ಗೆಳೆಯ ಮಾದಪ್ಪ ಕಳೆದ ಮೂರು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ತಡವಾಗಿ ಈ ವಿಷಯ ತಿಳಿದ ನಾನು ಅವರ ಮನೆಯವರನ್ನು ಕಂಡು ಸಾಂತ್ವನ ಹೇಳಲು ಹೋಗಿದ್ದೆ. ಆ ವೇಳೆಯಲ್ಲೇ ಯಾವುದೋ ಕೋಆಪರೇಟಿವ್ ಬ್ಯಾಂಕಿನ ಸಿಬ್ಬಂದಿಯವರು ಬಂದಿದ್ದಾರೆ. ಆ ಮನೆಯ ಮೇಲೆ ಪಡೆದ ಸಾಲವನ್ನು ತಕ್ಷಣ ವಾಪಸ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಜೊತೆಯಲ್ಲಿ ಸಾಲಕ್ಕೆ ಸಹಿ ಮಾಡಿದ ಜಾಮೀನುದಾರನೂ ಇದ್ದಾನೆ. ಸುಮ್ಮನೆ ಮೈಮೇಲೆ ಬಂದ ಸಾಲದ ಸಲುವಾಗಿ ಅವನ ಗೋಳು ಹೇಳತೀರದು. ಏನಾದರೂ ಮಾಡಿ ನನ್ನನ್ನು ಬಿಡುಗಡೆ ಮಾಡಿ ಎಂದು ಮಾದಪ್ಪನ ಹೆಂಡತಿಯಲ್ಲಿ ಗೋಗರೆಯುತ್ತಿದ್ದಾನೆ.
ಅವರ ಮನೆಯಲ್ಲಿ ಶಾಲೆಗೆ ಹೋಗುವ ಎರಡು ಮಕ್ಕಳು. ಹತ್ತಿರದ ಒಂದು ಚಿಕ್ಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹೆಂಡತಿ. ಅನಾರೋಗ್ಯದಿಂದ ನರಳುತ್ತಿರುವ ಹಿರಿಯ ವಯಸ್ಸಿನ ತಂದೆ ತಾಯಿಯರು. ಅರ್ಧಂಬರ್ಧ ಕಟ್ಟಿದ ಮೊದಲ ಮಹಡಿ. ಮನೆ ಮುಂದೆ ಜಲ್ಲಿಕಲ್ಲು, ಇಟ್ಟಿಗೆ, ಮರಳು. ಕಟ್ಟೆ ಮೇಲೆ ಒಂದೆರಡು ಬ್ಯಾಗ್ ಸಿಮೆಂಟ್, ಒಂದಷ್ಟು ಕಬ್ಬಿಣದ ಕಂಬಿಗಳು ಕಾಣುತ್ತಿವೆ. ಮಾದಪ್ಪನಿಗೆ ಮಹಡಿ ಕಟ್ಟಿ ಬಾಡಿಗೆ ಕೊಡುವ ಮಹದಾಸೆ ಇರಬಹುದು. ಇರುವ ಹಣವೆಲ್ಲವನ್ನು ಖರ್ಚು ಮಾಡಿರುವ ಮಾದಪ್ಪ ಹೌಸಿಂಗ್ ಫೈನಾನ್ಸ್ ನಲ್ಲಿ ಇದ್ದ ಸಾಲದ ಮೇಲೆ ಇನ್ನೂ ಸಾಲ ಕೇಳಿದ. ಅವರಲ್ಲಿ ಸಿಗದಿದ್ದಾಗ ಹೆಚ್ಚಿನ ಸಾಲಕ್ಕೆ ಈ ಕೋಆಪರೇಟಿವ್ ಬ್ಯಾಂಕಲ್ಲಿ ಸಾಲ ಪಡೆದಿದ್ದಾನೆ ಎಂದು ತಿಳಿಯಿತು. ನಾನೇನೋ ಯೋಚನೆ ಮಾಡಬೇಡಿ, ಹೇಗೋ ಮಾಡೋಣ ಎಂದು ಬಂದೆ. ಈ ಘಟನೆ ಯನ್ನು ಮರೆತೂ ಹೋಗಿದ್ದೆ. ಆದರೆ ಆ ಬ್ಯಾಂಕಿನವರು ಮರೆಯಲಿಲ್ಲ. ತಿಂಗಳು ಮುಗಿಯುವ ಮೊದಲೇ, ಮಾದಪ್ಪನ ಮನೆಯವರೊಂದಿಗೆ, ಸಾಲದ ಹೊಣೆ ಹೊರದಿದ್ದರೂ ನನ್ನನ್ನೂ ಪದೇ ಪದೇ ಸಾಲದ ವ್ಯವಸ್ಥೆ ಏನಾಯ್ತು ಎಂದು ಪೀಡಿಸಲು ಪ್ರಾರಂಭಿಸಿದರು. ನಮ್ಮಂತಹ ಮಿತ್ರರು ಸಂಬಂಧಿಕರು, ಪರಿಸ್ಥಿತಿಯಲ್ಲಿ ಯಾರಾದರೂ ನೋಡಿಕೊಳ್ಳುತ್ತೇವೆ ಎಂದು ಹೇಳುವುದು ಸಹಜ, ಸುಲಭ. ಆದರೆ ಅದು ನಿಜವಾಗಿಯೂ ಅಸಾಧ್ಯ. ನಮಗೂ ನಮ್ಮದೇ ಸಂಸಾರ, ನಮ್ಮ ಜವಾಬ್ದಾರಿಗಳು ಇದ್ದೇ ಇರುತ್ತವೆ. ಅವರ ನೋವಿಗೇನೋ ತಕ್ಕಮಟ್ಟಿಗೆ ಸ್ಪಂದಿಸಬಹುದು. ಆದರೆ ದುಡ್ಡಿನ ವಿಷಯದಲ್ಲಿ ಒಪ್ಪುವ ಮಾತಲ್ಲ ಎಂದು ಮನವರಿಕೆಯಾಯಿತು. ಬ್ಯಾಂಕ್ ನವರ ಫೋನ್ ಸ್ವೀಕರಿಸಲೂ ಹೆದರಿಕೆಯಾಗುವಂತಹ ಅವರ ಕಠಿಣ ಮಾತುಗಳು. ನೀವು ಅವರ ಬ್ರದರ್ ಅಲ್ಲವೇ, ನೀವೇ ಒಂದು ವ್ಯವಸ್ಥೆ ಮಾಡಿ ಎಂಬ ಒತ್ತಾಯ. ಕಡೆ ಕಡೆಗೆ ಬ್ಯಾಂಕಿನವರ ಜೊತೆಗೆ ಜಾಮೀನುದಾರನೂ ನನ್ನ ಹಿಂದೆ ಬಿದ್ದನು.
ನನ್ನದೋ ಹೊಸ ಉದ್ಯೋಗ. ಕೆಲಸದ ಮೇಲಿದ್ದಾಗ ಫೋನಿನಲ್ಲಿ ಮಾತನಾಡುವಂತಿಲ್ಲ. ಜಾಗ ಬಿಟ್ಟು ಕದಲುವಂತಿಲ್ಲ. ಹಿರಿಯ ಅಧಿಕಾರಿಗಳ ಭಯವೋ, ಉದ್ಯೋಗ ಕಳೆದುಕೊಳ್ಳುವ ಆತಂಕವೋ, ದಿನ ಬೆಳಗಾದರೆ ಬ್ಯಾಂಕ್ ಸಿಬ್ಬಂದಿಗೆ ಹೆದರುವುದೇ ಆಗಿದೆ. ಒಂದು ಕಡೆ ಸುಳ್ಳು ಸಂಬಂಧ ಹೇಳಿದ್ದು ಇಷ್ಟೊಂದು ಗಂಭೀರವಾಗಿರುತ್ತದೆ ಎಂಬುದು ಆಗ ಗೊತ್ತಾಯಿತು. ಮತ್ತೊಂದು ಕಡೆ ಹೇಗೆ ಅವರ ಹಣದ ವ್ಯವಸ್ಥೆ ಮಾಡುವುದು ಎಂಬ ಚಿಂತೆಯಲ್ಲಿ ನೆಮ್ಮದಿ ಇಲ್ಲವಾಯಿತು.
ಹೀಗೆ ಯೋಚಿಸುತ್ತಿರುವ ದಿನಗಳಲ್ಲೇ ಒಬ್ಬ ವಿಮಾ ಪ್ರತಿನಿಧಿ ಪರಿಚಯವಾಯಿತು. ಅವರು ವಿಮೆಯ ಮಹತ್ವದ ಬಗ್ಗೆ ಹೇಳುವಾಗ ನನ್ನ ಸ್ವಂತ ವಿಷಯದ ಬಗ್ಗೆ ತಿಳಿದೇ ಹೇಳುತ್ತಿದ್ದಾರೇನೋ ಎಂದೆನಿಸಿತು. ಅವರು ಉದಾಹರಣೆ ಕೊಡುತ್ತಾ, ವ್ಯಕ್ತಿಯೊಬ್ಬನಿಗೆ ಹೊಸದಾಗಿ ಕೆಲಸ ದೊರಕಿದೆ. ಕಛೇರಿಗೆ ಹೋಗಿಬರಲು ಸಾಲದಲ್ಲಿ ವಾಹನ ಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಮನೆಯನ್ನು ಕೊಳ್ಳಬೇಕು, ಮದುವೆ, ಮಕ್ಕಳು ಇತ್ಯಾದಿ ಯೋಚನೆಗಳು ಅವನ ಮನಸ್ಸಿನಲ್ಲಿದೆ. ತನ್ನನ್ನು ಸಾಕಿ ಸಲಹಿ ವಿದ್ಯೆ ಕೊಡಿಸಿದ ತಂದೆ ತಾಯಿಯರಿಗೆ ಮುಂದಿನ ಜೀವನದಲ್ಲಾದರೂ ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. ಈ ವಯಸ್ಸಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕೊಡಿಸಬೇಕು. ಇತ್ಯಾದಿ ಕನಸುಗಳಿವೆ. ಆದರೆ ಈ ಎಲ್ಲಾ ಸಾಧನೆ ಮಾಡಬೇಕಾದರೆ ಅವನು ಭದ್ರವಾಗಿ ನಿಲ್ಲಬೇಕು. ಅಷ್ಟೇ ಅಲ್ಲ. ಈ ಎಲ್ಲಾ ಜೀವನದ ಕನಸುಗಳು ಸಾಕಾರವಾಗಲು ಅವನು ಜೀವಂತವಾಗಿ ಇರಲೇಬೇಕು ಎಂಬುದು ಮುಖ್ಯ ಎಂದರು.
ಅಲ್ಲದೆ ಶೀಘ್ರವಾಗಿ ಇವುಗಳನ್ನು ಪಡೆಯಲು ಸಾಲ ಪಡೆಯುವುದು ಸಾಮಾನ್ಯ ಹಾಗೂ ಕೆಲವೊಮ್ಮೆ ಅನಿವಾರ್ಯ. ನನಗೇನೂ ಆಗದಿದ್ದರೆ ತಾನೇ ಸಾಲ ವಾಪಸು ಮಾಡುತ್ತೇನೆ. ಆದರೆ ಸಾಲ ಪಡೆದು ಮಧ್ಯದಲ್ಲಿ ಏನಾದರೂ ಆಕಸ್ಮಿಕವಾಗಿ ತಾನು ಮರಣ ಹೊಂದಿದರೆ, ತನ್ನ ಆದಾಯದ ಮೇಲೆ ಅವಲಂಬಿಸಿದವರಿಗೆ ತಾನು ಇಲ್ಲದೆ ಜೀವನ ಮಾಡುವುದೇ ಕಷ್ಟವಾಗಿರುವಾಗ, ಮಾಡಿಕೊಂಡ ಸಾಲ ನಿಜವಾಗಿಯೂ ಹೊರೆಯಾಗುತ್ತದೆ. ಸಾವು ಅಥವಾ ಅಗಲುವಿಕೆಯ ಭಾವನಾತ್ಮಕ ಸಂಬಂಧಗಳನ್ನು ಯಾರಿಂದಲೂ ತುಂಬಿಸಲಾಗದು. ನಿಜ, ಇದಕ್ಕೆ ಕಾಲವೇ ಉತ್ತರ. ಆದರೆ ಉಳಿದವು ಆರ್ಥಿಕ ಸಮಸ್ಯೆಗಳೇ ಆಗಿರುತ್ತವೆ. ಅವುಗಳನ್ನು ಯಾವುದೋ ರೀತಿಯಲ್ಲಿ ಹಣ ದೊರಕಿದರೆ ಪರಿಹರಿಸಬಹುದು. ಆದರೆ ಯಾರು ಕೊಡುತ್ತಾರೆ? ಈ ಪರಿಸ್ಥಿತಿ ಹೊಸದೇನಲ್ಲ. ಈಗಾಗಲೇ ಅನೇಕ ಕುಟುಂಬಗಳು ಇದನ್ನು ಕಷ್ಟದಿಂದ ಅನುಭವಿಸುತ್ತಿವೆ. ಹೀಗೆ ಆಗಲೇಬಾರದು ಅಲ್ಲವೇ? ಎಂದರು. ತಕ್ಷಣ ನನಗೆ ನೆನಪಿಗೆ ಬಂದಿದ್ದು ಮಿತ್ರ ಮಾದಪ್ಪನ ಸಮಸ್ಯೆ ಹಾಗೂ ಅದರಲ್ಲಿ ನನ್ನ ಪರಿಸ್ಥಿತಿ. ತಕ್ಷಣ ಸಾರ್ ಎನ್ನುತ್ತಾ ಮಾದಪ್ಪನ ಅಪಘಾತ ವೃತ್ತಾಂತ, ನಂತರದ ವಿದ್ಯಮಾನಗಳನ್ನು ಹೇಳಿ ಈ ಬಗ್ಗೆ ಏನು ಮಾಡಬಹುದು ಎಂದೆ.
ಒಂದು ಕ್ಷಣ ಮೌನದಿಂದ ಯೋಚಿಸಿ, ಅವರಿಗೆ ಏನಾದರೂ ಇನ್ಸೂರೆನ್ಸ್ ಇತ್ತೇನು ಅಥವಾ ಇದೆಯೇ ವಿಚಾರಿಸಿ ಎಂದರು. ಹಾಗೇ ಮಾದಪ್ಪನ ಹೆಂಡತಿಗೆ ಫೋನ್ ಮಾಡಿ ಕೇಳಿದಾಗ ಅವನ ಹೆಂಡತಿ ಪಾಲಿಸಿ ಗೀಲಸಿ ಏನೂ ಇಲ್ಲ, ಇರೋದು ಬರೀ ಸಾಲ ಮಾತ್ರ, ಅದನ್ನು ಬೇಕಾದಷ್ಟು ಮಾಡಿ ನಮ್ಮನ್ನು ಸಾಯಿಸುತ್ತಿದ್ದಾರೆ ಎಂದು ಗೋಳು ಶುರು ಮಾಡಿದರು. ಇವರತ್ತ ತಿರುಗಿ ಪಾಲಿಸಿ ಇದ್ದಂತೆ ಕಾಣುವುದಿಲ್ಲ ಎಂದೆ. ವಿಮಾ ಪ್ರತಿನಿಧಿ ಅಷ್ಟಕ್ಕೆ ಸುಮ್ಮನಿರದೆ ಸಾಲ ಇರುವ ಬ್ಯಾಂಕ್, ಅಲ್ಲಿಗೆ ಸಾಲ ಏಕೆ ವರ್ಗಾವಣೆಯಾಯಿತು, ಯಾವಾಗ ಮಾಡಿದರು ಎಂದೆಲ್ಲಾ ವಿಚಾರಿಸಿದರು. ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೌಸಿಂಗ್ ಫೈನಾನ್ಸ್ ಗೆ ಎರಡು ತಿಂಗಳ ಹಿಂದೆಯಷ್ಟೇ ಸಾಲ ತೀರಿಸಿದ್ದಾರೆ ಎಂದಾಗ ವಾಪಸ್ ಪಡೆದ ಮನೆಯ ದಾಖಲೆ ಪಟ್ಟಿ ಕೇಳಿದರು. ಮಾದಪ್ಪನ ಮನೆಗೆ ಹೋಗಿ ಕೈಗೆ ಸಿಕ್ಕ ಕೆಲವು ಪತ್ರಗಳನ್ನು ತಂದು ತೋರಿಸಿದೆ. ಅದರಲ್ಲಿ ಒಂದು ಪಾಲಿಸಿ ನಂಬರ್ ಸಿಕ್ಕಿತು. ನಂತರದಲ್ಲಿ ಅವರು ಹೇಳಿದಂತೆ, ದಾಖಲೆ ಪಟ್ಟಿ ಆಧಾರದ ಮೇಲೆ ಹೌಸಿಂಗ್ ಫೈನಾನ್ಸ್ ನಲ್ಲಿ ವಿಚಾರಿಸಿದಾಗ, ಮಾದಪ್ಪ ಸಾಲದ ಮೊತ್ತಕ್ಕೆ ಪಾಲಿಸಿ ಪಡೆದು ಅಸೈನ್ಮೆಂಟ್ ಮಾಡಬೇಕಾಗಿತ್ತು. ಆದ್ದರಿಂದ ಮಾದಪ್ಪ ಪಾಲಿಸಿಯನ್ನು ಪಡೆದಿದ್ದ ಎಂದರು. ಹಾಗೆಯೇ ಅವರಲ್ಲಿ ಆಕಸ್ಮಿಕವಾಗಿ ಉಳಿದಿದ್ದ ಸಂಬಂಧಿಸಿದ ಪಾಲಿಸಿ ಬಾಂಡ್ ಕೊಟ್ಟರು. ವಿಮಾ ಪ್ರತಿನಿಧಿ ಆ ಪಾಲಿಸಿಯನ್ನು ಪರೀಕ್ಷಿಸಿದಾಗ ವಾರ್ಷಿಕ ಪ್ರೀಮಿಯಂ ಮುಂದಿನ ಎರಡು ತಿಂಗಳ ನಂತರ ಬಾಕಿ ಇದೆ. ಅಂದರೆ ಪಾಲಿಸಿ ಚಾಲ್ತಿಯಲ್ಲಿದೆ. ಆದ್ದರಿಂದ ಅದರ ಮೇಲೆ ಇನ್ಸೂರೆನ್ಸ್ ಹಣ ಬರುತ್ತದೆ, ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಕಾರ್ಯೋನ್ಮುಖರಾದರು.
ಅಂದೇ ಮರಣದ ಪತ್ರ, ಅಪಘಾತದ ಸಾವಿನ ಬಗ್ಗೆ ಆಸ್ಪತ್ರೆಯಿಂದ ದಾಖಲೆಗಳು, ಅಪಘಾತ ವರದಿಯಾಗಿದ್ದ ಪೋಲಿಸ್ ಸ್ಟೇಷನ್ ನಿಂದ ಪೋಸ್ಟ್ ಮಾರ್ಟಂ ರಿಪೋರ್ಟ್ ಇತ್ಯಾದಿ ಪತ್ರಗಳು, ಮಾದಪ್ಪ ಮತ್ತು ಅವನ ಹೆಂಡತಿಯ ವೈಯಕ್ತಿಕ ದಾಖಲೆಗಳು ಹಾಗೂ ಹೌಸಿಂಗ್ ಫೈನಾನ್ಸ್ ನಿಂದ ಸಾಲ ಮುಗಿದ ನಂತರ ಯಾವುದೇ ಬಾಕಿ ಇಲ್ಲ ಎಂಬ ಪತ್ರದೊಂದಿಗೆ ಎಲ್ಐಸಿ ಗೆ ಕ್ಲೈಮ್ ಸಲ್ಲಿಸಿದರು. ಆಶ್ಚರ್ಯಕರ ಎಂಬಂತೆ ಮುಂದಿನ ತಿಂಗಳಲ್ಲೇ ವಿಮಾ ಮೊತ್ತ ಐವತ್ತು ಲಕ್ಷಕ್ಕೆ ಅಪಘಾತ ವಿಮೆ ಸೇರಿದಂತೆ ಒಂದು ಕೋಟಿ ರೂಪಾಯಿ ಮೊತ್ತ ಎಲ್ಐಸಿ ಯಿಂದ ಸಂದಾಯವಾಯಿತು. ಈ ಮೊತ್ತದ ಮುಂದೆ ಮಾದಪ್ಪನ ಇದ್ದ ಸಾಲ ನಗಣ್ಯ. ಅವನ ಮನೆಗೆ ಸಂಬಂಧಿಸಿದ ಹಾಗೂ ಅವನ ಖಾಸಗಿ ಸಾಲಗಳನ್ನು ಪೂರ್ಣವಾಗಿ ವಾಪಸ್ ಮಾಡಲಾಯಿತು. ವಿಮಾ ಪ್ರತಿನಿಧಿಗಳ ಸಲಹೆಯಂತೆ ಅವನ ಮಕ್ಕಳ ವಿದ್ಯಾಭ್ಯಾಸಕ್ಕೆ ಅಂಚೆ ಕಚೇರಿಯ ತಿಂಗಳ ಆದಾಯ ಯೋಜನೆ, ಬ್ಯಾಂಕ್ ನಲ್ಲಿ ಠೇವಣಿ ಹಾಗೂ ಅವನ ಹೆಂಡತಿಗೆ ಪ್ರತಿ ತಿಂಗಳು ಪೆನ್ಷನ್ ಬರುವ ಯೋಜನೆಗಳಲ್ಲಿ ಹಣ ತೊಡಗಿಸಿದ ನೆಮ್ಮದಿ ನನ್ನದಾಗಿತ್ತು. ಈ ವಿಷಯದಲ್ಲಿ ಸಹಾಯ ಮಾಡಿದ ಈ ಜೀವವಿಮಾ ಪ್ರತಿನಿಧಿಗೆ ಇದರಿಂದ ನಮಗೆಲ್ಲಾ ನೀವು ದೊಡ್ಡ ನಿಧಿಯಾದಿರಿ ಎಂದೆ.
ನಂತರದಲ್ಲಿ ಈ ಪ್ರತಿನಿಧಿಯಲ್ಲಿ ಮಾತನಾಡಿದಾಗ, ಮಾದಪ್ಪ ಟರ್ಮ್ ಇನ್ಸೂರೆನ್ಸ್ ಪಡೆದಿದ್ದ. ಕಟ್ಟಿದ ಪ್ರೀಮಿಯಂ ವರ್ಷಕ್ಕೆ ಸುಮಾರು ೧೮೦೦೦ ರೂಪಾಯಿ. ಸಾಮಾನ್ಯವಾಗಿ ಸಾಲ ಪಡೆಯುವವರಿಗೆ ಈ ಪಾಲಿಸಿ ಪಡೆಯಲು ಹೇಳುತ್ತಾರೆ. ಇಂತಹಾ ಘಟನೆಗಳು ಸಂಭವಿಸಿದಾಗ ಇದರ ಪ್ರಾಮುಖ್ಯತೆ ತಿಳಿದೇ ನಾನು ಇದನ್ನು ಮೃತ್ಯು ಸಂಜೀವಿನಿ ಎನ್ನುತ್ತೇನೆ. ಅತೀ ಕಡಿಮೆ ಪ್ರೀಮಿಯಂ, ಅತಿ ಹೆಚ್ಚು ಆರ್ಥಿಕ ರಕ್ಷಣೆ ಇರುವ ಪಾಲಿಸಿ. ಇಂತಹಾ ಸ್ಥಿತಿಯಲ್ಲಿ ಸಹಾಯವಾಗಲೆಂದೇ ಇರುವ ಇತರ ಎಲ್ಐಸಿ ಪಾಲಿಸಿಗಳ ಬಗ್ಗೆಯೂ ಹೇಳಿದರು. ಅತ್ಯಂತ ಕಡಿಮೆ ದರದಲ್ಲಿ, ಅಂದರೆ ದೈನಂದಿನ ಬೆಳಗಿನ ಉಪಹಾರದ ಖರ್ಚಿನಷ್ಟು ಪ್ರೀಮಿಯಂ ಕಂತು ಪಾವತಿ ಮಾಡಿದರೂ, ಪಾಲಿಸಿದಾರನ ಸಾವು ಸಂಭವಿಸಿದಾಗ ತಕ್ಷಣವೇ ಅವನ ಕುಟುಂಬಕ್ಕೆ ಅರ್ಥಿಕ ಪರಿಹಾರ ದೊರಕಿಸುವ ಯೋಜನೆ ಇದೆ. ಈ ಯೋಜನೆಯೇ ಟರ್ಮ್ ಇನ್ಸೂರೆನ್ಸ್ (TERM INSURANCE). ಹೆಸರೇ ಹೇಳುವಂತೆ ಟರ್ಮ್ ಅಂದರೆ ಅವಧಿ, ಇನ್ಸೂರೆನ್ಸ್ ಎಂದರೆ ವಿಮಾ ಪರಿಹಾರ. ಗೊತ್ತಾದ ಅವಧಿಗೆ ವಿಮಾ ಸೌಲಭ್ಯ ಕೊಡುವ ಟರ್ಮ್ ಇನ್ಸೂರೆನ್ಸ್ ವಿವಿಧ ಸಂಸ್ಥೆಗಳಲ್ಲಿ ಕನಿಷ್ಠ ೨೫ ಲಕ್ಷ ರೂಪಾಯಿಯಿಂದ ಮೇಲೆ ವಿಮಾ ಸೌಲಭ್ಯ ದೊರೆಯುತ್ತದೆ ಎಂದು ತಿಳಿಸಿದರು. ಕೇವಲ ವಿಮಾ ಪಾಲಿಸಿ ಪಡೆದರೆ ಸಾಲದು, ಆ ಬಗ್ಗೆ ಮತ್ತು ಅದರ ಕನಿಷ್ಠ ವಿವರವನ್ನು ಮನೆಯವರಿಗೆ ತಿಳಿಸಿದಲ್ಲಿ ಮಾತ್ರವೇ ಪಾಲಿಸಿ ಪಡೆದಿದ್ದು ಸಾರ್ಥಕ ಎಂದರು.
ಈ ಮೃತ್ಯು ಸಂಜೀವಿನಿ ವಿಶೇಷತೆಯ ಟರ್ಮ್ ಇನ್ಸೂರೆನ್ಸ್ ಬಗ್ಗೆ ನಮ್ಮ ತಂದೆ ತಾಯಿಯರಲ್ಲಿ ಚರ್ಚಿಸಿದಾಗ ನಿಮ್ಮ ಪ್ರತಿನಿಧಿ ಮಿತ್ರರು ಸರಿಯಾಗಿಯೇ ಹೇಳಿದ್ದಾರೆ. ಕುಟುಂಬದ ರಕ್ಷಣೆ ದೃಷ್ಟಿಯಿಂದ ಈ ಪಾಲಿಸಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು, ಸದ್ಯದ ಕಡಿಮೆ ಆದಾಯದಲ್ಲಿ ಅದು ಸಾಧ್ಯ ಹಾಗೂ ಅನಿವಾರ್ಯ ಎಂದರು. ವಿಮೆ ಪಡೆಯಲು ಸಂಸ್ಥೆಗಳ ಆಯ್ಕೆ ನಮ್ಮದೇ. ಆನ್ಲೈನ್ ಮೂಲಕವೂ ಪಾಲಿಸಿ ದೊರೆಯುತ್ತದೆ ನಿಜ, ಈಗ ನನ್ನ ಮುಂದೆ ಇರುವುದು ಒಬ್ಬ ಅನುಭವಿ ವಿಮಾ ಪ್ರತಿನಿಧಿ, ಅವರಿಂದ ಈ ಬಗ್ಗೆ ವಿವರವಾಗಿ ತಿಳಿದೆನಾದ್ದರಿಂದ ಅವರ ಮೂಲಕ ಒಂದು ಕೋಟಿ ಮೊತ್ತಕ್ಕೆ ಇನ್ಸೂರೆನ್ಸ್ ಪಡೆದೆ. ಹೀಗೆ ಆಕಸ್ಮಿಕವಾಗಿ ಭೇಟಿಯಾದ ವಿಮಾ ಪ್ರತಿನಿಧಿಯವರಿಂದ ಸರಿಯಾದ ಸಮಯಕ್ಕೆ ಸರಿಯಾದ ಮಾರ್ಗದರ್ಶನ ದೊರಕಿತು. ಇವರ ಪರಿಚಯದಿಂದ ಆದ ಸಹಾಯದ ಮೂಲಕ ನಮ್ಮ ಮಿತ್ರ ಮಾದಪ್ಪನ ಹೆಂಡತಿಗೆ ನಿಜವಾಗಿಯೂ ಬ್ರದರ್ ಆದೆ. ಅವರಿಂದ ನಿಜವಾದ ಆಪತ್ಕಾಲದ ಬಂಧು ಮಿತ್ರ ಎನಿಸಿಕೊಂಡೆ. ಒಬ್ಬ ವಿಮಾ ಪ್ರತಿನಿಧಿ ಭೇಟಿಯಿಂದ ಒಂದು ಕುಟುಂಬದ ಆರ್ಥಿಕ ಸಮಸ್ಯೆಗೆ ಪರಿಹಾರವಾಗುವುದರೊಂದಿಗೆ ನನ್ನ ಒಂದು ಪೇಚಿನ ಪ್ರಸಂಗವೂ ಮುಗಿದಂತಾಯಿತು.
ಈ ಟರ್ಮ್ ಇನ್ಸೂರೆನ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿದಾಗ ಕೆಳಕಂಡ ವಿವರಗಳನ್ನು ಕೊಟ್ಟರು. ತಿಳಿಯಬೇಕಾದ ವಿಷಯ ದೀರ್ಘವಾಗಿದೆ. ಅದು ಮುಖ್ಯ ಎಂದು ಕೊಳ್ಳುವವರಿಗೆ ಅನುಕೂಲವಾಗುವಂತೆ ಆ ಮಾಹಿತಿಯನ್ನು ಈ ಮುಂದೆ ಪ್ರತ್ಯೇಕವಾಗಿ ಕೊಟ್ಟಿದ್ದೇನೆ.
ಈ ಪಾಲಿಸಿಯನ್ನು ಪಡೆಯಲು ಕೊಡಬೇಕಾದ ಪ್ರೀಮಿಯಂ ನಮ್ಮ ವಿದ್ಯಾರ್ಹತೆ, ವಯಸ್ಸು, ವೃತ್ತಿ, ಪಡೆಯುವ ವೇತನ ಅಥವಾ ಆದಾಯ ಮತ್ತು ಇಂದಿನ ನಮ್ಮ ಆರೋಗ್ಯವನ್ನು ಅವಲಂಬಿಸಿರುತ್ತದೆ. ಅಪಾಯಕರ ವೃತ್ತಿ, ಹೆಚ್ಚಿನ ವಯಸ್ಸು ಮತ್ತು ಕಡಿಮೆ ಆರೋಗ್ಯ ಇದ್ದಾಗ ದೊರೆಯುವ ವಿಮಾ ಮೊಬಲಗಿನ ಮೊತ್ತ, ಪಾಲಿಸಿ ಅವಧಿಯಲ್ಲಿ ವ್ಯತ್ಯಾಸವಾಗಬಹುದಾದ ಸಾಧ್ಯತೆ ಇದೆ. ಈ ಪಾಲಿಸಿ ಪಡೆಯಲು ನಮ್ಮ ಫೋಟೋದೊಂದಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಕನಿಷ್ಠ ಮೂರು ತಿಂಗಳ ವೇತನ ಪಟ್ಟಿ ಅತ್ಯಂತ ಅವಶ್ಯಕ. ಹೆಚ್ಚಿನ ಮೊತ್ತದ ವಿಮೆಗಾಗಿ ಮೂರು ವರ್ಷಗಳ ಐಟಿಆರ್ ಅಂದರೆ ಆದಾಯ ಕರ ಪಾವತಿ ಬಗ್ಗೆ ದಾಖಲೆ ಬೇಕಾಗುತ್ತದೆ.
ವಿಮಾ ಸಂಬಂಧಪಟ್ಟ ಪ್ರಸ್ತಾಪ ಫಾರಂನಲ್ಲಿ ನಮ್ಮ ಹಲವು ಖಾಸಗಿ ವಿವರಗಳನ್ನು ತುಂಬಬೇಕಾಗುತ್ತದೆ ಅಲ್ಲಿ ಕೇಳುವ ನಮ್ಮ ಸದ್ಯದ ಆರೋಗ್ಯ ಸ್ಥಿತಿ, ಏನಾದರೂ ಅಂಗಾಂಗಗಳ ನ್ಯೂನತೆ, ದೃಷ್ಟಿಮಾಂದ್ಯತೆ ಇದ್ದರೆ ಆ ಬಗ್ಗೆ ಸತ್ಯಾಂಶವನ್ನು ಕೊಡಬೇಕು. ಧೂಮಪಾನ ಮತ್ತು ಮದ್ಯಪಾನದ ಅಭ್ಯಾಸ ಇದ್ದವರು ತಪ್ಪದೇ ಆ ಮಾಹಿತಿಯನ್ನು ಕೊಡಬೇಕು. ಇದರಿಂದ ಸ್ವಲ್ಪ ಪ್ರೀಮಿಯಂ ಹೆಚ್ಚಾಗಬಹುದು ಅಷ್ಟೇ. ಆದರೆ ತಪ್ಪು ಅಥವಾ ಸುಳ್ಳು ಮಾಹಿತಿ ಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಆಕಸ್ಮಿಕವಾಗಿ ಪಾಲಿಸಿದಾರನ ಸಾವು ಸಂಭವಿಸಿದಾಗ ವಿಮಾ ಕ್ಲೈಮ್ ನ್ನು ತಿರಸ್ಕರಿಸುತ್ತಾರೆ. ಈ ಬಗ್ಗೆ ಎಚ್ಚರವಿರಬೇಕು.
ನಾವು ಎಷ್ಟು ಮೊತ್ತದ ವಿಮೆ ಪಡೆಯಬೇಕು ಎಂಬ ಪ್ರಶ್ನೆ ಸಹಜ. ಸುಮಾರು ೪೦ ವರ್ಷಗಳ ಅವಧಿಗೆ ವಿಮೆ ದೊರೆತರೂ ಗರಿಷ್ಠ ಸರಾಸರಿ ೬೫- ೭೦ ನೇ ವಯಸ್ಸಿಗೆ ವಿಮಾ ಸೌಲಭ್ಯ ಮುಗಿಯುತ್ತದೆ. ನಮ್ಮ ವಯೋಮಾನಕ್ಕೆ ತಕ್ಕಂತೆ ಈ ವಿಮೆ ಪಡೆಯಲು ಅವಕಾಶವಿದೆ. ನಮ್ಮ ಕೌಟುಂಬಿಕ ಜವಾಬ್ದಾರಿ ಹೆಚ್ಚು ಇರುವವರು, ವಿವಾಹವಾಗಿರುವವರು, ವಾಹನ, ಗೃಹ ಸಾಲ ಪಡೆದಿರುವವರಿಗೆ ಹೆಚ್ಚಿನ ವಿಮೆ ಅಗತ್ಯವಿದೆ. ಮನೆ ಸಾಲ ಪಡೆಯುವಾಗ ಸಾಲದ ಮೊತ್ತಕ್ಕೆ ಸಾಲ ಕೊಡುವ ಸಂಸ್ಥೆಯವರು ವಿಮೆಯನ್ನು ಕಡ್ಡಾಯ ಮಾಡಿರುತ್ತಾರೆ. ಈ ಸಾಲದ ಹೊರತು ಬೇರೆ ಯಾವುದಾದರೂ ಸಾಲಗಳು ಇದ್ದಲ್ಲಿ ಅಂತಹಾ ಜವಾಬ್ದಾರಿಗೆ ಸಮನಾಗಿಯೂ ವಿಮೆ ಬೇಕಾಗುತ್ತದೆ. ಅದೇನೇ ಇರಲಿ. ಕಡಿಮೆ ಎಂದರೂ ನಮ್ಮ ವಾರ್ಷಿಕ ಆದಾಯದ ೧೫ ರಿಂದ ೨೦ ಪಟ್ಟು ವಿಮೆಯನ್ನು ಪಡೆಯುವುದು ಯೋಗ್ಯವಾದದ್ದು. ಈ ವಿಮೆಯನ್ನು ೩೦ನೇ ವಯಸ್ಸಿನ ಒಳಗಾಗಿ ಪಡೆದಾಗ ಪ್ರೀಮಿಯಂ ಕಡಿಮೆಯಾಗಿರುತ್ತದೆ.
ಈ ವಿಮೆಯು ಸಹಜ ಸಾವಿಗೆ ಪರಿಹಾರ ಕೊಟ್ಟರೂ ಸ್ವಲ್ಪ ಹೆಚ್ಚಿನ ಪ್ರೀಮಿಯಂ ಪಾವತಿಸಿದಲ್ಲಿ ಅಪಘಾತದ ಸಾವಿಗೆ ವಿಮಾ ಮೊತ್ತವನ್ನು ಪ್ರತ್ಯೇಕವಾಗಿ ಕೊಡುತ್ತಾರೆ. ಇದೇ ರೀತಿ ಪ್ರತ್ಯೇಕ ಪ್ರೀಮಿಯಂ ಪಾವತಿಸಿದಲ್ಲಿ ಪಾಲಿಸಿದಾರನಿಗೆ ಆಕಸ್ಮಿಕವಾಗಿ ಒದಗಬಹುದಾದ ಕಿಡ್ನಿ ವಿಫಲತೆ, ಹೃದಯಾಘಾತ, ವಿವಿಧ ಕ್ಯಾನ್ಸರ್ ನಂತಹ ಮಾರಕ ಖಾಯಿಲೆಗಳಿಂದ ಆಗಬಹುದಾದ ಖರ್ಚನ್ನು ಎದುರಿಸಲು ಕೆಲವು ನಿಬಂಧನೆಗಳೊಡನೆ ಹಲವು ವಿಮಾ ಸಂಸ್ಥೆಗಳಿಂದ ವಿಮಾ ರಕ್ಷಣೆ ದೊರೆಯುತ್ತದೆ.
ಹೆಚ್ಚಿನ ಮೊತ್ತದ ವಿಮೆಯನ್ನು ಪಡೆಯುವುದು ಎಂದರೆ ಹೆಚ್ಚಿನ ಬೆಲೆಯ ಆಸ್ತಿಯನ್ನು ಕೊಂಡಂತೆ ಅಲ್ಲವೇ. ಹಾಗೆ ಪಾಲಿಸಿಯನ್ನು ಕೊಳ್ಳುವಾಗ ಸರಿಯಾದ ವಿಮಾ ಸಂಸ್ಥೆಯನ್ನು ಆರಿಸಬೇಕು. ಸರ್ಕಾರಿ ಒಡೆತನದ ಎಲ್ಐಸಿ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ವಿಮಾ ಸಂಸ್ಥೆಗಳಿವೆ. ಅವುಗಳು ಎಷ್ಟು ಹಳೆಯದು, ಡೆತ್ ಕ್ಲೈಮ್ ರೇಶಿಯೋ ಅಂದರೆ ವಿಮಾದಾರರ ಸಾವು ಸಂಭವಿಸಿದಾಗ ಪ್ರತಿ ೧೦೦ ಜನರಲ್ಲಿ ಎಷ್ಟು ಜನರಿಗೆ ವಿಮಾ ಹಣ ಕೊಡಲಾಗಿದೆ ಎಂಬುದಾಗಿದ್ದು ಇದು ಕನಿಷ್ಠ ಶೇಕಡಾ ೯೫ ಆಗಿರಬೇಕು. ಮುಂದಿನ ಅಂಶ ಸಾಲ್ವೆನ್ಸಿ ರೇಶಿಯೋ ಅಂದರೆ ಆಕಸ್ಮಿಕವಾಗಿ ಏನಾದರೂ ಪ್ರಾಕೃತಿಕ ದುರಂತವಾಗಿ ಹೆಚ್ಚಿನ ವಿಮಾದಾರರ ಮರಣವಾದಲ್ಲಿ ವಿಮಾಸಂಸ್ಥೆಗೆ ಆ ಎಲ್ಲಾ ಪಾಲಸಿದಾರರಿಗೂ ವಿಮಾ ಹಣವನ್ನು ಕೊಡುವ ಸಾಮರ್ಥ್ಯ - ಇದು ಕನಿಷ್ಠ ಶೇಕಡಾ ೧೫೦ ಇರಬೇಕು. ನಂತರದಲ್ಲಿ ಈ ಸಂಸ್ಥೆಯಿಂದ ಎಷ್ಟು ವಿಮಾ ಪಾಲಿಸಿಗಳನ್ನು ಕೊಡಲಾಗಿದೆ, ಎಷ್ಟು ಮೊಬಲಗು ಎಂಬುದನ್ನು ತಿಳಿಯುವುದು ಒಳ್ಳೆಯದು.
ಈಗ ನಮ್ಮ ವಯಸ್ಸಿಗೆ, ಬೇಕಾದ ಅವಧಿಗೆ, ಬೇಕಾದ ವಿಮಾ ಮೊತ್ತಕ್ಕೆ ವಾರ್ಷಿಕ ಎಷ್ಟು ಪ್ರೀಮಿಯಂ ಆಗುತ್ತದೆ ಎಂಬುದನ್ನು ತಿಳಿದು ಮುಂದುವರಿಯಬೇಕು. ಪಾವತಿಸ ಬೇಕಾದ ಪ್ರೀಮಿಯಂ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಾವತಿ ಮಾಡುವ ಆಯ್ಕೆ ಒಳ್ಳೆಯದು. ಈ ಪಾಲಿಸಿಯನ್ನು ಪಡೆದವರಿಗೆ ಪಾಲಿಸಿ ಅವಧಿಯಲ್ಲಿ ಸಾವು ಸಂಭವಿಸಿದಾಗ ವಿಮಾ ಮೊತ್ತವನ್ನು ನೀಡಲಾಗುವುದು. ಪ್ರೀಮಿಯಂ ಪಾವತಿಸಲು ಪ್ರೀಮಿಯಂ ದಿನಾಂಕದಿಂದ ಹದಿನೈದು ದಿನಗಳ ಅವಧಿ ಅವಕಾಶ ಇರುತ್ತದೆ. ಈ ಅವಧಿಗೂ ವಿಮಾ ರಕ್ಷಣೆ ಇರುತ್ತದೆ. ಇನ್ನೂ ತಡವಾದಲ್ಲಿ ಪಾಲಿಸಿ ರದ್ದಾಗುತ್ತದೆ. ಆಗ ಸಾವು ಸಂಭವಿಸಿದರೆ ವಿಮಾ ಮೊತ್ತ ದೊರೆಯುವುದಿಲ್ಲ. ಸಂಸ್ಥೆಯ ನಿಯಮಗಳ ಅನ್ವಯ ಬಾಕಿ ಪಾವತಿಸಿ ಪಾಲಿಸಿಯನ್ನು ಚಾಲನೆ ಪಡಿಸಬಹುದು.
ಈ ಟರ್ಮ್ ಇನ್ಸೂರೆನ್ಸ್ ಪಾಲಿಸಿ ಕೇವಲ ನಮ್ಮ ಜೀವನ ರಕ್ಷಣೆಗಾಗಿ ಪಡೆದ ಪಾಲಿಸಿ ಆದ್ದರಿಂದ ಅವಧಿ ನಂತರ ಪಾಲಿಸಿದಾರನಿಗೆ ಯಾವ ಹಣವೂ ದೊರೆಯುವುದಿಲ್ಲ. ಪಾಲಿಸಿ ಅವಧಿಯಲ್ಲಿ ಪಾಲಿಸಿ ಆಧಾರದ ಮೇಲೆ ಸಾಲವೂ ದೊರೆಯುವುದಿಲ್ಲ. ಹೆಚ್ಚಿನ ಮೊತ್ತದ ವಿಮೆಗಾಗಿ ಪಾವತಿಸುವ ಪ್ರೀಮಿಯಂ ಅತಿ ಕಡಿಮೆ ಆದ್ದರಿಂದ ಅರ್ಹತೆ ಇರುವವರು ಎಲ್ಲರೂ ಈ ಪಾಲಿಸಿ ಪಡೆಯಬೇಕು. ಸಾಲವನ್ನು ಮಾಡಿಯಾದರೂ ಪಾಲಿಸಿಯನ್ನು ಚಾಲನೆಯಲ್ಲಿಡುವಷ್ಟು ಅಮೂಲ್ಯವಾದ ವಿಮೆ ಇದು. ಇನ್ನು ಪಾಲಿಸಿಯನ್ನು ಕೊಳ್ಳುವದಷ್ಟೇ ಮುಖ್ಯವಲ್ಲ.
ದೇಶದಲ್ಲಿ ಎಲ್ಐಸಿ ಅಲ್ಲದೆ ಬೇರೆ ಬೇರೆ ಖಾಸಗಿ ವಿಮಾ ಸಂಸ್ಥೆಗಳೂ ಇವೆ. ಆ ವಿಮಾ ಸಂಸ್ಥೆಗಳೂ ಹಲವು ಯೋಜನೆಗಳನ್ನು ಹೊಂದಿವೆ. ಅವುಗಳ ಉಸ್ತುವಾರಿ ನೋಡಲು ಐಆರ್ ಡಿಎಐ ಅಂದರೆ ಇನ್ಸೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ ಎಂಬ ಕೇಂದ್ರದ ವಿಮಾ ನಿಯಂತ್ರಣ ಸಂಸ್ಥೆಯೂ ಇದೆ.
ಅವುಗಳಲ್ಲಿ ಕೆಲವನ್ನು ಉದಾಹರಣೆಗೆ ಹೇಳುವುದಾದರೆ ಎಲ್ಐಸಿ ಯು ಜೀವನ್ಅಮರ್ ಹಾಗೂ ಮ್ಯಾಕ್ಸ್ ಲೈಫ್ ಸ್ಮಾರ್ಟ್ ಸೆಕ್ಯೂರ್ ಕನಿಷ್ಠ ೨೫ಲಕ್ಷಕ್ಕೆ ವಿಮೆ ಯನ್ನು ಕೊಡುತ್ತದೆ. ಐಸಿಐಸಿಐ ಐ ಪ್ರೊಟೆಕ್ಟ್, ಎಚ್ಡಿಎಫ್ಸಿ ಕ್ಲಿಕ್ ಟು ಪ್ರೊಟೆಕ್ಟ್ ಲೈಫ್ ಮತ್ತು ಟಾಟಾ ಎಐಜಿ ಸಂಪೂರ್ಣ ರಕ್ಷಾ ಕನಿಷ್ಠ ಐವತ್ತು ಲಕ್ಷ ವಿಮೆಯನ್ನು ಕೊಡುತ್ತದೆ. ಇವೆಲ್ಲವೂ ಮೇಲ್ಕಂಡ ರೇಶಿಯೋ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ. ಇವುಗಳೂ ಸೇರಿದಂತೆ ಅನೇಕ ಸಂಸ್ಥೆಗಳು ಚೆನ್ನಾಗಿವೆ.
ಅಪರೂಪದ ಮಾಹಿತಿಯನ್ನು ಬರೆದು ತಮ್ಮಲ್ಲಿ ಹಂಚಿಕೊಂಡಿದ್ದೇನೆ. ಓದಿ ತಮ್ಮ ಅಭಿಪ್ರಾಯವನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದಲ್ಲಿ ಉಳಿದ ಓದುಗರಿಗೂ ಸಹಾಯವಾಗುತ್ತದೆ.
ಪ್ರತಿಯೊಬ್ಬರಿಗೂ ಜೀವನಾವಧಿಯಲ್ಲಿ ಕಷ್ಟಗಳು ಬರುವುದು ಸಹಜ, ಈ ರೀತಿಯ ಕಷ್ಟಗಳಿಗೆ ಸುಲಭವಾಗಿ ಪರಿಹಾರ ಸಿಕ್ಕಾಗ ಹೆಚ್ಚಾಗಿ ತಲೆಕೊಳ್ಳುವುದಿಲ್ಲ. ನಮಗರಿಯದೇ ಕ್ಲಿಷ್ಟಕರವಾದ ಕಷ್ಟ ಬಂದಾಗ ಆಕಾಶವೇ ತಲೆಮೇಲೆ ಬಿದ್ದಂತಾಗಿ, ದಾರಿಕಾಣದಂತಾಗುತ್ತದೆ. ನಾವು ಸಮಸ್ಯೆಯ ಅವಿಭಾಜ್ಯ ಅಂಗವಾಗಿ ಪರಿಹಾರ ಹುಡುಕುವುದು ಅನಿವಾರ್ಯ. ಆದರೆ ನಮ್ಮನ್ನು ನಂಬಿದ, ನಮ್ಮ ಆತ್ಮೀಯ ಕುಟುಂಬದ ಸದಸ್ಯರ ರಕ್ಷಣೆಗೋಸ್ಕರ ಏನು ಮಾಡಿದರೆ ಒಳಿತು ಎಂಬ ಬಗ್ಗೆ, ಎಲ್ಲರಿಗೂ ಅರ್ಥವಾಗುವಂತೆ ಘಟನೆಯನ್ನಾಧರಿಸಿ, ಎಲ್.ಐ.ಸಿ ಸಂಸ್ಥೆಯವರ ಎಲ್.ಐ.ಸಿ ಟರ್ಮ್ ಇನ್ಸೂರೆನ್ಸ್ ಸವಿವರಗಳನ್ನು ನೀಡುತ್ತಾ, ಈ ಪಾಲಿಸಿಯು ಜನಸಾಮಾನ್ಯರಿಗೆ ಮೃತ್ಯು ಸಂಜೀವಿನಿಯಾಗಿ ಹೇಗೆ ಪರಿಹಾರ ನೀಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದ ರಾಮಚಂದ್ರರಿಗೆ ವಂದನೆಗಳು.
ReplyDeleteಸದರಿ ಎಲ್.ಐ.ಸಿ ಟರ್ಮ್ ಇನ್ಸೂರೆನ್ಸ್ ಪಾಲಿಸಿಯ ಬಗ್ಗೆ ಸುದೀರ್ಘವಾಗಿ ಅಧ್ಯಯನ ಮಾಡಿ ಜನಸಾಮಾನ್ಯರಿಗೆ ಆಗಬಹುದಾದ ಉಪಯೋಗಗಳನ್ನು ಗುರುತಿಸಿ, ಇನ್ನು ಮುಂದೆ ಮನೆಯ ಯಜಮಾನ/ಯಜಮಾನಿ ಸಕಾಲದಲ್ಲಿ ಯೋಚಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ, ಅನಿವಾರ್ಯ ಪರಿಸ್ಥಿತಿಯಲ್ಲಿ ಎಲ್.ಐ.ಸಿ ಟರ್ಮ್ ಪಾಲಿಸಿಯು ಮೃತ್ಯುಸಂಜೀವಿನಿಯ ಪಾತ್ರವಹಿಸುತ್ತದೆ ಎಂದು ತಿಳಿಸುವ ಅಪರೂಪದ ಬರವಣಿಗೆಯಾಗಿದೆ. ಈ ಲೇಖನ ಬರೀ ಲೇಖನವಾಗಿ ಉಳಿಯದೇ ಎಲ್.ಐ.ಸಿ ಸಂಸ್ಥೆಯ ಗಮನಕ್ಕೆ ತರುವುದು ಅತ್ಯಗತ್ಯ ಹಾಗೂ ಘಟನೆ ಆಧಾರಿತ ಸಾಕ್ಷಿಯಾಗಿ ಎಲ್.ಐ.ಸಿ ಯವರು ತಮ್ಮ ಉತ್ಪನ್ನಗಳ ಪ್ರಚಾರದಲ್ಲಿ ಬಳಸಲು ಯೋಗ್ಯವಾಗಿದೆ.
ಸಾರ್ವಜನಿಕ ಇಲಾಖೆ ಯಲ್ಲಿ ನಿರ್ವುತ್ತಿ ಹೊಂದಿ
ReplyDeleteಅದೇ ಇಲಾಖೆಯ RECHS ಉಳ್ಳವರಿಗೆ ಇದರಿಂದ ಪ್ರಯೋಜನ ಪಡೆಯ ಬಹುದಾ.
ಜೀವ ವಿಮೆಯ ಕುರಿತಾಗಿ ಸಮಯೋಚಿತ ಮಾಹಿತಿಗಳನ್ನು ನೀಡುವ ಲೇಖನ. ಅತ್ಯಂತ ಸರಳವಾದ ಮತ್ತು ನಿರ್ದಿಷ್ಟ ಉದಾಹರಣೆಗಳನ್ನು ಉದಾಹರಿಸುವ ಮೂಲಕವಾಗಿ ವಿಮೆಯ ಕುರಿತಾಗಿಯೇ ಕಾರ್ಯೋನ್ಮುಖರಾಗುವಂತೆ ಲೋಚಿಸುವಂತೆ ಮಾಡುತ್ತ್ರದೆ.
ReplyDelete