ಯಮಲೋಕದಲ್ಲಿ ಒಂದು ಸಡಗರದ ಸುಧ್ಧಿಫಲಕ: ನಾಳೆಯಿಂದ ಎಂದರೆ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆ ಯವರೆಗೂ ಹದಿನೈದು ದಿನಗಳು ಈ ಲೋಕದಲ್ಲಿರುವ ಎಲ್ಲ ಪಿತೃಗಳಿಗೂ ಇಲ್ಲಿಯ ಕರ್ಮ ರೂಪದ ಶಿಕ್ಷೆಯಿಂದ ರಜೆ ಇರುತ್ತದೆ ಎಂದು ತಿಳಿಸಲಾಗಿದೆ. ಈ ಹದಿನೈದು ದಿನಗಳ ಅವಧಿಯಲ್ಲಿ ಭೂಲೋಕದಲ್ಲಿ ನಿಮ್ಮ ಮಕ್ಕಳು ಬಂಧುಗಳು ನಿಮಗೆ ಮಧುರೂಪದ ಆಹಾರವನ್ನು ನೀಡುತ್ತಾರೆ. ಈ ಆಹಾರವನ್ನು ಸವಿದು ಸಂತೋಷವಾಗಿ ವಾಪಸಾಗಿರಿ ಎಂದು ಸ್ವತಹ ಶ್ರೀ ಯಮಧರ್ಮರಾಯರೇ ಅನುಗ್ರಹಿಸಿ ಸೂಚನೆಗೆ ಸಹಿ ಹಾಕಿದ್ದಾರೆ ಎಂದು ಚಿತ್ರಗುಪ್ತರೂ ಹೇಳುತ್ತಿದ್ದಾರೆ. ಅವರು ಸಹ ಈ ವೇಳೆಯಲ್ಲಿ ರಜೆ ಪಡೆದು ತಮ್ಮ ಬಂಧುಗಳ ಮನೆಗಳಿಗೆ ತೆರಳಲಿದ್ದಾರೆ. ಯಮಲೋಕದ ಪಿತೃಸೇವಾ ವಿಭಾಗವೇ ಖಾಲಿ ಖಾಲಿ.
ಭೂಲೋಕದಿಂದ ಬಂದ ನಾವುಗಳು ಯಾವುದೋ ಕಾರಣದಿಂದ ಈ ಯಮಪುರಿಯ ದಕ್ಷಿಣ ಬಡಾವಣೆಯಾದ ಈ ವೈವಸ್ವತಪುರದಲ್ಲಿ ಬಂದು ಸೇರಿಕೊಂಡಿದ್ದೇವೆ. ಬೇರೆ ಬೇರೆ ಅವಧಿಗಳಲ್ಲಿ ನಾವು ಇಲ್ಲಿಗೆ ಬಂದಿದ್ದರೂ ನಮ್ಮ ಹಲವು ಹಿರಿಯರು ಮತ್ತು ತೀರಾ ಕಿರಿಯರು ಕಾಣಸಿಗುತ್ತಿದ್ದಾರೆ. ಒಂದೇ ತರಹದ ಕೆಲಸವನ್ನು ಮಾಡುವ ಎಲ್ಲಾ ತಲೆಮಾರಿನ ಹಲವು ತಲೆಗಳ ಪರಿಚಯವಾಗುತ್ತದೆ. ನಾವು ಭೂಲೋಕದಲ್ಲಿ ಹಿಂದೆ ಮಾಡಿ ಮರೆತಿರುವ ಹಲವು ಕೆಲಸಗಳನ್ನು ಇಲ್ಲಿ ಅಧಿಕಾರಿಗಳು ತಪ್ಪು ಎಂದು ವಿಂಗಡಿಸಿ ಅದಕ್ಕೆ ಇವರೇ ನಿರ್ಧರಿಸಿರುವ ಶಿಕ್ಷೆಯನ್ನು ಕೊಡುತ್ತಿದ್ದಾರೆ. ಅದನ್ನು ಇವರು ಕರ್ಮ ಎಂದರೂ ಅದು ನಮಗೆ ಶಿಕ್ಷೆ ಅಥವಾ ಕೆಲಸ ವಾಗುತ್ತಿದೆ. ಇದಲ್ಲದೆ ನಮ್ಮ ಖಾತೆಯಲ್ಲಿ ಕೆಲವು ಒಳ್ಳೆಯ ಕೆಲಸಗಳೂ ಇವೆಯಂತೆ. ಅವುಗಳಿಗೆ ತಕ್ಕ ಗೌರವ ಸನ್ಮಾನಗಳು ಮುಂದೆ ದೊರಕಲಿದೆ, ಆದರೆ ಅವು ಯಾವ ರೀತಿಯಲ್ಲಿ ಇರುತ್ತವೆ ಎಂಬುದು ತಮಗೂ ಗೊತ್ತಿಲ್ಲ ಎಂದು ಈ ವಿಭಾಗಕ್ಕೆ ಸಂಬಂಧಿಸಿದ ಚಿತ್ರಗುಪ್ತರು ಅವರಿವರೊಂದಿಗೆ ಚರ್ಚಿಸಿದ್ದನ್ನು ಕೇಳಿದ್ದೇವೆ. ಸದ್ಯಕ್ಕೆ ಕೊಟ್ಟಿರುವ ಕೆಲಸಗಳೇ ಬೇಕಾದಷ್ಟಿದೆ. ಯಾವಾಗ ಮುಗಿಯುತ್ತದೆ ಎಂಬುದು ಗೊತ್ತಿಲ್ಲ. ಪ್ರತಿದಿನವೂ ಹೊಸ ಕೆಲಸಗಳು. ಹಲವು ತೀರಾ ಕಷ್ಟಕರ. ಕೆಲವನ್ನು ನರಳುತ್ತಲಾದರೂ ಮಾಡಲೇಬೇಕು. ಮಧ್ಯ ಮಧ್ಯೆ ವಿಚಾರಣೆಗಳು. ಕೆಲವು ನಮಗೆ ಕಣ್ಣೀರು ಹಾಕಲೆಂದೇ ಕೊಟ್ಟ ಕೆಲಸಗಳು. ಒಮ್ಮೊಮ್ಮೆ ಅಸಹ್ಯಕರ ಕೊಳಕು ದಾರಿ. ದಾಟಿ ಹೋಗುವುದೇ ಒಂದು ಶಿಕ್ಷೆ. ಒಮ್ಮೊಮ್ಮೆ ಪ್ರೀತಿಯಿಂದ ನಡೆಸಿಕೊಳ್ಳುವ ಯಮಕಿಂಕರರು, ಇದ್ದಕ್ಕಿದ್ದ ಹಾಗೆ ಅತಿ ಕೆಟ್ಟದಾಗಿ ನಡೆದುಕೊಳ್ಳುವರು. ಕೆಲವೊಮ್ಮೆ ದನವನ್ನು ಬಡಿದ ಹಾಗೆ ಬಡಿಯುತ್ತಾರೆ. ಮುಂದೇನು ಎಂಬುದೇ ಗೊತ್ತಿಲ್ಲದ ಈ ಸ್ಥಿತಿಯಲ್ಲಿ ಕೆಲವು ದಿನಗಳ ಕಾಲವಾದರೂ ಸ್ವತಂತ್ರವಾಗಿ ಭೂಲೋಕದಲ್ಲಿ ಕಳೆಯಲು ಮಾಡಿರುವ ಅವಕಾಶದ ಈ ವಿಶೇಷ ಸೂಚನೆಯನ್ನು ಕೇಳಿ ತುಂಬಾ ಸಂತೋಷವಾಗಿದೆ. ಕೇಳಿದವರೆಲ್ಲಾ ಹಿರಿ ಹಿರಿ ಹಿಗ್ಗುತ್ತಾ ಮುಗುಳ್ನಗುತ್ತಿದ್ದಾರೆ. ಎಲ್ಲೆಲ್ಲೂ ಸಂತೋಷದ ಉದ್ಗಾರ, ಹರ್ಷದ ಕಲರವ ಕೇಳಿಬರುತ್ತಿದೆ.
ಈವರೆಗೂ ಪ್ರತಿ ಕೆಲಸವನ್ನು ಕೊಡುವ ಮುನ್ನ ನಮ್ಮ ಹಿಂದಿನ ವಿವಿಧ ಅವತಾರಗಳಲ್ಲಿ ಮಾಡಿದ ತಪ್ಪು ಸರಿಗಳನ್ನು ಆಯ್ಕೆ ಮಾಡಿ ಪದೇಪದೇ ವಿವರಿಸಿದ್ದನ್ನು ಕೇಳಿ ಕೇಳಿ ಈಗ ನಮ್ಮ ಮೂಲ ಯಾವುದು ಎಂಬ ಅರಿವೇ ಗೊತ್ತಾಗುತ್ತಿಲ್ಲ ಎಂಬಂತಾಗಿದೆ. ಇದರಿಂದಾಗಿ ಎಲ್ಲರಿಗೂ ಒಂದೇ ಅನುಮಾನ ಈಗ ತಾವು ಹೋಗಬೇಕಾದ ಸ್ಥಳ ಎಲ್ಲಿಗೆ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತಿದೆ. ಈ ಬಗ್ಗೆ ಸಹಾಯಕ್ಕಾಗಿ ನಮಗೆ ಸಂಬಂಧಪಟ್ಟ ಚಿತ್ರಗುಪ್ತನ ಕೇಳೋಣ ಎಂದುಕೊಂಡರೆ ಆತ ಕಾಣಲೊಲ್ಲ. ಅಗೋ ಅವರೇ ಅಲ್ಲವೇ ಎಂದು ಆತುರಾತುರವಾಗಿ ತನ್ನೂರಿಗೆ ಹೊರಡುತ್ತಿದ್ದ ಚಿತ್ರಗುಪ್ತನನ್ನು ತಡೆದು ಕೇಳಿದಾಗ ಅವರಿಗೆ ತೊಂದರೆಯಾದುದರಿಂದ ಅಸಹನೆಯಿಂದಲೇ ಅವರ ಉತ್ತರ. ಎಲ್ಲಿಗೆ ಬೇಕಾದರೂ ಹೋಗಬಹುದು ಅಥವಾ ನಿಮ್ಮನ್ನು ಯಾರೋ ಕರೆದರು ಎಂದು ಕೇಳಿಸಿದ ಸ್ಥಳಕ್ಕೆ ಹೋಗಬಹುದು ಅಥವಾ ನೀವು ಇತ್ತೀಚೆಗೆ ಎಲ್ಲಿಂದ ಹೊರಟು ಬಂದಿರೋ ಆ ಜಾಗಕ್ಕೆ ಹೋಗಬಹುದು. ಆದರೆ ಒಂದು ನೆನಪಿಡಿ, ನೀವು ಎಲ್ಲೇ ಇರಿ, ಅಮಾವಾಸ್ಯೆಯ ಮರುದಿನ ಮಾತ್ರ ತಾವು ಇಲ್ಲಿ ಇದ್ದೇ ಇರುವಿರಿ ಎಂದು ಹೇಳಿದ್ದು ಕಟ್ಟಾಜ್ಞೆಯಂತೆ ಕೇಳಿಸಿತು. ನಮ್ಮ ಅನುಮಾನವೂ ತಕ್ಕಮಟ್ಟಿಗೆ ಪರಿಹಾರವಾಯಿತು.
ರಾಮಯ್ಯ ಎಂದು ಗುರುತಿಸುವ ನನ್ನ ಜೊತೆ ಭೂಲೋಕದ ನಮ್ಮೂರಿನ ಸುತ್ತ ಇರುವ ಸ್ಥಳಗಳ ನಮ್ಮ ಗುಂಪು ವಾಯು ಮಾರ್ಗದಲ್ಲಿ ತೇಲುತ್ತಾ ಇಳಿಯುತ್ತಾ ಹೊರಟಿದೆ. ದಾರಿಯಲ್ಲಿ ಮೊದಲು ಸಿಗುವ ಊರಿನವರನ್ನು ಅಲ್ಲಿ ಬಿಡುವುದು, ಮುಂದಿನ ಊರಿನಲ್ಲಿ ಆ ಊರಿನವರು, ಹೀಗೆ ಸಂಬಂಧವಿರುವವರನ್ನು ಅಲ್ಲಲ್ಲಿ ಬಿಟ್ಟು ಮುಂದುವರಿಯುವುದು ಈ ರೀತಿ ಕೊನೆಯಲ್ಲಿರುವ ತಮ್ಮ ಊರನ್ನು ಸೇರುವುದು, ಅದೇ ರೀತಿ ಕೆಲಸವಾದ ರಾತ್ರಿ ಅಂದರೆ ಮಹಾಲಯ ಅಮಾವಾಸ್ಯೆಯ ರಾತ್ರಿಯಂದು ವಾಪಸ್ಸು ಬರುವಾಗ ಇದೇ ಮಾರ್ಗವಾಗಿ ಎಲ್ಲರನ್ನೂ ಕಲೆಹಾಕಿಕೊಂಡು ಬಂದು ಪಿತೃಲೋಕವನ್ನು ಸೇರುವುದು ಎಂದು ನಾವು ಕೆಲವು ಪಿತೃಗಳು ತೀರ್ಮಾನಿಸಿದೆವು.
ಒಮ್ಮೆ ಭೂ ಲೋಕದತ್ತ ನೋಡಿದೆವು. ಆಹಾ ಎಂತಾ ವಿಚಿತ್ರ. ಕಣ್ಣು ತಣಿಸುವ ಸುಂದರ ನೋಟ. ದೂರದಿಂದ ಕಾಣುವುದು ಯಾವಾಗಲೂ ಚೆಂದ ಇದು ಭಾವಿಸಿದರೂ ಆ ವಿಹಂಗಮ ನೋಟವನ್ನು ವರ್ಣಿಸಲಾಗದು. ತಕ್ಷಣಕ್ಕೆ ನಮಗೆ ಜ್ಞಾಪಕಕ್ಕೆ ಬಂದ ಶ್ರೀ ನಾರದರು ಯೋಚಿಸಿ ಚಿ. ಉದಯಶಂಕರ ರವರಿಂದ ಬರೆಸಿ ಜೇಸುದಾಸ್ ರವರಿಂದ ಹಾಡಲ್ಪಟ್ಟ ಸುಮಧುರ ಗೀತೆ:
ಎಂಥಾ ಲೋಕವಯ್ಯಾ, ಇದು ಎಂಥಾ ಲೋಕವಯ್ಯಾ
ಹೊಸತನವ ಕೊಡುವ ಹೊಸ ವಿಷಯ ಅರಿವ, ಬಯಕೆತರುವ
ಇದು ಎಂಥಾ ಲೋಕವಯ್ಯ, ಇದು ಎಂಥಾ ಲೋಕವಯ್ಯ
ಕಡಲಲ್ಲಿ ಧುಮುಕಿ ಹೋರಾಡುವಾ, ಮುಗಿಲೇರಿ ಮೇಲೆ ತೇಲಾಡುವಾ
ಆ ಚಂದ್ರನೆಡೆಗೆ ಹಾರಾಡುವಾ, ಗ್ರಹತಾರೆಗಳಿಗೆ ಕೈ ಚಾಚುವಾ
ಜನರಿಂದ ತುಂಬಿ ಮೆರೆವಾ, ಇದು ಎಂಥಾ ಲೋಕವಯ್ಯ
ನೆನಪಾಯಿತು. ಭೂಮಿಯತ್ತ ನೋಡಿ ಗುನುಗುನಗಿಸುತ್ತಲೇ ಸಂತೋಷಗೊಂಡೆವು. ಆದ್ದರಿಂದಲೇ ಕಾಲಾಂತರಗಳಿಂದ ಶಾಪಗಳು ಸಿಕ್ಕಾಗಲೆಲ್ಲ ಯಕ್ಷ ಕಿನ್ನರ ಗಂಧರ್ವ ಕಿಂಪುರುಷ ರಾದಿಯಾಗಿ ಭೂಮಿಯಲ್ಲಿ ಜನ್ಮತಾಳಲು ಅಪೇಕ್ಷಿಸಿದ್ದಾರೆ. ದೂರದಿಂದ ಇಡೀ ಭೂಮಂಡಲವೇ ಚೆಂಡಿನಂತೆ ಕಂಡರೂ ಹತ್ತಿರ ಹೋಗುತ್ತಿದ್ದಂತೆ ನಾವು ತಲುಪುವ ಸ್ಥಾನಗಳು ಗೋಚರಿಸುತ್ತಿವೆ. ನೋಡುತ್ತಿದ್ದರೆ ಭೂಮಿಯ ವಿಚಿತ್ರ ಸಂಬಂಧಗಳು ಒಬ್ಬೊಬ್ಬರಿಗೂ ನೆನಪಿಗೆ ಬರುತ್ತಿವೆ. ಹಲವಾರು ಜೀವಗಳು. ಕೆಲವರು ನನ್ನಪ್ಪನಂತೆ ನನ್ನೆಲ್ಲಾ ಬೇಡಿಕೆಗಳ ಪೂರೈಕೆದಾರನಂತೆ. ನನ್ನ ಅಂತರಂಗದ ಗೆಳೆಯ, ಸಲಹೆಗಾರ, ಸದಾ ಸರ್ವದಾ ನನ್ನ ಬೆನ್ನಿಗಿದ್ದೇ ಕಾಪಾಡುವ ಎದುರುತ್ತರ ಹೇಳದ ಸಂಗಾತಿ, ಮಾತು ಮಾತಿಗೆ ಗದರದ ಅಪ್ಪ, ಹಾಗಲ್ಲ ಹೀಗೆ ಎಂದು ಹೇಳುವ ಅಮ್ಮ, ಅಕ್ಷರ ಹೇಳಿಕೊಟ್ಟು ಬದುಕಲು ದಾರಿ ತೋರಿದ ಶಿಕ್ಷಕ, ಕ್ರಿಯಾಶೀಲ ಕಾರ್ಮಿಕರು, ದೇಶಕಾಯುವ ಸೈನಿಕರು, ಹೊತ್ತು ಹೊತ್ತಿಗೆ ಅನ್ನ ಸಿಗುವಂತೆ ಮಾಡಿದ ರೈತರು, ಪುರಾಣ ಪುಣ್ಯ ಕಥೆ ಹೇಳಿ ಕಲ್ಪನೆಯ ಬೀಜ ಬಿತ್ತಿದ ಅಜ್ಜ, ಅಜ್ಜಿಯರು, ಮನವ ರಂಜಿಸುವ ಕಲಾವಿದ, ಕಾಲೆಳೆಯದ ಜೊತೆಗಾರ ಮಿತ್ರ, ಜೊತೆಗೆ ಗಾಳಿ, ಬೆಳಕು, ನೀರು, ಗಿಡ, ಮರ, ಪಶು, ಪಕ್ಷಿ, ಬೆಟ್ಟ, ಗುಡ್ಡ, ನದಿ, ಸಮುದ್ರ, ಆಕಾಶ... ವ್ಹಾ ವ್ಹಾ ವ್ಹಾ ಎಷ್ಟು ಮೋಹಕ ಈ ಭೂಮಿ, ನಂಬಲಾಗದ ನೋಟದಲ್ಲಿ ಸೂರ್ಯ, ಚಂದ್ರ, ನಕ್ಷತ್ರರು. ಇಲ್ಲಿಗೆ ಬರಲು ಕಾರಣವಾಗುವುದಾದರೆ ಪಾಪ ಮಾಡಿದರೂ ಸರಿ, ಬರಬೇಕು ಎನಿಸಿದರೂ ಈವರೆಗಿನ ಜನ್ಮದಲ್ಲಿ ಇಲ್ಲೇ ಇದ್ದೆವು, ಏನು ಮಾಡಿದೆವು ಎಂಬ ಪ್ರಶ್ನೆ ನಮ್ಮಲ್ಲಿ. ಅವಕಾಶವಿದ್ದಾಗ ಪುಣ್ಯ ಕೆಲಸಗಳನ್ನು ಮಾಡಿ ಸಂತೋಷ ವಾಗಿ ಈ ಭೂಮಿಯಲ್ಲೇ ಇದ್ದು ಎಲ್ಲವನ್ನೂ ಪ್ರೀತಿಸಿ ಅನುಭವಿಸಬಹುದಾಗಿತ್ತು.ಅಸಹಾಯಕತೆಯ ನಿಟ್ಟುಸಿರು ಬಿಡುತ್ತಾ ಇರುವ ಕರ್ತವ್ಯದತ್ತ ಮನಸ್ಸು.
ಮೊದಲ ಬಂದದ್ದು ಕಗ್ಗಳ್ಳಿ. ಊರು ಸೇರುವ ಮುನ್ನವೇ ಕೇಳುತ್ತಿದೆ ಈ ಚೆಲುವಣ್ಣನ ಹೆಸರು. ಹೋಗಿ ಬರುತ್ತೇನೆ ಎಂದು ಹೇಳದೆ ಹೊರಟೇಬಿಟ್ಟ. ಮಕ್ಕಳು ಕರೆದ ಧ್ವನಿ, ಕೂಡಲೇ ಹೋಗಬೇಕಾದ ಪರಿಸ್ಥಿತಿ, ತನಗೆ ನೀಡುವ ಅಪರೂಪದ ಆಹಾರವನ್ನು ತಕ್ಷಣವೇ ಪಡೆಯಬೇಕಾದ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡೆವು. ಅವನ ಹೆಸರಿನ ಜೊತೆ ಇನ್ನೂ ಹಲವಾರು ನಮಗೆ ಗೊತ್ತಿರುವವರ ಹೆಸರು ಕೇಳಿಬರುತ್ತಿದೆ. ಬಹುಶಃ ಈಗಾಗಲೇ ಅವರು ಬೇರೆ ವಿಭಾಗದಿಂದ ನೇರವಾಗಿ ಬಂದು ಸೇರಿರಬಹುದು.
ಮುಂದಿನ ಸ್ಥಳ ನಾಗಪ್ಪನದು. ಎಷ್ಟು ತಿರುಗಾಡಿದರೂ ಅವನ ಮನೆಯ ಕಾಣಲೊಲ್ಲದು. ಈ ರಸ್ತೆಯಲ್ಲಿ ಎಂದು ಹೇಳುತ್ತಲೇ ಇದ್ದಾನೆ. ಸಿಗಲೊಲ್ಲದು. ಆ ರಸ್ತೆಯನ್ನು ಅಗಲ ಮಾಡಲು ಎರಡೂ ಪಕ್ಕದ ಮನೆಗಳನ್ನು ಒಡೆದು ತೆಗೆದು ಬಿಟ್ಟಿದ್ದಾರೆ. ಒಂದು ದೊಡ್ಡದಾದ ಮರ ಇತ್ತು ಎನ್ನುತ್ತಾನೆ, ಅದನ್ನು ಕಡಿದು ಹಾಕಿದ್ದಾರೆ. ಅವನು ಗುರುತಿಗೆ ಹೇಳುವಂತಹ ಮರ, ಮನೆಗಳು, ಬಾವಿ, ಸೇತುವೆ, ಏನೂ ಕಾಣುತ್ತಿಲ್ಲ. ಇಡೀ ಊರೇ ಬದಲಾವಣೆಯಾಗಿದೆ. ಅವನನ್ನು ಮುಂದೆ ಕರೆದುಕೊಂಡು ಹೋಗಬೇಕೋ ಅಥವಾ ಇಲ್ಲೇ ಬಿಡಬೇಕೋ ಎಂದು ಗೊತ್ತಾಗುತ್ತಿಲ್ಲ. ತನ್ನದು ಯಾವ ಊರು, ತನ್ನ ಮಕ್ಕಳು ಎಲ್ಲಿದ್ದಾರೆ ಎಂಬುದು ಗೋಚರವಾಗುತ್ತಿಲ್ಲ ಎನ್ನುವಾಗಲೇ ಬೆಳಗಿನ ಹಾಲು ತರಲು ಹೋಗುವ ಕೆಲವರ ಪರಿಚಯದ ಮುಖಗಳನ್ನು ಕಂಡು ಹಿಡಿದ. ನೀವು ಹೋಗಿ ನನಗೆ ಮನೆ ಗೊತ್ತಾಯಿತು ಎನ್ನುತ್ತಾನೆ. ಮುಂದೆ ಹೋಗಲು ಅನುಕೂಲವಾದ್ದರಿಂದ ನಮಗೂ ನೆಮ್ಮದಿಯಾಗಿತ್ತು. ಇದನ್ನು ನೋಡಿದೆ ಮೇಲೆ ನಮ್ಮ ಮನೆ ಹತ್ತಿರ ಏನೇನು ಬದಲಾವಣೆಯಾಗಿವೆಯೋ ಎಂಬ ಹೊಸ ಆತಂಕ ಆರಂಭವಾಯಿತು.
ಬೋಪಣ್ಣ ತಲುಪಲು ರೆಡಿಯಾಗುತ್ತಿದ್ದಾನೆ. ಬೆಟ್ಟಗುಡ್ಡಗಳ ಸಾಲು. ಎಲ್ಲೆಲ್ಲೂ ಕಾಣುವ ಒಂದೊಂದೇ ಮನೆ. ಆಕಾಶ ತಲುಪುವಷ್ಟು ಹೊಗೆ ಕೆಲವು ಕಡೆ. ರಭಸವಾಗಿ ಬೀಳುವ ಮಳೆಯೂ ಕಾಣುತ್ತಿದೆ. ಈಗಾಗಲೇ ಬೋಪಣ್ಣ ಹೇಳುತ್ತಿದ್ದ ಅವನ ಇಷ್ಟದ ವಸ್ತುಗಳೆಲ್ಲವೂ ಹೊರಗಿಟ್ಟಿದ್ದಾರೆ. ಅವನ ಇಷ್ಟದ ಸಿಗರೇಟು, ಸಿಗರೇಟ್ ಲೈಟರ್, ನೆಚ್ಚಿನ ವೈನ್, ಬ್ರಾಂಡಿ ಮತ್ತು ಸಣ್ಣ ಪ್ರಮಾಣದಲ್ಲಿ ಸಿಹಿ ಪದಾರ್ಥ ಕಾಣುತ್ತಿದೆ. ಮನೆ ತುಂಬಾ ಜನವಿರುವ ಕುಟುಂಬ ಇರಬಹುದು. ಕುತೂಹಲ ಸಡಗರದಿಂದ ಅವನು ಅತ್ತ ನೋಡುವಾಗಲೇ, ನಡೆಯಲಿ ನೆಚ್ಚಿನ ಭೋಜನ ಎಂದು ಅವನನ್ನು ಬೀಳ್ಕೊಟ್ಟೆವು.
ಅಮಾವಾಸ್ಯೆ, ಸಂಕ್ರಮಣ, ಗ್ರಹಣ, ಉತ್ತರಾಯಣ, ದಕ್ಷಿಣಾಯನದ ಕೆಲವು ಸಮಯಗಳು ಅಷ್ಟೇ ಅಲ್ಲದೆ ಪಿತೃಗಳು ಯಮಲೋಕಕ್ಕೆ ಬಂದ ದಿನದಂದು ಚಿತ್ರಗುಪ್ತರು ಆ ಪಿತೃಗಳನ್ನು ಕರೆದು ತಾವು ಭೂಲೋಕಕ್ಕೆ ತಕ್ಷಣವೇ ಹೋಗಬೇಕೆಂದೂ ಅಲ್ಲಿ ದೊರೆಯುವ ಸನ್ಮಾನವನ್ನು ಸ್ವೀಕರಿಸಿ ತಕ್ಷಣ ಬರಬೇಕೆಂದು ಗೌರವದಿಂದ ಹೇಳಿ ಕಳುಹಿಸುತ್ತಿರುವುದನ್ನು ನೋಡಿದ್ದೇವೆ. ಆದರೆ ಈ ಮಹಾಲಯ ಅಮಾವಾಸ್ಯೆಯ ವಿಶೇಷತೆ, ಸಡಗರ ವಿಭಿನ್ನ. ಇದು ಹದಿನೈದು ದಿನಗಳ ದೀರ್ಘ ರಜೆ. ಪಿತೃಲೋಕ ಸೇರಿದ ದಿನದಂದು ಅವರ ಮಕ್ಕಳು ಜ್ಞಾಪಿಸಿಕೊಂಡು ಅವರಿಗೆ ವರ್ಷಕ್ಕೊಮ್ಮೆ ಆಹಾರ ಕೊಡುವ ದಿನವನ್ನು ಶ್ರಾದ್ಧವೆಂದು ಆಚರಿಸಿದರೂ ಹಾಗೆ ಅದನ್ನು ಮಾಡಲಾಗದವರು ಈ ದಿನಗಳಲ್ಲಿ ಅಥವಾ ಕಡೆಯ ದಿನ ಮಹಾಲಯ ಅಮಾವಾಸ್ಯೆಯಂದು ಅವರಿಗೆ ಕನಿಷ್ಠ ನೀರನ್ನಾದರೂ ಭಕ್ತಿಯಿಂದ ಸಮರ್ಪಿಸಿದರೆ ಅದು ಶ್ರಾದ್ಧದಷ್ಟೇ ಫಲಕಾರಿ ಎನ್ನುತ್ತಾರೆ. ಆದ್ದರಿಂದ ಇದು ನಮ್ಮ ಪಾಲಿಗೆ ಅತ್ಯಂತ ಮಹತ್ವದ ದಿನಗಳಾಗಿದೆ. ಈ ದಿನಗಳಲ್ಲಿ ಗತಿಸಿದ ಬಂಧುಗಳಾದ ತಂದೆ ತಾಯಿ, ಅಜ್ಜ ಅಜ್ಜಿ, ಗಂಡ ಹೆಂಡತಿ, ಅಣ್ಣ ತಮ್ಮ, ಅಕ್ಕ ತಂಗಿ ಭಾವ, ಮಗ ಸೊಸೆ, ಮಗಳು ಅಳಿಯ, ದೊಡ್ಡಪ್ಪ ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಸೋದರಮಾವ ಸೋದರ ಅತ್ತೆ, ತಾಯಿಯ ಅಕ್ಕ ತಂಗಿಯರು, ಅವಳ ಅಣ್ಣತಮ್ಮಂದಿರು, ಹೆಣ್ಣು ಕೊಟ್ಟ ಅತ್ತೆ ಮಾವ, ಅವರ ಮಗ ಅಷ್ಟೇ ಏಕೆ ತನ್ನ ಆಪ್ತರು, ಗುರು, ಆಚಾರ್ಯ, ಹೀಗೆ ಹಲವಾರು ಸಂಬಂಧಿಗಳಿಗೆ ಗೌರವದ ಆಹಾರ ನೀಡಿ ಗೌರವಿಸುವುದರಿಂದ ಆಲ್ಲಿರುವ ಎಲ್ಲ ಪಿತೃಗಳೂ ಭೂಲೋಕದತ್ತ ಧಾವಿಸುತ್ತಾರೆ. ತಾವು ಮೇಲ್ಕಂಡ ಸಂಬಂಧಗಳಲ್ಲಿ ಯಾರಿಗಾದರೂ ಯಾವುದೋ ಒಂದು ಸಂಬಂಧ ಆಗಿಯೇ ಆಗಿರುತ್ತೇವೆ ಆದ್ದರಿಂದ ತಮಗೆ ಹೇಗಾದರೂ ಗೌರವದ ಆಹಾರ ಸಿಕ್ಕೇ ಸಿಗುತ್ತದೆ ಎಂಬ ಬಲವಾದ ನಂಬಿಕೆ. ಆದ್ದರಿಂದ ಇಡಿಯ ಸಮಾಜವೇ ನನ್ನ ಕುಟುಂಬ, ಚಿಕ್ಕದಾಗಿ ವಸುದೈವ ಕುಟುಂಬಕಂ ಎಂಬ ಆತ್ಮ ವಿಸ್ತರಣಾ ವಾದವು ಈ ಅಮಾವಾಸ್ಯೆ ವಿಧಿಯಲ್ಲಿ ತಿಳಿಯುತ್ತದೆ.
ಆ ಲೋಕದಲ್ಲಿ ಇರುವವರೆಗೂ ಕೇವಲ ನಮ್ಮ ಕರ್ಮದ ಚಿಂತೆ. ಆ ಲೋಕದಲ್ಲಿ ಎಂದೂ ಬಾಧಿಸದ ನಮ್ಮ ಜಾತಿ ಪಂಗಡ ಇದಕ್ಕಿದ್ದ ಹಾಗೆ ಮನಸ್ಸಿಗೆ ಬರುತ್ತಿದೆ. ಆದರೂ ಸಂಬಂಧಿಗಳು, ಕುಟುಂಬದವರು ಕಂಡರೂ ಏನೋ ನಿರ್ಲಿಪ್ತ ಭಾವ. ನಿರಂಹಂಕಾರದ ಅನುಭವ. ಹಸನ್ಮುಖಿಯಾಗಿದ್ದೇವೆ ಎನಿಸುತ್ತದೆ. ಯಾವುದೋ ಒಂದು ಪರಿಚಯದ ಸ್ಥಳ ಎನಿಸಿದ ಜಾಗದಲ್ಲಿ ನಾನು ನಿಂತು ಉಳಿದವರನ್ನು ಅವರ ದಿಕ್ಕಿಗೆ ಕಳಿಸಿದೆ. ಇದು ಗಯಾ ಪ್ರದೇಶ ಇರಬಹುದು. ಪವಿತ್ರ ಸ್ನಾನಕ್ಕೆ ಸೇರಿರುವಂತೆ ಕೋಟ್ಯಾಂತರ ಹಸನ್ನುಖದ ಪಿತೃಗಳು. ಶಾಲೆಯಲ್ಲಿ ತಮ್ಮ ಹೆಸರು ಕರೆಯುವುದನ್ನು ಕಾಯುತ್ತಿರುವ ವಿದ್ಯಾರ್ಥಿಯಂತೆ ಅಲ್ಲಲ್ಲಿ ಕಾತುರದಿಂದ ಕಾಯುತ್ತಿದ್ದಾರೆ. ತಾವೇ ನಿರ್ಧರಿಸಿರುವ ವಿವಿಧ ಪ್ರಾಣಿಗಳ ಪಕ್ಷಿಗಳ ರೂಪದಲ್ಲಿ ಆಹಾರ ಸ್ವೀಕರಿಸುವವರಿದ್ದಾರೆ. ಅದರಿಂದಾಗಿ ಅಲ್ಲೆಲ್ಲಾ ಕಾಗೆ, ಪಾರಿವಾಳ, ಹಸು, ಎಮ್ಮೆ, ನಾಯಿ, ಅಷ್ಟೇ ಏಕೆ ಜಿರಲೆ, ಇರುವೆ, ಇತ್ಯಾದಿಗಳು ಕಾಣುತ್ತಿವೆ. ಗುಣುಗುಣು ಎಂದು ಕೇಳಿಸುವ ಶಬ್ಬ. ಕೆಲವರು ಮಂತ್ರಗಳನ್ನು ಯಂತ್ರಗಳಂತೆ ಮುಲಾಜಿಲ್ಲದೆ ಜೋರಾಗಿ ಹೇಳುವುದು ಆನಂದ ಭಕ್ತಿಗಳನ್ನು ತರುತ್ತಿದೆ. ಪೂಜಾದಿಗಳೊಂದಿಗೆ ಅವರವರ ಅನುಕೂಲಕ್ಕೆ ತಕ್ಕಂತೆ ವಿವಿಧ ಭಕ್ಷ ಭೋಜ್ಯಗಳು ತಯಾರಾಗುತ್ತಿವೆ. ಕೆಲವರು ಕೇವಲ ನೀರು, ಹಾಲುಗಳನ್ನು ಮಾತ್ರ ಕೊಡಲು ಸಜ್ಜಾಗಿದ್ದಾರೆ. ಯಾರೇನು ಕೊಟ್ಟರೂ ನಿರ್ವಿಕಾರ ಭಾವದಿಂದ ಸ್ವೀಕರಿಸಬೇಕೆಂಬ ಆದೇಶವಿದೆ. ಆದ್ದರಿಂದ ಬಂದವರು ಸಮಾಧಾನವಾಗಿ ಸೇವಿಸುತ್ತಿದ್ದಾರೆ. ನಡೆಯುವ ಘಟನೆಗಳು ಕಂಡರೂ ಪ್ರತಿಕ್ರಿಯೆಯ ಭಾವ ಬರದ ಈ ಅನುಭವ ರೋಚಕ. ಇಲ್ಲಿ ನೋಡುತ್ತಾ ದಿನಗಳು ಕಳೆದದ್ದೇ ತಿಳಿಯುತ್ತಿಲ್ಲ. ಅಷ್ಟೊಂದು ಸದ್ದುಗಳ ಮಧ್ಯೆಯೂ ಈ ಲೋಕದಲ್ಲಿ ಎಲ್ಲಿ ಕರೆದರೂ ತಿಳಿಯುವಂತೆ ಗೊತ್ತಾಗುವ ವ್ಯವಸ್ಥೆ. ಅದು ಹೇಗಿದೆಯೋ. ಬೇರೆ ಬೇರೆ ಕಡೆಗಳಿಂದ ಕೇಳಿ ಬರುತ್ತಿರುವ ಹಾಗೂ ಎಲ್ಲಿ ಕರೆದರೂ ಕ್ಷಣ ಮಾತ್ರದಲ್ಲಿ ಅಲ್ಲಿಗೆ ತಲುಪುವ ಮಜಾನೇ ಬೇರೆ. ಯಾವುದನ್ನು ನೋಡಿದರೂ ನಿರ್ವಿಕಾರದಿಂದ ಇರಬೇಕು ಇಲ್ಲವೇ ಸಂತೋಷದಿಂದಿರಬೇಕು ಎಂಬ ಆದೇಶವಿದ್ದರೂ ಕೆಲವು ಪಿತೃಗಳು ಈ ಭೂಮಿಯ ವಾಸನೆಗೆ ಒಳಗಾಗುತ್ತಿದ್ದಾರೆ. ಹಿಂದಿನ ಜನ್ಮದ ನೆನಪು ಮಾಡಿಕೊಳ್ಳುವರು. ಸೇರಿರುವ ಬಂಧುಗಳಲ್ಲಿ ಹಿಂದೆ ನಡೆದ ವ್ಯಾಜ್ಯಗಳ ಮತ್ತು ಅಸಂತೋಷಗಳ ಬಗ್ಗೆ ಯೋಚಿಸುತ್ತಿರುವುದು ಕಾಣುತ್ತಿದೆ. ಕಾಗೆಯ ರೂಪದ ಪಿತೃ, ತನ್ನ ಆಸಂತೋಷದ ತೋರ್ಪಡಿಕೆಗಾಗಿ ತಮ್ಮ ಬಂಧುಗಳು ನೀಡುವ ಆಹಾರವನ್ನು ನೋಡುತ್ತಲೇ ಇದ್ದಾರೆ. ಅದೇನು ರೋಷವೋ, ಆಹಾರ ಮುಟ್ಟದೆ ಸತಾಯಿಸುತ್ತಿದ್ದಾರೆ. ಲೋಕ ಬಿಟ್ಟರೂ ಹಳೆಯ ಶೋಕ ಬಿಡದ ಜೀವಿಗಳು.
ಪಿತೃ ಲೋಕದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಗಂಭೀರವದನದ ಹಿರಿಯರು. ಅರೇ, ಅವರೂ ನಮ್ಮೊಂದಿಗೆ ಆಹಾರ ಸೇವಿಸುತ್ತಿದ್ದಾರೆ. ನಮ್ಮ ಕುಟುಂಬದವರೇ ಇರಬಹುದು. ನನಗೆ ತಿಳಿದಂತೆ ಆ ಹಿರಿಯರಿಗೆ ನಮಸ್ಕರಿಸಿದೆ. ಭೋಜನಕ್ಕೆ ಸಮಯವಿದ್ದುದರಿಂದ, ಪಿತೃಲೋಕದ ಕಷ್ಟದ ಅನುಭವ ಹೇಳಿಕೊಂಡು, ಮುಂದೇನು ಎಂದು ಗೊತ್ತಾಗುತ್ತಲೇ ಇಲ್ಲ, ಅಲ್ಲಿಯೇ ಕರ್ಮಗಳ ಹೆಚ್ಚಿನ ವಿವರ ತಿಳಿಯಬೇಕೆಂಬ ಕುತೂಹಲ ತಿಳಿಸಿದಾಗ ಬಲು ಅಕ್ಕರೆಯಿಂದ ಸೇರಿದ ಪಿತೃ ಬಂಧುಗಳಿಗೆಲ್ಲರಿಗೂ ಸೇರಿದಂತೆ ಹೇಳಿದರು. ತಾವು ಕೇಳುತ್ತಿರುವುದು ಸಹಜ. ಈಗಾಗಲೇ ನಮ್ಮ ಆಧುನಿಕ ಭಗವದ್ಗೀತೆಯಾದ ಮಂಕುತಿಮ್ಮನ ಕಗ್ಗದ ಕರ್ತೃ ಹಿರಿಯ ಶ್ರೀ ಡಿವಿಜಿ ಯವರು ಹೇಳಿದಂತೆ:
ಮರಣದಿಂ ಮುಂದೇನು? ಪ್ರೇತವೋ? ಭೂತವೋ? ।
ಪರಲೋಕವೋ? ಪುನರ್ಜನ್ಮವೋ? ಅದೇನೋ ! ।।
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ ।
ಧರೆಯ ಬಾಳ್ಗದರಿನೇಂ – ಮಂಕುತಿಮ್ಮ ।।
ಎಂಬುವುದು ಅಕ್ಷರಶಃ ನಿಜ. ಆದ್ದರಿಂದ ಅಲ್ಲಿಗೆ ಬರುವ ಮುನ್ನ ಗೊತ್ತಿಲ್ಲ, ಅಲ್ಲಿ ಹೇಳುವವರಿಲ್ಲ. ಆದರೂ ಕುತೂಹಲ ಮತ್ತು ಸಮಯವಿರುವುದರಿಂದ ಕೇಳಿ ಎಂದು ಮುಂದುವರಿಸಿದರು.
ಪಿತೃ ಲೋಕದಲ್ಲಿರುವರಿಗೆ ಮೂರು ಹಂತಗಳು. ಭೂಮಿಯಿಂದ ಬರುವವರಿಗೆ ಕೇವಲ ಮಕ್ಕಳಿದ್ದರೆ ಅವರನ್ನು ವಸುವೆಂದೂ , ಮೊಮ್ಮಕ್ಕಳು ಇದ್ದರೆ ಅವರನ್ನು ರುದ್ರನೆಂದೂ ಮರಿ ಮಕ್ಕಳನ್ನು ಕಂಡು ಹೋಗಿದ್ದರೆ ಅವರನ್ನು ಆದಿತ್ಯ ಹಂತಕ್ಕೆ ಸೇರಿಸಲಾಗುತ್ತದೆ. ಒಮ್ಮೆ ಸೇರಿದ, ಪಿತೃಲೋಕದಲ್ಲಿದ್ದವರಿಗೆ ಭೂಮಿಯಲ್ಲಿ ಅವರಿಗಾಗುವ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಾದರೂ ಪಿತೃಲೋಕದಲ್ಲಿರುವವರಿಗೆ ಆ ಲೆಕ್ಕವನ್ನು ಆಧರಿಸಿ , ಅವರಿಗೆ ಅನ್ಯಾಯವಾಗದಂತೆ ಆಯಾ ಹಂತಕ್ಕೆ ಬಡ್ತಿ ಸಿಗುವುದು ವಿಶೇಷ. ಪ್ರತಿಯೊಂದಕ್ಕೂ ಅದರದೇ ಆದ ಕರ್ಮಫಲವಿರುತ್ತದೆ. ತಪ್ಪು ಆದಾಗ ಅದನ್ನು ತಿದ್ದಿಕೊಳ್ಳುವುದು ಪವಿತ್ರದ ಕೆಲಸ. ಅಂತಹ ಪವಿತ್ರದ ಕೆಲಸವನ್ನು ಸರಿಪಡಿಸಿಕೊಳ್ಳಲು ಪಿತೃಲೋಕದಲ್ಲಿ ಹೇರಳ ಅವಕಾಶ ಮಾಡುವರು. ಅದನ್ನು ಸಂತೋಷವಾಗಿ ನಿರ್ವಹಿಸಿಧಲ್ಲಿ ಶೀಘ್ರವಾಗಿ ಪವಿತ್ರರಾಗುತ್ತೀರಿ. ಆ ಲೋಕದ ಬಗ್ಗೆ ಗೌರವಿಸುವುದು ಶ್ರೇಯಸ್ಕರ ಮತ್ತು ಶ್ರೇಷ್ಠ. ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ಮಫಲಗಳನ್ನು ಅನುಭವಿಸಿಯೇ ಮೇಲಿನ ಲೋಕಕ್ಕೆ ಹೋಗಬೇಕಾಗುವುದು. ಈ ಸುಖಲೋಕವು ಪುಣ್ಯ ಕಾರ್ಯ ಮಾಡಿದವರೆಲ್ಲರಿಗೂ ಖಾಯಂ ಅಲ್ಲ. ಎಂಥಾ ಪುಣ್ಯವಂತನಾದರೂ ಹೆಚ್ಚೆಂದರೆ ೪೩೨ ಕೋಟಿ ವರ್ಷಗಳು ಅಲ್ಲಿರಬಹುದು. ನಂತರ ಭೂಮಿಯಲ್ಲಿ ಹುಟ್ಟಿ ಬರಲೇಬೇಕು.
ಈ ವಿಶ್ವದಲ್ಲಿ ಪೃಥ್ವಿ, ನೀರು, ವಾಯು, ಅಗ್ನಿ, ಆಕಾಶ, ಈ ಐದು ಶಕ್ತಿಗಳಿದ್ದು ಇಲ್ಲಿರುವ ಪ್ರತಿ ಜೀವಿಗೂ ಜೀವಿಸಲು ಅವಕಾಶ ಮಾಡುತ್ತದೆ. ತಮ್ಮ ಕರ್ಮಾನುಸಾರವಾಗಿ ಜೀವಿಗಳು ಭೂಲೋಕಕ್ಕೆ ಮಳೆಯ ಮೂಲಕ ಈ ಇಳೆಯ ಸೇರಿ ಆಹಾರ ಪದಾರ್ಥಗಳಲ್ಲಿ ಸೇರುತ್ತದೆ. ನಿರ್ಧರಿತ ಪುರುಷನ ಮೂಲಕ ತನ್ನ ತಾಯಿಯನ್ನು ಸೇರಿ ಜನಿಸುತ್ತದೆ. ಹಾಗೆ ಬರುವಾಗ ಜೀವಿಗಳು ಪಾರದರ್ಶಕವಾಗಿ ರುವುದರಿಂದ ಯಾರಿಗೂ ಕಾಣುವುದಿಲ್ಲ. ಕೇವಲ ಅಗ್ನಿ, ವಾಯುಗಳ ಮೂಲಕ ಆಕಾಶದಿಂದ ಪ್ರಥ್ವಿಯನ್ನು ಸೇರುತ್ತದೆ. ಒಮ್ಮೆ ಶರೀರ ಬಂದ ಮೇಲೆ ಭಾರವಾದ ಪ್ರಥ್ವಿ ನೀರಿನ ಸಂಪರ್ಕದಿಂದ ಭಾರವಾಗುವುದರಿಂದ ಭೂಮಿಯಲ್ಲಿ ಕಾಣಿಸುತ್ತದೆ. ತನ್ನ ಜೀವ ಅವಧಿಯ ನಂತರ ದೇಹದಿಂದ ಪ್ರಾಣ ಹೊರಬಂದಾಗ ಉಳಿದ ಶಕ್ತಿಗಳಾದ ವಾಯು ಅಗ್ನಿಗಳ ಮೂಲಕ ಆಕಾಶವನ್ನು ಪುನಃ ಪ್ರವೇಶಿಸುತ್ತದೆ.ಇದೇ ಜನ್ಮ ಚಕ್ರ. ಇನ್ನು ಭೂಮಿಯಲ್ಲಿ ಪುಣ್ಯ ಕಾರ್ಯಗಳನ್ನು ಮಾಡಿ ಸ್ವರ್ಗವನ್ನು ಪಡೆಯಲು ಪ್ರಾಣಿ ಮತ್ತು ಸಸ್ಯಗಳ ಮೂಲಕ ಜೀವಿಸಲು ಅನುಕೂಲವಿದೆ. ಚಲನೆಯಲ್ಲಿ ಸೇವೆ ಮಾಡಿ ಪುಣ್ಯ ಪಡೆಯಲು ಪ್ರಾಣಿಯಾಗಿಯೂ,ಇದ್ದ ಸ್ಥಳದಲ್ಲೇ ಸೇವೆ ಮಾಡಲು ಸಸ್ಯವಾಗಿಯೂ ದೇವರು ಅನುಗ್ರಹಿಸಿದ್ದಾನೆ.ಆದರೆ ಅತೀ ಆಸೆ, ಅಸಹನೆ, ಅತಿ ಮೋಹ,ತನಗೇ ಬೇಕೆಂಬ ಭಾವ, ದುರಹಂಕಾರ ಮತ್ತು ಅಸೂಯೆಗಳ ಗುಣಗಳಿಂದಾಗಿ ಪಾಪವನ್ನು ಗಳಿಸಿ ಮೇಲಿನ ಲೋಕಕ್ಕೆ ಬರುವಾಗ ಪಿತೃ ಲೋಕ ಪ್ರವೇಶಿಸಬೇಕಾಗುತ್ತದೆ.ಇದು ಬಹುತೇಕ ಎಲ್ಲರೂ ಅನುಭವ. ಇದುವೇ ಜೀವನ.
ಅನುಭವದಲ್ಲಿ ಮಾತ್ರ ತತ್ವವಿದೆ ಎಂದು ನಂಬಿರುವ ವಾಸ್ತವವಾದಿ ವಚನಕಾರರೂ ಹೇಳಿರುವಂತೆ:
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ.
ಎಂಬ ಸಾಲುಗಳನ್ನು ಅರ್ಥ ಮಾಡಿಕೊಂಡರೆ ಸಹಜವಾಗಿ ಎಲ್ಲರೂ ಅಲ್ಲಿ ನೇರವಾಗಿ ಸಲ್ಲುವರು. ಹಾಗೆ ಸಲ್ಲಲು ಬಂದಿರುವವರು ನನಗೆ ತಿಳಿಯದು. ಆದ್ದರಿಂದ ನಿಮ್ಮ ಮುಂದಿನ ತಲೆಮಾರಿಗಾದರೂ ಒಳ್ಳೆಯ ಕಾರ್ಯವನ್ನು ಮಾಡುವುದರ ಮೂಲಕ ದೈವ ಸಾಯುಜ್ಯವನ್ನು ಸುಖವಾಗಿ ತಲುಪಲು ಉತ್ತಮ ಆಶೀರ್ವಾದ ಮಾಡಿ ಅವರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಿ. ಅವರು ಚಿಕ್ಕವರೇ ಆದ್ದರಿಂದ ಅವರು ಮಾಡುವ ಎಲ್ಲಾ ಸೇವೆಯನ್ನು ಸಂತೋಷವಾಗಿ ಸ್ವೀಕರಿಸಿ. ಇದರಿಂದ ನಿಮ್ಮ ಕರ್ಮವೂ ಕಡಿಮೆಯಾಗುತ್ತದೆ ಎಂದರು. ಎಂಥಾ ಅರ್ಥಪೂರ್ಣ ವಿಚಾರ. ಔದಾರ್ಯ ಮನೋಭಾವ. ಅವರೊಂದಿಗೆ ಭೋಜನ ಸ್ವೀಕಾರ ನಮ್ಮ ಭಾಗ್ಯವೆಂದು ಭಾವಿಸಿ ಯೋಚಿಸುತ್ತಿರುವಾಗ ಅವರು ನನ್ನ ಕಡೆ ನೋಡಿ, ಏಕಪ್ಪಾ ಅಷ್ಟೊಂದು ತಮಾಷೆ ಯಾಗಿ ಮಾತನಾಡುತ್ತಿದ್ದೆ, ಯೋಚಿಸುತ್ತಿದ್ದೆ. ಸಡನ್ ಆಗಿ ಸೀರಿಯಸ್ ಆದೆಯಲ್ಲಾ ಎಂದರು. ಎಷ್ಟೊಂದು ಗಹನ ಮತ್ತು ಗಂಭೀರದ ವಿಚಾರಗಳು. ಜನ್ಮ ಜನ್ಮಗಳಿಗೂ ಬೇಕಾದ ಪ್ರತಿ ನಿಮಿಷವೂ ನಮ್ಮನ್ನು ಪವಿತ್ರ ಗೊಳಿಸುವ ಪಿತೃ ಲೋಕವನ್ನು ಬಹಳ ಉಡಾಫೆಯಿಂದ ಆಡಿಕೊಂಡೆನೆಲ್ಲಾ, ಅದು ಕೇವಲ ಪಿತೃಲೋಕವಲ್ಲ, ಮಹತ್ವದ ಪವಿತ್ರ ಲೋಕವೆಂದು ತಿಳಿಯದೆ ಆಡಿದುದರ ಸಾಧಕ ಬಾದಕಗಳೇನು ಎಂದು ಯೋಚನೆಯಾಯಿತು ಎಂದಾಗ ಬಲು ಪ್ರೀತಿಯಿಂದ ಹಾಸ್ಯ ಪ್ರವೃತ್ತಿ ಒಳ್ಳೆಯದೇ, ಆದರೆ ವ್ಯವಸ್ಥೆಯನ್ನು ಆಡಿಕೊಳ್ಳುವುದು ತಪ್ಪು, ಹಾಸ್ಯ ಎಲ್ಲರೂ ಬೇಸರ ಕಳೆಯಲು ಒಳ್ಳೆಯದೇ ಎಂದಿದ್ದು ಎಷ್ಟೋ ಸಮಾಧಾನ ತಂದಿತು. ಅಂತೆಯೇ ಸಂತೋಷ ದಿಂದಲೇ ಅವರೊಂದಿಗೆ ಇತರ ಹಿರಿಯರು, ಜೊತೆಗೆ ಬಂದಿದ್ದ ನನ್ನ ಮಿತ್ರರನ್ನೂ ಸೇರಿ ವಾಪಸು ಹೋದಾಗ ಪಿತೃ ಲೋಕ, ಅಲ್ಲಲ್ಲಾ ಪವಿತ್ರ ಲೋಕದಲ್ಲಿ ಪಾಡ್ಯದ ಬೆಳಗಿನ ಸೂರ್ಯ ಉದಯಿಸುತ್ತಿದ್ದ. ಅವರ ಕೆಲವೇ ಮಾತುಗಳನ್ನು ಮೆಲಕು ಹಾಕುತ್ತಾ ಮುಂದಿನ ಅಮಾವಾಸ್ಯೆಯ ನಿರೀಕ್ಷೆಯಲ್ಲಿ. ಹಿರಿಯ ಆದಿತ್ಯರ ನುಡಿಗಳು ಎಲ್ಲರ ಉದ್ಧಾರಕ್ಕೂ ಸದಾ ಕಣ್ಣು ಮುಂದೆ ಆದಿತ್ಯ ಪಿತೃರ ವಾಕ್ಯ - ಪವಿತ್ರ ವಾಕ್ಯ.
ಸೊಗಸಾಗಿದೆ ಆದರೆ ವಿಮರ್ಶೆ ಗೆ ನಿಲುಕದ ವಿಷಯ ಹಾಗೂ ವಿಚಾರ, ಒಂದು ತರಹ fantasy ಲೋಕದೊಳಗೆ ಹೋಗಿ ಬಂದ ಅನುಭವ ನೀಡದೇ ಇರದು
ReplyDeleteಸೂರಪ್ಪನವರು ಕೆಳದಿಯಿಂದ ಗಾಡಿ ತರುವಾಗಲೆಲ್ಲ ದೀಪಾವಳಿಗೆ ದೊಂದಿ/ಪಂಜು ಆಡಲು ಪುಂಡಿ ಕಟ್ಟಿಗೆ/ಕೋಲನ್ನು ಸಾಗರದ ದೊಡ್ಡಮ್ಮನ ಮನೆಗೆ ತರುತ್ತಿದ್ದು ಮಹಾಲಯಮಾವಾಸ್ಯೆ - ಪಾಡ್ಯ - ಬಿದಿಗೆ - ತದಿಗೆಯಂದು ರಾತ್ರಿ ಬೆಂಕಿಹತ್ತಿಸಿ ದೊಂದಿ ಆಡುತ್ತಿದ್ದೆವು. ಮೊಮ್ಮಕ್ಕಳು ಹೀಗೆ ಆಡುವ ದೊಂದಿ ಬೆಳಕಿನಲ್ಲಿ ಪಿತೃದೇವತೆಗಳು ವಾಪಸ್ಸಾಗುತ್ತಾರೆಂದು ನಮ್ಮ ತಾಯಿಯಂಬೋಣ. ನಿಮ್ಮ ಲೇಖನ ಓದಿ ಹಳೆಯದೆಲ್ಲಾ ನೆನಪಾದವು. ಗಂಡು ಸಂತಾನವಿಲ್ಲದ ಪಿತೃಗಳೆಲ್ಲ ಪಿತೃಲೋಕದ ಖಾಯಂ ಸದಸ್ಯರಾಗಿ ಉಪವಾಸವಾಗಿರುತ್ತಾರೆಂದು ನಂಬಿಕೆ.
ReplyDeleteಹಿರಿಯಣ್ಣ ಕೆ ಪಿ
ತಿಳಿಹಾಸೄದೊಂದಿಗೆ ಸೊಗಸಾದ ನಿರೂಪಣೆ.
ReplyDeleteಪಿತೃಪಕ್ಷದ ಸವಿವರಣೆಯೊಂದಿ, ಸಾಗುವ ಜಾಗ್ರತ್, ಸ್ವಪ್ನ, ಸುಷುಪ್ತಿ ಗಳಂತೆ, ಯಾರೂ ಕೇಳದ, ಕಂಡರಿತು ತಿಳಿಸದ ಅನುಭವವನ್ನು ನಿಜವೇನೋ, ಹೀಗೂ ಉಂಟೇನೋ ಎಂದು ಭ್ರಮಾಧೀನ ರಾಗುವಂತೆ ಇಹ- ಪರ ಲೋಕಗಳ, ಜೀವ - ಜೀವಿಗಳ, ಕಾಣದ ಲೋಕದ ಚಿತ್ರವನ್ನು ಬಿಚ್ಚಿಟ್ಟು ನಿಜ ಜೀವನದ ತಿಳಿ ಹಾಸ್ಯಚಟಾಕಿ ಗಳು,ಹಾಡು, ಕಗ್ಗದ ಭಾಗಗಳನ್ನು ಅರ್ಥಪೂರ್ಣ ವಾಗುವಂತೆ ಮಿಳಿತ ಗೊಳಿಸಿ, ಅಲ್ಲಲ್ಲಿ ಸಣ್ಣ, ದೊಡ್ಡ ಹರಿವುಗಳ ಒಯ್ಯಾರದ ನಡೆಯ
ReplyDeleteಪ್ರವಾಹದಂತೆ ಹರಿಯುವ ಪದಪುಂಜ ಗಳಿಂದ ಮುಂದೋಡಿಸಿ ಕೊಂಡು ಓಡಿಸುವ ಪರಿ ಅದ್ಭುತ, ಆನಂದಕರ. ಆಷ್ಟೇ ಅಲ್ಲ, ತಪ್ಪು - ಒಪ್ಪುಗಳ, ಏಳು - ಬೀಳುಗಳ ಅರಿವು ಸಮಯ ಮೀರಿದ ನಂತರ ಅರಿವಾದರೆ ಏನು ಸುಖ, ಎಚ್ಚರ ವಿವೇಕ ವಿವೇಚನೆ ಗಳತುಂಬು ಜೀವನದ ಅಗತ್ಯ, ಮತ್ತೆಂದೂ ತಿರುಗಿ ಬಾರದ ಆಡಿದ ಮಾತು, ಬಿಟ್ಟ ಬಾಣ, ಕಳೆದು ಹೋದ ಸಮಯಗಳ ಬಗೆಗೆ ಅರಿವು ಮೂಡಿಸುತ್ತಾ, ಎಂದೆಂದೂ ಮೆಲುಕು ಹಾಕುತ್ತಲೇ ಸಾಗಬೇಕಾದ ಅಂತಹ ಶಿಸ್ತು, ಸಂಯಮ, ನೀತಿ, ಧರ್ಮ, ಗುರಿ - ಸಾಧನೆಗಳ ಚಿತ್ರಣ ಮೂಡಿಸುವ, ನವಿರಾಗಿ ತಿಳಿಯಪಡಿಸುವ ಒಳಗಣ ಭಾಷೆಯ ಈ ಲೇಖನ ಸವಿದರಷ್ಟೇ ಚೆನ್ನು.
ಪಿತೃ ಪಕ್ಷವನ್ನು ಯಾತಕ್ಕಾಗಿ ಮಾಡಬೇಕು? ಪಿತೃ ಪಕ್ಷಕ್ಕಾಗಿ ಹೇಗೆ ಪಿತೃಗಳು ಕಾತರದಿಂದ ಕಾಯುತ್ತಿರುತ್ತಾರೆ, ಎಂಬುದು ಹಾಸ್ಯ ನಿರೂಪಣೆಯೊಂದಿಗೆ ಚೆನ್ನಾಗಿ ಮೂಡಿಬಂದಿದೆ ಮತ್ತು ಸ್ವರ್ಗದಲ್ಲಿ ಪಿತೃಗಳ ಸ್ಥಾನ ಯಾವ ರೀತಿಯಲ್ಲಿ ನಿರ್ಧರಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.ಜೊತೆ ಜೊತೆಯಲ್ಲಿ ಹಾಡು ಮತ್ತು ಮಂಕುತಿಮ್ಮನ ಕಗ್ಗದ ಸಾಲುಗಳು ಅರ್ಥಪೂರ್ಣವಾಗಿದೆ. ಯಮಲೋಕದಲ್ಲಿ ನಡೆಯುವ ಸಂಭಾಷಣೆಗಳು ಮತ್ತು ಶಿಕ್ಷೆಗಳನ್ನು ಚೆನ್ನಾಗಿ ಬಿಂಬಿಸಲಾಗಿದೆ. ಎ ಮನೋಹರ ರಾವ್
ReplyDeleteSuperb superb
ReplyDeleteಪಿತ್ರು ಪಕ್ಷದ ವಿವರಣೆ, ಯಾಕೆ ಮಾಡಬೇಕ ಪಿತೃ ಪಕ್ಷಕ್ಕಾಗಿ ಹೇಗೆ ಪಿತೃಗಳು ಕಾಯುತ್ತಿರುತ್ತಾರೆ,ಎಂಬುದು ಚೆನ್ನಾಗಿ ಮೂಡಿಬಂದಿದೆ .
ReplyDeleteಅತ್ಯಂತ ಅಪರೂಪದ ಕಥಾವಸ್ತು.👌ಸವಿಸ್ತಾರವಾಗಿ ,ಮನಮುಟ್ಟುವ ಲೇಖನ ಬಹಳ ಸೊಗಸಾಗಿದೆ..👏👏😊
ReplyDeleteಅಮಾವಾಸ್ಯೆಯ ಪಿತೃಗಳ Day Out
ReplyDeleteಪಿತೃಪಕ್ಷದ ಅಮವಾಸ್ಯೆಯ ವಿಚಾರ ಸವಿಸ್ತಾರವಾಗಿ ಮೂಡಿ ಬಂದಿದೆ . ಪಿತೃಗಳ Day out ಹಾಸ್ಯವಾಗಿದ್ದರೂ ವಿಚಾರವಿದೆ. ಸತ್ತವರು ಇದ್ದ ಜಾಗ ಅಥವಾ ಮನೆ ಕಳೆದು ಸಿಗದೆ ಇದ್ದಾಗ ಪಡುವ ಪಾಡು
ಚೆನ್ನಾಗಿದೆ.