Skip to main content

ಸೂರಪ್ಪನ ಜೀವನ ಯಾತ್ರೆ

ಈ ದಿನ ರಾತ್ರಿ ಇಲ್ಲಿಂದ ಹೊರಟು ನಾಳೆ ಬೆಳಿಗ್ಗೆ ಶೃಂಗೇರಿ, ನಂತರ ಕೊಲ್ಲೂರು ಕ್ಯಾಂಪು. ಮರು ದಿನ ಮುರುಡೇಶ್ವರ ಉಡುಪಿ ನೋಡಿ ರಾತ್ರಿ ಮಂಗಳೂರಿನಲ್ಲಿ ಕ್ಯಾಂಪ್. ಮರುದಿನ ಸುಬ್ರಮಣ್ಯ, ಧರ್ಮಸ್ಥಳ ನೋಡಿ ಬೆಂಗಳೂರಿಗೆ ಹೊರಡುವುದು, ಇಂಥಾ ನಮ್ಮ ಯಾತ್ರಾ ಕಾರ್ಯಕ್ರಮದ ಬಸ್ ಹೊರಟಿತು. ನಾನು, ನನ್ನ ಪಕ್ಕದಲ್ಲಿ ಮಿತ್ರ ರಘುವಿನ ತಂದೆ ಸೂರಪ್ಪ. ಮುಂದಿನ ಸೀಟಿನಲ್ಲಿ ನಮ್ಮ ತಾಯಿಯೊಂದಿಗೆ ಮಿತ್ರನ ತಾಯಿ ಕುಳಿತಿದ್ದಾರೆ. ನೋಡಲು ಸೂರಪ್ಪ ೭೦ ವಯಸ್ಸಿನ ಸಣ್ಣ ಮೈಕಟ್ಟಿನ, ಸಂಪ್ರದಾಯಸ್ಥ ಬ್ರಾಹ್ಮಣ. ಕಚ್ಚೆ ಪಂಚೆ ತುಂಬು ತೋಳಿನ ಶರ್ಟ್, ಜುಟ್ಟು ಬಿಟ್ಟ ಬೋಳುತಲೆ, ಹಣೆ ಮೂಗಿನ ಮಧ್ಯೆ ಸಣ್ಣದಾಗಿ ಕುಂಕುಮ. ವಾರಕ್ಕೊಮ್ಮೆ ಶೇವ್ ಮಾಡುವ ಕುರುಚಲು ಗಡ್ಡ. ಚಪ್ಪಲಿ ಇಲ್ಲದ ಬರಿಗಾಲು. ಮಾತನಾಡುವ ಮುನ್ನ ಕೊಂಚ ಉಗ್ಗುವಿಕೆ. ಇದು ಅವರ ಗೆಟಪ್. ಏನಾದ್ರೂ ಮಾತನಾಡಿಸೋಣ ಎಂದರೆ ಆಗಲೇ ನಿದ್ದೆಗೆ ಜಾರಿದ ಮನುಷ್ಯ. ನಾನೂ ನಿದ್ದೆ ಮಾಡಿದೆ, ಬೆಳಿಗ್ಗೆ ಶೃಂಗೇರಿ. ದೇವಸ್ಥಾನದ ಹತ್ತಿರದ ಲಾಡ್ಜ್ ನಲ್ಲೇ ಸ್ನಾನ. ನಂತರ  ದೇವಸ್ಥಾನ, ಮಠ, ಜಗದ್ಗುರುಗಳ ದರ್ಶನ.
 
ಎಂಟನೆಯ ಶತಮಾನದಲ್ಲಿ ಆಚಾರ್ಯ ಶಂಕರರು ಸ್ಥಾಪಿಸಿದ ೪ ಧಾರ್ಮಿಕ ಪೀಠಗಳಲ್ಲಿ ಪ್ರಧಾನ ಮತ್ತು ಮೊದಲನೆಯದು ಶೃಂಗೇರಿ, ಇತರ ಪೀಠಗಳೆಂದರೆ ಬದರಿ, ಪುರಿ ಮತ್ತು ದ್ವಾರಕ. ಈ ಪೀಠದಲ್ಲಿ ಈಗ ಶ್ರೀ ಭಾರತೀ ತೀರ್ಥ ಸ್ವಾಮಿಗಳು ಇದ್ದು  ಇವರ ಉತ್ತರಾಧಿಕಾರಿಯಾಗಿ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳು ಧಾರ್ಮಿಕ ವಿಚಾರ ಧಾರೆ ಗಳನ್ನು ಹಂಚುತ್ತಿದ್ದಾರೆ. ಶೃಂಗೇರಿ ಎಂಬ ಹೆಸರು - ಋಷ್ಯಶೃಂಗಗಿರಿ ಎಂಬ ಬೆಟ್ಟದ ಹೆಸರಿನಿಂದ ಬಂದಿದೆ, ಶೃಂಗೇರಿಯ ಅನೇಕ ದೇವಸ್ಥಾನಗಳಲ್ಲಿ ಮುಖ್ಯವಾದದ್ದು, ಉಭಯ ಭಾರತಿ ಎಂದು ಕರೆಯಲ್ಪಡುವ ಶಾರದಾಂಬ ದೇವಾಲಯ, ವಿದ್ಯಾಶಂಕರ ದೇವಸ್ಥಾನ. ಇದನ್ನು ೧೪ ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹುಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು.

ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿರುತ್ತಾನೊ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ. ಇವಲ್ಲದೆ  ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿರುವ ಮಲಹಾನಿಕಾರೇಶ್ವರ ಎಂಬ ಹೆಸರಿನ ದೇವಾಲಯ ಎರಡನೆಯದು, ಶೃಂಗೇರಿಯಿಂದ ೧೦ ಕಿ. ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿನಲ್ಲಿರುವ ಋಶ್ಯಶೃಂಗರ ಆತ್ಮಜ್ಯೋತಿ ದೇವಾಲಯವನ್ನು ನೋಡಬಹುದು. ಮಠದಲ್ಲೇ ಊಟ ಮುಗಿಸಿ ಕೊಲ್ಲೂರಿನತ್ತ ಪ್ರಯಾಣ ಪ್ರಾರಂಭ. 

ಬೇಸರ ಕಳೆಯಲು ನಿಧಾನವಾಗಿ ಯಜಮಾನರನ್ನು ಮಾತಿನತ್ತ ಎಳೆದೆ. ರಸ್ತೆ ಪಕ್ಕ ಕಾಣುವ ಗದ್ದೆ, ಅಡಿಕೆ ತೋಟದ ಕಡೆ ಕಣ್ಣು ಹಾಯಿಸುತ್ತಾ ಈ ಕೃಷಿಯ ಕೆಲಸಗಳ ಬಗ್ಗೆ ತಮಗೆ ಗೊತ್ತಿದೆಯೇ ಎಂದೆ. ನಾನೇನು ಅಂತಹ ಜಾಣನಲ್ಲ, ಆದರೂ ಗೊತ್ತಿದ್ದು ಹೇಳುತ್ತೇನೆ. ಹಾಗೆ ನೋಡಿದರೆ ನನಗೆ ಇದೇನು ಹೊಸತೇನಲ್ಲ - ಅಡಿಕೆ ತೋಟ, ಸಸಿ ನೆಡುವುದು, ಸರಿಯಾದ ಸಮಯದಲ್ಲಿ ಗೊಬ್ಬರ, ಮಣ್ಣು ಕೊಡುವುದು, ಕಾಲುವೆ ತೋಡುವುದು, ಮರದಿಂದ ಬಿದ್ದ ಅಡಿಕೆ ಆರಿಸುವುದು, ಅಡಿಕೆ ಹಾಳೆಯನ್ನು ಜೋಡಿಸುವುದು, ಮನೆಗೆ ಮಳೆಯಿಂದ ರಕ್ಷಿಸಿಕೊಳ್ಳಲು ಮಾಡು ಅಥವಾ ಮುಚ್ಚಿಗೆ ಹಾಕುವುದು, ಅಡಿಕೆ ಕೊಯ್ಸಿ ಸುಗ್ಗಿ ಮಾಡುವುದು, ಚೊಗರು ಎಂಬ ಬಣ್ಣ ಹಾಕುವುದು, ತಟ್ಟಿ ಹಾಸಿನ ಮೇಲೆ ಒಣಗಿಸಿದ ನಂತರ ವಿವಿಧ ಗುಣಮಟ್ಟದ ಅಡಿಕೆ ಆರಿಸಿ ಬೆಲೆಕಟ್ಟಿ ಮಾರಾಟ ಮಾಡುವುದು, ಇವುಗಳಿಗೆ ಬೇಕಾದ ವಿಶೇಷ ಆಳುಗಳು, ಹೀಗೆ ಏನೇನೋ ಹೊಸ ಮಾಹಿತಿಗಳು. ಇವರನ್ನು ಕಂಡಾಗ ಇಂತಹ ವಿಷಯಗಳ ಗಣಿ ಎಂದು ನಿರೀಕ್ಷಿಸಿರಲಿಲ್ಲ.

ಕೊಲ್ಲೂರು ಮಾರ್ಗ. ಪಶ್ಚಿಮ ಘಟ್ಟಗಳ ಕತ್ತಲ ಕಾಡಿನಲ್ಲಿ ವೇಗವಾಗಿ ಹೋಗುತ್ತಿರುವ ನಮ್ಮ ಬಸ್. ಅದಕ್ಕಿಂತಲೂ ವೇಗವಾಗಿ ಓಡುತ್ತಿರುವ ಆಲೋಚನೆಗಳು ಇವುಗಳ ಮಧ್ಯೆ ಕೊಲ್ಲೂರು ತಲುಪಿದೆವು ರಾತ್ರಿ ಒಳ್ಳೆಯ ಹೋಟೆಲ್ನಲ್ಲಿ ಬಿಡಾರ. ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ದೇವರ ದರ್ಶನಕ್ಕೆ ಹೊರಟೆವು.

ಮೂಕಾಂಬಿಕಾ ದೇವಿ ದೇವಸ್ಥಾನ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಜನರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಸೊಂಪಾಗಿ ರಸಭರಿತವಾಗಿರುವ ಹಸಿರು ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟ. ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ಈ ದೇವಸ್ಥಾನದ ಮೂಕಾಂಬಿಕಾ ದೇವತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವತಾರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ' ತೀರ್ಥಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಆ ತಾಣಗಳೆಂದರೆ: ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ. ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿರುವ ಇತರ ದೇವತೆಗಳಾದ  ಶ್ರೀ ಸುಬ್ರಮಣ್ಯ, ಶ್ರೀ ಪಾರ್ಥೀಶ್ವರ, ಶ್ರೀ ಪಂಚಮುಖ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ ರ ದರ್ಶನ ಮುಗಿಸಿ ಮುರುಡೇಶ್ವರದತ್ತ ಪ್ರಯಾಣ. ಮುರುಡೇಶ್ವರ, ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣ ನಿಂದಲೇ ಇನ್ನು ನಾಲ್ಕು ಲಿಂಗಗಳುಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರಗಳೆಂದರೆ: ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕತೆಗಳ ಪ್ರಸಿದ್ಧ ತಾಣವಾಗಿತ್ತು. ಈಗ ಪ್ರವಾಸಿಗರಿಗೆ ಆಸಕ್ತಿ ಬರುವಂತೆ ವಾತಾವರಣ ನಿರ್ಮಾಣವಾಗಿ ಕಂಗೊಳಿಸುತ್ತಿದೆ ಎನ್ನಬಹುದು. ಈಗ ನಮ್ಮ ಪ್ರಯಾಣ ಉಡುಪಿಯತ್ತ. ಒಂದು ಕಡೆ ಸಮುದ್ರದ ಹಿನ್ನೀರು. ರಸ್ತೆಯ ಮತ್ತೊಂದು ಪಕ್ಕದಲ್ಲೇ ಕಾಣುವ ಬೆಳೆಯನ್ನು ನೋಡಿ ಪಕ್ಕದ ರಾಯರನ್ನು ಕೇಳಿದೆ.

ತಾವು ಭತ್ತದ ಕೃಷಿಯನ್ನು ಮಾಡಿರಲಿಲ್ಲವೇನು, ಅದೂ ಒಳ್ಳೆಯದೇ ಅಲ್ಲವೇ ಎಂದೆ. ಆ ಬಗ್ಗೆ ಸ್ವಲ್ಪ ಮಟ್ಟಿನ ತಿಳುವಳಿಕೆ ಇದೆ. ಈ ಕೃಷಿಯನ್ನು ಮಾಡಿಸಿಯೂ ಮತ್ತು ಮಾಡಿಯೂ ಅನುಭವವೂ ಇದೆ. ಹಾಗೆ ಹೇಳುವುದಾದರೆ ಅದೊಂದು ದೊಡ್ಡ ಕಥೆ. ಒಂದು ಕಾಲದಲ್ಲಿ ನಮಗೆ ನೂರಾರು ಎಕರೆ ಇಂತಹ ಜಮೀನು ಇತ್ತು. ಇದರಿಂದ ನಮ್ಮನ್ನು ಜಮೀನ್ದಾರ ಎಂದು ಕರೆಯುತ್ತಿದ್ದರು. ಬೇಸಾಯ ಗೇಣಿದಾರರ ಮೂಲಕ ನಡೆಯುತ್ತಿತ್ತು (ಅಂದರೆ ನಮ್ಮ ಜಮೀನಿನಲ್ಲಿ ಬೇಸಾಯ ಮಾಡಿದ ರೈತ, ಖರ್ಚು ಕಳೆದು, ತನ್ನ ಪಾಲು ತೆಗೆದುಕೊಂಡು ಬಾಕಿಯನ್ನು ನಮಗೆ ಕೊಡುವುದಕ್ಕೆ ಗೇಣಿ ಎಂದೂ, ಹಾಗೆ ಬೆಳೆಯುವ ರೈತನನ್ನು ಗೇಣಿದಾರ ಎಂದು ಕರೆಯುತ್ತಾರೆ). ನನಗೆ ತಿಳುವಳಿಕೆ ಬಂದ ಲಾಗಾಯ್ತಿನಿಂದಲೂ ಗೇಣಿದಾರರು ಪ್ರತಿ ವರ್ಷ ಏನೋ ಕಷ್ಟ ಹೇಳಿ ಪೂರ್ತಿ ಭತ್ತ ಕೊಡುತ್ತಿರಲಿಲ್ಲ. ಏನು ಮಾಡುವುದು ಅವರಿಗೆ ಕಷ್ಟ ಇರುತ್ತದೆ ಎಂದು ಸುಮ್ಮನಿರುತ್ತಿದ್ದೆ. ಇಂತಹ ಬಾಕಿಯೇ ನೂರಾರು ಕ್ವಿಂಟಾಲ್ ಆಗುತ್ತದೆ. ನಂತರದ ದಿನಗಳಲ್ಲಿ ಗೇಣಿದಾರರಿಗೆ ಅನ್ಯಾಯ, ಉಳುವವನೇ ಹೊಲದೊಡೆಯ ಎಂದು ನಮ್ಮಂಥ ಜಮೀನ್ದಾರರ ಜಮೀನು ಕಿತ್ತುಕೊಂಡು ರೈತರಿಗೆ ಕೊಡಿಸಿದರು. ಯಾವುದೇ ತಕರಾರಿಲ್ಲದೆ ಭೂಸುಧಾರಣೆ ಕಾನೂನಿಂದ ಸರ್ಕಾರಕ್ಕೆ ಜಮೀನು ಕೊಟ್ಟು ಕೈಮುಗಿದು ಪರಿಹಾರಕ್ಕೆ ಹಲವು ವರ್ಷಗಳು ಕಾದೆನು. ರೈತರ ಹೆಗಲ ಮೇಲೆ ಸವಾರಿ ಎಂಬುವವರು "ಹೊರುವವನಿಗೆ ಹೆಗಲು ನೋವು ಕುಳಿತವನಿಗೆ ಕುಂಡೆ ನೋವು" ಎಂಬ ಗಾದೆಯೇ ಇದೆ, ಅದನ್ನು ಓದಿಯಾದರೂ ಅರ್ಥ ಮಾಡಿಕೊಳ್ಳಬೇಕಾಗಿತ್ತು. ಹಠಾತ್ತಾಗಿ ಎಲ್ಲಾ ಜಮೀನು ಕಿತ್ತುಕೊಂಡಾಗ ಅವರು ಹೇಗೆ ಜೀವನ ಮಾಡುತ್ತಾರೆ ಎಂದು ಯೋಚಿಸಬೇಕಾಗಿತ್ತು. ಇಷ್ಟರವರೆಗೂ ರೈತರಿಂದ ಭತ್ತದ ಪಾಲು ಸಿಕ್ಕಿರಲಿಲ್ಲ. ಹಾಗಾಗಿ ಅಂದು ಬಡವ, ಈಗ ಅವರೇನು ಹಳೆಯ ಬಾಕಿ ಕೊಡಲ್ಲ. ಹೊಸದಾಗಿ ಬರುವುದೂ ಇಲ್ಲ. ಜೀವನಕ್ಕೆ ಬೇರೆ ದಾರಿಯೇ ಇಲ್ಲ. ಆದ್ದರಿಂದ ಈಗ ಕಡು ಬಡವ. ಜಮೀನ್ದಾರ ನೆಂಬ ಬಿರುದು ಬಾಕಿ ಇರುವ ಜಮೀನಿನ ಕಂದಾಯ ಕಟ್ಟಲಷ್ಟೇ. ಎಲ್ಲಾ ಬಾಕಿಯನ್ನು ತಕ್ಷಣ ಕೊಡಲೇಬೇಕು ಎಂದು ಸರ್ಕಾರ ಜಪ್ತಿ ನೋಟೀಸ್ ಕೊಟ್ಟಿತ್ತು. ...ಎಂದು ನಿಟ್ಟುಸಿರು ಬಿಡುತ್ತಾ ಸುಮ್ಮನಾದರು .ಕೆಲವು ನಿಮಿಷಗಳ ತರುವಾಯ, ೨೫ ವರ್ಷಗಳ ನಂತರ ೮೦ ಎಕರೆ ಜಮೀನಿಗೆ ಬಂದ ಪರಿಹಾರವೇನೋ ಬಂದಿತು. ಬಂದದ್ದು ೫೫ ಸಾವಿರ, ಅದರಲ್ಲಿ ಹಳೇ ಕಂದಾಯದ ಬಾಕಿ, ಸರ್ಕಾರಿ ಅಧಿಕಾರಿಗಳಿಗೆ ಪಾಲು ಕೊಟ್ಟು ಉಳಿದದ್ದು ನಗಣ್ಯ. ಮತ್ತೆ ಮೌನ ...ಒಂದರ್ಧ ಗಂಟೆ ಶೂನ್ಯದತ್ತ ನೋಟ.

ಕಳೆದುಕೊಂಡ ವೈಭವದ ದಿನಗಳ ನೆನಪಿರಬಹುದು. ನಾನು ಕೇಳಿ ಬೇಸರ ಮಾಡಿದನೇ ಎಂದು ನೊಂದುಕೊಂಡೆ. ಕಳೆದುಕೊಂಡ ಆಸ್ತಿಯ ಬಗ್ಗೆ ಮಾತನಾಡಿ ಅವರಿಗೆ ನೋವು ಕೊಡುವ ಆಸೆ ನನ್ನದಾಗಿರಲಿಲ್ಲ. ಆದ್ದರಿಂದ ಆ ಬಗ್ಗೆ ಇನ್ನು ಮಾತನಾಡುವುದು ಬೇಡ ಎಂದು ಸುಮ್ಮನಾದೆ. ಸ್ವಲ್ಪ ಹೊತ್ತಿನ ನಂತರ ಆತಂಕದ ಜೊತೆ ಕೇವಲ ಕ್ಷೇಮ ಸಮಾಚಾರದ ಸಂಭಾಷಣೆಯ ಕಡೆಗೆ ಗಮನ ಕೊಟ್ಟೆ. ಮಾತಿನ ಮೊದಲು ನಾನು ದಡ್ಡ, ಏನು ತಿಳಿಯದು ಎಂದು ಪ್ರಾರಂಭಿಸುವ ಈ ಹಿರಿಯರಿಂದ ತಿಳಿಯಬೇಕಾದ್ದು ಬಹಳ ಇದೆ. ಕುತೂಹಲದ ವ್ಯಕ್ತಿಯೂ ಹೌದು ಎಂದುಕೊಂಡೆ. ಅವರೊಂದಿಗೆ ಮುಂದಿನ ಸಂಭಾಷಣೆಯಲ್ಲಿ ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ಯಜಮಾನರಿಗೆ ೪ ಹೆಣ್ಣು ೪ ಗಂಡು, ಮನೆಗೆ ಬಂಧುಗಳು ಹೆಚ್ಚು, ಬರೋರು ಹೋಗೋರು ಸದಾ. ದಾನ-ಧರ್ಮ ಪೂಜೆ ಎಲ್ಲವೂ ಹೆಚ್ಚು. ಖರ್ಚಿಗೇನೂ ಕಡಿಮೆ ಇಲ್ಲ, ಆದರೆ ಖರ್ಚಿಗೆ ದುಡ್ಡಿಲ್ಲ. ರೈತರು ಗೇಣಿಯನ್ನು ಸರಿಯಾಗಿ ಕೊಟ್ಟಿದ್ರೆ ಇವರು ನಿಜವಾಗಲೂ ಸಾಹುಕಾರರೇ, ಆದರೆ ರೈತರಿಂದ ಎಂದೂ ಖಡಕ್ಕಾಗಿ ಮಾತನಾಡಿ ವಸೂಲಿ ಮಾಡೋಕೆ ಆಗಲಿಲ್ಲ. ಇಂತಹ ಒಳ್ಳೆತನ ಯಾವಾಗಲೂ ಉಪಯೋಗಕ್ಕೆ ಬಾರದು. ಅಲ್ಲವೇ.

ಈವರೆಗೂ ಮಾತಿನ ಮಧ್ಯೆ ತಿಳಿದದ್ದು ಹೇಳುವುದಾದರೆ ಸೂರಪ್ಪನವರು ಓದಿದ್ದು ಅಷ್ಟಕಷ್ಟೇ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಮಗು. ತಾಯಿಗೆ ಮಗನನ್ನು ದೂರವಿಟ್ಟು ಓದಿಸಲು ಆತಂಕ, ಭಯ. ಜೊತೆಗೆ ಆ ಕಾಲದಲ್ಲಿ ಶಾಲೆಗಳಿಗೆ ಹೋಗುವುದೇ ಕಷ್ಟ. ಇತ್ತ ಶಾಲೆ ದೂರ, ಅತ್ತ ಆಸಕ್ತಿಯಿಲ್ಲ. ಈ ನಡುವೆಯೂ ಎರಡನೇ ತರಗತಿ ಮುಗಿಸಿದ್ದೇ ದೊಡ್ಡದಾಗಿತ್ತು. ಬೇಕಾದಷ್ಟು ಜಮೀನಿದೆ, ಅದನ್ನು ನೋಡಿಕೊಂಡರೆ ಸಾಕು ಎಂಬ ಮನೋಭಾವ ಹಿರಿಯರದು. ಅಂದಿನ ಕಾಲದಲ್ಲಿ ಶಾಲೆಗೆ ಹೋಗದಿದ್ದರೂ ಸುತ್ತಮುತ್ತಲಿನ ಜನಗಳ ಮಧ್ಯೆ ಅನೇಕ ಪಾಠಗಳನ್ನು ಕಲಿಯಬಹುದಾಗಿತ್ತು ಎಂಬುದಕ್ಕೆ ಇವರೇ ಸೃಷ್ಪವಾದ ಉದಾಹರಣೆ. ಪರರಿಗೆ ತೊಂದರೆ ಕೊಡದೆ, ಸಮಾಜಕ್ಕೆ ಸಹಾಯವಾಗುವಂತೆ, ನಡೆದುಕೊಳ್ಳುವ ಪ್ರಾಮಾಣಿಕ ಜೀವನವೇ ವಿದ್ಯಾಭ್ಯಾಸ ಎಂಬುದಾಗಿತ್ತು. ಇನ್ನು ಇತರರೊಂದಿಗೆ ಹೊಂದಿಕೊಂಡು ಹೋಗುವುದು, ನಡೆ ನುಡಿಗಳಲ್ಲಿ ಗಂಭೀರತೆ, ಮಾತಿನ ಮಧ್ಯೆ ಶ್ಲೋಕಗಳು ಗಾದೆಗಳು, ಹಿರಿಯರೊಂದಿಗೆ ವಿಶ್ವಾಸ, ಗೌರವದಿಂದ ನಡೆದುಕೊಳ್ಳುವುದು, ಧಾರ್ಮಿಕವಾಗಿ ಪೂಜೆ ಪುನಸ್ಕಾರ ಇಷ್ಟಾದರೆ ಸಾಕು, ಅದುವೇ ಇವರ ಬದುಕಿನ ಗುರಿ. ತಪ್ಪು ಸರಿಗಳ ವ್ಯತ್ಯಾಸ ಅರಿತಿದ್ದರೂ ಸಾಕಷ್ಟು ವಿದ್ಯಾಭ್ಯಾಸ ಇಲ್ಲದಿದ್ದುದರಿಂದ ಮತ್ತು ಮಾತನಾಡುವಾಗ ಉಗ್ಗುವಿಕೆ ಇದ್ದುದರಿಂದ, ಕೇಳಿದ ತಕ್ಷಣ ಇವರಿಂದ ಉತ್ತರ ಬಾರದಿರುವುದನ್ನು ಕಂಡು ಇವರನ್ನು ದಡ್ಡನೆಂದೇ ಪರಿಗಣಿಸಿದ್ದರು. ಹೀಗೆ ದಡ್ಡ, ತಿಳುವಳಿಕೆಯಿಲ್ಲ ಎಂಬ ಪರರ ಮಾತುಗಳನ್ನು ಕೇಳಿ ಕೇಳಿ ಅದನ್ನು ಇವರೂ ಪೂರ್ತಿಯಾಗಿ ನಂಬಿದ್ದಾರೆ. ಸಾಲದೆಂದು ಮಾತಿನ ಮಧ್ಯೆ ನಾನು ದಡ್ಡ, ನನಗೆ ಗೊತ್ತಾಗುವುದಿಲ್ಲ ಎಂಬ ಕೀಳರಿಮೆಯೂ ಇದೆ. ಎರಡೇ ಶಬ್ದಗಳಲ್ಲಿ ಹೇಳುವುದಾದರೆ ಇವರು ಪ್ರಾಮಾಣಿಕ, ಸತ್ಯವಂತ ಸ್ವಲ್ಪ ಮಟ್ಟಿಗೆ ಮುಗ್ಧ ಎನ್ನಬಹುದು. ಗಮನಾರ್ಹ ವಿಷಯವೆನ್ನುವುದಾದರೆ, ಅವರೊಂದಿಗಿನ ನಾಲ್ಕು ದಿನಗಳಲ್ಲಿ ಅವರು ಮಾತುಮಾತಿಗೆ ಬಳಸುವ ಸಮಯೋಚಿತ ಗಾದೆ, ಬುದ್ಧಿ ಮಾತುಗಳ ಬಳಕೆ ರೀತಿಯ ಬಗ್ಗೆ ಕೆಲವು ವಿಷಯಗಳನ್ನು ಹೇಳದಿದ್ದರೆ ತಪ್ಪಾಗುತ್ತದೆ.

ನಮ್ಮಿಂದ ಉಪಯೋಗಕ್ಕಾಗಿ ಬೇರೆಯವರು ಹೊಗಳಿದಾಗ ಆ ಸಂದರ್ಭಕ್ಕೆ ಇವರು ಬಳಸಿದ ಗಾದೆ "ಸರಿ, ಸರಿ ಇದ್ದರೆ ಪರಿ ಪರಿ ನೆಂಟರು. ಸರಿ, ಸರಿ ಇರದಿರೆ ಪರಿ ಪರಿ ಕಾಡ್ವರು" ಕೃತಘ್ನ ಜನಗಳಿಗೆ ಈ ಗಾದೆ ಎಷ್ಟು ಚೆನ್ನಾಗಿ ಅನ್ವಯವಾಗುತ್ತದೆ ಅಲ್ಲವೇ. ಅಂತೆಯೇ ಸಂಬಂಧ ವಿಲ್ಲದ ವಿಷಯಗಳನ್ನು ಚರ್ಚೆ ಮಾಡಿದಾಗ ಅವರಿಂದ ಬಂದ ವಾಕ್ಯ "ಊರಿಗೋಗದ ದಾರಿ ಕೇಳಿ ಮಾಡುವುದೇನು" ಎನ್ನುವರು. ಅವರ ವಿಷಯ ನಮಗೇಕೆ ಎಂಬಲ್ಲಿ "ಘೋಡಾ ಹೈ, ಮೈದಾನ ಹೈ" ಎಂದು ಹಿಂದಿಯ ವಾಕ್ಯವನ್ನು ಹೇಳಿ, ಸುಮ್ಮನಿರಿಸುವರು. ಬಸ್ ನಲ್ಲಿ ಇಬ್ಬರು ಯಾವುದೋ ವಿಷಯಕ್ಕೆ ಸೋಲೊಪ್ಪದ ವಾದ ಮಾಡುತ್ತಿರುವಾಗ ಅವರ ಬಾಯಿಂದ ಬರುವ ಸರಳ ವಾಕ್ಯ "ಒಬ್ಬರು ಸಿಎಂ, ಮತ್ತೊಬ್ಬರು ಪಿಎಂ, ಏನ್ ಮಾಡೋದಪ್ಪ" ಎಂದು ಹೇಳುವರು. ಯಾತ್ರಾ ಕಾರ್ಯಕ್ರಮದಲ್ಲಿ ಒಂದೇ ವಿಷಯದ ಬಗ್ಗೆ  ಬಸ್ಸಿನ ಚಾಲಕ, ನಿರ್ದೇಶಕರ ತೀರ್ಮಾನ ಬೇರೆಬೇರೆ ಆದಾಗ ಇವರ ಒಂದೇ ಮಾತು "ಒಂದು ಕತ್ತಿಗೆ ಒಂದೇ ಹಿಡಿ ಇರಬೇಕು ಎರಡು ಹಿಡಿ ಆಗಬಾರದು" ಎಂದಿದ್ದು ಎಷ್ಟು ಸೊಗಸಾಗಿದೆ ಎನಿಸಿತು. ಸರಿಯಾದ ವೇಳೆಗೆ ಬರಬೇಕು ಎಂದು ಹೇಳಿದರೂ ಕೇಳದೆ ಒಬ್ಬರು ಪದೇ ಪದೇ ಅದನ್ನು ಹೇಳಿಸಿ ಕೊಳ್ಳುತ್ತಿದ್ದರು. ಆಗ ಬಳಸಿದ ಇವರ ನುಡಿಮುತ್ತು: "ಬಾಳಿಗೊಂದು ಮಾತು ಬಾಳೆಗೆ ಒಂದೇ ಗೊನೆ" ಎಂದಾಗ ಅಂದೇ ಗೊತ್ತಾಗಿದ್ದು ನನಗೆ, ಬಾಳೆಯ ಮರಕ್ಕೆ ಒಂದೇ ಗೊನೆ ಬರುವುದು ಎಂದು. ಸಹ ಪ್ರಯಾಣಿಕ ದಂಪತಿಯಲ್ಲಿ ಹೆಂಡತಿ ಏನೋ ಹೇಳಿದ ಖಡಕ್ ಮಾತಿಗೆ ಇವರ ಪ್ರತಿಕ್ರಿಯೆ "ಸ್ಟಾಂಡ್ ಅಪ್ ಆನ್ ದಿ ಬೆಂಚ್", ಎಂಬ ಇಂಗ್ಲಿಷ್ ವಾಕ್ಯ. ಕನ್ನಡ ಶಾಲೆಯನ್ನೇ ಪೂರ್ತಿ ಮುಗಿಸದ ಇವರ ಮಾತಿನ ಮಧ್ಯೆ ಹಿಂದಿ, ಇಂಗ್ಲೀಷ್ ಪದಗಳ ಲೀಲಾಜಾಲ ಪ್ರಯೋಗ ಅದ್ಭುತವೆನಿಸಿತು.

ಯಾವುದೋ ವಿಷಯದಲ್ಲಿ ತಮ್ಮನ್ನು ನಿಕೃಷ್ಟ ಮಾಡಿದಾಗ, ತಾನು ಹೇಗೂ "D-O-G" ಎಂದು ಬಿಡಿಬಿಡಿಯಾಗಿ ಹೇಳಿದ್ದನ್ನು ಕೇಳಿ ಎಲ್ಲರೂ ಡಾಗ್ ಎಂದು ನಕ್ಕರೂ ದಯವಿಟ್ಟು ಹಾಗನ್ನಬೇಡಿ ಎಂದರು. ತಾನು ಏನೂ ಓದಿಲ್ಲ, ತನಗೇನೂ ತಿಳಿಯದು ಎಂಬ ಇವರ ಮಾತಿನ ಭಾವ, ಇವರು ತೀರ ನಿರಭಿಮಾನಿ, ಸರಳ ವ್ಯಕ್ತಿ ಎನಿಸಿತು.
 
ಸಹ ಪ್ರಯಾಣಿಕರೊಬ್ಬರು ಯಾವಾಗ ಅಂಗಡಿಗೆ ಬಂದರೂ ಬರುವಾಗ ರೂಮಿನಲ್ಲೋ, ಬಸ್ ನಲ್ಲಿರುವ ಬ್ಯಾಗ್ ನಲ್ಲೋ ಪರ್ಸ್ ಬಿಟ್ಟು ಬರುವುದು, ಏನಾದರೂ ವ್ಯಾಪಾರ ಮಾಡಿ ಪಕ್ಕದವರಿಂದ ಸಾಲ ಕೇಳುವುದು, ನಂತರ ಅದನ್ನು ವಾಪಸ್ ಕೊಟ್ಟರೂ ಆ ನಿಮಿಷಕ್ಕೆ ಅವರಲ್ಲಿ ಹಣವಿಲ್ಲ. ಇಂತಹ ಎಲ್ಲಾ ಇದ್ದರೂ ಏನು ಉಪಯೋಗ ಬಾರದ ಸನ್ನಿವೇಶಕ್ಕೆ ಇವರ ಗಾದೆ ತೀರಾ ಗಂಭೀರ: "ಒಡವೆ ಇದ್ದರೂ ಬಡವಿ, ದೈವ ಇದ್ದರೂ ದರಿದ್ರ, ಗಂಡ ಇದ್ದರೂ ಮುಂಡೆ", ಈ ಸಾಲು ನನಗೆ ಎರಡು ಮೂರು ದಿನಗಳ ಕಾಲ ಯೋಚನೆ ಮಾಡುವಂತಾಯಿತು. ಎರಡು ರೀತಿಯಿಂದ ನಷ್ಟವಾಗುವ ಬಾಬತ್ತಿನಲ್ಲಿ ಇವರು ಗ್ರಾಮ್ಯ ಭಾಷೆಯಲ್ಲಿ ಬಳಸಿದ ಮಾತು "ಗಂಡ ಸತ್ತ ದುಃಖ ಬೇರೆ, ಮೊಂಡು ಗತ್ತಿ ಉರಿ ಬೇರೆ" ಇದರ ವ್ಯಾಖ್ಯಾನವೇ ಇನ್ನೊಂದು ಕಥೆಯಾಗುತ್ತದೆ. ಹಿಂದಿನ ಕಾಲದ ಸಂಪ್ರದಾಯಸ್ಥ ಬ್ರಾಹ್ಮಣರಲ್ಲಿ ಗಂಡ ಮೃತನಾದಾಗ ದುಃಖ ತಪ್ತಳಾದ ಹೆಂಡತಿಯ ಕೇಶಮುಂಡನ ಮಾಡುತ್ತಿದ್ದರು ಈ ವೇಳೆಯಲ್ಲಿ ಮೊಂಡು ಕತ್ತಿಯ ಬಳಕೆಯಾದಾಗ ತಲೆಯ ಮೇಲೆ ಆಗುವ ಗಾಯಗಳ ನೋವು, ಎರಡೇ ಸಾಲಿನಲ್ಲಿ. ಇಂತಹ ಹಲವಾರು ಗಾದೆಗಳು ನಾಲ್ಕು ದಿನಗಳಲ್ಲಿ ಮಿಂಚಿನಂತೆ ಬಂದು ಹೋದವು. ಯಾವುದೂ ತಕ್ಷಣ ನೆನಪಿಗೆ ಬರುತ್ತಿಲ್ಲ, ಬರೆದೂ ಕೊಳ್ಳಲಾಗಲಿಲ್ಲ.

ಇಷ್ಟೆಲ್ಲಾ ಪರಿಸ್ಥಿತಿಗಳ ಮಧ್ಯೆಯೂ ಅತ್ಯಂತ ಸಮಾಧಾನದ ಅವರ ತೃಪ್ತಿಯ ಮಾತು ಕೇಳಲು ಹಿತಕರ. ಎಲ್ಲಾ ಹೆಣ್ಣು ಗಂಡು ಮಕ್ಕಳ ಮದುವೆ ಮುಗಿದಿದೆ. ಮೊಮ್ಮಕ್ಕಳನ್ನೂ ಕಂಡಿದ್ದೇನೆ. ದೊಡ್ಡ ಮಗ ಊರಲ್ಲಿ ಇರೋ ಎರಡೆಕರೆ ಭತ್ತ ಅಡಿಕೆ ಕೃಷಿ ಮಾಡಿಕೊಂಡಿದ್ದಾನೆ. ಉಳಿದ ಗಂಡು ಮಕ್ಕಳು ನಗರದಲ್ಲಿ ಕೆಲಸದಲ್ಲಿದ್ದಾರೆ. ಸುಖವಾಗಿದ್ದಾರೆ. ತನ್ನ ಬೇಕು-ಬೇಡಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ತಾನು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಶಸ್ತ್ಯ ನೀಡದಿದ್ದ ಪಶ್ಚಾತ್ತಾಪ ಇದ್ದರೂ ಇರುವ ಪರಿಸ್ಥಿತಿಯಲ್ಲಿಯೇ ಎಲ್ಲರೂ ಒಂದು ಘಟ್ಟವನ್ನು ಹತ್ತಿದ್ದು ತುಂಬಾ ಸಂತೋಷವನ್ನೂ ತಂದಿದೆ ಎಂಬ ಅವರ ತುಂಬು ಹೃದಯದ ಆನಂದ ಭಾಷ್ಪ ದೊಂದಿಗೆ ಬಂದ ಹರ್ಷದ ಮಾತು ನನಗೆ ಖುಷಿಯೆನಿಸಿತು. ಇದೇ ಅಲ್ಲವೇ ಮಕ್ಕಳಿಗೆ ಕೊಡುವ ನೆಮ್ಮದಿಯ ಪಾರಿತೋಷಕ. ಹೀಗೆ ಮನದಲ್ಲಿನ ಯೋಚನೆ ಯಲ್ಲಿ ಉಡುಪಿಗೆ ಬಂದಿದ್ದೇ ಗೊತ್ತಾಗಲಿಲ್ಲ.

ಉಡುಪಿಯಲ್ಲಿ ಅಷ್ಟಮಠಗಳು ಶ್ರೀಕೃಷ್ಣನ ದೇವಾಲಯ ಕನಕನ ಕಿಂಡಿ ದರ್ಶನಗಳ ನಂತರ ಮಠದಲ್ಲಿ ಭೋಜನವನ್ನು ಪೂರೈಸಿ ಮಂಗಳೂರಿನತ್ತ ಪ್ರಯಾಣ. ಸಂಜೆ ಪಣಂಬೂರು ಬೀಚ್ ರಾತ್ರಿ ಗೋಕರ್ಣನಾಥ ದೇವಾಲಯ, ಸ್ವಾಗತದಲ್ಲಿ ಎತ್ತರದ ಎರಡು ಆನೆಯ ಪ್ರತಿಮೆಗಳು, ನಂತರ ಮಂಗಳಾದೇವಿ ದೇವಾಲಯದಲ್ಲಿ ಪೂಜೆ. ರಾತ್ರಿ ಹೋಟೆಲ್ ನಲ್ಲಿ ವಾಸ್ತವ್ಯ.

ಈಗ ಧರ್ಮಸ್ಥಳದತ್ತ ಹೊರಟಿದೆ ನಮ್ಮ ಸವಾರಿ. ಮಾರ್ಗಮಧ್ಯೆ  ಈ ರಾಯರಿಂದ ಹಿಂದೆ ಇದ್ದ ಧರ್ಮಸ್ಥಳದ ರತ್ನವರ್ಮ ಹೆಗ್ಗಡೆಯವರ ಗುಣಗಾನ, ನಂತರ ವೀರೇಂದ್ರ ಹೆಗ್ಗಡೆಯವರ ಅಧಿಕಾರದಲ್ಲಿ ಜನಗಳು ಭಕ್ತಾದಿಗಳು ಕೊಡುತ್ತಿರುವ ಸಮಾಧಾನದ ಅಭಿಪ್ರಾಯಗಳು, ಜನರು ಶ್ರೀಕ್ಷೇತ್ರಕ್ಕೆ ನಡೆದುಕೊಳ್ಳುವ ರೀತಿ, ಇಲ್ಲಿಯ ಮಂಜುನಾಥ ದೇವರಲ್ಲಿ ಹರಕೆಹೊತ್ತರೆ ನಡೆಸಲೇಬೇಕು ಎಂಬ ನಂಬಿಕೆ. ಈ ದೇವರ ಹೆಸರೇ "ಮಾತು ಬಿಡ ಮಂಜುನಾಥ". ಅನ್ನದಾನಕ್ಕೆ ಪ್ರಸಿದ್ಧವಾದ ಈ ದೇವಾಲಯದಲ್ಲಿ ಶಿವನು ಮಂಜುನಾಥ ಎಂದು ಪೂಜಿಸಲ್ಪಡುತ್ತಿದ್ದಾನೆ. ಇಲ್ಲಿಯ ಧರ್ಮಾಧಿಕಾರಿಗಳಾಗಿ ಶ್ರೀ ವೀರೇಂದ್ರ ಹೆಗ್ಗಡೆಯವರು ಸೇವೆ ಮಾಡುತ್ತಿದ್ದಾರೆ.ಈ ಅತ್ಯಂತ ಪ್ರಾಚೀನ ಯಾತ್ರಾಸ್ಥಳವನ್ನು ನೋಡಲು ಸದಾ ಭಕ್ತಾದಿಗಳು ತುಂಬಿರುತ್ತಾರೆ. ಶ್ರೀ ಮಂಜುನಾಥ ಪ್ರಸಾದವೇ ಮಧ್ಯಾಹ್ನದ ಭೋಜನ. ನಮ್ಮ ಯಾತ್ರೆ ಮುಗಿಯುತ್ತಿದೆ. ಮುಂದಿನ ಸ್ಥಳ ಕುಕ್ಕೆ ನಾಗ ಕ್ಷೇತ್ರ.

ಕುಕ್ಕೆ ಸುಬ್ರಮಣ್ಯ ದೇವಾಲಯವು ಊರಿನ ಮಧ್ಯದಲ್ಲಿದ್ದು, ನದಿ-ಕಾಡು-ಪರ್ವತಗಳಿಂದ ಆವೃತವಾಗಿದ್ದು, ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಭಾಷ್ಯದಂತಿದೆ. ಶ್ರೀ ಸುಬ್ರಹ್ಮಣ್ಯ ದೇವರು ಇಲ್ಲಿಯ ದೇವಳದ ಪ್ರಧಾನ ದೇವತೆ. ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದೆ. ಭಕ್ತಾದಿಗಳು ಮುಖ್ಯ ಗೋಪುರವಿರುವ ಪಶ್ಚಿಮ ಬಾಗಿಲಿನಿಂದ ಪ್ರವೇಶಿಸಿ ಒಳಸುತ್ತನ್ನು ಪೂರ್ವ ಬಾಗಿಲಿನಿಂದ ಮುಂದುವರೆಸುತ್ತಾರೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಮೂರ್ತಿಯಿದೆ. ಅದರ ಮೇಲಿನ ಹಂತದಲ್ಲಿ ಈಶ್ವರ ಪುತ್ರ ಶ್ರೀ ಸುಬ್ರಹ್ಮಣ್ಯ ಮೂರ್ತಿ ಮತ್ತು ವಾಸುಕಿ ಹಾಗೂ ಕೆಳ ಹಂತದಲ್ಲಿ ಆದಿಶೇಷನ ಮೂರ್ತಿಗಳಿವೆ. ಇದೊಂದು ನಾಗಾರಾಧನೆಯ ಸ್ಥಳ. ರಾತ್ರಿಯ ಊಟವನ್ನು ಪೂರೈಸಿ ಪ್ರಯಾಣವನ್ನು ಮುಂದುವರಿಸಿ ಬೆಳಗ್ಗೆ ನಗರವನ್ನು ಸೇರಿದವು. ತಮ್ಮ ತಂದೆತಾಯಿಗಳನ್ನು ಕರೆದೊಯ್ಯಲು ಆಗಲೇ ರಘು ಕಾಯುತ್ತಿದ್ದ. ಹೇಗಿತ್ತು ಪ್ರಯಾಣ ನಮ್ಮ ತಂದೆ-ತಾಯಂದಿರಿಂದ ತೊಂದರೆಯಾಯಿತೇ ಎಂಬ ಪ್ರಶ್ನೆಯ ಮೂಲಕ ಅವರನ್ನು ಸುಖವಾಗಿ ಯಾತ್ರೆ ಮಾಡಿಸಿದನೆಂದು ಕೃತಜ್ಞತೆ ಹೇಳಿದ. ಹೊರಡುವ ಮುನ್ನ ನಾನು ಸೂರಪ್ಪ ನವರಿಗೆ ಕೈಮುಗಿದು, ಯಜಮಾನರೇ, ಹೋದ ಮತ್ತು ಬಂದ ರಾತ್ರಿಯನ್ನು ಬಿಟ್ಟರೆ ನಮ್ಮದು ಮೂರು ದಿನಗಳ ಯಾತ್ರೆ, ಇದರಲ್ಲಿ ತಮ್ಮಿಂದ ಅನೇಕ ವಿಚಾರಗಳನ್ನು ತಿಳಿದೆ, ಕಲಿತೆ. ಖುಷಿ ಆಯಿತು. ಎಂದು ಕೈಮುಗಿದೆ. ಅಯ್ಯೋ ನಾನು ದಡ್ಡ, ನನ್ನ ಬಳಿ ಏನು ಸಿಗುತ್ತದೆ ಕಲಿಯಲು, ಆದರೂ ಕಲಿತೆ, ಸಂತೋಷ ಆಯಿತು ಎಂದಿರಿ, ಇದೇ ಅಲ್ವಾ ಮೂರು ದಿನಗಳ ಜೀವನ, ಎಂದು ಉಗ್ಗುತ್ತಾ ಹೇಳಿದ ಅವರ ಮಾತು ದೊಡ್ಡ ಅಧ್ಯಾತ್ಮದ ಸಾಲುಗಳಾಗಿ ಹೃದಯ ತುಂಬಿಸಿತು. ತಕ್ಷಣ ನನಗೆ ನೆನಪಿಗೆ ಬಂದ ಸಾಲು 

ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೇನಿಲ್ಲ ಸುಳ್ಳು, ಹುಟ್ಟು ಸಾವು ಎರಡರ ನಡುವೆ ಮೂರು ದಿನದ ಬಾಳು ಎಂಬ ಚಿ. ಉದಯಶಂಕರ್ ರವರ ಅರ್ಥಪೂರ್ಣ ಸಿನಿಮಾ ಹಾಡು.

ಅವರನ್ನು ಬೀಳ್ಕೊಂಡು ನಮ್ಮ ಮನೆಗೆ ತೆರಳಿದೆ. ನಂತರದ ದಿನಗಳಲ್ಲಿ ನಾನು ಕಚೇರಿ ಕೆಲಸದ ಮೇಲೆ ಬೇರೆ ರಾಜ್ಯಕ್ಕೆ ಹೋಗ ಬೇಕಾಯಿತು. ಕೆಲಸದ ಮಧ್ಯೆ ಈ ಪ್ರಯಾಣ ಮರೆತೂ ಹೋಯಿತು.

ಸುಮಾರು ಆರು ತಿಂಗಳ ನಂತರ ದಕ್ಷಿಣ ಭಾರತ ಯಾತ್ರೆ ಹೋಗುವ ಬಗ್ಗೆ ಯೋಚಿಸುತ್ತಿದ್ದೆವು. ಹಿಂದಿನ ಬಾರಿ ಸೂರಪ್ಪ ನವರ ಒಳ್ಳೆಯ ಕಂಪನಿ ಇದ್ದುದರಿಂದ ಅವರು ಬಂದರೆ ಅವರನ್ನೂ ಕರೆದುಕೊಂಡು ಹೋಗುವ ಇರಾದೆ. ಮಿತ್ರ ರಘುವನ್ನು ಭೇಟಿಯಾದೆ. ಆ ಬಗ್ಗೆ ವಿಚಾರಿಸಲಾಗಿ ಎರಡು ತಿಂಗಳ ಹಿಂದೆಯೇ ಅವರನ್ನು ಕಳೆದುಕೊಂಡ ಬಗ್ಗೆ ದುಃಖದಿಂದ ತಿಳಿಸಿದನು. ನಾನು ನೊಂದುಕೊಂಡೆ. ಅವರೊಂದಿಗೆ ನಾನು ನಡೆಸಿದ ಸಂಭಾಷಣೆ ಅವರ ಬಗ್ಗೆ ತಿಳಿಸುತ್ತಾ, ಅವರ ಬಗ್ಗೆ  ನನಗಿರುವ ಅಪಾರ ಗೌರವ, ಅಭಿಪ್ರಾಯಗಳನ್ನು  ತಿಳಿಸಿದೆ. ಆಗ ಈ ಕೆಳಗಿನ ಇನ್ನೆರಡು ಕುತೂಹಲದ ವಿಷಯ ತಿಳಿಸಿದ.

ಕೆಲವು ಸಮಯದ ಹಿಂದೆ ಅವರು ಊರಿನ ತೋಟದಲ್ಲಿ ಗಡಿಯ ಕುರಿತಾಗಿ ಇಬ್ಬರು ಬಲಿಷ್ಠರ ಮಧ್ಯೆ ಜಗಳವಾಗುತ್ತಿತ್ತು. ಮೊದಲನೆಯವರು ತೋಟಕ್ಕೆ ಬರುತಿದ್ದ ಮಂಗನನ್ನು ಹೆದರಿಸಲು ಕೋವಿಯನ್ನು ತಂದಿದ್ದರು. ಜಗಳವು ಗಂಭೀರವಾದಾಗ ಈ ಸೂರಪ್ಪನವರು ಅವರಿಬ್ಬರಿಗೂ ಸಮಾಧಾನ ಹೇಳಿ ಜಗಳವನ್ನು ನಿಲ್ಲಿಸಿದ್ದರು. ಆದರೆ ನಂತರದ ಕೆಲವು ದಿನಗಳಲ್ಲಿ ಕೋರ್ಟ್ನಿಂದ ಸಾಕ್ಷಿ ಹೇಳಲು ಸಮನ್ ಬಂದಿತ್ತು. ಜಗಳದ ಮಧ್ಯೆ ಮೊದಲನೆಯವರು ಎರಡನೆಯವನ್ನು ಕೊಲ್ಲಲು ಗುರಿಯಿಟ್ಟಿದ್ದಾಗಿ, ಜಗಳ ನಡೆದಾಗ ಸೂರಪ್ಪನು ಅಲ್ಲಿದ್ದುದರಿಂದ ಅವನು ನೋಡಿದ್ದಾನೆಂದು ಪ್ರಕರಣವು  ಕೋರ್ಟ್ನಲ್ಲಿ ಎದುರಾಳಿಯಿಂದ ರಿಜಿಸ್ಟರ್ ಆಗಿತ್ತು. ಅದು ಹಾಗೆ ನಡೆಯದಿದ್ದರೂ ಇದಕ್ಕೆ ಸಂಬಂಧಪಟ್ಟಂತೆ ಕೋರ್ಟ್ಗೆ ಹೋಗಲೇಬೇಕಾಗಿತ್ತು. ಬಸ್ಸು ಇಲ್ಲದ ಕಾಲ. ತಿಂಗಳಿಗೊಮ್ಮೆ ಮುಂದಿನ ಹಿಯರಿಂಗ್ ಯಾವಾಗ ಎಂದು ತಿಳಿದುಕೊಳ್ಳಲು ಆರು ಕಿಲೋಮೀಟರ್ ದೂರದ ಕೋರ್ಟ್ಗೆ ಬೆಳಗ್ಗೆಯೇ ನಡೆದು ಹೋಗಬೇಕು. ಯಾವಾಗ ತಮ್ಮ ಕೇಸ್ ಬರುವುದು ಎಂದು ಕಾಯುವುದು. ಕಾಯೋದು, ಊಟವಿಲ್ಲದೆ ಸಂಜೆಯ ವೇಳೆಗೆ ಮನೆಗೆ ವಾಪಸ್ ಬರುವುದು. ಹೀಗೆ ಸುಮಾರು ಒಂಬತ್ತು ವರ್ಷ ನಡೆದ ನಂತರದ ಒಂದು ಹಿಯರಿಂಗ್. ಮುಖ್ಯ ಸಾಕ್ಷಿ ಸೂರಪ್ಪಗೆ ಮರುದಿನ ಬರಲೇ ಬೇಕೆಂದು ಕೋರ್ಟ್ ನ ತಾಕೀತು. ಮೊದಲನೆಯವರಿಗೆ ಈ ಸೂರಪ್ಪ ಎಂದೂ ಸುಳ್ಳು ಹೇಳಿಲ್ಲ, ಈಗಲೂ ಹೇಳುವುದಿಲ್ಲ ಎಂಬ ಧೃಡ ನಂಬಿಕೆ. ಆ ದಿನ ಸೂರಪ್ಪನನ್ನು ಕರೆದೊಯ್ಯಲು ಅವರ ಮನೆಗೆ ಕಾರು ತಂದಿದ್ದರು ಆದರೆ ಆ ವೇಳೆಗೆ ಅವರು ನಡೆದೇ ಹೊರಟಾಗಿತ್ತು. ಮಾರ್ಗಮಧ್ಯದಲ್ಲಿ ಎದುರಾಳಿಯ ಕಾರು ನಡೆದುಹೋಗುತ್ತಿದ್ದ ಸೂರಪ್ಪನನ್ನು ಬರುವುದಿಲ್ಲ ಎಂದರೂ ಒತ್ತಾಯದಿಂದ ಹತ್ತಿಸಿ ಕೊಂಡಿದ್ದನ್ನು ಮೊದಲನೆಯವರು ನೋಡಿದರು. ಈ ಕಾರು ಪ್ರಯಾಣದ ಆಮಿಷದಿಂದ ಸೂರಪ್ಪ ಏನಾದರೂ ಅವರ ಪರವಾಗಿಯೇ ಸಾಕ್ಷಿ ಹೇಳಿಬಿಡುವನೇ ಎಂಬ ಆತಂಕ. ಕೋರ್ಟಿನಲ್ಲಿ ಮೊದಲ ಹಿಯರಿಂಗ್ ಇವರದೇ. ಸೂರಪ್ಪ ಸೂರಪ್ಪ ಸೂರಪ್ಪ, ಎಂದು ಕೇಳುತ್ತಿದ್ದಂತೆಯೇ ಮೊದಲನೆಯವರಿಗೆ ಎದೆ ಡವಡವ. ಸೂರಪ್ಪನಿಗೆ ಪ್ರಶ್ನೆ ಪ್ರಾರಂಭ. ಆದಿನ ಇವರಿಬ್ಬರಿಗೂ ಜಗಳವಾಯಿತೇ - ಹೌದು, ತಾವು ಅಲ್ಲೇ ಇದ್ದಿರಾ - ಹೌದು, ಆ ದಿನ ಅವರ ಬಳಿ ಕೋವಿ ಇದ್ದಿತೇ - ಹೌದು. ಜಗಳದ ಮಧ್ಯೆ ಎದುರಾಳಿಯನ್ನು ಕೊಲ್ಲಲು ಅವರು ಪ್ರಯತ್ನಿಸಿದರಾ - ....., ಮೊದಲನೆಯವರಿಗೆ ಮಾಡಿದ ಊಟ ಬಾಯಿಗೆ ಬಂದಿತ್ತು. ಸೂರಪ್ಪನ ಉತ್ತರಕ್ಕಾಗಿ ಇಡೀ ಕೋರ್ಟಿಗೆ ಕಿವಿ ದೊಡ್ಡದಾಗಿತ್ತು. ಉತ್ತರ 'ಇಲ್ಲ' ಎಂದಾಗ ಎಲ್ಲಾ ನಿಶ್ಶಬ್ದ. ಸರಿ, ನಿಮ್ಮ ಸಾಕ್ಷಿ ಮುಗಿಯಿತು, ನೀವು ಹೊರಡಬಹುದು ಎಂದು ಜಡ್ಜ್ ಹೇಳಿದರು. ಇದರ ಆಧಾರವಾಗಿ ಬಂದು ತೀರ್ಪು ಮೊದಲನೆಯವನು ನಿರಪರಾಧಿ. ಈಗಾಗಲೇ ಜಡ್ಝ ಸಾಹೇಬರು ಈ ಸೂರಪ್ಪನ ಬಗ್ಗೆ ಸಾಕಷ್ಟು ತಿಳಿದಿದ್ದರು ಈತ ಯಾವಾಗಲೂ ಹೇಳುವುದು ಸತ್ಯವೇ ಎಂಬುದನ್ನು ಮನಗಂಡಿದ್ದರು. ಇದು ಸೂರಪ್ಪನ ಸತ್ಯ ಜೀವನದ ಒಂದು ಮೈಲುಗಲ್ಲು.

ಇನ್ನೊಂದು ಅವರ ಅನಾರೋಗ್ಯ ಪ್ರಕರಣ. ಹಲವು  ವರ್ಷಗಳಿಂದ ಸೂರಪ್ಪ ನವರ ಹೊಟ್ಟೆ ನೋವು, ಮೂತ್ರ ಆಗುತ್ತಿಲ್ಲ ಎನ್ನುವುದು, ಯಾವುದೋ ನಾಟಿ ಔಷಧಿ ಕಷಾಯ ಕುಡಿಯುವುದು ಹೀಗೇ ಹಲವು ವರ್ಷಗಳು ನಡೆದಿತ್ತು. ಹಳ್ಳಿಯ ಊರು. ತಿಳಿದವರೂ ಕಡಿಮೆ. ಹಾಗೆ ತಿಳಿದವರಲ್ಲಿ ಇವರೂ ಚರ್ಚಿಸಿಲ್ಲ. ಒಮ್ಮೆ ಭಾವಿಯ ಕಟ್ಟೆ ಮೇಲೆ ಕುಳಿತಿದ್ದರು. ಆವಾಗಲೇ ಅತಿರೇಕದ ನೋವು. ಸಂಕಟ ಪಡುತ್ತಾ ಇಳಿದು ಹೊರಡುವಾಗ ಬಾವಿಯ ಕಡೆ ಇಳಿದು ಬಿದ್ದರು. ಅಷ್ಟು ವಯಸ್ಸಾಗಿದೆ ೪೦ ಅಡಿಗೂ ಮೀರಿದ ಆಳ. ಬೇಸಿಗೆಯಾದ್ದರಿಂದ ಕಡಿಮೆ ನೀರು ಇದ್ದರೂ ಜೀವಕ್ಕೆ ಅಪಾಯವೇ. ಆದರೂ ಬಿದ್ದವರು ಮೇಲೆ ನೋಡುತ್ತಾ ಹತ್ತಿ ಬರಲು ಹಗ್ಗ  ಇಳಿ ಬಿಡಿ ಎಂದರಂತೆ. ಮೇಲಿದ್ದವರು ಗಾಬರಿಯಲ್ಲಿ, ಅಂತೂ ಅವರನ್ನು ಮೇಲೆ ಎತ್ತಿದ್ದಾಯಿತು. ಈ ದೃಶ್ಯವನ್ನು ಕಣ್ಣು ತುಂಬಿಕೊಳ್ಳಲು ಜನವೋ ಜನ. ಹೀಗೆ ಆಕಸ್ಮಿಕವಾಗಿ ಬಿದ್ದರೂ ಆತ್ಮಹತ್ಯೆ ಪ್ರಯತ್ನ ಎಂದು ಪೋಲಿಸ್ ಕೇಸು ಆದರೆ ಎಂಬ ಭಯದಿಂದ ಆ ರಾತ್ರಿಯೇ ಈ ನಗರಕ್ಕೆ ಅವರ ರವಾನೆ. ಅದೃಷ್ಟವಶಾತ್ ಅಲ್ಲಿ ಹಾಗೇನೂ ಆಗಲಿಲ್ಲ.
 
ಮರುದಿನ ಹೊಟ್ಟೆನೋವಿನ ಕಾರಣ ಹುಡುಕಲು ವೈದ್ಯರ ದರ್ಶನ. ಸಲಹೆಯಂತೆ ಯೂರೋಲಜಿ ತಜ್ಞ ವೈದ್ಯರನ್ನು ಕಂಡೆವು. ಅವರು ಈ ತೊಂದರೆಗೆ ಇರುವ ಕಾರಣವನ್ನು ಕಂಡು ಹಿಡಿಯಲು ಕಿಡ್ನಿಗೆ ಸಂಬಂಧಿಸಿದಂತೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆಯನ್ನು ಹೊಟ್ಟೆಯ ಭಾಗದಲ್ಲಿ, ಹಾಗೂ ಮೂತ್ರದ ಹರಿವು ಎಷ್ಟಿದೆ ಎಂಬುದನ್ನು ತಿಳಿಯಲು, ಮೂತ್ರ ಧಾರೆಯನ್ನು ಅಳತೆ ಮಾಡಲು 'ಮೂತ್ರ ಹರಿವು ಮಾಪನ' ಪರೀಕ್ಷೆ. ಈ ಪರೀಕ್ಷೆಗಳಿಗೆ ಹೆಚ್ಚು ನೀರು ಕುಡಿಯುವಂತಿಲ್ಲ. ಕಡಿಮೆಯೂ ಆಗಬಾರದು. ಇಂತಹ ಪರೀಕ್ಷೆಯಿವರಿಗೆ ಹೊಸತಾದ್ದರಿಂದ ಹೊಟ್ಟೆ ಯಲ್ಲಿನ ನೀರಿನ ನಿಗದಿತ ಪ್ರಮಾಣಕ್ಕೆ ಹೆಚ್ಚು ಅಥವಾ ಕಡಿಮೆ ಎಂದು ಪ್ರಯೋಗಾಲಯದವರು ಹೇಳುವುದಕ್ಕೂ ಸಹನೆ ಇಲ್ಲದ ಇತ್ತ ಅರ್ಥ ಮಾಡಿಕೊಳ್ಳಲಾಗದ ಇವರ ಸ್ಥಿತಿ ನಮಗೂ ಬೇಸರ ತಂದಿತ್ತು. ಹೀಗೆ ಗೊತ್ತಾದ ಪ್ರಮಾಣದಲ್ಲಿ ಹೊಟ್ಟೆಯಲ್ಲಿ ನೀರು ಸಂಗ್ರಹವಾಗುವಂತೆ ಕುಡಿಯುವುದು ಸ್ವಲ್ಪ ಕಷ್ಟವೇ. ನೀರು ಕುಡಿಯುವ ಮುನ್ನ ಈಗಾಗಲೇ ಹೊಟ್ಟೆಯಲ್ಲಿ ನೀರು ಎಷ್ಟಿದೆ ಎಂದು ತಿಳಿಯುವುದೂ, ಎಳನೀರು ಬುರುಡೆಯಲ್ಲಿ ಎಷ್ಟು ನೀರು ಇದೆ ಎಂದು ಹೇಳುವುದೂ ದುಸ್ತರವಾದ ವಿಷಯ. ಕಡೆಗೂ ಸರಿಯಾಗಿ ಯೂರಿನ್ ಪಾಸ್ ಮಾಡಿದಿರಿ ಎಂದು ಅವರು ಹೇಳಿದಾಗ ಇವರ ವಾಕ್ಯ "ನಾವು ಮುಲ್ಕಿ ಪರೀಕ್ಷೆ ಪಾಸ್ ಮಾಡಬಹುದು ಆದರೆ ಈ ಪ್ರಯೋಗದ ಯೂರಿನ್ ಪಾಸ್ ಮಾಡುವುದು ಬಹಳ ಕಷ್ಟ ಬಿಡಿ" ಎಂದಾಗ ಪರೀಕ್ಷಕ ಬಿದ್ದು ಬಿದ್ದು ನಕ್ಕರು. ನಂತರ  ಪ್ರೋಸ್ಟೇಟ್ ಚಿಕಿತ್ಸೆ ದೊರೆತು ಆರೋಗ್ಯ ಸರಿಯಾಗಿದ್ದು ಸುಖಾಂತ್ಯವಾಯಿತು. 

ಕೆಲವು ದಿನಗಳ ನಂತರ ಮಾತಿನ ಮಧ್ಯೆ ಸೂರಪ್ಪ ಹೇಳಿದ ಮಾತು "ಪ್ರತಿಯೊಂದು ವಿಷಯಗಳೂ ಜೀವನದಲ್ಲಿ ಒಂದು ಪ್ರಯೋಗವೇ. ಪ್ರತಿಯೊಂದು ಪರೀಕ್ಷೆಗಳೂ ಅನುಭವವೇ. ಜೀವನದಲ್ಲಿ ಇಂತಹ ಪ್ರಯೋಗ ಪರೀಕ್ಷೆಗಳಿಗೆ ಸಹನೆ ಅತ್ಯಂತ ಅಗತ್ಯದ ವಿಷಯ".
 
ಅವರ ಉಗ್ಗುವಿಕೆಯ ಮಾತು ಇದಾದರೂ, ಸಲೀಸಾಗಿ - ಸಮರ್ಪಕವಾಗಿ ಯೋಚಿಸಬೇಕಾದ ವಿಷಯ, ಅಲ್ಲವೇ.
  .  

Comments

  1. ಶೃಂಗೇರಿ, ಹೊರನಾಡು, ಉಡುಪಿ, ಮುರ್ಡೇಶ್ವರ,
    ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಮುಂತಾದ ಪುಣ್ಯ ಕ್ಷೇತ್ರ
    ಯಾತ್ರೆಯ ಜೊತೆ ಜೊತೆಗೆ ಸೂರಪ್ಪನವರ ಜೀವನ
    ಯಾತ್ರೆಯೂ ಮಿಳಿತವಾಗಿ ಯಾತ್ರೆ ಕಥನ ಸೊಗಸಾಗಿದೆ
    ಈ ಕ್ಷೇತ್ರಗಳಲ್ಲಿ ಯಾತ್ರಿಸುವಾಗ ದೇವರ ದರ್ಶನದ
    ಪುಣ್ಯದ ಜೊತೆಗೆ, ಅಲ್ಲಿನ ಶುದ್ಧ ಗಾಳಿಯಿಂದ ಸಿಗುವ
    ಆರೋಗ್ಯವೂ ಲಾಭವೇ. ಈ ಕ್ಷೇತ್ರಗಳನ್ನು ನಾನು ನೋಡಿದ್ದರೂ ಇಷ್ಟು ವಿವರ ವಾಗಿ ಬರೆಯಲಾರೆ.
    ಸೂರಪ್ಪನವರ ಜೀವನದ ಅನುಭವವೂ , ಅಲ್ಲಲ್ಲಿ ಸೂಕ್ತ
    ವಾಗಿ ಗಾದೆಗಳು ಸೇರಿಕೊಂಡು, ಯಾತ್ರೆ ಸುಲಲಿತವಾಗಿ
    ಸಾಗುತ್ತದೆ. ಎಂದಿನಂತೆ ಬರಹ ಓದಿಸಿ ಕೊಂಡು ಹೋಗುತ್ತದೆ.

    ReplyDelete
    Replies
    1. ಅತ್ಯಂತ ರೋಚಕ ಲೇಖನ ನೆನಪಿಟ್ಟು ಕೊಂಡು ಸವಿವರವಾಗಿ ಬರೆಯುವುದೇ ಒಂದು ಅದ್ಭುತ ಕಲೆ.. ಧನ್ಯವಾದಗಳು

      Delete
    2. ರಮೇಶ್ ನಾಡಿಗ್.. ನನಗಂತೂ ಇಷ್ಟೆಲ್ಲಾ ನೆನಪಿಟ್ಟು ಕೊಂಡು ಮನ ಮುಟ್ಟುವಂತೆ ಬರೆಯುವುದು ಸಾಧ್ಯ ವಿಲ್ಲ. ಆದರೆ ಮನಸ್ಸಿಟ್ಟು ಓದಿ ಸಂತಸ ಪಡಬಲ್ಲೆ... ಧನ್ಯವಾದಗಳು

      Delete
  2. . ರಘುವಿನ ತಂದೆ ಸ್ವಲ್ಪ ಓದಿದ್ದರೂ, ಅವರ ಜೀವನದ ಅನುಭವವೇ ಅವರ ವಿದ್ಯೆಯಾಗಿತ್ತು. ಅವರು ಹೇಳುವ ಸಮಯೋಚಿತ ಗಾದೆಗಳು ಸೊಗಸಾಗಿವೆ. ಹಾಗೂ ಅವರು ಉಪಯೋಗಿಸುವ ಹಿಂದಿ ಹಾಗೂ ಇಂಗ್ಲಿಷ್ ಪದಗಳು ಯಾವ ವಿದ್ಯಾವಂತರಿಗೂ ಕಡಿಮೆ ಇಲ್ಲ. ಅವರ ಪ್ರಾಮಾಣಿಕತೆ ಓದಿ, ಅವರ ಬಗ್ಗೆ ಗೌರವ ಇಮ್ಮಡಿಯಾಗುತ್ತದೆ. ನಾನು ದಡ್ಡ
    ಎಂದು ಸಂಕೋಚವಿಲ್ಲದೆ ಹೇಳಿಕೊಳ್ಳುವ ಅವರ ಶುದ್ಧ ಮನಸ್ಸು ಕಂಡು ಬಹಳ ಗೌರವ ಉಂಟಾಗುತ್ತದೆ. ಅವರ ಮಕ್ಕಳು ತುಂಬಾ ಪುಣ್ಯವಂತರು.
    ಆದರೆ ಅಂತಹ ಒಳ್ಳೆಯ ವ್ಯಕ್ತಿಯು ಅನುಭವಿಸಿದ ಅನಾರೋಗ್ಯದ ಬಗ್ಗೆ ಓದಿ ತುಂಬಾ ಖೇದವಾಯಿತು.
    . ಜೊತೆಯಲ್ಲೇ ಹಲವಾರು ತೀರ್ಥಕ್ಷೇತ್ರಗಳ ವಿಚಾರಗಳು ಬಹಳ ಸೊಗಸಾಗಿ ಮೂಡಿ ಬಂದಿದೆ. ಅಲ್ಲದೇ ಹಲವಾರು ಕನ್ನಡ ಪದಗಳು ಪರಿಚಯವಾಗಿವೆ. ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ.
    ಶ್ರೀಮತಿ ಪಂಕಜ, ಮನೋಹರ.

    ReplyDelete
  3. ಸೂರಪ್ಪನವರ ಜೊತೆ ತೀರ್ಥಯಾತ್ರೆ ಸೊಗಸಾಗಿತ್ತು

    ReplyDelete
  4. ಸೂರಪ್ಪನವರ ಜೀವನದ ಅನುಭವ ಚೆನ್ನಾಗಿ ಮೂಡಿಬಂದಿದೆ

    ReplyDelete
  5. ಸೂರಪ್ಪನವರ ಕಥೆ ಸೊಗಸಾಗಿದೆ.ಕಥೆಯ ಭಾಗವಾಗಿ ಜೀವನವನ್ನು ತೀರ್ಥಯಾತ್ರೆ ಯೊಂದಿಗೆ ವಿವರಿಸಿರುವುದು ಅರ್ಥಪೂರ್ಣವಾಗಿದ್ದು ಜೀವನ ಶೈಲಿ ಹೇಗಿರಬೇಕು ಎಂದು ತಿಳಿಸಿರುವುದು ನಿಜಕ್ಕೂ ಮೆಚ್ಚುಗೆಯಾಗುತ್ತದೆ

    ReplyDelete
  6. "ತೆಂಗಿನ ಮರಗಳು  ಕುಳ್ಳಾಗಿದ್ದು,   ಕಾಯಿಗಳು   ಕೈಗೆ   ಸಿಗುವಂತಿದ್ದು,   ಕೊಬ್ಬರಿಯೆಲ್ಲಾ   ಮೇಲ್ಗಡೆ   ಇದ್ದು,  ಎಳನೀರಿನ ಮುಚ್ಚಳ   ತೆರದಿದ್ದರೆ   ಎಷ್ಟು   ಚೆನ್ನಾಗಿತ್ತು"  ಎನ್ನುತ್ತಾ  (ತಲೆ)ಕಾಯಿ   ಹಣ್ಣಾಗಿದೆಯೇ  ಎಂದು   ಪರಿಕ್ಷೀಸಲು   ತಲೆಯ ಮೇಲೆ  ಮೊಟಕುತ್ತಿದ್ದ   ಸೂರಪ್ಪನವರನ್ನು   ಮಹಾಲಯದ   ಆಸುಪಾಸಿನಲ್ಲಿ   ನೆನಪಿಸಿದ್ದಕ್ಕೆ  ಧನ್ಯವಾದ .  ನಿನ್ನ   ಪ್ರೀತಿಯ   ಹಿರಿಯಣ್ಣ.

    ReplyDelete
  7. ಸೂರಪ್ಪನವರ ತೀರ್ಥಯಾತ್ರೆ ಯ ಲೇಖನವು, ಹಲವಾರು ಬಾರಿ ಹೋಗಿ ಬಂದಿರುವ ಶೃಂಗೇರಿ, ಕೊಲ್ಲೂರು, ಮುರಡೇಶ್ವರ, ಉಡುಪಿ, ಮಂಗಳೂರು, ಸುಬ್ರಹ್ಮಣ್ಯ, ಧರ್ಮಸ್ಥಳ, ಮುಂತಾದ ಯಾತ್ರಾಸ್ಥಳಗಳ ನೆನಪುಗಳು ಮರುಕಳಿಸಿವೆ. ಈ ಲೇಖನ ವನ್ನು ಓದಿದಮೇಲೆ, ಇನ್ನಷ್ಟು ಹೆಚ್ಚಿನ ಮಾಹಿತಿಗಳು ದೊರಕಿವೆ. ಸೂರಪ್ಪನವರ ಪ್ರಾಮಾಣಿಕ ಸರಳಜೀವನ ಮತ್ತು ಅದಕ್ಕೆ ದೊರೆತ ಪ್ರತಿಫಲ, ಮನಕಲುಕುವಂತಿದೆ. ದೊಡ್ಡ ಜಮೀನ್ದಾರರಾಗಿದ್ದವರು ಸರ್ಕಾರದ ಕಾನೂನಿನಿಂದ, ತಮ್ಮ ಆಸ್ತಿಗಳನ್ನು ಕಳೆದುಕೊಂಡಿದ್ದು ನಿಜಕ್ಕೂ ದುರಾದ್ರುಷ್ಟಕರ. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ಅವರಿಗಿದ್ದ ಸಾಮಾನ್ಯಜ್ಞಾನ, ಇವುಗಳ ಮಧ್ಯೆ ಅವರ ತ್ರುಪ್ತಿಕರ ಹಾಗೂ ಸಮಾಧಾನಕರವಾದ ಜೀವನವು, ಇತರರಿಗೆ ಒಂದು ನೀತಿ ಪಾಠವನ್ನು ಕಲಿಸುವುದಂತೂ ನಿಜ. ಈ ಲೇಖನವನ್ನು ತಮ್ಮದೇ ಆದ ಭಾಷಾಶೈಲಿಯಲ್ಲಿ ನಮಗೆ ಉಣಬಡಿಸಿರುವ ನನ್ನ ಮಿತ್ರ ರಾಮಚಂದ್ರರವರಿಗೆ ಧನ್ಯವಾದಗಳು.

    ReplyDelete
  8. ಪ್ರಿಯ ರಾಮಚಂದ್ರ!

    ಸೂರಪ್ಪನವರ ವೃತ್ತಾಂತವನ್ನೋದಿದ್ದಾಯಿತು.
    ವ್ಯಕ್ತಿ ವಿಷಯವನ್ನು ಒಳಗೊಂಡಿರುವ ಮಿನಿ ಪ್ರವಾಸ ಕಥನ ಇದು. ಪ್ರವಾಸ ಕಥನಗಳು ನನ್ನ ಮೆಚ್ಚಿನ ಸಾಹಿತ್ಯ ಪ್ರಾಕಾರಗಳಲ್ಲಿ ಒಂದು.

    "ಸೂರಪ್ಪ" ನವರ ವ್ಯಕ್ತಿತ್ವವನ್ನು ಸಾಕಷ್ಟು ವಿವರವಾಗಿಯೇ ಬಿಡಿಸಿಟ್ಟಿದ್ದೀರಿ.

    ನಿಮ್ಮೊಡನೆಯ ನಲವತ್ತು ವರ್ಷಗಳ ಸ್ನೇಹ, ಸಹಯೋಗದ ಕಾರಣ ಸಲಿಗೆಯಿಂದ ಇದೋ ಒಂದು ಕಿವಿಮಾತು...

    ನಿಮ್ಮೆಲ್ಲ ಬ್ಲಾಗ್ ಗಳಲ್ಲಿ ನೀವು
    ಪೂರ್ಣವಿರಾಮ, ಪ್ರಶ್ನಾರ್ಥಕ ಚಿನ್ಹೆ ಮತ್ತು ಆಶ್ಚರ್ಯಸೂಚಕ ಚಿನ್ಹೆ ಇವುಗಳ‌ ಉಪಯೋಗದಲ್ಲಿ ಧಾರಾಳತೆಯನ್ನು ತೋರಬೇಕು.

    ಜೊತೆಗೆ ನಿರೂಪಣೆಯನ್ನು ಸೂಕ್ತ ಸ್ಥಳಗಳಲ್ಲಿ ಪ್ಯಾರಾಗಳನ್ನಾಗಿ ವಿಭಜಿಸುವುದನ್ನು ಮುಲಾಜಿಲ್ಲದೆ ಆಚರಣೆಗೆ ತಂದಲ್ಲಿ ನಿಮ್ಮ ಲೇಖನಗಳು ಕಳೆಗಟ್ಟುವುದರಲ್ಲಿ ಸಂಶಯವಿಲ್ಲ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...