Skip to main content

ಜ್ಞಾನಗಳಿಕೆಯ ಪಯಣ

ಹಳೆಯ ಕಾಲದಲ್ಲಿ ಇದ್ದ ಹಲವು ವಸ್ತುಗಳು ಮತ್ತು ವ್ಯವಸ್ಥೆಗಳು ಕಾಲಾಂತರದಲ್ಲಿ, ಕೆಲವು ನಶಿಸಿ ಹೋಗಿವೆ, ಕೆಲವು ಬದಲಾಗಿವೆ. ಇನ್ನು ಕೆಲವದರ ಸ್ಥಾನದಲ್ಲಿ ಹೊಸ ವಸ್ತುಗಳು ಸೇರಿಕೊಂಡಿವೆ. ಬದಲಾವಣೆ ನಿರಂತರ. ಅದು ಜಗದ ನಿಯಮ. ಆದ್ದರಿಂದ ಅದು ಮುಂದೂ ಬದಲಾಗುತ್ತಲೇ ಇರುತ್ತದೆ. ಅದರಂತೆಯೇ ಯಾವುದೇ ಕೆಲಸ ಮಾಡಲೂ ಬೇಕಾದ ಮಾಹಿತಿ ಹಿಂದೆ ಯಾವ ರೀತಿ ಇತ್ತು ಮತ್ತು ಬದಲಾದ ದಿನಗಳಲ್ಲಿ ಹೇಗಿದೆ, ಅದರ ಮೇಲಿರುವ ಅವಲಂಬನೆಯಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಒಂದು ಸಣ್ಣ ಚರ್ಚೆಯೇ ಮುಂದೆ ವಿವರಿಸಿರುವ ಘಟನೆ.

ಅಂದು ಪರ ರಾಜ್ಯದಿಂದ ಊರಿನತ್ತ ಪ್ರವಾಸಿ ಬಸ್ ನಲ್ಲಿ ಹೊರಟಿದ್ದೇವೆ. ತಡೆಯಿಲ್ಲದೆ ಪ್ರಯಾಣ ಮತ್ತು ಇತರ ಕಾರಣಗಳಿಂದ ನಮ್ಮ ಮೊಬೈಲ್ ಗಳನ್ನು ಚಾರ್ಜ್ ಮಾಡಲಾಗಿಲ್ಲ. ಆ ಹಳೆಯ ಮಾದರಿಯ ಬಸ್ಸಿನಲ್ಲಿ ಚಾರ್ಜ್ ಮಾಡುವ ವ್ಯವಸ್ಥೆ ಇಲ್ಲ. ರಾತ್ರಿ ವೇಳೆಯಲ್ಲಿ ಯಾವುದೋ ವ್ಯವಹಾರದ ಮಾತುಕತೆ ನಡೆಯುತ್ತಿದೆ. ಹೊಸತಲೆಮಾರಿನ ಹುಡುಗರೇ ಹೆಚ್ಚಿನ ಪ್ರವಾಸಿಗರು. ಚಾರ್ಜ್ ಇಲ್ಲದ ಮೊಬೈಲ್ ಗಳಿಂದಾಗಿ ಅದನ್ನು ನಂಬಿ ಕೊಂಡಿರುವವರಿಗೆ ಆಗಿರುವ ತೊಂದರೆ ಹೇಳತೀರದು. ಒಬ್ಬೊಬ್ಬರದು ಒಂದೊಂದು ಸಮಸ್ಯೆ . ಊರಿಗೆ ಸಂಪರ್ಕಿಸಲು ಆಗುತ್ತಿಲ್ಲ.  ಕೆಲವರಿಗೆ ತಮ್ಮ ಮೊಬೈಲ್ ಸಂಪರ್ಕ ಸಂಖ್ಯೆಯನ್ನು ಹೇಳಲೂ ಮೊಬೈಲ್ ನೋಡಿಯೇ ಹೇಳ ಬೇಕಾಗಿರುವಾಗ  ತಮಗೆ ಬೇಕಾದವರ ಮೊಬೈಲ್ ಸಂಪರ್ಕ ಸಂಖ್ಯೆ ತಿಳಿಯದ ಸ್ಥಿತಿ. ಕೆಲವರಿಗೆ ರೇಡಿಯೋ ಕೇಳಲು ಬೇಕಾದರೆ, ಹಲವರಿಗೆ ಫೇಸ್ ಬುಕ್, ವಾಟ್ಸ್ಯಾಪ್, ... ಇಲ್ಲದ್ದು ಚಡಪಡಿಕೆಯಾಗಿದೆ. ಕೆಲವರು ಆಡುವ ಪ್ರತಿ ಮಾತಿಗೂ ಗೂಗಲ್ ಬೇಕು. ಕೈಕೊಟ್ಟ ಮೊಬೈಲ್ ಗಳಿಗೆ ಎಲ್ಲರೂ ಶಾಪ ಹಾಕುವವರೇ. ಸದ್ಯಕ್ಕೆ ರಾಮಣ್ಣನ ಕೈನಲ್ಲಿನ ವಾಚ್ ಸಮಯ ಮತ್ತು ಅಂದಿನ ತಾರೀಖನ್ನು ತೋರಿಸುತ್ತಿದೆ. ನಾವು ‌ಹೋಗುವ ದಿಕ್ಕಾಗಲೀ ಅಥವಾ ನಕ್ಷೆಯಾಗಲೀ ತಿಳಿಯುತ್ತಿಲ್ಲ. ಏನು ಬೇಕಾದರೂ ಸಹನೆ ಇಲ್ಲದ ಸಿಡುಕ ಚಾಲಕನನ್ನು ಆತನ ಕ್ಯಾಬಿನ್ ಹಿಂದಿನ ಬಾಗಿಲನ್ನು ತೆರೆದು ಮಾತನಾಡಿಸಬೇಕು. ರಸ್ತೆ ಪಕ್ಕದಲ್ಲಿ ಬರೆದಿರುವ ಕಿಲೋಮೀಟರ್ ಕಲ್ಲು ಬೇರೆ ಭಾಷೆಯಲ್ಲಿ ಬರೆದ ಯಾವುದೋ ಊರಿನ ಹೆಸರಿನೊಂದಿಗೆ ದೂರದ ಸಂಖ್ಯೆ ತೋರಿಸುತ್ತಿದೆ. ಕಾರ್ಗತ್ತಲಿನಲ್ಲಿ ಕಾಡಿನಲ್ಲಿ ಹೋಗುತ್ತಿರುವ ಬಸ್ಸಿನಲ್ಲಿ ನಾವು ಕಳೆದೇ ಹೋಗಿದ್ದೇವೆ ಎನಿಸುತ್ತದೆ. 

ಮೊಬೈಲ್ ಇದ್ದರೆ ಜೀವ. ಅದೇ ಸರ್ವಸ್ವ. ಅದು ಉಪಯೋಗಕ್ಕಿಲ್ಲದ ಸ್ತಿತಿಯಲ್ಲಿರುವಾಗಲೇ ನಡೆಯುತ್ತಿರುವ ಒಂದು ವ್ಯವಹಾರ. ಆ ಸಮಯದಲ್ಲಿ ಲೆಕ್ಕಾಚಾರಕ್ಕೆ ಕ್ಯಾಲ್ಕುಲೇಟರ್ ಬೇಕಾಗಿದೆ. ಮಾತಿನ ಮಧ್ಯೆ ಈಗಲೇ ನಿವೇಶನದ ಮಾತುಕತೆ ಮುಗಿಯಬೇಕಾಗಿದೆ. ತಡವಾದರೆ ವ್ಯವಹಾರ ತಪ್ಪಿಹೋಗುತ್ತದೆ. ಚದರಡಿಗೆ ೩೫೦೦ ರೂಪಾಯಿ ಕೊಡಲು ಒಪ್ಪುವುದಾದರೆ ತನ್ನ ೩೬೦೦ ಚದುರ ಆಡಿಗಳ ನಿವೇಶನ ಮಾರಾಟ ಮಾಡಲು ತಯಾರಿದ್ದ ಒಬ್ಬ ಮಹಾಶಯ. ಕ್ಯಾಲ್ಕುಲೇಟರ್ ಇಲ್ಲದೆ ಲೆಕ್ಕ ಮಾಡಲಾಗದ ಸನ್ನಿವೇಶ. ಮಾರುವವನಿಗೂ ಖರೀದಿದಾರನಿಗೂ ಅಸಹಾಯಕತೆಯ ಮನೋಭಾವ. ಆತನ ಯುವ ಮಿತ್ರರಿಗೆ ಸಹಾಯ ಮಾಡಲಾಗದೆ ಏನೋ ಕಸಿವಿಸಿ. ಈ ನಿಮಿಷಕ್ಕೆ ಎಂತಹಾ ಲೆಕ್ಕ ಹೇಳಿದರೂ ಯಾವ ಕಾಗದ ಪೆನ್ನಿನ ಸಹಾಯ ಬೇಡದೆ ಬರಿ ಬಾಯಿ ಮೂಲಕ ಕ್ಷಣದಲ್ಲಿ ಉತ್ತರ ಕೊಡುವ ಹಿಂದಿನ ಸೀಟುಗಳಲ್ಲಿ ಕುಳಿತಿರುವ ಹಿರಿಯರಿಗೆ ಭಾರೀ ಮಹತ್ವ. ಆಪತ್ಭಾಂದವರಾದ ಅವರಿಗೆ ಮಗ್ಗಿ ಹೇಳಲು ಬರುತ್ತಿರುವುದರಿಂದ ಲೆಕ್ಕಗಳನ್ನು ಬಲು ಸುಲಭವಾಗಿ ಮಾಡಿ ಹೇಳುತ್ತಿದ್ದಾರೆ. ೧.೨೬ಕೋಟಿ ಎಂದು ಕ್ಷಣದಲ್ಲಿ ಬಂದ ಉತ್ತರಕ್ಕೆ ಎಲ್ಲಾ ಖುಷಿಯಾಗಿದ್ದಾರೆ. ಊರು ತಲುಪಿದ ಕೂಡಲೇ ವ್ಯವಹಾರ ಮುಗಿಸುವ ಒಪ್ಪಿಗೆಯ ಮೂಲಕ ಅಂತೂ ಆ ವ್ಯಾಪಾರ ಮುಗಿಯಿತು. ನಂತರ ಲೋಕಾರೂಢಿಯಲ್ಲಿ ಮಾತು ಮುಂದುವರೆಯಿತು. ಮುಂದೆ ಮೂರು ಗಂಟೆಯಲ್ಲಿ ಪೂನಾ ಸೇರುತ್ತೇವೆ ಎಂದು ಡ್ರೈವರ್ ಹೇಳಿದಾಗ ಇದ್ದ ಹಿರಿಯರು ಬಸ್ಸಿನ ವೇಗ ಹಾಗೂ ದೂರವನ್ನು ಸುಲಭವಾಗಿ ಅಂದಾಜು ಮಾಡಿ ಹೇಳುವರು. ಕಿಲೋಮೀಟರ್ ಜೊತೆಗೆ ಎಷ್ಟು ಮೈಲಿ ಎಂಬುದೂ ಹೇಳಬಲ್ಲ ಅವರನ್ನು ಎಲ್ಲರೂ ಹೊಗಳುವವರೇ. ಈ ರೀತಿಯಲ್ಲಿ ಹೇಗೆ ಸುಲಭವಾಗಿ ಲೆಕ್ಕ ಹಾಕುವಿರಿ ಎಂದಾಗ ಆ ಹಿರಿಯರು ಚಿಕ್ಕಂದಿನಲ್ಲಿ ತಮ್ಮ ತಮ್ಮ ಮನೆಯಲ್ಲಿ ಹೇಳಿ ಕೊಡುತ್ತಿದ್ದ ಬಾಯಿಪಾಠದ ಹಾಗೂ ಅದರ ಮೂಲದ ಬಗ್ಗೆ ಚರ್ಚೆ ಮಾಡಲು ಪ್ರಾರಂಭಿಸಿದರು. 

ಬಹಳ ಕಾಲದ ಹಿಂದೆ ಋಷಿ ಮುನಿಗಳು ದೇವರ ಪ್ರಾರ್ಥನೆ, ಶ್ಲೋಕ, ಮಂತ್ರಗಳನ್ನು ಹೇಳುತ್ತಿದ್ದರು. ಅವುಗಳನ್ನು ವಿವಿಧ ಏರಿಳಿತದ ಸ್ವರಗಳಲ್ಲಿ ಹೇಳಬೇಕಾಗಿತ್ತು. ಅವುಗಳನ್ನು ಇನ್ನೊಬ್ಬರಿಗೆ ತಿಳಿಸಲು ಪದೇ ಪದೇ ಹೇಳಿ ಕಲಿಸಿ ಕೊಡುತ್ತಿದ್ದರು. ಜೊತೆಗೆ ಹಲವು ವೇದ, ಪುರಾಣ, ಪುಣ್ಯ ಕಥೆಗಳೂ ಅವರಿಗೆ ಗೊತ್ತಿದ್ದು ಅವುಗಳನ್ನು ಶಿಷ್ಯರಿಗೂ ಹೇಳಬೇಕಾಗಿತ್ತು. ಹೀಗೆ ಅವುಗಳನ್ನು ಒಬ್ಬರಿಗೊಬ್ಬರು ಹೇಳುತ್ತಾ ತಲೆಮಾರಿನಿಂದ ತಲೆಮಾರಿಗೆ ಕಲಿಸಿದರು. ಆ ಕಾಲದಲ್ಲಿ ಬರೆಯಲು ಕಾಗದವಾಗಲೀ ಅಥವಾ ಬರೆಯುವ ಸಾಧನಗಳಾಗಲೀ ಇರಲಿಲ್ಲ. ಹೇಳಿಕೊಡುವ ಪದ್ಧತಿ ಮುಂದುವರಿದಾಗ ತಿಳಿದ ವಿಷಯದ ಶೀರ್ಷಿಕೆಯನ್ನು ಮಾತ್ರ ಕಲ್ಲಿನ ಮೇಲೆ ಹಾಗೂ ನಂತರದ ದಿನಗಳಲ್ಲಿ ಎಲೆಯ ಮೇಲೆ ಬರೆಯುವ ಪದ್ಧತಿ ಪ್ರಾರಂಭವಾಯಿತು. ಅವುಗಳನ್ನು ನೋಡುತ್ತಾ ಅದರ ವಿವರ ಮಂತ್ರವನ್ನು ಹೇಳುವ ಪದ್ಧತಿ ಶುರುವಾಯಿತು. ಮುಂದೆ ತಾಳೆಗರಿಯ ಮೂಲಕ ವಿವರವಾಗಿ ಬರೆದ ಆ ಮಾಹಿತಿಗಳನ್ನು ಬರೆದರು. ನಂತರದಲ್ಲಿ ಕಾಗದದ ಮೇಲೆ ಬರೆಯುವ ಪದ್ಧತಿ ಬಳಕೆಗೆ ಬಂದಿತು. ಆದರೂ ಒಬ್ಬರಿಂದ ಒಬ್ಬರು ಕೇಳಿ ಕಲಿಯುವ ಪದ್ಧತಿ ಹಲವು ತಲೆಮಾರುಗಳವರೆಗೂ ಮುಂದುವರಿಯಿತು. ಈ ರೀತಿ ಕಲಿಯುವುದನ್ನು ಬಾಯಿಪಾಠ ಎನ್ನುತ್ತಾರೆ. ಇಂದಿನಂತೆ ಪುಸ್ತಕಗಳ ಸಂಗ್ರಹಗಳ ಬದಲು ವಿಷಯಗಳನ್ನು ಮನಸ್ಸಿನಲ್ಲಿಯೇ ಸಂಗ್ರಹಿಸುವುದರಿಂದ ಅದನ್ನು ಉಪಯೋಗಿಸಲು ಹಗಲು ರಾತ್ರಿಗಳ ಪರಿವೆ ಇರುವುದಿಲ್ಲ. ಯಾವಾಗ ಬೇಕಾದರೂ ಅಂದರೆ ಈಗಲೂ ಕಲಿತಿದ್ದನ್ನು ಉಪಯೋಗಿಸ ಬಹುದಾಗಿದೆ. ಕಾಲಕಾಲಕ್ಕೆ ಕಲಿಯುವ ವಿಷಯಗಳೂ ಬದಲಾಗಿದೆ. ಆದರೂ ಕಲಿಯುವ ಬಾಯಿಪಾಠದ ರೀತಿ ಕೆಲವು ವಿಷಯಗಳಲ್ಲಿ ಮುಂದುವರಿದಿದೆ. ಬದಲಾದ ತಾಂತ್ರಿಕತೆಯಲ್ಲಿ ಅದರಲ್ಲೂ ಮೊಬೈಲ್ ಬಂದ ಮೇಲೆ ಅದು ಹಲವಾರು ಸೌಲಭ್ಯಗಳನ್ನು ಹೊಂದಿರುವುದರಿಂದ ಸಹಜವಾಗಿ ಕೆಲವು ಮಾಹಿತಿಗಳೊಂದಿಗೆ ವಸ್ತುಗಳೂ ಮಾಯವಾಗಿವೆ ಅಥವಾ ಮಾಯವಾಗುತ್ತಿವೆ. ದಿಕ್ಸೂಚಿ, ಕ್ಯಾಲ್ಕುಲೇಟರ್, ಕ್ಯಾಮೆರಾ, ಕ್ಯಾಲೆಂಡರ್, ರೇಡಿಯೋ, ಗಡಿಯಾರ, ಟೆಲಿಫೋನ್, ಟೆಲಿವಿಷನ್, ದಿನಚರಿ ಅಷ್ಟೇ ಏಕೆ ದಿನಪತ್ರಿಕೆ ಸಹಾ ಮಾಯವಾಗಿದೆ. ಟಿಪ್ಪಣಿ ಪುಸ್ತಕ, ಮಂತ್ರ ಸ್ತೋತ್ರಗಳಿಗೂ ಮೊಬೈಲನ್ನು ಆಶ್ರಯಿಸುವುದು ಪ್ರಾರಂಭವಾಗಿದೆ. ಕೆಲವರು ಊರಿಗೆ ಹೋಗಲು ರೈಲು, ಬಸ್ ಗಳಿಗೆ ಹಣಕಾಸಿನ ಹಾಗೂ ಬ್ಯಾಂಕ್ ವ್ಯವಹಾರಗಳಿಗೆ ಈ ಮೊಬೈಲ್ ಬಳಸಿದರೆ ಮತ್ತೆ ಕೆಲವರು ಅಂಗಡಿಗಳಿಂದ ದಿನಸಿ ಇತ್ಯಾದಿ ವಸ್ತುಗಳನ್ನು ಮತ್ತು ಹೋಟೆಲಿನಿಂದ ಊಟ ತಿಂಡಿ ತರಿಸಲೂ ಇದನ್ನು ಬಳಸುತ್ತಾರೆ. ಅಂತೂ ಅದರ ಮೇಲಿನ ಅವಲಂಬನೆ ಮತ್ತು ಪರಿಣಾಮ ಇಂದಿನ ಪ್ರಯಾಣದಲ್ಲಿ ಗೊತ್ತಾಗುತ್ತಿದೆ ಎಂಬ ಮಾತುಗಳೂ ಚರ್ಚೆಗೆ ಬಂದಿತು. ಹೀಗಿರುವಾಗ ಹಿರಿಯರತ್ತ ಹಲವು ಪ್ರಶ್ನೆಗಳು ಬಂದವು. ತಮಗೆ ಯಾವ ವಿಷಯಗಳನ್ನು ಯಾವಾಗ ಯಾರು ಹೇಳಿಕೊಡುತ್ತಿದ್ದರು? ಬಾಯಿಪಾಠದಲ್ಲಿ ಏನೇನು ಕಲಿಯುತ್ತಿದ್ದಿರಿ ಎಂದಾಗ "ನಮ್ಮ ಹಿರಿಯರಿಗೆ ಸದಾ ಗದ್ದೆ, ತೋಟ, ಪಂಚಾಯಿತಿ, ಕೋರ್ಟ್ ಕಛೇರಿ. ಹೀಗೆ ಹಲವು ಕಡೆ ಕೆಲಸವಿರುತ್ತಿತ್ತು. ಆದರೂ ಒಂದು ದಿನವೂ ಬಿಡದೆ ಮಕ್ಕಳಿಗೆ ಬಾಯಿಪಾಠ ಮಾತ್ರ ಹೇಳಿ ಕೊಡುವುದನ್ನು ಮರೆಯುತ್ತಿರಲಿಲ್ಲ. ಅದೂ ಆಯಾ ಮಕ್ಕಳ ವಯಸ್ಸಿಗೆ ತಕ್ಕಂತೆ ಅಂದರೆ ಚಿಕ್ಕವರಿಗೆ ವಾರಗಳ ಹೆಸರು, ಬೆನಕನ ಪ್ರಾರ್ಥನೆ, ಕೆಲವರಿಗೆ ಪಾಡ್ಯ, ಬಿದಿಗೆ, ತದಿಗೆ. ಹೀಗೆ ಹುಣ್ಣಿಮೆ - ಅಮಾವಾಸ್ಯೆಯವರೆಗಿನ ತಿಥಿಗಳನ್ನು ಕಂಠಪಾಠ ಮಾಡಿಸುತ್ತಿದ್ದರು. ಮತ್ತೆ ಕೆಲವರಿಗೆ ಮಗ್ಗಿ ಜೊತೆಗೆ ದೇವರ ಶ್ಲೋಕ. ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಅದರ ಪ್ರಾಮುಖ್ಯತೆ ಹೇಳಿಕೊಡುತ್ತಿದ್ದರು. ಅಂದಿನ ದಿನಗಳಲ್ಲಿ ಅಗತ್ಯವಿದ್ದ ಮಂತ್ರ, ಸ್ತೋತ್ರ, ಲೆಕ್ಕಾಚಾರ, ಮಾಯಾ ಗಣಿತಗಳು, ವೇದ ಗಣಿತ, ಸ್ವಾರಸ್ಯಕರ ಪುರಾಣ ಕಥೆಗಳು ಹೀಗೆ ಹಲವು ವಿಷಯಗಳನ್ನು ಬಾಯಿಪಾಠದ ಮೂಲಕವೇ ಕಲಿಯುತ್ತಿದ್ದೆವು. ನಮಗೆ ಉಪಯುಕ್ತ ವಿಷಯಗಳು ಚೆನ್ನಾಗಿ ಗೊತ್ತಿದೆ ಎಂದಾದರೆ ಸಹಜವಾಗಿ ಆತ್ಮ ವಿಶ್ವಾಸ ಹೆಚ್ಚಾಗುತ್ತಿತ್ತು. ನಾಲ್ಕು ಜನರು ಮಾತನಾಡುತ್ತಿದ್ದಾಗ ನಾವೂ ಮಾತನಾಡಲೂ ಧೈರ್ಯ ಬರುತ್ತಿತ್ತು ಎಂದರು". ಇದನ್ನು ಕೇಳಿದ ಕೆಲವು ಯುವಕರು ಅಂತಹಾ ಬಾಯಿಪಾಠದಲ್ಲಿ ಕೆಲವನ್ನಾದರೂ ನಮಗೆ ಹೇಳಿರಿ, ನಾವೂ ಸ್ವಲ್ಪ ಕಲಿಯಬಹುದು. ಹೇಗೂ ಮಧ್ಯೆ ಮಧ್ಯೆ ತೊಂದರೆ ಆಗದಿರಲು ಅಥವಾ ಸಮಯ ಕಳೆಯಲು ವಾಟ್ಸಾಪ್, ಫೇಸ್ ಬುಕ್ ಗಳಿಲ್ಲ, ಫೋನ್ ಕರೆಗಳಂತೂ ಇಲ್ಲವೇ ಇಲ್ಲ. ಮೊಬೈಲ್ ಇಲ್ಲದಿರುವುದು ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ ಎಂದು ಹೇಳಿಕೊಂಡರು.

ಹಿರಿಯರೊಬ್ಬರು ಹೇಳಲು ಪ್ರಾರಂಭಿಸಿದರು. ಎಲ್ಲವಕ್ಕೂ ಮೊದಲು ಬಾಯಿಪಾಠ ಎಂದರೇನು ಎಂಬುದನ್ನು ಅರಿಯೋಣ. ನಮ್ಮ ಜೀವನಕ್ಕೆ ಅನಿವಾರ್ಯವಾದ ವಿಷಯಗಳು ಅಂದರೆ ಬೇಕೇ ಬೇಕು ಎನ್ನುವುದನ್ನು ಪದೇ ಪದೇ ಹೇಳಿ ಅಭ್ಯಾಸ ಮಾಡಿಕೊಳ್ಳುವುದು. ಬೇರೆಯವರು ಹೇಳಿ ಕೊಟ್ಟಿದ್ದನ್ನು ಗಟ್ಟಿಯಾಗಿ ನಮಗೇ ಕೇಳುವಂತೆ ಹೇಳಿ ಕಲಿತರೆ ಕಲಿತಿದ್ದು ಸದಾ ನೆನಪಿನಲ್ಲಿರುತ್ತದೆ. ಬೇಕಾದರೆ ನೀವೂ ನಿಮ್ಮ ಮಕ್ಕಳಿಗೆ ಆಯಾ ವಯಸ್ಸಿಗೆ ತಕ್ಕಂತೆ, ಚಿಕ್ಕವರಿಗೆ ಅವರ ಹೆಸರು, ಅಪ್ಪ, ಅಮ್ಮ, ಅಜ್ಜ ಅಜ್ಜಿ ಹೆಸರು, ಮನೆ ವಿಳಾಸ ಕಲಿಸುವುದು. ನಂತರದ ವಯಸ್ಸಿನವರು ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳು, ಕಾಲ ಅಥವಾ ಸಮಯವನ್ನು ತಿಳಿದುಕೊಳ್ಳುವುದು, ಅದರಲ್ಲಿ ವಾರ, ತಿಥಿ, ಮಾಸ, ತಿಂಗಳು, ವರ್ಷ, ಹಬ್ಬಗಳು, ಎಣಿಕೆ ಹಾಗೂ ಲೆಕ್ಕಗಳನ್ನು ಪುಸ್ತಕವನ್ನು ನೋಡದೆ ಹೇಳಲು ಕಲಿಯುವುದಕ್ಕೆ ಕಲಿಸಬಹುದು. ಜೊತೆಗೆ ದೇವರನ್ನು ಪ್ರಾರ್ಥಿಸಲು ಕೆಲವು ಮಂತ್ರಗಳನ್ನು ಹೇಳಿಕೊಡಬಹುದು. ಇದನ್ನೇ ಬಾಯಿಪಾಠ ಎನ್ನುತ್ತಾರೆ, ಎಂದರು. ಸಂಡೇ, ಮಂಡೇ ಹೀಗೆ ವಾರವನ್ನು, ಜನವರಿಯಿಂದ ಡಿಸೆಂಬರ್ ವರೆಗೆ ತಿಂಗಳುಗಳನ್ನು ಹೇಳುವುದು, ಇದರಂತೆಯೇ ಒನ್ - ಹಂಡ್ರೆಡ್ ಮತ್ತು ಟು - ಟ್ವೆಂಟಿ ಟೇಬಲ್ ಗಳನ್ನು ಬೈಹಾರ್ಟ ಮಾಡಿಸಬಹುದು. ಇದಲ್ಲದೆ ಮುಖ್ಯವಾಗಿ ಬೇಕೆನಿಸುವುದನ್ನು ಪುಸ್ತಕ ನೋಡದೆ ಹೇಳುವುದನ್ನು ಕಲಿತರೆ ಅದೇ ಬಾಯಿಪಾಠ. ಬಾಯಿಪಾಠದಲ್ಲಿ ಮಕ್ಕಳಿಗೆ ವಿಜ್ಞಾನ ಮತ್ತು ಲೆಕ್ಕವನ್ನು ಸೂಕ್ಷ್ಮವಾಗಿ ಕಲಿಸಿಕೊಡುತ್ತಿದ್ದ ಪ್ರಯತ್ನ ತುಂಬಾ ಶ್ಲಾಘನೀಯ.

ಇಂಗ್ಲಿಷ್ ನ  ವೀಕ್ ಎಂಬುದಕ್ಕೆ ಕನ್ನಡದಲ್ಲಿ ವಾರ ಎಂದು ಕರೆಯುವುದು ನಿಮಗೆ ಗೊತ್ತೇ ಇದೆ. ಆದರೂ ಕೇಳಿ. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಹೀಗೆ ದಿನಗಳನ್ನು ಕಲಿಸಬಹುದು. ಇನ್ನು ನಾವು ಕಲಿತಿದ್ದನ್ನು ಹೇಳುತ್ತೇವೆ.

ಕಾಲದ ಮಾನದಂಡಗಳಾದ ಹಗಲು ರಾತ್ರಿಗಳು ಸೂರ್ಯ ಚಂದ್ರರ ಮೇಲೆ ಆಧರಿಸಿದ್ದು ಅವುಗಳ ಬಗ್ಗೆ ಕೆಳಕಂಡಂತೆ ವಿವರಿಸಿದ್ದಾರೆ. ಚಂದ್ರನು ಭೂಮಿಯನ್ನು ಒಂದು ದಿನದಲ್ಲಿ  ಸುತ್ತಲು ಬೇಕಾದ ಅವಧಿಯೇ ತಿಥಿ. ಭೂಮಿಯು ತನ್ನ ಅಕ್ಷದ ಸುತ್ತ ಸುತ್ತಲು ಬೇಕಾದ ಅವಧಿ ೨೪ ಘಂಟೆಗಳ ಒಂದು ದಿನವಾದರೆ, ಹೀಗೆ ಏಳು ಬಾರಿ ಸುತ್ತುವ ಅವಧಿಯೇ ವಾರ. ಇವು ಭಾನುವಾರ, ಸೋಮವಾರ, ಇತ್ಯಾದಿ. ಏಳು ದಿನಗಳ ನಂತರ ಪುನಃ ಪುನರಾವರ್ತನೆಯಾಗುವುದು. ಸೂರ್ಯನ ಸುತ್ತ ಇರುವ ಮುಖ್ಯ ನಕ್ಷತ್ರಗಳು ಇಪ್ಪತ್ತೇಳು. ಇವೇ ಅಶ್ವಿನಿ, ಭರಣಿ, ಇತ್ಯಾದಿ. ಸೂರ್ಯ ಚಂದ್ರರು ನಿರ್ಧಿಷ್ಟ ಕೋನದಲ್ಲಿ ಸಮೀಪಕ್ಕೆ ಬರುವುದನ್ನು ಯೋಗ ಎನ್ನುವರು. ಇವು ಇಪ್ಪತ್ತೇಳು ರೀತಿ ಇವೆ. ಈ ಚಲನೆಯನ್ನು ಅಳತೆ ಮಾಡುವ ಮಾನದಂಡವೇ ಕರ್ಣ ಅಥವಾ ಕರಣ.

ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ  ಮತ್ತು ಹುಣ್ಣಿಮೆ ಎಂದು ತಿಂಗಳ ಮೊದಲ ಹದಿನೈದು ತಿಥಿಗಳನ್ನು ಕರೆದು ಅದನ್ನು ಶುಕ್ಲ ಪಕ್ಷ ಎನ್ನುತ್ತಾರೆ. ಅದನ್ನೇ ‌ಮತ್ತೆ ಮುಂದುವರಿಸುತ್ತಾ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಠಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ಮತ್ತು ಅಮಾವಾಸ್ಯೆ ಎಂದು ಮುಂದಿನ ಹದಿನೈದು ತಿಥಿಗಳನ್ನು ಕೃಷ್ಣ ಪಕ್ಷ ಎನ್ನುತ್ತಾರೆ. ಶುಕ್ಲಪಕ್ಷ ವನ್ನು ಶುದ್ಧ ಎಂದೂ, ಕೃಷ್ಣ ಪಕ್ಷವನ್ನು ಬಹುಳ ಎಂದೂ ಕರೆಯುವರು.

ಹೀಗೆ ಒಂದು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಸೇರಿದರೆ ಅದು ಮಾಸವಾಗುತ್ತದೆ. ಅವುಗಳು ಹನ್ನೆರಡು ಇದ್ದು ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಮತ್ತು ಫಾಲ್ಗುಣ ಎಂದು ಅವನ್ನು ಮಾಸ ಎಂದು ಗುರುತಿಸುತ್ತಾರೆ. ಇದನ್ನು ತಿಂಗಳು ಎಂದೂ ಕರೆಯಬಹುದು. ಶುಕ್ಲ ಪಕ್ಷದಲ್ಲಿ ಆಕಾಶವನ್ನು ನೋಡಿದಾಗ ಪಾಡ್ಯದಿಂದ ಆರಂಭಿಸಿ ಚಂದ್ರನು ದೊಡ್ಡದಾಗುತ್ತಾ ಹುಣ್ಣಿಮೆಯಂದು ಪೂರ್ಣ ಚಂದ್ರನಾಗಿ ಕಾಣುತ್ತಾನೆ. ಆ ರಾತ್ರಿ ಬೆಳದಿಂಗಳು ಇರುತ್ತದೆ. ಹುಣ್ಣಿಮೆಯ ಮರುದಿನದಿಂದ ಚಂದ್ರನು ಸಣ್ಣದಾಗಿ ಕಾಣುತ್ತಾ ಅಮವಾಸ್ಯೆಯ ದಿವಸದಂದು ಪೂರ್ತಿಯಾಗಿ ಕಾಣದಾಗುವನು. ಆದ್ದರಿಂದ ಅಂದು ಪೂರ್ಣ ಕತ್ತಲು ಇರುತ್ತದೆ.

ಇನ್ನು ಎರಡೆರಡು ಮಾಸ ಅಥವಾ ತಿಂಗಳುಗಳ ಜೋಡಿಗೆ ಒಂದು ಋತು ಎನ್ನುತ್ತಾರೆ. ವರ್ಷಕ್ಕೆ ೬ ಋತುಗಳು ಇವೆ. ಅವುಗಳನ್ನು ಚೈತ್ರ ವೈಶಾಖಕ್ಕೆ ವಸಂತ ಋತು, ಜೇಷ್ಠ ಆಷಾಡಕ್ಕೆ ಗ್ರೀಷ್ಮ ಋತು, ಶ್ರಾವಣ ಭಾದ್ರಪದಕ್ಕೆ ವರ್ಷ ಋತು, ಆಶ್ವಯುಜ ಕಾರ್ತೀಕಕ್ಕೆ ಶರದೃತು, ಮಾರ್ಗಶಿರ ಪುಷ್ಯಕ್ಕೆ ಹೇಮಂತ ಋತು, ಮಾಘ ಫಾಲ್ಗುಣಕ್ಕೆ ಶಿಶಿರ ಋತು ಎಂದು ಕರೆಯುತ್ತಾರೆ.

ಹಾಗೆಯೇ ವರ್ಷವನ್ನು ಎರಡು ಭಾಗ ಮಾಡಿ ಅವನ್ನು ಉತ್ತರಾಯನ ಹಾಗೂ ದಕ್ಷಿಣಾಯನಗಳೆಂದು ಹೇಳುತ್ತಾರೆ.  ಉತ್ತರಾಯನವು ಪ್ರತೀ ವರ್ಷದ ಜನವರಿಯಲ್ಲಿ ಬರುವ ಸಂಕ್ರಾಂತಿಯಿಂದ ಆರಂಭವಾಗುವುದು. ಅದು ಜುಲೈವರೆಗೆ ಇದ್ದು ಆ ತಿಂಗಳಲ್ಲಿ ಬರುವ ಇನ್ನೊಂದು ಸಂಕ್ರಾಂತಿ ದಿನದಿಂದ ನಂತರದ ಆರು ತಿಂಗಳನ್ನು ದಕ್ಷಿಣಾಯನ ಎನ್ನುತ್ತಾರೆ.  

ಈ ಎಣಿಕೆ ಪದ್ಧತಿಯಲ್ಲಿ ಅರವತ್ತು ವರ್ಷಗಳನ್ನು ಕ್ರಮವಾಗಿ ಹೇಳುತ್ತಾ ಅವುಗಳನ್ನು ಸಂವತ್ಸರಗಳು ಎನ್ನುವರು. ಈ ಸಂವತ್ಸರದ ಹೆಸರುಗಳು ಹೀಗಿವೆ: ಪ್ರಭವ, ವಿಭವ, ಶುಕ್ಲ, ಪ್ರಮೋದ, ಪ್ರಜೋತ್ಪತ್ತಿ, ಅಂಗೀರಸ, ಶ್ರೀಮುಖ, ಭಾವ, ಯುವ, ಧಾತೃ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ, ಚಿತ್ರಭಾನು, ಸ್ವಭಾನು, ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರೀ, ವಿರೋಧಿ, ವಿಕೃತಿ, ಖರ, ನಂದನ, ವಿಜಯ, ಜಯ, ಮನ್ಮಥ, ದುರ್ಮುಖಿ, ಹೇಮಳಂಬಿ, ವಿಳಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್  ಶೋಭಕೃತು, ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಿಕೃತ್, ಪರೀಧಾವಿ, ಪ್ರಮಾದೀಚ, ಆನಂದ, ರಾಕ್ಷಸ, ನಳ, ಪೈಂಗಳ, ಕಾಳಯುಕ್ತಿ, ಸಿದ್ಧಾರ್ಥಿ, ರೌದ್ರಿ, ದುರ್ಮುಖಿ, ದುಂದುಭಿ, ರುದಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ,  ಅಕ್ಷಯ - ಇವು ಅರವತ್ತು ಸಂವತ್ಸರಗಳ ಹೆಸರುಗಳು. ಇವು ಮುಗಿದ ಮೇಲೆ ಮೊದಲಿನಿಂದ ಅಂದರೆ ಪ್ರಭವ, ವಿಭವ ಎಂದು ಪುನಃ ಪ್ರಾರಂಭಿಸುತ್ತಾರೆ.

ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಖ, ಪುಬ್ಬಾ, ಉತ್ತರಾ, ಹಸ್ತಾ, ಚಿತ್ತಾ, ಸ್ವಾತಿ, ವಿಶಾಖ, ಅನೂರಾಧ, ಜ್ಯೇಷ್ಠ, ಮೂಲ, ಪೂರ್ವಾಷಾಢಾ, ಉತ್ತರಾಷಾಢಾ, ಶ್ರವಣ, ಧನಿಷ್ಠ, ಶತಭಿಷ, ಪೂರ್ವಾಭಾದ್ರಾ, ಉತ್ತರಾಭಾದ್ರಾ ಮತ್ತು ರೇವತಿ ಇವುಗಳು ಇಪ್ಪತ್ತೇಳು ನಕ್ಷತ್ರಗಳು.

ಇವೆಲ್ಲವೂ ಮನೆಯಲ್ಲಿ ಯುಗಾದಿ ದಿನದಂದು ಪೂಜಿಸುವ ಪಂಚಾಂಗದಲ್ಲಿ ಇರುತ್ತದೆ, ಈ ಪಂಚಾಂಗದಲ್ಲಿ ಸೂರ್ಯನ ಒಂದು ವರ್ಷದ ಚಲನೆಯನ್ನು ಸಂವತ್ಸರ ಎಂದು ಕರೆದು ಆ ಚಲನೆಯ ದೂರವನ್ನು ವಾರ, ತಿಥಿ, ನಕ್ಷತ್ರ, ಕರಣ ಮತ್ತು ಯೋಗ ಎಂದು ವಿವಿಧ ಮಾನಗಳಲ್ಲಿ ಅಳತೆ ಮಾಡುತ್ತಾರೆ. ಹೀಗೆ  ಪ್ರತಿ ದಿನವೂ ಬದಲಾಗುವ ಸಮಯದ ಐದು ಅಂಗಗಳನ್ನು ತಿಳಿಸುವ ಒಂದು ಕೋಷ್ಟಕವೇ ಪಂಚಾಂಗ. ಇದೊಂದು ವಿಶೇಷ ಲೆಕ್ಕಾಚಾರ. ವರ್ಷದಲ್ಲಿ ೩೬೫ ದಿನಗಳಿದ್ದು ಅವುಗಳಲ್ಲಿ ಬರುವ ಪ್ರತಿ ಕ್ಷಣ ಅಥವಾ ಸೆಕೆಂಡುಗಳನ್ನು ಗುರುತಿಸಲು ವಿವಿಧ ಲೆಕ್ಕದಲ್ಲಿ ಭಾಗವನ್ನಾಗಿ ಮಾಡಿದ್ದಾರೆ. 

ಲೆಕ್ಕಾಚಾರ ಅಥವಾ ಗಣಿತಕ್ಕೆ ಬೇಕಾದ ೧ ರಿಂದ ೧೦೦ ರ ವರೆಗೆ ಎಲ್ಲಾ ಅಂಕೆ ಸಂಖ್ಯೆಗಳನ್ನು ತಿಳಿಯೋಣ. ೧ ರಿಂದ ೯ ರವರೆಗೆ ಅಂಕೆ ಎಂದೂ ೧೦ ರಿಂದ ಮುಂದಿನ ಎಲ್ಲವನ್ನೂ ಸಂಖ್ಯೆ ಎಂದು ಕರೆಯುತ್ತಾರೆ. ಈಗ ಎರಡರಿಂದ ಮಗ್ಗಿ ಕಲಿಯಿರಿ. ಉದಾಹರಣೆಗೆ ಎರಡೊಂದಲೆ ಎರಡು, ಎರಡೆರಡಲೆ ನಾಲ್ಕು, ಎರಡು ಮೂರಲೇ ಆರು ಎಂದು ಹೇಳುತ್ತಾ ಎರಡು ಹತ್ತಲೇ ಇಪ್ಪತ್ತು ಎಂದು ಹೀಗೆ ಇಪ್ಪತ್ತರ ಮಗ್ಗಿಯವರೆಗೂ ಪುಸ್ತಕ ನೋಡದೆ ಹೇಳಲು ಬರಬೇಕು ಎಂದರು. ಒಮ್ಮೆ ಹೀಗೆ ಹೇಳಲು ಕಲಿತರಾದರೆ ಎಂತಹಾ ಲೆಕ್ಕಗಳನ್ನು ಪೆನ್ನು ಪುಸ್ತಕವಿಲ್ಲದೆ ಮಾಡಬಹುದು. ಅಲ್ಲವೇ. ಸಾಮಾನ್ಯವಾಗಿ ವ್ಯವಹಾರದಲ್ಲಿ ತೂಕ, ಅಳತೆ ಮತ್ತು ಸಮಯವನ್ನು ಎಲ್ಲರೂ ತಿಳಿದು ಕೊಳ್ಳುವುದು ಮುಖ್ಯ. ಈಗಾಗಲೇ ವಾರ, ತಿಥಿ, ಮಾಸ ಸಂವತ್ಸರಗಳಲ್ಲಿ ಕಾಲವನ್ನು ಹೇಳಿದ್ದೇನೆ. ತೂಕದ ಅಳತೆಯಲ್ಲಿ ಹಿಂದಿನ ಕಾಲದಲ್ಲಿ ಪಾವು, ಸೇರು, ಪಲ್ಲ ಎಂದು ಅಳತೆಯಿದ್ದು ಸ್ವಲ್ಪ ಬದಲಾವಣೆಯೊಂದಿಗೆ ೧೦೦೦ ಗ್ರಾಂ ಗಳಿಗೆ ಒಂದು ಕಿಲೋಗ್ರಾಂ ಅಥವಾ ಕೆಜಿ, ನೂರು ಕೆಜಿಗಳಿಗೆ ಒಂದು ಕ್ವಿಂಟಾಲ್ ಎಂದು ತೂಕಕ್ಕೆ ಬದಲಾಯಿತು. ಹಾಗೆಯೇ ದೂರದ ಅಳತೆಯಲ್ಲಿ ಹನ್ನೆರಡು ಅಂಗುಲಗಳ ಅಡಿ, ಮೂರು ಅಡಿಗಳ ಗಜ, ನಂತರದ ಫರ್ಲಾಂಗ್ ಹಾಗೂ ಮೈಲಿಗಳು ಎಂದು ಕಲಿತಿದ್ದೆವು. ಇವು ಬದಲಾಗಿ ೧೦೦೦ ಮಿಲಿಮೀಟರ್ ಗಳಿಗೆ ಒಂದು ಮೀಟರ್ ಹಾಗೂ ೧೦೦೦ ಮೀಟರ್ ಗಳಿಗೆ ಒಂದು ಕಿಲೋಮೀಟರ್ ಮೂಲಮಾನಗಳಾಗಿವೆ. ಇವೇ ಕನ್ನಡದಲ್ಲಿ ಬಾಯಿಪಾಠದ ಮುಖ್ಯ ವಿಷಯಗಳಾಗಿದ್ದವು. ಇದನ್ನು ಇಂದಿನ ಇಂಗ್ಲಿಷ್ ತರಗತಿಗೆ ತಕ್ಕಂತೆ ಕಲಿಯಬಹುದು.

ಕುತೂಹಲಕ್ಕೆ ಕೆಲವು ತಿಥಿಗಳ ಬಗ್ಗೆ ಹೇಳುವುದಾದರೆ ವಿವಿಧ ದಿನಗಳಂದು ಅಥವಾ ತಿಥಿಗಳಂದು ಹಬ್ಬಗಳು ಪ್ರತಿವರ್ಷ ಬರುತ್ತವೆ, ಹೋಗುತ್ತವೆ. ಆದರೆ ಅವುಗಳ ಆಚರಣೆಯ ಹಿಂದಿನ ಅರ್ಥ, ವೈಜ್ಞಾನಿಕ ಅಂಶಗಳನ್ನು ಅರಿತು ಆಚರಿಸಿದಾಗ ಅದು ಅರ್ಥಪೂರ್ಣ ಆಚರಣೆಯಾಗುತ್ತದೆ. ಸೂಕ್ಷ್ಮವಾಗಿ ಕೆಲವು ಪ್ರಮುಖ ತಿಥಿಗಳನ್ನು ಹೇಳುವುದಾದರೆ ಪಾಡ್ಯ-ಯುಗಾದಿ ಪಾಡ್ಯ, ಬಿದಿಗೆ-ಭಾವನ ಬಿದಿಗೆ (ಭಾತೃ ಬಿದಿಗೆ), ತದಿಗೆ-ಅಕ್ಷಯ ತದಿಗೆ, ಚೌತಿ-ಗಣೇಶನ ಚೌತಿ, ಪಂಚಮಿ-ನಾಗರ ಪಂಚಮಿ, ಷಷ್ಠಿ-ಸುಬ್ರಹ್ಮಣ್ಯ ಷಷ್ಟಿ,  ಸಪ್ತಮಿ-ರಥ ಸಪ್ತಮಿ,  ಅಷ್ಟಮಿ-ಗೋಕುಲಾಷ್ಟಮಿ, ನವಮಿ-ರಾಮನವಮಿ, ದಶಮಿ-ವಿಜಯ ದಶಮಿ, ಏಕಾದಶಿ-ಪ್ರಥಮೇಕಾದಶಿ, ದ್ವಾದಶಿ-ಉತ್ಥಾನ ದ್ವಾದಶಿ, ತ್ರಯೋದಶಿ-ಶನಿ ತ್ರಯೋದಶಿ, ಚತುರ್ದಶಿ-ಅನಂತ ಪದ್ಮನಾಭ ಚತುರ್ದಶಿ, ಹುಣ್ಣಿಮೆ-ನೂಲ ಹುಣ್ಣಿಮೆ, ಅಮಾವಾಸ್ಯೆ-ಭೀಮನ ಅಮಾವಾಸ್ಯೆ ಎನ್ನಬಹುದು. ಇವೇ ವಿಶೇಷ ಹಬ್ಬದ ದಿನಗಳು.

ತಮಾಷೆಯೆಂದರೆ ಆ ಕಾಲದಲ್ಲಿ ಇದ್ದ ಬ್ರಿಟಿಷ್ ಅಧಿಕಾರಿಯು ಕೆಟ್ಟ ಸಮಯ ಎಂದು ಭಾವಿಸಲಾಗುವ ರಾಹುಕಾಲವನ್ನು ನೆನಪಿನಲ್ಲಿಟ್ಟುಕೊಳ್ಳವ ಮಾರ್ಗವನ್ನು ಕೇಳಿದಾಗ ಇಲ್ಲಿನ ಹಿರಿಯರು ಅವರಿಗೆ ಹೇಳಿಕೊಟ್ಟ ಲೆಕ್ಕಾಚಾರದ ವಾಕ್ಯ ಇಂದಿಗೂ ನಾವು ಆಸಕ್ತಿಕರವಾಗಿದ್ದು ನಾವೂ ಕಲಿಯಬಹುದಾಗಿದೆ. ಆ ಅಧಿಕಾರಿಯ ಇಂಗ್ಲಿಷ್ ಭಾಷೆಯಲ್ಲಿ EDWARD BAUGHT HOME A GOOD FORD CAR ಎಂಬ ವಾಕ್ಯ ಕಲಿಯಿರಿ.  ಸೋಮವಾರದಿಂದ, ಸೋಮವಾರ ಅಂದರೆ Monday ಎಂದರೆ EDWARD, Tuesday ಎಂದರೆ BOUGHT ಎಂದುಕೊಂಡು ಪ್ರತಿ ದಿನಕ್ಕೆ ಈ  ವಾಕ್ಯದ ಒಂದೊಂದು ಪದವನ್ನು ಹೊಂದಿಸಿ ಓದಿರಿ. Edward ಪದದ ಮೊದಲ ಅಕ್ಷರ ೫ ನೇ ಯದು. ಆ ಐದರ ಅರ್ಧವನ್ನು ಅದಕ್ಕೆ ಕೂಡಿಸಿದಾಗ ಏಳೂವರೆ ಯಾಗುತ್ತದೆ. ಇದು ರಾಹುಕಾಲವು  ಪ್ರಾರಂಭವಾಗುವ ಸಮಯ. ರಾಹುಕಾಲವು ಯಾವಾಗಲೂ ಸಾಮಾನ್ಯವಾಗಿ ಒಂದೂವರೆ ಘಂಟೆಗಳ ಅವಧಿಗೆ ಇರುತ್ತದೆ. ಆದ್ದರಿಂದ ಏಳೂವರೆಯಿಂದ ಒಂಭತ್ತು ಗಂಟೆವರೆಗೂ ಅಂದಿನ ರಾಹುಕಾಲ. ಅದರಂತೆ ಮಂಗಳವಾರಕ್ಕೆ B ಯಿಂದ ಪ್ರಾರಂಭವಾದ ಎರಡನೇ ಅಕ್ಷರ. ಅದಕ್ಕೆ ಅದರ ಅರ್ಧ ಸೇರಿಸಿದಾಗ ೩ ಗಂಟೆಯಾಗುವುದು. ಅಂದು ೩ರಿಂದ ನಾಲ್ಕೂವರೆ ಯವರೆಗೆ. ಹೀಗೆ ವಾರದ ಎಲ್ಲಾ ದಿನಗಳಲ್ಲೂ ರಾಹುಕಾಲ ಹೇಳಬಹುದು ಎಂದು ಹೇಳಿಕೊಟ್ಟಿದ್ದರು. ಹೀಗೆ ಹಲವು ಕುತೂಹಲಕಾರಿ ಸುಲಭದ ಲೆಕ್ಕವನ್ನು ಕೇಳಿ ಎಲ್ಲರೂ ಮೆಚ್ಚುವ ಮಾತುಗಳು ಕೇಳಿಬಂದವು.

ಹಲವರ ಮೆಚ್ಚುಗೆಯ ಮಾತನ್ನು ಕೇಳಿದ ಒಬ್ಬರಿಗೆ ಏನೆನಿಸಿತೋ ಏನೋ ಅವರು "ಈ ಕಾಲಕ್ಕೆ ಇವೆಲ್ಲವೂ ದಂಡ. ಸಮಯ ಹಾಳು. ಇವೆಲ್ಲವೂ ಅಡುಗೂಲಜ್ಜಿ ಕಾಲದವು. ಈಗ ಇಂತಹಾ ಕಥೆಗಳು ಬೇಕೇ? ಈಗ ಏನು ಬೇಕಾದರೂ ಮೊಬೈಲ್ ಇರುತ್ತದೆ. ಗೂಗಲ್ ಇರುತ್ತದೆ. ಮೊಬೈಲ್ ಮುಂದೆ ಯಾವುದೂ ಇಲ್ಲ, ಸದ್ಯಕ್ಕೆ ಮೊಬೈಲ್ ನಲ್ಲಿ ಚಾರ್ಜ್ ಇಲ್ಲದ್ದು ತೊಂದರೆ ಆಗಿದೆ ಅಷ್ಟೇ" ಎಂದರು. ಅದನ್ನು ಕೇಳಿದ ಒಬ್ಬ ಹಿರಿಯರು ಆಡುಗೂಲಜ್ಜಿ ಬಗ್ಗೆ ನಿಮಗೆ ಗೊತ್ತಿದ್ದನ್ನು ಹೇಳಿರಿ ಎಂದರು. ಅದಕ್ಕೆ ಅವರು "ತಮಗೆ ಸರಿಯಾಗಿ ಗೊತ್ತಿಲ್ಲ, ಎಲ್ಲರೂ ಹೇಳುತ್ತಾರೆ ಎಂದು ಹೇಳಿದೆ ಅಷ್ಟೇ" ಎಂದು ಹೇಳಿದ ಅವರಿಗೆ ಹಿರಿಯರು ಒಂದು ಬಹಳ ಸೊಗಸಾದ ಕಥೆ ಹೇಳಿದರು. ಅಡಗೂಲಜ್ಜಿ ಕಥೆ ಎಂದರೆ ಅದೂ ಒಂದು ರೀತಿಯಲ್ಲಿ ಅಂದಿನ ಗೂಗಲ್ ಎನ್ನಬಹುದು. ಆದರೂ ಎಲ್ಲಿ ಯಾವ ಮಾಹಿತಿ ದೊರೆತರೂ ವಿವೇಚನೆ ಮಾತ್ರ ಎಲ್ಲಾ ಕಾಲದಲ್ಲೂ ಬೇಕೇ ಬೇಕು ಎಂದು ಮುಂದುವರೆಸಿದರು.

ಹಿಂದಿನ ಕಾಲದಲ್ಲಿ ಹಳ್ಳಿಯಲ್ಲಿ ಈಗಿನಂತೆ ಹೋಟೆಲ್ ಗಳಿರಲಿಲ್ಲ. ಆದರೆ ಪರ ಊರಿನಿಂದ ಹಲವಾರು ಉದ್ದೇಶಗಳಿಗೆ ಬರುವ ಜನರಿದ್ದರು. ದಿನಸಿ ವರ್ತಕರು, ಮರಮಟ್ಟುಗಳ ವ್ಯಾಪಾರಿಗಳು, ಕುದುರೆ ಹಸು ಕುರಿಗಳ ವ್ಯಾಪಾರಿಗಳು, ಜ್ಯೋತಿಷಿಗಳು, ಲೇವಾದೇವಿಗಾರರು, ಊರಿಂದ ಊರಿಗೆ ಹಾದುಹೋಗುವ ದಾರಿಹೋಕರು ಇತ್ಯಾದಿ. ಹೀಗೆ ವಿವಿಧ ಉದ್ದೇಶಗಳಿಗೆ ಓಡಾಡುವ ಜನರಿಗೆ ಊಟೋಪಚಾರಗಳಿಗೆ ತೊಂದರೆಯಾಗುತ್ತಿತ್ತು. ಈ ಸಮಯದಲ್ಲಿ ಯಾರಾದರೂ ಅಡಿಗೆ ಮಾಡುವವರನ್ನು ಆಶ್ರಯಿಸುವುದು ಸಹಜವಾಗಿತ್ತು. ಇಂತಹಾ ಕಾಲದಲ್ಲಿ ಆರ್ಥಿಕ ದುರ್ಬಲರೂ ಹಾಗೂ ಇಳಿವಯಸ್ಸಿನಲ್ಲಿ ತಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ಇಲ್ಲದ ಹಿರಿಯ ಮಹಿಳೆಯರು ಕೆಲವರು ಜೀವನೋಪಾಯಕ್ಕಾಗಿ ತಾವು ಬಲ್ಲಂತಹ ಊಟ ಉಪಹಾರಗಳನ್ನು ಮಾಡಿ ಬಡಿಸುತ್ತಿದ್ದರು. ಅದಕ್ಕೆ ಪ್ರತಿಯಾಗಿ ವಸ್ತುಗಳನ್ನೋ, ಹಣವನ್ನೋ ಪಡೆಯುತ್ತಿದ್ದರು. ಆಹಾರವನ್ನು ಬೇಯಿಸುವುದನ್ನು ಅಡಿಗೆ ಮಾಡುವದು ಎಂದೂ, ಅನ್ನ ಅಥವಾ ಊಟಕ್ಕೆ ಕೂಳು ಎಂದೂ ಕರೆಯುತ್ತಾರೆ. ಕೂಳನ್ನು ಅಡಿಗೆ ಮಾಡುವ ಅಜ್ಜಿಯು ಅಡಿಗೆ ಕೂಳು ಅಜ್ಜಿಯಾಗಿ ಕರೆಯುವಾಗ ಅಡುಕೂಳಜ್ಜಿ ಆದರು. ವಾಡಿಕೆಯಲ್ಲಿ ಅಡುಗೂಲಜ್ಜಿಯಾಗಿ ಮಾರ್ಪಟ್ಟರು. ಇನ್ನು ಊರಿಂದ ಊರಿಗೆ ನಡೆದು ಬರುವವರು, ಕುದುರೆ ಸವಾರಿ, ಎತ್ತಿನಗಾಡಿಯಲ್ಲಿ ಬರುತ್ತಿದ್ದವರು ಕಾಡಿನ ಮೂಲಕ ಬರಬೇಕಾಗಿತ್ತು. ಸಮಯ ಮೀರಿದಾಗ ಕೆಲವೊಮ್ಮೆ ಕಾಡಿನಲ್ಲಿ ಉಳಿಯಲೂ ಬೇಕಾಗಿತ್ತು. ಇಂತಹಾ ಸಮಯದಲ್ಲಿ ಕಳ್ಳಕಾಕರ ಉಪಟಳ, ರಾತ್ರಿಯಲ್ಲಿ ಕಾಲ ಕಳೆಯುವಾಗ ಹೆದರಿಕೆಯ ಅನುಭವಗಳು ಸಹಜವಾಗಿತ್ತು. ಇವುಗಳು ಕಾಣದ ದೆವ್ವ ಪಿಶಾಚಿಗಳ ಕಥೆಯನ್ನು ಸೃಷ್ಟಿಸುತ್ತಿತ್ತು. ಹಾಗೆ ತಮ್ಮ ಅನುಭವಗಳನ್ನು ಬಂದವರು ಊಟದ ವೇಳೆಯಲ್ಲಿ ಅಡುಗೂಲಜ್ಜಿಯೊಂದಿಗೆ ಚರ್ಚಿಸುವುದು ಸಾಮಾನ್ಯವಾಗಿತ್ತು. ಕೆಲವೊಮ್ಮೆ ಕೊಲೆ ಸುಲಿಗೆ ಮಾಡಿದವರೂ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಧೈರ್ಯದಲ್ಲಿ ತಮ್ಮ ಶೌರ್ಯವನ್ನು ಕೊಚ್ಚಿಕೊಂಡು ದೊಡ್ಡ ಧ್ವನಿಯಲ್ಲಿ ಮಾತನಾಡುವುದೂ ಇತ್ತು. ಇಂತಹ ಅನೇಕ ಅನುಭವಗಳನ್ನು ಕೇಳಿ ಬೇರೆಯವರಿಗೆ ಹೇಳುವುದು ಸಾಮಾನ್ಯ. ಅದರಂತೆ ಬಂದವರ ಮುಂದೆ ಮಾತಿನ ಮಧ್ಯೆ ಅದನ್ನು ಹೇಳುವಾಗ ಅದಕ್ಕೆ ರೆಕ್ಕೆ ಪುಕ್ಕಗಳನ್ನು ಸೇರಿಸಿ ದೆವ್ವ ಭೂತಗಳ, ಮಾಂತ್ರಿಕರ ಹಾಗೂ ಸಾಹಸದ ಕಥೆಗಳನ್ನು ವೈಭವೀಕರಿಸಿ ಹೇಳುವ ಅಜ್ಜಿಯರೂ ಇದ್ದರು. ವಿವಾಹಕ್ಕೆ ತಮ್ಮ ಮಕ್ಕಳಿಗೆ ಹೆಣ್ಣು ಗಂಡುಗಳನ್ನು ಹುಡುಕುವವರು, ಕಳೆದು ಹೋದ ಜಾನುವಾರುಗಳನ್ನು, ವಸ್ತುಗಳನ್ನು ಮತ್ತು ತಪ್ಪಿಸಿಕೊಂಡ ಜನರನ್ನು ಹುಡುಕುವವರೂ ಇದ್ದರು. ಬಂದವರು ತಮ್ಮತಮ್ಮಲ್ಲೇ ಮಾತನಾಡಿ ಕೊಂಡರೂ ಅಜ್ಜಿಯ ಕಿವಿಗೆ ಕೇಳಿಸಿ ಆಕೆಯ ಮಾಹಿತಿ ಕೋಶಕ್ಕೆ ಸೇರುತ್ತಿತ್ತು, ಇಂತಹ ವಿಷಯಗಳ ಮತ್ತು ಕಥೆಗಳ ಕಣಜವೇ ಆಗಿದ್ದ ಅಜ್ಜಿಯರು, ಕೆಲವು ಬಾರಿ ಗೂಢಚಾರರೂ ಆಗಿರುತ್ತಿದ್ದರು. ವೇಷ ಮರೆಸಿಕೊಂಡು ಬಂದ ರಾಜರಿಗೆ, ಮಂತ್ರಿಗಳಿಗೆ ಬಾತ್ಮೀದಾರರೂ ಆಗಿದ್ದ ಉದಾಹರಣೆಗಳೂ ಇವೆ. ಬಂದವರೊಂದಿಗೆ ಮಾತಿನ ಮಧ್ಯೆ ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಆದ್ದರಿಂದ ಹಳೆಯ ಕಥೆಗಳನ್ನು ಅಥವಾ ಏನಾದರೂ ಹೊಸ ಮಾಹಿತಿಗಳನ್ನು ಹೇಳುವವರು ಅಡುಗೂಲಜ್ಜಿ ಎಂದೇ ಪ್ರಸಿದ್ಧರಾದರು. ಈ ಅಜ್ಜಿಯರಲ್ಲಿ ಕೆಲವರು ತಮ್ಮ ವ್ಯವಹಾರ ಅನುಭವಗಳಿಂದ ಮಾತಿನಲ್ಲೇ ದೊಡ್ಡ ಲೆಕ್ಕಾಚಾರ ಪರಿಣಿತರೂ ಇದ್ದರು. ತಮ್ಮ ವ್ಯವಹಾರಕ್ಕೆ ಲೆಕ್ಕಕ್ಕಾಗಿ ಇವರ ಮೇಲೆ ಅವಲಂಬಿತರಾದ ಸಾರ್ವಜನಿಕರೂ ಇದ್ದರು. 

ಜನಗಳಿಗೆ ಬೇಕಾದ ಬಹಳಷ್ಟು ಮಾಹಿತಿಗಳ ಕೇಂದ್ರವಾದ ಅಡಗೂಲಜ್ಜಿಯರು ಒಂದು ರೀತಿಯಲ್ಲಿ ಜ್ಞಾನಕೋಶವೇ ಆಗಿದ್ದರು ಎಂಬುದನ್ನು ತಿಳಿದು ಆ ಅಜ್ಜಿಯರ ಬಗ್ಗೆ ನಮ್ಮ ಮನಸ್ಸಿನಲ್ಲಿ ಗೌರವ ಮೂಡಿತು. ಪ್ರಪಂಚದ ಹೆಚ್ಚಿನ ಮಾಹಿತಿ ಕೊಡುವ ಗೂಗಲ್ ಇಂದಿನ ಮೊಬೈಲ್ ನಲ್ಲಿ ಸಿಗುತ್ತಿದ್ದರೆ ಅಂದು ಆ ದಿನಗಳ ಪುಟ್ಟ ಪ್ರಪಂಚದ ಸುದ್ದಿಯ ಗೂಗಲ್ ಈ ಅಡುಗೂಲಜ್ಜಿಯರಾಗಿದ್ದರು ಎಂಬುದು ಮನವರಿಕೆಯಾಯಿತು. ಅದೂ ವಿದ್ಯುತ್ ಸಹಾಯವಿಲ್ಲದೆ ಅಥವಾ ಯಾವುದೇ ಉಪಕರಣವಿಲ್ಲದೇ ದೊರಕುವುದೊಂದು ವೈಶಿಷ್ಟ್ಯ. ವಿಶೇಷ ಮಾಹಿತಿಗಳು, ಹೊಸ ಹೊಸ ವಿಚಾರಗಳು ಎಲ್ಲಾ ಕಾಲಕ್ಕೂ ಒಂದಲ್ಲ ಒಂದು ಕಡೆ ಸಿಗುತ್ತವೆ. ಅವುಗಳನ್ನು ಉಪಯೋಗಿಸಲು ವಿಶ್ಲೇಷಿಸಿ ವಿವೇಚನೆಯಿಂದ ಬಳಸುವುದನ್ನು ಕಲಿಯಬೇಕು ಎಂದ ಹಿರಿಯರು ಮಾತು ಚಿಂತನಾರ್ಹ. ಆ ಪ್ರಯಾಣದ ಒಂದು ಘಟನೆ ಅಂದಿನ ಅಡುಗೂಲಜ್ಜಿಯಿಂದ ಬಾಯಿಪಾಠವನ್ನು ಹಾಯ್ದು ಮೊಬೈಲನ್ನು ಸೇರಿಕೊಂಡ ಈ ಕಥೆ ನಿತ್ಯ ನವೀನ.

Comments

  1. ನಿಮ್ಮ ಸುಂದರವಾದ ಶೈಲಿಯಲ್ಲಿ ಇಂದಿನ ಚಿಕ್ಕ ಮಕ್ಕಳಿಗೆ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ. 👍🙏

    ReplyDelete
  2. ತಾವು ವಿಚಾರಪೂರ್ವಕ ವಾದ ಲೇಖನಗಳನ್ನು ಆಗಾಗ್ಗೆ
    ಬರೆಯುತ್ತಿದ್ದೀರಿ, ಇದಕ್ಕಾಗಿ ಅಭಿನಂದನೆಗಳು.
    ಯಾವುದೇ ವಿಷಯವನ್ನು ಓದಲಿಕ್ಕೆ ಅಥವಾ ಬರೆಯಲಿಕ್ಕೆ ಬಾರದವರೂ ಕಲಿಯಬೇಕಾದರೆ
    ಹಿಂದಿನವರು ಕಂಡುಕೊಂಡ ವಿಧಾನ ಮುಖ್ಯವಾಗಿ
    ಎರಡು ೧) ದೃಶ್ಯ ಮಾಧ್ಯಮ
    ೨) ಶ್ರವಣ ಮಾಧ್ಯಮ
    ದೃಶ್ಯ ಮಾಧ್ಯಮ ಹಿಂದೆ ಕೇವಲ ನಾಟಕ, ಕೇಳಿಕೆ ಮತ್ತುಯಕ್ಷಗಾನ ಇತ್ಯಾದಿ, ಇದರಮೂಲಕ
    ನಮ್ಮ ಇತಿಹಾಸದ ಪುರಾಣಗಳ ಕಥೆಗಳನ್ನು
    ಮನಸ್ಸಿ ನಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಿದ್ದರು.

    ಹಾಗೆಯೇ ನೀವು ಬರೆದಿರುವಂತೆ ಅಭ್ಯಾಸ ಮಾಡಿಸುವುದಿಂದ, ನೀವು ತಿಳಿಸಿದ ಹಲವಾರು
    ವಿಷಯಗಳನ್ನು ಮನದಲ್ಲಿ ಸ್ಥಿರವಾಗಿ ನಿಲ್ಲುವಂತೆ
    ಮಾಡುತ್ತಿದ್ದರು. ಆಗಿನ ಕಾಲದ ಕಥೆ ಹೇಳುವುದು
    ಹರಿಕಥೆ ಮೂಲಕ, ಪ್ರವಚನಗಳ ಮೂಲಕ
    ನಮ್ಮ ಸಂಸ್ಕೃತಿ, ಹಬ್ಬಗಳು, ಪೂಜಾ ವಿಧಾನಗಳನ್ನು
    ನೆನಪಿನಲ್ಲಿಡುವಂತೆ ಹಾಗೂ ಮುಂದಿನ ಪೀಳಿಗೆ
    ಮುಂದುವರಿಸಲು ಸಹಾಯಕ ವಾಗುತ್ತಿದ್ದು ಇತ್ತೀಚೆಗೆ
    ಇಂತಹ ಪ್ರಬಲವಾದ, ಸುಲಭವಾದ ಮಾರ್ಗ ಕಾಣೆಯಾಗುತ್ತಿರುವುದು ದುರಾದೃಷ್ಟವೇ ಸರಿ.
    ಇದೆಲ್ಲವನ್ನು ಮೆಲುಕು ಹಾಕುವಹಾಗೆ ನಿಮ್ಮ ಲೇಖನ
    ಚೆನ್ನಾಗಿ ಮೂಡಿಬಂದಿದೆ.
    ಧನ್ಯವಾದಗಳು

    ReplyDelete
  3. ತಾವು ಬರೆದ ಈ ಉಪಯುಕ್ತ ಲೇಖನ
    ಚಿಕ್ಕವರಿಂದ - ದೊಡ್ಡವರ ತನಕ ಕಾಲಚಕ್ರದ
    ಉಪಯೋಗ ಹೇಗೆ ತಿಳಿದು ಕೊಳ್ಳಬಹುದು
    ಎಂದು ವಿವರವಾಗಿ ತಿಳಿಸಿದ್ದಿರಿ.
    ನಿಮ್ಮ ಲೇಖನ
    ಚೆನ್ನಾಗಿ ಮೂಡಿಬಂದಿದೆ.
    ಧನ್ಯವಾದಗಳು

    ReplyDelete

  4. ಪ್ರೀತಿಯ ರಾಮಚಂದ್ರ ಅವರೇ
    ಈ ರೀತಿಯ ಲೇಖನವನ್ನು ನಮ್ಮ ಶಿಕ್ಷಕರಿಗೆ ಓದಲು ಕೊಡಬೇಕು ನಮ್ಮ ಪ್ರೈಮರಿ ಶಾಲೆಗಳಲ್ಲಿ ಈ ರೀತಿಯ ವಿದ್ಯಾಭ್ಯಾಸವನ್ನು ಮತ್ತೆ ತರಲು ಪ್ರಯತ್ನ ಮಾಡಬೇಕು.
    ಈ ಆಧುನಿಕ ಜಗತ್ತು ನಮ್ಮನ್ನು ವಿನಾಶದೆಡೆಗೆ ಪ್ರಯಾಣ ಮಾಡಿಸುತ್ತ ಇದೆ ಎಂದರೆ ತಪ್ಪಾಗಲಾರದು.

    ಲೇಖನ ಚೆನ್ನಾಗಿ ಮೂಡಿಬಂದಿದೆ.

    ReplyDelete
  5. Excellent write up. How a man is dependent on Gadgets and other accessories is highlighted in write up. Human values, love and affection is not there and our elders are thought methodically and proved that, our tradition method of teaching is always good and it will be accepted by one and all. No doubt ou modern gadgets are good, in addition to that, our tradition method of teaching parallel practice to the younger one. Once again good writeup and thanks for sending. Regards,
    Manjunatha

    ReplyDelete
  6. ಬಿ. ಸುಬ್ರಹ್ಮಣ್ಯಂ ಮ್ಯಾನೇಜರ್ (ನಿವೃತ್ತ) ಬಿ.ಎಚ್.ಇ.ಎಲ್.July 21, 2022 at 10:05 AM

    ಸ್ಮಾರ್ಟ್ ಫೋನ್ ನಂಥ ಸಾಧನಗಳ 'ರುಚಿ ಹತ್ತಿರುವ' ನನ್ನಂಥವರು ಅವುಗಳ ಉಪಯುಕ್ತತೆಯನ್ನು ಅಲ್ಲಗೆಳೆಯುವುದಿಲ್ಲ. ಆ ಪಾಟಿ ಅ್ಯಾಪ್ ಗಳು, ಕ್ಯು.ಆರ್. ಕೋಡ್ ಗಳು ಒದಗಿಸುವ ಅನುಕೂಲಗಳನ್ನು ಮೆಚ್ಚದಿರಲು, ಉಪಯೋಗಿಸಿಕೊಳ್ಳದೇ ಇರಲು ಸಾಧ್ಯವೇ?!

    ಆದರೆ, ಒಮ್ಮೊಮ್ಮೆ ಅನಿಸುತ್ತದೆ, ಕ್ಯಾಲ್ ಕ್ಯುಲೇಟರ್ ಬದಲು 'ಬಾಯಿಲೆಕ್ಕ' ಮಾಡಿಕೊಂಡರೆ ಕೆಲಸ ಬೇಗ ಸಾಗುತ್ತದೆ ಅಂತ!

    ಕನಿಷ್ಠಪಕ್ಷ ನಾವು ಪದೇಪದೇ ಉಪಯೋಗಿಸುವ ಮಾಹಿತಿಗಳನ್ನಾದರೂ ನೆನಪಿನಲ್ಲಿ ಇಟ್ಟುಕೊಳ್ಳುವುದು ಸೂಕ್ತ. ಸಮಯದ ಉಳಿತಾಯ ಖಂಡಿತ.

    ವಿಜ್ಞಾನ, ತಂತ್ರಜ್ಞಾನಗಳು ಹೊಸಹೊಸ ಸಾಧನಗಳನ್ನು ಸೃಷ್ಟಿಸುವುದನ್ನು ತಡೆಯಲು ಸಾಧ್ಯವಿಲ್ಲ. ನಮ್ಮ ಧರ್ಮ, ಆಚರಣೆ, ವಿಚಾರ, ಸಂಸ್ಕೃತಿಗಳಿಗೆ ಅವುಗಳನ್ನು ಹೊಂದಿಸಿಕೊಳ್ಳಬೇಕು ಅಷ್ಟೆ.

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...