Skip to main content

ಕೋಮಾಂತರಂಗ

ನಮ್ಮ ತಾಯಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ, ರಾತ್ರಿ ಸುಮಾರು ಹನ್ನೊಂದರ ಸಮಯ. ಹಾಗೆ ಪಕ್ಕದಲ್ಲಿ ಸಹಾಯಕನ ಹಾಸಿಗೆಯಲ್ಲಿ ನಾನು ಪವಡಿಸಿದ್ದೇನೆ. ಎಲ್ಲ ಕಡೆಗೂ ನಿಶಬ್ದ. ಈಗಾಗಲೇ ಅಂದುಕೊಂಡಂತೆ ಆ ಕೋಮಾ ರೋಗಿಯ ಮನಸ್ಸಿನಲ್ಲಿ ಪ್ರವೇಶಿಸಲು ಹೊರಡುತ್ತಿದ್ದೇನೆ. ಕೇವಲ ನನ್ನ ಮನಸ್ಸಷ್ಟೇ ಬೇಕಾದೆಲ್ಲೆಲ್ಲಾ ಹರಿದಾಡುತ್ತಿರುವುದರಿಂದ ನಾನು ಯಾರಿಗೂ ಕಾಣಿಸುತ್ತಿಲ್ಲ. ಓಹೋ, ಮನಸು, ಬೇಕಾದಲ್ಲೆಲ್ಲಾ ಅದು ಹೇಗೆ ಎಂಬುದನ್ನು ತಮಗೆ ಹೇಳಲೇ ಬೇಕಾಗಿದೆ.

ಕಳೆದ ಡಿಸೆಂಬರ್ ನ ಒಂದು ಸಂಜೆ ಇಲ್ಲಿಗೆ ಬಂದಾಗ ಆಕಸ್ಮಿತವಾಗಿ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಮಿತ್ರನನ್ನು ಕಂಡೆ. ಅವನೊಂದಿಗೆ ಮಾತನಾಡುತ್ತಿದ್ದಾಗ ಆತನ ತಾಯಿ ಇದೇ ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿ ಇರುವಳೆಂದೂ, ಕಳೆದ ಎರಡು ವರ್ಷಗಳಿಂದ ಆಕೆ ಕೋಮಾ ಹಂತದಲ್ಲಿದ್ದು ಆಕೆಯನ್ನು ನೋಡಲು ಬಂದಿರುವುದಾಗಿ ತಿಳಿಸಿದ. ಎರಡು ವಾರದಿಂದ ಇಲ್ಲಿರುವುದಾಗಿ ಮರು ದಿನ ವಿದೇಶಕ್ಕೆ ವಾಪಸ್ ಹೊರಡುತ್ತಿರುವುದಾಗಿ ಹೇಳಿದ. ಅಲ್ಲದೆ ನಾನು ಯಾವಾಗಲಾದರೂ ಇಲ್ಲಿಗೆ ಬಂದಾಗ ಅವರನ್ನು ನಾನು ನೋಡಬಹುದೆಂದು ತಿಳಿಸಿ ಆ ವಿಭಾಗದ ನರ್ಸ್ ಗಳಿಗೂ, ಒಬ್ಬ ವೈದ್ಯರಿಗೂ ನನ್ನ ಪರಿಚಯ ಮಾಡಿಸಿದ. ರೋಗಿಯಾಗಿರುವ ಅವರ ತಾಯಿಯತ್ತ ನೋಡಿದೆ. ತದೇಕ ಚಿತ್ತ ದಿಂದ ಕೊಂಚವೂ ಅಲ್ಲಾಡದೆ ಕಿರುಗಣ್ಣಿನಿಂದ ಬಾಗಿಲ ಕಡೆ ನೋಡುತ್ತಾ ಇರುವಂತಿದೆ. ಈ ಹಂತದಲ್ಲಿ ಅವರೇನು ಯೋಚಿಸುತ್ತಿರಬಹುದು ಎಂದು ಕುತೂಹಲದಿಂದ ವೈದ್ಯರಲ್ಲಿ ಕೇಳಿದೆ. ರೋಗಿಯು ಪ್ರತಿಕ್ರಿಯಾಶೂನ್ಯರು, ನಮಗೂ ಸಹ ಏನೂ ಗೊತ್ತಾಗುವುದಿಲ್ಲ. ದೇಹದ ಉಷ್ಣತೆ ಉಸಿರಾಟಗಳಲ್ಲಿ ವ್ಯತ್ಯಾಸವೇನಾದರೂ ಕಂಡು ಬಂದರೆ ಚಿಕಿತ್ಸೆ ಮಾಡಬೇಕು. ಅವರ ಆಲೋಚನೆಗಳ ಬಗ್ಗೆ ಹೇಳಬೇಕೆಂದರೆ ಅವರ ಮನಸ್ಸಿನಲ್ಲಿ ಪ್ರವೇಶಿಸಬೇಕು ಅಷ್ಟೇ. ಅದು ಅಸಾಧ್ಯದ ಮಾತು ಎಂದರು.

ವೈದ್ಯರ ಮಾತು ನನ್ನ ತಲೆಯಲ್ಲಿ ಕೊರೆಯಲು ಪ್ರಾರಂಭಿಸಿತು. ಮನಸ್ಸನ್ನು ಕೇಂದ್ರೀಕರಿಸಿದರೆ ದೇವರನ್ನು ತಲುಪಲು ಸಾಧ್ಯ. ಅಧ್ಯಾತ್ಮಿಕ ಸಾಧಕರು, ಅವಧೂತರು ಬೇರೆಯವರ ಮನಸ್ಸಿನಲ್ಲಿ ಇರುವುದನ್ನು ಹೇಳುತ್ತಾರೆ ಎಂದು ಕೇಳಿದ್ದೇನೆ. ಅದೇ ರೀತಿ ನಾನೂ ಸಹ ಕೆಲವು ಪ್ರಯತ್ನವನ್ನು ಮಾಡಿ ಇಂತಹ ರೋಗಿಗಳ ಮನಸ್ಸಿನಲ್ಲಿ ಪ್ರವೇಶವನ್ನು ಏಕೆ ಮಾಡಬಾರದು ಎಂಬ ಯೋಚನೆ ಕಾಡತೊಡಗಿತು. ಅದು ಸುಲಭದ್ದಲ್ಲ ಎಂದು ಗೊತ್ತಿದ್ದರೂ, ಇದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಲೇಖನಗಳನ್ನು ಓದುತ್ತಾ ಸಂಶೋಧನೆ ಮತ್ತು ಅಭ್ಯಾಸ ಪ್ರಾರಂಭಿಸಿದೆ. ಯಾರ ಮನಸ್ಸು ಶುದ್ಧವಾಗಿದ್ದು ಹೆಚ್ಚಿನ ಮಟ್ಟದ್ದಾದರೆ ಆ ಮಟ್ಟಕ್ಕಿಂತ ಕೆಳಗಿರುವ ಮನಸುಗಳನ್ನು ಓದಬಹುದು, ನಿರ್ದಿಷ್ಟ ಮಟ್ಟದಲ್ಲಿ ಮನಸುಗಳನ್ನು ನಿಯಂತ್ರಿಸಿದಲ್ಲಿ ಯಾವುದೇ ಮನಸ್ಸನ್ನು ಪ್ರವೇಶಿಸಬಹುದು. ಆದರೆ ಇದಕ್ಕೆ ಸಾಕಷ್ಟು ಸಾಧನೆ ಅನಿವಾರ್ಯ. ಅಲ್ಲದೆ ಹಾಗೆ ಪ್ರವೇಶಿಸಿದಾಗ ಈಗಾಗಲೇ ನಾವಿರುವ ದೇಹವು ಕೋಮಾ ಸ್ಥಿತಿಯಲ್ಲಿರುವುದರಿಂದ, ಮನಸ್ಸು ವಾಪಸು ಬಂದು ಸೇರುವವರೆಗೂ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಮತ್ತು ಜವಾಬ್ದಾರಿಯ ಕೆಲಸವಾಗಿರುತ್ತದೆ ಎಂದು ತಿಳಿಯಿತು. ಅಂದಿನಿಂದಲೇ ವಿಶೇಷ ರೀತಿಯಲ್ಲಿ ಮನಸನ್ನು ನಿಯಂತ್ರಣ ಮಾಡಿಕೊಳ್ಳುವುದನ್ನು ಪ್ರಾರಂಭಿಸಿದೆ. ಹಲವು ತಿಂಗಳ ಅವಿರತ ಸಾಧನೆಗಳಿಂದ ನಿಧಾನವಾಗಿ ರಾತ್ರಿಯ ವೇಳೆಯಲ್ಲಿ ಕೆಲವೇ ನಿಮಿಷಗಳ ಕಾಲ ಬೇರೆಯವರ ಮನಸಲ್ಲಿ ಪ್ರವೇಶಿಸುವುದು ಮತ್ತು ಹಿಂದಿರುಗುವುದು ಪ್ರಾರಂಭಿಸಿದೆ. ಪದೇ ಪದೇ ಇದೇ ಅಭ್ಯಾಸವನ್ನು ನಡೆಸುತ್ತಲೇ ಇದ್ದೇನೆ. ಅದರ ಮಿತಿ ಹೆಚ್ಚೆಂದರೆ ಕೇವಲ ಐದು ಘಂಟೆಗಳು. ಆ ಮಿತಿಯಲ್ಲಿ ವಾಪಸ್ ಬಂದು ಸೇರಬೇಕು. ಇನ್ನು ದೂರದ ಮಿತಿ. ನನ್ನ ಗಟ್ಟಿಯಾದ ಧ್ವನಿ ಎಷ್ಟು ದೂರಕ್ಕೆ ಕೇಳಿಸಬಲ್ಲದೋ ಆ ದೂರವನ್ನು ಮೀರದಂತೆ ಇರುವ ಮನಸ್ಸನ್ನು ನಾನು ಪ್ರವೇಶಿಸಬಹುದು. ಪುನರಾವರ್ತಿತ ಪ್ರಯೋಗಗಳಿಂದ ಈಗ ಈ ಕೆಲಸವನ್ನು ಯಶಸ್ವಿಯಾಗಿ ಮಾಡಬಲ್ಲೆ ಎಂಬ ವಿಶ್ವಾಸ ಮೂಡಿದೆ.

ನಾನು ಪ್ರವೇಶಿಸಬೇಕಾದ ಮನಸ್ಸನ್ನು ಹುಡುಕುತ್ತಾ ಮಿತ್ರನ ತಾಯಿಯ ವಾರ್ಡ್ ಬಳಿ ಬಂದೆ. ರೋಗಿಯ ಸ್ಥಾನವನ್ನು ಬದಲಾವಣೆ ಮಾಡಿದ್ದಾರೆ. ನಿಧಾನವಾಗಿ ಅವರ ಕಣ್ಣಿನತ್ತ ಗಮನ ಕೊಡುತ್ತಾ ಮನಸ್ಸನ್ನು ಕೇಂದ್ರೀಕರಿಸಲು ಪ್ರಾರಂಭಿಸಿದೆ. ನಿಧಾನವಾಗಿ, ನಿಧಾನವಾಗಿ ಆ ಮನಸ್ಸನ್ನು ಸೇರುತ್ತಿದ್ದೇನೆ ಆದರೂ ಅದಕ್ಕೆ ಸಮಾನಾಂತರವಾಗಿ ನಾನೂ ಯೋಚಿಸುತ್ತಿದ್ದೇನೆ. ಈ ವೇಳೆಯಲ್ಲೇ ನಮ್ಮ ತಾಯಿಯ ಬಳಿ ಮಲಗಿರುವ ನನ್ನ ದೇಹದ ಬಗ್ಗೆ ಒಮ್ಮೆ ಯೋಚನೆ. ಒಮ್ಮೆ ಅಲ್ಲಿಂದಲೇ ಇದರ ಬಗ್ಗೆ ಗಮನ ಕೊಟ್ಟೆ. ಸದ್ಯಕ್ಕೆ ಅದರ ಬಳಿ ಯಾರು ಬಂದಂತಿಲ್ಲ. ಗೋಡೆ ಕಡೆ ಮುಖ ಮಾಡಿ, ಹೊದಿಕೆ ಹೊದ್ದು ಮಲಗಿರುವ ಆ ದೇಹದ ಬಗ್ಗೆ ಯಾರಿಗೂ ಗಮನವಿಲ್ಲ. ಇರಲಿ, ಒಳ್ಳೆಯದು.

ಈಗ ರೋಗಿಯ ಮನಸ್ಸಿನೊಂದಿಗೆ ಯೋಚಿಸುತ್ತಿದ್ದೇನೆ ಆಕೆ ಯೋಚನೆ ಮಾಡುತ್ತಿರುವುದು ಎಲ್ಲಾ ಗೊತ್ತಾಗುತ್ತಿದೆ. ಎಂತಹಾ ಆಶ್ಚರ್ಯ. ಆಕೆ ತಾನು ಕೊಲ್ಲಾಪುರದಲ್ಲಿ ಇದ್ದೇನೆ. ತನ್ನ ಗಂಡ ಈ ನಗರದಲ್ಲಿ ಕೇಂದ್ರದ ಸೇವೆಯಲ್ಲಿ ಇದ್ದಾಗ ಇದ್ದ ವೈಭವದ ಜೀವನವನ್ನು ಯೋಚಿಸುತ್ತಿದ್ದಾಳೆ. ಅಂದಿನ ಬಂಗಲೆ, ಕೆಲಸಗಾರರು, ತನ್ನ ಗಂಡನೊಂದಿಗೆ ಹೋಗಿದ್ದ ಕೆಲವು ಮದುವೆ ಸಮಾರಂಭಗಳು ವಿಶೇಷ ಸಭೆಗಳನ್ನು ಯೋಚಿಸುತ್ತಿದ್ದಾಳೆ. ತನ್ನಲ್ಲೇ ಮುಗುಳ್ನಗುತ್ತಾ ಸಂತೋಷ ಪಡುತ್ತಿದ್ದಾಳೆ. ಹಾಗೆಯೇ ಯೋಚಿಸುತ್ತಾ ಯೋಚಿಸುತ್ತಾ ತನ್ನ ಗಂಡ ವರ್ಗಾವಣೆಯಾದ ಮತ್ತು ಕೆಲಸ ಮಾಡಿದ ವಿವಿಧ ಸ್ಥಳಗಳು, ಅಲ್ಲಿ ನಡೆದ ಘಟನೆಗಳು, ತನ್ನ ಮಕ್ಕಳೊಂದಿಗೆ ಸಂತೋಷವಾಗಿ ಆಡಿದ ದಿನಗಳು, ಮಿತ್ರರು, ತನ್ನ ಗಂಡನೊಂದಿಗೆ ಪುಟ್ಟದಾಗಿ ನಡೆದ ವಾದಗಳು, ಅದಕ್ಕಾಗಿ ಚಿಕ್ಕದಾದ ಪಶ್ಚಾತಾಪ ಹೀಗೆ ಏನೇನೋ ಯೋಚಿಸುತ್ತಿದ್ದಾಳೆ. ಆಕೆಯ ಮನೋವೇಗಕ್ಕೆ ಹೊಂದಿಕೊಳ್ಳಲು ನನ್ನ ಮನಸ್ಸಿಗೆ ಆಗುತ್ತಿಲ್ಲ. ತನ್ನ ಎರಡು ಹೆಣ್ಣು ಮಕ್ಕಳನ್ನು ವಿದೇಶದಲ್ಲಿರುವ ಉತ್ತಮ ವರನಿಗೆ ಕೊಟ್ಟು ಮದುವೆ ಮಾಡಿದ ಸಂತೋಷ, ಅವರ ಜೀವನ, ಅಳಿಯಂದಿರ ಶ್ರೀಮಂತಿಕೆಯ ಹೆಮ್ಮೆ ಕಾಣುತ್ತಿದೆ. ಈಗ ಮೊಮ್ಮಕ್ಕಳು ಆಗಿರಬಹುದು, ತಾನು ನೋಡಿಲ್ಲ ಎನ್ನುತ್ತಿದ್ದಾಳೆ. ಇದ್ದಕ್ಕಿದ್ದ ಹಾಗೆ ಈ ನಗರದ ತನ್ನ ಮನೆಗೆ ಬಂದಳು. ಮನೆಯ ಎಲ್ಲ ಭಾಗವನ್ನು ನೋಡುತ್ತಿದ್ದಾಳೆ. ಎಷ್ಟು ಗಲೀಜಾಗಿದೆ ತನ್ನ ಮನೆ ಎಂಬ ಸ್ವಗತ. ಇದೇ ಮನೆಯಲ್ಲವೇ, ತನ್ನ ಗಂಡ ಕಟ್ಟಿಸಿದ್ದು ಅದಕ್ಕೋಸ್ಕರ ಆತನೊಂದಿಗೆ ಓಡಾಡಿದ ದಿನಗಳು. ಮನೆಯ ಗ್ರಹಪ್ರವೇಶ ಬಂದವರೊಂದಿಗೆ ಸಡಗರದ ಸನ್ನಿವೇಶಗಳು. ಎಲ್ಲವೂ ಇಂದಿನದೇನೋ ಎಂಬಂತೆ ಓಡಾಡುತ್ತಿದೆ. ಮನೆಯ ವರಾಂಡ, ನಡುಮನೆ, ಎರಡೂ ರೂಮುಗಳು, ಅಡಿಗೆಮನೆ ಮಹಡಿ ಮೆಟ್ಟಿಲುಗಳು ಹೀಗೆ ಎಲ್ಲಾ ಕಡೆಗೂ ತಿರುಗಾಡುತ್ತಾ ಇದನ್ನು ಶುದ್ಧವಾಗಿಟ್ಟುಕೊಳ್ಳಲು ಆಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದಾಳೆ. ಹಾಗೆ ಬೇಸರ ಪಡುತ್ತಾ ಕಣ್ಣೀರು ಹಾಕುತ್ತಾ ತನ್ನ ಗಂಡ ಗತಿಸಿದ ದಿನವನ್ನು ಯೋಚಿಸುತ್ತಾ ನಿಟ್ಟುಸಿರು ಬಿಡುತ್ತಿದ್ದಾಳೆ. ಕಷ್ಟ ಸುಖದ ದಿನಗಳನ್ನು ಮೆಲಕು ಹಾಕುತ್ತಿದ್ದಾಳೆ. ಈಗ ಮಗನ ಸರದಿ. ಪದೇಪದೇ ವರ್ಗಾವಣೆಯಾಗುವ ಕೆಲಸದಿಂದ, ಮಗನಿಗೆ ವಿದ್ಯಾಭ್ಯಾಸದಲ್ಲಿ ತೊಂದರೆಯಾಗಬಾರದು ಎಂದು ಮಗ ಕಿರಣ್ ನನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಿದ್ದು, ನಂತರ ಐಐಟಿ ಚೆನ್ನೈ ಹಾಸ್ಟೆಲ್ನಲ್ಲಿ ವಿದ್ಯಾಭ್ಯಾಸ. ಆತ ಬಲು ಜಾಣ. ಎಲ್ಲಾ ಕಡೆಗೂ ಸ್ವರ್ಣ ಪದಕ ಗಳಿಸಿದ್ದಾನೆ. ನಂತರ ವಿದೇಶದಲ್ಲಿ ವಿದ್ಯಾಭ್ಯಾಸ. ನಂತರ ಅಲ್ಲಿಯೇ ಕೆಲಸ ಈಗ ಯಾವುದೋ ಸಂಸ್ಥೆಯಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ಎಂದೂ ಮನೆಯಲ್ಲಿ ಇಲ್ಲವೇ ಇಲ್ಲ. ಅದರಿಂದಾಗಿ ತಂದೆ-ತಾಯಿಗಳ ಬಗ್ಗೆ ಹೆಚ್ಚಿನ ಪ್ರೀತಿ ಕಾಣದು. ಆದರೆ ತಂದೆ ತಾಯಿಯರ ಬಗ್ಗೆ ಅವನಿಗೆ ವಿಶೇಷ ಗೌರವ ಇದೆ. ಅದರಿಂದಾಗಿಯೇ ಪ್ರತಿವರ್ಷ ಎರಡು ಬಾರಿ, ಜೂನ್, ಡಿಸೆಂಬರ್ ತಿಂಗಳಿನಲ್ಲಿ ಬಂದು ಹೋಗುತ್ತಾನೆ. ಹೆಣ್ಣುಮಕ್ಕಳನ್ನು ಪ್ರೀತಿ ಮಾಡಿದಂತೆ ಈತನನ್ನು ಪ್ರೀತಿ ಮಾಡಿಲ್ಲ ಎಂದೆನಿಸುತ್ತದೆ. ಮೊದಲಿಂದಲೂ ಹೊರಗಡೆಯೇ ಇದ್ದಾನೆ, ಮನೆಯಲ್ಲೇ ಇಟ್ಟು ಕೊಂಡು ಓದಿಸ ಬಹುದಾಗಿತ್ತೇನೋ. ಇದ್ದ ಆಸ್ತಿ ಮನೆಗಳನ್ನು ನೋಡಿಕೊಂಡಿದ್ದರೆ ಸಾಕಾಗಿತ್ತು. ಏನು ಕೆಲಸ ಮಾಡದೆ ಸುಮ್ಮನಿದ್ದರೂ ತಿಂಗಳಿಗೆ ಬರುವ ಮನೆ ಬಾಡಿಗೆ ಹಲವು ಲಕ್ಷಗಳು, ಬ್ಯಾಂಕಿನಲ್ಲಿ ಹಲವು ಕೋಟಿಗಳ ಠೇವಣಿ. ಯಾರಿಗಾಗಿ ಇದು ಎಂಬ ಯೋಚನೆ. ದೇವರು ಎಲ್ಲಾ ಭಾಗ್ಯವನ್ನು ನನಗೆ ಕೊಟ್ಟಿದ್ದಾನೆ. ಆದರೂ ಒಮ್ಮೊಮ್ಮೆ ಅಸುರಕ್ಷತೆಯ ಭಯ.ಓ ದೇವರೇ,  ನನ್ನ ಮಕ್ಕಳು ಮೊಮ್ಮಕ್ಕಳನ್ನು ಕಾಪಾಡು. ಎಲ್ಲರೂ ಸುಖವಾಗಿರಲಿ, ಸದಾ ಸಂತೋಷದಿಂದಿರಲಿ. ಅವರಿಗೆ ಯಾವುದೇ ತೊಂದರೆಬಾರದಿರಲಿ.ನನ್ನ ಮಗನನ್ನು ನೋಡಬೇಕು ಎಂಬ ಆಸೆ. ಈ ಮಗನ ಪ್ರೀತಿ ಇನ್ನೂ ಹೆಚ್ಚು ಬೇಕು. ಏನಾದ್ರೂ ಮಾಡಿ ಮಗನ ಒಲವನ್ನು ಗಳಿಸಬೇಕು. ಅವನ ಬಗ್ಗೆ ಪ್ರೀತಿ ಒಲವು ನನಗಿದೆ, ಎಂದುಕೊಳ್ಳುತ್ತಾ ಹಾಡನ್ನು ಗುನುಗಿ  ಕೊಳ್ಳುತ್ತಿದ್ದಾಳೆ:

ಒಲವೇ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ, ಒಲವೇ ಮರೆಯದ ಮಮಕಾರ

ಎಂಬ ಪುಟ್ಟಣ್ಣ ಕಣಗಾಲ್ ರವರ ಸಾಕ್ಷಾತ್ಕಾರ ಚಿತ್ರದ ಈ ಹಾಡನ್ನು ನಾನು ಕೇಳಿದ್ದೇನೆ, ನೋಡಿದ್ದೇನೆ. ಈ ಸಮಯಕ್ಕೆ ಸರಿಯಾಗಿ ಎಂತಹ ಅರ್ಥಪೂರ್ಣವಾಗಿದೆ. ಸಮಯೋಚಿತವಾಗಿ ಯೋಚಿಸುತ್ತಿದ್ದಾಳೆ. ಹಾಗೆಯೇ ಯೋಚಿಸುತ್ತಾ ತಾನು ಮಲಗಿದ ಹಾಸಿಗೆಗೆ ವಾಪಸ್ ಬಂದಳು, ಏನಾಗಿದೆ ನನಗೆ. ಬೇಲದ ಹಣ್ಣಿನ ತಿರುಳು ತನ್ನ ಗಟ್ಟಿಯಾದ ದೇಹವನ್ನು ಬಿಟ್ಟು ಸ್ವತಂತ್ರ ವಾಗಿರುವಂತೆ ನನಗೆ ಎನಿಸುತ್ತದೆ. ನನ್ನ ದೇಹದ ಯಾವ ಭಾಗವೂ ನನ್ನದು ಎನಿಸುತ್ತಿಲ್ಲ. ಹಸಿವು, ನೀರಡಿಕೆ, ಸ್ನಾನ, ಆಯಾಸ ಯಾವುದೂ ಗೊತ್ತಾಗುತ್ತಿಲ್ಲ. ಸುತ್ತಮುತ್ತಲಿನ ಯಾವ ವಸ್ತುವೂ ಕಾಣುತ್ತಿಲ್ಲ. ಎಲ್ಲೆಲ್ಲೂ ನಿಶಬ್ದವಾಗಿರುವಾಗ ಒಮ್ಮೊಮ್ಮೆ ಯೋಚನೆ. ದೇವರೇ ನೀನು ನನ್ನ ಸ್ಥಿತಿಯನ್ನು ನೋಡಲಾರೆಯಾ? ಎಂದು ಕೊಳ್ಳುತ್ತಿದ್ದೇನೆ. ಮನಸ್ಸಿನ ಪ್ರಾರ್ಥನೆಗೆ ದೇವರು ಓ ಗೊಟ್ಟಂತೆ ಭಾವನೆ. ಚಿಕ್ಕದಾಗಿ ಕಾಣುವ ಬಾಗಿಲು, ಬಾಗಿಲ ಮೇಲೆ ಬರೆದಿರುವ I C U ಎಂಬ ಅಕ್ಷರಗಳು ನನ್ನ ಸ್ಥಿತಿಯನ್ನು ನೋಡುತ್ತಿದ್ದೇನೆ ಎನ್ನಲು I SEE YOU ಎಂದು ದೇವರು ನನಗೆ ಸಂಕ್ಷಿಪ್ತವಾಗಿ ಹೇಳಿರುವ ವಾಕ್ಯಗಳು ಎಂದು ಸಮಾಧಾನವಾಗುತ್ತಿದೆ. ಇನ್ನೊಮ್ಮೆ ಕಿರಣ್ ಕಂಡಾಗ ನಾನು ಎಲ್ಲಿದ್ದೇನೆ? ಇಲ್ಲಿ ಬೇಡ, ನಿನ್ನೊಂದಿಗೆ ನನ್ನನ್ನು ಕರೆದುಕೊಂಡು ಹೋಗು ಎಂದು ಹೇಳುತ್ತೇನೆ ಎಂದಳು. ಆಗಲೇ ನಡು ರಾತ್ರಿಯಾದಂತೆ ನನ್ನ ಮನಸ್ಸಿಗೆ ಭಾಸವಾಗುತ್ತಿತ್ತು. ನಿಧಾನವಾಗಿ ಆ ಮನಸ್ಸನ್ನು ತೊರೆದೆ, ನನ್ನ ಹಾಸಿಗೆಯತ್ತ ನಡೆದೆ. ಆವರೆಗೂ ನಿದ್ದೆಯಲ್ಲಿದ್ದೆನೇನೋ ಎಂಬಂತೆ ಇತ್ತ ಕಡೆ ಹೊರಳಿದೆ.

ಕೆಲವು ತಿಂಗಳ ನಂತರ ಮತ್ತೊಮ್ಮೆ ಭೇಟಿಯಾದ ಮಾತನಾಡುತ್ತಾ ನನ್ನ ಮಿತ್ರ ಹೇಳಿದ. ತಾನು ವಿದೇಶದಲ್ಲಿ ಕೆಲಸದಲ್ಲಿ ಇರುವುದಾಗಿಯೂ ತನ್ನ ತಂಗಿಯರು ಬೇರೆ ದೇಶದಲ್ಲಿ ಅವರ ಕುಟುಂಬದೊಂದಿಗೆ ವಾಸವಾಗಿದ್ದಾರೆ. ತನ್ನ ತಾಯಿ ಹಲವು ವರ್ಷಗಳಿಂದ ಕೋಮಾ ದಲ್ಲಿದ್ದುದರಿಂದ ಅನಿಶ್ಚಿತ ಪರಿಸ್ಥಿತಿಯಲ್ಲಿ ಖಾಯಂ ಆಗಿ ಇಲ್ಲಿ ಇರಲಾರದೆ ಒಬ್ಬ ವಕೀಲರಿಗೆ ತನ್ನ ತಾಯಿಯ ಉಸ್ತುವಾರಿ ನೋಡಿಕೊಳ್ಳಲು ವ್ಯವಸ್ಥೆ ಮಾಡಿದ್ದೆ. ಇತ್ತೀಚೆಗೆ ತಮ್ಮ ತಾಯಿ ತೀರಿಕೊಂಡಾಗ ಆಕೆಯ ದೇಹದ ವಿಲೇವಾರಿಯನ್ನು ಅವರೇ ಮಾಡಿದರು. ನಂತರದ ಆಸ್ತಿ ವರ್ಗಾವಣೆ ಮತ್ತಿತರ ಜವಾಬ್ದಾರಿಯನ್ನು ತನ್ನ ವಕೀಲರು ಮಾಡಿಕೊಟ್ಟರು ಎಂದು ಅವರನ್ನು ಹೊಗಳಿದ. ಉತ್ತರ ಕ್ರಿಯಾದಿ ಕರ್ಮಗಳನ್ನು ವಿದೇಶದಲ್ಲಿ ಮಾಡಿ ಮುಗಿಸಿದ್ದಾಗಿ ತಿಳಿಸಿದ.

ಮೇಲ್ಕಂಡ ಪ್ರಸಂಗವನ್ನು ವಿಶ್ಲೇಷಣೆ ಮಾಡಿದಾಗ, ಉತ್ತಮ ಭವಿಷ್ಯಕ್ಕಾಗಿ ಮಗನು ಓದಿರುವುದು ತಪ್ಪಲ್ಲ. ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತಹ ಕೆಲಸವು ಮತ್ತು ಸಂಬಳವು ಈ ದೇಶದಲ್ಲಿ ಸಿಗಲಾರದು ಎಂಬುವ ಅವನ ದೃಷ್ಟಿ ಸರಿ. ತಂದೆಯ ದೊಡ್ಡ ಹುದ್ದೆ, ಅದರಿಂದ ದುಡಿದ ಹಣ, ಮಾಡಿದ ಆಸ್ತಿಯನ್ನು ಅನುಭವಿಸದ ಮಗ, ಉತ್ತಮ ಮತ್ತು ಸುಗಮ ವಿದ್ಯಾಭ್ಯಾಸಕ್ಕಾಗಿ ಮಗನನ್ನು ದೂರದ ಶಾಲೆಯಲ್ಲಿ ಓದಿಸಿದ ತಾಯಿ. ಆದರೂ ಪ್ರೀತಿಯಿಂದ ಜೊತೆಯಲ್ಲಿಟ್ಟುಕೊಂಡು ಸಾಕಲು ಆಗದ ತಾಯಿಯ ನೋವು, ಈ ಹಂತದಲ್ಲಿ ತಿಳಿದರೂ ಪ್ರಯೋಜನಕ್ಕೆ ಬಾರದ ಸ್ಥಿತಿ. ತಾಯಿಯನ್ನು ನೋಡಿಕೊಳ್ಳಲು ಮಕ್ಕಳಿಗೆ ಹೆಚ್ಚುದಿನ ಇರಲಾಗದ ಅನಿಶ್ಚಿತ ಪರಿಸ್ಥಿತಿ. ಇದರಲ್ಲಿ ಯಾವುದು ತಪ್ಪು ಯಾವುದು ಸರಿ ಹೇಗೆ ಹೇಳುವುದು? 

ಇಂದಿನ ದಿನವೇ ಶುಭದಿನವು, ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ, ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ.

ಎಂಬ ಪುರಂದರ ದಾಸವಾಣಿಯನ್ನು ನೆನಪಿಸಿಕೊಳ್ಳುತ್ತಾ ಅಂದುಕೊಂಡೆ. ಇಂದಿನ ಜೀವನವನ್ನು ಇಂದೇ ಅನುಭವಿಸೋಣ. ನಿನ್ನೆ ಮುಗಿದಿದೆ, ಆ ಬಗ್ಗೆ ಮಾತು ಬೇಡ. ಅದರಿಂದ ಕಲಿಯೋಣ. ಅನಿಶ್ಚಿತ ನಾಳೆಯ ಬಗ್ಗೆ ಆತಂಕ ಬೇಡ. ಗೊತ್ತಿರುವ ಈ ವರ್ತಮಾನದಲ್ಲಿ ಜೀವಿಸೋಣ ಸಂತೋಷವಾಗಿರೋಣ, ಅಲ್ಲವೇ.

Comments

  1. ಕೋಮಾಂತರಂಗ ಚೆನ್ನಾಗಿ ಮೂಡಿಬಂದಿದೆ

    ReplyDelete
  2. ಕೋಮಂತರಂಗದ ಒಳಮನಸ್ಸಿನ ಚಿತ್ರಣ ಈಗ
    ನಡೆಯುತ್ತಿರುವ ವಿದ್ಯಾವಂತ ವಿದೇಶಿ ಮಕ್ಕಳ ಹಾಗೂ
    ದೇಶಿ ತಂದೆ ತಾಯಿಯರ ವಾಸ್ತವ ಬದುಕು. ಮನಸ್ಸಿನ ಲ್ಲಿನ ಗತಿಸಿದ ಜೀವನದ ಸಿಂಹವಲೋಕನ ಚೆನ್ನಾಗಿ ಮೂಡಿಬಂದಿದೆ . ತಂದೆತಾಯಿಯರು ಬದುಕಿದ್ದಾಗಲೂ
    ಒಂಟಿ , ಸಾಯುವಸಮಯದಲ್ಲೂ ಒಂಟಿ ಎನಿಸುವ,
    ಮಕ್ಕಳಿಗೆ,ಹೆತ್ತವರು ಯಾರೋ ಸಂಬಂದವಿಲ್ಲದವರೆನಿಸು
    ವ ಮನಸ್ಥಿತಿಯ ಬದುಕಿನ ಬರಹ ಚೆನ್ನಾಗಿದೆ

    ReplyDelete
  3. ಕೋಮಾಂತರಂಗ ಬದುಕಿನ ಮನಸ್ಥಿತಿಯ ಸುಂದರವಾದ ವಿವರಣೆಯನ್ನು ನೀಡಿದೆ ಹಾಗೂ ವಾಸ್ತವವಾಗಿದೆ.

    ReplyDelete
  4. ಕೋಮಾಂತರಂಗದಲ್ಲಿ ಮೂಡಿಬಂದಿರುವ ಪಾತ್ರಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಇದರಲ್ಲಿ ಬರುವ ಎಲ್ಲ ಪಾತ್ರಗಳು, ಅವರವರ ಜವಾಬ್ದಾರಿಗಳ ನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಕೋಮಾದಲ್ಲಿರುವ ರೋಗಿಯ ಮನಸ್ಸು ಕೂಡ ಪ್ರಸಕ್ತ ನೋವುಗಳನ್ನು ಮರೆತು ಈ ಹಿಂದೆ ಅನುಭವಿಸಿದ ಕಷ್ಟ ಸುಖಗಳನ್ನು ಮೆಲಕು ಹಾಕುತ್ತಾ, ಮಕ್ಕಳು- ಮೊಮ್ಮಕ್ಕಳ ಸುಂದರವಾಗಿರಲೆಂದು ಆಶಿಸುವ ಹಿರಿಯ ಜೀವದ ಕಥೆಯು ಬಹಳ ಸುಂದರವಾಗಿ ಮೂಡಿ ಬಂದಿದೆ. ಧನ್ಯವಾದಗಳು.

    ReplyDelete
  5. ಸಾಮಾನ್ಯವಾಗಿ ಮನುಷ್ಯ ಕೋಮಾ ಸ್ಥಿತಿಯಲ್ಲಿ ಇರುವಾಗ ಏನೂ ತಿಳಿಯುವುದಿಲ್ಲ ಎಂದು ಹೇಳುತ್ತೇವೆ. ಆದರೆ ಮನಸ್ಸಿಗೆ ಕೋಮ ಬರದ ಕಾರಣ ಸುಪ್ತ ಮನಸ್ಸು ಹಿಂದಿನ ಹಾಗೂ ಮುಂದಿನ ವಿಷಯಗಳ ಬಗ್ಗೆ ಆಲೋಚಿಸುತ್ತಾ ಇರುತ್ತದೆ ಎಂಬುದನ್ನು, ಮನಸ್ಸಿನ ಸ್ಥಿತಿ-ಗತಿಯನ್ನು ಬಹಳ ಚೆನ್ನಾಗಿ ನಿರೂಪಿಸಲಾಗಿದೆ. ಇದರಲ್ಲಿ ಪೋಷಕರ ಹಾಗೂ ಮಕ್ಕಳ ತಪ್ಪೇನೂ ಇಲ್ಲ.ಆದರೆ ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ನಡೆದರೆ ಜೀವನ ಚೆನ್ನಾಗಿರುತ್ತದೆ. ಮನೋಹರ ರಾವ್

    ReplyDelete
  6. ವಿಚಲಿತ ದೇಹದ ಮನದಾಳದ ಸುಪ್ತ ಭಾವನೆಗಳ ಮಹಾಪೂರದ ವಿವರಣೆ ಅದ್ಭುತವಾಗಿದೆ.ಹಾಗೆಯೇ ಓದುತ್ತಾ ಹೋದಂತೆ, ಲೇಖನದ ಓಟ, ಓದುಗರಿಗೆ ತಾವೇ a ಸ್ಥಿತಿಯನ್ನು ಅನುಭವಿಸುತ್ತಾ ಇರುವಂತೆ ಭಾಸವಾಗುವಂತಿದೆ.
    ಒಂದೆಡೆ, ವಿಜ್ಞಾನದ ಹಿನ್ನಡೆ ಎಲ್ಲಿ ಎಂಬ ಅರಿವು (ICU Isee you, ಬೇಳದ ಹಣ್ಣಿನ ತಿರುಳಿಗೆ ಹೋಲಿಕೆ, ಆಧ್ಯಾತ್ಮ ಭಾವ), ಮತ್ತೊಂದೆಡೆ,
    ಈ ಪೀಳಿಗೆಗೆ ಮಮತೆ, ಬಾಂಧವ್ಯಗಳ ಕೊರತೆ, ಅದನ್ನು ಹೆಚ್ಚು ಸವಿಯದ ಮಕ್ಕಳ ವ್ಯಾವಹಾರಿಕ ಮನ, ತಾಯಂದಿರು ತ್ಯಾಗದಿಂದ ಬೆಳೆಸುವ ತಪ್ಪು ಒಪ್ಪುಗಳ ವಿಮರ್ಶೆ ಮಾಡುವಂತಿದೆ. ತಂದೆತಾಯಿಯರ ಜವಾಬ್ದಾರಿ, ಜೀವನದ ಮೌಲ್ಯಗಳು, ಅದರ ಅರಿವು ಮೂಡಿಸಬೇಕಾದ ಮಾನವತೆಯ ಕರ್ತವ್ಯ, ಹೀಗೆ ಒಂದೊಂದನ್ನೇ ಬಿಚ್ಚಿದುವಂತಿದೆ.
    ಅದರೊಂದಿಗೆ ತಾಯಿ ಎಂದು ಒಳ್ಳೆಯದನ್ನೇ ಹಾರೈಸು ವವಳು ಎಂಬುದನ್ನು ನವಿರಾಗಿ ಸ್ಪಷ್ಟವಾಗಿದೆ.
    ಹೀಗೆಯೇ, ಒಂದು ತಂದೆಯ ಕೋಮಾಂತರಂಗವನ್ನು ಲೇಖಕರ ಲೇಖನಿಯಲ್ಲಿ ಮೂಡಿಬಂದ ರೆ!

    ReplyDelete
  7. ಕೋಮಾಂತರಂಗ ಲೇಖನ ತುಂಬಾ ಚೆನ್ನಾಗಿ ದೆ.ಓದುಗರ ಮೈ ನವಿರೇಳಿಸುತ್ತದೆ..👌👏👏

    ReplyDelete
  8. ಪ್ರಿಯ ರಾಮಚಂದ್ರ,
    ನಾನು ನಂಬಿರುವಂತೆ, ಕೋಮಾವಸ್ಥೆಯಲ್ಲಿ ಇರುವವರ ಮಿದುಳು ಸಕ್ರಿಯವಾಗಿ ಇರುವುದಿಲ್ಲ, ನಿದ್ರಾವಸ್ಥೆಯಲ್ಲಿರುತ್ತದೆ. ಇರಲಿ, ಇದು ಕಥೆಯ ಓಟಕ್ಕೆ ಅಡ್ಡಿಯಾಗಲಾರದು. ಅಷ್ಟೇ ಅಲ್ಲ, ಕಥಾ ನಿರೂಪಣೆಗೆ ಒಳ್ಳೆಯ ತಂತ್ರವಾಗಿದೆ.

    ಕೊನೆಯಲ್ಲಿ,
    ಭೂತ, ಭವಿಷ್ಯಗಳ ಬಗ್ಗೆ ಯೋಚಿಸುವ ಬದಲು ವರ್ತಮಾನದಲ್ಲಿ ಜೀವಿಸೋಣ ಎಂಬ ವಿಚಾರ ಈ ಪುಟ್ಟ ಕಥೆಗೆ ಹೇಗೆ ಹೊಂದಿಕೊಳ್ಳುತ್ತದೆ ತಿಳಿಯಲಿಲ್ಲ.

    ReplyDelete
    Replies
    1. ಕೋಮಾದಲ್ಲಿರುವವರ ಸ್ಥಿತಿಯನ್ನು ಅವಲೋಕಿಸಿ ಕಡೆಯ ಪ್ಯಾರಾದಲ್ಲಿ ಲೇಖಕನು ಮಕ್ಕಳ ವಿದ್ಯಾಭ್ಯಾಸ ಕೆಲಸಗಳ ವಿಶ್ಲೇಷಣೆ ಮಾಡುತ್ತಾ ಅದರಿಂದ  ಮುಂದೆ ತೊಂದರೆ ಯಾಗುತ್ತದೆ ಎಂದು ಯೋಚಿಸಿದರೆ ಮಕ್ಕಳ ಉನ್ನತಿಗೆ ತೊಂದರೆ ಯಾಗುತ್ತದೆ.ಅದರ ಬದಲು ಆಯಾ ದಿನಗಳಲ್ಲಿ ಸರಿ ಎಂಬುದನ್ನು ಮಾಡೋಣ ಎಂದು ಓದುಗರಲ್ಲಿ ಹೇಳಿಕೊಳ್ಳುತ್ತಿದ್ದಾನೆ.

      Delete
  9. ತುಂಬಾ ಅರ್ಥಗರ್ಭಿತವಾಗಿದೆ. ಅಂತರಂಗವನ್ನು ನಾನಾ ರೀತಿ ಕಲಕುವ ಅದ್ಭುತ ಲೇಖನ 🙏

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...