Skip to main content

ಗುಪ್ತಗಾಮಿನಿ ಕೊರೋನ

ತಲೆತಲಾಂತರದಿಂದ ಮಾನವ ಕುಲಕ್ಕೆ ಅತಿಯಾಗಿ ಘಾಸಿ ಮಾಡಿ ಅವನ ಪ್ರಾಣವನ್ನು ತೆಗೆದುಕೊಂಡಿರುವ ಸಾಂಕ್ರಾಮಿಕ ರೋಗಗಳಲ್ಲಿ ಮುಖ್ಯವಾದ ಸಿಡುಬು, ಕುಷ್ಟ ರೋಗ, ಕ್ಷಯ, ಕಾಲರಾ, H1N1, ಎಬೋಲ, ಜಿಕಾ, ಮೆನಂಜೈಟಿಸ್ ಇತ್ಯಾದಿಗಳಿಗೆ ಸೂಕ್ತವಾದ ಚಿಕಿತ್ಸೆಗಳ ಮೂಲಕ ವಾಸಿಮಾಡಲು ಅಥವಾ ನಿಯಂತ್ರಣದಲ್ಲಿಡಲು ಯಶಸ್ವಿಯಾಗಿದ್ದೇವೆ. ಹಲವು ಖಾಯಿಲೆಗಳಿಗೆ ಜೀವನದ ಬಾಲ್ಯದಲ್ಲೇ ಮುಂಜಾಗ್ರತೆಯಾಗಿ ಲಸಿಕೆಯನ್ನು ಕೊಡುವ ಮೂಲಕ ಆ ಕಾಯಿಲೆಗಳನ್ನು ದೂರವಿಟ್ಟರೂ ಹೊಸ ಹೊಸ ಕಾಯಿಲೆಗಳು ಕಾಲಕ್ರಮದಲ್ಲಿ ಉದ್ಭವವಾಗುತ್ತಿರುವುದನ್ನು ನೋಡಬಹುದು. ಅವುಗಳನ್ನು ಅಭ್ಯಸಿಸಿ ಸೂಕ್ತ ಔಷಧಿಗಳನ್ನು ಕಂಡು ಹಿಡಿಯುವವರೆಗೂ ಆ ಕಾಯಿಲೆಯೊಂದಿಗೆ ನಮಗೆ ಅಪಾಯವಾಗದಂತೆ ಹೊಂದಿಕೊಂಡು ಹೋಗುವುದೇ ಸವಾಲಿನ ಕೆಲಸವಾಗಿದೆ. ಇಂತಹ ಕಾಯಿಲೆಯಾದ ೨೦೧೯ರ ವರ್ಷಾಂತ್ಯದಲ್ಲಿ ಬಂದಿರುವ ಕೋವಿಡ್-೧೯ರ ಬಗ್ಗೆ ಚರ್ಚೆಯೇ ಈ ಲೇಖನದ ಉದ್ದೇಶ. ಈ ಕೋವಿಡ್ ಅಥವಾ ಕೊರೋನ ಕಂಡುಬಂದ ದಿನದಿಂದ ಇಂದಿನವರೆಗೂ ಅದು ನಮ್ಮ ಜೀವನವನ್ನು ಹೈರಾಣ ಮಾಡುತ್ತಾ ವಿಶ್ವದ ನೆಮ್ಮದಿ ಕೆಡಿಸಿದೆ ಎಂದರೆ ಆಶ್ಚರ್ಯವಾಗದು.

ರಾಜಣ್ಣ ಬಲು ಕಟ್ಟುನಿಟ್ಟಿನ ಮನುಷ್ಯ - ಬೆಳಗಿನ ವಾಕಿಂಗ್, ಯೋಗ, ಪ್ರಾಣಾಯಾಮ, ತಿಂಡಿ, ಊಟ ಹೀಗೆ ಯಾವುದೇ ಆಗಲಿ ಅದಕ್ಕೊಂದು ವೇಳಾಪಟ್ಟಿ. ಅಂತೆಯೇ ಯಾವುದೇ ಕಾರ್ಯಕ್ರಮವೇ ಆದರೂ ಅದಕ್ಕೆ ಹೋಗಬೇಕೇ?, ಎಷ್ಟು ಗಂಟೆಗೆ ಅಲ್ಲಿರಬೇಕು?, ಎಲ್ಲಾ ಶಿಸ್ತಿನ ತೀರ್ಮಾನವೇ. ಈ ಕೊರೋನ ರೋಗ ಕಳೆದ ವರ್ಷ ಜನವರಿಯಲ್ಲಿ ಕೇಳಿ ಬಂದಾಗಿನಿಂದ ಸಾರ್ವಜನಿಕ ಸಮಾರಂಭಗಳಿರಲಿ, ಬಂಧುಮಿತ್ರರಲ್ಲಿನ ಮದುವೆಗಳು, ಹೋಟೆಲ್, ಛತ್ರ ಹೀಗೆ ಯಾವುದಕ್ಕೂ ಹೋಗದವನು ನಾಲ್ಕೈದು ದಿನಗಳಿಂದ ಜ್ವರ ಎಂದು ಮಲಗಿದ, ಈ ದಿನ ನೋಡಿದರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವನ ಮಗ ಫೋನ್ ಮಾಡಿ ಹೇಳಿದ್ದು ನಮ್ಮ ನೆಮ್ಮದಿ ಕೆಡಿಸಿದೆ. ಈ ಬಗ್ಗೆ ನಾವುಗಳೇ ಮಾತನಾಡುತ್ತಾ ಹೋದವರ್ಷ ಯಾರಾದರೂ ತಕ್ಷಣಕ್ಕೆ ಯಾವ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ, ಕೊರೋನಾ ಕಿಟ್ ಇಲ್ಲ, ಟೆಸ್ಟ್ ಮಾಡಿಲ್ಲ ಎಂದು ಯಾವ ಆಸ್ಪತ್ರೆ ಒಳಗೂ ಬಿಟ್ಟು ಕೊಳ್ಳುತ್ತಿರಲಿಲ್ಲ ಎಂದು ಕೇಳಿದ್ದೆವು. ಈಗಾಗಲೇ ಬಹಳಷ್ಟು ಜನರಿಗೆ ಇಂತಹ ಅನುಭವವಾಗಿದೆ. ಜೊತೆಗೆ ಕೊರೋನಾ ಟೆಸ್ಟ್ ಬಲು ದುಬಾರಿಯೆನ್ನುತ್ತಾರೆ. ಹಾಗೆಯೇ ಚಿಕಿತ್ಸೆ ಸಹ ಎಂದು ಗಂಭೀರವಾಗಿ ಯೋಚನೆಯಾಯಿತು. ಏನೋ ಕಳವಳ. ಹೇಗಾದರೂ ಅವನೊಂದಿಗೆ ಮಾತನಾಡಬೇಕೆಂದು ಮೊಬೈಲ್ ಕರೆ ಮಾಡಿದೆವು. ವಿಡಿಯೋ ಕರೆಯ ಮೂಲಕ ಅವನು ಬಂದಿದ್ದು ಎಷ್ಟೋ ನೆಮ್ಮದಿ ಎನಿಸಿತು. ಏನೆಂದು ವಿಚಾರಿಸಿದಾಗ ಮೊದಲು ತನಗೆ ಗಂಟಲು ತುರಿಕೆಯಿಂದ ಪ್ರಾರಂಭವಾಗಿ ಗಂಟಲು ಒಣಗಿದ್ದು, ನಂತರ ನಿರಂತರ ಒಣ ಕೆಮ್ಮು ಕಾಣಿಸಿತು, ನಂತರ ಮೂರು ದಿನ ಚಳಿ ಜ್ವರ, ಗಂಟಲು ನೋವು, ಸದಾ ತಲೆನೋವು ಬಂದಿತು. ಜೊತೆಗೆ ಉಸಿರಾಟದ ತೊಂದರೆ ಶುರುವಾಯಿತು. ಈಗ ವಾಸನೆ ಮತ್ತು ರುಚಿಯು ಸರಿಯಾಗಿ ಗೊತ್ತಾಗುತ್ತಿಲ್ಲ. ಒಳ್ಳೆಯ ಆಸ್ಪತ್ರೆಯಾದ್ದರಿಂದ ಉಸಿರಾಟಕ್ಕೆ ವೆಂಟಿಲೇಟರ್ ಸೇರಿದಂತೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಹೇಳಿದ್ದು ಒಂದು ರೀತಿಯಲ್ಲಿ ಸಮಾಧಾನ ತಂದರೂ ನಮಗೂ ಈ ಕಾಯಿಲೆ ಬರುತ್ತದೆಯೋ ಎಂದು ಪುಕ್ಕಲು ಪ್ರಾರಂಭವಾಯಿತು. ಸರಿ ಮಲಗಿಕೊಂಡು ಸುಧಾರಿಸಿಕೋ ಎಂದು ಹೇಳುತ್ತಾ ನಾವೂ ಕೇಳಿದ್ದನ್ನು ಸುಧಾರಿಸಿಕೊಳ್ಳಲು ಪ್ರಾರಂಭಿಸಿದೆವು. ಈ ಕಾಯಿಲೆ ಯಾರಿಗೆ ಬರುತ್ತದೆ, ಹೇಗೆ ಬರುತ್ತದೆ ಎಂದು ವಿವರವಾಗಿ ತಿಳಿಯಲು ನಮ್ಮ ಮಿತ್ರ ವೈದ್ಯರಲ್ಲಿ ಚರ್ಚೆ ಮಾಡಲು ಆ ಸಂಜೆಯ ಕೊನೆಯ ಅಪಾಯಿಂಟ್ಮೆಂಟ್ ತೆಗೆದುಕೊಂಡೆವು.

ವೈದ್ಯರೊಂದಿಗೆ ಕ್ಷೇಮ ಸಮಾಚಾರದ ಪ್ರಾರಂಭದಲ್ಲೇ ಮಾಸ್ಕ್ ಸರಿಯಾಗಿ ಹಾಕಿಕೊಳ್ಳಲು ಹೇಳಿದರು. ಕೊರೋನ ಯಾರಿಗೆ ಯಾವಾಗ ಬರುತ್ತದೆ ಅಥವಾ ಬಂದಿದೆ ಎಂದು ಹೇಳಲಾಗದು. ಯಾರಿಗಾದರೂ ಗಾಯವಾಗಿದ್ದರೆ, ಚರ್ಮ ಕೆತ್ತಿದ್ದು ಒಳಭಾಗ ಕಾಣುವಂತಿದ್ದರೆ ಅಥವಾ ಕೊಳೆತಿದ್ದರೆ ಇಲ್ಲವೇ ಯಾವುದೇ ಭಾಗ ಬಾತುಕೊಂಡಿದ್ದರೆ ಅವರಿಗೆ ಯಾವುದೋ ಕಾಯಿಲೆ ಇದೆ ಎನ್ನಬಹುದು. ಅದನ್ನು ನಂಬುತ್ತಾರೆ ಕೂಡಾ. ಆದರೆ ಏನೂ ಕಾಣದಂತೆ ಗುಪ್ತಗಾಮಿನಿಯಾಗಿ ಇರುವುದರಿಂದ ಈ ಕಾಯಿಲೆಯ ಇರುವಿಕೆ ತಿಳಿಯಲಾಗದು. ನಮಗೆ ಗೊತ್ತಾಗದಂತೆ ಅದೇನಾದರೂ ಈಗಾಗಲೇ ನಮಗೆ ಬಂದಿದ್ದು, ಈಗ ಯಾರಿಗಾದರೂ ನಮ್ಮ ಸೀನಿನ ಹನಿಗಳು ಸಿಡಿದಲ್ಲಿ ಈ ಕಾಯಿಲೆ ಬೇರೆಯವರಿಗೆ ಬರುವ ಸಂಭವ ಅತೀ ಹೆಚ್ಚು. ಇಂತಹ ಸಾಧ್ಯತೆಗಳನ್ನು ತಡೆಯಲು ಪ್ರತಿಯೊಬ್ಬರೂ ಮಾಸ್ಕ್ ತೊಡಲೇ ಬೇಕು. ಎಲ್ಲಾ ಕಾಯಿಲೆಗಳ ವಿಷಯದಲ್ಲಿ, ನಮಗೆ ಆ ಕಾಯಿಲೆ ಬರದಂತೆ ಎಚ್ಚರ ವಹಿಸಿದರೆ, ಈ ಕಾಯಿಲೆ ತಮ್ಮಿಂದ ಬೇರೆಯವರಿಗೆ ಬರದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು, ಇದೇ ಈ ಕಾಯಿಲೆಯ ವಿಶೇಷತೆ. ಆದ್ದರಿಂದ ಮಾಸ್ಕ್ ಹಾಕದೆ ಯಾರೂ ಹೊರಗಡೆ ಹೋಗಲೇಬಾರದು .

ಹೊರಗಿನಿಂದ ಮನೆಗೆ ಬಂದ ಕೂಡಲೇ ಕೈಗಳನ್ನು ಸೋಪಿನೊಂದಿಗೆ ಚೆನ್ನಾಗಿ ತೊಳೆದುಕೊಳ್ಳಿ. ಮನೆಯ ಹೊರಗಡೆ ಏನೂ ಮುಟ್ಟದಂತೆ ಜಾಗ್ರತೆ ವಹಿಸಬೇಕು. ಹೊರಗಡೆ ಹೋದಾಗ ವಿನಾಕಾರಣ ಯಾವ ವಸ್ತುಗಳನ್ನೂ ಕೈನಿಂದ ಮುಟ್ಟಬೇಡಿ. ಹಾಗೇನಾದರೂ ಮಹಡಿ ರೈಲಿಂಗ್, ಲಿಫ್ಟ್ ಒಳಭಾಗ, ಯಾವುದಾದರೂ ಟೇಬಲ್ ಕುರ್ಚಿಗಳು ಇತ್ಯಾದಿ ವಸ್ತುಗಳನ್ನು ಮುಟ್ಟಿದರೆ ತಕ್ಷಣ ಸ್ಯಾನಿಟೈಸರ್ ನಿಂದ ತಿಕ್ಕಿ ಕೊಳ್ಳಿ. ಯಾವುದೇ ಕಾರಣಕ್ಕೂ ಕೈಗಳಿಂದ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬೇಡಿ. ಇದರಿಂದ ನಮಗೆ ಗೊತ್ತಿಲ್ಲದಂತೆ ಕಾಯಿಲೆ ಇರುವ ವ್ಯಕ್ತಿಗಳಿಂದ ಸಂಗ್ರಹವಾದ ಕೊರೋನ ಕಣಗಳಿಂದ ರಕ್ಷಿಸಿ ಕೊಳ್ಳಬಹುದಾಗಿದೆ.

ಇನ್ನು ಈ ನಿಮಿಷದಲ್ಲೇ ಕಾಯಿಲೆ ಅಂಟುವ ಸಾಧ್ಯತೆ ಬಗ್ಗೆ ಯೋಚಿಸಿದರೆ, ಕಾಯಿಲೆಯು ಒಬ್ಬರಿಂದ ಒಬ್ಬರಿಗೆ ಅಂಟಲು ಮೂರು ಅಡಿ ಅಂತರ ಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ ಆದ್ದರಿಂದ ಈ ಕಾಯಿಲೆಯು ಬರದಿರಲು ಯಾವಾಗಲೂ ಬೇರೆಯವರಿಂದ ಕನಿಷ್ಠ ಮೂರು ಅಡಿ ದೂರದಲ್ಲಿರಿ. ಇದನ್ನು ಸಾಮಾಜಿಕ ಕ್ಷೇಮದ ಅಂತರ ಎನ್ನುವರು. ಬೇರೆಯವರು ಎಂದಾಗ ನಿಮ್ಮ ಹೊರತು ಎಲ್ಲರೂ ಎಂದರ್ಥ. ಅವರು ನಮ್ಮ ದೂರ ಸಂಬಂಧಿಗಳು ಹತ್ತಿರದವರು ಎಂದು ಭಾವಿಸಬೇಡಿ. ಕೊರೋನ ವಿಷಯದಲ್ಲಿ ಎಲ್ಲರೂ ದೂರವಿರಬೇಕಾದವರು ಎಂದು ತಿಳಿಯಿರಿ. ಈ ಕಾಯಿಲೆಯು ಹತ್ತಿರ ಬಂದ ಎಲ್ಲರನ್ನೂ ತಮ್ಮವರು ಎಂದು ಭಾವಿಸಿ ತಬ್ಬಿಕೊಳ್ಳುತ್ತದೆ. ಅವರಿಗೂ ಆವರಿಸಿಕೊಳ್ಳುತ್ತದೆ.

ನಾನು ಹೇಳುವ ವಿಷಯದಲ್ಲಿ ಮೇಲ್ಕಂಡ ಅಂಶಗಳು ಅತ್ಯಂತ ಅಮೂಲ್ಯವಾದದ್ದು. ಇದನ್ನು ಪಾಲಿಸಿದರೆ ಕಾಯಿಲೆಯು ಬರದಂತೆ ಕನಿಷ್ಠ ಎಚ್ಚರಿಕೆ ವಹಿಸಿದಂತಾಗುವುದು. ಇದಲ್ಲದೆ ಈ ಕೊರೋನ ಹೆಸರು ಮಾಯವಾಗುವರೆಗೂ ದಿನಕ್ಕೆರಡು ಲೋಟ ನಿಂಬೆ ಬೆರೆಸಿದ ಬೆಚ್ಚಗಿನ ನೀರನ್ನು ಕುಡಿಯಿರಿ. ನೀರು ಕುಡಿಯಬೇಕು ಎನಿಸಿದಾಗಲೆಲ್ಲಾ ಬಿಸಿ ನೀರನ್ನೇ ಕುಡಿಯಿರಿ. ಆ ಅಭ್ಯಾಸ ಒಳ್ಳೆಯದು ಎಂದರು. ಇದಲ್ಲದೆ ದೇಹದಲ್ಲಿ ಈ ಕಾಯಿಲೆಯ ವೈರಸ್ ಗಳನ್ನು ಎದುರಿಸಲು ದಿನಕ್ಕೆ ಒಂದೆರಡು ಬಾರಿ ಬಿಸಿ ಹವೆಯನ್ನು ಮೂಗಿನ ಮೂಲಕ ತೆಗೆದುಕೊಳ್ಳಿ. ಇದು ಬಲು ಪರಿಣಾಮಕಾರಿ. ಈ ಮಾಹಿತಿಯನ್ನು ಕುಟುಂಬ ದೊಂದಿಗೆ ಹಂಚಿಕೊಳ್ಳಿ ಎಂದರು. ಇದು ಸಾಮಾಜಿಕವಾಗಿ ಎಲ್ಲರೂ ಅನುಸರಿಸಬೇಕಾದುದುರಿಂದ ಮತ್ತು ತಮ್ಮಂತಹ ವೈದ್ಯರು ಹೇಳಿದರೆ ಎಲ್ಲರೂ ಕೇಳುತ್ತಾರೆ. ಆದ್ದರಿಂದ ದಯಮಾಡಿ ನಮ್ಮ ಕಾಲೋನಿಗೆ ಬಂದು ನಮ್ಮ ಜನಗಳಿಗೆ ಹೇಳಬೇಕೆಂದು ಪ್ರಾರ್ಥಿಸಿದೆವು. ಅದರಂತೆ ಮರುದಿನ ಬೆಳಿಗ್ಗೆ ಕಾಲೋನಿಯ ಎಲ್ಲಾ ಜನರು ಒಂದೆಡೆ ಸೇರುವ ವ್ಯವಸ್ಥೆ ಮಾಡಿದೆವು. ಈಗಾಗಲೇ ವೈದ್ಯರು ಹೇಳಿದಂತೆ ಸಾಮಾಜಿಕ ಅಂತರದಿಂದ ಎಲ್ಲರನ್ನೂ ಕೂಡಿಸುವುದರಲ್ಲಿ ಸಾಕು ಸಾಕಾಯಿತು.

ಸಭೆಯಲ್ಲಿ ಮಕ್ಕಳು, ಹಿರಿಯರು, ಕಿರಿಯರು ಸೇರಿದ್ದರು. ಈಗಾಗಲೇ ನಮಗೆ ಹೇಳಿದ್ದ ಮೇಲ್ಕಂಡ ವಿಷಯಗಳು ವಿವರವಾಗಿ ಚರ್ಚೆಗಳಾದವು. ವೈದ್ಯರ ಹಿತವಚನಗಳಲ್ಲಿ ಹೇಳುವುದಾದರೆ ನಿಮ್ಮ ಪ್ರೀತಿಪಾತ್ರರನ್ನು, ಪೋಷಕರು, ಅಜ್ಜ ಅಜ್ಜಿಯರನ್ನು ರಕ್ಷಿಸಿ, ಹಿರಿಯ ವಯಸ್ಸಿನವರು, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ರೋಗಿಗಳು ಹೀಗೆ ಇತ್ಯಾದಿ ಅನಾರೋಗ್ಯ ಪೀಡಿತರಿಗೆ ಕೊರೋನ ಹಬ್ಬುವ ಸಂಭವ ಅತಿ ಹೆಚ್ಚು. ಅಲ್ಲದೆ ಅನಾರೋಗ್ಯದಲ್ಲಿರುವವರು, ವೃದ್ಧಾಪ್ಯದಲ್ಲಿರುವವರು, ತೀರಾ ಅನಾರೋಗ್ಯ ದವರನ್ನು ಭೇಟಿ ಮಾಡ ಬಂದವರು, ಸಾವಿನ ಮನೆಗೆ ಹೋಗಿ ಬಂದವರು, ಸಂಬಂಧಿಗಳ ಮನೆಗೆ ಭೇಟಿ ಕೊಟ್ಟವರು, ನಗರಗಳಲ್ಲಿ ತಾತ್ಕಾಲಿಕವಾಗಿ ಉದ್ಯೋಗದ ಪ್ರಯುಕ್ತ ಬಂಧುಗಳ ಅಥವಾ ಪಿಜಿಗಳಲ್ಲಿ ವಾಸವಾಗಿರುವವರು ಹೀಗೆ ಹಲವಾರು ರೀತಿಯ ಪ್ರಜೆಗಳಿಗೆ ಕೊರೋನ ಬಂದಿರುವ ಘಟನೆಗಳೇ ಹೆಚ್ಚು. ಯಾರೊಂದಿಗೆ ವ್ಯವಹರಿಸಲೂ ಭಯ ಪಡಬೇಕಾಗಿದೆ. ಈ ರೋಗಕ್ಕೆ ಸದ್ಯಕ್ಕೆ ನಿರ್ಧಿಷ್ಟ ಔಷಧಿ ಇಲ್ಲ. ಆದ್ದರಿಂದ ಈ ಕಾಯಿಲೆ ಬರದಂತೆ ತಡೆಯುವುದೇ ಜಾಣತನದ ಮಾರ್ಗವಾಗಿದೆ. ತೀರಾ ಅಗತ್ಯದ ಕೆಲಸದ ಹೊರತು ಎಲ್ಲಿಗೂ ಹೋಗಬೇಡಿ. ಈ ಕಾಯಿಲೆ ನಮ್ಮಂತಹವರಿಗೆ ಬರುವುದಿಲ್ಲ ಎಂಬ ಧಿಮಾಕು ಬೇಡ. ಎಲ್ಲರಿಗೂ ಬರುವ ಸಾಧ್ಯತೆ ಇರುವುದರಿಂದ ಇದ್ದಲ್ಲೇ ಇರಿ. ಈಗಾಗಲೇ ನಿಮ್ಮ ಬಂಧು ಮಿತ್ರರಿಗೆ ಕಾಯಿಲೆ ಬಂದು ವಾಸಿ ಯಾಗಿರಬಹುದು. ಅವರ ಬಗ್ಗೆ ಅಗೌರವ ಅಸಡ್ಡೆ ಅಥವಾ ನಿರ್ಲಕ್ಷ್ಯ ಬೇಡ. ಯಾರದಾದರೂ ಮನೆಗೆ ಹೋದಲ್ಲಿ, ನಿಮಗೇ ಗೊತ್ತಿಲ್ಲದಂತೆ ಈ ರೋಗ ನಿಮಗಿದ್ದರೆ ಅವರಿಗೂ, ಹಾಗೆಯೇ ಅವರೀಗೇನಾದರೂ ಇದ್ದಲ್ಲಿ ನಿಮಗೂ ಬರುವ ಸಾಧ್ಯತೆ ‌ಹೆಚ್ಚು.

ಯಾವುದೇ ಸಭೆ, ಸಮಾರಂಭ, ಮದುವೆ ಇತ್ಯಾದಿ ಜನದಟ್ಟಣೆ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸಿ. ಹಾಗೂ ಹೋದಲ್ಲಿ ಸದಾ ಮಾಸ್ಕ್ ಧರಿಸಿ. ಮಾಸ್ಕ್ ಧರಿಸದವರ ಬಳಿ ಮಾತನಾಡಬೇಡಿ, ವ್ಯವಹರಿಸಬೇಡಿ. ಅಂತಹ ಸಮಾರಂಭಗಳಲ್ಲಿ ಸದ್ಯದ ಸಮಯದಲ್ಲಿ ಊಟವನ್ನೂ ಮಾಡದಿರುವುದು ಒಳ್ಳೆಯದು. ಗುಂಪು ಗುಂಪಾಗಿ ಕುಳಿತು ಹರಟುತ್ತಾ ಇರಬೇಡಿ. ಚಿಕ್ಕ ಮಕ್ಕಳನ್ನು ಮುಟ್ಟಲೇಬೇಡಿ, ಮುತ್ತು ಕೊಡಬೇಡಿ, ಮಕ್ಕಳಿಗೆ ಬೇಗ ಸೋಂಕು ತಗಲುತ್ತದೆ. ಹಾಗೆಯೇ ಮನೆಗೆ ಯಾರನ್ನೂ ಯಾವುದೇ ಸಮಾರಂಭಗಳಿಗೂ ಆಹ್ವಾನಿಸಬೇಡಿ. ಅನಿವಾರ್ಯತೆ ಇದ್ದರೆ ಸೇರುವ ಬಂಧುಗಳ ಸಂಖ್ಯೆಗೆ ಮಿತಿ ಇರಲಿ. ಕರೆದವರು ಬರಲಿಲ್ಲವೆಂದು ವ್ಯಥೆ ಪಡಬೇಡಿ. ಸದ್ಯಕ್ಕೆ ಬಂಧು ಮಿತ್ರರು ಸೇರುವ ಕಾರ್ಯಕ್ರಮವನ್ನು ನಡೆಸದಿರುವುದು ಕ್ಷೇಮ. ಇದರಿಂದ ನಿಮಗೂ ಕ್ಷೇಮ. ನಿಮ್ಮ ಬಂಧುಮಿತ್ರರಿಗೂ ಕ್ಷೇಮವೇ ಅಲ್ಲವೇ. ಯಾರೂ ನಮ್ಮನ್ನು ಆಹ್ವಾನಿಸಲಿಲ್ಲ ಎಂದು ಬೇಸರಿಸದಿರಿ. ಅವರು ಕರೆಯಲು ಬರಲಿಲ್ಲ ಎಂದು ಆಕ್ಷೇಪಿಸಬೇಡಿ, ಆಹ್ವಾನಿಸಿದಾಗ ಹೋಗದಿದ್ದಲ್ಲಿ ಪರಿಸ್ಥಿತಿಯನ್ನು ಗಮನಿಸಿ ನಮ್ಮನ್ನು ಕ್ಷಮಿಸಿ ಎಂದು ನೇರವಾಗಿ ಹೇಳಿ. ಈ ದಿನಗಳಲ್ಲಂತೂ ಅದರಿಂದ ಒಳ್ಳೆಯದೇ ಆಗುವುದು. ಅನಿವಾರ್ಯ ಹೊರತು ಹವಾನಿಯಂತ್ರಣ ಅಥವಾ ಎಸಿ ಬಳಸಬೇಡಿ. ಸದ್ಯಕ್ಕೆ ಪಾನೀಪೂರಿ ಅಂಗಡಿಗಳು, ಐಸ್ ಕ್ರೀಮ್ ಪಾರ್ಲರ್ ಭೇಟಿ ಬೇಡ. ಯಾವುದೇ ಹೋಟೆಲ್ ಬೇಡ, ಹೊರಗಡೆಯಿಂದ ತರಿಸಿಕೊಂಡು ತಿನ್ನುವುದು ಬೇಡ. ಹೊರಗಿನಿಂದ ತಂದ ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬಳಸಿರಿ. ದಿನಸಿ ಪದಾರ್ಥಗಳು, ಪ್ಯಾಕೆಟ್ ಇತ್ಯಾದಿಗಳನ್ನು ಕೆಲವು ಸಮಯ ಹೊರಗಿಟ್ಟು ನಂತರ ಬಳಸಿರಿ. ವಿನಾಕಾರಣ ಯಾರನ್ನೇ ಆಗಲಿ ತಬ್ಬಿಕೊಳ್ಳುವುದು, ಹಸ್ತಲಾಘವ ಮಾಡುವುದು, ಬೇಡವೇ ಬೇಡ. ಮನೆಯ ಮುಂದೆ ಬರುವ ತರಕಾರಿ ಹೂವು ಹಣ್ಣು ಇತ್ಯಾದಿಗಳನ್ನು ಮಾರುವವರು ಬಂದಾಗ ಅವರಿಗೆ ಮಾಸ್ಕ್ ಧರಿಸಲು ತಿಳಿಸಿ ಹಾಗೂ ಹಾಗೆ ಧರಿಸದಿದ್ದಲ್ಲಿ ಅವರಲ್ಲಿ ವ್ಯವಹರಿಸಲೇ ಬೇಡಿ. ಎಲ್ಲಾ ಕಡೆ ಕ್ಷೇಮದ ಅಂತರವನ್ನು ಪಾಲಿಸಿ.

ಸಾಮಾಜಿಕ ಮಾಧ್ಯಮಗಳ ಮೂಲಕ ಪಡೆದಿರುವ ಮಾಹಿತಿಗಳನ್ನು ಓದಿಕೊಂಡು ಸ್ವಯಂ ವೈದ್ಯರಾಗಬೇಡಿ. ಅದು ಈ ಕಾಯಿಲೆಯ ತಜ್ಞರು ನೀಡಿದ್ದಲ್ಲ. ಸಾಲದೆಂದು ಮಾಹಿತಿ ಕಳಿಸಿದವರೂ ಅದನ್ನೇ ನಂಬಿರುವುದಿಲ್ಲ. ನಿಮಗೆ ಆರೋಗ್ಯ ಸರಿಯಿಲ್ಲ ಎಂದೆನಿಸಿದರೆ ತಕ್ಷಣ ಪರಿಚಯದ ವೈದ್ಯರನ್ನು ಸಂಪರ್ಕಿಸಿ. ಇಲ್ಲವೇ ಮನೆ ಸಮೀಪದಲ್ಲಿರುವ ವೈದ್ಯರನ್ನು ಭೇಟಿಯಾಗಿ. ಸದ್ಯಕ್ಕೆ ಎಲ್ಲಾ ಪ್ರಯಾಣವನ್ನು ಮುಂದೆ ಹಾಕಿ. ಹೊರಗಿನಿಂದ ಮನೆಗೆ ಬಂದಾಗ ಶರೀರದ ಮೇಲೆ ಕೊರೋನ ಕಣಗಳು ಸಂಗ್ರಹವಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮನೆಗೆ ಬಂದ ಕೂಡಲೇ ಕೈಕಾಲು ಮುಖವನ್ನು ಸೋಪಿನಿಂದ ತೊಳೆದು ಕೊಳ್ಳಿ. ಹೆಚ್ಚು ಕಾಲದವರೆಗೆ ಹೊರಗೆ ಹೋಗಿದ್ದಲ್ಲಿ ಸ್ನಾನ ಮಾಡುವುದೇ ಸೂಕ್ತ. ನಂತರ ಬೇರೆ ಉಡುಪು ಧರಿಸಿ. ಇನ್ನು ಹಳ್ಳಿಯಲ್ಲಿರುವ ಸಂಬಂಧಿಗಳಿಗೆ ಈ ಕೊರೋನ ಬಂದಿಲ್ಲ. ಅಲ್ಲಿ ಆ ಸುದ್ದಿಯೂ ಇಲ್ಲ. ಅದೆಲ್ಲಾ ನಗರಗಳಲ್ಲೇ ಎಂದು ಹೇ ಭಾವಿಸಬೇಡಿ. ಹಳ್ಳಿಯಲ್ಲಿ ಜನಸಂಖ್ಯೆ ಕಡಿಮೆ ಇರುತ್ತದೆ. ವಿಶಾಲವಾದ ಜಾಗ. ಒಬ್ಬರಿಂದ ಒಬ್ಬರಿಗೆ ಕನಿಷ್ಠ ೨೫ಅಡಿ ದೂರ ಸಹಜವಾಗಿರುತ್ತದೆ. ಪೇಟೆಯಲ್ಲಿ ದೊರೆತಂತೆ ಅನಾರೋಗ್ಯದ ತಿನಿಸು ದೊರೆಯುವುದಿಲ್ಲ. ಜನರು ಉತ್ತಮ ದರ್ಜೆಯ ಹೊಸ ತರಕಾರಿ ಸೊಪ್ಪುಗಳು ಇತ್ಯಾದಿ ಆರೋಗ್ಯಕರ ಆಹಾರವನ್ನೇ ತಿನ್ನುವರು. ಆದರೆ ಈ ನಗರದಲ್ಲಿ ಜನಸಂಖ್ಯೆ ಹೆಚ್ಚು. ಬೇಕಾದಲ್ಲಿ ಎಲ್ಲಾ ದರ್ಜೆಯ ಆಹಾರ ದೊರೆಯುತ್ತದೆ. ಪ್ರತಿದಿನ ಬೇರೆ ಕಡೆಗಳಿಂದ ಇಲ್ಲಿಗೆ ಬರುವವರು ಹೆಚ್ಚು. ಕಲುಷಿತ ವಾತಾವರಣ. ಇದೆಲ್ಲವನ್ನೂ ಗಮನಿಸಿ ಮಾತನಾಡಿ. ಕೊರೋನ ಬರದಂತೆ ತೆಗೆದು ಕೊಳ್ಳಬಹುದಾದ ಮುನ್ನೆಚ್ಚರಿಕೆಯನ್ನು ಹೇಳಿದ್ದೇನೆ. ನಾನು ಹೇಳಿದ ವಿಷಯ ಎಲ್ಲರಿಗೂ ಅರ್ಥವಾಗಿದೆ ಎನಿಸುತ್ತದೆ ಎನ್ನುತ್ತಾ ಮುಂದೆ ಕುಳಿತಿದ್ದ ಅತಿ ಹಿರಿಯ ಅಜ್ಜಿಯನ್ನು ನೋಡಿ ಏನಾದರೂ ಅನುಮಾನ ಇದೆಯೇ ಎಂದರು.

ಆ ವಾಚಾಳಿ ಅಜ್ಜಿ ಹೇಳಿದರು, ಇದೇನು ನನಗೆ ಹೊಸತೇನಲ್ಲ ಬಿಡಪ್ಪ. ನಮ್ಮ ಅಜ್ಜ-ಅಜ್ಜಿ ಕಾಲದಿಂದಲೂ ಇದನ್ನೇ ನಡೆಸಿಕೊಂಡು ಬಂದಿದ್ದೇವೆ, ಯಾರು ಮನೆಗೂ ಸುಮ್ಮನೆ ಹೋಗುವುದಿಲ್ಲ. ಅತೀ ಅನಿವಾರ್ಯವಾದರೆ ಹೋಗುವುದು ಅಷ್ಟೇ. ಯಾರನ್ನೂ ಅನಗತ್ಯವಾಗಿ ಮುಟ್ಟುತ್ತಿರಲಿಲ್ಲ. ಯಾರಿಗೆ ಯಾವ ತೊಂದರೆ ಇರುತ್ತದೋ ಯಾರಿಗೆ ಗೊತ್ತು. ನಾವು ಯಾರನ್ನೂ ಮುಟ್ಟದಿರುವುದು, ಇನ್ನೊಬ್ಬರ ವಿಚಾರಕ್ಕೆ ಹೋಗದಿರುವುದು ಅಂದರೆ ಅದು ಮಡಿ, ಇನ್ನೊಬ್ಬರ ವಿಚಾರಕ್ಕೆ ಹೋದರೆ, ಅವರನ್ನು ವಿನಾಕಾರಣ ಮುಟ್ಟಿದರೆ ಮೈಲಿಗೆ ಎನ್ನುತ್ತಿದ್ದೆವು. ಹೊರಗಿನಿಂದ ಬಂದಾಗ ಕೈಕಾಲು ಮುಖ ತೊಳೆಯುವುದು ಸಾಮಾನ್ಯವಾಗಿತ್ತು. ಕೆಲವು ಬಾರಿ ಸ್ನಾನವನ್ನೂ ಮಾಡುತ್ತಿದ್ದೆವು. ಚಪ್ಪಲಿಯನ್ನು ಒಳಗೆ ಸೇರಿಸುತ್ತಿರಲಿಲ್ಲ. ಊಟ ತಿಂಡಿ ತಿನ್ನುವ ಮೊದಲು ಮತ್ತು ಆಮೇಲೂ ಕೈಕಾಲು ತೊಳೆದುಕೊಳ್ಳುತ್ತಿದ್ದೆವು. ೧೫ ದಿನಕ್ಕೊಮ್ಮೆ ಉಪವಾಸ ಮಾಡುತ್ತಿದ್ದೆವು. ದೇವರ ಧ್ಯಾನ ಪೂಜೆ ಮಾಡಿಕೊಂಡಿದ್ದರೆ ನೆಮ್ಮದಿ ಇರುತ್ತದೆ. ಯಾವ ಯೋಚನೆಯೂ ಇರುವುದಿಲ್ಲ. ಯಾವ ಔಷಧಿಯೂ ಬೇಕಾಗಿರಲಿಲ್ಲ. ಇನ್ನು ಕರಿದ ಆಹಾರ ಪದಾರ್ಥಗಳು ಮತ್ತು ಸಿಹಿ ತಿನ್ನದಿದ್ದರೆ ಯಾವ ಕಾಯಿಲೆಯೂ ಬರುವುದೇ ಇಲ್ಲ. ಆದ್ದರಿಂದಲೇ ೮೦‌ ವರ್ಷವಾದರೂ ಹೀಗೆ ಗುಂಡು ಕಲ್ಲಿನ ಹಾಗೆ ಇದ್ದೇನೆ. ಈಗೇನೋ ಎಲ್ಲರಿಗೂ ಏನೋ ಕಾಯಿಲೆ. ಎಲ್ಲಾ ಕಾಯಿಲೆಗೂ ಔಷಧಿ, ಟಾನಿಕ್ ಎನ್ನುತ್ತಾರೆ. ಆ ಕಾಲಕ್ಕೆ ಸದಾ ಬಿಸಿನೀರು. ಬೇಕಾದರೆ ನಿಂಬೆಹಣ್ಣು ಹಿಂಡಿಕೊಂಡು ಕೊಳ್ಳುತ್ತಿದ್ದೆವು. ವಿನಾ ಕಾರಣ ಮಾತನಾಡುತ್ತಿರಲಿಲ್ಲ. ಬಾಯಿ ಮುಚ್ಚಿಕೊಂಡು ಇದ್ದರೆ ಈ ಮಾಸ್ಕ್ ಏಕೆ ಬೇಕು. ಎಲ್ಲರಿಂದಲೂ ಸದಾ ದೂರವೇ ಇರುತ್ತಿದ್ದೆವು. ಹೀಗೆಯೇ ಕೈ ಬಾಯಿ ಶುದ್ಧ ಇಟ್ಟುಕೊಂಡರೆ ಎಂತಹಾ ಕಾಯಿಲೆಯೂ ದೂರವೇ. ಅದೇ ನೀವೂ ಹೇಳುವುದು, ಅದು ಬಿಟ್ಟು ಬೇರೇನೂ ತಿಳಿಯಲಿಲ್ಲ ಎನ್ನೋದೇ. ತಾವು ಹೇಳಿದ ಮಾತುಗಳ ಸಾರಾಂಶ ಕೇಳಿದ ವೈದ್ಯರು ಖುಷಿಯಾದರು. ಈ ಅಜ್ಜಿ ಹೇಳಿದಷ್ಟು ಎಲ್ಲರೂ ಅನುಸರಿಸಿದರೆ ಸಾಕೇ ಸಾಕು ಎನ್ನುತ್ತಾ ವೈದ್ಯರು ನಗುತ್ತಾ ಸಭೆ ಮುಗಿಸಿದರು. ನಮಗೂ, ನಮ್ಮವರಿಗೂ ಕೊರೋನ ಬಗ್ಗೆ ಹೆಚ್ಚು ತಿಳಿಯಿತು. ನೆಮ್ಮದಿ ಆಯಿತು. ಜೊತೆಗೆ ನಾಲ್ಕೇ ಸಾಲಿನಲ್ಲಿ ಹೇಳಿದ ಅಜ್ಜಿ ಮಾತು ಮನಸ್ಸಿನಲ್ಲೇ ಗುನುಗುತ್ತಿತ್ತು.

ಮರುದಿನ ಸಂಜೆ ವೇಳೆಗೆ ಮಿತ್ರ ರಾಜಣ್ಣನಿಂದ ವಿಡಿಯೋ ಕರೆ. ಏನ್ರಯ್ಯಾ ಹೇಗಿದ್ದೀರಿ ಎಂದು ಖುಷಿಯಿಂದ ಮಾತನಾಡಿದ್ದು ನಮಗೆ ಧೈರ್ಯವಾಯಿತು. ಅವನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಅವನೊಂದಿಗೆ ನಮಗೂ ಸಂತೋಷ ತಂದಿತ್ತು. ತಕ್ಷಣಕ್ಕೆ ತನ್ನನ್ನು ನೋಡಲು ಬರಬೇಡಿ ಎನ್ನುತ್ತಾ ತಾನು ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಹೋಗಿದ್ದು, ಮನೆಯವರಿಗೆಲ್ಲಾ ಪರೀಕ್ಷೆ ಮಾಡಿ ಕ್ವಾರಂಟೈನ್ ಎಂದು ದೂರ ಇಟ್ಟಿದ್ದು, ನಂತರ ಅವರಿಗೆಲ್ಲಾ ನೆಗೆಟಿವ್ ರಿಪೋರ್ಟ್ ಬಂದಿದ್ದು, ಅವರಿಗೆ ಕಾಯಿಲೆ ಇಲ್ಲ ಎಂದು ಹೇಳಿದ. ನಾನು ಕಾಯಿಲೆ ಬಂದ ಹಿಂದಿನ ಎರಡು ದಿನಗಳಲ್ಲಿ ಯಾರ್ಯಾರ ಜೊತೆ ಮಾತನಾಡಿದ್ದೆ, ನನ್ನ ಜೊತೆಗೆ ಇದ್ದವರು ಯಾರು ಯಾರು, ಅವರನ್ನೆಲ್ಲಾ ಕರೆಸಿ ಪರೀಕ್ಷಿಸಲಾಯಿತು. ಅದೃಷ್ಟಕ್ಕೆ ಅವರೆಲ್ಲರಿಗೂ ಫಲಿತಾಂಶ ನೆಗೆಟಿವ್ ಬಂದಿತ್ತು. ಅದೊಂದು ಸಮಾಧಾನದ ವಿಷಯ ಎಂದನು. ಆಸ್ಪತ್ರೆಯಿಂದ ಬಿಡುಗಡೆ ಆದಾಗ ವೈದ್ಯರು ಹೇಳಿದಂತೆ "ಪ್ರತಿದಿನವೂ ನಮ್ಮ ದೇಹಕ್ಕೆ ಶಕ್ತಿಬರಲು ಕೆಲವು ವಿಟಮಿನ್ ಬೇಕಾಗುತ್ತದೆ. ಅದನ್ನೆಲ್ಲಾ ಕೊಟ್ಟಿದ್ದೇನೆ. ಜೊತೆಗೆ ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಪ್ರತಿದಿನ ನಾನು ಹೇಳಿದಂತೆ ನೀರು ಕುಡಿಯಬೇಕು, ಯಾವುದೇ ಕಾರಣಕ್ಕೂ ತಣ್ಣೀರು ಕುಡಿಯಬಾರದು, ಹಳೆಯ ಆಹಾರವನ್ನು ಸೇವಿಸಲೇಬಾರದು. ಯಾವುದೇ ಆಹಾರ ಸೇವಿಸುವ ಮೊದಲು 20 ಸೆಕೆಂಡುಗಳ ಕಾಲ ಕೈಗಳನ್ನು ಸಾಬೂನಿನಿಂದ ತೊಳೆಯುವುದು, ಮೇಲಿಂದ ಮೇಲೆ ಬಿಸಿ ನೀರನ್ನು ಕುಡಿಯಬೇಕು, ಎರಡು ಮೂರು ಬಾರಿ ಬಿಸಿ ನೀರಿನಲ್ಲಿ ಉಪ್ಪನ್ನು ಹಾಕಿ ಮುಕ್ಕಳಿಸಬೇಕು, ಕರಿದ ಹಾಗೂ ಸಿಹಿ ಪದಾರ್ಥ ತಿನ್ನಬಾರದು ಎಂದಿದ್ದಾರೆ. ಇದನ್ನು ಬೇರೆಯವರೂ ಅನುಸರಿಸಬೇಕು" ಎಂದನು. ದಿನ ನಿತ್ಯ ನಿಂಬೆ, ಬೆಳ್ಳುಳ್ಳಿ, ಮಾವು, ಕಿತ್ತಳೆ ಸೇವಿಸುವುದರಿಂದ ಕೊರೋನವನ್ನು ದೂರವಿಡಬಹುದು ಎಂದರು, ಎಂದು ತಿಳಿಸಿದನು. ಅಲ್ಲದೆ ನಮಗೇನಾದರೂ ಜ್ವರದ ಲಕ್ಷಣ ಕಾಣಿಸಿದೆ ಎನಿಸಿದರೆ ತಕ್ಷಣ ಪ್ಯಾರಾಸಿಟಮಾಲ್ ಮಾತ್ರೆ, ಉದಾಹರಣೆಗೆ Dolo 650 tablet ತೆಗೆದುಕೊಂಡು, ಬಿಸಿ ನೀರು ಕುಡಿಯುವುದು ಒಳ್ಳೆಯದು. ನಮ್ಮ ಮನೆಯಲ್ಲಿ ಉಳಿದವರು ತುಳಸಿ, ಮೆಣಸು, ಬೆಳ್ಳುಳ್ಳಿ, ಅರಿಷಿಣ, ದೊಡ್ಡ ಪತ್ರೆ, ಶುಂಠಿ ಹಾಕಿ ಕುದಿಸಿದ ಕಷಾಯ ಕುಡಿಯುತ್ತಿದ್ದರಂತೆ. ಅದರಿಂದಾಗಿ ಅವರಿಗೆ ಕೊರೋನ ಎದುರಿಸಲು ಶಕ್ತಿ ಬಂದಿರಬಹುದು ಎಂದನು. ರಾಜಣ್ಣನ ಆತ್ಮ ವಿಶ್ವಾಸದ ಮಾತು ಕೇಳುವುದೇ ಆನಂದ. "ಡೋಂಟ್ ವರಿ, ನಾವ್ಯಾರೂ ಸಾಯಲ್ಲ, ಕೊರೋನ ಬರದಂತೆ ತಡೆಯಬೇಕು, ಹಾಗೂ ಬಂದರೆ ಅದರೊಂದಿಗೆ ಹೋರಾಡೋಣ. ಭಯ ಪಡುವ ಅಗತ್ಯವಿಲ್ಲ. ಕಾಯಿಲೆಗೆ ನಿಶ್ಚಿತ ಔಷಧಿ ಇಲ್ಲದಿರಬಹುದು, ಆದರೆ ಅದರೊಂದಿಗೆ ಹೋರಾಡಿ ಗೆಲ್ಲುವಷ್ಟು ಗೊತ್ತಿದೆ ತಾನೇ. ನನಗೆ ಕೊರೋನ ಬಂದಿತ್ತು ಎಂದಾಕ್ಷಣ ನನ್ನ ಸರತಿ ಮುಗಿಯಿತು ಎಂದೇನಿಲ್ಲ, ಮತ್ತೆ ಬರುವ ಸಂಭವ ಇದ್ದೇ ಇದೆ. ಬರಲಿ ಎದುರಿಸಬಲ್ಲೆ ಎಂಬ ಧೃಡ ವಿಶ್ವಾಸ ಇದೆ" ಎಂದಿದ್ದು ನಮಗೂ ಧೈರ್ಯವೆನಿಸಿತು. ಆದರೆ ಕೊರೋನ ನಿಯಮ ಪಾಲಿಸಿದವರಿಗೆ ಮಾತ್ರ ನಾನು ಹೇಳುವುದು ಅನ್ವಯಿಸುತ್ತದೆ ಎಂದು ಹೇಳಿದಾಗ ತಲೆದೂಗಿದೆವು. ಜೊತೆಗೆ ಅವನು ಆಸ್ಪತ್ರೆಯಲ್ಲಿ ಕಂಡು ಕೇಳಿದ ಅನುಭವಗಳನ್ನು ಹೇಳಿ ನೀಡಿದ ಎಚ್ಚರಿಕೆ ಚಿಂತನಾರ್ಹವಾಗಿದೆ. ದಯವಿಟ್ಟು ಕೊರೋನ ಬರದಂತೆ ಇರುವ SMS ಅಂದರೆ ಸ್ಯಾನಿಟೈಸರ್, ಮಾಸ್ಕ್ ಮತ್ತು ಸೋಷಿಯಲ್ ಡಿಸ್ಟೆನ್ಸ್ ಪಾಲಿಸಿ. ಬೇರೆಯವರಿಗೂ ಪಾಲಿಸಲು ತಿಳಿಸಿ. ನಮ್ಮಲ್ಲಿ ಜವಾಬ್ದಾರಿ ಇರುವ ಯಾರಾದರೂ ಸ್ಯಾನಿಟೈಸರ್ ಪದೇಪದೇ ಹಾಕಿಕೊಳ್ಳುತ್ತಿದ್ದರೆ, ಮಾಸ್ಕ್ ಧರಿಸಿಯೇ ದೂರದಲ್ಲಿ ನಿಂತು ವ್ಯವಹರಿಸುತ್ತಿದ್ದರೆ ಅವರನ್ನು ನೋಡಿ ಆಡಿಕೊಳ್ಳಬೇಡಿ. ಅವರನ್ನು ಅನುಸರಿಸಿ. ಉತ್ತೇಜಿಸಿ. ಎಂದನು.

ಯಾರಿಗೆ ಯಾವಾಗ ಈ ಕಾಯಿಲೆ ಅಂಟುತ್ತದೆ ಎಂದು ಬಲ್ಲಿರಾ. ಪ್ರೀತಿಪಾತ್ರರಾದವರಿಗೆ ಈ ಕಾಯಿಲೆಯ ಸೋಂಕಿತರಾದರೆ, ಅವರನ್ನು ಅನಿವಾರ್ಯವಾಗಿ ಅಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ಅವರ ಜೊತೆ ಇರಲು ಅವಕಾಶವಿರುವುದಿಲ್ಲ. ಅವರೊಂದಿಗೆ ಹೋಗಲಾಗದ ಸ್ಥಿತಿಯನ್ನು ಯೋಚಿಸಿ. ಅವರ ಪಕ್ಕದಲ್ಲಿ ಕುಳಿತು ಅವರ ಕೈಹಿಡಿದುಕೊಳ್ಳಲಾಗದ ನಿಮಗೆ ಸಂಕಟವೆನಿಸುವುದಲ್ಲವೇ? ಆಸ್ಪತ್ರೆಯಲ್ಲಿರುವ ಅವರನ್ನು ನೋಡಬೇಕಾದ ವೇಳೆಯಲ್ಲಿಯೂ ನೋಡಲಾಗದ ಸ್ಥಿತಿ ಹೇಗಿರುತ್ತದೆ? ಆಸ್ಪತ್ರೆಯಲ್ಲಿ ಐಸಿಯು ವಿಭಾಗದಲ್ಲಿರುವ ರೋಗಿಯನ್ನು ನೋಡಲು ಎಲ್ಲರೂ ಹಿಂದೇಟು ಪಡುತ್ತಾರೆ, ಆಗ ಧೈರ್ಯವುಳ್ಳ ಅಲ್ಲಿರುವ ಕೆಲವೇ ಸಿಬ್ಬಂದಿಗಳಿಂದ ನೋಡಿಸಬೇಕಾದ ಸ್ಥಿತಿ ಬಲು ಕಷ್ಟಕರ ಅಲ್ಲವೇ. ಬದುಕೋ, ಸಾವೋ ಎಂದು ವೆಂಟಿಲೇಟರ್ ಮೂಲಕ ಉಸಿರಾಡಿ ಜೀವ ಹಿಡಿದಿಡು ಕೊಳ್ಳಬೇಕಾದ ಸ್ಥಿತಿ. ತಮ್ಮ ಆರೋಗ್ಯ ಹೇಗಿದೆ ಎಂದು ಮೆಸೇಜ್ ಮೂಲಕವೂ ಅವರಿಗೆ ಹೇಳಲಾಗದಿದ್ದರೆ! ಸ್ಥಿತಿ ಘೋರ ಮತ್ತು ಕಲ್ಪನೆಗೂ ಮೀರಿದ್ದು. ರೋಗಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸಿಬ್ಬಂದಿಗೆ ಫೋನ್ ಮಾಡಲಾಗುವುದಿಲ್ಲ, ಅಂತಹ ವೇಳೆಯಲ್ಲಿ ಅಲ್ಲಿ ರೋಗಿಯೊಬ್ಬರೇ. ಆಸ್ಪತ್ರೆಯಲ್ಲಿ ಅವರು ಹೇಗಿದ್ದಾರೆ ಎಂಬುದನ್ನು ಕೇವಲ ಯೋಚಿಸುವ ದಯನೀಯ ಸ್ಥಿತಿ ನಮ್ಮದಾಗಬಾರದು. ಒಮ್ಮೆ ಯೋಚಿಸಿ. ಅಂತಹ ರೋಗಿ ನಮ್ಮ ಬಂಧುಗಳೇ ಆದರೆ ? ನಮ್ಮ ಅತ್ಯಂತ ಪ್ರೀತಿ ಪಾತ್ರದವರೇ ಆದರೆ? ಅಂತಹ ವ್ಯಕ್ತಿ ನಾವೇ ಆದರೆ ಅಥವಾ ನಮಗೇ ಆದರೆ? ಒಮ್ಮೆ ಯೋಚಿಸಲೂ ಭಯಂಕರ ಎನಿಸುತ್ತದೆ ಅಲ್ಲವೆ? ಹಾಗೆ ಹೋದವರು ವಾಪಸ್ ಬರಲಾಗದ ಸ್ಥಿತಿಯಂತೂ ಯಾರಿಗೂ ಬೇಡ. ಬೇಡವೇ ಬೇಡ. ದಯವಿಟ್ಟು ಮನೆಯಲ್ಲೇ ಇರಿ. ಮನೆಯಲ್ಲೇ ಇರಿ. ಹೊರಗೆ ಹೋಗಲೇಬೇಡಿ. ತೀರ ಅಗತ್ಯವಿಲ್ಲದ ಹೊರತು ಹೊರಗೆ ಹೋಗಲೇಬೇಡಿ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಮತ್ತು ನಮ್ಮ ಕುಟುಂಬದವರನ್ನು ಕಾಪಾಡಿಕೊಳ್ಳಲು ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕು. ಈ ಕಾಯಿಲೆಯ ಬಗ್ಗೆ ಅರಿವಿರಲಿ, ಭಯ ಬೇಡ. ಆಂತರಿಕ ವಿಶ್ವಾಸವೇ ಏನನ್ನೂ ಎದುರಿಸಲು ಸಾಧ್ಯ ಮಾಡುತ್ತದೆ. ಇದು ನಮಗೂ ಹಿತ ಬೇರೆಯವರಿಗೂ ಸಹ, ಏನಂತೀರಿ ಎಂದ ರಾಜಣ್ಣನ ಮಾತು ಕಠೋರವೆನಿಸಿತು. ಆದರೆ ಅವನ ಜನಪರ ಕಾಳಜಿ ಅನನ್ಯ. ಶ್ಲಾಘನೀಯ.

ಹಾಗೆ ನೋಡಿದರೆ ಮಾಧ್ಯಮಗಳ ಪ್ರಕಾರ ಆಸ್ಪತ್ರೆಗಳಲ್ಲಿ ಎಲ್ಲಾ ರೋಗಿಗಳಿಗೂ ಹಾಸಿಗೆ ಸಿಗುತ್ತಿಲ್ಲ, ಐಸಿಯು ತುಂಬಿದೆ. ಹಲವು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಾಕಾಗುತ್ತಿಲ್ಲ, ಈ ರೋಗಿಗಳಿಂದಾಗಿ ಬೇರೆ ಮಾಮೂಲಿ ರೋಗಿಗಳಿಗೂ ಕಷ್ಟವಾಗುತ್ತಿದೆ, ಕೊರೋನ ಒಬ್ಬರಿಗೆ ಬಂದರೆ ಮನೆಯವರೆಲ್ಲರೂ ನರಕ ಅನುಭವಿಸಬೇಕಾಗುತ್ತದೆ. ಇದರಿಂದಾಗಿ ನಮ್ಮ ಅಕ್ಕಪಕ್ಕದವರ ಮನೆಯವರ ನೆಮ್ಮದಿಯೂ ಕೆಡುತ್ತದೆ. ಚಿಕಿತ್ಸೆಗೆ ಔಷಧವಿಲ್ಲವಂತೆ. ಯಾರಾದರೂ ಕೊರೋನದಿಂದ ಮೃತರಾದರೆ ಆ ದೇಹವನ್ನು ಸಂಸ್ಕಾರಕ್ಕಾಗಿ ಕೊಡುವುದಿಲ್ಲ. ನೋಡಲೂ ಬಿಡುವುದಿಲ್ಲ. ಸರ್ಕಾರಿ ಇಲಾಖೆಯವರೇ ಸಂಸ್ಕಾರ ಮಾಡುತ್ತಾರೆ. ಆಕಸ್ಮಿಕವಾಗಿ ನಮ್ಮ ಮನೆಗೇ ಭೇಟಿ ಕೊಟ್ಟವರು ಬೇರೆ ಮೂಲದಿಂದ ಕಾಯಿಲೆ ಬಂದು ನರಳಿದರೆ ಅಥವಾ ಮೃತರಾದರೆ ಅವರ ಮನೆಯವರು, ತಮ್ಮ ಆಪ್ತರನ್ನು ಕಳೆದುಕೊಂಡ ಸಂಕಟದಲ್ಲಿ, ಜೀವನ ಪರ್ಯಂತ ನಮಗೆ ಹಿಡಿಶಾಪ ಹಾಕುತ್ತಿರುತ್ತಾರೆ. ಇನ್ನು ಸುತ್ತಮುತ್ತ ಗಮನಿಸಿದರೆ ಹತ್ತು ಲಕ್ಷ ಜನರಲ್ಲಿ ಲಾಟರಿಯಲ್ಲಿ ಒಬ್ಬರಿಗೇ ಬಹುಮಾನ ಬರುವ ಸಾಧ್ಯತೆ ಇದ್ದರೂ ಅದು ತನಗೇ ಬರುತ್ತದೆ ಎಂದು ಪೂರ್ಣವಾಗಿ ನಂಬಿಕೊಳ್ಳುವ ಅದೇ ಜನರು ಹತ್ತು ಲಕ್ಷ ಜನರಲ್ಲಿ ಪ್ರತಿಯೊಬ್ಬರಿಗೂ ಈ ಕಾಯಿಲೆ ಬರುವ ಸಾಧ್ಯತೆ ಇದ್ದರೂ ಅದು ತನಗೆ ಬರುವುದೇ ಇಲ್ಲ ಎಂದು ದೃಢವಾಗಿ ನಂಬಿರುವುದು ಅತ್ಯಂತ ಸೋಜಿಗದ ಸಂಗತಿ. ಹೀಗೆ ಹತ್ತು ಹಲವು ಯೋಚನೆಗಳು ಮನಸ್ಸಿನಲ್ಲಿ ತೇಲಾಡುತ್ತಿವೆ. ಈ ಬಗ್ಗೆ ಲೇಖನವೊಂದನ್ನು ಬರೆಯೋಣ ಎಂದುಕೊಂಡೇ ವರ್ಷವೊಂದು ಮುಗಿಯಿತು. ಈ ವೇಳೆಯಲ್ಲೇ ನನ್ನಂತೆಯೇ ಇವೆಲ್ಲವನ್ನೂ ಯೋಚಿಸಿದ ನಮ್ಮ ಬಂಧುಗಳೂ ಮಿತ್ರರೂ ಆಗಿರುವ ಶ್ರೀ ಎಸ್. ಗುಂಡೂರಾವ್ ರವರು ಈ ಬಗ್ಗೆ ಬರೆಯಲು ಪ್ರೆರೇಪಿಸಿದರು. ಸಮಾಜದ ಬಗ್ಗೆ ಅವರಿಗಿರುವ ಕಳಕಳಿಯು ಸಮಯೋಚಿತವಾಗಿ ಈ ಲೇಖನ ಬರೆಯಲು ಅವಕಾಶವಾಯಿತು. ಇದಕ್ಕಾಗಿ ಅವರಿಗೆ ಕೃತಜ್ಞನಾಗಿದ್ದೇನೆ. ನಿಮ್ಮ ಬಗ್ಗೆ ನೀವು ದಯೆ ತೋರಿಯಾದರೂ ಕೊರೋನ ನಿಯಮ ಪಾಲಿಸಿ . ಕೆಲವು ಎಚ್ಚರಿಕೆಗಳ ಅಂಶಗಳನ್ನು ಉದ್ದೇಶ ಪೂರ್ವಕವಾಗಿ ಪುನರಾವರ್ತನೆಯಾಗಿ ಲೇಖನದಲ್ಲಿ ಪ್ರಸ್ತಾಪಿಸಲಾಗಿದೆ. ಇದು ಎಚ್ಚರಿಕೆಯ ಪಾಲನೆಗೆ ಆಗ್ರಹಿಸಲು ಎಂದು ಭಾವಿಸಿರಿ. ನಗರದಲ್ಲಿನ ಅನುಭವದಿಂದ ಬರೆದ ಲೇಖನವಾದ್ದರಿಂದ ಹಲವಷ್ಟು ವಿಷಯಗಳು ನಗರಕ್ಕೆ ಹೊಂದಬಹುದಾದರೂ ಸಮಸ್ಯೆ ಮತ್ತು ಪರಿಹಾರದ ವಿಚಾರಗಳಲ್ಲಿ ಎಲ್ಲಾ ಪ್ರದೇಶಗಳ ಓದುಗ ಬಂಧುಗಳಿಗೆ ಅನ್ವಯವಾಗುತ್ತದೆ ಎಂದು ನಂಬಿದ್ದೇನೆ. ಓದುಗರಾದ ತಮ್ಮ ಮತ್ತು ತಮ್ಮ ಕುಟುಂಬವು ಇದನ್ನು ಕಡ್ಡಾಯವಾಗಿ ಅನುಸರಿಸಿದರೆ ಅಷ್ಟರಮಟ್ಟಿಗೆ ಮಾನವ ಕುಲದ ಉಳಿವಿಗೆ ಸಹಾಯಕವಾಗುತ್ತದೆ. ತಾವೆಲ್ಲರೂ ಸುಖದಿಂದ ಆರೋಗ್ಯ ನೆಮ್ಮದಿಗಳಿಂದ ಇದ್ದರೆ ಈ ಲೇಖನ ಸಾರ್ಥಕ. ಇದು ಲೇಖಕನ ಆಶಯವೂ ಹೌದು.

ಸರ್ವೇ ಜನಾಃ ಸುಖಿನೋ ಭವಂತು

ಜಗತ್ತಿನಲ್ಲಿರುವ ಎಲ್ಲರೂ ಸುಖವಾಗಿರಲಿ ಎಂದು ಆಶಿಸಿದಾಗ ಅವರಲ್ಲಿನ ನಾನೂ ಸುಖವಾಗಿಯೇ ಇರುತ್ತೇನೆ ಎಂದರ್ಥ. ಆದ್ದರಿಂದ ಎಲ್ಲರೂ ಸುಖವಾಗಿರಲಿ ಎಂಬ ಅಪೇಕ್ಷೆಯಿಂದ ಈ ಲೇಖನದ ವಿಷಯವನ್ನು ಹಂಚಿಕೊಳ್ಳಿ.

Comments

  1. ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ನಿರೂಪಿಸಿದ್ದೀರಿ.ಮುಂಜಾಗ್ರತೆಯೇ ಈ ಖಾಯಿಲೆಗೆ ಔಷಧಿ ಎಂದು ತಿಳಿಸಿದ್ದೀರಿ.ಧನ್ಯವಾದಗಳು.

    ReplyDelete
  2. ಅಂಕಣ ದ ಕತೆ ವಸ್ತವತೆಗೆ ಹತ್ತಿರ ವಾಗಿದೆ ಒಳ್ಳೆ ಮೆಸೇಜ್ ಇದೆ ಅದರಲ್ಲೊ ಮನೆಯಲ್ಲಿ ಸರಳ ವಾಗಿ ಮಾಡಬಹುದಾದ ಔಷದ ಕ್ಕೆ ಧನ್ಯವಾದಗಳು

    ReplyDelete
  3. This article brings out how we can all save ourselves and also save others by following such simple safety tips. As our honorable prime minister said this carona will not attack anyone on its own and it is we ourselves who invite and embrace it without bothering to follow small safety tips. We should always be careful and remain confident and follow medication in case we are affected by carona disease. As they say majority of cases do not need hospitalisation and early symptomatic treatment will avoid further serious situation. When everyone rush to hospitals then whole system will crumble and only needy serious affected persons should be admitted. Everyone should thinkabout welfare of society and not indulge in money making using helpness of general public. More than anything we should have faith in God and think positively that this will also pass and look forward for better tomorrow. Actually me my wife son and daughter in law have been tested positive and with god's grace we have crossed 8 days with mild symptoms and hopefully comeout of this in next few days.

    ReplyDelete
  4. ಈ ವೀರಸ್ ಬಗ್ಗೆ ಸರಿಯಾಗಿ ತಿಳಿಯದ ನಮಗೆ ಬಹಳ ಉತ್ತಮವಾದ ಲೇಖನ ಧನ್ಯವಾದಗಳು

    ReplyDelete
  5. Very well written article, also very informative. Much needed article in the present times. Very good narration with incidents included. Thank you KBR.

    ReplyDelete
  6. ವರ್ತಮಾನದಲ್ಲಿ ಈ ಲೇಖನವು ಓದುಗರ ಮೇಲೆ ತುಂಬಾ ಪರಿಣಾಮಕಾರಿಯಾಗಲಿದೆ. ವಿದ್ಯಾವಂತರೆಂದು ಬೀಗುತ್ತಿರುವ ತಿಳುವಳಿಕೆಯುಳ್ಳವರೆ ತಪ್ಪುಗಳನ್ನು ಮಾಡುತ್ತಿರುವುದು ದುರಾದೃಷ್ಟಕರ. ಸರಕಾರದ ವತಿಯಿಂದ ಸಲಹೆ ಸೂಚನೆಗಳು ಸಕಾಲದಲ್ಲಿ ಬಂದರೂ ಕೂಡ, ಅದನ್ನು ಪಾಲಿಸದೆ ಇರುವುದು, ನಮಗೆ ನಾವೇ ಹಳ್ಳವನ್ನು ತೋಡಿಕೊಂಡು ನಾವೇ ಅದರಲ್ಲಿ ಬಿದ್ದಂತೆ ಅನ್ನಿಸುತ್ತದೆ. ಲೇಖಕರು ಅನೇಕ ಉದಾಹರಣೆಗಳೊಂದಿಗೆ, ಈ ಕೋರೋನ ಮಹಾ ಮಾರಿಯ ತೀವ್ರತೆಯ ಬಗ್ಗೆ ವಿವರಿಸಿರುವುದು ಶ್ಲಾಘ ನೀಯ. ಧನ್ಯವಾದಗಳು. ನಂಜಪ್ಪ. ಸಿ. ಎನ್.

    ReplyDelete
  7. Nice article Ramachandraji. As some one who knows a little about infectious disease, virology and immunology I would like to request everyone eligible to take vaccine and maintain a healthy lifestyle. If you are vaccinated and you contract COVID then it is wise to just live it out. Vaccinated individuals and younger adults have low chances of developing SARS, so flu like care and quarantining is the best way to deal with the infection. Panicking and rushing to hospitals will just lead to more troubles. Vaccines are a true blessing and the zenith of human ingenuity, having it at our disposal should instill hope. Pandemic might not end any time soon and no human or God can control it now but being vaccinated I am certainly fear less of this unseeable but known adversity.

    ReplyDelete
  8. Thank you kbr sir..very well written

    ReplyDelete
  9. ಅತ್ಯುತ್ತಮ ನಿರೂಪಣೆ. ಧನ್ಯವಾದಗಳು🙏🙏

    ReplyDelete
  10. ಯಥಾ ರೀತಿ ನಿಮ್ಮ ಬರವಣಿಗೆ ಸುಲಲಿತವಾಗಿ ಓದುಗರ ಸೆರೆ ಹಿಡಿಯುತ್ತದೆ. ಇನ್ನು ವಿಚಾರ ಮಂಡನೆ ಸಮರ್ಪಕವಾಗಿದೆ. ಹಿರಿಯರು ಅನುಸರಿಸುತ್ತಿದ್ದ ನೈರ್ಮಲ್ಯ ಪದ್ದತಿ ಹಾಗೂ ಇಂದಿನ ಅವಶ್ಯಕ ಮುಂಜಾಗ್ರತಾ ಕ್ರಮಗಳು. ಈ ಕಠಿಣ ಪರಿಸ್ಥಿತಿಯಲ್ಲಿ ಬಂಧುಗಳಿಗೆ ಸ್ನೇಹಿತರಿಗೆ ಮಾಡಬಹುದಾದ ಸಹಾಯ ಚನ್ನಾಗಿ ತಿಳಿಸಿದ್ದೀರಿ. ಸರ್ಕಾರದ ವೈಪಲ್ಯ ಗೊಂದಲಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೀರಿ.
    ಉಪಯುಕ್ತ ಲೇಖನ ಧನ್ಯವಾದಗಳು. ನಿಮ್ಮಿಂದ ಇನ್ನು ಹೆಚ್ಚು ಬರವಣಿಗೆಯ ನಿರೀಕ್ಷೆ ನನಗಿದೆ. ನಮಸ್ಕಾರ.

    ReplyDelete


  11. ಕೊರೋನ ಸಂಕ್ರಾಮಿಕದ ವಿಚಾರ ವಿಸ್ತೃತ ವಾಗಿ ತಿಳಿಸಿದ್ದೀರಿ. ಎಲ್ಲಾ ಮುಂಜಾಗರೂಕತೆ ತೆಗೆದುಕೊಂಡಿದ್ದಾಗಲು, ಹ್ಯಾಗೋ ಗುಪ್ತಗಾಮಿನಿ ಯಾಗಿ ಅಂಟಿಕೊಳ್ಳುತ್ತದೆ. ನನ್ನ ಮಗನಿಗೆ ಇದು
    ಬಂದಾಗಲೇ ನನ್ನ ಅನುಭವಕ್ಕೆ ಬಂದಿ ದ್ದು
    ಹೇಗೂ ನಿಮ್ಮ ಲೇಖನಕ್ಕೆ ಧನ್ಯವಾದಗಳು
    ಇತ್ತೀಚೆಗೆ ಆಂಧ್ರ ದಲ್ಲಿ ೧೦೫ ವರ್ಷದ ವೃದ್ದೆ
    ಚೇತರಿಸಿಕೊಂಡಿದ್ದು ಅವರು ಧೈರ್ಯ ವಾಗಿ
    ಎದುರಿಸಿದ್ದು ನೋಡಿ ದರೆ ಅವರಿಗಿರುವ ಆತ್ಮಸ್ಥೈರ್ಯಕ್ಕೆ ಬೆರಗಾಗುತ್ತೇನೆ.

    ReplyDelete
  12. ಸರ್ವಸಮರ್ಪಕವಾದ, ಮಾಹಿತಿಯುಕ್ತ, ಸುಲಭವಾಗಿ ಓದಿಸಿಕೊಂಡುಹೋಗುವ ಲೇಖನ.

    ಈ ಸಾಂಕ್ರಾಮಿಕ ರೋಗವು ಏರುತ್ತಿದ್ದಾಗ ಸಮಾಜದ ಬಗೆಗಿನ ಕಾಳಜಿಯಿಂದ ಶ್ರಮವಹಿಸಿ, ಮಾಹಿತಿ ಸಂಗ್ರಹಿಸಿ ಈ ಲೇಖನವನ್ನು ತಯಾರಿಸಿದ್ದೀರಿ. ವೆರಿ ವೆಲ್‌ ಡನ್!

    ಅಜ್ಜಿ ಅವರ ಮೂಲಕ ನಮ್ಮ ಸಮಾಜದಲ್ಲಿ ಹಿಂದಿನಿಂದ ಮನೆಮಾಡಿದ್ದ ಕೆಲವು ಆಚರಣೆಗಳ ಮಹತ್ವವನ್ನು ಮನಮುಟ್ಟುವಂತೆ ಬಿಂಬಿಸಿದ್ದೀರಿ.

    ಒಂದು ಮಾತು......

    ಪ್ಯಾರಾಸೆಟಮೋಲ್‌ ಮಾತ್ರೆಗಳು ಈ ಬೇನೆಯನ್ನು ನಿವಾರಿಸಲು ಅಲ್ಲ. ಜ್ವರದ ತೀವ್ರತೆಯನ್ನು ತಗ್ಗಿಸಲು, ಅಷ್ಟೇ.
    ಈ ಪಾಯಿಂಟ್‌ ಮೇಲೆ ಕಂಡುಬರಲಿಲ್ಲ, ಅದಕ್ಕೆ ಕಾಣಿಸಬೇಕಾಯಿತು.

    ReplyDelete

Post a Comment