ಮಕ್ಕಳ ಉನ್ನತ ಭವಿಷ್ಯತ್ತಿನ ಕನಸಿನಲ್ಲಿ ಅವರಿಗೆ ಬೆಂಬಲವಾಗಿ ನಿಂತು ಪ್ರತಿಹೆಜ್ಜೆಯನ್ನೂ ಪ್ರಗತಿಯತ್ತ ಕೊಂಡುಯ್ಯುವ ಪೋಷಕರು ಹೆಚ್ಚು. ಇದು ಸರಿಯಾದ ಕ್ರಮವೂ ಹೌದು. ಅವರ ಮಧ್ಯೆ ಇಲ್ಲೊಬ್ಬ ಹುಡುಗ ಸ್ವಯಂ ವಿದ್ಯೆಯ ಬೆಲೆ ಅರಿತು ಅವಿರತ ಶ್ರಮದಿಂದ ತನ್ನ ಬದುಕಿನೊಂದಿಗೆ ಕಷ್ಟದಲ್ಲಿದ್ದ ಪೋಷಕರನ್ನು ಸುಖದತ್ತ ಕೊಂಡೊಯ್ದ ಪ್ರಭಾವಿ ಕಥೆ.
ಸುಮಾರು ಎಪ್ಪತ್ತರ ದಶಕದಲ್ಲಿ ಹುಡುಗನೊಬ್ಬ ಎಂಟನೇ ತರಗತಿ ಓದುತ್ತಿದ್ದಾನೆ. ವಾಸ ಬಾಡಿಗೆಯ ಪುಟ್ಟ ಮನೆಯಲ್ಲಿ. ತಂದೆ ಖಾಯಂ ಆಗಿ ತಾತ್ಕಾಲಿಕ ಕೆಲಸದಲ್ಲಿ ಸಣ್ಣ ಆದಾಯದಲ್ಲೇ ಇದ್ದಾರೆ. ಮನೆಯಲ್ಲಿರುವ ನಾಲ್ಕು ಗಂಡು ಮಕ್ಕಳಲ್ಲಿ ಇವನೇ ಹಿರಿಯ. ಮನೆಯ ಬಾಡಿಗೆಯನ್ನು ಕೆಲವು ತಿಂಗಳುಗಳಿಂದ ಕೊಟ್ಟಿಲ್ಲವೆಂದು ಮನೆ ಮಾಲಿಕರಿಂದ ದೊಡ್ಡ ಧ್ವನಿಯ ಮಾತು ಈತನ ಓದಿಗೆ ಭಂಗ ತಂದಿದೆ. ಸಂಬಳ ಆಗದಿರುವುದು ಹಾಗೂ ಇರುವ ಖರ್ಚು ಹೆಚ್ಚಾದ್ದರಿಂದ ಕೊಡಲು ಆಗಿಲ್ಲವೆಂದೂ ಮುಂದಿನ ತಿಂಗಳು ಬಾಕಿ ಎಲ್ಲವನ್ನೂ ತೀರಿಸುವ ಅಮ್ಮನ ಸಣ್ಣ ಧ್ವನಿಯ ಮಾತು ಮನೆಯ ಆರ್ಥಿಕ ಪರಿಸ್ಥಿತಿಯನ್ನು ತೋರಿಸುತ್ತಿದೆ. ಅದೇನೋ ಹೇಳುತ್ತಾ ಮಾಲಿಕರು ಹೊರಟು ಹೋದರು. ಆದರೆ ಅಮ್ಮನ ಒದ್ದೆಗಣ್ಣಿನ ದೈನೇಸಿ ಸ್ಥಿತಿಯ ಮಾತು ಕೇಳಿಸುತ್ತಲೇ ಇತ್ತು. ಇದು ಹುಡುಗನನ್ನು ಚಿಂತೆಗೀಡು ಮಾಡಿತು. ಏನಾದರೂ ಕೆಲಸ ಮಾಡಿ ದುಡಿದು ಅಮ್ಮನಿಗೆ ದುಡ್ಡು ಕೊಡಬೇಕು. ಅವಳು ಅಳಬಾರದು ಎಂದು ಮನಸ್ಸು ಹೇಳುತ್ತಿದೆ. ಮನೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ಪ್ರಾರಂಭಿಸಿದಾಗ ತಂದೆ ತಾಯಿ ಇಬ್ಬರೂ ಮಕ್ಕಳ ಊಟದ ನಂತರ ಊಟ ಮಾಡುವೆ ಎನ್ನುವುದು, ನಂತರ ಉಳಿದಿದ್ದರೆ ತಿನ್ನುವುದು, ಇಲ್ಲವೇ ಬರೀ ನೀರು ಕುಡಿದು ಮಲಗುವುದು ತಿಳಿಯಿತು. ಕೇಳಿದರೆ ಹಸಿವು ಇರಲಿಲ್ಲ ಎಂಬ ಉತ್ತರದ ಸತ್ಯ ಮನದಟ್ಟಾಗಿತ್ತು.
ಈ ಮಧ್ಯೆ ನಗರದಲ್ಲಿರುವ ಚಿಕ್ಕಪ್ಪನ ಮನೆಗೆ ರಜೆ ಕಳೆಯಲು ಬಂದಿದ್ದ ಹುಡುಗ. "ಚಿಕ್ಕಪ್ಪಾ, ನಾನು ಕೆಲಸಕ್ಕೆ ಸೇರಲು ಏನು ಮಾಡಬೇಕು?" ಎಂಬ ಪ್ರಶ್ನೆ ಈ ಚಿಕ್ಕಪ್ಪನನ್ನು ಆಶ್ಚರ್ಯಗೊಳಿಸಿತು. "ಅಲ್ಲಪ್ಪಾ, ಇನ್ನು ನೀನು ೯ನೇ ಕ್ಲಾಸ್, ಈಗೇಕೆ ಯೋಚನೆ". "ಇಲ್ಲ ಹೇಳು" ಎಂದಾಗ ಐಟಿಐ ಅಥವಾ ಡಿಪ್ಲೊಮಾ ಮಾಡಬೇಕು. ಮೊದಲು ನೀನು ಎಸ್ಸೆಸ್ಸೆಲ್ಸಿ ಚೆನ್ನಾಗಿ ಪಾಸು ಮಾಡು ಎಂಬ ಉತ್ತರ ಮನದಲ್ಲಿ ಇಳಿಯಿತು. ಮರು ವರ್ಷ ನಗರದಲ್ಲಿರುವ ಅಜ್ಜಿಯ ಮನೆಗೆ ಬಂದ ಹುಡುಗ. ಅಲ್ಲಿಯೇ ಎಸ್ಸೆಸ್ಸೆಲ್ಸಿ ಓದಿದ. ಅಜ್ಜಿ ಮನೆಯಲ್ಲಿ ಊಟಕ್ಕೇನೂ ತೊಂದರೆ ಇರಲಿಲ್ಲ. ಆದರೆ ಪರೀಕ್ಷೆ ಶುಲ್ಕ ೬ ರೂಪಾಯಿ ಕೂಡಿಸಿ ಕಟ್ಟಲು ಸಾಕು ಸಾಕಾಯಿತು. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ಹುಡುಗನ ಸಂತೋಷಕ್ಕೆ ಪಾರವೇ ಇಲ್ಲ. ಚಿಕ್ಕಪ್ಪನ ಸಲಹೆ ಮೇರೆಗೆ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಓದಲು ಅರ್ಜಿ ಹಾಕಿದ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಸೀಟು ಸಿಕ್ಕಿತ್ತು. ಭಾರತ್ ಎಲೆಕ್ಟ್ರಾನಿಕ್ಸ್ ಕಂಪನಿ ಬೋರ್ಡ್ ಓದಿದ ಹುಡುಗನಿಗೆ ಎಲೆಕ್ಟ್ರಾನಿಕ್ಸ್ ಓದಬೇಕೆಂಬ ಆಸೆ. ಹೇಗೋ ಪ್ರಿನ್ಸಿಪಾಲ್ ರ ಭೇಟಿ ಮಾಡಿ ಆಸೆಯನ್ನು ಹೇಳಿ ಪ್ರಾರ್ಥಿಸಿದಾಗ ಆ ಕೋರ್ಸ್ ಸಿಕ್ಕಿತು. ಈಗ ಮುಂದಿನ ದಿನಗಳ ಖರ್ಚಿನ ಯೋಚನೆ. ಹೇಗೂ ಎಲೆಕ್ಟ್ರಾನಿಕ್ಸ್ ಕಲಿಯಲು ಅವಕಾಶ ಸಿಕ್ಕಿದೆ. ಇದೇ ಲೈನಲ್ಲೇ ಪಾರ್ಟೈಮ್ ಕೆಲಸಕ್ಕೆ ಟ್ರೈನಿಂಗ್ ಮಾಡಿಕೊಂಡರೆ ಹೇಗೆ? ಹಾಗೇ ಹುಡುಕಿ ಕೊಂಡು ಹೋಗುವಾಗ ಕಂಡ ರೇಡಿಯೋ ಎಲೆಕ್ಟ್ರಾನಿಕ್ಸ್ ಸರ್ವೀಸಸ್ ಅಂಗಡಿಯಲ್ಲಿ ಕಲಿಯಲು ಅವಕಾಶ ಕೇಳಿದ. ಪ್ರತಿ ಸಂಜೆ ಕೆಲಸಕ್ಕೆ ಬರಬೇಕು. ದುರಸ್ತಿಗೆ ಬರುವ ಎಲ್ಲಾ ರೇಡಿಯೋ ಕ್ಲೀನ್ ಮಾಡಿ ಕೊಡಬೇಕು. ಇದಕ್ಕೆ ತಿಂಗಳಿಗೆ ೧೦ ರೂಪಾಯಿ ಸಂಬಳ ಎಂಬ ಅಲ್ಲಿಯ ಮೆಕ್ಯಾನಿಕ್ ಮಾತಿಗೆ ಖುಷಿಯಿಂದ ಒಪ್ಪಿಕೊಂಡ ಹುಡುಗ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎರಡನೇ ವರ್ಷಕ್ಕೇ ಎಲ್ಲಾ ರೀತಿಯ ರೇಡಿಯೋ, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ದುರಸ್ತಿ ಮಾಡಲು ಕಲಿತಿದ್ದ. ತಾನು ಓದುತ್ತಿದ್ದ ಕೋರ್ಸ್ ಗೆ ಪ್ರಾಜೆಕ್ಟ್ ವರ್ಕಿಗೆ ಸಹಾಯವಾದ ಈ ಕೆಲಸ ಆತ್ಮ ವಿಶ್ವಾಸವನ್ನು ಹೆಚ್ಚಿಸಿತ್ತು. ಇದರಿಂದಾಗಿ ಪ್ರಯೋಗ ತರಗತಿಯಲ್ಲಿ ಕೆಲವು ಬಾರಿ ಪ್ರಶ್ನಿಸುವ ಧೈರ್ಯ ಬೆಳೆದು ಪ್ರಾಧ್ಯಾಪಕರೊಂದಿಗೆ ವಾದವೂ ಆಗುತ್ತಿತ್ತು.
ಅಂತಿಮ ವರ್ಷದ ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಎಲ್ಲರೊಂದಿಗೆ ಫಲಿತಾಂಶ ನೋಡಲು ಹೋದ ಹುಡುಗನಿಗೆ ಆಘಾತ ಕಾದಿತ್ತು. ಫಲಿತಾಂಶ ಪಟ್ಟಿಯ ಯಾವ ಭಾಗದಲ್ಲಿಯೂ ಇವನ ಹೆಸರು ಕಾಣುತ್ತಿಲ್ಲ. ಜೊತೆಯಲ್ಲಿದ್ದ ಮಿತ್ರರು ಆ ಪ್ರಾಧ್ಯಾಪಕರೊಂದಿಗೆ ವಾದ ಮಾಡಿದ್ದಕ್ಕೆ ಎಂತಹಾ ಪ್ರತೀಕಾರ ಮಾಡಿದ ಎಂದು ಮಾತನಾಡಿಕೊಳ್ಳುತ್ತಿದ್ದರು. ಪರೀಕ್ಷೆಯನ್ನು ಹೆಚ್ಚಿನ ಅಂಕಗಳೊಂದಿಗೆ ಪಾಸಾಗಿ ಒಳ್ಳೆಯ ಕಡೆ ಕೆಲಸ ಮಾಡಿ ಮನೆಯ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕನಸು ನುಚ್ಚು ನೂರಾಗಿದೆ. ಸಮಾಧಾನ ಕಳೆದುಕೊಂಡ ಮನಸು ಶೇಷಾದ್ರಿಪುರಂ ಬಳಿಯ ರೈಲ್ವೇ ಹಳಿಯತ್ತ ಆತ್ಮಹತ್ಯೆಗೆ ಪ್ರೇರಣೆ ಮಾಡುತ್ತಿದೆ. ಹಾಗೆಯೇ ಡೆಸ್ಕ್ ಮೇಲೆ ಇಟ್ಟ ತಲೆ ಏನೇನೋ ಯೋಚಿಸುತ್ತಿದೆ. ತಾನು ಸತ್ತರೆ ಮನೆಯ ಪರಿಹಾರ ಹೇಗೆ ಎಂಬ ಒಳಮನಸ್ಸು ಕೇಳುತ್ತಿದೆ. ಹೀಗೆಯೇ ಏನೇನೋ ಯೋಚಿಸುತ್ತಿರುವಾಗ ಯಾರೋ ಬೆನ್ನು ತಟ್ಟಿದ ಅನುಭವ. ಎದ್ದು ಕಣ್ಣರಳಿಸಿ ನೋಡಿದಾಗ ಕಂಡ ಪ್ರಾಧ್ಯಾಪಕರು, ಪ್ರಿನ್ಸಿಪಾಲ್ ರು ಕರೆಯುತ್ತಿದ್ದಾರೆ ಎಂದು ಕರೆದುಕೊಂಡು ಹೋದರು. ಈಗಂತೂ ಇವರಿಂದಲೇ ಏನೋ ಆಗಿದೆ ಎಂಬ ಭಯವೂ ಪ್ರಾರಂಭವಾಯಿತು. ಪ್ರಿನ್ಸಿಪಾಲ್ ಕ್ಯಾಬಿನ್ ಪ್ರವೇಶಿಸುತ್ತಿದ್ದಂತೆ ಸೇರಿರುವ ಶಿಕ್ಷಕ ಸಮೂಹ ಕಂಗ್ರಾಟ್ಸ್ ಹೇಳಿದಾಗ ಆಶ್ಚರ್ಯವಾಯಿತು. ಪ್ರಿನ್ಸಿಪಾಲ್ ಭುಜ ತಟ್ಟುತ್ತಾ ನಮ್ಮ ಕಾಲೇಜಿಗೆ ಮೊದಲ ಬಾರಿಗೆ ರ್ಯಾಂಕ್ ತಂದಿದ್ದಕ್ಕೆ ತುಂಬಾ ಸಂತೋಷ ಕಣಯ್ಯಾ ನೀನು ಈ ರಾಜ್ಯಕ್ಕೇ ಐದನೇ ರ್ಯಾಂಕ್ ಎನ್ನುತ್ತಿದ್ದಾರೆ. ಆದರೂ ಇವನ ಸಮಸ್ಯೆಯೇನೆಂದರೆ ತಾನು ಪಾಸ್ ಆಗಿದ್ದೇನೋ ಇಲ್ಲವೋ?, ಅದನ್ನು ಇವರು ಹೇಳುತ್ತಿಲ್ಲ ಎಂಬುದಾಗಿತ್ತು. ಬಿಡಿಸಿ ಮತ್ತೊಮ್ಮೆ ಕೇಳಿದಾಗ ಅಯ್ಯೋ ಮಹರಾಯ, ನೀನು ಪಾಸು, ಕೇವಲ ಪಾಸ್ ಅಲ್ಲ, ಫಸ್ಟ್ ಕ್ಲಾಸ್ ಗಿಂತಲೂ ಮೇಲು. ಆದ್ದರಿಂದ ಆ ಲಿಸ್ಟ್ ನಲ್ಲಿ ನಿನ್ನ ಹೆಸರು ಕಂಡಿಲ್ಲ ಎಂದಾಗಲೇ ಸಮಾಧಾನ. ನಂತರ ಎಲ್ಲರಿಂದ ಬರುತ್ತಿದ್ದ ಶುಭಾಶಯಗಳು ಏನೋ ಹೆಮ್ಮೆ ತರುತ್ತಿತ್ತು. ಮನೆಯಲ್ಲಿ ಈ ಫಲಿತಾಂಶ ತಿಳಿಸಿದಾಗ ಆತನ ತಾಯಿ ಪಟ್ಟ ಹೆಮ್ಮೆ ಅಷ್ಟಿಷ್ಟಲ್ಲ. ಜೊತೆಗೆ ಎಲ್ಲರಿಗೂ ಸಂತೋಷ ತಡೆಯಲಾರದ ಆನಂದ ಬಾಷ್ಪ ಕಂಡು ಹುಡುಗನಿಗೂ ಕಣ್ಣೀರು ತಂದಿತು. ಮುಂದಿನ ಕೆಲವೇ ವಾರಗಳಲ್ಲಿ ಸರ್ಕಾರದ ಸಂಸ್ಥೆಗಳು ಸೇರಿದಂತೆ ಸುಮಾರು ೪೦ ಕಂಪನಿಗಳಿಂದ ತರಬೇತಿ, ನೇಮಕಾತಿ ಅವಕಾಶಗಳ ಆದೇಶಗಳು ಅವನ ಮುಂದಿವೆ. ಆಯ್ಕೆ ಮಾಡಲು ಅವನಿಗೆ ತಿಳಿಯಲಿಲ್ಲ. ಅವನ ತಂದೆಯವರ ಸಲಹೆಯಂತೆ ಮೈಸೂರು ರಸ್ತೆಯ ಹೆಸರಾಂತ ಸರ್ಕಾರಿ ಸಂಸ್ಥೆಗೆ ತರಬೇತಿಗೆ ಸೇರಿದ. ತರಬೇತಿ ನಂತರ ದೊರೆತ ಉದ್ಯೋಗ ಅವನ ಎಲ್ಲಾ ಆಸೆಗಳನ್ನು ಪೂರೈಸಿತು. ತಂದೆ ತಾಯಿ ತಮ್ಮಂದಿರ ಬಾಳಿನೊಂದಿಗೆ ಅವನ ಸಂಸಾರವೂ ಹಸನಾಯಿತು. ನಂತರದ ದಿನಗಳಲ್ಲಿ ಸಂಜೆಯ ಕಾಲೇಜಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಅದೇ ಸಂಸ್ಥೆಯಲ್ಲಿ ಉನ್ನತ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಅವನ ಕಥೆ ಎಲ್ಲರಿಗೂ ಸಂತಸ ಹಾಗೂ ಉತ್ತೇಜನಕಾರಿ ಅಲ್ಲವೇ?
ಇದು ಕಥೆಯಾಗಿ ಪರಿವರ್ತನೆ ಮಾಡಿರುವುದು ಭಹಳ ಸೊಗಸಾಗಿ ಇದೆ. ಈ ಕಥೆ ಕಷ್ಟಪಟ್ಟರೆ ನಿಜಕ್ಕೂ ಸುಖ ಎಂಬಹುದಕ್ಕೆ ಸಾಕ್ಷಿ.
ReplyDeleteಇಂದಿನ ಒತ್ತಡ ಜೀವನ ಶೈಲಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎನ್ನಲಾದ ಮಕ್ಕಳ ಭವಿಷ್ಯದಲ್ಲಿ ನಿರ್ಣಾಯಕ ಹಂತದಲ್ಲಿ ವಿಧ್ಯಾರ್ಥಿಗಳು ಹಾಗೂ ಪೋಷಕರ ನಡುವೆ ಕಾಣಸಿಗುವ ತವಕ ಗೊಂದಲಗಳು, ಎಲ್ಲಾ ಮಕ್ಕಳಂತೆ ಪೋಷಕರ ಆಸೆಯಂತೆ ನಮ್ಮ ಮಕ್ಕಳು ವಿದ್ಯಾಭ್ಯಾಸ ಮಾಡಬೇಕು ಬಗ್ಗೆ ಸವಿಸ್ತಾರವಾಗಿ ತಾಕಲಾಟದ ವಿದ್ಯಾಭ್ಯಾಸ ಚಿತ್ರಣ ಬಹಳ ಸೊಗಸಾಗಿ ಮೂಡಿಬಂದಿದೆ.
ReplyDeleteತಾಕಲಾಟದ ವಿದ್ಯಾಭ್ಯಾಸ ಬರವಣಿಗೆ ಸುದೀರ್ಘವಾಗಿದ್ದು, ವಿಭಾಗಿಸಿ ಮತ್ತೊಂದು ಲೇಖನ “ಉತ್ಕಟೇಚ್ಛೆಯ ವಿದ್ಯಾಭ್ಯಾಸ ” ಪ್ರಕಟಿಸಿದ ಪ್ರಯತ್ನ ಸ್ವಾಗಾತಾರ್ಹ ಹಾಗೂ ಸಮಸ್ಯೆಯನ್ನು ಅರಿಯಲು ಸುಲಭವಾಗುತ್ತದೆ. ಲೇಖನಗಳು ಇಂದಿಗೆ ಪ್ರಸ್ತುತವಾಗಿದೆ ಹಾಗೂ ಯೋಚನೆಗೀಳು ಮಾಡುತ್ತದೆ.
Very fine
ReplyDelete