Skip to main content

ಪತ್ತೆ ದಾರಿಯಲ್ಲಿ

ಜೀವನದಲ್ಲಿ ಹುಡುಕು ಎಂಬ ಪದ ಅನಿವಾರ್ಯ. ಸದಾ ಒಂದಲ್ಲಾ ಒಂದು ಹುಡುಕುತ್ತಿರುವುದೇ ಜೀವನದ ವೈಶಿಷ್ಟ್ಯ. ಹುಟ್ಟಿದ ಮಗು ನೋಡಲು ಶಕ್ತವಾದ ಕೂಡಲೇ ಏನೋ ಹುಡುಕುತ್ತಿರುತ್ತಾ ಎಲ್ಲಾ ಕಡೆ ನೋಡುತ್ತಿರುತ್ತದೆ. ನಂತರ ಒಮ್ಮೆ ಕಂಡ ತಾಯಿಯನ್ನೇ ಅನುಸರಿಸುವ ದೃಷ್ಟಿ ಆಕೆಯ ಬರುವ ಮಾರ್ಗವೇ ಆಗಿರುತ್ತದೆ.  ನಂತರ ಕಂಡ ಒಬ್ಬೊಬ್ಬ ಬಂಧುಗಳ, ನೋಡಿರುವ ಜಾಗಗಳ ಹುಡುಕುವಿಕೆ  ಸಹಜವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ನೋಡದಿರುವ ವಿಷಯ ಕೇಳುವುದರ ಮೂಲಕ, ಕೇಳಿರುವ ವಿಷಯವನ್ನು ನೋಡಲು ಪೋಷಕರಿಂದ, ತಿಳಿದಿರುವವರಿಂದ ಅಥವಾ ಗುರುಗಳ ಮಾರ್ಗದರ್ಶನ ಅಗತ್ಯವಾಗುತ್ತದೆ. ಕೆಲವು ವೇಳೆ ವ್ಯವಸ್ಥಿತವಾಗಿ  ಇಟ್ಟುಕೊಳ್ಳದ  ವಸ್ತು ಬೇಕಾದಾಗ  ಅದನ್ನು ಪಡೆಯುವ ಯತ್ನವು ಹುಡುಕುವುದು ಎಂದಾದರೆ , ನೋಡಿರದ ವಸ್ತು ಅಥವಾ ಸ್ಥಳವನ್ನು ತಲುಪುವ ಕ್ರಿಯೆಯನ್ನು ಪತ್ತೆ  ಎನ್ನುವರು. ಈ ಎರಡೂ ಕ್ರಿಯೆಗಳೂ ಬಹುತೇಕ ಹೋಲುವುದರಿಂದ ಸಹಜವಾಗಿ ಎರಡನ್ನೂ ಹುಡುಕುವುದು ಎಂದೇ ಕರೆಯುತ್ತಾರೆ.  ಸದ್ಯದಲ್ಲಿ ಇಲ್ಲಿ ಹೇಳ ಹೊರಟ ವಿಷಯ, ಇದೆ ಎಂದು ಭಾವಿಸಿರುವ ಸ್ಥಳದ ವಿಳಾಸವನ್ನು ಹುಡುಕುವ ಅಥವಾ ಪತ್ತೆ  ಮಾಡುವಾಗಿನ  ಅನುಭವಗಳೇ ಈ "ಪತ್ತೆ ದಾರಿಯಲ್ಲಿ" ಶೀರ್ಷಿಕೆಯಡಿ ಚರ್ಚಿಸಲ್ಪಟ್ಟಿದೆ.

ಜೀವನದಲ್ಲಿ ಹುಡುಕು ಎಂಬ ಪದ ಅನಿವಾರ್ಯ. ಸದಾ ಒಂದಲ್ಲಾ ಒಂದು ಹುಡುಕುತ್ತಿರುವುದೇ ಜೀವನದ ವೈಶಿಷ್ಟ್ಯ. ಹುಟ್ಟಿದ ಮಗು ನೋಡಲು ಶಕ್ತವಾದ ಕೂಡಲೇ ಏನೋ ಹುಡುಕುತ್ತಿರುತ್ತಾ ಎಲ್ಲಾ ಕಡೆ ನೋಡುತ್ತಿರುತ್ತದೆ. ನಂತರ ಒಮ್ಮೆ ಕಂಡ ತಾಯಿಯನ್ನೇ ಅನುಸರಿಸುವ ದೃಷ್ಟಿ ಆಕೆಯ ಬರುವ ಮಾರ್ಗವೇ ಆಗಿರುತ್ತದೆ. ನಂತರ ಕಂಡ ಒಬ್ಬೊಬ್ಬ ಬಂಧುಗಳು, ನೋಡಿರುವ ಜಾಗಗಳ ಹುಡುಕುವಿಕೆ ಸಹಜವಾಗಿರುತ್ತದೆ. ಬೆಳೆಯುತ್ತಾ ಹೋದಂತೆ ನೋಡದಿರುವ ವಿಷಯ ಕೇಳುವುದರ ಮೂಲಕ, ಪೋಷಕರಿಂದ, ತಿಳಿದಿರುವವರಿಂದ ಅಥವಾ ಗುರುಗಳ ಮೂಲಕ ಮಾರ್ಗದರ್ಶನ ವಾಗುತ್ತದೆ. ಒಮ್ಮೆ ಕುತೂಹಲ ಬಂದಿತೆಂದರೆ ಆ ವಿಷಯದ ಮೂಲ ಅಥವಾ ಅದರ ವಿಳಾಸಗಳ ಅಗತ್ಯವೇರ್ಪಡುತ್ತದೆ. ಹಾಗೆ ನೋಡಿದರೆ ಜೀವನವೆಲ್ಲಾ ಹುಡುಕುವುದರಲ್ಲೇ ಸಮಯ ಕಳೆಯುವುದಾದರೂ ಒಮ್ಮೆ ನೋಡಿದ ವಸ್ತು ಬೇಕಾದಾಗ, ವ್ಯವಸ್ಥಿತವಾಗಿ ಇಟ್ಟುಕೊಳ್ಳದ ವಸ್ತು ಬೇಕಾದಾಗ ಆತಂಕದ ಹುಡುಕುವಿಕೆ ಸಹಜ. ಸದ್ಯದಲ್ಲಿ ಇಲ್ಲಿ ಹೇಳ ಹೊರಟ ವಿಷಯ ವಿಳಾಸ ಹುಡುಕುವ ದಾರಿಯಲ್ಲಿ ಆಗಿರುವ ಅನುಭವಗಳು.

ಪುರಾಣದ ಕಾಲದಿಂದ ವಿಳಾಸದ ಬಗ್ಗೆ ಹೇಳುವುದಾದರೆ, ರಾಮಾಯಣ ಕಾಲದಲ್ಲಿ, ಶ್ರೀರಾಮ ಕಾಡಿಗೆ ಹೋಗುವಾಗ ಮಾತ್ರ ಆತನಿಗೆ ವಿಳಾಸ ಬೇಕಾಗಿರಲಿಲ್ಲದಿದ್ದರೂ, ಅಲ್ಲಿ ಸೀತೆಯನ್ನು ರಾವಣನು ಎತ್ತಿಕೊಂಡು ಹೋದಾಗ, ಆ ಸಮಯದಲ್ಲಿ ಅವರು ಹೋದ ಹಾದಿಯ ವಿಳಾಸ ಬೇಕಾಗಿತ್ತು. ಅದನ್ನು ಒದಗಿಸಿದವನು ಜಟಾಯು. ಅಂದಿನ ಋಷಿ ಮುನಿಗಳಿಗೆ ಇಂದಿನ ಜಿಪಿಎಸ್ಗಿಂತಲೂ ಹೆಚ್ಚಿನ ದಿವ್ಯ ಜ್ಞಾನವಿತ್ತು. ಆದ್ದರಿಂದಲೇ ವಸಿಷ್ಠ, ವಿಶ್ವಾಮಿತ್ರ, ದೂರ್ವಾಸಾದಿಗಳಿಗೆ ಕೇವಲ ಜ್ಞಾನಶಕ್ತಿಯಿಂದಲೇ ಹೋಗುವ ದಾರಿ ಕ್ರಮಿಸುತ್ತಿದ್ದರು. ದೇವಾನುದೇವತೆಗಳು ಕ್ಷಣ ಮಾತ್ರದಲ್ಲಿ ವರ ಅಥವಾ ಶಾಪ ಕೊಡಲು ತಲುಪಬೇಕಾದ ಸ್ಥಳಕ್ಕೇ ನೇರವಾಗಿ ಹೋಗಿ ಬೇಕಾದವರಿಗೆ ಪ್ರತ್ಯಕ್ಷವಾಗುತ್ತಿದ್ದರು. ಇನ್ನು ಗರುಡ ಹನುಮರು ವಿಳಾಸ ಹುಡುಕುತ್ತಲೇ ಗುರಿಯನ್ನು ಮನೋವೇಗದಲ್ಲಿ ತಲುಪುವವರು. ಭರತನು ಶ್ರೀರಾಮನ ಪಾದುಕೆ ಪಡೆದು ಹೋದನು ಎಂದು ಓದಿದ್ದೇವೆ. ಆದರೆ ಅಂದು ರಾಮನಿದ್ದ ಸ್ಥಳದ ಉಲ್ಲೇಖವಿಲ್ಲದಿದ್ದರಿಂದ ವಿಳಾಸ ಕೇಳುತ್ತಲೇ ಹೋಗಿರುತ್ತಾನೆ ಎಂದು ಭಾವಿಸಬೇಕಾಗುತ್ತದೆ. ಇನ್ನು ಹೊರಡಬೇಕಾಗಿ ಬಂದ ಅನಿವಾರ್ಯತೆಗೆ ಹೊರಟ ಪಾಂಡವರಿಗೆ ತಕ್ಷಣಕ್ಕೆ ವಿಳಾಸ ಬೇಕಾಗಿಲ್ಲದಿದ್ದರೂ ನಂತರ ಭೇಟಿ ಕೊಟ್ಟ ಪಾಂಚಾಲ ರಾಜ್ಯದ ದಾರಿ, ಏಕಚಕ್ರನಗರ, ವಿರಾಟ ರಾಜನ ಮತ್ಸ್ಯದೇಶ ಇತ್ಯಾದಿಗಳಿಗೆ ಹೋಗಲು ದಾರಿಯ ವಿಳಾಸ ಬೇಕಾಗಿತ್ತು. ಅಲ್ಲಿಗೆಲ್ಲಾ ಹೋಗಿದ್ದರು ಎಂದಾಗ ಅಂದಿನ ದಿನಗಳಲ್ಲಿಯೂ ಸಹ ವಿಳಾಸ ಹೇಳುವವರೂ, ಕೇಳುವವರೂ ಇದ್ದರು ಎಂದು ವೇದ್ಯವಾಗುತ್ತದೆ.

ಹಳೆಯ ಜಾನಪದದ ಕಥೆಯಲ್ಲಿ ವಯಸ್ಸಾದ ತಂದೆಯನ್ನು ಸಾಕಲಾರದೆ ದಟ್ಟ ಕಾಡಿನಲ್ಲಿ ಬಿಡಲು ಅವರನ್ನು ಬುಟ್ಟಿಯಲ್ಲಿ ಇಟ್ಟು ಹೊತ್ತು ಕೊಂಡು ಹೋಗುತ್ತಿದ್ದ ಮಗ. ಮೇಲೆ ಕುಳಿತಿದ್ದ ತಂದೆ, ಕೈಗೆ ಸಿಕ್ಕ ಮರದ ಟೊಂಗೆಗಳನ್ನು ಮುರಿದು ಹಾಕುತ್ತಿದ್ದ. ಹಾಗೇಕೆ ಮಾಡುತ್ತಿದ್ದೀರಾ ಸುಮ್ಮನೆ ಕೂಡಲು ಆಗುವುದಿಲ್ಲವೇ ಎಂದು ಕೇಳಿದ ಮಗನಿಗೆ ತಂದೆ ಹೇಳಿದ, ಈ ದಟ್ಟ ಕಾಡಿನಲ್ಲಿ ನಿನಗೆ ಮನೆಗೆ ಮರಳಿ ಹೋಗುವ ಮಾರ್ಗ ತಿಳಿಯಲು ಅಸಾಧ್ಯವಾಗಬಹುದು, ಹೋಗುವಾಗ ಈ ಮುರಿದ ಟೊಂಗೆಗಳನ್ನು ಅನುಸರಿಸಿ ಹೋಗು. ಮನೆ ತಲುಪಲು ಸಹಾಯವಾಗುತ್ತದೆ ಎಂದನು. ಈ ಮಾತನ್ನು ಕೇಳಿದ ಮಗನಿಗೆ ತಂದೆಗೆ ತನ್ನ ಬಗ್ಗೆ ಇರುವ ಕಾಳಜಿ, ಪ್ರೀತಿಯನ್ನು ಅರ್ಥಮಾಡಿಕೊಂಡು ಆತನನ್ನು ವಾಪಸ್ ಮನೆಗೆ ಹೊತ್ತು ಕೊಂಡು ಬಂದ ಕಥೆ ಎಲ್ಲರಿಗೂ ತಿಳಿದಿರುವುದೇ. ಹೀಗೆ ವಿಳಾಸವು ಪ್ರೀತಿಯಲ್ಲಿ ಪ್ರಮುಖವಾಗಿರುತ್ತದೆ.

ಈಗಿನ ದಿನಗಳಲ್ಲಿಯೂ ಸಹ ಹಳ್ಳಿಗಳಲ್ಲಿ ಹಸು ಎಮ್ಮೆ, ಎತ್ತುಗಳಂತಹ ಜಾನುವಾರುಗಳನ್ನು ಮಾರಾಟ ಮಾಡಿದಾಗ ಅವನ್ನು ಕೊಂಡವರು ತಮ್ಮ ಮನೆಗೆ ಕೊಂಡೊಯ್ದರೂ, ಸಮಯ ಸಿಕ್ಕಾಗ ಕೇವಲ ವಾಸನೆಯಿಂದಲೇ ಮೊದಲ ಯಜಮಾನನ ಮನೆಯ ವಿಳಾಸವನ್ನು ಹುಡುಕಿಕೊಂಡು ಬರುವುದು ತೀರಾ ಸಾಮಾನ್ಯ. ಹಾಗೆಯೇ ಬೇಡವಾದ ಬೆಕ್ಕು, ನಾಯಿಗಳನ್ನು ದೂರದ ಸ್ಥಳಗಳಿಗೆ ಸಾಗಿಸಿ ಬಿಟ್ಟು ಬರುವವರು, ಅವರು ವಾಪಸ್ ಮನೆ ಸೇರುವ ಮುನ್ನವೇ ಹತ್ತಿರದ ದಾರಿಯ ಮೂಲಕ ಅವುಗಳು ವಾಪಸ್ ಬಂದಿರುವ ದಾಖಲೆಗಳಿವೆ. ಇವುಗಳು ವಿಳಾಸ ಹುಡುಕುವ ಪರಿ ಆಶ್ಚರ್ಯಕರ.

ನಗರಗಳಲ್ಲಿ ಯಾರದಾದರೂ ಮನೆಗೆ ಹೋಗಬೇಕಾದಾಗ ವಿಳಾಸಗಳನ್ನು ಹುಡುಕಲು ಇಂದಿನ ಯುವ ಜನಾಂಗವೇ ಏಕೆ, ಹಿರಿಯರೂ ಸಹ ಗೂಗಲ್ ನಲ್ಲಿ ದೊರೆಯುವ ಜಿಪಿಎಸ್ ನ್ನು ಅವಲಂಬಿಸುತ್ತಾರೆ. ಇವುಗಳೇನೋ ವ್ಯವಸ್ಥಿತವಾಗಿ ಮಾಡಿರುವ ಬಡಾವಣೆಗಳಲ್ಲಿ ಉಪಯೋಗವಾದೀತು. ಆದರೆ ಇನ್ನೂ ಅಭಿವೃದ್ಧಿಯಾಗುತ್ತಿರುವ ಬಡಾವಣೆಗಳು, ಜಿಲ್ಲಾ ಮಟ್ಟದ ಅಥವಾ ಪಟ್ಟಣ ಪ್ರದೇಶದಲ್ಲಿರುವ ಕೆಲವು ವಿಳಾಸಗಳನ್ನು ಹುಡುಕುವಾಗ ಈ ಜಿಪಿಎಸ್ ಉಪಯೋಗಕ್ಕೆ ಬಾರದು. ಮೂರು ದಶಕಗಳ ಹಿಂದಂತೂ ಮೊಬೈಲ್ ಸಹ ಇರಲಿಲ್ಲ, ಕೆಲವರ ಮನೆಯಲ್ಲಿ ಇದ್ದ ಟೆಲಿಫೋನ್ ಬಹಳ ಉಪಯೋಗವಾಗುತ್ತಿತ್ತು. ಅಕ್ಕಪಕ್ಕದವರ ಮನೆಯವರಿಗೂ ಸೇರಿದಂತೆ ವಿಳಾಸ ತಿಳಿಯಲು ಉಪಯೋಗವಾಗುತ್ತಿತ್ತು. ವಿಳಾಸ ಕೇಳಲು ಹೋದಾಗ ಆ ಪ್ರದೇಶದಲ್ಲಿನ ಯಾರಾದರೂ ಹಿರಿಯರು, ಅಂಗಡಿಗಳವರು ಅಥವಾ ಸದಾ ಬೀದಿಯಲ್ಲಿ ಇರುವವರೇ ವಿಳಾಸಗಳ ಮಾರ್ಗದರ್ಶಿಗಳು ಹಾಗೂ ಮಾಹಿತಿದಾರರು. ಮನೆ ನಂಬರ್ ಇಲ್ಲದಿದ್ದರೂ ಬೇಕಾದ ವ್ಯಕ್ತಿಗಳ ಗುರುತು ಹೇಳಿದರೆ ಮನೆ ಸಿಗುತ್ತಿದ್ದ ಸಾಧ್ಯತೆಯೇ ಹೆಚ್ಚಿರುತ್ತಿತ್ತು. ಹೀಗೆ ಸಿಗುತ್ತಿದ್ದ ಜನಗಳೊಂದಿಗೆ ನನಗಷ್ಟೇ ಅಲ್ಲ, ತಮಗೂ ಸಾಕಷ್ಟು ಅನುಭವಗಳಾಗಿರಬಹುದು. ಕೆಲವರಿಗೆ ವಿಳಾಸ ಕೇಳಿದಾಗ ತಮ್ಮ ಜೀವನವೇ ಪಾವನವಾಯಿತು ಎಂದುಕೊಂಡವರು ಹಲವರು. ವಿಳಾಸ ಗೊತ್ತು ಎಂದು ಹೇಳುವುದರ ಜೊತೆಗೆ ಆ ಮನೆಗೆ ತಲುಪಿಸುವ ಹೊಣೆ, ನಮ್ಮ ಬಳಿ ಲಗ್ಗೇಜ್ ಅಥವಾ ಮಕ್ಕಳು ಇದ್ದರೆ ಅವುಗಳನ್ನು ತಾವೇ ಹೊತ್ತು ಕೊಂಡು ಮನೆ ಸೇರಿಸುವ ಉಮೇದುವಾರಿಕೆ ಇನ್ನು ಕೆಲವರದು. ಆಗ ಅವರು ನಮ್ಮ ಕ್ಷೇಮ ಸಮಾಚಾರ, ಬಂದಿದ್ದು ಎಲ್ಲಿಂದ, ಏಕೆ, ಮುಂದಿನ ಕಾರ್ಯಕ್ರಮ ಹೇಗೆ ಎಂಬುದನ್ನು ವಿಶ್ವಾಸವಾಗಿಯೇ ಕೇಳಿ ತಿಳಿಯುತ್ತಿದ್ದರು. ಇನ್ನು ವಿಳಾಸದ ಪ್ರಶ್ನೆ ಕೇಳಿಸಿಕೊಂಡ ಕೆಲವರಿಗೆ ಅದು ತಲೆನೋವಾಗಿರುತ್ತಿತ್ತು. ಆಗ ಕೆಲವರು ನಮ್ಮಿಂದ ತಪ್ಪಿಸಿಕೊಂಡು ಹೋಗುವರು. ಇನ್ನು ಕೆಲವರು ಕೇಳಿದ್ದಕ್ಕಷ್ಟೇ ಉತ್ತರಿಸಿ ಸಾಗ ಹಾಕುವರು. ಕೆಲವು ಅಂಗಡಿಗಳಲ್ಲಿ ವಿಳಾಸದ ಸೇವೆ ಪಡೆಯಲು ಏನಾದರೂ ವ್ಯಾಪಾರ ಮಾಡಬೇಕಾಗಿತ್ತು. ಈಗಲೂ ಕೆಲವು ಕಡೆ ಈ ಪದ್ಧತಿ ಇದೆ. ಅಂಗಡಿಯವರಾದರೂ ಏನು ಮಾಡುತ್ತಾರೆ ಹೇಳಿ, ವ್ಯಾಪಾರಕ್ಕೆಂದು ತೆರೆದ ಅಂಗಡಿಯಲ್ಲಿ ಸದಾ ವಿಳಾಸ ಹೇಳುವುದಾದರೆ ವ್ಯಾಪಾರ ಮಾಡುವುದು ಯಾವಾಗ? ಇತ್ತೀಚೆಗೆ ನಗರದ ಒಂದು ಭಾಗದಲ್ಲಿ ಇರುವ ಅಂಗಡಿಯ ಮುಂದೆ ಒಂದು ಬೋರ್ಡ್ ಓದಿದೆ, "ಇಲ್ಲಿ ಯಾವ ಕಾರಣಕ್ಕೂ ವಿಳಾಸ ಹೇಳಲಾಗುವುದಿಲ್ಲ. ತಿಳಿಯಿರಿ". ಓದಲು ಸೋಜಿಗವೆನಿಸಿತು. ಇದೇಕೆ ಹೀಗೆ ಎಂದು ಅವರಲ್ಲಿ ವಿಚಾರಿಸಿದಾಗ ಅವರ ಕೆಲವು ಅನುಭವಗಳನ್ನು ಹೇಳಿದರು.

ಅವರು ನನಗೆ ಸುಮಾರು ೩೦ ವರ್ಷಗಳಿಂದ ಗೊತ್ತಿರುವ ವ್ಯಾಪಾರಿ. ಅದೊಂದು ಜೆರಾಕ್ಸ್ , ಟೈಪಿಂಗ್ ಮತ್ತು ಸ್ಟೇಷನರಿ ಅಂಗಡಿ. ಬಾಡಿಗೆ ದುಬಾರಿಯಾದರೂ ವ್ಯಾಪಾರ ಹೆಚ್ಚಾಗಲು ಮೂಲೆ ಅಂಗಡಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಬರುವ ಗ್ರಾಹಕರೊಂದಿಗೆ ಈ ವಿಳಾಸ ಕೇಳಲು ಬರುವವರೂ ಹೆಚ್ಚಾದಾಗ ಒಂದು ಕಡೆ ಕೇವಲ ನೋಡಲು ಗಾಜು ಜೋಡಿಸಿದರು. ಇನ್ನೊಂದು ಕಡೆ ವ್ಯಾಪಾರಕ್ಕೆ ಮೀಸಲು. ದಿನನಿತ್ಯ ೧೦ ರಿಂದ ೧೫ ಜನರು ವಿಳಾಸ ಕೇಳುವವರೇ. ನಾಲ್ಕು ಜನರಿಗೆ ಸಹಾಯ ಮಾಡಲು ಸಾಧ್ಯವಾಗುವುದಾದರೆ ಮಾಡೋಣ ಎಂಬ ನಮ್ಮ ಭಾವನೆ. ಕೆಲವರಿಗೆ ಕುಳಿತಲ್ಲೇ ವಿಳಾಸ ಹೇಳಿದರೆ ಸಾಕು, ಇನ್ನು ಕೆಲವರಿಗೆ ಅವರ ಬಳಿ ಹೋಗಿಯೇ ಹೇಳಬೇಕು. ಸಾರ್, ಈ ರಸ್ತೆ ಎಲ್ಲಿದೆ, ಈ ನಂಬರ್ ಎಲ್ಲಿ ಬರಬಹುದು ಎಂದಾಗ, ನಮಗೂ ಗೊತ್ತಿರುವುದಿಲ್ಲ, ಆದರೂ ಆ ರಸ್ತೆ ಅಥವಾ ಭಾಗದಲ್ಲಿ ಇರಬಹುದು, ಕೇಳಿ ನೋಡಿ, ಎಂದು ಹೇಳಿ ಅವರನ್ನು ಕಳಿಸಿ ನಮ್ಮ ಕೆಲಸ ಪ್ರಾರಂಭಿಸುತ್ತೇವೆ, ಕಾಲು ಗಂಟೆಯಾಗಿರುವುದಿಲ್ಲ, ಸಾರ್ ಅಂಥಾ ನಂಬರ್ ಅಲ್ಲಿ ಬರುವುದಿಲ್ಲವಂತೆ, ನಾನೂ ಹುಡುಕಿದೆ, ಸಿಗಲಿಲ್ಲ ಈಗ ನಾನು ಏನು ಮಾಡಲಿ. ಸರಿ ನಾನೇನು ಮಾಡಲಿ ಎಂದು ಅಂಗಡಿಯವರ ಉತ್ತರ. ಇದೇ ಏರಿಯಾದಲ್ಲಿ ಇಪ್ಪತ್ತು ವರ್ಷಗಳಿಂದ ಇದ್ದೀರಿ. ಯಾವ ಮನೆ ಎಲ್ಲಿ ಬರುತ್ತೆ ಎಂದು ಗೊತ್ತಿಲ್ಲ ಎಂದರೆ ಆಶ್ಚರ್ಯ. ಸರಿಯಾಗಿ ನಿಮ್ಮ ಅಡ್ರೆಸ್ ಗೊತ್ತಿದೆಯಾ, ಸಾಕು ಬಿಡಿ ಆ, ಹೀಗೆ ಎಂದು ಹೀಗಳೆದು ಹೋದರು. 

ಇನ್ನೊಬ್ಬರಿಗೆ ವಿಳಾಸ ಹೇಳಿದಾಗ "ಅವರು ಮನೆಯಲ್ಲಿ ಇಲ್ಲವಂತೆ, ಬೀಗ ಹಾಕಿದ್ದಾರೆ, ಎಷ್ಟೊತ್ತಿಗೆ ಬರಬಹುದು ಏನಾದರೂ ಐಡಿಯಾ ಇದೆಯಾ? ಈ ಪ್ರಶ್ನೆ. ಮತ್ತೊಬ್ಬರಿಗೆ ಯಾರೋ ಇಲ್ಲಿರುವ ಖ್ಯಾತ ಲಾಯರ್ ಅಡ್ರಸ್ ಹೇಳಿದರಂತೆ. ಅವರ ಮನೆ ವಿಳಾಸ, ಲೊಕೇಶನ್ ಬೇಕು. ಜೊತೆಗೆ ಅವರು ಎಷ್ಟು ಚಾರ್ಜ್ ಮಾಡಬಹುದು, ಪರ್ವಾಗಿಲ್ಲವಾ, ಕೇವಲ ಸಿವಿಲ್ ಕೇಸ್ ತಗೋತಾರಾ ಅಥವಾ ಕ್ರಿಮಿನಲ್ ಕೇಸೂ ತಗೋತಾರಾ, ಯಾವುದರಲ್ಲಿ ಸ್ಪೆಷಲಿಸ್ಟ್, ಇವೆಲ್ಲವೂ ಬೇಕು. ಇನ್ನು ಮತ್ತೊಬ್ಬರು, ಡಾಕ್ಟರ್ನ ಹುಡುಕಿಕೊಂಡು ಬಂದಿದ್ದರು. ಅವರಿಗೆ ಆ ಡಾಕ್ಟರ್ ಪರ್ವಾಗಿಲ್ಲವಾ, ಕೈಗುಣ ಹೇಗೆ, ಯಾವುದಾದರೂ ನರ್ಸಿಂಗ್ ಹೋಂ ಗೆ ಹೋಗುತ್ತಾರಾ, ಕೇವಲ ಕ್ಲಿನಿಕ್ ಮಾತ್ರನಾ. ಫಿಸಿಷಿಯನ್ ಮತ್ತು ಸರ್ಜನ್ ಅಂತಾರೆ, ಹೇಗೆ, ಗಿರಾಕಿ ಸಾಕಷ್ಟು ಇರ್ತಾರಾ? ಇವೆಲ್ಲವನ್ನೂ ಅವರು ನಮ್ಮಿಂದ ನಿರೀಕ್ಷಿಸುವ ಮಾಹಿತಿ.

ಅಂದು ಹಾಗೆ ಇಲ್ಲಿ ಮ್ಯಾಟ್ರೀಮೋನಿಯಲ್ ಇತ್ತಲ್ಲವಾ, ಮುಚ್ಚಿ ಬಿಟ್ಟರಾ, ವರ ಕನ್ಯಾ, ಕೇಳಿಕೊಂಡು ಬಂದಿದ್ದೆವು, ಈಗ ಕಾಣುತ್ತಿಲ್ಲ. ಈ ರೀತಿ ಬೇರೆ ಮ್ಯಾಟ್ರಿಮೋನಿಯಲ್ ನಿಮಗೇನಾದರೂ ಗೊತ್ತಾ, ಅಥವಾ ಬೇರೆ ಯಾರಾದರೂ ಕನ್ಯಾ, ವರ ಇದೆಯಾ. ಇಂತಹ ನೂರಾರು ವಿಷಯ ಬೇಕು. ನಮ್ಮ ವ್ಯವಹಾರ ಮಾಡಲೇ ನಮಗೆ ಟೈಮಿಲ್ಲ. ಬಂದವರಿಗೆ ತಕ್ಷಣ ಕೆಲಸವಾಗಬೇಕು. ನಮ್ಮ ಗಿರಾಕಿ ಬಂದಾಗಲೇ ಇವರಿಗೂ ಅರ್ಜೆಂಟ್. ಗೊತ್ತಿರುವ ವಿಳಾಸ ಹೇಳಲೇನೂ ಕಷ್ಟ ಅಲ್ಲ, ಆದರೆ ಈ ರೀತಿ ಕಿರುಕುಳ ಆದರೆ ಬರುವ ಗಿರಾಕೀನೂ ಕಳೆದುಕೊಳ್ಳಬೇಕಷ್ಟೆ. ಆದ್ದರಿಂದ ಆ ಬೋರ್ಡ್ ಹಾಕಿದ್ದೇವೆ, ಎಂದು ತಮ್ಮ ಮನಸಿನ ನೋವು ತೋಡಿಕೊಂಡರು.

ಅಡ್ರೆಸ್ ಕೇಳಿಕೊಂಡು ನಮ್ಮ ರಸ್ತೆಗೆ ಬಂದವರೊಂದಿಗೆ ನನ್ನ ಅನುಭವ. ನಮ್ಮ ಮನೆಯ ಮುಂಭಾಗದಲ್ಲಿ ಎರಡನೇ ಮಹಡಿಯವರೆಗೂ ಹೋಗಲು ಮೆಟ್ಟಿಲಿದೆ. ಅದರಂತೆಯೇ ಅಕ್ಕಪಕ್ಕದ ಮನೆಯೂ ಸೇರಿದಂತೆ ನಾಲ್ಕು ಮನೆಗಳೂ ಒಂದೇ ರೀತಿ ಇವೆ. ಬಂದವರಿಗೆ ಈಗಿನ ಭೇಟಿಯಲ್ಲಿ ಅನುಮಾನ. ಸಾರ್, ನೀವು ಈ ಮನೆ ಇತ್ತೀಚೆಗೆ ಕೊಂಡುಕೊಂಡಿರಾ, ಬಾಡಿಗೆಗೆ ಬಂದಿರುವುದಾ, ಎಂಬ ಪ್ರಶ್ನೆ ಎರಡು ದಶಕದಿಂದ ಇರುವ ನನ್ನನ್ನು ಚಕಿತಗೊಳಿಸಿತು. ಸರಿಯಾಗಿ ವಿವರ ತಿಳಿದ ಮೇಲೆ, ಹಿಂದೊಮ್ಮೆ ಬಂದಿದ್ದ ಅವರಿಗೆ ಬೇಕಾಗಿದ್ದು ನಮ್ಮ ಪಕ್ಕದ ಎರಡನೇ ಮನೆ. ಅನುಮಾನವಾಗದ ನಂಬಿಕೆ. ಸಾಲದೆಂದು ನಮ್ಮ ಏರಿಯಾ ಬಲು ಹಳೆಯದು. ಜೊತೆಗೆ ಪಾಲಿಕೆಯವರು ಕೊಟ್ಟಿರುವ ಮನೆ ನಂಬರ್ ಗಳು ಕ್ರಮಾನುಗತವಾಗಿಲ್ಲ. ಈ ನಂಬರ್ ಪಕ್ಕ ಇದೇ ನಂಬರಿನ ಮನೆ ಇಲ್ಲ. ಇಂತಹ ಹಲವು ತೊಂದರೆಗಳೂ ಹುಡುಕುವವರಿಗೆ ಚಿಂತೆಗೀಡು ಮಾಡುತ್ತಿದೆ. ಇವುಗಳು ಹುಡುಕಿ ಬಂದವರಿಗೆ ಆದ ಅನುಭವಗಳು. ಹಾಗೆಯೇ ನನಗೂ ಹುಡುಕುವಾಗ ಕೆಲವು ಅನುಭವಗಳಾಗಿವೆ.

ಬಂಧುಗಳೊಬ್ಬರು ನನಗೆ ಅಡ್ರಸ್ ಕೊಡುವಾಗ, ಬಸ್ಸಿನವನಿಗೆ ವಿನೋಬಾನಗರದ ಸ್ಟಾಪ್ ಎಂದು ಕೇಳಿ, ನಿಲ್ಲಿಸುವನು. ಇಳಿಯಿರಿ. ಇಳಿದವರೇ ಯಾರನ್ನೂ ಕೇಳಬೇಡಿ, ಸುಮ್ಮನೆ ಎಡಗಡೆ ಡೌನಿಗೆ ಬನ್ನಿ. ವಾಟರ್ ಟ್ಯಾಂಕ್ ಕಾಣಿಸುತ್ತದೆ. ಅದರ ಪಕ್ಕದ ಮನೆಯೇ ನಮ್ಮದು. ಕೇಳಲೇನೋ ಸುಲಭವಾಗಿತ್ತು. ಹೋದಾಗ ಹುಡುಕಿ ಹುಡುಕಿ ಸಾಕಾಯಿತು. ಮನೆ ಹೆಸರು ಶ್ರೀನಿವಾಸ ನಿಲಯ ಎಂದಿದ್ದರು. ಅಲ್ಲಿಯೇ ಹತ್ತಾರು ಶ್ರೀ ನಿವಾಸ, ಶ್ರೀನಿವಾಸ, ಶ್ರೀನಿವಾಸ ನಿಲಯ ಹೀಗೆ ಒಂದೇ ಅರ್ಥದ ಹಲವು ಹೆಸರಿನ ಮನೆಗಳು. ದೇವನೊಬ್ಬ ನಾಮ ಹಲವು ಎಂಬ ವಾಕ್ಯ ಮನಸ್ಸಿಗೆ ಬರುತ್ತಿತ್ತು. ಸಾಲದೆಂದು ನಮ್ಮದು ಅರವತ್ತಡಿ ರಸ್ತೆ ಎಂದಿದ್ದರು. ಯಾವ ರಸ್ತೆಯೂ ಅಷ್ಟು ಅಗಲ ಇರಲಿಲ್ಲ. ಅಂತೂ ಅವರಿವರನ್ನು ಕೇಳಿ ಹೇಗೋ ಆ ಮನೆ ತಲುಪಿದೆವು. ಆ ಮೇಲೆ ಗೊತ್ತಾಗಿದ್ದು ಆ ರಸ್ತೆ ಮುಂದೆ ಅಗಲವಾದಾಗ ಅರವತ್ತಡಿ ಆಗುವುದಂತೆ. ಸದ್ಯಕ್ಕೆ ಹೆಸರಿಗಷ್ಟೇ. ಇನ್ನೊಂದು ಅನುಭವದಲ್ಲಿ ಮಿತ್ರರೊಬ್ಬರು ಅಡ್ರೆಸ್ ಹೇಳುವಾಗ, ಸುಮ್ಮನೆ ಏಕೆ ಬರೆದುಕೊಳ್ಳುತ್ತೀರಿ, ಜಸ್ಟ್ ಸರಿಯಾಗಿ ಕೇಳಿಸಿಕೊಳ್ಳಿ ಎನ್ನುತ್ತಾ, ಬಸ್ ಸ್ಟಾಪ್ ಎದುರುಗಡೆ ಒಂದು ಡಿಪಾರ್ಟ್ಮೆಂಟಲ್ ಸ್ಟೋರ್, ಪಕ್ಕದ ಖದೀಮ್ ಚಪ್ಪಲಿ ಅಂಗಡಿಗೂ ಮೊದಲು ಎಡಕ್ಕೆ, ಮತ್ತೆ ಬಲಕ್ಕೆ, ಮತ್ತೆ ಎಡಕ್ಕೆ, ಆ ಮೇಲೆ ಬಲಕ್ಕೆ, ಇನ್ನೊಮ್ಮೆ ಎಡಕ್ಕೆ, ಬಂದೇ ಹೋಯ್ತು ನಮ್ಮ ಮನೆ. ಮೂರು ಎಡ, ನಾಲ್ಕು ಬಲ. ಆದರೆ ನಾನು ತಲುಪಿದಾಗ  ಮೊದಲ ಎಡಕ್ಕೆ ಯಾವುದೋ ಕೈಗಾಡಿ. ಸುತ್ತ ಜನರಿದ್ದು ದಾರಿ ಕಾಣಲಿಲ್ಲ. ಆ ಅಂಗಡಿಗೆ ಕೂಡಿದ ಮುಂದಿನ ಎಡಕ್ಕೆ ತಿರುಗಿದೆ. ಅಷ್ಟೇ. ಬಹಳ ಹೊತ್ತಿನವರೆಗೆ ವಿಳಾಸ ಹುಡುಕಲು ತಿರುಗುತ್ತಾ ಇದ್ದೆ. ಅಂತೂ ಕೇಳಿಕೊಂಡು ಹೋದೆ. ತಪ್ಪು ನನ್ನದು. ಸುಮ್ಮನಾದೆ.

ಒಮ್ಮೆ ಬಾದಾಮಿ ಬನಶಂಕರಿಯತ್ತ ಪ್ರವಾಸ ಹೋಗಿದ್ದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಪಟ್ಟದಕಲ್ಲು ಎಂಬಲ್ಲಿ ಜೋಡಿಸಿರುವ ಶಿಲ್ಪಗಳನ್ನು ನೋಡಿದಾಗ ಯಾರನ್ನಾದರೂ ಈ ಶಿಲ್ಪಕಲೆಗಳ ವಿವರ ಕೇಳಿ ತಿಳಿದರೆ ಒಳ್ಳೆಯದು ಎನಿಸಿತು. ಅಂಗಡಿ ಬಳಿ ಇರುವ ವ್ಯಕ್ತಿ ತಾನಾಗಿಯೇ ಮುಂದೆ ಬಂದು ವಿಚಾರಿಸಿದಾಗ ಸರಿ ಮೊದಲು ನಾಸ್ಟಾ ಮಾಡಿ, ಗೈಡ್ ಗೆ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾ ಪೂರಿ, ಇಡ್ಲಿ ಏನು ಬೇಕು ಎಂದಾಗ ನಮಗೋ ಗಾಬರಿ, ಆತಂಕ ಮತ್ತು ಸಂಕೋಚ ವಾಯಿತು. ಬರೀ ಒಂದೊಂದು ಚಹಾ ಸಾಕು ಎಂದೆ. ಸರಿ, ಒಂದು ಪ್ಲೇಟ್ ಇಡ್ಲಿ ಮತ್ತು ಪೂರಿ, ಮೂರು ಚಾ, ಎಂದು ಹೇಳಿ ಅಲ್ಲಿರುವ ಬೆಂಚಿನ ಮೇಲೆ ಕೂಡಿಸಿದ. ತಾನು ಮತ್ತೊಂದು ಬೆಂಚಿನಲ್ಲಿ ಎರಡೂ ಕಾಲೂ ಒಟ್ಟಿಗೇ ಹಿಂದೆ ಮುಂದೆ ಆಡಿಸುತ್ತ ನಮ್ಮ ತನಿಖೆ ಪ್ರಾರಂಭಿಸಿದ. ಅವನ ನಾಷ್ಟ ಮತ್ತು ನಮ್ಮ ಚಹಾ ಸೇವನೆ ಮುಗಿಯಿತು. ನಂತರ ಅವನೇ ಗೈಡು ಆಗಿ ಪಟ್ಟದಕಲ್ಲು, ಐಹೊಳೆ ತೋರಿಸಲು ನಮ್ಮ ಕಾರನ್ನೇರಿದ. ಅವನ ಸಂಕೋಚವಿಲ್ಲದ ನಡುವಳಿಕೆ, ನೇರಾ ನೇರಾ ವ್ಯವಹಾರ ನಮಗಂತೂ ಸಂಕೋಚವಾಗುತ್ತಿತ್ತು. ಅವನಿಂದ ನಮ್ಮ ಸ್ವಾತಂತ್ರ್ಯ ಹರಣವಾಗುತ್ತಿದ್ದರೂ ಮಾತನಾಡಲಾಗದು. ಅದೆಲ್ಲೋ ಒಂದು ಸ್ಥಳಕ್ಕೆ ಬಿಡಲು ಕೇಳಿದ. ಆವನ ಮಾರ್ಗದರ್ಶನ ಶುಲ್ಕವನ್ನು ಪಾವತಿಸಿ ಬಿಟ್ಟು ಬಂದೆವು.

ಕೆಲವು ಬಾರಿ ನಾವು ನೋಡಲು ಹೋದ ವ್ಯಕ್ತಿಯ ಪ್ರತಿಷ್ಠೆ, ಅವನು ಸಮಾಜದಲ್ಲಿ ಇಟ್ಟುಕೊಂಡ ಗೌರವದ ಮೇಲೆ ಅವಲಂಬಿತವಾಗಿರುತ್ತದೆ. ಹಾಗೂ ಅದರ ಮೇಲೆ ಹುಡುಕುವ ನಮ್ಮ ಸ್ಥಿತಿ ನಿರ್ಧಾರವಾಗುತ್ತದೆ. ಅವರ ಬಗ್ಗೆ ಇರುವ ಗೌರವದಿಂದ ಅವರ ವಿಳಾಸ ಹೇಳುವವನ ಧೋರಣೆ ಗೊತ್ತಾಗುತ್ತದೆ. ಓಹೋಹೋ, ಅವರಾ, ಬನ್ನಿ ಸಾರ್, ನನಗೆ ಚೆನ್ನಾಗಿ ಗೊತ್ತು, ನಾನೇ ಕರೆದುಕೊಂಡು ಹೋಗುತ್ತೇನೆ ಎಂದು ಕೆಲವು ಸಾರಿ ಹೇಳುವರು. ಕೆಲವೊಮ್ಮೆ ಅವರಾಆ, ನೀವೇನು ಆಗಬೇಕು ಅವರಿಗೆ, ಸರಿ ಸರಿ. ನಿಮಗೇನಾದರೂ ಕೊಡುವುದಿದೆಯೋ? ಇಲ್ಲ ಎಂದಾಗ ಹೇಳ್ರೀ ಎಲ್ಲಾ ಗೊತ್ತು, ದಿನಕ್ಕೆ ನೂರು ಜನ ಹೀಗೆ ಬರೋದು ಎಂದು ಅವರ ಮರ್ಯಾದೆ ತೆಗೆಯುವರು. ನಾವೇನಾದರೂ ಅವರ ಬಗ್ಗೆ ಸದಭಿಪ್ರಾಯ ಕೊಟ್ಟರೆ ಸರಿ ಬಿಡಿ, ಇಬ್ಬರೂ ಸರೀ ಇದ್ದೀರಿ ಎನ್ನುವುದೂ ಕೇಳಿ ಅನುಭವ ವಾಗಿದೆ. ಅವರಿಗೆ ಸ್ವಲ್ಪ ಸರಿಯಾಗಿ ವ್ಯವಹಾರ ಮಾಡಿ ಕೊಂಡು ಇರಲು ಹೇಳಿ. ನಾವು ಹೇಳಿದೆವೆಂದು ಹೇಳಬೇಡಿ. ನೀವೇ ಹೇಳಿ, ನಿಮ್ಮನ್ನು ನೋಡಿದರೆ ಅವರು ನಿಮ್ಮ ಮಾತು ಕೇಳುತ್ತಾರೆ ಎನಿಸುತ್ತದೆ ಎಂದರು. ಅದೇನು, ಸಲಹೆಯೋ, ಕಿವಿಮಾತೋ ಅಥವಾ ಬೇಡಿಕೆಯೋ ತಿಳಿಯಲಿಲ್ಲ. ಅದೇನು ವಿಶೇಷತೆಯನ್ನು ನನ್ನಲ್ಲಿ ಗುರುತಿಸಿದರೋ ತಿಳಿಯದು.

ಹಲವು ವರ್ಷಗಳ ಹಿಂದೆ, ಗೂಗಲ್, ಮೊಬೈಲ್ ಇಲ್ಲದ ಕಾಲ. ದೂರದ ಸ್ಥಳವನ್ನು ತಲುಪುವ ವೇಳೆಗೆ ಸಂಜೆ ನಾಲ್ಕು ಗಂಟೆಯಾಗಿತ್ತು. ಗೆಳೆಯರೊಬ್ಬರ ಮನೆಗೆ ಅನಿವಾರ್ಯವಾಗಿ ಹೋಗಬೇಕಿತ್ತು. ಅದೋ ಹೊಸ ಊರು. ವಿಳಾಸ ಹಿಡಿದು ಹುಡುಕುತ್ತಿದ್ದೆ. ನಾನು ನಿಂತು ಸ್ಥಳ ಕವಲು ದಾರಿ. ಎಡಕ್ಕೆ ಎ ಬಡಾವಣೆ ಬಲಕ್ಕೆ ಬಿ ಬಡಾವಣೆ. ಮುಂದೆ ಒಂದು ಪಾರ್ಕ. ಹಾದಿಯಲ್ಲಿ ಸಿಕ್ಕ ಹಲವರ ಬಳಿ ವಿಳಾಸ ಕೇಳಿ ಕೇಳಿ ಸಾಕಾಗಿದೆ. ಈವರೆಗೂ ಬಂದಿರುವ ೧೪ನೇ ಅಡ್ಡರಸ್ತೆಗೆ ಇಲ್ಲಿರುವ ಬೋರ್ಡ್ ದಿಡೀರ್ ಆಗಿ ೩ನೇ ಮುಖ್ಯ ರಸ್ತೆ ಎಂದು ಢಾಳಾಗಿ ಕಾಣಿಸುತ್ತಿದೆ. ನನ್ನ ಕೈನಲ್ಲಿ ಇರುವ ವಿಳಾಸದ ಬಡಾವಣೆಯಲ್ಲಿ ಈ ರಸ್ತೆ ಇಲ್ಲವೇ ಇಲ್ಲ. ಇನ್ನು ಪಕ್ಕದ ಬಡಾವಣೆಯಲ್ಲಿ ರಸ್ತೆ ಏನೋ ಇದೆ, ಆದರೆ ನಂಬರ್ ೧೨ ಬೇಕು. ಆದರೆ ನಂಬರ್ ೩೩೧೩ ಕಾಣುತ್ತಿದೆ. ಎಲ್ಲಾ ಅಯೋಮಯ ಎನಿಸುತ್ತಿದೆ. ಏನು? ಏನಾದರೂ ವಿಚಾರಿಸೋಣ ಎಂದರೆ ಯಾರೂ ಬೀದಿಯಲ್ಲಿ ಕಾಣಿಸುತ್ತಿಲ್ಲ. ಸಂಜೆ ಐದರಿಂದ ಹುಡುಕುತ್ತಿದ್ದೇನೆ. ಸಾಲದೆಂದು ನನ್ನ ಜೊತೆ ಯಾರೂ ಇಲ್ಲ. ಆದ್ದರಿಂದ ಉಚಿತ ಸಲಹೆ ಅಥವಾ ಬೇರೆ ಆಯ್ಕೆ ಕೊಡಲು ಯಾರೂ ಇಲ್ಲ. ದೂರದಲ್ಲಿ ಕಾಣುವ ದೊಡ್ಡ ಮನೆ. ಸಮಯ ಸಂಜೆ ೬.೩೦. ಮನೆಯೆಲ್ಲಾ ದೈದೀಪ್ಯಮಾನವಾಗಿ ಕಾಣುತ್ತಿದೆ. ಎತ್ತರದ ಗೋಡೆ. ಹತ್ತಿರ ಹೋಗಿ ಗೇಟ್ ಬಳಿ ಬಗ್ಗಿ ನೋಡಿದೆ.ಮನೆಯೇನೂ ನನಗೆ ಸರಿಯಾಗಿ ಕಾಣದಿದ್ದರೂ ಅದ್ಯಾವುದೋ ಮೂಲೆಯಲ್ಲಿದ್ದ ನಾಯಿಗೆ ನಾನು ಕಂಡುಬಿಟ್ಟೆ. ಅದೆಷ್ಟು ಹೊತ್ತಿನಿಂದ ಕೂಗದೇ ಮಲಗಿತ್ತೋ, ಗಂಟಲಿನಲ್ಲಿದ್ದ ಕೂಗಿನ ಎಲ್ಲಾ ಸ್ಟಾಕನ್ನೂ ನನಗೊಬ್ಬನಿಗೇ ಡಿಲಿವರಿ ಮಾಡೋದಕ್ಕೆ ಶುರು ಮಾಡೋದಾ. ಅಂತೂ ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು. ಯಾರೋ ಇಪ್ಪತ್ತರ ಹುಡುಗ ಅಸಹನೆಯೊಂದಿಗೆ ಬಾಗಿಲಿನ ಹೊರಬಂದು ಕೆಕ್ಕರಿಸಿ ನೋಡಿದ. ಆ ಕಣ್ಣಿನ ಪ್ರಶ್ನೆಗೆ ಮನೆ ವಿಳಾಸದ ಪ್ರಶ್ನೆ ಬಿಟ್ಟೆ. ಅದೃಷ್ಟಕ್ಕೆ, ಹುಡುಗ ಹೇಳಿದ, ಎಲ್ಲರೂ ಅದೇ ಹಳೇ ನಂಬರ್ ಹಿಡಿದು ಬರ್ತೀರಿ. ಸರಿ, ಅದು ನಮ್ಮ ಮನೆಯ ಹಿಂದಿನ ಮನೆ. ಪಕ್ಕದ ಬೀದಿಯ ಮೂಲಕ ಹಿಂದಿನ ಮನೆಗೆ ಬನ್ನಿ. ನಿಮ್ಮ ಬಳಿ ಇರುವುದು ಹಳೇ ವಿಳಾಸ ಎಂದನು. ಅಂತೂ ಆ ಮನೆ ಸೇರುವ ವೇಳೆಗೆ ಸಾಕಾಗಿತ್ತು. ಅವರ ಮನೆಯನ್ನು ಹುಡುಕಲು ಆದ ಅನುಭವ, ಇಷ್ಟು ವರ್ಷಗಳ ನಂತರವೂ ಎಂಥಾ ಕತ್ತಲಲ್ಲೂ ಇಂದಿನ ಗೂಗಲ್ ಗಿಂತ ಸುಲಭವಾಗಿ ಹುಡುಕಬಲ್ಲೆ ಎಂದೆನಿಸುತ್ತದೆ.

ಇನ್ನೊಂದು ಹುಡುಕುವ ಅನುಭವ ದಲ್ಲಿ ವಿಳಾಸದ ಮನೆ ಸಿಗುತ್ತಿಲ್ಲ ಬರೆದು ಕೊಟ್ಟ ವಿಳಾಸ. ಹೊಸದಾಗಿ ವಿಸ್ತಾರ ಸಾಗುತ್ತಿರುವ ಬಡಾವಣೆ, ಹೆಸರು ವಿನುತಾ ಲೇಔಟ್. ಆದರೆ ಅಡ್ರೆಸ್ ಕೇಳಲೆಂದು ಆಯ್ಕೆ ಮಾಡಿದಾಗ ಸಿಕ್ಕ ಮನುಷ್ಯ ಇಲ್ಲಿಗ್ಯಾಕ್ ಬಂದ್ರಿ. ಇಲ್ಲಿ ಬರಲೇ ಬಾರದಿತ್ತು ಎಂದು ಊರಿಗೆಲ್ಲಾ ಕೇಳುವಂತೆ ಆಕ್ಷೇಪಿಸುತ್ತಿದ್ದಾರೆ. ಎರಡು ಲೇಔಟ್ ಸೇರೋ ಜಾಗ. ಏಕೋ ರಸ್ತೆಯ ಈ ಪಕ್ಕದಲ್ಲಿರುವವರನ್ನು ಕೇಳಿ ಅದೇ ತಪ್ಪಾಗಿದ್ದು. ಅಕಸ್ಮಾತ್ ಇಲ್ಲಿಗೆ ಬಂದು ಇಂಥಾ ಪೆದ್ದು ಕೆಲಸ ಮಾಡಿಕೊಂಡಿರುವ ನನ್ನ ಮುಖ ಯಾರೂ ನೋಡಬಾರದೆಂದು ನನ್ನ ಯೋಚನೆ, ಆದ್ದರಿಂದ ನಿಧಾನವಾಗಿ ಮಾತನಾಡುತ್ತಿದ್ದೆ, ಆದರೆ ಅವರ ಕಂಚಿನ ಕಂಠ ಗಲ್ಲಿಯಲ್ಲಿರುವ ಎಲ್ಲರೂ ಹೊರಬಂದು ನನ್ನನ್ನು ನೋಡುವಂತಾಯಿತು. ಅಂತೂ ಅವರಿಂದ ತಪ್ಪಿಸಿಕೊಂಡು ಬಂದು ಅನುಮಾನದ ಮೇಲೆ ಮುಖ್ಯ ರಸ್ತೆಯ ಎಡಭಾಗದಲ್ಲಿ ಕಂಡ ವಿಧಾತ ಬಡಾವಣೆಯ ಸೂಚನಾ ಫಲಕ ಸಂತೋಷ ತಂದಿತ್ತು. ದೂರ ದೂರ ಮನೆಗಳಿದ್ದರೂ ಹುಡುಕಲು ಅಂಥಾ ಕಷ್ಟವಾಗಲಿಲ್ಲ. ಮನೆ ಸಿಕ್ಕಿತು. ನಿಟ್ಟುಸಿರು ಬಿಟ್ಟು ಆ ಬಂಧುಗಳ ಮನೆ ಸೇರಿದೆ.

೪೫ ವರ್ಷದ ಹಿಂದೆ. ಆಗಿನ್ನೂ ಹೊಸದಾಗಿ ನಿರ್ಮಾಣವಾದ ವಿಜಯನಗರದಲ್ಲಿ ಒಬ್ಬ ಮಿತ್ರರ ಮನೆಯ ವಿಳಾಸ ಬೇಕಾಗಿತ್ತು. ಅಡ್ರಸ್ ಹೇಳಲು ಸಿಕ್ಕವರು ನಾನು ಹೇಳಿದ ಹೆಸರು ನೋಡಿ, ಯಾವಾಗ ಕೊಟ್ಟ ವಿಳಾಸಾರಿ. ಇದು, ಈಗ ಅವರು ಇಲ್ಲವೇ ಇಲ್ಲ, ಸತ್ತೋಗಿ ಎಷ್ಟು ವರ್ಷ ಆಯ್ತು. ಅವರ ಮಕ್ಕಳಿದ್ದಾರೆ ನೋಡಿ, ಎಂದರು. ನಿನ್ನೆ ಸಂಜೆ ಫೋನ್ ಮಾಡಿದ್ದರು ಎಂದು ಹೇಳಿದರೂ ಒಪ್ಪಲಿಲ್ಲ. ಸಾಲದೆಂದು ಮಾತನಾಡಿದ ನಾನು ಜೀವಂತದಿಂದ ಇರುವವನೇ ಎಂಬ ಅನುಮಾನದಿಂದ ದೃಷ್ಟಿಯಿಂದ ಅಪಾದ ಮಸ್ತಕ ನೋಡಿದರು. ಇವರ ಸಹವಾಸ ಬೇಡವೆಂದು ಹೊಸದಾಗಿ ಬಂದ ಇನ್ನೊಬ್ಬರನ್ನು ಕೇಳಿದೆ. ಅವರು, ಈ ವಿಳಾಸವೆಲ್ಲಾ ಪ್ರಯೋಜನವಿಲ್ಲ, ಹೇಗಿದ್ದಾರೆ ಹೇಳಿ ಎಂದು ಮಾಹಿತಿ ಕೇಳಿ ಪಡೆದರು. ನನಗೆ ಬೇಕಾದ ವ್ಯಕ್ತಿ ವಿವರ ಕೇಳಿ ಬಹುಶಃ ಆ ಪಾರ್ಕಿನ ಎಡದಲ್ಲಿ ಮುಂದೆ ಜಾಗ ಬಿಟ್ಟು ಹಿಂದೆ ಕಟ್ಟಿರುವ ಒಂದು ಮನೆ. ಅಲ್ಲಿ ನೀವು ಹೇಳುವ ತರಹದವರು ಇದ್ದಾರೆ ಒಂದು ಪ್ರಯತ್ನ ಮಾಡಿ ಎಂದರು. ಅವರ ಬಳಿ ವಿಳಾಸ ಕೇಳಿದ್ದು ಮೊದಲಿನವರಿಗೆ ಹಿಡಿಸಲಿಲ್ಲ. ಆದರೂ ಎರಡನೆಯವರ ಮಾತಿನಂತೆ ಮುಂದುವರಿದಾಗ ಅವರು ಹೇಳಿದಂತೆ ನಾನು ಹೇಳಿದ ಆ ಲಕ್ಷಣದವರು ಇದ್ದರೂ ನನಗೆ ಬೇಕಾದವರಾಗಿರಲಿಲ್ಲ. ವಾಪಸು ಬಂದು ಅದೇ ಜಾಗವನ್ನು ದಾಟಿದೆ. ಮೊದಲು ಸಿಕ್ಕ ಮೊದಲ ವ್ಯಕ್ತಿಯ ಪ್ರಶ್ನಾರ್ಥಕ ನೋಟ ತಪ್ಪಿಸಿಕೊಳ್ಳಲಾಗಲಿಲ್ಲ. ಇರುವ ವಿಷಯ ಹೇಳಿದಾಗ, ಹೇಳಲಿಲ್ಲವಾ, ನನ್ನ ಕೇಳ್ರೀ, ನಾನು ಲಾಗಾಯ್ತಿನಿಂದಲೂ ಇದ್ದೇನೆ, ಯಾರು ಇದ್ದಾರೆ, ಯಾರು ಇಲ್ಲ ಎಲ್ಲಾ ನನಗೊತ್ತು. ನೀವೊಂದು ಎಂದರು. ಬೇರೆ ಏನೂ ಕೆಲಸ ಇಲ್ಲದಿದ್ದರೆ ಹೀಗೆ ಹುಡುಕಬೇಕು. ಇಲ್ಲಾದ ಮೇಲೆ ಆ ಕಡೆಯೂ ಮನೆಗಳಿವೆ, ಬೇಕಾದರೆ ಅಲ್ಲೂ ಹುಡುಕಿ ಎಂದಾಗ ಸುಮ್ಮನಿದ್ದೆ. ಎಷ್ಟೋ ವರ್ಷಗಳಿಂದ ಅಲ್ಲೇ ಇರುವುದು ಎಂದಿದ್ದಾರೆ. ಸುಮ್ಮನೆ ರಗಳೆ ಏಕೆ, ಎಂಬ ಅವ್ಯಕ್ತ ಭಯದಿಂದ ಬುರುಡೆ ಆಡಿಸಿಕೊಳ್ಳುತ್ತಾ ಮುಗುಳ್ನಕ್ಕು ತಪ್ಪಿಸಿಕೊಂಡೆ. ಹಾಗಾದರೆ ನಾನು ನಿನ್ನೆ ಮಾತಾಡಿದ್ದೇ ಸುಳ್ಳಾ ಎಂದು ಯೋಚಿಸುವಂತೆ ಆಗುತ್ತಿತ್ತು. ಅಂತೂ ಅವರಿಗೆ ಕಾಣದಂತೆ ಹುಷಾರಾಗಿ ಅದೇ ಏರಿಯಾದಾಗೆ‌ ಬೇಕಾದ ವಿಳಾಸದ ಮನೆ ಹುಡುಕುತ್ತಾ ಇದ್ದೆ. ಈಗ ನನ್ನ ಸ್ಥಿತಿ, ಇವರು ಸಿಗಬಾರದು, ಆದರೆ ಅವರು ಸಿಗಬೇಕು ಎಂದು ಯೋಚಿಸುತ್ತಾ ಇರುವಾಗ ಮತ್ತೊಬ್ಬ ಮಹಾಶಯರು ಸಿಕ್ಕರು. ಇವರಾ ನನಗೊತ್ತು, ಅವರೆಲ್ಲಿ ಇಷ್ಟು ಹೊತ್ತಿಗೆ ಇರ್ತಾರೆ. ಅವರ ಮನೇಗೆ ಯಾರಾದರೂ ಬರೋದು ಎಂದರೆ ಸಂಜೆ ಆರು ಆಗಬೇಕು, ಎಂದರು. ಅಂತೂ ನನಗೆ ಬೇಕಾದ ಮನುಷ್ಯ ಜೀವಂತ ಇದ್ದಾನೆ ಎಂದಾಯಿತು. ಹಾಗೇ ಮುಂದುವರಿದು ಹೋಗುವಾಗ, ಬೇರೊಬ್ಬರು ಅವರಾಗಿಯೇ ನನ್ನನ್ನು ಮಾತನಾಡಿಸಿದರು. ಅವರಿಗೆ ನಾನು ಬಾಯಿ ಮಾತಿನಲ್ಲಿ ಕೇಳುವುದು ನಂಬಿಕೆ ಇಲ್ಲ. ಬರೆದಿರೋ ವಿಳಾಸ ಕೊಡಿ ಎಂದು ಒತ್ತಾಯಿಸಿ ಪಡೆದು ಓದಿದರು. ಈ ಹೆಸರಿನವರು ಇಡೀ ಏರಿಯಾದಲ್ಲಿ ಇಲ್ಲ, ಸುಮ್ಮನೆ ಹುಡುಕಬೇಡಿ ಎಂದು ‌ಸಲಹೆ ಕೊಟ್ಟರು. ಆದರೂ ಸಂಜೆ ಆರಕ್ಕಾದರೂ ಮನೆ ಸೇರುವವರ ಮನೆಯತ್ತ ಹೋದೆ. ನಾನು ಅಷ್ಟೊತ್ತಾದರೂ ಬಂದಿಲ್ಲವೆಂದು ಹುಡುಕುತ್ತಾ ಬಂದ ಮಿತ್ರ, ಅಷ್ಟು ಸರಿಯಾಗಿ ಇಲ್ಲಿನ ಅಡ್ರೆಸ್ ಹೇಳೋದು ಕಷ್ಟ. ಹುಡುಕೋದು ಕಷ್ಟ. ಆದರೂ ಹುಡುಕಿ ಕೊಂಡು ಬಂದೆಯಲ್ಲಾ ಮಹಾರಾಯ ಎಂದು ಶಹಬ್ಬಾಸ್ ಗಿರಿ ಕೊಟ್ಟ. ನನ್ನ ಅನುಭವ ಹೇಳಿ ಆ ಮುನ್ನ ಅವನು ನೀಡಿದ ಪಟ್ಟವನ್ನು ಕಳೆದುಕೊಳ್ಳುವ ಇಷ್ಟವಿರಲಿಲ್ಲ. ಸುಮ್ಮನೆ ಪೆದ್ದುಪೆದ್ದಾಗಿ ನಕ್ಕು ಸುಮ್ಮನಾದೆ. ಹಾಗೇ ಅವರ ಜೊತೆ ಅವರ ಮನೆಗೆ ಬೇಕಾದ ವಸ್ತು ತರಲು ಅಂಗಡಿಗೆ ಬಂದೆವು. ಮತ್ತೆ ಸಿಕ್ಕ ಮೊದಲನೆಯವರು, ಇವರೇನ್ರಿ ನೀವು ಕೇಳಿದ್ದು, ಸರಿಯಾಗಿ ಕೇಳೋಕು ಗೊತ್ತಾಗಲ್ವಾ. ಇವರು ಚೆನ್ನಾಗಿಯೇ ಗೊತ್ತು, ಇವರು ಎಷ್ಟು ವರ್ಷಗಳಿಂದ ಇದ್ದಾರೆ ಎಂದು ಅವನಿಗೊಂದು ಲೈಫ್ ಸರ್ಟಿಫಿಕೇಟ್ ಕೊಟ್ಟರು.

ಇನ್ನೊಮ್ಮೆ ಚಿತ್ರದುರ್ಗದಲ್ಲಿ ಮನೆ ಹುಡುಕುತ್ತಿದ್ದೆ. ಅಡ್ರಸ್ ಸುಲಭವಾಗಿ ಇದ್ದರೂ ಸ್ವಲ್ಪ ಅನುಮಾನದಿಂದ ಯಾವುದೋ ಮನೆ ನೋಡಿದಾಗ ಅಲ್ಲೇ ಇದ್ದ ಮುದುಕರು, ನೀವ್ಯಾರು, ಎಲ್ಲಿಂದ ಬಂದಿರಿ, ನಿಮಗೇನು ಅವರು ಸಂಬಂಧ, ಈಗ ಬಂದಿದ್ದೇಕೆ? ಬೆಂಗಳೂರಿನಿಂದ ಬಂದೇ ಎಂದಿರಿ, ಅವರಿಗೆ ಅಲ್ಲಿ ಯಾರೂ ಸಂಬಂಧಿಕರ್ಯಾರೂ ಇಲ್ಲವಲ್ಲ ಎಂದಾಗ, ನಿಷ್ಠುರವಾಗಿ ಸುಮ್ಮನೆ ಹೋಗಿ ಎನ್ನಲು ಮನಸುಬಾರದೆ ಅವರಿಗೆ ತಾಳ್ಮೆಯಿಂದ ಹೇಳಿ ಒಪ್ಪಿಸಿ ಮನೆ ಸೇರುವುದೇ ಕಷ್ಟವಾಯಿತು. ಆದರೂ ನಾನು ಕಳ್ಳನೋ ಎಂಬ ಅವರ ಅನುಮಾನಾಸ್ಪದ ನೋಟ ತಪ್ಪಿಸಿಕೊಳ್ಳಲು ಸಾಕಾಯಿತು. ಮುಂದಿನ ಭೇಟಿಯಲ್ಲಿ ಪುನಃ ಅವರ ದರ್ಶನವೇ ಮೊದಲಾಯಿತು. ಹದಿನೈದು ದಿನ ಆಗಿಲ್ಲ, ಮತ್ತೆ ಬಂದಿರಿ, ಕೆಲಸದಿಂದ ಬಂದಿರಬಹುದು ನೋಡಿ ಎಂದಾಗ, ಆ ಮಾತು ಕೇಳಿ ಏನೋ ಮೈಯೆಲ್ಲಾ ಉರಿಯಿತು.

ಇಂತಹ ಹತ್ತಾರು ಅನುಭವಗಳು ಎಲ್ಲರಿಗೂ ಆಗಿಯೇ ಇರುತ್ತದೆ. ಯಾವ ಮಾಹಿತಿ ಕೊಟ್ಟರೂ ಅವರು ಗುರುಗಳೇ. ಅವರಿಂದ ನಾವು ತಿಳಿಯುವೆವು, ಕಲಿಯುವೆವು. ಸಾಲದೆಂದು ವಿಶೇಷ ಅಂದರೆ, ಅದು ಯಾವುದೇ ರಾಜ್ಯವಿರಬಹುದು, ಯಾವುದೇ ಭಾಷೆ ಇರಬಹುದು, ಯಾರನ್ನಾದರೂ ವಿಳಾಸ ಕೇಳಿ, ವಿಳಾಸ ಹೇಳುವವರ ಮೊದಲ ಮಾತು "ನೀವು ಒಂದು ಕೆಲಸ ಮಾಡಿ" ಎಂದೇ ಪ್ರಾರಂಭಿಸುವುದು. ಅಂದರೆ ನಾನು ಏನು ಹೇಳಿದರೂ ಆ ಒಂದು ಕೆಲಸ ಮಾಡುವ ಅಥವಾ ಗುರಿ ಮುಟ್ಟುವ ಹೊಣೆ ನಿನ್ನದೇ ಎಂದು ಅರ್ಥ ಮಾಡಿಕೊಳ್ಳಬೇಕು. ಸಿಕ್ಕಿರುವ ಅಥವಾ ಸಿಗುವ ಗುರು ಸರಿಯಾದ ಮಾರ್ಗದರ್ಶಕನಾಗಿರಬಹುದು ಅಥವಾ ಅಲ್ಲದಿರಲೂ ಬಹುದು, ನಿನ್ನ ಗುರಿ ಸಾಧನೆಗೆ ನೀನೇ ಹೊಣೆ ಎಂದು ಭಾವಿಸಿದಾಗ ಎಂಥಾ ದೊಡ್ಡ ಮಾತು ಎನಿಸುವುದು. 

ಇಂತಹ  ಅನುಭವಗಳು ಕೇವಲ ನನ್ನೊಬ್ಬನದೇನಲ್ಲ. ತಮಗೂ  ಇಂತಹಾ ಹಲವು ಅನುಭವಗಳು ಆಗಿಯೇ ಇರುತ್ತದೆ. ಯಾವುದೇ ವಿಳಾಸವಿರಲಿ, ಮಾಹಿತಿ ಕೊಟ್ಟವರೆಲ್ಲರೂ ಒಂದು ರೀತಿಯಲ್ಲಿ ಗುರುಗಳೇ. ಅವರಿಂದ ನಾವು ತಿಳಿಯುವೆವು, ಕಲಿಯುವೆವು.  ವಿಶೇಷವೆಂದರೆ, ಅದು ಜಗತ್ತಿನ ಯಾವುದೇ ಪ್ರದೇಶವಿರಬಹುದು,  ವಿಳಾಸ ಹೇಳುವವರ ಮೊದಲ ಮಾತು "ನೀವು ಒಂದು ಕೆಲಸ ಮಾಡಿ" ಎಂದೇ ಪ್ರಾರಂಭಿಸುವುದು. ಅಂದರೆ ನಾನು ಏನು ಹೇಳಿದರೂ ಆ ಒಂದು ಕೆಲಸ ಮಾಡುವ ಅಥವಾ ಗುರಿ ಮುಟ್ಟುವ ಹೊಣೆ ನಿನ್ನದೇ ಎಂದು ಅರ್ಥೈಸಬಹುದು. ಈ  ಮಹತ್ವದ ವಾಕ್ಯವನ್ನು ನಮ್ಮ ಜೀವನಕ್ಕೆ ಅನ್ವಯಿಸಿ ಕೊಂಡಾಗ. ಇಹಪರಗಳಲ್ಲಿ ಕಷ್ಟವು ಬಾರದಿರಲಿ, ಕೇವಲ ಸುಖವಿರಲಿ ಎಂಬುದು ನಮ್ಮೆಲ್ಲರ ಸಹಜ ಆಸೆ. ಅದಕ್ಕಾಗಿ  ಕಾಣದ ದೇವರ ವಿಳಾಸವನ್ನು ಅರಸುತ್ತಾ ನಮ್ಮ ಮನಸ್ಸು ಎಲ್ಲೆಲ್ಲಿಯೋ ಅಲೆಯುತ್ತದೆ. ಆ ಬದಲು ನಮ್ಮೊಡನೆ ಒಂದಲ್ಲ ಹಲವಾರು ರೀತಿಯಲ್ಲಿ ಗುರುಗಳೇ ಆಗಿರುವ ಎಲ್ಲಾ ಬಂಧು ಮಿತ್ರರೊಂದಿಗೆ, ನಮ್ಮ ಅಹಂಕಾರ ಮತ್ತು ಹಳೆಯ ವಿಷಯಗಳನ್ನು ಪೂರ್ಣ ಮರೆತು, ಪ್ರೀತಿ ಸ್ನೇಹಗಳಿಂದ ವ್ಯವಹರಿಸಿದಲ್ಲಿ ದೇವರ ವಿಳಾಸ ಎಂದರೆ ಸುಖ ನೆಮ್ಮದಿಗಳು  ಸಿಕ್ಕಂತೆಯೇ ಎಂದು ನನ್ನ ಅನಿಸಿಕೆ. ನಮ್ಮ ಹಲವು ವಿಫಲತೆಗೆ ಅವರಿವರನ್ನು  ದೂಷಿಸುತ್ತಾ ಕಾಲಹರಣ ಮಾಡುವುದರ ಬದಲು ಜೀವನದ ಗುರಿಯನ್ನು ಸರಿಯಾಗಿ ನಿರ್ಧರಿಸಿ ಅದರ ಸಾಧನೆಗೆ, ಎಂತಹ ಗುರುಗಳು ದೊರೆತರೂ ಅವರಿಂದ ಜ್ಞಾನವನ್ನು ಪಡೆಯೋಣ, ಸ್ವಂತ ವಿವೇಚನೆಯಿಂದ ಗುರಿಯನ್ನು ತಲುಪೋಣ ಎಂಬ ವಿಚಾರ ಸರಿ ಅಲ್ಲವೇ.

Comments

  1. ಹುಡುಕುವಿಕೆ ಬರಿ ಪದವಲ್ಲ ಅದು ಒಂದು ದಟ್ಟ ವಾದ ವಿಜ್ಞಾನ ಕ್ಷೇತ್ರ. ನನಗೆ ಅರಿತದದ್ದು ಅದೇ. ನಿಮ್ಮ ಬರವಣಿಗೆಯಲ್ಲಿ ಹುಡುಕು ಅನ್ನೋ ಪದದ ಇನ್ನೊಂದು ಮುಖ ವಿಲೋಚಿಸಿದ್ದಿರ. ಚೆನ್ನಾಗಿದೆ :)

    ReplyDelete
  2. ಹುಡುಕು ಎಂಬ ಪದದ ಹಿಂಗೇ
    ಹಿಂದೆ ಇಷ್ಟೊಂದು ಅರ್ಥ ಗರ್ಭಿತವಾದ ವರ್ಣನೆ ದಹುಸ್ಯಾಹಾ ಇನ್ನೆಲ್ಲೂ ದೊರಕದು

    ReplyDelete
  3. ಆತ್ಮೀಯ   ಸೋದರ   ರಾಮಚಂದ್ರ,   ಎಂದಿನಂತೆ   ಈ   ಲೇಖನದಲ್ಲಿಯೂ   ಹುಡುಕುವ    ದಾರಿ   ಪತ್ತೆ   ಮಾಡುವಲ್ಲಿ  ಎದುರಾಗುವ    ಸಂಕಷ್ಟಗಳ   ಅನುಭವಗಳ   ಸರಮಾಲೆಯನ್ನು   ಬಿಡಿಸಿಟ್ಟಿರುವೆ.  ಮನೆಯ   ಒಂದು   ಮೂಲೆಯಲ್ಲಿ  ಕುಳಿತು   ಕ್ಯಾಬ್/ಆಟೋ   ಬುಕ್   ಮಾಡಿದರೆ  ಅಪಾರ್ಟ್ಮೆಂಟಿನ   ಒಂದುಕಡೆ  ರಸ್ತೆಗೆ  ಬಂದರೆ,   ಇನ್ನೊಂದು  ಮೂಲೆಯಲ್ಲಿ   ಕುಳಿತು   ಬುಕ್    ಮಾಡಿದರೆ    ಇನ್ನೊಂದು   ಕಡೆಯ  ರಸ್ತೆಗೆ   ಬರುತ್ತದೆ. ಇದೊಂದು    ಉತ್ತರವಿಲ್ಲದ    ಸಮಸ್ಯೆ.     ನಿನ್ನಣ್ಣ    ಹಿರಿಯಣ್ಣ   K P 

    ReplyDelete
  4. ಈ ಲೇಖನ ನನ್ನ ಜೀವನದಲ್ಲಿ ನಡೆದು ಬಂದ ದಾರಿಯನ್ನು ಒಮ್ಮೆ ಅವಲೋಕಿಸಿತು.ಕಾಣದ ಹಾದಿ, ಮಸಕು ಮಸುಕಾದ ಗುರಿ.ಅರಿವಿಲ್ಲದ ಗುರಿ ಸಾಧಿಸುವ ಮಾರ್ಗ.ಈ ಸನ್ನಿವೇಶಗಳಲ್ಲಿ ಹುಡುಕಲು ಸಹಾಯಕವಾಗುವ ಮಾರ್ಗದರ್ಶಕರು ದೊರೆಯುವುದೇ ಅದೃಷ್ಟ.ಅಂತಹಾ ಅದೃಷ್ಟಶಾಲಿ ಗಳಲ್ಲಿ ನಾನೂ ಒಬ್ಬ ಎನ್ನಲು ಹೆಮ್ಮೆಯಾಗುತ್ತದೆ. ಲೇಖನ ತುಂಬಾ ಚೆನ್ನಾಗಿದೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...