ದುಡಿಮೆ ತಂದುಕೊಡುವ ವೃತ್ತಿಗೆ ಹೊಂದಿಕೊಳ್ಳುವವರೇ ಹೆಚ್ಚು. ಪ್ರವೃತ್ತಿಯಾಗಿ ಕೆಲವರಿಗೆ ಕೃಷಿ, ಸಂಗೀತ, ನೃತ್ಯ ಕಲೆ ಇತ್ಯಾದಿ ಹೀಗೆ ಹಲವು ಹವ್ಯಾಸ ಇರುವುದಾದರೂ ಅದರಿಂದ ಜೀವನ ನಡೆಸಲು ಸಾಕಾದಷ್ಟು ದುಡಿಯಲು ಅಸಾಧ್ಯವಾದುದರಿಂದ ಅದನ್ನು ಆರಿಸಿಕೊಳ್ಳಲು ಅವಕಾಶವಾಗಿರುವುದಿಲ್ಲ. ಕೆಲವರಿಗೆ ಅದು ಸದಾ ಕಾಡುತ್ತಿದ್ದರೆ, ಮತ್ತೆ ಕೆಲವರಿಗೆ ಅವಕಾಶ ಕಂಡಾಗ ಪ್ರವೃತ್ತಿಯ ಆಸೆ ಭುಗಿಲೇಳುತ್ತದೆ. ಅಗತ್ಯವೆನಿಸಿ ಅದನ್ನೂ ನಿಭಾಯಿಸಬಲ್ಲೆ ಎನಿಸಿದರೆ ಅದನ್ನು ಮಾಡಲು ಹಿಂಜರಿಯುವುದಿಲ್ಲ. ಹಾಗೆ ವೃತ್ತಿ ಹಾಗೂ ಪ್ರವೃತ್ತಿಗಳನ್ನು ಏಕ ಕಾಲದಲ್ಲಿ ನಿಭಾಯಿಸಿದವರ ಕಥೆಗಳಲ್ಲಿ ಮಿತ್ರರೊಬ್ಬರ ಅನುಭವವೇ ಈ ಲೇಖನ.
ರಾಘಣ್ಣ ಇಂಜಿನಿಯರಿಂಗ್ ನಲ್ಲಿ ಮಾಸ್ಟರ್ ಪದವೀಧರ. ದೊಡ್ಡ ಸಂಸ್ಥೆಯಲ್ಲಿ ಕೆಲಸ. ಸದಾ ಹೊಸತನ್ನು ಮಾಡುವ ಚಪಲ. ಕಾರ್ಯ ನಿಮಿತ್ತ ಊರಿಂದ ಊರಿಗೆ ಹೋಗುವಾಗ ಹಾದಿ ಪಕ್ಕದ ತೋಟ ಗದ್ದೆಗಳನ್ನು ನೋಡಿ ಖುಷಿ ಪಡುವನು, ರೈತ ಮಧ್ಯಾಹ್ನದ ವೇಳೆ ಊಟ ಮಾಡಿದ್ದನ್ನು ನೋಡಿದಾಗ ಎಷ್ಟು ಸುಖವಾಗಿ ನೆಮ್ಮದಿಯಿಂದ ಇದ್ದಾನೆ ಎಂದು, ಆ ರೈತನ ಜಾಗದಲ್ಲಿ ತಾನು ಇದ್ದಂತೆ, ತನಗೆ ಹೆಂಡತಿ ಮುದ್ದೆ ಊಟ ತಂದು ಕೊಟ್ಟಂತೆ ಕನಸು ಕಾಣುತ್ತಿದ್ದ. ಸುಗ್ಗಿಯ ವೇಳೆ ಮಾರಾಟವಾದ ಧವಸ-ದಾನ್ಯಗಳ ದರ, ಅವುಗಳಿಗೆ ಮಾರುಕಟ್ಟೆಯಲ್ಲಿ ಇರುವ ಬೇಡಿಕೆ ಕಂಡಾಗ ರೈತರ ಜೀವನದ ಮುಂದೆ ಬೇರೇನೂ ಇಲ್ಲ ಎಂದು ಎನಿಸುತ್ತಿತ್ತು. ಆಗ ತಾನು ರೈತ ಆಗಬೇಕು ಎಂಬ ಸುಪ್ತ ಆಸೆ ಚಿಗುರುತ್ತಿತ್ತು.
ಮದುವೆ ಮನೆಯೊಂದರಲ್ಲಿ ಒಂದು ಹರಟೆ. ಬರೀ ಸಂಬಳ ನೆಚ್ಚಿ ಕೊಂಡಿದ್ದರೆ ಏನೂ ಆಸ್ತಿ ಮಾಡಲಾಗದು. ಸ್ವಲ್ಪ ಬಂಡವಾಳ ಹಾಕಿ ಜಮೀನು ಕೊಂಡು ಕೃಷಿ ಮಾಡಬೇಕು. ಮನೆಗೆ ಬೇಕಾದುದನ್ನು ಬೆಳೆಯಬಹುದು. ಜಮೀನಿನಲ್ಲಿ ಹೆಚ್ಚಿನ ಬೆಳೆ ಬೆಳೆದರೆ ಒಳ್ಳೆಯ ದರಕ್ಕೆ ಮಾರಲೂಬಹುದು. ಬೇಡ ಎಂದರೂ ಜಾಗಕ್ಕೆ ಬೆಲೆ ಇದ್ದೇ ಇರುತ್ತದೆ. ಆ ಜಮೀನನ್ನು ಮಾರಿ ಕೈತುಂಬಾ ದುಡ್ಡು ಮಾಡಬಹುದು. ಹೇಗೂ ಊರಿಂದ ದೂರದಲ್ಲಿ ಕಡಿಮೆ ದರದಲ್ಲಿ ಜಾಗ ಸಿಗುತ್ತದೆ. ಹೀಗೆ ಜನ ಜಾಸ್ತಿ ಆಗುತ್ತಾ ಇದ್ದರೆ ಹೊಸ ಲೇಔಟ್ ಮಾಡಲೇಬೇಕು. ಆಗ ಖಾಸಗಿಯವರೋ ಸರ್ಕಾರದವರೋ ಅಂತೂ ಯಾರೋ ನಮ್ಮ ಜಾಗವನ್ನು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಾರೆ. ನಷ್ಟವಿಲ್ಲದ ವ್ಯವಹಾರ ಎಂದು ಸೇರಿದವರು ಮಾತನಾಡುವುದನ್ನು ಕೇಳಿದ.
ಹೇಗಾದರೂ ಮಾಡಿ ಜಮೀನು ಕೊಳ್ಳುವುದು, ಕೆಲವು ವರ್ಷ ತಾನು ಕೃಷಿ ಮಾಡುವುದು, ನಂತರ ಬೇಡವಾದಾಗ ಇಲ್ಲಿ ಕೇಳಿದಂತೆ ಒಳ್ಳೆಯ ದರಕ್ಕೆ ಮಾರಾಟ ಮಾಡುವುದು ಎಂದುಕೊಂಡ. ಬೇರೆಯವರಿಗೆ ಈ ಲಾಭದಾಯಕ ಯೋಜನೆ ಮನಸ್ಸಿಗೆ ಬರುವ ಮುಂಚೆ ತಾನು ಮಾಡಬೇಕು ಎಂಬ ಯೋಚನೆಯಿಂದ ಗುಪ್ತವಾಗಿ ಕಾರ್ಯೋನ್ಮುಖನಾದ ರಾಘಣ್ಣ, ತನ್ನ ಪಿಎಫ್ ನಲ್ಲಿರುವ ಹಣವನ್ನು ಸಾಲ ತೆಗೆದುಕೊಂಡ. ಜೊತೆಗೆ ಮಿತ್ರರಲ್ಲಿ ಹಾಗೂ ಬ್ಯಾಂಕ್ ನಲ್ಲೂ ಸಾಲ ಪಡೆದ. ಒಬ್ಬ ದಲ್ಲಾಳಿ ಮೂಲಕ ಊರ ಹೊರ ಭಾಗದಲ್ಲಿ ಎರಡು ಎಕರೆ ಜಾಗ ಸಿಕ್ಕಿತು. ಮುಂಗಡ ಕೊಟ್ಟು, ಕೊಂಡುಕೊಳ್ಳುವ ಒಪ್ಪಂದವನ್ನು ಮಾಡಿಕೊಂಡ.
ವಕೀಲರ ಬಳಿ ಲೀಗಲ್ ಒಪಿನಿಯನ್ ಪಡೆಯಲು ಹೊರಟಾಗ ಒಂದೊಂದಾಗಿ ಕಥೆಯ ಹಂತಗಳು ಪ್ರಾರಂಭ. ಏಕೆಂದರೆ ರೈತರ ಮಕ್ಕಳು ಮಾತ್ರ ಕೃಷಿ ಜಮೀನನ್ನು ಪಡೆಯಲು ಹಕ್ಕುಳ್ಳವರಾಗಿರುತ್ತಾರೆ. ರಾಘಣ್ಣ ರೈತನ ಮಗನಲ್ಲವಾದ್ದರಿಂದ ಈ ಜಮೀನನ್ನು ತನ್ನ ಹೆಸರಲ್ಲಿ ಕೊಳ್ಳಲು ಸಾಧ್ಯವಿಲ್ಲವೆಂದು ಕೇಳಿ ತುಸು ಚಿಂತೆಯಾಯಿತು. ಬೇಕಾದರೆ ನಿಮ್ಮ ಹೆಂಡತಿ ಹೆಸರಿನಲ್ಲಿ ಕೊಳ್ಳಿರಿ ಎಂಬ ಸಲಹೆ ಬಂದಿತು. ಆಕೆಯ ಅಜ್ಜ ರೈತನಾಗಿದ್ಧ. ಈಕೆ ಅವರ ಮೊಮ್ಮಗಳು ಎಂಬ ದಾಖಲೆಯನ್ನು ಜೊತೆಗೆ ಅಜ್ಜನೂ ರೈತರಾಗಿದ್ದರು ಎಂಬ ದಾಖಲೆಯನ್ನು ತಂದುಕೊಡಬೇಕು. ಸುಮಾರು ಆರು ತಿಂಗಳು ಸಂಬಂಧಿಸಿದ ಕಚೇರಿಗಳಿಗೆ ಓಡಾಡಿದ. ಆ ರೀತಿಯ ದಾಖಲೆಯನ್ನು ಸಂಬಂಧಪಟ್ಟ ಕಚೇರಿಯಿಂದ ತರಲು ಸಾಕಷ್ಟು ಶ್ರಮವಾಯಿತು. ಹಲವಾರು ರಜೆಗಳು ಜೊತೆಗೆ ಬೇಕಾದಷ್ಟು ಹಣವು ಖರ್ಚಾಯಿತು. ಈಗ ಹೆಂಡತಿ ಹಕ್ಕುದಾರಳು. ಅವಳು ಹೇಳಿದ ಮುಹೂರ್ತ ತಕ್ಷಣಕ್ಕೆ ಸಿಗದು. ಸಾಕಷ್ಟು ತಡವಾಗಿಯಾದರೂ ಒಂದು ದಿನ ರಿಜಿಸ್ಟ್ರೇಷನ್ ಮುಗಿಯಿತು.
೮೦ ಲಕ್ಷ ಖರ್ಚಾಗಿದೆ. ತಕ್ಷಣಕ್ಕೆ ಲಾಭವಿಲ್ಲ. ಆದರೂ ಏನಾದರೂ ಬೆಳೆ ಬೆಳೆಯಿರಿ ಎಂದ ಹೆಂಡತಿಯ ತಾಕೀತು. ಅವಳು ರೈತನ ಕುಟುಂಬದ ಕುಡಿ. ಸಾಲದೆಂದು ಈಗ ಅವಳೇ ಈ ಜಾಗದ ಮಾಲೀಕಳು ಸಹ. ಬೇರೆ ಏನೋ ಹೇಳಬೇಕೆಂದು ಕೊಂಡರೂ ಮಾಲೀಕಳಿಗೆ ತಿರುಗಿ ಹೇಳದೆ ಹೂ ಗುಟ್ಟಿದ. ಪದೇಪದೇ ಆ ಜಾಗಕ್ಕೆ ಹೆಂಡತಿಯೊಂದಿಗೆ ಭೇಟಿ ಪ್ರಾರಂಭವಾಯಿತು. ಮನೆಯಲ್ಲಿ ಈವರೆಗೂ ಬರುತ್ತಿದ್ದ ಅವಳ ಆದೇಶಗಳೊಂದಿಗೆ ಹೊಸ ಆವೇಶ ಭರಿತ ಆದೇಶಗಳು ಇರಿಸುಮುರಿಸು ತರುತ್ತಿದ್ದವು.
ಆ ಜಾಗದಲ್ಲಿ ಕೆಲವು ತೆಂಗಿನ ಮರಗಳು ಒಂದೆರಡು ಪೇರಲೆ ಗಿಡಗಳು ಒಂದು ಹಳೆಯದಾದ ಮನೆ ಮೊದಲೇ ಇದ್ದವು. ಈ ಕೃಷಿ ಕೆಲಸ ಅವನಿಗೆ ಹೊಸತು. ಆದ್ದರಿಂದ ಹತ್ತಿರದ ಹಳ್ಳಿಯಿಂದ ಪರಿಚಯದ ಮಿತ್ರನನ್ನು ಕರೆಸಿಕೊಂಡ. ಅವನು ಹೇಳಿದಂತೆ ಜಾಗಕ್ಕೆ ಉತ್ತಮವಾದ ಬೇಲಿ, ಕೆಲಸ ಮಾಡಿಕೊಂಡು ಜಾಗದ ರಕ್ಷಣೆ ಮಾಡಲು ಒಬ್ಬ ಆಳು ಹಾಗೂ ಅವನ ಕುಟುಂಬಕ್ಕೆ ವ್ಯವಸ್ಥೆಯಾಯಿತು. ಅವನಿಗೆ ವಾಸಕ್ಕೆ ಮನೆ, ಖರ್ಚು, ಅಡ್ವಾನ್ಸ್. ಕಾಯಲೆಂದು ಒಂದು ಜಾತಿ ನಾಯಿ ಇತ್ಯಾದಿ ವ್ಯವಸ್ಥೆಗಳಿಗೆ ಎರಡು ಲಕ್ಷ ಕೈಬಿಟ್ಟಿತು.
ಮುಂದಿನ ತಿಂಗಳಲ್ಲಿ ಒಂದೊಂದಾಗಿ ಕೃಷಿ ಕೆಲಸ ಪ್ರಾರಂಭವಾಯಿತು. ಒಂದು ಕೊಳವೆ ಬಾವಿ, ನೀರೆತ್ತುವ ಪಂಪ್ ಅದಕ್ಕೆ ವಿದ್ಯುತ್ ಸಂಪರ್ಕ ಎಂದು ಯಥೇಚ್ಛವಾಗಿ ಖರ್ಚಾಯಿತು. ಆದರೂ ಹಗಲಿನಲ್ಲಿ ಕರೆಂಟ್ ಇಲ್ಲ. ರಾತ್ರಿ ನೀರೆತ್ತಿ ಸಂಗ್ರಹಿಸಲು ತೆರೆದ ತೊಟ್ಟಿ ಬೇಕಾಯಿತು. ಅದನ್ನು ಮಾಡಲು ಕೆಲಸ ವಹಿಸಿಕೊಂಡ ಗುತ್ತಿಗೆದಾರ ಕಣ್ಣಪ್ಪ. ಅವನೊಂದಿಗೆ ಆದ ಒಪ್ಪಂದಕ್ಕೆ ಇರಲಿ ಎಂದು ರಾಘಣ್ಣನೇ ಛಾಪಾ ಕಾಗದದ ಮೇಲೆ ಅಗ್ರಿಮೆಂಟ್ ಬರೆಸಿದ. ಅವನು ಎರಡು ದಿನ ಕೆಲಸ ಮಾಡಿ ಅರ್ಧಕ್ಕೇ ನಿಲ್ಲಿಸಿ ಪೊಂಗಲ್ ಹಬ್ಬ ಎಂದು ಊರಿಗೆ ಹೋದವನು ಆರು ತಿಂಗಳಾದರೂ ವಾಪಸ್ ಬರಲಿಲ್ಲ. ಸಂಪರ್ಕಕ್ಕೆ ಹಲವಾರು ಬಾರಿ ಪ್ರಯತ್ನಿಸಿದರೂ ಸಿಕ್ಕಲಿಲ್ಲ. ಹೆಚ್ಚು ಅಡ್ವಾನ್ಸ್ ತೆಗೆದುಕೊಂಡಿರುವುದರಿಂದ ಹೇಗೂ ಅವನೇ ನನಗೆ ವಾಪಸ್ ಕೊಡಬೇಕು. ವಸೂಲಿ ಮಾಡುತ್ತೇನೆ ಎಂದು ಕೊಳ್ಳುತ್ತಾ ಕೆಲಸ ತಡವಾಗುತ್ತದೆ ಎಂದು ಬೇರೆಯವರಿಗೆ ತೊಟ್ಟಿ ತೋಡುವ ಕೆಲಸ ವಹಿಸಿದ. ಆ ಹೊಸ ಗುತ್ತಿಗೆದಾರ ಹೆಚ್ಚು ಆಳುಗಳಿಂದ ಎರಡು ದಿನಗಳಲ್ಲಿ ಕೆಲಸ ಮಾಡಿಸಿ ಹಣ ಪಡೆದು ಹೊರಟ. ಮರುದಿನ ಬೆಳಿಗ್ಗೆ ಇದ್ದಕ್ಕಿದ್ದಂತೆ ಕಣ್ಣಪ್ಪ ಪ್ರಕಟನಾದ. ಸುತ್ತ ಬಿದ್ದಿದ್ದ ಸಣ್ಣ ಪುಟ್ಟ ಕಲ್ಲುಗಳನ್ನು ಎತ್ತಿ ಹಾಕಿ ತನ್ನ ಬಿಲ್ ಸೆಟ್ಲ್ ಮಾಡಿ ಎಂದು ಧಮಕಿ ಹಾಕಿದ. ನೀನು ಸಿಕ್ಕಲಿಲ್ಲವಾದ್ದರಿಂದ ಬೇರೆಯವರ ಮೂಲಕ ಕೆಲಸ ಪೂರೈಸಿದೆ ಎಂದರೂ, ಅದೆಲ್ಲಾ ನನಗೆ ಗೊತ್ತಿಲ್ಲ. ಕೆಲಸ ಮುಗಿಸಿದ್ದೇನೆ ಎಂದು ದೊಡ್ಡ ಧ್ವನಿಯಲ್ಲಿ ಜಗಳವಾಡಿ, ಅವನೊಂದಿಗೆ ಈ ಮೊದಲು ಮಾಡಿಸಿಕೊಂಡ ಅಗ್ರಿಮೆಂಟ್ ತೋರಿಸಿ ಪೋಲಿಸ್ ಗೆ ಹೋಗುವೆನೆಂದು ಹೆದರಿಸಿ ಹೆಚ್ಚಿನ ಬಾಕಿ ಪಡೆದು ಹೋದ ಘಟನೆಯೂ ನಡೆಯಿತು.
ಈಗಾಗಲೇ ಸ್ವಲ್ಪಮಟ್ಟಿಗೆ ಬೆಳೆ ಬಂದಿದೆ. ಎತ್ತರದ ತೆಂಗಿನ ಮರದಲ್ಲಿ ತುಂಬಿ ತುಳುಕುವ ಕಾಯಿಗಳು, ಕಸದ ರಾಶಿಯ ಮಧ್ಯೆ ಇರುವ ಬಾಳೆಗಿಡಗಳಲ್ಲಿ ಬಾಳೆಹಣ್ಣು, ಪರಂಗಿ ಹಣ್ಣು, ಅಲ್ಲಲ್ಲಿ ಹರಡಿದ ಬಳ್ಳಿಯಲ್ಲಿ ಬೂದುಗುಂಬಳ, ಪೇರಲೆ ಕಾಯಿಗಳು ತೋಟದ ಅಂದವನ್ನು ಹೆಚ್ಚಿಸಿತ್ತು.ತೋಟದ ಕೆಲಸ ಮಾಡಲು ಆಳು ಇದ್ದರೂ ಈ ಬೆಳೆಗಳನ್ನು ಮಾರುವುದು ಹೇಗೆ ಎಂಬ ಯೋಚನೆ. ತಾನು ಕೆಲಸ ಮಾಡುವ ಸಂಸ್ಥೆಯ ಕಾನೂನಿನಂತೆ ಇನ್ನೊಂದು ಕೆಲಸ ಮಾಡಬಾರದು. ಆದ್ದರಿಂದ ಈ ಕೃಷಿ ವ್ಯವಹಾರ ಗುಟ್ಟಾಗಿರಬೇಕು ಎಂಬುದು ಸದಾ ಎಚ್ಚರದಿಂದ ಇರುವಂತಾಗಿದೆ. ಗೊತ್ತಿರುವ ಅಂಗಡಿಯವರಲ್ಲಿ ವಿಚಾರಿಸಿದರೆ ಉತ್ಪಾದನೆಯನ್ನು ಬಹಳ ಕಡಿಮೆ ದರಕ್ಕೆ ಕೇಳುತ್ತಾರೆ. ಪರಿಚಯದವರಿಗೆ ಬೇಕಾ ಎಂದು ಹೇಗೆ ಕೇಳುವುದು, ಎಷ್ಟು ಜನರಿಗೆಂದು ಕೇಳುವುದು ಎಂಬ ಪ್ರಶ್ನೆ.
ಪರಿಚಯದ ನಿರುದ್ಯೋಗಿ ಮಿತ್ರನನ್ನು ಎಲ್ಲಾ ಕೆಲಸಗಳಿಗೂ ಅನುಕೂಲವಾಗಲೆಂದು ಹುಡುಕಿ ಇಟ್ಟುಕೊಂಡ. ಅವನು ಹೊರಗಿನ ವ್ಯಾಪಾರ ವ್ಯವಹಾರಗಳಿಗೆ ಸಹಾಯಮಾಡುತ್ತಾನೆ. ಇದಕ್ಕಾಗಿ ಲಾಭದಲ್ಲಿ ಸ್ವಲ್ಪ ಅವನಿಗೆ ಕೊಟ್ಟರೂ ಅಳೆಯುವವ ಕೈ ನೆಕ್ಕುವಂತೆ ವ್ಯವಹಾರದಲ್ಲಿ ಸ್ವಲ್ಪ ಧೋಕಾ ಮಾಡುತ್ತಿದ್ದಾನೆ ಎಂದು ಇವನಿಗೆ ಗೊತ್ತಿದೆ. ಆದರೆ ಏನು ಮಾಡುವಂತಿಲ್ಲ. ಅವನು ಆಗಾಗ್ಗೆ ಕೆಲಸದ ಮೇಲೆ ಎಸ್ಟೇಟಿಗೆ ಹೋಗುತ್ತಾನೆ. ತಾನೇ ಓನರ್ ಎಂದು ಹೇಳಿಕೊಂಡು ತಿರುಗುತ್ತಿರುತ್ತಾನೆ ಎಂದು ಕೆಲವರು ಹೇಳುವರು. ಆಗ ಮನಸಿಗೆ ಸ್ವಲ್ಪ ಆತಂಕವಾಗುತ್ತದೆ. ಅವನು ತಮ್ಮ ಮನೆಗೂ ಅವನ ಪರಿಚಯದವರಿಗೂ ತರಕಾರಿ ಹಣ್ಣು ಹಂಪಲುಗಳನ್ನು ಬೇಕಾದಂತೆ ತೆಗೆದುಕೊಂಡು ಹೋಗುತ್ತಾನೆ. ಬೇರೆ ಗತಿಯಿಲ್ಲದಿದ್ದುದಕ್ಕೆ ತಿಳಿದರೂ ತಿಳಿಯದಂತೆ ರಾಘಣ್ಣ ಸುಮ್ಮನಿರುತ್ತಾನೆ. ಇವೆಲ್ಲಾ ಅನಿವಾರ್ಯ ನೋವು.
ಅವನ ಸಲಹೆಯಂತೆ ಸಹೋದ್ಯೋಗಿಗಳಿಗೆ ಒಮ್ಮೊಮ್ಮೆ ಉಚಿತ, ಕೆಲವೊಮ್ಮೆ ಕಡಿಮೆ ದರದಲ್ಲಿ ಹಣ್ಣು ತರಕಾರಿಗಳನ್ನು ಮಾರುತ್ತಿದ್ದ. ಖರ್ಚಾದರೆ ಸಾಕು ಎಂದು ವ್ಯಾಪಾರ ಮಾಡುತ್ತಿದ್ದ. ಆದ್ದರಿಂದ ಅಂತಹಾ ಲಾಭ ಬರುತ್ತಿರಲಿಲ್ಲ. ಸಹೋದ್ಯೋಗಿಗಳೇ ಗ್ರಾಹಕರೇ ಆದರೂ ಅವರು ತನ್ನ ಬಗ್ಗೆ ಏನೋ ಪಿಸಿ ಪಿಸಿ ಆಡಿಕೊಳ್ಳುವುದು ತಿಳಿಯುತ್ತಿತ್ತು. ಈ ವ್ಯಾಪಾರ ಬೇಕಾದರೂ ತಾನು ವ್ಯಾಪಾರಿ ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ. ಅದರಲ್ಲೂ ತನ್ನೊಂದಿಗೆ ಹಣ್ಣು ತರಕಾರಿ ವ್ಯಾಪಾರ ಮಾಡಿದವರೂ ಅಲ್ಲದೆ ಬೇರೆಯವರೂ ತನಗೆ ತರಕಾರಿ ವ್ಯಾಪಾರಿ ಎಂದು ಆಡಿಕೊಳ್ಳುವುದು ಕೇಳಿದಾಗ ಮನಸಿಗೆ ನೋವಾಗುತ್ತಿತ್ತು.
ತೆಂಗಿನ ಕಾಯಿಗಳು ಹೆಚ್ಚಾಗಿ ಉದುರುತ್ತವೆ. ಅವುಗಳನ್ನು ಮಾರಾಟ ಮಾಡಿದರೆ ಹಣ ಬರುತ್ತದೆ. ಆದ್ದರಿಂದಲೇ ರಾಘಣ್ಣ ಅವರಿವರಲ್ಲಿ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಬಂಧುಗಳಿಗೆ ಏನಾದರೂ ವಿಶೇಷ ಕಾರ್ಯಕ್ರಮ ಇದ್ದಾಗ ಫಲ ತಾಂಬೂಲಕ್ಕೆ ಬೇಕಾದ ಹಣ್ಣು ಕಾಯಿಗಳಿಗೆ ತನಗೆ ತಿಳಿಸಬೇಕೆಂದು ಆಗಾಗ್ಗೆ ಹೇಳುತ್ತಿದ್ದನು. ಕೃಶನಾಗಿದ್ದರೂ ಭಾರ ಹೊತ್ತು ಸಮಯಕ್ಕೆ ಸರಿಯಾಗಿ ಸರಬರಾಜು ಮಾಡುತ್ತಿದ್ದ. ಒಮ್ಮೆ ನಾನೊಂದು ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಇದ್ದೆ. ಅಲ್ಲಿ ತೆಂಗಿನ ಕಾಯಿ ಚೀಲವನ್ನು ತೆಗೆದುಕೊಂಡು ಬಂದಿದ್ದ. ಅವನಿಗೆ ಚೀಲ ಅಲ್ಲಿ ಇಡು, ಇಲ್ಲಿ ಇಡು ಎಂದು ಆ ಮನೆಯವರು ಕೆಲಸ ಮಾಡಿಸುತ್ತಿದ್ದಾರೆ. ರಾಘಣ್ಣ ಅವನ ಸಂಸ್ಥೆಯಲ್ಲಿ ಅಧಿಕಾರಿ. ಕಾಫಿ ಟೀ ತಂದು ಕೊಡಲೆಂದೇ ಆಳುಗಳಿದ್ದಾರೆ. ಇಲ್ಲಿ ಬೇರೊಬ್ಬರ ಅಣತಿಯಂತೆ ಕೈಲಾಗದಿದ್ದರೂ ಉಸಿರು ಬಿಡುತ್ತಾ ಕೆಲಸ ಮಾಡುತ್ತಿದ್ದಾನೆ. ಒಂದು ಸಾವಿರ ರೂಪಾಯಿ ವ್ಯವಹಾರಕ್ಕೆ ೨೫ ಕಿಲೋಮೀಟರ್ ದೂರದಿಂದ ಕಾರಲ್ಲಿ ಕಾಯಿ ತಂದು ಹೇಳಿದಂತೆ ಕೆಲಸ ಮಾಡುತ್ತಿರುವುದನ್ನು ಕಂಡು ಬಲು ಸಂಕಟವೆನಿಸಿತು. ಕೃಷಿಕನೆಂಬ ಸಂತಸದಲ್ಲಿ ಕೃಷನಾಗಿರುವುದೂ ಅವನಿಗೆ ಮರೆತಿದೆ.
ತೆಂಗಿನ ಮರದಲ್ಲಿ ತುಂಬಾ ಹಳೆಯ ಗರಿ ಹೆಚ್ಚಾಗಿದೆ ಸಾಲದೆಂದು ಹಕ್ಕಿಪಕ್ಷಿಗಳು ಗೂಡು ಕಟ್ಟಿ ಹೆಚ್ಚು ಕಸವನ್ನು ಮಾಡಿವೆ. ಇವುಗಳನ್ನು ಶುಚಿ ಗೊಳಿಸಬೇಕು ಆಗ ಇನ್ನೂ ಹೆಚ್ಚು ಕಾಯಿಗಳು ಬರುತ್ತವೆ ಎಂದು ಆಳು ಪದೇ ಪದೇ ಹೇಳುತ್ತಿದ್ದ. ಯಾರಾದರೂ ಆ ಕೆಲಸ ಮಾಡುವವರನ್ನು ನೀನೇ ಕರೆದು ಕೊಂಡು ಬಾ ಎಂದು ಹೇಳಿದ್ದ. ಒಂದು ದಿನ ಸುಮಾರು ಅರುವತ್ತರ ಪ್ರಾಯದ ಮನುಷ್ಯನನ್ನು ಕರೆದುಕೊಂಡು ಬಂದು ಇವರು ಸುಲಭವಾಗಿ ಈ ಕೆಲಸ ಮಾಡುತ್ತಾರೆ. ಇವರು ಪರಿಚಯದವರು ಬಡವರು ಎಂದು ಕೆಲಸಕ್ಕೆ ಶಿಫಾರಸು ಮಾಡಿದ. ಪ್ರತಿ ಮರಕ್ಕೆ ಇಷ್ಟು ಎಂದು ಕೂಲಿ ನಿಗದಿಯಾಯಿತು. ಅದರಂತೆ ಅವನಿಗೆ ಮರ ಏರಲು ಹೇಳಿದ. ಅವನು ಹೇಗೆ ಕೆಲಸ ಮಾಡುತ್ತಾನೆ ಎಂಬ ಕುತೂಹಲ. ನೋಡುತ್ತಾ ನಿಂತ. ಆತ ಒಂದು ಮರವನ್ನು ಮುಗಿಸಿ ಮತ್ತೊಂದು ಮರವನ್ನು ಏರಿದ. ಈ ಮರದ ತುದಿ ಮುಟ್ಟುವ ಮೊದಲೇ ನೋಡುನೋಡುತ್ತಲೇ ದಿಢೀರನೆ ಬಿದ್ದುಬಿಟ್ಟ. ಬಿದ್ದವನಿಂದ ಏನು ಮಾತೂ ಇಲ್ಲ. ನೋಡಲಾಗಿ ಅವನ ಬುರುಡೆ ಕೆಳಗಿದ್ದ ಕಲ್ಲಿಗೆ ತಗುಲಿ ರಕ್ತ ಹರಿಯುತ್ತಿದೆ. ಮೈಮುಟ್ಟಿ ನೋಡಲಾಗಿ ಪ್ರಾಣ ಹೋಗಿದೆ. ಇನ್ನು ಆಸ್ಪತ್ರೆ, ಪೋಲಿಸ್, ವಿಚಾರಣೆ ಎಂದು ಹಲವು ತಿಂಗಳುಗಳು ಹಿಡಿದವು. ಸತ್ತವನ ಬಂಧುಗಳು, ಅಧಿಕಾರಿಗಳು, ಜವಾನರು ಹೀಗೆ ಎಲ್ಲರಿಗೂ ಉತ್ತರದ ಜೊತೆಗೆ ಕೇಳಿದಾಗಲೆಲ್ಲಾ ದುಡ್ಡು ಕೊಟ್ಟರೂ ಪ್ರಕರಣ ಮುಗಿಯದು. ಸರಿಯಾಗಿ ಕೆಲಸ ಗೊತ್ತಿಲ್ಲದವನನ್ನು ಮರ ಹತ್ತಿ ಬೀಳಿಸಿ ಅವನ ಸಾವಿಗೆ ಕಾರಣರಾದಿರಿ ಎಂಬ ಅಪಖ್ಯಾತಿ. ಸುಮ್ಮನೆ ಬಂದ ಅಪವಾದಕ್ಕೆ ಅದೆಷ್ಟು ಬಾರಿ ಪರಿಹಾರ ಮಂತ್ರ ಹೇಳಿಕೊಂಡನೋ ತಿಳಿಯದು. ಅಂತೂ ಈ ಪ್ರಕರಣ ದಂಡದ ಮೂಲಕ ಪರಿಹಾರವಾಯಿತು. ಕೊನೆಯಲ್ಲಿ ಮರ ಹತ್ತಿದಾಗ ಹೃದಯ ಸ್ಥಂಭನದಿಂದಾಗಿ ಆತನಿಗೆ ಸಾವು ಸಂಭವಿಸಿದೆ ಎಂದು ದಾಖಲೆಯಾಗಿ ಇವನಿಗೂ ಚಿಂತೆಯಿಂದ ಬಿಡುಗಡೆಯಾಗಿದ್ದು ಸಂತೋಷ.
ಒಮ್ಮೆ ಕೆಲಸಕ್ಕೆ ಹೆಚ್ಚಿನ ಆಳುಗಳು ಬೇಕಾಗಿತ್ತು ಎಲ್ಲಿ ವಿಚಾರಿಸಿದರೂ ಆಳುಗಳು ಸಿಗುತ್ತಿಲ್ಲ. ಕೆಲಸ ಇಲ್ಲದೆ ಮನೆಯಲ್ಲಿ ಕುಳಿತರೂ ಕೆಲಸಕ್ಕೆ ಬರಲೊಪ್ಪದ ಜನಗಳು. ಅದೇನೋ ಹೊಸಾ ಯೋಜನೆ ಬಂದಿದೆಯಂತೆ. ಆ ಯೋಜನೆಯಡಿ ಹೆಸರು ನೊಂದಾಯಿಸಿಕೊಂಡರೆ ಸಾಕು, ತಾನೂ ಸ್ವಲ್ಪ ಇಟ್ಟುಕೊಂಡು ನಮಗೂ ಸ್ವಲ್ಪ ಕೊಡುತ್ತೇನೆ ಎಂದು ಹೇಳಿದವನ ಜೊತೆಗೆ ಎಲ್ಲರ ವ್ಯವಹಾರ. ಕಿಂಚಿತ್ತೂ ಕೆಲಸ ಮಾಡದೆ ಸಂಬಳ ಬರುವುದಾದಲ್ಲಿ ಕೆಲಸಕ್ಕೆ ಯಾರು ಬರುತ್ತಾರೆ ? ಆದರೂ ಹಾಗೂ ಹೀಗೂ ಕೆಲವರನ್ನು ವ್ಯವಸ್ಥೆ ಮಾಡಿಕೊಂಡರೆ, ಅವರು ಕೆಲಸಕ್ಕೆ ಬರುವುದೇ ಹತ್ತು ಗಂಟೆ ವೇಳೆಗೆ. ಹೋಗುವುದು ನಾಲ್ಕೂವರೆ ಐದು ಗಂಟೆಗೆ. ಮಧ್ಯೆ ಒಂದು ಗಂಟೆ ಊಟಕ್ಕೆ ವಿಶ್ರಾಂತಿ. ಊಟದೊಂದಿಗೆ ಸ್ವೀಟ್ ಕೊಡಬೇಕು. ಮೊಬೈಲ್ ಅವರ ಕೈಬಿಟ್ಟಾಗ ಸ್ವಲ್ಪ ಕೆಲಸ ಮಾಡಿದರೂ ಒಂದೂವರೆ ಪಟ್ಟು ಹೆಚ್ಚಿನ ಸಂಬಳ. ಅದೂ ನಷ್ಟದ ಬಾಬತ್ತು. ಆದರೂ ಸರಿಯಾದ ವೇಳೆಗೆ ಕೆಲಸ ಮಾಡಲಾಗದಾದ್ದರಿಂದ ಬೆಳೆ ಹಾಳಾಗಿ ನಷ್ಟವಾದ ಅನುಭವವೂ ಆಯಿತು.
ಮನೆಯಲ್ಲಿ ಪೂಜೆ ಮಾಡುತ್ತೇವೆ ಎನ್ನುತ್ತೀರಿ. ಅಭಿಷೇಕಕ್ಕೆ ಪಂಚಾಮೃತಕ್ಕೆ ಶುದ್ಧವಾದ ಹಾಲು ಬೇಕಾಗುತ್ತದೆ. ನಮ್ಮ ಮನೆಯಲ್ಲಿ ಹಸು ಇದ್ದರೆ ಅವುಗಳನ್ನು ತರಲು ಕಷ್ಟವಾಗುವುದಿಲ್ಲ. ಆದ್ದರಿಂದ ಒಂದು ಹಸು ಕಟ್ಟೋಣ. ಹಾಲಿಗೂ ಆಗುತ್ತದೆ. ಗೊಬ್ಬರಕ್ಕೂ ಆಗುತ್ತದೆ. ಆಹಾರಕ್ಕೆ ನಮ್ಮಲ್ಲಿ ಬೆಳೆದಿರುವ ಹುಲ್ಲೇ ಸಾಕು ಏನಂತೀರಿ ಎಂಬ ಆಳಿನ ಮಾತಿಗೆ ಆಗಲಿ ಎಂದ. ಯಾವುದೋ ಬ್ಯಾಂಕಿನವರು ಬೇಡವೆಂದರೂ ಹಸುವನ್ನು ಕೊಳ್ಳಲು ಸಾಲ ಕೊಟ್ಟರು. ಅದನ್ನು ಕೊಳ್ಳಲು ೫೦೦೦೦ ಸಾಲ ಪಡೆದಿದ್ದೇನೆ ಎಂದು ಸಾರುವ, ಬ್ಯಾಂಕಿನಿಂದ ಪಡೆದ ಒಂದು ಓಲೆಯೊಂದಿಗೆ ಹಸು ಕರು ಬಂದವು. ಅದರಿಂದ ಹೇಗೆ ಹಾಲು ಪಡೆಯುವುದು, ಅದಕ್ಕೆ ಹಾಕುವ ಆಹಾರ, ಅದು ತಿನ್ನುವ ರೀತಿ, ಅದು ಹಾಗೂ ಅದರ ಮುದ್ದಾದ ಕರುವನ್ನು ನೋಡಲು ಪ್ರತಿವಾರ ಬಂಧುಮಿತ್ರರೊಂದಿಗೆ ಹೆಂಡತಿಯ ಓಡಾಟ ಸಾಮಾನ್ಯವಾಗಿತ್ತು. ಕಾರಿಗೆ ವಾರಕ್ಕೆ ಒಂದು ಟ್ಯಾಂಕ್ ಪೆಟ್ರೋಲ್ ಬೇಕಾಯಿತು. ಮಾಡುವ ಒಂದು ದಿನದ ಪೂಜೆಗೆ ಇದು ಬೇಕಿತ್ತಾ ಎಂದುಕೊಂಡರೂ ಕೆಲವು ದಿನಗಳ ಕಾಲ ಹಾಲು ತುಪ್ಪಕ್ಕೆ ಸಹಾಯವಾಯಿತು. ಆದರೆ ಅದರ ಸೇವೆಯಲ್ಲಿ ನಿರತನಾಗಿದ್ದ ಆಳಿನಿಂದ ದೈನಂದಿನ ಕೆಲಸ ಉಳಿದು ಹೊರಗಿನಿಂದ ಬರುವ ಆಳುಗಳಿಗೆ ಬೇಡಿಕೆ ಹೆಚ್ಚಾಗಿ ಖರ್ಚಾಗುತ್ತಿತ್ತು.
ಒಂದು ದಿನ ಮಧ್ಯಾಹ್ನ ಕೆಲಸದ ಬಗ್ಗೆ ಆಳಿನೊಂದಿಗೆ ಮಾತನಾಡುತ್ತಿದ್ದಾಗ ಆತನ ಹತ್ತು ವರ್ಷಗಳ ಮಗ ಬಂದನು. ಮಗನಿಗೆ ಒಳ್ಳೆಯ ಶಾಲೆಯಲ್ಲಿ ಸೀಟು ಕೊಡಿಸಿರಿ. ನನ್ನ ಮಗನನ್ನು ನಿಮ್ಮಂತೆ ಚೆನ್ನಾಗಿ ಓದಿಸುತ್ತೇನೆ. ಒಳ್ಳೆಯ ಕಡೆ ಕೆಲಸ ಸಿಗುತ್ತದೆ. ನನಗೂ ಕೆಲಸ ಮಾಡಿ ಮಾಡಿ ಸಾಕಾಗಿದೆ. ಈ ರೈತಾಪಿ ಕೆಲಸ ಯಾವನಿಗೆ ಬೇಕಾಗಿದೆ. ಕೆಲಸ ಮಾಡಲಿ ಬಿಡಲಿ, ಪ್ರತಿ ತಿಂಗಳ ಒಂದನೇ ತಾರೀಖಿಗೆ ಸಂಬಳ ಎಣಿಸಬಹುದು ಎಂದನು. ಅವನು ಮಾತು ಆಡಿದ್ದು ಒಂದೇ ಆದರೂ ಅದು ರಾಘಣ್ಣನಿಗೆ ಯೋಚನೆ ಮಾಡಲು ಹಚ್ಚಿತು. ನಾನೋ ರೈತರ ಕೆಲಸ ಚೆಂದ ಎಂದು ಕೊಂಡು ನನ್ನ ಕೆಲಸದ ಬಗ್ಗೆ ಕೀಳು ಅಭಿಪ್ರಾಯ ಇಟ್ಟುಕೊಂಡರೆ ಇವನು ಅದನ್ನೇ ಚೆಂದ ಎನ್ನುತ್ತಾನೆ. ಅಂದರೆ ನಮ್ಮ ಕೆಲಸ ನಮಗೆ ಚೆನ್ನಾಗಿ ಕಾಣುತ್ತಿಲ್ಲವೇ ಎಂಬ ಯೋಚನೆ ಪ್ರಾರಂಭವಾಯಿತು.
ಬೆಳೆ ಸಾಕಷ್ಟು ಬರುತ್ತಿಲ್ಲ. ಇನ್ನೂ ಬೆಳೆದರೆ ಹೆಚ್ಚು ಆದಾಯ ಮಾಡಬಹುದು. ಏನೇ ಆಗಲಿ ನನ್ನ ಸ್ವಂತ ಜಮೀನು. ನಾನೇ ದೊರೆ ಎಂದು ಕೊಳ್ಳುತ್ತಿದ್ದ. ಕೃಷಿ ಕೆಲಸ ಚೆಂದ, ಇನ್ನೂ ಬಂಡವಾಳ ಹಾಕಬೇಕು ಎಂದು ಸಾಧ್ಯವಾಗಲೆಲ್ಲಾ ಹಣ ಉಳಿಸಿ ತೋಟಕ್ಕೆ ಬಂಡವಾಳ ಹಾಕುತ್ತಿದ್ದ. ಆದ್ದರಿಂದ ಕಾರನ್ನು ಹೆಚ್ಚಾಗಿ ಉಪಯೋಗಿಸುತ್ತಿರಲಿಲ್ಲ. ಬದಲು ಹಣ ಉಳಿಸಲು ಅನೇಕ ಸಾರಿ ನಡೆದೋ ಅಥವಾ ಬಸ್ಸಿಗೋ ಓಡಾಡುತ್ತಿದ್ದ. ಈಗ ನೋಡಿದರೆ ಆಳು ಹೀಗೆ ಮಾತನಾಡುತ್ತಿದ್ದಾನೆ ಎಂಬುದು ಸದಾ ಕಾಡಲು ಪ್ರಾರಂಭವಾಯಿತು.
ಕೃಷಿ ಮಾಡಲು ಪ್ರಾರಂಭಿಸಿದ ದಿನದಿಂದ ಆದ ಲಾಭ ನಷ್ಟಗಳೇನು, ಬೆಳೆದ ಬೆಳೆ ಎಷ್ಟು. ಅದನ್ನು ಖರ್ಚು ಮಾಡಲು ಪಟ್ಟ ಪಾಡುಗಳೇನು. ಅವರಿವರಲ್ಲಿ ಸೈ ಎನಿಸಿಕೊಳ್ಳಲು ಅವರಿಗೆ ಎಷ್ಟು ಉಪಚಾರ ಮಾಡಿದೆ. ಅವರಿದ್ದಲ್ಲಿಗೆ ಕೈಗೆಟುಕುವ ದರದಲ್ಲಿ ಮಾರಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಉಚಿತವಾಗಿ ಪೇರಲೆ, ಮಾವು, ಬಾಳೆಹಣ್ಣು, ಕೊಬ್ಬರಿ, ಪಪ್ಪಾಯಿ ಮುಂತಾದವುಗಳನ್ನು ಕೊಟ್ಟಿದ್ದೇನೆ. ಆದರೂ ಅವರು ನನ್ನ ಹಿಂದೆ, ಕೆಲವು ಬಾರಿ ನನ್ನ ಮುಂದೆಯೇ ನನಗೆ ಅವಮಾನ ಆಗುವಂತೆ ಮಾತನಾಡಿದ್ದಾರೆ. ಉದ್ಯೋಗದಲ್ಲಿ ಪ್ರಮೋಷನ್ ಕಳೆದುಕೊಂಡು ಜೊತೆಯವರಿಂದ ಹಿಂದೆ ಬಿದ್ದೆ. ಹಲವು ಸೌಲಭ್ಯ ಕಳೆದು ಕೊಂಡೆ . ನನಗೆ ಇದು ಬೇಕಿತ್ತಾ ಎನಿಸಲು ಪ್ರಾರಂಭವಾಯಿತು. ಈ ಎಸ್ಟೇಟ್ ಮಾರಿಬಿಡಲೇ ಎಂದು ಒಮ್ಮೆ ಯೋಚನೆ. ಉತ್ಪಾದನೆಯನ್ನು ನನಗೆಷ್ಟು ಬೇಕೋ ಅಷ್ಟು ಉಪಯೋಗಿಸಿ, ಉಳಿದಿದ್ದನ್ನು ಸಿಕ್ಕಷ್ಟು ಬೆಲೆಗೆ ಮಾರಿದರೆ ಹೇಗೆ ಎಂದೂ ಯೋಚನೆ. ಜಮೀನು ಮಾರಲು ಮನಸ್ಸಿಲ್ಲ, ಎಷ್ಟೆಲ್ಲಾ ಆಸಕ್ತಿಯಿಂದ ಬಂಡವಾಳ ಹಾಕಿದ್ದೇನೆ, ಏನೋ ಅಭಿಮಾನ, ವಾಂಛಲ್ಯ. ಹೀಗೆ ಹಲವಾರು ವಿಚಾರಗಳು ಅವನ ಮನಸಿನಲ್ಲಿ ಹರಿದಾಡುತ್ತಿದೆ.
ಒಮ್ಮೆ ಮಳವಳ್ಳಿ ಕಡೆಯಿಂದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ. ನಾನೂ ಒಬ್ಬ ಪ್ರಗತಿ ಪರ ರೈತ ಎಂಬುದು ತಲೆಯಲ್ಲಿತ್ತು. ಪಕ್ಕದಲ್ಲಿ ಕುಳಿತಿದ್ದ ರೈತನೊಬ್ಬನೊಂದಿಗೆ ಮಾತಿಗೆ ಪ್ರಾರಂಭಿಸಿದ. ಆತ ಬನ್ನೂರಿನ ಕುರಿ ಸಾಕಾಣಿಕೆ ಮಾಡುವವ. ಮಾತಿನ ಮಧ್ಯೆ ಅವನು ಒಂದೆರಡು ಕುರಿಗಳನ್ನು ಸ್ವಂತಕ್ಕೆ ಇಟ್ಟುಕೊಂಡು ಉಳಿದದ್ದನ್ನು ಮಾರುತ್ತೇವೆ ಎಂದು ಹೇಳಿದ. ಇಷ್ಟೆಲ್ಲಾ ಕುರಿ ಸಾಕಿ ಮಾರಾಟ ಮಾಡುತ್ತೀರಿ, ಕೊಳ್ಳುವವರು ಅವುಗಳನ್ನು ಕೊಲ್ಲುತ್ತಾರೆ ಎಂಬ ದುಃಖವಿಲ್ಲವೇ ಎಂದ. ಅಯ್ಯೋ ಅವರುಗಳು ಅದನ್ನು ತಿಂದರೇ ಅಲ್ವಾ ನಮಗೆ ವ್ಯಾಪಾರ . ಅದೇ ನಮ್ಮ ವ್ಯವಹಾರ. ಮತ್ತೆ ನಿಮ್ಮ ಸ್ವಂತಕ್ಕೆ ಸಾಕಿದ ಕುರಿಗಳ ಗತಿ ಎಂದ. ಅವೂ ಸಹ ಇದ್ದಷ್ಟು ದಿನ ಪ್ರೀತಿ ಮಾಡುತ್ತೇವೆ. ವಿಶ್ವಾಸದಿಂದ ಸಾಕುತ್ತೇವೆ. ಬೇಕಾದಾಗ ಅವು ತರಕಾರಿ ಆಗುತ್ತವೆ. ಅದನ್ನೂ ತಿನ್ನುತ್ತೇವೆ. ಅದಕ್ಕೋಸ್ಕರ ವ್ಯವಹಾರವನ್ನು ಕಳೆದು ಕೊಳ್ಳಲಾಗದು, ಜೀವನದಲ್ಲಿ ಅಭಿಮಾನ,ಪ್ರೀತಿ ವಿಶ್ವಾಸಗಳೇ ಬೇರೆ, ವ್ಯವಹಾರವೇ ಬೇರೆ ಅಲ್ಲವೇ ಎಂದ. ಉತ್ತರ ಕೊಡಲು ರಾಘಣ್ಣನಲ್ಲಿ ಏನೂ ಇಲ್ಲವಾದರೂ ಆ ರೈತನ ಮಾತಿನಿಂದ ಅವನ ಸಮಸ್ಯೆಗೆ ಉತ್ತರ ದೊರಕಿತು.
ದೈನಂದಿನ ತೊಳಲಾಟಕ್ಕೆ ಸಿಕ್ಕ ಮಾನಸಿಕ ಪರಿಹಾರವನ್ನು ವಿವರಿಸಿ ಒಳ್ಳೆಯ ದರ ಬಂದರೆ ಜಮೀನು ಮಾರಾಟ ಮಾಡುವುದು ಎಂದು ಮನೆಯಾಕೆಯೊಂದಿಗೆ ತೀರ್ಮಾನ ಮಾಡಿದ. ಮರುದಿನದಿಂದ ಖರೀದಿ ಮಾತು. ಕೊಳ್ಳುವ ದರ ನಾಲ್ಕು ಕೋಟಿ ಎಂದರೆ ಒಂದು ಕೋಟಿ ಕಾಗದದಲ್ಲಿ ಇರುತ್ತದೆ. ಉಳಿದ ಹಣ ಬ್ಲಾಕಿನಲ್ಲಿ ಕೊಡುತ್ತೇನೆ ಎಂಬುದು ಎಲ್ಲರ ಮಾತು. ಕಪ್ಪು ಹಣದ ಬಗ್ಗೆ ಭಯ ಪ್ರಾರಂಭವಾಯಿತು. ಕಡೆಗೆ ಮಿತ್ರರೊಬ್ಬರ ಸಲಹೆಯಂತೆ ಅರ್ಧ ಜಮೀನನ್ನು ಹಲವು ಭಾಗ ಮಾಡಿ ಬೇರೆ ಬೇರೆಯಾಗಿ ಮಾರಿದ. ಕೊಳ್ಳುವವನಿಗೂ ಸುಲಭ. ಮಾರುವವನಿಗೂ ಅನುಕೂಲ. ಒಂದೆರಡು ತಿಂಗಳಲ್ಲಿ ಎಲ್ಲಾ ವ್ಯಾಪಾರ ವಾಯಿತು .ಅದರಲ್ಲೊಬ್ಬರು ಈ ತುಂಡು ಜಮೀನಿಗಾಗಿ ನಗರದಲ್ಲಿರುವ ತಮ್ಮ ಸೈಟನ್ನು ಇವನೊಂದಿಗೆ ವಿನಿಮಯ ಮಾಡಿದ್ದರಿಂದ ಲೆಕ್ಕಾಚಾರಕ್ಕೆ ಸ್ವಲ್ಪ ಅನುಕೂಲವಾಯಿತು.
ಈ ಮಧ್ಯೆ ರಾಘಣ್ಣ ನನಗೆ ಭೇಟಿಯಾಗಿದ್ದಾಗ ಮಾರಾಟ ವ್ಯವಹಾರದ ಕ್ರಯ ಪತ್ರವನ್ನು ತೋರಿಸಿದ. ಅದರಲ್ಲಿನ ವಾಕ್ಯವೊಂದರಲ್ಲಿ "ಸದರಿ ಸ್ವಯಾರ್ಜಿತ ಸ್ವತ್ತನ್ನು ಲಾಗಾಯ್ತಿನಿಂದ ಸುಖವಾಗಿ ಅನುಭವಿಸಿಕೊಂಡು ಬಂದಿದ್ದು ಸರಿಯಷ್ಟೆ, ಇದನ್ನು ಈ ದಿನ ನಿಮಗೆ ಈ ದರಕ್ಕೆ ಮಾರಾಟ ಮಾಡುತ್ತಿದ್ದೇನೆ" ಎಂದಿತ್ತು. "ಸುಖವಾಗಿ ಅನುಭವಿಸಿಕೊಂಡು" ಎಂಬ ವಾಕ್ಯದ ವಿಶ್ಲೇಷಣೆ ಮಾಡುವಾಗ ಮೇಲ್ಕಂಡ ಸುಖಾನುಭವವನ್ನು ಬಿಡಿಬಿಡಿಯಾಗಿ ಹೇಳಿದ ಸಾಲುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ಓದುಗರಾದ ತಮಗೆ ಅದು ದೀರ್ಘವಾಯಿತೇನೋ!
ಮುಂದುವರಿಯುತ್ತಾ ಇದೇ ವೇಳೆಯಲ್ಲಿ ಉಳಿದ ಅರ್ಧ ಜಾಗವನ್ನು ವರ್ಷಕ್ಕೆ ಇಷ್ಟು ಕೊಡಬೇಕು ಎಂದು ಗುತ್ತಿಗೆ ಆಧಾರದಲ್ಲಿ ಅದೇ ರೈತನಿಗೆ ಕೊಟ್ಟಿದ್ದೇನೆ. ಈಗ ತನ್ನ ಮಗನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಒದಗಿಸಬೇಕಾಗಿದೆ. ನನಗೂ ಎಸ್ಟೇಟ್ ಕೆಲಸದಲ್ಲಿ ಸಾಕಾಗಿದೆ. ಆದ್ದರಿಂದ ಸದ್ಯದಲ್ಲೇ ಒಂದು ವಿದೇಶ ಪ್ರವಾಸಕ್ಕೆ ಹೊರಟಿದ್ದೇವೆ ಎಂದು ಮಾತು ಮುಗಿಸಿದ.
ನಿತ್ಯ ಉದ್ಯೋಗದೊಂದಿಗೆ ಕೃಷಿ ಹವ್ಯಾಸವೂ ಸೇರಿದಾಗ ರಾಘಣ್ಣ ವಿವಿಧ ಅನುಭವಗಳನ್ನು ಪಡೆದ. ಬೇರೆಯವರ ಕೆಲಸ ನೋಡುವವರಿಗೆ ಹಗುರವೇ ಆಗಿರುತ್ತದೆ. ಕೃಷಿ ವಿಷಯದಲ್ಲಿ ಬೆಳೆಯುವುದು ಕಷ್ಟ. ಅದರ ಮಾರಾಟ ಇನ್ನೂ ಕಷ್ಟ ಎಂಬುದನ್ನು ತಿಳಿಯಲು ತೋಟದ ಆಳು, ಗುತ್ತಿಗೆದಾರ ಕಣ್ಣಪ್ಪ, ಮಾರ್ಗದರ್ಶಿ ಮಿತ್ರ, ಗ್ರಾಹಕ ಸಹೋದ್ಯೋಗಿಗಳು ಆಡಿಕೊಂಡಿದ್ದು, ಮರದಿಂದ ಬಿದ್ದ ಅನಾಹುತ, ಸೂಕ್ತ ಸಮಯದಲ್ಲಿ ಸಿಗದ ಕೆಲಸಗಾರರು, ಆಳಿನ ಮಗನಿಗೆ ಬೇಕಾದ ವಿದ್ಯಾಭ್ಯಾಸ, ಇವುಗಳ ಮಧ್ಯೆ ಎಸ್ಟೇಟಿನ ಹಂಬಲ, ಇವುಗಳೆಲ್ಲವನ್ನೂ ಮೀರಿಸಿದ ಕುರಿಸಾಕಣೆದಾರನ ವಿಚಾರಸರಣಿಯು ರಾಘಣ್ಣನ ಜೀವನದ ಒಂದು ಮೈಲಿಗಲ್ಲು ಆಗುತ್ತದೆ.
ನಮ್ಮ ಸುತ್ತ ಮುತ್ತ ರಾಘಣ್ಣನಂತಹವರು ಬಹಳ ಜನ ಸಿಗುತ್ತಾರೆ. ಬೇರೆಯವರ ಸುಖದ ಭಾಗವನ್ನು ಕಂಡು ತಾನೂ ಹಾಗೆಯೇ ಸುಖವಾಗಿರ ಬೇಕು ಎಂದು ಆಶಿಸುವುದು ಸಹಜ. ಆದರೆ ಇರುವ ಕೆಲಸದೊಂದಿಗೆ ಅವರ ಉದ್ಯೋಗವನ್ನೂ ತಾವು ಮಾಡಲು ಹೋಗಿ ಹೊಸ ಪರಿಸ್ಥಿತಿ ಎದುರಿಸುವುದು ಕಷ್ಟವೇ ಹೌದು. ಇಲ್ಲಿ ರೈತ ರಾಘಣ್ಣ ತರಕಾರಿ ಹಣ್ಣುಗಳನ್ನು ಮಾರಾಟ ಮಾಡಲು ತಿಳಿದವರನ್ನು ಆಶ್ರಯಿಸಿರಬಹುದು. ಆದರೆ ಇಲ್ಲಿಯೂ ರಾಘಣ್ಣನ ಧಾರಾಳ ಸ್ವಭಾವ ಕಾಣುತ್ತದೆ. ತಾನೇ ತೆಂಗಿನ ಕಾಯಿ ಹೊರುವಾಗ ಅವನ ಕಷ್ಟ ಸಹಿಷ್ಣುತೆ ತಿಳಿಯುತ್ತದೆ. ಪ್ರವೃತ್ತಿಯ ಮಾರ್ಗದಲ್ಲಿ ಯಾವುದೋ ಆಮಿಷಕ್ಕೆ ಒಳಗಾದವನಂತೆ ಕಷ್ಟ ಎದುರಿಸುತ್ತಿರುವ ರಾಘಣ್ಣರು ಹಲವರು ಸಿಗುತ್ತಾರೆ. ಸಾಧ್ಯವಾದಲ್ಲಿ ಅವರ ಕೆಲಸವನ್ನು ಶ್ಲಾಘಿಸೋಣ. ಅವರ ಧಾರಾಳತನವನ್ನು ಗೌರವಿಸೋಣ. ಆದರೆ ಅವಹೇಳನ ಮಾಡಿ ಅವರ ಆಸಕ್ತಿ ಕಡಿಮೆ ಮಾಡುವುದು ಬೇಡ. ಏನಂತೀರಿ.
೧. ವಾಸ್ತವಕ್ಕೆ ಹಿಡಿದ ಕನ್ನಡಿ
ReplyDelete೨. Other side of the fence is always green.
3. ದೂರದ ಬೆಟ್ಟ ನುಣ್ಣಗೆ.
ಆಫಿಸ್ ಕೆಲಸದ ಜೊತೆ ಬೇರಾವ ಕೆಲಸ ಮಾಡಬಾರದು, ಸರಿ ಆದರೆ ಜಮೀನು ರಾಘಣ್ಣನ ಹೆಂಡತಿಯ ಹೆಸರಿನಲ್ಲಿ ಇದ್ದಿದ್ದರಿಂದ ಕೃಷಿ ಅವನ ಎರಡನೇ ಕೆಲಸ ಆಗುವುದಿಲ್ಲ.
ಬರಹ👌👌👌
ದೂರದ ಬೆಟ್ಟ ನುಣ್ಣಗೆ , ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹು ರೋಚಕ ಕತೆಗಳು ಬರುತ್ತೆ, ಇದರಿಂದ ಪ್ರಭಾವಿತರಾಗಿ ಇಂತಹ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಇದರಲ್ಲಿ ಮತ್ತೊಂದು ಸಮಸ್ಯೆ ಬಿಟ್ಟಿದೆ ಅದೇ ಲಿಟಿಗೇಷನ, ಖರೀದಿ ನಂತರ ಅಕ್ಕನ ಮೊಮ್ಮಗ ದಾವೆ ಹೂಡುತ್ತಾನೆ, ಇದರಲ್ಲಿ ಉರುಳಿರುವುದಿಲ್ಲ ಆದರೂ ಸಹ ನೀವು ವಕೀಲರನ್ನು ನೇಮಿಸಿ ಕೋರ್ಟ್ ಗೆ ತಿರುಗಲೆ ಬೇಕು ಕನಿಷ್ಠ 10 ವರ್ಷ ಬೇಕಾಗುತ್ತದೆ. ಚೆನ್ನಾಗಿದೆ ಕತೆ
ReplyDeleteಬಹು ದಿನಗಳ ನಂತರ ಬಂದ ತಮ್ಮ ಕಥಾಹಂದರ ಬಿಡದೆ ಓದಿಸಿಕೊಂಡು ಹೋಗುತ್ತದೆ. ಮಣ್ಣಿನ ಮಗನಾಗುವ ಬದಲು ಮಣ್ಣಿನ ಅಳಿಯನ ಆಶಾಪಾಶಗಳ ಸಂಭ್ರಮ ಅಸಹಾಯಕತೆಗಳು ಇದೇ ಮನಸ್ಥಿತಿಯಲ್ಲಿರುವ ಹಲವರಿಗೆ ಎಚ್ಚರಿಕೆಯ ಘಂಟೆ. ಹೆಣ್ಣು ಮಣ್ಣಿನ ಮೋಹ ಯಾರನ್ನೂ ಬಿಡುವುದಿಲ್ಲ. ಧನ್ಯವಾದಗಳು.
ReplyDeleteGreat, Sir. ತುಂಬಾ ಚೆನ್ನಾಗಿ ಬರೆದಿದ್ದೀರ. ಸುಲಭವಾಗಿ ಓದಿಕೊಂಡು ಹೋಗುತ್ತದೆ. ನಿಮ್ಮ ಕಥೆಯ ನಾಯಕನಲ್ಲಿ ನನ್ನನ್ನೇ ನಾನು ಕಂಡೆ. ಸ್ವಲ್ಪ ಹೆಚ್ಚು ಕಡಿಮೆ ನನ್ನದೂ ಇದೇ ಕಥೆ. ಬೆಂಗಳೂರಿನ ಆಫೀಸ್ ಕೆಲಸದ ಮಧ್ಯೆ, ನಮ್ಮ ಹಳ್ಳಿಯಲ್ಲಿರುವ ಅಪ್ಪನ ಜಮೀನನ್ನು ಅಭಿವೃದ್ಧಿ ಪಡಿಸುವ ಯೋಜನೆ ನನ್ನದು. ಒಂದೆರಡು ಲಕ್ಷ ಖರ್ಚು ಮಾಡಿದ್ದೇನೆ. ನಿಧಾನವಾಗಿ ಆ ಖರ್ಚನ್ನು ಸಂಪಾದನೆ ಮಾಡುವ ಧೈರ್ಯವಿದೆ. ಆದರೆ, ಈ ಕಥೆಯಲ್ಲಿ ಬರುವಂತೆ ಮಾರ್ಕೆಟಿಂಗ್ ತುಂಬಾ ಕಷ್ಟದ ವಿಷಯ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವುದಿಲ್ಲಾ. ದಲ್ಲಾಳಿ ಗಳ ಕಾಟ ಬೇರೆ. ಆದರೂ, ನನ್ನದೇ ಅನುಭವದ ತೆಗೆದುಕೊಂಡರೆ, ನಾನು ಒಂದೆರಡು ಲಕ್ಷ ಖರ್ಚುಮಾಡಿ ಬೋರೆವೆಲ್ ರಿಪೇರಿ ಮಾಡಿಸಿ, ಡ್ರಿಪ್ ಇರ್ರಿಗೇಷನ್ ಅಳವಡಿಸಿಕೊಂಡಿ ರುವುದರಿಂದ ತೆಂಗಿನ ಕಾಯಿ ಫಸಲು ತುಂಬಾ ಚೆನ್ನಾಗಿ ಬರುತ್ತಿದೆ. ನಮ್ಮ ಎಲ್ಲಾ ಅಣ್ಣ, ತಮ್ಮಂದಿರು ಮತ್ತು ತಂಗಿಯರಿಗೆ, ತೆಂಗಿನ ಕಾಯಿಗಳನ್ನು ನಾನೇ supply ಮಾಡುತ್ತಿದ್ದೇನೆ. ಅಂಗಡಿಯಲ್ಲಿ ಯಾರೂ ಕೊಂದುಕೊಳ್ಳಬೇಡವೆಂದೂ ಸಹಾ ಅವರಿಗೆ ಹೇಳಿದ್ದೇನೆ. ಕಮರ್ಷಿಯಲ್ ಆಗಿ, ದುಡ್ಡು ಮಾಡದಿದ್ದರೂ, ನಾವೇ ಬೆಳೆದ ಕಾಯಿ, ಪಲ್ಲೆಗಳನ್ನು ಉಪಯೋಗಿಸುವಾಗ ತುಂಬಾ ಖುಷಿಯಾಗುತ್ತದೆ! ವ್ಯವಸಾಯದಲ್ಲಿ ತಲೆದೋರಬಹುದಾದ ಎಲ್ಲಾ ಕಷ್ಟಗಳನ್ನು ಈ ಕಥೆ ಸೊಗಸಾಗಿ ವಿವರಿಸಿಕೊಂಡು ಹೋಗುತ್ತದೆ. ರೈತರು ಬಡವರಾಗಿ ಉಳಿಯಲಿಕ್ಕೂ ಕಾರಣ ಏನಿರಬಹುದೆಂದು ಈ ಕಥೆ ಹೇಳಲಿಕ್ಕೆ ಸಮರ್ಥವಾಗಿದೆ. ತುಂಬಾ ಪ್ರಾಕ್ಟಿಕಲ್ ಸಹಾ ಆಗಿದೆ. ರೈತರ ನೈಜ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಆದರೂ, ಕಥೆಯನ್ನು ಸ್ವಲ್ಪ ಪಾಸಿಟಿವ್ ಆಗಿ ಮುಕ್ತಾಯ ಮಾಡಿದ್ದರೆ, ವ್ಯವಸಾಯದಲ್ಲಿ
ReplyDeleteexperiments ಮಾಡಲು ಹೊರಟಿರುವ ನಮ್ಮಂಥಹ ಎಷ್ಟೋ ಆಸಕ್ತರಿಗೆ ಸ್ಫೂರ್ತಿಯಾಗಿರುತ್ತಿತ್ತು ಎಂದು ನನ್ನ ಭಾವನೆ. ನಿಮ್ಮ ಕಥೆಯಲ್ಲಿ, ಬಂಗಾರದ ಮನುಷ್ಯ ನ ಹಾಗೆ ಕಲ್ಲು ಕುಟ್ಟಿ ಪುಡಿ ಮಾಡಿ, ಅಲ್ಲಿ ಬಂಗಾರದ ಬೆಳೆ ಬೆಳೆದ ರಾಜೀವನನ್ನು ತೋರಿಸುವ ಪ್ರಯತ್ನ ಮಾಡಿದ್ದರೆ, ನಮ್ಮಂಥಹವರಿಗೆ ಸ್ಫೂರ್ತಿದಾಯಕವಾಗಿರುತ್ತಿತ್ತು!
ಲೇಖನ ಉತ್ತಮ ಗುಣಮಟ್ಟವನ್ನು ಹೊಂದಿದೆ. ರಾಘಣ್ಣನ ಆಸೆ ಆಕಾಂಕ್ಷೆಯಂತೆ, ನನಗೂ ಒಂದು ಕಾಲದಲ್ಲಿ ಯೋಚನೆ ಬಂದಿತ್ತು. ಆದರೆ ಧೈರ್ಯವಿರಲಿಲ್ಲ. ಧನ್ಯವಾದಗಳು.
ReplyDeleteಸ್ವಸಾಮರ್ಥ್ಯದ ಅರಿವಿದ್ದು ವಿವೇಕದಿಂದ ಸಂತೃಪ್ತ ಜೀವನವು ಪ್ರವೃತ್ತಿ ಮಾರ್ಗದ ಆಯ್ಕೆಯಾದಲ್ಲದೆ, ತಿಳಿದೋ ತಿಳಿಯದೆಯೋ ಆಸೆಗಳ ಸರಮಾಲೆಯಾದಾಗ ಪಡುವ ಬವಣೆ, ಅದನ್ನು ನಿಭಾಯಿಸಲೇಬೇಕಾದ ಅನಿವಾರ್ಯತೆ, ಪರಿಣಾಮವಾಗಿ ಎದುರಿಸಲೇಬೇಕಾಗುವ ಸಂದಿಗ್ಧಗಳು, ಮುಂದುವರಿಯಲೇಬೇಕಾದ ಪರಿಸ್ಥಿತಿ; ಇಷ್ಟಾದರೂ ಮುಕ್ತಾಯ ಹಾಡಿ ಮುಂದಿನ ಜೀವನ ಸುಗಮ ಮಾಡಿಕೊಳ್ಳಲು ದಾರಿ ಕಾಣದ ಮನೋಭಾವ, ವ್ಯವಹಾರಜ್ಞಾನದ ಅಭಾವ, ಎಲ್ಲವೂ ನಿಮ್ಮ ಬರಹದಲ್ಲಿ ಸರಳ ಸುಂದರ ಶೈಲಿಯಲ್ಲಿ ಮೂಡಿ ಬಂದಿವೆ. ಉತ್ಸಾಹಿಗಳಿಗೆ ಎಚ್ಚರಿಕೆಯ ನವಿರಿದೆ, ಅನೇಕ ದಾರಿಗಳ/ಆಲೋಚಿಸಬೇಕಾದ ಮಾರ್ಗದರ್ಶನವಿದೆ.
ReplyDeleteಈ ರೀತಿಯ ಯೋಚನೆ ನನಗೂ ಸಹ ಬಂದಿದೆ, ಆದರೆ ಕೂಲಂಕುಷವಾಗಿ ಅನುಭವಸ್ತ ರ ಜೊತೆ ಮಾತುಕತೆಯ ನಂತರ ಯಾರ್ಯಾರು ಏನು ಮಾಡ ಬೇಕೋ ಅದನ್ನು ಮಾಡಿದರೆ ಚೆನ್ನ. ಅತಿಯಾಗಿ ಆಸೆ ಪಟ್ಟರೂ ಕಷ್ಟಕ್ಕೆ ಸಿಕ್ಕಿಕೊಳ್ಳುತ್ತೇವೆ. ಯಾವುದಕ್ಕೂ ನಮಗೆ ಎಲ್ಲಾ ರೀತಿಯಿಂದಲೂ ಸಹಕಾರ ಸಿಗುತ್ತದೆಯೇ ಎಂದು ಯೋಚಿಸಬೇಕು. ಮುಂದಾಲೋಚನೆ ಮುಖ್ಯ ಎನ್ನವುದನ್ನು ಈ ಕತೆ ಹೇಳುತ್ತದೆ. ಒಟ್ಟಿನಲ್ಲಿ ಚೆನ್ನಾಗಿದೆ.
ReplyDelete