Skip to main content

ಸರಸ್ವತಿ ಚಿದಂಬರರ ಆಶ್ರಯದಲ್ಲಿ

ನಡೆದು ಬಂದ ಜೀವನದ ದಾರಿಯತ್ತ ನೋಟವನ್ನು ಹಾಯಿಸಿದಾಗ ನಮ್ಮ ಹಿರಿಯರ ಜೀವನ ಶೈಲಿ ಹಾಗೂ ಬದುಕಿನ ರೀತಿಗಳು ಇಂದಿನ ಠೊಳ್ಳು ಶ್ರೀಮಂತಿಕೆಗಿಂತ ಹೆಚ್ಚು ಸರಳ ಹಾಗೂ ಮೌಲ್ಯದಿಂದ ಕೂಡಿತ್ತು ಎಂಬುದನ್ನು ಯಾರೂ ಅಲ್ಲಗಳೆಯರಾರು. ಆದರೂ ತಾವು ಪಡುತ್ತಿರುವ ಕಷ್ಟವನ್ನು ನೆನೆದು ತಮ್ಮ ಮುಂದಿನ ಪೀಳಿಗೆ ಹೀಗೆ ನರಳುವುದು ಬೇಡ ಎಂಬ ಅವರ ಆಕಾಂಕ್ಷೆಯೇ ಅವರಿಗಿಂತ ನಾವು ಆರ್ಥಿಕವಾಗಿ ಸಬಲರಾಗಲು ಅನುಕೂಲವಾಗಿದೆ. ಆದರೆ ಕೀರ್ತಿ ಪ್ರತಿಷ್ಠೆ ಆಸೆಯಿಂದ ನಾವು ಅತೃಪ್ತರೇ. ಅಂದಿನ ದಿನಗಳಲ್ಲಿ ತಾವು ಅನುಸರಿಸಿ ಬರೆದ ಶ್ರೀ ಡಿವಿಜಿ ಯವರ ಈ ಕೆಳಗಿನ ವನಸುಮದ ಪದ್ಯವನ್ನು ಓದಿದಾಗ ಅಂದಿನ ಹಿರಿಯರ ಜೀವನದ ಗುರಿ ಹೆಚ್ಚು ಸೃಷ್ಟವಾಗಿ ಕಾಣುತ್ತದೆ.

ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸೌರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿ
ಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ ||

ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ||
ವನಸುಮದೊಳೆನ್ನ ಜೀವನವು ---


ಇವು ಬರಿದೇ ಪ್ರತಿಷ್ಠೆ ಗಳಿಗಾಗಿ ಬರೆದ ಸಾಲುಗಳಲ್ಲ. ನಮ್ಮ ಹಿರಿಯರು ನಡೆದು ಸಾಧಿಸಿ ತೋರಿಸಿದ ಈ ಹಾದಿ ನನ್ನ ಜೀವನಕ್ಕೆ ಸಹಕಾರಿಯಾದ ಬಗೆಯೇ ಈ ಲೇಖನ. ಬಳಸಿದ ದಾರಿ ಅಳಿಸುವ ಮುನ್ನ, ನಾವಳಿಯುವ ಮುನ್ನ ಒಮ್ಮೆ ಅಂತಾ ಹಿರಿಯರ ನೆನಪೇ ಅವರಿಗೆ ಸಲ್ಲುವ ಕೃತಜ್ಞತೆ ಎಂಬ ನಂಬಿಕೆ ನನ್ನದು. ಬದುಕಿನ ಸಂವತ್ಸರದ ಚಕ್ರ ಒಮ್ಮೆ ಪೂರ್ಣ ತಿರುಗಿದೆ. ಬೆಳೆದು ಬಂದ ದಾರಿಯತ್ತ ತಿರುಗಿದಾಗ, ಆಗಾಗ ಮನಸ್ಸಿನಲ್ಲಿ ಬರುವ ಬಾಲ್ಯದ ಸವಿ ನೆನಪುಗಳನ್ನು, ಅಂದಿನ ಹಳ್ಳಿಯ ಜೀವನವನ್ನು ಲೇಖನಿಗಿಳಿಸಿದಾಗ ಕಾಣುತ್ತಿದೆ ಈ ಬರಹ.

ನನಗೆ ೫ನೇ ವರ್ಷ. ಪ್ರೈಮರಿ ಸ್ಕೂಲ್ ಓದಲು ನನ್ನನ್ನು ಸೋದರಮಾವ ಚಿದಂಬರ ಜೋಯಿಸರು ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರು. ಅವರ ಮಗ 
ವಿನಾಯಕ ಸ್ವಲ್ಪ ಚಿಕ್ಕವನಾದರೂ ನಾವಿಬ್ಬರೂ ಒಂದನೇ ಕ್ಲಾಸನ್ನು ಒಟ್ಟಿಗೆ ಶುರು ಮಾಡಿದ್ದು. ಸಾಗರದಿಂದ ರೈಲಲ್ಲಿ ಬಂದರೆ ೧೦ ಕಿಲೋಮೀಟರ್ ದೂರದ ಬಾಳೆಗುಂಡಿ ರೈಲ್ವೆ ಸ್ಟೇಷನ್. ರೈಲಿಂದ ಇಳಿದು ಗದ್ದೆ ಬ್ಯಾಣದ ಮೂಲಕ ಎರಡು ಕಿಲೋಮೀಟರ್ ನಡೆಯಬೇಕು ಅದೇ ಶಿರುಗುಪ್ಪೆ. ನಮ್ಮ ಮಾವ, ಶಾನುಭೋಗ ರಾಮಣ್ಣ ಮತ್ತು ಭಟ್ಟರ ಮನೆ ಸೇರಿ ಹತ್ತು ಕೃಷಿಕರಿದ್ದ ಹಳ್ಳಿ. ನಮ್ಮ ಮಾವ ಜೋಯಿಸರು ಎಂದು ಹೆಸರಾದರೂ ಕೃಷಿಯೇ ಕಸುಬು.ಅರ್ಧ ಎಕರೆ ಅಡಿಕೆ ತೋಟ, ನಾಲ್ಕು ಎಕರೆ ಭತ್ತದ ಗದ್ದೆ ಇರಬಹುದು.ಬಂದರೆ ಭಾರೀ ಮಳೆ. ಅಡಿಕೆಗೆ ಕೊಳೆ ಬಂದು ಅಡಿಕೆ ಉದುರುವ ಕಾಯಿಲೆ. ಮಳೆ ಇಲ್ಲದಿದ್ದರೆ ಒಣಗಿ ಹೋಗುವ ತೋಟ. ಭತ್ತದ ಗದ್ದೆ ಮಳೆಗೆ ಗದ್ದೆಯ ಮಣ್ಣೂ ಸೇರಿ ತೊಳೆದು ಹೋಗುವುದು ಇಲ್ಲವೇ ಬರಡು ಇವು ಸಾಮಾನ್ಯ. ಮನೆಯ ಮುಂದೆಯೇ, ಕಾಣುವಷ್ಟು ದೂರ ಗದ್ದೆಯ ಸಾಲು. ಅವುಗಳ ಮಧ್ಯೆ ಅಡ್ಡವಾಗಿ ಹರಿಯುವ ಹಳ್ಳವನ್ನು ದಾಟಿ ಮುಂದಿರುವ ಗದ್ದೆಯಲ್ಲಿ ಒಂದು ಕಿಲೋಮೀಟರ್ ನಡೆದರೆ ಆ ದಡದಲ್ಲಿ ನಮ್ಮ ಶಾಲೆ. ಬೇಸಿಗೆಯಲ್ಲೇನೋ ನೀರು ಇರದ ಈ ಹಳ್ಳ ಮಳೆಗಾಲದಲ್ಲಿ ಭೋರ್ಗರೆಯುತ್ತಾ ಹರಿಯುತ್ತಿತ್ತು. ಅದನ್ನು ದಾಟುವುದೇ ದುಸ್ತರದ ಕೆಲಸ. ಅಂತಹ ಸಮಯದಲ್ಲಿ ನಮ್ಮ ಮಾವ ನೀರಿನಲ್ಲಿ ಇಳಿದು ಶಾಲೆಗೆ ಹೋಗುವ, ಅವರಿವರ ಮಕ್ಕಳು ಎನ್ನದೆ ಎಲ್ಲಾ ಮಕ್ಕಳನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಎತ್ತಿಕೊಂಡು ಸಾಗಿಸುತ್ತಿದ್ದುದು ಸಾಮಾನ್ಯ. ಜೊತೆಗೆ ನಮ್ಮ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ನಮ್ಮ ಗುರುಗಳು ಕಡಿಮೆ ಎತ್ತರವಾಗಿದ್ದು ಅವರಿಗೂ ದಾಟಲು ಕಷ್ಟವಾಗುತ್ತಿತ್ತು. ಅವರನ್ನೂ ಆ ದಡಕ್ಕೆ ಎತ್ತಿ ಬಿಡುತ್ತಿದ್ದ ಮಾವ ನಮಗೆ ಜಗಜಟ್ಟಿಯಾಗಿ ಕಾಣುತ್ತಿದ್ದ. ಹರಿಯುವ ನೀರು ಹಾಗೆಯೇ ಹೆಚ್ಚು ಕಾಲ ಮುಂದುವರಿಯುತ್ತಿದ್ದರೆ ಹಳ್ಳ ದಾಟಲು ಎರಡು ಮರಗಳ ತುಂಡುಗಳನ್ನು ಹೊಳೆಗೆ ಅಡ್ಡನಾಗಿ ಹಾಕುತ್ತಿದ್ದರು. ಅದನ್ನು ಸಾರ ಎನ್ನುತ್ತಿದ್ದರು.

ಅದೊಂದು ಏಕೋಪಾಧ್ಯಾಯ ಪ್ರಾಥಮಿಕ ಶಾಲೆ. ಜೊತೆಗೆ ದೊಡ್ಡದಾಗಿರುವ ಒಂದು ಹಾಲ್. ಎಲ್ಲಾ ಪಾಠವನ್ನು ಎಲ್ಲರೂ ಕೇಳುತ್ತಿರುವುದರಿಂದ ಎಲ್ಲಾ ತರಗತಿಯವರೆಗಿನ ಮಕ್ಕಳು ನಮಗೆ ಕ್ಲಾಸ್ಮೇಟ್ ಎನ್ನಬಹುದು. ಅದರಿಂದ ಇಡೀ ಶಾಲೆಯೇ ಪರಿಚಯ. ಲಿಂಗಭೇದವಿಲ್ಲದ ತರಗತಿಗಳ ತಾರತಮ್ಯವಿಲ್ಲದ ಒಂದೇ ಗುರುವಿನಿಂದ ಏಕಕಾಲದಲ್ಲಿ ಕಲಿಯುವ ಮಜಾನೇ ಬೇರೆ. ಬಹಳಷ್ಟು ವಿಷಯಗಳು ನಮ್ಮದಲ್ಲ ದಿದ್ದರೂ ನಮಗೆ ಗೊತ್ತಾಗುತ್ತದೆ ಕೆಲವು ಬಾರಿ ನಮ್ಮ ವಿಷಯವೇ ನಮಗೆ ಗೊತ್ತಿಲ್ಲ. ಯಾರಿಗೆ ಏಟು ಬೀಳಲಿ, ಗಲಾಟೆಯಾಗಲಿ, ಸಂತೋಷವಾಗಲಿ ಎಲ್ಲಾ ಸಾಮೂಹಿಕ. ೨೦ ರ ವರೆಗಿನ ಮಗ್ಗಿ ಶಾಲೆಯ ಎಲ್ಲರಿಗೂ ಕರಗತ. ಗುರುಗಳೇನಾದರೂ ರಜಾ ಹಾಕಿದರೆ ಇಡೀ ಶಾಲೆಗೆ ರಜೆ. ಅದೊಂದು ಖುಷಿಯ ಸಮಾಚಾರ. ಶಾಲೆಯ ಪಕ್ಕದಲ್ಲೊಂದು ಮಾರಮ್ಮನ ಗುಡಿ. ಯಾವಾಗಲಾದರೊಮ್ಮೆ ಬಲಿಯಾಗುತ್ತಿದ್ದ ಕೋಳಿಗಳ ಆಕ್ರಂದನ. ಕೆಲವು ಬಾರಿ ಭಯವನ್ನು ಹುಟ್ಟಿಸುತ್ತಿತ್ತು. ನಂತರ ತುಂಡಾದ ಕೋಳಿಯ ತಲೆ ಬಿದ್ದು ಒದ್ದಾಡುವುದು ಸಹಜವಾಗಿತ್ತು. ಆದರೆ ಕೆಂಪು ಮುಖದ ಮಾರಮ್ಮ ಎಂದರೆ ನೋಡಲಷ್ಟೇ ಅಲ್ಲ, ಹರಕೆ ಹೇಳಿಕೊಳ್ಳಲೂ ಇಂದಿಗೂ ಭಯವೇ. ಆ ಶಾಲೆಯಲ್ಲೇ ನಾಲ್ಕನೇ ತರಗತಿಯವರೆಗಿನ ವಿದ್ಯಾಭ್ಯಾಸ. ಈ ಶಾಲೆಯ ಗುರುಗಳಾದ ಕಿಟ್ಟಣ್ಣ ಮೇಷ್ಟ ಕನ್ನಡ ಪಾಠ, ಹೇಳಿಕೊಟ್ಟ ಮಗ್ಗಿಗಳು ಜೀವನದ ಯಶಸ್ವೀ ಲೆಕ್ಕಾಚಾರಕ್ಕೆ ಭದ್ರ ಬುನಾದಿಯಾಗಿದ್ದು ನನಗಂತೂ ಅವರು ಸದಾ ಸ್ಮರಣೀಯರು.

ಸಂಜೆ ೬ ಘಂಟೆಯಾಗುತ್ತಿದೆ. ಬೆಳಕು ಕಡಿಮೆ ಯಾಗುತ್ತಿದ್ದಂತೆ ಯಾವುದೋ ಮರದ ಪೊಟರೆಯ ಸಂದಿಯಲ್ಲಿ ವಯ್ಯಾವ್ ವಯ್ಯಾವ್ ಎಂದು ಕರ್ಕಶವಾಗಿ ಕೂಗುತ್ತಿರುವ ಜೀರುಂಡೆ. ದನಕರುಗಳೆಲ್ಲಾ ಬಂದಿವೆಯೇ ಎಂದು ಕೇಳುತ್ತಿರುವ ಅಜ್ಜಿ ಕಾಸಮ್ಮ. ಪಾತ್ರೆ ತೊಳೆಯುತ್ತಲೇ ಹೂಂ ಗುಡುತ್ತಾ ಮಗ್ಗಿ ಹೇಳಿಕೊಡುತ್ತಿರುವ ಅತ್ತೆ ಸರಸ್ವತಮ್ಮ. ಅವರ ಮಗನೊಂದಿಗೆ ನಾನೂ ೧ ರಿಂದ ೧೦೦ ರ ವರೆಗಿನ ಮಗ್ಗಿ ಹೇಳಿದ್ದಾಗಿದೆ. ಎರಡೊಂದೆಲೆ ಎರಡು, ಎರಡೆರಡೆಲೆ ನಾಲ್ಕು. ಹತ್ತರ ವರೆಗಿನ ಸಿಲಬಸ್ ನಮ್ಮ ಅತ್ತೆಯದು. ಪಾತ್ರೆ ತೊಳೆದು ಮುಗಿಯುವವರೆಗೂ ಮುಂದುವರಿಯುವ ಮಗ್ಗಿ, ಸಂವತ್ಸರಗಳು, ಮಾಸಗಳು, ಪ್ರತಿದಿನದ ತಿಥಿಗಳು ಜೊತೆಗೆ ಅವುಗಳ ವಿಶೇಷ, ಪಾಡ್ಯ ಯುಗಾದಿ ಪಾಡ್ಯ, ಬಿದಿಗೆ ಭಾವನೆ ಬಿದಿಗೆ, ತದಿಗೆ ಅಕ್ಷಯ ತದಿಗೆ, ಚೌತಿ ಗಣೇಶನ ಚೌತಿ, ಪಂಚಮಿ ನಾಗರ ಪಂಚಮಿ, ಷಷ್ಟಿ ಶಿರಿಯಾಳನ ಷಷ್ಟಿ... ಹೀಗೆ ಹುಣ್ಣಿಮೆ ಭೂಮಿ ಹುಣ್ಣಿಮೆ, ಅಮಾವಾಸ್ಯೆ ಎಳ್ಳು ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯವರೆಗೆ. ತೊಳೆದ ಪಾತ್ರೆಗಳನ್ನು ಕೈಲಾಗುವಷ್ಟು ಎತ್ತಿಕೊಂಡು ಅಡಿಗೆ ಮನೆಯಲ್ಲಿ ಇಟ್ಟಿಟ್ಟು ಬರುವುದು. ಅದು ಮುಗಿದ ಮೇಲೆ ನಾವು ಚಿಮಣಿ ಬುಡ್ಡಿ ಇಟ್ಟುಕೊಂಡು ಓದಿಕೊಳ್ಳಲು ಕೂಡಿಸಿ ತಾನು ಹಾಲು ಕರೆಯಲು ಕೊಟ್ಟಿಗೆಗೆ ಹೋಗುವಳು. ಜೊತೆಗೆ ಮಂದ ಬೆಳಕಿನ ಲಾಟೀನು. ಸ್ಲೇಟಿನಲ್ಲೇ ಬರೆದು, ಓದಿ, ಅಳಿಸಿ ಬರೆವ, ಆ ದಿನಗಳು ತಂದಿವೆ ಬಹುಜನಕ್ಕೆ ಉತ್ತಮ ಹಣೆಬರಹ.

ಸಾಗರದ ಸಂತೆಗೆ ಹೋದ ಮಾವ ಇನ್ನೂ ಬಂದಿಲ್ಲ. ಆ ಹಳ್ಳಿಯ ದಾರಿಯಲ್ಲಿ ಸೈಕಲ್ ನಲ್ಲಿ ಬರಬೇಕು. ಮಳೆ ಹನಿ ಚಿಕ್ಕದಾಗಿ ಶುರು ಇದೆ. ಉಳ್ಳೂರು ವರೆಗೂ ಹೇಗೋ ಟಾರು ದಾರಿ, ಬರಬಹುದು. ಮುಂದೆ ಬಾಳೆಗುಂಡಿ, ಹೊಸಕೆರೆ ಮೋರಿ ಮೇಲೆ ಕೆಸರು ಮಣ್ಣಿನ ದಾರಿಯಲ್ಲಿ ಬರಬೇಕು. ತಮ್ಮ ಇನ್ನೂ ಬಂದಿಲ್ಲ, ತಡ ಆಗುತ್ತದೆ ಎಂದು ಹೇಳಿದ್ನನೇ ಎಂದು ಜಪಕ್ಕೆ ಕುಳಿತ ಅಜ್ಜಿಯ ಚಡಪಡಿಕೆ. ಕರೆಸಿದ ಹಾಲು ತಂದಿಟ್ಟ ಅತ್ತೆ ಅಡಿಗೆ ತಯಾರು ಮಾಡುವಲ್ಲಿ ಮಗ್ನ. ಶಾಂತಕ್ಕ ಸುಮಿತ್ರಕ್ಕರವರ ಕರಸೇವೆ. ಸ್ವಲ್ಪ ಹೊತ್ತಿಗೆ ಮಾವನ ಸೈಕಲ್ ಸದ್ದು. ಬಂದ ಕೂಡಲೇ ಅವನು ಕೊಡುವ ಬಿಸ್ಕತ್ತು ಪೆಪ್ಪರ್ ಮಿಂಟ್ ಪಡೆವ ತವಕ ಮಕ್ಕಳಿಗೆ. ಕೊಟ್ಟಿಗೆಗೆ ಎಮ್ಮೆ ಹಸು ಎತ್ತುಗಳು ಬಂದಿವೆಯೇ. ಸರಿಯಾಗಿ ಹುಲ್ಲು ತಿನ್ನುತ್ತವೆಯೇ ಎಂಬ ರಿಪೋರ್ಟ್ ತೆಗೆದುಕೊಂಡು ಕೈಕಾಲು ತೊಳೆದು ಸಂಧ್ಯಾವಂದನೆ ಮುಗಿಯಬೇಕು. ಎಷ್ಟು ಹೊತ್ತಾದರೂ ಅದು ಮುಗಿದ ಮೇಲೆಯೇ ಅವನ ಊಟ. ಅಜ್ಜಿಯ ಜಪ, ದೇವರಿಗೆ ಕೃತಜ್ಞತೆಯ ರಾತ್ರಿ ಆರತಿ ನಂತರ ಅಜ್ಜಿಗೆ ಉಪವಾಸ ಅಥವಾ ಉಪಹಾರ. ಶಿವಮೊಗ್ಗಕ್ಕೆ ಹೋಗುವ ರೈಲು ಬಾಳೆಗುಂಡಿ ಸ್ಟೇಶನ್ ದಾಟಿದ ಸದ್ದು. ಏಳ್ರೋ ಊಟಕ್ಕೆ ಎಂದು ನಮಗೆಲ್ಲರಿಗೂ ಊಟ ಬಡಿಸಿ ನಂತರ ನಮಗೆ ಹಾಸಿಗೆ ಹಾಸಿ ಕೊಟ್ಟು ತಾನು ಮಲಗುವ ವೇಳೆಗೆ ಅತ್ತೆಗೆ ರಾತ್ರಿ ಹತ್ತು.

ಶಾಲೆಯ ಬೆಟರ್ಮೆಂಟ್ ಕಮಿಟಿಯ ಜವಾಬ್ದಾರಿ ಹೊತ್ತಿದ್ಜ ನಮ್ಮ ಮಾವನಿಗೆ ಶಾಲೆಯ ಆಗುಹೋಗುಗಳೊಂದಿಗೆ ನಮ್ಮಂತಹ ವಿದ್ಯಾರ್ಥಿಗಳ ಪ್ರಗತಿಯೂ ಸದಾ ಗೊತ್ತಿರುವ ವಿಷಯವೇ. ಆದ್ದರಿಂದಲೇ ಸಮಯ ಸಮಯಕ್ಕೆ ಗುರುಗಳ ವೈಯುಕ್ತಿಕ ಪಾಠ ನಮ್ಮ ಅಭಿವೃದ್ಧಿಗೆ ಬಹಳ ಸಹಾಯಕವಾಯಿತು. ನಮ್ಮ ಮಾವ ಹೆಚ್ಚು ಓದದಿದ್ದರೂ ಆತನ ಗ್ರಹಣಾಶಕ್ತಿ ಅದ್ವಿತೀಯ.ಅಪರೂಪಕ್ಕೆ ಓದುವ ಅಕ್ಷರದ ಮೇಲೆಯೇ ಪದವನ್ನು ಊಹಿಸುವ ಜಾಣತನದಿಂದಲೇ ಇಂಗ್ಲೀಷ್ ನ ಪರಿಚಯ ಇತ್ತು. ಎಂತಹವರೊಂದಿಗೂ ಸೌಜನ್ಯ ಸಂಭಾಷಣೆ ನಡೆಸುವ ಚತುರ. ನಗುನಗುತ್ತಲೇ ಮಾತನಾಡುತ್ತಿದ್ದರಿಂದ ಪಂಚಾಯಿತಿ ಅಥವಾ ಶಾಲಾ ಸಮಿತಿ ಸಭೆಗೆ ಅವನು ಬೇಕೇ ಬೇಕು. ಶೇಕ್ ದಾರರು, ತಹಸಿಲ್ದಾರರು, ಫಾರೆಸ್ಟ ರ್ ಯಾರು ಬಂದರೂ ಇವರ ಮನೆಗೆ ಬರಲೇಬೇಕು. ಆ ದಾರಿಯಲ್ಲಿ ಈ ಊರೇ ಕಡೆಯದು. ಉದ್ದೇಶವಿದ್ದು ಬಂದವರು, ದಾರಿತಪ್ಪಿ ಬಂದವರು, ಹೀಗೆ ಎಲ್ಲರಿಗೂ ಬೇಸಿಗೆಯ ಆಸರೆಗೆ ನೀರು-ಬೆಲ್ಲ, ತಡವಾದರೆ ಊಟಕ್ಕೆ ಇವರೇ ಆಸರೆ. ಲಾಗಾಯ್ತಿನಿಂದಲೂ ದಾನ-ಧರ್ಮ ಆತಿಥ್ಯ ದ ಸಂಪ್ರದಾಯ ವಿದ್ದುದರಿಂದ ಬಂದು ಹೋಗುವವರು ಸಹಜವಾಗಿಯೇ ಹೆಚ್ಚು.

ನಾಲ್ಕನೇ ತರಗತಿಯ ಮುಂದಿನ ವಿದ್ಯಾಭ್ಯಾಸ ಮೂರು ಕಿಲೋಮೀಟರ್ ದೂರದ ಉಳ್ಳೂರಿನ ಮಿಡ್ಲ್ ಸ್ಕೂಲು. ಪ್ರತಿದಿನವೂ ನಡೆದು ಹೋಗಲು ಹಳ್ಳಿಯ ಕಲ್ಲು ಮಣ್ಣು ಗಳ ದಾರಿ. ಮಳೆಗಾಲದಲ್ಲಿ ಕೊಡೆ ಹಿಡಿದುಕೊಂಡು ಠೀವಿಯಿಂದ ಹೋಗುವ ಹುರುಪು ಕೆಲವೇ ದಿನಗಳಲ್ಲಿ ಮುಗಿದು ಹೋಗುತ್ತಿತ್ತು. ಶಾಲೆಯಲ್ಲೇ ಮರೆತು ಬರುವ ಕೊಡೆಗಳು ರೈನ್ ಕೋಟಿಗೆ ದಾರಿ ಮಾಡಿಕೊಟ್ಟಿತು. ಅದೇ ಹೊಸ ಕೆರೆ ಮೋರಿ, ಬಾಳೆಗುಂಡಿ, ಸತ್ತ ಜಾನುವಾರುಗಳ ಚರ್ಮ ಸುಲಿಯುವ ಪೆರುಮಾಳನ ಮನೆಯನ್ನು ಹೆದರುತ್ತಾ ದಾಟಿದರೆ ಕಾಣುವುದೇ ಉಳ್ಳೂರಿನ ಕೆರೆ. ದಡದಲ್ಲಿರುವ ಗೋವಿಂದಪ್ಪನ ಹೋಟೆಲ್. ಎದುರು ಮತ್ತು ಪಕ್ಕದ್ದೇ ನಮ್ಮ ಶಾಲೆ. ಅಲ್ಲಿಯೇ ೫ರಿಂದ ೭ ರ ತರಗತಿ. ನಮ್ಮಂತೆಯೇ ಅರ್ಧ ತಿಳುವಳಿಕೆಯ ಜಾಣರು ನಮ್ಮ ಮಿತ್ರರು. ಅಂಗಿಯ ತುದಿ ಎಂಜಲು ಮಾಡಿಕೊಂಡು ಹಣೆ ತಿಕ್ಕಿದರೆ ಹಣೆಯಲ್ಲಿ ಕೇವಲ ಚರ್ಮ ಕಿತ್ತು ಬಂದರೆ ಅವರು ಪರೀಕ್ಷೆಯಲ್ಲಿ ಪಾಸು, ರಕ್ತ ಬಂದರೆ ಫೇಲ್ ಎಂಬುವ ಭಾವೀ ಜ್ಯೋತಿಷಿ ಕಾನುಗೋಡು ಮಂಜುನಾಥ, ಪುಸ್ತಕದ ಪುಟಗಳಲ್ಲೇ ನವಿಲುಗರಿಗೆ ಮರಿಹಾಕಿಸುವ ಭಾವೀ ಪ್ರಸೂತಿ ವೈದ್ಯ ವಿಜೇಂದ್ರ, ಕುಕ್ಕೆಮರದ ಸೊಪ್ಪನ್ನು ಮೂಗಿಗೆ ತೂರಿಸಿ ಮತ್ತು ಬರಿಸಿ ಹೆದರಿಸುವ ಮಂತ್ರವಾದಿ ಗಜಾನನ, ಮುಳ್ಳು ಹಣ್ಣುಗಳನ್ನು ಕಿತ್ತು ತಂದು ನಮಗೂ ಕೊಡುತ್ತಿದ್ದ ಜೋಗಿನ ಗದ್ದೆ ಸಮೀಪದ ಧಾರಾಳಿ ಹೇರಂಬ, ರೈನ್ ಕೋಟು ಗಳ ದೊಡ್ಡ ಗುಂಡಿಗಳನ್ನು ಕಿತ್ತು ಗಿರಗಟ್ಟಿ ಮಾಡಿ ಆಡುತ್ತಿದ್ದ ಆಟಗಾರ ಸಂಪೆಕಟ್ಟೆ ಕೃಷ್ಣ, 
ಸೌಮ್ಯ ಸ್ವಭಾವದ ಮಹಾಬಲ, ಚಳ್ಳೆ ಹಣ್ಣಿನ ಗಿಡ ತೋರಿಸಿ ಚಳ್ಳೆಹಣ್ಣು ತಿನ್ನಿಸುವ ನಂದೀತಳೆ ಮಹಾಬಲೇಶ್ವರ, ಇಂತಹ ಸ್ಮರಣಾರ್ಹ ಹಲವು ಅಪ್ರತಿಮರ ಮಧ್ಯೆ ಆಡುತ್ತಾ ಹೆದರುತ್ತಾ ಮುಗಿದ ಮೂರು ವರ್ಷಗಳು. ಸಮಾಜ ಪಾಠದ ಗುರುಬಸಪ್ಪ, ಇಂಗ್ಲೀಷ್ ವಿಷಯದ ಸಂಘಮಿತ್ರ, ವಿಜ್ಞಾನ ಗಣಿತಕ್ಕೆ ಹಂಗಾಮಿ ಗುರುಗಳಾದ ಶಾಸ್ತ್ರೀ ಮೇಷ್ಟ್ರು, ಹಿಂದಿಯ ಕೃಷ್ಣ ವೇಣಿ ಮತ್ತು ಸುವರ್ಣ ಬಾಯಿ ನೆನಪಲ್ಲಿರುವ ಉಪಾಧ್ಯಾಯರ ಹೆಸರುಗಳು. ಕಲಿಯುವ ವ್ಯವಸ್ಥೆ ಇದ್ದರೂ ೭ನೇ ತರಗತಿ ಪರೀಕ್ಷೆಗೆ ಸಾಗರದ ಜನತಾ ಹೈಸ್ಕೂಲಿನ ಪರೀಕ್ಷಾ ಕೇಂದ್ರದಲ್ಲಿ ಬರೆದೆವು. 

ಅಲ್ಲಿಯ ಶಾಲೆ ಅಭಿವೃದ್ಧಿ ಸಮಿತಿಗೂ ನಮ್ಮ ಮಾವನೂ ಸದಸ್ಯನೇ. ಶಾಲೆಯ ವೇಳೆಯ ನಂತರ ನಡೆಯುವ ಸ್ವಾತಂತ್ರೋತ್ಸವದ ಆಟೋಟ ಸ್ಪರ್ಧೆಗಳು. ಮನೆಗೆ ಬರಲು ತಡವಾಗುವ, ಬರುವಾಗ ಕಾಣುವ ಚರ್ಮ ಸುಲಿಯುವ ಪೆರುಮಾಳನ ಮನೆಯನ್ನು ದಾಟಲು ಹೆದರಿಕೆ, ಬರುವ ದಾರಿಯ ಪಕ್ಕದಲ್ಲಿ ಯಾವುದೋ ಭೂತಕ್ಕೆ,ದೆವ್ವಕ್ಕೋ ಎಂದೋ ಕೆಂಪು ಅನ್ನ ಹಾಕಿದ್ದು ನೋಡಿರುವ ನಮಗೆ ತಡವಾಗಿ ಒಬ್ಬರೇ ಆ ದಾರಿಯಲ್ಲಿ ಬರಲು ಹೆದರಿಕೆ. ಇವುಗಳಿಂದಾಗಿ ನಮ್ಮ ಶಿರಗುಪ್ಪೆಯ ಯಾವ ವಿದ್ಯಾರ್ಥಿಗಳೂ ಸ್ಪರ್ಧೆ ಗಳಲ್ಲಿ ಭಾಗವಹಿಸಿರಲಿಲ್ಲ. ಆ ವರ್ಷ ಅತಿಥಿಯಾಗಿ ಬಹುಮಾನ ವಿತರಿಸಿದ ಮಾವನಿಗೆ ನಮ್ಮ ಊರಿನವರು ಹನ್ನೊಂದು ವಿದ್ಯಾರ್ಥಿಗಳಿದ್ದೂ ತನ್ನೂರಿನ ಒಬ್ಬರಿಗೂ ಬಹುಮಾನ ಬಾರದಿರುವುದು ಗಮನಕ್ಕೆ ಬಂದಿದೆ.ಸೇರಿದವರ ಮುಂದೆ ಏನೋ ಮುಜುಗರ. ಅವನ ಮನಸಿನ ನೋವಿನಿಂದ ಬೈಸಿಕೊಂಡ ನೆನಪು. ಇದ್ದ ಕಾರಣವನ್ನೂ ಹೇಳಲೂ ಆಗದ, ಬಿಡಲಾಗದ ಭಯ. ಕೊನೆಗೂ ಹೇಳಲಾಗಲಿಲ್ಲ.

ಮನೆಯಲ್ಲಿ ಹಿರಿಯರಾದ ಅಜ್ಜಿ. ಬೆಳಿಗ್ಗೆ ಸ್ನಾನ ,ಜಪ, ಪೂಜೆ.ಬನವಾಸಿ ಮತ್ತು ಅಗಡಿ ಆಶ್ರಮದ ಭಕ್ತರೂ ಆಗಿದ್ದರಿಂದ ಶೇಷಾಚಲ ಸದ್ಗುರುಗಳ ಕುರಿತ "ಜಯ ಜಯ ಶ್ರೀ ಶೇಷಾಚಲ ಸದ್ಗುರೂವರ" ಸುಮಧುರ ಆರತಿ ಹಾಡು ಕೇಳಿದವರಿಗೆಲ್ಲಾ ಈಗಲೂ ಗುನಗುನಿತ. ಕೈಲಾಗುವ ಕೆಲಸ ಮಾಡುವುದರೊಂದಿಗೆ ಮಧ್ಯಾಹ್ನದ ವೇಳೆಯಲ್ಲಿ ಭಕ್ತಿ ವಿಜಯ, ಹರಿ ಕಥಾಮೃತಸಾರ, ಸಮರ್ಥ ರಾಮದಾಸರ ಮನೋಭೋದೆ, ದೇವುಡು ನರಸಿಂಹ ಶಾಸ್ತ್ರಿಗಳ ಮಹಾಕ್ಷತ್ರಿಯ, ಮಹಾ ಬ್ರಾಹ್ಮಣ, ಗುರು ಚರಿತ್ರೆ, ದೊರೆತ ಉಪನಿಷತ್ತುಗಳ ಪಠಣ. ಪುರುಸೊತ್ತು ಇದ್ದಾಗ ನಮ್ಮ ಅತ್ತೆಯೂ ಇದನ್ನು ಓದುತ್ತಿದ್ದರು. ಯಾವುದೋ ಪರೀಕ್ಷೆಗಾಗಿ ಆಸಕ್ತಿಯಿಂದ ಓದುತ್ತಿದ್ದಾರೇನೋ ಎಂದು ಎನಿಸುವ ಅವರ ಆಸಕ್ತಿ. ಬಾಕಿಯಂತೆ ದೇವರು ಆರತಿ ಪೂಜೆಗಾಗಿ ಹತ್ತಿಯ ಬತ್ತಿ ಮಾಡುವುದು. ಆ ವಯಸ್ಸಿನಲ್ಲೂ ಕನ್ನಡಕದೊಂದಿಗೆ ಅಜ್ಜಿಯ ಓದುವ ಉತ್ಸಾಹ ಕಡಿಮೆಯೇನೂ ಇಲ್ಲ. ಮಲಗುವಾಗ ಆಕೆ ಹೇಳುವ ಹಲವು ಪುರಾಣದ ಕಥೆಗಳು. ನೆನಪಿಲ್ಲದಿದ್ದರೂ ಬದುಕನ್ನು ಬೇಕಾದಷ್ಟು ತರಹದಲ್ಲಿ ತಿದ್ದಿವೆ.

ಬೇಸಿಗೆ ದಿನಗಳಲ್ಲಿ ಬಿಸಿಲು ಹಾಳಾಗಬಾರದೆಂದು ಅವಲಕ್ಕಿ ಹಪ್ಪಳ, ಹಬ್ಬಗಳ ಸಾಲಿನಲ್ಲಿ ಬರುವ ಪೂಜೆಗಾಗಿ ಅರಿಶಿನ, ಕುಂಕುಮ, ಗುಲಾಲ್, ಸಿಂಧೂರ, ಹಾಲಿನೊಂದಿಗೆ ಹಚ್ಚಿ ಮಾಡುವ ಗೆಜ್ಜೆ ವಸ್ತ್ರ ಗಳು, ೧೬, ೧೮, ೨೧ ಹೀಗೆ ಹತ್ತಿಯ ಎಳೆ ಎಣಿಸಿ ಮಾಡುವ ಈ ಹತ್ತಿಯ ಕೆಂಪು ಅರಿಶಿನ ಲೇಪಿತ ಕುಸುರಿ ಹಾರಗಳು ಗೌರಿ ಗಣಪರಿಗೆ ವಿಶೇಷ. ಕೇವಲ ಅರಿಶಿನ ಲೇಪಿತ ಗೆಜ್ಜೆ ವಸ್ತ್ರ ನಾಗನಿಗೆ ಮಾತ್ರ. ಈ ತಯಾರಿಕೆಯಲ್ಲಿ ಅತ್ತೆಯೊಡನೆ ಅವರ ಹೆಣ್ಣು ಮಕ್ಕಳ ಸಹಕಾರ ಪ್ರಧಾನ. ಪ್ರತಿ ಪೂಜೆಗೂ ಮತ್ತು ಕಾರ್ತಿಕದ ವಿಶೇಷ ಪೂಜೆಗೆ ಎಣ್ಣೆಯಲ್ಲಿ ಬರೆದು ಕುಂಕುಮ ಸವರಿದ ಕಲಾತ್ಮಕ ಆರತಿ ತಟ್ಟೆ ನೆನಪಿನ ಪುಟಗಳಲ್ಲಿವೆ. ಇಬ್ಬರು ಮೂವರ ಸಹಕಾರದಿಂದ ರಾಟೆ ಹಾರೆಗಳಿಂದ ಅವಲಕ್ಕಿಯ ತಯಾರಾಗುವ ನಿಯಮಿತ ಸಪ್ಪಳ. ನೆಲ ಸಾರಿಸುವ ಅಡಿಕೆ ಹಾಳೆ, ಅಡಿಕೆ ಗೊನೆಯ ಕೊಳೆ ತಡೆಯಲು ಕಟ್ಟುವ ಹಾಳೆಯ ಕೊಟ್ಟೆಯ ತಯಾರಿ ಮನೆಯ ಹೆಂಗಸರ ಕೆಲಸವೇ ಆಗಿತ್ತು.

ನಮ್ಮ ಮಾವ ಒಳ್ಳೆಯ ಕಲಾಕಾರನೂ ಹೌದು. ಕೃಷಿಗೆ ಬೇಕಾದ ನೇಗಿಲು, ಕೊರಡು, ಹರಗುವ ಸಾಧನ, ಸುಗ್ಗಿ ನಡೆಸಲು ಬೇಕಾದ ಸಮಗ್ರ ಸಾಮಗ್ರಿಗಳನ್ನು ಅಷ್ಟೇ ಏಕೆ ಅಂದಿನ ಅನಿವಾರ್ಯ ಸಂಪರ್ಕ ಸಾಧನ ಎತ್ತಿನಗಾಡಿ. ಗಾಡಿಯ ಚಕ್ರ, ಪದೇಪದೇ ಹಳಿ ಕಟ್ಟುವುದು, ಗಾಡಿಯ ಮಧ್ಯೆ ಬಳಸುವ ಉಕ್ಕಿನ ಅಚ್ಚಿನ ರಿಪೇರಿ, ಎತ್ತುಗಳ ಕಟ್ಟುವ ನೊಗ ಹೀಗೆ ಸಮಸ್ತ ಮರಗೆಲಸ ಬಲ್ಲವನಾಗಿದ್ದ. ಸ್ವಾವಲಂಬಿ ಬದುಕಿಗೆ ಗುಡಿಗಾರ, ಬಡಗಿ, ಕಮ್ಮಾರ, ಮನೆ ಕಟ್ಟುವ ಮಣ್ಣು ಸೇರೇಗಾರನೂ ಆಗುತ್ತಿದ್ದ.

ಜೇಷ್ಠ ಮಾಸದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯಿಂದ ಪ್ರಾರಂಭವಾಗುವ ಆತನ ಮಣ್ಣಿನ ಕಲಾಕೃತಿ ನೆನಪಿಸಿ ಕೊಳ್ಳಲೇ ಬೇಕು. ಮಣ್ಣಿನಿಂದ ತಯಾರಿಸಿದ ಎತ್ತುಗಳು, ಅವುಗಳು ತೊಡುವ ಕೊಂಬೆಣಸು, ಇಳಿಗವಚ, ಜೂಲು, ಗಂಟೆಸರಗಳ ಆಭರಣಗಳಿಂದ ಶೋಭಿಸಲು ಪ್ರಾರಂಭಿಸಿ, ನಂತರದ ಪಂಚಮಿಯ ನಾಗಪ್ಪ, ಷಷ್ಟಿಯ ಶಿರಿಯಾಳ, ಜಂಗಲೀಕವ್ವ ನೆಂಬ ಮಕ್ಕಳ ಹಬ್ಬದ ಮೂರ್ತಿಗಳು ಹೋಳಿಗೆ ಕಡಬು ತಿಂಡಿಗಳೊಂದಿಗೆ ನೆನಪು ಮಾಡಿಸುತ್ತವೆ. ನಂತರದ ಗಣೇಶ ಹಬ್ಬಕ್ಕಾಗಿ ಮಣ್ಣು ಹದ ಮಾಡುವ ಕಾರ್ಯಕ್ರಮ. ಸುಮಾರು ಎಂಟರಿಂದ ಹತ್ತು ಗಣಪತಿ ವಿಗ್ರಹ ತಯಾರು ಮಾಡುತ್ತಿದ್ದ. ಬಲಗಾಲನ್ನು ಪೂರ್ತಿ ಮಡಚಿ ಎಡಭಾಗದಲ್ಲಿ ಠೀವಿಯಿಂದ ಅರ್ಧ ಕಾಲು ಚಾಚುವ, ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಳ್ಳುವ, ದಿಂಬಿನ ಮೇಲೆ ಕೈಯಿಟ್ಟು ವಿಶ್ರಾಂತವಾಗಿರುವ, ಯಾವ ರೀತಿಯೂ ಬೇಡ ಎಂದು ಸುಮ್ಮನೆ ಹಸನ್ಮುಖಿಯಾಗಿ ನಿಂತಿರುವ, ಸಹಜವಾಗಿ ಕುಳಿತಿರುವ ಹೀಗೆ ವಿಧವಿಧದ ಭಂಗಿಗಳಲ್ಲಿ ಗಣಪತಿ ವಿಗ್ರಹ ಗಳು. ಶ್ರಾವಣದ ಎಡೆಬಿಡದ ಮಳೆಯಲ್ಲಿನ ಕೃಷಿ ಕೆಲಸ, ಮೂರ್ತಿ ಒಣಗಲು ಬಿಡದ ಭೋ ಎಂದು ಸುರಿಯುವ ಮಳೆಯ ವಾತಾವರಣ. ಮೂರ್ತಿಗಳನ್ನು ಹಲವು ಕೋನಗಳಲ್ಲಿ ನೋಡಿ ತಿದ್ದಿ ತೀಡಿ ರೂಪ ಕೊಡುವ ಅವನ ಆಸಕ್ತಿ ಹೇಳತೀರದು. ಬಣ್ಣದ ಡಬ್ಬಿ ಗಳಿಡುವ ಬೆತ್ತದ ಕಪ್ಪು ಬುಟ್ಟಿ ಕೊಡುವ ಅತ್ತೆಗೆ, ಸರಸೀ, ಈ ಬಣ್ಣ ಹೇಗೆ, ಜರೀ ಪಂಚೆಯಲ್ಲಿ ಹೇಗೆ ಕಾಣಬಹುದು, ನೆರಿಗೆ ಚೆನ್ನಾಗಿ ಬಂದಿದೆಯೇ, ಅಂಚಿನ ಅಲಂಕಾರ ಹೇಗೆ ಎಂದು ಅತ್ತೆಯನ್ನೂ, ಮೈ ಕೈ ಗಳ ಸಪಾಟು ಜಾಗಕ್ಕೆ ಬಣ್ಣ ಹಚ್ಚುವ ಕೆಲಸಗಳಿಗೆ ಮಕ್ಕಳನ್ನೂ ಹೀಗೆ ಕಲಾಕೃತಿಗಳ ಕೆಲಸದಲ್ಲಿ ಎಲ್ಲರಿಗೂ ಭಾಗವಹಿಸಲು ಅವಕಾಶ ಮಾಡುವ ಅವನ ಜಾಣ್ಮೆ ಮೆಚ್ಚಲೇಬೇಕು. ಭಾವವಿರುವ ಕಲೆ, ಶಾಂತಿ ಸಮಾಧಾನದ ಬಣ್ಣದ ಆಯ್ಕೆ ಯ ವಿಗ್ರಹಗಳು ನೋಡುಗರ ಮನದಲ್ಲಿ ಗಣಪತಿಯಲ್ಲಿ ಜೀವ ತುಂಬಿ ಪೂಜ್ಯ ಭಾವನೆ ಬರಿಸುತ್ತಿತ್ತು. ಹತ್ತಿರದ ಬಂಧು ಮಿತ್ರರಿಗೆ ವಿಶ್ವಾಸಕ್ಕೆ ಮಾಡುವ ಈ ಹವ್ಯಾಸಿ ಸೇವೆ ಅವನಿಗೆ ನಷ್ಟ ದ ಬಾಬತ್ತೇ ಆದರೂ ಸಂತಸದ ವಿಷಯವೇ.

ಊರಿನಲ್ಲೊಂದೇ ಇದ್ದ ಮಂಗಳೂರು ಹೆಂಚಿನ ಮನೆ ನಮ್ಮದು. ವಿವಿಧೋದ್ದೇಶಗಳಿಗಾಗಿ ಕಟ್ಟಿರುವ ಮನೆ ನಾಲ್ಕು ದೊಡ್ಡ ಮೆಟ್ಟಿಲು ಹತ್ತಿದರೆ ಮನೆ ಸುತ್ತಮುತ್ತ ಇರುವ ಕಟ್ಟೆ. ನಂತರ ಅವರಿವರು ಬಂದಾಗ ಕೂಡಲೊಂದು ಪಡಸಾಲೆ. ಬಲಕ್ಕೊಂದು ಅತಿಥಿಗಳ ಕೊಠಡಿ ಮುಂದೆ ನಡುಮನೆ, ಎಡಕ್ಕೊಂದು ಮಲಗುವ ಮನೆ. ಮಳೆಗಾಲ ಕ್ಕೆಂದು ಸಂಗ್ರಹಿಸುವ ದಿನಸಿ, ಮಾರಾಟವಾಗದ ಬೆಲ್ಲದ ಡಬ್ಬ ಇಡಲೂ ಬಳಸುವ, ಮಕ್ಕಳು ಮಲಗಲು ಬೆಚ್ಚಗಿರುವ ಈ ಆವರಣ, ಒಂದು ಸಣ್ಣ ಉಗ್ರಾಣವೂ ಹೌದು. ಎಸೆಯಲಾಗದ ಇಡಲಾಗದ ವಸ್ತುಗಳಿಗಾಗಿ ಅಟ್ಟ, ಅಡಿಗೆ, ಊಟದ ಮನೆ ಮೂಲೆಯಲ್ಲೊಂದು ತಲಾಂತರದಿಂದ ಬಂದಿರುವ ದೇವರ ಗೂಡು, ಈ ಮನೆಗೆ ಕೂಡಿದಂತೆ ಹಿಂದೊಂದು ಮನೆ, ಬಾವಿ, ಬಚ್ಚಲು, ಅಡಿಕೆ ಸುಗ್ಗಿ ಇತ್ಯಾದಿ ಗಳಿಗಾಗಿ ವಿಶಾಲವಾದ ಮತ್ತೊಂದು ಸುಸಜ್ಜಿತ ಮನೆ.

ಹಿಂಭಾಗದ ಅಂಗಳದಲ್ಲಿ ಸದಾಕಾಲದಲ್ಲಿ ಪೂಜೆಗಾಗಿ ಬೆಳೆಸಿದ ಹೂದೋಟ. ಮಲ್ಲಿಗೆ, ನಂಜುಬಟ್ಟಲು, ಗೊರಟೆ, ದಾಸವಾಳ ಹೂಗಳು ಸದಾ ಇದ್ದರೆ ಮಳೆಗಾಲದಲ್ಲಿ ಬರುವ ಹೂಗಳೇ ಬೇರೆ. ಬಣ್ಣ ಬಣ್ಣದ ಢೇರೆ, ಕನಕಾಂಬರ ಇತ್ಯಾದಿ. ಮರದಲ್ಲಿ ಬರುವ ಪರಾವಲಂಬಿ ಸೀತಾಳೆ ಹೂಗಳು. ದಾಟಿದರೆ ಎತ್ತರದ ಔದುಂಬರ - ಅರಳೀ ಕಟ್ಟೆ. ಒಂದು ನೆಲ್ಲಿ ಮರವೂ ಸಹ. ದಿನ ನಿತ್ಯ ಪ್ರದಕ್ಷಿಣೆ ಪೂಜೆ ಆಗುವ ಈ ಸ್ಥಳದಲ್ಲಿ ಕಾರ್ತೀಕ ಮಾಸದಲ್ಲಿ ಪ್ರತಿ ದಿನವೂ, ಮನೆಯ ಹೆಣ್ಣು ಮಕ್ಕಳ ದೊಡ್ಡ ದೊಡ್ಡ ರಂಗೋಲಿಯ ಪೈಪೋಟಿಯ ಕಲಾಸ್ಪರ್ಧೆ. ದೀಪೋತ್ಸವದ ಶೃದ್ಧೆಯ ಸಡಗರ. ಮಕ್ಕಳಿಗೆ ಪೂಜೆಗಿಂತ ಕಡೆಗೆ ಹಂಚುವ ಪನಿವಾರದ ತಿಂಡಿಯ ಮೇಲೆ ಭಕ್ತಿ ಹೆಚ್ಚು.

ಸಂಪ್ರದಾಯಸ್ಥ ಮನೆ ಎಂದ ಮೇಲೆ ಹಬ್ಬಕ್ಕೆ ಕೊರತೆಯೇ. ಬಸವನ ಅಮಾವಾಸ್ಯೆ, ಶ್ರಾವಣದ ನಾಗರ ಚೌತಿ ಯಲ್ಲಿ ಮಕ್ಕಳಿಂದಲೂ ನಾಗರ ಪೂಜೆ, ಮರುದಿನ ನಾಗರಪಂಚಮಿ, ನಾಗನ ನಂತರ ಗಂಡು ಮಕ್ಕಳ ಬೆನ್ನಿಗೊಂದು ಪೂಜೆ. ಶಿರಿಯಾಳ ಷಷ್ಠಿ, ಗೋಕುಲಾಷ್ಟಮಿ, ಹಬ್ಬಗಳು ಜೊತೆಗೆ ಪ್ರತಿ ಶುಕ್ರವಾರ, ಶನಿವಾರ ಸಂಪತ್ ಗೌರಿ ಪೂಜೆ, ಹಬ್ಬ ಜೊತೆಗೆ ವಿಶೇಷ ಊಟ ತಿಂಡಿಗಳ ವಾಸನೆಯು ಸಣ್ಣ ಮಳೆ ಬಂದರೂ ಶಾಲೆಗೆ ಹೋಗುವುದು ಬೇಡವೆನಿಸುತ್ತಿತ್ತು. ಅತ್ತೆ ಹೇಳಿಕೊಡುವ ಸಂಜೆಯ ಬಾಯಿಪಾಠ ದೊಂದಿಗೆ ಅಂದಿನ ಹಬ್ಬದ ವಿಶೇಷ ಕಥೆ, ಶ್ರಾವಣ ಗೌರಿಯ ಶುಕ್ರವಾರದ ಶಾಲ್ಯಾನ್ನ, ಶ್ಯಾವಿಗೆ ಪಾಯಸ, ಹೋಳಿಗೆಯ ವಿಶೇಷ ಗಳು ಶನಿವಾರಕ್ಕೆ ದಿಡೀರ್ ಬದಲಾಗಿ ಕೇವಲ ಹಿಟ್ಟಿನ ಕಡುಬು, ಹಿಂಡಿಪಲ್ಯ, ನುಚ್ಚಿನ ಅಂಬಲಿ ಆದ ಬಗ್ಗೆ ಆಕೆ ಹೇಳುವ ಸೋಮೇಶ ಭಟ್ಟರ ಕಥೆ, ಅವರಿಗೆ ದೊರೆತ ಮಕ್ಕಳಾದ, ಹಬ್ಬ ಮಾಡಿದ ಸಾಯಕ್ಕಳ ಸುಖ, ಹಬ್ಬ ಮರೆತ ದೇಯಕ್ಕರು ಪಡುವ ಕಷ್ಟದ ಕಥೆ ಕೇಳಿ ಆರು ದಶಕವಾದರೂ ಮರೆಯದು. "ಅನುಕೂಲ ಬಂದಾಗ ಮೆರೆಯಬಾರದು, ಆಹಾರಕ್ಕೆ ಅಸಡ್ಡೆ ಮಾಡಬಾರದು" ಎನ್ನುವ ಆದರ್ಶದ ಕಥೆ. ಇಂದಿಗೂ ಶುಕ್ರವಾರ ಶನಿವಾರದ ಗೌರಿ ಎಂದಾಗ ಅತ್ತೆ ಹೇಳಿದ ಕಥೆ ಹೊಚ್ಚ ಹೊಸತಾಗೇ ಕಾಣುತ್ತದೆ.

ಗದ್ದೆ ತೋಟಗಳ ಕೆಲಸವಿರಲಿ, ಹಬ್ಬ ಹರಿದಿನಗಳ ಪೂಜೆ ಇರಲಿ ಎಲ್ಲವಕ್ಕೂ ಶೃದ್ಧೆ ಶಿಸ್ತು ಸಂಯಮ ನಮ್ಮ ಮಾವನಿಗೆ ಸಹಜ. ಹಾಗೆಯೇ ನಿತ್ಯ ದ ಪೂಜೆಯಲ್ಲೂ ಸಹ. ಮಂಟಪದಲ್ಲಿ ಹತ್ತಾರು ವಿಗ್ರಹಗಳು, ಇಂದಿನ ಹಬ್ಬದಲ್ಲಿ ಮಾತ್ರವೇ ಎಲ್ಲಾ ಕಡೆ ಕಾಣಸಿಗುವ ಗೌರಿ ವಿಗ್ರಹಕ್ಕೆ ಮನೆಯಲ್ಲಿ ನಿತ್ಯ ಪೂಜೆ. ಮಂಟಪದಲ್ಲಿ ಜೊತೆಗೆ ತಲಾಂತರದಿಂದ ಪೂಜಿಸಲ್ಪಡುವ ಗುರು ಪಾದುಕೆಗಳು, ಸಾಲಿಗ್ರಾಮ, ಎಲ್ಲವಕ್ಕೂ ಕ್ರಮಬದ್ಧವಾಗಿ ಮಾಡುವ ಪೂಜೆ, ಆರತಿ. ನಂತರ ಊಟ, ಮಾಡುವ ಕೆಲಸದತ್ತ ಗಮನ. ಸಾಗರಕ್ಕೆ ಹೊರಡಲಿ ಪಕ್ಕದ ಹಳ್ಳಿಯಲ್ಲಿಯಲ್ಲಿನ ಬಂಧುಗಳ ಮನೆಗೇ ಹೋಗಲಿ ಗರಿಗರಿಯಾಗಿ ಕಾಣುವ ನಾಜೂಕಿನಿಂದ ಹಾಕಿದ ನೆರಿಗೆಯ ಶುಭ್ರ ಬಿಳಿ, ಕಚ್ಚೆ ಪಂಚೆ, ಮುದುರಿಲ್ಲದ ಅಂಗಿ, ಗೊತ್ತಿರುವ ಬಂಧುಗಳಿಗೆ ಇದೂ ಹೆಮ್ಮೆಯಿಂದ ಆಡಿಕೊಳ್ಳುವ ವಿಷಯ. ಅವನು ಇಲ್ಲವಾಗಿ ಎರಡು ದಶಕಗಳ ನಂತರವೂ ಯಾರಾದರೂ ಚೆನ್ನಾಗಿ ಪಂಚೆ ಉಟ್ಟಾಗ ನೆನಪು ತರುವ ಅವನ ಶಿಸ್ತು ಚಿರನೂತನ.

ಕೊಟ್ಟಿಗೆಯಲ್ಲಿ ಸೆಗಣಿ ಸಾಮಾನ್ಯ ವಾದರೂ ಅಲ್ಲಿಯ ಹಸು ಎಮ್ಮೆ ಎತ್ತು ಗಳ ಮೈ ಕಾಲುಗಳು ಶುದ್ಧ ವಾಗಿರುವಂತೆ ನೋಡಿಕೊಳ್ಳುತ್ತಿದ್ದ. ಎತ್ತುಗಳು ಬೇಸಾಯದ ಕೆಲಸ ಮುಗಿಸಿದ ನಂತರ ಅವುಗಳ ಮೈದಡವಿ ಅವುಗಳೊಂದಿಗೆ ಕ್ಷೇಮದ ಸಂಭಾಷಣೆ, ಗಾಡಿ ಎಳೆಯುವಾಗ ಏರುದಾರಿಯಲ್ಲಿ ಭಾರ ಕಡಿಮೆ ಮಾಡಲು ಕುಳಿತವರಿಗೆ ಕೆಲವು ದೂರ ನಡೆದು ಬರಲು ಹೇಳುವುದು, ಕಷ್ಟದ ದಾರಿ ಮುಗಿದ ಮೇಲೆ ಅವುಗಳಿಗೆ ವಿಶ್ರಾಂತಿ ಕೊಡುವುದು ಅವನ ಮಾಮೂಲಿ ಅಭ್ಯಾಸ. ಇಂದಿನ "ಗಿಡ ನೆಡಿ" ಕಾರ್ಯಕ್ರಮ ವನ್ನು ದಿನ ನಿತ್ಯ ದ ಜೀವನದಲ್ಲಿ ಅನುಸರಿಸಿದವ. ಮಳೆಗಾಲದಲ್ಲಿ ಸೊಪ್ಪಿನ ಬೆಟ್ಟವೆಂಬ ಮಿನಿ ಕಾಡಿನಲ್ಲಿ ಕಾಣುವ ಖಾಲಿ ಜಾಗದಲ್ಲಿ ಗಿಡ ನೆಡುವ, ಕಾಯಿ ಬೀಜ ನೆಡುವುದನ್ನು ಈಗ ನೆನಪಿಸಿಕೊಂಡರೆ ಅವನ ಪ್ರಚಾರವಿಲ್ಲದ ಸಮಾಜಸೇವೆ ಅನುಕರಣೀಯ. ಪ್ರಾಣಿ ದಯೆ, ಪರಿಸರ ಪ್ರೇಮ ಜೀವನದ ಒಂದು ಭಾಗವಾಗಿತ್ತು. ಜೀವನ ನಿರ್ವಹಣೆ ದುಬಾರಿಯಾದರೂ ಬರುವ ಅತಿಥಿಗಳಲ್ಲಿ, ಸಂಪ್ರದಾಯದ ಹಬ್ಬಗಳ ಆಚರಣೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಲ್ಲಿ ರಾಜಿಮಾಡಿಕೊಳ್ಳದೆ ಆಚರಣೆ ನಡೆಸಿದ ಜೀವನವು ಈ ಕೆಳಗಿನ ಶ್ರೀ ಡಿವಿಜಿ ಯವರ ಸಾಲುಗಳನ್ನು ಸಹಜವಾಗಿ ಹೊಂದುತ್ತವೆ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೇ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು | ಮಂಕುತಿಮ್ಮ


ಬರೆದು ಮುಗಿಸುವ ಮುನ್ನ ನೆನಪಾಗುವ ಶಿರಗುಪ್ಪೆ ಮನೆಯಲ್ಲಿನ ಹಳ್ಳಿಗೊಜ್ಜು, ಮೆಂತೆ ಹಿಟ್ಟಿನ ಗೊಜ್ಜು, ಗಣಪತಿ ಹಬ್ಬ ಬಂದರೂ ವಿತರಣೆ ಯಾಗುತ್ತಿದ್ದ ನಾಗರ ಪಂಚಮಿ ತಂಬಿಟ್ಟು, ದೀಪಾವಳಿಗೆ ಮತ್ತಿ ಸೊಪ್ಪಿನ ಗೊಂಪಿನೊಂದಿಗೆ ಸುಡು ನೀರಿನ ಎರೆತ, ಮನೆಯಲ್ಲೇ ಮಾಡುತ್ತಿದ್ದ ಆಕಾಶಬುಟ್ಟಿ, ತಿರುಗಿಸಿ ಕಾಫೀ ಪುಡಿ ಮಾಡುವ ಮೆಷಿನ್, ಟ್ರಾನ್ಸಿಸ್ಟರ್ ನಲ್ಲಿ ಕೇಳುತ್ತಿದ್ದ ಗೀತಾರಾಧನ, ಶನಿವಾರದ ಸುಪ್ರಭಾತ, ರಾಮ ರಾಮ ಜಯ ರಘುಕುಲ ಸೋಮಾ ಎಂಬ ದೊಡ್ಡ ಧ್ವನಿಯ ಹಾಡು, ಬೆಳ್ಳನೆ ಬೆಳಗಾಯಿತು, ಅರುಣೋದಯ ಕಾಲಾ ಎಂಬ ಶಾಂತ ಸುಮಧುರ ಚಿತ್ರಗೀತೆಗಳು, ಶಾಂತಕ್ಕನ ಓರಣದ ಬಟ್ಟೆ ಮಡಚುವಿಕೆ, ಹಾಸಿಗೆ ಹಾಸಿಕೊಡುತ್ತಿದ್ದ ಸುಮಿತ್ರಕ್ಕ, ಮಡಿ ಹೆಸರಲ್ಲಿ ಶಿಸ್ತು ಕಲಿಸುವ ಭಾಗತ್ತಿ, ಮಳೆಗಾಲದಲ್ಲಿ ಮಾತ್ರ ಕಾಣುತ್ತಿದ್ದ ನಿಸಾರ್ ಅಹಮದ್ ರವರ ನಿತ್ಯ ಹರಿದ್ವರ್ಣದ ಕಾಡು, ಅಡಿಕೆ ಸುಗ್ಗಿಯ ಮೊದಲೇ ಪ್ರತ್ಯಕ್ಷವಾಗುವ ಸಂಭಾವನೆ ಕೇಳುವ ಅತಿಥಿ ಗೋಕರ್ಣದ ಭಟ್ಟರು, ಧೋ ಎಂಬ ಮಳೆಯ ಮಧ್ಯೆ ಕಾಣುವ ತುಂಬಿದ ಹೊಳೆ ಇವು ನೆನಪಿನ ಬುತ್ತಿಯಲ್ಲಿ ಸದಾ.

ಏಳನೇ ತರಗತಿ ಮುಗಿಯಿತು. ಮುಂದಿನ ವಿದ್ಯಾಭ್ಯಾಸಕ್ಕೆ ಅಲ್ಲಿ ಅನುಕೂಲವಿಲ್ಲ. ನಾನೊಂದು ಕಡೆ. ಮಾವನ ಮಗ ವಿನಾಯಕ ಮತ್ತೊಂದು ಕಡೆ. ವಿದ್ಯಾಭ್ಯಾಸ ಮುಗಿಸಿ ಬೇರೆ ಬೇರೆ ಕಡೆ ಓದಿ ಕೆಲಸವೂ ಆಗಿ ವಿಶ್ರಾಂತರಾದರೂ ಅವರೊಂದಿಗಿನ ಸಂಬಂಧ ಎಂದಿನಂತೆ ಮುಂದುವರೆದಿದೆ. ಹಿರಿಯರ ನಿಸ್ವಾರ್ಥ ಬದುಕಿಗೆ ಆಶೀರ್ವಾದವಾಗಿ ಅವರ ಮೊಮ್ಮಕ್ಕಳವರೆಗೂ ಅನುಕೂಲವಾಗಿ ಆರೋಗ್ಯವಾಗಿ ಇದ್ದಾರೆ ಎಂಬುದು ಸಂತಸದ ವಿಷಯ.

ಕಥೆಗೆ ನಿಲುಕದ ಕೆಲವು ವಿಷಯಗಳು. ನೆಲದಿಂದ ಹಠಾತ್ತಾಗಿ ಬರುವ ನೆಲಸುರುಳಿ ಹೂ, ಮಳೆ ಚಳಿಗಾಲದಲ್ಲಿ ಮೈ ಕಾಯಿಸಲು ಬೆಂಕಿಯ ಮುಂದೆ ಕುಳಿತಾಗ ಬಿಸಿ ಸಾಕೋ ಬೇಕೋ ಎಂಬ ಅತೃಪ್ತತೆ, ಎಷ್ಟು ತೆಗೆದರೂ ಬರುವ ಬಾವಿಯ ನೀರು, ಹಕ್ಕಿ ಓಡಿಸುವ ನೀರು ಡಬ್ಬ, ರಕ್ಕಸ ಪಟ್ಟಿ ಎನ್ನುವ ಕತ್ತಾಳೆ ಬೇಲಿ, ನೆಲದಿಂದ ಒಡೆದು ಬರುವ ಮಳೆಗಾಲದ ಜಲ, ಧಿಡೀರ್ ಪ್ರತ್ಯಕ್ಷ ವಾಗುವ ಕಪ್ಪೆಗಳು, ಮೂರೇ ಎಲೆ ಇರುವ ಮುತ್ತುಗ, ಕವಳೆ ಹಣ್ಣು ತೆಗೆಯಲು ಹೋದಾಗಲೆಲ್ಲ ಚುಚ್ಚುವ ಮುಳ್ಳು, ಯಾರಿಗೂ ಗೊತ್ತಾಗದಂತೆ ಹೋದಾಗಲೇ ಕಾಲಿಗೆ ನೆಡುವ ಕಾರೆ ಮುಳ್ಳು, ಬರಗಾಲ ಬಂದಾಗ ಮಾತ್ರ ಕಾಣಸಿಗುವ ಬಿದರಕ್ಕಿ, ಜಾನುವಾರುಗಳ ವಯಸ್ಸನ್ನು ಅವುಗಳ ಹಲ್ಲು ಎಣಿಸಿ ಹೇಳುವುದು, ಅವುಗಳ ಕಾಲಿನ ರೋಗಕ್ಕೆ ಹಳೇ ಬ್ಯಾಟರಿ ಶೆಲ್ ಗಳ ಪುಡಿಯ ಔಷಧಿ, ನಮ್ಮ ಕಾಲಿಗೆ ಮುಳ್ಳು ಚುಚ್ಚಿ ದ ಜಾಗಕ್ಕೆ ಮೆಣಸಿನ ಕಾಯಿ ಎಣ್ಣೆಯ ಬರೆ, ಸೀಮೆಎಣ್ಣೆ ಸವರಿಕೊಂಡಾಗ ವಾಸಿಯಾಗುವ ಕಾಲು ನೋವು, ಮಳೆಯ ನಡುವೆ ಕಂಬಳಿಕೊಪ್ಪೆ, ಗೋಣಿ ಕೊಪ್ಪೆ, ಬಿದಿರಿನ ಕೊಟ್ಟೆ ತೊಟ್ಟು ಕೆಲಸ ಮಾಡುವವರ ಏಕಾಗ್ರತೆ, ಹೀಗೆ ಹಲವು ಸೋಜಿಗದ ಘಟನೆಗೆ ಉತ್ತರ ಕಷ್ಟಕರ.

ಹಿರಿಯರಾದ ಶಾನುಭೋಗ ಕಲಸಿ ರಾಮಣ್ಣ, ಸರೋಜಕ್ಕ, ಸದಾ ಬೀಡಿ ಕಟ್ಟುತ್ತಿದ್ದ ಕರ್ಮಯೋಗಿ ಭಟ್ಟರು, ಯಾವ ಕೆಲಸಕ್ಕೂ ಸೈ ಎನಿಸಿಕೊಳ್ಳುವ ಶಾರದಮ್ಮ, ಗೋಪಾಲಣ್ಣ, ಲೀಲಕ್ಕ, ನರಸಿಂಹಮೂರ್ತಣ್ಣ, ದಿನನಿತ್ಯದ ಪರಿಚಯಗಳಾದರೆ ವಾಸು, ದತ್ತು,ಸುರೇಶ, ಸಹದೇವ, ಗಣಪತಿ, ಅನಂತ, ಕೇಶವರು ಹಾಗೂ ನನ್ನ ಮಾವನ ಮಕ್ಕಳಾದ ಶಾಂತಕ್ಕ, ಸುಮಿತ್ರಾ, ವಿನಾಯಕ, ರಾಜು ಮತ್ತು ಸುನಂದಾ ಇವರು ಮರೆಯಲಾಗದ ಒಡನಾಡಿಗಳು. ರಸ್ತೆಯ ಆ ಭಾಗದಲ್ಲಿದ್ದ ಚಂದಿ, ಬಾವಿ ಮನೆ ಬಂಗಾರಪ್ಪ, ಹೇಮಾವತಿ, ಕೃಷ್ಣಪ್ಪ, ರುಕ್ಮಿಣಿ, ಹಾರ್ಮೋನಿಯಂ ಕೃಷ್ಣಪ್ಪ, ಮುಕಾಂಬಿಕಿ ಬಂಗಾರಶೆಟ್ಟಿ, ದೇವಕಿ, ಚಂದ್ರ, ಕಡೆ ಮನೆಯ ಬಂಗಾರಪ್ಪ ಗೌಡರು, ಕುಸುಮಮ್ಮ, ಮಲ್ಲಪ್ಪ, ಲಿಂಗಭೇದವಿಲ್ಲದ ಕೇಶವಿನ್ಯಾಸಕ ಸಣ್ಯ, ಕೊಟ್ಟಿಗೆ ಶುಬ್ರಕಿ ಮನ್ನಿ  ತಕ್ಷಣಕ್ಕೆ ನೆನಪಿಗೆ ಬರುವವರು ಅಲ್ಲದೆ ಇನ್ನೂ ಹಲವರು  ಪರಿಚಯದ ಪಟ್ಟಿಯಲ್ಲಿದ್ದು ನಾನು ಆ ಊರಿನಲ್ಲಿದ್ದುದಕ್ಕೆ ಸಾಕ್ಷಿ ಗಳಾಗಿ ಸಿಗುವವರು. ಪರಿಸರ ಪರಿಸ್ಥಿತಿಗಳಲ್ಲಿ ನಾನು ಬೆಳೆಯಲು ಅವ್ಯಕ್ತವಾಗಿ ಸಹಾಯಿಸಿದ ಅವರ ಸ್ಮರಣೆ ಸದಾ ನನ್ನ ಮನದಲ್ಲಿದೆ. 

ವೈಯಕ್ತಿಕವಾಗಿ ಸ್ಮರಣೆಯಿಂದ ಹೊರಗೆಳೆದರೆ, ಎತ್ತಿ ಇಡುತ್ತಿದ್ದ ತಿಂಡಿಗಳನ್ನು ಕದ್ದು ತಿಂದಿದ್ದು, ಮಲಗಿದ್ದ ಮಗುವನ್ನು ತುಳಿದು ಓಡಿ ತಿಂದ ಏಟುಗಳು, ಸುಮಿತ್ರಕ್ಕನ ಚರಿತ್ರೆ ಪುಸ್ತಕದ ಪುಟ ಹರಿದು ಶಿಕ್ಷೆಯಾಗಿ ಸ್ಲೇಟಿನಲ್ಲಿ ಹರಿಯಪ್ಪ ಎಂದು ದಿನಪೂರ್ತಿ ತಿದ್ದಿದ್ದು, ಕಸ ಎಸೆದಾಗ ಭಟ್ಟರ ಅಂಗಳಕ್ಕೆ ಬಿದ್ದು ಶಾರದಮ್ಮನವರಿಂದ ಬೆನ್ನಿಗೆ ಬಿದ್ದ ಗುದ್ದು, ನಿಂಬೆಗಿಡದ ಪಕ್ಕದಲ್ಲಿ ಬೆಳೆದ ನೆಲಕಡಲೆ ಗೊತ್ತಾಗದಂತೆ ಕಿತ್ತು ತಿಂದು ಅಜ್ಜಿಯಿಂದ ರಿಪೇರಿಯಾಗಿದ್ದು, ಯಾವುದೋ ಕಾಯಿಲೆಯಿಂದ ಬೆರಳುಗಳು ಸೊಟ್ಟವಾದ ಬಾಗತ್ತಿ ಎಂಬ ಮಡಿ ಅಜ್ಜಿಯ ನೋಡಿ ಆಡಿಕೊಂಡು ನಕ್ಕಿದ್ದು, ಅಷ್ಟಾವಕ್ರನ ಕಥೆ ಕೇಳಿ ನಾನೂ ಹಾಗೆ ಆಗಿಬಿಡುತ್ತೇವೆನೋ ಎಂದು ಹೆದರಿ ಇಂದಿಗೂ ಯಾರನ್ನು ಆಡಿಕೊಳ್ಳದ ಅಜ್ಜಿಯ ಖಾಯಂ ದುರಸ್ತಿ, ಒಗೆದ ಬಟ್ಟೆಗಳನ್ನು ಮಣ್ಣಿಗೆ ಬೀಳಿಸಿ ಅತ್ತೆಗೆ ಕೆಲಸ ಕೊಟ್ಟಿದ್ದು, ನೀರು ಒಡ್ಡಿನ ದಡದಲ್ಲಿ ಬೇಡವೆಂದರೂ ಆಡಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದಿದ್ದು, ದೀಪಾವಳಿಯ ಪುಂಡಿ ಕೋಲಿನ ದೊಂದಿ ಅಥವಾ ಪಂಜು ಆಡಿದ ನಂತರ ರಾತ್ರಿ ಗೊಬ್ಬರ ಗುಂಡಿಗೆ ಎಸೆದಾಗ ಮರುದಿನ ಅದರ ಬಹುಭಾಗ ಸುಟ್ಟು ಗಿಟ್ಟಿಸಿದ ಬಿಸಿ ಬಹುಮಾನ, ಹೀಗೆ ನೆನಪಿಗೆ ಬರುವ ಹೇಳಬಹುದಾದ ಇತಿಹಾಸಗಳು ನನ್ನ ಫೈಲಿನಲ್ಲಿ ದೊರೆಯುತ್ತವೆ.

ಗದ್ದೆ ತೋಟಗಳಲ್ಲಿ, ಕಾಡು ಮೇಡುಗಳಲ್ಲಿ ನಿಶ್ಯಬ್ದವಾಗಿ ಬೆಳೆಯುವ ಫಲದೊಂದಿಗೆ ತಾವೂ ಒಂದಾಗಿ ನಿಸ್ವಾರ್ಥವಾಗಿ ಸಮಾಜಕ್ಕೂ, ಬಂಧುಗಳಿಗೂ, ಪ್ರಾಣಿ ಪರಿಸರಕ್ಕಾಗಿ ಬದುಕಿದ ಈ ಹಿರಿಯರೊಂದಿಗೆ, ಜೀವನದ ಪ್ರತಿ ಕ್ಷಣವೂ ಮಾಡಿದ ಕೆಲಸಗಳಿಗೆ, ಚಿಕ್ಕ ಪುಟ್ಟ ಸಾಧನೆಗಳಿಗೆ ಹೊಗಳಿಕೆ ಸನ್ಮಾನ ಪಾರಿತೋಷಕಗಳ ನಿರೀಕ್ಷಿಸುವ ನಮಗೆಂದೇ ಬರೆದಂತಿರುವ ಕೆಳಗಿನ ಈ ಶ್ರೀ ಡಿವಿಜಿ ಯವರ ಕಗ್ಗ ಎಷ್ಟು ಅರ್ಥಪೂರ್ಣ.

ಇಳೆಯಿಂದ ಮೊಳಕೆಯೊಡೆವಂದು ತಮಟೆಗಳಿಲ್ಲ
ಫಲಮಾಗುವಂದು ತುತ್ತೂರಿ ದನಿಯಿಲ್ಲ|
ಬೆಳಕೀವ ಸೂರ್ಯ-ಚಂದ್ರರದೊಂದು ಸದ್ದಿಲ್ಲ
ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ ||

 
ಮೇಲಿನ ಕವಿಯ ಸಾಲುಗಳು ಬಾಳಿನ ಮುಂದಿನ ಭಾಗಕ್ಕಾದರೂ ಪರಿಣಾಮ ಬೀರಿದರೆ ಸಾಕು. ಹಳ್ಳಿಯ ಹಿರಿಯರು ನಡೆಸಿ ಹೋದ ಅಂತಹ ಜೀವನವನ್ನು ಕರುಣಿಸು ಎಂದು ದೇವರಲ್ಲಿ, ಅದೇ ಹಿರಿಯರಲ್ಲೇ ಪ್ರಾರ್ಥಿಸಿ ಅನುಸರಿಸೋಣ.

ಮಕ್ಕಳ ಮದುವೆ, ವಿದ್ಯಾಭ್ಯಾಸ, ಇತ್ಯಾದಿ ನಡೆದು ಅನಿವಾರ್ಯವಾಗಿ ಅವರು ದೂರದಲ್ಲಿ ಇರುವ ಪರಿಸ್ಥಿತಿ. ಅಲ್ಲೇ ಇದ್ದೇನು ಮಾಡುವುದು. ಜೊತೆಗೆ ಬೆಳೆಗಿಂತ ಬೆಳೆಸಲು ಹೆಚ್ಚಾದ ಖರ್ಚುಗಳು, ಕಾಲಕಾಲಕ್ಕೆ ಬರದ ಮಳೆ, ಕರೆದರೂ ಸಿಗದ, ಸಿಕ್ಕರೂ ದುಬಾರಿಯಾದ ಆಳುಗಳು, ದೂರದಲ್ಲಿನ ಮಕ್ಕಳ ಸಂಪರ್ಕಕ್ಕೆ ಓಡಾಟ ಹೀಗೆ ಹಲವು ಹತ್ತು ಕಾರಣಗಳಿಂದ ಜಮೀನು, ಹಳ್ಳಿಯನ್ನು ಬಿಟ್ಟು ತೆರಳಿದ ನಮ್ಮ ಮಾವನ ಸಂಸಾರ, ದೂರದಲ್ಲಿ ಕೆಲಸ ಮಾಡುವ ಮಗನತ್ತ. ಈಗ ಆ ಹಳ್ಳಿ ಶಿರಗುಪ್ಪೆಯ ಜೀವನವು ನೆನೆಪು ಮಾತ್ರ.

ತಳಪಾಯ ಅಥವಾ ಬುನಾದಿ ಭದ್ರವಾಗಿದ್ದರೇ ಕಟ್ಟಡ ಭದ್ರ. ಬಾಲ್ಯದಲ್ಲಿ ದೊರೆತ ಉತ್ತಮ ಶಿಕ್ಷಣ ಉತ್ತಮ ಪ್ರಜೆಯಾಗಿ ಯಶಸ್ವಿಯಾಗಿ ಜೀವನ ನಡೆಸಲು ಅವಕಾಶ ಮಾಡುತ್ತದೆ. ಅಂತೆಯೇ ನೀತಿಯನ್ನು ಪಾಲಿಸಿದರೆ ಸುಖ ನಿಶ್ಚಿತ ಎಂದು ಕಥೆಗಳಿಂದ ವಿಶ್ವಾಸ ಕೊಟ್ಟ ಅಜ್ಜಿ, ಬಾಯಿಪಾಠ, ಸಂಪ್ರದಾಯದ ಕಥೆಗಳ ಮಧ್ಯೆ ನೀಡಿದ ಸಂಸ್ಕೃತಿಯ ಪಾಠ ನೀಡಿದ ಅತ್ತೆ, ಎಂತಹ ಕಷ್ಟ ನಷ್ಟಗಳ ನಡುವೆಯೂ ನಗುತ್ತಾ ನಗಿಸುತ್ತಾ ಶಿಸ್ತಿನ ಗೌರವದ ಬದುಕನ್ನು ನಡೆಸಿ ಜೀವನದ ಆದರ್ಶಗಳನ್ನು ಕಲಿಸಿದ ಮಾವ ನನ್ನ ಯಶಸ್ವೀ ಜೀವನಕ್ಕೆ ಅಡಿಪಾಯ ಹಾಕಿಕೊಟ್ಟ ಮೂಲ ದೇವರುಗಳು. ಅವರಿಗೆ ಇದೋ ನನ್ನ ನಮನ.

ಅಹಂಬೋ ಅಭಿವಾದಯೇ.

Comments

  1. ಚಿದಂಬರ ಮಾವ ಅನ್ನುವ ಹೆಸರು ನಮ್ಮನೆಯಲ್ಲಿ ಅನುದಿನವೂ ಕೇಳಿ ಬರುವ ಹೆಸರು.ಅವರನ್ನು ನಾವೆಲ್ಲ ನೋಡಿರದಿದ್ದರೂ ಅವರ ಬಗ್ಗೆ ದಿನವೂ ಕೇಳುತ್ತಳೇ ಇರುತ್ತೇವೆ.ಅವರ ಬಗ್ಗೆ ಬರೆದಿದ್ದು ಬಹಳ ಸಂತೋಷವಾಯ್ತು.

    ReplyDelete
  2. ನಿಮ್ಮ ಬಾಲ್ಯದ ಸವಿ/ಕಹಿ ನೆನಪುಗಳ ಬುತ್ತಿಯಿಂದ ಉತ್ತಮ ಭಾಷಾ ಶೈಲಿಯಲ್ಲಿ ಲೇಖನವನ್ನು ಮಂಡಿಸಿದ್ದೀರಿ. ನಿಮ್ಮ ಲೇಖನವನ್ನು ಓದಿದ ನಂತರ ನನ್ನ ಬಾಲ್ಯದ ನೆನಪಿನ ಸುರುಳಿಗಳು ಮನದಾಳದಲ್ಲಿ ಹರಿದಾಡಿದವು. ಹಿಂದಿನ ಜೀವನದ ಕಷ್ಟಗಳು ಮತ್ತು ಅವುಗಳಿಂದ ದೊರಕುತ್ತಿದ್ದ ಮನಸ್ಸಿನ ನೆಮ್ಮದಿ, ಪ್ರಸ್ತುತ ಆಡಂಬರದ ಜೀವನದಲ್ಲಿ ದೊರಕಲಾರದು ಎಂಬುದು ನನ್ನ ಅನ್ನಿಸಿಕೆ. ಧನ್ಯವಾದಗಳು.

    ReplyDelete
  3. Excellent excellent dear. You have not forgotten anything. I was amazed to see and read your article, nicely written. You have covered everything and everyone most importantly and described with all the details. My memory went back so many years and recalled the sweet moments. Thank you Soooo much for having shared your experiences. Just now I told Amma and read it, she is very happy and acknowledged the beautiful memories of 'Shiraguppe'.


    After reading your Blog, my memory also went back long long ago and felt like getting up after a sweet dream. To be frank many points touched my heart and made me emotional. Some phases my eyes were watering, Felt like physically my presence was there. Any way I enjoyed through out....... Hats off to your efforts. Definitely you have taken lot of time to collect so much information. Thanks once again.

    ReplyDelete
  4. ಸರಸ್ವತಿ ಚಿದಂಬರ ಆಶ್ರಯದಲ್ಲಿ, " ಬೆಲ್ಲದ ಸವಿಯ ಬಲ್ಲವನೇ ಬಲ್ಲ' ಎಂಬಂತೆ ಹಳೆ ಸವಿನೆನಪುಗಳ ಸವಿಯನ್ನು ಪುನಹ ನೆನಪಿಸಿಕೊಳ್ಳುವಂತೆ ಆಗಿ, ಮತ್ತೊಮ್ಮೆ ಶ್ರೀಯುತ ಮಾವನ ಮನೆಗೆ ಹೋಗಿ ಬಂದಂತೆ ಅನುಭವವಾಯಿತು. ಮನಸ್ಸಿಗೆ ತುಂಬಾ ಸಂತೋಷವಾಯಿತು. ಹಿಂದಿನ ಜೀವನದ ಶೈಲಿ, ಹಬ್ಬ-ಹರಿದಿನಗಳ ಪೂಜೆ, ಅದನ್ನು ಮನೆಯವರೆಲ್ಲ ಸೇರಿ ಆಚರಿಸುತ್ತಿದ್ದ ರೀತಿ, ಬಾಲ್ಯದಲ್ಲಿ ಕದ್ದು ತಿನ್ನುವ ಮಜಾ, ಬಹಳ ರಸವತ್ತಾಗಿ ಬಂದಿದೆ. ಮಾವ ಮಾಡುತ್ತಿದ್ದ ವಿವಿಧ ರೀತಿಯ ಗಣೇಶನ ವೈಖರಿ, ಅವರು ಧರಿಸುತ್ತಿದ್ದ ಉಡುಪುಗಳ ಉಲ್ಲೇಖ, ದಾರಿಯ ಪಕ್ಕದಲ್ಲಿ ಬೀಜಗಳನ್ನು ನೆಡುತ್ತಿದ್ದ ವಿಶಾಲ ಮನೋಭಾವ ಎಲ್ಲವನ್ನೂ ನೆನೆದು ಬಹಳ ಸಂತೋಷವಾಯಿತು. ಇದ್ದ ಸಮಯದಲ್ಲಿ ಕೆಲಸಮಾಡುತ್ತಲೇ ಪಾಠ ಹೇಳಿಕೊಡುತ್ತಿದ್ದ ಅತ್ತೆಯವರ ಜಾಣತನ ಮೆಚ್ಚುವಂತದ್ದು. ಅವರಿಬ್ಬರಿಗೂ ನನ್ನ ನಮಸ್ಕಾರಗಳು

    ಶ್ರೀಮತಿ ಪಂಕಜ, ಮನೋಹರ್ ರಾವ್.

    ReplyDelete
  5. "ತಂದೆಯ   ಶ್ರಾದ್ಧವನ್ನು   ಶ್ರದ್ಧೆಯಿಂದ    ಮಾಡುವುದ    ತಂದೆ    ನೋಡಿದ್ದರೆ    ತುಂಬಾ   ಸಂತೋಷ   ಪಡುತ್ತಿದ್ದರು"   ಎಂಬ     ಅವರ   ಜೋಕ್ ನ್ನು,   "ಹಾಸಿಗೆ   ಎಷ್ಟೇ    ಚೆನ್ನಾಗಿದ್ದರೂ   ಬೆಳಿಗ್ಗೆ   ಬಿಟ್ಟು    ಏಳಲೇಬೇಕೆಂಬ"  ಕಟುಸತ್ಯ (ನೈಜವೇದಾಂತ)  ತಿಳಿಸಿದ    ಚಿದಂಬರಮಾವನ   ಮರೆಯಲು   ಸಾಧ್ಯವೇ ?    ಬಾಲ್ಯದ   ಎಲ್ಲ   ಘಟನೆ,   ಒಡನಾಡಿಗಳ   ಮರೆಯದೆ   ವರ್ಣಿಸಿ,   ನೀಚಿಡಿ,   ತ್ಯಾಗರ್ತಿ   ಮಾತ್ರ   ನೋಡಿದ   ನನಗೆ    ಶಿರಗುಪ್ಪೆಯ  ದರ್ಶನ   ಮಾಡಿಸಿದ   ನಿನ್ನ   ಬರವಣಿಗೆಯ   ಶೈಲಿ   ಅದ್ಭುತ. ಹಿರಿಯಣ್ಣ   ಕೆ   ಪಿ 

    ReplyDelete
  6. ಶ್ರೀ ಚಿದಂಬರ ಔದುಂಬರ - ಹಾಗು
    ಶ್ರೀ ಸರಸ್ವತಿ ಅಮ್ಮನವರಿಂದ ಬೆಳದುಬಂದ ಅಶ್ವತ್ಥ ಮರ ದ ಸವಿನೆನಪುಗಳು ಅದ್ಭುತವಾಗಿದೆ,
    ನಾನೇ ಚಿದಂಬರ ಮಾವನ ಮನೆಗೆ ಹೋಗಿ ಬಂದಂತೆ ಅನುಭವವಾಯಿತು.

    ReplyDelete
  7. ಆಡಂಬರ ರಹಿತ ಆದರ್ಶ ಪೂರಿತ ಸುಂದರ ಹಳ್ಳಿಯ ಬದುಕಿನ ಅಧ್ಬುತ ಚಿತ್ರಣ ಈ ಲೇಖನ .
    ಹಳ್ಳಿಯ ಬದುಕಿನಲ್ಲಿ ಬರುವ ಎಲ್ಲ ಮಜಲುಗಳ,
    ಎಲ್ಲ ವ್ಯಕ್ತಿಗಳ ಸರಳ ಜೀವನದ ,ದೈನಂದಿನ ಕೆಲಸಗಳ, ಹವ್ಯಾಸಗಳ ಪರಿಚಯಿಸುವ ಬರಹ .
    ನಮ್ಮ ಜೀವನದಲ್ಲೂ ನಡೆದ ಘಟನೆಗಳನ್ನು
    ನೆನಪಿಸುತ್ತದೆ ಈ ಲೇಖನ. ಬರಹಗಾರರ ಅಧ್ಬುತ
    ನೆನಪಿನ
    ಶಕ್ತಿಯ ಪರಿಚಯವನ್ನೂ ಮಾಡುತ್ತದೆ ಈ ಲೇಖನ
    ಧನ್ಯವಾದಗಳು

    ReplyDelete
  8. ಬಾಲ್ಯದ ನೆನಪುಗಳೊಂದಿಗೆ ಮಲೆನಾಡಿನ ಸರಳ ಸುಂದರ ಸಂಪೂರ್ಣ ಬದುಕನ್ನು ಕಟ್ಟಿ ಕೊಡುವ ಬರಹ. ಓದುಗನಿಗೆ ಕಾಲ ಪ್ರಯಾಣ ಮಾಡಿದ ಅನುಭವ.

    ನಿಮ್ಮ ಮಾತಿನ ಹಾಗೆ ಕುತೂಹಲವನ್ನು ಬೆಳೆಸಿಕೊ೦ಡು ಹೊಗುವ ಬರಹದ ಮೋಡಿ.

    ಇನ್ನೂ ಹೆಚ್ಚಿನ ಲೇಖನಗಳು ನಿಮ್ಮ ಅನುಭವದ ಮೂಸೆಯಿಂದ ಬರಲೇಂದು ಆಶಿಸುವೆವು.

    ReplyDelete
  9. ಕಳೆದ 50 ವರ್ಷದ ಹಿಂದಿನ ಬಾಲ್ಯ ಹಾಗೂ ವಿಧ್ಯಾಭ್ಯಾಸ ವ್ಯವಸ್ಥೆ ಹೇಗಿತ್ತು, ಆಗಿನ ಕಾಲದ ಸೋದರ ಮಾವಂದಿರು ಹಾಗೂ ಅವರ ಕುಟುಂಬದವರು ನೀಡುತ್ತಿದ್ದ ಸಹಕಾರ, ಬೆಂಬಲ, ಮಾರ್ಗದರ್ಶನಗಳನ್ನು ಅಕ್ಷರಗಳ ಮೂಲಕ ತಿಳಿಸಲು ನಿನಗೆ ಮಾತ್ರ ಸಾಧ್ಯವೆಂದು ದ್ರೂಡೀಕರಿಸಿದ ಅಂಕಣವಾಗಿದೆ, ಮಲೆನಾಡಿನ ವರ್ಣನೆ ಕಿರುಚಿತ್ರ ನೋಡಿದ ಅನುಭವವಾಯ್ತು ಎಂದರೆ ತಪ್ಪಾಗಲಾರದು..

    ReplyDelete
  10. ಹಳ್ಳಿಯ ಬದುಕನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ.. ಲೇಖನ ತುಸು ದೀರ್ಘವೆನಿಸಿದರೂ, ಇಷ್ಟೆಲ್ಲಾ ವಿಚಾರಗಳನ್ನು ಇದಕ್ಕಿಂತ ಚುಟುಕಾಗಿ ಹೇಳಲು ಸಾಧ್ಯವಿಲ್ಲ... ತುಂಬಾ ಒಳ್ಳೆಯ ಶೈಲಿ... ಓದಿಸಿಕೊಂಡು ಹೋಗುತ್ತದೆ.. ಧನ್ಯವಾದಗಳು ಅಣ್ಣ

    ReplyDelete
  11. ಬಹಳ ಚೆನ್ನಾಗಿದೆ, ನನ್ನ ಬಾಲ್ಯದ ದಿನಗಳಲ್ಲಿ ರಜೆಗೆ ಆಗುಂಬೆ ಯಲ್ಲಿ ಕಳೆದ ದಿನಗಳು ನೆನಪಾದವು..

    ಅನುಪಮ

    ReplyDelete
  12. ನಿಮ್ಮ ಬಾಲ್ಯದ ನೆನಪನ್ನು ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ. ನಿಮ್ಮ ಈ ಲೇಖನ ನಮ್ಮನ್ನು ನನ್ನ ಬಾಲ್ಯದ ನೆನಪಿಗೆ ಕೊಂಡೊಯಿತು. ಧನ್ಯವಾದಗಳು.
    Vani S .R

    ReplyDelete
  13. ರಮೇಶ್ ನಾಡಿಗ್..
    ನಿನ್ನ ನೆನಪಿನ ಶಕ್ತಿ ಅಗಾಧ. ನೆನಪಿದ್ದರೂ ಬರೆಯುವ ರೀತಿ ಅದ್ಭುತ.. ಚಿದಂಬರಣ್ಣ ಎಲ್ಲರಿಗೂ ಬಹಳ ಪ್ರಿಯವಾದ ವ್ಯಕ್ತಿತ್ವ. ಸದಾ ನಗಿಸುವ ಪ್ರವೃತ್ತಿ.. ಹಳೆಯ ನೆನಪು ಗಳು ಏನೋ ಹೊಸತನ ಬಂದಂತಾಯಿತು ಧನ್ಯವಾದಗಳು..

    ReplyDelete
  14. ಅತ್ಯುತ್ತಮ ಲೇಖನ...ಬಾಲ್ಯದ ಸವಿನೆನಪುಗಳೊಂದಿಗೆ ಮಲೆನಾಡ ಹಳ್ಳಿ ಜೀವನವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಇದನ್ನು ಓದಿದವರಿಗೂ ಬಾಲ್ಯದ ನೆನಪು ತರಿಸುವಂತಿದೆ...👌👏

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...