Skip to main content

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ:

ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು.

ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ.

ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕಾರ್ಯಕ್ರಮ. ಏನೋ ಡೈಲಾಗ್. ಯಾರಿಗೆ ಆರೋಗ್ಯ ಸರಿಯಿಲ್ಲ? ಏನೇನೋ ಮಾತನಾಡುತ್ತಿದ್ದಾರೆ. ಪ್ರೇಮಾ ಏನೋ ಕರೆದಂತಿತ್ತು. ಯಾರು ಬಂದಿದ್ದರೋ ಏನೋ? ಎಲ್ಲಾ ಅರ್ಧಂಬರ್ಧ ಕೇಳುತ್ತಿದೆ. ಎದ್ದು ನೋಡುವುರಾರು? ಆಮೇಲೆ ಹೇಗೂ ಗೊತ್ತಾಗುತ್ತದೆ. ಆದರೂ ಮೈ ಭಾರ. ಎದ್ದೇಳಲು ಮೈಗಳ್ಳತನ. ಹಾಗೆಯೇ ಮತ್ತೆ ಜೋಮು.

ಅದೆಷ್ಟು ಹೊತ್ತು ನಿದ್ದೆ ಮಾಡಿದೆನೋ ತಿಳಿಯದು. ಎದ್ದಾಗ ಮನೆಯ ಹಾಲಿನಲ್ಲಿ, ಹೊರಭಾಗದಲ್ಲಿ,  ರೂಮಿನಲ್ಲಿ ಎಲ್ಲೆಲ್ಲೂ ಜನರು ಮಾತನಾಡುತ್ತಾ ಇರುವಂತಿದೆ. ಈ ಕಾರ್ಯಕ್ರಮದ ಬಗ್ಗೆ ಅವಳು ಏಕೆ ಹೇಳಲಿಲ್ಲ? ಬಹುಶಃ ಕಳೆದ ಒಂದು ವಾರದಿಂದ ನಾನು ಬಿಜಿ ಇದ್ದಿದ್ರಿಂದ ಹೇಳಲಿಕ್ಕೆ ಆಗಿರಲಿಕ್ಕಿಲ್ಲ ಇರಲಿ. ಇದೇನು, ಗಡಿಯಾರದಲ್ಲಿ ೭ ಗಂಟೆ ಕಾಣುತ್ತಿದೆ. ಆಫೀಸಿಗೆ ತಡವಾಗಿದೆ. ಯಾಕೋ ಶಂಕರ ಬರಲಿಲ್ಲ. ಅರ್ಜೆಂಟ್ ಕೆಲಸ ಮುಗಿಯಿತು ಎಂದು ಬಾರದಿರಬಹುದು ಎಂದು ಆಫೀಸಿನಲ್ಲಿ ಮಾತನಾಡಿಕೊಳ್ಳುತ್ತಾರೇನೋ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಸುತ್ತ ಒಮ್ಮೆ ನೋಡಿದೆ. ಅಲ್ಲಲ್ಲಿ ಕೆಲವರು ನಿಂತಿದ್ದಾರೆ, ಕೆಲವರು ಕುಳಿತಿದ್ದಾರೆ. ಅರೇ ನಾನು ಚಾಪೆ ಮೇಲೆ ಮಲಗಿದ್ದೇನೆ. ದಿಂಬೂ ಇಲ್ಲ. ಮನೆಗೆ ಅತಿಥಿಗಳು ಬಂದಿದ್ದು ಎಲ್ಲರಿಗೂ ಹಾಸಿಗೆ ವ್ಯವಸ್ಥೆ ಮಾಡುವಾಗ ರಾತ್ರಿ ದಿಂಬು ಸಾಕಾಗಲಿಲ್ಲವೇ. 

ತಲೆಯ ಬಳಿ ನನ್ನಾಕೆ, ಅವಳ ಅಕ್ಕ ತಂಗಿಯರು, ಚಿಕ್ಕಮ್ಮ ಎಲ್ಲಾ ಕುಳಿತಿದ್ದಾರೆ. ಯಾಕೆ ತಲೆ ಮೇಲೆ ಕೈ ಹೊತ್ತಿದ್ದಾಳೆ. ಬಾಗಿಲ ಬಳಿ ನಮ್ಮ ಊರಿನ ಕಡೆಯ ಸಂಬಂಧಿಕರು. ನಮ್ಮ ದೊಡ್ಡಪ್ಪನ ಮಕ್ಕಳೂ ಬಂದಿದ್ದಾರೆ. ಹೊರಗಡೆ ನಮ್ಮ ಆಫೀಸಿನವರು ಯಾರೋ ಮಾತನಾಡುತ್ತಾ ಇರುವಂತಿದೆ. ಇದನ್ನೆಲ್ಲಾ ನೋಡುತ್ತಿರುವಾಗ ಯಾರೋ ಸತ್ತಿರುವವರ ಮನೆಗೆ ಎಲ್ಲರೂ ಬಂದಿರಬಹುದು. ಯಾರು ಹೋಗಿರಬಹುದು ಎಂದು ಧೀರ್ಘವಾದ ಯೋಚನೆ. ನಾನು ಕುಳಿತಿರುವ ಜನಗಳನ್ನು ದಾಟಿ ಬಚ್ಚಲುಮನೆ ಕಡೆ ಹೋದೆ. ಅಲ್ಲಲ್ಲಿ ಬಟ್ಟೆಗಳು. ನೀರು ಬಹಳವಾಗಿ ಚೆಲ್ಲಿದಂತಿದೆ. ಅಡುಗೆ ಮನೆಯತ್ತ ದೃಷ್ಟಿ ಹಾಯಿಸಿದೆ. ಯಾವ ಅಡುಗೆಯನ್ನೂ ಮಾಡಿದಂತಿಲ್ಲ. ಡೈನಿಂಗ್ ಟೇಬಲ್ ಮೇಲೆ ಒಂದು ಕಾಫಿಯ ಫ್ಲಾಸ್ಕ್. ಅರ್ಧ ಕುಡಿದ ಲೋಟಗಳು, ಕೆಲವು ಪೇಪರ್ ಕಪ್ಪುಗಳು. 

ನಿಧಾನವಾಗಿ ಬಾಗಿಲ ಬಳಿ ಹೋಗಿ ಸುತ್ತ ನೋಡಿದೆ. ಅಲ್ಲಿದ್ದ ಮಿತ್ರನನ್ನು ನೋಡಿ ಮುಗುಳ್ನಕ್ಕೆ. ಆದರೆ ಅವನು ನನ್ನ ಶೂನ್ಯವಾಗಿ ನೋಡುತ್ತಿದ್ದಾನೆ. ಯಾಕೋ ಸೀರಿಯಸ್ ಆಗಿದ್ದಾನೆ. ಹಾಗೇ ಒಳಗೆ ಹೋಗಿ ನನ್ನಾಕೆಯನ್ನು ವಿಷಯವೇನೆಂದು ಕೇಳಲು ಸನ್ನೆ ಮಾಡಿ ಕರೆಯುತ್ತಿದ್ದೇನೆ. ಆಕೆ ನೋಡುತ್ತಲೇ ಇಲ್ಲ. ಇದೇನು, ನಾನು ಅಲ್ಲೆಲ್ಲಾ ಓಡಾಡುತ್ತಿದ್ದರೂ ಯಾರೂ ನನ್ನನ್ನು ಗಮನಿಸುತ್ತಲೇ ಇಲ್ಲ. ಸುಮ್ಮನೆ ನನ್ನವಳನ್ನು ಗಮನಿಸಿದೆ. ಯಾವಾಗಲೂ ಶಿಸ್ತಿನಿಂದ ಇರುವವಳು ಇಂದು ತಲೆಯನ್ನೂ ಬಾಚಿದಂತೆ ಇಲ್ಲ. ನಿದ್ದೆಗೆಟ್ಟು ಕೂತಿರುವಂತೆ ಇದೆ. ಹಾಗೆ ನೋಡಿದಾಗ ಒಂದು ಹಣತೆಯಲ್ಲಿ ದೀಪ ಉರಿಯುತ್ತಿದೆ. ಅಲ್ಲಿ ಯಾರೋ ನನ್ನಂತೆ, ನನ್ನ ಅಂಗಿ ತೊಟ್ಟು ಮಲಗಿದ್ದಾರೆ. ಅರೇ, ನಾನೇ ಅಲ್ಲವೇ. ಒಂದು ನಿಮಿಷ ಗರಬಡಿದಂತೆ ಒಂದು ಕಡೆ ನಿಂತೆ. ಹಾಗಾದರೆ ನಾನು ಸತ್ತು ಹೋಗಿರುವೆನೇ? ಹೌದೇ ಹೌದು, ಹೇಗೆ? ನಿನ್ನೆ ನನಗೆ ಕಡೆಯದಾಗಿ ಬಂದ ಎದೆ ನೋವಿನಿಂದ ನಾನು ಮೃತನಾಗಿದ್ದೇನೆ. ಅಳುವೋ, ದುಗುಡವೋ ಗೊತ್ತಾಗದು. ಬಹುಶಃ ಸತ್ತ ಬಳಿಕ ತಕ್ಷಣದ ನಾಲ್ಕು ಘಂಟೆಗಳ ಕಾಲ ಆತ್ಮ ಅಲ್ಲೇ ಸುತ್ತುತ್ತಿರುತ್ತದೆ ಎಂದು ಕೇಳಿದ್ದೆ. ಅದರಿಂದಾಗಿಯೇ ನಾನು ಯಾರಿಗೂ ಕಾಣುತ್ತಿಲ್ಲವೆನಿಸುತ್ತದೆ. ಆತ್ಮದ ಇಂತಹ ಇರುವಿಕೆಯನ್ನು ನೆನೆದು, ಮೃತರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಬೇಕು ಎನ್ನುವ ಕಾರಣ ಇದೇ ಇರಬಹುದು.

ನನಗೆ ಗೊತ್ತಾಗುತ್ತಿದೆ. ಬೇರೆಯವರಿಗೆ ಗೊತ್ತಾಗುತ್ತಿಲ್ಲ. ಸರಿ, ನಾನು ಸತ್ತು ಹೋಗಿ ಎಷ್ಟು ಹೊತ್ತಾಗಿರಬಹುದು? ಟೇಬಲ್ ಮೇಲೆ ಆಸ್ಪತ್ರೆಯಿಂದ ಕೊಟ್ಟ ಕವ್ಹರಿದೆ. ಅದರಲ್ಲೇನಾದರೂ ಮಾಹಿತಿ ಇರಬಹುದಾ. ಹತ್ತಿರ ಹೋಗಿ ನೋಡಲು ಪ್ರಯತ್ನಿಸಿದೆ ಆದರೆ ಅದನ್ನು ಬಿಡಿಸಲಾಗುತ್ತಿಲ್ಲ. ಏನೇ ಇರಲಿ, ಇದ್ದವರ ಬಳಿ ಕೆಲವು ಮಾತನಾಡಿದರೆ ಹೇಗೆ? ಅ ವೇಳೆಗೆ ಜೆರಾಕ್ಸ್ ಕಾಪಿ ಹಿಡಿದುಕೊಂಡು ನನ್ನ ತಮ್ಮನ ಮಗ ಬಂದ. ಅಲ್ಲೇ ಇದ್ದ ನಮ್ಮ ಪಕ್ಕದ ಮನೆಯವರು ಓದಲೆಂದು ಅದನ್ನು ಬಿಡಿಸಿದರು. ನಾನು ಪಕ್ಕಕ್ಕೆ ಹೋಗಿ ಬಗ್ಗಿ ಓದಿದೆ. ಅದರ ಪ್ರಕಾರ ನಾನು ನಿನ್ನೆ ರಾತ್ರಿ ಆಸ್ಪತ್ರೆಗೆ ಹೋಗಿ ಬಂದಿದ್ದೇನೆ. ಈ ಬೆಳಿಗ್ಗೆ ೫ ಗಂಟೆಗೆ ಪ್ರಾಣ ಹೋಗಿದೆ. ಗಡಿಯಾರ ನೋಡಿದೆ. ಲೆಕ್ಕದ ಪ್ರಕಾರ ನನಗೆ ಮುಂದಿನ ಎರಡು ಗಂಟೆಗಳು ಮಾತ್ರ ಎಲ್ಲರನ್ನೂ ನೋಡುವ ಅವಕಾಶ ಎಂದೆನಿಸಿತು. ಇನ್ನು ತಡ ಮಾಡಬಾರದು, ಸಾಧ್ಯವಾದಷ್ಟು ಎಲ್ಲರನ್ನೂ ಕಂಡು ಅವರಿಗೆ ವಿದಾಯ ಹೇಳುತ್ತೇನೆ. ಯಾವಾಗಲಾದರೂ ಬೇಸರವನ್ನು ಮಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಒಮ್ಮೆ ಕೇಳಿ ಬಿಡಬೇಕು ಎಂದುಕೊಂಡೆ. ಸಂಬಂಧ ಹೆಚ್ಚು ಎಲ್ಲಿ ಇರುವುದೋ ಅಲ್ಲಿ ಸಂಬಂಧ ಕೆಡುವ ಸಾಧ್ಯತೆ ಹೆಚ್ಚು. ಅಂದರೆ ನನ್ನ ಹೆಂಡತಿ, ಅಣ್ಣ ತಮ್ಮಂದಿರು, ಸಹೋದ್ಯೋಗಿಗಳಲ್ಲಿಯೇ  ಬೇಸರದ ಘಟನೆ ಸಹಜ.

ಮೊದಲು ಅವಳಲ್ಲಿ ವಿಷಯ ಹೇಳಿ ಆಗಿರುವ ಬೇಸರವಿದ್ದಲ್ಲಿ ಅದಕ್ಕೆ ತಪ್ಪದೇ ಕ್ಷಮೆ ಕೇಳೋಣ ಎಂದುಕೊಂಡೆ. ಆಷ್ಟೆಲ್ಲಾ ಜನರ ಮಧ್ಯೆಯೂ ಪ್ರೇಮಳ ಬಳಿ ಹೋಗಿ ಕುಳಿತೆ. ಈ ಕಡೆ ನೋಡು ಎಂದು ಅವಳ ಗಲ್ಲವನ್ನು ಹಿಡಿದು ತಿರುಗಿಸಿದರೂ ನನ್ನ ಕಡೆ ನೋಡುತ್ತಿಲ್ಲ. ಮಲಗಿರುವ ದೇಹವನ್ನು ಒಂದೇ ಸಮನೆ ನೋಡುತ್ತಿದ್ದಾಳೆ. ಆದರೂ ನಾನು ಪ್ರಾರಂಭಿಸಿದೆ. ಮದುವೆಯಾದ ದಿನಾಂಕದಿಂದ ಈವರೆಗೂ ಅವಳೊಂದಿಗೆ ಇದ್ದ ಪ್ರತಿ ನಿಮಿಷವನ್ನೂ ನೆನಪಿಸಿಕೊಂಡು ಹೇಳುತ್ತಿದ್ದೇನೆ. ನೀನೇ ಕಚೇರಿಗೆ ಹೋಗುವೆನೆಂಬಂತೆ ಪ್ರತಿದಿನವೂ ಬೆಳಿಗ್ಗೆ ಬೇಗನೆ ಸ್ನಾನಕ್ಕೆ ನನಗೆ ಅಣಿ ಮಾಡಿದೆ, ತಿಂಡಿ ಮಾಡಿ ಕೊಡುತ್ತಿದ್ದೆ. ಮಕ್ಕಳನ್ನು ತಯಾರುಮಾಡಿ ಕಳಿಸಿದಂತೆ ನನ್ನನ್ನು ಕಳಿಸುವುದು, ನಂತರ ಮಕ್ಕಳಿಗೆ ರೆಡಿ ಮಾಡಿ, ಶಾಲೆಗೆ ಕಳಿಸುವುದು, ಮನೆಗೆಲಸ , ಮಧ್ಯಾಹ್ನದ ವೇಳೆಗೆ ಊಟವಾಯಿತೇ ಎಂದು ಫೋನ್ ಮಾಡುವುದು ಸಂಜೆ ಮನೆಗೆ ಬಂದಾಗ ಕಾಫಿ ತಿಂಡಿ ತಪ್ಪದೇ ಕೊಡುವಳು, ಸದಾ ನಗುಮುಖದ ಚೆಲುವು ಕಳೆದುಕೊಂಡಿರಲಿಲ್ಲ. ಬೆಳಗಿನಿಂದ ಸಂಜೆವರೆಗೂ ಆಕೆ ಮಾಡಿದ ಸೇವೆಯನ್ನು ಸ್ಮರಿಸಿದೆ. ನಾನೋ, ನಿನಗೆ ಹೇಗಿದ್ದೀಯಾ, ಊಟವಾಯಿತೇ ಹೀಗೆ ಉಪಚಾರದಲ್ಲಿಯೂ ಎಂದು ಒಮ್ಮೆಯೂ ನಿನ್ನನ್ನು  ಕೇಳದಿದ್ದರೂ ನನ್ನ ಬಗ್ಗೆ  ಪ್ರೀತಿ ತೋರಿಸುತ್ತಿದ್ದೆ. ಅತಿಯಾದ ಕಾಳಜಿ, ಹಾಸಿಗೆ ಮೇಲೆ ಸುಮ್ಮನೆ ಹೊರಳಿದರೆ ನಿದ್ದೆ ಬರಲಿಲ್ಲವೇ? ಎಂಬ ಪ್ರಶ್ನೆ. ನಾನು ಅನಾರೋಗ್ಯದಿಂದ ಇದ್ದರೂ ಅದನ್ನು ಹೇಳಿಕೊಳ್ಳದೆ ನಾನು ಸಿಲ್ಲಿ ತಲೆನೋವು, ಸ್ವಲ್ಪ ಮೈ ಬಿಸಿ  ಜ್ವರ ಎನಿಸುತ್ತದೆ ಎಂದರೆ, ಏಕೆ ಬಂದಿದೆ, ಎನ್ನುತ್ತಾ ಚಿಕಿತ್ಸೆ ಉಪಚಾರದೊಂದಿಗೆ ಚಡಪಡಿಸುವುದು, ನೀನು ಇಷ್ಟೆಲ್ಲಾ ನನ್ನ ಬಗ್ಗೆ ನೀನು ಅಸಕ್ತಿ ಕೊಟ್ಟರೂ ನಾನು ನಿನಗೆ ಸರಿಯಾಗಿ ನೋಡಿಕೊಂಡಿರುವೆ ಎನಿಸುತ್ತಿಲ್ಲ. ನಿನ್ನ ಪ್ರೀತಿಗೆ ನ್ಯಾಯವನ್ನು ಒದಗಿಸಲಿಲ್ಲ, ನನ್ನದು ತಪ್ಪಾಗಿದೆ, ದಯಮಾಡಿ ಕ್ಷಮಿಸು ಎಂದು ಹೇಳುತ್ತಿದ್ದೇನೆ. ಅಷ್ಟೆಲ್ಲಾ ಹೇಳಿದರೂ ಆಕೆಗೆ ಗೊತ್ತಾಗುತ್ತಲೇಯಿಲ್ಲ. ಅಯ್ಯೋ ಹೇಗೆ ಹೇಳುವುದು ಎಂದು ಕಳವಳಿಸುತ್ತಾ ಅಲ್ಲಿಂದ ಹೊರಟೆ.

ಅಲ್ಲೇ ಗೋಡೆಗೆ ಒರಗಿ ನಿಂತಿರುವ ನನ್ನ ಅಣ್ಣತಮ್ಮಂದಿರು. ಅವರೊಂದಿಗೆ ಏನೋ ಹೇಳಿಕೊಳ್ಳೋಣ ಎಂದು ಬಂದೆ. ಅವರೋ, ತಮ್ಮವಿದ್ಯಾಭ್ಯಾಸ, ಕೆಲಸದ ಪ್ರಯತ್ನಗಳಲ್ಲಿ ನನ್ನ ಸಹಕಾರವನ್ನು, ಮನೆ ಕಟ್ಟುವಾಗ, ಮಕ್ಕಳ ವಿದ್ಯಾಭ್ಯಾಸ, ಮದುವೆಗಳಲ್ಲಿ ನಾನು ಕೊಟ್ಟ ಸಲಹೆಗಳನ್ನು ನೆನಪಿಸಿಕೊಳ್ಳುತ್ತಾ ಮಾತನಾಡುತ್ತಿದ್ದಾರೆ. ಅದೇನು ದೊಡ್ಡದಲ್ಲ ಬಿಡು ಎಂದು ಹೇಳುತ್ತಿದ್ದೇನೆ. ನಿಮಗೆ ಏನಾದರೂ ಹೇಳುವಾಗ ಅಣ್ಣನೆಂಬ ಸಲಿಗೆಯಲ್ಲಿ ಸಹಜವಾಗಿ ದೊಡ್ಡದನಿಯಲ್ಲಿ ಹೇಳಿದರೂ ಆಗಬೇಕಾದ ಕೆಲಸಗಳಲ್ಲಿ ಯಶಸ್ಸನ್ನು ತಲುಪುವ ಆಶಯವೇ ಮುಖ್ಯವಾಗಿತ್ತು.ನನ್ನ ದೊಡ್ಡ ಧ್ವನಿಯ ಮಾತು ಬೇಸರ ತಂದಿದ್ದಲ್ಲಿ ದಯಮಾಡಿ ಮರೆತು ಕ್ಷಮಿಸಿ ಬಿಡಿ . ಯಾವ ಕಾರಣಕ್ಕೂ ನಿಮ್ಮ ಮನ ನೋಯಿಸುವ ಇರಾದೆ ನನ್ನದಾಗಿರಲಿಲ್ಲ. ದಯವಿಟ್ಟು ಏನನ್ನೂ ಮನಸ್ಸಿನಲ್ಲಿ ಇಟ್ಟುಕೊಂಡು ಬೇಸರವಾಗಬೇಡಿ, ಹೀಗೆ ಏನೇನೋ ಹೇಳುತ್ತಿದ್ದೇನೆ. ಆದರೆ ಅವರ್ಯಾಕೆ ನನ್ನನ್ನು ನೋಡುತ್ತಿಲ್ಲ. ಅವರದ್ದೇ ಅವ್ರುದ್ದು.

ಹೊರಭಾಗದಲ್ಲಿ, ವರಾಂಡದಲ್ಲಿ, ಮೆಟ್ಟಿಲುಗಳ ಮೇಲೆ ಜಾಗ ಸಾಲದೆಂದು ಎದುರು ಮನೆ ಸಮೀಪ ಹೀಗೆ ಅಲ್ಲಲ್ಲಿ ಅನೇಕ ಮಿತ್ರರು ಪರಿಚಯದವರು ಕಾಣುತ್ತಿದ್ದಾರೆ. ಎಲ್ಲರನ್ನೂ ಮಾತನಾಡಿಸಲು ಆಗಲಾರದು. ಹತ್ತಿರ ಇದ್ದವರನ್ನು ಆದರೂ ಮಾತನಾಡಿಸಲೇ ಬೇಕು ಎಂದುಕೊಂಡೆ.ಈ ಸ್ಥಿತಿಯಲ್ಲಿ  ನಾ ಕಂಡ ಬೇರೆ ಬೇರೆ ಊರುಗಳನ್ನು ನೋಡಲು ಸಾಧ್ಯವೇ ಎಂದು ಯೋಚಿಸುವಾಗಲೇ ನಾ ಹುಟ್ಟಿದ,ಬೆಳೆದ ಊರುಗಳು,ಅಲ್ಲಿಯ ಬೇಕಾದ ನನ್ನ ಜನಗಳು , ಕ್ಲಾಸ್ ಮೇಟ್ಗಳು.ಬಂದುಗಳು, ಜೊತೆಗೆ ಆಟವಾಡಿದ ಗೆಳೆಯರು, ಚಿಕ್ಕಂದಿನಲ್ಲಿ ಆಡಿಸಿ ಬೆಳೆಸಿದವರು, ಆಡಿಕೊಂಡು ನಕ್ಕವರು, ಊರಿನವರು, ಒಮ್ಮೆ ಮತ್ತು ಹಲವು ಬಾರಿ ಕಂಡವರು, ಸಹೋದ್ಯೋಗಿ ಗಳು ಇತ್ಯಾದಿ, ಇತ್ಯಾದಿ. ,   ನನ್ನ  ಊರು, ಶಾಲೆ,ಓದಿದ ಕಾಲೇಜು, ಹಿಂದೆ ಕೆಲಸ ಮಾಡಿದ ಸಂಸ್ಥೆಗಳು, ಪ್ರದೇಶಗಳು ಎಲ್ಲಾ ಚೆನ್ನಾಗಿ ಕಾಣುತ್ತಿದೆ.ಎಲ್ಲರೂ, ಎಲ್ಲವೂ ಎಂತಹಾ ರಮ್ಯ.ವಿಚಿತ್ರ , ಅದ್ಭುತ ದೃಶ್ಯಗಳು.ಮನ ಮೋಹಕ ಅನುಭವ.ಆದರೂ ಬಿಟ್ಟ ದೇಹದ ಮೇಲಿನ ವಾತ್ಸಲ್ಯ , ನನ್ನ ಆತ್ಮವನ್ನು ಕೆಲವೇ ಕ್ಷಣಗಳಲ್ಲಿ ವಾಪಸ್ ನಮ್ಮ ಮನೆಗೇ ತಂದಿದೆ.

ನೋಡುತ್ತಿದ್ದಂತೆಯೇ ಬ್ಯಾಗು ಹಿಡಿದು ಊರಿನಿಂದ ಬರುತ್ತಿರುವ ನನ್ನ ಸಹೋದರಿ. ಮುಖ ನೋಡಿ ಮುಗುಳ್ನಕ್ಕೆ. ಜೊತೆಗೆ ಅವಳ ಮಕ್ಕಳು. ಎಲ್ಲರಿಗೂ ನನ್ನ ಕಂಡರೆ ಅತೀವ ಗೌರವ. ಅಂತೆಯೇ ನನ್ನ ದೇಹ ನೋಡಿ ಒಬ್ಬನಂತೂ ಬಿಕ್ಕಿ ಬಿಕ್ಕಿ ಅಳುತ್ತಲೇ ಇದ್ದಾನೆ. ಇಲ್ಲಿ ನೋಡು ಎಂದು ಕರೆಯುತ್ತಿದ್ದರೂ ಉಹ್ವೂ, ನನ್ನ ಕಡೆ ಗಮನವೇ ಇಲ್ಲ, ನನ್ನ ದೇಹದ ಕಡೆ ಹೋಗುತ್ತಿದ್ದಾರೆ. ಬಹಳ ದುಃಖದಲ್ಲಿರುವುದರಿಂದ ಅವಳನ್ನಂತೂ ಸಮಾಧಾನ ಮಾಡಲಾಗದ ಅಸಮರ್ಥತೆ. ಹೊರಗಡೆ ಬಂದೆ. 

ಮೂಲೆಯಲ್ಲಿ ನನ್ನ ಮೈದುನ ನಿಂತಿದ್ದಾನೆ. ಮೊದಲೇ ಮಾತು ಕಡಿಮೆ. ಅದೇನು ಯೋಚಿಸುತ್ತಿರುವನೋ. ಅವನ ಸಹೋದ್ಯೋಗಿ ಮಿತ್ರ, ನನಗೂ ಪರಿಚಯ ಇರುವವರೇ, ಅವರ ಬಳಿ ನನ್ನ ಗುಣಗಾನ ಮಾಡುತ್ತಿದ್ದ. ಸಂಬಂಧದ ಪರಿಚಯ ಇತ್ಯಾದಿ ಇತ್ಯಾದಿ ನಿಧಾನವಾಗಿ ಮಾತನಾಡುತ್ತಿರುವನು. ಅವನ ಬಳಿ ನನ್ನ ತಮ್ಮ ಬಂದು ಏನೋ ಹೇಳಿದನು. ಇವರೂ ತಲೆಯಾಡಿಸಿದರು. ನನ್ನ  ದೇಹದ ವಿಲೇವಾರಿ ಸಂಬಂಧಿಸಿದ ಜವಾಬ್ದಾರಿಯ ಬಗ್ಗೆ ಚರ್ಚೆ ಮಾಡಿರಬಹುದು ಎನಿಸಿತು. ನಾನು ಅವನ ಬಳಿ ಹೋಗಿ ನಿಂತಿದ್ದು ಅವನು ಗಮನಿಸಲೇ ಇಲ್ಲ. ಒಂದೆರಡು ನಿಮಿಷ ಅಲ್ಲೇ ನಿಂತೆ. ಆತ ವಿದ್ಯಾವಂತ, ಸಮಾಧಾನಿ. ಉನ್ನತ ಹುದ್ದೆಯ ಅನುಭವವವೇ ಅವನನ್ನು ಹಣ್ಣು ಮಾಡಿದೆ. ಅವನಲ್ಲಿ ಮಾತ್ರವೇ ಹೇಳಲೇಬೇಕಾದ ವಿಷಯ ಬಹಳ ಇದೆ. ಆಮೇಲೆ ಮಾತನಾಡಿಸೋಣ ಎಂದು ಹೊರಟೆ.

ಇದ್ದಕ್ಕಿದ್ದ ಹಾಗೆ ಯೂನಿಫಾರ್ಮ್ ಹಾಕಿಕೊಂಡಿರುವ ನಮ್ಮ ಆಫೀಸ್ ನವರ ಎರಡು ತಂಡಗಳು. ಈಗಾಗಲೇ ಬಂದಿದ್ದ ನನ್ನ ಸಹೋದ್ಯೋಗಿಯೊಡನೆ ಕೆಲವು ನಿಮಿಷದ ಚರ್ಚೆ. ನಂತರ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದಾರೆ. ನಾನು ಅಲ್ಲಿಯೇ ಕಿಡಕಿಯ ಮೂಲಕ ನೋಡುತ್ತಿದ್ದೇನೆ. ಪ್ರತಿದಿನವೂ ಯಾವುದೋ ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ತೋರಿಸುತ್ತಿದ್ದ ಆ  ಮಿತ್ರ  ಇಂದು ಬೃಹದಾಕಾರದ ಹಾರವನ್ನು ನನ್ನ ದೇಹದ ಮೇಲೆ ಹಾಕಿ ಕೈಮುಗಿದು,ಗರ ಬಡಿದಂತೆ ನಿಂತಿದ್ದಾನೆ. ನೋಡಿದರೇ ತಿಳಿಯುತ್ತದೆ, ಆತನಿಗೆ ಮಾತು ಹೊರಡುತ್ತಿಲ್ಲ. ನಿನ್ನೆ ನಾನು ಹೊರಡುವ ಕಾರಿನವರೆಗೂ ಬಂದು  ಮಾತನಾಡಿದ್ದೇನೆ.ಹೀಗಾಗಿದೆ ಎಂಬ ಯೋಚನೆ ಅವನದು. ನನಗೂ ಅಳುವುದೋ ನಗುವುದೋ ಗೊತ್ತಾಗುತ್ತಿಲ್ಲ. ಒಳ  ಹೋಗೋಣ ಎಂದುಕೊಂಡೆ , ಅವನೇ ಹೊರ ಬರುತ್ತಿರುವಂತಿದೆ. ಹಲೋ,ಹಲೋ. ಅವನು ನೋಡುತ್ತಿಲ್ಲ.ಅಂದರೆ ಅವನಿಗೂ ನಾನು ಕಾಣುತ್ತಿಲ್ಲವಲ್ಲ. ಬಂದಿರುವ ಎಲ್ಲರೂ ಒಂದು ಪ್ರದಕ್ಷಿಣೆ ಮಾಡಿ ಐದು ನಿಮಿಷ ಇದ್ದು, ಅವರವರಲ್ಲೇ ಮಾತನಾಡಿಕೊಳ್ಳುತ್ತಾ ವಾಪಸ್ ಹೊರಟರು. 

ಅವರಲ್ಲೇ ಆಯ್ದ ನನ್ನ ಮಿತ್ರರನ್ನು ಹುಡುಕಿ ಹತ್ತಿರ ಹೋದರೆ ನೋಡದಂತೆ ಹೋಗುತ್ತಿದ್ದಾರೆ. ಏನು ಮಾಡಲಿ. ಎಲ್ಲರೂ ದೇಹವನ್ನು ಗುರುತಿಸುತ್ತಾರೆ ಅಷ್ಟೇ ಹೊರತು ನನ್ನನ್ನು ನೋಡುತ್ತಿಲ್ಲ. ಈವರೆಗೂ ಶಂಕರನೆಂಬ ನನ್ನ ಹೆಸರನ್ನು ಆ ದೇಹದ ಮೂಲಕ ಗುರುತಿಸುತ್ತಿದ್ದಾರೆ. ಆದ್ದರಿಂದಲೇ ಅಲ್ಲವೇ , ಭಕ್ತ ಕುಂಬಾರ ಚಿತ್ರದಲ್ಲಿ ನಿನ್ನ ಹೆಸರೇನು? ಎಂದು ಕೇಳಿದರೆ ಗೋರ ಎಂದು ಈ ದೇಹವನ್ನು ಗುರುತಿಸುತ್ತಿದ್ದಾರೆ ಎಂದು ಹೇಳುವುದು, ಎಷ್ಟು ಅರ್ಥಪೂರ್ಣ. ನಾನೂ ಸೇರಿದಂತೆ ಎಲ್ಲರೂ ತಮ್ಮ ದೇಹವನ್ನಷ್ಟೇ ಗುರುತಿಸುವುದು, ಅದನ್ನು ಅಲಂಕಾರಿಕವಾಗಿಡಲು  ಹೆಣಗುವುದು ಅಲ್ಲವೇ. ಆ ಬದಲು ಉತ್ತಮ ಕೆಲಸಗಳನ್ನು ಮಾಡಿ ಶಾಶ್ವತವಾದ ಆತ್ಮವನ್ನು ಚೆನ್ನಾಗಿಟ್ಟಿದ್ದರೆ ಎಷ್ಟು ಸೂಕ್ತವಾಗಿತ್ತು ಎಂದು ಹಳಹಳಿಸಿದೆ. ಸಹಾಯಕ್ಕೆ ಬಾರದ ಹತಾಶ ವಿಚಾರಗಳು.

ಅವಸ್ಥಾತ್ರಯಗಳೆಂದು ಪ್ರಸಿದ್ಧವಾಗಿರುವ ಆತ್ಮನಿಗೆ ಜಾಗೃತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಿವೆ ಯೆಂದು ನಮಗೆ ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ಆದರೆ ಅದು ಜೀವವಿದ್ದ ದೇಹದಲ್ಲಿರುವ ಆತ್ಮಕ್ಕೆ ಸಂಬಂಧಿಸಿದ್ದು. ಅದೇ ಬೇರೆ. ಆದರೆ ಜೀವ ದೇಹಗಳೆರಡು ಪ್ರತ್ಯೇಕವಾಗಿದ್ದಾಗ ಅಂದರೆ ಈಗಿನ ನನ್ನ  ಸ್ಥಿತಿಗೆ  ಉಪನಿಷತ್ತು ಏನು ಹೇಳುತ್ತದೆ, ತಿಳಿಯದು.

ಬಹಳ ದುಃಖದಿಂದ ನಿಂತಿದ್ದ ಮಗ. ಚಿಕ್ಕಂದಿನಿಂದಲೂ ಎಂದೂ ನಮ್ಮ ತಂದೆ ಯಾವ ವಿಷಯವನ್ನು ನನ್ನ ಮೇಲೆ ಹೇರಲಿಲ್ಲ. ನನ್ನ ಇಷ್ಟದಂತೆಯೇ ವಿದ್ಯಾಭ್ಯಾಸ ಕೊಡಿಸಿದರು, ಬೇಕಾದಷ್ಟು ಸ್ವತಂತ್ರವನ್ನು ಕೊಟ್ಟಿದ್ದಾರೆ. ಆಯಕಟ್ಟಿನ ಸಮಯದಲ್ಲಿ ಸಲಹೆಗಳನ್ನು ಕೊಟ್ಟಿರುವುದು ಹೊರತು ಬೇರೆಲ್ಲೂ ನನಗೆ ಅಡ್ಡ ಬಂದಿಲ್ಲ. ಇಂದು ಏನೇನೋ ಹೇಳುತ್ತಿದ್ದಾನೆ. ಹಾಗಲ್ಲವೋ ಎಂದು ಹಿಂದಿನಿಂದ ಭುಜಾ ಮುಟ್ಟಿದರೂ ತಿರುಗಿ ನೋಡಲಾರ. ಎರಡು ಮಾತನಾಡೋಣ ಎಂದರೆ ಅವಕಾಶವಾಗುತ್ತಿಲ್ಲ, ಬಲು ದುಃಖದಿಂದ ಅಲ್ಲಿಂದ ಕಾಲ್ಕಿತ್ತೆ. ಅವನಲ್ಲಿ ಕೆಲವು ವಿಷಯ ಮಾತನಾಡಲಿಕ್ಕಿದೆ.

ದೊಡ್ಡ ಧ್ವನಿ ಕೇಳಿ ತಿರುಗಿ ನೋಡಿದರೆ ನಮ್ಮ ಮನೆಯ ಕಂಟ್ರಾಕ್ಟರ್ ಮಿತ್ರ. ಯಾರಿಗೋ ದಬಾಯಿಸಿಕೊಂಡು ಬರುತ್ತಿದ್ದಾನೆ. ಜೊತೆಗೆ ಅವನಿಗೆ ಜೈ ಅನ್ನುವ ಕೆಲವು ಕೆಲಸಗಾರರು. ಅವರ ಕೈನಲ್ಲಿ ದೊಡ್ಡ ಅಳತೆಯ ಒಂದು ಹೂವಿನ ಹಾರ. ಬಾಗಿಲಲ್ಲೇ ಅವನ ದೊಡ್ಡ ಚಪ್ಪಲಿ ಬಿಟ್ಟು ಒಳ ನಡೆದ. ಕೆಲಸಗಾರನ ಕೈಯಿಂದ ಹಾರ ಪಡೆದು ದೇಹದ ಮೇಲಿಟ್ಟ. ನಿರಾಕಾರ ಭಾವದೊಂದಿಗೆ ಹೊರಬಂದ. ಮಾಡಬೇಕಾದ ಕೆಲವು ವ್ಯವಸ್ಥೆಗಳ ಹೊಣೆ ಹೊಂದುತ್ತಿದ್ದಾರೆ. ರಾಜಕಾರಣಿಯಂತೆ ಕೆಲವೇ ದೊಡ್ಡವರೊಂದಿಗೆ ಮಾತನಾಡಿ ಹೋಗುತ್ತಿದ್ದಾನೆ. ಅಲ್ಲಿಯೇ ಅಡ್ಡಲಾಗಿ ನಿಂತಿದ್ದರೂ ಕಣ್ಣೆತ್ತಿಯೂ ನನ್ನನ್ನು ನೋಡಲಿಲ್ಲ. ಸರಿ ಆಮೇಲೆ ಆತನಿಗೆ ಮಾತನಾಡೋಣ ಎಂದುಕೊಂಡೆ.

ತರಕಾರಿ ಹೂ ಮಾರುವವನು ಯಾರು ಸಾರ್ ಎಂದು ಕಣ್ಣಿನಲ್ಲಿ ಕೇಳುತ್ತಾ ವಿಷಯ ತಿಳಿದು ಆಶ್ಚರ್ಯ ಪಡುತ್ತಿದ್ದಾನೆ. ನಾನು ಅಲ್ಲಿಯೇ ನಿಂತಿದ್ದರು ಅವನು ಮನೆ ಒಳಗೆ ಬಂದು ಕೈಮುಗಿದು ಹೊರಡುತ್ತಿದ್ದಾನೆ. ಯಾವಾಗಾದರೂ ಒಮ್ಮೆ ಅಪರೂಪಕ್ಕೆ ಅವನಲ್ಲಿ ವ್ಯವಹಾರ ಮಾಡಿದ್ದೂ ನಿಜವಾಗಲೂ ಸಾರ್ಥಕ. ಕನಿಷ್ಠ ಏನಾಗಿದೆ ಎಂದು ನೋಡಲಾದರೂ ಬಂದಿದ್ದಾನಲ್ಲಾ ಎಂಬ ಆತ್ಮತೃಪ್ತಿ ಬೇರೆ. ಆದರೆ ಅವನಿಗೆ ಅದನ್ನು ಹೇಳಿ ಸಂತೋಷ ಪಡಿಸಲು ನನಗೆ ಆಗುತ್ತಿಲ್ಲ. ಅವನ ಋಣ ತೀರಿಸುವ ಪರಿ ಅದು ಇರಬಹುದು.

ಯಾಕೋ ನನಗೆ ಎಲ್ಲವೂ ಮಸುಕು ಮಸುಕಾಗುತ್ತಿದೆ. ಯಾವುದೂ ನಿಚ್ಚಳವಾಗಿ ಕಾಣುತ್ತಿಲ್ಲ. ಒಳಗೆ ಹೋಗೋಣವೆಂದರೆ ಬಾಗಿಲಲ್ಲಿ ಕಾರ್ಪೊರೇಷನ್ ನ ಕಸಗುಡಿಸುವಾಕೆ. ಅಕ್ಕಪಕ್ಕದವರೊಡನೆ ವಿಷಯ ತಿಳಿದು ಪ್ರತ್ಯಕ್ಷ ನೋಡಬೇಕೆಂಬ ಕುತೂಹಲ ಆಕೆಗೆ. ಆದರೆ ಮನೆಯ ಒಳಗೆ ಹೋಗಬೇಕೋ ಬೇಡವೋ ಎಂಬ ಆತಂಕ ಬೇರೆ. ಅಲ್ಲೇ ಬಾಗಿಲಲ್ಲಿದ್ದ ನನ್ನ ಸಹೋದ್ಯೋಗಿ, ಪರವಾಗಿಲ್ಲ ಹೋಗಿ ಹೋಗಿ ಎಂದು ಅವಳನ್ನು ಕಳಿಸುತ್ತಿದ್ದಾನೆ. ವಾಹನಗಳು ಮನೆ ಮುಂದೆ ಸಾಕಷ್ಟು ನಿಂತಿವೆ ಓಡಾಡುವ ಇತರರಿಗೆ ತೊಂದರೆಯಾಗುತ್ತಿದೆ.ಅಲ್ಲಿದ್ದ ಪರಿಚಯದ ಜನರು ಹೋಗಿ ಬರುವವರಿಗೆ ದಾರಿ ಮಾಡಿಕೊಡುತ್ತಿದ್ದಾರೆ.

ಸುಮಾರು ಮೂರು ದಶಕಗಳ ಪರಿಚಯದ, ಬೆಳಗಿನ ವಾಕಿಂಗಿಗೆ ನನ್ನೊಂದಿಗೆ ಬರುವ ಮಿತ್ರ ಬಾಗಿಲಲ್ಲಿ ಕಾಯುತ್ತಿದ್ದಾರೆ. ಅವರಿಗೆ ನಾನು ಸತ್ತ ವಿಷಯ ತಿಳಿಯದೇನೋ? ಮಾರ್ಗ ಮಧ್ಯೆ ನೋಡಲೆಂದು ಬಂದಿರುವಂತಿದೆ. ಎಂದಿನಂತೆ ಟಿಪ್ ಟಾಪಾಗಿ ಬಂದಿದ್ದಾರೆ. ಅವರ ಬಳಿ ಹೇಳಲು ವಿಷಯ ಬೇಕಾದಷ್ಟಿದೆ. ಪ್ರತಿಯೊಂದನ್ನು ಹೊಸತಾಗಿ ಕುತೂಹಲದಿಂದ ಕೇಳಿಸಿಕೊಳ್ಳುವ ಅವರ ಸ್ವಭಾವ ನನಗೆ ತುಂಬಾ ಮೆಚ್ಚಿಗೆ. ಯಾವುದೇ ವಿಶೇಷ ವಿಷಯವಿದ್ದರೂ ಫೋನ್ ನಲ್ಲಿ ಯಾದರೂ ವಿಚಾರ ವಿನಿಮಯ ಮಾಡಿ ಕೊಳ್ಳುವ ಅಭ್ಯಾಸ. ಅವರಿಗೆ ಇಂದಿನ ಎಲ್ಲ ವಿದ್ಯಮಾನಗಳನ್ನು ತಿಳಿಸಬೇಕೆಂಬ ಆಸೆ ನನಗಿದೆ. ಅವರಿಗೂ ಹೇಳುವುದಿರಬಹುದು.
ನಾನು ಅವರ ಭಾವನೆ ಗಳನ್ನು ಅರಿತಿರುವುದರಿಂದ ಅಲ್ಲಿಯೇ ನಾನು ಇಂತಹ ಸ್ಥಿತಿಯಲ್ಲಿ ಇದ್ದೇನೆ ಎಂದು ಗೊತ್ತಾದರೆ ಅವರು ನಿಶ್ಚಯವಾಗಿ ಹೇಳುವ ಸಾಲು ಜಿಎಸ್ಎಸ್ ನವರ ಈ  ಪದ್ಯವೇ ಆಗಿದ್ದು ಅದು ಹೀಗೇ ಇರುತ್ತದೆ ಎಂದು ಊಹಿಸ ಬಲ್ಲೆ
 
ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ,
ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ.
 
ಎಲ್ಲಿದೆ ನಂದನ ಎಲ್ಲಿದೆ ಬಂಧನ, ಎಲ್ಲಾ ಇವೆ ಈ ನಮ್ಮೊಳಗೆ,
ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ.
 
ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ,
ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ.

ಎಂದು ಕೊಂಡೆ. ಹತ್ತಿರ ಬಂದು ಹಲೋ, ಏನ್ ಸರ್ ಎಂದರೂ ತಿರುಗುತ್ತಿಲ್ಲ.ಗಂಭೀರವಾಗಿ ನಿಂತಿರುವರು. ಪಾಪ, ಅವರೇನುಮಾಡುತ್ತಾರೆ, ಕೇಳಿಸಿದರೆ ತಾನೆ ತಿರುಗುವುದು.ಇರುವ ನನ್ನ ಸ್ಥಿತಿ ಹೀಗಿರುವಾಗ.
ಕಣ್ಣೆದುರು ಕಂಡರೂ ನೋಡದ, ಹೇಳಿದರೂ ಕೇಳಿಸದ ಸ್ಥಿತಿ ಯಾರಿಗೂ ಬೇಡ. ಕಛೇರಿಗಳಲ್ಲಿ, ಸಮಾರಂಭಗಳಲ್ಲಿ ಕೆಲವರು ಹಣ ಅಧಿಕಾರದಿಂದ ದೊಡ್ಡವರೆನ್ನಿಸಿಕೊಂಡ ವ್ಯಕ್ತಿಗಳು ಅಹಂಕಾರದಿಂದ ಪರರನ್ನು ಹೀಗೆ ನಡೆಸಿಕೊಂಡದ್ದನ್ನು ನೋಡಿದ್ದೇನೆ. ಅದು ಬೇರೆಯ ರೀತಿಯಲ್ಲಿ ಹೆಲ್ಪಲೆಸ್ನೆಸ್ .

ನನಗೋ ಯಾರೋ ಬಾ ಎಂದು ಭುಜ ತಟ್ಟುತ್ತಿದ್ದಾರೆ, ಸಮಯ ನೋಡಿದೆ, ಆಗಲೇ ಹತ್ತು ಗಂಟೆಯ ಸಮೀಪ. ನನ್ನ ಆತ್ಮದ ವೇಳೆ ಮುಗಿಯುತ್ತಿದೆ. ಆದ್ದರಿಂದಲೇ ಎಲ್ಲ ಕಡೆಗೂ ಕತ್ತಲಾಗುತ್ತಿದೆ. ಇನ್ನೂ ಐದು ನಿಮಿಷ ಸಿಕ್ಕಿದರೆ ಕೆಲವು ವಿಷಯ ಹೇಳಿ ಹೋಗಬಹುದಾಗಿತ್ತು. ಕನಿಷ್ಠ ಕೃತಜ್ಞತೆ ಹೇಳಬಹುದು, ಎಂದುಕೊಂಡು ದೇವರಲ್ಲಿ ಕೇಳುತ್ತಿದ್ದೇನೆ - ಐದು ನಿಮಿಷ, ಐದೇ ನಿಮಿಷ. ಆದರೂ ಭುಜ ತಟ್ಟುತ್ತಿದ್ದಾರೆ, ಐದು ನಿಮಿಷ, ಐದು ನಿಮಿಷ ಎಂದುಕೊಂಡು ಮಲಗಿಯೇ ಇದ್ದೀರಿ, ನಾನು ಎಬ್ಬಿಸುತ್ತಲೇ ಇದ್ದೇನೆ. ಏಳಿ. ರಾತ್ರಿಯಲ್ಲಿ ಮಲಗುವುದಿಲ್ಲವೇ. ಬನ್ನಿ, ರೆಡಿಯಾಗಿ, ಕಾಲೋನಿಗೆ ಹೋಗಿ ಬರುವ ಕೆಲಸ ಇದೆ ಎಂದು  ಹೇಳುತ್ತಾ ಕಾಫಿ ಜೊತೆ ಬಿಸಿ ಬಿಸಿ ಪಕೋಡದೊಂದಿಗೆ ನಿಂತಿದ್ದಾಳೆ. ಗಂಭೀರವಾಗಿ ಅವಳ ಮುಖ ನೋಡಿದೆ - ಎಂದಿಗಿಂತ, ಸುಂದರವಾಗಿ, ಸಮಾಧಾನವಾಗಿ ಕಾಣುತ್ತಿದ್ದಾಳೆ, ಮಾತು ಮಧುರವಾಗಿ ಕೇಳಿಸುತ್ತಿದೆ, ಮನಸಿಗೆ ರಮ್ಯವೆನಿಸುವ ಅನುಭವ. ಎಂದೂ ಕಾಣದ ಪ್ರೀತಿ ಸೊಬಗುಗಳು ನೋಟದಲ್ಲೇ ಕಂಗೊಳಿಸುತ್ತಿದೆ.

ಓ, ದೇವರೇ, ಕೇವಲ ಐದು ನಿಮಿಷ ಕೇಳಿದ ನನಗೆ ಮತ್ತೆ ತುಂಬು ಜೀವನವನ್ನೇ ಕರುಣಿಸಿದೆಯೇ, ನಾನೆಷ್ಟು ನಿನಗೆ ಋಣಿ, ಎಂದು ಮನಸಾರೆ ನಮಿಸಿದೆ ಮೌನವಾಗಿ.

ಸುಂದರ, ಎಲ್ಲವೂ ಅತಿಸುಂದರ, ನೋಡುವ ದೃಷ್ಟಿ ಸುಂದರವಾದರೆ ಜಗತ್ತೆಲ್ಲ ಅತಿ ಸುಂದರವೇ. ಎಲ್ಲರನ್ನೂ ಒಮ್ಮೆಗೇ ಕಳೆದುಕೊಂಡು ಮತ್ತೆ ಪಡೆದರೆ ಎಷ್ಟು ಚೆನ್ನಾಗಿರುತ್ತೆ ಎಂದು ಎನಿಸುತ್ತದೆ. ಹಾಗೆಂದು ಎಲ್ಲರನ್ನೂ ನಾನು ಕಳೆದುಕೊಳ್ಳಲು ಸುತಾರಾಂ ತಯಾರಿಲ್ಲ. ಏಕೆಂದರೆ ಮತ್ತೆ ಇದ್ದಹಾಗೆ ಎಲ್ಲವೂ ಸಿಗುವುದು ಕಷ್ಟ ಅಲ್ಲವೇ. 

ಇಂತಹಾ ಆತನ ಮಾತುಗಳನ್ನು ಕೇಳಿದಾಗ ನನಗೆ ಅನ್ನಿಸಿತು. ಈ ಭೂಮಿಯಲ್ಲಿ ಇರುವಷ್ಟು ದಿನವೂ ಎಲ್ಲರಿಗೂ ಸಂತೋಷ ಕೊಡೋಣ. ಸಾಧ್ಯವಾಗದಿದ್ದರೆ ನಮ್ಮಿಂದ ಯಾರಿಗೂ ಬೇಸರವಾಗದಂತೆ ನಡೆದುಕೊಳ್ಳೋಣ. 

ಸಂತಸ ಸಮಾಧಾನದ ಸುಂದರ ಬದುಕು ನಮ್ಮೆಲ್ಲರದಾಗಲಿ, ಸಂತಸ ತರುವ, ಚಿರ ನೆನಪುಗಳ ಬದುಕು ನಮ್ಮದಾಗಲಿ.
 

Comments

  1. Superb clarity on life, which should be understood by everyone

    ReplyDelete
  2. While reading your article l myself became Shankara who is your friend for some time and imagined my own relations and all people around me and felt as real as of my own life who gone it the depth of article. It made me start thinking for the next future days as WHAT IS NEXT?. Thanq for awakening me from the present.

    ReplyDelete
  3. I am very happy to say that ,I am success to some extent to touch the heart and made you to involve in the article. Thank you sir for your feedback.

    ReplyDelete
  4. ಹೆಜ್ಜೆ ಮೂಡದ ಹಾದಿಯಲ್ಲಿ ನಿರ್ಗಮಿಸುವ ಮುನ್ನ ಹಿಂತಿರುಗಿ ಅವಲೋಕಿಸುತ್ತಾ ಮನದಲ್ಲಿ ಮೂಡುವ ವಿಚಾರಗಳನ್ನು ದಾಖಲಿಸುವ ತಂತ್ರವನ್ನು ಬಳಸಿಕೊಂಡ ಲೇಖನಗಳನ್ನು ಕೆಲವು ಬಾರಿ ಓದಿ ಬಲ್ಲೆನಾದರೂ ಈ ಥರಹದ ಬರಹಗಳನ್ನೋದುವ ಆಸಕ್ತಿ ಮಾಸಿಲ್ಲ. ವಿವಿಧ ಲೇಖಕರ ವಿಭಿನ್ನ ಶೈಲಿ ಇದಕ್ಕೆ ಕಾರಣ.

    ಇದು ಬರೇ ಕನಸು ಇರಬಹುದು ಎಂಬ ಊಹೆ ತಲೆಯೊಳಗೆ ಸುಳಿಯಲಿಲ್ಲ.

    ಕಡೆಗೊಮ್ಮೆ ಅದು ತಿಳಿದಾಗ ನಿರಾಳ ಎನಿಸಿ ಮನಸ್ಸು ಅರಳಿದ್ದೂ ನಿಜ!

    ಓದಿ ಮುಗಿಸಿದಾಗ, ನನಗೆ ಅರಿವಿಲ್ಲದೇ
    "...ಪಾಪ..." ಎಂಬ ಮೆಲುದನಿಯ ಉದ್ಗಾರ ಹೊರಹೊಮ್ಮಿತು.

    ಯಾರು, ಏಕೆ ಪಾಪ ಎಂಬುದು ಸರಳವಾಗಿ ತಿಳಿಯುತ್ತಿಲ್ಲ....

    ReplyDelete
    Replies
    1. ಹೆಜ್ಜೆ ಮೂಡದ ಹಾದಿಯ ಪ್ರಯಾಣದಲ್ಲಿ ಕಾಣಿಸಿದ ಮೈಲುಗಲ್ಲುಗಳ ಒಂದು ಪರಾಮರ್ಶಯ ಲೇಖನಕ್ಕೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

      Delete
  5. ಆತ್ಮಾವಲೋಕನವು ಮನಸ್ಸಿನ ಆಳಕ್ಕೆ ಇಳಿದು ಯೋಚನೆ ಮಾಡಿಸುತ್ತದೆ.ಮುಂದೆ ನಮ್ಮ ಕಥೆಯೂ ಈ ರೀತಿ ಆಗುವುದೇ ಎಂದು ಯೋಚಿಸುವಂತೆ ಮಾಡುತ್ತದೆ . ಯಾರಿಗೂ ಹೇಳಲಾಗದೆ ಹಲವು ವಿಷಯಗಳು ನಮ್ಮೊಂದಿಗೆ ಸಾಯುತ್ತದೆ.ಅನಿಸಿದ್ದೆಲ್ಲಾ ಬರೆಯಲಾಗದು.ಚೆನ್ನಾಗಿದೆ.

    ReplyDelete
    Replies
    1. ಆತ್ಮಾವಲೋಕನ ಶೀಘ್ರವಾಗಿ ನಡೆದಷ್ಟೂ ಮುಂದಿನ ಹಾದಿ ಸಮಾಧಾನಕರ. ಧನ್ಯವಾದಗಳು.

      Delete
  6. ಆರಂಭದಲ್ಲಿ ಇದು ಕನಸಿನ ಕನವರಿಕೇ ಎನಿಸಿದರೂ, ಓದುತ್ತ ಹೋದಂತೆ ನಾವೂ ನಮಗರಿಯದೆ ಶಂಕರನ ಅತ್ಮದೊಳಗೆ ಪ್ರವೇಶಿಸುವ ಪರಿ ಅನನ್ಯ! ಅದ್ಭುತ ಬರಹಗಾರಿಕೆ! ಹಾಗೆಯೇ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಎನಿಸದೆ ಇರದು! ನಮ್ಮ ಅಹಂ, ಆವೇಶ, ಅಂತಸ್ತುಗಳಿಗೆಲ್ಲ ಕಡಿವಾಣ ಹಾಕಿ, ನಮ್ಮ ಸುತ್ತಲಿನವರ, ನಮ್ಮ ಬದುಕಿಗೆ ಅರ್ಥ ನೀಡುವವರ ಬಗ್ಗೆ ಬದುಕಿದ್ದಾಗಲೇ ನಾವೇನು ಮಾಡಬಹುದು ಎಂಬ ಯೋಚನೆಗೆ ಹಚ್ಚುತ್ತದೆ ಲೇಖನ! ಹಾಗೇನೇ ಪ್ರಾಣ ಹೋದ ಮೇಲೆ ನಮಗೆ ಬರೀ "ದೇಹ" ಎಂಬ ಸತ್ಯದರ್ಶನವೂ ಆಗುತ್ತದೆ!
    ~ ಮಹಾಂತೇಶ ತಳಗೇರಿ.

    ReplyDelete
    Replies
    1. ಶಂಕರನ ಆತ್ಮ ವು ಜಿಎಸ್ಎಸ್ ರವರ ಕವನವನ್ನು ನೆನಪಿಸಿಕೊಳ್ಳುತ್ತಾ ತಮ್ಮ ಪ್ರಶ್ನೆ ಗೆ ಉತ್ತರ ಹುಡುಕಲು ಪ್ರಯತ್ನಿಸಿದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  7. ನಿಮ್ಮ ಮಿತ್ರ ಶಂಕರ ರವರು ಹೇಳಿದ್ದ ಅವರ ಅನುಭವವನ್ನು, ನೀವು ಬಹಳ ರಸವತ್ತಾದ ಭಾಷಾ ಶೈಲಿಯಿಂದ ನಮಗೆ ಉಣಬಡಿಸಿರುವುದು ತುಂಬಾ ಕುತುಹಲಕಾರಿಯಾಗಿದೆ. ಈ ಕಥೆಯನ್ನು ಓದುವಾಗ ಯಾವುದೊ ಕಾಣದ ಲೋಕದಲ್ಲಿ ವಿಹರಿಸುತ್ತಿರುವ ಅನುಭವ ನನಗಂತೂ ಆಯಿತು. ವಂದನೆಗಳು.

    ReplyDelete
    Replies
    1. ಆತ್ಮಾವಲೋಕನದ ಮೆಚ್ಚುಗೆಗೆ ಧನ್ಯವಾದಗಳು.

      Delete
  8. ಸರಳ ಸುಂದರ ಅಷ್ಟೇ ಗಹನವಾದ ಚಿಂತನೆಗೆ ಹಚ್ಚುವ ವಸ್ತು.. ಅಚ್ಚುಕಟ್ಟಾದ ನಿರೂಪಣೆ.. ಚೆಂದದ ಕಥೆ.. ಧನ್ಯವಾದಗಳು

    ReplyDelete
    Replies
    1. ಉತ್ತೇಜನಕಾರಿ ವಾಕ್ಯಗಳಿಗೆ ಧನ್ಯವಾದಗಳು.

      Delete
  9. ಜೀವ, ಜೀವನಕ್ಕೆ ಬಹಳ ಹತ್ತಿರವಾದ ಭಯಾನಕ ಕನಸು. ಬರಹ ಮತ್ತೆ ಮತ್ತೆ ಓದುವಂತಿದೆ.
    Thank you.

    ReplyDelete
    Replies
    1. ಪುನರಾವರ್ತಿತ ಅಧ್ಯಯನವೇ ಆತ್ಮಾವಲೋಕನದ ಹಾದಿ.ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

      Delete
  10. Thanks for sharing this piece about out of body experience. An enthralling read ! I enjoyed reading it :)

    ReplyDelete
  11. ಮಿತ್ರನೊಬ್ಬನ ಆತ್ಮಾವಲೋಕನ ಕಥೆಯನ್ನು ಓದುತ್ತಾ ಹೋದರೆ ದೇಹ ಮತ್ತು ಆತ್ಮದ ಸಂಬಂಧಗಳ ಬಗ್ಗೆ ತಿಳಿಯುತ್ತದೆ ದೇಹವೇ ಬೇರೆ ಆತ್ಮವೇ ಬೇರೆ ದೇಹತ್ಯಾಗದ ನಂತರ ಆತ್ಮವು ತನ್ನ ಅಳಲನ್ನು ಮನೆಯವರಿಗಾಗಲಿ ಸ್ನೇಹಿತರಿಗೆ ಆಗಲಿ ಹಾಗೂ ಸಂಬಂಧಿಕರಿಗಾಗಲಿ ಆತ್ಮವು ಹೇಳುವ ಮಾತುಗಳು ಯಾರಿಗೂ ಕೇಳಿಸುವುದಿಲ್ಲ ಆ ಪರಿಸ್ಥಿತಿ ಆತ್ಮಕ್ಕೆ ತುಂಬಾ ಹಿಂಸೆ ಎನಿಸುತ್ತದೆ ಕಥೆಯನ್ನು ಓದುತ್ತಾ ಹೋದರೆ ದೇಹ ತ್ಯಾಗದ ನಂತರ ಆತ್ಮದ ನೋವನ್ನು ನೋಡಿದಾಗ ಜೀವ ಇರುವಾಗಲೇ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬುದು ತಿಳಿದುಬಂದಿತು. ಕಥೆ ಚೆನ್ನಾಗಿ ಮೂಡಿ ಬಂದಿದೆ

    From Manohara Rao

    ReplyDelete
    Replies
    1. ಲೋಕ ವ್ಯವಹಾರದಲ್ಲಿ ದೇಹವಿಲ್ಲದೆ ಆತ್ಮವಿಲ್ಲ. ಆದರೆ ಆತ್ಮ ಆತ್ಮಗಳ ಸಂಬಂಧ ಇನ್ನೂ ಸೂಕ್ಷ್ಮ .
      ಪರರ ಆತ್ಮ ಎಲ್ಲಿಯವರೆಗೂ ನಮ್ಮಿಂದ ನೋವು ಅನುಭವಿಸುತ್ತಿರುವುದೋ ಅಲ್ಲಿಯವರೆಗೂ ನಮ್ಮ ಆತ್ಮವೂ ಕಾಣದ ಹಿಂಸೆಯಿಂದ ನರಳುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  12. ಹೌದು,ಇದು ಕನಸಾಗಿಯೇ ಇರಲಿ, ನಾವು ಶಾಶ್ವತ ವಲ್ಲ ಅಂತ ಗೊತ್ತಿದ್ದರೂ ಸಾವು ಅಂದರೆ ಯಾಕೋ ಭಯ.ಇಂದೇ ನಮ್ಮ ಕೊನೇ ದಿನ ಅಂತ ಬದುಕೋಣ ಎಲ್ಲರನ್ನೂ ಪ್ರೀತಿಯಿಂದ ನೋಡೋಣ,ಕ್ಷಮಿಸೋಣ ಎಂಬುದೆಲ್ಲ ಸಲಹೆ ನೀಡಲು ಮಾತ್ರ ಚೆನ್ನ.
    ಅಬ್ಬಾ! ಈ ಕತೆ ಓದುತ್ತಾ ಓದುತ್ತಾ ಮೈ ಬೆವರಿತು,ಬಾಯಾರಿತು.ಎಷ್ಟು ಪ್ರಯತ್ನ ಪಟ್ಟರೂ ಕನಸು ಮರೆಯಲು ಆಗುತ್ತಿಲ್ಲ,

    ಎಲ್ಲ ತಿಳಿದಿದ್ದರೂ, ಎಷ್ಷೇ ಓದಿಕೊಂಡಿದ್ದರೂ, ಪ್ರಾಯೋಗಿಕವಾಗಿ ಹಾಗೆ ಅಂದರೆ ಒಳ್ಳೆಯವರಾಗಿ ಬದುಕಲು, ಮಗುವಿನ ಮನಸ್ಸಿನಿಂದ ಇರಲು ನಮಗೇಕೆ ಆಗುತ್ತಿಲ್ಲ.ಪ್ರತಿಕ್ಷಣವನ್ನೂ ಹಿರಿಯರಂತೆ ಆಸ್ವಾದಿಸಲು ನಮಗೇಕೆ ಅಹಂ ಅಡ್ಡಿಬರುತ್ತಿದೆ? ನೋವಿರಲಿ,ನಲಿವಿರಲಿ, ಸಮಚಿತ್ತದಿಂದ ಸರಿದೂಗಲು ನಮಗೇಕೆ ಆಗುತ್ತಿಲ್ಲ, ಆತ್ಮವಿಮರ್ಶೆ ಮಾಡಿಕೊಂಡು ಮುಂದೆ ಹೋಗಬೇಕು.ಇಲ್ಲವಾದರೆ ದಿನದಿನವೂ ಈ ಕನಸುಗಳು ನಮ್ಮನ್ನು ಕಾಡುತ್ತವೆ.
    ಆದರೂ ಶಂಕರ ಅದೃಷ್ಟ ವಂತ, ಒಳ್ಳೆಯ ಹೆಂಡತಿ, ಕೈತುಂಬಾ ಸಂಬಳದ ಕೆಲಸ,ಗೌರವ, ಮಿತ್ರರು, ಬಂಧುಗಳು
    ಶರಣರ ಸಾವು ಮರಣದಲ್ಲಿ ನೋಡು ಎಂಬಂತ ವ್ಯಕ್ತಿತ್ವ ಅವನಿಗೇ ಹೀಗಾದರೆ ಉಳಿದವರ ಪಾಡೇನು?
    ಅದ್ಭುತ ಸಾರ್ ಅದ್ಭುತ.
    ಪೂರ್ಣಿಮಾ ಜೋಯ್ಸ್

    ReplyDelete
    Replies
    1. ಶಂಕರನ ಕಿಂಕರರು ಕರೆಯುವ ಮುನ್ನ , ಜಗವೆಲ್ಲ ನಿಜವಾಗಿ ಮೆಚ್ಚಿದರೆ ಚನ್ನ.
      ಸಾಧಕರಿಗೆ ಬೇಕಾದ ಆತ್ಮವಿಮರ್ಶೆಅಂಶವನ್ನು ಲೇಖನದಲ್ಲಿ ಗುರುತಿಸಿರುವುದಕ್ಕೆ ಧನ್ಯವಾದಗಳು.

      Delete
  13. ಈ ಬರಹ ಬರಿದೇ ಬರಹವಾಗಿರದೆ ನಮ್ಮ ಆತ್ಮಾವಲೋಕನಕ್ಕಾಗಿ ಮೂಡಿ ಬಂದ ಒಂದು ಮುಖ್ಯ ಬೆಳಕಾಗಿದೆ. ನಾವು ಸಾಗಿಬಂದ ದಾರಿಯನ್ನು ಮತ್ತೆ ಹಿಂತಿರುಗಿ ಮರುಸಾಗೋಣವೇ ಎಂಬಂತೆ ಬಿಂಬಿಸುವ ಈ ಬರಹ ಸೊಗಸಾಗಿದೆ. B N Shanthamma

    ReplyDelete
    Replies
    1. ಆತ್ಮಾವಲೋಕನವು ನಿಶ್ಚಯವಾಗಿ ಸಾರ್ಥಕ ಬದುಕಿಗೆ ಅವಕಾಶ ಮಾಡುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  14. ಈ ಕಥೆಯು ತುಂಬಾ ಚೆನ್ನಾಗಿದೆ...ನಾವು ಜೀವನದಲ್ಲಿ ದೂರಾಲೋಚನೆ ಜೊತೆಗೆ ದುರಾಲೋಚನೆಯನ್ನು ಮಾಡಿರುತ್ತೇವೆ. ಆದರೆ ಆತ್ಮಾವಲೋಕನ ಮಾಡಿಕೊಂಡೇ ಇರಲ್ಲ..ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಸಾವಾಗಿದ್ದರೂ ಆ ಸಮಯದಲ್ಲಿ ಉಕ್ಕಿಬರುವ ದುಃಖದೊಂದಿಗೆ ಮುಂದಿನ ಕಾರ್ಯವನ್ನು ಮುಗಿಸುವ ಕಡೆಗೇ ಎಲ್ಲರ ಗಮನ...ಸತ್ತಿರುವವರ ಆತ್ಮ ಏನು ಮಾಡುತ್ತದೆ ? ಎಂದು ಯಾರೂ ಯೋಚಿಸುವುದಿಲ್ಲ...ಈ ಕಥೆ ಎಲ್ಲರನ್ನು ಒಂದು ಸಾರಿ ಶಂಕರರ ಪಾತ್ರದಲ್ಲಿ ಕುಳ್ಳಿರಿಸುತ್ತದೆ....👌👏🙏😊

    ReplyDelete
    Replies
    1. ಆತ್ಮಾವಲೋಕನವು ನಿಶ್ಚಯವಾಗಿ ಸಾರ್ಥಕ ಬದುಕಿಗೆ ಅವಕಾಶ ಮಾಡುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  15. ಕಥೆ ತುಂಬಾ ಚೆನ್ನಾಗಿದೆ, ನಾವು ಕೂಡ ಆತ್ಮಾವಲೋಕನ ಮಾಡಿಕೊಳ್ಳ ಬೇಕು ಮನಸ್ಸಿಗೆ ಮುಟ್ಟು ವಂತಿದೆ.
    Vani S.R

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  16. ಬಹಳ ಚೆನ್ನಾಗಿದೆ,

    Anupama T

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು

      Delete
  17. ಗತಿಸಿದ ಘಟನೆಗಳ ಮೆಲುಕು ಹಾಕುವಂತೆ ಮುಂದೆ
    ನಡೆಯಬಹುದಾದ ಘಟನೆ ಯ ಬಗ್ಗೆ ಒಂದು ವಿಚಾ ರ
    ಪೂರ್ಣ ಲೇಖನ. ನನಗೆ ಹಿಂದೆ ಯಾರೋ ಸತ್ತಂತೆ ಆ
    ನಂತರದ ಚಟುವಟಿಕೆಗಳ ಕನಸು ಬಿದ್ದಿತ್ತು. ಆದರೆ
    ಆತ್ಮಾವಲೋಕನದ ರೀತಿಯಲ್ಲಿ ಇಷ್ಟು ಕುತೂಹಲಕಾರಿ ಯಾಗಿ ಬರೆಯಬಹುದೇ ಎಂದು ಆಶ್ಚರ್ಯವೆನಿಸುತ್ತದೆ
    ಬರಹ ಸುಂದರವಾಗಿದೆ

    ReplyDelete
    Replies
    1. ನನ್ನಿಂದ ನಾನು ಹೊರನಿಂತು ಯೋಚಿಸುವಾಗ ಆಗುವ ಅನುಭವ ರೋಚಕ. ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  18. ಅದ್ಭುತವಾದ   ಕಲ್ಪನೆ  ಅಮೋಘವಾದ   ಶೈಲಿಯಲ್ಲಿ    ಬರಹರೂಪಕ್ಕೆ   ಇಳಿಸಿದ್ದು,   ಓದಿದವರಿಗೆ  ಆನಂದವನ್ನೂ  ಜ್ಞಾನವನ್ನೂ   ಕೊಡುತ್ತ,   ಚಿಂತನೆಯತ್ತ   ತಳ್ಳುತ್ತದೆ.   Please   Keep  it  up.   ನಿನ್ನ  (ಹೆಸರಿಗೆ) ಹಿರಿಯಣ್ಣ.

    ReplyDelete
  19. ತುಂಬಾ ಚೆನ್ನಾಗಿ ಬರೆದಿದ್ದೀರಿ. ಇನ್ನು ಮೇಲೆ ಪುರುದೊತ್ತಾಗಿ ಎಲ್ಲವನ್ನೂ ಓದುತ್ತೇನೆ.

    ReplyDelete
  20. Super , thank you for this article,i realised that what all the things which will going to come in our mind.

    ReplyDelete

Post a Comment