ಒಂದು ರಾತ್ರಿ ಅತೀವ ಹೊಟ್ಟೆ ನೋವು. ಬೆಳಗಾಗುವುದೇ ಕಷ್ಟ ಎನಿಸುವ ಅನುಭವ.ಬೆಳಕು ಕಾಣುವವರೆಗೂ ಕಾದು ಬೆಳಗ್ಗೆಯೇ ಮನೆಯ ಬಳಿಯ ಔಷಧಿ ಅಂಗಡಿಯಲ್ಲೇ ಸಮಸ್ಯೆ ಹೇಳಿ ಅವರು ಕೊಟ್ಟ ಮಾತ್ರೆಯನ್ನು ಎರಡು ದಿನ ತಾತ್ಕಾಲಿಕವಾಗಿ ತೆಗೆದುಕೊಂಡೆ. ನೋವು ಕಡಿಮೆಯಾಗಲಿಲ್ಲವಾಗಿ ನಮ್ಮ ಕಂಪನಿಯ ವೈದ್ಯರಲ್ಲಿ ಸಂದರ್ಶಿಸಿದೆ. ಅವರು ನನ್ನ ಚರಿತ್ರೆಯನ್ನು ಕೇಳುತ್ತಾ ನನ್ನ ಆಹಾರ, ಜೀವನ ಶೈಲಿಯನ್ನು ವಿಚಾರಿಸುತ್ತಾ ಹೊಟ್ಟೆಯ ಮೇಲೆ ಸೊಂಟ ಪಕ್ಕಲೆಬುಗಳ ಕೈಯಾಡಿಸಿದರು. ಇನ್ಫೆಂಟ್ರಿ ರಸ್ತೆಯಲ್ಲಿನ ಹೆಸರಾಂತ ಡಯಾಗ್ನೋಸ್ಟಿಕ್ಸ್ ಗೆ ಹೋಗಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ತಿಳಿಸಿದರು. ಭಾನುವಾರ ಹೋಗುವುದಾಗಿ ತಿಳಿಸಿದೆ. ಅಂದು ಪರೀಕ್ಷೆ ಮಾಡಿಸಿಕೊಳ್ಳಬೇಕಾದ ರೋಗಿಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಆದ್ದರಿಂದ ತಕ್ಷಣವೇ ಭಾನುವಾರಕ್ಕೆಂದು ಅಪಾಯಿಂಟ್ಮೆಂಟ್ ತಿಳಿದುಕೊಳ್ಳಲು ಹೇಳಿದರು. ಮತ್ತು ತಾವು ಬೇರೆ ಕೆಲಸದಲ್ಲಿ ಬಿಜಿಯಾಗಿರುವುದರಿಂದ ಕೆಲವು ಗಂಟೆಗಳ ನಂತರ ಬಂದು ಸಂಬಂಧಿತ ಪ್ರೆಸ್ಕ್ರಿಪ್ಷನ್ ಪಡೆಯಬೇಕೆಂದು ತಿಳಿಸಿದರು. ಅದರಂತೆ ಬೇಕಾದ ಪರೀಕ್ಷೆಯನ್ನು ತಿಳಿಸಿ ಅಪಾಯಿಂಟ್ಮೆಂಟ್ ಪಡೆದುಕೊಂಡೆ. ಕೆಲವು ಸಮಯದ ನಂತರ ನಮ್ಮ ವೈದ್ಯರಿಂದ ಪ್ರಿಸ್ಕ್ರಿಪ್ಷನ್ ಪಡೆದೆ.
ಆ ಭಾನುವಾರದಂದು ನಮ್ಮ ವೈದ್ಯರು ತಿಳಿಸಿದಂತೆ ಉಪವಾಸವಾಗಿ ಪರೀಕ್ಷೆಗೆ ಹೊರಟೆ. ತಪಾಸಣಾ ಕೇಂದ್ರ ತಲುಪಿದಾಗ ಒಂಬತ್ತು ಗಂಟೆ ಆಗಿತ್ತು. ಹಿಂದಿನ ರಾತ್ರಿ ನೀರು ಕುಡಿದದ್ದು ಬಿಟ್ಟರೆ ಬೇರೆ ಏನನ್ನೂ ಸೇವಿಸಿರಲಿಲ್ಲ. ಪ್ರತಿನಿತ್ಯವೂ ಕೆಲಸಕ್ಕೆ ಹೋಗುವ ಮುನ್ನ ೭ ಗಂಟೆಗೇ ತಿಂಡಿ ತಿನ್ನುವ ಅಭ್ಯಾಸ ವಿದ್ದುದರಿಂದ ಮತ್ತು ಈ ದಿನ ಏನು ಸೇವಿಸಿದೇ ಇದ್ದುದರಿಂದ ಆಗಲೇ ಸಣ್ಣದಾಗಿ ಹಸಿವು, ತಲೆನೋವು ಪ್ರಾರಂಭವಾಗಿತ್ತು. ಆಗಲೇ ಸಾಕಷ್ಟು ಜನರು ಬಂದು ಕಾಯುತ್ತಿದ್ದರು. ನಾನು ಬಂದ ವಿಷಯವನ್ನು ಅಲ್ಲಿಯ ಸಿಬ್ಬಂದಿಗೆ ತಿಳಿಸಲಾಗಿ ಅವರು ನನ್ನ ಹೆಸರಲ್ಲಿ ಯಾವುದೇ ಅಪಾಯಿಂಟ್ಮೆಂಟ್ ಇಲ್ಲವೆಂದೂ ಹೊಸದಾಗಿ ಅವಕಾಶವನ್ನು ಪಡೆದು ಬರಬೇಕೆಂದು ತಿಳಿಸಿದರು. ನಾನು ಫೋನ್ ಮೂಲಕ ಪಡೆದ ಅಪಾಯಿಂಟ್ಮೆಂಟ್ ಪಡೆದಿದ್ದನ್ನು ತಿಳಿಸಿದರೂ ಒಪ್ಪುತ್ತಿಲ್ಲ. ಅವರ ತಪ್ಪು ವಾದ, ನನ್ನ ಉಪವಾಸ ಹಾಗೂ ತಲೆನೋವಿನ ಪರಿಸ್ಥಿತಿ, ಅಲ್ಲದೆ ಇನ್ನೊಮ್ಮೆ ಅಪಾಯಿಂಟ್ಮೆಂಟ್ ತೆಗೆದುಕೊಂಡು ಬರಬೇಕೆಂಬ ಹೇಳಿಕೆ ಇನ್ನಷ್ಟು ತಲೆಕೆಡಿಸಿತು. ಇನ್ನೊಮ್ಮೆ ಉಪವಾಸ ಬರುವುದೆಂದರೆ ದುಸ್ತರದ ಮಾತು. ಪರಿಪರಿಯಾಗಿ ಹೇಳಿದರೂ ನಾನು ಬರುವ ಬಗ್ಗೆ ತಿಳಿಸಿಯೇ ಇರಲಿಲ್ಲ ಎಂದೇ ಅವರ ವಾದವಾಗಿತ್ತು. ನನ್ನ ಸಹನೆ ಮೀರಿ ಏರಿದ ಧ್ವನಿಯನ್ನು ಕೇಳಿದ ಬೇರೊಬ್ಬ ಸಿಬ್ಬಂದಿ ಆಗಮಿಸಿ ಪಟ್ಟಿಯನ್ನು ಪರೀಕ್ಷಿಸಿ ನನ್ನ ಹೆಸರನ್ನು ತಪ್ಪಾಗಿ ಬರೆದು ಕೊಂಡಿದ್ದಾಗಿ ಕ್ಷಮೆ ಹೇಳುತ್ತಾ ಅಲ್ಲಿ ಕುಳಿತು ನಿರೀಕ್ಷಿಸಲು ಹೇಳಿದರು. ಬೇಕಾದ ಪರೀಕ್ಷೆಯನ್ನು ತಿಳಿಸಿ ಸಂಬಂಧಿತ ರಿಯಾಯಿತಿ ದರವನ್ನು ಪಾವತಿ ಮಾಡಿದೆ. ನಾನು ಸಾಕಷ್ಟು ನೀರು ಕುಡಿದು ಮೂತ್ರದ ಒತ್ತಡ ಇರುವಾಗ ಹೇಳಿ ಎಂದರು. ನನಗೆ ಮೂತ್ರದ ಒತ್ತಡ ಬಂದ ಮೇಲೆ ಪುನಃ ಅಪಾಯಿಂಟ್ಮೆಂಟ್ ಇಲ್ಲ ಎಂದು ತಗಾದೆ ಮಾಡಬಾರದು ಎಂದು ತಾಕೀತು ಮಾಡಿ ಪ್ರತ್ಯೇಕವಾಗಿ ಗುರುತು ಪತ್ರ ಕೊಡುವಂತೆ ಆಗ್ರಹಿಸಿ ಪಡೆದೆ. ನನ್ನ ಮಾತನ್ನು ಕೇಳಿ ಅಲ್ಲಿ ಸೇರಿರುವ ಎಲ್ಲಾ ಜನರು ಕೊಳ್ ಎಂದು ನಕ್ಕರು. ನಾನು ಅವರತ್ತ ತಿರುಗಿ, ನೀವು ನಗುವ ಅಗತ್ಯವೇನು? ನಿಮಗೆ ಹೀಗಾದರೆ ಏನು ಮಾಡುತ್ತಿದ್ದಿರಿ ಎಂದು ಯೋಚಿಸಿ ಎಂಬ ನನ್ನ ಗದರಿಕೆಯ ಧ್ವನಿಗೆ ಸುಮ್ಮನೆ ಕುಳಿತರು. ಅಷ್ಟೇ ಅಲ್ಲ. ನಾನು ಕುಳಿತುಕೊಳ್ಳಲು ಸ್ಥಳ ಹುಡುಕುವಾಗ ತಮ್ಮ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಹೇಳುತ್ತಿದ್ದರು.
ಕೆಲವು ನಿಮಿಷಗಳ ತರುವಾಯ ನನ್ನ ಸರತಿ ಬಂದಿತು. ತಾಂತ್ರಿಕ ತಜ್ಞರು ಕಿಡ್ನಿಯ ಸ್ಕ್ಯಾನಿಂಗ್ ಮಾಡಲು ಪ್ರಾರಂಭಿಸಿದರು. ಹೊಟ್ಟೆಯ ಮೇಲೆ ಸೆನ್ಸಾರ್ ಆಡಿಸುತ್ತಾ ಆಗಲೇ ಸಮಯ ಕಳೆದಿತ್ತು. ಆಗ ಪರೀಕ್ಷೆಯ ಅಗತ್ಯ, ನನ್ನ ವ್ಯಾಧಿಯ ಬಗ್ಗೆ ಆ ತಜ್ಞನು ಕೇಳುತ್ತಾ ತಾವು ಮಾಡುತ್ತಿರುವ ಪರೀಕ್ಷೆ ಇದಕ್ಕೆ ಬೇಕಾಗಿಲ್ಲ ಎಂದರು. ಅಲ್ಲದೆ ನಮ್ಮ ವೈದ್ಯರು ಕೊಟ್ಟ ಚೀಟಿಯನ್ನು ಕೇಳಿ ಪಡೆದರು. ನಿಮಗೆ ಎಂಡೋಸ್ಕೋಪಿ ಬರೆದಿದ್ದಾರೆ. ಈಗ ಬರೆದಿರುವ ಪರೀಕ್ಷೆಯೇ ಬೇರೆ ಎಂದೂ ತಾವು ಮಾಡುತ್ತಿರುವ ಪರೀಕ್ಷೆ ಅಗತ್ಯತೆ ಇಲ್ಲವೆಂದು ಹೇಳುತ್ತಾ ಅದನ್ನು ನಿಲ್ಲಿಸಲು ಪ್ರಾರಂಭಿಸಿದರು. ನಾನು ಹೇಗೂ ಪ್ರಾರಂಭಿಸಿದ್ದೀರಿ, ಇದನ್ನು ಮಾಡಿ ಮುಗಿಸಿ ಎಂದೆ. ಮುಂದುವರೆಸಿದ ಅವರೊಂದಿಗೆ, ಅದೃಷ್ಟವಶಾತ್ ತಾವು ಆಪರೇಷನ್ ಮಾಡುತ್ತಿರಲಿಲ್ಲ ಇಲ್ಲದಿದ್ದರೆ ಈವರೆಗೂ ಮಾಡಿರುವ ಆಪರೇಷನ್ ವೇಸ್ಟ್ ಆಗುತ್ತಿತ್ತು ಎಂದು ಹಗುರವಾಗಿ ನಗುತ್ತಾ ಹೇಳಿದರೂ ಬೇಸರಿಸದೆ, ನನಗೆ ಸಂಬಂಧಿಸಿದ ಪರೀಕ್ಷೆಯನ್ನು ಮಾಡುವ ವೈದ್ಯರು ರಜೆಯಲ್ಲಿ ಇರುವರೆಂದು ಮುಂದಿನ ವಾರಕ್ಕೆ ಅವರ ಭೇಟಿಗೆ ಅವಕಾಶ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಆದ ಪರೀಕ್ಷಾ ವರದಿಯನ್ನು ಒಂದು ಘಂಟೆಯ ನಂತರ ಪಡೆಯಲು ಹೇಳಿದರು.
ಇತ್ತ ಯೋಚಿಸುತ್ತಾ ಹೇಗೂ ಉಪವಾಸ ವಾಗಿದ್ದೇನೆ, ಇಲ್ಲಿಯ ವೈದ್ಯರನ್ನೇ ನೋಡಬೇಕಾದ ಅಗತ್ಯವೇನು, ಬೇರೆ ಯಾರಾದರೂ ವೈದ್ಯರನ್ನು ನೋಡೋಣ ಎಂಬ ಅಭಿಪ್ರಾಯದಿಂದ ವಿಮಾನ ನಿಲ್ದಾಣ ರಸ್ತೆಯ ಆಸ್ಪತ್ರೆಗೆ ತೆರಳಿದೆ. ಕೆಲವು ವರ್ಷಗಳ ಹಿಂದೆ ಅದೇ ಆಸ್ಪತ್ರೆಯಲ್ಲಿ ಬೆನ್ನುನೋವಿಗೆ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದೆ. ಆ ದಿನದ ತಾರೀಖನ್ನು ಹೇಳಿ ನನ್ನ ಕಡತವನ್ನು ಹೊರ ತೆಗೆಸಿ ನೋಂದಾಯಿಸಿ ಬೇಕಾದ ಎಂಡೋಸ್ಕೋಪಿ ಮಾಡಿಸಲು ತಜ್ಞ ವೈದ್ಯರ ಬಳಿ ಅವಕಾಶ ಕೇಳಿದೆ. ನನ್ನ ಅದೃಷ್ಟಕ್ಕೆ ವೈದ್ಯರು ತಕ್ಷಣ ಸಿಕ್ಕರು. ಅಲ್ಲಿ ನನ್ನ ಬಳಿಯಲ್ಲಿದ್ದ ವೈದ್ಯರ ಪ್ರೆಸ್ಕ್ರಿಪ್ಷನ್ ಯನ್ನು ತೋರಿಸಿದೆ. ಅವರೂ ತಡ ಮಾಡದೆ ಸಂಬಂಧಿತ ಪರೀಕ್ಷೆಗೆ ಅಣಿ ಮಾಡಿದರು. ನನ್ನ ಆಸನವನ್ನು ತಯಾರಿ ಮಾಡಲಾಯಿತು. ಎಡ ಮತ್ತು ಬಲ ಭಾಗದ ಕೈಗಳನ್ನು ತಪ್ಪಿಸಿಕೊಳ್ಳದಂತೆ ಹಿಡಿದುಕೊಳ್ಳಲು ಇಬ್ಬರು ಬಲಿಷ್ಟ ದಾದಿಯರು ನನ್ನ ಅಕ್ಕಪಕ್ಕ ನಿಂತರು. ನೋಡು ನೋಡುತ್ತಿದ್ದಂತೆ ನನ್ನ ತಲೆಯನ್ನು ಕುರ್ಚಿಗೆ ಅದುಮಿ ಯಾರೋ ಹಿಡಿದುಕೊಂಡರು. ಮುಂದೆ ಎತ್ತರದ ಆಸನದಲ್ಲಿ ವಿರಾಜಮಾನರಾದ ಜಠರ ತಜ್ಞ ಕುಳಿತು ಹುಬ್ಬು ಹಾರಿಸಿ ಯೋಚಿಸಬೇಡಿ, ನಾನಿದ್ದೇನಲ್ಲಾ ಎಂದರು. ನನಗೋ ಈ ಪರೀಕ್ಷೆ ಬಗ್ಗೆ ತಿಳಿಯದು. ಸ್ವಲ್ಪ ಗಾಬರಿಯಾದೆ. ನಿಧಾನವಾಗಿ ತುದಿಯಲ್ಲಿ ಕ್ಯಾಮೆರಾ ಇರುವ ತೆಳ್ಳಗಿರುವ ಕೇಬಲ್ ಹಗ್ಗವನ್ನು ಬಾಯಿ ಮೂಲಕ ಕಳುಹಿಸಿದರು. ಅದನ್ನು ಕಳಿಸುವ ರೀತಿ ನೋಡಿದರೆ ಬಾವಿಯಲ್ಲಿ ಕೊಡ ಬಿಟ್ಟಂತೆ ಅನಿಸುತ್ತಿತ್ತು. ಅದು ಗಂಟಲು ಮೂಲಕ ಹೋಗುವಾಗ ಅವರಿಗೆ ಅನ್ನನಾಳದ ಸುತ್ತಲಿನ ದೃಶ್ಯ ತೋರಿಸುತ್ತಿದ್ದರೆ ನನಗೆ ನೋವು, ಗಾಬರಿ, ಭಯ ಎಲ್ಲವೂ ಒಟ್ಟಿಗೆ ಹುಟ್ಟಿಸುತ್ತಿತ್ತು. ವಿಚಿತ್ರವಾಗಿ ವಾ ಎಂಬ ಶಬ್ದ ಮಾಡುತ್ತಾ "ಈ ದಿನ ಬೇಡ, ಇನ್ನೊಮ್ಮೆ ಬರುತ್ತೇನೆ ಎಂದು ತಪ್ಪಿಸಿಕೊಳ್ಳುವ ವಾಕ್ಯ ಹೇಳುತ್ತಿದ್ದರೂ ಅದನ್ನು ಕೇಳಲಾಗದಂತೆ ಬಾಯಿಯಲ್ಲಿ ಕೇಬಲ್ ಅನ್ನು ನೂಕುತ್ತಲೇ ಇದ್ದರು. ಬಹುಶಃ ನಾನು ಏನು ಹೇಳಿದರೂ ಅದು ವಾ ಎಂದೇ ಎಲ್ಲರಿಗೂ ಕೇಳಿಸುತ್ತಿರಬಹುದು ಎನಿಸಿತು. ಕೆಲವು ನಿಮಿಷಗಳ ನಂತರ, ಹೊಟ್ಟೆಯಲ್ಲಿ ಯಾವುದೇ ದೋಷವಿಲ್ಲ. ಪೂರ್ತಿಯಾಗಿ ಆರೋಗ್ಯವಾಗಿ ಇದ್ದೀರಿ, ಎಂಬ ಯಶಸ್ಸಿನ ಉಮೇದಿನಲ್ಲಿ ಅವರು ಹೇಳುತ್ತಿದ್ದರೂ ನನಗೆ ಏನೂ ಸಮಾಧಾನ ಆಗುತ್ತಿಲ್ಲ, ಏನು ಕೇಳಿಸುತ್ತಲೂ ಇಲ್ಲ. ಇದನ್ನು ತೆಗೆಯಲು ಇನ್ನೆಷ್ಟು ಹೊತ್ತು ಎಂಬ ಯೋಚನೆ. ಮತ್ತೇನು ಮಾಡುವರೋ ಎಂಬ ಭಯ ಅಳುವಂತೆ ಮಾಡುತ್ತಿತ್ತು. ನಿಧಾನವಾಗಿ ಅವರು ಎಂಡೋಸ್ಕೋಪಿ ಉಪಕರಣವನ್ನು ಹೊರತೆಗೆದು ಮುಗುಳ್ನಗೆಯೊಂದಿಗೆ ಮುಖ ನೋಡಿದಾಗ ನನಗೆ ಪ್ರಾಣ ಬಾಯಿಗೆ ಬಂದಿತ್ತು. ಇನ್ನೆಂದೂ ಈ ಪರೀಕ್ಷೆಯನ್ನು ಮಾಡಿಸಲೇಬಾರದು, ಅಷ್ಟೇ ಅಲ್ಲ ಬೇರೆಯವರಿಗೂ ಅಂತಹಾ ಅವಕಾಶ ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸುತ್ತಾ ಸುತ್ತ ಮುತ್ತ ಹಾಗೂ ಕಣ್ಣು ದೊಡ್ಡದಾಗಿ ಮಾಡಿ ಅವರ ಮುಖ ನೋಡಿದೆ. ನಿಮಗೆ ಹೊಟ್ಟೆನೋವು ಬರುವಂತಹಾ ಯಾವುದೇ ತೊಂದರೆ ಇಲ್ಲ. ಆದ್ದರಿಂದ ಕಿಡ್ನಿಗೆ ಸಂಬಂಧಪಟ್ಟ ವೈದ್ಯರನ್ನು ನೋಡಿ ಎಂಬ ಸಲಹೆಯೊಂದಿಗೆ ಮಾಡಿರುವ ಪರೀಕ್ಷೆಯ ವರದಿಯನ್ನು ನೀಡಿದರು. ಯಶಸ್ವೀ ಪರೀಕ್ಷೆ, ಹಿತವಾದ ಫಲಿತಾಂಶ ಆ ನಿಮಿಷಕ್ಕೆ ಸಮಾಧಾನ ವೆನಿಸಿತು.
ಆದರೆ ಗಂಟಲು ನೋವು, ತಪ್ಪಿಸಿಕೊಳ್ಳಲು ಕೈ ಎಳೆದುಕೊಂಡಿದ್ದ ನೋವು, ಆವರೆಗೂ ಏನು ತಿನ್ನದಿದ್ದುದರಿಂದ ಆಗುತ್ತಿದ್ದ ಹಸಿವು , ಎಲ್ಲವೂ ಸೇರಿ ವಿಚಿತ್ರ ಸಂಕಟ. ಸಾಲದೆಂಬಂತೆ ಯಾರಿಗೂ ಹೇಳಿಕೊಳ್ಳಲಾಗದಂತೆ ಒಬ್ಬನೇ ಪರೀಕ್ಷೆಗೆ ಬಂದಿರುವುದು ಏಕಾಂಗಿಯೆನಿಸಿತು. ಅಂತೂ ಬೆಳಿಗ್ಗಿನ ಮೊದಲ ಪರೀಕ್ಷಾ ವರದಿಯೊಂದಿಗೆ ಮನೆಗೆ ಬಂದಾಗ ಸಮಯ ಮಧ್ಯಾಹ್ನ ಎರಡು ಗಂಟೆ. ಯಾಕೆ ಇಷ್ಟು ತಡ, ಒಬ್ಬರೇ ಏಕೆ ಹೋದಿರಿ? ಏನೇನಾಯ್ತು? ನಮಗೆ ತಿಳಿಸಬೇಕಾಗಿತ್ತು. ಫೋನ್ ಏಕೆ ಮಾಡಲಿಲ್ಲ ಎಂಬ ಕಳಕಳಿಯ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು, ಕೇಳಿದವರಿಗೂ ನೋವಾಗದಂತೆ ಹೇಳಲು ಇನ್ನೊಂದು ಸ್ಕೋಪ್ ಬೇಕಾಗುತ್ತದೆ ಎನಿಸಿತು. ನಂತರದ ದಿನಗಳಲ್ಲಿ ಈ ಕಾಯಿಲೆಗೆ ಸೂಕ್ತ ವೈದ್ಯೋಪಚಾರಗಳು ನಡೆದವು. ಅಂತೂ ಆ ಪ್ರಕರಣ ಸುಖಾಂತ್ಯವಾಯಿತು.
ಆದರೆ ನಡೆದ ಪ್ರಕರಣವನ್ನು ಕುತೂಹಲ ದೃಷ್ಟಿಯಿಂದ ವಿಶ್ಲೇಷಣೆ ಮಾಡಿದಾಗ ತಿಳಿಯುವ ಅಂಶ. ಹೇಳಿದ ಬಳಿಕ, ಸರಿಯೆಂದು ಕಂಡ ಹೊಸ ಪರೀಕ್ಷೆ ಬರೆದ ನಮ್ಮ ವೈದ್ಯರು, ಬರೆದ ಚೀಟಿಯು ಕೈನಲ್ಲೇ ಇದ್ದರೂ ಒಮ್ಮೆಯೂ ನೋಡದ ನಾನು, ರೋಗಿಗಳಿಗೆ ಅಪಾಯಿಂಟ್ಮೆಂಟ್ ಕೊಡುವಾಗ ಅವರು ಹೆಸರು ನಮೂದಿಸುವಲ್ಲಿ ಒಂದಕ್ಕಿಂತ ಹೆಚ್ಚು ಕಡೆ ಬರೆದುಕೊಳ್ಳುವ ಪರೀಕ್ಷಾ ಕೇಂದ್ರ, ಕಾರಣ ತಿಳಿಯುವ ಮೊದಲೇ ಪರೀಕ್ಷೆ ಪ್ರಾರಂಭಿಸಿದ ಅಲ್ಲಿಯ ತಂತ್ರಜ್ಞ ಹೀಗೆ ಎಷ್ಟು ಜನರು ಏನೇನು ಮಾಡಬಹುದಾಗಿತ್ತು? ಎಂದು ಎಲ್ಲವನ್ನೂ ಯೋಚಿಸುತ್ತಾ ಇನ್ನೂ ಸರಿಯಾಗಿ ನಾನೇ ನಿಭಾಯಿಸಬಹುದಾಗಿತ್ತು ಎಂದುಕೊಂಡೆ.
ಇಂತಹಾ ಹಲವು ತಪ್ಪುಗಳು ಜೀವನದಲ್ಲಿ ಸಾಮಾನ್ಯ. ಆವಾಗಲೆಲ್ಲಾ ನೆನಪಿಗೆ ಬರುವ ದಾಸ ವಾಣಿ:
"ಅನಂತ ಅಪರಾಧ ಎನ್ನಲ್ಲಿ ಇರಲಾಗಿ ಭಿನ್ನಹಕೆ ಬಾಯಿಲ್ಲವಯ್ಯಾ"
ಇರುವ ವಿಷಯಗಳನ್ನು ಸಂಪೂರ್ಣವಾಗಿ ಅರಿತು ಸಂವಹನವನ್ನು ಸರಿಯಾಗಿ ನಡೆಸಿದಲ್ಲಿ ಈ Communication gap ಎಂಬುದಕ್ಕೆ ಆಸ್ಪದ ವಾಗುತ್ತಿರಲಿಲ್ಲ ಎನಿಸುತ್ತದೆ, ಅಲ್ಲವೇ?
ನಿಮ್ಮ ಅನುಭವವು ಓದುಗರಿಗೆ ತಮಾಷೆ ಎನಿಸಿದರೂ, ಅದರ ಹಿಂದೆ ನೀವು ಪಟ್ಟಿರುವ ನೋವು ತುಂಬಾ ಅತೀವವಾದದ್ದು. ಈ ನಿಮ್ಮ ಮಾತುಗಳು, ನಮ್ಮಂತಹವರಿಗೆ ಒಂದು ರೀತಿಯ ನೀತಿ ಪಾಠವನ್ನು ಕಲಿಸುತ್ತದೆ. ಕಥೆಗೆ ನೀಡಿರುವ "ಶೀರ್ಷಿಕೆ" ಬಹಳ ಸೂಕ್ತವಾಗಿದೆ. ಧನ್ಯವಾದಗಳು.
ReplyDeleteಒಳ್ಳೆಯ ಅನುಭವದ ಮಾತುಗಳು
ReplyDeleteಉತ್ತಮ ತಲೆ ಬರಹದೊಂದಗೆ ಮೂಡಿಬಂದ ಈ ಅನುಭವ ಲೇಖನವು ಎಲ್ಲರಿಗೂ ಅತ್ಯುತ್ತಮ ಸಲಹೆಯಾಗಿದೆ. ಎಂತಹ ಪರೀಸ್ಥತಿಯಲ್ಲಿಯೂ ಸ್ವಲ್ಪವೂ ವಿಲಚಿತರಾಗದೆ ಬಂದುದ್ದನ್ನು ಎದುರಿಸುವ ಪರಿ.. ಮತ್ತು ಆ ಕಾರ್ಯ ಮುಗಿದನಂತರ ಅದರ ಆಗುಹೋಗುಗಳನ್ನು ವಿಮರ್ಷಿಸುವ ನಿಮ್ಮ ಈ ಪರಿ.. ಆದರ್ಶ. ಈ ಬರಹ ಎಲ್ಲರಿಗೂ ಒಂದು ಉತ್ತಮ ಪಾಠವಾಗಿದೆ.👌👌👏👏
ReplyDeleteಮುನ್ನೆಚ್ಚರಿಕೆಯ ಅಭಾವದಿಂದ ಆಗಬಹುದಾದ ಅನರ್ಥಗಳ ಪಟ್ಟಿ ಮಾಡಿದರೆ ಅದರ ಅಗತ್ಯದ ಅರಿವು ನಿಚ್ಚಳ ವಾಗುತ್ತದೆ, ಎಂಬ ವಿಷಯವನ್ನು ಮಾರ್ಮಿಕವಾಗಿ ಮುಟ್ಟಿಸಿದ್ದಾರೆ ಲೇಖಕರು. Always Be Careful ಎನ್ನುವುದನ್ನು ನೆನಪಿಸುತ್ತದೆ.
ReplyDelete