ಮಳೆ ಬಂದಾಗ ನೆನಪಿಗೆ ಬರುವುದು ಸೊಬಗಿನ ಜೋಗ ಜಲಪಾತ. ಜೊತೆಗೇ ಗೊತ್ತಿಲ್ಲದಂತೆ ಬಾಯಿಗೆ ಬರುತ್ತಿದೆ ಕವಿ ಮೂಗೂರು ಮಲ್ಲಪ್ಪ ನವರ ಹಾಡು "ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ?.... ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ. ಗುನುಗುಡುತ್ತಾ ಬೆಳಿಗ್ಗೆಯೇ ಇರುವಂತೆ ಜೋಗದತ್ತ ಹೊರಟೇ ಬಿಟ್ಟೆ. ಮಳೆಯ ಮಧ್ಯೆ ಪ್ರಯಾಣ, ಮೋಡದ ಮಧ್ಯೆ ಮಸುಕಾಗಿ ಕಂಡ ಜಲಪಾತ. ಸುತ್ತ ಕಾಣುವ ಹರಿದ್ವರ್ಣದ ಕಾಡು. ನನಗೆ ಗೊತ್ತಾಗದಂತೆ ನಗರದ ರಾಜ್ಯೋತ್ಸವದ ಆರ್ಕೆಸ್ಟ್ರಾದಲ್ಲಿ ಕೇಳಿ ಬರುತ್ತಿದ್ದ ಹಾಡು ನಿತ್ಯೋತ್ಸವವನ್ನು ನೆನಪಿಸುತ್ತಿದೆ. ಹಾಗೆಯೇ ಈ ನೀರಿನ ಮೂಲ, ಹರಿಯುವ ಮಾರ್ಗ, ಜಲಾಶಯ, ವಿದ್ಯುತ್ ಇತ್ಯಾದಿಗಳ ಬಗ್ಗೆ ಯೋಚನೆ ಆರಂಭ.
ರಾಮಾಯಣದ ಕಾಲದಲ್ಲಿ ಸೀತೆಯು ಕಂಡು ಮೋಹಕ್ಕೀಡಾದ ಮಾಯಾಮೃಗದ ಮಾರೀಚನನ್ನು ವಧಿಸಿದ ಸ್ಥಳ ಶರಾವತಿ ನದಿಯ ಮೂಲದ ಸಮೀಪ ಇರುವ ಮೃಗವಧೆ. ವಧಿಸಿದ ನಂತರ ಶ್ರೀರಾಮನು ಶರ ಅಥವಾ ಬಾಣದಿಂದ ಪಡೆದ ತೀರ್ಥವೇ ಶರಾವತಿಯ ಮೂಲ ಅಂಬುತೀರ್ಥ. ಇದೇ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅಂಬುತೀರ್ಥ. ಶರಾವತಿ ನದಿಯು ಹೊಸನಗರ ಸಾಗರ ತಾಲ್ಲೂಕಿನಲ್ಲಿ ಹರಿದು ಗೇರುಸೊಪ್ಪೆಗೆ ಬಂದಿದೆ. ನಿಸರ್ಗದತ್ತ ಸ್ವಾಭಾವಿಕ ಅನುಕೂಲಗಳಿರುವುದರಿಂದ ಎಣ್ಣೆ ಹೊಳೆ ಎಂಬಲ್ಲಿ ಹಿರೇಭಾಸ್ಕರ ಅಥವಾ ಮಡೇನೂರು ಆಣೆಕಟ್ಟು ನಿರ್ಮಾಣವಾಗಿ ಮೊದಲ ವಿದ್ಯುತ್ ತಯಾರಿಕೆ ದೇಶದ ಸ್ವಾತಂತ್ರ್ಯದ ಜೊತೆಗೇ ಪ್ರಾರಂಭವಾಯಿತು. ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯುತ್ ತಯಾರಿಸಲು ಈಗಾಗಲೇ ಇರುವ ಆಣೆಕಟ್ಟಿನ ಮುಂಭಾಗದಲ್ಲಿ ಇನ್ನೂ ಆಳವಾದ ಜಾಗದಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣವಾಯಿತು. ವಿದ್ಯುತ್ ತಯಾರಿಯೂ ಪ್ರಾರಂಭವಾಯಿತು. ಹಿರೇಭಾಸ್ಕರ ಅಣೆಕಟ್ಟು ಸಮುದ್ರ ಮಟ್ಟದಿಂದ ೧೭೭೮ ಅಡಿ ಎತ್ತರ ಇದ್ದು ಹೊಸದಾಗಿ ನಿರ್ಮಾಣವಾದ ಲಿಂಗನಮಕ್ಕಿಯ ಆಣೆಕಟ್ಟು ೧೮೧೯ ಅಡಿ ಇರುವುದು. ಎತ್ತರದ ಹೊಸ ಆಣೆಕಟ್ಟಿನಿಂದಾಗಿ ಹಿರೇಭಾಸ್ಕರ ಅಣೆಕಟ್ಟು ಪ್ರತಿವರ್ಷವೂ ಲಿಂಗನಮಕ್ಕಿ ಜಲಾಶಯದಲ್ಲಿ ಮುಳುಗುತ್ತಿದೆ. ಆದರೂ ಈ ವರೆಗೂ ಅದು ಸುಸ್ಥಿತಿಯಲ್ಲಿ ಇರುವುದು ಹೆಮ್ಮೆಯ ಸಂಗತಿ. ಹಾಗೆ ನೋಡಿದರೆ ಇಂದು ದೊರೆಯುತ್ತಿರುವ ಉತ್ತಮ ದರ್ಜೆಯ ಸಿಮೆಂಟ್ ಸಿಗದ ಆ ಕಾಲದಲ್ಲಿ ಕೇವಲ ಸುರ್ಕಿ ಗಾರೆಗಳಿಂದ ಕಟ್ಟಲ್ಪಟ್ಟ ಮುಳುಗಿದರೂ ಹಾಳಾಗದ ಮಡೇನೂರು ಆಣೆಕಟ್ಟು ಅಂದಿನ ಇಂಜಿನಿಯರ್ ಗಳ ಪ್ರಾಮಾಣಿಕತೆ, ಬದ್ಧತೆ ಮತ್ತು ಜಾಣ್ಮೆಯ ಹೆಮ್ಮೆಯ ಪ್ರತೀಕ ಎನ್ನಬಹುದು. ಈಗ ಇದು ಕೇವಲ ಒಣ ಹೆಮ್ಮೆಯ ವಿಷಯ. ನದಿಯು ಇಲ್ಲಿಂದ ಮುಂದೆ ಪಕ್ಕದ ಜಿಲ್ಲೆಯ ಸಿದ್ದಾಪುರ, ಹೊನ್ನಾವರ ತಾಲ್ಲೂಕಿನಲ್ಲಿ ಹರಿದು ಇಡಗುಂಜಿಯ ಗಣಪನಿಗೆ ನಮಿಸಿ ಸಮುದ್ರ ಸೇರುವುದು.
ಲಿಂಗನಮಕ್ಕಿಯಲ್ಲಿನ ಡ್ಯಾಂನಲ್ಲಿ ಸಂಗ್ರಹವಾದ ನೀರನ್ನು ರಭಸವಾಗಿ ಹಾಯಿಸಿ ಜಲಚಕ್ರಗಳನ್ನು ತಿರುಗಿಸಿ ವಿದ್ಯುತ್ ತಯಾರಿಸುತ್ತಾರೆ. ಮುಂದೆ ಹರಿದ ನೀರೇ ಜೋಗದಲ್ಲಿ ರಾಜ, ರಾಣಿ, ರೋರರ್, ರಾಕೆಟ್ ಎನ್ನುವ ಹೆಸರುಗಳಿಂದ ಧಾರೆಯಾಗಿ ಬೀಳುತ್ತಾ ಕಣ್ಣಿಗೆ ಖುಷಿ ಕೊಡುತ್ತದೆ. ಮುಂದೆ ಸಾಗಿದ ನೀರು ಜಲಚಕ್ರಗಳನ್ನು ತಿರುಗಿಸಿ, ಅಲ್ಲಿ ವಿದ್ಯುತ್ ಕಾಂತೀಯ ಕ್ಷೇತ್ರಗಳನ್ನು ಪ್ರಚೊದಿಸಿ ಕರೆಂಟನ್ನು ಉತ್ಪಾದಿಸುವುದು. ನಂತರ ತಂತಿಯ ಮೂಲಕ ಬೇಕಾದ ಸ್ಥಳಗಳಿಗೆ ವಿದ್ಯುತ್ ಹರಿಸಲಾಗುವುದು. ಇತ್ತೀಚೆಗೆ ಈ ವಿದ್ಯುತ್ ಸಾಲದೆಂದು ಮುಂದುವರಿದ ನೀರಿನಿಂದ ಮುಂದಿನ ಗೇರುಸೊಪ್ಪೆಯಲ್ಲಿಯೂ ಶರಾವತಿ ಟೈಲ್ರೇಸ್ ಎನ್ನುವ ಇನ್ನೊಂದು ಘಟಕದಲ್ಲಿ ವಿದ್ಯುತ್ ತಯಾರಿಸಲಾಗುತ್ತಿದೆ. ಶರಾವತಿ ಕಣಿವೆಯ ಉಪಯೋಗ ಇನ್ನೂ ಸಾಲದೆಂದು ವಿದ್ಯುತ್ ದಾಹದಿಂದ ವಿದ್ಯುತ್ ನಿಗಮವು ಹೊಸ ಯೋಜನೆ ಪ್ರಸ್ತಾಪಿಸಿದೆ. ಆದರೆ ಈ ಕಣಿವೆಯು ಅಪರೂಪದ ಸಿಹಿನೀರಿನ ಚೌಗು ಪ್ರದೇಶವಾಗಿದ್ದು ಇಲ್ಲಿರುವ ವಿವಿಧ ಸರಿಸೃಪಗಳು, ಪಕ್ಷಿ ಪ್ರಭೇದಗಳು ಸಿಂಹದ ಬಾಲವಿರುವ ಸಿಂಗಲೀಕ ಕೋತಿ ಸಂತತಿಯನ್ನು ಕಾಪಾಡಲು ಈ ಹೊಸ ೨೦೦೦ ಮೆಗೋವ್ಯಾಟ್ ಸಾಮರ್ಥ್ಯದ ವಿದ್ಯುತ್ ತಯಾರಿಸುವ ಜಲವಿದ್ಯುತ್ ಯೋಜನೆಗೆ ಹೈಕೋರ್ಟ್ ತಡೆ ನೀಡಿದೆ.
ಇನ್ನು ವಿದ್ಯುತ್ ಬಗ್ಗೆ ಹೇಳುವುದಾದರೆ ಯಶಸ್ವಿಯಾಗಿ ತಯಾರಾದ ವಿದ್ಯುತ್ ತಾನು ಜನಿಸಿದ ಹಳ್ಳಿ, ಹೋಬಳಿ, ತಾಲೂಕು, ಜಿಲ್ಲೆಗಳ ಮೂಲಕ ಪ್ರಯಾಣಿಸಿದರೂ ತನ್ನವರೆಂಬ ಅಭಿಮಾನ ಮರೆತು ದೂರದ ರಾಜಧಾನಿ ಮತ್ತು ನಗರಗಳ ಸೇರುತ್ತಿದೆ. ಇದರಿಂದಾಗಿ ನಗರದಲ್ಲಿ ಈವರೆಗೂ ಕಾಣದಿದ್ದುದು ಹೊಸ ಬೆಳಕಲ್ಲಿ ಕಾಣಲು ಶುರುವಾಗಿದೆ. ಕಾಣುತ್ತಿದ್ದುದು ಇನ್ನೂ ಪ್ರಕಾಶಿಸಿದೆ. ನಗರದ ರಸ್ತೆಗಳು, ಕಲ್ಯಾಣ ಮಂಟಪಗಳು, ಸಿನಿಮಾ ಮಂದಿರಗಳು, ಅಷ್ಟೇ ಏಕೆ ನಡೆಸುವ ರಾಜ್ಯೋತ್ಸವ ಸೇರಿದಂತೆ ಹಲವಾರು ಉತ್ಸವಗಳು ವಿದ್ಯುತ್ ಅಲಂಕಾರಗಳಿಂದ ಶೋಭಿಸುತ್ತವೆ. ಅನೇಕ ಉದ್ದಿಮೆಗಳು ಹೊಸದಾಗಿ ಏರ್ಪಟ್ಟಿವೆ. ಈ ವಿದ್ಯುತ್ತಿನಿಂದ ಅನೇಕರಿಗೆ ಕೆಲಸಗಳೂ ಸಿಕ್ಕಿವೆ. ಜೀವನದ ಅನಿವಾರ್ಯತೆಯಲ್ಲಿ ಗಾಳಿ ಬೆಳಕಿಗೇ ಹೆಚ್ಚಿನ ಪ್ರಾಶಸ್ತ್ಯ. ಅವುಗಳನ್ನು ನೀಡುವ ವಿದ್ಯುತ್ ನಿಂದಾಗಿ ನಗರದ ಜಾಗಗಳ ಉಪಯೋಗ ಪರಾಕಾಷ್ಠೆಯಲ್ಲಿದೆ. ಹವಾ ನಿಯಂತ್ರಣ, ಶೀಥಲೀಕರಣ ಇತ್ಯಾದಿ ಉಪಕರಣಗಳಿಂದ ಜನ ತಂಪಾಗಿರಲು ಅವಕಾಶವಾಗಿದೆ. ನಗರದ ನಾಗರಿಕರ ಜೀವನಮಟ್ಟ ಬಹಳಷ್ಟು ಸುಧಾರಿಸಿದೆ ಎಂಬುದು ಸಂತೋಷದ ವಿಷಯ.
ಬೇಸರವನ್ನೋ ರಜೆಯನ್ನೋ ಕಳೆಯಲು ಇಲ್ಲಿಗೆ ಬಂದ ಪ್ರವಾಸಿ ಗಳಿಗೆ ಸಿಗಂದೂರು ಜಲಮಾರ್ಗದ ಲಾಂಚ್, ಕಣ್ತುಂಬುವ ನೀರು, ದೇವಾಲಯ, ಶರಾವತಿಯ ಇಕ್ಕೆಲಗಳಲ್ಲಿ ಕಾಣುವ ನಿತ್ಯ ಹರಿದ್ವರ್ಣದ ಕಾಡುಗಳು. ಪಶ್ಚಿಮ ಘಟ್ಟದ ಬೆಟ್ಟ ಗುಡ್ಡಗಳು. ಅಡಿಕೆ ತೋಟಗಳು. ಭತ್ತದ ಗದ್ದೆಗಳು. ಆಹಾ ಎಂಥಾ ರುದ್ರ ರಮಣೀಯ ದೃಶ್ಯಗಳು ಎನಿಸುತ್ತದೆ. ನೋಡಿದವರಿಗೆ "ವ್ಹಾ, ವ್ಹಾ" ಇದ್ದರೆ ಇಲ್ಲಿಯೇ ಇರಬೇಕು. ಕಡಿಮೆ ದರದಲ್ಲಿ ಇಲ್ಲಿ ಜಾಗ ಸಿಕ್ಕರೆ ಕೊಳ್ಳೋಣ, ಮನೆ ಕಟ್ಟಿ ಇಲ್ಲಿಯೇ ಇರಬಹುದು ಇಲ್ಲವೇ ಹೀಗೆ ಬಂದ ಪ್ರವಾಸಿಗರಿಗೆ ಬಾಡಿಗೆ ಕೊಡಬಹುದೆಂಬ ವ್ಯಾವಹಾರಿಕ ಯೋಚನೆ ಬೇರೆ. ಸರಿ, ಇವೆಲ್ಲವೂ ಸಂತಸ ತರುವ ನಿತ್ಯೋತ್ಸವದ ವಿಚಾರ.
ಮಡೇನೂರು ಆಣೆಕಟ್ಟು ಕಟ್ಟುವ ಮುನ್ನ ಅಲ್ಲಿಯ ಜೀವನದ ಬಗ್ಗೆ ಯೋಚಿಸಿದಾಗ, ಹರಿಯುವ ನದಿ. ಮಳೆಗಾಲದಲ್ಲಿ ಒಮ್ಮೊಮ್ಮೆ ಪ್ರವಾಹ. ನದಿಯ ಆ ದಂಡೆಗೆ ಹೋಗಲು ದೋಣಿ ಇದೆ, ಉಕ್ಕಡ ಇದೆ. ಯುವಕರು ಶಕ್ತಿ ಇರುವವರು ಈಜಿ ಹೋಗುತ್ತಾರೆ. ದಿನಸಿ ಸಾಮಾನು ಇತ್ಯಾದಿ ಇಲ್ಲೇ ಮಡೇನೂರ ಸಂತೆಯಲ್ಲಿ ಸಿಗುತ್ತದೆ. ಬಹುತೇಕ ಎಲ್ಲರದೂ ಬೇಸಾಯವೇ ಕಸುಬು. ಕೆಲವೇ ಭಾಗ ರೈತರ ಸ್ವಂತ ಜಮೀನು. ಬಾಕಿಯಂತೆ ಎಲ್ಲ ಕೃಷಿಕರೂ ಗೇಣಿದಾರರೇ. ಬೆಳೆದ ಭತ್ತ ಅಡಿಕೆ ಮೆಣಸು ಜಮೀನ್ದಾರರದು ಒಡೆಯರದು. ಅವರೂ ದೂರದ ಸಾಗರ, ಸಿದ್ದಾಪುರ, ಸೊರಬ, ಬನವಾಸಿ, ಇತ್ತ ಹೊಸನಗರ, ಕೊಲ್ಲೂರು ಕಡೆಯಲ್ಲಿ ಇರುವವರು. ಬೆಳೆಯನ್ನು ಅಳೆಸಿಕೊಂಡು ಎತ್ತಿನ ಗಾಡಿಯಲ್ಲೋ, ಉಕ್ಕಡದಲ್ಲೋ ಸಾಗಿಸುತ್ತಾರೆ. ಪ್ರಧಾನವಾಗಿ ಅಡಿಕೆ, ಮೆಣಸು, ಭತ್ತದ ಕೃಷಿ. ಸಮಾಜದ ಸೇವೆಯಲ್ಲಿ ಮಣ್ಣಿನ ಮಡಿಕೆ, ಕೊಡ, ತಟ್ಟೆ, ಹಣತೆ ಇತ್ಯಾದಿ ತಯಾರಿಸುವ ಕುಂಬಾರರು, ಕಟ್ಟಡಗಳ ತಳಪಾಯ ಜಂಬಿಟ್ಟಿಗೆಗಳ ಗೋಡೆಗಳ ಕೆಲಸದ ಸೇರೆಗಾರರು, ಕಬ್ಬಿಣದ ಕಂದ್ಲಿ, ಕುಡುಗೋಲು, ನೇಗಿಲು, ಕುಣ, ಬೇಸಾಯದ ಇತರ ಸಾಮಗ್ರಿಗಳು, ಎತ್ತಿನ ಗಾಡಿ ಮತ್ತು ಭಾಗಗಳು, ಚಿತ್ರಗಳ, ವಿಗ್ರಹಗಳ ಕೆತ್ತನೆ ಇತರ ಮರದ ಕೆಲಸಗಳು, ಕಲ್ಲಿನ ವಿಗ್ರಹಗಳ ಕೆತ್ತನೆ ಕೆಲಸ, ಚಿನ್ನದ ಆಭರಣಗಳನ್ನು ಮಾಡುವ ಕೆಲಸಗಳು, ಬೆತ್ತದ ಬುಟ್ಟಿ, ಕಲ್ಲಿ ಎಂಬ ಅಡಿಕೆ ತುಂಬುವ ಬುಟ್ಟಿ, ಸುಗ್ಗಿಯಲ್ಲಿ ಅಡಿಕೆ ಒಣಗಿಸುವ ತಟ್ಟಿ ಮಾಡುವವರೂ ಇದ್ದರು. ನೀತಿ ಮಾರ್ಗದಲ್ಲಿ ನಡೆಸಲು ಶೃಂಗೇರಿ, ಭಕ್ತಿ ಮಾರ್ಗ ತೋರಿಸುವ ಉಡುಪಿ, ಧರ್ಮದಿಂದ ನಡೆಯಲು ಧರ್ಮಸ್ಥಳ, ಸುಖದಿಂದಿರಲು ಪ್ರಾರ್ಥನೆಗೆ ಕೊಲ್ಲೂರೇ ಮಾರ್ಗವಾಗಿತ್ತು. ಮಿಡ್ಲಸ್ಕೂಲ್ ವರೆಗೂ ಓದಲು ಅವಕಾಶ. ಅನುಕೂಲಸ್ಥರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಾಗರಕ್ಕೆ ಹೋಗುತ್ತಿದ್ದರು. ಬೇಗ ಬೆಳಗಾದಂತೆ ರಾತ್ರಿಯೂ ಬೇಗನೇ ಆಗುತ್ತಿತ್ತು. ಸೀಮೆ ಎಣ್ಣೆಯ ಲಾಟೀನು, ದೀಪದ ಬುಡ್ಡಿ, ಹೊಗೆ ಕಾರುವ ಚಿಮಣಿ ದೀಪ, ವಿಶೇಷವಿದ್ದರೆ ಅನುಕೂಲಸ್ಥರಿಗೆ ದೂರದ ಊರಿನಿಂದ ತರುವ ಗ್ಯಾಸ್ ಲೈಟ್ ಇರುತ್ತಿತ್ತು.
ಒಂದು ದಿನ ಹೊಸದಾಗಿ ಕೇಳಿ ಬಂದ ವಿಚಾರ, ಅದು ನಮ್ಮ ಬಾಳು ಬೆಳಗುವ ಸುದ್ದಿ. ಇನ್ನು ಮುಂದೆ ಹೊಗೆ ಕಾರುವ ಬುಡ್ಡಿ ಬೇಕಾಗಿಲ್ಲ. ಅಕ್ಕಿ, ಅವಲಕ್ಕಿ, ಹಿಟ್ಟು ತಯಾರಿಸುವ ಯಂತ್ರ ನಡೆಸಲು ಬೇಕಾದ ಕರೆಂಟ್ ನಮ್ಮಲ್ಲೇ ಮಾಡುತ್ತಾರೆ. ಈ ಊರಿನಲ್ಲೇ ಬೆಳಕು ಕೊಡುವ ವಿದ್ಯುಚ್ಚಕ್ತಿ ತಯಾರಿಸಿ ಕೊಡುತ್ತಾರೆ. ಅದಕ್ಕೆ ಅನುಕೂಲವಾಗಲೆಂದು ಹರಿಯುವ ಈ ನದಿಗೆ ನಮ್ಮೂರಿನ ಹತ್ತಿರ ಒಡ್ಡು ಕಟ್ಟುತ್ತಾರಂತೆ. ಆದರೆ ಹೇಗೆ ಮಾಡುತ್ತಾರೋ? ಆ ಬೆಳಕು ಬರುವ ರೀತಿ ಗೊತ್ತಾಗುತ್ತಿಲ್ಲ. ನೀವೇನು ಇಂಜಿನಿಯರ್ರಾ, ನಿಮಗೇಕೆ ಎನ್ನುತ್ತಿದ್ದಾರೆ, ಕೇಳಿದಾಗ ಕೆಲವರು. ಜೊತೆಗೇ ನಮ್ಮ ಮನೆ, ಜಮೀನು ಬಿಡಬೇಕಂತೆ. ಇಲ್ಲಿ ನೀರು ಬರುತ್ತದಂತೆ. ಹೀಗೂ ಮಾತನಾಡುತ್ತಿದ್ದಾರೆ. ಅಲ್ಲಾ ಇಲ್ಲಿವರೆಗೂ ನೀರು ಬರಲು ಅದೆಲ್ಲಿದೆ. ಹಾಗೂ ನೀರಿಗೂ ಬೆಳಕಿಗೂ ಏನು ಸಂಬಂಧ ಎಂಬ ಅನುಮಾನ. ಈ ವಿದ್ಯುತ್ ಎಂದರೇನು? ಅದು ನಮಗಲ್ಲದಿದ್ದರೆ ಯಾರಿಗೆ. ಇಲ್ಲಿ ತಯಾರು ಮಾಡಿದ ಮೇಲೆ ನಮಗೇ ಅಲ್ಲವೇ. ಇಲ್ಲಿಂದ ಹೊರಗೆ ತೆಗೆದು ಕೊಂಡು ಹೋಗುವ ಬಗೆ ಹೇಗೆ? ವಿದ್ಯುತ್ ತಯಾರಿಕೆ, ಹರಿವ ರೀತಿ, ಆಗುವ ಕಷ್ಟನಷ್ಟಗಳ ಅರಿವು ಇರದ ಮುಗ್ಧ ಜನತೆ . ಈ ಮಧ್ಯೆ ಶುರುವಾದ ಆಣೆಕಟ್ಟು ಕೆಲಸ. ಹೆಚ್ಚು ಆದಾಯದತ್ತ ಸಂತೋಷದ ಚಿತ್ತ. ಸಡಗರದ ಮರುದಿನದಿಂದ ಡ್ಯಾಂ ಕೆಲಸಕ್ಕೆ ಟೊಂಕಕ್ಕೆ ಟವೆಲ್ ಕಟ್ಟಿ ನಿಂತಿದ್ದಾರೆ. ಈ ನಿವಾಸಿಗಳು ಎಲ್ಲರೂ ರೈತಾಪಿ ವರ್ಗದವರೇ.
ಈಗಾಗಲೇ ಹೇಳಿದಂತೆ ಇವರಲ್ಲಿ ಕೆಲವರು ಸ್ವಂತ ಜಮೀನು ಉಳ್ಳವರು. ಇನ್ನು ಕೆಲವರು ಜಮೀನ್ದಾರರ ಗೇಣಿದಾರರು. ಸರ್ಕಾರ ಹಲವಾರು ಸಭೆಗಳ ನಂತರ ಜಮೀನ್ದಾರರಿಗೆ ಕಳೆದು ಕೊಳ್ಳುವ ಜಮೀನಿಗೆ ಪರಿಹಾರ ಕೊಟ್ಟು ಖಾಲಿ ಮಾಡಲು ಹೇಳಿದೆ. ಅಲ್ಲದೆ ಗೇಣಿದಾರರಿಗೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಜಮೀನು ಕೊಟ್ಟಿದೆ. ಈ ನಿವಾಸಿಗಳು ಕೆಲವರು ಅಂತಹ ಜಮೀನು ಪಡೆದು ಮನಸ್ಸಿಲ್ಲದ ಮನಸ್ಸಿನಿಂದ ಹುಟ್ಟೂರು ಬಿಟ್ಟು ತೆರಳಿದರು. ಕೆಲವರು ಹಾಗೆ ಕೊಟ್ಟ ಜಮೀನು ಫಲವತ್ತಾಗಿಲ್ಲ ಎಂದು ಆಕ್ಷೇಪಿಸಿದರೂ ಕಾಡು ಪ್ರದೇಶದಲ್ಲಿ ಇಷ್ಟ ಬಂದಷ್ಟು ಜಾಗದಲ್ಲಿ ಮನೆ ಬೆಳೆ ಮಾಡಿಕೊಳ್ಳಲು ಸರ್ಕಾರ ಅವಕಾಶ ಕೊಟ್ಟಿದ್ದರಿಂದ ಅಲ್ಲಿಗೇ ಹೊರಟರು. ಕೆಲವರಿಗೆ ಭೂತಾಯಿಯ ಬಂಧನ ಬಿಡಲಿಲ್ಲ. ಹೀಗೆ ತಲಾಂತರದಿಂದ ಇಲ್ಲಿದ್ದ ಮುಗ್ಧ ಮೂಲ ನಿವಾಸಿಗಳು ಚೆಲ್ಲಾಪಿಲ್ಲಿಯಾದರು. ಕಟ್ಟಿಕೊಂಡ ಬದುಕು ಮೂರಾಬಟ್ಟೆಯಾಯಿತು. ಮೊದಲೇ ರೈತರ ಬದುಕು. ಬಂದಷ್ಟೇ ಬೆಳೆ. ಸಹಜವಾಗಿ ಅತೀವೃಷ್ಟಿ, ಅನಾವೃಷ್ಟಿ. ಊಟಕ್ಕೆ ಹೇಗೋ ನಡೆದುಕೊಂಡು ಹೋಗುತ್ತಿತ್ತು. ಆದರೆ ಮಕ್ಕಳ ವಿದ್ಯಾಭ್ಯಾಸ, ಮದುವೆ, ಸಂಸಾರದ ಖರ್ಚುಗಳು ಒಬ್ಬೊಬ್ಬರದೂ ಒಂದೊಂದು ಹಂತದಲ್ಲಿ. ಖರ್ಚಿನ ಪ್ರಾಶಸ್ತ್ಯವೂ ಬೇರೆ ಬೇರೆ. ಪಡೆದ ಪರಿಹಾರ ಒಂದೇ ಪ್ರಮಾಣ. ತಕ್ಷಣದ ಅಗತ್ಯದ ಖರ್ಚು ಕಳೆದು ಉಳಿದ ಹಣ ಅತ್ಯಲ್ಪ. ಮನೆ ಮಾಡಿಕೊಳ್ಳಲು ಹಣವಿಲ್ಲ. ಇರುವ ಮನೆ ಇಲ್ಲವಾಗಿದೆ. ಈ ಮಧ್ಯೆ ಊರು ಆಸ್ತಿ ಮುಳುಗುವುದೆಂದು ತಾವು ಒಪ್ಪದೆ ಬೇರೆಯವರಿಗೂ ತಪ್ಪಿಸುವ ಜನ. ಹೊಸ ಜಾಗವನ್ನು ಒಪ್ಪದೆ ಇಲ್ಲಿದೆ ನಮ್ಮನೆ. ಅದೇ ಸುಮ್ಮನೆ ಎಂದು ಆತ್ಮದಲ್ಲಿ ಧೃಡವಾಗಿ ನಂಬಿದ್ದ ಬಹುಜನ. ಆದರೇನು ಮುಳುಗಡೆ ಮುಹೂರ್ತ ಬಂದಿತು. ಇದ್ದರೆ ಬಂದು ನಿಲ್ಲುವ ನೀರಲ್ಲಿ ಮುಳುಗುತ್ತೀರಿ ಎನ್ನುವ ಅಧಿಕಾರಿಗಳು. ಈ ಎಚ್ಚರಿಕೆಯ ಮಾತು ಹಲವರಿಗೆ ಭೂಮಿ ಬಾಯ್ಬಿಟ್ಟಿದ್ದರೆ ಚೆನ್ನಾಗಿತ್ತು ಎಂದೆನಿಸುತ್ತದೆ. ಬಾಯಿ ಬಡಿದುಕೊಂಡು ದುಃಖದಿಂದ ಎದ್ದನೋ ಬಿದ್ದೆನೋ ಎಂದು ಊರು ಬಿಟ್ಟ ಜನ.
ಮುಳುಗಡೆ ಶಬ್ದದ ವ್ಯಾಪ್ತಿ ಬಲು ದೊಡ್ಡದು.ಓದಲು ಮುಳುಗಡೆ ವಿಸ್ತೀರ್ಣ ೩೨೭ ಚದುರ ಕಿಲೋಮೀಟರ್. ಮುಳುಗಿದ ಸಾಗರ ತಾಲೂಕಿನ ೯೯ ಮತ್ತು ಹೊಸನಗರ ತಾಲೂಕಿನಲ್ಲಿ ೭೬ ಹಳ್ಳಿಗಳಿಂದ ಸುಮಾರು ೧೨ ಸಾವಿರ ಜನರು ಸ್ಥಳಾಂತರಿಸಲಾದವರು. ಈ ಮುಳುಗಡೆ ಕೇವಲ ಜಾಗವನ್ನು ಮುಳುಗಿಸಿಲ್ಲ. ಜೊತೆಗೆ ಆ ಭೂಮಿಯ ಸಂಬಂಧ, ಅಕ್ಕಪಕ್ಕದ ಸಂಬಂಧ, ಬೆಳೆದು ಬಂದ ರೀತಿ, ಬಾಲ್ಯ, ವಿದ್ಯಾಭ್ಯಾಸ, ಮದುವೆ, ಹೀಗೆ ಹಲವು ಸಂಬಂಧ ಗಳ ಬಳ್ಳಿಯನ್ನು ಹರಿಯಿತು. ಬಂದ ಪರಿಹಾರ ಕೆಲವರ ಸಂಬಂಧ ಗಳನ್ನೂ ಕೆಡಿಸಿತು. ಬಂದ ಪರಿಹಾರ ಸಾಲದು, ಇನ್ನೂ ಹೆಚ್ಚು ಕೊಡಿಸುವುದಾಗಿ ಮರೀಚಿಕೆಯನ್ನು ತೋರಿಸಿ ಇರುವುದನ್ನು ಕಸಿದ ಮಧ್ಯವರ್ತಿಗಳು, ಏಜೆಂಟರು, ಬಡ್ಡಿ ಕೊಡುವೆನೆಂದು ಹಣ ಪಡೆದು ಕೈಕೊಟ್ಟವರು ಹೀಗೆ ಉರಿಯುವ ಮನೆಗಳ ಎಳೆದವರು ಹಲವರು. ಇವರಿಂದಾಗಿ ನಾನಾ ರೀತಿಯಲ್ಲಿ ಮೋಸ ಹೋಗಿ ಈಗ ಹೊಸ ಜಾಗಕ್ಕೆ ಹೋಗದವರು, ಹೋಗಿಯೂ ಮನೆ ಇಲ್ಲದವರು, ಆಸ್ತಿ ಮನೆ ಇಲ್ಲದ ನಿರ್ಗತಿಕರು, ತಮ್ಮ ಹೆಸರಿಗೆ ಕಂದಾಯ ಇಲಾಖೆ ಯಿಂದ ಸಂಬಂಧಪಟ್ಟ ಕಾಗದ ಪತ್ರಗಳನ್ನು ಮಾಡಿಕೊಳ್ಳಲಾಗಿಲ್ಲದವರು, ಈಗ ಬದಲಾದ ಕಾನೂನಿನಂತೆ ಅರಣ್ಯದಲ್ಲಿ ಜಾಗ ಪಡೆದವರು, ಈಗ ಇಲಾಖೆಯ ಒತ್ತಡದಿಂದ ಜಮೀನು ಖಾಲಿ ಮಾಡುತ್ತಿರುವವರು ಇತ್ಯಾದಿ. ಯೋಜನೆಗಾಗಿ ಇರುವವರನ್ನು ಖಾಲಿ ಮಾಡಿಸಿದ ರೀತಿ, ಸರಿಯಾಗಿ ಪುನರ್ವಸತಿಯನ್ನು ಕಲ್ಪಿಸದ ಪ್ರಭುತ್ವ. ಈ ಅಧಿಕಾರಿಗಳ ಅಧಕ್ಷತೆಯಿಂದಾಗಿ ವಿದ್ಯುತ್ ತಾನು ಹೋದ ಜಾಗದಲ್ಲಿ ಎಲ್ಲವನ್ನೂ ಪ್ರಕಾಶವಾಗಿ ತೋರಿಸಿದರೂ ಬಂದ ಮೂಲ ಮಬ್ಬುಗತ್ತಲೆಯಲ್ಲಿಯೇ ಉಳಿಯಿತು.
ನದಿಯ ಇಕ್ಕೆಲಗಳಲ್ಲಿರುವ ಹಳ್ಳಿಗಳಲ್ಲಿರುವವರಿಗೆ ಅವ್ಯಕ್ತ ನೋವಿನೊಂದಿಗೆ ಏನೋ ಸಡಗರ. ಮುಳುಗಡೆಯಿಂದ ಆಗುವ ಬದಲಾವಣೆ, ಕೇವಲ ಕೇಳಲ್ಪಟ್ಟಿರುವ ವಿದ್ಯುತ್ ತಮ್ಮ ಊರಿನಲ್ಲಿ. ನೋಡಲು ಹೀಗಿರಬಹುದೇನೋ ಹಾಗೆಯೋ. ಎಂದು ಯೋಚಿಸಿದವರಿಗೆ ಇಂದು ಮುಳುಗಿದ ಊರು, ನಿನ್ನೆವರೆಗೂ ಮುಳುಗಿದ ಊರಲ್ಲಿದ್ದ ಜನತೆ ಎಲ್ಲಾ ಸುಳ್ಳಾಗಿ ಕಾಣಿಸುತ್ತಿದೆ. ಹಾಗೆಯೇ ನೂರಾರು ಪ್ರಶ್ನೆ ಮನದಲ್ಲಿ. ನಿಂತ ನೀರಿನತ್ತ ಶೂನ್ಯ ನೋಟ. ಹಲವಾರು ನೆನಪುಗಳು. ಮುಳುಗಿರುವ ನೂರಾರು ಹಳ್ಳಿಗಳು, ದೇವಾಲಯಗಳು, ಚಿಕ್ಕಂದಿನಲ್ಲಿ ಓಡಾಡಿದ ರಸ್ತೆಗಳು, ಜಾನುವಾರುಗಳು, ನಂದಿ, ಬೀಟೆ, ಹಲಸು, ಬೋಗಿ, ಹೊನ್ನೆ, ಶ್ರೀಗಂಧ, ಮಾವು, ಹೆಬ್ಬಲಸು, ಅಶ್ವಥ, ದಾಲ್ಚಿನ್ನಿ, ಪಿಟ್ಲಿಗಿಡ, ಬಿದಿರು, ಕಾಡುಲವಂಗ, ನೇರಳೆ ಮುಂತಾದ ಮರಗಳು, ತೌಡಪ್ಪಳಕ, ವಿವಿಧ ಪ್ರಕಾರದ ಹಾವುಗಳು, ಓತಿಕ್ಯಾತ, ಹಾವುರಾಣಿ, ಮುಂಗುಸಿ, ನವಿಲು, ಬಾವಲಿ, ಇತ್ಯಾದಿಗಳನ್ನು ಈ ನೀರು ನುಂಗಿ ಬಿಟ್ಟಿದೆ. ಈ ನದಿಗೆ ಸೇರಿದ ಹತ್ತಾರು ನದಿಗಳು. ಎಲ್ಲವಕ್ಕೂ ಅದರದೇ ಇತಿಹಾಸ. ಎಲ್ಲವನ್ನೂ ಗಂಗೆಯೆಂದೇ ಭಾವಿಸಿದ್ದೆವು. ಹಾಗೆ ಈ ನದಿಗೆ ಸೇರಿದ ಹನ್ನೆರಡನೇ ಉಪನದಿ ಸೇರುವ ಸ್ಥಳವೇ ಇದೇ ಭಾರಾ ಗಂಗಾ ಮುಂದೆ ಭಾರಂಗಿ ಯಾಯಿತಲ್ಲವೇ! ಇದೇ ಮಡೇನೂರಿನವರೇ ಅಲ್ಲವೇ ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಕ, ರಾಷ್ಟ್ರ ಪ್ರಶಸ್ತಿ ಪಡೆದವರು. ಅವರೇ ನಮ್ಮ ಶ್ರೀ ಎಚ್. ವಿ. ಮಂಗಳಮೂರ್ತಿಯವರು ಇದೇ ಹಿರೇಭಾಸ್ಕರದ ಮಿಡ್ಲ್ ಸ್ಕೂಲ್ ನಲ್ಲಿ ಮುಖ್ಯೋಪಾಧ್ಯಾಯ ರಾಗಿದ್ದುದು. (ಅವರು ತಮ್ಮ ಸೋದರ ಮಾವ ಎಂಬುದು ಲೇಖಕರ ಹೆಗ್ಗಳಿಕೆ ವಿಷಯ). ಈ ಸಾಲಿನಲ್ಲೇ ನೆನಪಿಗೆ ಬರುವ ಶರಾವತಿ ತೀರದ ಶ್ರೇಷ್ಠ ವಾಸಿಗಳು, ಅನೇಕ ಯಕ್ಷಗಾನ ಕಲಾವಿದರು, ಧರ್ಮ ಸಿಂಧು ಎಂಬ ಮಹಾ ಗ್ರಂಥದ ಕರ್ತೃ ನಾಜಗಾರ ಶಂಭು ಶಾಸ್ತ್ರಿ ಯವರೂ ಇಲ್ಲಿಯವರೇ ಅಲ್ಲವೇ! ಎಲ್ಲಾ ಕೇವಲ ನೆನಪಿನಲ್ಲಿ.
ಇದು ಇಲ್ಲಿಗೇ ಮುಗಿಯಲಿಲ್ಲ. ಮಡೆನೂರು ಅಣೆಕಟ್ಟು ಕಟ್ಟಿದಾಗ ಮುಳುಗಿದ ಗ್ರಾಮಗಳ ಜನರು, ಈ ಒಡ್ಡು ಎತ್ತರವಾದರೆ ಕಷ್ಟವಾಗುತ್ತದೆ ಎಂದು ಒಡ್ಡಿನ ಕೆಳಗೆ ಹೋಗಿ ವಾಸ ಮಾಡಲು ಪ್ರಾರಂಭಿಸಿದರು. ಆದರೆ ಗ್ರಹಚಾರ ಬಿಡಬೇಕಲ್ಲಾ. ವಿಧಿಯು ಅಲ್ಲಿಯೂ ಬೆನ್ನು ಬಿಡಲಿಲ್ಲ. ಮತ್ತೆ ಶರಾವತಿಯನ್ನು ಲಿಂಗನಮಕ್ಕಿಯಲ್ಲಿ ತಡೆಯಲಾಯಿತು, ಮತ್ತೆ ಮುಳುಗಡೆ ಆಯಿತು. ಜನರ ಬದುಕು ಶೋಚನೀಯವಾಯಿತು. ಅಲ್ಲಿರುವವರ ಜೊತೆಗೆ ಹುಟ್ಟಿದೂರನ್ನು ಬಿಟ್ಟು ಬಂದು ಇಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದವರನ್ನೂ ಸೇರಿದಂತೆ ಹೊರಕಳಿಸಲಾಯಿತು. ನಗರಕ್ಕೆ ಬೆಳಕು ಬೇಕೆಂದು ಸಾವಿರಾರು ಜನರ ಬದುಕು ಅನಿಶ್ಚಿತತೆಯ ಕತ್ತಲಲ್ಲಿ ಕೊಳೆಯತೊಡಗಿತ್ತು. ಸರಕಾರ ಬದಲಿಯಾಗಿ ಜಮೀನನ್ನೇನೋ ಕೊಟ್ಟಿತು. ಪರಿಹಾರ ಕೂಡಾ ಕೊಟ್ಟಿತು. ಆದರೆ ಆ ಪರಿಹಾರ ಎಷ್ಟೋ ಜನರ ಕೈಗೆ ಸಿಗಲೇ ಇಲ್ಲ. ಮತ್ತೆ ಅದೇ ಮಧ್ಯವರ್ತಿಗಳು, ಹಿತಶತ್ರುಗಳು, ಆ ದುಡ್ಡಲ್ಲಿ ಕದ್ದದ್ದು ಲೆಕ್ಕವಿಲ್ಲ. ಇದೊಂದು ದಾರುಣ ಸ್ಥಿತಿ. ನಗರದ ನಾಗರೀಕತೆ ಹೆಚ್ಚಿಸಲು ಇಲ್ಲಿನ ಶತ ಶತಮಾನಗಳ ಇತಿಹಾಸದ ನಾಗರೀಕತೆ ನೀರುಪಾಲು.
ಇನ್ನು ಪಕ್ಕದ ಪ್ರದೇಶ ಕರೂರು ಸೀಮೆ. ನಾಗರೀಕತೆಯ ಬೆಳಗಿಸಲು ತ್ಯಾಗ ಮಾಡಿದ ಬಹು ಭಾಗ ಇಂದೂ ಕತ್ತಲಲ್ಲೇ. ಇಂದಿಗೂ ಸಾರಿಗೆ ಇಲ್ಲ, ಸಂಪರ್ಕಕ್ಕೆ ಟೆಲಿಫೋನ್ ಇಲ್ಲ, ಮೊಬೈಲ್ ಇಲ್ಲವೇ ಇಲ್ಲ. ಕಲಿಯಲು ಶಾಲೆಗಳಿಲ್ಲ, ಆರೋಗ್ಯಕ್ಕೆ ಆಸ್ಪತ್ರೆಗಳಿಲ್ಲ. ಚಿಕ್ಕ ಹಳ್ಳಿಗಳಾದ್ದರಿಂದ ಚದುರಿದ ಜನಸಂಖ್ಯೆ. ಮತದಾರರನ್ನು ಮುಟ್ಟುವ ಮನಸ್ಸಿಲ್ಲದ, ಓಟು ಕೇಳಲೂ ಬಾರದ ಪಕ್ಷಗಳು. ಬೆಳೆದ ಅಡಿಕೆ ಭತ್ತಗಳ ಸಾಗಾಟ ಬಲುಕಷ್ಟ. ಸರ್ಕಾರದ ಅಧಿಕಾರಿಗಳನ್ನು ಕೇಳಿ ಕೇಳಿ ನಿತ್ರಾಣರಾದ ಜನಕ್ಕೆ ಪ್ರತಿಭಟನೆಯ ಕೂಗಿಗೂ ಕ್ಷೀಣಿಸಿದ ಧ್ವನಿ. ಇರುವ ಸಹಜವಾಗಿದ್ದ ಕಾಡನ್ನು ಕಡಿದು ನವ ಅರಣ್ಯ ಆರಂಭ. ಅಕೇಶಿಯಾ, ಸೂಚೀಪರ್ಣ, ಗಾಳಿಮರ, ನೀಲಗಿರಿ, ಮ್ಯಾಂಜಿಯಮ್ ನೆಡುತೋಪು ಎಂಬ ಹೆಸರಲ್ಲಿ ಹೊಸ ಮರದ ಸಂತತಿ. ಮರದಿಂದ ಬಿದ್ದ ಎಲೆಗಳು ಕೊಳೆತರೆ ಮಾತ್ರ ಭೂಮಿ ಗಟ್ಟಿಯಾಗುವುದು, ಬೇರುಗಳು ನಿಲ್ಲುವುದು. ಹೊಸ ಜಾತಿಯ ಮರಗಳ ಲಕ್ಷಣದಿಂದ ಬೇರು ನಿಲ್ಲಲಿಲ್ಲ. ಬಿದ್ದ ಮಳೆಯ ನೀರು ಮಣ್ಣನ್ನು ಕೊರೆದುಕೊಂಡು ನದಿ ಸೇರಿತು, ಹೂಳು ತುಂಬುತ್ತಿದೆ. ಸರ್ಕಾರದ ಇಲಾಖೆಯವರೇ ಹೇಳುತ್ತಿರುವಂತೆ ಮರ ಇಲ್ಲದೆ ಮಳೆ ಇಲ್ಲ. ಈಗ ಮಳೆ ಇಲ್ಲದೆ ಮರಗಳು ಇಲ್ಲವೇ ಇಲ್ಲ.
ಇಷ್ಟೆಲ್ಲಾ ಅದ್ವಾನದ ನಡುವೆ ಕಳೆದ ವರ್ಷ ಬೆಂಗಳೂರಿಗೆ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತರುವ ಯೋಜನೆ ಚರ್ಚೆ ಯಾಗುತ್ತಿತ್ತು. ಲಿಂಗನಮಕ್ಕಿಯಿಂದ ತಂದರೆ ಜೋಗದ ಸಿರಿ ಕತ್ತಲಲ್ಲಿ. ಇನ್ನು ಜೋಗದಿಂದಲೇ ತಂದರೆ ಗೇರುಸೊಪ್ಪೆಯ ವಿದ್ಯುದಾಗಾರದ ಜಲಚಕ್ರ ಸ್ಥಬ್ದ. ಗೇರುಸೊಪ್ಪೆಯಿಂದ ಮುಂದೆ ಇರುವ ಜನರಿಗೆ ನೀರಿನ ವ್ಯವಸ್ಥೆ ಹೇಗೆ? ಬೆಂಗಳೂರಿನಲ್ಲಿ ಹೆಚ್ಚುವ ಜನಸಂಖ್ಯೆಯನ್ನು ಆಧರಿಸಿ ಯೋಚಿಸುವ ನೀರಿನ ಯೋಜನೆ. ಇದರ ಬದಲು ಜನಸಂಖ್ಯೆ ಹೆಚ್ಚಿಸುವ ಉದ್ಯಮಗಳನ್ನು ನೀರಿರುವ ಪಕ್ಕದ ಪ್ರದೇಶಗಳಿಗೆ ವರ್ಗಾಯಿಸಿದರೆ ಹೇಗೆ? ಆಳುವವರಿಗೆ ಈ ಯೋಚನೆ ಏಕೆ ಬರುತ್ತಿಲ್ಲ. ಈಗಾಗಲೇ ಮುಳುಗಡೆ ಯೋಜನೆಗಳಿಗೆ ಭೂಮಿ ಕೊಟ್ಟು ರಾಜ್ಯವನ್ನು ಬೆಳಗಿಸಿ ನಿತ್ಯೋತ್ಸವಕ್ಕೆ ಅವಕಾಶ ಕೊಟ್ಟ ಸಂತ್ರಸ್ತರಿಗೆ ಅಂಥಾ ಉದ್ಯಮಗಳಲ್ಲಿ ಕೆಲಸ ಕೊಡಬಹುದು. ಅದರಿಂದ ಅವರ ಋಣ ಕೊಂಚವಾದರೂ ತೀರೀತು. ಬದಲಾದ ಪ್ರಭುತ್ವದಲ್ಲಿ ಆ ಯೋಜನೆಯನ್ನು ಈ ಹಿಂದೆ ವಿರೋಧಿಸಿದವರೇ ಇದ್ದಾರೆ. ಅವರ ಧೋರಣೆ ಬದಲಾಗುವ ಮೊದಲು ಈ ಬಗ್ಗೆ ಕ್ರಮವಾದರೆ ಒಳ್ಳೆಯದು. ಅಭಿವೃದ್ಧಿ ಯೋಜನೆ ಎಂದರೆ ಶೋಷಣೆ, ಹಲವರಿಗಾಗಿ ಕೆಲವರು ಕಳೆದು ಕೊಳ್ಳುವುದೇ ಯೋಜನೆ. ಹಲವರ ಬೆಳಕಿಗೆ ದಾರಿಯಾದ ದೀಪದ ಬುಡದಲ್ಲಿ ಕತ್ತಲು ಅನಿವಾರ್ಯ ಎಂಬಂತಾಗಬಾರದು.
( ಮಾಹಿತಿ: ವಿವಿಧ ಮೂಲಗಳಿಂದ )
ಶರಾವತಿ ನದಿಯಿಂದ ವಿದ್ಯುತ್ ಉತ್ಪನ್ನ ಘಟಕಗಳ ಸ್ಥಾಪನೆಯ ಬಗ್ಗೆ ಇತಿಹಾಸ ಗೊತ್ತಿರುವವರು ಬಲು ವಿರಳ, ಆದರೂ ಇತಿಹಾಸ ಪುಟಗಳನ್ನು ಒಮ್ಮೆ ಹಿಂತಿರುಗಿಸಿ ನೋಡಿದ ಅನುಭವದೊಂದಿಗೆ ನೈಜ ಘಟನೆಗಳನ್ನು ಬಲು ಸುಂದರವಾಗಿ ವರ್ಣಿಸಿ ವಿವರಣೆಯೊಂದಿಗೆ ನಮ್ಮ ಮನಸ್ಮೃತಿಯಲ್ಲಿ ಬರುವಂತೆ ಮಾಡುವುದಲ್ಲದೇ, ಆಗಿನ ಕಾಲದಲ್ಲಿನ ಜೀವನ ಶೈಲಿಯ ಬಗ್ಗೆ ಹಾಗೂ ಆ ಪ್ರದೇಶದ ವಿಶಿಷ್ಟ ವ್ಯಕ್ತಿಗಳ ಪರಿಚಯ ಮಾಡಿಸಲಾಗಿದೆ. ಅಂತೆಯೇ ದೀಪದ ಕೆಳಗೆ ಕತ್ತಲು ಎಂಬ ನಾಣ್ಣುಡಿಯಂತೆ ಇನ್ನೂ ಕಷ್ಟಅನುಭವಿಸುತ್ತಿರುವುದನ್ನು ನೋಡಿ ವಿಷಾಧ ಹಾಗೂ ಆಶ್ವರ್ಯವಾಯಿತು. ಒಟ್ಟಿನಲ್ಲಿ ಇಂತಹ ಸಮಸ್ಯೆಗಳಿಗೆ ಈ ತರಹದ ಲೇಖನಗಳು ಇನ್ನೂ ಹೊರಬರಲಿ ಸರ್ಕಾರದ ಗಮನ ಸೆಳೆಯಲಿ ಎಂದು ನನ್ನ ಪ್ರಾಮಾಣಿಕ ಅಭಿಪ್ರಾಯ.
ReplyDelete೧೯೭೦ರ ದುಡಿಮೆಯ ಆರಂಭದಲ್ಲಿ ನಿಟ್ಟೂರಿನ ಪ್ರೌಢಶಾಲೆಯಲ್ಲಿ ಅಧ್ಯಾಪಕನಾಗಿ ವೃತ್ತಿಯಾರಂಭಿಸಿದಾಗ ಶರಾವತಿಯ ಹಿನ್ನೀರಿನಲ್ಲಿ ಮುಳುಗಿದ ಹಳ್ಳಿಗಳ ಪಕ್ಕದ ಹಳ್ಳಿಗಳಿಗೆ ಹೋಗುವವಕಾಶ ಸಿಕ್ಕು ಅವರ ಶೋಚನೀಯ ಬದುಕ ನೋಡಿ ಬಂದಿದ್ದೆ. ನಿನ್ನ ಪ್ರೌಢ ಲೇಖನದಿಂದ ನೆನಪು ಮರುಕಳಿಸಿತು. ಆಗಿನ್ನೂ ಸಿಗಂದೂರು ಕ್ಷೇತ್ರ ಪ್ರಸಿದ್ಧಿಗೆ ಬಂದಿರಲಿಲ್ಲ. ನಿನ್ನ ಲೇಖನದ ಶೈಲಿಗೆ ಮಾರುಹೋದವರಲ್ಲಿ ನಾನೂ ಒಬ್ಬ. ನಿನ್ನ ಹಿರಿಯಣ್ಣ.
ReplyDeleteದೀಪದ ಬುಡದಲ್ಲಿ......
ReplyDeleteಜೋಗದಾಸಿರಿ ಎಂದರೆ ಅಲ್ಲಿನ ನೀರು, ಮಣ್ಣು, ಕಾಡು
ಕಾಡಿನ ಸಂಪತ್ತು, ಜನಜೀವನ, ಇದೆಲ್ಲದರ ತ್ಯಾಗ, ಜನಜೀವನದ ಬಲಿದಾನ, ಪರಿಣಾಮ ಜೋಗದಸಿರಿಯ
ಬೆಳಕು, ಬಹುಶಃ ಒಬ್ಬ ಜಿಲ್ಲಾಧಿಕಾರಿ ಕಲೆಹಾಕಬಹುದಾ ದ ಎಲ್ಲ ವಿಷಯ ಒಂದು ವಿದ್ಯುತ್ ಯೋಜನೆಯ ಬಗ್ಗೆ
ಬರಹದಲ್ಲಿ ಅಡಕವಾಗಿದೆ. ನಾವೆಲ್ಲರೂ ಈ ಬೆಳಕಲ್ಲಿ ,
ಬೆಳಕಿನಿಂದ ಜೀವನ ಸಾಗಿಸುತ್ತಿರುವಾಗ, ಇದಕ್ಕಾಗಿ
ತ್ಯಾಗಮಾಡಿದವರು ಇನ್ನೂ ಕತ್ತಲಲ್ಲಿರುವುದು
ನೋವಿನ ವಿಷಯ. ಲೇಖಕರ ಹುಟ್ಟೂರು ಸಮೀಪವೇ ಆದ್ದರಿಂದ ವಿಚಾರ ಸತ್ಯವಾಗಿದೆ. ಲಿಂಗನಮಕ್ಕಿ ಅಣೆಕಟ್ಟಿಗಿಂತ ಮುಂಚೆ ಹಿರೇಭಾಸ್ಕರ ಅಣೆಕಟ್ಟಿನ ವಿಚಾರ ನಿಮ್ಮಿಂದ ತಿಳಿಯಿತು. ವಿಚಾರಪೂರ್ಣ ಲೇಖನಕ್ಕಾಗಿ ಧನ್ಯವಾದಗಳು.
ನಗರಗಳಲ್ಲಿ ಆಡಂಬರದ ಜೀವನದ ಶೈಲಿಯಲ್ಲಿ ಮುಳುಗಿರುವವರಿಗೆ, ಅವರ ಸುಖ-ಸಂತೋಷಕ್ಕೆ ಎಷ್ಟು ಜನ ತಮ್ಮ ಮನೆ-ಮಠ, ನೀರಾವರಿ ಜಮೀನುಗಳು ಮತ್ತು ಅವುಗಳೊಡನೆ ಇದ್ದ ಭಾವುಕತೆಯ ಸಂಬಂಧಗಳನ್ನು ಕಳೆದು ಕೊಂಡಿದ್ದಾರೆ ಎಂಬುದು ಖಂಡಿತ ಅರಿವಿರುವುದಿಲ್ಲ. ವಿದ್ಯುತ್ ತಾನು ಜನಿಸಿದ ಊರುಗಳಲ್ಲಿ ಬೆಳಕನ್ನು ಕೊಡದೆ, ದೂರದ ನಗರಪಟ್ಟಣಗಳ ನಾಗರೀಕರಿಗೆ ಬೆಳಕನ್ನು ನೀಡಿ ಸಂತೋಷವನ್ನು ನೀಡುವುದು ಹಾಸ್ಯಾಸ್ಪದ. ರೈತ ತಾನು ಬೆಳೆದ ಬೆಳೆಯನ್ನು ತಾನು ಅನುಭವಿಸದೆ, ಬೇರೆಯವರ ಸುಖಕ್ಕಾಗಿ ಧಾರೆಯೆರೆಯುವುದು ಕೂಡ ಇದೇ ರೀತಿ ಆಗಿದೆ. ಈ ಲೇಖನವನ್ನು ಓದುವಾಗ ನಿತ್ಯೋತ್ಸವ ಕವಿ ನಿಸ್ಸಾರ್ ಅಹ್ಮದ್ ರವರ ನೆನಪು ಬರುತ್ತದೆ ಹಾಗೂ ಲೇಖನಕ್ಕೆ ನೀಡಿರುವ ಶೀರ್ಷಿಕೆ ತುಂಬಾ ಸಮಂಜಸವಾಗಿದೆ. ತಮ್ಮ ಸ್ವಂತ ಅನುಭವ ಹಾಗೂ ತಿಳಿದವರಿಂದ ವಿಷಯಗಳನ್ನು ಸಂಗ್ರಹಿಸಿ, ತಮ್ಮದೇ ಆದ ಭಾಷಾ ಶೈಲಿಯಲ್ಲಿ ನಮ್ಮ ಮುಂದೆ ಇಟ್ಟಿರುವ ಲೇಖಕರಿಗೆ ಧನ್ಯವಾದಗಳು.
ReplyDeleteಜೋಗದಾಸಿರಿಯ ಹಿಂದೆ ಎಷ್ಟೋ ಜನರ ತ್ಯಾಗ ಹಾಗು ಬಲಿದಾನದ ಪರಿಣಾಮ ಜೋಗದಾಸಿರಿ ಬೆಳಗಿತು ಎನ್ನುವುದು ಈ ಬರಹದಲ್ಲಿ ಅಡಕವಾಗಿದೆ ಎನ್ನಬಹುದು, ಶರಾವತಿ ನದಿಯ ಮೂಲ ಅಂಬುತೀರ್ಥದಿಂದ - ಹರಿದು ಇಡಗುಂಜಿಯ ಗಣಪನಿಗೆ ನಮಿಸಿ ಸಮುದ್ರ ಸೇರುವಾ ತನಕ ಆಗುವ ಅನುಭವ
ReplyDeleteತುಂಬಾ ಚನ್ನಾಗಿ ಮೂಡಿದೆ.'ಶಿವಮೊಗ್ಗ ಜಿಲ್ಲೆಯ
ಪ್ರವಾಸ ಮಾಡಿ ಬಂದ ಅನುಭವ'
ನಮ್ಮ ಅಜ್ಜನು ಸಹಾ ಕರೂರಿನಲ್ಲಿ ಹೊಲ ಮನೆ ಇದ್ದವರು ಅದು ಮುಳುಗಡೆ ಆಯಿತು ಅಂತಾ ಸಾಗರದಲ್ಲಿ ನೆಲೆ ಕಂಡವರು, ಆದರೆ ಸರ್ಕಾರದಿಂದ ನಮಗೆ ಯಾವ ಪ್ರತಿಫಲ ದೊರಕದೆ 2 ತಲೆಮಾರು ನನಗೆ ಕಥೆ ಹೇಳಿ ಹೊರಟುಹೋದವು, ನಾವೂ ಸಹಾ ಇಂದಿಗೂ ಜೀವನ ಹುಡುಕಿ ಅಲೆಮಾರಿಗಳಾಗಿದ್ದೇವೆ... ನಮಗೆ ಇವೆಲ್ಲಾ ಕಥೆ ಅಷ್ಟೇ ಅಲ್ಲ, ಇಂದಿಗೂ ಕಾಡುವ ವ್ಯಥೆ...!
ReplyDeleteಅಂಕಿ ಅಂಶಗಳೊಂದಿಗೆ ಸುಂದರವಾದ ನಿರೂಪಣೆ. ಒಂದು ಅಣೆಕಟ್ಟೆನ ನಿರ್ಮಾಣದಿಂದ ಜನಜೀವನದ ಮೇಲಾಗುವ ಪರಿಣಾಮಗಳು ಓದುಗರಿಗೆ ಮನಮುಟ್ಟುವಂತಿದೆ.
ReplyDeleteThank you.
ಶಿವಮೊಗ್ಗ ಜಿಲ್ಲೆಯ ಜೋಗದ ಸಿರಿಯ ಬಗ್ಗೆ, ನೀರಿನ ಮೂಲ, ಹರಿಯುವ ದಾರಿ, ವಿದ್ಯುತ್, ಆಣೆಕಟ್ಟು ,ಅಲ್ಲಿನ ಜನರ ಬದುಕು, ಅವರ ಕಷ್ಟ, ಹೀಗೆ ಅನೇಕ ವಿಷಯಗಳನ್ನು ಈ ಲೇಖನದ ಮೂಲಕ ಸವಿಸ್ತಾರವಾಗಿ ತಿಳಿಸಿಕೊಟ಼ದ಼ಕೆ಼ಧನ್ಯವಾದಗಳು. ದೀಪದ ಬುಡ ಕತ಼ಲು ಎಂಬ ನಾಣ್ಣುಡಿ ಯಂತೆ,ನಮ್ಮ ಊರಿನ ಬಗ್ಗೆ ನಮಗೆ ಗೊತ್ತಿಲ್ಲದ ಕೆಲವು ವಿಷಯಗಳು ಈ ಲೇಖನ ದಿಂದ ತಿಳಿದು ತುಂಬಾ ಸಂತೋಷ ವಾಯಿತು. ಧನ್ಯವಾದಗಳು
ReplyDeleteಶರಾವತಿ ನದಿಯ ಚಿತ್ರಣ ಭಹಳ ಸೊಗಸಾಗಿದೆ ಚೊತೆಗೆ ಅಲ್ಲಿಯ ಹಳ್ಳಿಯ ಮುಳುಗಡೆ ವಿಜಾರ ನಿಜಕ್ಕೂ ದೀಪದ ಬೆಳಕಿನ ಕತ್ತಲೆಯ ವಿಜಾರವೇ ಸರಿ.
ReplyDelete'ದೀಪದ ಬುಡ ಕತ್ತಲು 'ಎಂಬ ಶೀರ್ಷಿಕೆ ಓದಿದಾಗ ಸಂತೋಷ ಹಾಗೂ ಬೇಜಾರು ಆಗುತ್ತದೆ. ಮಲೆನಾಡಿನ ಸೊಬಗು, ಪ್ರಾಣಿ ಸಂಪತ್ತು, ಅರಣ್ಯಸಂಪತ್ತು, ನದಿಗಳ ವಿಷಯ, ವಿದ್ಯುತ್ ಉತ್ಪಾದಿಸುವ ವೈಖರಿ ಓದಿ ತುಂಬಾ ಸಂತೋಷವಾಗುತ್ತದೆ. ಅಲ್ಲಿಯ ಜನರು ತಮ್ಮ ಬದುಕನ್ನು ಕತ್ತಲು ಮಾಡಿಕೊಂಡು, ತಮ್ಮ ಜಾಗವನ್ನು ತ್ಯಾಗಮಾಡಿ, ಇತರರಿಗೆ ಬೆಳಕು ನೀಡುವ ನಿರ್ಧಾರ ಮೆಚ್ಚಿಗೆಯಾಗುತ್ತದೆ. ನಂತರದ ಅವರ ಬದುಕು, ಪರಿಹಾರವಿಲ್ಲದೆ ಬವಣೆಪಡುವ ಅವರ ಬದುಕಿನ ಬಗ್ಗೆ ಓದಿದಾಗ ತುಂಬಾ ಖೇದವಾಗುತದೆ.ನಾವು ಸಹ ಆ ಜನರ ಋಣದಲ್ಲಿ ಇದ್ದೇವೆ ಎನಿಸುತ್ತದೆ.
ReplyDeleteಅತ್ತ್ಯುತ್ತಮ ಲೇಖನ.👌 ಜೋಗದ ಸೊಬಗನ್ನಷ್ಟೆ ನೋಡಿ ಸಂತೋಷಪಟ್ಟ ನಮಗೆ ಅದರ ಹಿಂದಿನ ಜನಜೀವನದ ಕಷ್ಟ , ಪಾಡು ,ವ್ಯಥೆ ಗೊತ್ತಿರಲಿಲ್ಲ. ಕೂಲಂಕುಷವಾದ ಬರವಣಿಗೆಯಿಂದ ವಿಷಯ ತಿಳಿದಹಾಗಾಯಿತು. ಧನ್ಯವಾದಗಳು🙏😊
ReplyDeleteExcellent narration of human misery in the face of development which is inevitable for growth of mankind. It brings out the selfless sacrifice earlier generation had to make fruits of which we are all savouring. This process goes on and on but one regret is that future generations will never even think about such sacrifices.
ReplyDelete