ್ಲ. ಬಂದುಗಳ ಮನೆಯಲ್ಲಿ ಒಮ್ಮೆ ಅಲಾರಂ ಗಡಿಯಾರ ಕೈಕೊಟ್ಟಿತ್ತು. ಹೇಗೂ ನೀನು ಟೆಕ್ನಿಕಲ್ ವಿದ್ಯಾರ್ಥಿ. ನಿನಗೆ ಎಲ್ಲಾ ಗೊತ್ತೇ ಇರುತ್ತದೆ. ಈ ಗಡಿಯಾರವನ್ನು ರಿಪೇರಿ ಮಾಡಪ್ಪ ಎಂದು ಹೋಂ ವರ್ಕ್ ಮಾಡುವಾಗ ಅಲಾರಂ ಗಡಿಯಾರ ತಂದಿಟ್ಟರು. ನಾನೋ ದೊಡ್ಡ ತಜ್ಞ ನಂತೆ ಅದನ್ನು ಹಿಂದೆ ಮುಂದೆ ತಿರುಗಿಸಿ ನೋಡಿ, ಸರಿ ಬೆಳಗ್ಗೆ ಕೊಡುತ್ತೇನೆಂದೆ. ನನ್ನ ಹೋಂ ವರ್ಕ್ ಮುಗಿದ ಮೇಲೆ ಇದನ್ನು ರಿಪೇರಿ ಮಾಡಲು ಯೋಚಿಸಿದೆ. ಅವರ ಅಡಿಗೆ ಮನೆಯಲ್ಲಿನ ಲೋಟದ ತುದಿ ಮತ್ತು ಮುಗುಚುವ ಕೈ ಬಿಟ್ಟರೆ ಒರಳು ಮೇಲಿನ ಕುಟ್ಟುವ ಕಲ್ಲು ಹೊರತು ಬೇರೇನು ಕಾಣುತ್ತಿರಲಿಲ್ಲ. ಇದನ್ನು ರಿಪೇರಿ ಮಾಡಲು ಯಾವುದೇ ಸಲಕರಣೆಗಳು ನನ್ನ ಬಳಿ ಇರಲಿಲ್ಲ. ಸರಿ, ಇದ್ದ ಸಲಕರಣೆಗಳ ಲಘು ಉಪಯೋಗದಿಂದಲೇ ಗಡಿಯಾರವನ್ನು ಹಿಂದೆ ಮುಂದೆ ಮಾಡಿ ಪ್ರಯತ್ನ ಶುರು ಮಾಡಿದೆ. ಅಲುಗಾಟದ ಮಧ್ಯೆ ಹೇಗೋ ಅದು ತನ್ನ ಕೆಲಸ ಪ್ರಾರಂಭಿಸಿತು ಸರಿಯಾದ ವೇಳೆಗೆ ತಿರುಗಿಸಿ ಮಲಗಿದೆ. ಅದೂ ಬೆಳಗ್ಗೆ ಸಮಯವನ್ನು ಅಚ್ಚುಕಟ್ಟಾಗಿ ತೋರಿಸುತ್ತಿತ್ತು. ಅದನ್ನು ನೋಡಿದ ಮನೆಯವರು , ಒಂದು ವಾರದಿಂದ ಗಡಿಯಾರ ಕೆಟ್ಟಿತ್ತು. ನಮ್ಮ ರಾಮಚಂದ್ರ ಗಡಿಯಾರವನ್ನು ಬಲು ಶೀಘ್ರವಾಗಿ ಸರಿ ಮಾಡಿದ್ದಾನೆ, ಖರ್ಚೂ ಆಗಲಿಲ್ಲ, ಎಂದು ಅತ್ತಿತ್ತ ಮನೆಯವರಲ್ಲಿ, ನೀರು ಸೇದುವಾಗ ಹೆಮ್ಮೆಯಿಂದ ಹೇಳಿಕೊಂಡರು.
ನನಗೆ ಗೊತ್ತಿಲ್ಲದಂತೆ ಒಳ್ಳೆಯ ಪ್ರಚಾರವಾಯಿತು. ಅದರ ಪರಿಣಾಮವಾಗಿ ಮುಂದಿನ ವಾರ ಇನ್ನೊಂದು ಇದೇ ರೀತಿ ಬೇರೆಯವರ ಗಡಿಯಾರ ದುರಸ್ತಿಗೆ ಬಂದಿತು. ಈ ವೇಳೆ ಪಡೆದ ಆ ಗಡಿಯಾರವನ್ನು ಹಿಂದೆ-ಮುಂದೆ ಅಲ್ಲಾಡಿಸಿದೆ. ಅದು ಸಹ ಅಕಸ್ಮಾತ್ ಕೆಲಸ ಮಾಡಲು ಪ್ರಾರಂಭಿಸಿತು. ಎಲ್ಲರೂ ಹೊಗಳುವುದನ್ನು ಪ್ರಾರಂಭಿಸಿದರು. ನಾನು ಸಹ ನನ್ನನ್ನು ಸರಿಯಾಗಿ ಅರಿಯದೆ ಹೊಗಳಿಕೆಯನ್ನು ಹೆಮ್ಮೆಯಿಂದ ಸ್ವೀಕರಿಸಿದೆ. ನನಗೆ ಗೊತ್ತಿಲ್ಲದಂತೆ ನಾನು ಆ ಊರಿನಲ್ಲಿ ಗಡಿಯಾರದ ಪ್ರಸಿದ್ಧ ರಿಪೇರಿ ಮಾಡುವವನಾದೆ. ಕೆಲವು ದಿನಗಳ ನಂತರ ಇನ್ಯಾರೋ ಮತ್ತೊಂದು ಗಡಿಯಾರ ತಂದರು. ಈಗ ತಲೆನೋವು ಪ್ರಾರಂಭವಾಯಿತು. ದಾರಿ ತೋಚದೆ ನಮ್ಮ ಶಾಲೆಯ ಬಳಿಯಲ್ಲಿ ಇರುವ ಶಾಮಣ್ಣನ ಗಡಿಯಾರದ ಅಂಗಡಿಯಲ್ಲಿ ಈ ಕೆಟ್ಟಿರುವ ಗಡಿಯಾರವನ್ನು ತೋರಿಸಿದೆ. ಹಳೆಯ ಕಾಲ. ಸಣ್ಣಪುಟ್ಟ ರಿಪೇರಿಗಳಿಗೆ ಹಣ ತೆಗೆದುಕೊಳ್ಳುತ್ತಿರಲಿಲ್ಲ. ಗಡಿಯಾರದ ಸಣ್ಣ ರಿಪೇರಿ. ಸರಿ ಮಾಡಿ ಕೊಟ್ಟರು. ಕೆಲಸ ಚಿಕ್ಕದೆಂದು ಅವರು ಹಣ ಪಡೆಯಲಿಲ್ಲ, ಸಾಲದೆಂದು ನಾನು ಕೆಲಸ ಕಲಿಯುವ ಪ್ರಯತ್ನ ದಲ್ಲಿದ್ದೇನೆಂದು ಭಾವಿಸಿ, ಇಂತಹ ಪರಿಸ್ಥಿತಿ ಬಂದಾಗ ಉಪಯೋಗಿಸು ಎಂದೂ, ಪ್ರಸಂಗ ಬಂದಾಗ ಮೊದಲ ಪ್ರಯತ್ನವಾಗಿ ಗಡಿಯಾರದ ಹಿಂಭಾಗದಲ್ಲಿರುವ ಮೂರು ಸ್ಕ್ರೂಗಳನ್ನು ನಿಧಾನವಾಗಿ ಸಡಿಲಗೊಳಿಸಿ ನಂತರ ಮೊದಲಿನಂತೆ ಬಿಗಿ ಮಾಡು. ಸಾಮಾನ್ಯವಾಗಿ ಸರಿಯಾಗುತ್ತದೆ ಎಂದಿದ್ದಲ್ಲದೆ ನನ್ನ ಕೈನಲ್ಲಿದ್ದ ಎರಡು ರೂಪಾಯಿ ಪಡೆದು ಎರಡು ಹಳೆಯ ಸ್ಕ್ರೂ ಡ್ರೈವರ್ ನನಗೆ ಕೊಟ್ಟರು. ನನಗೆ ರಿಪೇರಿ ಕೆಲಸ ಬಾರದಿದ್ದರೂ ಬೇಕಾದ ಶಸ್ತ್ರ ಸಂಪಾದಿಸಿದ ಹೆಮ್ಮೆಯಿಂದ ಸಂತೋಷಿತನಾಗಿ ದಾಪುಗಾಲು ಹಾಕುತ್ತಾ ಮನೆ ಸೇರಿದೆ. ಅದರ ಮಾಲಿಕನಿಗೆ ಗಡಿಯಾರ ವಾಪಸ್ ಮಾಡಿ ಕೊಟ್ಟಷ್ಟು ಹಣ ಪಡೆದೆ.
ನಂತರದ ಕೆಲವೇ ದಿನಗಳಲ್ಲಿ ಒಂದು ವಾಲ್-ಕ್ಲಾಕ್ ರಿಪೇರಿಗೆ ಬಂದಿತು. ನನ್ನ ಜ್ಞಾನದ ವ್ಯಾಪ್ತಿಯನ್ನು ಅದು ಮೀರಿದ್ದರೂ ಕೈನಲ್ಲಿ ಅನುಭವಿ ಸ್ಕ್ರೂಡ್ರೈವರ್ ಗಳು ಇರುವುದರಿಂದ ಧೈರ್ಯವಾಗಿ ಪಡೆದುಕೊಂಡೆ. ಅವರು ಆ ವಾಲ್ ಕ್ಲಾಕ್ ನ ಸಮಸ್ಯೆ ಹೇಳಿ ಮರುದಿನ ಬರುವುದಾಗಿ ಹೊರಟರು. ನಂತರ ನಾನು ಇರುವ ಕೆಲಸವನ್ನೆಲ್ಲ ಬಿಟ್ಟು ಗಡಿಯಾರವನ್ನು ಬೋರಲಾಗಿ ಮಲಗಿಸಿ ಅದರ ಬೆನ್ನಲ್ಲಿ ಕಾಣುತ್ತಿದ್ದ ಎಲ್ಲ ಸ್ಕ್ರೂಗಳನ್ನು ಸರಸರನೆ ಬಿಚ್ಚಿದೆ. ಒಳಭಾಗದಲ್ಲಿ ನೋಡಿದರೆ ಹೇಗೇಗೋ ಸುತ್ತಿರುವ ಸ್ರ್ಪಿಂಗುಗಳು, ಎಂದೂ ನೋಡಿರದ ವಿವಿಧ ರೀತಿಯ ಭಾಗಗಳು. ಯಾವುದೋ ಧೈರ್ಯದ ಮೇಲೆ ಕಾಣುವ ಭಾಗಗಳ ಮೇಲೆ ನನ್ನ ಸ್ಕ್ರೂ ಡ್ರೈವರ್ ಬಳಸಿದೆ. ಒಂದು ವಾಲ್ ಕ್ಲಾಕ್ ಅನೇಕ ಭಾಗಗಳಾಗಿ ಕಾಣಲು ಪ್ರಾರಂಭಿಸಿತು. ಮುಂದೇನು ಮಾಡುವುದು ಗೊತ್ತಾಗಲಿಲ್ಲ. ಸರಿ ಮೊದಲಿದ್ದಂತೆ ಜೋಡಿಸೋಣ ಎಂದರೆ ಆ ಭಾಗಗಳು ವಾಪಸ್ ಅಲ್ಲಿಯೇ ಕೂಡಲು ಒಪ್ಪುತ್ತಿಲ್ಲ. ಈ ಮಧ್ಯೆ ತೆಗೆದಿರುವ ಸ್ಪ್ರಿಂಗುಗಳು ಕೋಡುಬಳೆಯಂತೆ ಕಾಣುತ್ತಾ ಮೊದಲಿದ್ದಂತೆ ಸುತ್ತಿಕೊಳ್ಳಲೂ ಸಹಕರಿಸುತ್ತಿಲ್ಲ. ಈಗೇನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತು ಕುಳಿತೆ. ಅದೇ ಸಮಯದಲ್ಲಿ ಆ ಗಡಿಯಾರದ ಒಡೆಯನೂ ಬರಬೇಕೇ? ಇತ್ತ ಅದನ್ನು ಕಸದಂತೆ ತುಂಬಿ ಎತ್ತಿಡುವಂತಿಲ್ಲ. ತಕ್ಷಣ ತುಂಬಿಡಲು ಈಗಿನ ಕಾಲದಂತೆ ರಟ್ಟಿನ ಡಬ್ಬಗಳು ಇರಲೇ ಇಲ್ಲ. ಏನಿದ್ದರೂ ಬಟ್ಟೆಯ ಚೀಲಕ್ಕೆ ಅಕ್ಕಿ ತುಂಬಿದಂತೆ ತುಂಬಬೇಕು. ಅವನ ಎದುರಿಗೆ ಇದನ್ನು ಮಾಡುವಂತಿಲ್ಲ. ಹೀಗಂದು ಕೊಂಡು ಯೋಚಿಸುತ್ತಾ ಅವನ ಮುಖ ನೋಡುವಷ್ಟರಲ್ಲಿ ಅವನು "ಈ ಮಧ್ಯೆ ಮನೆಯಲ್ಲಿ ಸಮಯ ನೋಡುವುದೇ ಸಮಸ್ಯೆಯಾಗಿದೆ,ಆಗಿದ್ದರೆ ಗಡಿಯಾರ ಕೊಡಿ " ಎಂದು ಆಗ್ರಹಿಸಿ ಕೇಳುತ್ತಿದ್ದಾನೆ. ಗೊತ್ತಿದೆ ಎಂಬ ಬಡಿವಾರದೊಂದಿಗೆ ಪಡೆದ ಗಡಿಯಾರ. ಬಿಚ್ಚಿಕೊಂಡು ಬಿದ್ದು ತಲೆ ಚಚ್ಚಿ ಕೊಳ್ಳುವಂತೆ ಮಾಡುತ್ತಿದೆ. ನೋಡಲೂ ಆಗದು, ಹೇಳಲೂ ಆಗದು. ಒಳ್ಳೆಯ ಪೀಕಲಾಟ. ಮುಂದೇನು ಮಾಡುವುದು? ಯಾಕಾದ್ರೂ ಇದನ್ನು ತೆಗೆದುಕೊಂಡೆ ಎಂಬ ಆತಂಕ. ಮನಸ್ಸಿನಲ್ಲಿ ದುಗುಡ. ಆದರೂ ಸಾವರಿಸಿಕೊಂಡು 'ಈ ಗಡಿಯಾರಕ್ಕೆ ಯಾವುದೋ ಒಂದು ಮುಖ್ಯಭಾಗ ಬೇಕಾಗಿದೆ. ನಾಳೆಯ ದಿನ ಪಟ್ಟಣದಿಂದ ತಂದು ಸರಿ ಮಾಡಿಕೊಡುತ್ತೇನೆ 'ಎಂದು ಅವನನ್ನು ಸಾಗಹಾಕಿದೆ.
ಮರುದಿನ ಬೆಳಿಗ್ಗೆ ಗಡಿಯಾರದ ಶಾಮಣ್ಣ ನನ್ನು ಕಂಡು ಸರಿ ಮಾಡಿಕೊಡುವಂತೆ ಕೇಳುವುದು ಎಂದುಕೊಂಡು ಬೇಗ ಮಲಗಿದೆ. ನಿದ್ದೆ ಬಾರದು, ಗಡಿಯಾರ ಬಿಚ್ಚಬಾರದಿತ್ತು ಎಂಬ ಚಿಂತೆಯಲ್ಲಿ ಹೊರಳಾಡಿ, ಹೊರಳಾಡಿ ಬೆಳಗು ಮಾಡಿದೆ. ಮರುದಿನ ಗಡಿಯಾರ ಮತ್ತು ಅದರ ಅನಾಥ ಭಾಗಗಳು ಎಲ್ಲವನ್ನೂ ಚೀಲಕ್ಕೆ ತುಂಬಿ ಸಾಧ್ಯವಾದಷ್ಟು ಬೇಗ ಶಾಮಣ್ಣ ಬಳಿ ತಲುಪಿದೆ. ಚೀಲದಿಂದ ಗಡಿಯಾರದ ದೇಹ ಭಾಗಗಳನ್ನು ತೆಗೆದಿಟ್ಟೆ. ಆತ ಯಾವುದೋ ದೊಡ್ಡ ಗಡಿಯಾರದ ಕೆಲಸದಲ್ಲಿ ಮಗ್ನನಾಗಿದ್ದ. ಒಮ್ಮೆ ಅವನ ಸುತ್ತಮುತ್ತ ನೋಡಿದೆ, ಸುಮಾರು ಒಂದೂವರೆ ಘಂಟೆ ಕಾದೆನು. ಗೋಡೆ ಮೇಲೆ, ಬಾಗಿಲ ಚೌಕಟ್ಟು ಮೇಲೆ, ಎಲ್ಲೆಲ್ಲೂ ತರಹ ತರಹದ ಗಡಿಯಾರಗಳು. ಸರಿಯಿರುವ ಗಡಿಯಾರಗಳೊಂದಿಗೆ ನಿಧಾನವಾಗಿರುವ ಕೆಲವು, ಕೆಟ್ಟಿರುವ ಹಲವು. ಕೆಲವೊಮ್ಮೆ ಸೇರಿಕೊಂಡು, ಇನ್ನೊಮ್ಮೆ ಪ್ರತ್ಯೇಕವಾಗಿ, ಪ್ರತಿ ಅರ್ಧ ಗಂಟೆಗೆ ಮನಸ್ಸಿಗೆ ಬಂದಷ್ಟು, ಸ್ಪರ್ಧೆಯಿಂದ ಗಂಟೆಯ ಸದ್ದು ಮಾಡುವ ಗಡಿಯಾರಗಳ ಸಾಲು ಸಾಲು. ಚೀಲದಲ್ಲಿನ ನನ್ನ ಗಡಿಯಾರವೂ ಕನಿಷ್ಠ ಒಮ್ಮೆ ಶಬ್ದವನ್ನು ಮಾಡಿದರೂ ಸಾಕು ಎಂದು ಮನಸ್ಸಿನಲ್ಲಿ ಅಂದುಕೊಂಡೆ.
ಕೆಲ ಹೊತ್ತಿನಲ್ಲೇ ಶಾಮಣ್ಣನ ದಿವ್ಯ ದೃಷ್ಟಿ ನನ್ನತ್ತ ಬಿತ್ತು. ಒಂದು ಕಣ್ಣಿಗೆ ವಿಚಿತ್ರ ಗಾಜಿನ, ಸಣ್ಣ ಭಾಗ ನೋಡುವ ಕಣ್ಗನ್ನಡಿಯೊಂದಿಗೆ ಮತ್ತೊಂದು ಕಣ್ಣಿನಲ್ಲೇ ಏನೆಂದು ಕೇಳಿದ. ನಾನು ತಂದಿರುವ ಗಡಿಯಾರ ಏನಾಗಿದೆ ಎಂದು ಅವನಿಗೆ ಹೇಳಲೂ ಗೊತ್ತಾಗುತ್ತಿಲ್ಲ. ಹೆದರಿಕೊಂಡು ಅವನ ಟೇಬಲ್ ಮೇಲೆ ಗಡಿಯಾರವನ್ನು ಹರಡಿ ಇಟ್ಟೆ. ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಿ ಹೂಂ ಎನ್ನುತ್ತಾ ಒಂದೆರಡು ನಿಮಿಷಗಳ ನಂತರ ನನ್ನ ಗಡಿಯಾರವನ್ನು ಕೈನಲ್ಲಿ ಹಿಡಿದು ನೋಡಿ, ಯಾವ ಅಯೋಗ್ಯ ರೀ ಇದನ್ನು ಬಿಚ್ಚಿದ್ದು. ಸ್ವಲ್ಪವಾದರೂ ಬುದ್ಧಿ ಬೇಕು, ಯಾವ ಭಾಗಗಳನ್ನು ಬಿಚ್ಚಬೇಕೋ ಬೇಡವೋ ಎಂದು ಗೊತ್ತಿಲ್ಲದವರ ಬಳಿ ಹೇಗೆ ಕೊಟ್ಟಿರಿ ಎಂದು ಕೆಂಗಣ್ಣಿನಿಂದ ನನ್ನತ್ತ ನೋಡಿದ. ಏಕೆ ಏನಾಯ್ತು ಎಂದು ಹೆದರುತ್ತಾ ಕೇಳಿದೆ. ಒಮ್ಮೆ ಗಡಿಯಾರವನ್ನು ತಯಾರು ಮಾಡಿದ್ದಾದ ಮೇಲೆ, ಎಂದೂ ಕಂಪನಿಯವರೂ ಎಂದೆಂದೂ ಬಿಚ್ಬದ ಭಾಗವನ್ನು ಬಿಚ್ಚಿ ತಂದಿದ್ದೀರಿ. ಇದನ್ನೆಲ್ಲಾ ಅಸೆಂಬ್ಲಿ ಮಾಡಲಾಗದು ಎಂಬ ಅವನ ನಿಖರ ಕಠಿಣ ವಾಕ್ಯ ನನ್ನ ಜಂಘಾಬಲವನ್ನೇ ಉಡುಗಿಸಿತು. ಸಣ್ಣದಾಗಿ ಅಳುತ್ತಾ ಗೊತ್ತಿಲ್ಲದೆ ನಾನೇ ಮಾಡಿದ ಪರಿಣಾಮ ಇದು. ಇನ್ನೆಂದು ಈ ರೀತಿಯ ರಿಪೇರಿ ಮಾಡುವ ಪ್ರಯತ್ನ ಮಾಡುವುದಿಲ್ಲ, ದಯಮಾಡಿ ಸರಿ ಮಾಡಿ ಕೊಡಿ ಎಂದು ಇನ್ನಿಲ್ಲದಾಗಿ ಕೇಳಿಕೊಂಡೆ. ನನ್ನ ಅಪರಾಧ ಕ್ಷಮಾಪಣಾ ಸ್ತೋತ್ರ ದಿಂದ ಪ್ರಸನ್ನನಾಗಿ, ಕೆಲವು ನಿಮಿಷಗಳ ಯೋಚನೆಯ ನಂತರ ನಾಳೆ ಬನ್ನಿ ಯಾವುದಕ್ಕೂ ಹೇಳುತ್ತೇನೆ ಎನ್ನುತ್ತಾ ತನ್ನ ಕೆಲಸ ಮುಂದುವರೆಸಿದ. ನನಗೋ ಈಗಲೇ ಇದನ್ನ ಸರಿ ಮಾಡಿಕೊಟ್ಟಿದ್ದರೆ ಸಾಕಾಗಿತ್ತು, ಎನಿಸುತ್ತಿತ್ತು. ಆದರೆ ಬಾಯಿ ಬಿಡಲೂ ಭಯ. ಮರುದಿನ, ಮತ್ತೊಂದು ದಿನ ಹೀಗೆ ಅಂತೂ ವಾರವೊಂದರ ನಂತರವಾದರೂ ಅದನ್ನು ಸರಿಪಡಿಸಿ ಕೊಡುತ್ತಾ, ನಮ್ಮಿಂದಾಗದ ಕೆಲಸವನ್ನು ಎಂದೂ ಒಪ್ಪಿಕೊಳ್ಳಬಾರದು, ಹಾಗೇನಾದರೂ ಒಪ್ಪಿಕೊಂಡರೆ ಕೆಲಸವನ್ನು ಹೇಗಾದರೂ ಮಾಡಲೇ ಬೇಕು.ಈ ಬದ್ಧತೆ ನಿನ್ನಲ್ಲಿರುವುದರಿಂದ ಕಷ್ಟವಾದರೂ ಮಾಡಿ ಕೊಟ್ಟಿದ್ದೇನೆ ಮುಂದೆ ಇಂತಹಾ ತರಲೆ ಕೆಲಸ ಮಾಡಿ ತರುವುದಾದರೆ ಇಲ್ಲಿಗೆ ಬರಲೇಬೇಡ ಎಂಬ ಅವನ ಕಠೋರ ಎಚ್ಚರಿಕೆ ಯೊಂದಿಗೆ ವಾಲ್ ಕ್ಲಾಕ್ ನನ್ನ ಕೈಸೇರಿ ಅದರ ಮಾಲಿಕನಿಗೆ ತಲುಪಿಸುವ ವೇಳೆಗೆ ನನಗೆ ಸಾಕಾಗಿತ್ತು. ಉಸಿರು ಬಾಯಿಗೆ ಬಂದಂತಾಗಿತ್ತು. ಅವನಿಗೂ ಅದನ್ನು ಕೇಳಿಕೊಂಡು ಬಂದೂ ಬಂದೂ ಸಾಕಾಗಿತ್ತು. ಗಡಿಯಾರದ ರಿಪೇರಿ ವೆಚ್ಚ ಹದಿಮೂರು ರೂಪಾಯಿ ಎಂದೆ. ಅದು ಹೆಚ್ಚಾಯಿತು ಎಂದು ಗೊಣಗುತ್ತಾ ಕೊಡಲು ಎರಡು ತಿಂಗಳು ಮಾಡಿದ. ಶಾಮಣ್ಣನಿಗೆ ಹಣ ಕೂಡಿಸಿ ಕೊಡಲು ನನಗೂ ಸಾಧ್ಯವಾಗದೆ ಏನೇನೋ ಸಬೂಬುಗಳನ್ನು ಹೇಳುತ್ತಾ ದಿನಾ ದೂಡಿ ಹಣ ಕೊಡುವ ವೇಳೆಗೆ ನನ್ನಲ್ಲಿ ನನಗೇ ಬೇಸರವಾಗಿತ್ತು.
ನಮ್ಮಿಂದಾಗದ ಕೆಲಸವನ್ನು ಎಂದೂ ಒಪ್ಪಿಕೊಳ್ಳಬಾರದು, ಹಾಗೇನಾದರೂ ಒಪ್ಪಿಕೊಂಡರೆ ಕೆಲಸವನ್ನು ಹೇಗಾದರೂ ಮಾಡಲೇ ಬೇಕು ಎಂಬ ಶಾಮಣ್ಣನವರ ಅಂದಿನ ವಾಕ್ಯ ಈಗಲೂ ಯೋಚನೆಗೆ ಬರುತ್ತದೆ. ಚಿಕ್ಕ ವಯಸ್ಸಿನವನೆಂಬ ಅಸಡ್ಡೆ ಇಲ್ಲದೆ ಒಂದು ಉತ್ತಮ ಜೀವನ ಪಾಠ ಕಲಿಸಿದ ಆ ಶಾಮಣ್ಣನವರಿಗೆ ನಾನು ಚಿರ ಋಣಿ. ಅಂತೆಯೇ ಈ ಲೇಖನವನ್ನು ಅವರಿಗೆ ಸಮರ್ಪಣೆ ಮಾಡುತ್ತೇನೆ. ಆದರೂ ನಂತರದ ಈ ಜೀವನದಲ್ಲಿ ನನಗೆ ಗೊತ್ತಿಲ್ಲದಂತೆ ಇಂತಹ ಜವಾಬ್ದಾರಿಗಳು ಸಾಕಷ್ಟು ಬಂದಿದೆ .ತೊಂದರೆಯೂ ಆಗಿದೆ .ಇದು ಕೇವಲ ನನಗಷ್ಟೇ ಅಲ್ಲ . ರೀತಿ ಬೇರೆ ಬೇರೆ ಇರಬಹುದು. ಆದರೆ ಅದು ಎಲ್ಲರ ಅನುಭವವೂ ಹೌದು ಅಲ್ಲವೇ.
ಗಡಿಯಾರ ಕಲಿಸಿದ ಜೀವನದ ಪಾಠ ಚೆನ್ನಾ ಗಿದೆ
ReplyDeleteಧನ್ಯವಾದಗಳು
Deleteನೀವು ಗಡಿಯಾರ ದುರಸ್ಥಿ ಮಾಡುತ್ತೀರ ಅಂತ ಗೊತ್ತಿರಲಿಲ್ಲ. ಅನುಭವ ಉತ್ತಮ ಪಾಠ ಕಲಿಸಿದೆ ಎಂದು ನನ್ನ ಅಭಿಪ್ರಾಯ
ReplyDeleteಆ ಅನುಭವ ಆದಮೇಲೆ ಮತ್ತೆ ಸ್ಕ್ರೂ ಡ್ರೈವರ್ ಮುಟ್ಟಲೂ ಭಯವೇ.ಅನುಭವವೇ ಜೀವನ ಪಾಠಗಳು.ಧನ್ಯವಾದಗಳು.
Deleteಗಡಿಯಾರದ ಕಥೆ ನಿನ್ನ ಬಾಯಿಂದ ಆಫೀಸ್ನಲ್ಲಿ ಕೇಳಿದ್ದೆ. ಈಗ ಲೇಕನವನ್ನು ಓದಿ ಮತ್ತೆ ಜ್ಞಾಪಕ ಬಂತು. ಇದು ಜೇವನದಲ್ಲಿ ಒಂದು ಪಾಠ.
ReplyDeleteತಲೆ ಪ್ರತಿಷ್ಠೆ ಗಳಿಗೆ ಸರಿಯಾದ ಪಾಠವೇ.ಧನ್ಯವಾದಗಳು.
Deleteಅಂದು ಗೊತ್ತಿಲ್ಲದೆ ಕಲಿತ ಗಡಿಯಾರದ ಪಾಠ ಮುಂದಿನ ದಿನಗಳಲ್ಲಿ ಮೆಕಾನಿಕಲ್ ವಿಷಯದಲ್ಲಿ ಅಧ್ಯಯನ ಮಾಡಲು ನಿನಗೆ ಸಹಾಯವಾಗಿರಬಹುದು.
ReplyDeleteಸ್ವಲ್ಪ ಮಟ್ಟಿಗೆ ಸರಿಯೇ ಬಿಡಿ. ಧನ್ಯವಾದಗಳು.
DeleteVery good article to have nice experience of that time. Writing style drag us to those days.
ReplyDeleteThank you Ramesh.
Deleteನೀವು ಗಡಿಯಾರ ದುರಸ್ಥಿ ಮಾಡುತ್ತೀರ ಅಂತ ಗೊತ್ತಿರಲಿಲ್ಲ. ಅನುಭವ ಉತ್ತಮ ಪಾಠ ಕಲಿಸಿದೆ ಎಂದು ನನ್ನ ಅಭಿಪ್ರಾಯ
ReplyDeleteಇಷ್ಟೆಲ್ಲಾ ಆದಮೇಲೆ ಕಲಿಯುವ ಧೈರ್ಯ ಬರಲಿಲ್ಲ. ಕುತೂಹಲಕ್ಕೂ ಗಡಿಯಾರ ಬಿಚ್ಚಲೂ ಭಯವೇ.ಕಾಮೆಂಟಿಸಿದ್ದಕ್ಕೆ ಧನ್ಯವಾದಗಳು.
Deleteಇಂತಹ ಘಟನೆಗಳು ಬಹಳ ಜನಗಳ ಜೀವನದಲ್ಲಿ ನಡೆದಿರಬಹು. ಆದರೆ ಅದನ್ನು ನೆನಪಿಸಿ ಕೊಂಡು ವಿವರಿಸುವವದಿದೆಯಲ್ಲಾ ಅದು ಅದ್ಭುತ
ReplyDeleteಬಿದ್ದಿರುವ ಏಟು ಎಷ್ಟು ಬಿಸಿಯಾಗಿರುತ್ತದೆಯೋ ಅದರ ನೆನಪುಗಳು ಅಷ್ಟು ಹಸಿ ಅಲ್ಲವೇ.ಧನ್ಯವಾದಗಳು.
Deleteನಿಮ್ಮ ಗಡಿಯಾರದ ರಿಪೇರಿ ಕಥೆಯು ಬಹಳ ಸ್ವಾರಸ್ಯಕರವಾಗಿದೆ. ಆದರೆ ಅದರಿಂದ ಕಲಿತ ಪಾಠ ಜೀವನದ ದಿಕ್ಕನ್ನೆ ಬದಲಾಯಿಸುವಂತಿದೆ. ನೀವು ಹಂಚಿಕೊಂಡಿರುವ ನಿಮ್ಮ ಅನುಭವವು ವಿಭಿನ್ನ ರೀತಿಯಲ್ಲಿದೆ ಮತ್ತು ಪ್ರತಿಯೊಬ್ಬರೂ ಇದರಿಂದ ಒಂದು ನೀತಿ ಪಾಠವನ್ನು ಕಲಿಯ ಬಹುದಾಗಿದೆ. ವಂದನೆಗಳು.
ReplyDeleteನೋವಿನ ಮೂಲಕ ಪಡೆದ ಪಾಠದ ಮೌಲ್ಯ ಎಂದಿಗೂ ಬೆಲೆಕಟ್ಟಲಾಗದು.ಅದರ ಲಾಭವೂ ಹೆಚ್ಚಿನದೇ ಅಲ್ಲವೇ. ಧನ್ಯವಾದಗಳು.
DeleteExcellent article on golden memories of life
ReplyDeleteThank you sir. This type of experiences makes us excellant at some extent.
Deleteರಾಮಚಂದ್ರ ಏ ವಿ
ReplyDeleteಅನುಭವದ ಲೇಖನ ಸೂಗಸಾಗಿ ಮೂಡಿಬಂದಿದೆ.
ಧನ್ಯವಾದಗಳು
Delete
ReplyDeleteಲೇಖನ ಚೆನ್ನಾಗಿದೆ. ಆಫೀಸಿ ನಲ್ಲಿ ನಿಮ್ಮಿಂದ ಈ ತರಹದ ಅನೇಕ ಪಾಠಗಳನ್ನು ನಾವು ಕಲಿತಿದ್ದೇವೆ. 1-2 ಈಗಲೂ ಕಿವಿಯಲ್ಲಿ ಗುಯ್ ಗುಟ್ಟತ್ತಿದೆ. 1. ನಾವು ಯಾರೊಡನೆ ಯಾದರು ಹೋಟೆಲ್ಗೆ ಹೋದಾಗ ಮೊದಲು ನಾವು ಮೊದಲು ಬಿಲ್ ಕೊಟ್ಟು ಬಿಡಬೇಕು. ಆಗ ನೆಮ್ಮದಿ ಯಿಂದ ಇರಬಹುದು.2. ಮನೆಯಲ್ಲಿ ಜಗಳ ವಾದರೆ ಅದರ ಕಾರಣ ಹಳೆಯ ವಿಷಯ ಗಳೇ ಆಗಿರುತ್ತದೆ. ಹೀಗೆ ಇನ್ನು ಅನೇಕ ವಿಷಯಗಳು ಮನದಲ್ಲಿ ಹಚ್ಚ ಹಸಿರು. ಅಂದಿನ ನೆನಪುಗಳೇ ಇಂದಿನ ಜೀವನದ ಒರುಗೋಲು , ಅಲ್ಲವೇ KBR. ಧನ್ಯವಾದಗಳು.
ಆಡಿದ ಮಾತು ಜೀವಂತವಿರುವವರೆಗೆ ನಾವು ಇದ್ದೇವೆ ಎಂದರ್ಥ. ನೆನಪಿಸಿಕೊಂಡಿದ್ದಕ್ಕೂ, ಪ್ರತಿಕ್ರಿಯೆಗೂ ಧನ್ಯವಾದಗಳು.
Deleteನಿಮ್ಮ ಅಂದಿನ ಭಾವನೆಗಳು, ಅನಿಸಿಕೆಗಳು, ಅನುಭವಿಸಿದ ನೋವುಗಳು, ಅದನ್ನು ನಿವಾರಿಸಲು ಮಾಡಿದ ಚತುರೋಪಾಯಗಳು, ಹಿರಿಯರಿಂದ ಸಹಾಯ ಪಡೆದು ಕಲಿತ ಮರೆಯಲಾಗದ ಪಾಠ ಎಲ್ಲವನ್ನೂ ನೆನಪಿನ ಆಳದಿಂದ ತೆಗೆದು ಸುಂದರ ಶೈಲಿಯಲ್ಲಿ ಇದ್ದು ನೆನಪಿನ ಆಳಕ್ಕೆ ಇಳಿಯುವಂತೆ ಮಾಡಿದೆ. ಅಭನಂದನೆಗಳು
ReplyDeleteಗಡಿಯಾರದ ರಿಪೇರಿ ಮೂಲಕ ಶಾಮಣ್ಣ ಜೀವನದ ಪಾಠ ಕಲಿಸಿದ ರೀತಿಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.ಆಗ ಕಲಿತ ಪಾಠವೇ ಬಹುಶಃ ನಿಮ್ಮ ಸಮಯ ಪ್ರಜ್ಞೆಗೆ ಶಿಸ್ತಿಗೆ ಒಪ್ಪಿಕೊಂಡ ಕೆಲಸ ಮಾಡುವ ರೀತಿಗೆ ಕಾರಣವಾಗಿರಬಹುದು.
ReplyDeleteನಮ್ಮ ಮನೆಯಲ್ಲಿ ರಿಪೇರಿ ಮಾಡಬೇಕಾದ ಗಡಿಯಾರವೊಂದಿದೆ, ಆಗುತ್ತಾ?
ReplyDeleteಪ್ರಯತ್ನಿಸಬಹುದಾಗಿತ್ತು. ದಯಮಾಡಿ ವಿಳಾಸ ಒದಗಿಸಿ.
ReplyDeleteಲಘುಬರಹದ ಶೈಲಿಯಲ್ಲಿರುವ, ಸರಳರೀತಿಯಲ್ಲಿ ಯಶಸ್ವಿ ಜೀವನಕ್ಕೊಂದು ಸಂದೇಶವನ್ನು ನೀಡುವ ಗಡಿಯಾರದ ಪರಸಂಗ ಚೆನ್ನಾಗಿದೆ.
ReplyDeleteಬೈ ದವೇ,
ನಂದೊಂದು ವಾಚ್ ಇದೆ ರಿಪೇರಿ ಮಾಡ್ಕೊಡ್ತೀರಾ ಸಾರ್?! 😀