ರಿಪೇರಿ ಎಂಬ ಪದ ಸಾಮಾನ್ಯವೇ ಆದರೂ ಅದರ ಅರ್ಥ ಮತ್ತು ವ್ಯಾಪ್ತಿ ಬಲು ದೊಡ್ಡದು. ದಿನದಲ್ಲಿ ಒಮ್ಮೆಯಾದರೂ ಹಲವು ಸನ್ನಿವೇಶಗಳಲ್ಲಿ ಪ್ರಯೋಗವಾಗುವ ಶಬ್ದ ಈ ರಿಪೇರಿ. ಅನಿವಾರ್ಯವೆನಿಸುವ, ತಮ್ಮ ಅನುಕೂಲಕ್ಕೆ ಬೇಕಾದಂತೆ ಮಾರ್ಪಾಡು ಮಾಡಿಕೊಳ್ಳುವ ಕ್ರಿಯೆಯಾದ ರಿಪೇರಿಗಳು ನಮ್ಮ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎಂಬ ವಿಷಯದ ಬಗ್ಗೆ ಬದುಕಿನ ಹಲವು ಸನ್ನಿವೇಶಗಳೊಂದಿಗೆ ಒಂದು ಹರಟೆ.
ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮುಂದಿನ ಸೀಟಿನಲ್ಲಿ ಕುಳಿತುಕೊಂಡವರ ಸಂಭಾಷಣೆ ಅವ್ಯಾಹತವಾಗಿ ಹರಿಯುತ್ತಿತ್ತು. ಉಮೇದಿನ ಮಾತುಗಳ ಮಧ್ಯೆ "ನಾನಿರಬೇಕಿತ್ತು, ಅವನನ್ನು ಸರಿಯಾಗಿ ರಿಪೇರಿ ಮಾಡುತ್ತಿದ್ದೆ" ಎಂದು ಒಬ್ಬರು ದೃಢವಾಗಿ ಹೇಳುತ್ತಿದ್ದರು. ಪ್ರತ್ಯುತ್ತರವಾಗಿ "ಅಂತದಕ್ಕಲ್ಲ ನೀನೆ ಸರಿ" ಎಂದು ಜೊತೆಯವರು ಬೆಂಬಲಿಸಿ ಹೇಳುತ್ತಿದ್ದುದನ್ನು ಕೇಳಿದಾಗ ಪರ್ವಾಗಿಲ್ಲ, ಮನುಷ್ಯರನ್ನೂ ರಿಪೇರಿ ಮಾಡುವವರಿದ್ದಾರೆ ಎಂದೆನಿಸಿತು. ಹಾಗೆಯೇ ಎಲ್ಲೆಲ್ಲಿ ಏನೇನು ರಿಪೇರಿ ಮಾಡುವರು ಎಂದು ಕೊಂಡಾಗ ಆ ಪದದ ಬಗೆಗಿನ ಯೋಚನಾ ಲಹರಿ ಬೆಳೆದು ಬಂದ ಬದುಕಿನ ಹಾದಿಯಲ್ಲಿ ಎಲ್ಲೆಲ್ಲೋ ಕರೆದೊಯ್ದಿತು.
ಪ್ರೈಮರಿ ಶಾಲಾ ದಿನಗಳು. ಮನೆಯ ಮುಂದೆ ಬೀದಿಯಲ್ಲಿ ಬೀಗ, ಕೊಡೆ (ಛತ್ರಿ) ರಿಪೇರಿ ಎಂದು ಕೂಗಿಕೊಳ್ಳುತ್ತಾ ಹೋಗುವವನ ಹಿಂದೆ ಕುತೂಹಲದಿಂದ ಹೋಗುತ್ತಿದ್ದೆವು. ಅವನು ಬೀದಿಯಲ್ಲಿಯೇ ಕುಳಿತು ಕೆಲಸ ಮಾಡುವವನು. ಅವನ ಕೆಲಸ ಮಾಡುವ ರೀತಿಯೇ ಆಸಕ್ತಿ ದಾಯಕ. ಕಡ್ಡಿ ಮುರಿದ ಕೊಡೆಗೆ ಮುದುರಿದ ಹಾಗಿರುವಾಗಲೇ ಕಡ್ಡಿಗಳ ಜೋಡಿಸುವ ಪರಿ ಮೆಚ್ಚಬೇಕಾದುದೇ. ಬೇಸಿಗೆಯಲ್ಲಿ ಕೊಡೆ ಬೇಡವೆಂದು ಮೂಲೆಯಲ್ಲಿ ಇಟ್ಟಾಗ ಆದ ಬಟ್ಟೆ ತೂತುಗಳು. ಅಂತಹಾ ಕೊಡೆಗೆ ಬಟ್ಟೆ ಬದಲಾಯಿಸಿ ಹೊಸದಾಗಿ ಕಾಣಿಸುವನು, ಕೊಡೆಯ ಮೇಲಿನ ತುದಿಯಲ್ಲಿ ಮಾತ್ರ ಹರಿದ ಭಾಗಕ್ಕೆ ದೊಡ್ಡ ಬಿಲ್ಲೆಯಾಕಾರದಲ್ಲಿ ಬಟ್ಟೆ ತುಂಡರಿಸಿ ಜೋಡಿಸುವನು, ಕೊಡೆ ಕೋಲಿನ ತುದಿ ಹಾಳಾಗದಂತೆ ಚಿಕ್ಕ ಡಬ್ಬಿ ಜೋಡಿಸುವನು, ಕೆಲವೊಮ್ಮೆ ಕೊಡೆಯ ಕೋಲನ್ನೇ ಬದಲಾಯಿಸುವನು. ಅದನ್ನು ನೋಡಿದಾಗ ಆಹಾ, ಇವನು ಎಷ್ಟು ಜಾಣ ಎನಿಸುತ್ತಿತ್ತು. ಇಂತಹ ರಿಪೇರಿ ಕೆಲಸಗಳನ್ನು ಶಾಲಾದಿನಗಳಲ್ಲಿ ಅಷ್ಟೇ ಏಕೆ, ಇಂದಿಗೂ ಅವುಗಳ ರಿಪೇರಿ ನೋಡುವುದೇ ಒಂದು ಖುಷಿ.
ಅಂದಿನ ಕಾಲದ ಹಿತ್ತಾಳೆ ಪಾತ್ರೆಗಳು. ಉಪಯೋಗಿಸಿದಾಗ ಹಲವು ಕಾರಣದಿಂದ ಅದರ ಮೈಯೆಲ್ಲಾ ನೆಗ್ಗಿ ವಿಕಾರವಾಗುತ್ತಿತ್ತು. ಜೊತೆಗೆ ಆ ಪಾತ್ರೆಗಳಲ್ಲಿ ಅಡಿಗೆ ಮಾಡಿದ್ದು ಕಿಲುಬು ಆಗಬಾರದೆಂದು ಕಲಾಯಿ ಹಾಕಿಸುತ್ತಿದ್ದರು. ಹಾಗೆ ಆ ರಿಪೇರಿ ಕೆಲಸ ಮಾಡುವವನು ಬಂದರೆ ಒಂದು ಸಡಗರ. ಅವನು ಪಾತ್ರೆಗಳನ್ನು ತೆಗೆದುಕೊಂಡು ಹೋಗುವಾಗ ಹೇಗಿತ್ತು ಮತ್ತು ಅವನು ವಾಪಸ್ ತಂದಾಗ ಇದ್ದ ನೆಗ್ಗುಗಳು ಎಲ್ಲಿ ಹೋಯಿತು, ಕಲಾಯಿ ಮಾಡಿದ ಒಳ ಭಾಗ ಹೇಗೆ ಇಷ್ಟು ಚೆಂದವಾಯಿತು ಎಂಬುದು ರಿಪೇರಿ ಮಹಾತ್ಮೆ ಎಂದು ತಿಳಿಯದು.
ನಮ್ಮ ಅಣ್ಣನ ಬಳಿ ಒಂದು ರ್ಯಾಲಿ ಸೈಕಲ್ ಇತ್ತು. ಪೇಟೆಗೆ ಹೋದಾಗಲೆಲ್ಲಾ ರಿಪೇರಿ ಮಾಡುವ ಅಂಗಡಿಗೆ ಹೋಗುತ್ತಿದ್ದೆವು. ಅಲ್ಲಿಯ ಸೈಕಲ್ ಇಂಜಿನಿಯರ್, ಟೈರ್ ಬಿಚ್ಚಿ ಟ್ಯೂಬ್ ಪ್ಯಾಚ್ ಹಾಕುವುದು, ಚೈನ್ ಜೋಡಣೆ ಮಾಡುವ ವೈಖರಿ ತುಂಬಾ ಸೋಜಿಗ. ನೋಡುಗರಿಗೆ ಮನಮೋಹಕ. ಮುಂದಿನ ದಿನಗಳಲ್ಲಿ ನನ್ನ ಬಳಿ ಅದೇ ಸೈಕಲ್ ಹಳತಾಗಿ ಬಂದಾಗ ಅದರ ರಿಪೇರಿ ಮಾಡದಿರದ ಭಾಗಗಳೇ ಇರಲಿಲ್ಲ. ಪದೇ ಪದೇ ಬಾಗುವ ಪೆಡಲ್, ಟಣ್ ಶಬ್ದ ಮಾಡುವ ಬದಲು ಕಟ್ಕಟ್ ಕೇಳಿಸುವ ಬೆಲ್, ಜಾರಿ ಬೀಳುವ ಸ್ಟ್ಯಾಂಡ್, ಸಡಿಲವಾಗುವ ಕ್ಯಾರಿಯರ್, ಎಷ್ಟು ಬಿಗಿಮಾಡಿದರೂ ತಿರುಗುವ ಸೀಟು, ನಿಲ್ಲಿಸೋಣ ಎಂದು ಎಷ್ಟು ಅದುಮಿದರೂ ಹಿಡಿಯದ ಬ್ರೇಕು, ಒಂದೇ ಎರಡೇ, ಪ್ಯಾಚ್ ಆದರಂತೂ ರಿಪೇರಿ ಮಾಡುವವ ಸಿಗುವವರೆಗೂ ಸೈಕಲ್ಲು ತಳ್ಳುವುದೇ ಕೆಲಸ. ಇಂಥಾ ವೇಳೆಯಲ್ಲಿ ರಿಪೇರಿ ಶಬ್ದ ಕಿವಿಗೆ ಹಿತವಾಗಿ ಕೇಳಿಸುತ್ತಿತ್ತು. ರಿಪೇರಿ ಮಾಡಿಸಲು ದುಡ್ಡಿಲ್ಲದಿದ್ದರೇ ರಿಪೇರಿ ಅಷ್ಟೇ ಅಹಿತಕರವಾಗಿತ್ತು. ಜೊತೆಗೆ ಕಾಲು ಕೈಗಳಿಗೆ ಪೆಟ್ಟು ಮಾಡಿಕೊಂಡಾಗ ಅವುಗಳ ರಿಪೇರಿ ಅನಿವಾರ್ಯವಾಗಿತ್ತು.
ಆಗಿನ ಕಾಲದ ಹಳ್ಳಿ ಮನೆ ಎಂದ ಮೇಲೆ ಲಾಟೀನು, ಬೆಡ್ ಲ್ಯಾಂಪ್, ಚಿಮಣಿ. ಅವುಗಳ ರಿಪೇರಿ ಮಾಮೂಲು. ಇವುಗಳ ಗಾಜಿನ ಭಾಗ ತೊಳೆಯಲು ಹೋಗಿ ಕೈ ತಪ್ಪಿದಾಗ ಬಿದ್ದು ಒಡೆಯುವುದು, ಅದರ ಮೊದಲೇ ನಮಗೆ ಏಟು ಬೀಳುವುದು, ಬೆಳಕು ಹೆಚ್ಚು ಕಡಿಮೆ ಮಾಡಲು ಪ್ರಯತ್ನಿಸಿದಾಗ ಲಾಟೀನಿನ ಆ ತಿರುಪು ಕಿತ್ತು ಬರುವುದು ಸಹಜ. ಇವುಗಳ ರಿಪೇರಿ ಮಕ್ಕಳ ಕೈಯಲ್ಲಿ ಆಗದ ಮಾತು. ಆದರೂ ಪ್ರಯತ್ನಕ್ಕೆ ಕೊರತೆಯಿರಲಿಲ್ಲ. ಅದೊಂದು ತರಹವಾದರೆ ಅಂದಿನ ಬೆಳಕು ಮತ್ತು ಬೆಲೆಯಲ್ಲಿ ಶ್ರೀಮಂತ ದೀಪವಾಗಿದ್ದ ಗ್ಯಾಸ್ ಲೈಟ್ ರಿಪೇರಿಯ ಗಮ್ಮತ್ತೇ ಬೇರೆ. ಅದರ ಪಂಪ್ ಗೆ ಜೋಡಿಸಿದ ವಾಷರ್, ಹಲವು ಕೋನಗಳಲ್ಲಿ ಜೋಡಿಸಿರುವ ಗಾಜಿನ ತುಂಡುಗಳು, ಪುಡಿಯಾದರೂ ಉರಿಯುವ ಮ್ಯಾಂಟಲ್, ಕಾಣದಂತೆ ಎಲ್ಲೋ ಸೋರುವ ಪೆಟ್ರೋಲ್, ಒರೆಸಿದರೆ ಝಳಝಳ METRO ಎಂದು ಕಾಣಿಸುವ ಅದರ ಟ್ಯಾಂಕ್ ಹಲವು ಬಾರಿ ಮತ್ತೆ ಬಳಸುವವರೆಗೂ ಹೊಸತಾಗಿ ಕಾಣಿಸುತ್ತಿತ್ತು. ಆ ದೀಪದ ಬೆಳಕು ಅನನ್ಯ. ಕತ್ತಲೆ ಇದ್ದರಂತೂ ದೈದೀಪ್ಯಮಾನ. ಒಮ್ಮೆ ರಿಪೇರಿ ಮಾಡಿ ಹತ್ತಿಸಿದರೆ ರಿಪೇರಿ ಮಾಡುವವರೂ ಆ ಪ್ರಜ್ವಲ ಬೆಳಕಲ್ಲಿ ಕಾಂತಿಯುತವಾಗಿ ಕಾಣುತ್ತಿದ್ದರು.
ಹಿಟ್ಟಿನ ಮಿಲ್ ರಿಪೇರಿ ರೀತಿಯೇ ಸ್ವಲ್ಪ ಭಿನ್ನ. ಮೆಶಿನ್ ಜೋಡಿಸಿದ ಹಾಲ್ ಎಲ್ಲಾ ಹಿಟ್ಟಿನ ಮಯ. ಸೊಯ್ ಸೊಟ್ ಎಂದು ಏಕತಾನದಲ್ಲಿ ಶಬ್ದ ಮಾಡುತ್ತಿದ್ದ ಮೆಶಿನ್ ಇದ್ದಕ್ಕಿದ್ದಂತೆ ನಿಂತರೆ ಮಾಲಿಕನ ಎದೆಯೂ ಜರ್ರ್ ಎಂದು ಸ್ತಬ್ಧ. ಹಲವು ನಿಮಿಷಗಳಲ್ಲಿ ಸಮಸ್ಯೆ ಬಿಡಿಸಲು ಯತ್ನಿಸಿದರೆ ಕಾಣುವ ಭಾಗ ಉಬ್ಬುತಗ್ಗುಗಳ ಕಲ್ಲಿನ ಚಕ್ರಗಳು, ಮುಟ್ಟಿದರೆ ಮೈಯೆಲ್ಲಾ ಗ್ರೀಸ್ ಮಾಡುವ ಭಾಗಗಳು, ಹಲವು ಅಳತೆಗಳ ಬೆಲ್ಟುಗಳು. ರಿಪೇರಿ ಮಾಡುವವರನ್ನು ಹಿಟ್ಟಿನೊಂದಿಗೆ ಗ್ರೀಸ್ ಸೇರಿದಾಗ ದೃಶ್ಯ ಹಾಸ್ಯಮಯ. ನೋಡೋಣ ಎಂದು ಅಲ್ಲಿ ಮಕ್ಳಳೇನಾದರೂ ನಿಂತರೆ ಏನಾಗಿ ಬಿಡುವುದೋ ಎಂದು ಹೆದರಿಸಿ ಓಡಿಸುವ ಮಿಲ್ಲಿನ ಓನರ್. ಹಿಟ್ಟು ಮಾಡುವಾಗ ಧಾನ್ಯ ಪೂರ್ತಿ ಹೊರಬಂದಿದೆಯೋ ಇಲ್ಲವೋ ಎಂದು, ಮನುಷ್ಯ ಸ್ವಭಾವ ಅನುಮಾನದಿಂದ, ಕೈಹಾಕಿ ಪರೀಕ್ಷೆ ಮಾಡಿದರು ಒಬ್ಬರು. ಅದ್ಯಾವುದೋ ಭಾಗಕ್ಕೆ ಬೆರಳು ಸಿಕ್ಕಿಕೊಂಡು ಎಂದೂ ರಿಪೇರಿ ಮಾಡಲಾಗದಂತೆ ಖಾಯಂ ಆಗಿ ಹೆಬ್ಬೆರಳು ಹೊರತು ಉಳಿದ ಬೆರಳುಗಳ ಕಳೆದುಕೊಂಡ ಆ ದಾರುಣ ಘಟನೆ ನೆನಪಿಗೆ ಬರುತ್ತಿದೆ. ನಂತರ ಚೀರಾಡುತ್ತಾ ಮಿಲ್ಲಿನ ಮೆಶೀನು, ನೆಲ, ಧಾನ್ಯದೊಂದಿಗೆ ಬಂದ ಇತರ ಗ್ರಾಹಕರು, ಅವರು ತಂದ ಡಬ್ಬ ಬ್ಯಾಗುಗಳಿಗೆ ರಕ್ತದೋಕುಳಿಯ ಭಯಾನಕ ದೃಶ್ಯ, ದುಃಖ ಅನುಕಂಪಪೂರಿತ ರಿಪೇರಿ.
ಅಂದಿನ ಕಾಲದ ಜನಜನಿತ, ಸಮಯ, ವಾರ್ತೆ ಮನೋರಂಜನೆ ಇತ್ಯಾದಿಗಳನ್ನು ಕೊಡುತ್ತಿದ್ದ ರೇಡಿಯೋ ಮತ್ತು ಟ್ರಾನ್ಸಿಸ್ಟರ್. ಅದೇಕೋ ಇದ್ದಕ್ಕಿದ್ದಂತೆ ಗೊರ್ ಕ್ವಾಯ್ ಕೊಟ್ ಕೊಟ್ ಎಂದಾಗ ರಿಪೇರಿ ಮಾಡುವ ವೈಖರಿ ನೆನಪಿಗೆ ಬರುತ್ತಿದೆ. ಅದರ ಡಬ್ಬ ತೆರೆದು ಹಿಂಭಾಗದ ಹಲವು ಭಾಗಗಳ ಮೇಲೆ ಕಣ್ಣಾಡಿಸಿ ಬಿಗಿ ಮಾಡುವುದು, ಹುಡುಕಿ ಕರಾರುವಾಕ್ಕಾಗಿ ಸಾಲ್ಡರಿಂಗ್ ಮಾಡಿ ವೈರು ಜೋಡಿಸುವುದು, ಬ್ಯಾಂಡ್ ರೇಡಿಯೋಗಳಲ್ಲಿ ಪದೇಪದೇ ಸ್ವಿಚ್ ಹಾಕಿ ಮುಂಭಾಗದಲ್ಲಿ ಎರಡು ಹಸಿರು ಲೈಟುಗಳು ಮೇಲಿನಿಂದ ಮತ್ತು ಕೆಳಗಿನಿಂದ ಸೇರುವುದನ್ನು ನೋಡುವುದೇ ಒಂದು ವೈಶಿಷ್ಟ್ಯ.
ಅಲಾರಾಂ ಗಡಿಯಾರ ಕೆಲಸ ಮಾಡಲು ಪ್ರತಿ ದಿನ ಕೀ ತಿರುಗಿಸುವುದಾದರೆ, ವಾರಕ್ಕೊಮ್ಮೆ ಕೀ ಬೇಡುವ ಗೋಡೆ ಗಡಿಯಾರಗಳು. ನಡೆಯುತ್ತಿದ್ದರೆ ಚೆಂದ. ಅದೇನೋ ಕೈ ಕೊಟ್ಟರೆ ಹೃದಯ ಭಾಗಕ್ಕೇ ಕೈ ಹಾಕಬೇಕು. ಒಳ ಭಾಗಗಳನ್ನು ಬಿಡಿಸಿ ನೋಡಿದರೆ ಮೈತುಂಬಾ ತೆಳುವಾದ ಸ್ಪ್ರಿಂಗ್ ಗಳು, ಕೋಡುಬಳೆ ರೀತಿ ಸುತ್ತಿಕೊಳ್ಳುವ ಪಟ್ಟಿ ಸ್ಪ್ರಿಂಗ್ ಗಳು, ಅವುಗಳ ರಿಪೇರಿಗೆ ಪರಿಣಿತರೇ ಬೇಕು. ಹುಚ್ಚು ಆಸೆಯಿಂದ ನಾನೇ ರಿಪೇರಿ ಮಾಡಲು ಹೋಗಿ ಪರಿಪಾಟಲು ಪಟ್ಟ ಸ್ವಾರಸ್ಯಕರ ಕಥೆ "ಗಡಿಯಾರ ಕೆಟ್ಟ ಕಾಲ" ಎಂಬ ಇದರೊಂದಿಗೆ ಇರುವ ನನ್ನ ಕಥೆ ಓದಿದರೆ ತಿಳಿಯುವುದು. ಸಮಯ ತೋರಿಸುವ ಈ ಗಡಿಯಾರಗಳು ಈ ಕೆಟ್ಟು ನಿಂತರೂ ದಿನಕ್ಕೆರಡು ಬಾರಿ ಸರಿಯಾದ ಸಮಯವನ್ನು ತೋರಿಸುವುದು ಒಂದು ವಿಶೇಷ. ಆದರೆ ಒಂದು ನಿಮಿಷ ಮುಂದಿನ ವೇಳೆ ತೋರಿಸುವ ಗಡಿಯಾರವು ಎಂದೂ ಸರಿಯಾದ ಸಮಯವನ್ನು ತೋರಿಸದಿರುವುದು ಇನ್ನೊಂದು ವಿಪರ್ಯಾಸ.
ಸರ್ಕಾರಿ ಶಾಲೆಯಲ್ಲಿರುವ ಹಳತಾದ ಬೆಂಚುಗಳು. ವಿದ್ಯಾರ್ಥಿಗಳಾದ ನಾವು ಎಡರಿಂದ ಬಲಕ್ಕೆ ಬಲದಿಂದ ಎಡಕ್ಕೆ ಹೋಯ್ದಾಡಿದರೆ ಚೀಯ್ ಚೀಯ್ ಎಂದು ಶಬ್ದ ಮಾಡುತ್ತಾ ಇನ್ನೂ ಹೊಯ್ದಾಡಿಸಲು ಪುಸಲಾಯಿಸುತ್ತಿದ್ದವು. ಅಯ್ಯೋ ರಿಪೇರಿ ಮಾಡಿಸಲು ಆಗುತ್ತಿಲ್ಲ. ಶಾಲಾ ಕಮಿಟಿಯವರಿಗೆ ಅದೆಷ್ಟು ಸಾರಿ ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಗುನುಗುವ ಉಪಾಧ್ಯಾಯರು, ಬೆಂಚೇನಾದರೂ ಮುರಿದರೆ ನಿಮಗೆ ರಿಪೇರಿ ಗ್ಯಾರಂಟಿ ಎಂದು ನಮಗೆ ಎಚ್ಚರಿಕೆ ಹೇಳಲು ಮರೆಯುತ್ತಿರಲಿಲ್ಲ.
ಇನ್ನೊಬ್ಬ ಉಪಾಧ್ಯಾಯರು ನಾಳೆಯಿಂದ ಯಾರಾದರೂ ಹೋಂ ವರ್ಕ್ ಮಾಡಿಕೊಂಡು ಬರದಿದ್ದರೆ ಅವರಿಗೆ ರಿಪೇರಿ ಗ್ಯಾರೆಂಟಿ ಎನ್ನುತ್ತಿದ್ದರು. ಅದೇನು ರಿಪೇರಿ ಎಂದು ಕೇಳಿದರೆ ನೋಡುತ್ತಿರಿ, ನಾಳೆ ಯಾರು ಹೋಂವರ್ಕ್ ಮಾಡಿಕೊಂಡು ಬರುವರೋ ಅವರ ಕಾಲಿನ ಸಂಧಿಯಲ್ಲಿ ಉಳಿದವರು ನುಸುಳಬೇಕು. ಆ ರೀತಿ ರಿಪೇರಿ ಮಾಡುತ್ತೇನೆ ಎನ್ನುವ ಅವರು ರಿಪೇರಿಯ ಹೊಸ ವ್ಯಾಖ್ಯಾನ ಕಂಡಿದ್ದರು. ಆದರೆ ನಮ್ಮಲ್ಲಿನ ಜಾಣರು ಇಬ್ಬರೇ. ಒಬ್ಬಳು ಹುಡುಗಿ, ಇನ್ನೊಬ್ಬ ಹುಡುಗ. ಅವರಿಬ್ಬರೂ ತೀರಾ ಕುಳ್ಳರೇ. ಅವರ ಕಾಲುಗಳು ಸಹ ಹಾಗೆಯೇ. ಅವರೇನಾದರೂ ಹೋಂವರ್ಕ್ ಮಾಡಿಕೊಂಡು ಬಂದರೆ, ಎತ್ತರವಿರುವ ಉಳಿದವರು ಇವರ ಕಾಲ ಕೆಳಗೆನಾದರೂ ನುಸುಳಿದರೆ ಹೋಂ ವರ್ಕ್ ಮಾಡಿದವರು ಕಾಲಿನ ರಿಪೇರಿ ಖಾತ್ರಿ. ಅದರೊಂದಿಗೆ ಅವರು ಪೋಷಕರು ಬಂದು ಕೇಳಿದರೆ ಪರಿಸ್ಥಿತಿ ಸಮಜಾಯಿಷಿಗಳೊಂದಿಗೆ ರಿಪೇರಿ ಖಾತ್ರಿ. ಅದೃಷ್ಟಕ್ಕೆ ಯಾರೂ ಹೋಂವರ್ಕ್ ಮಾಡಿಕೊಂಡು ಬರಲಿಲ್ಲ. ಅಂತಹಾ ಯಾವ ರಿಪೇರಿಗೂ ಅವಕಾಶವಾಗಲಿಲ್ಲ.
ಅದೊಂದು ಹೋಟೆಲ್. ಪ್ರಾರಂಭವಾದಾಗ ಮಾಲೀಕರಲ್ಲಿ ದುಡ್ಡಿತ್ತು. ಸಡಗರದಲ್ಲಿ ಮರದ ಚೌಕಟ್ಟಿನ ಮೇಲೆ ಅಮೃತ ಶಿಲೆ ಕಲ್ಲು ಚಪ್ಪಡಿ ಹಾಕಿರುವ ಟೇಬಲ್ ಮಾಡಿಸಿದ್ದರು. ನಂತರದ ದಿನಗಳಲ್ಲಿ, ಇವು ಹಳತಾದಾಗ, ಎಡಬಲಕ್ಕೆ ಹೊಯ್ದಾಡಿ ಸದ್ದು ಮಾಡುತ್ತಿತ್ತು. ವ್ಯಾಪಾರವಿಲ್ಲದ ಮಾಲೀಕ "ನಿಧಾನ, ನಿಧಾನ ಎಂದು ನಿಧಾನವಾಗಿ, ರಿಪೇರಿ ಮಾಡಿಸುವವರೆಗೂ ಇರಲಿ" ಎಂದು ಹೇಳುತ್ತಾ ತಲೆ ಹಾಕುತ್ತಿದ್ದರು. ಪಾಪ, ಅವರ ವ್ಯಾಪಾರದ ರೀತಿ ರಿಪೇರಿ ಆಗಬೇಕೋ, ಆರ್ಥಿಕವಾಗಿ ರಿಪೇರಿ ಆಗಬೇಕೋ ಅಂತೂ ಆ ಶೋಚನೀಯ ರಿಪೇರಿಯೇ ಬೇರೆ.
ಹಳೆಯ ಕಾಲದ ಒಂದು ಬೆಡ್ ಸ್ವಿಚ್. ನೇತಾಡುವ ವೈರಿನ ತುದಿಗೆ ಜೋಡಿಸುವ ಉದ್ದದ, ಒಮ್ಮೆ ಗುಂಡಿ ಒಳಗೆ ಅದುಮಿದರೆ ಆನ್, ಮತ್ತೊಮ್ಮೆ ಅದುಮಿದರೆ ಆಫ್ ಆಗುವ ಸ್ವಿಚ್. ರಿಪೇರಿಗೆ ಬಂದಿದೆ ಎಂದು ಹೇಳುತ್ತಿದ್ದರು. ಆಗ ನಾನೂ ರಿಪೇರಿ ಮಾಡಲು ಒಮ್ಮೆ ಯಾಕೆ ಪ್ರಯತ್ನಿಸಬಾರದು ಎನಿಸಿತು. ಸಣ್ಣ ರೂಮ್. ಇಸ್ಪೀಟ್ ಆಡುತ್ತಾ, ಒಬ್ಬರಿಗೊಬ್ಬರು ತಾಗಿಸಿಕೊಂಡು ಕುಳಿತಿರುವ ಹಿರಿಯರು. ಅವರಿಗೆ ಕಾಲು ತಾಗಿಸಿಕೊಂಡು, ಅಲ್ಲೇ ಇರುವ ಹಾಸಿಗೆ ಸುರುಳಿ ರಾಶಿಯ ಮೇಲೆ ಕುಳಿತಿದ್ದ ನನಗೆ ಕೈಗೆ ಸಿಗುವಂತಿದ್ದ ಆ ಸ್ವಿಚ್ ಕಂಡು ರಿಪೇರಿ ಮಾಡುವ ಉಮೇದು ಬಂದಿತು. ಕರೆಂಟು ಸಂಪರ್ಕ ನಿಲ್ಲಿಸದೆ (ನನಗೆ ಆಗು ಹೋಗುಗಳ ಅರಿವಿರಲಿಲ್ಲ) ಸ್ವಿಚ್ ನ್ನು ಸುಲಭವಾಗಿ ಎಡಕ್ಕೆ ತಿರುಗಿಸಿ ಬಿಚ್ಚಿದೆ. ಕಾಣುವ ಭಾಗದ ಮೇಲೆ ರಿಪೇರಿಗಾಗಿ ಬೆರಳಿಡುವ ಮುನ್ನವೇ ವಿದ್ಯುತ್ ಸಂಚಾರ. ನನ್ನ ಕಾಲಿಗೆ ತಾಗಿ ಕುಳಿತ ಮನುಷ್ಯನ ಮೂಲಕ ಎಲ್ಲಾ ಆಟಗಾರರಿಗೂ ಹಠಾತ್ ಸಂಚಲನ. ಏನಾಯಿತು ಎಂದು ಗೊತ್ತಾಗದಿದ್ದರೂ ಏನೋ ಆಯಿತು ಎಂದೆನಿಸಿತು. ಎಲ್ಲರೂ ಭೂಕಂಪವಾಯಿತೇ, ಏನೋ ಆದ ಹಾಗಾಯಿತು ಅಲ್ಲವೇ ಎನ್ನುವವರೇ. ನಾನು ಏನೂ ಆಗಲಿಲ್ಲವೇನೋ ಎಂಬಂತೆ ಮೊದಲಿದ್ದ ಹಾಗೇ ಸ್ವಿಚ್ ಜೋಡಿಸಿ ಜಾಗ ಖಾಲಿ ಮಾಡಿದೆ. ಗೊತ್ತಾಗಿದ್ದರೆ ನನಗೂ ರಿಪೇರಿ ಆಗುತ್ತಿತ್ತು. ಆದರೂ ಅಂದಿನಿಂದ ಇಂದಿಗೂ ನನಗೆ ಟೆಸ್ಟರ್ ಹಿಡಿಯಲೂ ನಂಬಿಕೆ ಇಲ್ಲವಾಗಿದೆ. ಇದೊಂದು ಸಣ್ಣ ರಿಪೇರಿ ಪುರಾಣ.
ಹಳ್ಳಿಯ ವಿದ್ಯುತ್. ಯಾವಾಗಲೋ ಇರುತ್ತದೆ, ಇದ್ದಕ್ಕಿದ್ದಂತೆ ಹೋಗಿ ಬಿಡುತ್ತದೆ. ಇಂಥಾ ಸಮಯದಲ್ಲಿ ಬಲ್ಬ್ ಕೆಟ್ಟು ಹೋಗಿದೆ, ಹಾಕಿ ಕೊಡೆಂದು ಗೊತ್ತಿರುವ ಮನೆಯವರ ಬೇಡಿಕೆಗೆ ಓ ಕೊಟ್ಟು, ಬೇರೆ ಕಡೆ ಇದ್ದ ಬಲ್ಬ್ ಇಲ್ಲಿಗೆ ತಂದು ಹಾಕಿದರೆ ಒಮ್ಮೆ ಬೆಳಕು ಕೊಟ್ಟು ಹೋಗಿ ಬಿಡುವುದೇ. ನಾನು ಆ ಬಲ್ಬ್ ಮುಟ್ಟಿದ್ದೇ ತಪ್ಪು, ಗೊತ್ತಿಲ್ಲದಿದ್ದರೆ ಮಾಡಬಾರದು, ಸರಿಯಾಗಿ ಒಂದು ಬಲ್ಬ್ ಬದಲಾಯಿಸಲೂ ಬರದ ಮುಠ್ಠಾಳ ಎಂಬ ಬಿರುದಿನೊಂದಿಗೆ, ರಿಪೇರಿ ಮಾಡಲು ಹೋದ ನನಗೆ ಆ ಮನೆಯವರಿಂದ ವಾಚಾಮಗೋಚರವಾಗಿ ರಿಪೇರಿ ಆಯಿತು. ಆಗಿದ್ದಿಷ್ಟೇ, ನಾನು ಬಲ್ಬ್ ಜೋಡಿಸಿದ ಸೆಕೆಂಡ್ ನಲ್ಲೇ ಲೈನಲ್ಲಿನ ಕರೆಂಟು ಹೋಗಿದ್ದು ನಮಗ್ಯಾರಿಗೂ ಗೊತ್ತಾಗಲಿಲ್ಲ. ಗೊತ್ತಾದ ಮೇಲೆ ಮಾತು ವಾಪಸಾಗಲಿಲ್ಲ. ಹೀಗೂ ಒಂದು ಬೇಸ್ತು ರಿಪೇರಿ.
ಹೇಳಲು ಹೋದರೆ ಹಲವಾರು ರಿಪೇರಿಗಳು. ಮನೆಯ ಬಾಗಿಲು, ಕಿಟಕಿ, ಅಗಳಿ, ಬೀಗ, ಸ್ಟವ್, ನಲ್ಲಿ, ಕಮೋಡ್ ಟ್ಯಾಂಕ್, ಹೀಗೆ ವಿವಿಧ ರಿಪೇರಿ ಎಲ್ಲರ ಮನೆಯಲ್ಲೂ ಇರುವುದೇ. ಇನ್ನು ಫೋಟೋ ಬಿದ್ದು ಫ್ರೇಂ ರಿಪೇರಿ, ಪ್ರಯಾಣದ ಮಧ್ಯೆ ಬಸ್, ಕಾರು ವಾಹನಗಳು ರಿಪೇರಿ. ಮನೆಯಲ್ಲಿನ ಫೋನ್ ಕೈತಪ್ಪಿ ಬಿದ್ದಾಗ ಅದರೊಂದಿಗೆ ಹಿರಿಯರಿಂದ ನಮಗೂ ರಿಪೇರಿ, ಬೀದಿ ದೀಪದ ಕಂಬದ ಚಟ್ಪಟ್ ಕಿಡಿ, ರಸ್ತೆ ಬದಿಯ ಟ್ರಾನ್ಸ್ಫಾರ್ಮರ್ ಬೆಂಕಿ, ಇವೆಲ್ಲವೂ ರಿಪೇರಿ ಬೇಕಾದ ಸಾಮಾನ್ಯ ವ್ಯವಸ್ಥೆಯಾಗಿದೆ. ಇತ್ತೀಚೆಗೆ ಬಳಕೆಗೆ ಬಂದಿರುವ, ಸಾಮಾನ್ಯರಿಗೆ ತಿಳಿಯದ ಮೊಬೈಲ್ ಆಕಸ್ಮಿಕವಾಗಿ ಕೈಕೊಟ್ಟಾಗ ಗಾಬರಿಯೊಂದಿಗೆ ಮಾಡಿಸುವ ರಿಪೇರಿ, ಕಂಪ್ಯೂಟರ್ ರಿಪೇರಿ, ಯುವಕರಿಗೆ ಮಾತ್ರ ತಿಳಿದಿರುವ ಮೊಬೈಲ್ ಯಾಪ್ ರಿಪೇರಿ ಹೀಗೆ ದೊಡ್ಡ ಪಟ್ಟಿಯೇ ಇದೆ. ರಿಪೇರಿ ಕೆಲಸ ಗೊತ್ತಿಲ್ಲದಿದ್ದರೂ ರಿಪೇರಿ ಮಾಡುವ ಹುಮ್ಮಸ್ಸು, ಖಯಾಲಿ ಇರುವವರ ಹೆಸರುಗಳ ಪಟ್ಟಿಗೇನೂ ಕಡಿಮೆಯಿಲ್ಲ. ಅದಕೊಂದು ಉದಾಹರಣೆ ಮುಂದಿದೆ.
ಅದೊಂದು ಕೃಷಿಕರೇ ಇರುವ ಕಗ್ಗಳ್ಳಿ. ದೊಡ್ಡ ಪೇಟೆಯಿಂದ ನೂರಾರು ಕಿಲೋಮೀಟರ್ ದೂರ. ಆ ಹಳ್ಳಿಯ ಒಬ್ಬರು ಒಂದು ಹೊಸ ಟ್ಯಾಕ್ಟರ್ ತಂದರು. ತುರ್ತು ಕೆಲಸದ ಮೇಲೆ ಮನೆ ಯಜಮಾನರು ಬೇರೆ ಊರಿಗೆ ಹೋದರು. ಅವರ ಮನೆಯ ಯುವ ಮಕ್ಕಳಿಗೆ ಹೊಸ ಟ್ರ್ಯಾಕ್ಟರ್ ತಿಳಿಯುವ ಮೊದಲೇ ಅದನ್ನು ರಿಪೇರಿ ಮಾಡಲು ಆತುರ. ಸಣ್ಣ ಪುಟ್ಟ ರಿಪೇರಿಗೆಂದು ಮನೆಯಲ್ಲಿದ್ದ ಸ್ಪ್ಯಾನರ್ ಸೆಟ್, ಸ್ಕ್ರೂ ಡ್ರೈವರ್, ಸುತ್ತಿಗೆ ಇತ್ಯಾದಿ ಉಪಕರಣಗಳ ಜೊತೆಗೆ ಟ್ರ್ಯಾಕ್ಟರ್ ಜೊತೆಗೆ ಬಂದ ಹಲವು ದುರಸ್ತಿ ಉಪಕರಣಗಳು ಕಂಡವು. ಇನ್ನು ಸುಮ್ಮನಿರುವುದೇಕೆ ಎಂದುಕೊಂಡ ಅಣ್ಣತಮ್ಮಂದಿರು, ರಿಪೇರಿ ಮಾಡಲು ಶುರು ಹಚ್ಚಿದರು. ನಾಲಕ್ಕು ಟೈರ್ಗಳಿಗೆ ಸಪೋರ್ಟ್ ಕೊಟ್ಟಾಗ, ಚಕ್ರಗಳು ಸುಖವಾಗಿ ಹೊರಗಡೆ ಬಂದವು. ಇನ್ನು ಇಂಜಿನ್ ಕಾಣಿಸುತ್ತಿದೆ. ತಮಗೆ ಬೇಕು ಎನಿಸಿದ ಅದರ ಒಂದೊಂದೇ ಭಾಗಗಳನ್ನು ಇದ್ದ ಹತಾರಗಳಿಂದ ಸುಲಭವಾಗಿ ಶೀಘ್ರವಾಗಿ ತೆಗೆದು ತೆಗೆದು ಇಟ್ಟರು. ಕೆಲಸವನ್ನು ನೋಡುತ್ತಿದ್ದ ಮುಗ್ಧ ತಾಯಿಗೆ ಮಕ್ಕಳ ಹತಾರದ ಚುರುಕಿನ ಉಪಯೋಗ ಹೆಮ್ಮೆ ತರುತ್ತಿತ್ತು. ನೋಡು ನೋಡುತ್ತಿದ್ದಂತೆಯೇ ಹತ್ತು ಇಂಟು ಹತ್ತಡಿ ಯಲ್ಲಿ ನಿಂತ ಟ್ರ್ಯಾಕ್ಟರ್ ಬಿಚ್ಚಿದಾಗ ಅದಕ್ಕೆ ಇಪ್ಪತ್ತು ಇಂಟು ಇಪ್ಪತ್ತು ಅಡಿಗೂ ಮೀರಿದ ಜಾಗ ಸಾಲಲೊಲ್ಲದು. ಮನೆ ಯಜಮಾನ ಸುತ್ತಿಕೊಂಡು ಸುಸ್ತಾಗಿ ಮನೆಗೆ ಬಂದ. ಜಾಣತನದಿಂದ ಶೀಘ್ರವಾಗಿ ಟ್ರಾಕ್ಟರ್ ಬಿಚ್ಚಿದ ತಮ್ಮ ಸಾಧನೆಯ ಬಗ್ಗೆ ಮಕ್ಕಳೊಂದಿಗೆ ಹೆಂಡತಿಯೂ ಅವರೊಂದಿಗೆ ಹೆಮ್ಮೆಯಿಂದ ಹೇಳಿದಾಗ ಅವರು ಹೊರಬಂದು ನೋಡುತ್ತಾರೆ, ನಿನ್ನೆ ಇದ್ದ ಒಂದು ಟ್ರ್ಯಾಕ್ಟರ್ ಇಂದು ಹಲವಾರು ಆಗಿದೆ. ದಿಗ್ಬ್ರಮೆಯಾದ ಅವರು, ಮರುದಿನದ ಕೃಷಿ ಕೆಲಸವನ್ನು ನೆನೆದು ಮತ್ತೆ ಮೊದಲು ಇದ್ದ ಹಾಗೆ ಜೋಡಿಸಲು ಹೇಳಿದರು. ಅಷ್ಟೊಂದು ವೇಗವಾಗಿ ಬಿಚ್ಚಿದ ಭೂಪತಿಗಳಿಗೂ ಪ್ರಯಾಸವೆನಿಸುವ ಕೆಲಸ . ಯಾವ ಭಾಗಗಳೂ ಮೊದಲಿದ್ದ ಜಾಗ ಎನ್ನುವ ಎಲ್ಲಿಗೂ ಕೂಡಲು ಒಪ್ಪುತ್ತಿರಲಿಲ್ಲ ಆದ್ದರಿಂದ ಅದರ ಅಸೆಂಬ್ಲಿ ಅಸಾಧ್ಯವಾಯಿತು. ತಲೆ ಮೇಲೆ ಕೈ ಹೊತ್ತು ಯಜಮಾನ ಪೇಟೆಯ ರಿಪೇರಿಯವರಿಗೆ ಸಂಪರ್ಕಿಸಿದ. ಸರಿ ಮಾಡಲು ಸಂಬಂಧಿಸಿದ ಮೆಕ್ಯಾನಿಕ್ ಐವತ್ತು ಮೈಲಿ ದೂರದಲ್ಲಿರುವ ಪೇಟೆಯಿಂದ ಬರಲು ಒಪ್ಪಲಿಲ್ಲ. ಅವನಿದ್ದಲ್ಲಿಗೇ ಈ ಟ್ರ್ಯಾಕ್ಟರ್ ಭಾಗಗಳನ್ನು ಲಾರಿಯಲ್ಲಿ ತುಂಬಿ ಕೊಂಡು ಹೋಗಿ, ಅವನು ಹೇಳಿದಾಗಲೆಲ್ಲ ಹೋಗಿ ಹೋಗಿ, ರಿಪೇರಿ ಮಾಡಿಸಲು ಇನ್ನು ಅರ್ಧ ಟ್ರಾಕ್ಟರ್ ವೆಚ್ಚ ಖರ್ಚಾಯಿತು. ಇದೂ ಒಂದು ನಡೆದ, ಯಜಮಾನನಿಗೆ ದುಃಸ್ವಪ್ನವಾದ ದುಬಾರಿ ರಿಪೇರಿ ಪ್ರಕರಣ.
ಕಳೆದ ಐವತ್ತು ವರ್ಷಗಳಿಂದ ಈ ನಗರದಲ್ಲಿ ಅವ್ಯಾಹತವಾಗಿ ಚರಂಡಿ ರಿಪೇರಿ ನಡೆಯುತ್ತಿದ್ದರೂ, ಮಳೆ ಬಂದಾಗ ರಸ್ತೆಯ ಮೇಲೆ ಸದಾ ಇರುವ ನೀರು, ರಸ್ತೆ ರಿಪೇರಿ ಖಾಯಂ ಇದ್ದರೂ ರಸ್ತೆ ಪ್ರಯಾಣಿಕರನ್ನು ಬೀಳಿಸುತ್ತಿರುವ ಗುಂಡಿಗಳು, ಎಷ್ಟು ಚೆಂದ ಮಾಡಿದರೂ ಇನ್ನಷ್ಟು ಚಂದವನ್ನು ಬೇಡುವ ಪುಟ್ ಪಾತ್ ರಿಪೇರಿಗಳು, ನಿನ್ನೆ ಟಾರು ಹಾಕಿದ ಮೇಲೆ ಇಂದು ನೆನಪಾಗುವ ಒಳಚರಂಡಿ ರಿಪೇರಿಗಳು, ಇವು ಸಾರ್ವಜನಿಕ ದುಬಾರಿ ರಿಪೇರಿಗಳು.
ಇನ್ನು ಕಚೇರಿಗಳಲ್ಲಿ ಅಧಿಕಾರಿಗಳಿಂದ ಕೈಕೆಳಗಿನವರ ರಿಪೇರಿ, ಸಮಯ, ಅವಕಾಶ ಸಿಕ್ಕರೆ ಕೈ ಕೆಳಗಿನವರಿಂದ ಅಧಿಕಾರಿಗಳ ಅಥವಾ ಮಾಲೀಕರ ರಿಪೇರಿ, ಮನೆಯಲ್ಲಿ ಗಂಡನಿಂದ ಹೆಂಡತಿಯ ರಿಪೇರಿ, ಹೆಂಡತಿಯಿಂದ ಗಂಡ ಹಾಗೂ ಮಕ್ಕಳ ರಿಪೇರಿ ಹೀಗೆ ಸಂಸಾರದಲ್ಲಿ, ಕಛೇರಿಗಳಲ್ಲಿ ಅಷ್ಟೇ ಏಕೆ, ದೈನಂದಿನ ವ್ಯವಹಾರಗಳಲ್ಲಿ ಬದುಕಿನ ಎಲ್ಲಾ ರಂಗಗಳಲ್ಲೂ ಈ ರಿಪೇರಿ ಬಲು ಸಾಮಾನ್ಯವಾಗಿದೆ. ಆದ್ದರಿಂದ ರಿಪೇರಿ ಪದದ ಅರ್ಥವನ್ನು, "ತಮ್ಮ ಅನುಕೂಲಕ್ಕೆ ಬೇಕಾದಂತೆ ಮಾರ್ಪಾಡು ಮಾಡಿಕೊಳ್ಳುವ ರೀತಿ" ಎಂಬುವುದು ಸರಿ ಎನ್ನಿಸುತ್ತದೆ.
ಈ ನಿಟ್ಟಿನಿಂದ ಯೋಚನೆ ಮಾಡುತ್ತಿರುವಾಗ, ನಮ್ಮ ಸ್ವಂತ ಬದುಕಿಗೆ ಆರ್ಥಿಕವಾಗಿ ಸರಿ ಇರಲು ಆಗಾಗ್ಗೆ ರಿಪೇರಿ ಅಗತ್ಯ. ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಂಡಿರಲು ಮಾಡುವ ಸಣ್ಣ ಪುಟ್ಟ ರಿಪೇರಿ ಕ್ರಿಯೆಗಳು ದೊಡ್ಡ ರಿಪೇರಿ ತಪ್ಪಿಸುತ್ತದೆ. ಇನ್ನು ನಾವು ನೆಮ್ಮದಿಯಾಗಿರಲು ಬದುಕಿನ ರೀತಿಯನ್ನು ತಿದ್ದಿಕೊಳ್ಳಬೇಕಾಗುವುದು. ಬೇರೊಬ್ಬರಿಗೆ ನೋವಾಗದಂತೆ ಇರಲು ನಮ್ಮ ನಡತೆಗಳನ್ನು ತಿದ್ದಿಕೊಳ್ಳುವುದು ಸಹ ಒಂದು ಬೃಹತ್ ರಿಪೇರಿ ಕೆಲಸವೇ. ನಮ್ಮ ಗೆಲುವಿಗೆ ನಮ್ಮ ಬೆನ್ನು ತಟ್ಟಿ ಕೊಳ್ಳುವ ಜೊತೆಗೇ ಸೋಲುಗಳಿಗೆ ನಷ್ಟಗಳಿಗೆ ಪರರನ್ನು, ಸಮಾಜವನ್ನು ದೂಷಿಸುವ ಬದಲು, ಅವುಗಳನ್ನು ತಿದ್ದುವ ಬದಲು, ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ ಎಂಬ ವಚನವಾಕ್ಯದಂತೆ ನಮ್ಮನ್ನು ನಾವು ರಿಪೇರಿ ಮಾಡಿಕೊಳ್ಳೋಣ.
ರಿಪೇರಿ ಎಂಬ ಪದವನ್ನು ಚಂದವಾಗಿ ವ್ಯಾಖ್ಯಾನಿಸಿ ದ್ದೀರಿ. ಈಗಲೂ ಕೆಳದಿಯ ತೇರು ಹೊರಡುವಾಗ ಗಿಡ್ಡಿ ಕೇರಿಯ ರಾಮಣ್ಣ ಗ್ಯಾಸ್ ಲೈಟನ್ನ ನಮ್ಮ ಮನೆಗೆ ತಂದು ರಿಪೇರಿ ಮಾಡಿಸಿಕೊಂಡೆ ಹೊರಡುವುದು. ಮಾವ ಮತ್ತು ಭಾವ ದಿನಾ ಏನಾದರೊಂದನ್ನು ರಿಪೇರಿ ಮಾಡದಿದ್ದರೆ ಇಬ್ಬರಿಗೂ ಸಮಾಧಾನವೇ ಇರುವುದಿಲ್ಲ.
ReplyDeleteಲಘುಬರಹ ಚೆನ್ನಾಗಿದೆ.
ReplyDeleteರಿಪೇರಿಗೆ ಸಂಬಂಧಿಸಿದಂತೆ ಮೊದಮೊದಲು ಅತಿ ಸಾಮಾನ್ಯ, ದೈನಂದಿನ ಜೀವನದ ಚಿತ್ರಗಳನ್ನು ಬಿಡಿಸುತ್ತಾ ಮುಂದುವರೆದು, ಕೊನೆಯ ಹಂತದಲ್ಲಿ ರಿಪೇರಿಗೆ ಯೋಗ್ಯವಾದ ಮಾನವ ಜೀವನದ ಮುಖಗಳನ್ನು ನೆನಪಿಸುವ ಮೂಲಕ ಈ ಬರಹಕ್ಕೆ ಗಾಂಭೀರ್ಯತೆಯ ಲೇಪ ಕೊಟ್ಟಿದ್ದೀರಿ. ಇದರಿಂದಾಗಿ ಈ ನಿಮ್ಮ ಬರಹದ ತೂಕ ಹೆಚ್ಚಾಗಿದೆ.
ಅಭಿನಂದನೆಗಳು!
ರಿಪೇರಿ ಎನ್ನುವ ಶಬ್ದದ ವರ್ಣನೆ ಭಹಳ ಸೊಗಸಾಗಿದೆ ಹಾಗು ಅರ್ಥಗರ್ಭಿತವಾಗಿದೆ
ReplyDeleteರಿಪೇರಿ ಗಳ ಬದುಕು ಓದುತ್ತಾ ಹೋದಂತೆ ಜೀವನದಲ್ಲಿ ರಿಪೇರಿ ಇಲ್ಲದ ಜೀವನವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.ದಿನನಿತ್ಯದಲ್ಲಿ ನಮಗರಿವಿಲ್ಲದಂತೆ ನಾವು ಮಾಡುವ ಹಾಗೂ ಮಾಡಿಸುವ ರಿಪೇರಿ ಗಳ ದೊಡ್ಡ ಪಟ್ಟಿಯೇ ಇರುತ್ತದೆ. ಅದರಂತೆ ದೇಹದ ಅಂಗಾಂಗಗಳಿಗೆ ರಿಪೇರಿಯಷ್ಟೇ ಅಲ್ಲದೆ ಮನಸ್ಸಿಗೂ ರಿಪೇರಿಯ ಅಗತ್ಯವಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿಯಬೇಕು. ರಿಪೇರಿ ಎಂಬುದು ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬು ದನ್ನು ಚೆನ್ನಾಗಿ ವರ್ಣಿಸಲಾಗಿದೆ.
ReplyDeleteಲೇಖನ ನಮ್ಮಲ್ಲಿರುವ ನೂನ್ಯತೆಗಳಿಗೆ ರಿಪೇರಿಯ ಅಗತ್ಯಗಳ ಬಗ್ಗೆ ತಿಳಿಸುತ್ತದೆ. ಈತ್ತೀಚಿನ ಅಸಂತುಷ್ಟ ಕುಟುಂಬದ ಸತಿಪತಿಗಳಿಗೆ ರಿಪೇರಿ ಅತ್ಯಗತ್ಯ. ಒಲ್ಲದ ಗಂಡನನ್ನು ಸಾಮದಾನಭೇದದಂಡ ಗಳಿಂದ ರಿಪೇರಿಮಾಡುವ ಹೆಂಡತಿ ಹಾಗೆ ರೂಪವತಿಯಲ್ಲದ ಹೆಂಡತಿಯನ್ನು ಪ್ರೀತಿಯೆಂಬ ಮೇಕಪ್ಪಿನಿಂದ ತಿದ್ದಿತೀಡಿ ರಿಪೇರಿಮಾಡುವ ಗಂಡ ಹೀಗೆ ಕೆಟ್ಟುನಿಂತ ನಮ್ಮಂತಹವರಿಗೆ ರಿಪೇರಿಗಾಗಿ ಗ್ಯಾರೇಜ್ ಕಡೆಗೆ ಹೊರಡುನಂತೆ ಮಾಡುವ ನಿಮ್ಮ ಲೇಖನ ರಿಪೇರಿಮುಕ್ತವಾಗಿದೆ. ಧನ್ಯವಾದಗಳು.
ReplyDeleteಪ್ರತಿ ಯೊಬ಼ರ ಜೀವನ ದಲೂ಼ 'ರಿಪೇರಿ' ಎಂಬ ಪದ ಎಷ್ಟು ಪ್ರಮುಖವಾಗಿದೆ ಎಂದು ಈ ಲೇಖನ ದ ಮೂಲಕ ತುಂಬಾ ಚೆನ್ನಾಗಿತಿಳಿಸಿದೀ಼ರಿ.ಧನ್ಯವಾದಗಳು vani S.R
ReplyDelete"ರಿಪೇರಿ "- "ರಿಪೇರಿ "- "ರಿಪೇರಿ " -- ಈ ಪದ ಸರ್ವೇಸಾಮಾನ್ಯವಾಗಿ ಪ್ರತಿಯೊಬ್ಬರೂ ಪ್ರತಿದಿನ ಬಳಸುವ ಪದವಾಗಿದೆ. ಆದರೆ 'ರಿಪೇರಿ ' ಇಲ್ಲದೆ ಮನುಷ್ಯನ ಜೀವನ ಸುಗಮವಾಗಿ ಸಾಗುವುದಿಲ್ಲ ಎನ್ನುವ ವಿಷಯವನ್ನು ಲೇಖಕರು ಸೊಗಸಾಗಿ ವಿವರಿಸಿದ್ದಾರೆ. ವೈದ್ಯರು ಮನುಷ್ಯನನ್ನು ರಿಪೇರಿ ಮಾಡಿದರೆ, ಒಬ್ಬ ಮೆಕ್ಯಾನಿಕ್ ವಾಹನಗಳನ್ನು ರಿಪೇರಿ ಮಾಡುತ್ತಾನೆ. ರಿಪೇರಿ ಮಾಡುವ ಕೆಲಸ ಬಹಳ ಸುಲಭದ್ದು ಎಂದು ತೀರ್ಮಾನ ಮಾಡಲಾ ಗುವುದಿಲ್ಲ. ಇದಕ್ಕೆ ಅದರದೇ ಆದ ಅನುಭವ ಮತ್ತು ಚಾಕಚಕ್ಯೆತೆ ಬೇಕಾಗುತ್ತದೆ. ಎರಡು ಮೂರು ಡಿಗ್ರಿ ಗಳನ್ನು ಹೊಂದಿರುವವನು ಮಾಡಲು ಸಾಧ್ಯವಾಗದ ಒಂದು ಸಣ್ಣ ರಿಪೇರಿ ಕೆಲಸವನ್ನು ಒಬ್ಬ ಅವಿದ್ಯಾವಂತ ಮಾಡುತ್ತಾನೆ ಮತ್ತು ಅವನ ಕುಟುಂಬದ ಜೀವನ ಇದರಿಂದಲೇ ಸಾಗುತ್ತದೆ. ಹೆಚ್ಚಿನ ಉದಾಹರಣೆಗಳೊಂದಿಗೆ ಲೇಖನವನ್ನು ಮಂಡಿಸಿರುವ ನನ್ನ ಸ್ನೇಹಿತ ರಾಮಚಂದ್ರರವರಿಗೆ ಧನ್ಯವಾದಗಳು.
ReplyDelete“ರಿಪೇರಿಗಳ ಬದುಕು“ ತುಂಬಾ ಚೆನ್ನಾಗಿದೆ. ಇದನ್ನು ಓದಿದಾಗ , ಪ್ರತಿಯೊಬ್ಬರಿಗೂ ವಸ್ತು ಮತ್ತು ವ್ಯಕ್ತಿತ್ವ ದ ರಿಪೇರಿ ಎಷ್ಟು ಅವಶ್ಯಕ ಎಂಬುದನ್ನು ವಿಸ್ತಾರವಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು🙏😊
ReplyDelete