Skip to main content

ತಾಕಲಾಟದ ವಿದ್ಯಾಭ್ಯಾಸ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಜೀವನದಲ್ಲೇ ಆತ್ಮಹತ್ಯೆಗೆ ಶರಣಾಗುತ್ತಿರುವ ವಾರ್ತೆಗಳು ಪೋಷಕರೆಲ್ಲರನ್ನೂ ಚಿಂತೆಗೀಡು ಮಾಡುತ್ತಿದೆ. ಪಪ್ಪಾ, ಮಮ್ಮೀ ನನ್ನನ್ನು ಕ್ಷಮಿಸಿ ಬಿಡಿ ಎಂದು ನೇಣು ಹಾಕಿಕೊಂಡು ಮರಣಿಸಿದ ಎಂಬಿಬಿಎಸ್ ವಿದ್ಯಾರ್ಥಿ, ನಿಮ್ಮ ಆಸೆಯನ್ನು ಪೂರೈಸಲಾಗುತ್ತಿಲ್ಲ ಕ್ಷಮಿಸಿ ಎಂದು ಪೋಷಕರಿಗೆ ಪತ್ರ ಬರೆದಿಟ್ಟು ಸ್ವಯಂ ಪ್ರಾಣತೆತ್ತ ಕಾಲೇಜು ವಿದ್ಯಾರ್ಥಿನಿ ಎಂಬ ಎರಡು ಪತ್ರಿಕಾ ಶೀರ್ಷಿಕೆ ಬಹಳ ಯೋಚಿಸುವಂತೆ ಮಾಡಿತು. ಈ ವೇಳೆಯಲ್ಲಿಯೇ ಭೇಟಿಯಾದ ಉನ್ನತ ಶಿಕ್ಷಣ ಸಲಹೆಗಾರನೊಂದಿಗೆ ಮಾತಿನ ಮಧ್ಯೆ ಹಲವು ಅನುಭವದ ದೃಷ್ಟಾಂತಗಳು ಚರ್ಚಿತವಾಯಿತು. ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಪೋಷಕರಿಗೆ ಈ ಅಂಶಗಳು ಸಹಕಾರಿಯಾಗಬಹುದೆಂದು ನಂಬಿಕೆ.

ಇಂದಿನ ದಿನಗಳಲ್ಲಿ ಮಕ್ಕಳ ವಿದ್ಯಾಭ್ಯಾಸವೇ ಒಂದು ಗುರಿಯಾಗಿದ್ದು ಈ ಬಗ್ಗೆ ಯೋಚಿಸಬೇಕಾದ ವಿಚಾರಗಳು ಹಲವು ಇವೆ. ವಿದ್ಯಾಭ್ಯಾಸದ ಎರಡು ಹಂತವಾದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶಗಳು ಬಂಧು ಬಾಂಧವರಿಂದ ಪೋಷಕರನ್ನು ಅವರದಲ್ಲದ ಪ್ರಯತ್ನವನ್ನು ಪರಿಗಣಿಸಿ ಯೋಗ್ಯತೆಯನ್ನು ನಿರ್ಣಯಿಸುತ್ತದೆ ಎಂಬ ಭಾವನೆ ಇದೆ. ಇದರಿಂದಾಗಿ ಆ ಪರೀಕ್ಷೆಗಳಿಗೆ ಇನ್ನಿಲ್ಲದ ಪ್ರಾಮುಖ್ಯತೆ ಕಾಣಿಸುತ್ತಿದೆ. ಉತ್ತಮ ಕೆಲಸ ಸಿಗಬಹುದಾದ ಕೋರ್ಸ್, ಅವುಗಳನ್ನು ಯಶಸ್ವಿಯಾಗಿ ಮಾಡಿ ಪ್ರಖ್ಯಾತವಾಗಿರುವ ಕಾಲೇಜು, ಆ ಕಾಲೇಜಿಗೆ ಅರ್ಹತೆ ದೊರಕಿಸುವ ರ್ಯಾಂಕ್ ಮತ್ತು ಪಿಯುಸಿ ಕಾಲೇಜು. ಇದರ ಪ್ರವೇಶ ದ್ವಾರವೇ ಎಸ್ಸೆಸ್ಸೆಲ್ಸಿ. ಇದನ್ನು ಕಲಿಯಲು ಪ್ರಾರಂಭಿಸುವುದರೊಂದಿಗೆ ಟ್ಯೂಶನ್ ಗೂ ಸೇರುವುದು ಇಂದಿನ ವಾಡಿಕೆಯ ಕ್ರಮವಾಗಿದೆ.

ಪ್ರತಿಯೊಬ್ಬ ತಾಯಿ-ತಂದೆಯರಿಗೂ ಅವರ ಮಕ್ಕಳು ತಮಗಿಂತಲೂ ಚೆನ್ನಾಗಿರಬೇಕು. ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು. ಹೆಚ್ಚು ಸಂಬಳ ಗಳಿಸಬೇಕು. ಹೆಚ್ಚಿನ ಪ್ರಶಸ್ತಿ ಗಳಿಸಬೇಕು, ಹೆಚ್ಚು ಪ್ರಭಾವಶಾಲಿ ಆಗಬೇಕು, ಅವರಿಗೆ ಎಲ್ಲೆಡೆ ಹೆಚ್ಚಿನ ಪ್ರಾಶಸ್ತ್ಯ ಸಿಗಬೇಕು ಎಂಬುದು ಸಹಜವಾದ ಆಶಾ ಭಾವನೆ. ಒಂದು ರೀತಿಯಲ್ಲಿ ಇದು ಸ್ವಾರ್ಥವೆಂದು ಕಂಡರೂ ಇದನ್ನು ಕೊಡಿಸಲು ಪೋಷಕರ ಪೈಪೋಟಿಯಿಂದಾಗಿ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಸಿಕ್ಕು ಅವರೊಂದಿಗೆ ದೇಶಕ್ಕೂ ಉತ್ತಮ ಬೌದ್ಧಿಕ ಶಕ್ತಿ ದೊರೆತು ಅನುಕೂಲವಾಗಿದೆ. ಅವರ ಕುಟುಂಬಕ್ಕೂ ಆರ್ಥಿಕ ಬಲ ಬಂದಿದೆ. ಆದರೆ ಈ ಪಂದ್ಯಕ್ಕೆ ಪ್ರವೇಶಿಸುವ ಯತ್ನದಲ್ಲಿ ಉತ್ತಮ ಫಲಿತಾಂಶ ದೊರೆಯಲು ವಿದ್ಯಾರ್ಥಿಯ ಪ್ರಯತ್ನ, ಅದರ ರೀತಿ, ಅಭ್ಯಾಸ ಮಾಡುವ ವ್ಯವಸ್ಥೆ, ಅವಕಾಶ ಕೊಡುವ ಸ್ಥಳ, ಇವುಗಳನ್ನು ಪಡೆಯಲು ಬೇಕಾಗುವ ಆರ್ಥಿಕ ಶಕ್ತಿ ಸೌಲಭ್ಯಗಳು ಇವೆಲ್ಲವೂ ಪರಿಗಣಿಸಲ್ಪಡುವ ಅಂಶವಾಗಿದೆ. ಇವುಗಳಲ್ಲಿ ಒಂದನ್ನು ಪಡೆಯಲು ಇನ್ನೊಂದರ ಹಿಂದೆ ಸದಾ ಪರದಾಡುವ ಯತ್ನವೇ ಮಕ್ಕಳ ವಿದ್ಯಾಭ್ಯಾಸ ಎಂದು ಯೋಚಿಸುವುದಾಗಿದ್ದು ಜೀವನದ ಮುಖ್ಯ ಘಟ್ಟವಾಗಿದೆ. 

ಮಕ್ಕಳ ಕಲಿಕಾಶಕ್ತಿ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿದ್ದರೂ ಪೋಷಕರ ನಿರೀಕ್ಷೆಯಲ್ಲಿ ವ್ಯತ್ಯಾಸವಾಗದು. ಬಹಳಷ್ಟು ಮಕ್ಕಳ ವಿದ್ಯಾಭ್ಯಾಸದ ಆಸೆಯನ್ನು ಅರಿಯಲಾಗದು. ಆದ್ದರಿಂದ ಅದನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಅಂದುಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವ ಪೋಷಕರೇ ಹೆಚ್ಚು. ಕೆಲವೇ ಮಕ್ಕಳಿಗೆ ನಿರೀಕ್ಷಿತ ವಿದ್ಯಾಭ್ಯಾಸಕ್ಕೆ ಅರ್ಹತೆ ಇರುತ್ತದೆ. ಆದರೂ ಪೋಷಕರ ಇಚ್ಛೆಯಂತೆ ನಿರ್ಧಿಷ್ಟ ಕಾಲೇಜಿನ ನಿರ್ಧಿಷ್ಟ ಕೋರ್ಸ್ ಓದಬೇಕಾಗಿರುತ್ತದೆ. ಅದು ದೊರೆಯಲು ಹೆಚ್ಚು ಅಂಕ ಗಳಿಸಬೇಕು. ಇದಕ್ಕೆ ಒಳ್ಳೆಯ ಕಡೆ ಟ್ಯೂಶನ್ ಸಿಗಬೇಕು. ಆ ಟ್ಯೂಶನ್ ಪಡೆಯಲು ಒಂದು ಪ್ರವೇಶ ಪರೀಕ್ಷೆಯ ತೇರ್ಗಡೆ ಅನಿವಾರ್ಯ. ಅದರಲ್ಲಿ ಯಶಸ್ವಿಯಾಗಲು ಮತ್ತೊಂದು ಟ್ಯೂಶನ್. ಹೀಗೆ ಹಲವು ಹಂತಗಳನ್ನು ದಾಟಬೇಕು. ಇದು ನಗರಗಳಲ್ಲಿನ ಆಧುನಿಕ ವಿದ್ಯಾಭ್ಯಾಸ ಮಾರ್ಗ. ಇದಕ್ಕೆಲ್ಲಾ ಯಥೇಚ್ಚವಾಗಿ ಹಣ ಬೇಕು. ಉಳ್ಳವರಿಗೆ ಅದೆಷ್ಟೇ ಖರ್ಚಾದರೂ ಅಂದುಕೊಂಡಂತೆ ಆಗುವ ಸಾಧ್ಯತೆಗಳು ಇರುತ್ತವೆ, ಹಣವಿಲ್ಲದವರಿಗೆ ಅದು ಕೇವಲ ಆಸೆ. ವಿದ್ಯಾರ್ಥಿಗಳು ಯಾವುದೇ ಟ್ಯೂಶನ್ ಇಲ್ಲದೆ ಯಶಸ್ವಿ ಯಾಗಿರುವವರು ಇದ್ದಾರೆ. ಹಲವರು ಸೀಟು ಸಿಕ್ಕ ಕಾಲೇಜಿನಲ್ಲೂ ಸರಿಯಾಗಿ ಓದದೆ ಖಿನ್ನತೆಯಿಂದ ಬಳಲಿ ತಮ್ಮ ಭವಿಷ್ಯವನ್ನೂ ಹಾಳುಮಾಡಿಕೊಂಡು ಪೋಷಕರಿಗೂ ಶಾಶ್ವತ ನೋವು ಕೊಟ್ಟ ಉದಾಹರಣೆಗಳೂ ಇವೆ. ವಿದ್ಯಾಭ್ಯಾಸದ ಮಹತ್ವವನ್ನು ಪೋಷಕರು ಮತ್ತು ವಿದ್ಯಾರ್ಥಿಗಳು ತಿಳಿದಾಗ ಈ ಧಾವಂತದ ಮನಸ್ಥಿತಿ ಕಳಚಿ ಶಾಂತಿಯುತ ಜೀವನ ನಡೆದೀತು. ಈ ಯೋಚನೆಯಲ್ಲಿದ್ದಾಗ ನೆನಪಿಗೆ ಬಂದ ಘಟನೆಗಳು ಹಲವು.

ಪಿಯುಸಿ ನಂತರ ಮೆಡಿಕಲ್ ಅಥವಾ ಇಂಜಿನಿಯರಿಂಗ್ ಅಥವಾ ಬಿಕಾಂ ಜೊತೆಗೆ ಸಿಎ ಎಂಬುವುದು ಇಂದಿನ ಆಯ್ಕೆ. ಇಂಜಿನಿಯರಿಂಗ್ ಅಂದರೆ ಐಐಟಿ ಅಥವಾ ರಾಜ್ಯದ ಕಾಲೇಜಿನಲ್ಲಿ ಪಡೆವ ತಾಂತ್ರಿಕ ಪದವಿ ಎಂಬುದು ಆಯ್ಕೆಯ ಪ್ರಾಶಸ್ತ್ಯ ಪಟ್ಟಿ. ಮೆಡಿಕಲ್ ಸೀಟುಗಳೂ ಕಡಿಮೆ. ಹೆಚ್ಚಿನ ಅವಧಿಯ ಓದಿನಿಂದಾಗಿ ಅದರ ಆಯ್ಕೆ ಸೀಮಿತ ಸಂಖ್ಯೆಯದು. ಐಐಟಿ ಇಂಜಿನಿಯರಿಂಗ್ ಅವಕಾಶಗಳು ಕಡಿಮೆ. ಸೀಟುಗಳ ಸಂಖ್ಯೆ ನಗಣ್ಯ. ಇನ್ನು ಸಿಇಟಿ ಎಂಬುವುದು ಸಾಮಾನ್ಯ ಪರೀಕ್ಷೆ. ಅದರ ನಂತರ ವೃತ್ತಿ ಪರ ಕಾಲೇಜು ಸೇರಲು ಎರಡು ಮಾರ್ಗಗಳಿವೆ. ಸಿಇಟಿ ರ್ಯಾಂಕ್ ಆಧಾರಿತ ಕಾಲೇಜು ಆಯ್ಕೆ ಮತ್ತು ಡೊನೇಷನ್ ಮೂಲಕ ಸೀಟು ಪಡೆಯುಲು ಕಾಲೇಜು ಆಯ್ಕೆ ಇನ್ನೊಂದು ದಾರಿ. ಉತ್ತಮ ಶ್ರೇಣಿಯ ರ್ಯಾಂಕ್ ಪ್ರಖ್ಯಾತವಾಗಿರುವ ಕಾಲೇಜುಗಳಲ್ಲಿ ಸೀಟು ದೊರಕಿಸಿದರೂ ಅವುಗಳ ಸಂಖ್ಯೆ ಕಡಿಮೆಯೇ. ಸಾಧ್ಯವಾದಷ್ಟೂ ತಾವಿರುವ ಸ್ವಂತ ಸ್ಥಳದಲ್ಲಿನ ಕಾಲೇಜಲ್ಲಿ ಸೀಟು ಬೇಕು ಎಂದು ಕೊಂಡ ಹಣವಿದ್ದವರು ಡೊನೇಷನ್ ಕೊಟ್ಟು ಕಾಲೇಜಿನ ಸೀಟು ಪಡೆಯುವರು.

ಕಡಿಮೆ ಶ್ರೇಣಿಯಲ್ಲಿನ ರ್ಯಾಂಕ್ ಹೊರ ಊರುಗಳ ಕಾಲೇಜಲ್ಲಿ ಅವಕಾಶ ಮಾಡುತ್ತದೆ. ಪರ ಊರಿನ ಕಾಲೇಜೆಂದರೆ ಹಾಸ್ಟಲ್ ಖರ್ಚು ಅಥವಾ ಪಿಜಿ ಖರ್ಚು, ಸ್ವಂತ ಕೆಲಸ ಮಾಡಿಕೊಳ್ಳಲು ಅಭ್ಯಾಸವಿಲ್ಲದ ಮಗ ಹೇಗೆ ಮಾಡಿಕೊಳ್ಳುವನೋ, ಉತ್ತಮ ಹವ್ಯಾಸದಿಂದ ಇರುವನೇ, ಸಹವಾಸ ದೋಷದಿಂದ ಕೆಡುವನೇ ಎಂಬ ಆತಂಕ, ಅವನನ್ನು ನೋಡಲು ಹೋಗಿ ಬರುವ ಖರ್ಚು, ಅವನೂ ಸ್ವಂತ ಊರಿಗೆ ಹೋಗಿ ಬರುವ ಖರ್ಚು, ಇಬ್ಬರಿಗೂ ರಜಾ ಅನುಕೂಲತೆ, ಪರಸ್ಪರ ಬಿಟ್ಟು ಇರುವ ಆತಂಕ ನೋವುಗಳು. ಇಲ್ಲೇ ಸೇರಿಸಿದರೆ ಹೇಗೆ, ಖರ್ಚಾಗುವ ಹಣ, ಅವುಗಳ ಸಂಗ್ರಹಣೆಗೆ ಸಾಲಗಳು, ನಂತರ ಟ್ಯೂಶನ್, ಪ್ರಾಜೆಕ್ಟ್ ವರ್ಕ ಇತ್ಯಾದಿ ತಲೆನೋವುಗಳು. ಕಡಿಮೆ ಡೊನೇಷನ್ ಇರುವ ಕಾಲೇಜಿನ ಅನ್ವೇಷಣೆ, ಮಕ್ಕಳಿಗೆ ಓಡಾಡಲು ಸರಿ ಎನಿಸುವ ವಾಹನ. ಜವಾಬ್ದಾರಿಯಿಂದ ಇರುವನೇ ಎಂಬ ಪೋಷಕರ ಆತಂಕ ಸಾಮಾನ್ಯ. ಹೊರ ಊರಿನಲ್ಲಿದ್ದ ಕೆಲವು ಮಕ್ಕಳಿಗೆ ತಂದೆ ತಾಯಿ ಮತ್ತು ಸಂಬಂಧಿಕರನ್ನು ಬಿಟ್ಟಿರುವುದರಿಂದ ಖಿನ್ನತೆ. ಸದಾ ಓದಿನಿಂದಾಗಿ ಆಟವಾಡದ ವಿದ್ಯಾರ್ಥಿ ಜೀವನ, ಕ್ರೀಡಾ ಮನೋಭಾವವಿಲ್ಲದ ಮಕ್ಕಳಿಗೆ ಸೋಲಿನ ಅನುಭವ ತರುವ ಬೇಸರವು ಕೆಲವರಿಗೆ ಆತ್ಮಹತ್ಯೆಯ ಯೋಚನೆಯಾಗುತ್ತದೆ. 

ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳ ಕುರಿತು ಕನಸುಗಳು ಹತ್ತು ಹಲವಾರು. ಕೈಮೀರಿ ಖರ್ಚು ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸ ಪಡೆಯಲು ಟ್ಯೂಶನ್ ಕೊಡಿಸುತ್ತಾರೆ. ಬೇಕು ಬೇಕಾದ ಸೌಲಭ್ಯಗಳನ್ನು ಒದಗಿಸಿ ಕೊಡುತ್ತಾರೆ. ಆದರೆ ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಎಷ್ಟು ಅಂಕ ಪಡೆದರೂ ಸಾಲದು. ಎಲ್ಲರೂ ಹೆಚ್ಚಿನ ರ್ಯಾಂಕ್ ನಿರೀಕ್ಷಕರೇ. ಫಸ್ಟಕ್ಲಾಸ್ ಡಿಸ್ಟಿಂಕ್ಷನ್ ಎಂದಾಗ ಅವು ಆಯಾ ವಿದ್ಯಾರ್ಥಿಗಳ ಪ್ರಯತ್ನವನ್ನು ಅವಲಂಬಿಸಿದೆ. ಆದರೆ ಈ ರ್ಯಾಂಕ್ ಎಂಬುವುದು ಇವರೊಂದಿಗೆ ಬೇರೆ ವಿದ್ಯಾರ್ಥಿಗಳ ಪ್ರಯತ್ನವನ್ನೇ ಅವಲಂಬಿಸಿದೆ. ಇಂದಿನ ಮೀಸಲಾತಿ ಪದ್ಧತಿಯಲ್ಲಿ ಪರಿಗಣಿಸಲಾಗದ ಪಂಗಡವಾದರಂತೂ ಸಿಗಬಹುದಾದ ಸೀಟುಗಳ ಸಂಖ್ಯೆ ಕಡಿಮೆ. ಸ್ಪರ್ಧಿಗಳು ಹೆಚ್ಚಾದಾಗ ಉತ್ತಮ ರ್ಯಾಂಕ್ ಅನಿವಾರ್ಯ. ಪೋಷಕರಿಗೆ ಈ ರ್ಯಾಂಕ್ನೊಂದಿಗೆ ಹತ್ತಿರದ ಬಂಧುಗಳೊಂದಿಗೆ ತಮ್ಮ ಮಕ್ಕಳನ್ನು ದಡ ಸೇರಿಸುವ ಸ್ಪರ್ಧೆ. ಯಶಸ್ವಿ ಯಾದರೇನೋ ಸರಿ, ವಿಫಲವಾದರೆ ಎಂಬ ಚಿಂತೆ. ಮಕ್ಕಳ ಪ್ರಯತ್ನವನ್ನು ಅವಲಂಬಿಸಿದ ಇವರ ಯಶಸ್ಸು ಸಫಲ ಆದಾಗ ತಾವು ಬೆಂಬಲಿಸಿದ ರೇಸ್ ಕುದುರೆ ಗೆದ್ದ ಅನುಭವ. ಇನ್ನು ತಮ್ಮ ಮಕ್ಕಳಿಗೆ ಓದುತ್ತಿರುವಾಗಲೇ ಕೆಲಸ ಸಿಗಬೇಕು. ಒಳ್ಳೆಯ ಸಂಬಳ ದೊರೆಯಬೇಕು. ಅವರಿಗೆ ವಿದೇಶ ಯಾತ್ರೆಯಾದರೆ ಒಳ್ಳೆಯದು. ಸಾಧ್ಯವಾದರೆ ಅಲ್ಲೇ ಉದ್ಯೋಗ ದೊರೆಯಲಿ. ಹಲವು ದಿನಗಳು ಅದಕ್ಕೆ ಬೇಕಾದ ವೀಸಾ ಸಿಗಲೆಂದು ಪ್ರಾರ್ಥನೆ. ನಂತರ ಮದುವೆಗೆ ಸೂಕ್ತವಾದ ಜೋಡಿಯ ಯತ್ನ. ಈ ವೇಳೆಯಲ್ಲಿ ಹೊಸ ಪ್ರಶ್ನೆಗಳು. ವಿದೇಶದಲ್ಲಿರುವವರೋ, ಸ್ವದೇಶದಲ್ಲಿರುವವರೋ, ಜೊತೆಗೆ ಯಾವ ಕಾಲೇಜಿನ ವಿದ್ಯಾರ್ಥಿ, ಎಲ್ಲಿ ಕೆಲಸ, ಎಷ್ಟು ಸಂಬಳ. ಇಲ್ಲಿಯೂ ರ್ಯಾಂಕ್ ಬೇಕಾಗಬಹುದು. ಒಂದು ಹಂತದಲ್ಲಿ ಏದುಸಿರು ಬಿಡುತ್ತಿರುವ ಪೋಷಕರಿಗೂ ವಿದೇಶ ಯಾತ್ರೆಯ ಹಂಬಲ. ಹೀಗೆ ಹಲವು ಕನಸುಗಳ ಹೊತ್ತ ಜೀವನ ಮಾರ್ಗ. ಇಂತಹಾ ವಿಚಾರಗಳ ಮಧ್ಯೆ ಗಮನಕ್ಕೆ ಬಂದ ಈ ಕೆಳಕಂಡ ಕೆಲವು ಘಟನೆಗಳು ಹೊಸ ಯೋಚನೆ ತರುತ್ತದೆ.

ಸುಮಾರು ಎರಡು ದಶಕಗಳ ಹಿಂದಿನ ಮಾತು. ಯಾವುದೋ ಕೆಲಸದ ನಿಮಿತ್ತ ಭೇಟಿಯಾದ ಮಿತ್ರ. ಸಹಜವಾಗಿ ಲವಲವಿಕೆಯಿಂದ ಇರುವ ಆಸಾಮಿ ಇಂದು ತುಂಬಾ ವ್ಯಾಕುಲ ಚಿತ್ತನಾಗಿದ್ದಾನೆ. ಅವನ ಅಳುವ ಮುಖ ಕಂಡು ನನಗೆ ಮಾತನಾಡಿಸಲು ಯೋಚನೆ ಮಾಡುವಂತಾಗಿದೆ. ಇರಲಿ ಎಂದು ತುಸು ಅಭಯಪೂರಿತ ಮುಗುಳ್ನಗೆ ಬೀರುತ್ತಾ ಏನೆಂದು ಕಣ್ಣಲ್ಲೇ ಮಾತನಾಡಿಸಿದೆ. ಎಡಗೆನ್ನೆಗೆ ಕೈ ಮಡಚಿಡುತ್ತಾ ತುಟಿಯನ್ನು ಕೆಳಮುಖವಾಗಿ ತಿರುಗಿಸಿ ಹೇಳಲು ಬಹಳವಿದೆ ಎಂಬುದನ್ನು ಮುಖದಲ್ಲಿ ತೋರಿಸಿದ. ನಿಟ್ಟುಸಿರು ಬಿಡುತ್ತಿರುವ ಅವನನ್ನು ಹತ್ತಿರದ ಹೋಟೆಲಿಗೆ ಕರೆದೊಯ್ದು ವಿಚಾರಿಸಿದೆ. ನಿನ್ನೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದಿದೆ, ಗೊತ್ತಿದೆಯಾ ಎಂದ. ನಮ್ಮ ಪೈಕಿ ಯಾವ ವಿದ್ಯಾರ್ಥಿಗಳೂ ಆ ಪರೀಕ್ಷೆ ಬರೆದಿಲ್ಲವಾದ್ದರಿಂದ ನನಗೇನೂ ಮಾಹಿತಿ ಇರಲಿಲ್ಲ. ಆದರೂ ಹೂಂ ಗುಟ್ಟಿದೆ. ಮುಂದುವರಿದ ಅವನು ನನ್ನ ಮಗನಿಗೆ ಕೇಳಿದ್ದೆಲ್ಲಾ ಕೊಡಿಸಿದೆ, ಪ್ರಖ್ಯಾತ ಗಣಿತ, ವಿಜ್ಞಾನ ನಿಪುಣರಲ್ಲಿ ಟ್ಯೂಷನ್ ಕೊಡಿಸಿದ್ದೆ, ಆದರೂ ಅವನ ಫಲಿತಾಂಶ ಶೇಕಡಾ ೮೫ ದಾಟಿಲ್ಲ ಎಂದು ಗೋಳೋ ಶುರು ಮಾಡಿದ. ಕಾಲೇಜಲ್ಲಿ ಸೀಟು ಸಿಗುವುದು ಕಷ್ಟ ಎಂದು ಅವನ ಯೋಚನೆ. ಆದರೂ ಅವನಿಗೆ ಪಿಯೂಸಿಗೆ ವಿಜಯಾ ಕಾಲೇಜಿನಲ್ಲೇ ಸೀಟು ಸಿಕ್ಕೇ ಸಿಗುತ್ತದೆ ಎಂದೆ. "ಸಿಗುತ್ತದೆ ಸಾರ್" ಆದರೆ 'ಬಿ' ಸೆಕ್ಷನ್ ಎಂದು ಕಣ್ಣೀರು. ಅವನ ಅಭಿಪ್ರಾಯದಂತೆ 'ಎ' ಸೆಕ್ಷನ್ ಜಾಣರಿಗಾಗಿದ್ದು ಅವನ ಮಗ 'ಬಿ' ಸೆಕ್ಷನ್ ಎಂದರೆ ಅವನಿಗೆ ಅವಮಾನ. ಅಂತೂ ಅವರಿವರ ಕಾಲು ಹಿಡಿದು 'ಎ' ಸೆಕ್ಷನ್ ನಲ್ಲಿ ಓದಿದ ಮಗ, ಅವನ ಜ್ಞಾನ ಮಟ್ಟದಲ್ಲಿಯೇ ಓದಿದರೂ ಈಗ ಒಳ್ಳೆಯ ಕಡೆ ಕೆಲಸದಲ್ಲಿದ್ದಾನೆ. 

ಇನ್ನೊಬ್ಬರ ಮಗಳಿಗೆ ಬಿಬಿಎಂ ಸೀಟು ಬೇಕಾಗಿದೆ. ಬೇಕಾಗಿರುವ ಕಾಲೇಜಿಗೆ ಅರ್ಜಿ ಹಾಕಿದ್ದರೂ ಇವರ ಗಮನಕ್ಕೆ ಬಾರದೆ ಅಡ್ಮಿಷನ್ ಮುಗಿಯುತ್ತಿದೆ. ಇವರ ಲೆವೆಲ್ಲಿಗೆ ಬಿಷಪ್ ಕಾಟನ್ ಕಾಲೇಜು, ಸೈಂಟ್ ಜೋಸೆಫ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿಯೇ ಸೀಟು ಬೇಕು, ಹಾಗೂ ಬಿಬಿಎಂ ಕೋರ್ಸೇ ಸಿಗಬೇಕು. ಆದರೆ ಬಂದಿರುವ ಮಾರ್ಕ್ಸ್ ಅರವತ್ತು ದಾಟದಿರುವುದರಿಂದ ಕಾಲೇಜಿನವರಿಗೆ ಸಂದರ್ಶನಕ್ಕೆ ಕರೆಸಲಾಗುತ್ತಿಲ್ಲ‌. ಈ ಸನ್ನಿವೇಶವನ್ನು ನನ್ನಲ್ಲಿ ಹೇಳಿಕೊಂಡು ಕಣ್ಣೀರು ಹಾಕಿದ ವಿದ್ಯಾರ್ಥಿನಿ ಹೇಳಿದಳು, ನಮ್ಮಪ್ಪನ ಪ್ರೆಸ್ಟೀಜ್ ನಿಂದಾಗಿ ಬೇರೆ ಕಾಲೇಜಿಗೆ ಅರ್ಜಿ ಹಾಕಲಿಲ್ಲ. ಕಾಲೇಜು ಬೋರ್ಡ್ ಸಹ ನೋಡಲಿಲ್ಲ, ಬೇರೆ ಕೋರ್ಸ್ ಯೋಚಿಸಲಿಲ್ಲ, ಈಗ ಅವರಿಗೆ ಬೇಕಾದ ಕಾಲೇಜಲ್ಲಿ ನನಗೆ ಸೀಟು ಸಿಗಲಿಲ್ಲ. ಎಲ್ಲಾ ಕಡೆ ಅಡ್ಮಿಷನ್ ಮುಗಿಯುತ್ತಿದೆ. ನೋಡಿ, ಯಾವ ಕೋರ್ಸ್ ಆದರೂ ಪರ್ವಾಗಿಲ್ಲ, ಯಾವ ಕಾಲೇಜಲ್ಲಾದರೂ ಸರಿಯೇ, ನಮ್ಮಪ್ಪಗೆ ಕನ್ವೀನ್ಸ್ ಮಾಡಿ ನನಗೆ ಸೀಟು ಕೊಡಿಸಿ ಎಂದಳು. ಅವಳಿಗೆ ಅಭ್ಯಾಸದ ವರ್ಷ ಕಳೆದು ಹೋಗುವ ಚಿಂತೆ. ಅಂತೂ ಬಿಕಾಂ ಎಂಬುವುದೇ ಮೂಲ ಕೋರ್ಸ್, ಬಿಬಿಎಂ ಅದರ ಒಂದು ಭಾಗ ಮಾತ್ರ ಎಂದು ವಿಧವಿಧವಾಗಿ ಅವಳ ತಂದೆಗೆ ಹೇಳಿ ಬಿಕಾಂ ಗೆ ಸೀಟು ತೀರ್ಮಾನಿಸಿ ಕಾಲೇಜು ಹುಡುಕಿ ಸೇರಿಸುವ ವೇಳೆಗೆ ಸಾಕಾಯಿತು. ತಮ್ಮ ಮಗಳು ಯಾವುದೋ ಕಾಲೇಜಲ್ಲಿ ಓದುತ್ತಿದ್ದಾಳೆ ಎಂದು ಹೇಳಿ ಕೊಳ್ಳಲು ಏನೋ ಮುಜಗುರ. ಆದರೆ ಕಡಿಮೆ ಮಾರ್ಕ್ಸ್ ನ ಪರಿಣಾಮ ಅರಿತ ಹುಡುಗಿ ಚೆನ್ನಾಗಿ ಅಭ್ಯಾಸ ಮಾಡಿ ನಿರೀಕ್ಷೆಗೂ ಮೀರಿ ಉನ್ನತ ಶ್ರೇಣಿಯಲ್ಲಿ ಪಾಸಾದಳು. ಈಗ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. 

ಇನ್ನೊಬ್ಬ ಪೋಷಕರಿಗೆ ತಮ್ಮ ಮಗನ ಪಿಯೂಸಿ ಫಲಿತಾಂಶ ನೋಡಿ ಎದೆ ಒಡೆದು ಹೋಗದಿದ್ದುದೇ ಆಶ್ಚರ್ಯ. ಎಸ್ಸೆಸ್ಸೆಲ್ಸಿ ಅಂಕ ಬಂದಾಗ ಮೌಲ್ಯಮಾಪನದಲ್ಲಿ ಏನೋ ಮೋಸವಾಗಿದೆ ಎಂಬ ಸಬೂಬು ಹೇಳಿಕೊಳ್ಳುತ್ತಾ ಪೋಷಕರು ಎಚ್ಚರವಾಗಲಿಲ್ಲ. ಸಾಲದೆಂದು ಅವರು ತಮ್ಮ ಮಗನ ಜಾಣತನದ ಬಗ್ಗೆ ಅವರಿವರಲ್ಲಿ ಹೆಚ್ಚಾಗಿಯೇ ಹೇಳಿಕೊಂಡು ಕಡೆಗೆ ಅದನ್ನೇ ಸತ್ಯವೆಂದು ಭಾವಿಸಿದ್ದರು. ಮುಂದಿನ ವರ್ಷದಲ್ಲಿ ಪ್ರತಿಷ್ಠಿತ ಪಿಇಎಸ್ ಕಾಲೇಜಲ್ಲಿ ಸೀಟು ಸಿಗುತ್ತದೆ. ಅವನಿಗೆ ಓಡಾಡಲು ಯಾವ ವಾಹನ ಕೊಡಿಸಬೇಕು, ಅವನು ಕಾಲೇಜಿಗೆ ಯಾವ ಮಾರ್ಗದಲ್ಲಿ ಹೋಗಿ ಬರಬೇಕು. ಅವನಿಗೆ ವಾರಕ್ಕೆ ಎಷ್ಟು ಖರ್ಚಿಗೆಂದು ಹಣ ಕೊಡಬೇಕು ಇತ್ಯಾದಿ ಇತ್ಯಾದಿಗಳ ಬಗ್ಗೆ ಯೋಚಿಸಿದ್ದ ಪೋಷಕರಿಗೆ ಅವನನ್ನು ಟ್ಯೂಶನ್ ಕಳಿಸಿದ್ದರ ಹೊರತು ಬೇರೆ ಯೋಚನೆ ಮಾಡಲಾಗಿರಲಿಲ್ಲ. ರ್ಯಾಂಕ್ ಗಿಟ್ಟಿಸಿ ಮುಂದೆ ಓದಿ ಇಂಜಿನಿಯರ್ ಆಗುವನೆಂದು ನಂಬಿದ ಅವರಿಗೆ ಮಗನ ಫಲಿತಾಂಶ ಶೇಕಡಾ ಐವತ್ತು ದಾಟದೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೇ ಅರ್ಹತೆ ಇಲ್ಲದಿರುವುದು ನಂಬಿಕೆಯಾಗುತ್ತಿಲ್ಲ. ಒಮ್ಮೆ ಉತ್ತರ ಪತ್ರಿಕೆ ಬದಲಾಗಿದೆ ಎನಿಸುತ್ತದೆ, ಮತ್ತೊಮ್ಮೆ ತಪ್ಪು ಮೌಲ್ಯ ಮಾಪನದ ಸಂಶಯ. ಅಂತೂ ಬಂದಿರುವ ಅಂಕಗಳು ಜೀರ್ಣಿಸಿಕೊಳ್ಳಲು ಆಗದ ಅನುಭವ. ರೇಡಿಯೋದಲ್ಲಿ ಕೇಳಿ ಬರುತ್ತಿರುವ ರಾಜ್ ಕುಮಾರ್ ರವರ ಆಕಾಶವೇ ಬೀಳಲಿ ಮೇಲೆ, ಭೂಮಿಯೇ ಬಾಯ್ಬಿಡಲೀ ಇಲ್ಲೇ ಎಂಬ ಸಾಲುಗಳಷ್ಟೇ ಇವರ ಕಿವಿಯಲ್ಲಿ ಗುನುಗುಡುತ್ತಿದೆಯೇನೋ ಎಂದು ನನಗೆನಿಸಿತು. ಆ ನಿಮಿಷಕ್ಕೆ ನಿಂತ ನೆಲ ತಕ್ಷಣಕ್ಕೆ ಬಾಯಿ ಬಿಟ್ಟು ತಮ್ಮನ್ನು ನುಂಗಿ ಬಿಡಬಾರದೇ ಎಂದು ಅವರಿಗೆನಿಸುತ್ತಿದೆ. ಹತಾಶೆಯ ಸ್ಥಿತಿಯಲ್ಲಿನ ಅವರನ್ನು ಆತ್ಮಹತ್ಯೆಯ ವಿಚಾರದಿಂದ ಹೊರಗೆಳೆಯಲು ಸಾಕಾಯಿತು. ತನ್ನ ಜ್ಞಾನದ ಅಳತೆ ಗೊತ್ತಾದ ಮೇಲೆ ಬದಲಾದ ಮಗ ಬಿಸಿಎ ಓದಿದ. ಈಗ ಸಂಸ್ಥೆಯೊಂದರಲ್ಲಿ ಆವನ ಕೆಲಸ ಸರಾಗವಾಗಿ ನಡೆದಿದೆ. ಅವನ ಸಂಸಾರವೂ ಸಂತೋಷವಾಗಿ ನಡೆದಿದೆ.

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ತೀರಾ ವಿಶ್ವಾಸದ ಮಿತ್ರರೊಬ್ಬರಿಗೆ ಮತ್ತು ಅವರ ಹೆಂಡತಿಗೆ ಏಕಕಾಲದಲ್ಲಿಯೇ ಜೀವ ಬೇಡವಾಗಿದೆ ಎಂಬ ವಿಚಾರ ತಿಳಿದು ಭೇಟಿಯಾದೆ. ಮುಗುಳ್ನಕ್ಕು ಮನೆ ಪ್ರವೇಶಿಸಿದರೂ ಸ್ವಾಗತ ಕಾಣದ ನನಗೆ ತುಂಬಾ ಭಾರವಾದ ವ್ಯಾಕುಲತೆಯ ಅವರ ಮುಖವನ್ನು ಕಂಡಾಗ ತುಂಬಾ ಬೇಸರವಾಯಿತು. ಕಾರಣ ಕೇಳಿದಾಗ ಅವರ ಮಗನ ಪಿಯುಸಿ ಫಲಿತಾಂಶ ಜಸ್ಟ್ ಅರವತ್ತು ಎಂಬ ನೋವು. ತಮ್ಮ ಎಲ್ಲಾ ಆಕಾಂಕ್ಷೆಗಳನ್ನೂ ನೀರಲ್ಲಿ ಮುಳುಗಿಸಿದ ಎಂದು ಅವರ ದೂರು. ಇದು ನಿಜವೇ ಆದರೂ ಸಮಸ್ಯೆಯ ಆಳಕ್ಕೆ ಇಳಿದಾಗ ಅವರ ಅಣ್ಣ ತಮ್ಮಂದಿರ ಮಕ್ಕಳು ಹಾಗೂ ಅಕ್ಕ ತಂಗಿಯರ ಮಕ್ಕಳು ಅವರವರ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ, ಅವರೊಂದಿಗೆ ಸರೀಕರಾಗಿ ಇವರು ಮಾತನಾಡಿಕೊಂಡಿರಲು ಮಗನು ಪಡೆದ ಕಡಿಮೆ ಅಂಕ ಅಡ್ಡ ಬರುತ್ತಿದೆ ಎಂದು ವೇದ್ಯವಾಯಿತು. ಜೊತೆಗೆ ಆ ಮಕ್ಕಳು ಓದಿದ ಕಾಲೇಜಲ್ಲಿ ಸೀಟು ಸಿಗುವುದಿಲ್ಲ ಎಂಬುದು ಸಹ ಚಿಂತೆ ಹೆಚ್ಚಿಸುತ್ತಿದೆ. ಇರುವ ಸಮಸ್ಯೆ ಅರಿತು ಸಮಾಧಾನ ಹೇಳಿದೆ. ಇರುವವನೊಬ್ಫ ಮಗ. ಇಷ್ಟೆಲ್ಲಾ ದುಡಿದಿರುವುದು ಅವನಿಗೆ ಬಿಟ್ಟು ಹೋಗಲು ತಾನೇ. ಆ ಆಸ್ತಿಯನ್ನು ಅವನಿಗೆ ಕೊಡುವುದರ ಬದಲು ಅವನನ್ನೇ ಆಸ್ತಿಯನ್ನಾಗಿ ಮಾಡಿ. ಹೇಗೂ ಅವನಿಗೆ ಪರಿಸ್ಥಿತಿಯ ಅರಿವಾಗಿದೆ. ಆರ್ಥಿಕವಾಗಿ ಸಧೃಡವೂ ಆದ್ದರಿಂದ ಒಂದು ಕಾಲೇಜಲ್ಲಿ ಡೊನೇಷನ್ ಕೊಟ್ಟು ಓದಿಸಿ. ಅವರಿವರ ಮಕ್ಕಳನ್ನು ಗಮನಿಸಬೇಡಿ ಎಂಬ ನನ್ನ ಸಲಹೆಯನ್ನು ಕೇಳಿದರು. ಅದಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ಅರಿತುಕೊಂಡ ಹುಡುಗನೂ ಸ್ವಲ್ಪ ಕಷ್ಟವಾದರೂ ತಕ್ಕಮಟ್ಟಿಗೆ ಓದಿ ಇಂಜಿನಿಯರ್ ಆದ. ಅವಕಾಶ ಸಿಕ್ಕು ವಿದೇಶಕ್ಕೂ ಹೋಗಿ ಬಂದಿದ್ದಾನೆ. ಈಗ ಇಲ್ಲಿಯೇ ಕೆಲಸ ಮಾಡುತ್ತಾ ವೃದ್ದಾಪ್ಯದ ಹಿರಿಯರನ್ನು ಚೆನ್ನಾಗಿ ನೋಡಿಕೊಂಡು ಸಂಸಾರ ನಡೆಸುತ್ತಿದ್ದಾನೆ. 

ಇನ್ನು ಕೆಲವು ಮಕ್ಕಳಿಗೆ ಓದಿ ಕೆಲಸಕ್ಕೆ ಸೇರುವ ವೇಳೆಯಲ್ಲಿ ಚಂಚಲ ಭಾವ. ಮಾರ್ಗ ಬದಲಾಯಿಸುವ ತವಕ. ಬಂಧುಗಳೊಬ್ಬರ ಗೌರವ ತರುವ ಹುದ್ದೆಯೇ ಆದರೆ ಒಳ್ಳೆಯದು ಎಂಬ ಆಸೆ. ಅದರ ಯತ್ನವಾಗಿ ಹೆಚ್ಚಿನ ಮಟ್ಟದ ಟ್ಯೂಶನ್ ಗಾಗಿ ದೂರದ ರಾಜಧಾನಿಯಲ್ಲಿ ವಾಸ. ವಿಶೇಷ ಪಾಠ ಪ್ರವಚನಗಳಿಗೆ ಹಾಜರಾದರೂ ಪರೀಕ್ಷೆಯಲ್ಲಿ ಪದೇ ಪದೇ ನಿರಾಸೆಯ ಫಲಿತಾಂಶ. ಇಂತಹಾ ಅನೇಕ ವಿಫಲತೆಗಳಿಂದ ಮಾನಸಿಕವಾಗಿ ಜರ್ಜರಿತನಾದ. ಇದು ಹೊಸ ಆತಂಕ ತಂದು, ತಾನು ಪಡೆದ ವಿದ್ಯೆಗೆ ತಕ್ಕ ಕೆಲಸದ ಆಯ್ಕೆ ಮಾಡುವ ವೇಳೆಗೆ ವಯೋಮಿತಿ ದಾಟಿದೆ. ಲಕ್ಷುರಿ ಬಸ್ ಪ್ರಯಾಣದ ಪ್ರಯತ್ನದಲ್ಲಿ ವಿಫಲನಾಗಿ ಸಾಮಾನ್ಯ ಬಸ್ ಆದರೂ ಸರಿ ಪ್ರಯಾಣಿಸೋಣ ಎಂಬುವ ವೇಳೆಗೆ ಆವುಗಳೆಲ್ಲಾ ಹೊರಟು ಹೋದಂತೆ ಎನಿಸುತ್ತದೆ.

ಮತ್ತೊಬ್ಬ ವೃತ್ತಿ ಪರ ಶಿಕ್ಷಣವನ್ನು ಓದುವ ಅವಧಿಯಲ್ಲಿ ತಂದೆಯನ್ನು ಕಳೆದುಕೊಂಡ. ಹಠಾತ್ತಾಗಿ ಓದುತ್ತಿರುವ ಕೋರ್ಸ್ ಬಿಟ್ಟು ಗಣಿತ ವಿಜ್ಞಾನ ಪ್ರಧಾನವಾದ ಪದವಿ ಸೇರಿದ. ಕಾರಣ ಕೇಳಿದರೆ, ನಮ್ಮ ತಂದೆಯ ಆಸೆಯಂತೆ ಆ ಡಿಗ್ರಿಗೆ ಸೇರಿದ್ದೆ, ಅದು ನನಗಿಷ್ಟ ಇರಲಿಲ್ಲ. ಈಗ ಅವರೇ ಇಲ್ಲವಾದಾಗ ಅದನ್ನು ಓದಿ ಏನು ಉಪಯೋಗ ಎಂಬ ಸಲೀಸಾದ ಉತ್ತರ. ಈಗಾಗಲೇ ಓದುತ್ತಿದ್ದ ಕೋರ್ಸ್ ಎರಡು ವರ್ಷ ಮುಗಿದಿದ್ದರೂ ಪರಿಗಣಿಸದೆ ಹೊಸದಾಗಿ ತನ್ನ ಇಷ್ಟದ ಕೋರ್ಸ್ ಓದಿದ. ತುಂಬಾ ಉನ್ನತವಾಗಿ ಬೆಳೆದು ಯಶಸ್ವಿಯಾಗಿದ್ದಾನೆ. 

ಪ್ರತಿಯೊಂದರಲ್ಲೂ ಹಣ ಉಳಿಸುವ, ಗಳಿಸುವ ಸ್ವಭಾವದ ಪರಿಚಯಸ್ದ, ಅವರ ಮಗ ಪಡೆದ ರ್ಯಾಂಕ್ ತುಂಬಾ ಕಡಿಮೆ ಶ್ರೇಣಿಯದು. ಅವನಿಗೆ ಊರ ಹೊರಗಿನ ಹೊಸಾ ಕಾಲೇಜಲ್ಲಿ ಸೀಟು ಸಿಕ್ಕಿತು. ಅಭ್ಯಾಸಕ್ಕೆ ಏನೂ ಸರಿಯಾಗಿ ವ್ಯವಸ್ಥೆ ಇಲ್ಲದ, ಸರಿಯಾಗಿ ಪಾಠವೂ ನಡೆಯದ ಕಾಲೇಜು. ಈ ಬಗ್ಗೆ ತಂದೆಗೆ ಮಗ ತಿಳಿಸಿದರೂ, ಓದುವ ಹುಡುಗರು ಹೇಗಿದ್ದರೂ ಓದೇ ಓದುತ್ತಾರೆ. ಅದಕ್ಕೆ ಕಾಲೇಜು ಮುಖ್ಯವಾಗುವುದಿಲ್ಲ, ಸುಮ್ಮನೆ ಸರಿಯಾಗಿ ಓದು ಎಂದು ಹೇಳುತ್ತಿದ್ದ ತಂದೆ. ಮೊದಲೇ ಮಂದ ಬುದ್ಧಿಯ ಹುಡುಗ. ತರಗತಿ ನಡೆದಾಗ ಸರಿಯಾಗಿ ಹಾಜರಾಗುತ್ತಿರಲಿಲ್ಲ. ವಿಷಯವನ್ನು ಓದದೆ, ಅಧೈರ್ಯದಿಂದ ಪರೀಕ್ಷೆಗೆ ಹೋಗಲಿಲ್ಲ . ಹಾಜರಾದ ವಿಷಯದಲ್ಲೂ ಎರಡಂಕಿ ದಾಟದ ಅಂಕ. ದೊಡ್ಡ ಹುದ್ದೆಯಲ್ಲಿದ್ದ ತಂದೆಗೆ ಸಮಾಜದಲ್ಲಿ ತಲೆ ಎತ್ತಲಾಗದ ಅನುಭವ. ಕಡೆಗೆ ಭವಿಷ್ಯದತ್ತ ಯೋಚಿಸಿ ಎಚ್ಚೆತ್ತ ತಂದೆ ಶಿಫಾರಸು ಇದ್ದವರನ್ನು ಹಿಡಿದು ಹೇಗೋ ಪಾಸು ಮಾಡಿಸುವುದರಲ್ಲಿ ಸುಸ್ತಾದರು. ಹೇಗೋ ಈ ಹುಡುಗ ಸ್ವಲ್ಪ ವ್ಯವಹಾರ ಕಲಿತಿರುವನಾದ್ದರಿಂದ ಬಂಡವಾಳ ಹಾಕಿ ಇಂಜಿನಿಯರಿಂಗ್ ವ್ಯಾಪಾರದಲ್ಲಿ ದುಡಿಯುತ್ತಿದ್ದಾನೆ ಎಂಬುದು ನೆಮ್ಮದಿಯ ಸಂಗತಿ.

ಮಕ್ಕಳ ಉನ್ನತ ಭವಿಷ್ಯತ್ತಿನ ಕನಸಿನಲ್ಲಿ ಅವರಿಗೆ ಬೆಂಬಲವಾಗಿ ನಿಂತು ಪ್ರತಿಹೆಜ್ಜೆಯನ್ನೂ ಪ್ರಗತಿಯತ್ತ ಕೊಂಡುಯ್ಯುವ ಪೋಷಕರು ಹೆಚ್ಚು. ಇದು ಸರಿಯಾದ ಕ್ರಮವೂ ಹೌದು. ಅವರ ಮಧ್ಯೆ ಇಲ್ಲೊಬ್ಬ ಹುಡುಗ ಸ್ವಯಂ ವಿದ್ಯೆಯ ಬೆಲೆ ಅರಿತು ಉತ್ಕಟೇಚ್ಛೆಯ ವಿದ್ಯಾಭ್ಯಾಸ (ಈ ಹೆಸರಿನಲ್ಲಿ ದೊರೆಯುವ ಪ್ರತ್ಯೇಕ ಲೇಖನವನ್ನು ಗಮನಿಸಿ) ಮತ್ತು ಅವಿರತ ಶ್ರಮದಿಂದ ತನ್ನ ಬದುಕಿನೊಂದಿಗೆ ಕಷ್ಟದಲ್ಲಿದ್ದ ಪೋಷಕರನ್ನು ಸುಖದತ್ತ ಕೊಂಡೊಯ್ದ ಪ್ರಭಾವಿ ಕಥೆಯೂ ಇದೆ.

ಮೇಲ್ಕಂಡ ಹಲವು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿದ್ಯಾರ್ಥಿಯ ಕಲಿಕೆಯ ಇಚ್ಛೆ ಪ್ರಧಾನವೆನಿಸುತ್ತದೆ. ಆತನ ಪ್ರಗತಿ ಕಾಣುವ ಉತ್ಕಟೇಚ್ಛೆ ಆತನ ಅಭ್ಯಸನ ಹಾದಿಯಲ್ಲಿ ಆತನ ಪೋಷಕರಿಗೂ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಅಪೇಕ್ಷೆಗಳನ್ನೂ ಅರಿತು ಪೋಷಕರು ಭವಿಷ್ಯದ ಕನಸು ಕಾಣುವುದು ಹಿತಕರ. ಜೀವನದಲ್ಲಿ ಓದು ಒಂದೇ ಮುಖ್ಯವಾಗುವುದಿಲ್ಲ. ಸಾಮಾನ್ಯ ಜೀವನ ಇಲ್ಲದಿದ್ದರೆ ಯಾವ ಜೀವನವೂ ಪರಿಪೂರ್ಣವೆನಿಸದು. ನಮ್ಮ ಮಕ್ಕಳು ಓದಿನಲ್ಲಿಯಂತೆಯೇ ಇತರ ವಿಷಯಗಳಲ್ಲಿಯೂ ಮುಂದೆ ಇರಬೇಕು. ನಾಲ್ಕು ಜನರೊಂದಿಗೆ ಬೆರೆತಾಗ, ಆಟೋಟಗಳಲ್ಲಿ ಭಾಗವಹಿಸಿದಾಗ ಸಣ್ಣ ಪುಟ್ಟ ಸೋಲುಗಳಾಗುತ್ತವೆ. ಇವುಗಳು ನಿಜವಾಗಿಯೂ ಮತ್ತೆ ಗೆಲ್ಲುವ ಛಲ ಬೆಳೆಸುತ್ತದೆ. ಇದೇ ಕ್ರೀಡಾ ಮನೋಭಾವ. ಇದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಕೇವಲ ಯಾಂತ್ರಿಕ ಓದು ಬಹುಜನರಿಗೆ ಅನಾಸಕ್ತಿ ಬೆಳೆಸುವುದು. ಆತಂಕ, ಅಧೈರ್ಯ ಮನೋಭಾವ ಸಹಜವಾಗಿರುತ್ತದೆ. ಆಸಕ್ತಿ ರಹಿತ ಜೀವನ ಖಿನ್ನತೆಗೆ ಕಾರಣವಾಗುತ್ತದೆ. ಖಿನ್ನತೆ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ತೀರಾ ಮಹತ್ವಾಕಾಂಕ್ಷೆ ಜೀವನ ಪೂರ್ತಿ ನೆನಪಿಡುವ ನೋವು ತರಬಾರದು. ದಯಮಾಡಿ ಪೋಷಕರು ಸಾರ್ವಜನಿಕ ಜೀವನ ಹಾಗೂ ಕ್ರೀಡೆಗೂ ಅವಕಾಶ ಕೊಡಬೇಕು. ಎಳೆಯ ಜೀವಗಳ ಕಾರಣ ರಹಿತ ಸಾವು ಎಲ್ಲರಿಗೂ ದುಃಖಕರ.

Comments

  1. ಎಲ್ಲ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಓದಲೇ ಬೇಕಾದ ಉಪಯುಕ್ತ ಲೇಖನ.. ಪ್ರಸ್ತುತ ಪಡಿಸಿದ ಕೆ. ಬಿ. ರಾಮಚಂದ್ರ ಇವರಿಗೆ ಧನ್ಯವಾದಗಳು.

    ರಮೇಶ್ ನಾಡಿಗ್..

    ReplyDelete
  2. ಉತ್ತಮವಾದ ಬರವಣಿಗೆ. ಪ್ರತಿಯೊಬ್ಬ ತಂದೆ ತಾಯಿ ಓದಬೇಕಾದ ಲೇಖನ. ಸಮಸ್ಯೆ ಮತ್ತು ಪರಿಹಾರ ಎರಡು ತಿಳಿಸಿದ್ದೀರಿ. ಧನ್ಯವಾದಗಳು.

    ReplyDelete
  3. ನನ್ನ ಕಥೆ ಇದಕ್ಕಿಂತ ಭಿನ್ನವಾಗಿಲ್ಲ.
    ಪೋಷಕರು ತಮ್ಮ ಸಂಬಂಧಿಗಳ ಮತ್ತು ಸ್ನೇಹಿತರ ಮಕ್ಕಳ ಜೊತೆಗೆ ಹೋಲಿಸಿ ಮಕ್ಕಳ ಜೀವನವನ್ನೇ ಚಿತ್ರಾನ್ನ ಮಾಡಿ ಬಿಡುತ್ತಾರೆ.
    ಲೇಖನ ಚೆನ್ನಾಗಿ ಮೂಡಿಬಂದಿದೆ.

    ReplyDelete
  4. ಕೆಬಿಆರ್, ಮಾತಿನಲ್ಲಿ ಚತುರರು, ಬರೆಯುವುದರಲ್ಲಿ ಸಿದ್ಧಹಸ್ತರು - ಎನ್ನುವುದರಲ್ಲಿ ಎರಡು ಮಾತಿಲ್ಲ! ಸ್ವಾನುಭವದಿಂದ ಬದುಕಿನ, ಸಮಾಜದ, ಏರಿಳಿತ, ಭಾವನೆಗಳ ತುಡಿತಗಳನ್ನು ತತ್ ಕ್ಷಣ ಗ್ರಹಿಸಬಲ್ಲ ಚಾಣಾಕ್ಷರು! ಬಿಡುವಿರದ ತಮ್ಮ ದಿನಚರಿಯಲ್ಲಿಯೂ ಅವುಗಳಿಗೆ ಶಬ್ದ ಸ್ವರೂಪ ನೀಡಿ, ಒಪ್ಪ ಮಾಡಿ, ಹಂಚಿಕೊಳ್ಳುವ ಅವರ ಪ್ರವೃತ್ತಿಗೆ ದೀರ್ಘ ದಂಡಪ್ರಣಾಮಗಳು! ಈ ಲೇಖನದಲ್ಲಿ ಅವರು ಪ್ರಸಕ್ತ ಕಾಲಘಟ್ಟದಲ್ಲಿ ನಾವು ಬೆಂಬತ್ತಿದ ವಿದ್ಯಾರ್ಜನೆ ಪೆಡಂಭೂತದ ಬಗ್ಗೆ ತುಂಬಾ ಮನದಟ್ಟಾಗಿ ಚರ್ಚಿಸಿದ್ದಾರೆ. ತೀರಾ ಬೆರಳೆಣಿಕೆಯಷ್ಟು ಪೋಷಕರು ಪ್ರವಾಹದ ವಿರುದ್ಧ ಈಜಿ, ತಮ್ಮ ಮಕ್ಕಳ ಆಸಕ್ತಿ, ಜಾಣ್ಮೆಗೆ ತಕ್ಕ ಶಿಕ್ಷಣಕ್ಕೆ ಅನುವಾಗುತ್ತಾರೆ ಎನ್ನುವುದಕ್ಕೆ, ರಾಯರು ಉಲ್ಲೇಖಿಸಿದ ಜೀವಂತ ನಿದರ್ಶನಗಳು ನಮ್ಮೆಲರನ್ನೂ ಸರ್ವ ಸ್ವಾಸ್ಥ್ಯದ ಬಗ್ಗೆ ಯೋಚಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ. "ಮೇಷ್ಟ್ರ" ಹಿಂದಿನ ಹಲವಾರು ಲೇಖನಗಳಲ್ಲೂ ಇದು ಸಿದ್ಧವಾಗಿದೆ! ಇಂಥ ವಿಚಾರ ಪ್ರಚೋದಕ ಬರಹಗಳಿಂದ, ಸಮೂಹ ಚಿಂತನ-ಮಂಥನವಾದಲ್ಲಿ, ಬದಲಾವಣೆ ಅಸಾಧ್ಯವೇನಲ್ಲ. ಅವರ ಲೇಖನಿಯಿಂದ ಇನ್ನಷ್ಟು ಇಂಥ ಹೊಳಹುಗಳು ಮಿಂಚಲಿ! ~~ ಮಹಾಂತೇಶ್ ತಳಗೇರಿ, ನಿವೃತ್ತ ಭಾರತೀಯ ಜೀವ ವಿಮಾ ವಿಭಾಗಾಧಿಕಾರಿ, ಬೆಂಗಳೂರು.

    ReplyDelete
  5. ಈ ಲೇಖನವು ಈಗಿನ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಒಂದು ಉತ್ತಮ ನೀತಿ ಪಾಠವನ್ನು ಕಲಿಸುವಂತಿದೆ. ಪೋಷಕರು ತಮ್ಮ ಮಕ್ಕಳನ್ನು ಸಮಾಜಕ್ಕೆ ಹೊರೆ ಮಾಡದೆ, ಉತ್ತಮ ಪ್ರಜೆಗಳನ್ನು ಮಾಡುವ ದಿಷೆಯಲ್ಲಿ ಪ್ರಯತ್ನಪಡಬೇಕಾಗುತ್ತದೆ. ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದು, ಸಮಾಜದಲ್ಲಿ ಬದುಕಲು ಸಾಕಾಗುವಷ್ಟು ಸಾಮಾನ್ಯ ಜ್ಞಾನವಿಲ್ಲದೆ ನರಳುತ್ತಿರುವವರನ್ನು ನಾವು ನೋಡುತ್ತಿದ್ದೇವೆ. ಹಣದಿಂದ ವಿದ್ಯೆಯನ್ನು ಖರೀದಿ ಮಾಡ ಬಹುದೆಂದು ತಿಳಿದಿದ್ದರೆ ಅದು ಮೂರ್ಖತನದ ಪರಮಾವದಿ. ಮೊದಲಿಗೆ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು ಬಹಳ ದೊಡ್ಡ ತಪ್ಪು. ಇದು ಮಕ್ಕಳ ಮೆದುಳಿನ ಮೇಲೆ ಬಹಳ ಪರಿಣಾಮವನ್ನು ತಂದೊಡ್ಡುತ್ತದೆ. ಒಂದೆರಡು ವರ್ಷದ ಹಿಂದೆ, ಒಬ್ಬ ಪಿ. ಯು. ಸಿ. ವಿದ್ಯಾರ್ಥಿನಿ, ಇರುವ ನಾಲ್ಕು ಕೋರ್ ವಿಷಯಗಳಲ್ಲಿ, ಮೂರರಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು, ಉಳಿದ ಇನ್ನೊಂದು ವಿಷಯದಲ್ಲಿ ನೂರಕ್ಕೆ ತೊಂಬಾತ್ತ ಒಂಬತ್ತು ಅಂಕ ಪಡೆದಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿ, ಪಿ. ಯು. ಸಿ. ಬೋರ್ಡಿಗೆ ಹಣವನ್ನು ಕಟ್ಟಿ ಪುನರಾವರ್ತನೆಗೆ ಪ್ರಯತ್ನಿಸಿ, ಅದರಲ್ಲೂ ಸರಿಯಾದ ನ್ಯಾಯ ದೊರಕಲಿಲ್ಲವೆಂದು, ಖಿನ್ನಳಾಗಿ, ಮುಂದಿನ ವಿದ್ಯಾಭ್ಯಾಸದ ಬಗ್ಗೆ ಸಂಪೂರ್ಣವಾಗಿ ಆಸಕ್ತಿಯನ್ನು ಕಳೆದುಕೊಂಡು ಒದ್ದಾಡಿದ ವಿಷಯ ನನ್ನ ಮನಸ್ಸನ್ನು ಆತಂಕಗೊಳಿಸಿತ್ತು. ಅಂತಹ ಸಮಯದಲ್ಲಿ, ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಬುದ್ದಿವಾದ ಹಾಗೂ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ. ಈ ಲೇಖನದಲ್ಲಿ ನನ್ನ ಆತ್ಮೀಯ ಸ್ನೇಹಿತ ರಾಮಚಂದ್ರರವರು ತಮ್ಮದೇ ಆದ ಭಾಷಾ ಶೈಲಿಯಲ್ಲಿ ಉತ್ತಮವಾದ ನಿದರ್ಶನಗಳೊಂದಿಗೆ ಮಂಡಿಸಿರುತ್ತಾರೆ. ಇವರಿಂದ ಇನ್ನೂ ಹೆಚ್ಚಿನ ರೀತಿಯ ಲೇಖನಗಳು ಹೊರ ಬರಲೆಂದು ಆಶಿಸುತ್ತಾ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ.

    ReplyDelete
  6. I feel this article must be eye opener for all the over aspiring parents who force their children to always beat everyone in the race. If you look around there is a lot of choices apart from engineering,medical fields. Our government has started many schemes through which any one with interest and hunger for success in life can achieve greater success. Media should not glamourise the unfortunate incidents of suicides instead promote self confidence among students.

    ReplyDelete
  7. ಪತಿಯೊಬ್ಬ ಪೋಷಕರು ಓದಲೇ ಬೇಕಾದ ವಿಷಯ, ಲೇಖನ ತುಂಬಾ ಚೆನ್ನಾಗಿದೆ. ಧನ್ಯವಾದಗಳು. ವಾಣಿ ಎಸ್. ಆರ್

    ReplyDelete

  8. ತಾಕಲಾಟದ ವಿದ್ಯಾಭ್ಯಾಸದಲ್ಲಿ ಎಲ್ಲರ ಮನದ ಬೇಗುದಿಗಳನ್ನು ಬಿಂಬಿಸಲಾಗಿದೆ. ಮಕ್ಕಳಿಗಿಂತ ಹೆತ್ತವರ ತಾಕಲಾಟ, ಕಾಯುವಿಕೆ ಹೆಚ್ಚಾಗಿರುತ್ತದೆ.
    ಇದರಲ್ಲಿ ತಿಳಿಸಿರುವಂತೆ,ಐದು ಬೆರಳುಗಳು ಒಂದೇ ರೀತಿ ಇರುವುದಿಲ್ಲ.ಇದನ್ನು ಹೆತ್ತವರು ಅರ್ಥಮಾಡಿಕೊಂಡು ಮಕ್ಕಳಿಗೆ ಸಾಧ್ಯವಾದಷ್ಟು ಪ್ರೋತ್ಸಾಹ ನೀಡಬೇಕು.ಬುದ್ಧಿವಂತ ಮಕ್ಕಳು ಸಹ ಎಡವುದು ಉಂಟು. ಅಂತಹ ಸಮಯದಲ್ಲಿ ಅವರಿಗೆ ಧೈರ್ಯ ಹೇಳದೆ ಹೀಯಾಳಿಸಿದರೆ ಮಕ್ಕಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಮಕ್ಕಳ ಮನಸ್ಸನ್ನು ಅರಿತು ನಡೆದರೆ ಒಳ್ಳೆಯದು.ಜೀವನಕ್ಕೆ ವಿದ್ಯೆ ಬೇಕು, ಆದರೆ ಅದಿಲ್ಲದಿದ್ದರೆ ಸಾವೇ ಗತಿ ಎಂಬ ನಿರ್ಧಾರಕ್ಕೆ ಬಾರದೆ ಧೈರ್ಯದಿಂದ ಜೀವಿಸುವುದನ್ನು ಹೆತ್ತವರು ಮಕ್ಕಳಿಗೆ ತಿಳಿಸಿ ಹೇಳಬೇಕು.ಈ ಲೇಖನ ಪೋಷಕರಿಗೂ ಒಂದು ರೀತಿಯ ಪಾಠವಾಗಿದೆ.



    ReplyDelete
  9. ಅತ್ತ್ಯುತ್ತಮ ಲೇಖನ. ಮಕ್ಕಳ ಹತ್ತಿರ ಓದಿಸಿ ಕೇಳಿದೆವು.. ತುಂಬಾ ಸಂತೋಷವಾಯಿತು. ಧನ್ಯವಾದಗಳು.🙏😊

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...