Skip to main content

ಹಾದಿ ತಪ್ಪಿದ ಚಾರಣ

ಜೀವನದ ಪ್ರಯಾಣದಲ್ಲಿ ಕೆಲವು ಬಾರಿ ಬೇಕು ಬೇಡಗಳ ಹಂಗಿರದೇ, ಅರಿವು ಪರಿವೆಗಳನ್ನು ಗಮನಿಸದೆ, ಕೆಲವು ಘಟನೆಗಳು ಧೊಪ್ಪೆಂದು ನಮಗೆ ಎದುರಾಗಿ ನಮ್ಮ ದೇಹ, ಮನಸ್ಸು ಚೇತನಗಳೆಲ್ಲವನ್ನೂ ಯಾವ ಮಾಪನದಿಂದಲೂ  ಅಳತೆ ಮಾಡಲಾಗದಷ್ಟು ನಡುಗಿಸಿ ಜರ್ಝರಿತರನ್ನಾಗಿ ಮಾಡಿಬಿಡುತ್ತವೆ. ಆಯಾ ಘಟನೆಗಳ ತೀವ್ರತೆಗೆ ಅನುಸಾರವಾಗಿ ಅವು ಹಲವಾರು ವರ್ಷಗಳ ಕಾಲ ನಮ್ಮ ಮನಸ್ಸಲ್ಲಿ ಮನೆಮಾಡಿ, ಒಮ್ಮೊಮ್ಮೆ ಬೇಡದ ಸ್ವಪ್ನವಾಗಿ ನಿದ್ದೆಯಿಂದ ಎಬ್ಬಿಸುವಷ್ಟು ಶಕ್ತಿಶಾಲಿಯಾಗಿದ್ದರೆ, ಇನ್ನು ಕೆಲವೊಮ್ಮೆ ಅಂತಹ ಪರಿಸ್ಥಿತಿಯಿಂದ ಹೊರಬಂದು ಮರುಜನ್ಮ ಪಡೆದಂತಾಯಿತು ಎಂದೆನಿಸಿ ನಿಟ್ಟುಸಿರು ಬಿಡುವಂತೆ ಮಾಡುತ್ತದೆ. ಅಂತಹ ಘಟನೆಯ ಮೆಲುಕೇ ಮುಂದಿನ ಲೇಖನ.

ಹಲವು ವರ್ಷಗಳ ಹಿಂದೆ ಒಮ್ಮೆ ಉತ್ತರಾಖಂಡ ರಾಜ್ಯದಲ್ಲಿ ಸಹೋದ್ಯೋಗಿಯೊಬ್ಬರೊಡನೆ ಕಛೇರಿ ಕೆಲಸದ ಸಲುವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಅಲ್ಲಿನ ವನಸಿರಿಯ ಬಗ್ಗೆ ಅತಿ ಹೆಚ್ಚಿನ ಮೆಚ್ಚುಗೆಯ ಮಾತನಾಡುತ್ತಾ ಇರುವಾಗ ಈ ವಿಶೇಷ ಅನುಭವಗಳಿಗೆ ಇಲ್ಲಿಗೆ ಬರಬೇಕಾದ್ದಿಲ್ಲ. ನಮ್ಮ ಮಂಗಳೂರಿನಿಂದ ಒಮ್ಮೆ ಬೆಂಗಳೂರಿಗೆ ರೈಲಿನಲ್ಲಿ ಬನ್ನಿ, ಎಂತಹಾ ಅಮೋಘ ಅನುಭವವಾಗುತ್ತದೆ ಎಂದು ಹೇಳುತ್ತಾ ಪ್ರಕೃತಿ ಸೌಂದರ್ಯವನ್ನು ವರ್ಣನೆ ಮಾಡಿದರು. ಆ ಮಾತಿನ ಮಧ್ಯೆ ಒಂದು ಆಸಕ್ತಿಕರ ಚಾರಣ ಅನುಭವವನ್ನೂ ವಿಸ್ತಾರವಾಗಿ ಹೇಳಿದರು. ಅದನ್ನು ನೀವೂ ಅವರ ಮಾತಿನಲ್ಲೇ ಕೇಳಿ. 

ಹೀಗೆಯೇ ಒಂದು ರೈಲು ಪ್ರಯಾಣ ಮಾಡುತ್ತಿದ್ದೆವು. ಇಕ್ಕೆಲಗಳಲ್ಲಿ ಹಸಿರು ಬೆಟ್ಟಗಳ ಸಾಲು. ಎತ್ತರದಲ್ಲಿ ನೀಲಿ ಆಕಾಶ. ಹಾಗೆಯೇ ಆಳದಲ್ಲಿ ಕಾಣುವ ನೀರೂ ನೀಲಿಯೇ. ಸುತ್ತ ಕಾಣುವಷ್ಟು ದೂರವೂ ಹಸಿರು ಕಾಡು, ವಿವಿಧ ರೀತಿಯ ಬಣ್ಣ ಬಣ್ಣಗಳ ಹೂಗಳು. ಅಲ್ಲಲ್ಲಿ ಕಾಣುವ ಕಣಿವೆಗಳಲ್ಲಿ ಝರಿಯ ಮೂಲಕ ಶುದ್ಧ ಜಲಧಾರೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿನ ಮನಮೋಹಕ ವಿಹಂಗಮ ನೋಟವದು. ನಿಂತು ನೋಡುವ ಮನಸಿದ್ದರೂ ಹೋಗುತ್ತಿರುವ ರೈಲು ನಮ್ಮದಲ್ಲವಲ್ಲ! ಇದನ್ನು ಒಮ್ಮೆ ನಡೆದು ಬಂದು ನೋಡಿ ಸಂತೋಷ ಪಡುವ ಯೋಚನೆ ಮನದಲ್ಲಿ ಮೂಡಿತು. ನಾವು ಆಗಾಗ್ಗೆ ವಿವಿಧೆಡೆ ನಡಿಗೆಯಲ್ಲಿ, ಬೈಸಿಕಲ್ ಅಥವಾ ವಾಹನಗಳಲ್ಲಿ ಸಾಹಸ ಪ್ರವಾಸ ಮಾಡುತ್ತಿದ್ದೆವು. ಈ ಬಾರಿ ಈ ರೈಲು ಮಾರ್ಗವು ದುರಸ್ತಿಯಲ್ಲಿ ಇರುವುದರಿಂದ, ಚಾರಣ ತಂಡದ ಮಾಮೂಲಿ ಸದಸ್ಯರು ಎಲ್ಲರೂ ಇಲ್ಲದಿದ್ದರೂ ಹೊಸದಾದ ಸಮಾನ ಮನಸ್ಕ ಮಿತ್ರರನ್ನು ಸೇರಿಸಿಕೊಂಡು ಈ ಮಾರ್ಗದಲ್ಲಿ ಒಂದು ಚಾರಣವನ್ನು ಯೋಜಿಸಿದೆವು.

ಅದರಂತೆ ಸಕಲೇಶಪುರಕ್ಕೆ ನಾವು ಏಳು ಜನ ಮಿತ್ರರು ಬಂದು ಸೇರಿದ್ದೇವೆ. ಮರುದಿನ ಬೆಳಿಗ್ಗೆ ಬೇಗನೇ ಎದ್ದು ಇಲ್ಲಿಂದ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರೈಲ್ವೆ ಹಳಿಯನ್ನು ಅನುಸರಿಸಿ ನಡೆದು ಹೋಗುವ ಎರಡು ದಿನಗಳ ಪ್ರಯಾಣವೇ ಈ ಬಾರಿಯ ಚಾರಣ ಕಾರ್ಯಕ್ರಮ. ಅಂದುಕೊಂಡಂತೆ ಬೆಳಿಗ್ಗೆ ನಮ್ಮ ಪ್ರವಾಸ ಪ್ರಾರಂಭವಾಯಿತು. ಸುಖಕರ ಪ್ರವಾಸಕ್ಕೆ ಕಡಿಮೆ ಲಗ್ಗೇಜ್ ಸಹಕಾರಿ ಎಂದು ಕೊಂಡೇ ನಮ್ಮ ತಯಾರಿ: ಮಾರ್ಗ ಮಧ್ಯದಲ್ಲಿ ಸಿಗುವ ರೈಲು ನಿಲ್ದಾಣದಲ್ಲಿ ಮಲಗಲು ಒಂದು ಹಾಸಿಗೆ ಬಟ್ಟೆ, ಸಿಗ್ನಲ್ ಸಿಗದ ದಾರಿಯಲ್ಲಿ ಬಹೋಪಯೋಗವಿಲ್ಲದಿದ್ದರೂ ಕನಿಷ್ಠ ಬೆಳಕು ಕೊಡಲಾದರೂ ಇರುವ ಹಳೆ ಮಾದರಿ ಮೊಬೈಲ್, ನೈಲಾನ್ ಹಗ್ಗ  ಮತ್ತು ಆಹಾರ ತುಂಬಿಸಿದ ಬ್ಯಾಕ್ ಪ್ಯಾಕ್. ಕೂಲಿಂಗ್ ಗ್ಲಾಸ್ ಕನ್ನಡಕ, ಸೊಳ್ಳೆ ಬತ್ತಿ ಜೊತೆಗೆ ತಲೆ ಮೈ ಕೈ ನೋವಿನ ಔಷಧಿ ಇತ್ಯಾದಿ ಇತ್ಯಾದಿಗಳನ್ನು ಯಥಾನುಶಕ್ತಿಯಾಗಿ ಹೊತ್ತು ನಡೆದೆವು. ಇವುಗಳೊಂದಿಗೆ ಪ್ರತಿಯೊಬ್ಬರೂ ಹಳಿಯ ಮೇಲೆ ಸರತಿಯಲ್ಲಿ ನಡೆದು ಹೋಗುತ್ತಿರುವುದನ್ನು ನೋಡಿದವರಿಗೆ ಸಮರ ಸೈನಿಕರನ್ನು ಕಂಡಂತಾಗುತ್ತಿತ್ತು ಎಂದು ನನ್ನ ಅನಿಸಿಕೆ.

ರೈಲ್ವೆ ಮಾರ್ಗದಲ್ಲಿ ಇರುವ ವಿಶೇಷತೆಗಳನ್ನು ಕೇಳಿ ಸಂಗ್ರಹಿಸಿದಂತೆ ಹೇಳುವುದಾದರೆ ಈ  ಮಾರ್ಗದಲ್ಲಿ ೫೨ ಸುರಂಗಗಳು ಹಾಗೂ ೧೦೯ ಸೇತುವೆಗಳು ಇವೆ. ಪರ್ವತಗಳನ್ನು ಕೊರೆದು ನಿರ್ಮಿಸಿರುವ ಹಲವು ಸುರಂಗಗಳು ಸುಮಾರು ೨೦೦ ಮೀಟರ್ ನಿಂದ ೭೫೦ ಮೀಟರ್ ಉದ್ದವಾಗಿದೆ. ಕೆಲವು ಸೇತುವೆಗಳು ನೆಲದಿಂದ ಸುಮಾರು ೨೦೦ ಮೀಟರ್ ನಷ್ಟು ಎತ್ತರದಲ್ಲಿದೆ. ಸುಮಾರು ಅರವತ್ತು ಕಿಲೋಮೀಟರ್ ದೂರವನ್ನು ಒಂದೇ ದಿನದಲ್ಲಿ ನಡೆದು ಮುಗಿಸುವುದು ಅಸಾಧ್ಯ. ಆದ್ದರಿಂದ ಈ ರಾತ್ರಿ ಮಾರ್ಗ ಮಧ್ಯದಲ್ಲಿ ಸಿಗುವ ಎಡಕುಮುರಿ ನಿಲ್ದಾಣದಲ್ಲಿ ತಂಗಬೇಕು. ನಾಳೆ ರಾತ್ರಿಗೆ ಕುಕ್ಕೆ ಸುಬ್ರಮಣ್ಯವನ್ನು ತಲುಪುವುದೇ ಉತ್ತಮ ಯೋಜನೆ ಎಂಬ ಸಲಹೆ ಹಿಡಿಸಿತು.

ಪ್ರಾರಂಭದ ಕೆಲವು ಗಂಟೆಗಳ ನಡೆಯಲ್ಲಿ ಹಲವು ಜೋಕುಗಳು, ಉಡಾಫೆ ಮಾತುಗಳು, ಅವರಿವರನ್ನು ಆಡಿಕೊಂಡು ಹಾಸ್ಯ ಕುಚೋದ್ಯಗಳಿಂದ ಹೋಗಿದ್ದರಿಂದ ಸಮಯ ಮುಗಿದಿದ್ದು ಗೊತ್ತಾಗಲೇ ಇಲ್ಲ. ಮುಗಿಲತ್ತ ನೋಡಿದಾಗ ಮೋಡಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡುತ್ತಾ ಕೆಳಗಿನ ಚಿತ್ರ ಗೀತೆಯನ್ನು ನೆನಪಿಸುತ್ತಿತ್ತು

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ, ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು, ರಂಜಿಸಿ ನಗೆಯಲಿ ಮೀಸುತಿದೆ ...

ಹಾಗೆಯೇ ಖುಷಿಯಿಂದ ಗುನುಗುತ್ತಾ ಒಂದು ಕಡೆ ಎತ್ತರದಲ್ಲಿ ಸೇತುವೆ ಮೇಲೆ ಹೋಗುತ್ತಿದ್ದಾಗ ಕೆಳಗೆ ನೋಡಿದರೆ ಸಣ್ಣದಾಗಿ ಕಾಣುವ ನದಿ. ಎಲ್ಲೆಲ್ಲೂ ಕಂಡ ಹಸಿರು ರಾಶಿ, ಸೇತುವೆಯಮೇಲೆ ನಡೆದಾಡುವಾಗ ಮನಮೋಹಕವೆನಿಸಿದರೂ ಬಗ್ಗಿ ನೋಡಿದರೆ ರೌದ್ರಾನುಭವದ ಆಳ. ಕೆಲವು ಸೇತುವೆಗಳ ಮೇಲೆ ನಡೆಯುವಾಗ ಮದ್ಯದಲ್ಲಿ ಉದ್ದನೆಯ ಕಿಂಡಿಗಳಿವೆ, ಎಚ್ಚರದಿಂದ  ನಡೆಯಬೇಕು. ಮಧ್ಯೆ ಆಳದಲ್ಲಿ ಕಾಣುವ ನೋಟ ಎದೆ ಝಲ್ ಎನಿಸುತ್ತದೆ. ಒಬ್ಬಿಬ್ಬರು ತಲೆಸುತ್ತಿ ಬರುತ್ತಿದೆ, ನಡೆದಾಡಲು ಕಷ್ಟವಾಗುತ್ತದೆ ಎನ್ನುತ್ತಿದ್ದರೂ, ಉಳಿದವರು ತಾವು ಶೂರರು ಎಂದು ಸಟಸಟ ಹೆಜ್ಜೆ ಹಾಕುವರು. ಆವರೆಗೂ ನಾವು ಈ ಹಳಿ ಮಾರ್ಗವು ನಮ್ಮ ಸ್ವಂತದ್ದು ಎಂಬ ಭಾವನೆಯಿಂದ ಹೋಗುತ್ತಿದ್ದೆವು. ಇದ್ದಕ್ಕಿದ್ದಂತೆ ಗೂಡ್ಸ್ ರೈಲೊಂದು ಬರುವ ಸದ್ದು. ಅದು ಸಮೀಪಿಸುತ್ತಿದ್ದಂತೆ ನಿಲ್ಲಲು ಜಾಗ ಹುಡುಕಲು ಸಾಕು ಸಾಕಾಯಿತು. ಅಂತೂ ಎಲ್ಲರೂ ಓಡಿ ಒಂದು ಕಡೆಯಲ್ಲಿ ಆ ಸೇತುವೆಗೆ ಆಂಟಿಕೊಂಡಿರುವ, ಮನೆಯ ಬಾಲ್ಕನಿಯಂತೆ ಇದ್ದು ನೇತಾಡುತ್ತಿರುವ ಕಟಕಟೆಯಲ್ಲಿ ಸೇರಿಕೊಂಡೆವು. ಅದೋ ಮಳೆಬಿಸಿಲಲ್ಲಿ ನೆನೆದು ಬಸವಳಿದು ತುಕ್ಕು ಹಿಡಿದ ಕಬ್ಬಿಣದ ಚೌಕ. ಅದರಲ್ಲಿ ಎಲ್ಲರೂ ನಿಂತಿದ್ದೇವೆ. ಎಲ್ಲಿ ಮುರಿದು ಬೀಳುವದೋ ಎಂಬ ಭಯ. ಈ ಮಧ್ಯೆ  ನಮ್ಮಿಂದ ಕೆಲವೇ ಅಡಿಗಳಷ್ಟು ಅಂತರದಲ್ಲಿ ದಡ್ ದಡ್ ಎಂದು ಸಾಗಿದ ರೈಲು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ದಾಟಿದ ಬೋಗಿಗಳು. ನಾವು ನಿಂತಿದ್ದ ಚೌಕ ಗಡಗಡ ನಡುಗುತ್ತಿತ್ತು. ಇನ್ನೇನು ಮುರಿದೇ ಹೋಯಿತು ಎಂದು ಉಗುಳು ನುಂಗಿಸುತ್ತಿತ್ತು. ಈವರೆಗೂ ಇದ್ದ ಧೈರ್ಯ, ಆತ್ಮ ಸ್ಥೈರ್ಯ ಹೇಗೆ ಮಾಯವಾಯಿತೋ ತಿಳಿಯದು. ಮನದ ತುಂಬಾ ಯಾವಾಗ ಗೂಡ್ಸ್ ರೈಲುಗಳು ಬಂದು ಬಿಡುತ್ತದೆಯೋ ಎಂಬ ಆತಂಕ. 

ಈ ಮಾನಸಿಕ ತಾಪವನ್ನು ತಾಳಲಾರದ ಮೂವರು ಮಿತ್ರರು ಈ ಚಾರಣ ಸಾಕು. ಹೀಗೆಯೇ ವಾಪಸ್ ಹೋಗೋಣ ಎಂದು ರಾಗ ಶುರು ಮಾಡಿದರು. ಆದರೆ ಬಹುಮತದ ಅಭಿಪ್ರಾಯ ಹಾಗೂ ಉಳಿದವರ ಧೈರ್ಯ ಆತ್ಮವಿಶ್ವಾಸದ ಮಾತುಗಳಿಗೆ ಓಗೊಟ್ಟು ಎಲ್ಲರೂ ಮುಂದುವರೆದೆವು. ಹಾಗೂ ಹೀಗೂ ಆ ದಿನದ ಪ್ರಯಾಣ ಎಡಕುಮರಿ ನಿಲ್ದಾಣ ಸೇರಿಸಿತು. ಇದು ರೈಲು ನಿಲ್ಲಲಷ್ಟೇ ನಿಲ್ದಾಣ. ಹೇಳಿಕೊಳ್ಳುವಂತಹ ವ್ಯವಸ್ಥೆ ಇಲ್ಲದಿದ್ದರೂ ಒಂದು ಪುಟ್ಟ ಅಂಗಡಿ. ಆ ಕಾಫಿ ಟೀ ಅಂಗಡಿಯಲ್ಲಿ ದೊರೆತ ಬಿಸ್ಕತ್ತು ಸಾಕಾಯಿತು. ನಿಲ್ದಾಣದ ಪ್ಲಾಟ್ ಫಾರಂ ಮೂಲೆಯೊಂದರಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಂಡೆವು. ಆಯಾಸದಿಂದ ನಿದ್ದೆ ಬರುತ್ತಿತ್ತಾದರೂ ಸೊಳ್ಳೆಗಳು ಪದೇ ಪದೇ ನಿದ್ರಾಭಂಗ ತರುತ್ತಿತ್ತು. ರಾತ್ರಿ ನಿದ್ದೆ ಸಾಲದಾದರೂ ಬೆಳಿಗ್ಗೆ ಆರು ಗಂಟೆಗೇ ಪ್ರಯಾಣ ಶುರು ಮಾಡಿದೆವು. ಆ ಅಂಗಡಿಯಲ್ಲಿ ಆತುರದಲ್ಲಿ ನಮಗಾಗಿ ಮಾಡಿದ ಹೊಗೆ ವಾಸನೆಯ ಚಹಾ ಕುಡಿದು ಹೊರಟೆವು.

ಸುಮಾರು ಮೂವತ್ತು ನಿಮಿಷ ನಡೆದಿರಬಹುದು. ಮಿತ್ರನೊಬ್ಬ ಬಹಿರ್ದೆಸೆಗೆ ಹೋಗಬೇಕೆಂದನು. ಅದಕ್ಕಾಗಿ ಎಲ್ಲರೂ ಒಂದು ಕಡೆ ನಿಂತೆವು. ಆದರೆ ಅವನ ಜೊತೆಯಲ್ಲಿ ತಾನಿದ್ದು ಅವನನ್ನು ಕರೆದುಕೊಂಡು ಬರುತ್ತೇನೆ, ನೀವು ಮಾತನಾಡುತ್ತಾ ಹೋಗುತ್ತಿರಿ, ಸ್ವಲ್ಪ ಹೊತ್ತಿನಲ್ಲಿ ಬಂದು ಸೇರುತ್ತೇವೆ ಎಂದು ಇನ್ನೊಬ್ಬ ಅವನಿಗೆ ಕಂಪನಿ ಕೊಡಲು ನಿಂತನು. ಉಳಿದವರು ನಾವು ನಿಧಾನವಾಗಿ ಕಂಡದ್ದನ್ನು ನೋಡುತ್ತಾ ಹೋಗೋಣ, ಒಂದು ಕಡೆ ಇವರಿಗೆ ಕಾಯುತ್ತಾ ಕುಳಿತು ಕೊಳ್ಳೋಣ ಎನ್ನುತ್ತಾ ಮುಂದೆ ಹೆಜ್ಜೆ ಹಾಕಿದೆವು. 

ಪರ್ವತಶ್ರೇಣಿಯ ರೂಪರಾಶಿ ರಮಣೀಯ. ಆ ನಿಸರ್ಗದ ಸೌಂದರ್ಯವನ್ನು ಆಸ್ವಾದಿಸಿ ಬರೆದರೆ ನಾವು ಕವಿಯೇ ಆಗುತ್ತೇವೆ. ಆ ಹಾದಿಯಲ್ಲಿ ಏನೋ ಸಾಧಿಸುತ್ತಿರುವೆವು ಎಂಬ ಭಾವ ಎಲ್ಲರ ಮುಖದಲ್ಲಿ. ಇಲ್ಲಿರಬಹುದಾದ ಪ್ರಾಣಿ ಪಕ್ಷಿಗಳ ವಿಷಯ, ಮರಗಿಡಗಳ ಪರಿಚಯ, ಚೆಲುವಿನ ಹೂಗಳು, ರುಚಿಯಾದ ಹಣ್ಣು, ಹೀಗೆ ಮಾತಿನೊಂದಿಗೆ ಪ್ರಕೃತಿ ಸೌಂದರ್ಯ ಸವಿಯುತ್ತಾ ನಿಧಾನವಾಗಿ  ಮುಂದುವರೆದೆವು. ಮಾತನಾಡುತ್ತಾ ಅರ್ಧ ಗಂಟೆ ನಡೆದಿರಬಹುದು. ಎಷ್ಟು ಹೊತ್ತಾದರೂ ಹಿಂದಿದ್ದ ಮಿತ್ರರು ಬಾರದಿರುವುದು ಸ್ವಲ್ಪ ಆತಂಕವಾಯಿತು. ಅವರ ಹೆಸರು ಹಿಡಿದು ಕೂಗುತ್ತಾ ವಾಪಸ್ ಹೊರಟೆವು. ಅವರನ್ನು ಬಿಟ್ಟು ಹೋಗಿದ್ದ ಸ್ಥಳಕ್ಕೆ ಬಂದೆವು. ಅರೇ, ಅವರು ಕಾಣುತ್ತಿಲ್ಲ. ಎಲ್ಲಿ ಹೋದರು ಎಂದು ಆಶ್ಚರ್ಯ. ಏನಾದರೂ ವಾಪಸ್ ಊರಿಗೆ ಹೋದರೇ ಎಂಬ ಅನುಮಾನ. ಹಾಗಾಗಲು ಸಾಧ್ಯವಿಲ್ಲ. ಅವರೇ ಅಲ್ಲವೇ ವಾಪಸ್ ಹೋಗುವವರಿಗೆ ಸಮಾಧಾನ ಹೇಳಿ ಚಾರಣ ಮುಂದುವರೆಸಿದ್ದು, ಎಂದುಕೊಳ್ಳುತ್ತಾ ಪಕ್ಕದ ಕಾಲುದಾರಿಯಲ್ಲಿ ಅಥವಾ ಪರ್ಯಾಯ ಮಾರ್ಗದಲ್ಲಿ ಮುಂದೆ ಹೋಗಿ ನಮಗಾಗಿ ಕಾಯುತ್ತಿರಬಹುದೆಂದು ಎನಿಸಿತು.

ಅವರ ಹೆಸರು ಕೂಗುತ್ತಲೇ ತಿರುಗಿ ನಮ್ಮ ಪ್ರಯಾಣ ಮುಂದುವರೆಸಿದೆವು. ದಾರಿಯಲ್ಲಿ ಕಂಡ ಸೇತುವೆಗಳ ಕೆಳ ಭಾಗದಲ್ಲಿ ಅವರನ್ನು ಹುಡುಕುವ ಪ್ರಯತ್ನದಲ್ಲಿರುವ ಕಣ್ಣುಗಳು. ದಾರಿಯಲ್ಲಿ ಸಿಕ್ಕ ಕಿರಿದಾದ ಸುರಂಗಗಳಲ್ಲಿ ನಾವು ಪ್ರವೇಶಿಸುವ  ಮುನ್ನವೇ ಹೊರಬರುವ, ಗಾಬರಿಗೊಳಿಸುವ ಬಾವಲಿಗಳು. ಕೆಲವೊಮ್ಮೆ ಹಂದಿಗಳು. ನಮಗೋ ಒಂದು ಕಡೆ ಎದುರಿನಿಂದ ಗೂಡ್ಸ್ ಗಾಡಿ ಬರುತ್ತದೆಯೋ ಎಂಬ ಭಯ, ಆತಂಕ. ಮತ್ತೊಂದು ಕಡೆ ಎಷ್ಟು ದೂರ ಹೋದರೂ ಕಾಣದ ಮಿತ್ರರು. ಅವರ ಕುರಿತ ಯೋಚನೆಯಿಂದ ಮುಂದಿನ ಪ್ರಯಾಣವೇ ಬೇಡವೆನಿಸುತ್ತಿತ್ತು. ಯಾರಿಗೂ ಉತ್ಸಾಹವಿಲ್ಲ. ಮಾತಿಲ್ಲದ ನಡುಗಯ ನೋಟಗಳಲ್ಲೇ ಮೌನ ಭಾಷೆಯ ಪ್ರಯಾಣ. 

ಯಾವುದಾದರೂ ಹತ್ತಿರದ ಮಾರ್ಗ ಸಿಕ್ಕರೆ ಅಲ್ಲಿಂದ ರಸ್ತೆ ಸೇರಿಕೊಳ್ಳೋಣ. ಅಲ್ಲಿಂದ ಸಿಗುವ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗೋಣ. ಅಲ್ಲಿಗೆ ಹೇಗಾದರೂ ಇವರು ಬಂದೇ ಬರುತ್ತಾರೆ, ಎಂಬ ಒಬ್ಬರ ಸಲಹೆಗೆ ಎಲ್ಲರೂ ಹೂಂ ಎಂದೆವು. ‌ಅದಕ್ಕಾಗಿ ಈಗ ನಮ್ಮ ಕಣ್ಣುಗಳು ಟಾರ್ ರಸ್ತೆ ಹುಡುಕುತ್ತಿವೆ. ಸುಮಾರು ಒಂದು ಗಂಟೆ ನಡೆದೆವು. ಒಬ್ಬರಿಗೆ ಕಂಡ ರಸ್ತೆಯಲ್ಲಿ ಹೋಗುತ್ತಿದ್ದ ಬಸ್ಸನ್ನು ನಾವೂ ನೋಡಿದಾಗ ಅದು ನಮ್ಮನ್ನೇ ಕರೆದುಕೊಂಡು ಹೋಗುವಂತೆ ಭಾಸವಾಯಿತು. ಸರಿ, ಎಲ್ಲಿಂದ ಇಳಿದರೆ ಆ ರಸ್ತೆ ಸೇರುತ್ತೇವೆ ಎಂಬ ಯೋಚನೆ. ಕೆಲವು ನಿಮಿಷಗಳಲ್ಲಿ ಹಳಿ ಮಾರ್ಗದ ಪಕ್ಕದಲ್ಲಿ ಕಂಡ ಒಂದು ಇಳಕಲು ಕಾಲು ದಾರಿ. ಅದರ ಮೂಲಕ ಅಲ್ಲಿಗೆ ಹೋಗಬಹುದು ಎಂದು ಸರ್ವೇ ಮಾಡಿದ ಮಿತ್ರ ಜೋಡಿ. 

ಅವರನ್ನು ಅನುಸರಿಸಿ ಆ ದಾರಿಯಲ್ಲಿ ಇಳಿಯಲು ಪ್ರಾರಂಭ. ಹಲವು ನಿಮಿಷಗಳ ತರುವಾಯ ಧಿಡೀರ್ ಆಗಿ ಮುಗಿದು ಹೋದ  ದಾರಿ. ಅತ್ತಿತ್ತ ಹುಡುಕಿದಾಗ ಸುಮಾರು ಮೂರು ಅಡಿಯಷ್ಟು ಆಳದಲ್ಲಿ ಕಂದಕದಲ್ಲಿ ಮುಂದುವರಿದ ಕಾಲು ದಾರಿ. ಅಲ್ಲಿಗೆ ಕಷ್ಟದಿಂದಲೇ ಇಳಿದು ನಡೆದೆವು. ಈ ಕೆಳಗಿಳಿಯುವ ದಾರಿ ಎಷ್ಟು ಕಷ್ಟದಾಯಕವಾಗಿತ್ತೆಂದರೆ, ಏನಾದರೂ ತೊಂದರೆಯಾದರೆ ಮತ್ತೆ ಮೇಲೆ ಹತ್ತಿ ವಾಪಸು ಬರುವುದು ಸಾಧ್ಯವೇ ಇರಲಿಲ್ಲ. ನಾವು ಹೊರಟಿದ್ದುದು ಒಂದು ರೀತಿ ಏಕಮುಖ ದಾರಿ. ನಾವು ಸ್ವಲ್ಪ  ಕೆಳಗಿಳಿದಾಗ ಸುತ್ತಲೂ ದಟ್ಟದಾದ ಮರಗಳ ಕಾಡು. ಆದ್ದರಿಂದ ನಾವು ಹೋಗಬೇಕಿದ್ದ ದಾರಿ ಕಾಣಿಸದೇ ಹೋಯಿತು. ಎಲ್ಲರ ಮನದಲ್ಲೂ ಭಯ ಮನೆ ಮಾಡತೊಡಗಿತು. ಕಂಡ ಮತ್ತೊಂದು ದಾರಿಗೆ ಒಬ್ಬೊಬ್ಬರೇ ಕಷ್ಟದಿಂದ ಇಳಿದೆವು. ಹೊಸ ಕಾಲು ದಾರಿ ತುಂಬಾ ಇಳಿಜಾರು. ಆದ್ದರಿಂದ ಸಹಜವಾಗಿ ಓಡಿಸುತ್ತಿತ್ತು. ಕಲ್ಲು ಮುಳ್ಳುಗಳ ರಸ್ತೆಯಲ್ಲಿ ಗಿಡದ ಮಟ್ಟಿಯ ಮುಳ್ಳುಗಳು ಮೈಗೆ ಚುಚ್ಚಿ ಘಾಸಿ ಮಾಡುತ್ತಿತ್ತು. ಅಂತ್ಯ ತಿಳಿಯದ ಹಾದಿಯಲ್ಲಿ ನಮ್ಮ ಪ್ರಯಾಣ ಪ್ರಯಾಸವೆನಿಸಲು ಶುರುವಾಯಿತು. ಕೆಲವರು ಸತ್ಯಹರಿಶ್ಚಂದ್ರ ಸಿನಿಮಾದಲ್ಲಿ ಕಂಡ ಅಲೆದಾಡಿದ ದಾರಿ ಎಂದರು. ನನಗೆ ಕಳೆದು ಹೋದ ಮಿತ್ರರ ಚಿಂತೆ. ಅವರಿಲ್ಲದೆ ಊರಿಗೆ ಹೋಗುವುದು ಹೇಗೆ. ಅವರು ಸಿಗದಿದ್ದರೆ ಅವರ ಮನೆಯಲ್ಲಿ ಏನು ಉತ್ತರ ಕೊಡಬೇಕು. ಅವರು ಖಾಯಂ ಆಗಿ ಸಿಗದಿದ್ದರೆ ಆಗುವ ಪೋಲಿಸ್ ಕೇಸುಗಳು, ನಮ್ಮ ಮೇಲೆ ಬರಲಿರುವ ಆಪಾದನೆಗಳು ಇಂತಹಾ ಕೆಟ್ಟ ವಿಚಾರಗಳು ಮನದಲ್ಲಿ. ಮಾತಿಗೆ ವಿಷಯ ಬಂದರೂ ಚರ್ಚೆ ಬೇಡವಾಗಿದೆ. ಇದು ಎಲ್ಲರ ಸ್ಥಿತಿಯೂ ಹೌದು. ದೇವರ ದಯೆಯಿಂದ ಯಾವುದೇ ಕೆಟ್ಟದಾಗದಿರಲಿ ಎಂದು ನಾಸ್ತಿಕನಾದ ನನ್ನೊಂದಿಗೆ ದೇವರಲ್ಲಿ ಉಳಿದವರ ಮನವಿ. ಮೊದಲು ಊರು ಸೇರೋಣ. ತಿಳಿಯದ ದಾರಿಯಲ್ಲಿ ನಾವೇ ಕಳೆದು ಹೋಗುತ್ತೇವೋ ಏನೋ ಎಂಬ ಒಬ್ಬರು ಆಡಿದ ಮಾತು ಮೈಬೆವರು ಬರಿಸುತ್ತಿತ್ತು. ಮೌನಭರಿತ ಕಳವಳ. 

ಮತ್ತೆ ಒಂದು ಗಂಟೆಯ ಪ್ರಯಾಣ. ಅಲ್ಲಲ್ಲಿ ಹಾರಿ ಇಳಿದಿರುವುದರಿಂದ ವಾಪಸ್ ಮೇಲೆ ಹೋಗಲಾಗದು. ಕೆಲವು ಕಡೆ ದಾರಿ ಮುಗಿಯುತ್ತದೆ. ಮುಂದೆಯೂ ಹೋಗಲಾರದೆ, ಹಿಂದೆಯೂ ಹೋಗಲಾಗದೆ, ದಟ್ಟ ಅರಣ್ಯದ ಮಧ್ಯೆ ಕಂಗೆಟ್ಟೆವು. ಬಾಯಾರಿದ ಮುಖಗಳು. ನಿರಾಸಕ್ತಿಯ ನೋಟಗಳು. ಹೆಚ್ಚಾದ ದಣಿವು, ಬಾಯಾರಿಕೆ. ಎದೆಯಲ್ಲಿ ಏನೋ ಕುಟ್ಟುತ್ತಿರುವ ಅನುಭವ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಮೇಲಿನಿಂದ ಕಂಡ ಹೆದ್ದಾರಿಯನ್ನು ನಂಬಿಕೊಂಡು ಅಡ್ಡದಾರಿ ಹಿಡಿದದ್ದಕ್ಕೆ ನಮ್ಮನ್ನು ನಾವೇ ಶಪಿಸಿ ಕೊಂಡೆವು. ನೀರವ ಮೌನ, ದುರ್ಗಮ ಅರಣ್ಯ. ಅಲ್ಲಲ್ಲಿ ದೂರದಲ್ಲಿ ಕಂಡ ಅಗಾಧ ಪರ್ವತ ಶ್ರೇಣಿಗಳನ್ನು ಹೊದಿಸಿದ್ದ ಹಸಿರು. ಆ ವನಸಿರಿಯ ಪ್ರಶಾಂತತೆ, ಪಕ್ಷಿಗಳ ಟುವಿ ಟುವಿ ಕಲರವ, ಹರಿಯುತ್ತಿದ್ದ ಝರಿಗಳ ನೀರಿನ ಜುಳು ಜುಳು ಸದ್ದು ಯಾವುದೂ ಬೇಡವಾಗಿದೆ. ಅವರು ಕಳೆದು ಹೋಗಿದ್ದಾರೆ ಎನ್ನುತ್ತಿದ್ದ ನಾವು ಈಗ ನಾವೇ ಕಳೆದುಹೋದೆವೇ ಎನಿಸಿತು. 

ತಂದೆ ತಾಯಿಯವರು ಎಷ್ಟೆಲ್ಲಾ ಹೇಳಿದ್ದರೂ ಎಂದೂ ದೇವರಿಗೆ ಕೈಮುಗಿದಿರಲಿಲ್ಲ. ಈಗ "ಯಾರಾದರೂ ಮನುಷ್ಯ ಕಂಡರೆ ತೋರಿಸು, ಊರು ಸೇರುವಂತೆ ಮಾಡು" ಎಂದು ಮನಸ್ಸಿನಲ್ಲೇ ಗೊತ್ತಿಲ್ಲದ ದೇವರಲ್ಲಿ ಪ್ರಾರ್ಥನೆ ಶುರು ಮಾಡಿದೆವು. ಸರಿಯಾದ ಶೂ ಹಾಕಿಕೊಂಡು ಬಾರದ ಮಿತ್ರನಿಗೆ ಕಾಲಲ್ಲಿ ಏನೋ ಅಂಟಿಕೊಂಡ ಅನುಭವ. ನೋಡಿದರೆ ನಾಲ್ಕೈದು ಜಿಗಣೆಗಳು ರಕ್ತಹೀರಲು ಪ್ರಾರಂಭಿಸಿವೆ. ಇದ್ದ ಒಬ್ಬ ಅನುಭವಿ ಜೊತೆಗಾರ ತನ್ನ ಚೀಲದಿಂದ ಸುಣ್ಣವನ್ನು ತೆಗೆದು ಕಾಲಿಗೆ ಸವರಿ ಜಿಗಣೆಯಿಂದ ಅವನನ್ನು ಮುಕ್ತ ಮಾಡಿದ. ಇನ್ನು ಈ ತಂಪಾದ ದಾರಿಯಲ್ಲಿ ಬಲು ಹುಷಾರಿಂದ ನೋಡಿಕೊಂಡು ಹೋಗಬೇಕು ಎಂದುಕೊಂಡು ಹೋಗುವಾಗಲೇ ಕಾಲುದಾರಿ ಪಕ್ಕದಲ್ಲಿ ಬೆಳೆದ ಆಳೆತ್ತರದ ಹುಲ್ಲಿನ ಮಧ್ಯೆ ಹರಿದಾಡುತ್ತಾ ಬಂದ ದಪ್ಪವಾದ ಉದ್ದನಾದ ಕಪ್ಪು ಹಾವು. ಅದು ಬಾಯಿಯಲ್ಲಿ ಮೊಲದಂತಹ ಪ್ರಾಣಿಯನ್ನು ಕಚ್ಚಿಕೊಂಡಿದೆ. ಅದನ್ನು ಅನುಸರಿಸಿ ಬಂದ ಉದ್ದದ ಇನ್ನೊಂದು ಹಾವು. ನೋಡಿದೊಡನೆ ನಮ್ಮ ಜಂಘಾಬಲವೇ ಉಡುಗಿತು. ಮುಂದಿನ ಹಾದಿ ಹೇಗಿರಬಹುದು ಎಂದು ಯೋಚಿಸುವಾಗ ಸುಬ್ರಹ್ಮಣ್ಯ ಎಂದರೆ ಹಾವು ಎಂದರ್ಥ. ಇಲ್ಲಿ ಅತಿ ಹೆಚ್ಚು ಹಾವಿರುವುದರಿಂದಲೇ ಇದಕ್ಕೆ ಆ ಹೆಸರು, ಎಲ್ಲಿಯಾದರೂ ಹಾವಿಗೆ ತೊಂದರೆ ಮಾಡಿದ್ದರೆ ಬರುವ ಶಾಪಕ್ಕೆ ಇಲ್ಲಿ ಪರಿಹಾರ ಮಾಡುತ್ತಾರೆ ಎಂಬ ಮಿತ್ರನೊಬ್ಬನ ವಿವರಣೆ. ಈ ಕ್ಷೇತ್ರ ಪರಿಚಯ, ಸ್ಥಳ ಪುರಾಣ, ಕಥೆಗಳು, ಇಲ್ಲಿನ ತಿಂಡಿತಿನಿಸು, ಸಂಸ್ಕೃತಿಗಳು ನಮಗೆ ಜೀವನದಲ್ಲಿ ಉತ್ಸಾಹವಿದ್ದಾಗ ಮಾತ್ರ ಆಸಕ್ತಿಕರ ಅಲ್ಲವೇ. ಈಗ ಯಾವುದೂ ಬೇಡವಾಗಿದೆ.  

ಸಮಯ ಸಂಜೆ ನಾಲ್ಕು ಗಂಟೆ. ಈ ಕಾಡಿನಲ್ಲಿ ರಾತ್ರಿಯಾದರೆ ಉಳಿಯುವುದೆಲ್ಲಿ? ಮಲಗುವುದೆಲ್ಲಿ? ನಾಳೆಯಾದರೂ ಊರು ಸೇರುತ್ತೇವೆಯೋ ಎಂಬ ಯೋಚನೆಯಿಂದಾಗಿ ಸುಪ್ತವಾಗಿ ಅಳುವಂತಾಗುತ್ತಿತ್ತು. ಆದರೂ ಯಾರೂ ಅದನ್ನು ತೋರಿಸರು. ಕಾಲುದಾರಿಯಂತೆ ಕಾಣುವ ಆ ಹಾದಿಯಲ್ಲಿ ನಡೆಯುತ್ತಿರುವಾಗ ಒಂದು ಕಡೆಯಲ್ಲಿ ಕವಲು ದಾರಿ ಕಂಡೆವು. ಎಡಕ್ಕೆ ಮುಂದುವರೆದು ಹೋದೆವು. ಸುಮಾರು ಅರ್ಧ ಗಂಟೆಯ ನಂತರ ನಡೆಯುತ್ತಿದ್ದಾಗ ಪರಿಚಯವಿದ್ದ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ ಎನಿಸಿತು. ಆದರೆ ಅದು ಆ ಮೊದಲು ಕಂಡ ಕವಲಿಗೇ ಬಂದು ಸೇರಿತು. ನಡೆದದ್ದು ಎಲ್ಲವೂ ದಂಡವಾಯಿತು.  ಸುತ್ತಿಸುತ್ತಿ ಅಲ್ಲಿಗೇ ಬಂದೆವು ಎಂದುಕೊಂಡು ಈ ಬಾರಿ ಬಲದ ದಾರಿಯಲ್ಲಿ ಹೊರಟೆವು. ಸುಮಾರು ಅರ್ಧ ಕಿಲೋಮೀಟರ್ ನಡೆದಿರಬಹುದು, ಅದೃಷ್ಟಕ್ಕೆ ಅನತಿ ದೂರದಲ್ಲೇ ಒಂದು ನದಿ ಹರಿಯುತ್ತಿರುವುದನ್ನು ಕಂಡೆವು. ದೂರಕ್ಕೆ ಕಣ್ಣು ಹಾಯಿಸಿದಾಗ ಮೂವರು ಮನುಷ್ಯರು ನಮಗೆ ಕಂಡರು. ಏನೋ ಆಶಾಭಾವನೆ ಮೂಡಿಸಿದರು. ನಾವೆಲ್ಲಾ ಹಲವು ಬಾರಿ ಕೂಗಿ ಅವರ ಗಮನ ಸೆಳೆದೆವು. ಅವರೂ ನಮ್ಮತ್ತ  ಕೈಯಾಡಿಸುತ್ತಾ ಅವರಿದ್ದ ದಡದಲ್ಲೇ ನಮ್ಮತ್ತ ಬಂದಿದ್ದು ನಿಟ್ಟುಸಿರು ಬಿಡುವಂತಾಯಿತು. ಹರಿಯುವ ಈ ನದಿ ಬಲು ಆಳವೂ ಇದೆ, ಅಗಲವೂ ಇದೆ, ಜೊತೆಗೆ ಹರಿಯುವ ನೀರು ರಭಸವಾಗಿದೆ ಎನ್ನುತ್ತಾ ಆ ದಡದಿಂದಲೇ ಮಾರ್ಗದರ್ಶನ ನೀಡಿ ಒಂದು ಕಡೆ ದಾಟಲು ಹೇಳಿದರು. ನಮ್ಮಲ್ಲಿ ಒಬ್ಬರ ಬಳಿಯಿದ್ದ ನೈಲಾನ್ ಹಗ್ಗವನ್ನು ಹತ್ತಿರದ ಮರಕ್ಕೆ ಕಟ್ಟಿ ಇನ್ನೊಂದು ತುದಿಯಲ್ಲಿ ಕಲ್ಲು ಕಟ್ಟಿ ಅವರತ್ತ ಬಿಸಾಡಿದೆವು. ಹಲವು ಯತ್ನಗಳ ನಂತರ ಅವರು ಅದನ್ನು ಆ ಕಡೆ ಹಿಡಿದುಕೊಂಡರು. ಹಗ್ಗದಲ್ಲಿ ಮೊದಲೇ ಅಲ್ಲಲ್ಲಿ  ಗಂಟು ಹಾಕಿದ್ದರಿಂದ ಭದ್ರವಾಗಿ ಹಿಡಿದು ಎದೆಯವರೆಗೂ ಇದ್ದ ನೀರನ್ನು ಸರತಿಯಲ್ಲಿ ದಾಟಿ ಅತ್ತ ಸೇರಿದೆವು. ನಮಗೊಂದು ಮರುಜನ್ಮ ಬಂದಂತಾಯಿತು. ಅವರು ತಿಳಿದಂತೆ ಕಾಡು ಪ್ರಾಣಿಗಳು, ಹಾವುಗಳು ನಾವು ಬಂದ ದಡದಲ್ಲಿ ಹೆಚ್ಚು ಇರುವುದರಿಂದ ಅಲ್ಲಿಗೆ ಯಾರೂ ಹೋಗುವುದಿಲ್ಲ. ನಾವು ಅಲ್ಲಿಗೆ ಹೇಗೆ ಹೋದೆವು ಎಂದು ಕೇಳಿದರು. ನಾವು ಏನು ಹೇಳುವುದು? ಅಂತೂ ಅವರಿಗೆ ನಮ್ಮ ಸಾಹಸದ ಪ್ರಯಾಣವನ್ನು ಹೇಳುವಾಗ ನಮ್ಮ ಬಗ್ಗೆ ನಮಗೇ ಅಯ್ಯೋ ಎನಿಸಿತ್ತು. ಅವರ ಸಲಹೆಯಂತೆ ಅವರ ಹಳ್ಳಿಯಲ್ಲಿ ಆ ರಾತ್ರಿ ಉಳಿದು ಮರುದಿನ ಬೆಳಿಗ್ಗೆ ಗುಂಡ್ಯ ಎಂಬ ಊರು ಸೇರಿದೆವು. 

ಅಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ಮೂಲಕ ಹೋದೆವು. ಅಲ್ಲಿಯ ದೇವಾಲಯದ ಲಾಡ್ಜ್ ನಲ್ಲಿ ವಿಶ್ರಾಂತಿ ಪಡೆದೆವು. ಮಧ್ಯಾಹ್ನ ಹನ್ನೆರಡು ಗಂಟೆಗೆ ದೇವಾಲಯದಲ್ಲಿ ಮಹಾ ಮಂಗಳಾರತಿ ಇರುವುದರಿಂದ ಅಲ್ಲಿಗೆ ಹೋಗಿ ದೇವರಿಗೆ ಹರಕೆಯಂತೆ ನಮಸ್ಕಾರ ಮಾಡಿ ಬರೋಣ. ಅಲ್ಲಿಯೇ ಊಟ ಮಾಡಿ ಬರಬಹುದು ಎಂದು ಮಿತ್ರರೊಬ್ಬರ ಸಲಹೆ ಸರಿಯೆನಿಸಿತು. ಎಲ್ಲರೂ ದೇವರಿಗೆ ಮನಸಾರೆ ಕೈಮುಗಿದು ನಂತರ ಊಟವನ್ನು ಪೂರೈಸಿದೆವು. ಕೈ ತೊಳೆಯುವಾಗ ಬೆನ್ನಿಗೆ ಹಠಾತ್ತಾಗಿ ಬಿದ್ದ ಗುದ್ದು. ತಿರುಗಿ ನೋಡಿದರೆ ನಮ್ಮ ಕಾಣೆಯಾದ ಮಿತ್ರರು. ನಮಗೇ ಅರಿವಿಲ್ಲದೆ ಬಂದ ಕಣ್ಣೀರ ಧಾರೆ, ಸಂತೋಷವೋ ದುಃಖವೋ ಹೇಳಲಾರೆ. ತಬ್ಬಿಕೊಂಡು ಖುಷಿಯಿಂದ ಲಾಡ್ಜ್ ಗೆ ಬಂದೆವು. ಅವರ ಬಗ್ಗೆ ಕೇಳಿದಾಗ, ತಿಳಿದಂತೆ ತಮ್ಮ ಕೆಲಸವಾದ ನಂತರ ನೀರಿಗಾಗಿ ಇಳಿದ ಅವರಿಗೆ ಪುನಃ ಮೇಲಕ್ಕೆ ಹತ್ತಲಾಗಲಿಲ್ಲ. ಆದ್ದರಿಂದ ರೈಲು ಹಳಿಗಳ ಪಕ್ಕದಲ್ಲಿ ಕೆಲವು ದೂರ ನಡೆದು ಹೇಗೋ ಮೇಲೆ ಹತ್ತಿ ಬಂದಿದ್ದಾರೆ. ನಂತರದ ಅರ್ಧಗಂಟೆ ಪ್ರಯಾಣದಲ್ಲಿ ನಾವು ಸಿಕ್ಕಿಲ್ಲ. ನಾವು ಬಿಟ್ಟು ಹೋದೆವು ಎಂದು ಭಾವಿಸಿದ್ದಾರೆ. ನಂತರ ಸುಬ್ರಹ್ಮಣ್ಯದತ್ತ ಹೋಗುತ್ತಿದ್ದ ರೈಲಿನ ಮಾರ್ಗ ತಪಾಸಣೆ ಇಂಜಿನ್ ಗಾಡಿಯನ್ನು ನೋಡಿದರು. ಅದರಲ್ಲಿದ್ದ ಅಧಿಕಾರಿಯಲ್ಲಿ ಕೇಳಿಕೊಂಡು ಆ ಗಾಡಿಯಲ್ಲಿ ನಿನ್ನೆಯೇ ಸುಬ್ರಹ್ಮಣ್ಯ ಸೇರಿದ್ದಾರೆ. ಈಗ ಇಲ್ಲಿ ನಮ್ಮನ್ನು ಹುಡುಕಿಕೊಂಡು ತಿರುಗಾಡುವಾಗ ನಾವು ಕಂಡಿದ್ದೇವೆ ಎಂದರು. ಹೇಗೋ ಸುಖಾಂತ್ಯವಾಯಿತು ಎಂದುಕೊಂಡೆವು. ನಂತರ ನಮ್ಮ ಪ್ರಯಾಸದ ಚಾರಣವನ್ನು ಸಮಾಧಾನದಿಂದ ಕೇಳಿದರು.   

ನಂತರದ ಮಾತುಕತೆಯಲ್ಲಿ ಅವರ ಒಂದು ಅನುಭವವನ್ನು ಹೇಳಿದರು. ಅವರು ಸುಮಾರು ಮೂವತ್ತೈದು ವರ್ಷಗಳ ಹಿಂದೆ ಹಲವು ಮಿತ್ರರೊಡನೆ ಮೋಟಾರ್ ಸೈಕಲ್ ನಲ್ಲಿ ಹೊನ್ನಾವರಕ್ಕೆ ಹೋಗಿದ್ದರಂತೆ. ಆಗ ಅವರ ಗೆಳೆಯನ ಮನೆಯಲ್ಲಿ ರಾತ್ರಿ ಕಳೆದರು. ಬೆಳಿಗ್ಗೆಯೇ ಸಮುದ್ರ ತೀರದಲ್ಲಿ ನಡೆದು ಹೋಗುತ್ತಿದ್ದರು. ಆಕರ್ಷಣೀಯ ಎಂದು ತೀರದ ಒಂದು ಕಡೆ ನೀರಿನಲ್ಲಿ ಇಳಿದು ಸಮುದ್ರವನ್ನು ನೋಡುತ್ತಿದ್ದಾರೆ. ಇಬ್ಬರ ಹೊರತು ಉಳಿದ ಏಳು ಜನ ನೀರಿನಲ್ಲಿರುವಾಗ ಹಠಾತ್ತಾಗಿ ಬಂದ ಎತ್ತರದ ತೆರೆಯೊಂದು ದಡಕ್ಕೆ ಅಪ್ಪಳಿಸಿ ಅವರ ಕಾಲಿನ ಅಡಿಯಲ್ಲಿನ ಮರಳನ್ನು ಇಲ್ಲವಾಗಿಸಿದೆ. ಬಂದ ಅಲೆ ವಾಪಸು ಹೋಗುವಾಗ ನೀರಿನಲ್ಲಿದ್ದವರಲ್ಲಿ ಇಬ್ಬರನ್ನು ಎಳೆದುಕೊಂಡು ಹೋಯಿತು. ಏನಾಯಿತು ಎಂದು ನೋಡುವುದರೊಳಗಾಗಿ ಇಬ್ಬರು ಮಿತ್ರರು ನೀರು ಪಾಲಾದರು. ನೀರಿನಿಂದ ಹೊರಬಂದ ಉಳಿದ ಮಿತ್ರರು ಕಳೆದು ಕೊಂಡವರಿಗಾಗಿ ಪರಿತಪಿಸಿದ ಸ್ಥಿತಿ ಯಾರಿಗೂ ಬೇಡ. ನಂತರ ಪೋಲಿಸರಿಗೆ ವರದಿ, ಮರಣೋತ್ತರ ಪರೀಕ್ಷೆ, ನಗರಕ್ಕೆ ದೇಹವನ್ನು ತಂದಿದ್ದು, ಅವರ ಪೋಷಕರಿಗೆ ಅಂದೇನು, ಇಂದಿಗೂ ಕೊಡಲಾಗದ ಉತ್ತರ ಮುಂತಾದ ಅನುಭವಗಳನ್ನು ಹೇಳಿದರು. ಅಲ್ಲದೇ ಇಂದಿಗೂ ನೀರಿನ ಸಹವಾಸ ಬೇಡವಾಗಿದೆ ಎಂದರು. 

ಅಲ್ಲಿಯ ಪೋಲಿಸರು ತಿಳಿಸಿದಂತೆ ಅದು ಆಪ್ಸರಾಕೊಂಡ ಎಂಬ ಪ್ರದೇಶ. ನೋಡುಗರನ್ನು ತನ್ನತ್ತ ಸೆಳೆಯುವ ಆ ಜಾಗಕ್ಕೆ ಅದು ಅನ್ವರ್ಥನಾಮ. ಪ್ರತಿ ದಿನವೂ ನಿಗದಿತ ಸಮಯದಲ್ಲಿ ಈ ರೀತಿಯ ತೆರೆಗಳು ಅಲ್ಲಿ ‌ಬರುವುದು ಸಾಮಾನ್ಯ. ನಿಮಗೆ ಯಾರೂ ಇದನ್ನು ‌ಹೇಳಲಿಲ್ಲವೇ. ಯಾವುದೇ ವಿಷಯ ಗೊತ್ತಿಲ್ಲದಿದ್ದಾಗ ಬೇರೆಯವರಿಂದ ಕೇಳಿ ತಿಳಿಯಬೇಕೆಂಬ ಕನಿಷ್ಠ ಜ್ಞಾನ ಬೇಡವೇ ಎಂಬ ಪೋಲಿಸರ ಆಕ್ಷೇಪಣಾ ಪ್ರಶ್ನೆ. ಹಿರೇತನದಿಂದ ನೀರಿಗೆ ಇಳಿದ ನಮ್ಮಲ್ಲಿ ಸಮಾಧಾನದ ಉತ್ತರವಿಲ್ಲ. ಅಂತೂ ಇದು ನಮ್ಮ ಜೀವನದಲ್ಲಿ ಮರೆಯಲಾಗದ ಅತಿ ಕೆಟ್ಟ ಅನುಭವವಾಗಿದೆ ಎಂದರು. ಸಮಸ್ಯೆ ಪರಿಹಾರವಾಗಿದ್ದು ಮನಸ್ಸಿಗೆ ನೆಮ್ಮದಿ ತಂದಿತ್ತು. ಆ ಮಧ್ಯಾಹ್ನವೇ ಹೊರಟು ನಗರಕ್ಕೆ ಬಂದು ಮನೆ ಸೇರಿದೆವು. ಪ್ರಕೃತಿ ಸೌಂದರ್ಯವೇನೋ ನಿತ್ಯ ರಮಣೀಯ. ಆ ಪ್ರಯಾಸದ ಪ್ರವಾಸ ರುದ್ರ ರಮಣೀಯ ಎಂದು ಮಾತು ಪೂರೈಸಿದರು.

ಈ ವಿಷಯವನ್ನು ತಿಳಿದಾಗ ಪ್ರಯಾಣದಲ್ಲಾಗಲಿ ಜೀವನದಲ್ಲಾಗಲಿ ಗುರಿ ಎಷ್ಟು ಮುಖ್ಯವೋ ಅದನ್ನು ತಲುಪಿಸಲು ಗುರುವೂ ಮುಖ್ಯ. ಹೀಗೇ ಆಗಬೇಕು ಎನ್ನುವುದು ಗುರಿ. ಅದನ್ನು ಸರಿಯಾದ ಮಾರ್ಗದಲ್ಲಿ ಮುಟ್ಟಿಸಲು ಚಿಕ್ಕಂದಿನಲ್ಲಿ ತಂದೆತಾಯಿಯರು ಇರುತ್ತಾರೆ. ನಂತರ ಶಾಲಾ ಉಪಾಧ್ಯಾಯರು, ಮಾರ್ಗದರ್ಶಕರು ಅಥವಾ ನಾವೇ ಅಂದು ಕೊಂಡಂತೆ ಒಬ್ಬರು ಇರುತ್ತಾರೆ. ಹೇಗೋ ಆಗುತ್ತದೆ ಎಂದರೆ ಅದು ಗುರಿ ಕಾಣದೆ ಮೇಲಿನಂತೆ ಎಲ್ಲೆಲ್ಲೋ ಅಲೆಸುತ್ತದೆ. ಹಾಗೆ ಗುರು ಇಲ್ಲದ ಗುರಿಯೂ ಇಲ್ಲದ ಪಯಣ ಈ ಹೆಜ್ಜೆ ತಪ್ಪಿದ ಚಾರಣದಂತೆ ಅಲ್ಲವೇ!

Comments

  1. ನಾನು ತರಂಗ ಪತ್ರಿಕೆಯಲ್ಲಿ ಎಡಕುಮರಿ ಎಂಬ ಧಾರಾವಾಹಿ ಓದಿದ್ದೆ , ಅದರಲ್ಲಿ ಪಶ್ಚಿಮಘಟ್ಟದ ವಣ೯ನೆ, ಪ್ರಕೃತಿಯ ಸೌಂದರ್ಯ, ಭೀಕರತೆ, ಅನೇಕ ಪ್ರಾಣಿ ಪಕ್ಷಿ ಸಂಕುಲದ ಬಗ್ಗೆ ಲೇಖಕರು ಬಹಳ ಚೆನ್ನಾಗಿ ತಿಳಿಸಿದ್ದರು, ಈ ಬರಹವನ್ನು ಓದಿದಾಗ ನಾನೇ ಅಲ್ಲಿದ್ದೇನೋ ಎಂದು ಎನಿಸಿತು, ತುಂಬಾ ಚೆನ್ನಾಗಿದೆ.

    ReplyDelete
  2. ನಾನು ಸಹ 10 -12 ಬಾರಿಯಾದರೂ ಮಂಗಳೂರು ನಗರಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿದ್ದೇನೆ ಪ್ರತಿಬಾರಿ ಪ್ರಯಾಣಿಸುವಾಗ ನಾವು ಏಕೆ ಚಾರಣ ಮಾಡಬಾರದು ಅನ್ನಿಸಿದ್ದುಂಟು. ಟ್ರೈನಲ್ಲಿ ಹೋದಾಗ ನಮಗೆ 360 ಡಿಗ್ರೀಸ್ ನೋಟ ಸಿಗುತ್ತಿರಲಿಲ್ಲ ಅದಕ್ಕೆ ನಾವು ಸಹ 1988-89 ಚಾರಣ ವನ್ನು ಯಶಸ್ವಿಯಾಗಿ ಪೂರ್ಣ ಮಾಡಿದೆವು.
    ಎಡಕುಮೇರಿ,ಶಿರಿವಾಗಿಲು ,ಹರೆಬೆಟ್ಟ ಕೆಲವು ರೈಲ್ವೆ ಸ್ಟೇಷನ್ಸ್ ನಡೆದು ಹೋಗುವಾಗ ಈ ತರಹ ಜಾಗ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ ಎನ್ನಿಸಿತ್ತು.
    ನಮ್ಮ ಊರು ಸಹ ಸುಬ್ರಮಣ್ಯ ದಿಂದ ಹತ್ತಿರವಾದ ಕಬಕ ಪುತ್ತೂರು.
    ರೈಲ್ವೆ ಹಳಿಯ ಮೇಲೆ ನಡೆದು ಹೋಗುವಾಗ ಸಿಗುವಂತಹ ಜಲಪಾತಗಳು,ಝರಿಗಳು ,ಆಳ ವಾದ ಪ್ರಪಾತಗಳು ನೋಡಿ ಎದೆ ಜಲ್ ಅನ್ನಿಸುತ್ತಿತ್ತು.
    ಲೇಖನ ಚೆನ್ನಾಗಿದೆ
    ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಆಯಿತು.
    ಕೆ ಬಿ ಆರ್ ನಿಮಗೆ ಧನ್ಯವಾದಗಳು.

    ReplyDelete
  3. ಬಹು ದೊಡ್ಡ ಸಾಹಸವನ್ನೇ ಮಾಡಿದ್ದೀರಿ.
    ನೀವೆಲ್ಲರೂ ಸುಬ್ರಹ್ಮಣ್ಯ ಸೇರಿದಾಗ ಬಹುಷಃ ಪುನರ್ಜನ್ಮ ವಾದಂತೆ ಭಾಸವಾಗಿರಬೇಕು.
    ಕಳೆದು ಹೋದ ಇಬ್ಬರು ಸ್ನೇಹಿತರು ಸಿಕ್ಕಾಗ, ಖಂಡಿತಾ ನೀವೆಲ್ಲರೂ ನಿಟ್ಟುಸಿರು ಬಿಟ್ಟಿರಬೇಕು.
    ಇಂತಹ ಸಾಹಸಗಳನ್ನು ನಾವು ಅನುಭವಿಸಲಿಲ್ಲವೇ ಎಂದೆನಿಸುತ್ತದೆ.
    ಈಗ ಅದು ನಮಗಾರಿಗೂ ಸಾಧ್ಯವಿಲ್ಲ ಬಿಡಿ.
    ಹಳೆಯ ನೆನಪುಗಳೇ ಮಧುರ.
    ಎಲ್ಲರಿಗೂ ಶುಭವಾಗಲಿ.
    ಗೋಪೀನಾಧ್ ಎಂ.ಎನ್.

    ReplyDelete
  4. Very good narration of the experiences experienced by your friends. Very thrilling incidents.
    Hats off to you for your language skills .

    ReplyDelete
  5. ಚಾರಣ ಕಷ್ಟದ ತೋರಣ

    ಚಾರಣ ಹದಿ ಹರೆಯದವರಿಗೆ ಹುಮ್ಮಸ್ಸಿನ ಸಾಹಸವೇ ಸರಿ, ಆದರೆ ಅದಕ್ಕೆ ಸರಿಯಾದ ತಯಾರಿ ಹಾಗೂ ಸ್ಥಳ
    ಪರಿಚಯ ಇಲ್ಲದಿದ್ದರೆ ಏನಾಗಬಹುದು ಎಂಬುದಕ್ಕೆ
    ಈ ಚಾರಣದ ಅನುಭವವೇ ಸಾಕ್ಷಿ. ಚಾರಣದ ವಿವರಣೆ
    ಅವರು ಪಟ್ಟ ಪಾಡು ಚೆನ್ನಾಗಿ ಮೂಡಿ ಬಂದಿದೆ ಲೇಖನದಲ್ಲಿ. ಮೊದಲನೆಯ ಚಾರಣದಲ್ಲಿ ಕಳೆದುಹೋದ ಇಬ್ಬರು ಮತ್ತೆ ಸಿಕ್ಕಿದರೆ, ಎರಡನೆಯ
    ಅವರ ಬೈಕ್ ಸಾಹಸದಲ್ಲಿ ಮತ್ತಿಬ್ಬರು ಸ್ನೇಹಿತರನ್ನು
    ಕಳೆದುಕೊಂಡದ್ದು ಮತ್ತು ನಂತರದ ಘಟನೆಗಳು
    ನನ್ನ ನೆನಪಿನಲ್ಲಿ ಇನ್ನೂ ಮಾಸಿಲ್ಲ.
    ಹೇಗೂ ಕಾಡು ಮೇಡುಗಳಲ್ಲಿ ಸಾಹಸ ಮಾಡಲು ಹೋಗಿ
    ತಾವೇ ಕಳೆದು ಹೋಗಿ ಪೊಲೀಸರು ಮತ್ತು forest guard ಗಳು ಹುಡುಕಿ ತಂದದ್ದನ್ನು ಕೇಳಿದ್ದೇವೆ.

    ಈ ಲೇಖನ ದಲ್ಲಿ ಸಕ ಲೇಶಪುರದಿಂದ ಸುಬ್ರಮಣ್ಯದ
    ವರೆಗೆ ಇರುವ ಪ್ರಕೃತಿ ಸಿರಿಯನ್ನು ಚೆನ್ನಾಗಿ ವಿವರಿಸಿದ್ದೀರಿ. ಇಂಥ ಒಳ್ಳೆಯ ಲೇಖನಕ್ಕೆ ಧನ್ಯವಾದಗಳು

    ReplyDelete
  6. ರಮೇಶ್ ನಾಡಿಗ್
    ಇದೊಂದು ರೋಚಕ ಕಥಾನಕ ಅದನ್ನು ಯಥಾವತ್ತಾಗಿ ವಿವರಿಸುವುದೇ ಒಂದು ಅದ್ಭುತ ಕಲೆ. ಬಹಳ ಚನ್ನಾಗಿ ಮೂಡಿ ಬಂದಿದೆ. ಧನ್ಯವಾದಗಳು..
    ರಮೇಶ್ ನಾಡಿಗ್ ಹೊಸಬಾಳೆ.

    ReplyDelete
  7. ರುದ್ರ ರಮಣೀಯ ಅನುಭವವನ್ನು ವರ್ಣಿಸಿದ ಶೈಲಿ ಅಮೋಘವಾಗಿದೆ. ನಾವೇ ಅನುಭವಿಸಿದಂತಾಯ್ತು. ನಿನ್ನ ಲೇಖನಿ ಅಂತೆಯೇ ಮುಂದುವರಿಯಲಿ. ನಿನ್ನಣ್ಣ ಹಿರಿಯಣ್ಣ.

    ReplyDelete
  8. ಕುತೂಹಲಕಾರಿಯಾದ ಲೇಖನ. ಚಾರಣ ಹೋದವರ ಅನುಭವ ಈಗ ನಗೆ ತರುತ್ತಾದರೂ, ಆಗಿನ ಅವರ ದುಗುಡ, ಎಷ್ಟು ಹೋತ್ತಾದರು ಸಿಗದ ಟಾರ್‌ ರಸ್ತೆ, ಮನಸ್ಸಿನಲ್ಲಿ ಬರುವ ವಿಚಾರಗಳು ತುಂಬಾ ಸೊಗಸಾಗಿ ವರ್ಣಿತವಾಗಿವೆ. ದೇವಸ್ಥಾನದಲ್ಲಿ ಸ್ನೇಹಿತರನ್ನು ಕಂಡು ಹೋದ ಜೀವ ಬಂದಂತಾಗಿರಬಹುದು.
    ನಾನೂ ಕೂಡ ಗುಂಡ್ಯದಿಂದ ಎಡುಕುಮರಿಯವರೆಗೆ ಸ್ನೇಹಿತರ ಜೊತೆಯಲ್ಲಿ ಚಾರಣಕ್ಕೆ ಹೋಗಿದ್ದೇನೆ. ಸುರಂಗಗಳ ಹಾಗೂ ಎತ್ತರದ ಸೇತುವೆಗಳ ಮೂಲಕ ನಡೆಯುವ ಅನುಭವ ಅದ್ಭುತ. ಲೇಖಕರ ವರ್ಣನೆ ಸ್ವಲ್ಪವೂ ಉತ್ಪ್ರೆಕ್ಷೆಯಲ್ಲ. ಲೇಖನ ಓದಿ ಮತ್ತೋಮ್ಮೆ ಚಾರಣ ಮಾಡಿದಂತಾಯಿತು.
    ಪಶ್ಚಿಮ ಘಟ್ಟದ ಪ್ರಕೃತಿಯ ಸುಂದರ ವರ್ಣನೆ, ಮತ್ತು ಮಧ್ಯದಲ್ಲಿ ನಿಲ್ಲಿಸದೆ ಕಡೆ ತನಕ ಓದಿಸಿಕೊಂಡು ಹೊಗುವ ಎಂದಿನ ಕೂತೂಹಲಕಾರಿಯಾದ ಬರವಣಿವೆ, ಇವು ಚಾರಣದಷ್ಟೆ ರೋಚಕವಾಗಿದೆ. ಧನ್ಯವಾದಗಳು.
    ನಾಗೇಶ ರಾವ್

    ReplyDelete
  9. Idu nanu odida charana bagegina lekanagalalli atyuttama. Nanu Sakleshapurada sutta iruva prakriti soundaryada bagge hagu aa dariyalli siguva charanakke bahu yogya pradeshagala bagge Saha keliddene. Adare swabavataha astu dairyavanta alladarinda endu antaha sahadakke kai hakilla. Adare ee lekana odabekarenane swataha charanada gumpinalli obbanagiddeno emba bavane Bantu. Avaru nodida ramana manohara drushyagalu nanna kanna munde bandavu. Snehitaru tappisi kondiddu hagu avarella kavalu dariyalli kaledu hogiddu matte hego kukke seriddu matte mitrarannu koodi kondiddu nanna jeevanadalle nadeyitona emba bayankara anubava kottitu. Nanu bhel serida kela samayadaralli Namma supervisor mitraru kelavaru bike alli beach ondaralli siluki ibbaru mitrarannu kaledu kondiddu nenapige Bantu. Adakke neevu tilisidante Elladakku guru marga Darshana bahala mukya. Namagantu Namma gurugalu, Rayara namage gati.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...