Skip to main content

ಕಗ್ಗಳ್ಳಿಯ ಮಳೆರಾತ್ರಿ

ಇತ್ತೀಚಿನ ದಶಕಗಳಲ್ಲಿ ವಿಶ್ವದ ವಿದ್ಯಾಮಾನಗಳು ಅಂದು ಕೊಂಡಿರುವುದಕ್ಕಿಂತ ಹೆಚ್ಚಿನ ವೇಗದಲ್ಲಿ ನಡೆಯುತ್ತಿದೆ ಎನಿಸುತ್ತದೆ. ಇಂತಹಾ ವೇಗವನ್ನು ಗಮನಿಸಿದಾಗ ನಡೆದ ಘಟನೆಗಳು ತಮಾಷೆ ಎಂದು ಕಂಡರೂ ಮನಸ್ಸಿನ ನೆಮ್ಮದಿಯನ್ನು ಕೆಡಿಸಿದ ಪ್ರಸಂಗಗಳು ಕಾಣಸಿಗುತ್ತವೆ. ಪ್ರತಿಯೊಂದನ್ನೂ ದೇಶ ಕಾಲಮಾನಕ್ಕೆ ಹೋಲಿಸಿ ಗಮನ ಸೆಳೆದ ವಾಸ್ತವ ಘಟನೆಯೇ ಈ ಕಥೆಗೆ ಆಧಾರವಾಗಿದೆ.

ಕಳೆದ ದಶಕದ ಮೊದಲ ದಿನಗಳು. ಮಳೆಗಾಲದ ಒಂದು ಸಂಜೆ. ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತ ಕಮಲಳ ಮನಸ್ಸಿನಲ್ಲಿ ಏನೋ ಯೋಚನೆ. ವಾರದಿಂದ ಬರುತ್ತಿದ್ದ ಮಳೆ ಇಂದೇಕೋ ಹೊಳವು ಕೊಟ್ಟಿದೆ. ಮೇಯಲು ಹೋದ ಜಾನುವಾರುಗಳು ಮನೆಗೆ ಬರುವ ಸಮಯ. ಹತ್ತಿರದಲ್ಲಿ ಏನಾದರೂ ಅವು ಬರುವುದು ಕಾಣುತ್ತದೆಯೇ ಎಂದು ಹೋಗಿ ನೋಡೋಣ ಎಂದರೆ ಎಲ್ಲೆಲ್ಲೂ ಕಿಚಿ ಕಿಚಿ ಎನ್ನುವ ಕೆಸರು ನೆಲ. ಜಾರಿ ಬೀಳದಂತೆ ನಡೆಯಲು ಅಂಗಳದಲ್ಲಿ ಹಾಕಿದ ಅಡಿಕೆ ಮರದ ಹಲಗೆಯ ತುಂಡುಗಳು. ಬೇಡವೆಂದರೂ ಕೆಸರಿನಲ್ಲಿ ಆಡುವ ಮಕ್ಕಳು. ತಲೆ ಮೈ ಕೈ ನೆನೆಸಿಕೊಂಡು ಬಂದು ಆರೋಗ್ಯ ಕೆಡಿಸಿಕೊಳ್ಳುವರೇನೋ ಎಂಬ ಭಯ. ಪದೇ ಪದೇ ಒದ್ದೆಯಾಗುವ ಬಟ್ಟೆಗಳು. ಮೊನ್ನೆ ಒಣಗಲು ಹಾಕಿದ ಬಟ್ಟೆಗಳೇ ಒಣಗಿಲ್ಲ. ಮಲೆನಾಡಿನ ಮಳೆಗಾಲ ಎಂದರೆ ಇವೆಲ್ಲ ಸಾಮಾನ್ಯವೇ. ಎಲ್ಲೆಲ್ಲೂ ನೀರು. ನೋಡಿದಲ್ಲೆಲ್ಲಾ ಹಸಿರು. ತರಕಾರಿ, ಹೂವುಗಳು ಯಥೇಚ್ಛವಾಗಿ ಬೆಳೆಸಬಹುದು, ಬೇಕಾದಾಗ ಹತ್ತಿರದಲ್ಲೇ ಜಲಪಾತಕ್ಕೆ ಹೋಗಬಹುದು. ಆದರೆ ಪುರುಸೊತ್ತು ಬೇಕಲ್ಲವೇ? ಯಾವಾಗೋ ಒಂದು ಸಾರಿ ಜುಯ್ ಎಂದು ಶುರುವಾಗುವ ಮಳೆ ಧೋ ಎಂದು ಬೀಳುವದಷ್ಟೇ ಗೊತ್ತು. ಯಾವಾಗ ನಿಲ್ಲವುದೋ ಬಹುಶಃ ಆ ಮಳೆಗೂ ಗೊತ್ತಿಲ್ಲ. ಕರೆಂಟ್ ಹೋಯಿತು ಎಂದರೆ ಯಾಕೆ ಹೋಯಿತು ಎಂದು ಪತ್ತೆ ಮಾಡಿ ಸರಿ ಮಾಡುವುದಕ್ಕೆ ವಿದ್ಯುತ್ ಇಲಾಖೆಯವರಿಗೂ ಎರಡು ದಿನ ಬೇಕು. ಮಳೆಯಿಂದ ಎಲ್ಲಿ ಮರ ಬಿದ್ದಿದೆಯೋ, ಎಲ್ಲಿ ವೈರ್ ಹರಿದು ಹೋಗಿದೆಯೋ. ಅವರು ಹುಡುಕಿ ರಿಪೇರಿ ಮಾಡುವವರೆಗೂ ಕಾಯಬೇಕು. ಇನ್ನು ಶಾಲೆ ಶುರುವಾಗಿರುವ ದಿನಗಳು ಮಕ್ಕಳು ಮಳೆಯಲ್ಲಿ ಛತ್ರಿ ಹಿಡಿದು ಅಥವಾ ರೈನ್ ಕೋಟ್ ಹಾಕಿಕೊಂಡು ಬಂದರೂ ಮೈ ನೆನೆದು ಬರುತ್ತಾರೆ. ಆ ಯೂನಿಫಾರ್ಮ್ ಇರುವುದು ಎರಡೇ ಸೆಟ್, ನೆನೆದರೆ ವಾರವಾದರೂ ಒಣಗುವುದಿಲ್ಲ. ಒದ್ದೆ ಬಟ್ಟೆ ಹಾಕುವುದಕ್ಕೆ ಆಗುವುದಿಲ್ಲ. ಹಾಕದಿದ್ದರೆ ಮಕ್ಕಳನ್ನು ಶಾಲೆಯವರು ಒಳಗೆ ಬಿಡುವುದಿಲ್ಲ. ಇಂಥಾ ಹಲವು ದಿನನಿತ್ಯದ ತಲೆನೋವು. 

ಈ ಕಗ್ಗಳ್ಳಿಯಲ್ಲಿ ನಮ್ಮದೊಂದೇ ಮನೆ. ಆದರೆ ದೊಡ್ಡದಾಗಿ ಕೂಗಿದರೆ ಕೇಳುವಷ್ಟು ದೂರದಲ್ಲಿರುವ ಆಚೆ ದಿಂಬದಲ್ಲಿ ಹಲವು ಮನೆ, ದಿನಸಿ ಅಂಗಡಿ, ಶಾಲೆ ಎಲ್ಲಾ ಇವೆ. ಮನೆಯಲ್ಲಿ ಎಲ್ಲದಕ್ಕೂ ನಾನೇ ಸಾಯಬೇಕು, ಕೆಲಸದವಳು ಯಾಕೋ ಬಂದಿಲ್ಲ ಎಂದು ಕೊಂಡಳು. ಕೊಟ್ಟಿಗೆ ಕೆಲಸ, ನೀರು, ಹುಲ್ಲು, ಅಡಿಗೆ, ಮಕ್ಕಳಿಗೆ ಪಾಠ ಎಲ್ಲವೂ ಆಗಬೇಕು. ಜಾನುವಾರು ಬಂದರೆ ಬರಲಿ ಎಂದು ಗೇಟ್ ತೆಗೆದು ಒಂದು ನಿಮಿಷವಾಗಿಲ್ಲ ಬಂದೇ ಬಿಟ್ಟವು ಹಸು ಎಮ್ಮೆಗಳು. ಸಮಾಧಾನವಾಗಿ ಅವುಗಳು ಬರುವುದನ್ನು ನೋಡುತ್ತಾ ಇದ್ದಾಳೆ. ಅದೇಕೆ ಗೇಟಿನ ಪಕ್ಕದಲ್ಲಿರುವ ಹುಣಸೆ ಮರದ ಹತ್ತಿರ ನಡೆದು ಬರುತ್ತಿದ್ದ ಎಮ್ಮೆ ಗಾಬರಿಯಿಂದ ಕೂಗುತ್ತಾ ದೂರ ಹೋಯಿತು. ಸಾಲದೆಂದು ಮರದ ಕಡೆಗೆ ಬಿರುಗಣ್ಢಿನಿಂದ ನೋಡುತ್ತಿವೆ. ಏನಿರಬಹುದು ಎಂದು ಕೊಂಡಳು. ಅಮ್ಮಿ, ತಮ್ಮಣ್ಣಿ ಅಂಗಳದಲ್ಲಿನ ಎಳೆ ಕರುವಿನ ತಲೆ ತಡವರಿಸುತ್ತಿದ್ದವರು ಈ ಹಠಾತ್ ಕ್ರಿಯೆಯಿಂದ ಭಯಗೊಂಡು ಅಮ್ಮಾ ಎಂದು ಕೂಗಿ ಓಡಿ ಬಂದರು. ಮರದ ಹತ್ತಿರ ಏನೋ ಆಯಿತು. ಈ ಘಟನೆ ಅವಳನ್ನು ವಿಚಲಿತ ಗೊಳಿಸಿತು. 

ಹಾಗೇ ಈ ಹಳ್ಳಿ ಮನೆಗೆ ಬಂದ ತನ್ನ  ಬಗ್ಗೆ ಯೋಚಿಸುತ್ತಾಳೆ. ‌ಎಸ್ಸೆಸ್ಸಲ್ಸಿ ಮೂರು ಸಾರಿ ಕಟ್ಟಿದ್ದೆ. ಮೊದಲನೇ ಸಾರಿ ಪರೀಕ್ಷೇಲಿ ಓದಿದ್ದು ಬರಲಿಲ್ಲ ಬಂದಿದ್ದು ಓದಿರಲಿಲ್ಲ. ಪಾಠವೇ ಆಗಿರಲಿಲ್ಲ ಎನ್ನಿ. ಇನ್ನು ಪರೀಕ್ಷೆ ದಿನ ಹಾಲ್ನಲ್ಲಿ ಅದೇ ಮೇಷ್ಟ್ರು ಇದ್ದರೂ ನಂತರ ವ್ಯಾಲ್ಯು ಮಾಡಿದವರೇ ಬೇರೆ. ಅವರಿಗೆ ನಮಗೆಷ್ಟು ಪಾಠ ಆಗಿದೆ ಎಂದೇ ಗೊತ್ತಿಲ್ಲ. ಎರಡನೇ ಬಾರಿ ಮನೇಲಿ ಇದ್ದು ಓದಿದ್ದು, ಆಸಕ್ತಿಯೂ ಇರಲಿಲ್ಲ. ಪರೀಕ್ಷೆಯಲ್ಲಿ ಮುಂದೆ ಕುಳಿತಿದ್ದ ಗಣಪತಿ ಪೇಪರ್ ಕದ್ದು ನೋಡಿ ಬರೆದೆ. ಸುಮ್ಮನೆ ನನಗೆ ಗೊತ್ತಿದ್ದು ಬರೆದಿದ್ದರೆ ಚೆನ್ನಾಗಿತ್ತು. ನಾನು ಅಂದು ಕೊಂಡಂತೆ ಅವನು ಜಾಣನಲ್ಲ ಎಂದು ಗೊತ್ತಾಗುವುದಕ್ಕೆ ನಾನು ಫೇಲ್ ಆಗಬೇಕಾಯಿತು. ಮೂರನೇ ಬಾರಿ ದೇವರ ಮೇಲೆ ಭಾರ ಹಾಕಿ ಬರೆದೆ. ವ್ಯಾಲ್ಯೂ ಮಾಡುವವರಿಗೂ ಉತ್ತರ ಪತ್ರಿಕೆಯಲ್ಲೇ ನನ್ನ ಪಾಠದ ಬಗ್ಗೆ, ಮನೆಯ ಕಷ್ಟ ಬಗ್ಗೆ ಎಲ್ಲಾ ಬರೆದಿದ್ದೆ. ಇಪ್ಪತ್ತು ರೂಪಾಯಿ ನೋಟು ಸಹ ಪಿನ್ ಮಾಡಿದರೂ ಅವರಿಂದಲೂ ಸಹಾಯ ಆಗಲಿಲ್ಲ. ಮತ್ತೆ ಯಥಾಪ್ರಕಾರ ಫೇಲೇ, ಯಾರಿಗೂ ನಿಯತ್ತಿಲ್ಲ. ದೇವರು ಸಹಾಯ ಮಾಡುತ್ತಾನೆ ಎಂದು ಕೊಂಡಿದ್ದೆ. ನನ್ನ ನಶೀಬು ಸರಿ ಇಲ್ಲದಿದ್ದರೆ ಪಾಪ, ದೇವರಿಗಾದರೂ ಏನು ಮಾಡುವುದಕ್ಕೆ ಆಗೋತ್ತೆ. ಇನ್ನು ಮನೆಯಲ್ಲಿ ಸುಮ್ಮನೆ ನನ್ನ ಇಟ್ಟು ಕೊಳ್ಳುವುದೇಕೆ, ನನ್ನ ಮದುವೆ ಮಾಡಿದರೆ ಬಗೆ ಹರಿಯಿತು ಎಂದು ಅಪ್ಪ ಅಮ್ಮ ಹುಡುಕಿ ಈ ಆಕಾಶ ರಾಯರನ್ನು ತೋರಿಸಿದರು. ತಡೆದು ಮದುವೆ ಆಗೋಣ ಎಂದು ಕೊಂಡಿದ್ದೆ. ಇವರನ್ನು ನೋಡಿದ ಮೇಲೆ, ಹೇಗೂ ಆಗುವುದೇ ಆದ ಮೇಲೆ ತಡ ಏಕೆ ಎಂದು ಕೊಂಡು ಮದುವೆಗೆ ಒಪ್ಪಿಗೆ ಎಂದೆ. ಮದುವೆ ಆದ ಮೇಲೆ ಈ ಮನೇಲಿ ಇಷ್ಟೊಂದು ಕೆಲಸ ಜವಾಬ್ದಾರಿ ಇರುತ್ತದೆ ಎಂದು ಕನಸಲ್ಲೂ ಅಂದು ಕೊಂಡಿರಲಿಲ್ಲ. ಅದರ ಮಧ್ಯೆ ಐದು ವರ್ಷದಲ್ಲಿ ಮಗ ಮಗಳು ಇಬ್ಬರೂ ಹುಟ್ಟಿದ್ದು ಗೊತ್ತಾಗಲೇ ಇಲ್ಲ ಎನ್ನಬಹುದು.

ಅಯ್ಯೋ ಕತ್ತಲಾಗುತ್ತಿದೆ. ಲೈಟ್ ಬೇರೆ ಹೋಗಿದೆ. ಲಾಟೀನು ಹಚ್ಚುತ್ತಾ ಮಕ್ಕಳಿಗೆ ಯಾವುದೋ ಕಥೆ ಹೇಳುತ್ತಾಳೆ. ಇದ್ದಕ್ಕಿದ್ದಂತೆ ನಾಯಿ ಕೂಗುತ್ತಿದೆ. ಪುನಃ ಹಸು ಎಮ್ಮೆಗಳ ವಿಕಾರ ಧ್ವನಿ. ಟಾರ್ಚ್ ಹಿಡಿದು ಹೋದರೆ ಸಂಜೆ ನೋಡಿದ ಮರದತ್ತ ದನ ಎಮ್ಮೆಗಳು ಕೆಂಪು ಬೆರಗು ಕಣ್ಣಿನಿಂದ ಭಯದಿಂದ ನೋಡುತ್ತಿವೆ. ನಾನು ಟಾರ್ಚ್ ಬಿಟ್ಟು ನೋಡಿದರೂ ಕಾಣದ್ದು ಇವಕ್ಕೆ ಕಾಣುತ್ತಿದೆ ಅಲ್ಲವೇ? ಕತ್ತಲಲ್ಲಿ ಪ್ರತಿಧ್ವನಿಸುತ್ತಿರುವ ಜೀರುಂಡೆಗಳ ಅರಚುವ ಸದ್ದಿಗೆ ಕಪ್ಪೆಗಳ ಸಾಮೂಹಿಕ ವಟಗುಟ್ಟುವ ವಿಚಿತ್ರ ರಾಗಾಲಾಪ. ಇದೆಕ್ಕೆಲ್ಲ ಕಾರಣ ಅಜ್ಜಿ ಹೇಳುತ್ತಿದ್ದ ದೆವ್ವ ಇರಬಹುದೇ! ಬಹುಶಃ ದೆವ್ವಗಳು ಪ್ರಾಣಿಗೆ ಕಾಣುತ್ತದೆ ಎನ್ನುತ್ತಾರೆ. ದೆವ್ವ ಬಂದು ಸೇರಿದೆಯೇ ಎಂದು ಭಯದ ಅನುಮಾನ.

ಪೇಟೆಗೆ ಹೋದ ಇವರಿಗೆ ಕತ್ತಲಾಗುತ್ತಿದೆ, ಒಬ್ಬಳೇ ಇದ್ದಾಳೆ, ಮನೆ ಕೆಲಸ ಮಾಡಿಕೊಂಡು ಮಕ್ಕಳಿಗೆ ಓದಿಸುವುದು ಬರೆಸುವುದು ಕಷ್ಟ ಆಗುತ್ತೆ ಎಂಬ ಅರಿವಿಲ್ಲ. ಸಿಕ್ಕ ಸಿಕ್ಕವರ ಜೊತೆ ಮಾತನಾಡುತ್ತಾ ಮನೆಗೆ ಬರಲು ತಡ ಮಾಡಿಕೊಳ್ಳುತ್ತಾರೆ. ಯಾವ ದಾರಿಯಲ್ಲಿ ಬರುತ್ತಾರೋ? ಅನುಕೂಲ ನೋಡಿಕೊಂಡು ಬರಬೇಕು. ಮನೆಗೆ ಬರೋಕೆ ಎರಡು ದಾರಿ. ಲಕ್ಕವಳ್ಳಿ ಬಸ್ಸಿನಲ್ಲಿ ಬಂದು ಕೈಮರದ ಹತ್ತಿರ ಇಳಿದು ಗದ್ದೇಲಿ ನಡೆದು ಬರಬೇಕು. ಇಲ್ಲವೇ ಈಚೆ ದಿಂಬಕ್ಕೆ ಬಸ್ಸಿಗೆ ಬಂದು ಮಳೆಗಾಲವಾದರೆ ಕಾಡಲ್ಲಿ ಒಂದು ಕಿಲೋಮೀಟರ್ ನಡೆದೇ ಬರಬೇಕು. ಕತ್ತಲು ದಾರಿ. ಕಲ್ಲು ಕೆಸರಿನ ಹಾದಿ. ಎಡವಿ ಬಿದ್ದು ಗಾಯ ಮಾಡಿಕೊಂಡು ಬರೋದು ಸಾಮಾನ್ಯ. ಕತ್ತಲಲ್ಲಿ ಹಾವು ಹುಳ ಓಡಾಡುತ್ತಿರುತ್ತವೆ. ಈ ಗಂಡಸರಿಗೆ ಹೇಳೋರು ಯಾರು? ಇವರು ಎಷ್ಟು ಹೊತ್ತಿಗೆ ಬರುತ್ತಾರೋ?

ಈ ಸಮಯದಲ್ಲಿ ಅತ್ತೆ ಇದ್ದಿದ್ದರೆ ಚೆನ್ನಾಗಿತ್ತು. ಈ ನನ್ನ ಅತ್ತೆಮ್ಮ. ಅದೇನು ಯಾವಾಗಲೂ ಸಿಡಿ ಸಿಡಿ. ಕೆಲಸ ಮಾಡಿದರೆ ಯಾಕೆ ಮಾಡಿದೆ, ಬಿಟ್ಟರೆ ಯಾಕೆ ಮಾಡಿಲ್ಲ, ಒಂಥರಾ ಕಿರಿ ಕಿರಿ ಹೆಂಗಸು. ತಿರುಗಾ ನಾನು ಬಹಳ ಜೋರು ಎಂದು ಎಲ್ಲರಿಗೂ ಹೇಳುತ್ತಾರಂತೆ. ನನ್ನಂತಾ ಧೈರ್ಯದ ಹುಡುಗಿಗೇ ಈ ರೀತಿ ಉರಿಸಿಕೊಂಡು ಇರುತ್ತಾರೆ ಎಂದರೆ, ಪಾಪ ಅವರತ್ತೆ ಅಂದರೆ ನಮ್ಮತ್ತೆ ಅತ್ತೆ ಬಹಳಾ ಸಮಾಧಾನಿಯಂತೆ. ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಮೃದು ಹೆಂಗಸು. ಆಕೆಗೆ ಇವರು ಎಷ್ಟು ಕಿರುಕುಳ ಕೊಟ್ಟಿರಲಿಕ್ಕಿಲ್ಲಾ. ಅಯ್ಯೋ ಅದೆಲ್ಲಾ ಹಳೆಯದು. ಅತ್ತೆಮ್ಮ ವರ್ಷದಲ್ಲಿ ಮುಕ್ಕಾಲು ಭಾಗ ಬೇರೆ ಮಕ್ಕಳ ಮನೆಯಲ್ಲಿ, ನೆಂಟರ ಮನೆಯಲ್ಲಿ ಇರುತ್ತಾರೆ. ಬಾಣಂತನ, ಪೂಜೆ, ಹುಷಾರಿಲ್ಲ ಏನೋ ಒಂದು ನೆಪ. ಸುಮ್ಮನೆ ಪದೇ ಪದೇ ಲಗೇಜ್ ಯಾಕೆ ಹೊರುತ್ತೀರಿ, ಎಲ್ಲರೂ ಮನೇಲೂ ಎರಡೆರಡು ಸೆಟ್ ಬಟ್ಟೆ ಇಟ್ಟು ಬಿಡಿ ಎಂದು ಒಂದು ಸಾರಿ ಹೇಳಿದೆ. ಅದನ್ನೇ ಒಂದು ರಂಪ ಮಾಡಿದರು. ನನಗೇಕೆ. ಹಾಗೆ ನೋಡಿದರೆ ಅವರು ಇಲ್ಲಿದ್ದರೆ ಅನುಕೂಲವಾಗುತ್ತಿತ್ತು. ನಾನು ಅಡುಗೆ ಮನೆಗೆ ಹೋಗೋದೇ ಬೇಡ, ಕೊಟ್ಟಿಗೆ ಕೆಲಸ ಕಡಿಮೆ ಆಗುತ್ತದೆ. ಅವರ ಮನೇಲಿ ಅವರು ಇದ್ದರೆ ನನಗೇನು ತೊಂದರೆ ಎಂದು ಕೊಂಡಳು. 

ಮನಸ್ಸಿನಲ್ಲಿ ಏನೋ ಹೆದರಿಕೆ. ಹಸುವಿನ ಹಾಲು ಕರೆದು ಮುಗಿಸಿದಳು. ಏನೋ ಭಯ. ನೆಮ್ಮದಿ ಕೆಡುತ್ತಿದೆ. ಹಾಗೆಯೇ ಮಕ್ಕಳಿಗೆ ಊಟದ ಶಾಸ್ತ್ರ ಮಾಡಿ ಮಲಗಿಸಿದಳು. ರಾತ್ರಿ ಎಂಟಕ್ಕೆ ಬಂದ ಆಕಾಶರಾಯ ಎಂದಿನಂತೆ ಬೈಸಿಕೊಂಡ. ಬೆಳಗಿನಿಂದ ಸಂಜೆಯವರೆಗೆ ನಡೆದ ಘಟನೆಗಳ ವರದಿ ಕೇಳಿಸಿಕೊಂಡು ಮಲಗಿ ಹತ್ತು ನಿಮಿಷ ಆಗಿರಬಹುದು. ಮತ್ತೊಮ್ಮೆ ನಾಯಿಯ ಕೆಟ್ಟ ಕೂಗು. ದನಗಳ ವಿಕಾರ ಧ್ವನಿ. ಹೊರಗೆ ಹೋಗಿ ನೋಡಲು ಭಾರೀ ಮಳೆ. ಹೆದರಿ ಕೊಂಡೇ ಹೊರಬಂದ. ಬಹುಶಃ ಹೆಂಡತಿ ಹೇಳಿದಂತೆ ದೆವ್ವ ಇರಬಹುದು. ಯಾವ ದೆವ್ವ. ಇಲ್ಲಿಗೇಕೆ ಬಂದಿದೆ, ಇವೆಲ್ಲವನ್ನೂ ನಂಬಬೇಕಾ? ಎಂದು ಯೋಚಿಸುತ್ತಾ ರಾತ್ರಿ ಮುಗಿಸಿದ. ನಾನು ಧೈರ್ಯವಂತ ಎಂದು ಕೊಂಡಿರುವ ಅವಳ ಎದುರಿಗೆ ನನಗೆ ಹೆದರಿಕೆ ಎಂದರೆ ಏನು ಚೆನ್ನಾಗಿರುತ್ತದೆ. ಆದರೂ ಕೈಕಾಲು ನಡುಕ. 

ಬೆಳಗಿನ ಏಳಕ್ಕೇ ಪಕ್ಕದ ಹಳ್ಳಿಯ ಶಾಸ್ತ್ರದ ಐತಾಳರನ್ನು ಕಂಡು ಕೇಳಿದ. ಇದು ಗಾಳಿಗೆ ಸಂಬಂಧ ಪಟ್ಟಂತೆ ಎಂದು ಕವಡೆ ಶಾಸ್ತ್ರ ಹೇಳುತ್ತದೆ, ಭಯ ಬೇಡ ಎಂದು ತಾಯತ, ಮಂತ್ರಿಸಿದ ಕಾಯಿ ಕೊಟ್ಟರು. ಮನೆಗೆ ಬಂದು ಎಲ್ಲರಿಗೂ ತಾಯತ ಕಟ್ಟಿದ. ಮರಕ್ಕೆ ಮಂತ್ರದ ಕಾಯಿ ಕಟ್ಟಿದ. ಈಗ ಯಾವ ತೊಂದರೆಯೂ ಇಲ್ಲ ಎಂದ. ಎಲ್ಲಾ ಸರಿ ಹೋಗುತ್ತೆ ಎಂದು ಕೊಂಡ... ಸಂಜೆ ಏಳು - ಮತ್ತೆ ಶುರುವಾದ ನಾಯಿ ಕೂಗು. ಜೊತೆಗೆ ಮರದಲ್ಲಿ ಗೊರ ಗೊರ ಎಂಬ ದೆವ್ವದ ಕೂಗು. ಈಗ ಹೆಂಡತಿ ಜೊತೆಗೆ ಮಕ್ಕಳೂ ಕೇಳುತ್ತಿವೆ, ಅಪ್ಪಾ, ಗುಮ್ಮ ಎಂದರೆ ಇದೇನಾ? ಅದಕ್ಕೇನೂ ಅವನಲ್ಲಿ ಉತ್ತರವಿರಲಿಲ್ಲ. ಸುಮ್ಮನೆ ಊಟ ಮಾಡಿ ಮಲಗಿರಿ ಎಂದೇನೋ ಹೇಳಿದ. ಆದರೆ ಯೋಚನೆ. ಇದೇನು ದೆವ್ವವೇ, ಭೂತವೇ?, ಶ್ಯಾನುಭೋಗರು ಯಾವಾಗಲೂ ಹೇಳುತ್ತಿದ್ದ ಚೌಡಿಯೇ ಅಥವಾ ಪಿಶಾಚಿ ಇರಬಹುದೇ. ಇಲ್ಲಿಗೇಕೆ ಬಂದಿದೆ ಎಂದು ಕೊಂಡೇ ಬೆಳಗಾಯಿತು. ತನಗೆ ಹೋಗಲೇ ಬೇಕಾದ ಕೋರ್ಟ್ ಕೆಲಸ ಇದೆ, ಪೇಟೆಗೆ ಹೋಗಿ ಬರುತ್ತೇನೆ ಎಂದರೆ ಏನಂತಾಳೋ ಎಂಬ ಭಯದಿಂದಲೇ ಕೇಳಿದ. ಆ ಭಯ ದೆವ್ವದ ಬಗ್ಗೆಯೋ ಅಥವಾ ಹೆಂಡತಿ ಸಲುವಾಗಿಯೋ ಗೊತ್ತಿಲ್ಲ. ಸಾಧ್ಯವಿಲ್ಲ, ಎಲ್ಲಿಗೂ ಹೋಗಬೇಡಿ, ಎಂಬ ದೊಡ್ಡ ದೃಢ ಧ್ವನಿ ಕೇಳಿ ಬೆಚ್ಚಿದ. ಏನೇ ಆದರೂ ಸಂಜೆ ಐದರ ಮೇಲೆ ತಾನೆ, ಅಷ್ಟರೊಳಗೆ ಬಂದೇ ಬಿಡ್ತೀನಿ ಎಂದು ವಿಧವಿಧವಾಗಿ ಸಮಾಧಾನ ಹೇಳಿದ. ಇವತ್ತೇನಾದರೂ ಮತ್ತೆ ದೆವ್ವ ಬಂದರೆ, ನಾನು ಈ ಮನೇಲಿ ಇರಲ್ಲ, ಮಕ್ಕಳನ್ನು ಕರೆದುಕೊಂಡು ಊರಿಗೆ ಹೋಗುತ್ತೇನೆ ಅಷ್ಟೇ ಎಂದಳು. ಅಂತಹದ್ಧೇನೂ ಆಗುವುದಿಲ್ಲ. ಆದರೂ ಹೂಂ ಎಂದು ಹೊರಟ. ಹೇಗೂ ದೆವ್ವದ್ದು ನೈಟ್ ಶಿಫ್ಟ್ ಎಂಬ ಸಮಾಧಾನ ಅವನದು. 

ಸುಮಾರು ಮಧ್ಯಾಹ್ನ ಹನ್ನೆರಡು ಆಗಿರಬಹುದು ಮತ್ತೆ ಮರ ನೋಡುತ್ತಾ ನಾಯಿಯ ವಿಕಾರ ಕೂಗು. ಮಕ್ಕಳು ಶಾಲೆಗೆ ಹೋಗಿವೆ. ಕಿಟಕಿ ಬಾಗಿಲು ಮುಚ್ಚಿರುವ ಮನೆಯೊಳಗೆ ನಸು ಕತ್ತಲಲ್ಲಿ ಇವಳೊಬ್ಬಳೇ. ಕೈಕಾಲು ಅಲುಗಾಡಿಸಲು ಆಗದ ಭಯ. ಈ ಮಧ್ಯೆ ಬಹುದಿನಗಳಿಂದ ಕರೆಯೇ ಬರದೇ ಮರೆತೇ ಹೋಗಿದ್ದ ಟೆಲಿಫೋನ್ ಇಂದೇಕೋ ಹೊಡೆದು ಕೊಳ್ಳುತ್ತಿದೆ. ರಿಸೀವರ್ ಎತ್ತಲೋ ಬೇಡವೋ ಎಂಬ ಯೋಚನೆ. ಆದರೂ ಧೈರ್ಯ ಮಾಡಿ ಫೋನ್ ಎತ್ತಿದಳು. ಅತ್ತ ಅವಳ ಅಣ್ಣ ಅಪರೂಪಕ್ಕೆ ಕರೆ ಮಾಡಿ ಹೇಗಿದ್ದೀಯಾ, ಮಕ್ಕಳು ಮರಿ ಎಲ್ಲಾ ಹೇಗೆ? ಎಂದಾಗ ಭಯ ಪೂರಿತ ಅಳುವಿನೊಂದಿಗೆ ಪರಿಸ್ಥಿತಿ ವಿವರಿಸಿ ಈಗಿಂದೀಗಲೇ ಬಂದು ಕರೆದುಕೊಂಡು ಹೋಗು ಎಂದಳು. ಆದ ಪರಪರ ಶಬ್ದ ಕೇಳಿ ಬಂದ ಕಡೆ ನೋಡಿದರೆ ತನ್ನನ್ನೇ ಮೌನದಿಂದ ದಿಟ್ಟಿಸುತ್ತಿರುವ ಕಪ್ಪು ಬೆಕ್ಕಿನ ಕಣ್ಣುಗಳು. ಫೋನ್ ಮೂಲಕ ಮಾತನಾಡುವುದನ್ನು ನೋಡುತ್ತಿರುವ ಅದರ ಏಕಾಗ್ರತೆಯ ನೋಟ ಕಂಡು ಇನ್ನಷ್ಟು ಭಯ ತರಿಸಿತು. ಹೊರಗಿದ್ದ ದೆವ್ವ ಈ ರೂಪದಲ್ಲಿ ಒಳ ಬಂದಿರಬಹುದೇ ಎಂಬ ಯೋಚನೆ. ಸುಧಾರಿಸಿ ಕೊಂಡು ಮತ್ತೊಮ್ಮೆ ನೋಡಿದರೆ ಕಾಣಸದ ಬೆಕ್ಕು ಅವಳ ಜಂಘಾಬಲವನ್ನೇ ಉಡುಗಿಸಿದೆ.

ಬಾಗಿಲ ಸಂದಿಯಿಂದ ನೋಡುತ್ತಾ ಇದ್ದಾಳೆ. ಊಟವಿಲ್ಲ. ಯಾವ ಕೆಲಸವೂ ಆಗಿಲ್ಲ. ಮಕ್ಕಳು ಶಾಲೆಯಿಂದ ಬಂದರೆ ಆಗ ಈ ಹುಣಸೆ ಮರದ ಸಮೀಪ ಬರಬೇಕು. ದೆವ್ವ ಅಲ್ಲೇ ಇದೆಯೇ ಅಥವಾ ಒಳಬಂದಿದೆಯೇ ಎಂಬ ಚಿಂತೆ ಹೊರಗೆ ಹೋಗಲೂ ಭಯ. ಒಳಗಿರಲೂ ಭಯ. ಅಳು ಬರುತ್ತಿದೆ. ಅದೆಷ್ಟು ಹೊತ್ತು ಕಳೆಯಿತೋ, ಮಕ್ಕಳು ಬಾಗಿಲು ತಟ್ಟುತ್ತಿದ್ದಾರೆ. ಆತುರದಿಂದ ಬಾಗಿಲು ತೆರೆದು ಅವರನ್ನು ಒಳಗೆ ಎಳೆದುಕೊಂಡಳು. ಯಾಕಮ್ಮಾ ತಲೆ ಬಾಚಿ ಕೊಂಡಿಲ್ಲ, ಊಟ ಮಾಡಿಲ್ಲ ಎಂಬ ಮಕ್ಕಳ ಮಾತು. ಮನಸಿಗೆ ತೋಚಿದ ಅಡುಗೆ ಮಾಡಿ ಬಡಿಸಿದಳು. ಸಂಜೆ ಐದು ಗಂಟೆಗೆ ಗಂಡನೊಂದಿಗೆ ಅಣ್ಣನ ಆಗಮನ. ಸ್ವಲ್ಪ ನೆಮ್ಮದಿ ತಂದಿದೆ.

ಇಂದಿನ ಹೊಸ ಬೆಳವಣಿಗೆ ತಿಳಿದು ಈ ಬಾರಿ ಐತಾಳರು ಬೇಡ. ದೆವ್ವ, ಭೂತ, ಪಿಶಾಚಿಗಳ ಬಗ್ಗೆ ಆಸಕ್ತಿಯಿಂದ ಪ್ರತ್ಯಕ್ಷ ಫಲ ಪಂಚ ಸಿದ್ಧಿಗಳನ್ನು ಅಭ್ಯಾಸ ಮಾಡಿ ಮದ್ದು, ಮಾಟ, ಮಂತ್ರ, ಅಂಜನ, ವಶೀಕರಣ ಇತ್ಯಾದಿಗಳನ್ನು ಕಲಿತು, ಲೀಲಾಜಾಲವಾಗಿ ಏನನ್ನೂ ನಡೆಸುವನೆಂಬ ಪ್ರಖ್ಯಾತಿಯ ಜುಂಜಪ್ಪನೇ ಇದಕ್ಕೆ ಸರಿ ಎಂದು ಮನದಲ್ಲೇ ನಿರ್ಧರಿಸಿದ. ಅವರನ್ನು ಕರೆತರಲು ಹೊರಟ. ಅವಳು ದೆವ್ವದ ಸಮಯ ಹೀಗೆ ಎಂದು ಹೇಳಲಾಗದು, ಇಲ್ಲೇ ಇರಿ, ಎನ್ನುತ್ತಿದ್ದರೂ ಇಗೋ ಬಂದೆ ಎಂದು ಹೋಗಿ ಅವರನ್ನು ಕರೆತಂದ. ಕಾಸಿನ ಆಗಲದ ಕುಂಕುಮ, ಕವಡೆಯ ಬಳೆ, ಕಪ್ಪು ಬಟ್ಟೆ ನಿಲುವಂಗಿ ಧರಿಸಿದ ಉದ್ದ ಕೂದಲು ಬಿಟ್ಟಿದ್ದ ಜುಂಜಪ್ಪ ಮರದತ್ತ ಒಂದು ಆಳ ನೋಟ ಬೀರಿದ. ಮಾಡ್ತೀವಿ ನೋಡು ಎಂಬಂತೆ ತಲೆ ಹಾಕುತ್ತಾ ತಂದಿದ್ದ ನೀರು ಚಿಮುಕಿಸಿ, ರಾತ್ರಿ ಮಾಡುವ ದೆವ್ವೋಚ್ಛಾಟನೆ ತಯಾರಿ ಶುರು ಮಾಡಿದ. ಎಲ್ಲರಿಗೂ ಒಂದೇ ಭಯ. ಮಂತ್ರವಾದಿ ಬಂದಿರುವುದನ್ನು ನೋಡಿರುವ ದೆವ್ವ ಏನು ಮಾಡಬಹುದು ಎಂಬ ಯೋಚನೆ. ಮನೆಯವರು ರಾತ್ರಿ ಮಲಗಿದಾಗ, ನಡುಮನೆಯಲ್ಲಿ ಜುಂಜಪ್ಪನವರು ತಮ್ಮ ಸಹಾಯಕ ಮಂಜನ ಪ್ರಶ್ನೆಗೆ ಹೇಳುತ್ತಿದ್ದಾರೆ. ಭೂತ ಎಂಬುವುದು ಗಂಡು ಹಾಗೂ ಚೌಡಿ ಹೆಣ್ಣು. ಇವು ಊರಿಗೆ ಸಂಬಂಧಿಸಿದ ದೇವರುಗಳು. ಪ್ರತಿವರ್ಷ ಅವುಗಳಿಗೆ ಬೇಕಾದ ಆಹಾರ ಕೊಟ್ಟು ವಿಧೇಯರಾಗಿ ನಡೆದುಕೊಂಡರೆ ಮುಗಿಯಿತು, ಯಾವ ತೊಂದರೆಯೂ ಆಗದು. ಆದರೆ ಅಪಘಾತದಂತಹ ದುರ್ಮರಣಗಳಿಂದ ಸತ್ತ ಯಾವುದೇ ಜೀವಿಗಳು ದೆವ್ವವಾಗಿ ಹೀಗೆ ಕುಚೇಷ್ಟೆ ಮಾಡುತ್ತವೆ. ಕಿರುಕುಳ ಕೊಟ್ಟು ಸಂತೋಷ ಪಡುತ್ತವೆ. ಇನ್ನು ಪಿಶಾಚಿಗಳು, ಅವು ಇವರ ಕುಟುಂಬಕ್ಕೆ ಸಂಬಂಧಿಸಿದ ಅತೃಪ್ತ ಆತ್ಮಗಳು. ಸದಾ ಓಡಾಡಿ ಕೊಂಡು ಇರುತ್ತವೆ. ಸಮಯ ಬಂದಾಗ ಸಂಬಂಧಿಸಿದವರಿಗೆ ಒಳ್ಳೆಯದನ್ನೋ ಕೆಟ್ಟದ್ದನ್ನೋ ಮಾಡುತ್ತದೆ. ಎದುರಿಗೆ ಬೇರೆ ಯಾರು ಬಂದರೂ ತೊಂದರೆ ಮಾಡೋಲ್ಲ. ರೇಡಿಯೋ ತರಂಗಗಳಂತೆ ವಿಶ್ವದಾದ್ಯಂತ ತನ್ನವರ ಬಳಿ ಸುಳಿದಾಡುವ ಪಿಶಾಚಿಗೆ ಬೇರೆಯವರು ಹೆದರಬೇಕಿಲ್ಲ ಎನ್ನುವುದು ಕುತೂಹಲದ ಮಾಹಿತಿ ಎಂದು ಕೊಂಡ ಆಕಾಶ ರಾಯ. ಯಾರ ದೆವ್ವ ಇರಬಹುದು ಎಂದು ಇತ್ತ ಅಣ್ಣ ತಂಗಿ ಮಾತನಾಡುತ್ತಾ ಮಲಗಿದರು.

ಸಂಜೆ ಪ್ರಾರಂಭವಾದ ದೆವ್ವವನ್ನು ಓಡಿಸುವ ಕ್ರಿಯೆ ರಾತ್ರಿ ಹನ್ನೆರಡಕ್ಕೆ ಗಂಭೀರವಾಗುತ್ತಿದೆ. ನೀವು ಸಮಾಧಾನವಾಗಿ ಮಲಗಿರಿ ಎಂದಿದ್ದರಿಂದ ಮಲಗಿದರೂ ಹೊರಳಾಟ.. ರ್ರಾಂ-ರ್ರೂಂ-ಚಟ್-ಪಟ್ ಎಂದು ಆಗಾಗ್ಗೆ ಕೇಳಿಸುವ ಧ್ವನಿ. ಮತ್ತೆ ಗುನುಗುನು ಎಂದು ಕೇಳಿಬರುತ್ತಿರುವ ಜುಂಜಪ್ಪನ ಧ್ವನಿ. ಲೋಬಾನದ ಹೊಗೆ ಮನೆಯೆಲ್ಲಾ ಆವರಿಸಿದೆ. ಬೇವಿನ ಚಾಮರ. ಭಯ ಆತಂಕಗಳ ನಡುವೆ ಬರುತ್ತಿರುವ ನಿದ್ರೆ. ಬೆಳಿಗಿನ ಝಾವದ ಕತ್ತಲಲ್ಲಿ, ಏನೋ ಸದ್ದಾಯಿತು. ಜಾನುವಾರುಗಳ ಪುನರಾವರ್ತನೆಯ ಹೊಸ ರೀತಿಯ ಕೂಗು ಎಲ್ಲರನ್ನೂ ಎಬ್ಬಿಸಿತು. ಗಾಬರಿಯಿಂದ ಎದ್ದು ಹೋಗಿ ನೋಡಿದರೆ ಏನೋ ನೆರಳೊಂದು ಮರದಿಂದ ಇಳಿಯುತ್ತಿದೆ. ದೃಷ್ಟಿಸಿ ನೋಡಲಾಗಿ ಅಡಿಕೆ ಮರದ ಕೆಲಸದ ಗುತ್ಯಪ್ಪನ ರೂಪದಲ್ಲಿ ಕಾಣಿಸಿಕೊಂಡ ದೆವ್ವ. ಪುಕ ಪುಕ ಹೃದಯ ಬಡಿತದ ಮಧ್ಯೆ ಹೇಗೋ ಧೈರ್ಯ ಮಾಡಿ ಕೊಂಡು ಕೇಳಿದ ಆಕಾಶರಾಯ. "ಏನೋ, ಅಲ್ಲೇನು ಮಾಡ್ತಿತ್ತಿದ್ದೀಯ, ಮರದ ಮೇಲೆ" ಎಂದು ಜೋರಾಗಿ ಕೇಳಿದ ಪ್ರಶ್ನೆ ಅವನಿಗೇ ಸಣ್ಣದಾಗಿ ಕೇಳಿಸಿತು. "ವಡೇರೇ ನಾನ್ರೀ ಗುತ್ಯ". ಬಂದ ಉತ್ತರ ಗುತ್ಯನದೋ, ದೆವ್ವದ್ದೋ! "ನಾಕು ದಿನಗಳ ಹಿಂದೆ ತೆಂಗಿನ ಮರ ಸೋಸಕ್ಕೆ ಬಂದಿದ್ದಾಗ ಮಳೆ ಶುರುವಾಗಿತ್ತು. ನನ್ನ ಈ ಶಣ್ಣ ಮೊಬೈಲ್ ನೆನೀ ಬಾರದು ಎಂದು ಬಟ್ಟೆಯಲ್ಲಿ ಸುತ್ತಿ ಪಕ್ಕದ ಈ ಮರದ ಪೊಟರೆಯಲ್ಲಿ ಇಟ್ಟಿದ್ದೆ ಮಾರಾಯ್ರೇ. ಮರೆತು ಹೋಗಿ ಊರೆಲ್ಲಾ ಹುಡುಕಿದೆ. ಎಲ್ಲಿಟ್ಟಿದ್ದೇನೆ ಎಂದು ಯೋಚಿಸಿ ಯೋಚಿಸಿ ಸಾಕಾಯಿತು. ಇಡೀ ಸೊಪ್ಪಿನ ಬೆಟ್ಟನಾ ಈ ಮಳೆಯಲ್ಲಿ ಹುಡುಕಿದೆ. ಸಿಗಲಿಲ್ಲ. ನನ್ನ ಮಗ ದಿನಾ ಮನೆಯಲ್ಲಿದ್ದಾಗ ಮೊಬೈಲ್ ಕರೆ ಮಾಡಿ ಈ ಮೊಬೈಲ್ ಎಲ್ಲಿದೆ ಎಂದು ಪರೀಕ್ಷೆ ಮಾಡ್ತಿದ್ದ. ನಿನ್ನೆ ರಾತ್ರಿ ಮಲಗಿದಾಗ ಇಲ್ಲಿಟ್ಟಿದ್ದು ನನಗೆ ನೆನಪಾತು. ಬಂದೆ ಮಾರಾಯ್ರೆ" ಎಂದ. ಜುಂಜಪ್ಪನ್ನ ನೋಡಿ 'ಇವರ ಮನ್ಯಾಗ ಎಂತಾ ಮಾಡ್ತ್ಯಾ' ಎಂದ. ಮುಂದಿನ ವಿಷಯ ಬಿಡಿ. ನಡೆದ ಘಟನೆಗಳ ಹಿನ್ನೆಲೆ ನಂತರದ ಮುನ್ನೆಲೆ ತಿಳಿದ ಆಕಾಶರಾಯನಿಗೆ ನಗಲಾಗದ ಮತ್ತು ಮನೆಯಾಕೆಯ ನೋವಿಗೆ ಅಳಲಾಗದ ಸ್ಥಿತಿ. 

ಗುತ್ಯಪ್ಪನ ಮಗ ಅವನ ನಂಬರಿಗೆ ಪೋನ್ ಮಾಡಿದಾಗಲೆಲ್ಲಾ‌ ಮರದ ಮೇಲಿನ ಮೊಬೈಲ್ ಹೊಡೆದು ಕೊಂಡಿದೆ. ಇಂದಿನಂತೆ ಟಚ್ ಸ್ಕ್ರೀನ್, ಇಂಟರ್ನೆಟ್ ಮೊಬೈಲ್ ಅಲ್ಲ. ಕೇವಲ ಕರೆ ಮಾಡಲು ಮತ್ತು ಸಂದೇಶ ಕಳಿಸುವ ಹಳೇ ಮಾಡೆಲ್ ಮೊಬೈಲ್. ಹಾಗಾಗಿಯೇ ಬ್ಯಾಟರಿ ನಾಲ್ಕೈದು ದಿನಕ್ಕೆ ಬಾಳಿಕೆ ಬಂದಿದೆ. ಸುಳಿ ಗಾಳಿ ಜೊತೆಗೆ ಸೇರಿದ ವಿಚಿತ್ರ ರಿಂಗ್ ಟೋನ್ ಕೇವಲ ಜಾನುವಾರುಗಳಿಗೆ ಮಾತ್ರ ಕೇಳಿಸಿದೆ. ಅದರಿಂದಾಗಿ ನಡೆದ ಅವಸ್ಥೆ ಈ ಕಥೆಗೆ ನಾಂದಿಯಾಗಿದೆ. ಅಂತೂ ದೆವ್ವದ ಯೋಚನೆಯನ್ನು ತಂದ ಮೊಬೈಲ್ ಹೊರಹೋದರೂ ಆ ಮನೆಯವರೆಲ್ಲರ ಮನಸ್ಸಿನಿಂದ ದೆವ್ವ ಹೊರ ಹೋಗಲು ಕೆಲವು ತಿಂಗಳೇ ಬೇಕಾಯಿತು. ಮನೆಯಲ್ಲಿ ಅಥವಾ ಮನಸ್ಸಿನಲ್ಲಿ, ಮುಗ್ಧತೆ ಅಥವಾ  ಹೊಸ ವಿಷಯಗಳ ಅರಿವಿನ ಅಭಾವ ಇದ್ದಾಗ ಇಂತಹಾ ಘಟನೆಗಳು ಸಾಮಾನ್ಯ. ಆದರೆ ಮನಸು ತೆರೆದು ನೋಡಲು ಅವಕಾಶ ಬೇಕು ಜೊತೆಗೆ ಆಸಕ್ತಿಯೂ ಬೇಕು. ಯಾರನ್ನೂ ಹೊಣೆ ಮಾಡಲಾಗದ ಘಟನೆ ನಗು ತರುವುದಾದರೂ ಗಂಭೀರ, ವಿಚಾರ ಯೋಗ್ಯ.

Comments

  1. ಕಗ್ಗ ಳಿಯ ಮಳೆರಾತ್ರಿ

    ಮಲೆನಾಡ ಹಳ್ಳಿಯ ಒಂದು ಮನೆಯ ಹಾಗೂ
    ಮನೆಯೊಡತಿಯ ಮನಸ್ಸಿನ ತಳಮಳ , ಅದರಲ್ಲೂ ಮಳೆಗಾಲ, ಭಯ ಹುಟ್ಟಿಸುವ ಘಟನೆಗಳು, ಸಾಲದ್ದಕ್ಕೆ
    ಒಂಟಿತನ ಎನ್ನುವ ಭಾವನೆ, ಎಲ್ಲವೂ ಸಿನಿಮೀಯ
    ರೀತಿಯಲ್ಲಿ ಅಡಕವಾಗಿದೆ, ಕೊನೆಯಲ್ಲಿ ಇದು
    ಮೊಬೈಲ್ನಿಂದಾದ ಅವಾಂತರ ಎಂದಾಗ ಒಳ್ಳೆಯ ನವಿರಾದ ಪ್ರಹಸನವಾಗಿ ಮಾರ್ಪಡುತ್ತದೆ.
    ಮಲೆನಾಡಿನ ಚಿತ್ರಣವನ್ನ ವಿವಿಧ ಕಥೆಗಳ ಮೂಲಕ
    ಪರಿಚಯಿಸುತ್ತಿದ್ದೀರಿ, ನಿಮ್ಮ ಈ ಪ್ರಯತ್ನಕ್ಕೆ
    ಅಭಿನಂದನೆಗಳು.

    ದತ್ತಾತ್ರೇಯ ಶರ್ಮ

    ReplyDelete
  2. ಮಲೆನಾಡಿನ ಮುಗ್ಧ ಜನರನ್ನು ಹಾಗೂ ಜೀವನದ ವಾಸ್ತವ ಚಿತ್ರಣ ನನ್ನು ಸೊಗಸಾಗಿ ಕಣ್ಣಿಗೆ ಕಟ್ಟುವಂತೆ ಆಕರ್ಷಕವಾಗಿ ಮನಮುಟ್ಟುವಂತೆ ತಿಳಿಸಿದ್ದೀರಿ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ನ ದುರುಪಯೋಗ ಯಾವ ದೆವ್ವ ಚೌಡಿಯರಿಗೂ ಕಡಿಮೆಯಿಲ್ಲ. ನಮಸ್ಕಾರ.

    ReplyDelete
  3. Very interesting narrative. Beautifully written story. Why don’t you write your autobiography in the form of a book and release it, I am sure it will be interesting.

    ReplyDelete
  4. ಮಳೆಯನ್ನು ನೆಪಮಾಡಿ ಮಲೆನಾಡಿನ ಭೌಗೋಳಿಕ ಚಿತ್ರ ಚನ್ನಾಗಿ ಮೂಡಿದೆ, ಮಲೆನಾಡಿನ ಒಂಟಿ ಮನೆಗಳ ವಾಸ, ಇಲ್ಲಿನ ದಿನ ನಿತ್ಯದ ಅವಾಂತರದ ಜೀವನ ಚಿತ್ರ ಚನ್ನಾಗಿ ಮೂಡಿಬಂದಿದೆ. ಹಳೆಯ ನಂಬಿಕೆಗಳ ಮಧ್ಯೆ ಅಧುನಿಕ ಅಶರೀರವಾಣಿಯ ಅವಾಂತರ ಹುಟ್ಟಿಸುವ ಅನೇಕ ಸಿದ್ಧ ಕಾರಣಗಳು ಹಾಗೂ ಅದ, ಪರಹಾರಾರ್ತ ಕೈಂಕರ್ಯಗಳು ಅಂತಿಮವಾಗಿ ಆದುನಿಕ ಯುಗದ ಪರಿಕರಗಳು ಹಳೆ ತಲೆಮಾರಿನವರಿಗೆ ತಂದೊಡ್ಡುವ ಅವಾಂತರ ಚನ್ನಾಗಿ ಮೂಡಿಬಂದಿದೆ.
    ಉತ್ತಮ ಕಥೆ
    ನಿಮ್ಮಿಂದ ಇನ್ನು ಹೆಚ್ಚಿನ ಕಥೆಗಳು ಬರಲೆಂದು ಹಾರೈಸುತ್ತೇನೆ.

    ReplyDelete
  5. Nicely narrated those golden days, people, the way they were, enjoyed reading the thriller 😱 comedy.

    Looking forward to the next one.

    ReplyDelete
  6. ಮೊಬೈಲ್ ದೆವ್ವ
    ಎಲ್ಲಾ ರೀತಿಯ ಪೂಜೆ ಪುನಸ್ಕಾರಗಳು ಅದ ಮೇಲೆ
    ಕೊನೆಗೂ ದೆವ್ವ ಸಿಕ್ಕಿತು

    Very nice suspense.
    ಮಲೆನಾಡ ಮಳೆಗಾಲದ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ.
    ಬೆಳ್ಳಾರೆ ಸತ್ಯನಾರಾಯಣ ಶೆಣೈ.

    ReplyDelete
  7. ಸರಿಸುಮಾರು 35 ವರ್ಷಗಳ ಹಿಂದಿನ ಕಾಲಚಕ್ರದಲ್ಲಿ ಮಲೆನಾಡಿನ ಹಳ್ಳಿ ಜೀವನದ ಚಿತ್ರಣ ಬಹಳ ಸೊಗಸಾಗಿ ಮೂಡಿಬಂದಿದೆ. ಆಗಿನ ಕಾಲದಲ್ಲಿನ ಹಳ್ಳಿಯ ಹಸಿರು ಪರಿಸರದೊಂದಿಗೆ ಹಾಸುಹೊಕ್ಕಾಗಿ ಕಾಣಸಿಗುವ ಜೀವನ ಶೈಲಿ ಹಾಗೂ ಮಳೆಗಾಲದ ವಾತಾವರಣದ ವರ್ಣನೆ ಕಣ್ಣಿನ ಸ್ಮುತಿಪಟಲದಲ್ಲಿ ಹಾದು ಹೋಗಿ ಕೊನೆಯಲ್ಲಿ ಮನೆಯೊಡತಿಯ ಮನಸಿನ ತಳಮಳವೆಲ್ಲವೂ ಮೊಬೈಲ್ ಅವಾಂತರ ನವಿರಾದ ಹಾಸ್ಯದೊಂದಿಗೆ ಲೇಖನ ಕೊನೆಗೊಳ್ಳುತ್ತದೆ. ಈ ಸುಂದರ ಅನುಭವ ನೀಡಿದಕ್ಕಾಗಿ ಧನ್ಯವಾದಗಳು.

    ReplyDelete
  8. ಇತ್ತೀಚಿಗೆ ತೆಂಗಿನಕಾಯಿ ಕೊಯ್ಯುವಾಗ ಮರದಮೇಲೆ ಬಿಟ್ಟ ಮೊಬೈಲ್ ಅನುಭವ ಓದಿದ್ದೆ. ನಿನ್ನ ಲೇಖನ ಚೆನ್ನಾಗಿ ಮೂಡಿಬಂದಿದೆ. ಲೇಖನಿ ಎಂದಿನಂತೆ ಮುಂದಿವರಿದು ಹೊಸ ಹೊಸ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಿರಲಿ. ಇತಿ ನಿನ್ನಣ್ಣ ಹಿರಿಯಣ್ಣ.

    ReplyDelete


  9. ಮಲೆನಾಡಿನ ಹಳ್ಳಿಯ ಜೀವನ ಮತ್ತು
    ಜೀವನ ಶೈಲಿಯಾ ಚಿತ್ರಣ ಸೊಗಸಾಗಿ ಮೂಡಿಬಂದಿದೆ.

    ReplyDelete
  10. ಜೀವನ ಕಗ್ಗಳ್ಳಿ ಯಲ್ಲಿ ಹೇಗೆ ಇರುತ್ತದೆ ಅವರು ಎಷ್ಟು ಕಷ್ಟಪಡುತ್ತಾರೆ.ಅದರಲ್ಲೂ ಮಳೆ ಬಂದಾಗ ದೀಪ ಇರದೇ ಇದ್ದರೆ ಸಣ್ಣಸಣ್ಣ ಸದ್ದಿಗೂ ಹೆದರುವ  ಅವರ ಜೀವನ, ಎಲ್ಲಾ ಅನುಭವಗಳು ಬಹಳ ನೈಜವಾಗಿ ಬಂದಿದೆ

    ReplyDelete
  11. ಮಲೆನಾಡಿನ ಸೌಂದರ್ಯ, ಪ್ರಕೃತಿಯ ಮಳೆಗಾಲದ ವೈಪರೀತ್ಯಗಳು, ಅದರೊಂದಿಗೇ ಬಾಳುವ ಮಂದಿಯ ಜೀವನ, ಅವರ ಸಂಸಾರ ಸಾಗರದ ನಿರ್ವಹಣೆಯ ಅನಿವಾರ್ಯತೆ, ಭೀಕರ ಮೌನದಲ್ಲಿ ಭಯಭೀತರಾಗುವಂತೆ ಕೇಳಿಬರುವ ಶಬ್ದಗಳು/ಕೂಗು, ಮೂಕ ಪಶುಗಳ ಸಂಕೇತ/ಸಂವೇದನೆ/ಸೂಚನೆಗಳು, ಅದನ್ನು ಅರಿಯಲಾರದ ಮಂದಿಯ ತೊಳಲಾಟ! ಇದರೊಂದಿಗೇ ಇನ್ನೂ ಅಲ್ಲಿ ಅಗತ್ಯವಿರುವ ಸವಲತ್ತುಗಳ ಅವಶ್ಯಕತೆಗೆ ತಕ್ಕಂತೆ ನೆರವಾಗುವ ವಿದ್ಯೆ, ಜ್ಞಾನದ ಅಭಾವ ಹಾಗೂ ಅದಕ್ಕೆ ನೆರವು ಸಿಗಲಿ ಎಂಬ ಆಶಯದ ಸೂಕ್ಷ್ಮ ಎಲ್ಲವನ್ನೂ
    ಒಂದರೊಳಗೊಂದು ಹೆಣೆದು, ಪ್ರಸ್ತುತಪಡಿಸುವ ಲೇಖಕರ ಜಾಣ್ಮೆ ಮೆಚ್ಚುವಂತಹದೇ ಎಂದರೆ ಅತಿಶಯೋಕ್ತಿಯೇನಲ್ಲ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...