ಪ್ರಾಚೀನ ಕಾಲದಿಂದಲೂ ಸುಲಭವಾಗಿ ಕಾಣಸಿಗುವ ಸೂರ್ಯ ಮತ್ತು ಚಂದ್ರರ ಆಧಾರದ ಮೇಲೆಯೇ ಕಾಲವನ್ನು ನಿರ್ಣಯ ಪ್ರಾರಂಭವಾದುದು. ಇದರಿಂದಾಗಿಯೇ ನಮ್ಮ ಜೀವನವನ್ನು ಸಾರುವ ಸಮಯ ಸೂಚಿ ಅಥವಾ ಪಂಚಾಂಗಗಳಲ್ಲಿ ಸೂರ್ಯಚಂದ್ರರೇ ಆಧಾರ. ಆದ್ದರಿಂದ ಅವರೇ ಕಾಲನಿಯಾಮಕರು. ಅವರ ಶಕ್ತಿಯಿಂದಲೇ ಪಂಚಭೂತಗಳು, ಅವರಿಂದಲೇ ಜೀವಗಳಲ್ಲಿ ಸತ್ತ್ವಗಳು ಕೂಡುತ್ತವೆ. ಅವರಿಂದಲೇ ಪ್ರಪಂಚ. ಆದ್ದರಿಂದ ಇದನ್ನೇ ಮೂಲವಾಗಿಟ್ಟುಕೊಂಡು ಎರಡು ಕ್ಷತ್ರಿಯ ಬಳ್ಳಿಗಳು ಹುಟ್ಟಿಕೊಂಡಿರಬಹುದು.
ಅದರಂತೆ ಸೂರ್ಯವಂಶದಲ್ಲಿ ರಾಮಾಯಣದ ಕಥೆ ಬಹ ವಿಸ್ತಾರವಾಗಿ ತಿಳಿಸಲ್ಪಟ್ಟಿದೆ. ಹಾಗೆಯೇ ಚಂದ್ರವಂಶವು ಮಹಾಭಾರತದ ಹೆಸರಿನಲ್ಲಿ ಜನಜನಿತವಾಗಿದೆ. ಅತ್ಯಂತ ಕ್ಲಿಷ್ಟಕರವಾದ ಬೃಹತ್ತಾದ ಮತ್ತು ಮಹತ್ವದ ಈ ಪುರಾಣ ಕಥೆಗಳನ್ನು ಹೇಗೆ ವಿವರಿಸಿದರೂ, ಓದಿದರೂ ಇನ್ನೂ ಏನೋ ಉಳಿದಿದೆ ಎಂಬ ಭಾವನೆ ಇರುತ್ತದೆ.
ಇಲ್ಲಿ ನಾನು ಹೇಳ ಹೊರಟಿರುವುದು ಮಹಾಭಾರತದಲ್ಲಿನ ಸಂಬಂಧಗಳು ಹಾಗೂ ಪ್ರಧಾನವಾಗಿ ಕಂಡು ಬರುವ ಹೆಸರುಗಳನ್ನು ಬಳಸಿ ಸಂಕ್ಷಿಪ್ತವಾಗಿ ಚಂದ್ರವಂಶವನ್ನು ವಿವರಿಸುವುದು. ಈ ಕಥೆಯು ಮುಖ್ಯವಾಗಿ ಮೂರು ಮಾರ್ಗಗಳಲ್ಲಿ ಚಲನೆಯಾಗುತ್ತದೆ.
ಅತ್ರಿ ಮಹರ್ಷಿಗಳಿಂದ ಚಂದ್ರ, ಅವನ ಮಗ ಬುಧನಿಂದ ಮುಂದುವರೆದ ಸಂತಾನ, ಆಯು ಮತ್ತು ಅವನ ಪತ್ನಿ ಸ್ವಭಾನುಕುಮಾರಿಯ ದಾಂಪತ್ಯದಿಂದ ಮಗ ನಹುಷ ಚಕ್ರವರ್ತಿ ಹುಟ್ಟುತ್ತಾನೆ. ಅವನ ಸತಿ ವಿರಾಜಸ. ಅವರಿಗೆ ಐದು ಜನ ಮಕ್ಕಳಿದ್ದು ಕಡೆಯ ಮಗ ಯಯಾತಿ. ಅತ್ಯಂತ ಧೃಡಕಾಯದ ಸುಂದರ ಯುವಕ, ಶೂರ ಹಾಗೂ ಧರ್ಮ ಪಾಲಕ. ಕ್ಷತ್ರಿಯನಾದ ಇವನು ಶುಕ್ರಾಚಾರ್ಯರ ಮಗಳು ಬ್ರಾಹ್ಮಣ ಕನ್ಯೆ ಚೆಲುವೆ ದೇವಯಾನಿಯನ್ನು ವಿವಾಹವಾಗುತ್ತಾನೆ. ಇವರ ಮಕ್ಕಳು ಯದು ಹಾಗೂ ತುರ್ವಶು. ಮೊದಲ ಮಗ ಯದುವಿನಿಂದ ಯದುವಂಶವು ಪ್ರಾರಂಭವಾಗಿ ಧೃಷ್ಣಿ, ದೇವರಥ, ಅಂಧಕ ಅವನ ಮಗ ಶೂರಸೇನ ನಂತರ ವಸುದೇವ ಮುಂದೆ ಬಲರಾಮ, ಕೃಷ್ಣ ರೇ ಕಡೆಯ ತಲೆಮಾರಾಗಿ ಯಾದವವಂಶದ ಸಮಾಪ್ತಿಯಾಗುತ್ತದೆ.
ದೇವಯಾನಿಯ ಸಖಿ ಶರ್ಮಿಷ್ಠೆ. ಆಸುರರಾಜ ವೃಷಪರ್ವನ ಮಗಳಾಗಿದ್ದ ಈಕೆ ಒಂದು ವಿಶೇಷ ಕಾರಣದಿಂದಾಗಿ ದೇವಯಾನಿಯ ಸೇವಕಿಯಾಗಿರುತ್ತಾಳೆ. ಶರ್ಮಿಷ್ಠೆಯು ಯಯಾತಿಯನ್ನು ಪ್ರೀತಿಸುತ್ತಿದ್ದು ಅದನ್ನು ತಿಳಿಸಿದಾಗ ಪ್ರಾರಂಭದಲ್ಲಿ ಅವನು ಒಪ್ಪುವುದಿಲ್ಲ ಆದರೆ ಹೆಂಡತಿಗೆ ಯಾವ ಯಾವ ವಸ್ತುವಿನ ಮೇಲೆ ಇದೆಯೋ ಅವುಗಳ ಮೇಲೆ ಅವಳ ಪತಿಗೂ ಹಕ್ಕು ಇರುವುದರಿಂದ ತನ್ನನ್ನು ಸೇರಬಹುದು ಎಂಬ ಆಗ್ರಹದಿಂದ ಅವಳೊಂದಿಗೆ ಸೇರಿದ. ಇದು ದೇವಯಾನಿಗೆ ತಿಳಿಯಲಿಲ್ಲ. ಹೀಗೆ ಯಯಾತಿಯು ಇವಳೊಂದಿಗೆ ಪಡೆದ ಮಕ್ಕಳು ದ್ರುಹ್ಯು ಅನು ಮತ್ತು ಪುರು. ತನಗೆ ತಿಳಿಯದಂತೆ ನಡೆದ ಶರ್ಮಿಷ್ಟೆಯ ಸಂಬಂಧವು ತಡವಾಗಿ ದೇವಯಾನಿಗೆ ತಿಳಿದು ಆಕೆ ದುಃಖ ಕೋಪಗಳಿಂದ ತಂದೆ ಶುಕ್ರಾಚಾರ್ಯರಿಗೆ ತಿಳಿಸಲಾಗಿ, ಅವರು ಕೋಪಗೊಂಡ ಪರಿಣಾಮ 'ತಕ್ಷಣವೇ ನಿನಗೆ ವೃದ್ಧಾಪ್ಯ ಬರಲಿ' ಎಂಬ ಶಾಪ. ಇದರಿಂದ ಇನ್ನೂ ಭೋಗಜೀವನದ ಆಸೆಯಲ್ಲೇ ಇದ್ದ ಯಯಾತಿ ದುಃಖದಿಂದ ಶಾಪದ ಪರಿಹಾರವನ್ನು ಕೇಳಿದಾಗ ಈ ವೃದ್ಧಾಪ್ಯವನ್ನು ನಿಮ್ಮ ಮಕ್ಕಳು ಯಾರಾದರೂ ಪಡೆದಲ್ಲಿ ನೀನು ಅವರ ಯೌವನವನ್ನು ವಿನಿಮಯ ಮಾಡಿಕೊಳ್ಳಬಹುದು ಎಂದಾಗ ತನ್ನ ಮಕ್ಕಳಲ್ಲಿ ಯೌವನವನ್ನು ಕೇಳಲಾಗಿ ಯಯಾತಿಯ ಕಡೆಯ ಮಗ ಪುರು ತಂದೆಗೆ ತನ್ನ ಯೌವನವನ್ನು ಕೊಟ್ಟು ವೃದ್ಧಾಪ್ಯವನ್ನು ಪಡೆದ. ಹಲವು ವರ್ಷಗಳ ಸುಖ ಭೋಗದ ನಂತರ ಯೌವನವು ಸಾಕಾಗಿ ಯಯಾತಿಯು ಯೌವನವನ್ನು ಮಗ ಪುರುವಿಗೆ ಮರುಳಿಸಿಧ. ವೃದ್ಧಾಪ್ಯವನ್ನು ಪಡೆದ ಯಯಾತಿಯು ಹಲವು ಯಜ್ಞಗಳನ್ನು ಮಾಡಿ ಮುಂದೆ ಇಂದ್ರಪದವಿ ಪಡೆದ.
ನಂತರ ಪುರು ವೈಭವದಿಂದ ಹಲವಾರು ವರ್ಷಗಳು ರಾಜ್ಯವನ್ನಾಳಿ ಪೌರವ ಎಂದು ಕರೆಯಲ್ಪಟ್ಟು ಕುರುವಂಶದ ಮೂಲ ಪುರುಷನಾದ. ಕುರುವಿನ ಮಗ ದುಶ್ಯಂತ ಹಾಗೂ ಸೊಸೆ ಶಕುಂತಲಾರವರಿಂದ ಮುಂದುವರೆದು ಭರತ, ಹಸ್ತಿನ, ಕುರು, ಶಂತನು ವರೆಗೆ ಕಾಲಚಕ್ರ ನಡೆದು ಬಂದಿದೆ.
ಪರಾಶರನೆಂಬ ಮುನಿಯು ಸುಂದರಳಾದ ಮತ್ಸ್ಯಕನ್ಯೆ ಸತ್ಯವತಿಯಲ್ಲಿ ಅನುರಕ್ತನಾಗಿ ಅವಳಿಂದ ಕೃಷ್ಣದ್ವೈಪಾಯನ ಎಂಬ ಮಗನನ್ನು ಪಡೆದ. ಅಲ್ಲದೆ ಸತ್ಯವತಿಗೆ ಕನ್ಯತ್ವವು ಶಾಶ್ವತವಾಗಿ ಹಾಗೆಯೇ ಉಳಿಯಲೆಂದು ಆಶೀರ್ವದಿಸಿದ. ಆದ್ಧರಿಂದ ಮತ್ತೆ ಆಕೆಯು ಕನ್ಯೆಯಾಗಿಯೇ ಉಳಿದಳು. ಇದರಿಂದಾಗಿ ಹಾಗೆ ಹುಟ್ಟಿದ ಕೃಷ್ಣದ್ವೈಪಾಯನರು ಅಯೋನಿಜ (ಯೋನಿಯ ಮೂಲಕ ಜನ್ಮಿಸದವನು) ಎಂದು ಕರೆಯಲ್ಪಟ್ಟರು. ಇವರನ್ನು ವೇದವ್ಯಾಸ ಎಂದು ಕರೆಯುತ್ತಾರೆ. ಇವರು ಮಹಾಭಾರತದ ಪ್ರಾರಂಭದಿಂದ ಅಂತ್ಯದವರೆಗೂ ವಿವಿಧ ಸಂದರ್ಭಗಳಲ್ಲಿ ವಿವಿಧ ಪಾತ್ರಗಳಲ್ಲಿ ಪ್ರಕಟರಾಗುತ್ತಾರೆ. ಮಹಾಭಾರತದ ನಂತರವೂ ಈ ಕಥೆಯ ಪ್ರತಿ ಘಟನೆಗಳನ್ನು ಮತ್ತು ಪ್ರತಿಪಾತ್ರಗಳನ್ನು ಅವುಗಳಿಗೆ ವಂಚನೆಯಾಗದಂತೆ ವಸ್ತುನಿಷ್ಠವಾಗಿ ಸವಿಸ್ತಾರವಾಗಿ ದಾಖಲಿಸಿದ ಕೀರ್ತಿ ಇವರದು.
(ಮುಂದುವರಿಯುವುದು)
ನಮ್ಮ ದೇವರುಗಳಲ್ಲಿ ರಾಮ ಮತ್ತು ಕೃಷ್ಣ ಇಬ್ಬರು ಮಾತ್ರ(ಪುರಾಣಿಕವಲ್ಲ) ಐತಿಹಾಸಿಕ ಪಾತ್ರಗಳು. ರಾಮಾಯಣ/ಮಹಾಭಾರತ ಮಹಾನ್ ಕೃತಿಗಳ ರಚಿಸಿದ ವಾಲ್ಮೀಕಿ/ವ್ಯಾಸರು, ತಾವೂ ಪಾತ್ರಧಾರಿಗಳಾಗಿ ರುವುದು ವಿಶೇಷ. ಭಾಗವತ, ಮಹಾಭಾರತಗಳ ಮೂಲಕ ಕೃಷ್ಣನ ಸೃಷ್ಟಿಸಿದವರು ಶ್ರೀ ವೇದವ್ಯಾಸರು. ಕೌರವರ ಮೂಲಪುರುಷರ ವಿವರಗಳನ್ನು ಸಂಗ್ರಹಿಸಿರುವುದು ಸ್ತುತ್ಯಾರ್ಹ. ವಿಶೇಷವೆಂದರೆ ವ್ಯಾಸರಿಗಿಂತ ಮೊದಲೇ ಜೀವಿಸಿದ ರಾಮನ ಹೆಸರೇ ಮೂಲ ಮಹಾಭಾರತದಲ್ಲಿ (ಸಂಧ್ಯಾವಂದನೆಯಲ್ಲಿಯೂ) ಕಾಣುವುದಿಲ್ಲ.
ReplyDeleteವೇದವ್ಯಾಸರು ಬರೆದ "ಜಯಂ" ಎಂಬ ಮೊದಲ ಐತಿಹಾಸಿಕ ಕಾವ್ಯ ಮುಂದೆ ಅನೇಕರ ಜೋಡಣೆ ಮೂಲಕ ಮಹಾಭಾರತವೆಂದಾಯ್ತು. ಅವರು ದಾಖಲಿಸಿದ, ಮದುವೆಗೂ ಮೊದಲೇ ಪ್ರಸವ, ವಿಧವೆಯಲ್ಲಿ ಮಕ್ಕಳನ್ನು ಪಡೆಯುವುದು, ಒಬ್ಬಳಿಗೆ ಐವರು ಗಂಡಂದಿರು(ಡಾ. S L ಭೈರಪ್ಪನವರು "ಪರ್ವ"ದಲ್ಲಿ ತಿಳಿಸಿದಂತೆ ಆಗಿನ ಕಾಲದಲ್ಲಿರಬಹುದಾದ ಪದ್ಧತಿ), ಚಕ್ರದಿಂದ ಸೂರ್ಯನ ಮುಚ್ಚುವ ಪವಾಡ(ಖಗ್ರಾಸ ಗ್ರಹಣ)ಲೇಖಕನ ಕಲ್ಪನಾಶಕ್ತಿ ಎಲ್ಲರೂ ಮೆಚ್ಚುವಂತಹುದೇ.
ReplyDeleteತಾವು ಹೇಳಿದಂತೆ ಮಹಾಭಾರತದ ಮೊದಲ ಹೆಸರು ಜಯ.ಹಲವು ವಿದ್ವಾಂಸರ ವೈಯಕ್ತಿಕ ದೃಷ್ಟಿ ,ವಿಶ್ಲೇಷಣೆ, ಅಭಿಪ್ರಾಯಗಳಿಂದಾಗಿ ಮೂಲ ಮಹಾಭಾರತ ಹಿಂಜಿದ ಹತ್ತಿಯಂತಾಗಿರಬಹುದು.ಇದು ಬೇರೆ ಪುರಾಣ ಪುಣ್ಯ ಕಥೆಗಳಿಗೂ ಅನ್ವಯಿಸುತ್ತದೆ.
Deleteಮಹಾಭಾರತದ ಮೂಲ ವಿಷಯ ಸಂಗ್ರಹ ತುಂಬಾ ಅಪರೂಪ. ಈ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಶ್ಲಾಘನೀಯ. ಓದುಗರಿಗೆ ಸರಳವಾಗಿ ಅರ್ಥವಾಗುವ ಈ ಸಂಚಿಕೆ ಉತ್ತಮವಾಗಿದೆ.ಮುಂದಿನ ಸಂಚಿಕೆಗೆ ಕಾತುರದಿಂದ ಕಾಯುತ್ತಿದ್ದೇವೆ.
ReplyDelete