Skip to main content

ಕವಿ ಕೀರ್ತಿ ಮಾರ್ಗ

ಕೀರ್ತಿ,ಸಂಸ್ಥೆಯೊಂದರ ಮಾರುಕಟ್ಟೆ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ. ಅವನು ಕೆಲವು ಪುಸ್ತಕಗಳನ್ನು ಬರೆದಿದ್ದಾನೆ ಎಂದು ಕೇಳ್ಪಟ್ಟಿದ್ದೆ. ಈ ಬಗ್ಗೆ ಚರ್ಚಿಸಿದಾಗ ಬಂದ ಅನುಭವದ ಮಾತು ಸ್ವಾರಸ್ಯಕರವಾಗಿತ್ತು ಮತ್ತು ತಮಾಷೆ ಮತ್ತು ಅವ್ಯಕ್ತ ನೋವಿನಿಂದ ತುಂಬಿತ್ತು. ಹಲವು ವರ್ಷಗಳ ಹಿಂದಿನ ಮಾತು, ಅವನೇ ಹೇಳಿದಂತೆ:
 
ನನಗೆ ಸಾರ್ವಜನಿಕ ಸಂಪರ್ಕ ಹೆಚ್ಚು ಇದ್ದುದರಿಂದ ವಿಷಯಗಳನ್ನು ವಾಡಿಕೆಯಿಂದ ವ್ಯವಸ್ಥಿತವಾಗಿ ಅರ್ಥವಾಗುವಂತೆ ವಿವರಿಸಬಲ್ಲೆ. ಮಾತಿನ ಚಾತುರ್ಯಕ್ಕೆ ಮರುಳಾಗದಿರುವವರೇ ಇಲ್ಲ ಎಂದು ಎಲ್ಲರೂ ಹೊಗಳುತ್ತಾರೆ. ಇಂತಹ ನನ್ನ ಅನುಭವಗಳನ್ನು ಹಲವು ಸಂದರ್ಭಗಳಲ್ಲಿ ಕೇಳಿದವರು, ನೀವು ಉತ್ತಮ ವಾಗ್ಮಿ, ಚೆನ್ನಾಗಿ ಮಾತನಾಡುತ್ತೀರಿ, ಇವುಗಳನ್ನೇ ಏಕೆ ನೀವು ಬರಹದ ರೂಪದಲ್ಲಿ ತರಬಾರದು ಎಂದು ಕೇಳುತ್ತಿದ್ದರು. ಇದನ್ನು ಕೇಳಿ ಕೇಳಿ ಮಡದಿಯೂ ಪುಸ್ತಕ ಬರೆಯುವಂತೆ ಆಗ್ರಹ ಮಾಡುತ್ತಿದ್ದಳು. ಮಿತ್ರರು ಬಂಧುಗಳು ಮತ್ತು ಈಗ ಮಾತನಾಡುತ್ತಿರುವ ಮಡದಿ ಪ್ರತಿಭಳ ಒತ್ತಾಸೆಯಿಂದ ಹೇಳುತ್ತಿದ್ದಾಗ ನಾನು ಕವಿಯಾಗುವ ಮತ್ತು ಅದರಲ್ಲಿ ಕೀರ್ತಿಗಳಿಸಿದ ಕನಸು ಆಗಾಗ್ಗೆ ಬೀಳಲು ಪ್ರಾರಂಭಿಸಿ ಕೊನೆಗೆ ಬರೆಯಲು ಶುರು ಮಾಡಿದೆ.
 
ವಿಭಿನ್ನ ವಿಚಾರಗಳು ಒಟ್ಟಿಗೇ ಮನಸ್ಸಿಗೆ ಬರುತ್ತಿದೆ, ಒಮ್ಮೆ ಗದ್ಯದ ರೂಪದಲ್ಲಿ, ಇನ್ನೊಮ್ಮೆ ಪದ್ಯದ ರೂಪದಲ್ಲಿ ಬರೆಯೋಣ ಎಂಬ ಮನಸ್ಸು. ಮಾತನಾಡುವುದೇ ಬೇರೆ, ಬರೆಯುವುದೇ ಬೇರೆ. ಇವು ಪ್ರತ್ಯೇಕ ಪ್ರತಿಭೆಗಳು. ಇದು ಗೊತ್ತಾಗಿದ್ದು ಬರೆಯಲು ಪ್ರಾರಂಭಿಸಿದ ಮೇಲೆಯೇ. ಆದರೆ ಪುಸ್ತಕ ಬರೆಯುವುದರ ಮೊದಲೇ ಆ ಬಗ್ಗೆ ಸಾಕಷ್ಟು ಪ್ರಚಾರ, ಘೋಷಣೆ ಮಾಡಿದ್ದರಿಂದ ಅನಿವಾರ್ಯವಾಗಿ ಬರೆಯಲೇ ಬೇಕಾದ ಪರಿಸ್ಥಿತಿ. ಅಂತೂ ಗದ್ಯ-ಪದ್ಯ, ವಿಡಂಬನೆ, ರಗಳೆಗಳ ಪುಸ್ತಕ ಬರೆದು ಮುಗಿಸಲು ಐದು ತಿಂಗಳಾಯಿತು.
 
ಇಷ್ಟೊಂದು ಬರಹವನ್ನು ಕೇವಲ ಬರೆದು ಇಟ್ಟುಕೊಳ್ಳುವುದರಿಂದ ಉಪಯೋಗವಿಲ್ಲ, ಏಕೆ ಪುಸ್ತಕ ರೂಪದಲ್ಲಿ ಪ್ರಕಟಿಸಬಾರದು ಎಂಬ ಪ್ರಶ್ನೆ ಪ್ರಾರಂಭವಾಯಿತು. ಮಡದಿ ಮಿತ್ರರ ಒತ್ತಾಯಕ್ಕೆ ಕಟ್ಟು ಬಿದ್ದು ಪ್ರಕಾಶಕರ ಹುಡುಕಾಟ. ಅವರ ನಿಬಂಧನೆಗಳಿಗೆ ಒಳಪಡಲು ಇಷ್ಟವಿಲ್ಲವಾದ್ದರಿಂದ ಸ್ವಯಂ ಪ್ರಕಟಿಸಲು ಯೋಚನೆ ಮಾಡಿದೆ. ಬರಹಗಳನ್ನೆಲ್ಲ ವ್ಯವಸ್ಥಿತವಾಗಿ ಕೂಡಿಸಲು ಮುಂದೆ ಬಂದ ಮಿತ್ರನೊಬ್ಬನ ವಿಶ್ವಾಸದ ಸಹಕಾರ. ನಂತರ ಅವನೇ ಸಂಪಾದಕ ಎಂದು ಕರೆಯಲ್ಪಟ್ಟ. ಬರಹಗಳನ್ನು ಡಿಟಿಪಿ ಮೂಲಕ ಜೋಡಿಸಲು ಸಂಬಂಧಿತ ಕೆಲಸಗಾರರ ಭೇಟಿ. ತಮಗೆ ಪುರುಸೊತ್ತಿಲ್ಲವಾದರೂ ಈ ಸಂಪಾದಕರು ಪರಿಚಯ ಇರುವುದರಿಂದ ಇಲ್ಲ ಎನ್ನಲಾರೆ, ಮಾಡುತ್ತಿದ್ದೇನೆ ಎಂಬ ಮಾತಿನೊಂದಿಗೆ ಅವರು ಒಪ್ಪಿಗೆ ಸೂಚಿಸಿದ್ದೇ ದೊಡ್ಡದೆನಿಸಿತು. ಅವರೇ ಸೂಚಿಸಿದ ಮುದ್ರಕರ ಭೇಟಿಯಾಯಿತು. ಈವರೆಗೂ ಗೊತ್ತಾಗದ ಪುಸ್ತಕದ ವಿವಿಧ ಅಳತೆಗಳು. ಡೆಮ್ಮೀ, ಕ್ರೌನ್ ಎಂಬ ಹೊಸ ಶಬ್ದಗಳು. ನನ್ನಲ್ಲಿರುವ ಒಂದು ಪುಸ್ತಕವನ್ನು ತೋರಿಸಿ ಅದರಂತೆ ಬೆಲೆಗಳನ್ನು ಪಡೆಯಲು ಹಲವು ಮೀಟಿಂಗ್. ಬರಹಗಳನ್ನು ನೋಡಿ ಸುಮಾರು ೨೦೦ ಪುಟಗಳು ಆಗುತ್ತವೆ ಜೊತೆಗೆ ರಕ್ಷಾಪುಟ ಮುನ್ನುಡಿ ಹಿನ್ನುಡಿ ಆಗಬೇಕು. ಅವರೇ ಹೇಳಿದಂತೆ ಕಡಿಮೆ ಪ್ರತಿ ಮಾಡಿಸಿದರೆ ಪುಸ್ತಕಕ್ಕೆ ಹೆಚ್ಚಿನ ಬೆಲೆಯಾಗುತ್ತದೆ ಮತ್ತು ಹೆಚ್ಚಿನ ಪ್ರತಿಗಳನ್ನು ಮಾಡಿದರೆ ಪ್ರತಿ ಪುಸ್ತಕಕ್ಕೆ ಕಡಿಮೆ ಬೆಲೆ ಆಗುತ್ತದೆ. ಪುಸ್ತಕದ ಬೆಲೆ ಕಡಿಮೆಯಾಗುತ್ತದೆ ಎಂದು ೩೦೦೦ ಪ್ರತಿಗಳಿಗೆ ಆರ್ಡರ್ ಮಾಡಿದ್ದಾಯಿತು. ದಪ್ಪನಾದ ರಕ್ಷಾಪುಟ ಒಳಭಾಗದಲ್ಲಿ ಒಳ್ಳೆಯ ದರ್ಜೆಯ ಕಾಗದಗಳು, ಮುಖಪುಟ ಮತ್ತು ಹಿಂಬದಿ ನನ್ನ ಛಾಯಾಚಿತ್ರದೊಂದಿಗೆ ವಿವಿಧ ವರ್ಣಗಳ ಉತ್ತಮ ವಿನ್ಯಾಸದ ಮುದ್ರಣ ಎಂಬ ಸಮಾಧಾನ, ಖುಷಿ ಬೇರೆ. ಪುಸ್ತಕದ ಪ್ರಕಟಣೆ ಹಕ್ಕುಸ್ವಾಮ್ಯ ನನ್ನದೇ ಎಂಬ ಸಂತೋಷ, ಹೆಮ್ಮೆ ಬೇರೆ. ಸರಿಯಾದ ಗಣ್ಯ ವ್ಯಕ್ತಿಯಿಂದ ಮುನ್ನುಡಿ ಬರೆಸಿದಲ್ಲಿ ಚಿಟಿಕೆ ಹೊಡೆದಂತೆ ಪುಸ್ತಕಗಳು ಖರ್ಚಾಗುತ್ತದೆ ಎಂಬ ಮುದ್ರಕನ ಮಾತು ಕಿವಿಯಲ್ಲಿ ಗುನುಗುತ್ತಿತ್ತು. ಈಗ ಗಣ್ಯವ್ಯಕ್ತಿಯ ಹುಡುಕಾಟ. ಅಂತಹ ವ್ಯಕ್ತಿಗಳು ಸಿಗುವುದೇ ಕಷ್ಟ. ಈ ಮಧ್ಯೆ ವ್ಯಕ್ತಿಯ ಹೆಸರು ಸಿಕ್ಕಾಗ ಅವರು ಎಷ್ಟು ಗಣ್ಯರು ಎಂಬ ಅನುಮಾನ. ಇವುಗಳ ಮಧ್ಯೆ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಶ್ರೀಮಾನ್ ಹಲಗಪ್ಪನವರಿಂದ ಮುನ್ನುಡಿ ಎಂದು ತೀರ್ಮಾನವಾಯಿತು. ಪುಸ್ತಕದ ಹಿಂಬದಿಯಲ್ಲಿ ಲೇಖಕನ ಛಾಯಾಚಿತ್ರದೊಂದಿಗೆ ಸ್ವಂತ ಪರಿಚಯ ಮಾಡಿಕೊಳ್ಳಬೇಕು, ನನ್ನ ಬಗ್ಗೆ ನನಗೆ ಬರೆಯಲು ಏನೋ ಆತಂಕ, ನಾಚಿಕೆ, ಭಯ. ಅರೆ ಮನಸಿನಿಂದ ಬರೆಯಲು ಪ್ರಾರಂಭಿಸಿದರೆ ಅದೇ ಎರಡು ಪುಟಗಳು. ಅದನ್ನು ಮತ್ತೆ ಮತ್ತೆ ತಿದ್ದುಪಡಿ ಮಾಡಿ ಅರ್ಧ ಪುಟಕ್ಕೆ ಇಳಿಸುವ ವೇಳೆಗೆ ಸಾಕಾಗಿ ಹೋಯಿತು. ಇನ್ನು ನನ್ನ ಛಾಯಾಚಿತ್ರದ ಸೆಲೆಕ್ಷನ್. ಅದನ್ನು ನನ್ನ ಮಗ, ಮಗಳು, ಮಡದಿ ಮತ್ತು ಆಪ್ತ ಮಿತ್ರನಿದ್ದ ಕಮಿಟಿ ತೀರ್ಮಾನ ಮಾಡುವುದಕ್ಕೆ ಎರಡು ದಿನವಾಯಿತು. ಈ ಮಧ್ಯೆ ಪ್ರೂಫ್ ರೀಡಿಂಗ್, ಹೊಸ ವಿಷಯಗಳ ಪುಟಗಳು, ಸಣ್ಣಪುಟ್ಟ ಮಾರ್ಪಾಡು, ಸಂಬಂಧಿಸಿದ ಫೋಟೋಗಳನ್ನು ಸೇರಿಸುವುದು ಹೀಗೆ ಹಲವು ಬೆಳಿಗ್ಗೆ ಸಂಜೆಗಳ ಮುದ್ರಕನೊಂದಿಗೆ ಮೀಟಿಂಗ್. ಈ ಮಧ್ಯೆ ಮುನ್ನುಡಿಯಲ್ಲಿ ಯಾರು ಯಾರಿಗೆ ಕೃತಜ್ಞತೆ ಹೇಳಬೇಕು, ಯಾರಿಗೆ ಹೇಳದಿದ್ದರೆ ತೊಂದರೆಯಾಗುತ್ತದೆ ಎಂಬ ಯೋಚನೆಯಲ್ಲಿ ಸಹೋದರರು, ಮಿತ್ರರು, ಮಡದಿ, ಮಕ್ಕಳು, ತಂದೆ-ತಾಯಿಯರು, ಅತ್ತೆ, ಮಾವ - ಎಲ್ಲರ ಚಿತ್ರಗಳು ಹಾದು ಹೋಯಿತು. ಏತಕ್ಕಾಗಿ ಈ ಪುಟ ಇದೆಯೋ ಎಂಬ ಜಿಜ್ಞಾಸೆ. ನಾನು ಏಕೆ ಬರೆಯುತ್ತೇನೆ ಎಂಬುದನ್ನು ಹೇಳಬೇಕು. ಹಲವು ಸಮಾಜಾಯಿಷಿಯೊಂದಿಗೆ, ಅತ್ತೆ ಮಾವರ ಆಶೀರ್ವಾದದೊಂದಿಗೆ ಮತ್ತು ನನ್ನ ತಂದೆ ತಾಯಿಯವರಿಗೆ ಸಮರ್ಪಣೆ ಎನ್ನಲು ಸಾಕಾಯಿತು. ಪ್ರಕಟನೆ, ಪುಸ್ತಕ ಬಿಡುಗಡೆಯ ಸುಸೂತ್ರ ಕಾರ್ಯಕ್ರಮವನ್ನು ನೆನೆದು ಮಡದಿಯ ಹೆಸರಲ್ಲಿ ಪ್ರಕಾಶನ, ಮನೆಯ ವಿಳಾಸ ಕೊಡುವುದು ಎಂದು ತೀರ್ಮಾನವಾಯಿತು. ಇಷ್ಟೆಲ್ಲಾ ವಿಷಯಗಳನ್ನು ಹೊತ್ತು ಯಶಸ್ವಿಯಾಗಿ ಪುಸ್ತಕಗಳು ಬಂಡಲ್ ರೂಪದಲ್ಲಿ ಮನೆ ಸೇರಿತು. ಎಲ್ಲಾ ಪುಸ್ತಕಗಳನ್ನು ಇಡಲು ಸ್ಥಳಾವಕಾಶ ಇಲ್ಲದಿದ್ದುದರಿಂದ ಮಗನ ರೂಂನಲ್ಲಿ ನಮ್ಮ ರೂಮಿನ ಮಂಚದ ಕೆಳಗಿನ ಭಾಗ, ಕೆಲವು ಅಟ್ಟದ ಮೇಲೆ ಇಡುವ ವೇಳೆಗೆ ಅವನ ರೂಮಿನಲ್ಲಾದ, ಸ್ಥಳಾವಕಾಶದ ಕೊರತೆ, ಮಗನಿಂದ ಕಿರಿಕಿರಿ ತಂದರೂ ಪ್ರಕಾಶಕಿ ಮಡದಿ ಅದರ ಹೊಣೆಯನ್ನು ಹೊತ್ತು ಸಮಾಧಾನ ಮಾಡಿದಳು.
 
ಪ್ರಕಾಶಕಿಯಿಂದ ಅನಿರೀಕ್ಷಿತವಾಗಿ ಮೀಟಿಂಗ್. ಕಚೇರಿಯಲ್ಲಿ ಕೆಲಸ ಎಂದು ತಪ್ಪಿಸಿಕೊಳ್ಳುವಂತಿಲ್ಲ. ಕಲಾಕ್ಷೇತ್ರದಲ್ಲಿ ಪುಸ್ತಕದ ಪ್ರಕಟಣೆ. ಉದ್ಘಾಟನಾ ಸಮಾರಂಭವು ಭಾನುವಾರದಂದೇ ಸಿಗುವ ಮತ್ತು ನಮ್ಮಿಬ್ಬರ ಜಾತಕಕ್ಕೆ ಹೊಂದುವ ಮುಹೂರ್ತದ ಶುಭದಿನದಂದು ಎಂದು ತೀರ್ಮಾನವಾಯಿತು. ನಾನು ಕವಿಯಾದ್ದರಿಂದ ನನಗೆ ಹೊಂದುವ ಜುಬ್ಬಾ-ಪೈಜಾಮ, ವಿಶೇಷ ಪೆನ್, ಕೊಲ್ಹಾಪುರಿ ಚಪ್ಪಲಿಗಳು. ಸಾಕಷ್ಟು ವೇಳೆ ಇರುವುದರಿಂದ ತಲೆಯಲ್ಲಿ ಇದ್ದಷ್ಟು ಕೂದಲನ್ನೇ ಉದ್ದವಾಗಿ ಬಿಡುವುದು, ಮುಖದಲ್ಲಿ ಗಡ್ಡ ಬಿಡಬೇಕೆಂದೂ ನನ್ನ ಧಿರಿಸುಗಳಿಗೆ ಹೊಂದುವಂತೆ ಮಡದಿಗೆ ಸೀರೆಯನ್ನು ಮೈಸೂರು ಸಿಲ್ಕ್ನಲ್ಲಿ ತರಬೇಕೆಂದು ತೀರ್ಮಾನವಾಯಿತು. ಮುಖ್ಯ ಅತಿಥಿಗಳಾಗಿ ಕವಿಗಳು, ವಿದ್ವಾಂಸರು ಎಂದು ಹೆಸರಾದ ಮುನ್ನುಡಿ ಬರೆದ ಶ್ರೀಮಾನ್ ಹಲಗಪ್ಪನವರನ್ನು ಪುಸ್ತಕವನ್ನು ಬಿಡುಗಡೆ ಮಾಡಬೇಕೆಂದು ಒಪ್ಪಿಸಲಾಯಿತು. ಮದುವೆಗೆ ಆಹ್ವಾನ ನೀಡುವಂತೆ ಬಂಧುಗಳ ಮಿತ್ರರ ಮನೆಮನೆಗೆ ಹೋಗಿ ಕರೆಯೋಲೆ ಕೊಟ್ಟು ಬಂದಾಯಿತು. ಸಂಬಂಧಿಗಳಲ್ಲಿ ಇದ್ದ ಒಬ್ಬ ಸ್ವಯಂಘೋಷಿತ ಕವಿಬಂಧುವಿನಿಂದ ತನ್ನಿಂದ ಪುಸ್ತಕವನ್ನು ಬಿಡುಗಡೆ ಮಾಡಿಸಬಹುದಾಗಿತ್ತು ಎಂಬ ಅಸಮಾಧಾನವನ್ನು ಸಣ್ಣದಾಗಿ ಕೇಳಿದೆವು.
 
ಸಮಾರಂಭದ ದಿನ ಬೆಳಿಗ್ಗೆ ೯ ಗಂಟೆಗೇ ಕಲಾಕ್ಷೇತ್ರಕ್ಕೆ ಹೋದೆವು. ಅಲ್ಲಿಯ ತೋರಣ, ದ್ವಾರಾಲಂಕಾರ, ವೇದಿಕೆಯ ತಯಾರಿ, ಪುಸ್ತಕವನ್ನು ರಿಯಾಯಿತಿಗೆ ಮಾರಾಟ ಮಾಡುವ ಕೌಂಟರ್ ಇವುಗಳನ್ನು ಹೊಂದಿಸಿ ಸಮೀಪದ ಹೋಟೆಲ್ನಲ್ಲಿ ಇದ್ದವರಿಗೆಲ್ಲಾ ಊಟವಾಯಿತು. ಸುಮಾರು ೮೦ ಜನರನ್ನು ನಿರೀಕ್ಷಿಸಿ ಅವರಿಗೆಲ್ಲಾ ಸಿಹಿಯೊಂದಿಗೆ ಸಮೋಸ ಕಾಫಿ-ಟೀ ಹೇಳಿದ್ದರಿಂದ ಅವುಗಳ ತಯಾರಿಯೂ ಭರಾಟೆಯಿಂದ ನಡೆದಿತ್ತು. ಅತ್ತೆ ಮಾವ ಮತ್ತು ಮುಖ್ಯ ಅತಿಥಿಗಳಿಗೆ ವಿಶೇಷ ಕಾರಿನ ವ್ಯವಸ್ಥೆ ಮಾಡಿದ ಸ್ವಾಗತ ಸಮಿತಿಯ ಸಡಗರ ಹೇಳತೀರದು. ತಡವಾಗಿ ಆಗಮಿಸಿದ ಮುಖ್ಯಅತಿಥಿಗಳು, ಸೇರಿದ್ದ ಸಭಾಸದರ ಸಂಖ್ಯೆಯನ್ನು ಪರಿಗಣಿಸದೆ, ಸಮಾಧಾನದಿಂದಲೇ ಹೆಚ್ಚಿನ ಆಹ್ವಾನಿತರು ಸಭೆ ಸೇರುವವರೆಗೂ ತಮ್ಮ ಸ್ವಂತ ಪರಿಚಯ, ಸ್ವಂತ ಕಾವ್ಯ ವಾಚನ ಅವ್ಯಾಹತವಾಗಿ ನಡೆಸಿದರು. ನಿಧಾನವಾಗಿಯಾದರೂ ಆಗಮಿಸಿದ ಕೆಲವು ಆಹ್ವಾನಿತರ ಸಮ್ಮುಖದಲ್ಲಿ ಇನ್ನೊಮ್ಮೆ ಅತಿಥಿಗಳಿಗೆ ಸ್ವಾಗತ, ಉಡುಗೊರೆ, ಹಣ್ಣು ಹೂವು ಸಮರ್ಪಣೆ ನಡೆಯಿತು. ಕಾರ್ಯಕ್ರಮ ಪ್ರಾರಂಭ ತಡವಾದ್ದರಿಂದ ತಿಳಿಸಿದ ವೇಳೆಗೆ ಸಮಾರಂಭ ಮುಗಿಯಲಿಲ್ಲ. ಕಲಾಕ್ಷೇತ್ರದ ವ್ಯವಸ್ಥಾಪಕ ಮತ್ತು ಅವನ ಸಿಬ್ಬಂದಿಗಳ ಕಿರಿಕಿರಿ ತಾಳದೆ ಅವನಿಗೆ ಹೆಚ್ಚಿನ ಭಕ್ಷೀಸು ಕೊಟ್ಟರೂ ಅವನ ಅತೃಪ್ತಿ ಕಾಣುತ್ತಿತ್ತು. ಅತಿಥಿಗೆ ಬೇಗ ಮಾತು ಮುಗಿಸಲು ಪ್ರಾರ್ಥಿಸಿದ ನಂತರ, ಪುಸ್ತಕ ಬಿಡುಗಡೆ, ಪುಸ್ತಕದ ಹಂಚಿಕೆ, ಪ್ರಕಾಶಕರ ಬಗ್ಗೆಯೇ ಹೆಚ್ಚು ಮಾತನಾಡಿದ್ದರಿಂದ ಕವಿ ಬಗ್ಗೆ ಎರಡೇ ಮಾತು ಆಡಲು ಅವಕಾಶವಾಯಿತು. ವಿಶೇಷ ಕಾರ್ಯಕ್ರಮವಾಗಿ ಸಂಬಂಧಿಕರ ಮಕ್ಕಳಿಂದ ಭರತನಾಟ್ಯ ಮತ್ತು ಸಂಗೀತ ಎಂದು ತಿಳಿಸಿದ್ದರಿಂದ, ಅವರಿಗೆ ಬೇಸರವಾಗದಿರಲು ಕವಿಯ ಮಾತಿಗೆ ಸಿಗದ ಅವಕಾಶ. ಕಲಾಕ್ಷೇತ್ರವನ್ನು ನೋಡಲು ಬಂದ ದಾರಿಹೋಕರನ್ನು ಸೇರಿದಂತೆ ೩೦ ಜನರು, ಸಭೆಯನ್ನು ಅಲಂಕರಿಸಿದ್ದರಿಂದ ಸ್ವಲ್ಪವಾದರೂ ಮರ್ಯಾದೆ ಉಳಿಯತು. ಸೇರಿದ್ದ ಮಂದಿಗೆ ತಿಂಡಿಯ ವಿತರಣೆ ಆಯಿತು. ಸಾಕಷ್ಟು ಆಹ್ವಾನಿತರೂ ಬಂದಿಲ್ಲವಾಗಿ ತಂದಿದ್ದ ಖಾರದ ಸಮೋಸಗಳನ್ನು ವಿಲೇವಾರಿ ಮಾಡುವುದರಲ್ಲಿ ಸಾಕಾಯಿತು. ಪುಸ್ತಕ ಮಾರಾಟ ರಿಯಾಯಿತಿ ಕೌಂಟರ್ ಬಿಕೋ ಎನ್ನುತ್ತಿತ್ತು. ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಮನೆಗೆ ಬರುವ ವೇಳೆಗೆ ರಾತ್ರಿ ಹನ್ನೊಂದಾಗಿತ್ತು.
 
ಕಳೆದ ಎರಡು ತಿಂಗಳ ಆಯಾಸವೆಲ್ಲ ಮುಗಿಯಿತು. ದೊಡ್ಡ ಕೆಲಸವಾಯಿತು ಎಂಬ ಸಮಾಧಾನವು ಒಮ್ಮೆ ಉಸ್ ಎನಿಸಿತು. ಮರು ದಿನ ನಡೆದ ಕಾರ್ಯಕ್ರಮಗಳ ಬಗ್ಗೆ ಒಂದು ಹಿನ್ನೋಟ ಪ್ರಾರಂಭಿಸಿದೆವು. ಪುಸ್ತಕ ಮುದ್ರಣ ದಿನಾಂಕದಿಂದ ಇಂದಿನವರೆಗೂ ನಡೆದ ಓಡಾಟ, ಮುದ್ರಣದ ಖರ್ಚುವೆಚ್ಚಗಳು, ಸಮಾರಂಭಕ್ಕಾಗಿ ಆಹ್ವಾನ, ಕಾರ್ಯಕ್ರಮದ ಖರ್ಚು, ಇವುಗಳ ಮಧ್ಯೆ ಅದಕ್ಕಾಗಿ ಆದ ಸ್ವಂತ ಅಲಂಕಾರ, ಊಟೋಪಚಾರದ ಹೆಚ್ಚಿನ ಖರ್ಚುಗಳು ಲಕ್ಷವನ್ನು ದಾಟಿತ್ತು. ಸುತ್ತ ಕಣ್ಣು ಹಾಯಿಸಿದಾಗ ಕಾಣುತ್ತಿರುವ ಮೇಲಿನ ದಾರವನ್ನು ಬಿಚ್ಚದ ಪುಸ್ತಕದ ಬಂಡಲುಗಳು. ಇವುಗಳನ್ನು ವಿಲೇವಾರಿ ಮಾಡುವುದು ಹೇಗೆ ಎಂಬ ಹೊಸ ಯೋಚನೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿಯಾಗಲೀ, ನಂತರವಾಗಲೀ, ನನಗೊಂದು ಎಂದು ಕೇಳಿ ಕೊಂಡವರು ಒಬ್ಬರೂ ಇಲ್ಲ. ನಮಗೋ ಅವರನ್ನು ಕೊಂಡುಕೊಳ್ಳಿ ಎಂದು ಕೇಳಲು ಸರಿಯಾಗುತ್ತಿಲ್ಲ. ಹಾಗೆಯೇ ಒಂದು ತಿಂಗಳು ಕಳೆಯಿತು.
 
ಮನೆಯಲ್ಲಿ ಸ್ಥಳಾವಕಾಶದ ಸಮಸ್ಯೆ ನೀಗಿಕೊಳ್ಳಲು ಒಂದು ಕಾರ್ಯಯೋಜನೆ. ಯಾರೂ ಕೊಳ್ಳುವವರು ಇಲ್ಲವಾದ್ದರಿಂದ ಮನೆಮನೆಗೆ ಹೋಗಿ ಬಂಧುಗಳಿಗೆ ಉಚಿತವಾಗಿ ಪುಸ್ತಕದ ಹಂಚಿಕೆ ಮಾಡುವುದು, ಮದುವೆ ಮನೆಗಳಲ್ಲಿ, ಉಪನಯನ ಸಮಾರಂಭಗಳಲ್ಲಿ, ಅಥವಾ ಇಂತಹ ಸಮಾರಂಭಗಳನ್ನು ತಪ್ಪಿಸಿಕೊಳ್ಳದೆ ಹಾಜರಾಗಿ ಅಲ್ಲಿ ಪುಸ್ತಕಗಳನ್ನು ಉಚಿತವಾಗಿ ಹಂಚುವ ಯೋಜನೆ ಇಟ್ಟುಕೊಂಡೆವು. ಹೀಗೆ ಕಾರ್ಯಕ್ರಮದಲ್ಲಿ ಪುಸ್ತಕ ಕೊಟ್ಟಾಗ ಕೆಲವರು ಈಗಾಗಲೇ ಬಂದಿದೆ ಎನ್ನುತ್ತಾರೆ, ಇನ್ನು ಕೆಲವರು ಸಂಕೋಚದಿಂದ ಪಡೆಯುತ್ತಿದ್ದಾರೆ. ಹಾಗೆ ಬೇರೆಯವರಿಗೆ ಹಂಚುವುದು ನೋಡಿ ಪಕ್ಕದಲ್ಲಿದ್ದವರೊಂದಿಗೆ ಅದೇನೋ ಹೇಳಿಕೊಳ್ಳುತ್ತಾ ಮುಸಿಮುಸಿ ನಗುವ ಆಪ್ತಮಿತ್ರರು, ಹತ್ತಿರದ ಬಂಧುಗಳು - ಕನಸಿನಲ್ಲಿಯೂ ಕಾಣುತ್ತಾರೆ. ಈ ಮುಜುಗರ ಬೇಡವೆಂದು ಬೇರೆ ಊರಿನಲ್ಲಿ ಹಂಚಲು ಕಾರಿನಲ್ಲಿ ನಡೆಯುತ್ತಿದ್ದ ಪುಸ್ತಕಗಳ ಸಾಗಾಟ ಮತ್ತು ಹಂಚಿಕೆ ನಿಧಾನವಾಗಿ ಆರಂಭಿಸಿದೆವು. ಹೀಗೆ ಹೋಗಿ ಹಂಚಿಕೆಯನ್ನು ಮಾಡುತ್ತಿದ್ದಾಗ ಕೆಲವೊಮ್ಮೆ ನನ್ನ ಹೆಂಡತಿಯು ಪುಸ್ತಕದ ಬಂಡಲನ್ನು ಪದೇ ಪದೇ ಮರೆತು ಬರುವುದು ಶುರುವಾಗಿದ್ದು ಗಮನಕ್ಕೆ ಬಂತು. ಮುಂದಿನ ದಿನಗಳಲ್ಲಿ ಅದು ಅವಳ ಜಾಣಮರೆವು ಎಂದು ಗೊತ್ತಾಯಿತು. ಅವಳಿಗೆ ಮನೆಯಲ್ಲಿನ ಪುಸ್ತಕಗಳು ಖಾಲಿಯಾದರೆ ಸಾಕಾಗಿದೆ. ಆದರೆ ಬಂಧುಗಳಿಗೆ ಉಚಿತವಾಗಿ ಪಡೆಯಲು ಸಂಕೋಚ. ಹಾಗೆಂದು ಬಂಧುಗಳು ತಮಗೆ ಉಪಯೋಗವಿಲ್ಲದ ವಸ್ತುವನ್ನು ಏಕೆ ಕೊಳ್ಳುತ್ತಾರೆ. ಇದು ನಮಗೆ ಖರ್ಚು, ಜನರಿಗೆ ಉಪಯೋಗವಿಲ್ಲದ ವ್ಯವಹಾರ ಎಂದು ಮನದಟ್ಟಾಯಿತು. ಹೀಗೆ ಎಷ್ಟೋ ಪುಸ್ತಕಗಳು ಖರ್ಚಾದ ಮೇಲೂ ಮನೆಯಲ್ಲಿ ಸಂಧಿಯಲ್ಲಿ ಸೇರಿಸಿದ್ದ ಈಗಲೂ ಕಾಣುತ್ತಿರುವ ಹಲವು ಬಂಡಲ್ ಪುಸ್ತಕಗಳು, ತಮಗಾದ ಖರ್ಚಿನಲ್ಲಿ ನಿಮ್ಮ ಮಗಳ ಮದುವೆಯ ಎಷ್ಟೋ ಖರ್ಚುಗಳನ್ನು ಸರಿದೂಗಿಸಬಹುದಾಗಿತ್ತಲ್ಲವೇ ಎಂದು ಪಿಸುಗುಟ್ಟಿತೇನೋ ಎಂಬಂತೆ ಕೇಳಿಸುತ್ತಿತ್ತು. ಹಲವರ ಪ್ರೋತ್ಸಾಹದ ಮಾತು ನನ್ನಲ್ಲಿ ಕವಿಯಾಗುವ ಕೀರ್ತಿಶನಿ ಹೆಚ್ಚಿಸಿ ಒಂದು ಒಳ್ಳೆಯ ಪಾಠವನ್ನೇ ಕಲಿಸಿತು. ಮಾನ್ಯ ಡಿವಿಜಿ ಯವರು ಮಂಕುತಿಮ್ಮನ ಕೆಳಕಂಡ ಕಗ್ಗವನ್ನು ನನ್ನಂತಹವರನ್ನು ನೋಡಿಯೇ ಬರೆದಿದ್ದಾರೇನೋ ಎಂದೆನಿಸುತ್ತದೆ:
 
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ ।
ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರವೆಷ್ಟಾಯ್ತೊ? – ಮಂಕುತಿಮ್ಮ ।।
 
ಎಂಬಂತೆ ನನ್ನ ಬಗ್ಗೆ ಸರಿಯಾಗಿ ತಿಳಿಯದೆ ಪ್ರಸಿದ್ಧಿ, ಕೀರ್ತಿಗಾಗಿ ಹೀಗೆ ಹೆಚ್ಚು ಖರ್ಚು ಮಾಡಿಕೊಂಡೆನಲ್ಲ ಎಂದೆನಿಸುತ್ತದೆ. ಆದರೂ ನನ್ನ ಪುಸ್ತಕವನ್ನು ನೋಡಿದ ಕೆಲವರು ಈಗಲೂ ಹೇಳುವುದುಂಟು, ಪುಸ್ತಕವನ್ನು ಚೆನ್ನಾಗಿ ಬರೆದಿದ್ದೀರಿ ಇನ್ನೂ ಬರೆಯಬಹುದಲ್ಲ ಎಂದಾಗ  ಮೌನ ಮತ್ತು ಮುಗುಳ್ನಗೆಯೇ ನನ್ನ ಉತ್ತರವಾಗಿದೆ  ಎಂದು ನಿರಾಸೆಯಿಂದ ಹೇಳಿದನು.
 
ಈ ಬಗ್ಗೆ ಯೋಚಿಸಿದಾಗ ಆತ ನಿಜವಾಗಿಯೂ ಕವಿ ಯಾಗುವ ಮಾರ್ಗದಲ್ಲೇ ಇದ್ದು ಬಹು ಶೀಘ್ರದಲ್ಲಿ ಪ್ರಸಿದ್ಧನಾಗ ಬೇಕೆಂಬ ಹಂಬಲ ಮತ್ತು ಅದಕ್ಕೆ ಮಾಡಿದ ಖರ್ಚು ಅಷ್ಟೇ  ತಪ್ಪು. ಬರಹಗಾರನು ಪ್ರಾರಂಭದ ದಿನಗಳಲ್ಲಿ ತನ್ನ ಬಗ್ಗೆ, ತನ್ನ ಕೃತಿಯ ಬಗ್ಗೆ ಹೇಳಿಕೊಳ್ಳದಿದ್ದರೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತದೆ. ಕೇಳಿದ ಕೆಲವರಾದರೂ ಮತ್ತೆ ಬರೆಯಲು, ತಮಗೆ ಖರ್ಚಿಲ್ಲದ, ಕನಿಷ್ಠ ಮಾತಿನಲ್ಲಿ ಯಾದರೂ ಉತ್ತೇಜಿಸಿದಲ್ಲಿ ಅವನೂ ಕವಿಯಾಗಿ ಬೆಳೆಯಲು ಸಾಧ್ಯ. ಪ್ರಾಯೋಗಿಕವಾಗಿ ಮಾಡಿಕೊಂಡ ಪುಸ್ತಕಗಳನ್ನು ಉಚಿತವಾದರೂ ವಿಶ್ವಾಸವಾಗಿ ಪಡೆದಲ್ಲಿ ಅದೂ ಪ್ರೋತ್ಸಾಹವೇ ಆಗಿರುತ್ತದೆ. ಇವೆಲ್ಲಾ ಉದಯೋನ್ಮುಖ ಕವಿಯ ಬಾಲ ಲೀಲೆಗಳು ಎಂದುಕೊಂಡರೆ ಅದು ಅವರ ಹೃದಯ ವೈಶಾಲ್ಯ. ಹಾಗೆಂದೇ ಅವನಲ್ಲಿರುವ ಕವಿಹೃದಯವನ್ನು ಗುರುತಿಸಿ ಅವನು ಬರಹವನ್ನು ಮುಂದುವರಿಸುವುದಕ್ಕೆ ಬೇಕಾದ ಉತ್ತೇಜನದ ಮಾತುಗಳನ್ನಾಡಿದೆ.
 
ತಾನು ಎಸ್ಎಲ್ ಭೈರಪ್ಪ ನವರು, ಕುವೆಂಪು ಅಥವಾ ಜಿಎಸ್ ಶಿವರುದ್ರಪ್ಪ ನವರೋ, ಹೀಗೆ ಏನೋ ಆಗುವ ಕನಸಿನವರು ಅವರ ಬರಹವನ್ನು ಅನುಸರಿಸಿ ಕಲಿಯುವುದರ ಬದಲು ಅವರಿಗಿರುವ ಖ್ಯಾತಿಯನ್ನು ನೆನೆದು ತನ್ನ ಪ್ರಚಾರದ ಆಸೆಗೆ ಬಿದ್ದರೆ ಇಂತಹ ಸಾಧ್ಯತೆಗಳು ಸಹಜವೇ. ಹಂತ ಹಂತವಾಗಿ ಮೇಲೆ ಬಂದ ಹಿರಿಯರ ಜೀವನ ಕ್ರಮವನ್ನು ಪೂರ್ತಿಯಾಗಿ ಅಭ್ಯಸನ ಮಾಡಬೇಕು. ಪ್ರತಿಯೊಬ್ಬರ ಜೀವನವೂ ಬೇರೆಬೇರೆ. ಅವರು ಸಾಧಿಸಿದ ಹಾದಿಯು ಬೇರೆಬೇರೆಯೇ. ಕಣ್ಣಿಗೆ ಕಾಣುವುದಷ್ಟೇ ಸತ್ಯವಲ್ಲ ಎಂಬುದನ್ನು ಮನಗಂಡಾಗ ನಿರಾಸೆ ಯಾವಾಗಲೂ ದೂರವೇ.

Comments

  1. ಅಕ್ಷರಶಃ ಸತ್ಯ. ಇದು ಕನ್ನಡ ಕವಿಗಳ ನೋಟ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಈ ಕಥೆಯಲ್ಲಿ ಉದಯೋನ್ಮುಖ ಕವಿಯ ತೊಳಲಾಟವನ್ನು ಹಾಗೂ ಅವರ ಮನದಾಳದ ಮಾತುಗಳು ಕಥೆ ರೂಪದಲ್ಲಿ ಹೊರಹೊಮ್ಮಿದಾಗ, ಅದನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಅಭಿಲಾಷೆಯನ್ನು ಕವಿ ಮತ್ತು ಮನೆಯವರು ಹಾಗೂ ಸಂಬಂಧಿಕರ ಆಸೆಯಂತೆ ಎಲ್ಲವೂ ಅಂದುಕೊಂಡಂತೆ ಆದಮೇಲೆ, ಅದರಿಂದಾದ ಅನುಭವ ಕಹಿ ಅನುಭವುವಾಗದೆ ಇದರಿಂದ ಒಂದು ಪಾಠವನ್ನು ಕಲಿತೆ ಎಂದು ತಿಳಿದು ಮುಂದೆ ಕಥೆ ಬರೆಯುವುದಕ್ಕೆ ಅಡ್ಡಿಯಾಗದಂತೆ ಕವಿ ಯೋಚಿಸಿ ಕತೆಯನ್ನು ನಿಲ್ಲಿಸದೆ ಬರೆಯುತ್ತ ಹೋಗಬೇಕು.

    ಮನೋಹರ ರಾವ್

    ReplyDelete
    Replies
    1. ಇಂತಹ ಅನುಭವಗಳು ಧನಾತ್ಮಕವಾಗಿ ಪರಿಗಣಿಸಿದರೆ
      ಬರಹಕ್ಕೆ ಸಾಮಗ್ರಿಯೂ ಆಗುತ್ತದೆ, ಬದುಕಿಗೆ ಹೊಸ ಪಾಠವೂ ಆಗುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  3. ಹೊಸಬರು ಪುಸ್ತಕ ಪ್ರಕಟಿಸಬೇಕಾದಾಗ ಪಡುವ ಪರಿಪಾಟಲನ್ನು ನವಿರಾದ ಹಾಸ್ಯದಲ್ಲಿ ಚೆನ್ನಾಗಿ ವಿವರಿಸಿದ್ದೀರಿ

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  4. ತುಂಬಾ ನವಿರಾದ ಹಾಸ್ಯದೊಂದಿಗೆ, ಬೆಳಕಿಗೆ ಬರಲು ತುಡಿಯುವ ಉತ್ಸಾಹಿ ಸಾಹಿತಿಯ ಪರಿಪಾಟಲು, ಅವನನ್ನು 'ಖೆಡ್ಡಾ'ಕ್ಕೆ ಕೆಡುವುವ ಸುತ್ತಲಿನ ಜನ, ಕಡೆಗೆ ಅವನ ಜ್ಞಾನೋದಯ! ಈ ತೆರನಾದ ಪ್ರಸಂಗಗಳು ಬೇರೆ ಕ್ಷೇತ್ರಗಳಲ್ಲೂ ಕಾಣ ಸಿಗುತ್ತವೆ - (ವಿಶೇಷವಾಗಿ ಸಿನಿಮಾ, ದೂರದರ್ಶನ ರಂಗದಲ್ಲಿ.) ಇಲ್ಲಿ ಬರಹದ ಓಘ ಅದ್ಭುತವಾಗಿದೆ. ಒಟ್ಟು ಪ್ರಸಂಗದ ವಿವರಣೆಯಲ್ಲಿ ಕಚಗುಳಿಯಿಡುವ ಪದಗಳ ಬಳಕೆ, ಅದರಿಂದ ಸಾಕಷ್ಟು ಅರ್ಥವನ್ನೂ, ಪಾತ್ರ, ಸನ್ನಿವೇಶಗಳ ಆಯಾಮವನ್ನು ವಿಷದೀಕರಿಸುತ್ತ ಸಾಗುತ್ತದೆ! ರಾಮಚಂದ್ರ ರಾಯರಿಗೆ ಅಭಿಂದನೆಗಳು!

    ~ ಮಹಾಂತೇಶ ತಳಗೇರಿ, ಬೆಂಗಳೂರು

    ReplyDelete
    Replies
    1. ತಾವು ತಿಳಿಸಿದಂತೆ ವಿವಿಧ ರಂಗಗಳಲ್ಲಿ ಇಂತಹ ಅನುಭವ ಸಾಮಾನ್ಯ. ಕೀರ್ತಿ ಬಾರದಿದ್ದರೂ ಚಿಂತೆಯಿಲ್ಲ,ಇರುವ ಹಣವನ್ನು ಖರ್ಚು ಮಾಡಿ ನಷ್ಟವಾದ ಕರಾಳ ಅನುಭವ ಜೀವವನ್ನೇ ಪಡೆದ ದೃಷ್ಟಾಂತಗಳಿವೆ.ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  5. ಉದಯೋನ್ಮುಖ ಬರಹಗಾರರ ತೊಳಲಾಟ ಚನ್ನಾಗಿ ವಿವರಿಸಿದ್ದೀರಿ..

    Anupama T

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  6. ಯೋಚನೆ ಮತ್ತು ಆಲೋಚನೆಗಳ, ತನ್ನ ಬಗ್ಗೆ ತನಗೆ ಹೆಚ್ಚಿನ ತಿಳುವಳಿಕೆಯ ಅವಶ್ಯಕತೆ, ಆಗಿ ಹೋಗುಗಳ ಮುಂದಾಲೋಚನೆ, ಇಂತಹ ವಿಷಯಗಳ ಆಳ - ಅಗಲಗಳ ಸೂಕ್ಷ್ಮ ತೆಯನ್ನು ಅತಿ ಸೂಕ್ಷ್ಮವಾಗಿ, ಹಾಸ್ಯಭರಿತ ಶೈಲಿಯಲ್ಲಿ
    ಮನದಟ್ಟು ಮಾಡುವ ಲೇಖನ.

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  7. ಕೀರ್ತಿ ಗಳಿಸುವ ಆಸೆಯ ಮಾರ್ಗದಲ್ಲಿ ಎಷ್ಟೊಂದು ಕಷ್ಟ ಪರಿಪಾಟಲು ಇರುತ್ತದೆ ಎಂಬುದಕ್ಕೆ ಈ ಹಾಸ್ಯ ಹಾಗೂ
    ವಿಡಂಬನೆಯಿಂದ ಕೂಡಿದ ಈ ಲೇಖನ ತಿಳಿಸುತ್ತದೆ
    ಹಿಂದಿನ ಲೇಖನಗಳಂತೆ ಇಲ್ಲಿಯೂ ಸುಲಲಿತ ಹಾಸ್ಯ ಸೇರಿಕೊಂಡಿದೆ. ನಾನೂ ಸಹ ನಿಮಗೆ ನಿಮ್ಮ ಬರಹಗಳ
    ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರತರಲು
    ಹೇಳುವವನಿದ್ದೆ ಈ ಕೀರ್ತಿ ಮಾರ್ಗ ದ ನಂತರ ಹೇಳಲು
    ಧೈರ್ಯ ವಿಲ್ಲ

    ReplyDelete
    Replies
    1. ತಮ್ಮ ಹಾಸ್ಯ ಭರಿತ ಅಭಿಪ್ರಾಯಕ್ಕೆ ಧನ್ಯವಾದಗಳು.

      Delete
  8. Olleya vaagmigalaada Keertiyavaru, tamma bandhu mitrara apeksheyante pustakavondannu bareyalu prarambha madiruvudu sariyashte. Keertiyavarige uttama kaviyaagi "keerti" galisabekemba aase bandiruvudu "manushyana sahaja guna" vaagide. Edara saluvaagi patta Shrama, hechhagi vyayisida samaya haagu hana, adakke sarisamaanavaada pratiphala dorakade eruvudu duraadrustakara. Avara anuhavavannu nanna snehita sri. K.B. Ramachandra ravaru avarade aada bhasha shailiyalli namage unabadisiruvudu bahala santhoshavaagide. Dhanyavadagalu.

    ReplyDelete
  9. Sir, you have nicely narrated the difficulties of a writer. It is like bitter pill with sugar coat. One's difficulties are experience for others. Liked the way you ended the article (last para), a harsh truth of life.

    Expecting more such articles in future. 👌👍🙏

    ReplyDelete
  10. ನನ್ನೊರ್ವ   ಸೋದರಿಯ   ಅನುಭವವೂ   ಇದೇ   ಆಗಿದ್ದು,   ನಾನು   ಬರೆದ   "ಅನುಭವಗಳನ್ನು"  ಪುಸ್ತಕ  ರೂಪದಲ್ಲಿ ಪ್ರಕಟಿಸಲು   ಇನ್ನೊಮ್ಮೆ    ಯೋಚಿಸುವಂತೆ   ಮಾಡಿದುದಕ್ಕೆ   ಧನ್ಯವಾದ.  ಹಿರಿಯಣ್ಣ ಕೆ. ಪಿ. 

    ReplyDelete
  11. ಲಲಿತ ಶೈಲಿಯ ತಿಳಿಹಾಸ್ಯದಿಂದೊಡಗೂಡಿ ಓದಿಸಿಕೊಂಡು ಹೋಗುವ ಲೇಖನ..
    ಹೌದು.. ಬರಹಗಾರರು ತಮ್ಮ ಹೆಸರಿನಲ್ಲಿ ಒಂದಾದರೂ ಕೃತಿ ಪ್ರಕಟವಾಗಲಿ ಎಂದು ಬಯಸುವುದರಲ್ಲಿ ತಪ್ಪೂ ಇಲ್ಲ, ಆಶ್ಚರ್ಯ ವೂ ಇಲ್ಲ..
    ಪ್ರಕಟಣೆಯ ಸಾಹಸಕ್ಕೆ ಕೈ ಹಾಕಿದವರಿಗೇ ಗೊತ್ತು ಅದರ ಸುಖ ದುಃಖ..
    ಉತ್ತಮ ಲೇಖನ.. ಅಭಿನಂದನೆಗಳು

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...