Skip to main content

ನಾಡಹಬ್ಬ ನವರಾತ್ರಿ

ನಾವು ಆಚರಿಸುವ ಹಬ್ಬಗಳೆಲ್ಲವೂ ಪುರಾಣ ಕಥೆಗಳ ಆಧಾರಿತವಾಗಿದ್ದು ಅಸುರಿ ಶಕ್ತಿಯನ್ನು ಸಂಹರಿಸಿ ಸಾತ್ವಿಕತೆಯನ್ನು ಮೆರೆದ ದಿನದ ಆಚರಣೆಯಾಗಿರುತ್ತದೆ. ಈ ಹಬ್ಬಗಳ ಆಚರಣೆಯಿಂದ ಬಂಧುಮಿತ್ರರಲ್ಲಿ ಸಂಬಂಧಗಳನ್ನು ಉತ್ತಮವಾಗಿಟ್ಟುಕೊಳ್ಳಲು ಸಹಾಯಕವಾಗಿದೆ. ಇಂತಹ ಹಬ್ಬಗಳಲ್ಲಿ ನವರಾತ್ರಿ ಅಥವಾ ದಸರಾ ಸಹ ಒಂದು ಮುಖ್ಯ ಹಬ್ಬ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ ಎಂಬ ಅರ್ಥದಲ್ಲಿ ದಸರಾ ಪದ ಉತ್ಪತ್ತಿಯಾಗಿ ದಶಹರಾ ಎಂದು ಕರೆಯಲ್ಪಡುವ ದಸರಾ ಸಹ ಹತ್ತು ದಿನಗಳ ಹೋರಾಟದ ನಂತರ ದೊರೆತ ವಿಜಯದ ಉತ್ಸವ. ಈ ಹಬ್ಬವು ಮೊದಲು ಕೃಷಿ ಪ್ರಧಾನವಾಗಿ ಪ್ರಾರಂಭವಾದರೂ ನಂತರದಲ್ಲಿ ಧಾರ್ಮಿಕವಾಗಿ ಮತ್ತು ರಾಜಕೀಯ ಸ್ವರೂಪವೂ ತಳೆದಿದೆ. ಈ ಹಬ್ಬವನ್ನು ನಮ್ಮ ರಾಜ್ಯದಲ್ಲಿ ನಾಡಹಬ್ಬ ಎಂದು ಆಚರಿಸಲಾಗುತ್ತದೆ. ಈ ದಿನದ ವಿಶೇಷ ಹಾಗೂ ಇದರ ಅಂಗವಾಗಿ ನಡೆಯುವ ಬೊಂಬೆ ಹಬ್ಬದ ಪರಿಚಯವೇ ಈ ಲೇಖನದ ಉದ್ದೇಶ.

ಬಹಳ ಕಾಲದ ಹಿಂದೆ ವಿದ್ಯುನ್ಮಾಲಿ ಮತ್ತು ಮಾಲಿನಿ ಎಂಬ ರಾಕ್ಷಸ ದಂಪತಿಗಳಿದ್ದರು. ಅವರಿಗೆ ಬಹುಕಾಲ ಮಕ್ಕಳಾಗಲಿಲ್ಲ. ಪುತ್ರಪ್ರಾಪ್ತಿಯಾಗಲೆಂಬ ಅಪೇಕ್ಷೆಯಿಂದ ಮಾಲಿನಿಯು ಕಾಡಿಗೆ ತೆರಳಿ ಮಹಿಷಿ ರೂಪದಲ್ಲಿ ಅಂದರೆ ಎಮ್ಮೆಯ ರೂಪದಲ್ಲಿ ತಪಸ್ಸಿಗೆ ತೊಡಗುತ್ತಾಳೆ. ಆಕೆಯ ಕಠೋರ ತಪಸ್ಸಿನಿಂದ ಹೊಮ್ಮಿದ ಶಾಖದಿಂದ ಋಷಿಯೊಬ್ಬನ ತಪಸ್ಸಿಗೆ ಭಂಗ ತರುತ್ತದೆ. ಇದರಿಂದ ಕೋಪಾವಿಷ್ಠನಾದ ಆ ಋಷಿಯು ತನ್ನ ಜ್ಞಾನದೃಷ್ಟಿಯಿಂದ ಮಾಲಿನಿ ತಪಸ್ಸನ್ನಾಚರಿಸುವುದನ್ನು ತಿಳಿದುಕೊಳ್ಳುತ್ತಾನೆ. "ಮಹಿಷಿಯ ರೂಪದಲ್ಲಿ ತಪಸ್ಸನ್ನು ಆಚರಿಸುತ್ತಿರುವುದರಿಂದ ನಿನ್ನ ಹೊಟ್ಟೆಯಲ್ಲಿ ಮಹಿಷ ಅಂದರೆ ಕೋಣವೇ ಜನ್ಮತಾಳಲಿ" ಎಂದು ಶಾಪ ಕೊಡುತ್ತಾನೆ. ಇದರ ಫಲವಾಗಿ ಮಹಿಷಾಸುರನ ಜನನವಾಗುತ್ತದೆ. ಒಮ್ಮೆ ವಿದ್ಯುನ್ಮಾಲಿ, ದೇವೇಂದ್ರನ ಮೇಲೆ ಯುದ್ಧವನ್ನು ಸಾರುತ್ತಾನೆ. ಯುದ್ಧದಲ್ಲಿ ವಿದ್ಯುನ್ಮಾಲಿಯ ಸಾವನ್ನಪ್ಪುತ್ತಾನೆ. ಇದರಿಂದ ಕೋಪಗೊಂಡ ಬಾಲಕ ಮಹಿಷಾಸುರನು ದೇವೇಂದ್ರನ ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸುತ್ತಾನೆ. ತಾಯಿ ಮಾಲಿನಿಯ ಸಲಹೆಯಂತೆ ತಪಸ್ಸನ್ನು ಆಚರಿಸಿ ಸಿಂಹವನ್ನು ಪಳಗಿಸಬಲ್ಲ ಹೆಣ್ಣಿನ ಹೊರತಾಗಿ ಬೇರಾರಿಂದಲೂ ಸಾವು ಬಾರದಂತಹ ವರವನ್ನು ಪಡೆಯುತ್ತಾನೆ. ವರಬಲದಿಂದ ಕೊಬ್ಬಿದ ಮಹಿಷಾಸುರನು ದೇವಾದಿ ದೇವತೆಗಳನ್ನು ಸೋಲಿಸುತ್ತಾನೆ. ಇಂದ್ರ, ಅಗ್ನಿ, ವಾಯು ಮೊದಲಾದ ಎಲ್ಲ ದೇವತೆಗಳನ್ನು ತನ್ನ ಸೇವಕರನ್ನಾಗಿ ಮಾಡಿಕೊಂಡು ಅಟ್ಟಹಾಸದಿಂದ ಅವರಿಗೆ ಕಿರುಕುಳ ಕೊಡುತ್ತಾ ರಾಜ್ಯವನ್ನು ಆಳುತ್ತಿದ್ದ. ಇದನ್ನು ತಡೆಯಲಾರದೆ ದೇವತೆಗಳು ಪಾರ್ವತಿಯಲ್ಲಿ ಹೋಗಿ ಮೊರೆಯಿಟ್ಟು ತಮ್ಮನ್ನು ಕಾಪಾಡುವಂತೆ ಕೇಳಿಕೊಂಡರು. ಇದಕ್ಕೆ ಪಾರ್ವತಿಯು ಮಹಿಷಾ ಸುರನ ಸಂಹಾರಕ್ಕಾಗಿ ದುರ್ಗೆಯಾಗಲು ಸಮ್ಮತಿಸಿದಳು. ಈ ವೇಳೆಯಲ್ಲಿ ಸಕಲ ದೇವತೆಗಳೂ ತಮ್ಮ ತಮ್ಮ ಶಕ್ತಿಯನ್ನು ಆಕೆಗೆ ಧಾರೆಯೆರೆದರು. ಮಹಾಶಕ್ತಿವಂತಳಾದ ತಾಯಿ ಪಾರ್ವತಿಯು ದುರ್ಗೆಯಾಗಿ ಮಹಿಷನ ಮೇಲೆ ಯುದ್ಧಕ್ಕೆ ಬಂದಳು. ಆ ವೇಳೆಯಲ್ಲಿ ಮಹಿಷನು ದುರ್ಗೆಯ ಸೌಂದರ್ಯಕ್ಕೆ ಮನಸೋತು ಅವಳನ್ನು ವಿವಾಹವಾಗಲು ಕೇಳಿದನು. ಅವನ ಮಾತಿಗೆ ನಕ್ಕು, ಉಪೇಕ್ಷಿಸಿ ಅವನೊಂದಿಗೆ ಸತತ ಒಂಬತ್ತು ದಿನಗಳ ಕಾಲ ಯುದ್ಧ ಮಾಡಿ ಹತ್ತನೇ ದಿನ ಅವನನ್ನು ಸಂಹಾರ ಮಾಡಿ ಲೋಕಕ್ಕೆ ಮಹಿಷನಿಂದ ಮುಕ್ತಿ ನೀಡಿದ ಈ ಶುಭ ದಿನವೇ ವಿಜಯದಶಮಿ. ಈ ಅವಧಿ ದಶಹರಾ ಅಥವಾ ದಸರಾ ಎಂದಾಯಿತು. ಇದು ಭಾರತದಲ್ಲಿಯೇ ಪ್ರಖ್ಯಾತ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ದಶರಾ ಎಂದೂ ದಕ್ಷಿಣ ಭಾರತದಲ್ಲಿ ನವರಾತ್ರಿ ಎಂದೂ ಆಚರಿಸಲಾಗುತ್ತದೆ. ಇದನ್ನು ದಸರಾ ಎಂದೂ ಕರೆಯುವ ವಾಡಿಕೆ ಇದೆ.

ಕರ್ನಾಟಕದ ದೃಷ್ಟಿಯಲ್ಲಿ ಹೇಳುವುದಾದರೆ ನವರಾತ್ರಿ ಹಬ್ಬ ಒಂದು ವಿಜಯದ ಸಂಕೇತ. ಒಂಭತ್ತು ದಿನಗಳ ಕಾಲ ಮಹಿಷಾಸುರನೊಡನೆ ಯುದ್ಧ ಮಾಡಿ ಹತ್ತನೆಯ ದಿನ ಅವನನ್ನು ಸಂಹಾರ ಮಾಡಿ, ಜನರಿಗೆ ನೆಮ್ಮದಿ ಕೊಟ್ಟ ತಾಯಿ ದುರ್ಗೆಯನ್ನು ಪೂಜಿಸುವ ಶುಭ ಸಂದರ್ಭವೇ ಈ ನವರಾತ್ರಿ, ಅದೂ ಅಲ್ಲದೆ ಮಹಿಷನ ಊರು ಇಂದಿನ "ಮೈಸೂರು". ಆದ್ದರಿಂದ ಬೇರೆ ಯಾವ ಭಾಗಕ್ಕಿಂತಲೂ ಮೈಸೂರಿಗೆ ದಸರಾ ಹಬ್ಬದ ಪ್ರಾಶಸ್ತ್ಯ ಮತ್ತು ವೈಭವ ಹೆಚ್ಚು. ಈ ನವರಾತ್ರಿಯಲ್ಲಿ ದುರ್ಗಾ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾ ಗೌರಿ ಮತ್ತು ಸಿದ್ಧಿಧಾತ್ರಿ ಎಂದು ಈ ಒಂಭತ್ತು ದಿನಗಳಲ್ಲಿ ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಅಲ್ಲದೆ ದೇವೀ ಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಹೆಸರಿನಲ್ಲಿ ಆರಾಧಿಸುತ್ತಾರೆ. ಈ ಅಷ್ಟಸಿದ್ಧಿಗಳಾವುವು ಎಂಬುದನ್ನು ಸೂಕ್ಷ್ಮವಾಗಿ ಹೇಳುವುದಾದರೆ ಕ್ರಮವಾಗಿ ಸಣ್ಣವಾಗುವುದು, ದೊಡ್ಡಗಾಗುವುದು, ಭಾರವಾಗುವುದು, ಹಗುರವಾಗುವುದು, ಬೇಕಾದ್ದನ್ನು ಪಡೆಯುವುದು, ಬೇಕಾದ ರೂಪವನ್ನು ತಾಳುವುದು, ಒಡೆತನವನ್ನು ಗಳಿಸುವುದು, ಎಲ್ಲರನ್ನೂ ಹಾಗೂ ಎಲ್ಲವನ್ನೂ ತನ್ನ ವಶಪಡಿಸಿ ಕೊಳ್ಳುವುದು. ಇವು ಪ್ರತಿಯೊಬ್ಬನ ಅಪೇಕ್ಷೆಯೇ ಆಗಿರುತ್ತದೆ.

ನವರಾತ್ರಿ ಬಂದಿತೆಂದರೆ, ನಾಡಿಗೆ ನಾಡೇ ಸಂಭ್ರಮಿಸುತ್ತದೆ. ಸರಸ್ವತಿ ಪೂಜೆ, ಆಯುಧಪೂಜೆ, ದಸರಾ ಮೆರವಣಿಗೆ ಹೀಗೆ ವಿವಿಧ ಆಚರಣೆಗಳು ರಾಜ್ಯದಲ್ಲಿ ಪ್ರಾರಂಭವಾಗುತ್ತದೆ. ದಸರಾ ಕರ್ನಾಟಕ ರಾಜ್ಯದ ನಾಡಹಬ್ಬ. ಇದು ಆಶ್ವಯುಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುತ್ತದೆ. ಈ ಹಬ್ಬವನ್ನು ಬಹುತೇಕ ಪ್ರತಿಯೊಂದು ಹಳ್ಳಿಯೂ ಸೇರಿದಂತೆ ಇಡೀ ರಾಜ್ಯದಲ್ಲಿ ವಿವಿಧ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಆಯಾ ಊರುಗಳಲ್ಲಿ ಅಥವಾ ನಗರಗಳಲ್ಲಿ ಇರುವ ಶಕ್ತಿ ದೇವತೆಗೆ ನವರಾತ್ರಿಯ ಬೇರೆ ಬೇರೆ ದಿನಗಳಲ್ಲಿ ಬೇರೆ ರೀತಿಯಲ್ಲಿ ಭಕ್ತಿಯಿಂದ ಅಲಂಕಾರ ಮಾಡಿ ದೇವರನ್ನು ಪೂಜಿಸುವ ವೈಖರಿ ಶ್ಲಾಘನೀಯ.

ಮೈಸೂರಿನಲ್ಲಿ ಹಿಂದಿನ ಕಾಲದಲ್ಲಿ ಮಹಾರಾಜರ ಮೆರವಣಿಗೆ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಹೊತ್ತ ಆನೆಯ ಅಂಬಾರಿಯನ್ನು ಅರಮನೆಯಿಂದ ಬನ್ನಿ ಮಂಟಪಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಅಲ್ಲಿ ಪೂಜೆಯಾದ ನಂತರ ವಾಪಸ್ಸಾಗುತ್ತಾರೆ. ಈ ಮೆರವಣಿಗೆಯನ್ನು ನೋಡಲು, ಜನಸ್ತೋಮ ಬೆಳಗ್ಗಿನಿಂದಲೇ ಜಮಾಯಿಸಿರುತ್ತದೆ.  ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು ತಮ್ಮ ಜಿಲ್ಲೆಯ ವೈಶಿಷ್ಟ್ಯವನ್ನು ಫಲಕಗಳು, ಸ್ಥಿರ ಚಿತ್ರಗಳು, ವೇಷ ಭೂಷಣಗಳ ಪ್ರದರ್ಶನದ ಮೂಲಕ ಸಕಲರಿಗೂ ಪರಿಚಯ ಮಾಡಿಕೊಡುತ್ತಾರೆ. ಮೈಸೂರಿನ ರಾಜಮನೆತನದವರಿಂದಲೇ ಈ ಹಬ್ಬವು ಇಷ್ಟು ಪ್ರಚಲಿತವಾಗಿರುವುದರಿಂದ ಅಂದಿನ ವಿಶೇಷ ಪೂಜೆಯೂ ಅವರಿಂದಲೇ ನಡೆಯುತ್ತದೆ. ಹಿಂದಿನ ಕಾಲದ ರಾಜರ ಉಡುಗೆ ತೊಡುಗೆ ಹೇಗಿತ್ತು ಎಂಬುದನ್ನು ಇಂದಿನ ಹೊಸ ಪೀಳಿಗೆಯವರು ಪ್ರತ್ಯಕ್ಷ ನೋಡಲು ಇದೊಂದು ಸುವರ್ಣಾವಕಾಶ. ಈ ಸಮಯದಲ್ಲಿ ನೃತ್ಯೋತ್ಸವ, ಸಂಗೀತೋತ್ಸವ, ನಾಟಕೋತ್ಸವ, ಕವಿಗೋಷ್ಠಿ, ಯುವ ಮೇಳ, ಕ್ರೀಡೆ, ಕುಸ್ತಿ ಪಂದ್ಯ, ಆಹಾರ ಮೇಳ, ಹೂವಿನ ಪ್ರದರ್ಶನ ಮುಂತಾದವುಗಳು ಬಹಳ ಆಕರ್ಷಣೀಯವಾಗಿರುತ್ತದೆ. ಇದರಿಂದಾಗಿ ಮೈಸೂರು ದಸರಾ ಇತರ ರಾಜ್ಯಗಳಿಂದಲೂ ಜನರನ್ನು ತನ್ನಡೆ ಸೆಳೆಯಲು ಯಶಸ್ವಿಯಾಗಿದೆ.

ಮಹಿಷಾಸುರನನ್ನು ಕೊಲ್ಲಲು ದೇವಾನುದೇವತೆಗಳು ತಮ್ಮೆಲ್ಲ ಶಕ್ತಿಯನ್ನು ದುರ್ಗೆಗೆ ಧಾರೆ ಎರೆದಿರುತ್ತಾರೆ ಎಂದು ಹೇಳಲಾಯಿತು ಅಲ್ಲವೇ. ಆ ಅವಧಿಯಲ್ಲಿ ಎಲ್ಲಾ ದೇವತೆಗಳು ಶಕ್ತಿ ಇಲ್ಲದವರಾದ್ದರಿಂದ ಅವರೆಲ್ಲ ಗೊಂಬೆಗಳಂತೆ ಯುದ್ಧ ಮುಗಿಯುವವರೆಗೂ ನಿಂತಿದ್ದರೆಂದು ಪ್ರತೀತಿ. ಹಾಗೆ ಮಹಿಷಾಸುರನನು ಕೊಲ್ಲಲು ಸಹಕರಿಸಿದ ದೇವತೆಗಳನ್ನು ಅವರ ಆಗಿನ ರೂಪವನ್ನು ಗೊಂಬೆಯ ರೀತಿಯಲ್ಲಿ ಕೂಡಿಸಿ ಗೌರವಿಸುವ ಪದ್ಧತಿಯೇ ಗೊಂಬೆ ಇಡುವ ಪದ್ಧತಿ. ಈ ಪದ್ಧತಿಯನ್ನು ವಿಜಯನಗರದ ಶ್ರೀ ಕೃಷ್ಣದೇವರಾಯರು ಆರಂಭಿಸಿದ್ದು ಅದೇ ಕಾಲದಲ್ಲಿ ಮೈಸೂರು ಅರಸರು ಇದನ್ನು ಬಲು ಗಂಭೀರವಾಗಿ ಅರಮನೆಯಲ್ಲಿ ಆಚರಿಸಿದರಷ್ಟೇ ಅಲ್ಲ, ಇದನ್ನು ತಮ್ಮ ರಾಜ್ಯದಾದ್ಯಂತ ನಡೆಸಲು ಉತ್ತೇಜಿಸಿದರು. ಇದರ ಪರಿಣಾಮವಾಗಿ ರಾಜ್ಯದಾದ್ಯಂತ ಸಂಭ್ರಮದ ನವರಾತ್ರಿ ಇಂದಿಗೂ ಆಚರಣೆಯಲ್ಲಿದೆ. ಈ ಬೊಂಬೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಪ್ರಸ್ತಾಪ ಮಾಡುತ್ತಿದ್ದೇನೆ.

ಶತಮಾನ ಕಂಡಿರುವ ಪಟ್ಟದ ಬೊಂಬೆ
ಮೈಸೂರು ಅರಮನೆಯಲ್ಲಿನ ಬೊಂಬೆ ಪ್ರದರ್ಶನದಲ್ಲಿ ನವದುರ್ಗೆಯರ ಬೊಂಬೆಗಳ ಜೊತೆಗೆ ಪಟ್ಟದಲ್ಲಿ ಇರುವ ರಾಜರಾಣಿಯರ ಪ್ರತಿಮೆಯನ್ನು, (ಇವು ಚಂದನದ ಬೊಂಬೆಗಳಾಗಿದ್ದು ಇವುಗಳನ್ನು ಪಟ್ಟದ ಬೊಂಬೆ ಎಂದು ಕರೆಯುತ್ತಾರೆ) ರಾಮಾಯಣ, ಗೀತೋಪದೇಶ, ಮಹಾಭಾರತದ ಕುತೂಹಲ ದೃಶ್ಯಗಳು, ಭಾಗವತದ ಕೆಲವು ಘಟನೆಗಳನ್ನು ಅನೇಕ ದೇವತೆಗಳ ಬೊಂಬೆ ರೂಪದ ಪ್ರದರ್ಶನವನ್ನು ಪೂಜಿಸಲಾಗುತ್ತದೆ. ಈ ವೇಳೆಯಲ್ಲಿ ರಾಜ್ಯದ ಪ್ರಜೆಗಳೆಲ್ಲರ ಮನೆಯಲ್ಲಿ ಹಬ್ಬದ ಸಂಭ್ರಮವಾಗಿ ಇತರ ಬೊಂಬೆಗಳ ಜೊತೆಗೆ ಪಟ್ಟದ ಗೊಂಬೆಗಳ ಹೆಸರಲ್ಲಿ ರಾಜರಾಣಿಯರನ್ನು ಇಟ್ಟು ಪೂಜಿಸುವ ಪದ್ಧತಿ ಬೆಳೆದುಕೊಂಡು ಬಂದಿದೆ. ಮನೆಗಳಲ್ಲಿ ಗೊಂಬೆಗಳನ್ನು ಕೂಡಿಸುವಾಗ ಸ್ಥಳಾವಕಾಶಕ್ಕೆ ತಕ್ಕಂತೆ ಅವುಗಳನ್ನು ವಿವಿಧ ಹಂತಗಳಲ್ಲಿ ಕೂಡಿಸುತ್ತಾರೆ. ನವರಾತ್ರಿಯ ಪ್ರತೀಕವಾಗಿ ನವ ಅಥವಾ ಒಂಭತ್ತು ಹಂತಗಳಲ್ಲಿ ಬೊಂಬೆ ಇಡುವುದು ಸಾಮಾನ್ಯ. ಹೆಚ್ಚು ಗೊಂಬೆಗಳು ಇದ್ದವರು ೯ ಹಂತಗಳಲ್ಲಿ ಕೂಡಿಸಿದ್ದರೆ, ಇನ್ನು ಕೆಲವರು ೭ ಹಂತಗಳಲ್ಲಿ, ಕೆಲವರು ೫ ಹಂತಗಳಲ್ಲಿ ಕೂಡಿಸುವುದು ಸಾಮಾನ್ಯ. ಗೊಂಬೆಗಳನ್ನು ಕೂಡಿಸಲು ಮರದ ಅಥವಾ ಸ್ಟೀಲ್ ಸ್ಟ್ಯಾಂಡ್‌ ಬಳಸುತ್ತಾರೆ. ಮೊದಲ ಅಂತಸ್ತಿನಲ್ಲಿ ಪಟ್ಟದ ಬೊಂಬೆ, ಕಲಶ, ಗಣಪತಿ, ಮನೆ ದೇವರು, ದೀಪಗಳು ನಂತರದ ಹಂತಗಳಲ್ಲಿ ವಿವಿಧ ದೇವತೆಗಳ ದೃಶ್ಯಗಳು, ಧಾರ್ಮಿಕ ಪ್ರಸಿದ್ಧರು, ಅತಿ ಗಣ್ಯರು, ದೈನಂದಿನ ಜೀವನದ ದೃಶ್ಯಗಳು, ತೀರಾ ಕೆಳಗಿನ ಸಾಲಿನಲ್ಲಿ ನದಿ, ಕೆರೆ, ತೊರೆ, ಜಲಪಾತ, ಮರ, ಪ್ರಾಣಿಗಳು, ಪಕ್ಷಿಗಳು, ಮೃಗಾಲಯ, ಬೆಟ್ಟ ಗುಡ್ಡಗಳು, ಆಕಾಶ, ಪ್ರಕೃತಿ ಸೌಂದರ್ಯ ಇತ್ಯಾದಿ ದೃಶ್ಯಗಳ ಬೊಂಬೆಗಳನ್ನು ಇಡುವರು. ಈ ಬೊಂಬೆ ಪ್ರತಿಷ್ಠಾಪನೆಯು ಜಾನಪದೀಯ ಪರಂಪರೆ ಅಥವಾ ಸಾಂಸ್ಕೃತಿಕ ಉತ್ಸವದ ಭಾಗದಂತೆ ಕಂಡರೂ ಇದಕ್ಕೆ ಅದರದ್ದೇ ಆದ ಧಾರ್ಮಿಕ ಚೌಕಟ್ಟೂ ಕೂಡ ಇದೆ. ರಾಮಾಯಣ, ಮಹಾಭಾರತ, ವಿಷ್ಣು ಪುರಾಣ, ಶ್ರೀಕೃಷ್ಣನ ಲೀಲೆಗಳು, ಸಮುದ್ರ ಮಥನ ಶಿವ ಪಾರ್ವತಿಯ ಕಥೆ, ನವರಾತ್ರಿ ವೈಭವ, ದುರ್ಗೆಯ ಅವತಾರಗಳು ಹೀಗೆ ಪುರಾಣದ ನಾನಾ ಸನ್ನಿವೇಶಗಳನ್ನು ಆಯ್ಕೆ ಮಾಡಿಕೊಂಡು ಗೊಂಬೆಗಳನ್ನು ಜೋಡಿಸಲಾಗುತ್ತದೆ. ಜೊತೆಗೆ ಕೃಷಿ ಸಂಬಂಧಿತ ಉದ್ಯೋಗ, ಉಪಕರಣಗಳು, ಪ್ರಸಿದ್ಧ ವ್ಯಕ್ತಿಗಳ ಬೊಂಬೆಗಳು ಇಡಲ್ಪಟ್ಟು ತಲೆಮಾರಿನಿಂದ ತಲೆಮಾರಿಗೆ ಕಥೆಗಳು ಪರಿಚಯವಾಗುತ್ತಿದೆ. ವಿಷಯವನ್ನು ತಿಳಿಸಲು ಹೇಳುವುದರ ಜೊತೆಗೆ ಪಟದರ್ಶನ ಪರಿಣಾಮಕಾರಿ. ಪಟದರ್ಶನಕ್ಕಿಂತ ಘಟದರ್ಶನ ಇನ್ನೂ ಪರಿಣಾಮಕಾರಿ ಅಲ್ಲವೇ!
ಆಧುನಿಕ ಕಾಲದ ಪಟ್ಟದ ಬೊಂಬೆ

ಇದರಲ್ಲಿ ಮುಖ್ಯವಾಗಿ ಅಷ್ಟಲಕ್ಷ್ಮಿಯರು, ದಶಾವತಾರದ ಬೊಂಬೆಗಳು, ಸೀತಾ ಕಲ್ಯಾಣದ ಜೋಡಿಗಳು, ವೈಕುಂಠವಾಸಿ ವಿಷ್ಣು ಲಕ್ಷ್ಮೀಯರ ಬೊಂಬೆಗಳು, ಗಿರಿಜಾ ಕಲ್ಯಾಣ, ವಿವಿಧ ಗುರು ಪರಂಪರೆಯ ದೃಶ್ಯಗಳು ಚಾಮುಡೇಶ್ವರಿ ಹಬ್ಬದ ವಿಶೇಷತೆಯಿರುವುದರಿಂದ ಆ ದೇವಿಯ ವಿಗ್ರಹವನ್ನು ಮಧ್ಯದಲ್ಲಿರಿಸಿ ಸರಸ್ವತಿ, ಗೌರಿ, ಲಕ್ಷ್ಮಿಯರ ವಿಗ್ರಹಗಳನ್ನಿಟ್ಟು ಪೂಜಿಸುತ್ತಾರೆ. ಗೊಂಬೆ ಕೂಡಿಸುವವರು ಪ್ರತೀ ವರ್ಷವೂ ಇರುವ ಗೊಂಬೆಯ ಜೊತೆಗೆ ಒಂದಾದರೂ ಹೊಸ ಜೋಡಿ ಗೊಂಬೆಯನ್ನು ಸೇರಿಸಿ ಕೂಡಿಸಬೇಕು ಎನ್ನುವುದು ಒಂದು ವಾಡಿಕೆ. ಆದ್ದರಿಂದ ಹೊಸ ಬೊಂಬೆಗಳು ಪ್ರತಿ ವರ್ಷವೂ ಸೇರುತ್ತವೆ. ಇತ್ತೀಚೆಗೆ ಹಳೆ ಸಂಪ್ರದಾಯದ ಮಣ್ಣಿನ ಮತ್ತು ಮರದ ಗೊಂಬೆ ಜೊತೆಗೆ ಕಾಗದಗಳಿಂದ ತಯಾರಿಸುವ ಬಣ್ಣ ಬಣ್ಣದ ಗೊಂಬೆಗಳು ಸೇರ್ಪಡೆಯಾಗುತ್ತಿವೆ.

ನವರಾತ್ರಿಯ ಬೊಂಬೆಗಳು
ಚಿತ್ರ ಕೃಪೆ: ಕೆ.ಎಸ್.ಶಂಕರನಾರಾಯಣ
ಸಂಪ್ರದಾಯಗಳು ಮುಂದುವರಿಯಲು ಮಹಿಳೆಯ ಪಾತ್ರವೇ ಹೆಚ್ಚು ಎಂದು ಹಿರಿಯರ ನಂಬಿಕೆ. ಆದ್ದರಿಂದಲೇ ಹೆಣ್ಣುಮಕ್ಕಳ ಮದುವೆ ಸಂದರ್ಭದಲ್ಲಿ ವಧುವಿನ ಮಾತಾಪಿತೃಗಳು ಒಂದು ಜೊತೆ ಪಟ್ಟದ ಬೊಂಬೆಯನ್ನು ಆಕೆಗೆ ಕೊಡುವ ಸಂಪ್ರದಾಯವಿದೆ. ಅದರ ಮೂಲಕ ಮುಂಬರುವ ವರ್ಷಗಳಲ್ಲಿ ಬೊಂಬೆ ಹಬ್ಬವನ್ನು ಆಚರಿಸಲು ಆಕೆಗೆ ಅವಕಾಶ ಕೊಡುತ್ತಾರೆ, ಈ ಪಟ್ಟದ ಬೊಂಬೆಗಳು ರಾಜರಾಣಿಯರ ಪ್ರತೀಕ. ನೀವು ದಂಪತಿಗಳು ಈ ರಾಜರಾಣಿಯರನ್ನು ಪೂಜಿಸಿ ಅವರಂತೆ ಸುಖವಾಗಿ ಜೀವನ ಮಾಡಿ. ಉತ್ತಮ ಬಾಳುವೆ ನಿಮ್ಮದಾಗಲಿ ಎಂದು ಆಶೀರ್ವದಿಸುವ ಅವರ ಭಾವ ಶ್ಲಾಘನೀಯ. ಪರಿಚಯದ ಮಿತ್ರರೊಬ್ಬರ ಮನೆಯಲ್ಲಿ  ಹೀಗೆ ಉಡುಗೊರೆಯ ಮೂಲಕ ಬಂದಿರುವ ಬೊಂಬೆಗಳು ೨೧ ಇವೆಯಂತೆ. ಇವುಗಳು ಕೇವಲ ತಲೆಮಾರಿನಿಂದ ತಲೆಮಾರಿಗೆ ಬಂದ ಶತಮಾನಗಳನ್ನು ಕಂಡ ಬೊಂಬೆ ಎನ್ನುವುದಕ್ಕಿಂತ ಎಷ್ಟು ಸಂಪ್ರದಾಯಗಳನ್ನು ಕಂಡಿರಬಹುದು ಎಂಬುದು ಯೋಚಿಸಬೇಕಾದ ವಿಷಯ. ಪಕ್ಕದಲ್ಲಿನ ಚಿತ್ರದಲ್ಲಿ ಇಂತಹ ‌‌ ೫  ಜೊತೆ ಪಟ್ಟದ ಬೊಂಬೆಗಳನ್ನು ಇಟ್ಟಿರುವುದನ್ನು ಕಾಣಬಹುದು.

ರಾಜ್ಯದ ಹಲವು ಭಾಗಗಳಲ್ಲಿ ನವದುರ್ಗೆಯರಲ್ಲಿ ಪ್ರತಿದಿನ ಆಯಾ ದೇವಿಯರ ಕುಂಕುಮಾರ್ಚನೆ ಮಾಡಿ ಪಾಯಸ, ಸಿಹಿ ತಿಂಡಿ, ಕೋಸಂಬರಿ, ಕಡಲೆ ಉಸುಲಿ ಹೀಗೆ ತಿನಿಸುಗಳ ನೈವೇದ್ಯದೊಂದಿಗೆ ಮಂಗಳಾರತಿ ಮಾಡಿ ಸಂಜೆಯ ವೇಳೆಗೆ ಮುತ್ತೈದೆಯರನ್ನು, ಹೆಣ್ಣುಮಕ್ಕಳನ್ನು ಕರೆದು ಬಾಗಿನ, ತೆಂಗೊಳಲು, ಚಕ್ಕುಲಿ, ಉಂಡೆ ಹೀಗೆ ಖಾರ, ಸಿಹಿ ತಿಂಡಿಗಳನ್ನು ಕೊಟ್ಟು ಆರತಿ ಮಾಡುವ ಪದ್ಧತಿ ಇದೆ. ಮುತ್ತೈದೆಯರು, ಮಕ್ಕಳು - ಒಬ್ಬರು, ಮತ್ತೊಬ್ಬರ ಮನೆಗೆ ಹೋಗುತ್ತಾ ದಸರಾ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷಪಡುತ್ತಾರೆ. ಇದರಿಂದ ನಮ್ಮ ಸಂಪ್ರದಾಯ, ಆಚರಣೆಗಳು ಉಳಿಯುವುದಲ್ಲದೆ ಮುಂದಿನ ಜನಾಂಗಕ್ಕೂ ತೋರಿಸಿಕೊಟ್ಟು ಅವರಲ್ಲಿ ಹಬ್ಬದ ವಿಶೇಷ ಪ್ರಜ್ಞೆ ಮೂಡಿದಂತಾಗುತ್ತದೆ. ನವರಾತ್ರಿಯ ಈ ದಿನಗಳಲ್ಲಿ ಕೆಲವರು ದೇವಿ ಮಹಾತ್ಮೆ, ಶ್ರೀನಿವಾಸ ಕಲ್ಯಾಣ, ಗುರು ಚರಿತ್ರೆ ಮುಂತಾದವುಗಳನ್ನು ಪಾರಾಯಣ ಮಾಡುತ್ತಾರೆ. ವಿಜಯದಶಮಿಯಂದು ಮಹಾ ಮಂಗಳಾರತಿ ಮಾಡಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿ ಬರುತ್ತಾರೆ. ನವರಾತ್ರಿಯ ಪೂಜೆಗಳಲ್ಲಿ ಸರಸ್ವತಿ ಪೂಜೆಯಂದು ವಿವಿಧ ಧಾರ್ಮಿಕ ಗ್ರಂಥಗಳು, ಶಾಲಾಪುಸ್ತಕಗಳನ್ನು ದೇವರ ಮುಂದೆ ಇಟ್ಟು ಸರಸ್ವತಿಯ ಪೂಜೆ ಮಾಡಿ ವಿದ್ಯಾ ಬುದ್ಧಿ ಕೊಡುವಂತೆ ಪ್ರಾರ್ಥಿಸಿಕೊಳ್ಳುವುದು ವಾಡಿಕೆಯಲ್ಲಿದೆ. ಇನ್ನು ಬೊಂಬೆ ಇಟ್ಟು ಪೂಜೆ ಮಾಡುವುದರಿಂದ ಮದುವೆಯಾಗದ ಹೆಣ್ಣುಮಕ್ಕಳಿಗೆ ಮದುವೆಯ ಯೋಗ ಬರುವುದೆಂಬ ನಂಬಿಕೆಯೂ ಇದೆ. ದಸರಾ ಹಬ್ಬದಂದು ಬೊಂಬೆ ಹಬ್ಬದ ಮೂಲಕ ಮನುಕುಲದ ಸ್ವಾರಸ್ಯಕರ ಕಥೆಗಳು, ಘಟನೆಗಳು, ಸೃಜನಶೀಲತೆಯಿಂದ ಕೂಡಿದ ಕಲ್ಪನೆಯು ಅನಾವರಣಗೊಳ್ಳುತ್ತದೆ. ದಸರಾ ಹಬ್ಬದ ಮೆರುಗು ತಂದುಕೊಡುವ ಬೊಂಬೆಗಳ ಪ್ರದರ್ಶನ ಸಮಾಜದಲ್ಲಿ ನೆರೆಹೊರೆಯವರೊಂದಿಗೆ ಬಾಂಧವ್ಯ ಬೆಸುಗೆಗೆ ಕಾರಣವಾಗುತ್ತದೆ. ನಮ್ಮ ದೇಶದ ಪೌರಾಣಿಕ ಹಿನ್ನೆಲೆ, ಕಲೆ, ಸಂಪ್ರದಾಯ, ಜನ ಜೀವನವನ್ನು ದಸರಾ ಬೊಂಬೆಗಳು ಸಾರುತ್ತದೆ. ಕಾಲ ಬದಲಾದಂತೆ ಆಚರಣೆಯಲ್ಲಿಯೂ ಬದಲಾವಣೆ ಆಗುವುದು, ರೀತಿ ರಿವಾಜುಗಳಲ್ಲಿ ಕೆಲವು ದೂರವಾಗಿ ಹೊಸತು ಸೇರಿಕೊಂಡು, ಕೆಲವು ಮಾರ್ಪಾಟು ಆಗುತ್ತಿರಬಹುದು. ಆದರೆ ಹಬ್ಬದ ಮೂಲ ಸ್ವರೂಪದಲ್ಲೇನೂ ವ್ಯತ್ಯಾಸವಾಗಿಲ್ಲ. ಮಹಾಭಾರತ, ಭಾಗವತ, ದಶಾವತಾರ, ರಾಮಾಯಣ, ಗೀತೋಪದೇಶ, ಶ್ರೀನಿವಾಸ ಕಲ್ಯಾಣ, ಕೃಷ್ಣನ ಬಾಲ ಲೀಲೆಗಳು, ಗಣೇಶನ ಜನ್ಮ ವೃತ್ತಾಂತ, ಹೀಗೆ ಹಲವು ಪೌರಾಣಿಕ ದೃಶ್ಯಗಳ ಬೊಂಬೆಗಳು ತಲೆಮಾರಿನಿಂದ ತಲೆಮಾರಿಗೆ ಕಥೆಯನ್ನು ಕೊಂಡೊಯ್ಯುತ್ತದೆ. 

ನವದುರ್ಗೆಯರನ್ನು ಒಂಭತ್ತು ದಿನಗಳ ಕಾಲ ಪೂಜಿಸುವ ನವರಾತ್ರಿ ಹಬ್ಬ ಮೈಸೂರಿನಲ್ಲಷ್ಟೇ ಅಲ್ಲ, ಶೃಂಗೇರಿ, ಕಟೀಲು, ಕೊಲ್ಲೂರು, ಹೊರನಾಡುಬಾದಾಮಿ ಇತ್ಯಾದಿ ಶಕ್ತಿ ಪೀಠಗಳಲ್ಲಿ ಮತ್ತು ಬಹುತೇಕ ದೇವಾಲಯಗಳಲ್ಲಿ ಪ್ರತಿದಿನ ಅಲಂಕಾರದೊಂದಿಗೆ ವಿಶೇಷಪೂಜೆ ಮಾಡಲಾಗುತ್ತದೆ, ದೇವರಿಗೆ ನೈವೇದ್ಯ ಮಾಡಿ ಭಕ್ತಾದಿಗಳಿಗೆ ಪ್ರಸಾದ ನೀಡುವುದು ತುಂಬಾ ಸಾಮಾನ್ಯ ದೃಶ್ಯ. ಆಯುಧ ಪೂಜೆ ದಿನದಂದು ಹಳೆಯ ಕಾಲದ ಯುದ್ಧ ಸಾಮಗ್ರಿಗಳಾದ ಕತ್ತಿ, ಗುರಾಣಿ ಆಯುಧಗಳನ್ನು ಪೂಜಿಸುತ್ತಾರೆ. ಬಹುತೇಕ ಎಲ್ಲಾ ಕಾರ್ಖಾನೆಗಳಲ್ಲಿ ತಾವು ಕೆಲಸ ಮಾಡುವ ಯಂತ್ರಗಳಿಗೆ, ಕಂಪ್ಯೂಟರ್ ಗಳಿಗೆ, ಸೈಕಲ್, ಸ್ಕೂಟರ್, ವಾಹನಗಳಿಗೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸುತ್ತಾರೆ. ಊರಿನಿಂದ ಊರಿಗೆ ಹೋಗುವ ಬಸ್ಸುಗಳಿಗಂತೂ ಇನ್ನೂ ವೈಭವ ಹೆಚ್ಚು. ಅದನ್ನು ತೊಳೆಯುವ, ಅಲಂಕಾರ ಮಾಡುವ ಹೊಣೆಯನ್ನು ಊರಿನವರೇ ವಹಿಸಿಕೊಂಡಿರುವ ಹಲವು ಉದಾಹರಣೆಗಳಿವೆ ಎಂದರೆ ಈ ಹಬ್ಬದ ಸಡಗರವನ್ನು ಊಹಿಸಬಹುದು.

ದಸರಾ ಹಬ್ಬದ ಕಡೆಯ ದಿನವಾದ ವಿಜಯದಶಮಿ ಹಲವಾರು ವಿಷಯಗಳಿಂದಾಗಿ ಪ್ರಮುಖವಾಗಿದೆ. ಆ ದಿನ ಮೈಸೂರಿನಲ್ಲಿ ವೈಭವದ ಜಂಬೂಸವಾರಿ ಮೆರವಣಿಗೆ ನಡೆದರೆ ರಾಜ್ಯದಾದ್ಯಂತ ದೇವಸ್ಥಾನ ಇರುವ ಎಲ್ಲಾ ಹಳ್ಳಿಗಳಲ್ಲೂ ದೇವರ ಪಲ್ಲಕ್ಕಿ ಉತ್ಸವವು ಸಾಹಸ ಕಾರ್ಯದ ಪ್ರದರ್ಶನದೊಂದಿಗೆ ನಡೆದು ನಂತರ ಶಮಿ ಅಥವಾ ಬನ್ನಿ ಮರಕ್ಕೆ ಪೂಜೆ ಮಾಡುತ್ತಾರೆ. ಮೈಸೂರಿನಲ್ಲಿ ರಾಜರ, ಮಂತ್ರಿ ಮಹೋದಯರ ಅಥವಾ ಅಧಿಕಾರಸ್ಥರ ಸಮಕ್ಷಮದಲ್ಲಿ ನಡೆಯುವ ದೇವರ ಮೆರವಣಿಗೆ ಇತರ ಕಡೆಗಳಲ್ಲಿ ಅಲ್ಲಿಯ ಹಿರಿಯರ ಹಾಗೂ ಗಣ್ಯರ ಮುಂದಾಳತ್ವದಲ್ಲಿ ನಡೆಯುವುದು. ಇನ್ನು ಈ ದಿನದ ಪ್ರಾಮುಖ್ಯತೆ ಎಂದರೆ ಹಿಂದೆ ಇದೇ ದಿನದಂದು ದುರ್ಗೆಯು ಮಹಿಷನನ್ನು ಕೊಂದು ಮಹಿಷಾಸುರ ಮರ್ಧಿನಿಯಾಗಿದ್ದು, ಪುರುಷೋತ್ತಮನಾದ ಶ್ರೀರಾಮನು ಲಂಕಾಧೀಶ ರಾವಣನನ್ನು ಕೊಂದದ್ದು. ವನವಾಸ ಮುಗಿಸಿದ ಪಾಂಡವರು, ಅಜ್ಞಾತವಾಸ ಹೊರಡುವ ಮೊದಲು ತಮ್ಮ ಶಸ್ತ್ರಾಸ್ತ್ರಗಳನ್ನು ಗಂಟುಕಟ್ಟಿ ಒಂದು ಶಮಿ ವೃಕ್ಷದ ಮೇಲೆ ಇಟ್ಟು ಹೋಗಿದ್ದನ್ನು ಪಡೆದ ಕೌರವರನ್ನು ಜಯಿಸಿದ ದಿನ ಈ ವಿಜಯದಶಮಿ. ಇಂತಹ ಹಲವು ಕಾರಣಗಳಿಂದ ಈ ದಿನ ಯಾವುದೇ ಕೆಲಸ ಆರಂಭ ಮಾಡಿದರೂ ಯಶಸ್ಸು ಖಚಿತ ಎನ್ನುವ ನಂಬಿಕೆ ಇದೆ. ಪಂಚಾಂಗ ನೋಡದೆ ಮೂರೂವರೆ ಅತ್ಯುತ್ತಮ ಮುಹೂರ್ತ ಎಂದು ಪರಿಗಣಿಸಲಾಗುವ ಯುಗಾದಿ, ಅಕ್ಷಯ ತೃತೀಯ, ಹಾಗೂ ದೀಪಾವಳಿ ಪಾಡ್ಯದ ಅರ್ಧ ದಿನದೊಂದಿಗೆ ವಿಜಯದಶಮಿಯೂ ಸೇರಿ ಪ್ರಧಾನವಾಗಿದೆ. ಇದರಿಂದಾಗಿ ಅರ್ಜುನನ ವಿಜಯದಲ್ಲಿ ಪರಿಣಾಮಗೊಂಡ ಶಮಿ (ಬನ್ನಿ) ಎಲೆಗಳನ್ನು ಹಿರಿಯರು, ಬಂಧುಮಿತ್ರರಲ್ಲಿ ಪರಸ್ಪರ ವಿನಿಮಯ ಮಾಡಿಕೊಂಡು ಕಾರ್ಯ ಯಶಸ್ವಿಯಾಗಲಿ ಎಂದು ಕೆಳಗಿನ ಶ್ಲೋಕ ಹೇಳಿಕೊಳ್ಳುವುದರ ಮೂಲಕ ಹಾರೈಸಿಕೊಳ್ಳುವ ಆಚರಣೆ ಈಗಲೂ ಇದೆ.

ಶಮೀ ಶಮಯತೆ ಪಾಪಂ ಶಮೀ ಶತ್ರು ವಿನಾಶಿನೀ |
ಅರ್ಜುನಸ್ಯ ಧನುರ್ಧಾರಿ ರಾಮಸ್ಯ ಪ್ರಿಯದರ್ಶಿನೀ ||

ನವರಾತ್ರಿಯ ಕೊನೇ ದಿನವಾದ ಇಂದು ಅಂದರೆ ವಿಜಯದಶಮಿಯ ದಿನ ಮೈಸೂರಿನ ಅರಮನೆಯಲ್ಲಿ ಮತ್ತು ನಗರದಲ್ಲಿ ಸಂಭ್ರಮ, ಉತ್ಸವ ನಡೆಯುತ್ತಿದ್ದರೆ ಇತ್ತ ರಾಜ್ಯದ ಮೂಲೆ ಮೂಲೆಯ ಮನೆಗಳಲ್ಲಿ ಮೈವೆತ್ತಿದ ಗೊಂಬೆ ಸಾಮ್ರಾಜ್ಯ ತನ್ನ ದರ್ಬಾರ್‌ ಮುಗಿಸಿರುತ್ತದೆ. ಮೈಸೂರಿನಲ್ಲಿ ಜಂಬೂಸವಾರಿ ಆರಂಭವಾದರೆ, ಮನೆ ಮನೆಗಳಲ್ಲಿ ಇಟ್ಟಿರುವ ಪಟ್ಟದ ಗೊಂಬೆಗಳ ವಿಸರ್ಜನೆಯಾಗುತ್ತದೆ. ಮೈಸೂರಿನ ಅರಸರ ಉತ್ತೇಜನದಿಂದ ಪ್ರಾರಂಭವಾದ ನವರಾತ್ರಿ ಉತ್ಸವ ಹಾಗೂ ಬೊಂಬೆ ಇಡುವ ಪದ್ಧತಿ ಊರಿನಿಂದ ಊರಿಗೆ ವಿವಿಧ ಕಾರಣಗಳಿಂದ ವಲಸೆ ಹೋಗುವ ಮತ್ತು ಉದ್ಯೋಗದಲ್ಲಿ ತಾತ್ಕಾಲಿಕ ವರ್ಗಾವಣೆಯಲ್ಲಿ ಹೋದ ನೌಕರರಿಂದ ಈ ಹಬ್ಬದ ಸೊಬಗು ಸಹ ಪ್ರಸಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಗರದಾಚೆ ಇರುವ ಇಲ್ಲಿನ ನಾಗರಿಕರಿಂದ ಅಲ್ಲಿ ವೈಯಕ್ತಿಕ ಹಾಗೂ ಒಟ್ಟಾಗಿ ನವರಾತ್ರಿ ಆಚರಿಸುವ ವಿಷಯವನ್ನು ಕೇಳಿದಾಗ ನಮ್ಮ ನಾಡಿನ ನವರಾತ್ರಿಯು ಮನಸಿನಲ್ಲಿ ಹೆಮ್ಮೆಯನ್ನು ತರುತ್ತದೆ.

ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ತುಸು ಹೆಚ್ಚೇ ಇರುತ್ತದೆ. ಜನರಲ್ಲಿ ಶಾಂತಿ ನೆಮ್ಮದಿಗಳನ್ನು ತರಲು ಪರಸ್ಪರ ವಿಶ್ವಾಸ ಪ್ರೀತಿ ಮತ್ತು ಭ್ರಾತೃತ್ವವನ್ನು ಹೆಚ್ಚಿಸಲು ಇಂತಹಾ ಹಬ್ಬಗಳ ಆಚರಣೆ ಪರಿಣಾಮಕಾರಿ. ಅದರಲ್ಲೂ ಬದಲಾಗುತ್ತಿರುವ ಈ ಕಾಲಮಾನದಲ್ಲಿ, ಮನುಷ್ಯನ ಅಸುರೀ ಸ್ವಭಾವ ಹೆಚ್ಚುತ್ತಿರುವ ಈ ವಾತಾವರಣದಲ್ಲಿ ಸಾತ್ವಿಕತೆಯ ಪ್ರಭಾವ ಹೆಚ್ಚಾಗಲು ವ್ರತ ಹಬ್ಬದ ಆಚರಣೆಗಳು ಮಹತ್ವದ್ದಾಗಿದೆ.

ಈ ಲೇಖನದಲ್ಲಿನ ಮಾಹಿತಿಯನ್ನು ಹಲವು ಮೂಲಗಳಿಂದ ಸಂಗ್ರಹಿಸಿದ್ದೇನೆ. ಈ ಕಾರ್ಯದಲ್ಲಿ ಕೆಲವು ಸಲಹೆಗಳನ್ನು ಮತ್ತು ಚಿತ್ರದ ಕೃಪೆ ಮಾಡಿದ ಮೈಸೂರು ಅರಮನೆಯಲ್ಲಿ ಅಧಿಕಾರಿಗಳಾಗಿದ್ದವರ ವಂಶಸ್ಥರಾದ ಹಾಗೂ ಬೆಂಗಳೂರು ನಿವಾಸಿಗಳಾದ ಮಿತ್ರ ಶ್ರೀ ಕೆ.ಎಸ್. ಶಂಕರನಾರಾಯಣ ರವರಿಗೆ ವಿಶೇಷ ಕೃತಜ್ಞತೆಗಳನ್ನು ತಿಳಿಸಲು ಸಂತೋಷಿಸುತ್ತೇನೆ.

ಓದುಗರಲ್ಲಿ ಮನವಿ: ತಮ್ಮ ಮನೆಯ ಈ ಹಬ್ಬದ ಆಚರಣೆಯಲ್ಲಿ ಹೊಸತೇನಾದರೂ ಇದ್ದು ಅದಕ್ಕೆ ವಿಶೇಷ ಅರ್ಥವಿದ್ದಲ್ಲಿ ದಯವಿಟ್ಟು ಅದನ್ನು ಕಾಮೆಂಟ್ ವಿಭಾಗದಲ್ಲಿ ತಮ್ಮ ಹೆಸರಿನೊಂದಿಗೆ ಸೇರಿಸಿ ಬರೆಯಿರಿ. ಸೂಕ್ತ ಕಂಡಲ್ಲಿ ಲೇಖನದಲ್ಲಿ ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.

Comments

  1. ನವರಾತ್ರಿ ದಸರಾ ಹಬ್ಬ

    ಆಶ್ವಯುಜ ಮಾಸದ ಈ ಹಬ್ಬದ ಪುರಾಣ ಹಾಗೂ ಇತಿಹಾಸದ ಸಂಬಂಧಗಳನ್ನ ಬಹಳ ಚೆನ್ನಾಗಿ ವಿವರಿಸಲಾಗಿದೆ. ಮಹಾಕಾಳಿ, ಮಹಾಲಕ್ಷ್ಮಿ, ಮತ್ತು
    ಮಹಾಸರಸ್ವತಿ ದೇವಿಯರನ್ನ ಪೂಜಿಸಿ ಒಲಿಸಿಕೊಳ್ಳಲು
    ಈ ನವ ದಿನ/ನವರಾತ್ರಿ ತುಂಬಾ ಶ್ರೇಷ್ಠವಾದ ಪರ್ವದಿನಗಳು. ಹಾಗೆಯೇ ನೀವು ವಿವರಿಸಿದಂತೆ
    ಬೊಂಬೆ ಕೂಡಿಸುವ ಪದ್ಧತಿ ಬಹುಷ: ಮುಂದಿನ ಪೀಳಿಗೆಗೆ ಪುರಾಣ ಮತ್ತು ಇತಿಹಾಸದ ಪರಿಚಯಿಸುವ
    ಪರಿಪಾಠವೂ ಇದ್ದೀತು. ವಿಜಯನಗರದ ವೈಭವದ
    ದಸರಾ ಅಥವಾ ಮೈಸೂರಿನ ದಸರಾವನ್ನು ನೋಡಲು ಸಾಧ್ಯವಾಗದವರಿಗೆ. ಅದನ್ನು ಬೊಂಬೆಗಳ ಮೂಲಕ
    ತಿಳಿಸುವ ಪದ್ಧತಿ ಬಂದಿದೆ. ಅಲ್ಲದೆ ಈ ಸಂಧರ್ಭ ದಲ್ಲಿ
    ಬೊಂಬೆಗಳ ಪ್ರದರ್ಶನ ನೋಡಲು ಬಂಧು ಬಾಂಧ ವರನ್ನು ಆಹ್ವಾನಿಸಿ ಅವರೊಂದಿಗೆ ಸಂಭ್ರಮ ಪಡುವ
    ದಿನವೂ ಈ ದಸರಾ. ನಾವು ಚಿಕ್ಕವರಿದ್ದಾಗ ಬೊಂಬೆಗಳ
    ಪ್ರದರ್ಶನ ನೋಡಿಕೊಂಡು ಬೊಂಬೆ ಬಾಗಿನದ ತಿಂಡಿಗಳನ್ನು ಸವಿಯುತ್ತಿದ್ದ ಕಾಲವೂ ಇತ್ತು. ಈಗ
    ಅದೆಲ್ಲವೂ ಮರೆಯಾಗುತ್ತಿದೆ.
    ನೀವು ನಿಮ್ಮ blog ನಲ್ಲಿ ಈ ರೀತಿಯ ಪರಿಚಯ ಮಾಡಿಕೊಡುತ್ತಿರುವುದು ಶ್ಲಾಘನೀಯ. ಇಂತಹ ಬರಹವನ್ನು ನೀಡಿದ್ದಕ್ಕೆ ಅಭಿನಂದನೆಗಳು

    ದತ್ತಾತ್ರೇಯ ಶರ್ಮ

    ReplyDelete
  2. ಎಷ್ಟೇ ವಿಷಯಗಳು ಗೊತ್ತಿದೆ  ಎಂದುಕೊಂಡರು, ಈ ಲೇಖನವನ್ನು ಓದಿದಾಗ ಸುಮಾರು ಹೊಸ ವಿಷಯಗಳು ಹಾಗೂ ಹೊಸಪದಗಳ ಪರಿಚಯವಾಯಿತು. ಮಹಿಷನ ಜನನ, ಪುರಾಣಕಥೆಗಳು,ನವದುರ್ಗೆಯರ ಪೂಜಾವಿಧಾನ, ಅಣಿಮಾ,ಮಹಿಮಾ.... ವಿಚಾರ ಚೆನ್ನಾಗಿದೆ. ದಸರಾ ಹಬ್ಬದ ವಿಶೇಷತೆಯು ಸಾಗರದಾಚೆಗೂ ಹಬ್ಬಿರುವ ವಿಷಯ ತಿಳಿದು ನಮ್ಮ ನಾಡ ಹಬ್ಬದ ಬಗ್ಗೆ ಹೆಮ್ಮೆಯೆನಿಸುತ್ತದೆ.ನಿಜಕ್ಕೂ ಇದು ಒಂದು ಸಡಗರದ ಹಬ್ಬ.ಓದುತ್ತ ಹೋದಂತೆ ನಮ್ಮ ಬಾಲ್ಯದ ದಸರಾ ಹಬ್ಬವೇ ಕಣ್ಣಮುಂದೆ ಬಂದಂತೆ ಆಯಿತು. ಆದರೆ ಈಗ ಆ ಸಡಗರದಿಂದ ಆಚರಿಸಲು ಸಾಧ್ಯವಿಲ್ಲವೆಂದು ಖೇದವಾಗುತ್ತದೆ. ಗೊಂಬೆ ಇಟ್ಟಿರುವವರ ಮನೆಗೆ ಹೋಗಿ ನೋಡುವುದೇ ಚಂದ. ವಿಜಯದಶಮಿ ಹಬ್ಬದ ಆಚರಣೆ ಬಗ್ಗೆ ಎಷ್ಟೊಂದು ಮಹತ್ವವಿದೆ ಎಂದು ತಿಳಿಸಿದ್ದೀರಿ.ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲ. ಒಮ್ಮೆದಸರಾ ಗೆ ಹೋಗಿ ಬಂದಂತೆ ಆಯಿತು.ಗೊಂಬೆಗಳ ಫೋಟೋ ಚೆನ್ನಾಗಿದೆ.
    ಒಂದು ವಿಶೇಷ ಎಂದರೆ  ಮಲೆನಾಡಿನಲ್ಲಿ ವಿಜಯದಶಮಿ ದಿನ 'ಬಿನ್ನವತ್ತಳೆ ಅಥವಾ ಬನ್ನಿಪತ್ರಿಕೆ 'ಎಂಬುದನ್ನು ಬರೆಯುವ ಪದ್ಧತಿ ಇದೆ. ಇದರಲ್ಲಿ ಹಲವಾರು ಶ್ಲೋಕ ಗಳು ಇದ್ದು ಕೊನೆಯಲ್ಲಿ ಮನೆಯ ಯಜಮಾನನ ಸಹಿ ಸಹ ಇರುತ್ತದೆ. ಇದನ್ನು ದೇವರ ಮುಂದೆ ಇಟ್ಟು ಪೂಜಿಸುತ್ತಾರೆ.ಹಾಗೂ ಮಹಾನವಮಿಯಂದು ಎಳೆ ಮನ್ನಿಸುವ ಅಂದರೆ ಗೌರಿ ಎಳೆಯನ್ನು ವಿಸರ್ಜಿಸುವ ಪದ್ಧತಿ ಸಹ ಇದೆ. ಒಟ್ಟಿನಲ್ಲಿ ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ.

    ReplyDelete
  3. ಮಾಹಿತಿಯುಕ್ತ ಲೇಖನ. ಇಲ್ಲಿ ಕಾಣಿಸಿರುವ ವಿವರಗಳು ನಮ್ಮಲ್ಲನೇಕರಿಗೆ ಈಗಾಗಲೇ ತಿಳಿದಿದ್ದು, ಇದು ಪುನರಾವರ್ತನೆ ಎನ್ನಿಸಬಹುದು. ಆದರೆ ಹೊಸ ಓದುಗರು (
    ಅದರಲ್ಲಿಯೂ ಯುವ ಓದುಗರು) ಮೂಡಿಬರುತ್ತಲೇ ಇರುತ್ತಾರೆ. ಅವರಲ್ಲನೇಕರಿಗೆ ನಮ್ಮ ಹಬ್ಬ, ಹರಿದಿನಗಳ, ಸಂಪ್ರದಾಯಗಳ ಹಿನ್ನೆಲೆ ತಿಳಿದಿರುವುದು ಅಸಂಭವ. ಅಂಥವರಿಗೆ ಉಪಯುಕ್ತವಾಗಬಲ್ಲ ಲೇಖನ ಇದು.

    ReplyDelete

  4. ನವರಾತ್ರಿ ದಸರಾ ಹಬ್ಬದ ಪದ್ಧತಿ ಮತ್ತು ಇತಿಹಾಸದ ಬಗ್ಗೆ ತುಂಬಾ ಸೊಗಸಾಗಿ ಪರಿಚಯ ಮಾಡಿಕೊಡುತ್ತಿರುವುದು ತುಂಬಾ ಶ್ಲಾಘನೀಯ. ಲೇಖನ ಬಹಳ ಸೊಗಸಾಗಿ ಮೂಡಿ ಬಂದಿದೆ. ಅಭಿನಂದನೆಗಳು

    ReplyDelete
  5. Thanks a lot for sharing this wonderful & informative article. ' came to know lot of things from this article. Appreciate your effort in collecting & putting such valuable info in writing. This is one best article on dasara ' ever read. Wishing you and your family a happy dasara.🙏

    ReplyDelete
  6. ನಮ್ಮ ಮನೆಯಲ್ಲಿಯೂ ವಿಜಯದಶಮಿಯಂದು "ಬನ್ನಿಪತ್ರಿಕೆ" ಬರೆದು, ಶಾರದಾದೇವಿಯ ಮುಂದೆ ಇರಿಸಿ ಬನ್ನಿಸೊಪ್ಪಿನಿಂದ ಪೂಜಿಸಿ, ಊಟವಾದನಂತರ ತೆಗೆದು ಅದರಮೇಲೆ ಮನೆಯ ಸದಸ್ಯರೆಲ್ಲ ಕುಲದೇವತೆಗೆ ನಮಸ್ಕಾರ ಬರೆದು ಸಹಿಮಾಡಿ ಬನ್ನಿಸೊಪ್ಪನ್ನು ಪ್ರಸಾದರೂಪದಲ್ಲಿ ಸ್ವೀಕರಿಸಿ, ಅದನ್ನೇ ಇತರ ಬಂಧು- ಮಿತ್ರರಿಗೆ ನೀಡಿ ನಮಸ್ಕಾರ/ಆಶೀರ್ವಾದ ಮಾಡುವ/ಪಡೆಯುವ ಪದ್ಧತಿ ಇದೆ.

    ತ್ಯಾಗರಾಜನಗರದಲ್ಲಿ, ಈಗ ಅಮೇರಿಕಾದಲ್ಲಿ ವಾಸವಾಗಿರುವ ವೈದ್ಯ ದಂಪತಿಗಳು, ಪುರಾತನವಾದ ತಮ್ಮ ದೊಡ್ಡದಾದ ಮನೆತುಂಬಾ ಗೊಂಬೆಗಳನ್ನು ಜೋಡಿಸುವ ವ್ಯವಸ್ಥೆ ಮಾಡಿದ್ದು, ನೋಡಲು ನೂರಾರು ಜನರು ಹೋಗುತ್ತಾರೆ. ಎರಡು ವರ್ಷದ ಹಿಂದೆ ನಾವು ದಂಪತಿಗಳಿಬ್ಬರೂ ಹೋಗಿದ್ದು, ಅವರ ಮಗಳ ಭರತನಾಟ್ಯ ಪ್ರದರ್ಶನ ನೋಡಿ ಬಂದಿದ್ದು ಮರೆಯಲಾದನುಭವ.

    ಇಂಗ್ಲೆಂಡ್ ನಲ್ಲಿ "ಲೆಸ್ಟರ್" ಎಂಬ ಊರಿನಲ್ಲಿ (ಶೇ. ೮೦ ರಷ್ಟು ಹಿಂದೂಗಳಿದ್ದು) ವಿಜಯದಶಮಿಯಂದು ಊರಮಧ್ಯೇ ಪಟಾಕಿ ಸಿಡಿಸಿ ಸಂಭ್ರಮಿಸುವ ಪದ್ಧತಿ ಇದೆ. ಸುತ್ತಲಿನ ಹಿಂದೂ ಬಾಂಧವರು ದೇವಾಲಯದಲ್ಲಿ ಬಂದು ಸೇರುತ್ತಾರೆ.

    ಹಿರಿಯಣ್ಣ K P

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...