Skip to main content

ಮಲೆನಾಡಿನ ದೊಡ್ಡಬ್ಬ

ದೀಪಾವಳಿ ಎಂದು ಚಿಕ್ಕದಾಗಿ ಕರೆದರೂ ಇದು ಮೂರೂವರೆ ದಿನಗಳ ದೊಡ್ಡ ಹಬ್ಬ. ಈ ಸಂದರ್ಭದಲ್ಲಿ ಮೊದಲ ದಿನದ ಸಂಜೆ ಸಮೃದ್ಧಿ ತರುವ ಗಂಗೆ ಈಶ್ವರನ ಪೂಜೆ, ಮರುದಿನ ದುಷ್ಟ ಸಂಹಾರದ ಶ್ರೀ ಕೃಷ್ಣ ಸತ್ಯಭಾಮೆಯರನ್ನು, ಮೂರನೇ ದಿನ ಮಹಾಲಕ್ಷ್ಮೀಯನ್ನು ಮತ್ತು ನಾಲ್ಕನೆಯ ದಿನ ಸರ್ವ ದೇವತೆಗಳುಳ್ಳ ಗೋಪೂಜೆಯನ್ನು ಮಾಡುವ ಸಂಪ್ರದಾಯ. ಇದು ಪುರಾಣ, ಸಂಪ್ರದಾಯ, ಇತಿಹಾಸ, ನಂಬಿಕೆಗಳ ಸಮ್ಮಿಲನ. ಈ ಹಬ್ಬಗಳಿಗೆ ಬೇಕಾಗುವ ಸೌಲಭ್ಯಗಳಾದ ನೀರು, ಉರುವಲು, ವಿಶೇಷ ಹೂವು, ಹಣ್ಣು, ಇತ್ಯಾದಿಗಳು ಯಥೇಚ್ಛವಾಗಿ ಹಾಗೂ ಸುಲಭವಾಗಿ ದೊರೆಯುವುದರಿಂದ ಮಲೆನಾಡಿನಲ್ಲಿ ಈ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸುವ ದೊಡ್ಡ ಹಬ್ಬವಾಗಿ ಜನರ ಬಾಯಲ್ಲಿ ದೊಡ್ಡಬ್ಬ ಎಂದೇ ಪ್ರಸಿದ್ಧಿಯಾಗಿದೆ.

ಒಂದು ವಾರದಿಂದಲೇ ಹಬ್ಬದ ತಯಾರಿ ನಡೆದಿದೆ. ವಾಸದ ಮನೆಯಲ್ಲಿ ಅಡುಗೆ ಮನೆ, ಬಚ್ಚಲು ಮನೆ, ಒಲೆಗೆ ಪ್ರಾಧಾನ್ಯತೆ. ಬಾವಿಯ ಮನೆ, ಕೊಟ್ಟಿಗೆ ಮನೆ, ಮನೆಯ ಮುಂಭಾಗದ ಅಂಗಳ ಅಷ್ಟೇ ಏಕೆ ಮನೆಯ ಮುಂದಿನ ರಸ್ತೆಯ ಬಹುಭಾಗ ಗುಡಿಸಿ, ಸೆಗಣಿ ನೀರಿನಿಂದ ಸಾರಿಸಲ್ಲಟ್ಟು ಹಬ್ಬಕ್ಕೆ ಸನ್ನದ್ಧವಾಗಿದೆ. ವರ್ಷಪೂರ್ತಿಯ ಉಪಯೋಗದಿಂದ ಮುಕ್ಕಾದ ಗಾಯಗಳನ್ನು ದುರಸ್ತಿ ಪಡಿಸಿಕೊಂಡ ಒಲೆ, ಬಾವಿಯ ಕಟ್ಟೆ, ದನ ಕಟ್ಟುವ ಗೂಟಗಳು, ಕೊಟ್ಟಿಗೆ ಉಣಗೋಲಿನ ಕಂಬಗಳು, ಕೊಟ್ಟಿಗೆ ಬಾಗಿಲು ಸುಣ್ಣ ಕೆಮ್ಮಣ್ಣಿನಿಂದ ಅಲಂಕಾರವಾಗಿದೆ. ಕೊಟ್ಟಿಗೆಯ ಕರಿ ಗೋಡೆಯ ಮೇಲೆ ಸುಣ್ಣದ ಚಿತ್ತಾರ. ಒಲೆಯ ಮೇಲಿನ ಕರಿ ಹಂಡೆ ಸಾಧ್ಯವಾದಷ್ಟು ಹಿತ್ತಾಳೆಯಂತೆ ಕಾಣುತ್ತಿದೆ. ಪಕ್ಕದ ಗಂಗಾಳ, ಡಬರಿ, ದೊಡ್ಡ ಕೊಳಗ, ಇತ್ಯಾದಿಗಳ ಮೇಲ್ಮೈ ಸುಣ್ಣ ಕೆಮ್ಮಣ್ಣುಗಳಿಂದ ಶೋಭಿತವಾಗಿದೆ. ಈ ತ್ರಯೋದಶಿಯಂದೇ ಶಿವನು ಶಿರದಲ್ಲಿ ಗಂಗೆಯನ್ನು ಧರಿಸಿರುವುದು ಎಂಬ ನಂಬಿಕೆ. ಆದ್ದರಿಂದಲೇ ಈ ದಿನ ನೀರು ತುಂಬುವ ಹಬ್ಬ. ಹಂಡೆಯ ತುಂಬಾ ಹೊಸ ನೀರು ತುಂಬಿದೆ. ಅದರ ಕುತ್ತಿಗೆಗೆ ಮಾಲಿಂಗನ ಬಳ್ಳಿ, ಇಂಡಲಚ್ಚೀ (ಕಹಿ ಸೌತೆ) ಬಳ್ಳಿಗಳನ್ನು ಅವುಗಳ ಕಾಯಿ ಸಹಿತ ಸುತ್ತಿದ್ದಾರೆ. ಈ ಮಾಲಿಂಗನ ಬಳ್ಳಿಗೆ ಒಂದು ಕಥೆ ಇದೆ. ಹಿಂದೆ ಒಂದು ಸಂದರ್ಭದಲ್ಲಿ ಶಿವನು ಜಲಂಧರನೆಂಬ ರಾಕ್ಷಸನಿಂದ ತಪ್ಪಿಸಿಕೊಳ್ಳಲು ಬಳ್ಳಿಯೊಂದರಲ್ಲಿ ಅಡಗಿಕೊಳ್ಳುತ್ತಾನೆ. ಆ ಬಳ್ಳಿಯನ್ನು ಪಾರ್ವತಿಯು ಹಂಡೆಯ ಕುತ್ತಿಗೆ ಸುತ್ತಿ ರಾಕ್ಷಸನಿಂದ ಶಿವನನ್ನು ಪಾರು ಮಾಡಿದಳಂತೆ. ಹೀಗೆ ಶಿವನನ್ನು ಕಾಪಾಡಿದ ಬಳ್ಳಿ ಮಹಾಲಿಂಗನ ಬಳ್ಳಿಯಾಗಿ ಮುಂದೆ ಮಾಲಿಂಗನ ಬಳ್ಳಿಯಾಗಿದೆ ಎನ್ನಲಾಗಿದೆ. ಇಂದು ಒಂದು ತಂಬಿಗೆಗೆ ನೀರು ತುಂಬಿ ಮೇಲೆ ಕಾಯಿ ಇಟ್ಟು ಅದರ ಕುತ್ತಿಗೆಗೆ ಬಳ್ಳಿಗಳನ್ನು ಸುತ್ತಿ ದನ ಕಟ್ಟುವ ಹೊಸ ಕಣ್ಣಿ (ಹಗ್ಗ) ಯ ಸಹಿತ ದೇವರ ಬಳಿ ಇಟ್ಟು ಬಲೀಂದ್ರ ಎನ್ನುವರು. ಒಲೆಯ ಬಳಿ ಸೆಗಣಿಯ ಚಿಕ್ಕ ಗೋಪುರದ ಮೇಲೆ ಹಣ್ಣಡಿಕೆ ಗೋಟನ್ನು ಸಿಗಿಸುವರು. ಈ ರಾತ್ರಿ ಬಲೀಂದ್ರನಿಗೆ, ನೀರು ತುಂಬಿದ ಹಂಡೆಗೆ, ಹರಿಶಿಣ ಕುಂಕುಮ, ಗೆಜ್ಜೆ ವಸ್ತ್ರ, ಅಡಿಕೆ ಹಿಂಗಾರ, ತುಪ್ಪದ ದೀಪ ಮತ್ತು ಚೆಂಡು ಹೂವುಗಳಿಂದ ವಿಶೇಷ ಪೂಜೆ. ಪೂಜೆ ಎಂದ ಮೇಲೆ ಸಿಹಿ ಹಂಚಿಕೆ ಇದ್ದೇ ಇರುತ್ತದೆ.

ಹಂಡೆ ಒಲೆಯಲ್ಲಿ ಮರದ ಸಣ್ಣ ಕುಂಟೆ. ಸುತ್ತ ಅಡಿಕೆ ಸಿಪ್ಪೆ ತುಂಬಿ ಮಲಗಿದರೆ ಬೆಳಗಿನವರೆಗೆ ನೀರು ಕಾಯುತ್ತಿರುತ್ತದೆ. ಬೆಳಿಗ್ಗೆ ಅಡಿಕೆ ಗೊನೆಯ ಚುಂಗುಗಳು, ಕಬ್ಬಿನ ಒಣ ಸಿಪ್ಪೆ ಗಳಿಂದ ಬೆಂಕಿಯನ್ನು ಹೆಚ್ಚು ಮಾಡುತ್ತಾ ಚಳಿಗೆ ಮೈ ಕಾಯಿಸುವ ಹಿತದ ಕೆಲಸ. ಮನೆಯ ಹಿರಿಯ ಮಹಿಳೆಯು ಮಕ್ಕಳಾದಿಯಾಗಿ ಎಲ್ಲರಿಗೂ ಮೈಗೆ ಎಣ್ಣೆ ಹಚ್ಚಲು ಪ್ರಾರಂಭ. ಪೂರ್ವಕ್ಕೆ ಮುಖ ಮಾಡಿಸಿ ಮಣೆಯ ಮೇಲೆ ಕೂಡಿಸುವರು. ಕಾಡು ಗೇರು ಬೀಜದಲ್ಲಿ ಕಾಯಿಸಿದ ಸೂಜಿಯ ತುದಿಯನ್ನು ಚುಚ್ಚಿ ತೆಗೆದು ಎಲ್ಲರ ಹಣೆಗೂ ರಕ್ಷೆ ಎಂದು ಮುಟ್ಟಿಸುವರು. ನಂತರ ನೆಲದ ಮೇಲೆ ಎಡದಿಂದ ಬಲಕ್ಕೆ ಎಣ್ಣೆಯಲ್ಲಿ ಅದ್ದಿದ ಬೆರಳಿನಿಂದ ಏಳು ಗುರುತುಗಳನ್ನು ಮಾಡುತ್ತಾ

ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ I
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ II
ಸಪ್ತೈತಾನ್ ಸಂಸ್ಮರೇನ್ನಿತ್ಯಂ ಮಾರ್ಕಾಂಡೇಯ ಮಥಾಷ್ಟಮಮ್ I
ಜೀವೇದ್ವರ್ಷಶತಂ ಪ್ರಾಜ್ಞಃ ಅಪಮೃತ್ಯು ವಿವರ್ಜಿತಃ II

ಎಂದು ಚಿರಂಜೀವಿ ಸ್ತೋತ್ರವನ್ನು ಹೇಳುವರು. ಅಶ್ವತ್ಥಾಮ, ಮಹಾಬಲಿ, ವ್ಯಾಸ ಹನುಮಂತ, ವಿಭೀಷಣ, ಕೃಪಾಚಾರ್ಯ, ಪರುಶುರಾಮ ಇವರೆಲ್ಲರೂ ಪ್ರಖ್ಯಾತರು. ಸಾವು ಕಾಣದವರು. ಅವರಂತೆ ಶಾಶ್ವತವಾಗಿ ಒಳ್ಳೆಯ ಕೆಲಸಗಳಿಂದ ನೀವೂ ಪ್ರಸಿದ್ಧರಾಗಿ, ಚಿರಂಜೀವಿಗಳಾಗಿ ಎಂಬ ಉದಾತ್ತ ಆಶೀರ್ವಾದ ಕೇಳಲು ಹಿತ. ಅಂತೆಯೇ ಭುಜ, ಗಲ್ಲ, ನೆತ್ತಿಗೆ ಎಣ್ಣೆ ಹಾಕಿ ತಿಕ್ಕಿ ತಡವರಿಸುತ್ತಿದ್ದರೆ ದೇಹಕ್ಕೆ, ಆಹಾ, ಎಂತಾ ಹಿತ. ನಂತರ ಬಚ್ಚಲು ಪ್ರವೇಶ. ಭುಜಗಳಿಗೆ ಮೈಗೆ ಬಿಸಿ ನೀರು. ನಂತರ ತಲೆಯ ಮೇಲೆ ಸಾಕು ಸಾಕೆಂದರೂ ಬಿಡದ ಬಿಸಿ ನೀರಧಾರೆ. ಹೀಗೆ ಎಲ್ಲರ ಸ್ನಾನವಾಗುವ ವೇಳೆಗೆ ಸೂರ್ಯೋದಯ. ಮೊದಲು ಸ್ನಾನ ಮಾಡಿದ ಹಿರಿಯರು ಬಾವಿಗೆ ಪೂಜೆ, ನೀರು ಸೇದಿ ಹಂಡೆಗೆ ಸ್ವಲ್ಪ ಹಾಕುವರು. ದನಕರುಗಳ ಸ್ನಾನಕ್ಕೂ ನೀರು ಎತ್ತಿಟ್ಟು ದೇವರ ಪೂಜೆ ಮಾಡುವರು. ಸ್ನಾನ ಮಾಡಿದವರು. ಹೊಸ ಬಟ್ಟೆ ಧರಿಸಿ ದೇವರಿಗೆ ಮತ್ತು ಹಿರಿಯರಿಗೆ ನಮಸ್ಕರಿಸುವುದರ ಮೂಲಕ ಹಬ್ಬದ ಪ್ರಾರಂಭ. ಮನೆಯಲ್ಲಿನ ಹಸು ಕರು ಎತ್ತುಗಳು, ಎಮ್ಮೆಗಳಿಗೆ ಸ್ನಾನ. ಮದ್ಯಾಹ್ನ ಬಲೀಂದ್ರನ ಪೂಜೆ. ಅನ್ನ, ಚಿತ್ರಾನ್ನದೊಂದಿಗೆ ಸಾಮಾನ್ಯವಾಗಿ ಸಿಹಿ ಕುಂಬಳಕಾಯಿ ಕಡುಬು ನೈವೇದ್ಯ. ರಾತ್ರಿ ದೇವರಿಗೆ ಮಂಗಳಾರತಿ.

ಈ ಹಿಂದಿನ ರಾತ್ರಿ ಶಾಸ್ತ್ರ ನಿಷಿದ್ಧವಲ್ಲದ ಕೆಲವು ಅಪರಾಧಗಳಿಗೆ ಅಘೋಷಿತ ಅವಕಾಶ. ಬೂರಿ ಹಬ್ಬ. ಹಿಂದಿಯಂತೆ ಕೆಲವರಿಗೆ ಬೂರಾ ಅರ್ಥಾತ್ ಕೆಟ್ಟ ಹಬ್ಬ, ಈ ರಾತ್ರಿ ಹಳ್ಳಿಯಲ್ಲಿ ಬೆಳೆದ ತರಕಾರಿ ಹೂವುಗಳ ಕಳ್ಳತನ ಸಾಮಾನ್ಯ. ಇತ್ತೀಚೆಗೆ ಅದು ದುಬಾರಿಯ ಅಡಿಕೆ ಕಳ್ಳತನಕ್ಕೆ ವಿಸ್ತಾರವಾಗಿರುವುದು ಜಗಳಕ್ಕೆ ನಾಂದಿಯಾಗುತ್ತಿದೆ. ಇದಲ್ಲದೆ ಅವರಿವರ ಮನೆಯ ಕರುವನ್ನು ಬಿಟ್ಟು ಅದರ ತಾಯಿಯ ಹಾಲು ಕುಡಿಸುವುದು, ಒಬ್ಬರ ಮನೆಯ ಒರಳುಗುಂಡುಗಳನ್ನು ಮತ್ತೊಬ್ಬರ ಮನೆಯಲ್ಲಿಡುವಂತಹ ಕೀಟಲೆ ಕೆಲಸಗಳು ಕೆಲವರ ಬೆಳಗನ್ನು ಬೈಗುಳ ಮಾಡಿಸಿ ನೋಡುವವರಿಗೆ ಹಾಸ್ಯವಾಗಿ ಕಾಣಿಸುತ್ತದೆ.

ಮರುದಿನ ನರಕಚತುರ್ದಶಿ. ಮಹಾವಿಷ್ಣುವಿನ ವರಾಹ ಅವತಾರದಲ್ಲಿ ಆ ವರಾಹದ ಮೈನಿಂದ ಬಿದ್ದ ಬೆವರಿನಿಂದ ಭೂ ದೇವಿಗೆ ಹುಟ್ಟಿದ ಮಗನೇ ನರಕಾಸುರ. ಆದ್ದರಿಂದಲೇ ಇವನನ್ನು ಭೌಮಾಸುರ ಎಂದೂ ಕರೆಯುತ್ತಾರೆ. ಈತನು ಚಿಕ್ಕಂದಿನಲ್ಲಿದ್ದಾಗ ಭೂ ದೇವಿಯು ಮಗನೆಂಬ ಮಮತೆಯಿಂದ ವಿಷ್ಣುವಿನಿಂದ ವೈಷ್ಣವಾಸ್ತ್ರವನ್ನೂ ಕೊಡಿಸಿದ್ದಳಂತೆ. ತನ್ನ ಅಸುರೀ ಶಕ್ತಿಯಿಂದ ಮತ್ತು ಈ ಅಸ್ತ್ರದ ಬಲದಿಂದ ಭೂ ಲೋಕದ ಎಲ್ಲಾ ರಾಜರನ್ನು ಸೋಲಿಸಿ ಅವರ ಹೆಣ್ಣು ಮಕ್ಕಳನ್ನು ಸೆರೆಯಾಗಿಸಿಡುತ್ತಿದ್ದ. ಈ ಪ್ರಾಬಲ್ಯವು ಸಾಲದೆಂದು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ತನ್ನ ಹಿರಿಯರಂತೆ ಚಿರಂಜೀವಿಯಾಗುವುದನ್ನು ಕೇಳದೆ ತಾನು ಎಲ್ಲರಿಂದಲೂ ಅಜೇಯನಾಗಿರಬೇಕು. ಹಾಗೇನಾದರೂ ಸಾವು ಬಂದಲ್ಲಿ ಅದು ತನ್ನ ತಂದೆ ತಾಯಿವರಿಂದಲೇ ಬರಲಿ ಎಂದು ವರ ಕೇಳಿದ್ದ ಜಾಣಾಸುರ. ಭೂಲೋಕವೆಲ್ಲ ಗೆದ್ದು ದೇವಲೋಕಕ್ಕೆ ತೆರಳಿ ಅಲ್ಲಿಯ ದೇವರಾಜ ಇಂದ್ರನನ್ನು ಸೋಲಿಸಿ ಬರುವಾಗ ದೇವಮಾತೆ ಅದಿತಿಯ ಕಿವಿಯಲ್ಲಿನ ಆಭರಣಕ್ಕೆ ಮನಸೋತ. ಆಭರಣವನ್ನು ಅವಳ ಕಿವಿಯನ್ನು ಕತ್ತರಿಸಿ ತಂದ. ಇಂತಹ ಪುತ್ರನಿಂದ ಭೂದೇವಿಗೂ ದುಃಖವಾಗಿ ಇವನ ಉಪಟಳದಿಂದ ಪಾರು ಮಾಡೆಂದು ಶ್ರೀಕೃಷ್ಣ ನಲ್ಲಿ ಬೇಡಿದ್ದಳು. ಎಲ್ಲಾ ಲೋಕವನ್ನು ಸುತ್ತಿದ ಅಸುರ ಭೂಲೋಕಕ್ಕೆ ಮರಳಿ ಬಂದ.

ಅತ್ತ ಅದಿತಿದೇವಿಯು ಈ ಅಸುರನಿಂದ ಶಾಶ್ವತವಾದ ರಕ್ಷಣೆಗಾಗಿ ಸತ್ಯಭಾಮೆಯಲ್ಲಿ ಸಹಾಯ ಕೇಳಿದಳು. ಶ್ರೀ ಕೃಷ್ಣನಲ್ಲಿ ಸತ್ಯಭಾಮೆಯು ಕೇಳಿಕೊಳ್ಳಲಾಗಿ ತನ್ನ ಪತ್ನಿಯ ಒತ್ತಾಸೆಯ ಮೇರೆಗೆ ಅವಳೊಂದಿಗೆ ನರಕಾಸುರನ ಮೇಲೆ ಯುದ್ದ ಮಾಡಿದ. ಸತ್ಯಭಾಮೆಯು ಭೂ ಮಾತೆಯ ಅವತಾರವೂ ಹೌದು. ಅವರೊಂದಿಗೆ ನಡೆದ ಯುದ್ದದಲ್ಲಿ ನರಕಾಸುರನ ಅಂತ್ಯವಾಯಿತು. ತನ್ನ ಸಾವು ತನ್ನ ತಂದೆ ತಾಯಿಯವರಿಂದಲೇ ಬಂದಿದ್ದು ಎಂದು ಅರಿತು, ಅವರಲ್ಲಿ ತನ್ನ ಸಾವು ಸಹ ಆಚರಣೆಯಾಗಬೇಕು ಎಂಬ ಅವನ ಆಸೆಯನ್ನು ಶ್ರೀಕೃಷ್ಣ ಸತ್ಯಭಾಮೆಯರು ಒಪ್ಪಿದರು. ಅವನ ದೇಹ ರಾಸಾಯನಿಕ ಮಯವಾಗಿದ್ದುದರಿಂದ ಅವನು ಬಿದ್ದ ಕೂಡಲೇ ದೇಹದಿಂದ ಬಿರುಸುಗಳು ಭೀಕರ ಸ್ಫೋಟದೊಡನೆ ಹೊರ ಹೊಮ್ಮಿದವು. ಹೀಗೆ ಅವನ ಅಂತ್ಯವಾಗುತ್ತದೆ. ಅದರಿಂದ ಮಲಿನವಾದ ಶ್ರೀಕೃಷ್ಣ ಸತ್ಯಭಾಮೆಯರು ಎಣ್ಣೆಮಾರ್ಜನ ಸುಗಂಧ ಪೂರಿತ ಸ್ನಾನಾದಿಗಳಿಂದ ಶುದ್ದವಾದರು. ಆಗ ಬೆಳಗಿನ ಜಾವವಾಗಿತ್ತು. ಆದ್ದರಿಂದಲೇ ಸೂರ್ಯ ಮೂಡುವ ಮುನ್ನ ಎಣ್ಣೆ ಅಭ್ಯಂಜನ ಮಾಡುವ ನರಕಚತುರ್ದಶಿ ಆಚರಣೆ ಪದ್ದತಿ ಜಾರಿಗೆ ಬಂದಿದೆ. ಅದರಂತೆ ರಾತ್ರಿಯಲ್ಲಿ ಪಟಾಕಿ ಬಾಣ ಬಿರುಸು ಗಳನ್ನು ಹಚ್ಚುವ ಮೂಲಕ ಆಚರಣೆ ಮುಂದುವರಿದಿದೆ.

ಬಾಣ ಬಿರುಸುಗಳನ್ನು ಹಚ್ಚುವ ಆಚರಣೆ
(ಫೋಟೋ ಕೃಪೆ - ರಮೇಶ್ ನಾಡಿಗ್, ಹೊಸಬಾಳೆ)

ನರಕಾಸುರನ ವಧೆಯಾದ ನಂತರ ಅವನಿಂದ ಶ್ರೀ ಕೃಷ್ಣನು,ಅಸುರನಿಂದ ಸೆರೆಯಾಗಿದ್ದ ೧೬೦೦೦ ಕನ್ಯೆಯರನ್ನು ಸೆರೆಯಿಂದ ಬಿಡಿಸಿ ಅವರ ಅಂತ್ಯದವರೆಗೂ ಸುಖವಾಗಿ ಗೌರವದಿಂದ ಜೀವನ ನಡೆಸಲು ಅವಕಾಶ ಕೊಟ್ಟನು. ಇದರಿಂದಾಗಿ ಅವರೆಲ್ಲರೂ ಶ್ರೀಕೃಷ್ಣನ ಮಡದಿಯರೆಂದೇ ಭಾವಿಸಲ್ಪಟ್ಟರು. ಹೀಗೆ ಸೆರೆಯಿಂದ ಕನ್ಯೆಯರನ್ನು ಬಿಡಿಸಿದ ಶ್ರೀಕೃಷ್ಣನ ರೂಪವನ್ನು ಎಲ್ಲಾ ಕನ್ಯಾಪಿತೃಗಳು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾದ ಅಳಿಯನಲ್ಲಿ ಕಾಣುತ್ತಾರೆ. ಆದ್ದರಿಂದಲೇ ತಮ್ಮ ಕನ್ಯಾಸೆರೆ ಬಿಡಿಸಿದ ಅಳಿಯನನ್ನು ಮದುವೆಯಾದ ಮೊದಲ ವರ್ಷದ ಹಬ್ಬಕ್ಕೆ ಕರೆದು, ದೇವರ ಮುಂದೆ ಕೂಡಿಸಿ, ಹೊಸ ಬಟ್ಟೆ ಉಡುಗೊರೆ, ಆರತಿಗಳಿಂದ ಗೌರವಿಸಿ ಸನ್ಮಾನಿಸುವ ಪದ್ದತಿ ವಾಡಿಕೆಯಲ್ಲಿದೆ.

ಮನೆಯ ಬಾಗಿಲಿಗೆ ದೀಪಾಲಂಕಾರ
(ಫೋಟೋ ಕೃಪೆ - ರಮೇಶ್ ನಾಡಿಗ್, ಹೊಸಬಾಳೆ)

ಬೆಳಗಾದರೆ ಅಮಾವಾಸ್ಯೆ. ದಕ್ಷಿಣ ಭಾರತದಲ್ಲಿ ನಾವು ಕಾಲವನ್ನು ಅನುಸರಿಸುವ ಪದ್ಧತಿ ಶಾಲಿವಾಹನ ಶಕೆ. ಉತ್ತರ ಭಾರತದಲ್ಲಿ ವಿಕ್ರಮ ಶಕೆಯನ್ನು ಅನುಸರಿಸುವವರಾಗಿದ್ದು ಅವರಿಗೆ ಈ ಅಮಾವಾಸ್ಯೆ ವರ್ಷದ ಕಡೆಯ ದಿನ. ಇಂದು ಅವರು ಲಕ್ಷೀಪೂಜೆ ಮಾಡಿ ಅವರ ವರ್ಷವನ್ನು ಮುಗಿಸುತ್ತಾರೆ. ಅಂತೆಯೇ ನಾಳೆಯಿಂದ ಅವರಿಗೆ ಹೊಸ ಪಂಚಾಗ. ಹೊಸ ಕ್ಯಾಲೆಂಡರ್. ಹೊಸ ಲೆಕ್ಕದ ಪುಸ್ತಕ. ಶ್ರೀಮಂತಿಕೆ, ಸಂಪತ್ತು ಕೊಡುವ ದೇವರು ಎಲ್ಲರಿಗೂ ಬೇಕು. ಆದ್ದರಿಂದ ಇಲ್ಲಿರುವ ಉತ್ತರ ಭಾರತದವರೊಂದಿಗೆ
ನಮ್ಮವರೂ ಸೇರಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಪೂಜೆ, ಪಟಾಕಿಯ ಸದ್ದಿನೊಂದಿಗೆ, ಸಾಲುದೀಪಗಳನ್ನು ಹಚ್ಚಿ ಈ ದಿನವನ್ನು ಭರ್ಜರಿಯ ದೀಪಾವಳಿಯಾಗಿ ಆಚರಿಸುತ್ತಾರೆ. ಇಂದು ಬಲೀಂದ್ರನ ಪೂಜೆ. ಸಂಜೆಯ ನಂತರ ಸೆಗಣಿ ಉಂಡೆಯ ಮೇಲೆ ಕುಂಬಳ ಕಾಯಿ ತುಂಡು ಅಥವಾ ಕಹಿಸೌತೆ ತುಂಡಿನಿಂದ ಮಾಡಿದ ಹಣತೆಗಳಲ್ಲಿ ಎಣ್ಣೆದೀಪ ಹಚ್ಚುವರು. ಮನೆಯ ಮುಂಭಾಗದ ಕಟ್ಟೆಯೂ ಸೇರಿದಂತೆ ಎಲ್ಲಾ ಕಡೆಗೂ ಸಾಲು ಸಾಲು ದೀಪಗಳು.ನೋಡಲೂ ಚೆಂದ, ಮನಸ್ಸಿಗೂ ಆಹ್ಲಾದಕರ.

ಹಿರಣ್ಯಕಶಿಪುವಿನ ಮಗ ಪ್ರಹ್ಲಾದ. ಆತನ ಮಗನೇ ಮಹಾಬಲಿ. ತಂದೆಯಂತೆಯೇ ಈತನೂ ಸಹ ಮಹಾವಿಷ್ಣುಭಕ್ತ. ಮಹಾದಾನಿ. ಮಹಾಶೂರ. ಪ್ರಜಾವತ್ಸಲನಾಗಿ ಚೆನ್ನಾಗಿ ಪ್ರಜೆಗಳನ್ನು ರಾಜ್ಯವನ್ನು ಆಳುತ್ತಿದ್ದ. ಪ್ರಜೆಗಳೂ ಅವನನ್ನು ಭಕ್ತಿಯಿಂದ ಆದರದಿಂದ ಪ್ರೀತಿಸುತ್ತಿದ್ದರು. ತನ್ನ ಈ ಹಿರಿಮೆಗಳಿಂದಾಗಿ ಆತನಿಗೆ ತುಂಬಾ ಅಹಂಕಾರವಿತ್ತು. ಈತನು ದೇವಾನುದೇವತೆಗಳನ್ನು ಜಯಿಸಿ, ಮೂರು ಲೋಕಗಳನ್ನು ಆಳುತ್ತಿರುವನು. ಅಧಿಕಾರವನ್ನು ಕಳೆದುಕೊಂಡ ದೇವತೆಗಳು ಮಹಾವಿಷ್ಣುವನ್ನು ತಮ್ಮ ಎಂದಿನ ಅಧಿಕಾರಕ್ಕಾಗಿ ಮೊರೆ ಹೋಗುತ್ತಾರೆ.ದೇವತೆಗಳ ಅಧಿಕಾರವನ್ನು ಅವರಿಗೆ ಕೊಡಿಸಿ ಮಹಾಬಲಿಗೂ ಉತ್ತಮ ಸ್ಥಾನ ದೊರಕಿಸಿರುವುದೇ ಬಲಿರಾಜನ ಕಥೆ.

ದಾನಶೂರನಾಗಿರುವ ಮಹಾಬಲಿಯು ಒಮ್ಮೆ ಅಶ್ವಮೇಧಯಾಗವನ್ನು ಮಾಡುತ್ತಿದ್ದ. ಕೇಳಿದವರಿಗೆಲ್ಲ ಅವರು ಆಶಿಸಿದ ವಸ್ತುಗಳನ್ನು ದಾನ ಮಾಡುತ್ತಿದ್ದಾನೆ. ಇದನ್ನು ನೋಡಿದ ಗುರು ಶುಕ್ರಾಚಾರ್ಯರು ದಾನ ಮಾಡುವುದು ಶ್ರೇಷ್ಠ. ಆದರೆ ಹೀಗೆ ಕೇಳಿದ್ದೆಲ್ಲವನ್ನೂ ಕೊಡುತ್ತೇನೆ ಎನ್ನುವುದು ತಪ್ಪು ಎಂದು ಹೇಳುತ್ತಿದ್ದರೂ ಬಲಿಯು ಕೇಳುತ್ತಿರಲಿಲ್ಲ. ಯಾಗದ ವೇಳೆಯಲ್ಲಿ ಮಹಾವಿಷ್ಣುವು ವಾಮನ ಎಂದರೆ ಚಿಕ್ಕ ಬ್ರಹ್ಮಚಾರಿಯ ರೂಪದಲ್ಲಿ ಬಂದು ತನಗೆ ದಾನ ಕೊಡಲು ಕೇಳಿಕೊಳ್ಳುತ್ತಾನೆ. ದಾನ ಕೇಳುತ್ತಿರುವುದು ವಿಷ್ಣುವೆಂದು ಅರಿತ ಶುಕ್ರಾಚಾರ್ಯರು ಈ ಬೇಡಿಕೆಯಲ್ಲಿ ಅಪಾಯವನ್ನು ಊಹಿಸಿ ಬಲಿಯನ್ನು ಕಾಪಾಡಲು ಗುರು ಶುಕ್ರಾಚಾರ್ಯರು ಕಪ್ಪೆರೂಪದಲ್ಲಿ ಕಮಂಡಲದ ನೀರಿನ ನಾಳದಲ್ಲಿ ಸೇರಿಕೊಳ್ಳುತ್ತಾರೆ. ಸಂಪ್ರೋಕ್ಷಣೆಗೆ ನೀರು ಹೊರಬರಲು ತಡೆಯಾದ್ದರಿಂದ ದಾನ ಪಡೆಯುವ ವಿಷ್ಣುವು ಧರ್ಭೆಯಿಂದ ಆ ನಾಳದ ಒಳಭಾಗಕ್ಕೆ ಚುಚ್ಚಿ ನೀರಿಗೆ ದಾರಿ ಮಾಡಿಕೊಟ್ಟನು. ದಾನ ಪಡೆದ ವಿಷ್ಣು ಹಠಾತ್ತಾಗಿ ಭಾರೀ ಅಳತೆಯ ಪಾದಗಳುಳ್ಳ ತ್ರಿವಿಕ್ರಮನಾದನು. ಕೊಡುವೆನೆಂಬ ಮೂರು ಹೆಜ್ಜೆ ದಾನದಲ್ಲಿ ಮೊದಲ ಎರಡು ಹೆಜ್ಜೆಯಾಗಿ ಭೂಮಿ ಆಕಾಶಗಳನ್ನು ಪಡೆದನು. ಮೂರನೇ ಹೆಜ್ಜೆ ಎಲ್ಲಿಡಲಿ ಎಂದಾಗ ತನ್ನ ತಲೆಯನ್ನು ತೋರಿಸಿದ ಬಲಿಯ ತಲೆಯ ಮೇಲೆ ಕಾಲಿಟ್ಟನು.ಇದರಿಂದಾಗಿ ಬಲಿ ಪಾತಾಳ ಸೇರಿದನು. ಹಾಗೆ ಪಾತಾಳ ಸೇರಿದ ಬಲಿಗೆ ಅಲ್ಲಿಯ ಪೂರ್ಣ ಅಧಿಕಾರವನ್ನು ಕೊಟ್ಟ ವಿಷ್ಣು, ತನ್ನ ಪರಮಭಕ್ತನಿಗೆ ವರವೇನು ಬೇಕು ಎಂದು ಕೇಳುತ್ತಾನೆ. ಈ ವೇಳೆಯಲ್ಲಿ ತನ್ನ ಪ್ರಜೆಗಳನ್ನು ತೊರೆದು ಹೋಗುವ ದುಃಖವನ್ನು ತಿಳಿಸಿದ ಬಲಿಗೆ ವರ್ಷದಲ್ಲಿ ಮೂರು ದಿನಗಳ ಕಾಲ ನಿನಗೆ ಭೂಮಿಯಲ್ಲಿ ಅವಕಾಶವಿದೆ. ಈ ಸಮಯದಲ್ಲಿ ನಿನಗೆ ಪ್ರಜೆಗಳಿಂದ ಆದರವೂ ನಂತರ ಮೂರನೇ ದಿನದಂದು ಪೂಜೆಯೂ ನಡೆಯುತ್ತದೆ ಎಂದು ವರವನ್ನು ಕೊಟ್ಟನು. ಈ ಕಾರಣದಿಂದಾಗಿ ನರಕಚತುರ್ದಶಿಯಂದು ಸ್ಥಾಪನೆಗೊಂಡು ಬಂದಿರುವ ಮಹಾಬಲಿ ಚಕ್ರವರ್ತಿಗೆ ಮೂರನೇ ದಿನವಾದ ಪಾಡ್ಯಮಿಯಂದು ವಿಶೇಷ ಪೂಜೆ. ಅವನ ಬಂದ ಮೊದಲ ಅರ್ಧ ದಿನದಲ್ಲಿ ಯಾವುದೇ ಕಾರ್ಯವನ್ನು ಮಾಡಬಹುದಾದ ಶುಭ ಮುಹೂರ್ತವಾಗುತ್ತದೆ. ಈಗಾಗಲೇ ಇರುವ ಯುಗಾದಿ, ಅಕ್ಷಯ ತೃತೀಯ ಮತ್ತು ವಿಜಯದಶಮಿಯ ಸಾಲಿನಲ್ಲಿ ಈ ವಿಶೇಷ ಮುಹೂರ್ತ ಸೇರಿ ಮೂರೂವರೆ ಮುಹೂರ್ತ ಎಂದು ಪ್ರಸಿದ್ಧಿಯಾಗಿದೆ. ಈ ಮುಹೂರ್ತದಲ್ಲಿ ಯಾವುದೇ ಕಾರ್ಯವನ್ನೂ ಆತಂಕವಿಲ್ಲದೆ ನಿರ್ವಿಘ್ನವಾಗಿ ಮಾಡಬಹುದು. ಈ ಹಬ್ಬದ ಸಾಲಿನಲ್ಲಿ ದೀಪಗಳನ್ನು ಹಚ್ಚಿ ಬಲಿಚಕ್ರವರ್ತಿಯ ಇರುವನ್ನು ತೋರಿಸುವ ದೀಪಾಚರಣೆಯನ್ನು ಕಾರ್ತೀಕ ಮಾಸ ಪೂರ್ತಿ ಕೆಲವರು ಆಚರಿಸುವರು.ಹೀಗೆ ಮಹಾಬಲಿಯ ಪೂಜೆಯ ದಿನವೇ ಬಲಿಪಾಡ್ಯಮಿ.ಇದೇ ಕಾರ್ತೀಕ ಶುದ್ಧ ಪಾಡ್ಯ

ಅಲಂಕಾರದೊಂದಿಗೆ ಎತ್ತಿನ ಮೆರವಣಿಗೆ
(ಫೋಟೋ ಕೃಪೆ - ರಮೇಶ್ ನಾಡಿಗ್, ಹೊಸಬಾಳೆ)
ಭೂಮಿಗೆ ಬಂದ ಮಹಾಬಲಿಗೆ ಪೂಜೆ ಮಾಡುವ ಸಮಯದಲ್ಲಿ ಮಹಾವಿಷ್ಣುವಿನ ಅವತಾರವಾದ ಗೋವರ್ಧನನಿಗೆ ಗೋವುಗಳ ಮೂಲಕ ವಿಶೇಷ ಆದರಾತಿಥ್ಯ. ಮನೆಯಲ್ಲಿನ ಜಾನುವಾರುಗಳಿಗೆ ಸ್ನಾನದ ಹೆಸರಲ್ಲಿ ಅಭಿಷೇಕ. ಮೈಮೇಲೆ ಗೋಪಾದ, ವೃತ್ತಾಕಾರದ, ಕೆಮ್ಮಣ್ಣು ಬಿಳಿ ಮಣ್ಣು ನೆನೆಸಿ, ಅಳತೆ ಪಾವಿನ ಬಾಯಿಂದ ಗುನ್ನಾ ಹೊಡೆದು ಅಲಂಕಾರ ಮಾಡುತ್ತಾರೆ. ಕೋಡುಗಳನ್ನು ಹೆರೆದು ಅವುಗಳಿಗೆ ಕುಪ್ಪಿ ಬಣ್ಣ ಲೇಪನ.ಹಣ್ಣಾದ ಅಡಿಕೆ, ಹಿಂಗಾರ, ಚೆಂಡು ಹೂವು, ಕಾಮಕಸ್ತೂರಿ ಎಲೆ ಗಳು, ತುರಾ ರೊಟ್ಟಿ, ಹೂವಿನ ದಂಡೆ,ಪಚ್ಚೆತೆನೆ, ಅಂಬೋಡೆ ಎಲೆಗಳನ್ನು ದಬ್ಬಣದಿಂದ ಪುಂಡಿ ನಾರಿನಲ್ಲಿ ಪೋಣಿಸಿ ಮಾಡಿದ ಹಾರ ಎಲ್ಲಾ ದನಕರುಗಳು ಎಮ್ಮೆಗಳಿಗೆ ಎತ್ತುಗಳಿಗೆ ಸಾಮಾನ್ಯ ವಾಗಿ ತೊಡಿಸುತ್ತಾರೆ. ರಾಜಠೀವಿಯ ಎತ್ತುಗಳಿಗೆ ಸಣ್ಣಗೆಜ್ಜೆಗಳನ್ನು ಹಲವು ಸಾಲಲ್ಲಿ ಜೋಡಿಸಿದ ಸರ, ದಾಪುಗಾಲು ಹಾಕುವ ಸಡಗರದ ಎತ್ತುಗಳಿಗೆ ಹಿತ್ತಾಳೆ ಅಥವಾ ಕಂಚಿನ ಗಗ್ರ, ಸದಾ ಚಟುವಟಿಕೆಯಿಂದ ಹೆಜ್ಜೆ ಹಾಕುವ ಹಸುಗಳಿಗೆ ಗಂಟೆ, ಮಂದಹಾಸದಿಂದ ಶಾಂತವಾಗಿ ಹೆಜ್ಜೆ ಹಾಕುವ ಎಮ್ಮೆಗಳ ಕುತ್ತಿಗೆಗೆ ಲೊಡಗ ಎಂಬ ತಗಡಿನ ಗಂಟೆ. ಎತ್ತುಗಳಿಗೆ ಕೊಂಬೆಣಸು, ಇಳಿಗವಚ, ಜೂಲು, ಗಂಟೆಸರಗಳ ಅಲಂಕಾರ ಮಾಡುತ್ತಾರೆ. ಕೋಡಿನ ಅಲಂಕಾರಕ್ಕೆ ಇತ್ತೀಚೆಗೆ ನೈಲಾನ್ ರಿಬ್ಬನ್, ರಬ್ಬರ್ ಬಲೂನುಗಳೂ ಸೇರುತ್ತಿವೆ.

ಊರ ದೇವರಿಗೆ ಸಾಮೂಹಿಕ ಪೂಜೆ
(ಫೋಟೋ ಕೃಪೆ - ರಮೇಶ್ ನಾಡಿಗ್, ಹೊಸಬಾಳೆ)
ಹೊಸ ಉಡುಪು ಹೊಸ ಉತ್ಸಾಹದೊಂದಿಗೆ ಗೊತ್ತಾದ ಮುಹೂರ್ತದಲ್ಲಿ ಗೋವಿನ ಪೂಜೆ. ಕರುವಿರುವ ಹಸುವಿಗೆ ಪೂಜೆಗೆ ಪ್ರಾಶಸ್ತ್ಯ. ಹೂವಿನ ಮಾಲೆಯೊಂದಿಗೆ ಹಸುಗಳ ಪಾದಪೂಜೆ. ಅವುಗಳೊಂದಿಗೆ ಎಲ್ಲಾ ಜಾನುವಾರುಗಳಿಗೆ ಗೋಗ್ರಾಸ ನೈವೇದ್ಯ. ನಂತರ ಒಟ್ಟಾಗಿ ಜಾನುವಾರುಗಳನ್ನು ಹೊರಗೆ ಮೇಯಲು ಹಸು ಕಾಯುವವನೊಂದಿಗೆ ಕಳಿಸುವರು. ಬರುವಾಗ ಗದ್ದೆಯಲ್ಲಿ ಬೆಳೆದ ಭತ್ತದ ತೆನೆ ಕದಿರನ್ನು ಕಿತ್ತು ತರುವರು. ಇಂದಿನ ಪೂಜೆ ಮಹಾ ಪೂಜೆಯೇ. ಮನೆ ದೇವರ ಪೂಜೆ, ಊರು ಕಾಯುವ ದೇವಸ್ಥಾನದ ದೇವರಿಗೆ, ಗೋವಿನ ಪೂಜೆ, ಊರು ಕಾಯುವ ಭೂತಪ್ಪಗೆ ಪೂಜೆ. ತೊಂದರೆ ಕೊಡದೆ ಕಾಪಾಡೆಂದು ಚೌಡಿಗೆ ಪೂಜೆ. ಊರ ಮುಂದಿನ, ತೋಟದ ಬಳಿಯ, ಕೆರೆ ಪಕ್ಕದ, ಗದ್ದೆ ಅಂಚಿನ ಎಲ್ಲಾ ಭೂತ, ಚೌಡಿಗೂ ತೆಂಗಿನಕಾಯಿ ಪೂಜೆ. ಪಣತ, ಕಣಜ, ಒರಳು, ಒನಕೆ ವ್ಯವಸಾಯ ಸಾಮಗ್ರಿಗಳು, ಅಡಿಕೆ ಸುಲಿಯುವ ಮಣೆ, ಯಂತ್ರ, ಈಳಿಗೆ ಮಣೆ, ಮನೆಯ ಹೊಸ್ತಿಲು, ವಾಸ್ತು, ಮನೆಕೋಳು, ಅಡಿಕೆ ಗೊನೆ, ದುಡ್ಡು ಆಭರಣಗಳ ಬೀರು ಹೀಗೆ ಉಪಯೋಗ ಲಾಭ ತರುವುದೆಲ್ಲವೂ 'ಸರ್ವಂ ದೈವ ಮಯಂ' ಎಂದು ಬದುಕಿನ ರಕ್ಷಣೆಯ ಆಶಿಸಿ ಪೂಜೆ, ಎಲ್ಲಾ ಪೂಜೆಗೂ ಪ್ರತ್ಯೇಕ ತೆಂಗಿನಕಾಯಿ ನೈವೇದ್ಯ ವಿಶೇಷವಾದದ್ದು‌. ಮದ್ಯಾಹ್ನದ ಊಟಕ್ಕೆ ಗದ್ದೆಯಿಂದ ತಂದ ಕದಿರು ತೆಗೆದು ಪಡೆದ ಹೊಸ ಅಕ್ಕಿಯ ಪಾಯಸ, ವಿಶೇಷವಾಗಿ ಬೇಳೆ ಹೋಳಿಗೆ ನೈವೇದ್ಯದ ನಂತರ ಬಂಧುಗಳೊಂದಿಗೆ ಸಂತೋಷದಿಂದ ಭೋಜನ ಮಾಡುವರು.

ಸಂಜೆ ಮರಳಿ ಬರುವ ದನಕರುಗಳಿಗೆ ಓಕುಳಿ, ಕಾಯಿ ಸುಳಿದು, ಒಡೆದು ನಂತರ ಆರತಿ ಮಾಡಿ ಒಳಗೆ ಬರಮಾಡಿಕೊಂಡು ಇನ್ನೊಮ್ಮೆ ಅಕ್ಕಿ , ಅರಿಶಿನ,ಬೆಲ್ಲಗಳ ಗೋಗ್ರಾಸ ತಿನ್ನಿಸುವುದು. ಸಂಜೆ ಹೊಸ ಉಡುಪು ಧರಿಸುವರು. ರಾತ್ರಿ ಎಲ್ಲರ ಮನೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸುವರು. ಊರವರೆಲ್ಲರೂ ಸೇರಿ ಗ್ರಾಮ ದೇವರಿಗೆ ವಿಶೇಷ ಸಾಮೂಹಿಕ ಪೂಜೆ ನಡೆಯುತ್ತದೆ. ಪುಂಡಿ ಕೋಲು, ಅಡಿಕೆ ಮರದ ಪಟ್ಟಿಗಳಿಂದ ತಯಾರಾದ ದೀವಟಿಗೆ (ದೊಂದಿ) ಯೊಂದಿಗೆ ದೀಪ ದೀಪ ಹೋಳಿಗೆ, ಹಬ್ಬಕ್ಕೊಂದು ಹೋಳಿಗೆ ಎಂದು ಕೇಕೆ ಹಾಕುತ್ತಾ ಊರ ಬಾಗಿಲಿನತ್ತ ಹೋಗುವರು. ಇದು ಭೂಮಿಗೆ ಹಬ್ಬಕ್ಕೆಂದು ಬಂದ ಮಹಾಬಲಿ ಚಕ್ರವರ್ತಿಗೆ ಬೀಳ್ಕೊಡುಗೆ ಕೊಡುವುದರೊಂದಿಗೆ ದೊಡ್ಡಬ್ಬ ಮುಕ್ತಾಯವಾಗುತ್ತದೆ. ಈ ರೀತಿ ಭೂಮಿಯಲ್ಲಿ ಆಡುವ ದೊಂದಿಯನ್ನು ಕಂಡು ಮೇಲಿನ ಲೋಕದಲ್ಲಿನ ಹಿರಿಯರು ನಾವೆಲ್ಲರೂ ಸಂತೋಷವಾಗಿ ಇದ್ದೇವೆ ಎಂದು ಸಮಾಧಾನವಾಗುವರೆಂದು ನಂಬಿಕೆ. ಈ ರಾತ್ರಿ ಹಬ್ಬದ ಬಗ್ಗೆ ವಿಶೇಷವಾಗಿ ಹಾಡಿಕೊಂಡು ಬರುವ "ಹಬ್ಬಹಾಡುವ" ತಂಡದವರು ಬರುವ ಕಾರ್ಯಕ್ರಮ ಕೆಲವು ಕಡೆ ಪದ್ಧತಿ ಯಲ್ಲಿದೆ. ಹಾಗೆ ಬಂದವರು ತಮ್ಮೊಂದಿಗೆ ತಂದಿರುವ ದೀಪದಿಂದ ಭೇಟಿ ನೀಡುವ ಪ್ರತಿ ಮನೆಯ ಹಣತೆಗೆ ದೀಪ ಹಚ್ಚುತ್ತಾರೆ. ಈ ದೀಪ ಎಷ್ಟು ಹಂಚಿದರೂ ಕರಗದ ಜ್ಞಾನದ ಸಂಕೇತ. ಎಂತಹ ಉದಾತ್ತ ಭಾವ, ಔದಾರ್ಯ. ಸಮಾಜದ ಈ ಘನ ಬಾಂಧವರ ಸೇವೆ ಅನನ್ಯ. ಹೀಗೆ ಬಂದವರಿಗೆ ಅಕ್ಕಿ, ತೆಂಗಿನಕಾಯಿ, ಹಣ್ಣು, ಹೋಳಿಗೆ, ಹಣ ಯಥಾನುಶಕ್ತಿಯಾಗಿ ಕೊಟ್ಟು ಗೌರವಿಸಲಾಗುವುದು. ಹೊಸದಾಗಿ ಮಾವನ ಮನೆಗೆ ಬಂದ ಅಳಿಯಂದಿರು ಇವರಿಗೆ ವಿಶೇಷ ಕೊಡುಗೆ ಕೊಡುವ ಪರಿಪಾಠವೂ ನಡೆಯುತ್ತಿದೆ.

ಮದುವೆಯಾದ ಮೊದಲ ವರ್ಷದ ಈ ಹಬ್ಬಕ್ಕೆ ಬಂದ ಮಗಳು ಅಳಿಯನನ್ನು ಮಮತೆಯಿಂದ ಕೆಲವು ದಿನ ಉಳಿಸಿಕೊಂಡು ಔತಣ ನೀಡಲು ಬಾವನ ಬಿದಿಗೆ, ಅಕ್ಕನ ತದಿಗೆ,ಕಡೆ ಪಂಚಮಿ ಎಂದು ಆಚರಿಸುವ ಪದ್ಧತಿಯೂ ಇದೆ. ಇನ್ನು ದನ, ಕರು, ಎತ್ತು, ಎಮ್ಮೆಗಳ ಬೆಲೆಯಲ್ಲಿ ಹೆಚ್ಚಳ, ಅವುಗಳ ಸಾಕಾಣಿಕೆಯಲ್ಲಿ ಹೆಚ್ಚಾಗುತ್ತಿರುವ ಖರ್ಚು, ಅವುಗಳ ನಿಗಾ ನೋಡಲು ಆಳು ಸಿಗುವುದು ದುರ್ಲಭ. ಸಿಕ್ಕರೂ ದುಬಾರಿಯ ವೆಚ್ಚ . ರಾಸುಗಳು ಹೆಚ್ಚು ಇದ್ದಷ್ಟೂ ಹಬ್ಬಕ್ಕೆ ಖಳೆ. ಹಬ್ಬವೆಂದರೆ ಸಡಗರ. ಸಡಗರಕ್ಕೆ ಹೆಚ್ಚು ಜನರು ಆವಶ್ಯಕ. ಬದಲಾದ ಪರಿಸ್ಥಿತಿ ಗಳಲ್ಲಿ ವಿವಿಧ ಕಾರಣಗಳಿಂದ ಕುಟುಂಬದ ಎಲ್ಲರೂ ಒಟ್ಟಾಗಿ ಸೇರುವುದು ಕಷ್ಟ. ಹೀಗಾಗಿ ಹಬ್ಬದ ಆಚರಣೆಯಲ್ಲಿ ಹಲವಾರು ಬದಲಾವಣೆಗಳನ್ನು ಕಾಣುತ್ತಿದ್ದೇವೆ.   ಆದರೂ ಸೇರಿರುವ ಜನರಿಗೆ ಹಬ್ಬದ ಆಚರಣೆಯಲ್ಲಿ ಉತ್ಸಾಹವೇನೂ ಕಡಿಮೆಯಾಗಿಲ್ಲ. ಈ ದೀಪಾವಳಿಯ ಅಥವಾ ದೊಡ್ಡಬ್ಬದ ಆಚರಣೆಯ ರೀತಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇರೆ ಬೇರೆಯಾಗಿರಬಹುದು. ಆದರೆ ಎಲ್ಲಾ ಕಡೆ ದೀಪ ಹಚ್ಚುವ ಪದ್ಧತಿ ಒಂದೇ ರೀತಿ. ಒಂದೇ ಧ್ಯೇಯ. ಅಜ್ಞಾನವೆಂಬ ಕತ್ತಲಿನಿಂದ ಜ್ಞಾನದ ಕಡೆ ಕರೆದೊಯ್ಯುವ, ಎಲ್ಲೆಲ್ಲೂ ಬೆಳಕು ಚೆಲ್ಲಿ ಮನದ ಅಂಧಕಾರವನ್ನು ಕಳೆಯುವ ಧ್ಯೇಯವನ್ನು ಸಾರುವ ಹಬ್ಬವಾಗಿ ದೊಡ್ಡಬ್ಬ ಎಲ್ಲರಿಗೂ ಸುಖ ಶಾಂತಿ ನೆಮ್ಮದಿಯನ್ನು ತರಲಿ ಎಂದು ಆಶಿಸೋಣ.



ಓದುಗರಲ್ಲಿ ಮನವಿ:- ತಮ್ಮ ಮನೆಯ ಈ ಹಬ್ಬದ ಆಚರಣೆಯಲ್ಲಿ ಹೊಸತೇನಾದರೂ ಇದ್ದು ಅದಕ್ಕೆ ವಿಶೇಷ ಅರ್ಥವಿದ್ದಲ್ಲಿ ದಯವಿಟ್ಟು ಅದನ್ನು ಕಾಮೆಂಟ್ ವಿಭಾಗದಲ್ಲಿ ತಮ್ಮ ಹೆಸರಿನೊಂದಿಗೆ ಸೇರಿಸಿ ಬರೆಯಿರಿ. ಸೂಕ್ತ ಕಂಡಲ್ಲಿ ಲೇಖನದಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.

 

( ಮಾಹಿತಿ: ವಿವಿಧ ಮೂಲಗಳಿಂದ )

Comments

  1. ರಮೇಶ್.. ಲೇಖನ ಅರ್ಥಪೂರ್ಣ ವಾಗಿದೆ ಈ ವರೆಗೆ ಗೊತ್ತಿಲ್ಲದೇ ಆಚರಿಸುತ್ತಿದ್ದ ಆಚರಣೆಗಳಿಗೆ ಅರ್ಥ ಸಿಕ್ಕಿದೆ.. ಹೃತ್ಪೂರ್ವಕ ಧನ್ಯವಾದಗಳು...

    ReplyDelete
  2. ಅಂಕಣಚೆನ್ನಾಗಿದೆ ದೀಪಾವಳಿ ಯ ಮಾಹಿತಿ ಅಚ್ಚುಕಟ್ಟಾಗಿ ತಿಳಿಸಿದ್ದೀರಿ ,ಮಹಾಲಿಂಗ ನ ಬಳ್ಳಿ ಬಗ್ಗೆ ಮಾಹಿತಿ ನನಗೆ ಇರಲೇಇಲ್ಲ ,ದೀಪಾವಳಿ ಶುಭಾಷಯಗಳು.

    ReplyDelete
  3. ನಾವು ಸಣ್ಣವರಿದ್ದಾಗ ಗೆಳೆಯರು ಮನೆಯಲ್ಲಿ ಬೂರೆ ಹಾದು ಎಳನೀರು ಇಳಿಸುವಾಗ ಅವರ ಮನೆಯ ಮಣ್ಣಿನ ಬಾನಿಯನ್ನು ಒಡೆದು ರಸ್ತೆಯೆಲ್ಲ ನೀರು ಚೆಲ್ಲಿ ಬಂದು ಸರಿಯಾಗಿ ಮಂಗಳಾರತಿ ಮಾಡಿಸಿಕೊಂಡ ನೆನಪು ಮತ್ತೆ ಮರುಕಳಿಸಿತು. ಹಬ್ಬದ ಶುಭಾಶಯಗಳು.

    ReplyDelete
  4. ಮಲೆನಾಡಿನ    ಹಳ್ಳಿಗಳಲ್ಲಿ    ಹಬ್ಬದಾಚರಣೆ    ಚಂದ.    ಇನ್ನೂ    ಚೆನ್ನಾಗಿ    ವರ್ಣಿಸಿರುವ    ನಿನ್ನ     ಶೈಲಿಯೇ   ಮತ್ತೂ  ಚಂದ.  ಮುಂದುವರಿಯಲಿ    ನಿನ್ನ    ಲೇಖನಿ.  
    ಹಾಸನದ  ಕಡೆ    ನರಕಚತುರ್ದಶಿ   ಗೋವುಗಳು   ಧೂಳೆಬ್ಬಿಸಿಕೊಂಡು   ಮನೆಗೆ   ವಾಪಸ್ಸಾಗುವ   ವೇಳೆ ಬಲಿಂದ್ರನನ್ನು    ದೇವರ  ಬಳಿ    ಸ್ಥಾಪಿಸಿ   ಹೆಂಗೆಳೆಯರು   ಪೂಜಿಸುವರು.   ಸಾಗರದಲ್ಲಿ  ಬಲಿಪಾಡ್ಯಮಿಯಂದು   ಬೆಳಗಿನ    ದೇವರಪೂಜೆ ನಂತರ   ಗೋಪೂಜೆ,    ನಂತರ    ಬಲಿಂದ್ರನನ್ನು   ದೇವರ ಮುಂದೆ  - ಎಲ್ಲ  ಬಾಗಿಲ ಬಳಿ -   ನಾಗಪ್ಪನ  ಬಳಿ - ಭಾವಿ  ಬಳಿ  - ಒರಳು /ಒನಕೆ/ ಬೀಸುವಕಲ್ಲುಗಳ ಬಳಿ -  ತಿಪ್ಪೆಗುಂಡಿ ಬಳಿ,  ಸಗಣೆ ಉಂಡೆಯ ಮೇಲೆ  ಚೆಂಡು ಹೂವನ್ನಿಡುವ  ಮೂಲಕ   ಬಲಿಂದ್ರನ    ಸ್ಥಾಪಿಸಿ,  ಪೂಜಿಸಿ,   ಸಂಜೆ  ಗೋಧೂಳಿ   ಮುಹೂರ್ತದಲ್ಲಿ   ವಾಪಸ್ಸಾದ    ಗೋವುಗಳಿಗೆ   ಮತ್ತು  ಬಲಿಂದ್ರನಿಗೆ     ಮಾಡಿ,    ಮೇಲೆ  ತಿಳಿಸಿದ    ಎಲ್ಲ   ಸಗಣಿಯುಂಡೆ  ಬಳಿ   ೨-೨ ದೀಪ   ಇಟ್ಟು  ಬೆಳಕನ್ನು  ಹರಡುತ್ತಾರೆ.   

    ೯೯  ಅಶ್ವಮೇಧ   ಯಾಗಮಾಡಿ   ಇಂದ್ರನ  ಪದವಿಯ   ಮೇಲೆ    ಗುರಿ   ತಲುಪಲಿದ್ದ    ಬಲಿಂದ್ರನನ್ನು  ಇಂದ್ರ   ಉಪಾಯ ವಾಗಿ   ವಾಮನಾವತಾರದ    ಮೂಲಕ  ತಾತ್ಕಾಲಿಕವಾಗಿ   ಪಾತಾಳಕ್ಕೆ    ಸಾಗ  ಹಾಕಲಾಗಿದ್ದು,   ವರ್ಷಕ್ಕೊಮ್ಮೆ   ಭೂಮಿ  ಸಮೃದ್ಧಿಯಾದ  ವೇಳೆ   ಬಂದು   ತನ್ನ  ಪ್ರಜೆಗಳನ್ನು   ನೋಡಲು   ಬರುತ್ತಾನೆಂದು   ಕೆಲವರ    ನಂಬಿಕೆ.   ಬೆಳೆ  - ಫಸಲು  ಬಂದು   ಸಮೃದ್ಧಿಯಾದ  ವೇಳೆ   "ದೊಡ್ದಬ್ಬ"   ಆಚರಿಸಿ    ಸುಖವಾಗಿರುವ   ಕಾಲ.   ಹಿರಿಯಣ್ಣ   ಕೆ  ಪಿ 

    ReplyDelete
  5. ದೀಪಗಳ ಸರಮಾಲೆಯ ದೀಪಾವಳಿಯ ಆಚರಣೆಯ ಬಗ್ಗೆ ತಾವು ನೀಡಿದ ಸಮಗ್ರ ಉಪಯುಕ್ತ ಮಾಹಿತಿಗೆ ಧನ್ಯವಾದಗಳು. ಆಶ್ವಯುಜ ಬಹುಳ ಚತುರ್ದಶಿಯಿಂದ ಕಾರ್ತೀಕ ಶುದ್ಧ ಪ್ರತಿಪತ್ ವರೆಗೆ ಆಚರಿಸುವ ಹಾಗೂ ನಮ್ಮನ್ನು ಅಜ್ಞಾನವೆಂಬ ಕತ್ತಲಿನಿಂದ ಜ್ಞಾನವೆಂಬ ಬೆಳಕಿನೆಡೆಗೆ ನಡೆಸಿ ದೊಡ್ಡವರನ್ನಾಗಿಸುವ ಈ ದೊಡ್ಡಬ್ಬಕ್ಕೆ ತಮ್ಮನ್ನೊಳಗಂಡಂತೆ ಎಲ್ಲ ಸಮಾನಮನಸ್ಕರಿಗೆ ದೀಪಗಳ ಹಬ್ಬದ ಶುಭ ಆಶಯಗಳು.

    ReplyDelete
  6. ಮಲೆನಾಡಿನ ದೊಡ್ಡ ಹಬ್ಬ 'ದೀಪಾವಳಿಯ' ವಿಶೇಷತೆಗಳನ್ನು ತುಂಬಾ ಚೆನ್ನಾಗಿ ವಿವರಿಸಿ ದೀ಼ರಿ, ಈಗಲೂ ತನ್ನ ವಿಶೇಷತೆಯನ್ನು. ಉಳಿಸಿಕೊಂಡಿದೆ.ಆದರೆ 'ಹಬ್ಬದ ಹಾಡು ' ಇತೀ಼ಚಿನ ದಿನಗಳಲ್ಲಿ ತುಂಬಾ ಅಪರೂಪ.ಅದಕ್ಕೆ 'ಅಂಟಿಗೆ ಪಿಂಟಿಗೆ' ಎನ್ನುವ ಹೆಸರೂ ಇದೆ. ಈ ಲೇಖನ ಓದಿ ನಮ್ಮ ಊರಿನ ಹಬ್ಬದ ನೆನಪು ಮಾಡಿದ಼ಕೆ಼ ಹೃತ್ಪೂರ್ವಕ ಧನ್ಯವಾದಗಳು. Vani S.R

    ReplyDelete
  7. ಲೇಖನ ಬಹಳ ಚೆನ್ನಾಗಿ ಮೂಡಿ ಬಂದಿದೆ, ಎಲ್ಲವನ್ನೂ ವಿಸ್ತಾರವಾಗಿ ಬರೆದಿದ್ದೀರಿ, ಎಷ್ಟೋ ವಿಷಯಗಳು ನಮಗೆ ತಿಳಿಸಿದ್ದೀರಿ, ಧನ್ಯವಾದಗಳು..🙏
    ಅನುಪಮ

    ReplyDelete
  8. ಲೇಖನ ತುಂಬಾ ಚೆನ್ನಾಗಿದೆ.

    ಹಬ್ಬಕ್ಕೆ ಊರಿಗೆ ಹೋಗಿ ಬಂದಹಾಗೆ ಆಯಿತು.
    ನಮ್ಮಜ್ಜಿ ದೀಪಾವಳಿಯನ್ನು ೨ ಸಾಲಲ್ಲಿ ನೆನಸ್ಥಿದ್ಲು

    ಅಸುರ ನರಕನ ಸೆರೆಯಿಂದ ಪಾರಾದ ದಿನ, ಬಲಿ ಶರಣನಾದ ದಿನ! ವಿಷ್ಣು ತ್ರಿವಿಕ್ರಮನಾದ ದಿನ ...

    ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

    ReplyDelete
  9. ದೀಪಾವಳಿ ಹಬ್ಬದ ಲೇಖನ ತುಂಬಾ ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ...ಈ ಹಬ್ಬದ ಸಂದರ್ಭದಲ್ಲಿ ಮಕ್ಕಳ ಹತ್ತಿರ ಓದಿಸಿ ಕೇಳುವಾಗಲಂತೂ ತುಂಬಾ ಸಂತೋಷವಾಯಿತು..👌👌👏👏 ಧನ್ಯವಾದಗಳು🙏😊

    ReplyDelete
  10. ಮಲೆನಾಡಿನ ದೀಪಾವಳಿಯ ಆಚರಣೆಯ ಕ್ರಮವನ್ನು ಸವಿಸ್ತಾರವಾಗಿ ಪೌರಾಣಿಕ ಹಿನ್ನೆಲೆಯಲ್ಲಿ ಬಹಳ ಚೆನ್ನಾಗಿ ಚಿತ್ರಿಸಿ ಒಂದು ಒಳ್ಳೆಯ ಕೆಲಸ ಮಾಡಿದ್ದೀರಿ. ಧನ್ಯವಾದಗಳು. ಹಳ್ಳಿ ಬಿಟ್ಟು ನಗರ ಸೇರಿದನಂತರ ನಮ್ಮ ದೀಪಾವಳಿ ಹಬ್ಬದ ಆಚರಣೆ ಕೇವಲ ಪಟಾಕಿ
    ಹತ್ತಿಸಿ ಹಬ್ಬದ ಅಡುಗೆ ಮಾಡಿ ಊಟ ಮಾಡುವುದಕ್ಕೆ ಸೀಮಿತವಾಗಿತ್ತು. ಕಾಲಾಂತರದಲ್ಲಿ, ಮನೆಯಲ್ಲಿ ಸಿಹಿ ತಿನ್ನುವವರು ಕಡಿಮೆಯಾದ್ದರಿಂದ ಹಬ್ಬದ ಅಡುಗೆಯೂ ನೀರಸವಾಗಿ, ಮೊದಲು ಪರಿಸರವಾದಿಗಳ ಗಲಾಟೆ ಮತ್ತೀಗ ಕರೋನಾ ಭಯದಿಂದ ಪಟಾಕಿ ಹತ್ತಿಸುವುದನ್ನು ನಿಲ್ಲಿಸುವ ಮೂಲಕ ನಮ್ಮ ದೀಪಾವಳಿ ಹಬ್ಬ, ಹೇಳುವುದಕ್ಕೆ ಮಾತ್ರ ದೊಡ್ಹಬ್ಬವಾಗಿ ಉಳಿದಿದೆ. ನಾನು ನಿಮಗೆ ಅಭಿನಂದನೆ ಏಕೆ ಹೇಳಿದ್ದೆಂದರೆ, ನಮ್ಮ ಮುಂದಿನ ಪೀಳಿಗೆಗೆ ನಾವು ಆಚರಿಸುತ್ತಿದ್ದ ದೀಪಾವಳಿ ಹಬ್ಬದ ಆಚರಣೆಯ ವಿಧಿವಿಧಾನಗಳನ್ನು ಮತ್ತು ಅದರ ಪೌರಾಣಿಕ ಹಿನ್ನೆಲೆಯನ್ನು ತಿಳಿಸಲು ದಾಖಲೆಯನ್ನು ಸೃಷ್ಟಿಸಿದ್ದಕ್ಕೆ. ಮುಂದೆ ನಮ್ಮ ಮೊಮಕ್ಕಳು ಅಥವಾ ಮರಿಮಕ್ಕಳಲ್ಲೊಬ್ಬ 'ಮರಳಿ ಮಣ್ಣಿಗೆ' ಯ "ರಾಮ" ಜನಿಸಿದರೆ ಅವನಿಗೆ ಅವನ ಹಿರಿಯರು ಆಚರಿಸುತ್ತದ್ದ ದೊಡ್ಹಬ್ಬದ ಪೂರ್ಣ ಪರಿಚಯ ನಮ್ಮೀಬರಹದಿಂದ ಸಾಧ್ಯ ಮಾಡಿ ಕೊಟ್ಟಿದ್ದಕ್ಕೆ.

    ಮಲೆನಾಡಿಗರ ದೀಪಾವಳಿಯ ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿಯಾಗಿದ್ದರೂ ಹಳ್ಳಿಯಿಂದ ಹಳ್ಳಿಗೆ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳು ಇರಲು ಸಾಧ್ಯ.

    ನೀವು ಹೇಳಿದ ಹಿಂದಿಯ "ಬೂರಾ" ಬೂರಿ ಕಳ್ಳತನ ನಮ್ಮೂರಲ್ಲಿ "ಬೂದಿಕಳವು" ಆಗಿತ್ತು. ಆದರೆ ಈ ಕಳ್ಳತನ ನರಕ ಚತುರ್ದಷಿಯ ವಿಷೇಶವಾದ ಚೀನೀ(ಸಿಹಿ)ಕುಂಬಳ ಕಾಯಿಯ ಕಡಬು ಮಾಡಲು, ಚೀನೀಕಾಯಿಗೆ ಸೀಮಿತವಾಗಿತ್ತು. ನಂತರ ನೀವು ಹೇಳಿದಂತೆ ಇತರೆ ತರಕಾರಿ ಮತ್ತು ಇತ್ತೀಚೆಗೆ ಅಡಕೆಗೂ ಹರಡಿರಬಹುದು.

    ಇನ್ನು ನಾವು, ಚಿಕ್ಕ ಮಕ್ಕಳು, ಜಾನುವಾರುಗಳಿಗೆ ಹಾಕಲು ನೀವು ತಿಳಿಸಿರುವ ಹಾರವಲ್ಲದೆ, ಕಾಡಿನಲ್ಲಿ ಸಿಗುತ್ತಿದ್ದ, ಬಂಗಾರದ ಮಣಿಯಂತೆ ಕಾಣುವ ಕೊಳಿಗೆ ಕಾಯಿ (ಇದನ್ನು ನಮ್ಮಕ್ಕನ ಊರಲ್ಲಿ ಉಗುಣೆ ಕಾಯಿ ಎನ್ನುತ್ತದ್ದರು) ಕೊಯ್ದು ತಂದು ದಾರಕ್ಕೆ ಪೋಣಿಸಿ, ಚಂದದ ಮಾಲೆ, ಕಾಲುಗೆಜ್ಜೆಗಳನ್ನು ಮಾಡಿ ಹಸು ಕರುಗಳನ್ನು ಅಲಂಕರಿಸುತ್ತಿದ್ದೆವು.

    ಇನ್ನು ಕಾಡು ಗೇರುಬೀಜವನ್ನು ಸೂಜಿಯಿಂದ ಚುಚ್ಚಿ ಹಣೆಗೆ ಇಡುವ ವಿಚಾರ; ಈ ಗೇರುಬೀಜದ ಸೊನೆ (ಸೂಜಿಯಿಂದ ಚುಚ್ಚಿದಾಗ ಬರುವ ದ್ರವ) ತುಂಬಾ ತೀಕ್ಷ್ಣ. ಅದನ್ನು ಹಣೆಗೆ ಇಟ್ಟಾಗ, ಆ ಭಾಗದ ಚರ್ಮ ಸುಟ್ಟು ಹೊಸ ಚರ್ಮ ಬರುತ್ತಿತ್ತು. ದೀಪಾವಳಿಗೆ ಎಲ್ಲದೂ ಹೊಸತು ಬೇಕು, ಹಾಗಾಗಿ ನಮ್ಮ ಚರ್ಮ ಸಹ ಹೊಸತಾಗಲಿ ಎಂದು ಸಾಂಕೇತಿಕವಾಗಿ ಒಂದು ಭಾಗದಲ್ಲಿ ಹೊಸಚರ್ಮ ಬೆಳೆಸಲು ಈ ಕ್ರಮ ಎಂದು ಹೇಳುತ್ತಿದ್ದರು.

    ಕಡೆಯದಾಗಿ; ಬಲಿಪಾಡ್ಯಮಿಯಂದು ಸಂಜೆ, ಅಡಕೆ ದಬ್ಬೆಯ ಸಣ್ಣ ಕೋಲುಗಳನ್ನು ಮಾಡಿ ಅದರ ತುದಿಯಲ್ಲಿ ಎಣ್ಣೆಯಲ್ಲಿ ಅದ್ದಿದ ಬಟ್ಟೆಯನ್ನು ಸುತ್ತಿ, ನಮ್ಮ ತೋಟ, ಗದ್ದೆಗಳಲ್ಲಿ ಅಲ್ಲಲ್ಲಿ ದೀಪಗಳನ್ನು ಹಚ್ಚಿಡುತ್ತಿದ್ದೆವು. ಬಲಿಚಕ್ರವರ್ತಿ ಆದಿನ ಭೂಲೋಕಕ್ಕೆ ಬಂದು ಪಚ್ಚೆ ಪೈರುಗಳಿಂದ ಸಮೃದ್ಧವಾದ ತನ್ನ ರಾಜ್ಯವನ್ನು ನೋಡಿ ಸಂತೋಷ ಪಡಿತ್ತಾನೆಂದೂ ಬೆಳೆಗಳಿಂದ ಸಮೃದ್ಧವಾದ ನಮ್ಮ ತೋಟ ಗದ್ದೆಗಳನ್ನು ನೋಡಲು ಅನುಕೂಲವಾಗುವಂತೆ ಈ ದೀಪಗಳನ್ನು ಹತ್ತಿಸುವುದೆಂದೂ ಹೇಳುತ್ತಿದ್ದರು.

    ReplyDelete
  11. ನಾಗೇಶ ರಾವ್November 16, 2020 at 4:30 AM

    ಕಳೆದವಾರ ಪ್ರಾ೦ತ್ಯಕ್ಕೆ ಬೆಳಕು ಬ೦ದ ಬಗೆಯನ್ನು ತಿಳಿಸಿದ್ದಿರಿ. ಈಗ ಬೆಳಕಿನ ಹಬ್ಬದ ಮಹತ್ವವನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟಿದ್ದೀರಿ. ಆಚರಣೆಯನ್ನು ಅರ್ಥಪೂರ್ಣವಾಗಿ ನಡೆಸಲು ತು೦ಬಾ ಸಹಾಯವಾಗುತ್ತದೆ. "ದೀಪ್ ದೀಪ್ ಹೋಳಿಗೆ" ಎ೦ದು ಕೂಗುತ್ತಾ ದೊ೦ದಿಯನ್ನು ತಿರಿಗುಸುತ್ತಾ ಸ೦ಬ್ರಮದಿ೦ದ ಆಚರಿಸಿದ್ದು ನೆನಪಾಗುತ್ತದೆ. ಕ್ರಮೇಣ ನಗರವಲಸಿಗರಾಗಿ ಹಬ್ಬದ ಇತಿಹಾಸವನ್ನು ಮರೆಯುತ್ತಿರುವ ನಮಗೆ, ಅದರ ಹಿನ್ನೆಲೆಯನ್ನು ನೆನಪಿಸಿ, ದಾಖಲಿಸಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

    ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

    ReplyDelete
  12. ಮಲೆನಾಡಿನಲ್ಲಿ ಹಬ್ಬದ ತಯಾರಿ, ಸಡಗರ, ಆಚರಣೆಯ ವಿಧಾನಗಳು ಕರ್ನಾಟಕ ಇನ್ನಿತರ ಜಿಲ್ಲೆಗಳಿಗಿಂತ ವಿಭಿನ್ನ ಹಾಗೂ ಅದ್ವೀತೀಯ. ಘಟ್ಟದ ಮೇಲಿನ ಜನ ಎಂದು ಕರೆಸಿಕೊಳ್ಳುವ ಮಲೆನಾಡಿನ ಜನರು, ಸಾಮಾನ್ಯವಾಗಿ ಶ್ರಮಜೀವಿಗಳು ಹಾಗೂ ಪ್ರಕೃತಿಯೊಂದಿಗೆ ಹೊಂದಿಕೊಂಡು ಜಾನುವಾರುಗಳೊಂದಿಗೆ ಪ್ರೀತಿಯಿಂದ ನಡೆದುಕೊಳ್ಳವುದು ಪ್ರತಿಯೊಬ್ಬರ ಜೀವನದಲ್ಲಿ ಹಾಸುಹೊಕ್ಕಾದ ಸಹಜ ಪ್ರಕ್ರಿಯೆಯಾಗಿದೆ. ಅಂತೆಯೇ ದೀಪಾವಳಿ ಹಬ್ಬದ ಆಚರಣೆಯ ಬಗ್ಗೆಯ ಸವಿವರವಾದ ವಿವರಣೆಯು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾವೆಲ್ಲಾ ಮಲೆನಾಡು ಬಿಟ್ಟು ಬೆಂಗಳೂರು ಸೇರಿ ಹಲವಾರು ದಶಕಗಳು ಕಳೆದರೂ ಹಬ್ಬದ ಆಚರಣೆಯಲ್ಲಿ ಕಾಲಾನುಸಾರ ಕೆಲವೊಂದು ಬದಲಾವಣೆಗೆ ಹೊಂದಿಕೊಂಡಿದ್ದರೂ ಸಹ ಆಚರಣೆಯ ಮೂಲ ರೀತಿಯನ್ನು ಬಿಟ್ಟುಕೊಟ್ಟಿಲ್ಲ ಎಂಬುದು ಹೆಮ್ಮೆಯ ವಿಚಾರ ಎನ್ನುವುದಕ್ಕೆ ಈ ಲೇಖನ ಸಾಕ್ಷಿಯಾಗಿದೆ. ಸಾಂದರ್ಭಿಕ ಛಾಯಚಿತ್ರಗಳನ್ನು ಒದಗಿಸಿದ ಶ್ರೀ.ರಮೇಶ್ ಹೊಸಬಾಳೆಯವರಿಗೆ ಧನ್ಯವಾದಗಳು.

    ReplyDelete
  13. ದೊಡ್ಡ ಹಬ್ಬದ ವಿಶೇಶತೆ, ವಿಧಾನ, ವಿಚಾರ ಮತ್ತು ಅದರ ಹಿಂದಿನ ಪುರಾಣದ ವಿವರಣೆಗಳು ಚನ್ನಾಗಿ ಆರ್ಥವಾಗುವ ಹಾಗೆ ತಿಳಿಸಿದ್ದೀರಿ. ಹಾಗೂ ನಮ್ಮ ಬಾಲ್ಯದ ದಿನಗಳಿಗೆ ಒಮ್ಮೆ ಕರೆದುಕೊಂಡುಹೋದ ಅನುಭವ ಆಯಿತು.ಧನ್ಯವಾದಗಳು.

    ReplyDelete
  14. ಮಲೆನಾಡಿನ ಹಬ್ಬದಲ್ಲಿ, ದೀಪಾವಳಿ ಹಬ್ಬದ ಸಂಭ್ರಮ ಮತ್ತು ಅದರ ವಿಶೇಷತೆಗಳನ್ನು ಅರಿಯಬಹುದಾಗಿದೆ. ಈ ಹಬ್ಬವನ್ನು ಏಕೆ ಆಚರಿಸಬೇಕು ಎಂಬುದನ್ನು ಪೌರಾಣಿಕ ಕಥೆಗಳ ಮೂಲಕ ಚೆನ್ನಾಗಿ ತಿಳಿಸಲಾಗಿದೆ. ಮಲೆನಾಡಿನ ಹಳ್ಳಿಗಳಲ್ಲಿ ಜಾನುವಾರುಗಳ ಅಲಂಕಾರಗಳ ಬಗ್ಗೆ ವರ್ಣಿಸಿರುವುದು ಬಹಳ ಸೊಗಸಾಗಿದೆ.ನಾನಂತೂ 40 ವರ್ಷಗಳ ಹಿಂದೆ ಒಮ್ಮೆ ಹೋಗಿ ಬಂದಂತಾಯಿತು.

    ReplyDelete
  15. ಮಲೆನಾಡಿನಲ್ಲಿ ಆಚರಿಸುವ ದೊಡ್ಡಹಬ್ಬದ ರೀತಿ ನೀತಿಗಳು ಹಾಗೂ ಸಂಪ್ರದಾಯಗಳು ನಿಜವಾಗಲೂ ಬೆಂಗಳೂರಿಗರಿಗೆ ಅರ್ಥವಾಗುವುದಿಲ್ಲ. ಬೆಂಗಳೂರಿನಲ್ಲಿ ಆಚರಿಸುವ ದೀಪಾವಳಿ ಹಬ್ಬಕ್ಕೆ ಏನೂ ಅರ್ಥವಿಲ್ಲವೇನೋ ಅನ್ನಿಸುತ್ತದೆ. ಲೇಖಕರು ದೀಪಾವಳಿ ಹಬ್ಬದ ಹಿನ್ನೆಲೆ ಹಾಗೂ ಆಚರಿಸಬೇಕಾದ ವಿಧಿವಿಧಾನಗಳನ್ನು ಬಹಳ ಅಚ್ಚುಕಟ್ಟಾಗಿ ಚಿತ್ರಗಳ ಸಮೇತ ವಿವರಿಸಿರುತ್ತಾರೆ. ಧನ್ಯವಾದಗಳು.

    ReplyDelete
  16. ಮಂಜುನಾಥ ಹೆಗಡೆNovember 30, 2020 at 7:33 PM

    ದೀಪಾವಳಿ ಲೇಖನ ಚೆನ್ನಾಗಿದೆ. ಕೊನೇ ದಿನ ದ್ಯೂತ ಆಡುವ ಪದ್ಧತಿ ನಮ್ಮ ಶಿರಸಿ ಭಾಗದಲ್ಲಿ ಇದೆ. ಇದನ್ನು ಪಂಚಾಂಗದಲ್ಲೂ ನಮೂದಿಸಿರುತ್ತಾರೆ. ಕೆಲವು ವರ್ಷಗಳ ವರೆಗೆ ಹೋರಿಗಳನ್ನು ಓಡಿಸುವ ಪಂದ್ಯ ಇತ್ತು, ಇದನ್ನು "ದನಬೈಲು ಕಟ್ಟೆ" ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ಪಶುಸಂಗೋಪನೆ ಕಡಿಮೆ ಆಗಿರುವುದರಿಂದ ದ್ಯೂತ ಎನ್ನುವುದು ಕಾಯಿ ಒಡೆಯುವ ಜೂಜಿಗೆ (ಜೂಜುಗಾಯಿ) ಸೀಮಿತವಾಗಿದೆ.
    ದೀಪಾವಳಿಯ ನಂತರ ಅಳಿಯ ತನ್ನ ಪತ್ನಿಯು ಜೊತೆಗೆ ಮಾನವ ಮನೆಗೆ ಹೋಗಿ ತೆಂಗಿನ ಕಾಯಿ ಇಡುವ ಪದ್ಧತಿಯೂ ಇದೆ.

    ReplyDelete
  17. ದೀಪಾವಳಿ ಹಬ್ಬದ ಸಡಗರ ಸಂಭ್ರಮಗಳನ್ನು ಕಣ್ಣಿಗೆ ಕಟ್ಟುವಂತೆ ನವಿರಾದ ನಿರೂಪಣೆಯೊಂದಿಗೆ ಪ್ರಸ್ತುತ ಪಡಿಸಿದ್ದೀರಿ. ಪ್ರತೀ ಹಿಂದೂಗಳು ಸಂತಸದಿಂದ ಆಚರಿಸಯವ ಈ ದೀಪಾವಳಿ ಹಬ್ಬವು, ಎಲ್ಲರ ಮನೆಯ ಹಾಗೂ ಮನದಲ್ಲಿನ ಕತ್ತಲೆಯ ರೂಪದ ನರಕಾಸುರನನ್ನು ಸದೆಬಡಿದು, ಓಂ ಅಸತೋಮಾ ಸದ್ಗಮಯ, ತಮಸೋಮ‌ ಜ್ಯೋತಿರ್ಗಮಯ ... ಎನ್ನುವಂತೆ, ಪ್ರತಿಯೊಬ್ಬರ ಬಾಳಿನಲ್ಲೂ ಸಡಗರದ ಬೆಳಕು ನೀಡಲಿ. ಅಭಿನಂದನೆಗಳು.

    ವಿ. ಆರ್. ‌ಮುರಲೀಧರ್

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...