ನಮ್ಮೆಲ್ಲರಿಗೂ ಗೊತ್ತಿದ್ದಂತೆ ಗುರು ಪೂರ್ಣಿಮಾ ಕಾರ್ಯಕ್ರಮ ವರ್ಷದಲ್ಲಿ ನಡೆಯುವ ಆಚರಣೆಗಳಲ್ಲೊಂದು. ಹಾಗೆಯೇ ನಿಮ್ಮ ಗುರುಗಳ ಬಗ್ಗೆ, ಅವರಿಂದ ಆದ ಸಹಾಯವನ್ನು ಯೋಚಿಸಿ ಎಂದು ಅವಕಾಶ ಕೊಟ್ಟಾಗ ನಮ್ಮ ತಲೆಯಲ್ಲಿ ಬರುವುದು ಯಾವ ಶಿಕ್ಷಕರು ಹೇಗೆ ಶಿಕ್ಷಿಸಿದರು, ಅವರ ಗುಣ, ಅವಗುಣ, ದೌರ್ಬಲ್ಯಗಳ ಬಗ್ಗೆ ನಮ್ಮ ಮನಸು ಓಡುತ್ತದೆ. ಆದರೆ ಅವರಿಂದ ಉಪಕೃತ ವಿಷಯಗಳು ಏಕೋ ನೆನಪಿಗೆ ಬರುವುದಿಲ್ಲ. ಇಂತಹಾ ಅನುಭವಗಳು ನನಗಿದ್ದರೂ ನನ್ನನ್ನು ತಿದ್ದಿ ತೀಡಿದ, ಅವಕಾಶವಿದ್ದಾಗ ಪೋಷಕರ ಸ್ಥಾನದಲ್ಲಿ ನಿಂತು ಸಹಾಯ ಮಾಡಿದ ಚೈತನ್ಯಶೀಲರಾದ ಶಿಕ್ಷಕರೊಬ್ಬರು ನನ್ನ ಗುರುಗಳ ಸ್ಥಾನದಲ್ಲಿದ್ದಾರೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ. ಇಂತಹ ಎರಡು ಅನುಭವಗಳನ್ನು ಇಲ್ಲಿ ಚರ್ಚಿಸಿದ್ದೇನೆ.
ಎಸ್ಸೆಸ್ಸೆಲ್ಸಿ ನಂತರದ ಆ ದಿನಗಳು. ಹುಟ್ಟೂರಿನಿಂದ ದೂರವಿದ್ದ ನಗರದಲ್ಲಿ ತಾಂತ್ರಿಕ ತರಬೇತಿಗಾಗಿ ಓದುತ್ತಿದ್ದೆ. ಅಲ್ಲಿಗೆ ಹತ್ತಿರವಿದ್ದ ಹಳ್ಳಿಯ ಬಂಧುಗಳ ಮನೆಯಲ್ಲಿ ನನ್ನ ವಾಸ. ನನಗೆ ಊರಿಗೆ ಹೋಗಬೇಕೆಂಬ ಆಸೆ ಇದ್ದಾಗಲೇ ಗಣೇಶನ ಹಬ್ಬ ಹತ್ತಿರವಾಯಿತು. ಹಬ್ಬಕ್ಕೆ ಭಾನುವಾರವೂ ಸೇರಿದಂತೆ ಎರಡೇ ದಿನಗಳು ರಜೆ ಇದ್ದರೂ ಶಿಕ್ಷಕರ ವಿಶೇಷ ಅನುಮತಿ ಮೇರೆಗೆ ಇನ್ನೆರಡು ದಿನ ರಜೆಯ ಅವಕಾಶ ಪಡೆದೆ. ಊರಿಗೆ ಬಂದ ನನಗೆ ಹಬ್ಬದ ನಂತರ ಪುನಃ ನಗರಕ್ಕೆ ಹೋಗಲು ಮನಸ್ಸೇ ಆಗುತ್ತಿರಲಿಲ್ಲ. ಜೊತೆಗೆ ಎರಡು ದಿನಗಳು ಇದ್ದು ಮುಂದಿನ ಹಬ್ಬವನ್ನೂ ಮುಗಿಸಿಕೊಂಡು ಹೋಗಲು ಪೋಷಕರು ಹೇಳಿದ್ದು ಒಂದು ರೀತಿಯಲ್ಲಿ ಸಂತೋಷ ತಂದಿತ್ತು. ವಾಸ್ತವವಾಗಿ ಅವರು ಹಾಗೆ ಹೇಳಲು ನನ್ನನ್ನು ನಗರಕ್ಕೆ ಕಳುಹಿಸಲು ಬಸ್ ಚಾರ್ಜ್ ಗೆ ಅವರಲ್ಲಿ ಹಣವಿರಲಿಲ್ಲ. ನಾಲ್ಕು ದಿನ ತಡೆದರೆ ಬೇರೆ ವ್ಯವಸ್ಥೆ ಆಗಬಹುದು ಎಂಬ ನಂಬಿಕೆ ಅವರದು. ಆದರೆ ಅದು ನನಗೆ ಸಂತಸ ತಂದ ವಿಷಯವಾಗಿತ್ತು. ತವರಿಗೆ ಬಂದ ಮಗಳಂತೆ ನಾನೂ ನಿಶ್ಚಿಂತೆಯಿಂದ ಇದ್ದೆ. ಅದೂ ಇದೂ ತಮಾಷೆ ಮಾತಾಡಿಕೊಂಡು ಸಮಯ ಕಳೆದಿದ್ದು ತಿಳಿಯಲಿಲ್ಲ. ದಸರಾ ಮುಗಿಯಿತು.
ನಾಳೆ ಹೋಗೋಣ ನಾಡಿದ್ದು ಹೋಗೋಣ ಎಂಬುವುದರಲ್ಲಿ ದೀಪಾವಳಿ ಸಹಾ ಮುಗಿಯಿತು. ಯಾಕೋ ಇದ್ದಕ್ಕಿದ್ದಂತೆ ಶಾಲೆಯ ಬಗ್ಗೆ ಯೋಚನೆ ಬಂತು. ಒಂದು ವಾರಕ್ಕಿಂತ ಹೆಚ್ಚು ಆಬ್ಸೆಂಟ್ ಆದರೆ ಡಿಬಾರ್ ಮಾಡಿ ಮನೆಗೆ ಕಳುಹಿಸುತ್ತೇವೆ ಎಂದು ಶಿಕ್ಷಕರು ಸಹಪಾಠಿಯೊಬ್ಬನಿಗೆ ಅವನು ಅನಧಿಕೃತ ಒಂದು ವಾರದ ರಜೆಯ ನಂತರ ಶಾಲೆಗೆ ಬಂದಿದ್ದಾಗ ಹೇಳಿದ್ದು ನೆನಪಾಯಿತು. ನನಗೂ ಹಾಗೆ ಹೇಳುತ್ತಾರೆ ಎಂಬ ಭಯ ಶುರುವಾಯಿತು. ಮೂರು ತಿಂಗಳಿಂದ ಇದ್ದ ನೆಮ್ಮದಿ ಆ ನಿಮಿಷದಿಂದ ಪೂರ್ತಿ ಕೆಟ್ಟಿತು. ಈ ದಿನವೇ ನಾನು ಹೊರಡಲೇ ಬೇಕೆಂಬ ನನ್ನ ಹಠದ ಅಳು ಕಂಡಾಗ ತಂದೆಯವರು ಹೇಗೋ ಬಸ್ ಚಾರ್ಜ್ ಹಣದ ವ್ಯವಸ್ಥೆ ಮಾಡಿದರು. ಶಾಲೆಯಿರುವ ನಗರಕ್ಕೆ ಮೂರು ಗಂಟೆಗಳ ಪ್ರಯಾಣ. ಹೊರಟೇಬಿಟ್ಟೆ. ನಗರ ತಲುಪಿದಾಗ ಸಂಜೆ ಆರು ಗಂಟೆ ಆಗಿತ್ತು. ಬಸ್ ಶಾಲೆಯ ಮುಂಭಾಗವನ್ನು ಹಾದು ಹೋದಾಗ ಏನೋ ದುಗುಡ, ಗಾಬರಿ. ಕಳೆದ ಮೂರು ತಿಂಗಳಿಂದ ಶಾಲೆಗೆ ಹೋಗದಿದ್ದುದರ ಬಗ್ಗೆ ಕಾರಣ ಕೇಳುತ್ತಾರೆ, ಪ್ರಾಂಶುಪಾಲರಿಂದ ಶಿಕ್ಷೆಗೆ ಒಳಪಡಬೇಕಾಗುತ್ತದೆ, ಶಾಲೆ ಬಿಟ್ಟು ಮುಂದೇನು ಮಾಡುವುದು? ಹೀಗೆ ಏನೇನೋ ಸಂಭವನೀಯ ಘಟನೆಗಳ ಅಗೋಚರ ಆತಂಕ. ಈ ಚಿಂತೆಯಲ್ಲೇ ನೇರವಾಗಿ ನಗರದಲ್ಲಿರುವ ಶಿಕ್ಷಕರ ಮನೆಗೆ ಹೋದೆ. ನನ್ನನ್ನು ನೋಡುತ್ತಿದ್ದಂತೆಯೇ ಕೋಪದಿಂದ ನೀನು ಎರಡು ದಿನದಲ್ಲಿ ಬರುತ್ತೇನೆಂದು ಹೋದವನು ಈ ದಿನ ಮುಖ ತೋರಿಸುತ್ತಿದ್ದೀಯ. ಎಲ್ಲಿಗಯ್ಯಾ ಹೋಗಿದ್ದೆ? ನಿನಗೆ ಅನುಮತಿ ಕೊಟ್ಟಿದ್ದಕ್ಕೆ ನನಗೆ ಕೆಟ್ಟ ಹೆಸರು. ನಿನ್ನನ್ನು ಶಾಲೆಯಿಂದ ಡಿಬಾರ್ ಮಾಡುವ ಪತ್ರ ತಯಾರಿದೆ. ನಾಳೆ ತೆಗೆದು ಕೊಂಡು ಹೋಗು ಎಂಬ ಅವರ ನಿಷ್ಠುರ ಮಾತಿಗೆ ನನ್ನ ಜಂಘಾಬಲವೇ ಉಡುಗಿ ಹೋಯಿತು. ಕಣ್ಣೀರಿನೊಂದಿಗೆ ಇನ್ನಿಲ್ಲದ ಪ್ರಾರ್ಥನೆ ಮಾಡಿದೆ. ನಂತರ ಬೈಗುಳದೊಂದಿಗೆ, ನನ್ನ ಕೈನಲ್ಲಿ ಏನಿಲ್ಲ, ಶಾಲೆಯ ಫೋರ್ಮನ್ ಸಾಹೇಬರ ಬಳಿ ಹೋಗಿ ಆರೋಗ್ಯ ಸರಿ ಇರಲಿಲ್ಲ ಎಂದು ಹೇಳಿ ಪ್ರಾರ್ಥನೆ ಮಾಡು, ನೋಡೋಣ, ಎಂದು ಕಳಿಸಿದರು. ಅವರ ಮನೆಯ ಅಡ್ರೆಸ್ ಕೇಳಿಕೊಂಡು ಸೀದಾ ಅವರ ಮನೆಗೆ ಹೋದೆ. ನನ್ನ ಬಗ್ಗೆ ಎಲ್ಲಾ ಗೊತ್ತಿದೆ ಎಂಬ ಬೈಗುಳದ ನಿರೀಕ್ಷೆಯಲ್ಲಿ ಅವರು ಏನೆಂದು ಕೇಳುವ ಮೊದಲೇ ಧೀರ್ಘ ದಂಡ ನಮಸ್ಕಾರ ಮಾಡಿದೆ, ಅವರ ಕಾಲು ಹಿಡಿದುಕೊಂಡು ಅಳುತ್ತಾ ನನ್ನದು ತಪ್ಪಾಗಿದೆ ಕ್ಷಮಿಸಿ ಎಂದು ಹೇಳಿದೆ. ಅವರಿಗೋ ನಾನು ಯಾರು, ಏನು ಪರಿಸ್ಥಿತಿ, ಏಕೆ ನಮಸ್ಕಾರ ಎಂದು ತಿಳಿಯಲೊಲ್ಲದು. ನಂತರ ನನ್ನ ಹೆಸರು ವಿಷಯ ಅರಿತು ತುಂಬಾ ದಾಕ್ಷಿಣ್ಯಕ್ಕೊಳಗಾದರು. ಕೆಲವು ಕಟುವಾಕ್ಯಗಳ ನಂತರ, ಇರಲಿ, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಹಾಯ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದು ನನಗೆ ಸಮಾಧಾನ ಆಗಲಿಲ್ಲ, ನನ್ನ ಕಣ್ಣೀರು ನಿಲ್ಲಲಿಲ್ಲ. ಅವರೇ ಒಳಗಿನಿಂದ ಚಹಾ ತಂದು ಕೊಟ್ಟು ಸಮಾಧಾನ ಹೇಳಿದರು. ಶಾಲೆಗೆ ನಾಳೆ ಬಾ, ನೋಡೋಣ ಎಂದಿದ್ದು ಒಂದು ಮಟ್ಟದ ನೆಮ್ಮದಿ ತಂದರೂ ಆತಂಕವೇನೂ ಕಡಿಮೆಯಾಗಲಿಲ್ಲ. ಗೊತ್ತಿರುವ ಎಲ್ಲಾ ದೇವರ ಪ್ರಾರ್ಥನೆ ಮಾಡಿಕೊಳ್ಳುತ್ತಾ ಹತ್ತಿರದಲ್ಲಿದ್ದ ಹಳ್ಳಿಯ ಮನೆಗೆ ಹೋದೆ. ಅಲ್ಲಿಯೂ ತಡವಾಗಿ ಊರಿಗೆ ಬಂದಿದ್ದಕ್ಕೆ ಕಾರಣ ಹೇಳಬೇಕಾಯಿತು.
ಮರುದಿನ ಬೆಳಿಗ್ಗೆ ಶಾಲೆ ತೆರೆಯುವ ಮುನ್ನವೇ ನಾನು ಶಾಲೆಯ ಬಾಗಿಲ ಬಳಿ ಕಾಯುತ್ತಿದ್ದೆ. ಅವರು ಬರುವುದು ಎಂದಿಗಿಂತ ಸ್ವಲ್ಪ ತಡವಾಯಿತು. ನನ್ನ ಆತಂಕ ಹೇಳಲಾರೆ. ಶಾಲೆಗೆ ತಪ್ಪದೆ ಬರುತ್ತಿರುವ ಹಲವು ಸಹಪಾಠಿಗಳ ನೋಟ, ಕೆಲವರ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲವೆಂದು ಹೊರಟ ಹಲವರು. ಹೀಗೆಯೇ ಕೆಲವು ನಿಮಿಷಗಳ ನಂತರ ಸಾಹೇಬರ ಪ್ರವೇಶವಾಯಿತು. ಏನೂ ಮಾತನಾಡದೆ ಒಳ ಹೋಗಿದ್ದು ನನ್ನ ಕಳವಳ ಹೆಚ್ಚಿಸಿತು. ಕೆಲವು ಸಮಯದ ನಂತರ ಪ್ರಾಂಶುಪಾಲರಿಂದ ಕರೆ ಬಂದಿತು. ವಿಚಾರಣೆ, ವಿವರಣೆ, ವಾಗ್ದಂಡನೆ ಮತ್ತು ಬುದ್ಧಿವಾದ ಎಲ್ಲವೂ ಮುಗಿಯಿತು. ಅಂತೂ ವಿವಿಧ ಅಧಿಕಾರಿಗಳನ್ನು ಕಂಡು ನನ್ನ ತಪ್ಪು ತಿದ್ದಿ ಕೊಳ್ಳುವ ಬಗ್ಗೆ ಆಶ್ವಾಸನೆ, ಪ್ರಾರ್ಥನೆಗಳನ್ನು ಮುಗಿಸಿ ಮನವೊಲಿಸುವ ವೇಳೆಗೆ ಮಧ್ಯಾಹ್ನವಾಗಿತ್ತು. ಆಗಾಗ ಮನಸ್ಸಿನಲ್ಲಿ ಬಿಕ್ಕಳಿಕೆ ನಿಟ್ಟುಸಿರು ಸಾಮಾನ್ಯವಾಗಿತ್ತು. ಅಂತೂ ಮರುದಿನ ವೈದ್ಯರಿಂದ ಆರೋಗ್ಯವಾಗಿರುವುದರ ಬಗ್ಗೆ ಪತ್ರ ತರಬೇಕು ಎಂಬ ಷರತ್ತಿನ ಮೇಲೆ ಪುನಃ ಪ್ರವೇಶದ ಅನುಮತಿ ದೊರೆಯಿತು. ಈ ವೇಳೆಯಲ್ಲಿ ಉಳಿದ ಸಹಪಾಠಿಗಳಿಗೆ ನಾನೊಬ್ಬ ಸ್ವಾರಸ್ಯಕರ ಪರೀಕ್ಷಾ ವಸ್ತು, ಮೂರು ತಿಂಗಳಿಂದ ಬರದೇ ಇಂದು ಬಂದಿರುವ ಇವನಿಗೆ ಏನು ಶಿಕ್ಷೆ ದೊರೆಯಬಹುದು ಎಂಬ ಕುತೂಹಲ. ನನಗೋ ನನ್ನ ಬಗ್ಗೆ ಅವರಲ್ಲಿ ಏನೆಲ್ಲಾ ಕಥೆಗಳು ಇರಬಹುದು ಎಂಬ ಯೋಚನೆ. ತರಗತಿಯ ಕೊಠಡಿ ಪ್ರವೇಶಿಸಿದಾಗ ನನ್ನೊಂದಿಗೆ ಮಾತನಾಡುವುದಿರಲಿ, ಮುಗುಳ್ನಗೆ ಕೊಡಲೂ ಅವರಿಗೆ ಭಯ. ಆ ದಿನದ ಶಾಲಾ ವೇಳೆ ಮುಗಿಯಿತು. ಒಂದೆರಡು ದಿನಗಳಲ್ಲಿ ನನ್ನ ಶಿಕ್ಷಕರೇ ಪರಿಚಯದ ವೈದ್ಯರಿಂದ ಪತ್ರವನ್ನೂ ಕೊಡಿಸಿ ಪ್ರಕರಣ ಮುಗಿಸಿದರು. ಒಂದೆರಡು ದಿನಗಳಲ್ಲಿ ನಿಧಾನವಾಗಿ ವಾತಾವರಣ ಸರಿಯಾಯಿತು. ಆದರೆ ಅಂದಿನ ಈ ಪ್ರಕರಣದಿಂದ ಕಲಿತ ಪಾಠ ಅಷ್ಟಿಷ್ಟಲ್ಲ. ಮುಂದೆ ಎಂದೂ ನಾನು ವಿನಾಕಾರಣ ಶಾಲೆಯಿಂದ ಹೊರಗುಳಿಯಲೇ ಇಲ್ಲ. ಅಷ್ಟೇ ಏಕೆ, ನನ್ನ ಮುಂದಿನ ಔದ್ಯೋಗಿಕ ಜೀವನದ ಅವಧಿಯಲ್ಲೂ ಈ ಘಟನೆಯು ಶಿಸ್ತಿನಿಂದ ನಡೆದುಕೊಳ್ಳಲು ಎಚ್ಚರಿಕೆಯ ಘಂಟೆಯಾಯಿತು. ಆ ಸಮಯದಲ್ಲಿ ನನ್ನನ್ನು ಶಾಲೆಗೆ ಸೇರಿಸಿಕೊಳ್ಳಲು ಪೋಷಕರ ಸ್ಥಾನದಲ್ಲಿ ನಿಂತು ಸಹಾಯ ಮಾಡಿದ ನನ್ನ ಶಿಕ್ಷಕರ ಪ್ರಯತ್ನ ಎಂದೆಂದಿಗೂ ಮರೆಯಲಾರೆ. ಜೀವನವನ್ನು ರೂಪಿಸುವ ಹಾದಿಯಲ್ಲಿ ಸನ್ಮಾರ್ಗ ತೋರಿದ ಈ ಗುರುಗಳು ಸದಾ ಸ್ಮರಣೀಯರಾಗಿದ್ದಾರೆ.
ಇನ್ನೊಂದು ಸನ್ನಿವೇಶ: ಕಳೆದ ೭೦ರ ದಶಕದ ದಿನಗಳು. ಹಿಂದೆಯೇ ತಿಳಿಸಿದಂತೆ ನನ್ನದೂ ಆರ್ಥಿಕ ಬಿಕ್ಕಟ್ಟಿನ ವಿದ್ಯಾರ್ಥಿ ಜೀವನ. ಮನೆಯ ಪರಿಸ್ಥಿತಿ ಗೊತ್ತಿದ್ದರಿಂದ ಪೋಷಕರನ್ನು ದೂಷಿಸಲಾರೆ. ಸಮಸ್ಯೆಗೆ ಅಳುವ ಬದಲು ಪರಿಹಾರ ಹುಡುಕುವುದೇ ಮದ್ದು ಎಂದು ಮನಗಂಡಿದ್ದೆ. ಈ ವಿದ್ಯಾಭ್ಯಾಸಕ್ಕೆಂದು ಬಂಧುಗಳ ಮನೆಯಲ್ಲಿದ್ದೆ. ಆ ಊರಿನಿಂದ ನಗರಕ್ಕೆ ಬರಲು ಐದು ಕಿಲೋಮೀಟರ್ ಬರಬೇಕು. ಶಾಲೆ ಬೆಳಗಿನ ಏಳೂವರೆಗೆ ಪ್ರಾರಂಭ. ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯಿಂದ ಹೊರಟು ಬರುತ್ತಿದ್ದೆ. ಆ ವೇಳೆಗೆ ನಗರಕ್ಕೆ ಹೋಗಲು ವಾಹನವೂ ಇರುತ್ತಿರಲಿಲ್ಲ. ಬಸ್ ಚಾರ್ಜಿಗೆ ಕೈಯಲ್ಲಿ ದುಡ್ಡೂ ಇಲ್ಲ. ನಡೆದೇ ಬರುತ್ತಿದ್ದೆ. ಇನ್ನು ಶಾಲೆಯೋ, ನಗರದಿಂದ ಮುಂದೆ ಎರಡು ಕಿಲೋಮೀಟರ್ ಹೋಗಬೇಕು. ಖರ್ಚಿಗಾಗಿ ದುಡಿಮೆ ಮಾಡಲು ಪ್ರಯತ್ನಿಸಿದಾಗ ಶಿಕ್ಷಕರ ಮೂಲಕ ಅವಕಾಶ ದೊರೆಯಿತು. ಒಬ್ಬರ ಮನೆಯಲ್ಲಿ ಬೆಳಿಗ್ಗೆಯೇ ಬಾವಿಯಿಂದ ನೀರನ್ನು ಸೇದಿ ಕೊಡಬೇಕು. ನಂತರ ಗುಡಿಸಿ ಮನೆಯ ಬಾಗಿಲಿಗೆ ನೀರು ಹಾಕಿ ರಂಗೋಲಿ ಹಾಕುವ ಕೆಲಸ. ಇದು ಸ್ವಲ್ಪ ಮಟ್ಟಿಗೆ ಸಹಾಯಕವಾಯಿತು. ನಂತರ ಗುರುಗಳ ಮತ್ತು ಅವರ ಪರಿಚಯದವರ ಮನೆಗೆ ಸ್ನಾನಕ್ಕೆ ನೀರು ಕಾಯಿಸಲು ಸಾಮಿಲ್ಲಿನಿಂದ ಸೈಕಲ್ ಮೂಲಕ ಮರದ ಹೊಟ್ಟು ತಂದು ಕೊಡುವುದು ಇತ್ಯಾದಿ ಪುಟ್ಟ ಸಹಾಯದ ಕೆಲಸದೊಂದಿಗೆ ತಿಂಗಳಲ್ಲಿ ಒಮ್ಮೆ ಮಡಿಯಾಗುವ ಹೆಂಗಸರಿಗೆ ಬಿಸಿನೀರು ಒದಗಿಸುವ ಕೆಲಸ. ಇದು ವಿಶೇಷವೆನಿಸಿದರೂ ಹೆಚ್ಚಿನ ಬೇಡಿಕೆಯ ಕೆಲಸ. ಕೆಲಸ ಮಾಡಿದರೇನೋ ಆದಾಯ ಎಂದು ತಿಳಿದರೂ ಅದಕ್ಕೆ ಸಮಯ ಸಾಲದಾಗಿತ್ತು.
ಅದೊಂದು ದಿನ ಕೆಲಸ ಪೂರೈಸುವ ವೇಳೆಗೆ ತಡವಾಗಿತ್ತು. ಶಾಲೆಗೆ ಓಡುತ್ತಾ ಹೋಗುತ್ತಿದ್ದೆ. ಅದೊಂದು ಇಕ್ಕಟ್ಟಾದ ಸೇತುವೆ ಮೇಲೆ ವೇಗವಾಗಿ ಬಂದ ಬಸ್ಸೊಂದು ಪ್ರವೇಶ ಮಾಡುವುದರಲ್ಲಿತ್ತು. ಆ ವೇಳೆಯಲ್ಲಿ ಯಾರು ಕಲ್ಲು ಬೀಸಿದರೋ ಅದು ಬಸ್ಸಿನ ಗಾಜಿಗೆ ತಗುಲಿ ಗಾಜು ಒಡೆಯಿತು. ಇದಕ್ಕೆ ಕಾರಣ ಹುಡುಕುತ್ತಿರುವವರಿಗೆ ಓಡುತ್ತಿರುವ ನಾನು ಕಂಡೆ. ಇವನೇ ಬಸ್ ಗೆ ಕಲ್ಲು ಹೊಡೆದು ಓಡುತ್ತಿದ್ದ ಎಂದು ಇದ್ದವರು ಭಾವಿಸಿ ನಿರ್ಣಯಿಸಿದರು. ಒಬ್ಬೊಬ್ಬರದು ಒಂದೊಂದು ಪ್ರಶ್ನೆ. ನಾನು ಕೊಡುವ ಯಾವ ವಿವರಣೆಯನ್ನು ಯಾರೂ ಒಪ್ಪಲಿಲ್ಲ. ಬೀದಿಯಲ್ಲಿ ಇದ್ದವರ ಧರ್ಮದೇಟು ನಿಂದನೆ ಮಾತುಗಳು ನನ್ನನ್ನು ಮೌನವಾಗಿಸಿತ್ತು. ಈ ಮಧ್ಯೆ ಅಲ್ಲೇ ಇದ್ದ ಪೋಲಿಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದುರು. ತಡವಾಗಿ ಶಾಲೆಗೆ ಹೋದಾಗ ದೊರೆಯಬಹುದಾದ ಶಿಕ್ಷೆಗಿಂತ ಘೋರವಾದ ಶಿಕ್ಷೆ ದೊರೆಯಿತು. ಯಾವುದೇ ವಿವರವನ್ನು ಕೇಳದೆ ಇಬ್ಬರು ಪೋಲಿಸರಿಂದ ಅವರಿಗೂ ಆಯಾಸವಾಗುವಷ್ಟು ಬಿದ್ದ ದೊಣ್ಣೆ ಏಟುಗಳು ನನ್ನನ್ನು ಹಣ್ಣು ಮಾಡಿದವು. ಅವರಲ್ಲೊಬ್ಬರಿಗೆ ಏನೋ ದಯಾಭಾವ. ಆತನು ಮಧ್ಯಾಹ್ನದ ಊಟ ಕೊಡಿಸಿದ ಧಾರಾಳಿ. ಜೊತೆಗೆ ಒಂದು ರಿಜಿಸ್ಟರ್ ಕೊಟ್ಟು ಅದರಲ್ಲಿ ರೂಲರ್ ಉಪಯೋಗಿಸಿ ಗೆರೆಗಳನ್ನು ಹಾಕುವ ಕೆಲಸವನ್ನೂ ಕೊಟ್ಟ. ಕೆಲಸಕ್ಕಾಗಿ ಜಾಗ ವಿಶಾಲವಾಗಿರಲೆಂದು ಹೊರಗಿನ ಕಟ್ಟೆ ಮೇಲೆ ಕೂಡಿಸಿದ. ಆ ಸಂಜೆ ಶಾಲೆಯಿಂದ ಮನೆಗೆ ಸೈಕಲ್ ನಲ್ಲಿ ವಾಪಸಾಗುತ್ತಿದ್ದ ನಮ್ಮ ಗುರುಗಳು ಕಂಡರು. ಅವರನ್ನು ಕರೆದು ನಡೆದ ಸಮಾಚಾರ ತಿಳಿಸಿದೆ. ನಿಜವಾಗಿಯೂ ನಾನು ಬಸ್ಸಿಗೆ ಕಲ್ಲು ಹೊಡೆದಿದ್ದಲ್ಲ ಎಂದು ಮನಗಂಡರು. ಅಲ್ಲಿನ ಅಧಿಕಾರಿಗೆ ನಾನು ಬೆಳಗಿನ ವೇಳೆಯಲ್ಲಿ ಉಪಹಾರಕ್ಕಾಗಿ ಅವರಿವರ ಮನೆಯಲ್ಲಿ ಕೆಲಸ ಮಾಡುವುದು, ನಂತರ ಶಾಲೆಗೆ ಸದಾ ಓಡಿಯೇ ಹೋಗುವ ಬಗ್ಗೆ ವಿವರಿಸಿ ಬಸ್ ಗೆ ಕಲ್ಲು ಹೊಡೆಯುವ ಹುಡುಗ ಇವನಲ್ಲ ಎಂದು ಮನವರಿಕೆ ಮಾಡಿ ನನ್ನನ್ನು ಬಿಡಿಸಿಕೊಂಡು ಹೋದರು. ಆ ಸಂಜೆ ಅವರು ಹಾಗೂ ಅವರ ಹೆಂಡತಿ ಮರುಕದಿಂದ, ನನ್ನ ಅಂಗೈ ಬೆನ್ನಿನ ಮೇಲೆ ಬಿದ್ದ ಏಟುಗಳ ಕಪ್ಪು ಕಲೆಗಳನ್ನು ಎಣ್ಣೆ ಯೊಂದಿಗೆ ಸವರಿ ಸಮಾಧಾನ ಮಾಡಿದ್ದು ಒಂದು ಮರೆಯಲಾಗದ ಅನುಭವ. ನೋವಿನಲ್ಲಾದ ಸಂತಸ ಅವರ್ಣನೀಯ. ಕೇಳಿದರೆ ಕಣ್ಣೀರೇ ಪದವಾದೀತು. ಇಂದು ಆ ಗುರುಗಳು ಭೌತಿಕವಾಗಿ ವಾಸ್ತವದಿಲ್ಲದಿದ್ದರೂ ಆ ಸಮಾಧಾನಿಸಿದ ಘಟನೆ ಮನದಲ್ಲಿ ಮುದ್ರಿತವಾಗಿದೆ. ಅಂದು ಠಾಣೆಯಲ್ಲಿದ್ದ ನಾನು ಆ ಗುರುಗಳ ಕಣ್ಣಿಗೆ ಬೀಳದಿದ್ದರೆ ನನ್ನ ಭವಿಷ್ಯ ಬೇರೆಯಾಗುತ್ತಿತ್ತೇನೋ. ಅಂತೂ ಭವಿಷ್ಯವನ್ನು ರೂಪಿಸಿದ ಗುರುವಿಗೆ ಇನ್ನೊಂದು ವಿಶೇಷ ನಮನ.
ಇಂದಿನ ದಿನಗಳಲ್ಲಿ ತಮ್ಮ ಕೆಲಸ ತಾವು ನೋಡಿಕೊಂಡರೆ ಸಾಕು ಎಂಬ ಮನೋಭಾವ ಬಹುತೇಕ ಎಲ್ಲರದು. ಕೆಲವು ಸಹಾಯಗಳು ಕೆಲವು ಶಿಕ್ಷಕರನ್ನು ಇಕ್ಕಟ್ಟಿಗೂ ಸಿಕ್ಕಿಸಿದೆ. ಇದರಿಂದಾಗಿಯೋ ಅಥವಾ ಇನ್ನಿತರ ಕಾರಣದಿಂದಲೋ ಶಿಕ್ಷಕರಿಗೆ ಪಾಠ ಮಾಡಿದರೆ ಮುಗಿಯಿತು ಎಂಬ ಯಾಂತ್ರಿಕ ಭಾವ. ಇನ್ನು ಬಹಳಷ್ಟು ಪೋಷಕರಿಗೆ ತಮ್ಮ ಶಿಕ್ಷಕರ ಬಗ್ಗೆ ಇರುವ ಗೌರವ ಅಷ್ಟಕಷ್ಟೇ. ಇದರ ಪರಿಣಾಮವಾಗಿ ಅವರ ಮಕ್ಕಳಿಗೂ ಶಿಕ್ಷಕನೆಂದರೆ ಕೇವಲ ಪಾಠ ಮಾಡುವವರು ಎಂದಷ್ಟೇ ತಿಳಿದಿದೆ. ಗುರು ಶಿಷ್ಯರ ಬಾಂಧವ್ಯ ಇಲ್ಲವೇ ಇಲ್ಲ ಎನ್ನುವುದು ಬದಲಾದ ಇಂದಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೂ ಕೆಲವರಿಗಾದರೂ ಶಿಕ್ಷಕರು ಗುರುವಿನ ಸ್ಥಾನದಲ್ಲಿ ಬಂದಿರುತ್ತಾರೆ. ಅದನ್ನು ಕೃತಜ್ಞತೆಯಿಂದ ನೆನೆಯಬೇಕು. ಅಗತ್ಯವಿರುವ ಪರಿಸ್ಥಿತಿಗಳನ್ನು ಕಂಡಾಗ ಮುಂದುವರಿದು ಸಹಾಯ ಮಾಡಲಾಗದಿದ್ದರೂ ಯಾಚಿಸಿದಾಗಲಾದರೂ ಸಹಾಯ ಹಸ್ತವನ್ನು ವಿಸ್ತರಿಸಿದರೆ ಅಷ್ಟರಮಟ್ಟಿಗೆ ಅವರ ಗುರುವಿಗೆ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ಸ್ವಾರ್ಥವೆನಿಸಿದರೂ ಚಿಂತೆಯಿಲ್ಲ, ಕನಿಷ್ಠ ತಮ್ಮ ಬಂಧುಗಳಿಗಾದರೂ ಸಹಾಯ ಮಾಡಿದರೆ ಅಷ್ಟರಮಟ್ಟಿಗೆ ಸೇವೆಯಾದೀತು. ಅಗತ್ಯವಿರುವವರಿಗೆ ಸಹಾಯ ಮಾಡುವುದೇ ಸಹಾಯ ಮಾಡಿದವರಿಗೆ ಕೊಡುವ ಗೌರವ ವೆನಿಸಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು.
ಇದು ಬರೆ ಕಥೆ ಯಾಗಿರದೆ ಬೇರೆಯವರ ರಿಗೆ ಇದು ಮಾರ್ಗದರ್ಶನವಾಗಿರಲಿ ಎಂದು ಬಯಿಸುತ್ತ ನಮಸ್ಕಾರಗಳು
ReplyDelete
ReplyDeleteಮೈ ಜುಮ್ ಅನ್ಸಿ ಬಿಡುತ್ತವೆ
ಈಗಿನ ಮಕ್ಕಳಿಗೆ ಅಂತ ಗುರುಗಳು ಇಲ್ಲ ಅಂತ ಶಾಲೆ ಗಳೂ ಇಲ್ಲ. ಅಂಕಣ ಬಹಳ ಚೆನ್ನಾಗಿದೆ ಒಳ್ಳೆ ಮೆಸೇಜ್ .
ನಿಮ್ಮ ಅನುಭವ ಆ ಒಂದು ಪೀಳಿಗೆಯ ಸಾಕಷ್ಟು ಜನರ ಅನುಭವವು ಆಗಿದೆ. ಅಂದು ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯ ರೂಪಿಸುವವರು ಶಿಕ್ಷಕರು ಎಂಬ ನಂಬಿಕೆ ದೃಡವಾಗಿತ್ತು ಹಾಗೂ ಸೌಕರ್ಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಶಿಕ್ಷಕರು ಪೋಷಕರ ಅಂತರಂಗವನ್ನು ಅರಿತವರಂತೆ ಎಲ್ಲಾ ವಿದ್ಯಾರ್ಥಿಗಳನ್ನು ತಿದ್ದುವ ಕೆಲಸ ಶ್ರಧ್ಧೆಯಿಂದ ಮಾಡುತ್ತಿದ್ದರು. ಅವರಿಗೆ ನೈತಿಕ ಪಾಠ ಹೊಣೆಗಾರಿಕೆ ಪಾಠವನ್ನು ಹೇಳುತ್ತಿದ್ದರು. ಆದರ್ಶ ವ್ಯಕ್ತಿಗಳ ಪರಿಚಯ ಮಾಡಿಕೊಡುತ್ತಿದ್ದರು. ಇಂದು ಶಿಕ್ಷಣ ಒಂದು ಉದ್ದಿಮೆ. ವಿದ್ಯಾರ್ಥಿಗಳು ಒಂದು ವಸ್ತು ಅವರನ್ನು ತಯಾರುಮಾಡುವ ತಂತ್ರಜ್ಞರು ಶಿಕ್ಷಕರು. ನಮ್ಮ ಪೀಳಿಗೆಯ ಜನರು ಕಷ್ಟ ಸುಖವನ್ನು ಸಮಾನವಾಗಿ ಸ್ವೀಕರಿಸುವ ಸಮಚಿತ್ತತೆ ಪಡೆದಿದ್ದಾರೆ ಇದಕ್ಕೆ ಕಾರಣ ನಮ್ಮ ಶಿಕ್ಷಣ ಮತ್ತು ಶಿಕ್ಷಕರು. ನಿಮ್ಮ ಲೇಖನ ಉತ್ಕೃಷ್ಟವಾಗಿದೆ.
ReplyDeleteನಾವೆಲ್ಲ ಗುರುಪೂರ್ಣಿಮೆಯ ಸಂದರ್ಭದಲ್ಲಿ ಅವರನ್ನು ಸ್ಮರಿಸೋಣ.
ReplyDeleteರಮೇಶ್ ನಾಡಿಗ್ ಹಳೆ ಯ ಕಷ್ಟ ನೋವುಗಳನ್ನು ಹಂಚಿಕೊಂಡಾಗ ಆಗುವ ಸಮಾಧಾನ ಅಷ್ಟಿಷ್ಟಲ್ಲ. ಆದರೆ 5 ದಶಕಗಳ ವಿಚಾರವನ್ನು ಅನುಭವಿಸಿದ ಕಷ್ಟ ಗಳನ್ನು, ಪರಿಹರಿಸಿದ ಗುರುಗಳನ್ನು ಗುರುಪೂರ್ಣಿಮೆಯಂದು ಕೃತಜ್ಞತೆ ಗಾಗಿ ಸ್ಮರಿಸುವ ಈ ಅನುಭವದ ಲೇಖನ ತುಂಬ ಅರ್ಥಪೂರ್ಣ ವಾಗಿದೆ. ಬಾಲ್ಯದ ಈ ಕಹಿ ನೆನಪುಗಳನ್ನು ಸವಿಸ್ಥಾರ ವಾಗಿ ಪ್ರಚುರ ಪಡಿಸಿದ ತಮಗೆ ಧನ್ಯವಾದಗಳು..
Deleteಸರಳವಾದ ಶೈಲಿ. ಓದಲು ಶುರು ಮಾಡಿದಮೇಲೆ ಮಧ್ಯದಲ್ಲಿ ಎಲ್ಲೂ ನಿಲ್ಲಿಸಲು ಬಿಡದೆ ಓದಿಸಿಕೊಂಡು ಹೋಯಿತು. ಬಹುಶಃ ನಮ್ಮ ಬಾಲ್ಯದ ದಿನಗಳ ಪರಿಸ್ಥಿತಿಯೂ ಸಹ ಇದಕ್ಕಿಂತ ಭಿನ್ನವಾಗಿರಲಿಲ್ಲವಾದ್ದರಿಂದ ಈ ಬರಹ ನನಗೆ ಹೆಚ್ಚು ಇಷ್ಟವಾಯಿತು. ಬರೆಯುತ್ತಾ ಇರಿ. ಶುಭವಾಗಲಿ.
ಗುರು ಸಾಕ್ಷಾತ್ ಎಂದು ಶೀರ್ಷಿಕೆ ಯಲ್ಲಿ ಹೇಳಿದಂತೆ ಗುರುಗಳಿಗೆ ತ್ರಿಮೂರ್ತಿಗಳ ಸ್ಥಾನವನ್ನು ಕೊಡುವ ಮೂಲಕ ತಾವು ಗುರುಭಕ್ತಿ ಮೆರೆದಿದ್ದೀರಿ. ತಮ್ಮಂತೆ ಹಲವರಿಗೆ ತಮ್ಮ ಜೀವನದಲ್ಲಿ ಈ ತರಹದ ಅನುಭವಗಳಾಗಿರುತ್ತದೆ. ಆದರೆ ಆ ಘಟನೆಗಳನ್ನು ದಶಕಗಳ ನಂತರವೂ ಸ್ಮರಣೆಯಲ್ಲಿಟ್ಟುಕೊಂಡು ನಮ್ಮಂತಹವರಿಗೆ ಜ್ಞಾಪಿಸುವುದು ತಮ್ಮಲ್ಲಿರುವ ವಿಶೇಷತೆ. ಅನೇಕ ಸಂದರ್ಭಗಳಲ್ಲಿ ಗುರುವಿನ ಸ್ಥಾನವು ಒಬ್ಬ ತಂದೆ, ತಾಯಿ, ಸ್ನೇಹಿತ, ಅನಾಮಿಕ ಹೀಗೆ ಹಲವಾರು ವ್ಯಕ್ತಿಗಳಲ್ಲಿ ಕಾಣಬಹುದು. ವಿದ್ಯಾರ್ಥಿ ದೆಸೆಯಲ್ಲಿ ಸಿಗುವ ಗುರುವು ಮುಂದೆ ನಾವು ಬೆಳೆದಂತೆಲ್ಲಾ ನಮ್ಮ ಜೀವನದ ತಿರುವುಗಳಲ್ಲಿ ನಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ಆವಿರ್ಭವಿಸಿ ದಾರಿ ತೋರಿಸುತ್ತಾರೆ. ತಾವು ನನ್ನ ವಿಷಯದಲ್ಲಿ ನೀಡಿದ ಹಲವಾರು ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತ. ಒಟ್ಟಿನಲ್ಲಿ ತಮ್ಮ ಗುರುತ್ವಾಕರ್ಷಣೆಯ ವ್ಯಕ್ತಿತ್ವವೇ ನನ್ನನ್ನು ತಮ್ಮನ್ನು ಗುರುವಿನ ಸ್ಥಾನದಲ್ಲಿರಿಸಿದೆ. ನಮಸ್ಕಾರ.
ReplyDeleteNamasthe Anna..
ReplyDeleteOnce again very good article..
Nice to read the way you had / handled the unexpected situations. Tough times in life will give the good experience to handle worst situations which comes in the future. And your experience says.. for good person god will help in the form of teacher..
*Gurubyonamaha*
Please keep writing n sharing your articles.🙏
Your article brings the situation forty years ago which everyone would have experienced in their lives. Financially our fathers and forefathers were very weak but it was very common to see dozen children, some stronger ones survive while others left the world at very young ages. Looking after children,providing education was always a challenge which every parent struggled. Those lucky ones which make it to schools had to face lot of hardships due to poor background unable to buy books etc.. however, we can all proudly say that teaching fraternity at that time belived that vidya Dana is divine and did all their best to guide us in the right path. Because of them we can all say that we are fit to live in a society and do our bit to the country. Your experiences show that you have earned your stature by virtue of hardwork and dedication.
ReplyDelete"ಗುರುಸಾಕ್ಷಾತ್"
ReplyDeleteಲೇಖನ ಬಹಳ ಸೊಗಸಾಗಿ ಒಳ್ಳೆಯ ಮೆಸೇಜನ್ನು ನೀಡಿದೆ. ಹಿಂದಿನ ಅನುಭವ, ಆಗಿನ ಶಿಕ್ಷಕರ ಪಾಠ ಹಾಗು ನೈತಿಕ ಹೊಣೆಯನ್ನು ಹೊರುವ ರೀತಿ, ವಿದ್ಯಾರ್ಥಿಗಳ ಕಷ್ಟಕ್ಕೆ ಸ್ಪಂದಿಸುವ ಅವರ ಅಂತಃಕರಣ,ಓದುತ್ತಾ ಓದುತ್ತಾ ಕುತೂಹಲದ ಜೊತೆಗೆ ಮಾರ್ಗದರ್ಶನವನ್ನು ನೀಡುತ್ತದೆ. ಈಗ ಅಂತಹ ಶಿಕ್ಷಕರು ಸಿಗುವುದು ಅಪರೂಪ. ಅಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವುದು ವಿರಳ. ಗುರುಪೂರ್ಣಿಮೆಗೆ ನಮ್ಮ ಶಿಕ್ಷಕರಿಗೂ ನಮ್ಮ ವಂದನೆಗಳನ್ನು ಈ ಮೂಲಕ ತಿಳಿಸುತ್ತಿದ್ದೇವೆ.
ಹುಡುಗಾಟದ ದಿನಗಳ ನೆನಪು, ಶಿಕ್ಷೆಯ ನಿರೀಕ್ಷೆ ಮತ್ತದರ ಅನುಭವ, ಅದು ಹುಸಿಯಾದಗ ಆದ ಆನಂದ, ಅದು ಕಲಿಸಿದ ಶಿಸ್ತು, ಅದಕ್ಕೆ ಕಾರಣರಾದ ಗುರುಗಳ ಬಗ್ಗೆ ತುಂಬು ಪ್ರೀತಿ, ಗೌರವದಿಂದ ಸ್ಮರಣೆ.
ReplyDeleteವಿನಾಕಾರಣ ಏಟು ತಿಂದರೂ, ಅಲ್ಲಿ ಇನ್ನೊಬ್ಬ ಪೋಲೀಸರ ಮೂಲಕ ಒದಗಿದ ದೈವಸಹಾಯ, ಗುರುಗಳ ಕೃಪೆ, ಪ್ರೀತಿಯ ಆರೈಕೆ, ಅದರ ಅನುಭವದಿಂದ ಮೂಡಿದ ಪ್ರಜ್ಞೆ -" ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ, ನಮಗೆ ಸಹಾಯ ಮಾಡಿದವರಿಗೆ ಸಲ್ಲಿಸುವ ಗೌರವ, ಕೃತಜ್ಞತೆ" - ಎಲ್ಲರಿಗೂ ಒಂದು ಮಾರ್ಗದರ್ಶನದ ಪಾಠವೇ ಅಲ್ಲವೇ?
ಶಿಕ್ಷಕರ ನೆನಪು ಮನದುಂಬಿ ಬಂದು, ಕೃತಜ್ಞತಾ ಭಾವದಿಂದ ಗುರುಗಳ ನೆನಪನ್ನು ನಮ್ಮೊಡನೆ ಹಂಚಿಕೊಳ್ಳುತ್ತಾ ಎಲ್ಲರೂ ಪಾಲಿಸಬೇಕಾದ ಕರ್ತವ್ಯವನ್ನು ಸೂಕ್ಷ್ಮವಾಗಿ ತಿಳಿಸುತ್ತಾ ಕೊನೆ ಮುಟ್ಟಿರುವ ಲೇಖನ ಇದು. ಇಂತಹ ಶಿಷ್ಯನನ್ನು ಪಡೆದ ಗುರುವೂ ಧನ್ಯ ಮತ್ತು ಪೂಜ್ಯರು.
ಗುರು ಸಾಕ್ಷಾತ್
ReplyDeleteನಿಜವಾಗಿಯೂ ತಮ್ಮ ಈ ಲೇಖನವು ಗುರುವಿನ ದರ್ಶನ ಮಾಡಿಸಿತು.
ನಮ್ಮೆಲ್ಲರ ವಿದ್ಯಾರ್ಥಿ ಜೀವನದಲ್ಲಿ ಹಾಸುಹೊಕ್ಕಾಗಿ ಬರುವವರಲ್ಲಿ ಹಲವರು ಶಿಕ್ಷಕರಾದಲ್ಲಿ, ಕೆಲವರು ಮಾತ್ರವೇ ಗುರುವಾಗುವುದು ಸಾಧ್ಯ ಎಂಬುದನ್ನು ನಿರೂಪಿಸಿದ್ದೀರಿ.
ಶಿಕ್ಷಣ ಒಂದು ವ್ಯಾಪಾರವಾಗುತ್ತಿರುವ ಇಂದಿನ ದಿನಮಾನಗಳಲ್ಲಿ, ಹಲವರು ಶಿಕ್ಷಕರಾಗುತ್ತಿದ್ದಾರೆಯೇ ಹೊರತು, ಗುರುವಾಗುತ್ತಿಲ್ಲ. ಕಾರಣ ಸರಳವಾದದ್ದೇ. ಓರ್ವ ಶಿಕ್ಷಕ ಶಿಕ್ಷಣವನ್ನು ಮಾತ್ರ ನೀಡಬಲ್ಲ ಆದರೆ, ಓರ್ವ ಗುರುವು ವಿದ್ಯಾರ್ಥಿಗೆ ಬದುಕಿನುದ್ದಕ್ಕೂ ಸಾಗಬೇಕಾದ ಗುರಿಯನ್ನು ತೋರಬಲ್ಲ ಮಾರ್ಗದರ್ಶಕನಾಗನಲ್ಲ.
ನಾಲ್ಕೈದು ದಶಕಗಳ ಹಿಂದೆ ಇದ್ದ ವಿದ್ಯಾರ್ಥಿಗಳ ಜೀವನದ ಪರಿಯನ್ನು ಕಥೆಯ ರೂಪದಲ್ಲಿ ನವಿರಾಗಿ ಓದಿಸಿಕೊಂಡು ಹೋಗುವಂತಹ ಅಕ್ಷರಗಳ ರೂಪದಲ್ಲಿ ನಿರೂಪಣೆ ಮಾಡಿದ್ದಕ್ಕಾಗಿ ಹೃದಯಪೂರ್ವಕ ಧನ್ಯವಾದಗಳು.
*ತಾಯಿ, ತಂದೆ ಮತ್ತು ಗುರು ಈ ಮೂವರೂ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವವೆಂಬ ಆ ದಿನಗಳವು ಮರಳಿ ಬರಲೆಂದು ಹಾರೈಸುವ,*
*ನಿಮ್ಮ*
*ವಿ. ಆರ್. ಮುರಲೀಧರ್✍️*
ಐದಾರು ದಶಕಗಳ ಹಿಂದೆ, ಶಿಕ್ಷಣ ವ್ಯವಸ್ಥೆ ವಿರಳವಿದ್ದಾಗ ಬಹುತೇಕ ಬಡ ಕುಟುಂಬಗಳ ಸ್ಥಿತಿ ಇದೇ ತೆರನಾದ ಎಷ್ಟೋ ಸನ್ನಿವೇಶಗಳು ಕಾಣ ಸಿಗುತ್ತವೆ. ಆದರೆ ತಮ್ಮ ನೆನಪಿನ ಬುತ್ತಿಯಿಂದ ಪ್ರಾಥಃಸ್ಮರಣೀಯ, ದೇವಸಮಾನ, ಮಾನವೀಯತೆಯ ಸಾಕಾರ ಮೂರ್ತಿಗಳನ್ನು ಕಣ್ಗೊತ್ತಿಕೊಂಡಿದ್ದಾರೆ, ನಮ್ಮ ಮೇಷ್ಟ್ರು! ಬಾಲ್ಯದ ಆ ತುಮುಲ, ಪರಿಸ್ಥಿತಿಯ ಒತ್ತಡಗಳು, ಬಣ್ಣದ ಕನಸುಗಳನ್ನ ಬೆನ್ನತ್ತಿ ಹೋದಾಗ ಕಾಡುವ ಅನಿವಾರ್ಯತೆ, ನಿರೀಕ್ಷೆ, ಹತಾಶೆ, ದ್ವಂದ್ವಗಳು, ಅವಮಾನಗಳು, ಇನ್ನೇನು ಭೂಮಿ ಬಾಯ್ ಬಿರಿಯಿತು ಅಂದುಕೊಂಡಾಗಲೇ ಶ್ರೀಹರಿಯಂತೆ ಬಂದು ಕಾಪಾಡಿದ ದೈವೀ ಸ್ವರೂಪಿ ಗುರುಗಳು, ಅವರುಗಳ ವಾತ್ಸಲ್ಯ, ಮಮತೆ, ಕಾರುಣ್ಯ ಅಷ್ಟೇ ಕಾಠಿಣ್ಯ, ಶಿಸ್ತು, ಚಾರಿತ್ರ್ಯ, ಮಾದರಿ, ಪಾರದರ್ಶಕ ಜೀವನ….ಅದ್ಹೇಗೆ ಮರೆಯಲು ಸಾಧ್ಯ!....ಅವರುಗಳ ಋಣ ತೀರಿಸುವುದೆಂತು?! ಬಹುಶಃ ಇಂಥವುಗಳನ್ನು ಇಂದಿನ ಪೀಳಿಗೆ ಗ್ರಹಿಸಲೂ ಅಸಾಧ್ಯ……
ReplyDeleteತಮ್ಮ ಎಂದಿನ ನವಿರಾದ, ಅಷ್ಟೇ ಹೃದಯಸ್ಪರ್ಶಿ, ಪ್ರಾಮಾಣಿಕ ನಿರೂಪಣೆಯೊಂದಿಗೆ ಶ್ರೀ ಕೆ.ಬಿ.ರಾಮಚಂದ್ರರಾಯರು ಓದುಗರ ಮನ ಕಲಕಿದ್ದಾರೆ; ಅದರಲ್ಲಿ ಅವರು ಸಿದ್ಧಹಸ್ತರು! ಓದುಗರು ತಾವೇ ಶಿಕ್ಷೆ ಅನುಭವಿಸಿದಂತೆ, ಗುರುಗಳ ಕುಟುಂಬದ ಆಶ್ರಯ, ಆರೈಕೆ ಪಡೆದಂತೆ ಅನುಭೂತಿಗೊಳ್ಳುವುದರೊಂದಿಗೆ ಜೀವನದ ಆ ಕಠಿಣ ದಿನಗಳನ್ನು ಎದುರಿಸಿದ ಪರಿ, ಕಲಿತ ಪಾಠಗಳು ನಮ್ಮವೇ ಎನಿಸಿ, ಮೈ ಝುಂ ಎನ್ನುತ್ತದೆ! ಆ ದಿನಗಳಲ್ಲಿ ಶಿಕ್ಷಕರಿಗಿದ್ದ ಗೌರವ, ಭಯ, ಭಕ್ತಿ ಈಗ ಮರೀಚಿಕೆ! ಅವರುಗಳ ಋಣ ತೀರಿಸಲು ಆಗದಷ್ಟು ಭಾರ!..... ರಾಯರಿಗೊಂದು ದೊಡ್ಡ ಸಲಾಮು!
~ ಮಹಾಂತೇಶ್ ತಳಗೇರಿ, ವಿಶ್ರಾಂತ ವಿಭಾಗಾಧಿಕಾರಿ, ಭಾರತೀಯ ಜೀವ ವಿಮಾ ನಿಗಮ, ಬೆಂಗಳೂರು.
ಮಂಕುತಿಮ್ಮನ ಕಗ್ಗದ ಮೇಲೆ ಡಾ. ಗುರುರಾಜ ಕರ್ಜಗಿಯವರು ಉಪನ್ಯಾಸ ಮಾಡುವಾಗಲೊಮ್ಮೆ "You are the Product of your Experience" ಎಂದು ಹೇಳಿದುದು, ನಿನ್ನ ವಿಷಯದಲ್ಲಿ ಅರ್ಥಪೂರ್ಣವಾಗಿದೆ. ನಾವೀಗ ನೋಡುತ್ತಿರುವ "exemplery ರಾಮಚಂದ್ರ" ನಾಗಿ ಬೆಳೆಯಲು ನಿನ್ನ ಬಡತನದ- ಬಾಲ್ಯ- ಯೌವ್ವನಗಳ ಅಪಾರ ಅನುಭವದ ಮೂಸೆಯಿಂದ ಹಾಯ್ದು ಬಂದಿದ್ದೇ ಕಾರಣ. ಲೇಖನ ತುಂಬಾ ಚೆನ್ನಾಗಿದೆ. Keep it Up my brother....... ಹಿರಿಯಣ್ಣ K P
ReplyDelete“ಗುರು ಸಾಕ್ಷಾತ್” ಅತ್ಯುತ್ತಮ ಲೇಖನ. ಕತ್ತಲೆಯಿಂದ ಬೆಳಕಿನೆಡೆಗೆ ನೆಡೆಸುವ ಗುರುಗಳನ್ನು ನೆನೆಸಿ, ಬಾಲ್ಯದ ಶಿಕ್ಷಣ ಸಮಯದಲ್ಲಿ ಉಂಟಾದ ಕಷ್ಟ ಕಾರ್ಪಣ್ಯಗಳನ್ನು ಓದುಗರಲ್ಲಿ ಹಂಚಿಕೊಳ್ಳುವ ನಿಮ್ಮ ಗುಣಧರ್ಮ ಅದ್ಭುತ. ಇಷ್ಟೆಲ್ಲಾ ಕಷ್ಟಗಳ ನಡುವೆ ಧೃತಿಗೆಡದೆ ,ಆತ್ಮವಿಶ್ವಾಸದಿಂದ ಮಹತ್ತರವಾಗಿ ಸಾಧನೆ ಮಾಡಿ,ಈಗಲೂ ಮಾಡುತ್ತಾ... ಹಿಂದಿನ ದಿನಗಳನ್ನು ಅವಲೋಕಿಸುತ್ತಾ ಬರಹ ರೂಪದಲ್ಲಿ ಓದುಗರಲ್ಲಿಯೂ ಆತ್ಮವಿಶ್ವಾಸ ಮೂಡಿಸುವ ಪರಿ ಅತ್ಯದ್ಭುತ. ಇದನ್ನು ಮಕ್ಕಳ ಹತ್ತಿರ ಓದಿಸಿ ಕೇಳಿದಾಗ ನಮಗೇ ಒಂದು ಸಾರ್ಥಕ ಬಾವ. ಧನ್ಯವಾದಗಳು🙏😊
ReplyDelete'ಗುರು ಸಾಕ್ಷಾತ್ '- ಇದು ಬರೇ ಲೇಖನ ಅಲ್ಲ. ಲೇಖಕರ ಸಾಕ್ಷಾತ್ ಜೀವನಾನುಭವ!
Deleteಅವರು ಗುರುಗಳು ಬರೇ ಶಿಕ್ಷಕ ಆಗಿದ್ದಿಲ್ಲ, ಮಾರ್ಗದರ್ಶಕ ಆಗಿದ್ದರು ಅಂತ ಎಷ್ಟ ಛಂದಾಗಿ
ಬರದಾರ! ಖರೇನ ಈಗ ಅಂಥಾ ಗುರುಗಳು ಇಲ್ಲಾ, ವಿದ್ಯಾರ್ಥಿಗಳೂ ಇಲ್ಲಾ.
ಇದೆಲ್ಲಾ ಓದಿ ನಮ್ಮ ಹಳೇ ದಿನಾ
ನೆನಪಾದವು. ಆಗ ಗುರುಗಳು
ಖರೆ 'ಗುರು' ಇರತಿದ್ರು, ಹುಡುಗರು 'ವಿದ್ಯಾರ್ಥಿ' ಆಗಿರ್ತಿದ್ದರು. ಈಗೇನ ಎಲ್ಲಾ ವ್ಯಾಪಾರ ಆಗೇದ. ಕೆಟ್ಟನಸ್ತದ,
ಆದರೇನ ಮಾಡೋದು?
ಕಾಲಾಯ ತಸ್ಮೈನಮಃ!
- ವಸಂತ ಕಣವೀಕರ.
ರಜತಗಿರಿ,ಧಾರವಾಡ.
Guru Sakshat is such a script where one gets involved reading it and is definitely touched. Reading it gives us a great takeaway and imparts a great message.
ReplyDeleteಗುರು ಸಾಕ್ಷಾತ್ ಪರಬ್ರಹ್ಮ ಎಂಬಂತೆ ನಿಮ್ಮ ಎಳೆ ವಯಸ್ಸಿನ ಜೀವನದಲ್ಲಿ ಮೇಲಿನ ಇಬ್ಬರು ಗುರುಗಳು ಅದ್ಭುತ ಮಾರ್ಗದರ್ಶನ ನೀಡಿದ್ದಾರೆ. ಎರಡು ದಿನ ರಜೆಗೆಂದು ಹೋಗಿ ಮೂರು ತಿಂಗಳಾದ ಮೇಲೆ ಬಂದರೂ, ನಿಮಗೆ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಕೊಡಿಸಿ ಮತ್ತೆ ಶಾಲೆಯಲ್ಲಿ ಮುಂದುವರೆಯಲು ಆನುವು ಮಾಡಿಕೊಟ್ಟ ಆ ಗುರುಗಳಿಗೆ ನನ್ನದೂ ಒಂದು ನಮನ.
ReplyDeleteಗುರುವಿನ ಮನೆಯವರೂ ಸಹ ನಿಮ್ಮ ನೋವಿಗೆ ತೈಲದ ಮದ್ದನ್ನು ಹಚ್ಚಿದ್ದು ಅವರ ಮಾನವೀಯತೆಯನ್ನು ಎತ್ತಿ ಹಿಡಿದಿದೆ.
ಗುರುಗಳಿಂದ ಕಲಿತ ಕೆಲವು ಪಾಠಗಳು
ನಮ್ಮನ್ನು ಈ ಪ್ರಪಂಚದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬದುಕಲು ಇಂದಿಗೂ ಸಹಾಯ ಮಾಡುತ್ತಿದೆ.
ನನಗೂ ಸಹ ಎಲ್.ಐ.ಸಿ ಯಲ್ಲಿ ಹಣ ಹೂಡಿಕೆ ಮಾಡಲು ಮಾರ್ಗದರ್ಶನ ಮಾಡಿದ ನೀವೂ ಸಹ ನನ್ನ ಗುರುಗಳೇ.
ಎಂದರೋ ಮಹಾನುಭಾವುಲು - ಅಂದರೀಕಿ ವಂದನಾಲು
ಗೋಪೀನಾಧ್ ಎಂ.ಎನ್
When I was studying in schools, I have
ReplyDeleteSeen many GURUS who have helped their students, in the morning prayer time normally it is 10.am , particularly in summer
by 10 am it is very hot, one Or two students used to fall down in the middle of prayer, due to weakness of not having taken break fast, and our teachers used to get them food from their pocket. One of my teacher who is your relative also sri Nagaraj
Used to do this and many times he has paid
Exam fee to poor n brilliant students.
And in high schools also I remember one Sri Adisheshaiah( a Jain )Kannada/Sanskrit teacher helped many students for food and fee and exam fee. So such teachers to be rembered always. And I remember them throughout my life. And such hardship experiences make the man perfect in their life. In this case also very much proved