ಹೊಸ ತಲೆಮಾರಿನ ಹೆಚ್ಚಿನ ಯುವಕರು ಕೃಷಿ ಮಾಡದಿದ್ದರೂ ಯಾವುದಾದರೂ ಸ್ವತ್ತು ಕೊಳ್ಳುವಾಗ ಭೂಮಿಯ ಬಗ್ಗೆ ಕೆಲವು ಪದಗಳನ್ನು ಕೇಳಿದಾಗ ಅವುಗಳ ಬಗ್ಗೆ ಮಾಹಿತಿ ಇದ್ದರೆ ಚೆನ್ನಾಗಿತ್ತು ಎಂದು ಎನಿಸಿದರೆ ಆಶ್ಚರ್ಯವಿಲ್ಲ. ಕೃಷಿ ಭೂಮಿಯು ವಾಸವಾಗಿರಲು ಉಪಯೋಗಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಿಂದ ಪರಿವರ್ತನೆ ಆದರೂ ಅಂತಹಾ ಸ್ವತ್ತುಗಳ ವ್ಯವಹಾರದಲ್ಲಿ ಸಂಬಂಧಿಸಿದ ಕೆಲವು ಪ್ರಾಥಮಿಕ ಪದಗಳ ಪರಿಚಯ ಅಪೇಕ್ಷಣೀಯ. ಅಂತಹಾ ಕೆಲವು ಪದಗಳ ಪರಿಚಯ ಮಾಡಿ ಕೊಡುವ ಒಂದು ಯತ್ನವೇ ಈ ಲೇಖನ.
ಪಟ್ಟಣದಲ್ಲೇ ಓದಿ ಕೆಲಸ ಸಿಕ್ಕಿರುವ ನನಗೆ ಗ್ರಾಮಗಳ ಬಗ್ಗೆ ಆಸಕ್ತಿ ಇದೆ. ಅಲ್ಲಿಯ ಜೀವನ, ವ್ಯವಹಾರ ಮತ್ತು ಆಡಳಿತ ಭಾಷೆಗಳನ್ನು ಸ್ವಲ್ಪ ತಿಳಿದರೆ ಒಳ್ಳೆಯದು, ಇದನ್ನು ಕಲಿಯಲು ಪ್ರತ್ಯೇಕವಾಗಿ ಯಾವ ಕೋರ್ಸು ಇರುವುದಿಲ್ಲ ಎಂದೆನಿಸುತ್ತಿತ್ತು. ಈ ವೇಳೆಯಲ್ಲಿಯೇ ನಮ್ಮ ಮನೆಗೆ ಬಂದಿದ್ದ ನಮ್ಮ ಮಾವನವರಲ್ಲಿ ಹೇಳಿಕೊಂಡಾಗ ಅವರು ಮರುದಿನವೇ ಹತ್ತಿರದ ಗ್ರಾಮಕ್ಕೆ ಕರೆದೊಯ್ದರು. ಅವರು ಡೆಪ್ಯುಟಿ ಕಮೀಷನರ್ ಆಗಿದ್ದವರು, ಅವರಿಗೆ ಅಲ್ಲಿಯ ಹಳೆಯ ಶ್ಯಾನುಭೋಗರ ಪರಿಚಯವಿತ್ತು. ಆದ್ದರಿಂದ ಅವರ ಮನೆಗೇ ನೇರವಾಗಿ ಹೋದೆವು. ಸಡಗರದಿಂದ ಸ್ವಾಗತಿಸಿದ ಅವರನ್ನು ನಮ್ಮ ಹುಡುಗನಿಗೆ ಈ ಊರನ್ನು ತೋರಿಸಿ. ಆ ಊರಿನ ಜೀವನ ಪರಿಚಯ ಮಾಡಿ ಕೊಡಿ ಎಂದರು. ಈ ಊರಿನಲ್ಲಿ ನೋಡಲು ಅಥವಾ ವಿಷಯ ತಿಳಿಯಲು ಅಂತಹ ವಿಶೇಷ ಏನಿದೆ? ಕಾಣುವಷ್ಟು ದೂರ ಬರೀ ಗದ್ದೆ, ಸ್ವಲ್ಪ ಭಾಗ ಅಡಿಕೆ ತೋಟ, ಒಂದು ಕೆರೆ, ರಸ್ತೆ, ಇಷ್ಟು ಬಿಟ್ಟರೆ ಹಸು, ಕರು, ಎಮ್ಮೆಗಳೊಂದಿಗೆ ವಾಸಿಸುವ ರೈತಾಪಿ ಜನರು - ಇದನ್ನೇನು ನೋಡುವುದು ಎಂದರು. ಸ್ವಾಮೀ, ನಮಗೆ ಅದರ ಪರಿಚಯವೇ ಬೇಕಾದುದು, ಈ ಬಗ್ಗೆ ಹೇಳಿರಿ ಎಂದು ಪ್ರಾರ್ಥಿಸಿದಾಗ ಅವರಿಗೇಕೋ ನಗು. ಆದರೂ ಹುಜೂರ್ ಸಾಹೇಬರೇ ತಮ್ಮೂರಿಗೆ ಬಂದು ಕೇಳಿದಾಗ ಇಲ್ಲವೆನ್ನಲಾಗದ ಮನಸು. ಮಲೆನಾಡಿನಲ್ಲಿ ಬಹುತೇಕ ಸಾಮಾನ್ಯವಾಗಿರುವ ಒಗ್ಗರಣೆ ಅವಲಕ್ಕಿ ಕಾಫಿ ಸೇವನೆ ಪೂರೈಸಿಕೊಂಡು ಮೊದಲಾಗಿ ಕೆರೆಯತ್ತ ಹೊರಟೆವು. ಅಲ್ಲಿಂದಲೇ ನಮ್ಮ ಗ್ರಾಮ ದರ್ಶನ ಆರಂಭ.
| ಪುರಾತನ ಕಾಲದ ತೂಬು ಸ್ಥಂಭ |
![]() |
| ತುಂಬಿದ ಕೆರೆ |
ಇದು ದೊಡ್ಡ ಕೆರೆ. ಇದನ್ನು ಕಟ್ಟಿದಾಗ ಸುತ್ತಲೂ ದಟ್ಟ ಕಾಡು ಇತ್ತು. ಈಗ ಕಾಡು ಕಡಿಮೆಯಾದರೂ ಸುತ್ತ ಇರುವ ಭೂಮಿ ಕೆರೆಯತ್ತ ಇಳುಕಲಾಗಿ ಸಾಗಿ ಮಳೆಯಿಂದ ಬಿದ್ದ ನೀರನ್ನು ಈ ಕೆರೆಗೆ ಸೇರಿಸುತ್ತದೆ. ಈ ಕೆರೆಯ ನೀರಿನಿಂದ ಬೆಳೆ ಬೆಳೆಯುವ ವಿಸ್ತಾರವಾದ ಪ್ರದೇಶವನ್ನು ಈ ಕೆರೆಯ ಅಚ್ಚುಕಟ್ಟು ಪ್ರದೇಶ ಎನ್ನುತ್ತಾರೆ. ಕೆರೆಯಲ್ಲಿ, ಮಳೆಯಿಂದಾಗಿ ನೀರು ಹೆಚ್ಚಾದಾಗ ಹೆಚ್ಚಾದ ನೀರು ಹರಿಯಲು ಹಳ್ಳವೊಂದಿದೆ. ಹಾಗೆ ನೀರು ಉಕ್ಕಿ ಹರಿಯುವುದಕ್ಕೆ ಕೋಡಿ ಬಿತ್ತು ಎನ್ನುವರು. ಅಂತಹಾ ವೇಳೆಯಲ್ಲಿ ಹೆಚ್ಚಿನ ನೀರನ್ನು ಹೊರ ಕಳಿಸಲೆಂದು ತೂಬು ಎತ್ತಲಾಗುವುದು. ತೂಬು ಎಂದರೆ ಅಡ್ಡವಾದ ಕಿಂಡಿಗೆ ಮೇಲಿನಿಂದ ಉದ್ದವಾದ ಹಿಡಿಯ ಮೂಲಕ ಮುಚ್ಚುವ ಬಾಗಿಲು ಅಥವಾ ಬಿರುಡೆ ಎಂದು ತಿಳಿಯಿರಿ. ಈ ಬಿರುಡೆ ಎತ್ತಿದಾಗ ಹೊರ ಹೋಗುವ ನೀರು ಈ ಹಳ್ಳದ (ಪುಟ್ಟ ನದಿ) ಮೂಲಕ ಹರಿದು ಹೋಗುತ್ತದೆ. ಸುಮಾರು ೫೦೦ ವರ್ಷಗಳ ಹಿಂದೆಯೇ ಈ ತಾಂತ್ರಿಕತೆ ಇತ್ತು ಎನ್ನುವುದಕ್ಕೆ ಕೆರೆಯಲ್ಲಿನ ಪುರಾತನ ತೂಬು ಸ್ಥಂಭ ನೋಡಬಹುದು. ಈ ಬಿರುಡೆ ಎತ್ತಿದಾಗ ಹೊರ ಹೋಗುವ ನೀರು ಈ ಹಳ್ಳದ (ಪುಟ್ಟ ನದಿಯ ಮಾದರಿ) ಮೂಲಕ ಹರಿದು ಹೋಗುತ್ತದೆ. ಬೇಕೆಂದಾಗ ಮಗ್ಗುಲಲ್ಲೇ ಇರುವ ಅಡಿಕೆ ತೋಟದ ಮೇಲಿನ ಚಿಕ್ಕ ಹಳ್ಳ ಅಥವಾ ಅವಳಿ ಮೂಲಕ ತೋಟಕ್ಕೆ ನೀರುಣಿಸಲು ತೋಟದ ಕಾದಿಗೆಯಲ್ಲಿ ನೀರನ್ನು ಹರಿಸುತ್ತಾರೆ. ಬೇಕೆಂದಲ್ಲಿ ಕಾದಿಗೆಯಿಂದ ನೀರು ಹಿಡಿದು ಅಡಿಕೆ ಗಿಡ, ಮರಗಳಿಗೆ ಒದಗಿಸುತ್ತೇವೆ. ಬನ್ನಿ, ಈ ಹಳ್ಳಕ್ಕೆ, ಈ ದಂಡೆಯಿಂದ ಆ ದಂಡೆ ಸೇರಲು ಸಾರ ಅಥವಾ ಸಂಕ ಇದೆ. ಈ ಚಿಕ್ಕ ಅಗಲದ ಮರದ ದಾರಿಯಲ್ಲಿ ದೇಹ ನಿಯಂತ್ರಣ ಮುಖ್ಯ, ಎಚ್ಚರಿಕೆಯಿಂದ ನಿಧಾನವಾಗಿ ಬನ್ನಿ.
![]() | |
| ಅಡಿಕೆ ತೋಟ |
| ಕರಡದ ಬಣವೆ |
ಈ ದಡದಲ್ಲಿ ಹಸು-ಕರುಗಳು ತೋಟವನ್ನು ಪ್ರವೇಶಿಸದಿರಲು ಇರುವ ಬೇಲಿಯ ಮಧ್ಯೆ, ನಾವೊಬ್ಬರೇ ಪ್ರವೇಶಿಸುವ ದಡಪಿ ಎಂಬ ಕವಲು ರೂಪದ ಸಂದು. ಬೇಲಿಯ ಒಳಗಿನ ತೋಟಕ್ಕೆ ಪ್ರವೇಶ. ಈಗಾಗಲೇ ಹೇಳಿದ ಒಂದು ಚಿಕ್ಕ ಹಳ್ಳ ದಾಟಿದೆವು. ತೋಟದ ಮಧ್ಯೆ ಈ ತುದಿಯಿಂದ ಆ ತುದಿಯವರೆಗೂ ನಡೆಯುವ ಕಾಲು ದಾರಿಗೆ ಬಣ್ಣ ಎಂದು ಕರೆಯುತ್ತಾರೆ. ಹಿಂದಿನ ದಿನಗಳಲ್ಲಿ ಈ ದಾರಿಯಲ್ಲಿ ಕೆಂಪು ಗೊಚ್ಚು ಮಣ್ಣು ಹಾಕುತ್ತಿದ್ದರು. ಮರದ ಕೆಳಕ್ಕೆ ಅಗತ್ಯ ಬಿದ್ದಾಗ ಈ ಮಣ್ಣನ್ನು ಕೊಡಲಾಗುತ್ತಿತ್ತು, ಈಗ ಮಣ್ಣಿನ ಅಭಾವವಿದೆ. ಇದರ ಎರಡು ಮಗ್ಗುಲಲ್ಲಿ ಅಡಿಕೆ ಮರಗಳ ಸಾಲು, ನಿರ್ಧಿಷ್ಟ ಅಂತರಗಳಲ್ಲಿ ನೆಡಲಾಗಿದೆ. ಪಕ್ಕದ ಚರಂಡಿಯನ್ನೇ ಕಾದಿಗೆ ಎನ್ನುವುದು. ತೋಟದಲ್ಲಿ ನೀರಿನ ಪಸೆ ಸದಾ ಇರಲು ಬಾಳೆ ಗಿಡಗಳು ಅತ್ಯಂತ ಸಹಕಾರಿ. ಅವುಗಳ ಜೊತೆಗೆ ಯಾಲಕ್ಕಿ, ಕಾಫೀ ಗಿಡ, ಮೆಣಸು ಮತ್ತು ವಿಳ್ಳೆದೆಲೆ ಬಳ್ಳಿಯನ್ನೂ ಬೆಳೆಯುತ್ತೇವೆ. ಬಣ್ಣದ ಮೇಲೆಯೇ ಹೋಗುತ್ತಾ ದಡಕ್ಕೆ ಸೇರಿದೆವು. ಆ ದಂಡೆಯಲ್ಲಿಯೇ ಬಲಕ್ಕೆ ನಡೆದು ತೋಟದ ಪ್ರದೇಶ ದಾಟಿದೆವು. ಇನ್ನೊಂದು ಬೇಲಿ ಇರುತ್ತದೆಯೇ ಎಂಬ ನಮ್ಮ ಪ್ರಶ್ನೆಗೆ ಹೌದೌದು ಇನ್ನೊಂದು ದಡಪಿಯನ್ನೂ ದಾಟಬೇಕು ಎಂಬ ಉತ್ತರ. ಹತ್ತು ನಿಮಿಷದಲ್ಲಿ ಒಂದು ಗದ್ದೆ ಸಾಲುಗಳ ಮೇಲ್ಭಾಗದಲ್ಲಿದ್ದೇವೆ. ಇದೇನು ಬರೀ ಒಣಗಿರುವ ಹುಲ್ಲು ಕಡ್ಡಿ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ಯಾನುಭೋಗರು, ಈ ಭೂಮಿಗೆ ಬ್ಯಾಣ ಎನ್ನುತ್ತೇವೆ. ನೀವು ನೋಡಿದ್ದು, ಬೆಳೆದು ಒಣಗಿರುವ ಹುಲ್ಲು. ಇದನ್ನು ಕರಡ ಎಂದು ಕರೆದು ಎಮ್ಮೆ ಹಸುಗಳಿಗೆ ಆಹಾರವಾಗಿ ಕೊಡುತ್ತೇವೆ. ಇನ್ನೂ ದೂರದಲ್ಲಿ ನೋಡಿ, ಏನೂ ಬೆಳೆಯಲಾಗದ ಜಾಗ, ಅದನ್ನು ಖುಷ್ಕಿ ಎನ್ನುತ್ತಾರೆ. ಕೆಲವು ನಿಮಿಷಗಳ ನಂತರ ವಿವಿಧ ಅಳತೆಗಳ ಜಾಗವನ್ನು ತೋರಿಸಿ ಗದ್ದೆಯನ್ನು ನೋಡುತ್ತಿದ್ದೀರಿ ಎಂದರು. ಎತ್ತರದಿಂದ ಇಳಿಯುವ ಹಳ್ಳದ ಪಕ್ಕದಲ್ಲಿಯೇ ಹೋಗುತ್ತಿದ್ದೇವೆ. ಇದು ಮೇಲೆ ಹೆಚ್ಚಾದ ನೀರು ಗದ್ದೆಯ ಕೆಳಭಾಗದ ಅವಳಿಯನ್ನು ಸೇರುವ ಮಾರ್ಗ. ಇದುವೇ ಹಾನಂಬಿ ಎಂದರು. ಸ್ವಲ್ಪ ದೂರ ನಡೆದು ಪೂರ್ತಿ ಇಳಕಲು ತಲುಪಿದಾಗ ನೀರು ಹರಿಯುವ ಅವಳಿ ಸಿಕ್ಕಿತು.
![]() |
| ಗದ್ದೆ ಹಾಳೆಗಳು |
| ಗದ್ದೆಯಲ್ಲಿ ಬೆಳೆಯುತ್ತಿರುವ ಭತ್ತ |
ಭತ್ತ ಬೆಳೆಯುವ ಭೂಮಿಯನ್ನು ಗದ್ದೆ ಎಂದು ಕರೆಯುತ್ತಾರೆ. ತೋಟದಂತೆ ಇಲ್ಲಿ ಎಲ್ಲಿಯೂ ಮರಗಳು ಕಾಣಸಿಗದು. ಗದ್ದೆಗಳು ಪ್ರಾರಂಭವಾಗುವ ಮುನ್ನ ಹಲವಾರು ಮರಗಳು ಇವೆ. ಇನ್ನು ಗದ್ದೆಯ ಬಯಲ ಮಧ್ಯೆ ನೀರು ಹರಿಯುವ ಅವಳಿಯಲ್ಲಿ ನಿಂತು ಎಡ ಬಲಕ್ಕೆ ನೋಡಿದರೆ ಎರಡು ಬದಿಯಲ್ಲೂ ಹಂತ ಹಂತವಾಗಿ ಏರುತ್ತಾ ಹೋಗಿರುವ ಗದ್ದೆಗಳು. ಈ ಪ್ರತಿ ಹಂತಕ್ಕೂ ಗದ್ದೆಯ ಹಾಳೆ ಎನ್ನುತ್ತಾರೆ. ಇದುವೇ ವಿವಿಧ ಅಳತೆಯ ಸಮತಟ್ಟಾದ ಭತ್ತ ಬೆಳೆಯುವ ಪ್ರದೇಶ. ಪ್ರತಿ ಗದ್ದೆಯ ಹಾಳೆಯ ಸುತ್ತಲೂ ಇರುವ ಒಂದೂವರೆ ಅಡಿಯಷ್ಟು ಅಗಲದ, ಗದ್ದೆಗಿಂತಲೂ ತುಸು ಎತ್ತರದ ಕಟ್ಟೆಗೆ ಗದ್ದೆ ಬದು ಎನ್ನುವರು. ಇದು ಗದ್ದೆಯಲ್ಲಿನ ನೀರನ್ನು ಹಿಡಿದಿಡುವುದರೊಂದಿಗೆ ನಡೆದಾಡಲು ಉಪಯೋಗವಾಗುವುದು. ಅವಳಿ ಪಕ್ಕದಲ್ಲಿ ಸದಾ ನೀರಿನ ಪಸೆಯಿಂದಿರುವ ಗದ್ದೆ ಹಾಳೆಯು ಸವಳು ಗದ್ದೆ ಎಂದು ಕರೆಯಿಸಿಕೊಂಡರೆ ಏರುತ್ತಾ ಹೋಗಿ ಗದ್ದೆ ಮುಗಿಯುವ ಕೊನೆಯ ಎರಡು ಮೂರು ಹಾಳೆಗಳನ್ನು ಮಕ್ಕೀ ಗದ್ದೆ ಎನ್ನುವರು. ಮಕ್ಕೀ ಹಾಳೆಯಿಂದ ಸವಳು ಗದ್ದೆಯ ವರೆಗೆ ಹೆಚ್ಚಾದ ನೀರು ಹರಿಯುವ ಪ್ರತ್ಯೇಕ ಮಾರ್ಗವನ್ನು ಹಾನಂಬಿ ಎಂದು ಹೇಳಿದ್ದೇನೆ. ಕಡಿಮೆ ನೀರನ್ನು ಬಳಸುವ ಭತ್ತವನ್ನು ಮಕ್ಕಿ ಗದ್ದೆಯಲ್ಲಿ ಬೆಳೆಯುವರು. ಹೆಚ್ಚು ನೀರು ಇದ್ದರೂ ಕೊಳೆಯದೆ ಬೆಳೆಯುವ ಭತ್ತವನ್ನು ಅಥವಾ ಹೆಚ್ಚು ನೀರಿನ ಅಗತ್ಯವಿರುವ ಬೆಳೆಯಾದ ಕಬ್ಬನ್ನು ಸವಳು ಗದ್ದೆಯಲ್ಲಿ ಅಥವಾ ಅದರ ಸಮೀಪದ ಗದ್ದೆ ಹಾಳೆಯಲ್ಲಿ ಬೆಳೆಯುತ್ತೇವೆ ಎಂದರು. ಈ ಸವಳು ಗದ್ದೆಯಲ್ಲಿ ನೀರಿನ ಸೌಲಭ್ಯ ಇದ್ದರೆ ಬೇಸಿಗೆಯಲ್ಲಿಯೂ ಬೆಳೆ ಬೆಳೆಯುತ್ತಾರೆ.
ಸಾಮಾನ್ಯವಾಗಿ ಜೂನ್-ಜುಲೈನಲ್ಲಿ ಬೇಸಾಯ ಬಿತ್ತನೆ ಪ್ರಾರಂಭವಾಗುತ್ತದೆ. ನವೆಂಬರ್-ಡಿಸೆಂಬರ್ ವೇಳೆಗೆ ಸುಗ್ಗಿ ಪ್ರಾರಂಭವಾಗುತ್ತದೆ. ಆ ಸುಗ್ಗಿಯ ದಿನಗಳಲ್ಲಿ ಬಂದರೆ ಭತ್ತವನ್ನು ಬೇರ್ಪಡಿಸುವ ಕಣ, ಕಬ್ಬಿನಿಂದ ಬೆಲ್ಲ ಪಡೆಯುವ ಆಲೆಮನೆ, ತೋಟದ ಅಡಿಕೆಯನ್ನು ಸುಲಿಯುವ, ಸಂಸ್ಕರಿಸುವ ವಿಧಾನ ತಿಳಿಯಬಹುದು. ಅದನ್ನು ತೋರಿಸಿ ಹೇಳಿದರೆ ಚೆನ್ನಾಗಿ ಅರ್ಥವಾಗುತ್ತದೆ ಎಂದರು. ಹಳ್ಳಿಯ ಬಗ್ಗೆ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಮಾಹಿತಿ ದೊರೆತಿತ್ತು. ಬಿಸಿಲು ಹೆಚ್ಚಾಗಿದ್ದರಿಂದ ತುಸು ವಿಶ್ರಾಂತಿ ಬೇಕಾಗಿತ್ತು. ಆದ್ದರಿಂದ ಮನೆಯತ್ತ ಅವರು ಕರೆದಾಗ ಆಗುವುದಿಲ್ಲ ಎನ್ನಲಾಗಲಿಲ್ಲ. ಈಗ ಊರನ್ನು ಪ್ರವೇಶಿಸಿದ ದಿಕ್ಕು ಬೇರೆಯಾಗಿತ್ತು. ಊರು ಹತ್ತಿರವಾದಂತೆ ಹಸಿರಾಗಿ ಸಪಾಟಾದ ಬಯಲು. ಇದೇಕೆ ಏನು ಬೆಳೆಯದೆ ಬಿಟ್ಟಿದ್ದೀರಿ ಎಂಬ ಪ್ರಶ್ನೆಗೆ ಎಲ್ಲಾ ನಮಗೇ ಆದರೆ ನಮ್ಮ ಪಶುಗಳಿಗೆಂದು ಜಾಗ ಬೇಡವೇ. ಇದುವೇ ಗೋಮಾಳ. ಇದು ಸರ್ಕಾರಕ್ಕೆ ಸೇರಿದ ಜಾಗ. ಮನೆಯನ್ನೂ ಕಟ್ಟಬಾರದು ಎಂದರು. ಹಸುಗಳು ಬೆಳೆದ ಹುಲ್ಲನ್ನು ಉಚಿತವಾಗಿ ಮೇಯಲು ಬಿಟ್ಟ ಸ್ಥಳ ಎನ್ನುತ್ತಾ ಅಲ್ಲೇ ನಿಂತಿದ್ದ ಕೆಲವು ಗಿಡ್ಡವಾಗಿದ್ದ ಹಸುಗಳನ್ನು ತೋರಿಸಿ ಈ ಹಸುಗಳು ಮಲೆನಾಡಿನ ವಿಶೇಷ. ಆದ್ದರಿಂದಲೇ ಇವುಗಳು ಮಲೆನಾಡಿನ ಗಿಡ್ಡ ಹಸುವಿನ ತಳಿ ಎಂದು ಪ್ರಸಿದ್ಧವಾಗಿದೆ ಎಂದರು. ಪಕ್ಕದಲ್ಲೇ ಇರುವ ದೇವಸ್ಥಾನ, ಪಕ್ಕದಲ್ಲೊಂದು ಚಚ್ಚೌಕದಾಕಾರದ ಕಲ್ಲಿನ ಬಾವಿಯನ್ನು ಕಲ್ಯಾಣಿ ಎಂದು ತೋರಿಸಿದರು. ಸಂಜೆಯ ವೇಳೆಗೆ ದೇವಾಲಯ ತೆರೆದಿರುತ್ತದೆ. ಆ ವೇಳೆಗೆ ಇಲ್ಲಿಗೆ ಬರಬಹುದು ಎಂದರು.
ಶ್ಯಾನುಭೋಗರೊಂದಿಗೆ ಮಾತನಾಡುತ್ತಾ ಅವರ ಮನೆ ಸೇರಿದಾಗ ಸಮಯ ಮಧ್ಯಾಹ್ನ ೨ ಗಂಟೆಯಾಗಿತ್ತು. ಅವರ ಮನೆಯಲ್ಲಿ ಮಧ್ಯಾಹ್ನದ ಊಟವಾಯಿತು. ಮನೆಯ ಹಿತ್ತಲಲ್ಲಿ ದೂರದಲ್ಲಿ ಸಣ್ಣ ಕಾನು, ಗುಡ್ಡ ಕಾಣುತಿತ್ತು. ಹುಣಸೆ, ಮಾವು, ಬೇವು, ನಂದಿ, ಹಲಸು, ಗೇರು ಮರ, ಪೇರಲ, ಪನ್ನೇರಲ, ಕಂಚಿ ಹಣ್ಣುಗಳೂ ಕಾಣುತ್ತಿವೆ. ಹಲವು ತರಹದ ತರಕಾರಿ, ಬೆಳೆದ ರೀತಿಯನ್ನು ಅವುಗಳ ಗಿಡಗಳನ್ನು ತೋರಿಸಿದರು. ಊಟದ ನಂತರ ಸ್ವಲ್ಪ ತೂಕಡಿಸುತ್ತಾ ಕುಳಿತ ನನಗೆ ನೀವೂ ಅಮಲ್ದಾರರೇನು ಎಂದಾಗ, ಇಲ್ಲಾ ಏಕೆ? ಎಂದು ಗಾಬರಿಯಿಂದ ಹೇಳಿದೆ. ಅಲ್ಲಾ, ತಾವು ಅಮಲು ಬಂದವರಂತೆ ಕಣ್ಣು ಮಾಡಿದಿರಿ, ತಮಾಷೆಗೆ ಕೇಳಿದೆ ಎಂದರು. ಇದು ಹೊಸ ಮಾತುಕತೆಗೆ ನಾಂದಿಯಾಯಿತು. ಈ ಅಮಲ್ದಾರ, ಶೇಕ್ ದಾರ ಕಾಲದವರಾದ ತಮಗೆ ಅಂದಿನ ಕಾಲದ ವ್ಯವಹಾರಗಳು, ಬಳಸುತ್ತಿದ್ಧ ಶಬ್ದಗಳ ಪರಿಚಯ ಸಾಮಾನ್ಯ. ಅವುಗಳ ಬಗ್ಗೆ ವಿವರವಾಗಿ ಮಾಹಿತಿ ಕೇಳಿದಾಗ ಅವರೂ ಸಂತೋಷದಿಂದಲೇ ಹೇಳಲು ಪ್ರಾರಂಭಿಸಿದರು.
ನೀವೇ ನೋಡಿದಂತೆ ಈ ಗ್ರಾಮದಲ್ಲಿ ಇರುವುದು ಗ್ರಾಮಸ್ಥರು, ಸಾಕು ಪ್ರಾಣಿಗಳು, ಭೂಮಿ, ಬೆಳೆಯುವ ಬೆಳೆ, ಅದಕ್ಕಾಗಿ ನೀರು ಒದಗಿಸುವ ಕೆರೆ, ಕಾಡು ಮತ್ತು ಬರುವ ಮಳೆ. ಇದೇ ಗ್ರಾಮದ ಜೀವಾಳ. ಇಲ್ಲಿಯ ಜನರು, ಅವರ ಮನೆಯಲ್ಲಿ ಆಗುವ ಜನನ ಮರಣಗಳ ದಾಖಲೆ, ಅವರ ಭೂ ಒಡೆತನದ ವಿವರ, ಅದರ ಅಳತೆ, ನೀರಿನ ಸೌಲಭ್ಯ, ಬೆಳೆದ ಬೆಳೆ, ಇವುಗಳಲ್ಲಿ ಆಗಿಂದಾಗ್ಗೆ ಆಗುವ ಬದಲಾವಣೆಗಳನ್ನು ದಾಖಲಿಸಿ, ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಇಲ್ಲಿಯ ಶ್ಯಾನುಭೋಗರದು. ಇವರಿಗೆ ಸಹಾಯಕನಾಗಿ ಪಟೇಲ ಮತ್ತು ತಳವಾರರರು ಇದ್ದರೂ ಸರ್ಕಾರಕ್ಕೆ ಲೆಕ್ಕದ ಬಗ್ಗೆ ಉತ್ತರ ಕೊಡುವ ಹೊಣೆ ಶ್ಯಾನುಭೋಗರದೇ. ಗ್ರಾಮಕ್ಕೆ ಸಂಬಂಧಿಸಿದಂತೆ ಇರುವ ಅಧಿಕಾರದಲ್ಲಿ ಕಿರಿಯ ಅಧಿಕಾರಿಯೇ ಶ್ಯಾನುಭೋಗ. ಅವನ ಮೇಲಧಿಕಾರಿಯಾಗಿ ಶೇಕ್ ದಾರ ಇರುತ್ತಾರೆ. ಆ ಕಾಲದಲ್ಲಿ ಶ್ಯಾನುಭೋಗ ರ ಮೇಲೆ ಕ್ರಮವಾಗಿ ಶಿರಸ್ತೇದಾರ್, ಅಮಲ್ದಾರ್ ಹಾಗೂ ಡೆಪ್ಯುಟಿ ಕಮೀಷನರ್ ಇರುತ್ತಿದ್ದರು. ಈ ಬಗ್ಗೆ ತುಸು ವಿವರ ಕೊಡುತ್ತೇನೆ. ಈಗ ಈ ಹುದ್ದೆಗಳ ಹೆಸರು ಬದಲಾದರೂ ಮಾಡುವ ಕೆಲಸದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ಕಂದಾಯ ಇಲಾಖೆಯ ಜಿಲ್ಲಾ ಮಟ್ಟದ ಪ್ರಧಾನ ಅಧಿಕಾರಿಯೇ ಜಿಲ್ಲಾಧಿಕಾರಿ. ಜಿಲ್ಲೆಯಲ್ಲಿನ ಎಲ್ಲಾ ಇಲಾಖೆಗಳ ನಿಯಂತ್ರಣ ಜಿಲ್ಲಾಧಿಕಾರಿಗಿದ್ದು ಜಿಲ್ಲೆಯ ಮುಖ್ಯ ಸ್ಥಳದಲ್ಲಿರುತ್ತಾರೆ. ಅವರ ಕೆಳಗೆ ತಾಲೂಕಿನ ಅಧಿಕಾರಿಯಾಗಿ ತಹಸೀಲ್ದಾರ್ ಇದ್ದು ಇವರಿಗೆ ತಾಲೂಕಿನ ಎಲ್ಲಾ ಇಲಾಖೆಗಳ ನಿಯಂತ್ರಣವಿರುತ್ತದೆ ಇವರನ್ನು ತಾಲೂಕು ಮ್ಯಾಜಿಸ್ಟ್ರೇಟ್ ಎನ್ನುವರು. ಹಿಂದೆ ಇವರೇ ಕಾನೂನುಗಳನ್ನು ಅಮಲು/ಜಾರಿ ಮಾಡುವವರಾದ್ದರಿಂದ ಅವರನ್ನು ಅಮಲ್ದಾರ್ ಎಂದು ಕರೆಯುತ್ತಿದ್ದರು. ಇವರು ಸಂಚಾರದಲ್ಲಿದ್ದಾಗ ಇವರ ಕಚೇರಿಯಲ್ಲಿ ಇವರ ಪರವಾಗಿ ಕೆಲಸ ಮಾಡಲೆಂದೇ ಶಿರಸ್ತೇದಾರ್ ಇರುತ್ತಾರೆ. ಇವರ ಕೆಳಗೆ ರೆವಿನ್ಯೂ ಇನ್ಸಪೆಕ್ಟರ್ ಅಥವಾ ರಾಜಸ್ವ ನಿರೀಕ್ಷಕ (ಶೇಕ್ ದಾರ) ಇದ್ದು ಗ್ರಾಮಮಟ್ಟದಲ್ಲಿ ಗ್ರಾಮ ಲೆಕ್ಕಿಗ ಇರುತ್ತಾನೆ. ಇವನು ಹಿಂದಿನ ಶ್ಯಾನುಭೋಗರ ಜವಾಬ್ದಾರಿ ಕೆಲಸದಲ್ಲಿ ಹೆಚ್ಚು ಹೊಂದುವ ಕೆಲಸ ಮಾಡುವವನು. ಅಂತೆಯೇ ಅಂದಿನ ಪಹಣಿ ಈಗಿನ ಕಾಲದಲ್ಲಿ ರೆಕಾರ್ಡ್ ಆಫ್ ರೈಟ್ಸ್ , ಫಾರಂ ನಂ ೧೬ ಎಂದು ಕರೆಯಲ್ಪಡುತ್ತಿದೆ. ಶ್ಯಾನುಭೋಗರಿಗೆ ಅವರು ಮಾಡುವ ಸೇವೆಗೆ ಪೋಟಿಗೆ ಎಂದು ವರ್ಷಕ್ಕೊಮ್ಮೆ ಸಂಭಾವನೆ ಕೊಡುತ್ತಿದ್ದರು. ಈಗಿನ ಗ್ರಾಮ ಲೆಕ್ಕಿಗರಿಗೆ ಪ್ರತಿ ತಿಂಗಳು ಸಂಬಳ ಸಿಗುತ್ತದೆ.
ಪಹಣಿ ಎಂಬುವುದು ಶ್ಯಾನುಭೋಗರಿಂದ ತಯಾರಾಗುವ ಒಂದು ದಾಖಲೆ. ಅತ್ಯಂತ ಪ್ರಾಥಮಿಕ ಅಂಶಗಳನ್ನು ಒಳಗೊಂಡ ಈ ಪಹಣಿ ದೇಶದ ಭೂಸ್ವತ್ತಿನ ಪೂರ್ಣ ಚರಿತ್ರೆಯನ್ನು ಕೊಡುವ ದಾಖಲೆ ಎಂದು ಕರೆದರೆ ತಪ್ಪಾಗಲಾರದು. ಭೂಮಿಯ ಒಡೆತನದ ವಿವರ, ಖಾತೆದಾರರ ಹೆಸರು, ಕೃಷಿಯನ್ನು ಅವನೇ ಮಾಡುತ್ತಿದ್ದಲ್ಲಿ ಕುಮ್ಕೀದಾರ ಎಂದು, ಬೇರೆ ಖಾತೆದಾರನಿಂದ ನಿರ್ಧಿಷ್ಟವಾಗಿ ವಾರ್ಷಿಕ ಪ್ರತಿಫಲ ಕೊಡಲು ಒಪ್ಪಿ ಬೇಸಾಯಕ್ಕೆ ಜಾಗ ಪಡೆದಿದ್ದರೆ ಅವನನ್ನು ಗೇಣಿದಾರ ಎನ್ನುತ್ತಿದ್ದರು. ಭೂಮಿ ಅವನ ನಿಯಂತ್ರಣದಲ್ಲಿರುವುದರಿಂದ ಅವನನ್ನು ಕಬ್ಜೆದಾರ ಎಂದೂ ದಾಖಲಿಸುತ್ತಿದ್ದರು. ಇವನನ್ನು ಹಿಡುವಳಿದಾರ, ಒಕ್ಕಲುದಾರ ಅಥವಾ ಜಿರಾಯ್ತು ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ರೈತನ ಭೂಮಿ ವಂಶ ಪಾರಂಪರ್ಯವಾಗಿ ಬಂದಿರುತ್ತದೆ. ತಂದೆಯ ಮರಣಾನಂತರ ಅವನ ಮಗನಿಗೆ ಸ್ವತ್ತು ಬಂದಿದ್ದರೆ ವರ್ಗವೆಂದು, ಇರುವ ಮಕ್ಕಳಿಗೆ ಭಾಗವಾಗಿ ಬಂದಿದ್ದರೆ ಹಿಸ್ಸೆ ಎಂದು ಬರೆಯಲಾಗುವುದು. ಬೇರೆಯವರಿಂದ ಕ್ರಯದ ಮೂಲಕವೋ, ದಾನ ಅಥವಾ ಉಡುಗೊರೆ ಮೂಲಕವೋ ಬಂದಿದ್ದರೆ ಕ್ರಯ, ದಾನ, ಉಡುಗೊರೆ ಎಂದು ದಾಖಲಿಸುತ್ತಿದ್ದರು. ಕೆಲವು ಅವಧಿಗೆ ಹಣ ಕೊಟ್ಟು ಪಡೆದರೆ ಭೋಗ್ಯ ಅಥವಾ ಕೊಟ್ಟ ಹಣಕ್ಕೆ ಸಮನಾಗಿ ಎಂದು ಪಡೆದಿದ್ದರೆ ಆಧಾರ ಎಂದು ದಾಖಲಿಸುತ್ತಿದ್ದರು. ಕ್ರಯ, ದಾನ, ಭೋಗ್ಯ ಮತ್ತು ಆಧಾರಗಳು ಯಾವುದೇ ಸ್ವತ್ತಿನ ನಾಲ್ಕು ವ್ಯವಹಾರ ಪದ್ಧತಿಗಳು. ಹೀಗೆ ಸ್ವತ್ತಿನ ಪಡೆದ ರೀತಿಯನ್ನು ಪಹಣಿಯಲ್ಲಿ ನಮೂದಿಸಲಾಗುತ್ತದೆ. ಕ್ರಯಕ್ಕೆ ಅಥವಾ ದಾನವಾಗಿ ಪಡೆದ ಜಮೀನನ್ನು ವೀಲುನಾಮೆ/ವಿಲೇ/ವಿಲ್ ಮಾಡಿ ಬೇಕಾದವರಿಗೆ ಸಾವಿನ ನಂತರ ವರ್ಗಾವಣೆ ಮಾಡಬಹುದು.
ಇನ್ನು ಭೂಮಿಯ ಉಪಯೋಗವನ್ನು ಪಹಣಿಯಲ್ಲಿ - ಅಡಿಕೆ ಬೆಳೆಯುವ ಭೂಮಿಯನ್ನು ಭಾಗಾಯ್ತು ಎಂದೂ, ಭತ್ತ ಕಬ್ಬು ಬೆಳೆದ ಜಾಗವನ್ನು ತರಿ ಭೂಮಿ, ಬೆಳೆಯಲು ಅವಕಾಶ ಇದ್ದೂ ಏನೂ ಬೆಳೆಯದೆ ಬಿಟ್ಟ ಜಾಗವನ್ನು ಬೀಳು ಭೂಮಿ ಅಥವಾ ಹಡಿಲು ಎಂದು ಕರೆದರೆ, ಏನೂ ಬೆಳೆಯಲಾಗದ ಭೂಮಿಯಾದರೆ ಖರಾಬ್ ಅಥವಾ ಖುಷ್ಕಿ ಎಂದೂ, ಸೊಪ್ಪಿನ ಬೆಟ್ಟ (ತೋಟಕ್ಕೆ ಕೂಡಿದಂತೆ ಇರುವ ಗಿಡ ಮರಗಳ ಜಾಗ), ಗೋಮಾಳ, ಕಾಡು ಎಂಬುದಾಗಿ ಬರೆಯಲಾಗುತ್ತದೆ. ಪ್ರತಿ ಖಾತೆದಾರ ಬೆಳೆದ ಬೆಳೆಗಳ ವಿಸ್ತೀರ್ಣವನ್ನು ಆಕಾರ ಎಂದು ಕರೆದು, ಎಕರೆ ಮತ್ತು ಗುಂಟೆಗಳಲ್ಲಿ ನಮೂದಿಸಲಾಗುತಿತ್ತು. ಈಗ ಹೆಕ್ಟೇರ್ ನಲ್ಲಿ ಹೇಳಲಾಗುತ್ತದೆ (ಹೆಕ್ಟೇರ್ ಅಂದರೆ ೨.೪೭ ಎಕರೆ). ಬೆಳೆದಿರುವ ಬೆಳೆಯ ವಿಸ್ತೀರ್ಣಕ್ಕೆ ತಕ್ಕಂತೆ ಅಂದಿನ ಲೆಕ್ಕದಲ್ಲಿ ಕಂದಾಯ ನಿರ್ಧರಿಸಿ ವಸೂಲು ಮಾಡಲಾಗುತ್ತಿತ್ತು.
ಕೆಲವು ವಿಶೇಷ ಸಂಗತಿಗಳನ್ನು ಹೇಳುವುದಾದರೆ ಮಲೆನಾಡಿನಲ್ಲಿ ತಾಲೂಕಿನ ಪ್ರದೇಶಗಳನ್ನು ಅನೇಕ ಹೋಬಳಿಗಳೆಂದು ವಿಂಗಡಿಸಿ ಅದರಡಿ ಹಳ್ಳಿಯ ವಿಸ್ತಾರ ಮತ್ತು ಜನಸಂಖ್ಯೆಯನ್ನು ಆಧರಿಸಿ ೪-೫ ಹಳ್ಳಿಗಳನ್ನು ಒಂದೊಂದು ಹೋಬಳಿಯ ಲೆಕ್ಕದಲ್ಲಿ ಸೇರಿಸಿ ಅದಕ್ಕೆ ಶ್ಯಾನುಭೋಗರನ್ನು ನಿಯಮಿಸುತ್ತಿದ್ದರು. ತಾಲೂಕಿನ ಮುಖ್ಯ ಸ್ಥಳ ಸೇರಿದಂತೆ ಇರುವ ಹೋಬಳಿಗೆ ಕಸಬಾ ಹೋಬಳಿ ಎನ್ನುತ್ತಾರೆ. ಇಲ್ಲಿಯ ಆಡಳಿತ ಪದ್ದತಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಹೋಬಳಿಗಳಿರಲಿಲ್ಲ. ಅಲ್ಲಿ ಅದನ್ನು ಸರ್ಕಲ್ ಎಂದು ಕರೆಯುತ್ತಾರೆ. ಇಲ್ಲಿಯ ಗೇಣೀ ಕೊಡುವುದಕ್ಕೆ ಅಲ್ಲಿ ಲಾವಣಿ ಎನ್ನುತ್ತಾರೆ. ಅರ್ಧ ಹಂಚಿಕೊಳ್ಳುವುದಕ್ಕೆ ಕೋರು/ಕೋರಿ ಎನ್ನುತ್ತಾರೆ. ರೈತರೊಂದಿಗೆ ಜಮೀನುದಾರನು ಬೆಳೆಯಲು ಪಾಲಿಗೆ ಕೊಟ್ಟಿದ್ದರೆ ಫಲವನ್ನು ಮೂರು ಭಾಗವಾಗಿ ಹಂಚಿ ಕೊಳ್ಳುವ ವ್ಯವಸ್ಥೆ ಇತ್ತು. ಎತ್ತಿಗಾಗಿ ಒಂದು ಪಾಲು (ಎತ್ತಾಳುಪಾಲು), ಆಳಿಗೆ ಒಂದು ಪಾಲು ಜಮೀನುದಾರನಿಗೆ ಒಂದು ಪಾಲು. ಬಹುಶಃ ಅಂದಿನ ಕಾಲದಲ್ಲಿ ಆಳಿದ ವಿವಿಧ ರಾಜರ ಆಡಳಿತ ಪದ್ದತಿ ಅನ್ವಯ ಅಲ್ಲಿಯ ಶಬ್ದ ಸೌಂದರ್ಯ ಎದ್ದು ಕಾಣುತ್ತದೆ.
ಮ್ಯುಟೇಶನ್ ರಿಜಿಸ್ಟರ್ - ಆಸ್ತಿಗಳಿಗೆ ಸಂಬಂಧಿಸಿದಂತೆ ವರ್ಗಾವಣೆಯನ್ನು ಅಂದರೆ ಯಾರಿಂದ ಯಾರಿಗೆ ಆಸ್ತಿ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಸುವ ಹಾಗೂ ಅದು ಹೇಗೆ ವರ್ಗಾವಣೆಯಾಗಿದೆ ಎಂಬುದನ್ನು ವಿವರಿಸುವ ರೆವೆನ್ಯೂ ದಾಖಲೆಯಾಗಿರುತ್ತದೆ. ಇದು ಕ್ರಯ, ದಾನ, ಭೋಗ್ಯ ಮತ್ತು ಆಧಾರಗಳ ಉತ್ತರಾಧಿಕಾರತ್ವ ಇತ್ಯಾದಿ ರೀತಿಯಲ್ಲಿ ವರ್ಗಾವಣೆಯಾಗುವ ಆಸ್ತಿಯ ಬಗ್ಗೆ ತಿಳಿಸುತ್ತದೆ. ಮ್ಯುಟೇಶನ ರಿಜಿಸ್ಟರ್ ನ ನಿರ್ವಹಣೆ ಶ್ಯಾನುಭೋಗರದು. ಜೊತೆಗೆ ಗ್ರಾಮದಲ್ಲಿ ಜನನ ಮರಣವಾದವರ ಲೆಕ್ಕವನ್ನು ಆಗಿಂದಾಗ್ಗೆ ಆಗುವ ಬದಲಾವಣೆಯನ್ನು ಸೇರಿಸಿ ಬರೆಯಲಾಗುವುದು. ಗ್ರಾಮದ ಅಧಿಕಾರದಲ್ಲಿ ಅನೇಕ ಪಾರಿಭಾಷಿಕ ಶಬ್ದಗಳು ಸೇರಿವೆ. ಮುಖ್ಯವಾಗಿ ಮರಣ ಹೊಂದಿದವರನ್ನು ಪೌತಿ ಎಂದು, ಹಣಕಾಸಿನ ವ್ಯವಹಾರಕ್ಕೆ ಲೇವಾದೇವಿ ಎಂದು, ಭೂಮಿಯ ಹಳೆಯ ಮಾಲೀಕತೆ ವಿವರ ತೋರಿಸುವ ದಾಖಲೆಗೆ ಖೇತುವಾರ್, ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಉಳುಮೆ ಮಾಡಲು ಕೊಡುವ ಪದ್ಧತಿಗೆ ಗೇಣಿ ಎಂದು, ಹಾಗೆ ಪಡೆದವರನ್ನು ಗೇಣಿದಾರ ಎಂದೂ, ಆಸ್ತಿಯನ್ನು ಭಾಗ ಮಾಡುವುದು ಅಥವಾ ಸೀಳುವುದನ್ನು ಪೋಡು (ವಿಭಾಗ ಪ್ರಕ್ರಿಯೆ) ಎನ್ನುತ್ತಾರೆ. ಪಕ್ಕಾಪೋಡು ಎಂದರೆ ಸ್ಥಿರಾಸ್ತಿಯ ಪಾಲು ಅಥವಾ ವಿಭಾಗವನ್ನು ರೆವಿನ್ಯೂ ಮತ್ತು ಸರ್ವೇ ಇಲಾಖೆಯ ಸಹಯೋಗದಲ್ಲಿ ಮಾಡಿಸುವ ಪ್ರಕ್ರಿಯೆ. ಚೇಣಿ ಎಂದರೆ ಅಡಿಕೆ ಮುಂತಾದ ಫಸಲುಗಳನ್ನು ಫಸಲು ಮಾಗುವ ಮೊದಲೇ ಹುಂಡಿ ಕ್ರಯಕ್ಕೆ ಮಾರುವ ಅಥವಾ ಕೊಳ್ಳುವ ಪ್ರಕ್ರಿಯೆ, ಸಹಿ ಮಾಡುವುದಕ್ಕೆ ದಸ್ಕತ್/ದಸ್ಕತ್ತು/ರುಜು ಮಾಡು ಎಂದು, ಗ್ರಾಮಠಾಣಾ ಎಂದರೆ ಗ್ರಾಮದ ಸರಹದ್ದಿನಲ್ಲಿ, ಕ೦ದಾಯ ವಸೂಲು ಮಾಡುವ ಅಧಿಕಾರಿಯನ್ನು ಪೇಷ್ಕಾರ್ ಎನ್ನುತ್ತಿದ್ದರು. ನಕ್ಷೆಗಳೂ ಸೇರಿದಂತೆ ಕೆಲವು ದಾಖಲೆಗಳಲ್ಲಿ ಹಳ್ಳಿಗಳನ್ನು ಮೌಜೆ ಎಂದು ಕರೆದಿದ್ದಾರೆ.
ಆಸ್ತಿಗಳಲ್ಲಿ ಭೂಮಿಯನ್ನು ಸ್ಥಿರಾಸ್ತಿ ಎಂದು, ಬಂಗಾರ, ಬೆಳ್ಳಿ, ಪಾತ್ರೆ ಪಡಗ ಇನ್ನಿತರೆ ವಸ್ತುಗಳನ್ನು ಚರಾಸ್ದಿ ಎಂದು ವಿಂಗಡಿಸುತಿದ್ದರು. ಪ್ರತಿ ಸ್ವತ್ತನ್ನು ಗುರುತಿಸಲು ಅದರ ಸುತ್ತ ನಾಲ್ಕು ದಿಕ್ಕುಗಳಲ್ಲಿ ಇರುವ ಸ್ವತ್ತುಗಳ ವಿವರಗಳನ್ನು ಹೇಳುವುದಕ್ಕೆ ಚಕ್ಕುಬಂದಿ ಎಂದು ಕರೆಯುವರು. ಒಬ್ಬರ ಹೆಸರಿನಲ್ಲಿ ಅಕೌಂಟ್ ಎಂಬುದನ್ನು ಖಾತೆ ಎಂದು, ಲೆಕ್ಕಪುಸ್ತಕವನ್ನು ಖಿರ್ದಿ ಎಂದು, ಸ್ವತಃ ವ್ಯವಹಾರ ಮಾಡಿದ್ದರೆ ಮುದ್ದಾಂ ಎಂದು, ಅದನ್ನು ಇನ್ನೊಬ್ಬರ ಮುಂದೆ ನಡೆಸಿದ್ದರೆ ಅವರನ್ನು ಸಾಕ್ಷಿ ಎಂದು ಹೇಳುತ್ತಾರೆ. ಆ ಸಾಕ್ಷಿಗಳ ಎದುರು ಎಂಬುದಕ್ಕೆ ರೂಬು ರೂಬು ಎನ್ನುತ್ತಿದ್ದರು. ಯಾವುದೇ ವಸ್ತುವನ್ನು ಹಣಕೊಟ್ಟು ತಕ್ಷಣವೇ ಪಡೆದಿದ್ದರೆ ರೋಕರೋಕ್ ಎಂದು ಕರೆಯುತ್ತಾರೆ. ಕ್ರಯಪತ್ರದಂತಹ ಪತ್ರ ಅಥವಾ ದಸ್ತಾವೇಜುಗಳನ್ನು ಬರೆಯುವಾತ ಬಿಕ್ಕಲಂದಾರ ಎಂದೂ, ಒಬ್ಬ ವ್ಯಕ್ತಿಯ ಬೇಸಾಯಕ್ಕೆ ಅಥವಾ ಹಿಡುವಳಿಗೆ ಲಗತ್ತಾಗಿ ಇರುವ ಭೂಮಿಯನ್ನು ಆತನ ಕೃಷಿ ಚಟುವಟಿಕೆಗೆ ಪೂರಕವಾಗಿ ಬಳಸುವ ಹಕ್ಕನ್ನು ಜಮ್ಮಾ ಬಾಣೆ ಎಂದು, ಸೊಪ್ಪಿನಬೆಟ್ಟ ಅಥವಾ ಕುಮ್ಕಿ ಎನ್ನುತ್ತಾರೆ. ನಿರ್ದಿಷ್ಟ ಕಾರ್ಯ ಮಾಡಲು ಅಧಿಕಾರ ವಹಿಸುವಿಕೆ ಅಥವಾ ಬೇರೆಯವರಿಗೆ ಒಪ್ಪಿಸುವುದನ್ನು ಹವಾಲ್ತೆ ಎನ್ನುವರು. ಸ್ವತ್ತುಗಳ ಮೇಲೆ ಪಡೆದ ಸಾಲವನ್ನು ಹಿಂದಿರುಗಿಸದೆ ಅಥವಾ ಇನ್ನಿತರ ಕಾರಣಗಳಿಗಾಗಿ ನಡೆಯುವ ಹರಾಜನ್ನು ಇಸ್ತಿಹಾರ್/ಲಿಲಾವ್ ಎನ್ನುವರು. ಶ್ಯಾನುಭೋಗರು ಮಾಡಿರುವ ಲೆಕ್ಕವನ್ನು ಅಮಲ್ದಾರರು ಪರೀಕ್ಷಿಸುವ ಕ್ರಿಯೆಗೆ ಜಮಾಬಂದಿ ಎಂದೂ ಅದನ್ನು ಡೆಪ್ಯುಟಿ ಕಮೀಷನರ್ ರವರ ಸಮ್ಮುಖದಲ್ಲಿ ನಡೆದರೆ ಹುಜೂರ್ ಜಮಾಬಂದಿ ಎಂದೂ ಕರೆಯುತ್ತಿದ್ದರು. ಶ್ಯಾನುಭೋಗರು ಖಾತಾದಾರನ ಲೆಕ್ಕವನ್ನು ಆತನಿಗೆ ಬರೆದುಕೊಡುವ ಪುಸ್ತಕಕ್ಕೆ ಪಟ್ಟಾ ಎನ್ನುವರು. ದೇವಸ್ಥಾನಕ್ಕೆ ಸಲ್ಲಿಸುವ ಸೇವೆಗೆ ಸರ್ಕಾರದಿಂದ ಪಡೆಯುವ ಪ್ರತಿಫಲಕ್ಕೆ ತಸ್ದೀಕ್ ಎಂದು ಕರೆಯುತ್ತಿದ್ದರು. ಜಾಗದ ಅಳತೆ ಮಾಡುವವನ ಹೆಸರು ಸರ್ವೇಯರ್ ಅಥವಾ ಮೋಜಣಿದಾರ ಎನ್ನುತ್ತಾರೆ.
| ಭತ್ತ ಸಂಗ್ರಹಣಾ ಪಣತ |
![]() |
| ಪಶು ಆಹಾರ ಸಂಗ್ರಹದ ಮರಗಿ |
ಭತ್ತವನ್ನು ಸಂಗ್ರಹಿಸಿಡಲು ಮರದಿಂದ ಕೊಠಡಿಯನ್ನು ಮಾಡಿ ಅದರ ಮೇಲ್ಭಾಗದಲ್ಲಿ ಪ್ರವೇಶ ದೊರಕಿಸಿ ಪಣತವೆಂದು ಕರೆಯುತ್ತಿದ್ದರು. ಅದನ್ನು ಬೆತ್ತದಿಂದ ವೃತ್ತಾಕಾರವಾಗಿ ಸುತ್ತಿಸಿ ಅದರಲ್ಲಿ ಭತ್ತ ತುಂಬಿ ಕಣಜವೆಂದು ಕರೆಯುತ್ತಿದ್ದರು. ಅದರಂತೆ ಪಶುಗಳ ಆಹಾರ ಸಂಗ್ರಹಣೆ ಮಾಡಲು ಮರದಿಂದ ಮಾಡಿದ ಮುಚ್ಚಳವಿರುವ ಆಯತಾಕಾರದ ಪೆಟ್ಟಿಗೆ ಮರಗಿಯನ್ನು ಬಳಸುತ್ತಿದ್ದರು.
ಹಿಸ್ಸೆ ಪತ್ರಕ್ಕೆ ಫಾರಿಖತ್ ಎನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ತಹಸೀಲ್ದಾರರಿಗೆ ಮಾಮಲೇದಾರನೆಂದೂ, ಡೆಪ್ಯುಟಿ ಕಮೀಷನರ್ ಗೆ ಕಲೆಕ್ಟರ್ ಎಂದೂ ಶಾನುಭೋಗನಿಗೆ ತಲಾಠಿ ಎಂದೂ ಕರೆಯುತ್ತಿದ್ದರು. ಅಲ್ಲಿ ತರಿ ಜಮೀನುಗಳು ಬಹಳ ಕಡಿಮೆ ಇರುವುದರಿಂದ ಆ ಶಬ್ದವು ಉಪಯೋಗದಲ್ಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಕರೆ ಲೆಕ್ಕ ಇಲ್ಲ. ಅಲ್ಲಿ ಸೆಂಟ್ಸ್ ಅಂದರೆ 1 ಗುಂಟೆಗೆ 2.5 ಸೆಂಟ್ಸ್, ಎಕರೆಗೆ 100 ಸೆಂಟ್ಸ್. ಉತ್ತರ ಭಾರತದಲ್ಲಿ ಭಿಗಾ ಲೆಕ್ಕ. 1 ಭಿಗಾ ಅಂದರೆ 25 ಗುಂಟೆ. 100 ಭಿಗಾ ಅಂದರೆ ಹೆಕ್ಟೇರ್. ಉತ್ತರ ಕರ್ನಾಟಕದಲ್ಲಿ 1 ಕೂರಿಗೆ ಎಂದರೆ 4 ಎಕರೆ. ಅಲ್ಲಿ ಹೆಕ್ಟೇರ್ ವಾಡಿಕೆಯಲ್ಲಿ ಇಲ್ಲ. ಭತ್ತದ ಅಥವಾ ಧಾನ್ಯದ ಬೀಜ ಬಿತ್ತನೆಗೆ ಕೂರಿಗೆ ಎಂಬ ಉಪಕರಣ ಬಳಸುತ್ತಾರೆ. ಏಕ ಕಾಲದಲ್ಲಿ ನಾಲ್ಕು ಸಾಲು ಬಿತ್ತನೆ ಮಾಡುವ ಈ ಸಾಧನಕ್ಕೆ ಇಬ್ಬರೇ ಆಳು ಸಾಕು. ಹೀಗೆ ಮಾತನಾಡುತ್ತಿರುವಾಗಲೇ ಆ ಶ್ಯಾನುಭೋಗರಿಂದ ಗ್ರಾಮ ಜೀವನದ ಬಗ್ಗೆ ಹಲವು ವಿಷಯಗಳು ತಿಳಿಯಿತು. ಈ ಬಗ್ಗೆ ಕೃತಜ್ಞತೆ ಹೇಳಿದಾಗ ಬರುವ ಸುಗ್ಗಿಯ ದಿನಗಳಲ್ಲಿ ಭೇಟಿ ಕೊಡುವಂತೆ ಅವರ ಅಕ್ಕರೆಯ ಆಹ್ವಾನ ಬಂದಿತು. ಬೆಳೆದ ಬೆಳೆ, ಪಡೆಯುವ ರೀತಿ, ಮಾರುವ ಬಗೆ ಇವುಗಳ ವಿಷಯ ತಿಳಿಯಲಾದರೂ ಅಲ್ಲಿಗೆ ಹೋಗಬೇಕೆನಿಸಿದೆ. ಸಾಲದೆಂದು ಆವರ ವಿಶ್ವಾಸದ ಕರೆಗೆ ಉಪೇಕ್ಷೆ ಮಾಡಲಾಗದು. ಹಾಗೆ ಹೋದಾಗ ಬಂದ ಹೊಸ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ.
ಈ ಲೇಖನದಲ್ಲಿ ಪ್ರಸ್ತಾಪಿಸಲಾದ ಕೆಲವು ಪಾರಿಭಾಷಿಕ ಶಬ್ದಗಳು ಮತ್ತು ಅದರ ಅರ್ಥಗಳನ್ನು ಸಂಪಾದಿಸಲು ಮತ್ತು ಸಾಂದರ್ಭಿಕ ಚಿತ್ರಗಳನ್ನು ಒದಗಿಸಿ ಲೇಖನದ ಅಂದವನ್ನು ಹೆಚ್ಚಿಸಿರುವ ನನ್ನ ಆಪ್ತರಾದ ಶ್ರೀ ನಾಡಿಗ್ ರಮೇಶ್ ಹೊಸಬಾಳೆ ರವರಿಗೆ ಕೃತಜ್ಞನಾಗಿದ್ದೇನೆ.




ಹಳ್ಳಿಯಲ್ಲಿ ವಾಸ ಮಾಡುತ್ತಿರುವವರಿಗೂ ಕೂಡ ಈ ಲೇಖನದಲ್ಲಿ ನಮೂದಿಸಿರುವ ಹಲವಾರು ಪದಗಳ ಅರ್ಥ ಗೊತ್ತಿರುವುದಿಲ್ಲ. ಆದಾಗಿ ನಗರ ವಾಸಿಗಳಿಗಂತೂ ಏನು ಗೊತ್ತಿರಲು ಸಾಧ್ಯವೇ ಇಲ್ಲ. ಲೇಖಕರು ನಗರ ವಾಸಿಯಾಗಿದ್ದರೂ ಕೂಡ ಹಳ್ಳಿಗಳ ಸೊಬಗನ್ನು ಅನುಭವಿಸಿ, ಉತ್ತಮ ರೀತಿಯಲ್ಲಿ ವಿವರಣೆಗಳನ್ನು ಸಮಂಜಸವಾದ ಚಿತ್ರಗಳೊಂದಿಗೆ ನೀಡಿರುವುದು ಬಹಳ ಸಂತಸದ ವಿಷಯವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇವರಿಗೆ ಹಳ್ಳಿಗಳ ಹಾಗೂ ಕೃಷಿಕರ ಬಗ್ಗೆ ಇರುವ ಕಾಳಜಿಯನ್ನು ಈ ಲೇಖನವು ಎತ್ತಿ ತೋರಿಸುತ್ತದೆ. ಧನ್ಯವಾದಗಳು.
ReplyDeleteಮುಂದಿನ ಪೀಳಿಗೆಗೆ ಇಂತಹ ಶಬ್ದ ಭಂಡಾರದ ಬಗ್ಗೆ ತಿಳಿವಳಿಕೆ ಸಿಗುವ ಹಾಗೂ ಆಸಕ್ತಿ ಬೆಳೆಕೊಳ್ಳುವ ಅವಕಾಶಗಳೇ ಸಿಗುವುದಿಲ್ಲ. ಇನ್ನಷ್ಟು ಮಾಹಿತಿಗಳನ್ನು
ReplyDeleteತಿಳಿದಿರುವ ಆಸಕ್ತರು ನೀಡಿದರೆ ಬಹಳ ಉಪಯುಕ್ತ. ಹಳ್ಳಿಗಳನ್ನು ತೊರೆಯುತ್ತಿರುವ ಈ ದಿನಗಳಲ್ಲಿ ಇದೊಂದು ಉತ್ತಮ ಲೇಖನ.. ಧನ್ಯವಾದಗಳು... ರಮೇಶ್ ನಾಡಿಗ್...
ಲೇಖನ ಅದ್ಭುತವಾಗಿದೆ. ನಾನು ಕಸಬಾ ಹೋಬಳಿಯಲ್ಲಿ ಹುಟ್ಟಿ, ಶಾನುಭೋಗ ವಂಶಸ್ತನಾದರೂ, ನೀವು ಉಲ್ಲೇಖಿಸಿರುವ ಎಷ್ಟೋ ಪದಗಳು ನನಗೆ ಅರಿವಿರಲಿಲ್ಲ.
ReplyDeleteಹತ್ತನೇ ವಯಸ್ಸಿಗೆ ಪಟ್ಟಣ ಸೇರಿ ಹಳ್ಳಿಯ ಜ್ಞಾನ ಕಡಿಮೆ ಆಗಿದೆ. ಆದರೂ ಈಗಲೂ ಸಹ ತಿಂಗಳಿಗೆ ಒಮ್ಮೆಯಾದರೂ ಊರಿಗೆ ಹೋಗಿ ಕಾಲ ಕಳೆದು ಬರುತ್ತೇನೆ. ಈ ಸಲ ಹೋದಾಗ ಇನ್ನಷ್ಟು ವಿಷಯಗಳನ್ನು ಚರ್ಚೆ ಮಾಡಿ ಬರುತ್ತೇನೆ. ಹೊಸತು ಏನಾದರೂ ಇದ್ದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.
ಹಳ್ಳಿಯ ಭಾಷೆಯ ಸೊಗಡನ್ನು ಮರುಕಳಿಸುವಂತೆ ಮಾಡಿದ ನಿಮಗೆ ಅನಂತ ಧನ್ಯವಾದಗಳು.
ಇನ್ನೊಂದು ಮಾತು
ReplyDeleteನಮ್ಮಲ್ಲಿ ನೀವು ಹೇಳಿದ ತೂಬು ಸ್ತಂಭವನ್ನೂ ಕೆರೆಯ ನೀರಿನ
ಪ್ರಮಾಣ ನೋಡಲೂ (height if water level ) ಉಪಯೋಗಿಸುತ್ತಿದ್ದರು
ಗೋಪೀನಾಧ್ ಎಂ.ಎನ್
ಉಪಯುಕ್ತ ಲೇಖನ. ಇಲ್ಲಿ ಲಭ್ಯವಿರುವ ಮಾಹಿತಿ ಸಾಮಾನ್ಯಜ್ಞಾನ (General Knowledge) ಭಂಡಾರಕ್ಕೆ ಉತ್ತಮ ಸೇರ್ಪಡೆಯಾದೀತು.
ReplyDeleteಸಾರ, ಸಂಕ, ಬಣ್ಣ, ಕಾದಿಗೆ, ದಡಪಿ, ಬ್ಯಾಣ, ಹಾಳೆ, ಹಾನಂಬಿ.....ಇನ್ನೂ ಎಷ್ಟೋ ಪದಗಳನ್ನು ಇಲ್ಲಿ ಪರಿಚಯಿಸಿರುವುದು ನಮ್ಮ ಭಾಷೆಯ ಪ್ರಸರಣೆಗೂ ನೆರವಾಗಿದೆ.
ಭೂ-ವಿವರಗಳಿಗೆ, ಭೂ-ಒಡೆತನಕ್ಕೆ ಸಂಬಂಧಿಸಿದ ಕೆಳಕಂಡ ಪದಗಳಿಗೆ ಅರ್ಥವಿವರಣೆ ದೊರೆತಿದ್ದಲ್ಲಿ ಚೆನ್ನಿರುತ್ತಿತ್ತು.
*ಬಿನ್*
*ಬಗೈರ್ ಹುಕುಂ*
*ಖಾನೇಷುಮಾರಿ*
ಒಟ್ಟಾರೆ, ಆಡಂಬರವಿಲ್ಲದೆ ಸರಳ ಶೈಲಿಯಲ್ಲಿದ್ದು ಯಾವುದೇ ಮೂಲದಿಂದ ಎರವಲು ಪಡೆಯದೇ ತನ್ನತನವನ್ನು ಸೂಸುವ ಲೇಖನ ಇದು.
"ಅಮಲ್ದಾರ" ರಿಗೆ ಅಭಿನಂದನೆಗಳು!
ತುಂಬಾ ಚೆನ್ನಾಗಿ ಬರೆದಿದ್ದೀರಿ
ReplyDelete
ReplyDeleteಮಲೆನಾಡ ಗ್ರಾಮ ಸಂಪದ ಓದಿದಾಗ ಒಂದೇ ಸಲ ಅರ್ಥ ಆಗುವುದು ಸ್ವಲ್ಪಕಷ್ಟವಾಯಿತು.ಕಾರಣ, ಹಲವಾರು ಹೊಸ ಹೊಸ ಪದಗಳ ಉಪಯೋಗ. ಹಾಗಾಗಿ ಪದೇಪದೇ ಓದಿದಾಗ ಅರ್ಥವಾಯಿತು. ಇದು ಯಾವುದು ನಿತ್ಯ ಜೀವನದಲ್ಲಿ ಬರುವ ಪದಗಳಲ್ಲ. ಪದಗಳ ನಿಘಂಟಿನಂತೆ ಇದೆ. ಹೊಸ ಪದಗಳ ಪರಿಚಯ ಸಂತೋಷವಾಯಿತು. ಎಷ್ಟೋ ಪದಗಳ ಪರಿಚಯವಿರುವುದಿಲ್ಲ.ಹಳ್ಳಿಗಳ ಪದಗಳ ಸೊಬಗು,ಅಲ್ಲಿಯ ಹುದ್ದೆಗಳಿಗೆ ಇರುವ ಹೆಸರುಗಳು, ಅವರ ಕೆಲಸಗಳು, ಗದ್ದೆ ತೋಟಗಳ ವರ್ಣನೆ, ಆಸ್ತಿ ಭಾಗವಾಗುವಿಕೆ,ಪ್ರತಿಯೊಂದು ಅರ್ಥ ಆಗುವಂತೆ ಇದೆ. ಆ ಕಾಲದಲ್ಲೇ ನೀರನ್ನು ಉಪಯೋಗಿಸುತ್ತಿದ್ದ ತಾಂತ್ರಿಕತೆಯ ರೀತಿ ಬಹಳ ಚೆನ್ನಾಗಿ ತಿಳಿಸಲಾಗಿದೆ
ಈ ಲೇಖನಕ್ಕೆ ಸಂಬಂಧಪಟ್ಟಂತಹ ಛಾಯಾಚಿತ್ರಗಳು ಚೆನ್ನಾಗಿದೆ.
ಉತ್ತಮವಾದ ಲೇಖನ. ನಾವು ಚಿಕ್ಕವರಿದ್ದಾಗ ಅಪ್ಪ, ಹಾಗೂ ಚಿಕ್ಕಪ್ಪ ಈ ಪದಗಳನ್ನು ಬಳಸಿ ಮಾತನಾಡುತ್ತಿದ್ದರು, ಆನಂತರ ಪಟ್ಟಣವಾಸಿಗಳಾದ ಮೇಲೆ ಇದನ್ನು ಕೇಳುತ್ತಿದಿದ್ದೂ ಅಪರೂಪವೇ.ಈಗ ಲೇಖನವನ್ನು ಓದಿದಾಗ ಮನಸ್ಸಿನಲ್ಲಿ ಇಲ್ಲಿ ಬರೆದಿರುವ ಪದಗಳ ಹೆಸರಿನ ನಮ್ಮೂರಿನ ಜಾಗಗಳು ನೆನಪಾದವು.. ಧನ್ಯವಾದಗಳು🙏😊
ReplyDelete