Skip to main content

ವಾಸಣ್ಣನ ವಾನಪ್ರಸ್ಥ

ಜೀವನ ನಿರ್ವಹಣೆ ಎಂದರೆ ಯೋಜನೆ, ಯೋಚನೆ, ತೀರ್ಮಾನ ಹಾಗೂ ಆಚರಣೆಗಳ ಮಿಲನ. ಇವುಗಳಲ್ಲಿ ಯಾವುದು ಏರುಪೇರಾದರೂ ಜೀವನ ರೀತಿಯೇ ಬದಲಾಗುವುದು. ಆದರೆ ಮುಂದೆ ಬದುಕುವ ದಿನಗಳು ಹೆಚ್ಚು ಇದ್ದರೆ ಜೀವನದಲ್ಲಿ ಯೋಜನೆಯ ಮಾರ್ಗ ಬದಲಿಸಿ ಯಶಸ್ವಿಯಾಗಬಹುದೇನೋ. ಅದೇ ಕಡಿಮೆ ಇದ್ದರೆ? ಅಂದು ಕೊಂಡಂತೆ ನಡೆಯದೆ, ನಡೆಯುವುದಕ್ಕೆ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆ ಏರ್ಪಡುತ್ತದೆ. ಆಗುವ ನಿರಾಸೆಗಳಿಗೆ ಹತಾಶೆ ಮೌನಗಳೇ ಉತ್ತರವಾಗುತ್ತದೆ. ಇದಕ್ಕೊಂದು ನಿದರ್ಶನ ಈ ವಸುಧಾ ವಾಸಣ್ಣನವರ ವಾನಪ್ರಸ್ಥ ಕಥನ.
ವಸೂ, ನಿದ್ದೆ ಬರಲಿಲ್ಲವಾ, ಸುಮ್ಮನೆ ಏಕೆ ಹೊರಳಾಡುತ್ತಿದ್ದೀಯ. ಏನು ಯೋಚನೆ ಮಾಡುತ್ತಿದ್ದಿಯಾ? ಇನ್ನೂ ಕಾಲು ನೋವುತ್ತಲೇ ಇದೆಯಾ? ರಾತ್ರಿ ಆಗಲೇ ಎರಡು ಗಂಟೆಯಾದರೂ ಕಸಿವಿಸಿಯಿಂದ ಹೊರಳಾಡುತ್ತಿರುವ ಹೆಂಡತಿಯನ್ನು ಕಾಳಜಿಯಿಂದ ಕೇಳುತ್ತಿರುವ ವಾಸಣ್ಣ. ಅವಳಿಂದ ದೊಡ್ಡ ನಿಟ್ಟುಸಿರಿನ ಸದ್ದು. ನಾವು ಏನು ತಪ್ಪು ಮಾಡಿದೆವೆಂದು ಈ ಶಿಕ್ಷೆ. ಸುಖವಾಗಿ ನಮ್ಮ ಮನೆಯಲ್ಲಿ ನಾವಿದ್ದೆವು. ಮನೆಗೆ ಬರೋವ್ರು, ಹೋಗೋವ್ರರ ಊಟ ಉಪಚಾರದ ಮಧ್ಯೆ ಈ ಎಪ್ಪತ್ತು ವರ್ಷ ಕಳೆದಿದ್ದೇ ಗೊತ್ತಾಗಿರಲಿಲ್ಲ. ಇಲ್ಲಿ ದಿನವೇ ವರ್ಷಗಳಾಗುತ್ತಿವೆ. ಇನ್ನೂ ಎಷ್ಟು ವರ್ಷ ಕಳೆಯಬೇಕೋ. ನಮಗೇನು ಮನೆ ಬೇಡವಾಗಿರಲಿಲ್ಲ, ಮನೆಯ ಜೀವನವೂ ಕಷ್ಟವಾಗಿರಲಿಲ್ಲ, ಎಂದು ನಿಧಾನವಾಗಿ ಕಣ್ಣೀರಿಡುತ್ತಾ ಹೇಳುವಳು. ತಾಳಲಾರೆನೆಂದಿನಿಸುವ ಈ ಮೈಕೈ ನೋವು , ಆದರೂ ಇದನ್ನು ತಡೆಯಬಲ್ಲೆ. ಆದರೆ ನೀವೇ ಯೋಚಿಸಿ. ನಮಗಿದ್ದ ಆಸ್ತಿಯಲ್ಲಿ ಇಂಥಾ ಆಶ್ರಮ ಮಾಡಿ ಇಲ್ಲಿರುವಷ್ಟು ಮಂದಿಗೆ ನಾವಿರುವಷ್ಟು ವರ್ಷ ಪುಕ್ಕಟೆ ಊಟ ಹಾಕಿದರೂ ನಡೆಯುತ್ತಿತ್ತು, ಅಲ್ಲವೇ. ಈ ಆಸ್ತಿ ಮನೆ ಮಾರಿ ಬಂದಿದ್ದು ಯಾಕೋ ಕಾಡುತ್ತಿದೆ. ಈ ಸ್ಥಿತಿ ನಮಗೆ ಬರಬಾರದಿತ್ತು. ಚಾಣಕ್ಯ ನೀತಿಯ ಒಂದು ಶ್ಲೋಕವನ್ನು ಸದಾ ಹೇಳುತ್ತೀರಲ್ಲವೇ ಅದೇನದು ಎಂದು ಅವಳೇ ನನಗೆ ನೆನಪಿಸುತ್ತಿದ್ದಾಳೆ.

ಅರ್ಥನಾಶಂ ಮನಸ್ತಾಪಂ ಗೃಹೇ ದುಶ್ಚರಿತಾನಿ ಚ |
ವಂಚನಂ ಚಾಪಮಾನಂ ಚ ಮತಿವಾನ್ ನ ಪ್ರಕಾಶಯೇತ್ ||

ಅಂದರೆ ತನ್ನ ಸಂಪತ್ತು ನಾಶವಾದದ್ದನ್ನು, ಮಾನಸಿಕ ವ್ಯಥೆಯನ್ನು, ಮನೆಯಲ್ಲಿನ ಕೆಟ್ಟನಡತೆಯನ್ನು, ಮೋಸಹೋದದ್ದನ್ನು, ಅವಮಾನವಾದದ್ದನ್ನು ಬುದ್ಧಿವಂತನಾದವನು ಹೊರಗಿನವರಲ್ಲಿ ಹೇಳಬಾರದು. ಹೀಗೆ ನಿಮ್ಮ ಹಾಗೆ ಮನಸ್ಸಿನಲ್ಲಿ ಇಟ್ಟುಕೊಂಡು ನಗುತ್ತಾ ಇರುವುದಕ್ಕೆ ನನಗಾಗುವುದಿಲ್ಲಾರಿ. ಇಂತಹಾ ದುಃಖದಲ್ಲಿ ನನಗೆ ಜೀವ ಇಟ್ಟುಕೊಳ್ಳಲಾಗುತ್ತಿಲ್ಲ ಎಂದು ಗೋಳೋ ಎಂದು ಅಳುತ್ತಿದ್ದಳು. ನಾನು ಹೇಳಿದೆ "ನೋಡು, ಈಗ ರಾತ್ರಿ ಎರಡು. ಸುಮ್ಮನೆ ಇಲ್ಲಿರುವವರಿಗೆಲ್ಲಾ ಸುದ್ದಿ ಆಗುವುದು ಬೇಡ, ಸಮಾಧಾನ ಮಾಡಿಕೊಂಡು ಮಲಗು. ಬೆಳಿಗ್ಗೆ ಹೊರಗಡೆ ಕುಳಿತು ಮಾತನಾಡೋಣ ಎಂದು ಸಮಾಧಾನ ಮಾಡಿ ಅವಳನ್ನು ಮಲಗಿಸಿದೆ. ಅತ್ತ ಆಕೆ ನಿದ್ದೆಗೆ ಜಾರುತ್ತಿದ್ದಂತೆ, ಕಳೆದ ನಾಲ್ಕು ವರ್ಷದತ್ತ ನನ್ನ ಸ್ಮೃತಿ ಪಟಲ ಹೊರಟಿದೆ.

ಆ ಬೆಳಿಗ್ಗೆ ಹತ್ತಿರದ ಯಾತ್ರಾಸ್ಥಳವೊಂದನ್ನು ನೋಡಲು ಬಂದ ತಂಗಿಯ ಮಕ್ಕಳಾದ ಮಾಧು ಮತ್ತು ಕೇಶವ ನಮ್ಮ ಮನೆಗೂ ಬಂದರು. ನಮ್ಮ ಒತ್ತಾಯದ ಮೇರೆಗೆ ಎರಡು ದಿನಗಳು ನಮ್ಮ ಮನೆಯಲ್ಲೇ ಉಳಿದರು. ಹತ್ತಿರದ ಗದ್ದೆ ತೋಟಗಳನ್ನು ನೋಡಿಕೊಂಡು ಬಂದರು. ಸುತ್ತ ವಾಸವಿರುವ ಸಂಬಂಧಿಗಳು ಪರಿಚಯದವರ ಮನೆಗೂ ಹೋಗಿ ಬರುತ್ತಿದ್ದರು. ನಮ್ಮ ದೈನಂದಿನ ಕೆಲಸ ಹಾಗೂ ಆರೋಗ್ಯದ ಬಗ್ಗೆ ಕೇಳುತ್ತಾ ಕಾಳಜಿ ಮಾತನಾಡಿದರು. ಮೊದಲೇ ನಮ್ಮವಳಿಗೆ ಸ್ನಾಯು ಸೆಳೆತ, ಸದಾ ಸೊಂಟ ನೋವು, ಇವುಗಳ ಮಧ್ಯೆ ನರಳಿಕೊಳ್ಳುತ್ತಾ ಕೆಲಸ ಮಾಡುವ ರೀತಿ ಕಂಡ ಅವರಿಗೆ ನಮಗೇನಾದರೂ ಸಹಾಯ ಮಾಡೋಣ ಎಂದೆನಿಸಿರಬಹುದು. ಇರುವವರಿಬ್ಬರು, ಮನೆಯಲ್ಲಿ ಬೇರೆ ಯಾರು ಇಲ್ಲ. ಎಲ್ಲಾ ಕೆಲಸ ನೀವೇ ಮಾಡಿಕೊಳ್ಳಬೇಕು. ಏನಾದರೂ ಹುಷಾರಿಲ್ಲ. ಜಡ್ಡು, ಜಾಪತ್ತು ಎಂದರೆ ಯಾರು ನಿಮ್ಮನ್ನು ನೋಡಿ ಕೊಳ್ಳುತ್ತಾರೆ. ಇಷ್ಟು ವರ್ಷಗಳ ವರೆಗೂ ಗದ್ದೆ, ತೋಟ ಎಂದು ಕೆಲಸ ಮಾಡಿದಿರಿ. ಈಗ ವಯಸ್ಸಾಗಿದೆ. ನಿಮಗೆ ಕೆಲಸ ಮಾಡಲು ಆಗುವುದಿಲ್ಲ ಆಳುಗಳು ಬೇರೆ ಸಿಗುವುದು ಕಷ್ಟ, ಸಿಕ್ಕಿದರೂ ಅವರಿಗೆ ಕೂಲಿ ಕೊಟ್ಟು ನಿಮಗೆ ಉಳಿಯುುುವದರಲ್ಲಿ ಅಷ್ಟಕ್ಕಷ್ಟೇ ಎನ್ನುತ್ತೀರಿ. ಆದ್ದರಿಂದ ಎಲ್ಲಾ ಮಾರಿ ನಗರಕ್ಕೆ ಬನ್ನಿ. ಅಲ್ಲಿ ನಾವುಗಳು ಯಾರಾದರೂ ಇದ್ದೇ ಇರುತ್ತೇವೆ. ಹೇಗೋ ನೋಡಿಕೊಳ್ಳುತ್ತೇವೆ. ಇದು ನೀವು ಕುಳಿತು ತಿನ್ನುವ ವಯಸ್ಸು, ಈ ಕೆಲಸ ಸಾಕು. ಅಲ್ಲಿ ನಮ್ಮನೇಲೆ ಇರಿ, ಇಲ್ಲವೇ, ಕಡಿಮೆ ಬಾಡಿಗೆಯಲ್ಲಿ ಒಂದು ಮನೆ ಮಾಡಿಕೊಳ್ಳಿ. ಫೋನ್ ಮಾಡಿದರೆ ಏನು ವಸ್ತುಗಳು ಬೇಕಾದರೂ ಮನೆಗೇ ಬರುತ್ತದೆ, ಸುಖವಾಗಿರಿ - ಎಂಬ ಅವರ ಕನಿಕರ, ಕಾಳಜಿಯ ಮಾತು ಸರಿ ಎನಿಸಿತು, ಆ ಪರಮಾಪ್ತ ಹುಡುಗರ ಕಾಳಜಿಯ ಮಾತು ಕೇಳಿ ಖುಷಿಯೂ ಆಯಿತು. ಯಾವುದಕ್ಕೂ ಬರುವ ವಾರದಲ್ಲಿ ಯೋಚಿಸಿ ಶೀಘ್ರವಾಗಿ ತೀರ್ಮಾನಕ್ಕೆ ಬನ್ನಿ, ಫೋನ್ ಮಾಡಿರೆಂದು ಹೇಳಿ ಹೊರಟುಹೋದರು.

ಈಗ ನಮ್ಮ ಮನಸ್ಸಿನಲ್ಲಿ ಅನೇಕ ಯೋಚನೆಗಳು. ಮನಸ್ಸಿನಲ್ಲಿ ತಳಮಳ. ಹುಟ್ಟಿ ಬೆಳೆದ ಊರನ್ನು ಅಷ್ಟು ಸುಲಭವಾಗಿ ಬೇಡ ಎನ್ನಲಾಗುವುದಿಲ್ಲ. ಇಷ್ಟೊಂದು ಬಳಗದವರು, ಮಿತ್ರರು, ನೆರೆ ಹೊರೆಯವರು, ಊರಿನವರು, ವಿಶ್ವಾಸಿಕರು. ಇವರನ್ನೆಲ್ಲಾ ಬಿಟ್ಟು ಹೋಗುವುದೇ, ಎಷ್ಟೊಂದು ವರ್ಷಗಳ ಕಾಲ ಪಂಚಾಯಿತಿ ಕೆಲಸ ಮಾಡಿದ್ದೇನೆ, ಪ್ರಾಮಾಣಿಕ ಸೇವೆ ಮಾಡಿದವ ಎಂಬ ಅಗಣಿತ ಗೌರವ ಗಳಿಸಿದ್ದೇನೆ. ಸುತ್ತ ಮುತ್ತ ಹಲವು ಜಿಲ್ಲೆಗಳಲ್ಲಿಯೂ ಗಣ್ಯನೆಂದು ಗುರುತಿಸಲ್ಪಟ್ಟಿದ್ದೇನೆ. ಅವರಿವರು ಇದನ್ನು ಆಡಿದ್ದನ್ನು ಕೇಳಿ ನಾನು ಇಷ್ಟೊಂದು ಸಂತೋಷಪಟ್ಟಿದ್ದೇನೆ. ಈ ಪ್ರೀತಿ, ಗೌರವ ಮತ್ತು ವಿಶ್ವಾಸಗಳು ಅಂತಹ ಆ ದೊಡ್ಡ ನಗರದಲ್ಲಿ ದೊರೆತಿತೇ. ನನ್ನ ತಂದೆ ಪ್ರೀತಿಯಿಂದ ಕೊಟ್ಟ, ತಲಾಂತರದಿಂದ ಬಂದಿರುವ ಈ ಜಮೀನನ್ನು ಮಾರಿ ಬಿಟ್ಟರೆ ಅವರ ಆಶಯಗಳಿಗೆ ಅಗೌರವ ಮಾಡಿದಂತಾಗುವುದೇ, ಏನು ಮಾಡಲಿ, ಯಾರು ಜೊತೆಗೆ ಚರ್ಚಿಸಲಿ, ತಲೆ ತುಂಬಾ ಹತ್ತಾರು ವಿಚಾರಗಳ ಡೋಲಾಯಮಾನ. ಇನ್ನು ಅವಳೊಂದಿಗೆ ಚರ್ಚಿಸೋಣ ಎಂದುಕೊಂಡೆ. ಸಂಜೆ ಅವಳ ದೇವರ ಪೂಜೆ ಮುಗಿದಿದೆ. ಏನಂತೀಯಾ. ನನ್ನ ಕಡೆ ತಿರುಗಿದ ಅವಳಿಗೆ ನನ್ನ ಮಾತು ಕೇಳಿದೆಯಾದರೂ ಏನೆಂಬ ಪ್ರಶ್ನೆ ಮುಖದಲ್ಲಿ ತೋರಿಸುತ್ತಿದ್ದಾಳೆ ಎನಿಸಿತು. ಅವಳೂ ಗೊಂದಲದಲ್ಲಿದ್ದಾಳೆ. "ಒಂದೆರಡು ತಿಂಗಳು ಮನೆಯಲ್ಲಿದ್ದ ಹಸು ಸುಲಭವಾಗಿ ಈ ಮನೆಯನ್ನು ಮರೆಯದು. ಎರಡು ದಿನ ಅನ್ನ ತಿಂದ ನಾಯಿಗೆ ಈ ಮನೆಯ ಮೇಲೆ ಎಷ್ಟು ಮಮತೆ ಇರುತ್ತದೆ. ಅಂತಹುದರಲ್ಲಿ ಇಷ್ಟು ವರ್ಷಗಳ ಸಂಸಾರ, ಬಂದು ಹೋಗುವ ಬಂಧುಗಳು, ನೆಂಟರಿಷ್ಟರು, ಆಳುಕಾಳುಗಳು ಎಲ್ಲವನ್ನೂ ನೆನೆಸಿಕೊಂಡರೆ ಬಿಟ್ಟು ಹೋಗಲು ದುಃಖವಾಗುತ್ತಿದೆ. ಏನು ಮಾಡೋಣ" ಎಂಬ ಅವಳ ಪ್ರಶ್ನೆಯೇ ನನಗೆ ಉತ್ತರ. ಹಾಗೂ ಹೀಗೂ ತೋಟ ಗದ್ದೆಗಳ ಕೆಲಸದ ಮಧ್ಯೆ, ಅಂತಾ ಸುದ್ದಿ ಮಾಡಬಾರದೆಂದು ಕೆಲವೇ ಆಪ್ತರ ಬಳಿ ಪ್ರಸ್ತಾಪ ಮಾಡಿದೆ. ಯಾರಿಗೂ ಹೇಳಬೇಡಿ, ಸದ್ಯಕ್ಕೆ ನಮ್ಮಲ್ಲೇ ಇರಲಿ ಎಂದು ಹೇಳಿದರೂ ಹೆಚ್ಚು ಕಡಿಮೆ ಊರಲ್ಲೆಲ್ಲಾ ಗುಸುಗುಸು ಆಗಿ ಶೀಘ್ರವಾಗಿ ಜಾಹೀರಾತು ಆಯಿತು. ಕೆಲವರು ಧೈರ್ಯ ಮಾಡಿ ಕೇಳುವುದರ ಜೊತೆಗೆ ತಮ್ಮ ಅಭಿಪ್ರಾಯವನ್ನೂ ಸೇರಿಸಿದರು. ಒಳ್ಳೆಯ ತೀರ್ಮಾನ ಮಾಡಿದಿರಿ ಎಂದು ಭುಜ ತಟ್ಟಿದ ಕೆಲವರು. ಏನೇ ಆದರೂ ಸರಿಯೆನಿಸುತ್ತಿಲ್ಲ, ತೀರಾ ಊರು ಬಿಡುವುದು ಅಂದರೇನು ಎಂದು ಆಕ್ಷೇಪಿಸುವವರು ಹಲವರು. ಈ ಬಗ್ಗೆ ಯೋಚಿಸಿ ಯೋಚಿಸಿ ನಾವಿಬ್ಬರೂ ಒಟ್ಟಿಗೇ ಕಾಯಿಲೆ ಬಿದ್ದೆವು. ಇಂತಹಾ ಸಮಯದಲ್ಲಿ ವೈದ್ಯರಿಂದ ಔಷಧಿ ತರಲು ಯಾವಾಗಲೂ ಯಾರಾದರೂ ಸಹಾಯ ಮಾಡುತ್ತಿದ್ದವರು ಈಗ ಯಾರೂ ಸಿಗುತ್ತಿಲ್ಲ. ಅವರವರ ಕೆಲಸದ ಮೇಲೆ ಆಗಲೇ ಪರ ಊರಿಗೆ ಹೋಗಿರಬೇಕೆ. ಇದರಿಂದ ಔಷಧಿ ತರಲು ಸಾಕಷ್ಟು ಪ್ರಯಾಸವಾಯಿತು. ಹೇಗೋ ವಾಸಿಯಾಯಿತು. ಈ ಸನ್ನಿವೇಶವು ಆಸ್ತಿ ಮಾರಿ ನಗರಕ್ಕೆ ಬನ್ನಿ ಎಂಬ ಸಲಹೆ ಸರಿ ಎನ್ನಿಸಿತು. ಊರು ಬಿಡುವ‌ ಬಗೆಗಿನ ಗೊಂದಲ ಕಡಿಮೆಯಾಗುತ್ತಾ ತೀರ್ಮಾನ ನಿಚ್ಚಳವಾಗಿತು. ಇದು ನಮ್ಮ ಆಸ್ತಿ, ನಮ್ಮ ಮನೆ, ನಮ್ಮ ಪಶು, ಪ್ರಾಣಿಗಳ ಬಗ್ಗೆ ಅಭಿಮಾನ ಕಡಿಮೆ ಮಾಡಿಕೊಳ್ಳಲು ಸಹಾಯವಾಯಿತು. ಸರೀ ಇದನ್ನೆಲ್ಲಾ ಯಾರಿಗೆ ಮಾರುವುದು? ಇಲ್ಲಿರುವವರಿಗೇ ರೈತಾಪಿ ಕೆಲಸವೇ ಬೇಡವಾಗಿರುವಾಗ, ಕೊಳ್ಳುವವರು ಯಾರು. ಎಲ್ಲರ ಮಕ್ಕಳು ಓದಿ ನಗರ ಸೇರಿ, ಹಳ್ಳಿಗಳು ವೃದ್ಧಾಶ್ರಮವಾಗುತ್ತಿರುವ ಕಾಲ. ಎಲ್ಲಿ ವ್ಯಾಪಾರವಾಗುವುದಿಲ್ಲವೋ ಎಂಬ ಆತಂಕ ಮನದಲ್ಲಿ. ಈ ಮಧ್ಯೆ ನಮ್ಮ ಪರಿಚಯದವರ ಕಡೆಯವರು, ನಿವೃತ್ತಿ ಜೀವನಕ್ಕೆ ಹಳ್ಳಿಯ ಮನೆಯನ್ನು ಹುಡುಕುತ್ತಿದ್ದರು. ಈ ಪ್ರಯತ್ನವಾಗಿ ನಮ್ಮ ಮನೆಯನ್ನು ಆರಿಸಿಕೊಂಡರು. ಉಭಯತರಿಗೂ ಸೂಕ್ತ ಬೆಲೆ ದೊರಕಿ, ವ್ಯಾಪಾರವಾಗಿದ್ದು ನನ್ನ ಅರ್ಧ ಸಮಸ್ಯೆ ಪರಿಹಾರವಾಯಿತು. ಈಗ ನಗರದತ್ತ ನಾವು ಹೊರಡುವ ವಿಷಯ ನಿಚ್ಚಳವಾಯಿತು. ಈ ಸಡಗರದಲ್ಲಿ ಎಲ್ಲಾ ಬಂಧುಮಿತ್ರರ ಮನೆಗೂ ಹೋಗಿ ಬಂದೆವು. ಆಗಲೂ ಕೆಲವರಿಗೆ ನಮ್ಮ ತೀರ್ಮಾನ ಸರಿಯಾಗಿದೆ. ಇನ್ನು ಕೆಲವರಿಗೆ ನಮ್ಮ ತೀರ್ಮಾನ ಸರ್ವಥಾ ತಪ್ಪು. ಮುಂದೆ ನೀವೆಲ್ಲಿ ತೊಂದರೆ ಮಾಡಿಕೊಳ್ಳುವಿರೋ ಎಂಬುದೇ ನಮ್ಮ ಆತಂಕವೆಂಬ ಕಳಕಳಿಯ ಮಾತು. ಆಗಲೇ ತೀರ್ಮಾನಿಸಿಯಾಗಿದೆ. ನಿಮ್ಮ ಆತಂಕ ಕಾಳಜಿಗೆ ತುಂಬಾ ಸಂತೋಷವಾಗಿದೆ ಎಂದು ಹೇಳುತ್ತಲೇ ಬಂಧುಗಳ ಭೇಟಿ ಮುಗಿಸಿದೆವು. ಇದ್ದ ತಿಂಗಳು ವಾರವಾಯಿತು. ಮನೆಯಲ್ಲಿನ ಕೆಲವು ವಸ್ತುಗಳನ್ನು ಬೇಕೆಂದವರಿಗೆ ಕೊಟ್ಟು ಕಡಿಮೆ ಮಾಡಿ ಕೊಂಡೆವು. ನಗರದ ಸರಳ ಜೀವನಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಒಂದು ಮಿನಿ ಲಾರಿ ಸಾಕಾಯಿತು. ನಗರದಲ್ಲಿನ ಬಂಧುಗಳು ಆಗಲೇ ಬಾಡಿಗೆ ಮನೆ ವ್ಯವಸ್ಥೆ ಮಾಡಿದ್ದರು. ಅಂತೂ ಒಂದು ಶುಭ ಮುಹೂರ್ತದಲ್ಲಿ ಸುತ್ತ ಹತ್ತೂರಿನ ವಿಶ್ವಾಸಿಗಳ ಸಮ್ಮುಖದಲ್ಲಿ ಅವರಿಂದಲೂ ಊರಿನಿಂದಲೂ ಬೀಳ್ಕೊಂಡೆವು. ಹಲವರು ನಮ್ಮೊಂದಿಗೆ ಕಳೆದ ವರ್ಷಗಳ ಹಲವು ಸನ್ನಿವೇಶಗಳನ್ನು ನೆನೆದು ಕಣ್ಣೀರಿಟ್ಟರು. ನಮಗೂ ಅಳುವಿನ ಮೂಲಕ ದುಃಖ ಹೊರ ಬಂದಿತು. ಆದರೆ ತೀರ್ಮಾನಿಸಿಯಾಗಿದೆ. ಮುಂದಿನ ಜೀವನ ನಗರದತ್ತ ಕರೆಯುತ್ತಿದೆ. ಇದ್ದ ಊರೂ ಸುಲಭವಾಗಿ ಬಿಡಲೊಲ್ಲದು. ಇಲ್ಲಿನ ಋಣ ಇಷ್ಟೇ ಎಂದುಕೊಂಡು ಸಮಾಧಾನದ ಮಧ್ಯೆಯೂ ದುಃಖ, ಅಳು, ದುಗುಡ, ದುಮ್ಮಾನ ಗಳೊಂದಿಗೆ ಟಾಟಾ ಮಾಡಿ ಹೊರಡುವುದರಲ್ಲಿ ಸಾಕಾಯಿತು.

ನಮ್ಮ ಲಗ್ಗೇಜ್ ತುಂಬಿದ ಲಾರಿಯ ಹಿಂದೆ ನಮ್ಮ ಬಾಡಿಗೆ ಕಾರು ಹೋಗುತ್ತಿದೆ. ನಾವು ಗಂಡ ಹೆಂಡತಿಯಲ್ಲಿ ಏನೋ ಒತ್ತಡದ ಮನೋಭಾವ, ಮೌನ, ಪರಸ್ಪರ ಸಮಾಧಾನ, ಕೆಲವು ಗಂಟೆಗಳ ಹಿಂದಿನ ಬೀಳ್ಕೊಡುಗೆಯ ರಸ ನಿಮಿಷಗಳನ್ನು ನೆನೆಯುತ್ತಾ ಕಣ್ಣೀರು ಸಂತೋಷದೊಂದಿಗೆ ನಗರದ ಬಂಧುಗಳ ಮನೆ ಸೇರಿದಾಗ ಬೆಳಗಾಗಿತ್ತು. ಅವರ ಮನೆಯಲ್ಲಿ ವಿಶ್ರಾಂತಿ ಪಡೆದು ಮಧ್ಯಾಹ್ನ ನಮಗೆಂದು ಪಡೆದ ಬಾಡಿಗೆ ಮನೆಯತ್ತ ಹೊರಟೆವು. ಆ ವೇಳೆಗೆ ಲಾರಿಯಿಂದ ಲಗೇಜನ್ನು ಇಳಿಸಲಾಗಿತ್ತು. ನಮ್ಮ ಅನುಕೂಲಕ್ಕೆ ತಕ್ಕಂತೆ ವಸ್ತುಗಳನ್ನು ಇಡುವ ಕೆಲಸ ಬಂಧುಗಳ ಸಹಾಯದಿಂದ ಶೀಘ್ರವಾಗಿ ಮುಗಿದು ಹಾಲು ಉಕ್ಕಿಸುವ ಶಾಸ್ತ್ರವೂ ಮುಗಿಯಿತು. ಚಿಕ್ಕದಾದ ಚೊಕ್ಕದಾದ ನಮ್ಮ ಹೊಸ ಸಂಸಾರ ಪ್ರಾರಂಭ. ಮೊದಲ ಒಂದು ವಾರ ಇದ್ದ ಊರಿನ ನೆನಪುಗಳು ನಿಧಾನವಾಗಿ ಮರೆಯಲಾರಂಭಿಸಿತು. ಊರಲ್ಲಿದ್ದಾಗ ಸದಾ ನಾಳೆ ಮಾಡಬೇಕಾದ ತೋಟ ಗದ್ದೆಗಳ ಕೆಲಸ, ಆಳುಗಳು ಬರುತ್ತಾರೋ ಇಲ್ಲವೋ, ಕೆರೆ ನೀರಿಗೆ ಯಾವಾಗ ಒಡ್ಡು ಹಾಕಬೇಕು, ಮಂಗಗಳ ಕಾಟ, ಕಟ್ಟಿರುವ ಕರು ಹಗ್ಗ ಬಿಡಿಸಿಕೊಂಡು ಹಾಲು ಕುಡಿಯಿತೇನೋ, ಭತ್ತದ ರೇಟ್ ಎಷ್ಟು, ಮಂಡಿಯಲ್ಲಿ ಇಟ್ಟಿರುವ ಅಡಿಕೆ ವ್ಯಾಪಾರವಾಯಿತೇ ಇಂತಹಾ ಯಾವ ಯೋಚನೆಯೂ ಇಲ್ಲ. ಎಂತಹ ನಿಶ್ಚಿಂತೆ. ಈ ಕೆಲಸ ಯಾವಾಗಲೋ ಮಾಡಬೇಕಿತ್ತು. ಹಿತವೆನಿಸುತ್ತಿದೆ. ಇಲ್ಲಿ ಮುಂಚೆ ಎದ್ದು ಏನು ಮಾಡಬೇಕಾಗಿದೆ. ಬೆಳಿಗ್ಗೆ ೮ಕ್ಕೆ ಎದ್ದರೂ ಆಗುತ್ತದೆ. ಒಂದು ಸ್ಟ್ರಾಂಗ್ ಕಾಫಿ ಕುಡಿದು ಪೇಪರ್ ಓದುವ ವೇಳೆಗೆ ತಿಂಡಿ. ನಂತರ ಸ್ನಾನ, ಪೂಜೆ. ಮದ್ಯಾಹ್ನ ೨ ಘಂಟೆಗೆ ಊಟ. ಸ್ವಲ್ಪ ಹೀಗೆ ನಿದ್ದೆ ಮಾಡಿ ಹಾಗೆ ಎದ್ದು ಕಾಫಿ ಕುಡಿದರೆ, ೫ ಗಂಟೆ ಆಗಿರುತ್ತದೆ. ಸಂಬಂಧಿಗಳು ಯಾರಾದರೂ ಬಂದಿರುತ್ತಾರೆ. ಸ್ವಲ್ಪ ಅದೂ ಇದೂ ಮಾತನಾಡಿ ಸಂಜೆ ದೇವರಿಗೆ ನಮಸ್ಕಾರ ಮಾಡಿ ಊಟ ಮಾಡಿದರೆ ದಿನ ಮುಗಿದೇ ಹೋಯ್ತು. ಅವಳಿಗೂ ಪೂಜೆ, ಪಾರಾಯಣ, ಸ್ತೋತ್ರವನ್ನು ಓದಲು ಸಮಯ ಸಿಗುತ್ತಿದೆ. ಬೇಕೆನಿಸಿದಾಗ ಇಬ್ಬರೂ ಹತ್ತಿರದ ರಾಯರ ಮಠಕ್ಕೋ, ದೇವಸ್ಥಾನಕ್ಕೋ ಹೋಗಿ ಬರುವುದು. ನಮ್ಮ ಆಪ್ತ ಹುಡುಗರು ಎಲ್ಲದರಲ್ಲೂ ಶಿಸ್ತು. ಪೇಪರ್, ತರಕಾರಿ, ಹಾಲು ಇತ್ಯಾದಿ, ಅಷ್ಟೇ ಏಕೆ, ಮೆಸೇಜ್ ಕಳಿಸಿದರೆ ಔಷಧಿಯೂ ಮನೆಗೆ ಬರುವ ವ್ಯವಸ್ಥೆ ಮಾಡಿದ್ದಾರೆ. ಹೀಗೇ ಎರಡು ವರ್ಷ ಮುಗಿಯಿತು.

ಈಗ ನಗರದ ಜೀವನ ಏಕೋ ಬೇಡವಾಗುತ್ತಿದೆ. ಏನೋ ಏಕತಾನತೆ. ಮೊದ ಮೊದಲು ಹೆಚ್ಚು ಕಡಿಮೆ ಪ್ರತಿನಿತ್ಯ ಬರುತ್ತಿದ್ದ ಬಂಧುಗಳ ಭೇಟಿ ಕಡಿಮೆಯಾಗಿದೆ. ಹೇಗಿದ್ದೀರಿ, ಏನಾದರೂ ತಂದು ಕೊಡಬೇಕೇ ಎಂದು ಕೇಳುತ್ತಿದ್ದ ಆಪ್ತ ಹುಡುಗರ ಭೇಟಿ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಆಗಿ ಈಗೀಗ ಫೋನ್ ಮಾಡಿ ಮಾತನಾಡುವಂತಾಗಿದೆ. ಅವರಿಗೆ ಅವರದ್ದೇ ಆದ ಕೆಲಸವಿದೆ. ಸದಾ ನಮ್ಮ ಬಳಿ ಕುಳಿತುಕೊಳ್ಳಲಾದೀತೇ. ಸಾಲದೆಂದು ಅವರು ಹುಡುಗರು. ಚಿಕ್ಕವರು. ಅವರದೇ ವಯಸ್ಸಿನ ಮಿತ್ರರ ಬಳಿ ಮಾತನಾಡಲು ಸಮಯ ಕಳೆಯಲು ಬೇಕಾದಷ್ಟಿರುತ್ತದೆ. ಈ ಮುದುಕರ ಬಳಿ ಬಂದು ಸದಾ ಇರಲು ಸಾಧ್ಯವೇ.

ಪ್ರತಿದಿನ ಬೆಳಗಿನಿಂದ ಸಂಜೆಯವರೆಗೂ ಅವಳ ಮುಖ ನಾನು, ನನ್ನ ಮುಖ ಅವಳ ನೋಡಿ ಕೊಳ್ಳುವುದಾಗಿದೆ. ಇರುವ ನೆಲಕ್ಕೆ ಬಾಡಿಗೆ, ಟೀವಿ ನೋಡಲು, ನೀರು, ವಿದ್ಯುತ್, ಹಾಲು, ಪೇಪರ್ ಎಲ್ಲವಕ್ಕೂ ಖರ್ಚಾಗುವ ದುಡ್ಡು ಕನಿಷ್ಠ ೧೬ಸಾವಿರ. ಹೀಗೇ ಆದರೆ ನನ್ನ ಹತ್ತಿರ ಇರುವ ಹಣ ಜೀವನ ಪೂರ್ತಿಗೆ ಸಾಕಾಗುವುದೇ. ಇಲ್ಲಿ ಎಲ್ಲವಕ್ಕೂ ದುಡ್ಡು. ನಮ್ಮ ಊರಿನಲ್ಲಿ ಅಡಿಗೆಗೆ ಮನೆಯಲ್ಲಿ ಬೆಳೆದ ಕೆಸುವಿನ ಸೊಪ್ಪು, ಬಸಳೆ ಸೊಪ್ಪು, ಹುಣಸೆ ಕಾಯಿ ಆದರೂ ಸಾಕಿತ್ತು. ಇಲ್ಲಿ ಎಲ್ಲವೂ ಕೊಳ್ಳುವುದೇ. ಹೀಗೇ ಮನದಲ್ಲಿ ಏನೇನೋ ಯೋಚನೆಗಳು. ಅದೂ ಸರಿಯೇ. ಈಗೇನು ಯೋಚನೆ ಮಾಡಿ ಉಪಯೋಗ. ಇರಲಿ ನಮ್ಮ ಆಪ್ತ ಹುಡುಗರ ಜೊತೆ ಚರ್ಚೆ ಮಾಡೋಣ ಎಂದು ಕೊಂಡು ಅವರ ಬರುವಿಕೆಗಾಗಿ ಕಾಯುತ್ತಿದ್ದೆವು. ಸುಮಾರು ಎರಡು ತಿಂಗಳ ನಂತರ ಅವರನ್ನು ಕರೆಸಿಕೊಂಡು ಮಾತನಾಡಲು ಅವಕಾಶವಾಯಿತು. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಖರ್ಚಾದರೆ ಮುಂದಿನ ಕೆಲವು ವರ್ಷಗಳಲ್ಲಿ ನನ್ನಲ್ಲಿ ಏನೂ ಇಲ್ಲವಾಗುತ್ತದೆ, ಏನು ಮಾಡುವುದು? ಈ ಚರ್ಚೆಗೆ ಪರಿಹಾರವಾಗಿ ಅವರಿಂದ ಹೊಸ ಸಲಹೆ ಬಂದಿತು

ಆ ಪ್ರಕಾರ ನಾವು ನಮ್ಮಲ್ಲಿ ಇರುವ ಹಣದಲ್ಲಿ ಠೇವಣಿ ಕೊಟ್ಟು ಒಂದು ವೃದ್ಧಾಶ್ರಮ ಸೇರಬೇಕು. ಅಲ್ಲಿ ಬಾಡಿಗೆ ಇಲ್ಲ, ಯಾವ ವಸ್ತುಗಳನ್ನೂ ಕೊಳ್ಳಬೇಕಾದದ್ದು ಇಲ್ಲ. ನಾವು ಅಡುಗೆ ಮಾಡಬೇಕಾದ್ದು ಇಲ್ಲ. ಕಾಫಿ ತಿಂಡಿ ಕೊಡುತ್ತಾರೆ. ಸಮಯ ಸಮಯಕ್ಕೆ ಸರಿಯಾಗಿ ಊಟವಾಗುತ್ತದೆ. ಏನಾದರೂ ಸಣ್ಣ ಕಾಯಿಲೆಯಾದರೂ ಅಲ್ಲೇ ಇರುವ ವೈದ್ಯರು ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಮಲಗಲು ಮಂಚ-ಹಾಸಿಗೆ, ನೋಡಲು ಟಿವಿ, ಆಗಾಗ ಪ್ರವಚನ, ಎಲ್ಲವೂ ಇರುತ್ತದೆ. ಯಾವುದಕ್ಕೂ ಯೋಚನೆ ಮಾಡುವುದು ಬೇಡ ಆರಾಮ್ ಆಗಿರಬಹುದು. ಈ ಯೋಜನೆ ನಮಗೆ ಸರಿ ಅನಿಸಿತು. ಮತ್ತೇಕೆ ತಡ. ಸರಿಯಾದ ಒಂದು ಆಶ್ರಮ ನೋಡುವುದೇ ಎಂದು ಹೇಳಿದೆವು. ಮುಂದಿನ ವಾರವೇ ನಗರದ ಹೊರವಲಯದಲ್ಲಿರುವ ಸುಸಜ್ಜಿತ ವೃದ್ಧಾಶ್ರಮಕ್ಕೆ ನಾವು ಸ್ಥಳಾಂತರಗೊಂಡೆವು. ಇಲ್ಲಿ ಬಂದಾಗ ತಂದಿದ್ದ ಗ್ಯಾಸ್, ಅದರ ಒಲೆ, ಟೀವಿ, ವಾಷಿಂಗ್ ಮೆಷಿನ್, ಹೊಲಿಗೆ ಮೆಷಿನ್, ಮಿಕ್ಸಿ, ಊರಿನಿಂದ ತಂದಿದ್ದ ಹಲವು ವಸ್ತುಗಳು ಈಗ ಹೇಗೂ ಬೇಡವೆಂದು ನಮ್ಮ ಬಂಧುಗಳಿಗೆ ಕೊಟ್ಟು ಸಾಧ್ಯವಾದಷ್ಟು ಋಣ, ಭಾರ ಕಡಿಮೆ ಮಾಡಿಕೊಂಡೆವು.

ಅದೊಂದು ಹಳ್ಳಿ. ಪುಣ್ಯಾತ್ಮರ ದೊಡ್ಡ ಮನೆ. ಹಿರಿಯರ ಸೇವೆಗೆಂದೇ ಕಟ್ಟಿಸಿದ್ದು ಎಂದು ಆಶ್ರಮದ ಮುಖ್ಯಸ್ಥರು ಹೇಳುತ್ತಾರೆ . ಸುಮಾರು ೪೦ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ನಾವು ಮತ್ತು ಇನ್ನಿಬ್ಬರಿಗೆ ಸೇರಿ ಒಂದು ರೂಮು. ಈಗಾಗಲೇ ಹೇಳಿದಂತೆ ಮಂಚ ಹಾಸಿಗೆ ಕೊಟ್ಟರೂ ನಮ್ಮದೇ ಬೆಡ್ಶೀಟ್ ಹಾಸಲು ಮತ್ತು ಹೊದಿಯಲು ತಂದಿದ್ದೆವು. ಒಂದು ಫ್ಲಾಸ್ಕ್, ಲೋಟ, ದಿನನಿತ್ಯದ ವಸ್ತುಗಳು, ಬಟ್ಟೆಗಳು, ಔಷಧಿ, ಅಡ್ರೆಸ್ ಡೈರಿ, ಭಜನೆ ಪುಸ್ತಕ, ಅನಾದಿ ಕಾಲದಿಂದಲೂ ಇದ್ದ ಹಳೆಯ ಟ್ರಾನ್ಸಿಸ್ಟರ್ ರೇಡಿಯೋ ಇಷ್ಟೇ ನಮ್ಮ ಆಸ್ತಿ. ಇದೇ ಸರಿ ಎಷ್ಟು ಇದ್ದರೂ ಇಷ್ಟೇ ಉಪಯೋಗಿಸುವುದು. ಯಾರೋ ಹಿರಿಯರು ಹೇಳಿದಂತೆ Simple living, High thinking ಎಂದರೆ ಇದೇ ಎಂದು ಮಾತಾಡಿಕೊಳ್ಳುತ್ತಿದ್ದೆವು. ಬೆಳಿಗ್ಗೆ ಏಳು ಗಂಟೆಗೆ ಏಳುವುದು, ಪ್ರಾರ್ಥನೆ, ಕಾಫಿ, ಟೀ. ಹತ್ತು ಗಂಟೆಗೆ ತಿಂಡಿ, ಅವಲಕ್ಕಿ, ಉಪ್ಪಿಟ್ಟು, ದೋಸೆ, ರೊಟ್ಟಿ ಇವೇ ಯಾವುದಾದರೊಂದನ್ನು ಕಾಫಿಯೊಂದಿಗೆ ಕೊಡುತ್ತಾರೆ. ಹೇಳಿ ಕೊಳ್ಳುವ ರುಚಿ ಇಲ್ಲ. ಮಧ್ಯಾಹ್ನ ೧ಗಂಟೆಗೆ ಊಟ, ಅನ್ನ ಸಾರು ಅಥವಾ ಹುಳಿ, ಪಲ್ಯೆ, ಮಜ್ಜಿಗೆ. ಮಧ್ಯಾಹ್ನ ಕಾಫಿ, ಟೀ ಕೆಲವು ದಿನ ಮಾರಿ ಬಿಸ್ಕತ್ತು, ಬೆಳಗ್ಗೆ ಒಂದು ಗಂಟೆ - ಸಂಜೆ ಒಂದು ಗಂಟೆ ಮುಖ್ಯಸ್ಥರ ಖುಷಿಯ ಕಾರ್ಯಕ್ರಮಕ್ಕೆ ಟೀವಿ. ಮಧ್ಯೆ ಮಧ್ಯೆ ಅವರೇನಾದರೂ ಜೋಕ್ ಮಾಡಿದರೆ ಅದು ಹೇಗಿದ್ದರೂ ನಗಲೇಬೇಕಾದ ಪರಿಸ್ಥಿತಿ ನಮ್ಮದು. ರಾತ್ರಿ ೮ಕ್ಕೆ ಅದೇ ಊಟ. ಬೆಳಿಗ್ಗೆ ತೆಗೆದ ಬಾಗಿಲು ರಾತ್ರಿ ೮ಕ್ಕೆ ಮುಚ್ಚುವುದು. ಅಡಿಗೆಗೆ ಒಬ್ಬರು, ಕರೆದಾಗ ಬರುವ ವೈದ್ಯರು. ನಮ್ಮ ಪ್ರತ್ಯೇಕ ಕಾಯಿಲೆಗೆ ಬೇಕಾದರೆ ವೈದ್ಯರು, ಔಷಧಿಗೆ ನಾವೇ ಅನುಮತಿ ಪಡೆದು ಹೊರ ಹೋಗಿ ಬರಬೇಕು. ಆ ಖರ್ಚು ನಮ್ಮದು.

ಇನ್ನು ನಮ್ಮ ಜೊತೆ ಇರುವವರು ಬಹುತೇಕ ಎಲ್ಲರೂ ದೊಡ್ಡ ಮನುಷ್ಯರೇ. ಒಬ್ಬ ದಂಪತಿಗಳಿಗೆ ಮೂವರು ಮಕ್ಕಳು. ಒಬ್ಬರು ಜರ್ಮನಿಯಲ್ಲಿ, ಇನ್ನಿಬ್ಬರು ಅಮೇರಿಕಾದಲ್ಲಿ. ಅವರೆಲ್ಲರೂ ಒಳ್ಳೆ ಕೆಲಸದಲ್ಲಿದ್ದಾರೆ. ಇವರೂ ಮೂರು ಬಾರಿ ವಿದೇಶ ಪ್ರವಾಸ ಮಾಡಿ ಬಂದಿದ್ದಾರೆ. ಮತ್ತೊಬ್ಬ ಹೆಂಗಸು ಮಗಳ ಹಾಗೂ ಸೊಸೆ ಬಾಣಂತನಕ್ಕೆಂದು ಹೆಚ್ಚು ಕಡಿಮೆ ಎರಡು ವರ್ಷ ಅಮೇರಿಕಾದಲ್ಲಿದ್ದವರು, ಇನ್ನೊಬ್ಬ ಯಜಮಾನರ ಮಗ ಮಗಳು ಫ್ರಾನ್ಸ್ನಲ್ಲಿ ಇದ್ದಾರಂತೆ. ಹೀಗೆ ಹದಿನೈದು ಮಂದಿ ವಿದೇಶ ಯಾತ್ರೆ ಮಾಡಿದವರು. ಇನ್ನು ಕೆಲವರ ಮಕ್ಕಳಿಗೆ ತಮ್ಮ ತಮ್ಮ ಮಕ್ಕಳನ್ನೇ ನೋಡಲಾಗುತ್ತಿಲ್ಲ, ಇಲ್ಲೇ ಇರಿ ಯಾವಾಗ ಬೇಕೋ ಆಗ ಬರುತ್ತೇವೆ ಎಂದು ತಂದೆ ತಾಯಿಯರನ್ನು ಬಿಟ್ಟು ಹೋದವರು, ಕೆಲವರು ನಾನಿದ್ದಾಗಲೇ ನೀವೂ ಚೆನ್ನಾಗಿ ಇರಬೇಕು ಎಂದು ಮಕ್ಕಳಿಗೆ ಇರುವುದೆಲ್ಲಾ ಕೊಟ್ಟು ಏನೂ ಇಲ್ಲವಾದವರು, ಇನ್ನು ಕೆಲವರು ಹೆಂಡತಿ ಸತ್ತ ಮೇಲೆ ಮಕ್ಕಳಿಗೆ ಹಿಸ್ಸೆ ಎಂದು ಕೊಟ್ಟವರು ಈಗ ಖರ್ಚಿಗೆ ಮಕ್ಕಳ ತಾರಮ್ಮಯ್ಯ ಕಂಡವರು, ಜೀವನದಲ್ಲಿ ಯಾರಿಂದಲೋ ಮೋಸ ಹೋಗಿ ಬಂದವರು, ಬ್ಯಾಂಕ್ ನಲ್ಲಿ , ಸೊಸೈಟಿಗಳಲ್ಲಿ ಹಣ ಇಟ್ಟು ಕೈ ಸುಟ್ಟು ಕೊಂಡವರು, ಮೈನಲ್ಲಿ ಶಕ್ತಿ ಇದ್ದಾಗ ಅವರಿವರಿಗೆ ಸಹಾಯ ಮಾಡಿ ಈಗ ನಿರುಪಯುಕ್ತರಾದವರು, ಮಗ ಅಥವಾ ಮಗಳಿಗೇ ಒಟ್ಟಿನಲ್ಲಿ ಬೇಡವಾದವರು, ಹೀಗೆ ವಿವಿಧ ಹಿನ್ನೆಲೆಯಲ್ಲಿ ಬಂದವರು. ಏನೇ ಅಂದು ಕೊಂಡರೂ ಈಗ ಎಲ್ಲಾ ನಿರ್ಗತಿಕರು. ನೋಡಲು ಶಿಸ್ತಾಗಿ ಕಾಣುವ ಮುಖದ ಹಿಂದೆ ನೂರೆಂಟು ಕಥೆಗಳಿವೆ. ಕೆಲವು ಹೇಳಿ ಸಂತೋಷಿಸಬಹುದು. ಇನ್ನೂ ಕೆಲವು ಹೇಳಲೂಬಾರದು, ಕೇಳಲೂ ಆಗದು. ಅಂತೂ ಅದೊಂದು ವಾರ್ಧಕ್ಯ ಸಂಗ್ರಹಾಲಯ.

ಹೀಗೇ ಒಂದು ವರ್ಷ ಕಳೆಯಿತು. ನಮಗೂ ಶಕ್ತಿ ಕಡಿಮೆಯಾಗುತ್ತಿದೆ. ಕಾಯಿಲೆ ಬಂದಾಗ, ಕೈಲಾಗದಿದ್ದಾಗ ಹೇಳಿಕೊಳ್ಳುತ್ತಿದ್ದ ಹರಕೆಗಳು, ಹಬ್ಬಕ್ಕೆ ಅವರಿವರು ಹೇಳುತ್ತಿದ್ದ ಶುಭ ಹಾರೈಕೆಗಳು ನೆನಪಿಗೆ ಬರುತ್ತಿವೆ. ನನಗೆ ಗ್ರೀಟಿಂಗ್ಸ್ ಕೊಳ್ಳುವ ಮನವಿದ್ದರೂ ದುಬಾರಿ ಬೆಲೆ ತೆರಲು ಮನ ಒಪ್ಪದು. ೧೫ ಪೈಸೆ ಪೋಸ್ಟ್ ಕಾರ್ಡ್ ಆದರೂ ಶುಭಾಶಯ ಹೇಳುವುದು ಮುಖ್ಯ ಎಂದು ಬರೆದು ಗೊತ್ತಿರುವವರಿಗೆ ಕಳಿಸುವ ಹವ್ಯಾಸ. ಆದರೆ ಈಗಿನ ದಿನಗಳಲ್ಲಿ ಶುಭಾಶಯಕ್ಕೆ ಪ್ರತಿಕ್ರಿಯೆ ಬರುವುದೇ ಅಪರೂಪ. ಬಂದಿರುವ ಒಂದೆರಡು ಪ್ರತಿಕ್ರಿಯೆಗಳನ್ನು ಆಗಾಗ ತಿರುತಿರುಗಿಸಿ ಓದುವುದಲ್ಲಿ ಇನ್ನೊಂದು ಸಂತೋಷ. ಈ ಮಧ್ಯೆ ನಮ್ಮ ರೂಮಿನಲ್ಲಿರುವ ಒಬ್ಬರೂ ಸೇರಿದಂತೆ ಹಲವರು ಕಾಯಿಲೆ ಬಿದ್ದಿದ್ದು, ಅವರನ್ನು ಆಶ್ರಮದವರು ಕೆಟ್ಟದಾಗಿ ನೋಡಿಕೊಂಡದ್ದು, ತೀರಾ ಕೈಲಾಗದವರಿಗೆ ತಾತ್ಸಾರ ಮಾಡಿ ನರಳುವಂತೆ ಮಾಡಿದ್ದು ನಮಗೆ ನೆಮ್ಮದಿಯನ್ನು ಕೆಡಿಸಿತು. ಮುಂದಿನ ದಿನಗಳಲ್ಲಿ ನಮ್ಮ ಅನಾರೋಗ್ಯ ಸ್ಥಿತಿಗೆ ಸಿಗುವ ಉಪಚಾರ ಇದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ಕೊಂಡೆವು. ಆರೋಗ್ಯವಿದ್ದು ನಮ್ಮ ಕೆಲಸ ನಾವು ಮಾಡಿಕೊಂಡರಷ್ಟೇ ಇಲ್ಲಿ ಜೀವನ, ಏನಾದರೂ ಆರೋಗ್ಯ ಕೈಕೊಟ್ಟರೆ, ನಮ್ಮದು ಕಾಯಿಲೆ ಬಿದ್ದು ನರಳುವ ನಾಯಿಗಿಂತಲೂ ಕೀಳು ಎಂಬ ಯೋಚನೆ ಪ್ರಾರಂಭವಾಯಿತು. ಆಶ್ರಮದಲ್ಲಿ ಸಾವುಗಳು ಸಹಜವಾಗುತ್ತಿವೆ. ಆದರೆ ಬಹುತೇಕ ಸಾವು ಕಂಡ ಎಲ್ಲಾ ವೃದ್ಧರ ವಿಷಯದಲ್ಲಿ ಒಂದೋ ಪ್ರಾಣಿಯ ದೇಹವನ್ನು ವಿಲೇವಾರಿ ಮಾಡಿದ ಹಾಗೆ ಸುಟ್ಟು ಬರುವುದು ಅಥವಾ ಸಂಬಂಧಿಸಿದವರಿಗೆ ದೇಹ ಕೊಡಲು ಡೊನೇಷನ್ ನ್ನು ಕಡ್ಡಾಯವಾಗಿ ಕೇಳುವುದು ಸಾಮಾನ್ಯ ನೋಟವಾಗಿತ್ತು. ಇದನ್ನು ಕಂಡು ನಮ್ಮ ಮನಸು ಹೇಸಿಗೆ ಹಾಗೂ ಭಯದಿಂದ ವ್ಯಾಕುಲಗೊಂಡಿತು. ಈಗ ನಮಗೆ ಈ ಆಶ್ರಮದ ಬಗ್ಗೆ ಕಿಂಚಿತ್ತೂ ನಂಬಿಕೆ, ಗೌರವ ಇಲ್ಲ. ಇಲ್ಲಿಯ ಊಟ ಬೇಡ, ತಿಂಡಿ ಬೇಡ, ಏನೂ ಬೇಡ. ಬೇರೆ ಒಳ್ಳೆಯ ಆಶ್ರಮ ಏಕೆ ನೋಡಬಾರದು ಎಂಬ ಹೊಸ ಯೋಚನೆ. ಎಲ್ಲಾ ಕಡೆ ಹೀಗೇ ಇದ್ದರೆ ಎಂಬ ಆತಂಕ, ಭಯ. ಜೊತೆಗೆ ಇಲ್ಲಿಂದ ಹೊರಟರೆ ಇವರು ಕೊಟ್ಟ ಹಣವನ್ನು ವಾಪಸ್ ಕೊಡುವುದಿಲ್ಲ, ಅದನ್ನು ಕಳೆದು ಕೊಂಡಂತೆ. ಈ ಯೋಚನೆಯಲ್ಲಿದ್ದಾಗಲೇ ಯಾರೋ ಒಬ್ಬರು ಆಸ್ಪತ್ರೆಗೆ ಹೋಗಿ ಡಿಸ್ಚಾರ್ಜ್ ಆಗಿ ಬಂದವರು ನಮ್ಮ ರೂಮಿನಲ್ಲಿ - ಏನು ನೋವೋ, ಪಾಪ, ಸದಾ ನರಳುತ್ತಿವರು, ಅವರಿಗೂ ನಿದ್ದೆಯಿಲ್ಲ, ಪ್ರತ್ಯೇಕ ರೂಮ್ ಇಲ್ಲವಾದ್ದರಿಂದ ಅದೇ ರೂಮಿನಲ್ಲಿರುವ ನಮ್ಮವಳಿಗೂ ಆರೋಗ್ಯ ಕೈಕೊಡುತ್ತಿದೆ. ಅವಳಿಗೆ ಏನಾದರೂ ಆದರೆ ಎಂಬ ಭಯದಿಂದಲೇ ಹೊಸ ಆಶ್ರಮದ ಹುಡುಕಾಟ ಅನಿವಾರ್ಯವಾಯಿತು. ಈ ಸಮಯದಲ್ಲಿ ಫೋನ್ ಮಾಡಿದ ಕೂಡಲೇ ಬಂದ ನಮ್ಮ ಆಪ್ತ ಹುಡುಗರನ್ನು ಮರೆಯುವಂತಿಲ್ಲ. ಮತ್ತೆರಡು ಆಶ್ರಮವನ್ನು ತೋರಿಸಿ ನನಗೇ ಆಯ್ಕೆಯನ್ನು ಬಿಟ್ಟರು. ಈ ಆಶ್ರಮಕ್ಕೆ ಹೋಲಿಸಿದರೆ ಅಲ್ಲಿಯ ಹೆಚ್ಚುಗಾರಿಕೆಯನ್ನು ತಿಳಿಸಿದರು. ಅದರಲ್ಲಿ ನಮ್ಮೊಂದಿಗೆ ಸದಾ ನೋಡಿಕೊಳ್ಳಲು ಇರುವ ವಾರ್ಡನ್ ಹಾಗೂ ಒಂದು ಸುಮಾರಿಗಿರುವ ಆಸ್ಪತ್ರೆ, ಸುತ್ತ ಗಿಡಮರಗಳು. ಈ ವಾತಾವರಣದಲ್ಲಿರುವ ಆಶ್ರಮ ನನಗೆ ಆ ಸ್ಥಿತಿಯಲ್ಲಿ ಸರಿಯೆನಿಸಿತು. ಹೊಸ ಡಿಪಾಸಿಟ್, ಹೊಸ ಆಶ್ರಮ ಹೊಸಾ ಜಾಗದಲ್ಲಿ ಜೀವನ. ಹಳೆಯದು ಈಗಾಗಲೇ ಬೇಡವಾದ್ದರಿಂದ ಅದನ್ನು ಕೊಡವಿಕೊಂಡು ಬರುವುದು ಕಷ್ಟವಾಗಲಿಲ್ಲ.

ಹೊಸ ಆಶ್ರಮದ ಹೊಸ ಬೆಳಿಗ್ಗೆ. ನನ್ನವಳಿಗೆ ಅದೇ ಹಳೆಯ ಕಾಯಿಲೆ ಇದ್ದರೂ ಏನೋ ಹೊಸ ಹುರುಪು. ಅದನ್ನು ಕಂಡು ನನಗೂ ಏನೋ ನೆಮ್ಮದಿ. ಯಥೇಚ್ಛ ಬಿಸಿ ನೀರಿನ ಹಿತವಾದ ಸ್ನಾನ, ಪಕ್ಕದಲ್ಲೇ ಚಿಕ್ಕ ದೇವಸ್ಥಾನ. ಕುಳಿತುಕೊಂಡು ಕಷ್ಟ ಸುಖಗಳನ್ನು ಮಾತನಾಡಿಕೊಳ್ಳಲು ಹಾಕಿರುವ ಕಲ್ಲು ಬೆಂಚುಗಳು. ಸುತ್ತ ಕಾಣುವಷ್ಟು ದೂರ ಗಿಡಮರಗಳು. ಪೂಜನೀಯ ವಾತಾವರಣ. ಈ ಆಶ್ರಮದಲ್ಲಿಯೂ ಸಹ ನಮ್ಮ ಜೊತೆಗೆ ಹಳೆಯ ಆಶ್ರಮದಲ್ಲಿರುವಂತೆ ದೊಡ್ಡ ಹಿನ್ನೆಲೆಯ ಸಹ ಜೀವಿಗಳು. ಮನಸ್ಸಿನಲ್ಲಿ ಭಾರವಾದ ದುಃಖಗಳಿದ್ದರೂ ಹಗುರವಾಗಿ ನಗುನಗುತ್ತಾ ಇರುವ ಜೀವನ್ಮುಖಿಗಳು. ಕೆಲವರು ಜೀವನ ಹೇಗೆ ಮಾಡಬೇಕೆಂದು ಹೇಳುವ ಮೇಧಾವಿಗಳು. ಅಧ್ಯಾತ್ಮಿಕ ಚಿಂತನೆಗಳ ಅರೆದು ಕುಡಿದವರು ಕೆಲವರು. ಇದ್ದರೆ ಝಂ ಎಂದು ಇರಬೇಕು, ಇಲ್ಲವೇ ಢಂ ಎಂದು ಹೋಗಿ ಬಿಡಬೇಕು ಎನ್ನುವ ಸುಖಿಗಳು, ಈ ಜೀವನ ನಶ್ವರ, ಎಲ್ಲಾ ಸುಳ್ಳು, ಇದು ಕೇವಲ ಒಂದು ‌ನಾಟಕ, ಇದ್ದಷ್ಟು ದಿನ ಒಳ್ಳೆಯದು ಮಾಡಿ, ಒಳ್ಳೆಯ ವಿಚಾರ ಮಾಡಿ, ಸಾಧ್ಯ ವಾದರೆ ಸಹಾಯ ಮಾಡಿ, ಯಾವಾಗ ಆ ಮೇಲಿನವನು ಕರೆಯುತ್ತಾನೋ, ತಕ್ಷಣ ಸಮಾಧಾನವಾಗಿ ಹೊರಡಿ ಎಂದು ಹೇಳುವ ವಾಸ್ತವ ವಾದಿಗಳು. ಇದೂ ಒಂದು ರೀತಿ ಚೆನ್ನಾಗಿದೆ ಎಂದು ಕೊಂಡೆವು.

ಡಿಸೆಂಬರ್ ತಿಂಗಳ ಚಳಿಯ ದಿನಗಳು. ನನ್ನವಳ ಮೈಕೈ ಸೊಂಟ ನೋವು, ಸ್ನಾಯು ಸೆಳೆತ ಹೇಳತೀರದು. ಒಂದೇ ಸಮನೆ ಅಳು, ನಿಟ್ಟುಸಿರು. ಹೀಗೇಯೇ ನರಳುತ್ತಾ ಆರು ತಿಂಗಳು ಕಳೆದವು. ಇದ್ದಕ್ಕಿದ್ದಂತೆ ಆಶ್ರಮವಾಸಿಗಳಲ್ಲಿ ಹಲವರಿಗೆ ಡೆಂಗ್ಯೂ ಜ್ವರ ಬಂದಿದೆ. ಔಷಧೋಪಚಾರ ಆದರೂ ನರಳುವುದು ತಪ್ಪುವುದಿಲ್ಲ. ಆದರೆ ಎಷ್ಟು ಸಮಯ ನರಳಬೇಕೆಂಬುದು ಗೊತ್ತಿರುವುದಿಲ್ಲ. ಅವಳಿಗೆ ಹೊರಗೆ ದೇವಸ್ಥಾನದ ಕಟ್ಟೆಗೂ ಹೋಗಲಾಗುತ್ತಿಲ್ಲ. ಅವಳು ಮೈಕೈ ಒತ್ತುವುದು, ನೋವಿನ ಔಷಧಿ ಹಚ್ಚುವುದು, ಸಮಯ ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು ಮಾಡುತ್ತಿದ್ದೆ. ಬಕೆಟ್ ನಿಂದ ನೀರು ಎತ್ತಿ ಸ್ನಾನ ಮಾಡಲೂ ಅಸಾಧ್ಯವಾದ್ದರಿಂದ ನಾನೇ ಸ್ನಾನ ಮಾಡಿಸುತ್ತಿದ್ದೆ. ೭೫ ರ ಈ ವಯಸ್ಸಿನಲ್ಲಿ ನಿಮ್ಮಿಂದ ಸ್ನಾನ ಸೇವೆ ಪಡೆಯುವಂತಾಯಿತೇ ಎಂದು ಅಲವತ್ತುಕೊಳ್ಳುವಳು. ನನಗೇನೂ ಆಗುವುದು ಬೇಡ ಎಂದು ದೇವರಲ್ಲಿ ಪದೇಪದೇ ಕೇಳಿಕೊಳ್ಳುವಳು. ಜೊತೆಗೇ ನನಗೇನಾದರೂ ಆದರೆ ನೀವಿದ್ದೀರಿ, ನಿಮಗೇನಾದರೂ ಆದರೆ ಹೇಗೆ ಎನ್ನುತ್ತಾ "ನಿನ್ನಂಥ ಸ್ವಾಮಿ ನನಗುಂಟು ನಿನಗಿಲ್ಲ, ನಿನ್ನಂಥ ದೊರೆಯು ಎನಗುಂಟು ನಿನಗಿಲ್ಲ, ನಿನ್ನಂಥ ತಂದೆ ಎನಗುಂಟು ನಿನಗಿಲ್ಲ, ನಾನೇ ಸ್ವದೇಶಿ ನೀನೇ ಪರದೇಶಿ ,ನಿನ್ನರಸಿ ಲಕುಮಿ ಎನ್ನ ತಾಯಿ, ನಿನ್ನ ತಾಯ ತೋರೋ, ಪುರಂದರ ವಿಠಲ" ಎಂದು ಹೇಳಿ ಕೊಳ್ಳುವಳು. ಆ ನೋವಿನಲ್ಲೂ ಅವಳ ಸಮಯ ಸ್ಪೂರ್ತಿಯ ಹಾಡು ಕೇಳಿ ಮೆಚ್ಚುಗೆಯಾಯಿತು. ಆ ಮೆಚ್ಚುಗೆ, ಸಮಾಧಾನ ಹೆಚ್ಚು ದಿನ ಇರಲಿಲ್ಲ. ಒಂದು ವಾರದಲ್ಲೇ ಹೆಚ್ಚಾದ ಜ್ವರ ನ್ಯೂಮೋನಿಯಾಕ್ಕೆ ತಿರುಗಿದೆ. ಆದ್ದರಿಂದಲೇ ರಾತ್ರಿ ಮಲಗುವ ಮುನ್ನ ಏನೇನೋ ಮಾತನಾಡುತ್ತಾ ನಾಶವಾದ ಸಂಪತ್ತು, ಮಾನಸಿಕ ವ್ಯಥೆ, ಮನೆಯಲ್ಲಿನ ಕೆಟ್ಟನಡತೆ, ಮೋಸಹೋದದ್ದು ಹಾಗೂ ಅವಮಾನವಾದದ್ದನ್ನು ಬುದ್ಧಿವಂತನಾದವನು ಹೊರಗಿನವರಲ್ಲಿ ಹೇಳಬಾರದೆಂಬ ಚಾಣಕ್ಯ ನೀತಿಯ ಶ್ಲೋಕವನ್ನು ಅವಳು ಹೇಳಿದ್ದು. ನಾನೂ ಸಮಾಧಾನ ಮಾಡಿ ಯೋಚಿಸುತ್ತಾ ಮಲಗಿದಾಗ ಬೆಳಿಗ್ಗೆ ಐದು ಗಂಟೆಯಾಗಿತ್ತು.

ಈಗ ಕಾಫಿಗೆಂದು ಎಬ್ಬಿಸಲು ಕರೆದರೆ ಮಾತನಾಡುತ್ತಿಲ್ಲ. ಪರೀಕ್ಷೆ ಮಾಡಲು ಗಾಬರಿಯಿಂದ ನೋಡಿದರೆ ಅವಳು ಉಸಿರಾಡುತ್ತಲೇ ಇಲ್ಲ. ಮಲಗಿದಲ್ಲೇ ಪ್ರಾಣ ಹೋಗಿದೆ. ನನ್ನೊಂದಿಗೆ ಮಾತನಾಡುತ್ತಿದ್ದ ಅವಳು ಅದೆಷ್ಟು ಹೊತ್ತು ಹಾಗೇ ಯೋಚನೆ ಮಾಡುತ್ತಿದ್ದಳೋ? ಸುಮ್ಮನೆ ಅವಳತ್ತ ನೋಡಿದೆ. ಮುಂದೇನು ಮಾಡುವುದು. ಊರಿನಲ್ಲಿರುವ ನಮ್ಮ ಎಲ್ಲಾ ಸಂಬಂಧಿಗಳಿಗೆ ಈ ವಾರ್ತೆ ತಿಳಿಸಿ ಅವಳ ಸಾವಿಗೆ ಗೌರವ ಕೊಡಿಸಬೇಕು. ಎಲ್ಲರೂ ಬರಲು ನಾಳೆಯೇ ಆಗುತ್ತದೆ ಎಂದು ವಾರ್ಡನ್ ಗೆ ತಿಳಿಸಿದೆ. ಸರಿ ಎನ್ನುತ್ತಾ ಶೈತ್ಯಾಗಾರಕ್ಕೆ ಇಲ್ಲದ ನನ್ನವಳ ರವಾನೆ ಮಾಡಿದರು. ಈಗ ನನ್ನ ಸ್ಥಿತಿ ಹೇಳಲಾಗುತ್ತಿಲ್ಲ. ಕಾಣದ ದೇಹಕ್ಕೆ ಅಳುತ್ತಿದ್ದೇನೋ, ಇಲ್ಲದ ಜೀವಕ್ಕೆ ಅಳುತ್ತಿದ್ದೇನೋ, ವಿಚಿತ್ರ ಸಂಕಟ. ವಿವಾಹದ ದಿನದಿಂದ ಇಂದಿನವರೆಗೂ ಅವಳ ಸಾಂಗತ್ಯದ ಅವಲೋಕನ. ನಿನ್ನೆ ರಾತ್ರಿಯೇ ಅಲ್ಲವೇ, ಎಂದೂ ತಿರುಗಿ ಮಾತನಾಡದ ಸಾಧ್ವಿ ಎಷ್ಟೊಂದು ದುಃಖದಿಂದ ತನ್ನ ಮನದಾಳದ ಮಾತನ್ನು ಬಿಚ್ಚಿಟ್ಟು ತನ್ನ ನೋವಿನೊಂದಿಗೆ ನನಗೇನೂ ತೊಂದರೆ ಆಗಬಾರದೆಂದು ದೇವರಲ್ಲಿ ಮೊರೆಯಿಟ್ಟಿದ್ದು. ಅದರಿಂದಲೇ ಅಲ್ಲವೇ ನಾನು ಹಳೆಯದೆಲ್ಲ ಯೋಚಿಸುತ್ತಿರುವುದು! ಆಕೆ ಸತಿಯಾಗಿ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ಜೀವ. ನಿಜವಾದ ಸಹಧರ್ಮಿಣಿ. ತನ್ನ ಅನಾರೋಗ್ಯದ ಬಗ್ಗೆ ಎಂದೂ ಕೊರಗದೆ ನನ್ನ ಶ್ರೇಯಸ್ಸನ್ನು ಬಯಸಿದವಳು, ನನ್ನ ಹಲವು ನಡೆಗಳು ತಪ್ಪಾದರೂ ಅದನ್ನು ಹೇಳದೆ ತಿದ್ದಿದವಳು. ಅದೇಕೆ ಈ ಆಸ್ತಿ ಮನೆಗಳನ್ನು ಮಾರುವ ತೀರ್ಮಾನಕ್ಕೆ ಸರಿತಪ್ಪುಗಳೆನ್ನದೆ ನನ್ನೊಂದಿಗೆ ಸಹ ಮತ ನೀಡಿದಳು, ಈ ಮಹಾತಾಯಿ, ಒಂದು ರೀತಿಯಲ್ಲಿ ಅವಳ ಸಾವಿಗೆ ನಾನೇ ಕಾರಣ ನಾದೆನೇ? ಎಂದು ಏನೇನೋ ಮನಕ್ಕೆ ಬರುತ್ತಿದೆ. ದುಃಖ ಉಮ್ಮಳಿಸಿ ಬರುತ್ತಿದೆ. ತಾಳಿಕೊಂಡು ಇನ್ನಿತರ ಆಶ್ರಮವಾಸಿಗಳ ಮಧ್ಯೆ ಕುಳಿತಿರುವೆ. ಮತ್ತೆ ಅವಳದೇ ಯೋಚನೆ. ಈಗ ನಾನು ಆರ್ಥಿಕವಾಗಿ ಅನುಕೂಲಸ್ಥನಲ್ಲ, ಅವಳ ಇಂದಿನ ದುಸ್ಥಿತಿ ಈ ನನ್ನ ತಪ್ಪು ತೀರ್ಮಾನದ ಫಲ ಎಂದು ತಿಳಿದೂ ಏನೂ ಬಾಯಿ ಬಿಡದ ಜೀವ ಎಂದು ಕೊಳ್ಳುತ್ತಾ

ಜಾನೀಯಾತ್ ಸಂಗರೇ ಭೃತ್ಯಾನ್ ಬಾಂಧವಾನ್ ವ್ಯಸನಾಗಮೇ |
ಆಪತ್ಕಾಲೇಷು ಮಿತ್ರಾಣಿ ಭಾರ್ಯಾಂ ಚ ವಿಭವಕ್ಷಯೇ ||

ಅಂದರೆ ಯುದ್ಧಕಾಲದಲ್ಲಿ ಸೇವಕನ ಪರೀಕ್ಷೆಯಾಗುವುದು, ಸಂಕಟಕಾಲದಲ್ಲಿ ಭಾಂಧವರ ಪರೀಕ್ಷೆಯಾಗುವುದು, ಆಪತ್ಕಾಲದಲ್ಲಿ ಗೆಳೆಯನ ಗುಣವು ವ್ಯಕ್ತವಾಗುವುದು, ಹೆಂಡತಿಯ ಸ್ವಭಾವವು ಬಡತನ ಬಂದಾಗ ತಿಳಿಯುವುದು, ಎಂಬ ಚಾಣಕ್ಯ ನೀತಿಯಲ್ಲಿ ಹೇಳಿರುವಂತೆ ಈಕೆ ಆ ಪರೀಕ್ಷೆಯಲ್ಲೂ ಯಶಸ್ವಿಯೇ.

ಬಂದ ಯೋಚನೆಗಳೆಲ್ಲವನ್ನೂ ಹೇಳಲಾಗುತ್ತಿಲ್ಲ. ಮರುದಿನ ಬೆಳಿಗ್ಗೆ ಬಂದವರಿಗೆ ಶೈತ್ಯಾಗಾರದಿಂದ ಪಡೆದ ಅವಳ ದರ್ಶನ ಪ್ರಾರಂಭ. ಅವಳ ಒಡಹುಟ್ಟಿದವರಲ್ಲಿ ಈಕೆಯೇ ಚಿಕ್ಕವಳು. ಅಳುವವರು ಯಾರೂ ಉಳಿದಿಲ್ಲವೆಂದರೂ ಯಾರೋ ಆ ಶಾಸ್ತ್ರವನ್ನು ಮಾಡಿ ಮುಗಿಸಿದರು. ಎಲ್ಲೋ ಹುಟ್ಟಿ ಬೆಳೆದ ದೇಹಕ್ಕೆ ನಿರೀಕ್ಷಿಸದ ನಗರದಲ್ಲಿ ಅನಿರೀಕ್ಷಿತ ರೀತಿಯಲ್ಲಿ ಗೌರವದ ವಿದಾಯ. ನಮಗೆ ಮಕ್ಕಳಿಲ್ಲದಿದ್ದುದರಿಂದ ಮುಂದಿನ ಕರ್ಮಗಳನ್ನು ಎಲ್ಲಿ, ಹೇಗೆ ಮತ್ತು ಯಾರು ಮಾಡುವುದು ಎಂಬ ಗುಸು ಗುಸು. ಈ ಕಡೆ ಅವಳ ಕಳೇಬರದತ್ತ ನನ್ನ ನೋಟ ಎಲ್ಲಿಗೋ ಕರೆದೊಯ್ಯುತ್ತಿದೆ. ಬದುಕಿನ ಚತುರ್ ಆಶ್ರಮಗಳಾದ ಬ್ರಹ್ಮಚರ್ಯ, ಗೃಹಸ್ಥ ಎಂದೋ ಮುಗಿದಿದೆ. ಇಂದು ವಾನಪ್ರಸ್ಥವೂ ಮುಗಿಯಿತು. ನಾಳೆಯಿಂದ, ಉಳಿದಿರುವ ಸನ್ಯಾಸ. ಆ ವೇಷದ ಅಗತ್ಯ ನನಗಿಲ್ಲ. ನಮ್ಮದು ಎಂಬುವಾಗಲೇ ಅಷ್ಟಷ್ಟು ಅವರಿವರಿಗೆ ಕೊಟ್ಟು ಇಲ್ಲವಾಗಿಸಿಕೊಂಡು ಈಗ ಅವಳನ್ನೂ ಕಳೆದುಕೊಂಡಾಗ ಮುಂದೆ ಸನ್ಯಾಸಿಯ ಬದುಕೇ ಅಲ್ಲವೇ. ಶೇಷಾಯುಷ್ಯವನ್ನು ಸನ್ಯಾಸ ಸ್ವೀಕರಿಸದಿದ್ದರೂ ಸನ್ಯಾಸಿಯಂತೆ ಬದುಕುವುದು ಬದುಕಿನ ಅನಿವಾರ್ಯವೂ ಹೌದು, ಅಗತ್ಯವೂ ಹೌದು. ಸುಮಾರು ಆರೂವರೆ ದಶಕಗಳ ದಾಂಪತ್ಯ ಜೀವನದ ಭಾಗವಾಗಿದ್ದ ದೇಹಕ್ಕೆ ಕರ್ಮಾದಿಗಳಿಂದ ಅಂತಿಮ ಗೌರವ ಸಲ್ಲಿಸಿ ಆ ಚೈತನ್ಯಕ್ಕೆ ಸದ್ಗತಿ ತೋರಿಸಿ ವೃದ್ಧಾಶ್ರಮವೆಂಬ ಆ ಸನ್ಯಾಸಾಶ್ರಮದತ್ತ ಹೊರಡುವುದಷ್ಟೇ ನನ್ನ ಗುರಿ. ಇಂತಹ ಜೀವನದ ಅರಿವು ಎಲ್ಲರಿಗೂ ಆಗದು. ನನ್ನದು ಏನೂ ಇಲ್ಲ, ಯಾರೂ ನಮ್ಮವರೆಂಬುದಿಲ್ಲ ಎಂಬುದನ್ನು ಯಾವುದೋ ಕಾರಣದಿಂದ ಅನುಭವದ ಮೂಲಕವೇ ಕಲಿಸಿದ ಆ ಪರಮಾತ್ಮನಿಗೆ ಅದೆಷ್ಟು ಋಣಿಯಾಗಿದ್ದರೂ ಸಾಲದು. ಈ ವಿಚಾರದಲ್ಲಿ ಇರುವಾಗಲೇ ದಾಯಾದಿಗಳೊಬ್ಬರು ಅವಳ ಉತ್ತರಕರ್ಮಾದಿಗಳನ್ನು ಪೂರೈಸಿ ನನ್ನ ಜವಾಬ್ದಾರಿಗಳನ್ನು ಕಳೆದು ಮನಸು ಹಗುರ ಮಾಡಿದರು. ಕಡೆಯ ಬಾರಿ ಮಾಯವಾದ ಮನದನ್ನೆ ಅರ್ಧಾಂಗಿಯ ಆತ್ಮಕ್ಕೆ ಮೋಕ್ಷವನ್ನು ಕೋರಿ ಹೃದಯಪೂರ್ವಕ ವಿದಾಯ ಹೇಳಿದೆ.

ಪುನಃ ವೃದ್ಧಾಶ್ರಮ ಎಂಬ ವಾನಪ್ರಸ್ಥಾಶ್ರಮದಲ್ಲಿ. ಇದ್ದವರ ಸಹಾನುಭೂತಿ ಸಾಂತ್ವನದ ಮಾತುಗಳು ಏನೂ ಬೇಡವಾಗಿದೆ. ವೈರಾಗ್ಯದ ಜೀವನಕ್ಕೆ ಮಾರ್ಗ ತೋರಿಸುವ ಆಶ್ರಮದಲ್ಲೇ ದೊರೆತ ಹಲವು ಗ್ರಂಥಗಳು ನನ್ನ ಎಲ್ಲಾ ನೋವುಗಳನ್ನು ಮರೆಸುತ್ತಿದೆ. ಸಂಸಾರ ಜೀವನದ ಅನುಭವ ಎಲ್ಲರಿಗೂ ಆಗಿರುತ್ತದೆ. ಯಾರಿಗೆ ಯಾರುಂಟು, ಎರವಿನ ಸಂಸಾರ ಎಂಬ ದಾಸವಾಣಿ ಸದಾ ಗುನಗುನಗಿಸುತ್ತಿದೆ. ದೇವರೇ ನೀನೇ ಎಲ್ಲಾ. ನಿನಾಡಿಸಿದಂತೆ ನಡೆಯುವುದು ಎಲ್ಲಾ, ಎಂಬ ಭಾವ ಮನದಲ್ಲಿ ವ್ಯಾಪಕವಾಗುತ್ತಿದೆ. ಕಡೆಯದಾಗಿ ಹೇಳುವುದಾದರೆ ವೃದ್ಧಾಶ್ರಮದ ಜೀವನವನ್ನು ಯಾರಿಗೂ ಹಾರೈಸದಿದ್ದರೂ ಅಲ್ಲಿಯ ಅನುಭವದಿಂದ, ಹೇಳುವುದಾದಲ್ಲಿ ಅಲ್ಲಿಯ ಜೀವಗಳಿಗೆ ಸಂತಸ ತರುವ ಕೆಲವು ಪುಣ್ಯದ ಕೆಲಸಗಳನ್ನು ತಾವುಗಳು ಮಾಡಬಹುದು. ಮಾಡಿ ಎನ್ನುವುದಿಲ್ಲ. ಆದರೆ ಸೇವೆ ಯಾವಾಗಲೂ ಶಾಂತಿಯನ್ನು ತರುತ್ತದೆ. ಆದ್ದರಿಂದ ಅವಕಾಶವನ್ನು ಮಾಡಿಕೊಂಡು ಆಶ್ರಮಕ್ಕೆ ಭೇಟಿ ಕೊಡಿ. ಆಶ್ರಮದವರ ಅನುಮತಿ ಪಡೆದು ಹಿರಿಯರಿಗೆ ಬೇಕಾದ ಔಷಧಿ, ಅವರು ತಿನ್ನಬಹುದಾದ ತಿಂಡಿ ಪದಾರ್ಥಗಳನ್ನು ಏನಾದರೂ ತಂದು ಕೊಡಿ. ಪ್ರೀತಿಯ ಮಾತನಾಡಿ. ಸಣ್ಣ ಕರವಸ್ತ್ರ, ಟವೆಲ್, ಮೈಕೈ ನೋವಿನ ಔಷಧಿ, ಕಿವಿಯಲ್ಲಿ ತಡವಿ ಕೊಳ್ಳಬಹುದಾದ ಹತ್ತಿಯ ಕಡ್ಡಿ ಇತ್ಯಾದಿ ದೈನಂದಿನ ಅಗತ್ಯಗಳನ್ನು ಪೂರೈಸಲು ದುಬಾರಿಯಾಗದು. ಪರರ ಸಂತೋಷವೇ ನಮ್ಮ ಸಂತೋಷ ಎಂದುಕೊಳ್ಳುವುದೇ ಬೇರೆಯವರ ನೋವು ಅರಿಯುವ ಮಾರ್ಗ. ಇನ್ನು ಸರ್ವಸಂಗ ಪರಿತ್ಯಾಗಿಯಾಗಿ ನನ್ನ ಬಗ್ಗೆ ನಾನು ಹೇಳುವುದೇನಿಲ್ಲ. ತಮಗೆಲ್ಲರಿಗೂ ಮಂಗಳವಾಗಲಿ ಎಂಬುದೇ ನನ್ನ ಆಶಯ.
 
ಸರ್ವೇ ಭವಂತು ಸುಖಿನ:| ಸರ್ವೇ ಸಂತು ನಿರಾಮಯಾ:||
ಸರ್ವೇ ಭದ್ರಾಣಿ ಪಶ್ಯಂತು | ಮಾ ಕಶ್ಚಿತ್ ದು: ಭಾಗ್ಭವೇತ್||

ಈ ವಾಸಣ್ಣನ ವಿಚಾರ ಓದಿದಾಗ ಆತನಿಗೆ ಕಷ್ಟ ಮತ್ತು ಸುಖಗಳ ಜೀವನ ಪರಿಚಯ ಚೆನ್ನಾಗಿಯೇ ಇದೆ. ಆತನ ಜೀವನ ದರ್ಶನ ಹಾಗೂ ಆಶ್ರಮವಾಸಿಗಳ ಪರವಾಗಿ ಆತನಾಡಿದ ಮಾತಿನ ಸಾರಾಂಶ ಗಮನಾರ್ಹ. ಯಾರಿಗೇ ಆಗಲಿ, ಸುಖವಾದ ಜೀವನ ಎಂದರೆ ಕೇವಲ ಬೇಕಾದುದನ್ನು ತಿಂದು ಆಡಿಕೊಂಡರಷ್ಟೇ ಅಲ್ಲ. ತಾವು ಪ್ರೀತಿಸಬೇಕು, ಪ್ರೀತಿಸಲ್ಪಡಬೇಕು, ಗೌರವಿಸಬೇಕು, ಕನಿಷ್ಠವಾಗಿಯಾದರೂ ತಮ್ಮ ಮಾತನ್ನು ಇತರರು ಸಹನೆಯಿಂದ ಆಲಿಸಬೇಕು. ಕೈಲಾಗದವರಿಗೆ ಸಾಂತ್ವನದ ಕೆಲವು ಮಾತುಗಳು ಬೇಕು. ಅವು ಹಲವು ದಿನಗಳ ಅವರ ಶಾಂತ ಜೀವನಕ್ಕೆ ಸಹಕಾರಿ. ಇದು ಬದುಕಬೇಕೆಂಬ ಅಭಿಲಾಷೆ ತರುತ್ತದೆ. ಏನನ್ನು ಬೇಕಾದರೂ ಮಾಡುವೆನೆಂಬ ವಿಶ್ವಾಸ ಮೂಡಿಸುತ್ತದೆ. ಚೈತನ್ಯಶೀಲ ಬದುಕಿಗೆ ದಾರಿ ಮಾಡಿಕೊಡಲು, ಕೈಲಾಗದವರ ದೈನಂದಿನ ಜೀವನದ ಅಗತ್ಯಗಳನ್ನು ಪೂರೈಸಲು ಸ್ವಾರ್ಥವಿಲ್ಲದ ಸನ್ಯಾಸಿಯ ಮಾತನ್ನು ವರ್ಷದಲ್ಲಿ ಒಮ್ಮೆಯಾದರೂ ಅನುಸರಿಸೋಣ. ಇದರಿಂದ ಸಮಾಜಕ್ಕೂ ಒಳಿತು. ಜೀವನದಲ್ಲಿ ನೊಂದು ಇಂದು ಕಾಣದ, ಸಾಮಾಜಿಕ ಕಳಕಳಿಯ ವಾಸಣ್ಣನವರಿಗೂ ಗೌರವ ಸಲ್ಲಿಸಿದಂತಾಗುತ್ತದೆ.

Comments

  1. ವಾಸ್ತವ ಆದರೂ ಬಡಿದಾಟ
    ಬಹಳ ಚೆನ್ನಾಗಿದೆ
    ಸರಾಗವಾಗಿ ಓದಿಸಿಕೊಂಡು ಹೋಗುವ ಬರಹ
    ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವ ಜೀವನ

    ReplyDelete
  2. ಮಾನವ ಸಹಜವಾದ ಮಾನಸಿಕ ತೊಳಲಾಟ, ತೂಗುಯ್ಯಾಲೆಯ ತರಹದ ಅನಿಸಿಕೆಗಳು, ಪ್ರತಿ ಕ್ಷಣದ ಹೊಂದಾಣಿಕೆ ತರುವ ಭಾವ, ಅದರ ಪ್ರಭಾವ, ಬಾಂಧವ್ಯದ ಬೆಸುಗೆಯ ಒಳನೋಟ, ಸಮಯೋಚಿತ ನಿರ್ಧಾರಗಳ ಅಗತ್ಯತೆ, ಆಶ್ರಮ - ಜೀವನದ ಒಳ ಹೊರ ನೋಟಗಳು, ಅಲ್ಲಲ್ಲಿ ಸೂಕ್ತ ಉಲ್ಲೇಖಗಳ ಪ್ರಯೋಗದ ಸೊಬಗು, ಎಲ್ಲದರ ಶಿಖರ ಪ್ರಾಯವಾಗಿ ಹೊಮ್ಮಿರುವ ಮಾನವತೆಯ ಪ್ರತೀಕವಾಗಿ ಮಾನವನಲ್ಲಿ ಇರಬೇಕಾದ ಅತ್ಯಗತ್ಯ ಅಂಶಗಳನ್ನು ಕೆಲವೇ ವಾಕ್ಯಗಳಲ್ಲಿ ಓದುಗರಿಗೆ ಮಾರ್ಗದರ್ಶನದಂತೆ ನೀಡಿರುವ ಗಮನಾರ್ಹವಾದ ಲೇಖಕರ ಸೂಕ್ಷ್ಮತೆ ಮೆಚ್ಚ ಬೇಕಾದದ್ದೇ.

    ReplyDelete
  3. ಚೆನ್ನಾಗಿ ಓದಿಸಿ ಕೊಂಡು ಹೋಯಿತು,ಮದ್ಯದಲ್ಲಿ ನಮ್ಮ ಜೀವನದಲ್ಲೂ ನಡಿಬಹುದ ಅತಂಕ ಹೆದರಿಕೆ ಆಯಿತು, ಆಶ್ರಮ ಜೀವನ ಬಹಳ ಪರಿಣಾಮ ಕಾರಿ ಯಾಗಿ ಚಿತ್ರಣ ವಾಗಿದೆ.

    ReplyDelete
  4. ಪ್ರಕೃತಿ ನಿಯಮದ ಸಾಲುಗಳು ಬಹಳ ಸೊಗಸಾಗಿದೆ ಇದೆ ಜೀವನ

    ReplyDelete
  5. ಹುಟ್ಟಿ ಬೆಳೆದ ಊರಿನ ಭಾವನಾತ್ಮಕ ಬೇರುಗಳನ್ನು ಕಳಚಿಕೊಂಡು ಬಂದಾಗ ಆಗುವ ನೋವಿನ ಚಿತ್ರಣ ಮನ ಮಿಡಿಯುತ್ತದೆ. ಬದಲಾದ ಪರಿಸ್ಥಿತಿಗನುಸಾರವಾಗಿ ಹುಟ್ಟಿಕೊಂಡ ವೃದ್ಧಾಶ್ರಮಗಳು ವೃದ್ಧರ ಅಸಹಾಯಕತೆಯನ್ನು ಶೋಷಿಸುವುದು ದುರದೃಷ್ಟಕರ.

    ReplyDelete
  6. “ವಾಸಣ್ಣನ ವಾನಪ್ರಸ್ಥ” ಲೇಖನ ಚೇನ್ನಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಬಂದೇ ಬರುವ ಈ ಘಟ್ಟ ಅತ್ಯಂತ ಕಷ್ಟಕರ. ಓದಿದಾಗ ಮನಸ್ಸಿಗೆ ಖೇದವೆನಿಸಿದರೂ ಯಾರೊಬ್ಬರನ್ನೂ ಅವಲಂಬಿಸದೆ ಜೀವನವನ್ನು ಬಂದಹಾಗೆ ಎದುರಿಸಿದ ರೀತಿ ನಮ್ಮೆಲ್ಲರಿಗೂ ಒಂದು ಪಾಠ. ಧನ್ಯವಾದಗಳು🙏😊

    ReplyDelete
  7. ವಾಸಣ್ಣನ ಜೀವನದಲ್ಲಿ ಸಾಂದರ್ಭಿಕವಾಗಿ ತೆಗೆದುಕೊಳ್ಳಲೇಬೇಕಾದ ತೀರ್ಮಾನಗಳು, ತದನಂತರ ತೀರ್ಮಾನಕ್ಕೆ ಕಟ್ಟುಬಿದ್ದು, ಜೀವನದಲ್ಲಿ ಅನುಭವಿಸಬೇಕಾದ ಸಾಲು ಸಾಲು ಕಷ್ಟಕಾರ್ಪಣ್ಯಗಳು, ಹತಾಷೆ, ದುಖಃಕರ ಘಟನೆಗಳ ಸರಮಾಲೆಯ ಸವಿಸ್ತಾರವಾದ ವಿವರಣೆಯನ್ನು ಓದುವಾಗ, ಕಣ್ಣನ್ನು ಒದ್ದೆ ಮಾಡದೇ ಇರದು. ಬಿಡದು. “ಹಣೆಬರಹದಲ್ಲಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ” ಎಂಬ ಮಾತು
    ನೆನಪಾಗಿ ಹಣೆಬರಹದಲ್ಲಿರುವಂತೆ ಅನುಭವಿಸಲೇ ಬೇಕೆಂಬಂತೆ ಇದೆ ವಾಸಣ್ಣನ ವಾನಪ್ರಸ್ಥ ಕಥಾ ಸಾರ.

    ReplyDelete
  8. ವಾಸಣ್ಣನ ಕಥೆ ಓದಿದಾಗ ಬಹಳ ಸಂಕಟವಾಗುತ್ತದೆ.ಅಂತಹ ಪರಿಸ್ಥಿತಿ ಯಾರಿಗೂ ಬರುವುದು ಖಂಡಿತ ಬೇಡ. 'ಇದ್ದಲ್ಲಿ ಇರಬೇಕು ಬಿದ್ದಲ್ಲಿ ಹುಡುಕಬೇಕು'ಎಂಬ ನಾಡು ನುಡಿಯಂತೆ ವಾಸಣ್ಣ ನವರು ಹಳ್ಳಿಬಿಟ್ಟು ನಗರಕ್ಕೆ ಬಂದು ತಪ್ಪುಮಾಡಿದರೆನೋ ಅನಿಸುತ್ತದೆ.ಆಶ್ರಮದಲ್ಲಿ ಹಲವಾರು ವೃದ್ಧರ ಕಥೆ ಓದಿದಾಗ ಮಕ್ಕಳು ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎಂಬ ಭಾವನೆ ಉಂಟಾಗುತ್ತದೆ.ಯಾವುದೇ ಕಾರಣಕ್ಕೂ ಮಕ್ಕಳನ್ನು ಅವಲಂಬಿಸದೆ ಸ್ವಂತವಾಗಿ ಬದುಕ ಬೇಕೆಂಬುದನ್ನು ಕಲಿಯಬೇಕು. 'ಯಾರಿಗೆ ಯಾರೂ ಪುರಂದರವಿಠಲ'. ವಯಸ್ಸಾದ ಮೇಲೆ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ ಅಲ್ಲದೆ ಯಾರಿಗೆ ಯಾರು ಆಗುವುದಿಲ್ಲ.ಎಂಬುದು ಅರಿವಾಗುತ್ತದೆ. ವಾಸಣ್ಣನ ಅವರ ಕಥೆ ಓದಿ ನಿಜಕ್ಕೂ ಎರಡು ದಿನ ಅದರ ಗುಂಗಿನಲ್ಲೇ ಇರುವಂತೆ ಆಯಿತು. ರಾತ್ರಿ ನೆನಪಾದರೆ ನಿದ್ರೆ ಹತ್ತಿರ ಸುಳಿಯುವುದೇ ಇಲ್ಲ.ದೇವರು ಯಾರಿಗೂ ಅಂತಹ ಜೀವನವನ್ನು ಕರುಣಿಸದಿರಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಒಟ್ಟಿನಲ್ಲಿ ಮನಮುಟ್ಟುವ ಲೇಖನವಾಗಿದೆ.

    ReplyDelete
  9. ವಾರಸುದಾರರಿಂದ ಸಿಗುವ ನೋವು ನಲಿವಿಗೂ ವಾಸಣ್ಣನ ಜೀವನಕ್ಕೂ ಯಾವುದೇ ವ್ಯತ್ಯಾಸವಿಲ್ಲ. ವಿಧಿಯು ಆಡುವ ಆಟದಿಂದ ಮನುಷ್ಯನನ್ನು
    ಪಕ್ವವಾಗಿಸಿ ಪರಿಸ್ಥಿತಿಯನ್ನು ಯಥಾವತ್ ಒಪ್ಪಿಕೂಳ್ಳುವಂತೆ ಮಾಡುತ್ತದೆ. ಈ ಲೇಖನವು ಸಹಧರ್ಮಿಣಿಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಗಂಡನ ನಿರ್ಧಾರಗಳನ್ನು ವಿರೋಧಿಸದ ಹಾಗೂ ಸಾಧಕಭಾಧಕಗಳನ್ನು ಚರ್ಚಿಸದ (ಕಾರ್ಯೇಷು ಮಂತ್ರಿ) ಹೆಂಡತಿಯ ಅಸಹಾಯಕತೆಯೇ ಮುಂದಿನ ಪರಿಸ್ಥಿತಿಗೆ ಕಾರಣವೆಂದು ನನ್ನ ವೈಯಕ್ತಿಕ ಅಭಿಪ್ರಾಯ. ಒಟ್ಟಿನಲ್ಲಿ ಇದು ಸ್ವಲ್ಪ ಮಟ್ಟಿಗೆ ಜೀವನದ ಗಂಭೀರತೆ ಹಾಗೂ ಅಸಹಾಯಕತೆಯನ್ನು ತಿಳಿಸುವ ಮನೋಘ್ಯ ಲೇಖನ. ಕೊನೆಯಲ್ಲಿ ಹೆಂಡತಿಗಾದ ಪರಿಸ್ಥಿತಿಯು ಗಂಡನಿಗಾಗಿದ್ದರೆ ಪರಿಣಾಮ ಊಹಾತೀತ.

    ReplyDelete
  10. Vasannana vanaprastha is not a story nor fiction. It is a everyday happening in many lives around us. Who is to blame for this unfortunate and tragic situation in the lives of seniors. It is not confined to financially poor background because you find seniors from very wealthy families. One can say that earlier there was joint-family concept wherein Everyone lived together and shared happiness/sorrow and there was always someone to look upon in times of need. Not that it was free from flaws as different persons with different ideology shared common roof. Finally this excellently narrated life history of Vasanna gives out a strong message. Think before you jump to advices which looks attractive without proper assessment of various options. Always lead simple healthy life and save enough for later years. As long as possible remain independent and if possible help others. But nothing is in our hands the past,present and future. Stop worrying and pray gurugalu for peaceful life as also peaceful painless death. There is nothing else to do

    ReplyDelete
  11. ವಾಸಣ್ಣನ ವಾನಪ್ರಸ್ಥ

    ನಾನು ಬಡವಿ, ನೀನು‌ ಬಡವ
    ಒಲವೆ ನಮ್ಮ ಬದುಕು

    ಅನ್ನುವ ಶ್ರೀ ಬೇಂದ್ರೆಯವರ ಕವನದ ಸಾಲುಗಳೊಂದಿಗೆ ನನ್ನ ಅಭಿಪ್ರಾಯವನ್ನು ಸೂಚಿಸುತ್ತಿದ್ದೇನೆ.

    ಮದುವೆಯಾದ ನವ ದಂಪತಿಗಳು ಪ್ರಸ್ಥದ ಕೋಣೆಯಲ್ಲಿ ಒಂದಾದವರು, ವಾನಪ್ರಸ್ಥದ ಪಯಣದವರೆಗೂ ಜೊತೆ ಜೊತೆಯಾಗಿ ಸಾಗುವ ಬದುಕಿನ ಪರಿಯನ್ನು ಮನಮುಟ್ಟುವಂತೆ ನಿರೂಪಿಸಿದ್ದೀರಿ. ಧನ್ಯವಾದಗಳು.

    ಋಣಾನುಬಂಧ ರೂಪೇಣ,
    ಪಶು, ಪತ್ನಿ, ಸುತಾಲಯ ....
    ಅನ್ನುವ ಮಾತಿನಂತೆ, ನಮ್ಮ ಬದುಕು ಹರಿವ ನೀರಿನ‌ ತೆರದಿ ಹಲವಾರು ತಿರುವುಗಳನ್ನು ಪಡೆಯುತ್ತಾ ಸಾಗುತ್ತದೆ.

    ಈ‌ ಸಂದರ್ಭದಲ್ಲಿ, ಸ್ವಂತ ವಿವೇಚನೆಯಿಲ್ಲದೆ, ಮಂದಿ‌ ಮಾತಿಗೆ ಹೂಂಗುಟ್ಟುವ ಹೌದಪ್ಪಗಳ ಪಾಡು ನಿಮ್ಮ ಲೇಖನದಲ್ಲಿ ಸೊಗಸಾಗಿ ಮೂಡಿಬಂದಿದೆ.

    ಸ್ವಯಾರ್ಜಿತವೋ, ಪಿತ್ರಾರ್ಜಿತವೋ ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ಬದುಕನ್ನು ಆನಂದಿಸುವ ಬಗೆಯನ್ನು ನಾವು ಅರಿತಿರಬೇಕೇ ವಿನಹ, ಅನ್ಯರ ಮಾತಿಗೆ ಹೂಗೊಟ್ಟು, ವಿವೇಚನಾರಹಿತ ತೀರ್ಮಾನಗಳನ್ನು ಕೈಗೊಂಡಲ್ಲಿ, ಬ್ರಹ್ಮಚಾರಿಯಾದರೂ, ಸಂಸಾರಿಯಾದರೂ, ಸನ್ಯಾಸಿದರೂ ಬದುಕಿನ ಅಂತಿಮ ಘಟ್ಟವು ಹರಿಶ್ಚಂದ್ರ ಘಾಟಿನಲ್ಲೇ ಅಂತ್ಯವಾಗುವುದು ಎನ್ನುವುದು ಶತಃಸಿದ್ಧ.

    ಬದುಕಿನ ವಾಸ್ತವವನ್ನು ತೆರೆದಿಟ್ಟು, ಹಲವರ ಕಣ್ತೆರೆಸುವ ನಿಮ್ಮ " ವಾಸಣ್ಣನ ವಾನಪ್ರಸ್ಥ " ಲೇಖನಕ್ಕಾಗಿ ಹಾರ್ದಿಕ‌ ಅಭಿನಂದನೆಗಳು.

    ಇಂತಿ,

    *ವಿ.ಆರ್.‌ ಮುರಲೀಧರ್✍️*

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...