Skip to main content

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿವೆ. ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ.

ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದರಿಂದಲೇ ಅವನ ಬೇಕು ಬೇಡಗಳಿಗೆ ಪ್ರಾಮುಖ್ಯತೆ ಕೊಟ್ಟು ಓದಿಸಿದೆವು. ಅವನೂ ಜಾಣ. ಚೆನ್ನಾಗಿಯೇ ಓದಿದ್ದಾನೆ. ಇನ್ನೂ ಮೊನ್ನೆ ಮೊನ್ನೆ ಪಿಯುಸಿ ಓದಿದ ಹಾಗಿದೆ. ಎಷ್ಟು ಬೇಗ ಆನಂದ ದೊಡ್ಡವನಾದ. ಇಂಜಿನಿಯರಿಂಗ್ ಮುಗಿಸಿ ಅಮೇರಿಕಾಕ್ಕೆ ಬಂದ. ಎಂಎಸ್ ಓದಿ ಕೆಲಸಕ್ಕೆ ಸೇರಿಕೊಂಡಿದ್ದಾನೆ.  ಅವನಿಗೆ ತಂದೆ ತಾಯಿ ಎಂದರೆ ಎಷ್ಟೊಂದು ಗೌರವ, ಅಭಿಮಾನ. ಆದ್ದರಿಂದಲೇ ಒತ್ತಾಯಿಸಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದಾನೆ. ಅವನ ಬಗ್ಗೆ ನನಗೆ ತುಂಬಾ ಹೆಮ್ಮೆಯೆನಿಸುತ್ತಿದೆ. ಅವನಿಗೆ ಒಳ್ಳೇ ಕಡೆ ಸಂಬಂಧ ನೋಡಿ ಸುಲಕ್ಷಣ ಹುಡುಗಿ ಹುಡುಕಿ ಜೋರಾಗಿ ಮದುವೆ ಮಾಡಬೇಕು. ಆದರೆ ಅವನನ್ನು ಕೇಳಿದರೆ ತನಗೆ ಇನ್ನೂ ಮದುವೆಯ ವಯಸ್ಸಾಗಿಲ್ಲ ಎನ್ನುತ್ತಾನೆ. ಅಲ್ಲಾ ನಮ್ಮ ಕಾಲದಲ್ಲಿ ಹೇಗಿತ್ತು, ಆಗ ಮದುವೆ ವಯಸ್ಸು ಎಷ್ಟಿತ್ತು ಎಂದು ಕೊಂಡವಳು ಮನಸ್ಸಿನಲ್ಲಿನ ಯೋಚನೆಯನ್ನೂ ಕೆಲವು ಕ್ಷಣ ನಿಲ್ಲಿಸಿದಳು. 

ಈಗ ಅವಳ ಯೋಚನೆ ನಲವತ್ತು ವರ್ಷಗಳ ಹಿಂದೆ ಹೋಯಿತು. ತಾನು ನಾಲ್ಕು ಅಕ್ಕತಂಗಿಯರಲ್ಲಿ ಕಡೆಯವಳು. ಸಾಮಾನ್ಯ ಆದಾಯದ ಕುಟುಂಬ. ಮೊದಲ ಮೂವರ ಮದುವೆಯನ್ನು ಚೆನ್ನಾಗಿಯೇ ಮಾಡಿದರು. ಅಮ್ಮನ ಹದಗೆಟ್ಟ ಆರೋಗ್ಯ ಸ್ಥಿತಿ ಹಠಾತ್ತಾಗಿ ತೀರಾ ಗಂಭೀರವಾಯಿತು. ಅವಳ ಆರೈಕೆಗೆ ಆದ ಖರ್ಚುಗಳಿಂದಾಗಿ ಮನೆಯ ಪರಿಸ್ಥಿತಿ ಪೂರ್ತಿ ಕೆಟ್ಟಿತು. ಆಗ ನನಗೆ ೧೭ ವರ್ಷ ವಯಸ್ಸು. ಈ ನಡುವೆ ನನ್ನ ಮದುವೆ ನೋಡಲೇಬೇಕೆಂದು ಅಮ್ಮನ ಉತ್ಕಟೇಕ್ಷೆ. ಅದಕ್ಕಾಗಿ  ಕಡಿಮೆ ಓದಿದ  ಕಸಗುಡಿಸುವ ಕೆಲಸದಲ್ಲಿದ್ದ ವರನೊಂದಿಗೆ ಆತುರಾತುರವಾಗಿ ಮತ್ತು ಸರಳವಾಗಿ ನನ್ನ ಲಗ್ನವಾಯಿತು. ಅವನು ಸರ್ಕಾರಿ ಕೆಲಸದಲ್ಲಿದ್ದಾನೆ ಎಂಬುದೇ ಸಮಾಧಾನ. ನಂತರದ ಮೂರನೇ ತಿಂಗಳಿನಲ್ಲೇ ಅಮ್ಮ ಇಹಲೋಕ ತ್ಯಜಿಸಿದಳು. ಗಂಡನ ಕೆಲಸದ ದರ್ಜೆ ಕಡಿಮೆ ಇದ್ದರೂ ಒಂದು ರೀತಿಯಲ್ಲಿ ಅವರು ಖುಷಿ ಮನುಷ್ಯ. ದೇವಸ್ಥಾನ, ಹೋಟೆಲ್, ಸಂಬಂಧಿಗಳ ಮನೆ ಎಂದು ಹೊರಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಒಬ್ಬ ಅಕ್ಕನ ಮನೆಗೆ ಬೇರೆ ಊರಿಗೆ ಹೋದಾಗ ಮಾತಿನ ಮಧ್ಯೆ ನಮ್ಮವರು ಎಲ್ಲೈಸಿ ವಿಮೆ ಮಾಡಿಸಿಲ್ಲದಿರುವುದನ್ನು ಕಂಡು ವಿಮೆ ಮಾಡಿಸಲು ಹೇಳಿದರು. ಕಂತು ಕಟ್ಟಲು ಕಷ್ಟವಾಗುತ್ತದೆ ಎಂದು ಹೇಳಿದ್ದಕ್ಕೆ ಕನಿಷ್ಠ ಐದು ಸಾವಿರಕ್ಕೆ ಅವರ ಹೆಸರಿನಲ್ಲಿ ವಿಮೆ ಮಾಡಿಸಿದರು. ಎರಡು ತಿಂಗಳ ಕಂತನ್ನು ಆಗಲೇ ಕೊಡಬೇಕು ನಂತರದ ಪ್ರೀಮಿಯಂ ಕಂತನ್ನು ಕೊಟ್ಟು ಸಂಬಳದ ಮೂಲಕ ಪಾವತಿಸಲು ಫಾರಂ ಸಹಿ ಮಾಡಿಸಿದರು. ಮುಂದಿನ ಒಂದೆರಡು ದಿನಗಳ ಪ್ರವಾಸ ಮುಗಿಸಿ ಮತ್ತೊಬ್ಬ ಸಂಬಂಧಿಗಳ ಮನೆಗೆ ಬಂದೆವು. ಅಲ್ಲಿ ಮಾತಿನ ಮಧ್ಯೆ ವಿಮೆ ಮಾಡಿಸಿದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡೆವು. ಅವರೋ ಇದೇನು ಐದು ಸಾವಿರವಾ. ಅದರಲ್ಲಿ ಏನು ಆಗುತ್ತದೆ, ಕನಿಷ್ಠ ಹದಿನೈದು ಸಾವಿರಕ್ಕಾದರೂ ಮಾಡಿಸಬೇಕಿತ್ತು ಎಂದು ಹೇಳಿದರು. ಒಂದೆರಡು ದಿನಗಳಲ್ಲಿ ಅವರಿಗೆ ಪರಿಚಯ ಇದ್ದ ವಿಮಾ ಏಜೆಂಟ್ ಮೂಲಕ ಒತ್ತಾಯ ಮಾಡಿ ಹತ್ತು ಸಾವಿರದ ಇನ್ನೊಂದು ಪಾಲಿಸಿ ಮಾಡಿಸಿದರು. ಅದನ್ನೂ ಸಂಬಳದ ಮೂಲಕ ಪಾವತಿಸುವಂತೆ ವ್ಯವಸ್ಥೆ ಮಾಡಿ ಎರಡು ಕಂತು ಪ್ರೀಮಿಯಂ ಕಟ್ಟಿಸಿದರು. ನಂತರ ಊರಿಗೆ ವಾಪಸಾದೆವು. 

ಮುಂದಿನ ಮೂರನೇ ತಿಂಗಳಿನಲ್ಲಿ ರಾತ್ರಿ ಮಲಗಿದಾಗ ಹೃದಯಸ್ಥಂಭನದಿಂದ ನಮ್ಮವರ ಮರಣವಾಯಿತು. ಯಾವ ಮುನ್ನೆಚ್ಚರಿಕೆ ಇಲ್ಲದ ಅವರ ಸಾವನ್ನು ನಂಬಲಾಗುತ್ತಿಲ್ಲ. ಆಗಿನ ನನ್ನ ಪರಿಸ್ಥಿತಿ ಯಾರಿಗೂ ಬೇಡ. ಬೇಡವೇ ಬೇಡ. ಕೈನಲ್ಲಿ ಇದ್ದ ಹಣವೆಲ್ಲಾ ಪ್ರವಾಸದ ಖರ್ಚಲ್ಲಿ ಮುಗಿದಿತ್ತು. ಜೊತೆಗೆ ಮರದಿಂದ ಬಿದ್ದು ಕಾಲು ಮುರಿದುಕೊಂಡ ಅವರ ತಂದೆಯವರ ಆಸ್ಪತ್ರೆ ಖರ್ಚಿಗಾಗಿ ಹಣ ಕಳುಹಿಸಿದ್ದರು. ಅವರ ಸಂಬಳ ಅತಿ ಕಡಿಮೆ. ಈ ಪರಿಸ್ಥಿತಿ ನೋಡಿದ ನಮ್ಮವರ ಸಹೋದ್ಯೋಗಿ ಮಿತ್ರರೇ ಮುಂದೆ ನಿಂತು  ಶವ ಸಂಸ್ಕಾರ ಮುಗಿಸಿದರು. ಬಂಧುಗಳ ಮುಂದಿನ ಕಾರ್ಯಗಳನ್ನು ಮಾಡಿ ಮುಗಿಸಿದರು. ನೋಡಿ ಮಾತನಾಡಿಸಲು ಬಂದಿದ್ದ ಅಕ್ಕಂದಿರು ತಮ್ಮ ಮನೆಗೆ ಬರುವಂತೆ ಹೇಳಿದರು. ನಾನೇನೋ ದಾಕ್ಷಿಣ್ಯದಿಂದ ಬರುವುದಿಲ್ಲ ಎಂದೆ. ಅವರೂ ಒತ್ತಾಯ ಮಾಡದೆ ಹೊರಟಿದ್ದು ಬಹಳ ದುಃಖವಾಯಿತು. ನನ್ನ ಮುಂದಿನ ಗತಿ ಹೇಗೆ ಎಂಬ ಚಿಂತೆ ಅವರಿಗೂ ಬರಲೇ ಇಲ್ಲವೇ. ಅಕ್ಕಪಕ್ಕದ ಮನೆಯವರ ಸಹಾಯದಿಂದ ಒಂದು ತಿಂಗಳ ಜೀವನ ಮುಗಿಯಿತು. ಹತ್ತಿರದ ಅಂಗಡಿಯ ದಿನಸಿ ಶುದ್ಧ ಮಾಡಿದೆ. ಅದರ ಕೂಲಿಗೆ ಸ್ವಲ್ಪ ಅಕ್ಕಿ ಕೊಟ್ಟರು. ಅವರಿವರ ಮನೆಯಲ್ಲಿ ಪಾತ್ರೆ ಬಟ್ಟೆ ತೊಳೆದು ಜೀವನ ಮಾಡಲು ನಿರ್ಧರಿಸಿದೆ. 

ನಂತರ ಕೆಲವೇ ದಿನಗಳಲ್ಲಿ ಬಂದ ಬಂದುಗಳೊಬ್ಬರು ತಮ್ಮ ಮನೆಯಲ್ಲಿ ಇರುವಂತೆ ಹಾಗೂ ನಾನು ನಿರ್ಧರಿಸಿದ್ದ ಕೆಲಸಗಳನ್ನು ಅವರ ‌ಮನೆಯಲ್ಲಿ ಮಾಡಿ ಕೊಂಡು ಇರು ಎಂದರು. ನನಗೂ ಅದು ಅನಿವಾರ್ಯವಾಗಿ ರಾಜಧಾನಿಗೆ ಬಂದೆ. ಅವರ ಮನೆಯಲ್ಲಿ ಊಟ ತಿಂಡಿಯಂತೆಯೇ ಕೆಲಸಗಳಿಗೆ ಕೊರತೆ ಇರಲಿಲ್ಲ. ಒಂದು ವರ್ಷ ಮುಗಿದಿತ್ತು. ಮನೆಯೊಡತಿಯು ಒಂದು ದಿನ, ನಿನ್ನ ಗಂಡ ಏನಾದರೂ ವಿಮೆ ಮಾಡಿಸಿದ್ನನೇ ಎಂದು ಕೇಳಿದರು. ಹೌದೆಂದು ಉತ್ತರಿಸಿ ತಿಳಿದ ಕಥೆ ಹೇಳಿದೆ. ಮೊದಲೇ ಹೇಳಬಾರದಿತ್ತಾ ಎಂದು ಆಕ್ಷೇಪಿಸಿದರು. ನನಗೂ ವಿಮೆ ಬಗ್ಗೆ ಅರಿವು ಇರಲಿಲ್ಲ. ಅದಕ್ಕೆ ಸಂಬಂಧಿಸಿದ ಬಾಂಡ್ ನನ್ನ ಬಳಿ ಇದ್ದ ಪೆಟ್ಟಿಗೆಯಲ್ಲಿ ಇತ್ತು. ಎರಡೂ ಬಾಂಡ್ ಗಳನ್ನು ಕೊಟ್ಟೆ. ಅದನ್ನು ನೋಡಿ, ಈ ವಿಮೆ ಇರುವುದೇ ನಿನ್ನಂತಹ ಸ್ಥಿತಿಯವರಿಗೇ ಎನ್ನುತ್ತಾ ನೀನೊಂದು ಶುದ್ಧ ದಡ್ಡಿ, ನೋಡು ಈಗ ಹದಿನೈದು ಸಾವಿರ ನಿನಗೆ ಬರುತ್ತದೆ ಎಂದರು. ನನಗೂ ತುಂಬಾ ಸಂತೋಷವಾಯಿತು. ನಮ್ಮ ಯಜಮಾನರ ಮುಂದಾಲೋಚನೆ ಬಗ್ಗೆ ಹೆಮ್ಮೆ ಎನಿಸಿತು. ನಂತರ ಈ ನಗರದ ವಿಮಾ ಕಛೇರಿಗೆ ಹೋದೆವು. ಆದರೆ ಅವರು ಆ ಹಣ ಪಡೆಯಲು ಬಾಂಡ್ ಕೊಟ್ಟ ಊರಿಗೇ ಹೋಗಬೇಕು. ಅಲ್ಲದೆ ಪಾಲಿಸಿ ಮಾಡಿ ಮೂರನೇ ತಿಂಗಳಿನಲ್ಲಿಯೇ ಸತ್ತಿದ್ದು, ಆ ತಿಂಗಳ ಕಂತು ಸಂಬಳದ ಮೂಲಕ ಬರಬೇಕಿತ್ತು, ಬಂದಂತೆ ತೋರುವುದಿಲ್ಲ, ಇದಕ್ಕೆ ಹಣ ಬರಲಾರದು ಎಂದರು. ಇದು ಆಗದ ವಿಷಯ ಎಂದು ನಿರಾಸೆ ಹಾಗೂ ಬೇಸರದಿಂದ ಕೈಬಿಟ್ಟೆವು. ಈ ಮಧ್ಯೆ ನಮ್ಮ ತಂದೆಯವರೂ ಇಹಲೋಕ ತ್ಯಜಿಸಿದ್ದರಿಂದ ನಾನು ಹುಟ್ಟಿ ಬೆಳೆದ ಊರಿನ ಸಂಬಂಧವೂ ಮುಗಿಯಿತು. ನನಗೆ ಕೆಲಸ ಕೊಟ್ಟು ವಾಸ ಇರಲು ಅವಕಾಶ ಕೊಟ್ಟವರೇ ನನ್ನ ಹತ್ತಿರದ ಬಂಧುಗಳಾದರು. ಅಕ್ಕಂದಿರಿಗೆ ಅವರವರ ಸಂಸಾರ. ಅವರ ಮನೆಯ ಹೊಣೆಯೇ ಅವರಿಗೆ ಹೆಚ್ಚು. ಆದ್ದರಿಂದ ಅವರ ಸಂಪರ್ಕ ಇಲ್ಲವಾಯಿತು. 

ಹಲವು ತಿಂಗಳ ನಂತರ ನಮ್ಮ ಬಂಧುಗಳಿಗೆ ಒಬ್ಬ ಎಲ್ಲೈಸಿ ಏಜೆಂಟ್ ರ ಪರಿಚಯವಾಯಿತು. ಹಲವು ಜನರಿಗೆ ಅವರಿಂದ ಸಹಾಯವಾಗಿದೆ ಎಂದೂ ಅವರ ಮೂಲಕ ನಮ್ಮ ಎಲ್ಲೈಸಿ ಹಣಕ್ಕೆ ಪ್ರಯತ್ನಿಸೋಣ ಎಂದಿದ್ದು ಹೊಸ ಆಸೆಗೆ ಅವಕಾಶ ವಾಯಿತು. ಅವರಿಗೆ ಪಾಲಿಸಿ ಬಾಂಡ್ ಕೊಟ್ಟೆವು. ಎರಡು ದಿನಗಳ ನಂತರ ಸಂಬಂಧಿಸಿದ ಕಛೇರಿಗಳಿಗೆ ಮರಣ ದಾವೆ ಅಥವಾ ಡೆತ್ ಕ್ಲೈಮ್ ಮಾಡಲು ಪತ್ರವನ್ನು ಬರೆದರು. ಜೊತೆಗೆ ಮರಣ ದಾಖಲೆ ಪತ್ರವನ್ನು ಕೇಳಿದಾಗ ಅದು ಇಲ್ಲದಿರುವುದು ತಿಳಿಯಿತು. ಹಣ ಪಡೆಯಲು ಅದೇ ಮುಖ್ಯ ದಾಖಲೆ. ಅದೇ ಇಲ್ಲವಲ್ಲ ಎಂದು ಬೇಸರಿಸಿದರು. ಇನ್ನು ಅದಕ್ಕೆ ಓಡಾಟ. ನಮ್ಮ ತಿಳುವಳಿಕೆಯಲ್ಲಿ ಅದಕ್ಕಾಗಿ ಯಾರನ್ನು ಕೇಳಬೇಕು ಯಾರಿಂದ ಅದನ್ನು ಪಡೆಯಬೇಕು ಎಂದೇ ತಿಳಿಯದು. ಅಂದಿನ ದಿನಗಳಲ್ಲಿ ಇದರ ಪ್ರಾಮುಖ್ಯತೆ ಇರಲಿಲ್ಲವಾದ್ದರಿಂದ  ಕೇಳಿದರೆ ಕೆಲವರು ಮುಖ ಮುಖ ನೋಡಿದರೆ ಕೆಲವರು ಕಂದಾಯದ ಕಛೇರಿಗೆ ಹೋಗಿ, ಆರೋಗ್ಯ ಇಲಾಖೆ ನೋಡಿ, ಹೀಗೆ ಅವರಿಗೆ ತಿಳಿದಂತೆ ತೋರಿಸುವವರೇ. ಮೂಲ ದಾಖಲೆ ಇಲ್ಲದೆ ಏನು ಮಾಡಲಿ ಎಂದು ಬೇಸರದಿಂದ ಹೇಳಿದೆವು. ನಮಗಿರುವ ಜ್ಞಾನ ಹಾಗೂ ಅನುಕೂಲವನ್ನು ಅರಿತು, ಬೇಕಾದ ದಾಖಲೆಗಳನ್ನು ಪಡೆಯಲು ನನ್ನಿಂದ ಅನುಮತಿ ಪತ್ರಕ್ಕೆ ಸಹಿ ಪಡೆದರು. ಸಾವು ಸಂಭವಿಸಿ ಶವವನ್ನು ವಿಲೇವಾರಿ ಮಾಡಿದ ಊರಿಗೆ ಅವರೇ ಸ್ವತಃ ಹೋದರು. ನಮ್ಮ ಮದುವೆ ಫೋಟೋ ಮತ್ತು ನಮ್ಮವರ ಸಾವು ಸಂಭವಿಸಿದ ದಿನಾಂಕ ಮಾತ್ರ ಅವರ ಬಳಿ ಇತ್ತು. ಅದರ ಆಧಾರದ ಮೇಲೆ ನಮ್ಮವರು ಕೆಲಸದಲ್ಲಿದ್ದ ಕಛೇರಿಗೆ ಹೋಗಿ ಕೆಲಸದ ವಿವರ, ಅವರ ಆರೋಗ್ಯ, ರಜಾ ಪಡೆದ ದಾಖಲೆ ಹೀಗೆ ಅನೇಕ ವಿವರಗಳನ್ನು ಪಡೆದರು. ಅವರು ವಿಷಯ ಸಂಗ್ರಹ ಮಾಡುವ ಪರಿಯನ್ನು ನೋಡಿದ ಅಧಿಕಾರಿಗಳಿಗೆ ಪೋಲಿಸರಂತೆ ತನಿಖೆ ಮಾಡುತ್ತಿದ್ದಾರಲ್ಲಾ ಎಂದು ಆಶ್ಚರ್ಯವಾಯಿತಂತೆ. ಸಾಲದೆಂದು ಸಾವಿನ ದಿನಾಂಕದ ಹಿಂದೆ ವೈದ್ಯರ ಭೇಟಿ ಮಾಡಿದ್ದರೇ? ಸಾವಿನ ವಿವರ, ಶವವನ್ನು ಸುಟ್ಟಿದ್ದನ್ನು ನೋಡಿದವರು ಹೀಗೆ ಅನೇಕ ವಿವರಗಳನ್ನು ಪಡೆದಿದ್ದು, ನಂತರ ಆ ಪಟ್ಟಣದ ಪುರಸಭೆಯಿಂದ ಮರಣ ಪತ್ರವನ್ನು ಪಡೆದು ಬಂದರು. ಅವರು ಹೇಳಿದಂತೆ ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ಕಂತನ್ನು ಪಾಲಿಸಿ ಪಡೆಯುವಾಗ ಕೊಟ್ಟಿದ್ದು ಮೇ ತಿಂಗಳ ಕಂತನ್ನು ಆ ತಿಂಗಳ ಸಂಬಳದಲ್ಲಿ ಕಟಾವು ಮಾಡಬೇಕಿತ್ತು. ಆದರೆ ಸಂಬಂಧಿಸಿದ ಕಛೇರಿಯಿಂದ ಅದು ಬಾರಲಿಲ್ಲವಾಗಿ ಅದನ್ನು ಕಟಾವು ಮಾಡಲಾಗಿಲ್ಲ. ಮುಂದಿನ ಎಂಟನೇ ದಿನದಲ್ಲಿ ಅಂದರೆ ಜೂನ್ ೮ರಂದು ಸಾವು ಸಂಭವಿಸಿದೆ. ಸಾವಿನ ಸಮಯದಲ್ಲಿ ಪಾಲಿಸಿ ಚಾಲ್ತಿಯಲ್ಲಿರಲಿಲ್ಲವಾದ್ದರಿಂದ ಹಣ ದೊರೆಯಲು ಹಿರಿಯ ಅಧಿಕಾರಿಗಳ ಕಛೇರಿಗೆ ಹೋಗಿ ಅವರ ಒಪ್ಪಿಗೆಯಾಗಬೇಕು. ಇದು ಕಠಿಣವಾಗಬಹುದು ಎಂದರು. ಅರ್ಜಿಯೊಂದಿಗೆ ಕೇವಲ ಎರಡೇ ತಿಂಗಳ ಕಂತನ್ನು ಕಟ್ಟಿದ ಪಾಲಸಿಗೆ ದಾವೆ ಪಡೆಯಲು ಪತ್ರ ವ್ಯವಹಾರ ಶುರು ಮಾಡಿದರು. ಅವರ ಉತ್ಸಾಹ ನೋಡಿದ ನನಗೆ ಅಂತಾ ತಿಳುವಳಿಕೆ ಇಲ್ಲದಿದ್ದರೂ, ಆಶ್ಚರ್ಯವಾಗುತ್ತಿತ್ತು. ನನಗಾಗಿ ಸಹಾಯ ಮಾಡುತ್ತಿರುವುದರಿಂದ ಅವರನ್ನು ನೋಡಲು ಗೌರವದೊಂದಿಗೆ ಮುಜುಗರವಾಗುತ್ತಿತ್ತು. ಎಲ್ಲೈಸಿ ಕಛೇರಿಗೆ ಅವರ ಹಲವು ಭೇಟಿಗಳು ಮತ್ತು ಚರ್ಚೆಗಳಾದ ನಂತರ ಅಂತೂ ನನ್ನನ್ನು ಕರೆಯಿಸಿ ವಾಸ್ತವಗಳನ್ನು ಕೇಳಿ ತಿಳಿದು ವಿಮೆಯ ಹಣದ ಚೆಕ್ ಕೊಟ್ಟರು. ಕೇವಲ ನೂರು ರೂಪಾಯಿ ಕಂತು ಪಾವತಿಸಿದರೂ ವಿಮಾದಾರನಿಗೆ ಹದಿನೈದು ಸಾವಿರ ಹಣ ದಾವೆ ಹಣವನ್ನು ಎಲ್ಲೈಸಿ ನೀಡಿದ್ದು ತುಂಬಾ ಸಂತೋಷವಾಯಿತು. ಪಾಲಿಸಿ ಮಾಡಿಸಿದ್ದ ನಮ್ಮವರಿಗೆ ಹಣ ಕೊಟ್ಟಿರುವ ಎಲ್ಲೈಸಿಗೆ ಇದನ್ನು ಪಡೆಯಲು ಭಗೀರಥ ಯತ್ನ ಮಾಡಿದ ಎಲ್ಲೈಸಿ ಏಜೆಂಟ್ ರವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದುಕೊಂಡೆ. ನಮ್ಮ ಪರಿಚಯದವರೂ ಇದನ್ನೇ ಹೇಳಿದ್ದು ಕೇಳಿ ಸಂತೋಷವಾಯಿತು. ಯಾವುದೇ ರಕ್ಷಣೆ ಇಲ್ಲದಿದ್ದರೆ ನಾನು ಹೊಯ್ದಾಡುತ್ತಿದ್ದ ದೀಪವೇ ಹೌದು, ನನ್ನಂತಹವರ ರಕ್ಷಣೆಗೆ ಎಲ್ಲೈಸಿ ಎಂದು ಬರೆದು, ಪಕ್ಕದಲ್ಲಿ ತೋರಿಸಿದ ದೀಪ ಆರದಂತೆ ರಕ್ಷಿಸುವ ಎರಡು ಕೈಗಳು ನನಗೆ ಬಲು ಅರ್ಥಪೂರ್ಣವಾಗಿ ಕಂಡಿತು. ಈಗ ನಾನು ಕಸ ಮುಸರೆ ಕೆಲಸ ಮಾಡುತ್ತಿದ್ದರೂ ಕೈಯಲ್ಲಿ ಸ್ವಲ್ಪ ಹಣವಿದ್ದುದರಿಂದ ಸ್ವಲ್ಪ ಮರ್ಯಾದೆ ಗೌರವವೂ ಕಾಣುತ್ತಿತ್ತು. 

ಮುಂದಿನ ವಾರದಲ್ಲಿ ಮನೆಗೆ ಬಂದ ಎಲ್ಲೈಸಿ ಏಜೆಂಟ್ ರವರು ಈಗಾಗಲೇ ನನ್ನವರ ಎಲ್ಲಾ ಕೆಲಸದ ವಿವರಗಳು ಇರುವುದರಿಂದ ಅನುಕಂಪ ಆಧಾರಿತ ಕೆಲಸವನ್ನು ನನಗೆ ದೊರೆಯುವ ಸಾಧ್ಯತೆ ಇದೆ ಎಂದು ಹೇಳಿ ಅದಕ್ಕಾಗಿ ಅರ್ಜಿ ಬರೆಸಿ ಇಲಾಖೆ ಕಛೇರಿಗೆ ಸಲ್ಲಿಸಿದರು. ಹಲವಾರು ತಿಂಗಳುಗಳು ನಿರಂತರವಾಗಿ ಪ್ರಯತ್ನ ನಡೆಯುತ್ತಿದೆ. ಈ ಕೆಲಸವಾಗುತ್ತದೆ ಎಂದು ಒಮ್ಮೆ, ಆಗುವುದಿಲ್ಲ ಎಂದು ಆಗುತ್ತಿತ್ತು. ಆಕಸ್ಮಾತ್ ಕೆಲಸ ಕೊಟ್ಟರೆ ನನಗೆ ಮಾಡಲು ಆದೀತೆ. ನನಗೆ ಗೊತ್ತಿರುವುದು ಕಸ ಮುಸುರೆ ಬಟ್ಟೆ ಒಗೆಯುವ ಕೆಲಸ. ಆ ತರಹದ ಕೆಲಸಗಳಾದರೆ ಸುಲಭವಾಗಿ ಮಾಡಬಹುದು ಎಂದೆ. ಇದನ್ನು ಕೇಳಿದ ಅವರು ಹಾಗೂ ನಮ್ಮ ಬಂಧುಗಳು ನಗುತ್ತಾ, ನೀವು ಎಸ್ಸೆಸ್ಸೆಲ್ಸಿ ಓದಿದವರು. ಕನಿಷ್ಠ ಗುಮಾಸ್ತೆ ಕೆಲಸ ಸಿಗುತ್ತದೆ ಎಂದರು. ಆ ಕೆಲಸ ಗೊತ್ತಿಲ್ಲದಿರುವುದರಿಂದ ಮುಂದೆ ಕಷ್ಟವಾಗದೆ ಎಂದು ಭಯವಾಯಿತು. ಕೆಲಸ ಸಿಗದಿದ್ದರೂ ಒಳ್ಳೆಯದೇ ಎಂದೂ ಎನಿಸುತ್ತಿತ್ತು. ಮುಂದಿನ ವಾರ ಕೆಲಸಕ್ಕೆ ಶಿಫಾರಸು ತರಲು ಒಬ್ಬರನ್ನು ಭೇಟಿ ಮಾಡಲು ಕರೆದೊಯ್ದುರು. ಅವರು ಒಂದು ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದು ಅವರ ಮೂಲಕ ವಶೀಲಿ ಬೇಕಿತ್ತು. ಅವರಿಗಾಗಿ ಕಾಯುತ್ತಾ ಕುಳಿತುಕೊಳ್ಳಲು ಪರಿಚಯದ ಟೆಲಿಫೋನ್ ಆಪರೇಟರ್ ಬಳಿ ಕರೆದುಕೊಂಡು ಹೋದರು. ಆ ಆಪರೇಟರ್ ರವರು ವಿಜ್ಞಾನ ಪದವೀಧರರು ಎಂದೂ, ಅಪಘಾತವೊಂದರಲ್ಲಿ ದೃಷ್ಟಿ ಕಳೆದುಕೊಂಡರು ಎಂದರು. ನಂತರ ಧೃತಿಗೆಡದೆ, ಕಾಣುವಷ್ಟೇ ದೃಷ್ಟಿಯಿಂದ ಮಾಡಬಹುದಾದ ಈ ಕೆಲಸವನ್ನು ಕಲಿತು ಎಷ್ಟು ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ ನೋಡಿ, ಅವರಷ್ಟು ನಿಮಗೆ ತೊಂದರೆ ಇದೆಯೇ ಎನ್ನುತ್ತಾ ಅವರ ಪರಿಚಯ ಮಾಡಿಸಿದರು. ಅವರೇ ಹೇಳದ ಹೊರತು ಅವರಿಗೆ ಕಾಣದು ಎಂದು ಹೇಳಲು ಸಾಧ್ಯವೇ ಇಲ್ಲ. ಪ್ರತಿದಿನವೂ ಅವರೊಬ್ಬರೇ ಮೂವತ್ತು ಕಿಲೋಮೀಟರ್ ದೂರದಿಂದ ರೈಲಿನಲ್ಲಿ ಓಡಾಡುತ್ತಾರೆ ಎಂದರು. ಅವರೊಂದಿಗೆ ಕೆಲವು ಸಮಯ ಕಳೆದೆವು. ಜೊತೆಗೆ ಅವರ ಆತ್ಮವಿಶ್ವಾಸದ ಮಾತು, ಸಲಹೆಗಳು ನನಗೆ ಭಾರೀ ಪರಿಣಾಮ ಬೀರಿತು. ಯಾವ ಕೆಲಸವನ್ನು ಕೊಟ್ಟರೂ ಮಾಡಬಲ್ಲೆ ಎಂದು ಎನಿಸಲು ಆರಂಭಿಸಿತು. ಹೋದ ಕೆಲಸ ಪೂರೈಸಿದ ಮೇಲೆ ಮನೆಗೆ ಬಂದೆ. ಎಲ್ಲೈಸಿ ಏಜೆಂಟ್ರವರು ಹಿಡಿದ ಕೆಲಸ ಬಿಡದ ಸ್ವಭಾವದ ಅನುಭವವಾಗಿದ್ದರಿಂದ ಏನೋ ಸಮಾಧಾನ.

ಒಂದು ದಿನ ಇದ್ದಕ್ಕಿದ್ದಂತೆ ಬಂದ ಕಛೇರಿಯ ಟಪ್ಪಾಲು ನನ್ನನ್ನು ಕಛೇರಿಗೆ ಬರಲು ತಿಳಿಸಿದೆ. ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್ ಹಿಡಿದು, ಬಂಧುವನ್ನು ಕರೆದುಕೊಂಡು ಹೋದೆನು. ಅದೊಂದು ಸಂದರ್ಶನ ಕಾರ್ಯಕ್ರಮ. ನಾನು ಎಸ್ಎಸ್ಎಲ್ಸಿ ಓದಿದ್ದರಿಂದ ಗುಮಾಸ್ತೆ ಕೆಲಸಕ್ಕೆ ಸೇರಲು ಆದೇಶವನ್ನು ನೀಡಿದ್ದು ನನ್ನನ್ನು ನಾನೇ ನಂಬದಾದೆ. ಸಂತೋಷ ದುಃಖ ಸಂಭ್ರಮ ಎಲ್ಲವೂ ಕೂಡಿದಂತೆ ಅನಿಸಿತು. ವಿಷಯ ತಿಳಿದ ಎಲ್ಲೈಸಿ ಏಜೆಂಟ್ರವರೂ ತುಂಬಾ ಖುಷಿಯಾದರು. ಅದೇ ನಗರದಲ್ಲಿ ದೊರೆತ ಕೆಲಸಕ್ಕೆ ಸೇರಿ ಒಂದೆರಡು ತಿಂಗಳಲ್ಲಿ ನಾನಿದ್ದ ಮನೆಯವರು ಪ್ರತ್ಯೇಕ ರೂಂ ಕೊಟ್ಟರು. ಪಾತ್ರೆ ಕೆಲಸಗಳಿಗೆ ಸಮಯ ದೊರೆಯುತ್ತಿದ್ದಿಲ್ಲ ವಾದ್ದರಿಂದ ಆ ಕೆಲಸ ಕಡಿಮೆಯಾಯಿತು. ಕೆಲಸಕ್ಕೆ ಸೇರಿದ ಒಂದು ವರ್ಷದಲ್ಲೇ ನನ್ನ ಮೇಲಾಧಿಕಾರಿಯೇ ನನ್ನನ್ನು ಮದುವೆ ಮಾಡಿಕೊಳ್ಳುವಂತೆ ಪ್ರಸ್ತಾಪ ಮಾಡಿದರು. ಅದೂ ನಡೆಯಿತು. ಹಳೆಯ ಜೀವನವನ್ನು ಪೂರ್ತಿ ಮರೆತು ಜೀವನ ಮಾಡು. ಅದರಿಂದ ನಮ್ಮ ಜೀವನಕ್ಕೆ ಸಮಸ್ಯೆ ಇರುವುದಿಲ್ಲ ಎಂಬ ನನ್ನ ಈ ಪತಿಯ ಮಾತು ಸಲಹೆಯಂತೆ ಕಂಡರೂ ಎಚ್ಚರಿಕೆ ಎಂದು ಕೊಂಡೆ. ಮುಂದಿನ ವರ್ಷವೇ ಈ ಆನಂದ ಹುಟ್ಟಿದ. ಸಮಾಜದಲ್ಲಿ ನಿಧಾನವಾಗಿ ನನ್ನ ಪ್ರತಿಷ್ಠೆ ಗೌರವಗಳು ಹೆಚ್ಚಾಯಿತು. ಕಳೆದೇ ಹೋಗಿದ್ದ ಬಂಧುಗಳು ಮಿತ್ರರು ಯಾವುದಾದರೂ ಕೆಲಸಕ್ಕೆ ಬಂದಾಗ ಮಾತನಾಡಿಸಿ ಹೋಗುವುದು ಸಹಜವಾಯಿತು.

ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಲು ನನ್ನ ಅಧಿಕಾರಿ ಪತಿ ಒತ್ತಾಯಿಸಿ ಬಿಎ ಪದವಿವರೆಗೂ ಓದಿಸಿದರು. ಮಗನ ಆಟ ಪಾಠಗಳೊಂದಿಗೆ ನನ್ನ ವಿದ್ಯಾಭ್ಯಾಸ ಮುಗಿಸಿದೆ. ಇಲಾಖೆ ಚಿಕ್ಕದಾದ್ದರಿಂದ ಬಡ್ತಿಗೆ ಅವಕಾಶವಾಯಿತು. ಹತ್ತಿರದ ಕೆಲವು ಊರುಗಳಲ್ಲಿ ಕೆಲಸಕ್ಕಾಗಿ ವರ್ಗಾವಣೆ ಆದರೂ ನನ್ನ ಪತಿ ಹೊಂದಿಸಿಕೊಂಡು ಹೋಗಿದ್ದರಿಂದ ಐವತ್ತೆಂಟರ ವಯಸ್ಸಿನವರೆಗೆ ಕೆಲಸ ಮಾಡಿದೆ. ಕಳೆದ ತಿಂಗಳು ಸೂಪರಿಂಟೆಂಡೆಂಟ್ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಹೆಮ್ಮೆ ನನ್ನದು. ಬೀಳ್ಕೊಡುಗೆ ಸಮಾರಂಭದಲ್ಲಿ ನನ್ನ ಸೇವೆಯ ಕುರಿತು ಎರಡು ಮಾತು ಹೇಳಬೇಕು ಎಂದಾಗ ನಾನು ಜೀವನದಲ್ಲಿ ನಡೆದು ಬಂದ ಹಾದಿಯ ಬಗ್ಗೆ  ಹೇಳಲೆನಿಸಿತು:

"ನನ್ನ ಜೀವನದಲ್ಲಿ ದುಡ್ಡು ಕಾಣಲು ಅವಕಾಶ ಮಾಡಿ ಗೌರವ ತಂದ ಎಲ್ಲೈಸಿ ಸಂಸ್ಥೆ ಹಾಗೂ ನನಗಾಗಿಯೇ ಎಂಬಂತೆ ದೊರೆತ ನಮ್ಮ ಪಾಲಿಗೆ ದೇವರಾದ ಎಲ್ಲೈಸಿ ಏಜೆಂಟ್ರವರಿಗೆ ಕೃತಜ್ಞತೆ ಹೇಳುವುದರಲ್ಲಿ ಮನಸ್ಸು ಕಣ್ಣೀರಿನಿಂದ ತುಂಬಿ ಮಾತನಾಡಲು ತೊಂದರೆಯಾಯಿತು. ಸಂಬಳವನ್ನು ಕೊಟ್ಟ ಹಾಗೂ ಸಮಾಜದಲ್ಲಿ ಸ್ಥಾನಮಾನದ ಗೌರವ ತಂದು ಕೊಟ್ಟ ಇಲಾಖೆಗೆ, ಸೇವಾವಧಿಯಲ್ಲಿ ಸಹಕರಿಸಿದ ಎಲ್ಲಾ ಸಹೋದ್ಯೋಗಿಗಳಿಗೆ ಕೃತಜ್ಞತೆ ಹೇಳಿ ಮಾತು ಮುಗಿಸಿದೆ ಅಲ್ಲವೇ ಎಂದು ಯೋಚಿಸುತ್ತಿದ್ದೇನೆ ಎಂದು ತಿಳಿದರೂ ಕಣ್ಣೀರಧಾರೆ ಬರುತ್ತಿರುವುದನ್ನು ಗಮನಿಸಿರಲಿಲ್ಲ." ನನ್ನ ಕಣ್ಣೀರು ಪಕ್ಕದಲ್ಲಿ ಕುಳಿತಿದ್ದ ಪತಿ ಮಹಾಶಯರ ಕೈಮೇಲೆ ಬಿದ್ದಿತು ಅವರು ಗಾಬರಿಯಿಂದ ಏನಾಯಿತು, ಏನು ಯೋಚಿಸುತ್ತಿದ್ದೀಯಾ ಗೌರಾ, ವಾಷಿಂಗ್ಟನ್ ಬಂದೇ ಬಿಟ್ಟಿತು. ಇನ್ನೊಂದು ಘಂಟೆಯಲ್ಲಿ ಮಗನ ಮನೆಯಲ್ಲಿ ಇರುತ್ತೇವೆ. ಯಾಕೆ ಯೋಚನೆ, ಸುಧಾರಿಸಿಕೋ ಎಂದು ಸಮಾಧಾನ ಹೇಳಿದರು. ಮನಸ್ಸಿನಲ್ಲಿ ಕೃತಜ್ಞತಾ ಭಾವದ ವಿಚಾರಗಳು ಆದರೂ ಪತಿದೇವರ ಕಳವಳದ ಕಾಳಜಿಗೆ ಗೌರವದಿಂದ ನಿಟ್ಟುಸಿರು ಬಿಟ್ಟು ಸಮಾಧಾನಳಾದೆ. ಒಂದೊಮ್ಮೆ ನಮ್ಮ ಬಂಧುಗಳು ಹಾಗೂ ಎಲ್ಲೈಸಿ ಸಂಪರ್ಕ ಇಲ್ಲದಿದ್ದಲ್ಲಿ ಉಪಕಾರ ಸ್ವಭಾವದ ಎಲ್ಲೈಸಿ ಏಜೆಂಟ್ ರವರು ದೊರೆಯುತ್ತಿರಲಿಲ್ಲ. ಅವರ ಅವಿರತ ಪ್ರಯತ್ನ ಇಲ್ಲದಿದ್ದರೆ ನಾನು, ಅಂದು ಅವರಿವರ ಮನೆಯಲ್ಲಿ ಕಸ ಮುಸುರೆ ಕೂಲಿ ಮಾಡುತ್ತಿದ್ದ ಯಾರು ಕಂಡರೂ ಭಯಗೊಳ್ಳುತ್ತಿದ್ದ ನಾನು, ಈಗ ರಾಜ್ಯ ಸರ್ಕಾರದ ನಿವೃತ್ತ ಅಧಿಕಾರಿ ಯಾಗಿರುತ್ತಿರಲಿಲ್ಲ ಎಂದು ಆತ್ಮ ಹೇಳುತ್ತಿದೆ. ಇದೇ ನನ್ನ ಜೀವನದ ಮುಖ್ಯ ಮೈಲಿಗಲ್ಲು ಎಂದು ಕೊಳ್ಳುತ್ತಿರುವಾಗಲೇ ವಿಮಾನದಲ್ಲಿ ತಲುಪಬೇಕಾದ ಸ್ಥಳ ಹಾಗೂ ಇಳಿಯುವ ತಯಾರಿ ಬಗ್ಗೆ ಬಂದ ಸೂಚನೆಯು ನಿದ್ದೆಯಲ್ಲಿದ್ದ ಪ್ರಯಾಣಿಕರನ್ನು ಬಡಿದೆಬ್ಬಿಸಿ ಚಟುವಟಿಕೆ ಪ್ರಾರಂಭಿಸಿತು. ನನ್ನ ಯೋಚನಾ ಲಹರಿಗೆ ತಡೆಯಾಗಿ ಪತಿಯೊಂದಿಗೆ ಹೊಸ ವಿಷಯಗಳ ಚರ್ಚೆ ಪ್ರಾರಂಭವಾಯಿತು. 

ಈಗ ಗೌರಾ ವಾಷಿಂಗ್ಟನ್ನಲ್ಲಿದ್ದಾಳೆ. ಆಗಾಗ್ಗೆ ತನ್ನ ಕಷ್ಟ ಕಾಲದಲ್ಲಿ ಆಶ್ರಯ ಕೊಟ್ಟ ಬಂಧುವಿಗೆ ಮೊಬೈಲ್ನಲ್ಲಿ ಮಾತನಾಡುತ್ತಿರುತ್ತಾಳೆ. ಆಕೆಯು ತನ್ನ ಬಲು ಹಿಂದಿನ ಸ್ಥಿತಿ ಮರೆಯದೆ ಮೇಲ್ಕಂಡ ಜೀವನ ಕಥೆಯನ್ನು ಚರ್ಚಿಸುತ್ತಿರುತ್ತಾಳೆ. ಇಂತಹಾ ಕೃತಜ್ಞತಾ ಭಾವವಿರುವ ಜನಗಳು ಇಂದಿನ ದಿನಗಳಲ್ಲಿ ಅತಿ ವಿರಳ. ಇಂತಹಾ ಕೃತಜ್ಞತಾ ವಾಕ್ಯಗಳು ಕರ್ತವ್ಯವೆಂದು ಸಹಾಯ ಮಾಡಿದವರಿಗೂ ಒಂದು ಸ್ಪೂರ್ತಿಯಲ್ಲವೇ.

ಸಾರ್ವಜನಿಕ ಸೇವಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಸಾರ್ವಜನಿಕರಿಗಾಗಿಯೇ ಇರುವುದಾದರೂ ಕೆಲವು ಸನ್ನಿವೇಶಗಳಲ್ಲಿ ಇರುವ ಕಾನೂನು ಪರಿಮಿತಿಯಲ್ಲಿ ಕೊಡಬೇಕಾದ ಸೇವೆಗಳನ್ನು ಕೊಡಲಾಗುವುದಿಲ್ಲ. ಇಂತಹ ತಾಂತ್ರಿಕ ಸಮಸ್ಯೆಗಳ ಪರಿಹಾರ ಮೇಲಿನ ಅಧಿಕಾರಿಗಳ ಮರ್ಜಿಯಲ್ಲಿರುತ್ತವೆ. ತಾಂತ್ರಿಕ ಸಮಸ್ಯೆಗಳಿಗೆ ಹಾಲಿ ನಿಯಮದಡಿಯಲ್ಲಿ ಮೂಲ ನಿಯಮದ ಷರತ್ತುಗಳಿಗೆ ಲೋಪವಾಗದಂತೆ ಪ್ರಕರಣವನ್ನು ಪರಿಗಣಿಸಿದಾಗ ಫಲಾನುಭವಿಗಳ ಜೀವನವೇ ಬದಲಾಗುವ ಸಾಧ್ಯತೆ ಇರುತ್ತದೆ. ಈ ಪ್ರಕರಣದಲ್ಲಿ ಒಂದು ಕುಟುಂಬವೇ ಉದ್ಧಾರವಾಗುವುದರೊಂದಿಗೆ ದಾವೆ ಹಣಕ್ಕಾಗಿ ಪ್ರಯತ್ನಿಸಿ ಸಫಲನಾದ ಎಲ್ಲೈಸಿ ಏಜೆಂಟ್ ನ ಆತ್ಮವಿಶ್ವಾಸ ಹೆಚ್ಚಾಗಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಲೂ ಅವಕಾಶವಾಯಿತು. ಇದೊಂದು ನೈಜ ಘಟನೆ ಆಧಾರಿತ ಕಥೆ.

Comments

  1. ಪರಿಸ್ಥಿತಿಯ ಲಾಭ ಪಡೆದು ಸಹಾಯ ಮಾಡುವ ನೆಪದಲ್ಲಿ, ದುಡ್ಡು ಹೊಡೆದು ಮೋಸ ಮಾಡುವ ಎಷ್ಟೋ
    ಜನರ ಮಧ್ಯೆ, ಒಬ್ಬ ಪ್ರಾಮಾಣಿಕ, ಜನಸ್ನೇಹಿ ವಿಮಾ
    ಏಜೆಂಟರಿಂದ ಇಂತಹ ಎಷ್ಟೋ ಹಾಳಾಗುವ ಸ್ಥಿತಿಯಲಿದ್ದ ಕುಟುಂಬಗಳು ಎದ್ದುನಿಂತಿವೆ ಮತ್ತು
    ಕತೆಯಲ್ಲಿ ಬರುವಂತೆ ಸಮಾಜದಲ್ಲಿ ಒಳ್ಳೆಯ
    ಬದುಕನ್ನು ಕಂಡುಕೊಂಡಿವೆ. ಕತೆ ಓದಿದಮೇಲೆ
    ಹೀಗೂ ಸಾಧ್ಯವೇ ಎಣಿಸಿತು. ಹಾಗೆ ನಮ್ಮ ಮನೆಯ ಕೆಲಸದವಳ ವಿಮೆ ಹಣ
    ಕೊಡಿಸಲು ತಾವು ಪಟ್ಟ ಶ್ರಮ ಹಾಗೂ ವಿಮೆ ಹಣ
    ಕೊಡಿಸಿದಾಗ ಅವಳಿಗೆ ಆದ ಸಂತೋಷ ಮತ್ತು
    ಆ ಹಣದಿಂದ ಅವಳ ಸಂಸಾರಕ್ಕಾದ ಸಹಾಯ
    ಈಗಲೂ ನೆನಪಿಸಿಕೊಳ್ಳುತ್ತೇನೆ.
    ನೈಜ ಘಟನೆಯ ಕತೆ ಚೆನ್ನಾಗಿ ಮೂಡಿಬಂದಿದೆ
    ಇಂತಹ ಕತೆ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು

    ReplyDelete
    Replies
    1. ಕಥಾರೂಪದ ನೈಜ ಘಟನೆಯ ನಿರೂಪಣೆ ಬಹಳ ಚೆನ್ನಾಗಿದೆ. ಕಲ್ಪನೆಗೂ ಮೀರಿದ ಹಿತವಾದ ಅನುಭವ! ಎಲ್ಲೈಸಿಯಿಂದಾಗಿ ಚದುರಿಹೋಗಲಿದ್ದ ಒಂದು ಜೀವನ ಸುಂದರ ರೀತಿಯಲ್ಲಿ ರೂಪುಗೊಂಡ ವಿಷಯ ತಿಳಿದು ನಮ್ಮ ಜೀವವಮಾ ಪ್ರತಿನಿಧಿ ಹಾಗೂ ಸಂಸ್ಥೆಯ ಬಗ್ಗೆ ಅತ್ಯಂತ ಅಭಿಮಾನವೆನ್ನಿಸಿತು. ನಾನೂ ಒಬ್ಬ ಎಲ್ಲೈಸಿಯ ನಿವೃತ್ತ ಅಧಿಕಾರಿ.
      ಇಂಥ ಉದಾಹರಣೆಗಳು ವಿರಳ.
      ಇದನ್ನು ಪ್ರಕಟಿಸಿ ಒಳ್ಳೆಯ ಕೆಲಸ ಮಾಡಿದ್ದೀರಿ. ಸಂಬಂಧಪಟ್ಟವರಿಗೆ ನನ್ನ ಧನ್ಯವಾದಗಳನ್ನು ತಿಳಿಸಿ .
      - ವಸಂತ ಕಣವೀಕರ.

      Delete
  2. ಈ ಕಥೆಯ ಘಟನೆಯನ ಸ್ವಲ್ಪ ಮಟ್ಟಿಗೆ ನೋಡಿದ್ದೇನೆ. ನನಗೆ ವೈಯಕ್ತಿಕವಾಗಿ ಎಲ್ಐಸಿ ಯ ಬಗ್ಗೆ ಅಂತಹಾ ಉತ್ತಮ ಅಭಿಪ್ರಾಯ ಇರಲಿಲ್ಲ. ಯಾವುದೋ ಕಾರಣದಿಂದ ಕೊಡಬೇಕಾದ ಹಣವನ್ನು ಕೊಡಲು ಸತಾಯಿಸುತ್ತದೆ ಎಂದು ತಿಳಿದಿದ್ದೆ. ಆದರೆ ನಿಮ್ಮ ಮಾತಿನಿಂದ ನಾವು ಪಾಲಿಸಿ ಮಾಡಿಸುವಾಗ ಸತ್ಯವಾದ ವಿಷಯ ಕೊಟ್ಟಿದ್ದರೆ ಎಲ್ಐಸಿ ಕೊಡಬೇಕಾದ ಸಮಯದಲ್ಲಿ ತಕರಾರು ಇಲ್ಲದೆ ಹಣ ಬರುತ್ತದೆ ಎಂಬುದು ಸರಿ ಎನಿಸುತ್ತದೆ. ತಮ್ಮ ಮಾತಿನಂತೆ ಮಾಡಿಸಿದ ಪಾಲಸಿಗಳಿಂದ ನನ್ನ ಮಗಳ ವಿದ್ಯಾಭ್ಯಾಸಕ್ಕೆ ಸಹಾಯವಾಯಿತು. ಮಗಳ ಮದುವೆಗೆ ಅನುಕೂಲವಾಯಿತು. ಈಗ ನಿವೃತ್ತ ಜೀವನ ಕ್ಕೂ ಸಹಾಯ ಆಗುತ್ತಿದೆ.ಆದ್ದರಿಂದ ತಮಗೂ ಎಲ್ಐಸಿ ಗೂ ಧನ್ಯವಾದಗಳು. ತಮ್ಮ ಬರಹ ಚೆನ್ನಾಗಿದೆ. ಧನ್ಯವಾದಗಳು.
    - ಸುರೇಶ್ ಮೈಸೂರು

    ReplyDelete
  3. ನೈಜ‌ ಘಟನೆಯನ್ನು ಆಧರಿಸಿದ‌ ಈ ಕಥೆಯು ಪ್ರತೀ ಕುಟುಂಬಕ್ಕೂ ಒಂದು ಮಾದರಿ.

    ಜೀವ ವಿಮೆ ಕುಟುಂಬಕ್ಕೆ ಸರ್ವ ಕಾಲಕ್ಕೂ ಕೈ ಹಿಡಿಯುವ ಒಂದು ನಿತ್ಯ‌ ಸತ್ಯ ಕೂಡಾ.

    ಇಂದಿನ ಲೆಕ್ಕದಲ್ಲಿ ₹ ೧೫,೦೦೦/- ಸಣ್ಣ ಮೊತ್ತವಾದರೂ, ಆ ಕಾಲಕ್ಕೆ ಒಂದು ದೊಡ್ಡ ಮೊತ್ತದ ಹಣವೇ ಸರಿ. ಬಂದ ಹಣದಿಂದ ಬದುಕನ್ನು ರೂಪಿಸಿಕೊಂಡು, ಮಗನನ್ನು ವಿದೇಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದ ಶ್ರೀಮತಿ ಗೌರಾ ಮತ್ತು ಎರಡನೇ ಮದುವೆಯಾದರೂ, ಮೊದಲ ಪತ್ನಿಯಂತೆ ನಡೆಸಿಕೊಂಡು, ಅವರ ವಿದ್ಯಾಭ್ಯಾಸ ಹಾಗೂ ಪದೋನ್ನತಿಗೆ ಸಹಕರಿಸಿದ ಶ್ರೀಮತಿ ಗೌರಾ ಅವರ ಪತಿಯವರು ಸಹಾ ಆದರ್ಶಪ್ರಾಯವಾದ ವ್ಯಕ್ತಿಯಾಗಿ ನಿಲ್ಲುತ್ತಾರೆ.

    ಇನ್ನು ಆಪತ್ತಿನಲ್ಲಿ ಆದವ ನೆಂಟ ಅನ್ನುವಂತೆ, ಸಮಯಕ್ಕೆ ಸರಿಯಾಗಿ ಒದಗಿ ಬಂದು ನೆರವಿನ ಹಸ್ತ ಚಾಚಿದ ಜೀವ ವಿಮಾ ಪ್ರತಿನಿಧಿ ಮತ್ತು ಅವರ ಪತ್ನಿ ಒಂದರ್ಥದಲ್ಲಿ ನಿಜಕ್ಕೂ ಆಪದ್ಬಾಂಧವರು ಎಂದರೂ ತಪ್ಪಿಲ್ಲ.

    ಒಟ್ಟಾರೆಯಾಗಿ, ಈ ಕಥೆಯು ಒಂದು ಕಣ್ತೆರೆಸುವ ಪ್ರತೀ ಕುಟುಂಬದ ಅವಶ್ಯಕತೆಯ ಕಥೆಯಾಗಿದೆ ಮತ್ತು ಜೀವ ವಿಮೆಯಲ್ಲಿನ ಹೂಡಿಕೆಯು ಒಂದು ಆಪತ್ತಿನ ನೆರವಿನ ಹಸ್ತವೆಂದು ಸಾಬೀತುಪಡಿಸುವ ನಿಟ್ಟಿನಲ್ಲಿ, ಜೀವ ವಿಮಾ ಪ್ರತಿನಿಧಿಗಳ ಪ್ರತೀ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

    ವಿ.ಆರ್. ಮುರಲೀಧರ್✍️

    ReplyDelete


  4. ಒಂದು ಸಾಮಾನ್ಯ ಕುಟುಂಬದ ಹೆಣ್ಣು, ತನ್ನ ದುರಾದೃಷ್ಟದಿಂದ ಹೆತ್ತವರನ್ನು ಕಳೆದುಕೊಂಡು, ಪರಿಸ್ಥಿತಿಗೆ ಹೊಂದಿಕೊಳ್ಳುವುದಕ್ಕಾಗಿ ತಮ್ಮ ಹಿರಿಯರು ತೀರ್ಮಾನಿಸಿರುವವರನ್ನು ಪತಿಯನ್ನಾಗಿ ಸ್ವೀಕರಿಸಿರುವದಲ್ಲದೆ, ವಿಧಿಯ ಕೈ ಗೊಂಬೆಯಾಗಿ ತನ್ನ ಚಿಕ್ಕ ವಯಸ್ಸಿನಲ್ಲಿ ತನ್ನನ್ನು ಪ್ರೀತಿಸುತ್ತಿದ್ದ ಗಂಡನನ್ನು ಕಳೆದುಕೊಂಡಿದ್ದು ತುಂಬಾ ನೋವಿನ ಸಂಗತಿ. ಆದರೆ ತನ್ನ ಪತಿಯ ಸಂಭಂಧಿಕರ ಒತ್ತಾಯದ ಮೇರೆಗೆ ಮಾಡಿಸಿದ್ದ ವಿಮಾ ಪಾಲಿಸಿಯು ಆ ಹೆಣ್ಣಿನ ಜೀವನದ ಚಿತ್ರಣವನ್ನೇ ಬದಲಾಯಿಸಿರುವುದು ಒಂದು ಸಂತೋಷದ ವಿಷಯ. ತನ್ನ ಗಂಡನ ಜೀವ ವಿಮೆ ಹಣವನ್ನು ಪಡೆಯಲು ವಿಮಾ ಪ್ರತಿನಿಧಿ ನೀಡಿದ ಸಲಹೆ, ಮಾರ್ಗದರ್ಶನ, ಸಹಾಯವನ್ನು ಪ್ರತಿಯೊಬ್ಬರೂ ಮೆಚ್ಚುವಂತಹದ್ದು. ಕೇವಲ ಒಂದು ನೂರು ರೂಪಾಯಿ ವಿಮಾ ಕಂತು ಕಟ್ಟಿದ್ದರೂ ಸಹ, ಹದಿನೈದು ಸಾವಿರ ರೂಪಾಯಿಗಳನ್ನು ಕೊಟ್ಟ ವಿಮಾ ಕಂಪನಿಯ ಸೇವೆ ಶ್ಲಾಘನೀಯ. ಎಷ್ಟೆಲ್ಲಾ ಎಡರು ತೊಡರುಗಳು ಎದುರಾದರೂ, ಎದೆಗುಂದದೆ ಜೀವನದಲ್ಲಿ ಅತಿ ಹೆಚ್ಚಿನ ಎತ್ತರಕ್ಕೆ ಬೆಳೆಯಲು ಕಾರಣ, ಆ ಹೆಣ್ಣಿಗೆ ಇದ್ದ ಧೈರ್ಯ ಹಾಗೂ ಆತ್ಮ ವಿಶ್ವಾಸ. ಇಂತಹ ನೈಜ ಕಥೆಯನ್ನು ತಮ್ಮದೇ ಆದ ಭಾಷಾ ಶೈಲಿಯಲ್ಲಿ ನಮ್ಮೆಲ್ಲರ ಗಮನಕ್ಕೆ ಲೇಖನದ ಮೂಲಕ ತಂದಿರುವ ನನ್ನ ಆತ್ಮೀಯ ಸ್ನೇಹಿತ ಶ್ರೀ. ಕೆ. ಬಿ. ರಾಮಚಂದ್ರರವರಿಗೆ ಧನ್ಯವಾದಗಳು.


    ReplyDelete
  5. ಲೇಖನ ಸರಳವಾಗಿ ಚೆನ್ನಾಗಿ ಮೂಡಿ ಬಂದಿದೆ.
    ಬೆಳ್ಳಾರೆ ಸತ್ಯನಾರಾಯಣ ಶೆಣೈ.

    ReplyDelete
  6. ಕಥೆ ಬಹಳ ಚೆನ್ನಾಗಿ ಮೂಡಿ ಬಂದಿದೆ,👏

    ಅನುಪಮ

    ReplyDelete
  7. ಸಹಾಯ ಮಾಡಿದ ಏಜೆಂಟ್ ನೀವೆ ಇರಬಹುದು ಅನಿಸುತಿದೆ. 👌🙏

    ReplyDelete
  8. ಜೀವವಿಮೆ ಎನ್ನುವುದು ಒಂದು ರೀತಿಯ ವರದಾನ.ಕಾರಣ ಒಂದು ರೀತಿಯ ಆಪದ್ಬಾಂಧವ ನೆಂದೇ  ಹೇಳಬಹುದು. ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸ್ವಲ್ಪ-ಸ್ವಲ್ಪ ಹಣ ಕಟ್ಟುವಾಗ ಗೊತ್ತಾಗದೆ ಒಟ್ಟಿಗೆ ಹಣ ಬಂದಾಗ ಸಂತೋಷಿಸುತ್ತೇವೆ.ಇದು ಕಷ್ಟಕ್ಕೆ ಒ ದಗುವ  ವರದಾನ. ಜೀವ ವಿಮೆಯಲ್ಲಿ ಬರೆದಿರುವ ನೈಜಘಟನೆಯನ್ನು ಓದಿದಾಗ ಎಲ್ಲರಿಗೂ ಇದರ ಅರಿವಾಗುತದೆ. ಬಂಧುಗಳ ಸಲಹೆಯಂತೆ ಮಾಡಿದ ವಿಮೆ ಮುಂದೆ ಅವಳ ಜೀವನವನ್ನೇ ಬದಲಾಯಿಸಲು ಸಹಾಯ ವಾಗುತ್ತದೆ. ಒಬ್ಬ ಅಸಹಾಯಕ ಹೆಣ್ಣು ಮಗಳ ಕಷ್ಟಕ್ಕೆ ಆಗುವ ಜೀವ ವಿಮಾ ಹಣ  ಎಂತಹ ಅಮೋಘವಾದ ವರದಾನವಾಗುತ್ತದೆ. ಅದನ್ನು ಕೊಡಿಸಲು ಕಷ್ಟಪಟ್ಟ ಏಜೆಂಟರನ್ನು ಎಷ್ಟು ಶ್ಲಾಘಿಸಿದರೂ  ಸಾಲದು.ಹಾಗೂ ಆಕೆಗೆ ಸಹಾಯ ಮಾಡಿ ಆಸರೆಯಾದ ಮನೆಯವರ ಹಾಗೂ ಮರುಜೀವನ ನೀಡಿದ ಪುಣ್ಯಾತ್ಮರ ಬಗ್ಗೆ ಬರೆಯಲು ಪದಗಳೆ ಇಲ್ಲ.ಹತಾಶರಾಗಿದ್ದ ಹೆಂಗಸು ಕಷ್ಟಪಟ್ಟು ಮುಂದೆ ಉನ್ನತ ಹುದ್ದೆಗೆ ಬಡ್ತಿ ಹೊಂದಿದರೂ, ತನ್ನ ಹಳೆಯ ಜೀವನ ಹಾಗೂ ಸಹಾಯ ಮಾಡಿದವರನ್ನು ಮರೆಯದೆ ಇರುವುದು ಅವರಲ್ಲಿರುವ ಕೃತಜ್ಞತಾ ಭಾವವನ್ನು ಸೂಚಿಸುತ್ತದೆ. ಒಟ್ಟಿನಲ್ಲಿ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಾಗೂ ನಿಲ್ಲಿಸದೆ ಓದುವಂತೆ ಮಾಡುತ್ತದೆ.

    ReplyDelete
  9. ಮನೆಯ ಪರಿಸ್ಥಿತಿಗೆ ಓಗೊಟ್ಟು ಮದುವೆಯಾಗಿ ಬಾಳುತ್ತಿದ್ದ ಹುಡುಗಿಗೆ ಆದ ಹಠಾತ್ ಆಘಾತ, ಆದರೆ ಬದುಕಲು ಇದ್ದ ಸ್ವಾಭಿಮಾನ, ಧೈರ್ಯ, ವಿಮಾ ಪಾಲಿಸಿ ಅದರಿಂದಾಗಿ ದೊರೆತ ಆಸರೆ, ಸಹಾಯ ಹಸ್ತಗಳು, LIC ಏಜೆಂಟರ ಸಹಾಯ, ಬೆಂಬಲ, ಆಕೆಗೆ ಎಲ್ಲ ರೀತಿಯ ಸ್ಫೂರ್ತಿ, ಮಾರ್ಗದರ್ಶನ ಮಾತ್ರವಲ್ಲದೆ ಆಕೆಗೆ ಕೆಲಸ ಕೊಡಿಸಲು ಆತ ಪಟ್ಟ ಶ್ರಮ, ಆಕೆಗೆ ದೊರೆತ ಪತಿಯ ಸಹಕಾರ, ಕಾಳಜಿ, ವಿದ್ಯಾಭ್ಯಾಸ ಮುಂದುವರೆಸಿ ಪಡೆದ ಪದವಿ ಮತ್ತು ಅದರಿಂದ ಬಡ್ತಿಗಳು, ಗೌರವಾದರಗಳು ಎಲ್ಲವೂ ಸ್ವಗತದಂತೆ ಆಕೆಯ ಮನದೊಳ ಹೊಕ್ಕು ತಿಳಿದಂತೆ ಬರೆದಿರುವ ನೈಜ ವಿಷಯಗಳ ಹರಿವು ಮನದಾಳಕ್ಕೆ ಇಳಿಯುವಂತಿದೆ. ವಿದೇಶಕ್ಕೆ ಹೋದರೂ ಗತಕಾಲದ ನೆನಪಿನಲ್ಲಿ ಸಲ್ಲಿಸುವ ಕೃತಜ್ಞತಾ ಭಾವ ಇಂದಿನ ಪೀಳಿಗೆಗೆ ಮಾದರಿಯೇ.
    ಪ್ರತಿ ಸಹೃದಯಿಗೂ ಮನ ಮಿಡಿಯುವಂತೆ, ಮಾದರಿ ನಡೆನುಡಿಗಳು ಹೇಗಿರಬೇಕು ಎಂಬುದನ್ನು ಬಿಂಬಿಸುವ, "ಆಪ ದ್ಬಾಂ ಧವ" ಎನ್ನುವ ಹೆಸರನ್ನೂ ಸಾರ್ಥಕ ಪಡಿಸುವಂತಿದೆ.
    ಅದೇ ರೀತಿ ಆಪತ್ ಕಾಲಕ್ಕೆ ವಿಮೆಯ ಅಗತ್ಯವನ್ನೂ ಸ್ಪಷ್ಟ ಮಾಡಿದೆ.
    ಈ ಲೇಖನದಿಂದ ಇತರರೂ ಸ್ಫೂರ್ತಿ ಪಡೆದು ಸಹಾಯ ಹಸ್ತ ಚಾಚು ವಂತಾಗಲಿ.
    ಇತರರಿಗೆ ಉಪಕಾರ ಮಾಡುವುದರಿಂದ ,ತಮಗೆ ಉಪಕಾರವನ್ನು ಮಾಡಿದವರಿಗೆ ಗೌರವ ಸೂಚಿಸಿದಂತೆ ಅಲ್ಲವೇ ಎನ್ನುವುದು ಲೇಖಕರ ಅಂಬೋಣ ಅನಿಸುತ್ತದೆ.

    ReplyDelete
  10. ನೈಜ ಘಟನೆಯನ್ನಾಧರಿಸಿ ತಾವು ಹೆಣೆದ ಕಥೆ ಮನಮುಟ್ಟುವಂತಿದೆ. ಆಕೆಗೆ ಹೊರಗಿನ ವ್ಯಕ್ತಿಗಳಿಂದ ಸಿಕ್ಕಿದ ಸಹಾಯದ ಜೊತೆಗೆ ಟೆಲಿಫೋನ್ ಆಪರೇಟರ್ ಅವರೇ ಆಕೆಗೆ ಪರಿಸ್ಥಿತಿಯನ್ನು ಎದುರಿಸಲು ಸ್ಪೂರ್ತಿಯಾದವರು. ಸಹಾಯಮಾಡಿದ ಜೀವವಿಮೆಯ ವ್ಯಕ್ತಿಯಲ್ಲಿ ತಮ್ಮ ಛಾಯೆ ಹಾಗೂ ವ್ಯಕ್ತಿತ್ವವನ್ನು ಕಾಣುತ್ತೇನೆ ವಂದನೆಗಳು.

    ReplyDelete

  11. ರಮೇಶ್ ನಾಡಿಗ್
    ಈ ನೈಜ ಘಟನೆ ಯನ್ನು ಯಥಾವತ್ತಾಗಿ ವಿವರಿಸಿದ ಲೇಖಕರು ಬೇರೆ ಯಾರೂ ಅಲ್ಲ
    ಸ್ವತಃ ವಿಮಾ ಏಜೆಂಟ್, ಅಲ್ಲದೆ ಅತ್ಯಂತ ನಿಷ್ಠೆ ಯಿಂದ ಕಳೆದ ಮೂರು ದಶಕಗಳಿಗೂ ಹೆಚ್ಚು ವರ್ಷಗಳಿಂದ, ಸೇವಾ ಮನೋಭಾವ ದಿಂದ ಎಲ್. ಐ. ಸಿ. ಗಾಗಿ
    ಸೇವೆ ಸಲ್ಲಿಸುತ್ತ ಬಂದಿರುವುದು ಅವರನ್ನು
    ಹತ್ತಿರದಿಂದ ಬಲ್ಲ ನನಗೆ ಗೊತ್ತು. ಯಾರೇ
    ಆಗಲಿ ಸಮಸ್ಯೆ ಹೊತ್ತು ಬಂದವರಿಗೆ ಪರಿಹಾರ ದೊರಕಿಸಿಕೊಡುವ ಪರಿಪಾಠ ರಾಮಚಂದ್ರ ರವರದ್ದು. ಎಲ್ಲೈಸಿಯನ್ನು, ಹಾಗೂ ಸೇವೆಯನ್ನು ಅವರಷ್ಟು ಪ್ರೀತಿಸುತ್ತ ತೊಡಗಿಕೊಂಡು ಪ್ರತಿನಿಧಿ ಗಳು ಸಿಗುವುದು ಅಪರೂಪ. ಅವರ ಗುರಿ ಒಂದೇ ವಿಮಾ ಕಂಪನಿಗೆ ಅಪಖ್ಯಾತಿ ಬರಬಾರದು, ಗ್ರಾಹಕರಿಗೆ ತೊಂದರೆಯಾಗಬಾರದು. ಈ ನೈಜ ಕಥೆಗೆ ಸುಖಾಂತ್ಯ ಕೊಟ್ಟವರು ಇವರೇ. ಆದರೆ ತಮ್ಮ ಪಾತ್ರವನ್ನು ಎಲ್ಲಿಯೂ ಪ್ರಸ್ತಾಪ ಮಾಡದೆ ಎಲ್ಲೈಸಿಗೆ ಹೆಸರು ತಂದುಕೊಟ್ಟಿದ್ದಾರೆ.. ರಾಮಚಂದ್ರ ರವರಿಗೆ ಧನ್ಯವಾದಗಳು..

    ReplyDelete
  12. ಹೇಗಿದ್ದವರು ಹೇಗಾಗಬಹುದು ಎನ್ನುವುದಕ್ಕೆ ಇದು ಅತ್ಯುತ್ತಮ ನಿದರ್ಶನ. ಇಲ್ಲಿ ಮುಖ್ಯವಾಗಿ ಗೌರನ ಜೀವನದಲ್ಲಿ ಕಾಣುವ ಕಲವು ಅಂಶಗಳು.
    ತಾಳ್ಮೆ
    ಛಲ
    ಮುಂದಿನ ದಾರಿ
    ಜೀವನಕ್ಕಾಗಿ ಆಶ್ರಯ
    ಕಷ್ಟಪಟ್ಟು ದುಡಿತ
    ದೇವರಂತೆ ಬಂದ ಎಲ್.ಐ.ಸಿ
    ಎಲ್.ಐ‌.ಸಿ ಏಜೆಂಟರ ನಿಸ್ವಾರ್ಥ ಸೇವೆ
    ಪಾಲಿಸಿಯಿಂದ ಬಂದ ಹಣ
    ಸರ್ಕಾರಿ ಕೆಲಸ
    ವೈವಾಹಿಕ ಜೀವನ
    ಆನಂದನ ಜನನ / ವಿದ್ಯಾಬ್ಯಾಸ
    ಸುಖೀ ಸಂಸಾರಿ
    ಸೂಪರಿಡೆಂಟ್ ಆಗಿ ನಿವ್ರುತ್ತಿ
    ವಿದೇಶ ಪ್ರಯಾಣ.

    ಇನ್ನೇನು ಬೇಕು. ಎಲ್ಲವೂ ಭಗವಂತನ ಇಛ್ಛೆ. ಗೌರನ ಜೀವನದಲ್ಲಿ ಬಹು ಮಖ್ಯ ತಿರುವು ತಂದು ಕೊಟ್ಟ ಆ ಎಲ್.ಐ.ಸಿ ಏಜೆಂಟರಿಗೆ ನನ್ನದೊಂದು ನಮನಗಳು.
    ವಂದನೆಗಳು - ರಾಂಚಂದ್ರ.ಕೆ.ಬಿ
    ಗೋಪೀನಾಧ್ ಎಂ.ಎನ್

    ReplyDelete
  13. Very nice article. It is a fact that life insurance is very important aspect of life. Each and every responsible person has to insure not only for his future but also keeping in mind welfare of those dependent on him. Smt Gowra's experience must act as eye opener for everyone. But the fact is that there is a huge amount is lying in the insurance corporation as unclaimed as concerned nominees are unware of such amount. Even if they were aware, the process and procedure involved keeps them away from claiming. This shows that we need many more Ramachandras, dedicated to the ultimate service of needy persons. It is his grateness that even after getting her insurance benefits he pursued her employment and ensured that she had secure life and future. My pranams for this person who is role model for others.

    ReplyDelete
  14. “ಬಾಳ ರೂಪಿಸಿದ ವಿಮೆ” ನೈಜವಾದ ಕಥೆ ಓದಿ ಮನಸ್ಸು ತುಂಬಿ ಬಂದಿತು. ಕತ್ತಲು ತುಂಬಿದ ಬದುಕಿಗೆ ಒಂದು ಪಾಲಿಸಿಯಿಂದ ಇಡೀ ಬದುಕೇ ಹಸನಾಗಿರುವುದು ತುಂಬಾ ಸಂತೋಷಕರ. ಇಲ್ಲಿ ಮಾಡಿಸಿರುವ ಪಾಲಿಸಿಗಿಂತಲೂ ಕೊನೆಯ ಹಂತದಲ್ಲಿ ಯಾರ ಹತ್ತಿರ ಪಾಲಿಸಿ ಮಾಡಿಸಿದ್ದೀರಿ? ಅವರನ್ನೇ ಕೇಳಿ, ಅನ್ನುವ ಕಾಲದಲ್ಲೂ, ಕಷ್ಟದಲ್ಲಿರುವವರಿಗೆ ತಮ್ಮಿಂದಾಗುವ ಸಹಾಯವನ್ನು ಅದರ ಉದ್ದ, ಅಗಲವನ್ನಳೆಯದೆ ಹಿಡಿದಿರುವ ಕೆಲಸಕ್ಕೆ ತಮ್ಮ ಸಮಯ ಮತ್ತು ಶ್ರಮವನ್ನು ಲೆಕ್ಕಿಸದೆ ಸಂಪೂರ್ಣ ಜವಾಬ್ದಾರಿಯಂದ ಕೊನೆ ಮುಟ್ಟಿಸುವ ಎಲ್ .ಐ .ಸಿ. ಏಜಂಟ್ ಅತೀ ವಿರಳ. ಇದೊಂದು ದೊಡ್ಡ ಸಾಧನೆಯೇ ಸರಿ. ಇದರಿಂದ ಒಂದು ಸಂಸಾರವೇ ಸುಖವಾಯಿತು. ಅವರ ಬಂಧುಬಳಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಇಂತಹ ಸಾಧನೆಗೆ,ಒಬ್ಬರ ,ಬದುಕೇ ಹಸನಾಗಿಸಿದ ಎಲ್.ಐ.ಸಿ ಏಜೆಂಟ್ ರವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.🙏🙏😊👏👏

    ReplyDelete
  15. ಎಲ್ಲೈಸಿ (L I C ) ಯಿಂದ ಪ್ರಯೋಜನವೇನು ? ಎಂಬ ಪ್ರಶ್ನೆಗೆ ಉತ್ತರವಿಲ್ಲಿದೆ. ವಿಮೆಯ ಕಾಲದ ಬಗ್ಗೆ ಅಥವಾ ಅಂದಿನ "ಹಣದ ಬೆಲೆ " ( ಉದಾ :ಆಗ ತೆಂಗಿನ ಕಾಯಿಗೆ ೦. ೨೫ ಪೈಸೆ) ಬಗ್ಗೆ ತಿಳಿಸಿದ್ದರೆ ಒಳ್ಳೆಯದಿತ್ತಲ್ಲವೇ. ಲೇಖನ ಅರ್ಥವತ್ತಾಗಿದೆ. ಇತಿ ನಿನ್ನಣ್ಣ ಹಿರಿಯಣ್ಣ K P

    ReplyDelete
  16. Once again nice article..

    This article explains how a timely help, a good supportive words, will give immense strength to handlge / face the situation. People who remembers and acknowledge are great. Though both are missing in present times, our good deeds / thoughts will always helps us / our children in some way or the other.

    Your articles brings those moments like a movie.. As ರಮೇಶ್ ನಾಡಿಗ್ (Rameshanna) mentioned, you (The LIC Agent) involve / understand the situation / problems and help the families, and you go beyond your limits with your expenses to get the solution.

    God bless you and keep motivate us with such experiences. Looking forward to your next article.

    ~Shailendra Vinayaka

    ReplyDelete
  17. ಇದನ್ನು ನೀವೆ ಹೇಳಿದ್ದೀರಿ ಓಂದು ನಿಜ ಘಟನೆ ಎಂದು. ಆ ಸಂತೃಪ್ತ ಹೆಣ್ಣುಮಗಳು ಸಮಾಜದಲ್ಲಿ ಗೌರವದಿಂದ ಬಾಳಲು ಸಾದ್ಯವಾಗಲು ನೆರೆವಾದ ಆಕೆಯ ಗತಿಸಿದ ಪತಿ ಹಾಗೂ ಅವರಿಗೆ ವಿಮೆ ಮಾಡಿಸಲು ಪ್ರೇರೇಪಿಸಿದ ಸ್ನೇಹಿತರು ಸ್ಮರಣೀಯರು. ಆಕೆಯ ನ್ಯಾಯಯುತ ಹಣ ಮತ್ತು ಅನುಕಂಪದ ನೌಕರಿ ಪಡೆಯಲು ಶ್ರಮಿಸಿದ ಆ ಮಹಾತ್ಮರಿಗೆ ನಮನಗಳು. ಇಂತಹ ಪರರಿಗೆ ಅಪರಿಚಿತರಿಗೆ ತಮ್ಮ ಜ್ಞಾನದ ಪರಿಮಿತಿಯಲ್ಲಿ ಸಹಾಯಮಾಡುವ ಗುಣ ಸಾಮಾನ್ಯರಲ್ಲಿ ಕಾಣಲು ಸಾದ್ಯವಿಲ್ಲ. ಇದು ಒಬ್ಬ ಸಜ್ಜನರಿಂದ ಮಾತ್ರ ಸಾಧ್ಯ. ಇಂತಹ ಸಜ್ಜನರಲ್ಲಿ ನೀವು ಒಬ್ಬರು ಹಾಗೂ ನಾವು ನಿಮ್ಮ ಸ್ನೇಹಗಳಿಸಿರುವುದು ನಮ್ಮ ಭಾಗ್ಯ. ನಮಸ್ಕಾರ.

    ReplyDelete

Post a Comment