Skip to main content

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ.

ಆರೋಗ್ಯ ವಿಮೆ ಎಂದರೇನು?

ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳು ಬರುವ ಸಂಭವವೂ ಇದೆ. ಇದಲ್ಲದೆ ಮೆದುಳು ಮತ್ತು ಹೃದಯ ಸಂಬಂಧಿ ರೋಗ, ಕ್ಯಾನ್ಸರ್, ಕಿಡ್ನಿಗೆ ಸಂಬಂಧಪಟ್ಟ ಕಾಯಿಲೆಗಳು, ನರ ಮತ್ತು ಮೂಳೆಗೆ ಸಂಬಂಧಪಟ್ಟ ರೋಗಗಳು ಇತ್ಯಾದಿಗಳಿಂದ ನರಳುವ ಸಾಧ್ಯತೆಯನ್ನೂ ಅಲ್ಲಗಳೆಯುಂತಿಲ್ಲ. ಇವುಗಳ ಚಿಕಿತ್ಸೆಗಾಗಿ ಖರ್ಚುಗಳು ದುಬಾರಿ. ಇಂತಹಾ ಕಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಕೊಂಡಾಗ ಆಗಬಹುದಾದ ವೆಚ್ಚದ ಬಹುಭಾಗವನ್ನು ನಮ್ಮ ಪರವಾಗಿ ವಿಮಾ ಸಂಸ್ಥೆಯವರು ಆಸ್ಪತ್ರೆಗೆ ಕೊಡುವ ಒಂದು ವ್ಯವಸ್ಥೆಯೇ ಆರೋಗ್ಯ ವಿಮೆ.

ಆರೋಗ್ಯ ವಿಮೆ ಯಾರಿಗೆ, ಯಾವಾಗ.

ಎಳೆಯ ಮಗು ಸೇರಿದಂತೆ ಮಕ್ಕಳು, ವಯಸ್ಕರು, ತಂದೆ-ತಾಯಿಯರು, ಹಿರಿಯ ನಾಗರಿಕರು ಹೀಗೆ ಎಲ್ಲರೂ ಒಂದಲ್ಲ ಒಂದು ದಿನ ಕಾಯಿಲೆ ಬೀಳುವ ಸಾಧ್ಯತೆ ಇದ್ದೇ ಇದೆ. ಇಂದಿನ ನಮ್ಮ ಜೀವನಶೈಲಿಯಿಂದಾಗಿ ವೈದ್ಯಕೀಯ ಖರ್ಚುಗಳು ಹೆಚ್ಚಿನ ಪ್ರಮಾಣದಲ್ಲಿ ಏರುತ್ತಿದೆ. ಪರಿಸ್ಥಿತಿಗಳು ಹೀಗೆ ಇರುವುದರಿಂದ ಇವರೆಲ್ಲರೂ ಈ ವಿಮೆಯನ್ನು ಪಡೆಯಲೇಬೇಕು. ಯಾರಿಗೂ ಕಾಯಿಲೆಗಳು ಹೇಳಿ ಕೇಳಿ ಬರುವುದಿಲ್ಲ. ಯಾವ ನಿಮಿಷದಲ್ಲಿ ಯಾರಿಗೆ ಬೇಕಾದರೂ ಬರಬಹುದು ಎಂಬುದು ಇತ್ತೀಚಿನ ಕೊರೋನ ವೇಳೆಯಲ್ಲಿ ನಮಗೆ ಗೊತ್ತಾಗಿದೆ. ಆದ್ದರಿಂದ ಆರೋಗ್ಯ ವಿಮೆಯನ್ನು ಎಷ್ಟು ಶೀಘ್ರವಾಗಿ ಪಡೆಯುತ್ತಿವೆಯೋ ಅಷ್ಟು ಒಳ್ಳೆಯದು. ಇನ್ನು ಆರ್ಥಿಕ ಸ್ಥಿತಿಯನ್ನು ಹೇಳುವುದಾದರೆ ನಮಗೆ ಉದ್ಯೋಗ ದೊರಕಿದ ಕೂಡಲೇ ಅಥವಾ ವಯಸ್ಸು ೨೫ ವರ್ಷಗಳು ಆಗುವ ವೇಳೆಯಲ್ಲಿ ನಮ್ಮ ಬಳಿ ಆರೋಗ್ಯ ವಿಮೆ ಇರಬೇಕಾಗುತ್ತದೆ.

ಪಾಲಿಸಿ ಚಿಕ್ಕ ವಯಸ್ಸಿನಲ್ಲಿಯೇ ಏಕೆ ?

ಚಿಕ್ಕ ವಯಸ್ಸಿನಲ್ಲಿ ಪ್ರೀಮಿಯಂ ಕಡಿಮೆ ಆಗಿರುತ್ತದೆ. ಈ ಸಮಯದಲ್ಲಿ ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಆದ್ದರಿಂದ ಪಾಲಸಿಯು ನಿರಾಕರಣೆಯಾಗುವ ಸಾಧ್ಯತೆ ಬಲು ಕಡಿಮೆ. ಕೆಲವು ಸಮಯದ ನಂತರ ಗಂಭೀರವಾದ ಕಾಯಿಲೆ ಬಂದರೂ ಅವುಗಳಿಗೆ ಕಾಯುವ ಸಮಯ ಬೇಕಾಗುವುದಿಲ್ಲ.

ಆರೋಗ್ಯ ವಿಮೆ ಎಲ್ಲಿ ದೊರೆಯುತ್ತದೆ ?

ಆರೋಗ್ಯ ವಿಮೆ ಅಥವಾ ಪಾಲಿಸಿಗಳನ್ನು ಒದಗಿಸಿಕೊಡುವ ಹಲವಾರು ಸಂಸ್ಥೆಗಳಿವೆ. ಆರೋಗ್ಯ ವಿಮೆಯನ್ನು ಕೊಡಲೆಂದೇ ಇರುವ ಸಂಸ್ಥೆಗಳಾದ ಸ್ಟಾರ್ ಹೆಲ್ತ್ ಇನ್ಸೂರೆನ್ಸ್, ಕೇರ್ ಹೆಲ್ತ್ ಇನ್ಸೂರೆನ್ಸ್, ಅಪೋಲೋ ಮುನಿಚ್ ಹೆಲ್ತ್ ಇನ್ಸೂರೆನ್ಸ್, ಮಣಿಪಾಲ್ ಹೆಲ್ತ್ ಇನ್ಸೂರೆನ್ಸ್, ಎಚ್ಡಿಎಫ್ಸಿ ಎರ್ಗೊ, ಮ್ಯಾಕ್ಸ್ ಬೂಪ, ಆದಿತ್ಯ ಬಿರ್ಲಾ, ಭಾರತಿ ಎಕ್ಸಾ, ಜನರಲ್ ಇನ್ಸೂರೆನ್ಸ್ ಕಂಪನಿಗಳಾದ ನ್ಯೂ ಇಂಡಿಯಾ ಅಶ್ಯೂರೆನ್ಸ ಕಂ, ನ್ಯಾಷನಲ್ ಇನ್ಸೂರೆನ್ಸ್  ಕಂ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್  ಕಂ, ಓರಿಯೆಂಟಲ್ ಇನ್ಸೂರೆನ್ಸ್ ಕಂಪನಿಗಳು. ಇಂತಹಾ ಸಂಸ್ಥೆಗಳಲ್ಲಿ ಆಯ್ಕೆ ಮಾಡುವಾಗ ಸಂಸ್ಥೆಯ ಕ್ಲೈಮ್ ರೇಶಿಯೋ ೯೦ ಶೇಕಡಾ ಅಥವಾ ಹೆಚ್ಚು ಇರುವಂತಹ ಸಂಸ್ಥೆ ತಮ್ಮ ಆಯ್ಕೆ ಆಗಿರಲಿ. ಅಂತೆಯೇ ಯಾವುದೋ ಕಾರಣದಿಂದಾಗಿ ದೇಶದಾದ್ಯಂತ ಕಾಯಿಲೆ ಪಿಡುಗಿನಿಂದ ಹೆಚ್ಚು ಕ್ಲೈಮ್ ಗಳು ಬಂದಲ್ಲಿ ತನ್ನ ಎಲ್ಲಾ ಪಾಲಸಿದಾರರಿಗೂ ತಕರಾರು ಇಲ್ಲದೆ ಸೌಲಭ್ಯ ಕೊಡುವ ಶಕ್ತಿ ಇರಬೇಕು. ಇದನ್ನು ಸಾಲ್ವೆನ್ಸಿ ರೇಶಿಯೋ ಎನ್ನುತ್ತಾರೆ. ನಿಮ್ಮ ಆಯ್ಕೆಯ ವಿಮಾ ಸಂಸ್ಥೆಗೆ ಈ ಶಕ್ತಿ ಶೇಕಡಾ ೧೫೦ ಇರಬೇಕು.

ವಿಮಾ ಮೊತ್ತ ಮತ್ತು ಪ್ರೀಮಿಯಂ

ವಿಮಾ ಮೊತ್ತ ಅಥವಾ ಸಮ್ ಅಶ್ಯೂರ್ಡ (Sum Assured) ಎಂದರೆ ನಮಗೆ ಒಂದು ವರ್ಷಕ್ಕೆ ಇಂತಿಷ್ಟು ಬೆಲೆಯ ಚಿಕಿತ್ಸಾ ವೆಚ್ಚ ಬೇಕು ಎನಿಸಿದ ಮೊತ್ತ. ಇದನ್ನು ಆಧರಿಸಿ ನಾವು ಸಂಸ್ಥೆಗೆ ಕೊಡಬೇಕಾದ ಚಂದಾ ಅಥವಾ ವಾರ್ಷಿಕ ಪ್ರೀಮಿಯಂ ಇರುತ್ತದೆ.

ವಿಮಾ ಪಾಲಿಸಿ ಪಡೆದಾಗ ವಾರ್ಷಿಕವಾಗಿ ಚಂದಾ ಹಣವನ್ನು ಪಾವತಿಸಬೇಕು. ಇದನ್ನು ಪ್ರೀಮಿಯಂ ಎನ್ನುತ್ತಾರೆ. ಈ ವಿಮಾ ಪ್ರೀಮಿಯಂ ಪಾಲಿಸಿದಾರ ಪಾಲಿಸಿ ಪಡೆಯುವ ದಿನದಂದು ಇರುವ ವಯಸ್ಸು ಹಾಗೂ ಅಂದಿನ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿವರ್ಷವೂ ವಯಸ್ಸು ಹೆಚ್ಚಾಗುತ್ತದೆ. ಅಂತೆಯೇ ಪ್ರೀಮಿಯಂ ಸಹ ಹೆಚ್ಚಾಗುತ್ತದೆ. ಪ್ರತಿವರ್ಷವೂ ಇದನ್ನು ನಿಗದಿತ ದಿನ ಅಥವಾ ಅದರ ಮೊದಲು ಪಾವತಿಸಬೇಕು. ಪಾಲಿಸಿದಾರ ಯಾವುದೇ ವರ್ಷದಲ್ಲಿ ಚಿಕಿತ್ಸೆ ವೆಚ್ಚವನ್ನು ಸಂಸ್ಥೆಯಿಂದ ಪಡೆಯದಿದ್ದರೆ, ಪಾವತಿ ಮಾಡಿದ ಹಣದಿಂದ ಸಹಜವಾಗಿ ಸಂಸ್ಥೆಗೆ ಲಾಭವಾಗಿರುತ್ತದೆ. ಈ ಲಾಭಾಂಶದಿಂದ ಚಿಕಿತ್ಸಾ ವೆಚ್ಚ ಪಡೆಯದಿರುವ ಪಾಲಸಿದಾರರಿಗೆ ಅನ್ ಕ್ಲೈಮಡ್ ಬೋನಸ್ ಎಂದು ಮುಂದಿನ ಪ್ರೀಮಿಯಂನಲ್ಲಿ ರಿಯಾಯಿತಿ ಸಿಗುತ್ತದೆ. ನಾವು ಪಾವತಿ ಮಾಡುವ ರೂಪಾಯಿ ೫೦೦೦೦ ವರೆಗೂ ಆದಾಯ ತೆರಿಗೆ ಕಾನೂನು ೮೦ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.

ವಿವಿಧ ಮಾದರಿಯ ವಿಮೆಗಳು

ವೈಯಕ್ತಿಕ ವಿಮೆ

ತನಗೆ ಮಾತ್ರ ಎಂದು ವೈಯಕ್ತಿಕವಾಗಿ ಒಬ್ಬರೇ ತನಗಾಗಿ ವಿಮೆ ಪಡೆಯಬಹುದು. ಇದರಿಂದ ಪಾಲಸಿದಾರ ತನ್ನ ಕಾಯಿಲೆಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಆಗುವ ವೆಚ್ಚವನ್ನು ಪಡೆಯಬಹುದು. ಇದನ್ನು ಇಂಡಿವಿಜುಯಲ್ ( lndividual) ಪಾಲಿಸಿ ಎನ್ನುತ್ತಾರೆ.

ಕೌಟುಂಬಿಕ ವಿಮೆ

ಗಂಡ ಹೆಂಡತಿ ಸೇರಿದಂತೆ ಕುಟುಂಬದ ಇತರ ಸದಸ್ಯರನ್ನು ಸೇರಿಸಿ ಎಲ್ಲರಿಗೂ ವಿಮೆ ಸೌಲಭ್ಯ ಪಡೆಯುವ ವ್ಯವಸ್ಥೆಗೆ ಕೌಟುಂಬಿಕ ಪಾಲಿಸಿ ಅಥವಾ ಫ್ಯಾಮಿಲಿ ಫ್ಲೋಟರ್ (Family Floater) ಎನ್ನುತ್ತಾರೆ. ಈ ಪಾಲಿಸಿಯಲ್ಲಿ ಕುಟುಂಬದ ಎಲ್ಲರಿಗೂ ಸೇರಿದಂತೆ ಒಂದು ಬೆಲೆಯ ಪಾಲಿಸಿ ಇದ್ದು ಎಲ್ಲರೂ ಸೇರಿ ಅಥವಾ ಯಾರೋ ಒಬ್ಬ ಪಾಲಸಿದಾರ ಪಾಲಿಸಿ ಮೊತ್ತ ದಾಟದಂತೆ ಚಿಕಿತ್ಸೆ ಪಡೆಯಬಹುದು. ಈ ಪಾಲಿಸಿಯಲ್ಲಿ ವಿಮಾ ಪ್ರೀಮಿಯಂ, ಪಾಲಿಸಿ ಪಡೆಯುವ ದಿನದಂದು ಪಾಲಿಸಿಯಲ್ಲಿರುವ ಹಿರಿಯ ಪಾಲಿಸಿದಾರನ ವಯಸ್ಸು ಹಾಗೂ ಎಲ್ಲರ ಅಂದಿನ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ವಯಸ್ಸು ಹೆಚ್ಚಾದಂತೆ ಪ್ರೀಮಿಯಂ ಸಹ ಹೆಚ್ಚಾಗುತ್ತದೆ. ಈ ಪಾಲಿಸಿಯನ್ನು ಕುಟುಂಬದಲ್ಲಿನ ಗಂಡ ಹೆಂಡತಿ ಮತ್ತು ಮಕ್ಕಳನ್ನು ಸೇರಿಸಿದಂತೆ ಪಾಲಿಸಿ ಪಡೆಯಬೇಕು. ಸಾಮಾನ್ಯವಾಗಿ ಎಳೆಯ ಮಕ್ಕಳಿಂದ ೧೮ರ ವಯಸ್ಸಿನವರೆಗೆ ಪ್ರತ್ಯೇಕವಾದ ವಿಮಾ ಪಾಲಿಸಿ ಸಿಗುವುದಿಲ್ಲವಾದ್ದರಿಂದ ಫ್ಯಾಮಿಲಿ ಫ್ಲೋಟರ್ ಅಡಿಯಲ್ಲಿ ಅವರನ್ನು ಸೇರಿಸಲು ಅವಕಾಶವಿದೆ. ಮಗುವಿನ ಪಾಲಸಿಗಾಗಿ ಮಗುವಿನ ಹೆಸರು, ಜನನ ಪ್ರಮಾಣ ಪತ್ರ, ಆಸ್ಪತ್ರೆ ಬಿಡುಗಡೆ ವರದಿ, ಫೋಟೋ, ಮಗುವಿನ ಆರೋಗ್ಯ ಸ್ಥಿತಿ ವರದಿ ಬೇಕಾಗುತ್ತದೆ. ಮಗುವಿನ ವಿಮೆಗಾಗಿ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕು.

ಹಿರಿಯ ನಾಗರಿಕರ ವಿಮೆ

ಈಗಾಗಲೇ ಹೇಳಿರುವಂತೆ ವಿಮಾ ಪ್ರೀಮಿಯಂ ಪಾಲಿಸಿದಾರ ಪಾಲಿಸಿ ಪಡೆಯುವ ದಿನದಂದು ಇರುವ ವಯಸ್ಸು ಹಾಗೂ ಅಂದಿನ ಆರೋಗ್ಯ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ತಂದೆ ತಾಯಿ ಅತ್ತೆ ಮಾವ ಹೀಗೆ ಎಲ್ಲಾ ಹಿರಿಯರನ್ನು ಸೇರಿಸಬಹುದು ಎಂಬ ವಾಕ್ಯ ಸಿಹಿಯಾಗಿರುತ್ತದೆ. ಆದರೆ ತಿಳಿಯ ಬೇಕಾದ ಪ್ರಧಾನ ಅಂಶವೆಂದರೆ, ಹಿರಿಯ ವಯಸ್ಸಿನವರಿಗೆ ಪ್ರೀಮಿಯಂ ಸಹಜವಾಗಿ ಹೆಚ್ಚೇ ಇರುತ್ತದೆ. ಜೊತೆಗೆ ಅವರ ಆರೋಗ್ಯ ಸ್ಥಿತಿಯೂ ಚೆನ್ನಾಗಿರುವುದಿಲ್ಲ. ಪದೇ ಪದೇ ಕಾಯಿಲೆ ಬೀಳುವ ಸಂಭವವಿರುತ್ತದೆ. ಇವರನ್ನು ಫ್ಯಾಮಿಲಿ ಫ್ಲೋಟರ್ ನಲ್ಲಿ ಸೇರಿಸುವುದರ ಬದಲು ಅವರಿಗೇ ಪ್ರತ್ಯೇಕವಾಗಿ ಪಾಲಿಸಿ ಪಡೆಯುವುದು ಲಾಭದಾಯಕ. ಕೌಟುಂಬಿಕ ಅಥವಾ ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಇವರನ್ನು ಸೇರಿಸಿದರೆ ಇವರ ಕ್ಲೈಮ್ ನಿಂದಾಗಿ, ಉಳಿದವರು ಕ್ಲೈಮ್ ಮಾಡದಿದ್ದರೂ ಪ್ರೀಮಿಯಂ ಹೆಚ್ಚು ಪಾವತಿಸಬೇಕಾಗುತ್ತದೆ. ಜೊತೆಗೆ ಬೋನಸ್ ಬರುವುದಿಲ್ಲ. ಹಿರಿಯ ನಾಗರಿಕರು ಪಾಲಿಸಿ ಪಡೆಯುವಾಗ ಕೊ-ಪೇ ಎಂದರೆ ಚಿಕಿತ್ಸೆ ಖರ್ಚಿನಲ್ಲಿ ಒಂದಷ್ಟು ಪಾಲನ್ನು (ಸಾಮಾನ್ಯವಾಗಿ ಶೇಕಡಾ ೨೦) ತಾವು ವಹಿಸಿಕೊಳ್ಳುವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಗುಂಪು ವಿಮೆ ಅಥವಾ ಗ್ರೂಪ್ ಇನ್ಶುರೆನ್ಸ್

ಸಾಮಾನ್ಯವಾಗಿ ಒಂದು ಸಂಸ್ಥೆಯಲ್ಲಿ ಅಥವಾ ಸಂಘದಲ್ಲಿ ಇರುವ ಉದ್ಯೋಗಿಗಳು ಅಥವಾ ಸದಸ್ಯರು ಒಟ್ಟಾಗಿ ವಿಮೆಯನ್ನು ಪಡೆಯಲು ಇರುವ ಸೌಲಭ್ಯ. ಈ ಪಾಲಿಸಿಯ ವಿಮಾ ಮೊತ್ತವು ಸಂಸ್ಥೆಯ ಅಥವಾ ಸಂಘದ ಆಡಳಿತ ಮಂಡಳಿ ಹಾಗೂ ಸದಸ್ಯರು ಇಬ್ಬರೂ ಸೇರಿ ತೀರ್ಮಾನಿಸಿ, ಪ್ರೀಮಿಯಂ ಪಾವತಿ ಮಾಡುತ್ತಾರೆ. ವೈಯಕ್ತಿಕವಾಗಿ ಸದಸ್ಯರು ಈ ವಿಮಾ ಸೌಲಭ್ಯ ಪಡೆಯುತ್ತಾರೆ. ಕೇವಲ ವಿಮೆ‌ ಸೌಲಭ್ಯ ಪಡೆಯಲೆಂದೇ ಗುಂಪು ಮಾಡಿಕೊಂಡು ಪಾಲಿಸಿ ಪಡೆಯಲು ಅವಕಾಶವಿರುವುದಿಲ್ಲ. ಗುಂಪು ವಿಮೆಯಲ್ಲಿ ಪ್ರೀಮಿಯಂ ದರ ಕಡಿಮೆ ಇರುತ್ತದೆ. ಹಾಗೆಯೇ ಎಲ್ಲ ಸದಸ್ಯರಿಗೂ ಏಕರೂಪದ ಕವರೇಜ್ ಪಾಲಿಸಿಯಾಗಿರುತ್ತದೆ.

ಕೆಲವರು ತಾವು ಉದ್ಯೋಗ ಮಾಡುವ ಸಂಸ್ಥೆಯಿಂದ ಆರೋಗ್ಯ ವಿಮೆಯನ್ನು ಹೊಂದಿರುತ್ತಾರೆ, ಹೀಗೆ ಕೆಲಸ ಮಾಡುವ ಸಂಸ್ಥೆಯಿಂದ ವಿಮೆಯನ್ನು ಹೊಂದಿದವರು ಪ್ರತ್ಯೇಕವಾಗಿ ಒಂದು ಪಾಲಿಸಿಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಉದ್ಯೋಗ ಬದಲಾಯಿಸಿದ ಅವಧಿಯಲ್ಲಿ ತೊಂದರೆ ಆಗಬಾರದು. ಮತ್ತು ಯಾವುದೇ ಕಾರಣದಿಂದ ಸಂಸ್ಥೆ ವಿಮಾ ಪಾಲಿಸಿಯನ್ನು ರದ್ದುಮಾಡಿದಲ್ಲಿ ಉಪಯೋಗವಾಗಲು ಇದು ಬೇಕಾಗುತ್ತದೆ. ಆ ಸಮಯದಲ್ಲಿ ನಮಗೆ ಯಾವುದಾದರೂ ಕಾಯಿಲೆ ಇದ್ದರೆ ಹೊಸ ಪಾಲಿಸಿ ತೆಗೆದುಕೊಳ್ಳಲು ಪ್ರೀಮಿಯಂ ಹೆಚ್ಚಾಗುವುದು ಸಹಜ. ಗುಂಪು ಪಾಲಿಸಿ ಇದ್ದವರು ತಮ್ಮ ಪಾಲಿಸಿಯನ್ನು ಸಂಸ್ಥೆ ಚಾಲ್ತಿಯಲ್ಲಿಟ್ಟಿದೆಯೇ ಎಂಬುದನ್ನು ಕಾಲಕಾಲಕ್ಕೆ ತಿಳಿದುಕೊಳ್ಳಬೇಕು. ಯಾವುದಾದರೂ ಕಾರಣದಿಂದಾಗಿ ಪಾಲಸಿ ಚಾಲ್ತಿಯಲ್ಲಿರದಿದ್ದರೆ ವಿಮಾ ಸೌಲಭ್ಯ ದೊರೆಯುವುದಿಲ್ಲ.

ಪ್ರಸೂತಿ ವಿಮೆ

ಪ್ರಸೂತಿ ಚಿಕಿತ್ಸೆಗಾಗಿ ಪ್ರತ್ಯೇಕ ಪಾಲಿಸಿ ಇದ್ದು ಗರ್ಭಧಾರಣೆ ಸಮಯದಲ್ಲಿ ಬರುವ ವೆಚ್ಚ, ಶಿಶು ಆರೈಕೆ, ಚುಚ್ಚುಮದ್ದು ನೀಡುವಿಕೆ, ಇತರ ಪೂರಕ ವೆಚ್ಚಗಳು ವಿಮಾ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸರ್ಜರಿಗಳು ಅಪಘಾತ ಹೊರತುಪಡಿಸಿ ಕಾಸ್ಮೆಟಿಕ್ ಸರ್ಜರಿ, ಡೆಂಟಲ್ ಸರ್ಜರಿ ಇವುಗಳಿಗೂ ವಿಮೆ ದೊರೆಯುವುದಿಲ್ಲ. ಈ ವಿಶೇಷ ಪಾಲಿಸಿ ಪಡೆಯುವ ಮುನ್ನ ನಿಮ್ಮ ಅಗತ್ಯಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು.

ಹೆಚ್ಚಿನ ಸುರಕ್ಷತೆಗಾಗಿ ರೈಡರ್ ಬೆನಿಫಿಟ್

ಇವುಗಳಲ್ಲದೆ ಹೆಚ್ಚಿನ ಸುರಕ್ಷತೆಗಾಗಿ ರೈಡರ್ ಬೆನಿಫಿಟ್ ಎಂದರೆ ಗಂಭೀರ ಕಾಯಿಲೆಗಳಿಗೆ ಹಣಕಾಸು ನೆರವು ಒದಗಿಸುವ ಪಾಲಿಸಿಗಳಾದ, ಶಾಶ್ವತ ಅಂಗವೈಕಲ್ಯ ಉಂಟಾದಾಗ ಕೊಡುವ ಹಣಕಾಸಿನ ನೆರವು, ಅಪಘಾತದಿಂದ ಸಾವು ಸಂಭವಿಸಿದಲ್ಲಿ ನೆರವಿಗೆ ಬರುವ ಅಪಘಾತ ಹಣಕಾಸಿನ ನೆರವು, ಫ್ಲೋಟರ್ ಪಾಲಿಸಿಗಳಲ್ಲಿ ಮುಖ್ಯ ಪಾಲಸಿದಾರ ಆಕಸ್ಮಿತವಾಗಿ ಸಾವನ್ನಪ್ಪಿದರೆ ಮುಂದಿನ ಪ್ರೀಮಿಯಂ ಪಾವತಿಸದಂತೆ ವಿನಾಯಿತಿ ನೀಡುವ ಪ್ರೀಮಿಯಂ ವೇವರ್ಸ ಬೆನಿಫಿಟ್, ಸರ್ಜರಿ ವೆಚ್ಚ ದೊರೆಯುವ ಪಾಲಿಸಿಗಳು ಮುಖ್ಯ. ಹೃದಯ ಸಂಬಂಧಿ, ಕ್ಯಾನ್ಸರ್, ಮೆದುಳಿನ ಜ್ವರ, ಕಿಡ್ನಿ ಸಂಬಂಧಿತ ಕಾಯಿಲೆಗಳು ಇತ್ಯಾದಿಗಳ ಸರ್ಜರಿಗಳಿಗೆ, ಸರ್ಜರಿಯ ಮೊದಲು ಮತ್ತು ನಂತರ ಕೆಲವು ಔಷಧಿ ಉಪಚಾರ ಖರ್ಚುಗಳು ಬರುತ್ತವೆ. ಇವುಗಳ ಪಾವತಿ ಸಾಧ್ಯವೇ, ಕಿಡ್ನಿ ಅಥವಾ ಅಂಗಾಂಗ ದಾನ ಪಡೆದಲ್ಲಿ ಅಂತಹ ದಾನ ಕೊಟ್ಟವರಿಗೆ ಚಿಕಿತ್ಸಾ ವೆಚ್ಚ ದೊರೆಯುತ್ತದೆಯೇ ಎಂಬುದು ಮುಖ್ಯವಾಗುತ್ತದೆ. ಓಪಿಡಿ ಅಥವಾ ಹೊರ ರೋಗಿಗಳಿಗೆ ವಿಮೆಯಲ್ಲಿ ಅವಕಾಶ ಇಲ್ಲದಿರುವುದರಿಂದ ಹೀಗೆ ಆಗಬಹುದಾದ ವೆಚ್ಚ ದೊರೆಯಬಹುದಾದ ಪಾಲಿಸಿಗಳು ದೊರೆತರೆ ಅನುಕೂಲ.

ಕ್ರಿಟಿಕಲ್ ಇಲ್ನೆಸ್, ಗಂಭೀರ ಅನಾರೋಗ್ಯ ವಿಮೆ, ನಿರ್ದಿಷ್ಟ ಅನಾರೋಗ್ಯ ಪತ್ತೆಯಾದಲ್ಲಿ ನಿಗದಿತ ಮೊತ್ತವನ್ನು ಕೊಡಲಾಗುತ್ತದೆ. ವೈದ್ಯಕೀಯ ವೆಚ್ಚ ಮತ್ತು ಚೇತರಿಕೆ ವೆಚ್ಚ ಇದರಲ್ಲಿ ಸೇರಿರುತ್ತದೆ. ಸ್ಟ್ರೋಕ್, ಹೃದ್ರೋಗ, ಪ್ಯಾರಾಲಿಸಿಸ್, ಕ್ಯಾನ್ಸರ್, ಕಿಡ್ನಿ ವೈಫಲ್ಯ ಇವುಗಳಿಗೆ ಆರ್ಥಿಕ ನಷ್ಟ ತಪ್ಪಿಸಲು ಇಂತಹಾ ಸೌಲಭ್ಯಗಳ ಪಾಲಿಸಿ ಬೇಕು. ಆದರೆ ಕೆಲವು ಕಾಯಿಲೆಗಳ ಗಂಭೀರತೆ ನಿಗದಿತ ಹಂತವನ್ನು ತಲುಪಿದಾಗ ಮಾತ್ರ ವಿಮಾ ಪರಿಹಾರ ದೊರೆಯುತ್ತದೆ. ಆ ಸೌಲಭ್ಯವನ್ನು ಪಡೆಯಲು ಆ ಹಂತದವರೆಗೂ ನರಳಬೇಕಾದ ವಿಪರ್ಯಾಸ ಇರಬಾರದು. ಇಂತಹಾ ನಿಬಂಧನೆ ಗಳ ಬಗ್ಗೆ ತಿಳಿದು ಕೊಳ್ಳಬೇಕು.

ಪಡೆದಿರುವ ಪಾಲಿಸಿಯಲ್ಲಿ ವರ್ಷಕ್ಕೊಮ್ಮೆ ಉಚಿತ ಪೂರ್ಣ ಆರೋಗ್ಯ ತಪಾಸಣೆ ಸೇರಿರುವ ಸಾಧ್ಯತೆ ಇರುತ್ತದೆ. ಆದರೆ ಅದಕ್ಕೇ ಪ್ರಾಶಸ್ತ್ಯ ಕೊಟ್ಟು, ಬೇರೆ ಕಡೆ ಅದು ಉಚಿತ ದೊರೆಯುತ್ತದೆ ಎಂದು ಇರುವ ಆರೋಗ್ಯ ವಿಮಾ ಸಂಸ್ಥೆಯನ್ನು ಬದಲಾಯಿಸುವುದು ಆರ್ಥಿಕವಾಗಿ ಲಾಭದಾಯಕ ವಲ್ಲ.

ಉನ್ನತ ದರ್ಜೆಯ ರೂಮುಗಳಿಗಾಗಿ ರೂಮ್ ರೆಂಟ್ ರೈಡರ್ ಮುಂತಾದ ಪಾಲಸಿಗಳು ದೊರೆಯುತ್ತವೆ. ಅಗತ್ಯವಿದ್ದವರು ಪ್ರತ್ಯೇಕವಾಗಿ ಪೂರ್ಣ ವಿವರ ತಿಳಿದು ಅರ್ಥಮಾಡಿಕೊಂಡು ಮುಂದುವರಿಯಬಹುದು.

ಚಿಕಿತ್ಸಾವೆಚ್ಚ ಮರುಪಾವತಿಯ ವಿಧಾನ

ಆರೋಗ್ಯ ವಿಮೆಯನ್ನು ಪಡೆದವರು ಚಿಕಿತ್ಸೆಗಾಗಿ ಯಾವುದಾದರೂ ಆಸ್ಪತ್ರೆಗೆ ಹೋಗಬೇಕಾದಾಗ ಎರಡು ಪ್ರಶ್ನೆಗಳು ಉದ್ಭವಿಸುತ್ತವೆ. ತಾವು ಚಿಕಿತ್ಸೆಗಾಗಿ ಹೋಗುವ ಆಸ್ಪತ್ರೆ, ನೆಟ್ ವರ್ಕ್ ಆಸ್ಪತ್ರೆಯೇ ಅಥವಾ ನೆಟ್ ವರ್ಕ್ ಅಲ್ಲದ ಆಸ್ಪತ್ರೆಯೇ. ವಿಮಾ ಕಂಪನಿಯವರು ತನ್ನ ಪಾಲಸಿದಾರರಿಗೆ ಚಿಕಿತ್ಸೆ ಕೊಡುವಂತೆ ಕೆಲವು ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡ ಆಸ್ಪತ್ರೆಗಳಿಗೆ ನೆಟ್ ವರ್ಕ್ ಆಸ್ಪತ್ರೆಗಳು ಎನ್ನುತ್ತಾರೆ.

ನೆಟ್ ವರ್ಕ್ ಆಸ್ಪತ್ರೆ

ನೆಟ್ ವರ್ಕ್ ಆಸ್ಪತ್ರೆ ಆಗಿದ್ದರೆ ನಗದು ರಹಿತ (ಕ್ಯಾಶ್ ಲೆಸ್) ವ್ಯವಸ್ಥೆ ಇರುತ್ತದೆ. ಚಿಕಿತ್ಸೆಗೆ ಆಗುವ ಖರ್ಚುಗಳನ್ನು ರೋಗಿಯಿಂದ ಹಣವನ್ನು ಪಡೆಯದೆ ಚಿಕಿತ್ಸೆಯನ್ನು ಪ್ರಾರಂಭಿಸುವುದು ಮತ್ತು ಚಿಕಿತ್ಸೆ ಮುಗಿಸಿ ವಾಪಸಾಗುವ ಮುನ್ನ ಭಾಗಶಃ ಖರ್ಚನ್ನು ಪಡೆಯುವ ವ್ಯವಸ್ಥೆ. ವಿವರವಾಗಿ ಹೇಳುವುದಾದರೆ ಚಿಕಿತ್ಸೆಗೆ ಆಗಿರುವ ವೆಚ್ಚವನ್ನು ವಿಮಾ ಸಂಸ್ಥೆಯವರು ನೇರವಾಗಿ ಆಸ್ಪತ್ರೆಗೆ ಪಾವತಿ ಮಾಡುತ್ತಾರೆ. ಅವುಗಳಲ್ಲಿ ಕೆಲವು ಖರ್ಚುಗಳು ವಿಮಾ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆ ಭಾಗದ ಖರ್ಚನ್ನು ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾಗಿ ವಾಪಸಾಗುವ ಮುನ್ನ ಪಾವತಿ ಮಾಡಬೇಕಾಗುತ್ತದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಭೇಟಿ ಕೊಟ್ಟಾಗ ಅಲ್ಲಿ ವಿಮಾ ಸೌಲಭ್ಯ ಕಲ್ಪಿಸುವ ಥರ್ಡ್ ಪಾರ್ಟಿ ಅಡ್ಮಿನಿಸ್ಟ್ರೇಟರ್ ಬಳಿಗೆ ಹೋಗಿ ಅರ್ಜಿಯನ್ನು ಭರ್ತಿ ಮಾಡಿ ಜೊತೆಗೆ ವಿಮಾ ಸಂಸ್ಥೆ ನೀಡಿರುವ ಗುರುತಿನ ಚೀಟಿ, ಕೆವೈಸಿ ದಾಖಲೆಗಳನ್ನು ಕೊಡಬೇಕು. ಕೊಡುವ ಮುನ್ನ ಎಲ್ಲಾ ದಾಖಲೆಗಳ ಪ್ರತಿಯನ್ನು ಮುಂದೆ ಆಕಸ್ಮಿಕವಾಗಿ ಬೇಕಾದಾಗ ಉಪಯೋಗವಾಗಲು ಜೋಪಾನವಾಗಿ ಇಟ್ಟುಕೊಳ್ಳಬೇಕು.

ಮರುಪಾವತಿ ಆಸ್ಪತ್ರೆಗೆ ದಾಖಲಾದ ಬಗ್ಗೆ ಇ-ಮೇಲ್ ಮೂಲಕ ತಿಳಿಸಬೇಕು ನಂತರ ಮರುಪಾವತಿ ಅರ್ಜಿ ಭರ್ತಿ ಮಾಡಿ ಬಿಡುಗಡೆ ಪತ್ರ ಲ್ಯಾಬ್ ರಿಪೋರ್ಟ್, ಔಷಧಿ ಚೀಟಿ, ಬಿಲ್ಲುಗಳು, ಕ್ಯಾಶ್ ಬಿಲ್ಲುಗಳನ್ನು ಸಮರ್ಪಕವಾಗಿ ಜೋಡಿಸಿ ಕಳಿಸಬೇಕು. ಬಿಡುಗಡೆ ವರದಿ / ಪತ್ರದಲ್ಲಿ ಇರುವ ದಿನಾಂಕ ಹಾಗೂ ಚಿಕಿತ್ಸೆಯ ಬಗ್ಗೆ ವಿವರ ಇರಬೇಕು. ಎಲ್ಲವೂ ಸಮರ್ಪಕವಾಗಿದ್ದರೆ ಒಂದು ತಿಂಗಳೊಳಗೆ ವಿಮಾ ಸೌಲಭ್ಯ ಪಾವತಿಯಾಗುತ್ತದೆ. ಈ ದಾಖಲೆಗಳ ಸಲ್ಲಿಸುವ ಮುನ್ನ ಅದರ ಒಂದು ಪ್ರತಿಯನ್ನು ಮರೆಯದೆ ಇಟ್ಟುಕೊಳ್ಳಬೇಕು.,

ನೆಟ್ ವರ್ಕ್ ಅಲ್ಲದ ಆಸ್ಪತ್ರೆ.

ಇಲ್ಲಿ ಕ್ಯಾಶ್ ಲೆಸ್ ವ್ಯವಸ್ಥೆ ಇರುವುದಿಲ್ಲ. ಅಂದರೆ ಆಗುವ ಎಲ್ಲಾ ಖರ್ಚುಗಳನ್ನು ಚಿಕಿತ್ಸೆ ಮುಗಿಸಿ ವಾಪಸಾಗುವ ಮೊದಲು ರೋಗಿಯು ಆಗಿರುವ ವೆಚ್ಚವನ್ನು ಆಸ್ಪತ್ರೆಗೆ ಪೂರ್ಣವಾಗಿ ಪಾವತಿ ಮಾಡಬೇಕು ಎಂದರ್ಥ. ಆಸ್ಪತ್ರೆಗೆ ದಾಖಲಾದ ನಂತರ ಆ ಬಗ್ಗೆ ಸಂಸ್ಥೆಗೆ ಇ-ಮೇಲ್ ಮೂಲಕ ತಿಳಿಸಬೇಕು. ನಂತರ ಮರುಪಾವತಿ ಅರ್ಜಿ ಭರ್ತಿ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ವರದಿ /ಪತ್ರ, ಪ್ರಯೋಗಾಲಯ ವರದಿ, ಔಷಧಿ ಚೀಟಿಗಳು, ಸಂಬಂಧಿಸಿದ ಕ್ಯಾಶ್ ಬಿಲ್ಲುಗಳನ್ನು ಸಮರ್ಪಕವಾಗಿ ಜೋಡಿಸಿ ವಿಮಾ ಸಂಸ್ಥೆಗೆ ಕಳಿಸಬೇಕು. ಬಿಡುಗಡೆ ಪತ್ರದಲ್ಲಿ ಇರುವ ಕಾಯಿಲೆ ಮಾಹಿತಿ, ದಿನಾಂಕಗಳ ಬಗ್ಗೆ ಇನ್ನೊಮ್ಮೆ ಪರೀಕ್ಷಿಸಬೇಕು. ಇವುಗಳ ಒಂದು ಪ್ರತಿಯನ್ನು ಇಟ್ಟುಕೊಂಡು ಸಲ್ಲಿಸಬೇಕು. ಸುಮಾರು ಒಂದು ತಿಂಗಳೊಳಗೆ ಈ ವೆಚ್ಚಗಳು ಮರು ಪಾವತಿಯಾಗುತ್ತದೆ. ಸಂಸ್ಥೆಯಿಂದ ಚಿಕಿತ್ಸೆಗೆ ಕೊಡಬಹುದಾದ ಹಣವನ್ನು ರೋಗಿಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಾರೆ.

ಆರೋಗ್ಯ ವಿಮೆಯನ್ನು ಪಡೆಯುವಾಗ ಪರಿಗಣಿಸಬೇಕಾದ ವಿಷಯಗಳು.

ನೀವು ಪಡೆಯುವ ಪಾಲಸಿಯು ಹೆಚ್ಚಿನ ಎಲ್ಲಾ ಕಾಯಿಲೆಗಳಿಗೂ ಸೌಲಭ್ಯ ಕೊಡುವ ಪಾಲಿಸಿ ಆಗಿರಬೇಕು. ಕನಿಷ್ಠ ನಿಮ್ಮ ಪಾಲಿಸಿಯು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆಯೇ ಎಂದು ಪರೀಕ್ಷಿಸಬೇಕು.

ಕೆಲವು ಪಾಲಿಸಿಗಳು ನಿರ್ದಿಷ್ಟ ರೋಗಕ್ಕೆ ಮಾತ್ರ ಎಂದು ಇರುತ್ತವೆ. ಆದ್ದರಿಂದ ಅದು ಎಲ್ಲಾ ಕಾಯಿಲೆಗಳಿಗೂ ಅನ್ವಯವಾಗದಿದ್ದರೆ ಯಾವ ಯಾವ ಕಾಯಿಲೆಗಳಿಗೆ ಪಾಲಸಿಯ ಸೌಲಭ್ಯ ಇರುತ್ತದೆ, ಯಾವಾಗಿನಿಂದ ಸೌಲಭ್ಯ ಪ್ರಾರಂಭವಾಗುತ್ತದೆ ಎಂಬುದು ಮುಖ್ಯ.

ನಿಗದಿಪಡಿಸಿದ ಆಸ್ಪತ್ರೆ ವೆಚ್ಚಗಳಾದ ರೂಮ್ ಬಾಡಿಗೆ, ನರ್ಸಿಂಗ್ ಚಾರ್ಜ್, ವೈದ್ಯರ ಶುಲ್ಕ, ಆಂಬುಲೆನ್ಸ್ ಖರ್ಚುಗಳನ್ನು ಮಾತ್ರ ಕೊಡಲಾಗುವುದು. ಮದ್ಯಪಾನ, ಧೂಮಪಾನ, ಡ್ರಗ್ಸ್ ಸೇವನೆ ಮುಂತಾದ ಜೀವನ ಪದ್ಧತಿಯಿಂದ ಆಗುವ ರೋಗಗಳಿಗೆ ವಿಮಾ ಸೌಲಭ್ಯ ಇರುವುದಿಲ್ಲ. ಯುದ್ಧದಲ್ಲಿ ಗಾಯಗೊಳ್ಳುವುದು, ಉದ್ದೇಶಪೂರ್ವಕ ಗಾಯವನ್ನು ಮಾಡಿಕೊಂಡಿರುವುದು, ಹುಟ್ಟಿನಿಂದಲೇ ಇರುವ ಕಾಯಿಲೆ, ಅಂಗವೈಕಲ್ಯ, ಎಚ್ಐವಿ ಸಂಬಂಧಿಸಿದಂತೆ ವಿಮಾ ಸೌಲಭ್ಯ ಇರುವುದಿಲ್ಲ. 

ಸಾಂಕ್ರಾಮಿಕ ರೋಗಗಳಿಗೆ ಸೌಲಭ್ಯಗಳಿರುವುದಿಲ್ಲ ಎಂಬ ವಾಕ್ಯ ಇರುವುದರಿಂದ ಅವರು ದೃಷ್ಟಿಯಿಂದ ಯಾವ ಯಾವ ಕಾಯಿಲೆ ಇದರಡಿ ಬರುತ್ತದೆ ಎಂದು ತಿಳಿದು ಕೊಳ್ಳಬೇಕು. ಚಿಕೂನ್ ಗುನ್ಯಾ, ಕೊರೋನ, ಡೆಂಗ್ಯೂ, ಕಾಲರಾ ಇತ್ಯಾದಿಗಳು ಸಾಂಕ್ರಾಮಿಕ ಕಾಯಿಲೆಗಳಾಗಿವೆ. ಸಾಮಾನ್ಯವಾಗಿ ಹೆರಿಗೆ ವೆಚ್ಚ, ಪ್ರಸೂತಿ ವೆಚ್ಚಗಳು ದೊರೆಯುವ ಸಾಧ್ಯತೆ ಕಡಿಮೆ. ನಿಮಗೆ ಅದು ಅಗತ್ಯವಾಗಿದ್ದರೆ ಆ ಬಗ್ಗೆ ಪರೀಕ್ಷಿಸಿ.

ಜ್ವರ, ಮೈ ಕೈ ನೋವು ಇಂತಹ ಸಣ್ಣ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಸಾಕು. ಇವುಗಳಿಗೆ ಮನೆಯ ಸಮೀಪದಲ್ಲಿ ಇರುವ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಇವುಗಳ ವೆಚ್ಚವೂ ಕಡಿಮೆ ಆದ್ದರಿಂದ ಇವುಗಳಿಗಾಗಿ ಆಸ್ಪತ್ರೆಗೆ ಹೋಗುವುದು  ಲಾಭದಾಯಕವಲ್ಲ.

ಡೆಂಗ್ಯೂ, ಕೊರೋನಾ ಮುಂತಾದ ಸುಮಾರು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬಹುದಾದ ಚಿಕಿತ್ಸೆಗಳು. ಇವುಗಳನ್ನು ಸೆಕೆಂಡರಿ ಚಿಕಿತ್ಸೆಗಳು ಎನ್ನುತ್ತಾರೆ. ಇಂತಹ ಸರ್ಜರಿ ಇಲ್ಲದ ಕಾಯಿಲೆ ಬಂದಾಗ ಔಷಧಿಗಿಂತ ಆಸ್ಪತ್ರೆ ಖರ್ಚು ಹೆಚ್ಚಾಗಿರುತ್ತದೆ. ಆದ್ದರಿಂದ ಆಸ್ಪತ್ರೆಗೆ ಅನಿವಾರ್ಯವಾದಾಗ ಮಾತ್ರ ಹೋಗುವುದು ಒಳ್ಳೆಯದು.

ಪಾಲಸಿನ ಆಯ್ಕೆ ಮಾಡುವಾಗ ನಿಮ್ಮ ಆಯ್ಕೆಯ ಆಸ್ಪತ್ರೆ ಪಾಲಿಸಿ ಪಟ್ಟಿಯಲ್ಲಿ ಇದೆಯೇ ಎಂದು ಒಮ್ಮೆ ಪರೀಕ್ಷಿಸಿ, ಅಲ್ಲಿ ನಿಮಗೆ ಬೇಕಾದ ವೈದ್ಯರು ಸಿಕ್ಕಲ್ಲಿ ಸಂತೋಷದ ವಿಷಯವೇ ಸರಿ. ಇಲ್ಲವಾದಲ್ಲಿ ಸೇರಿಸಲು ಸಾಧ್ಯವೇ, ಇರುವ ಕೆಲವು ಆಸ್ಪತ್ರೆಗಳಲ್ಲಿ ನಗದು ರಹಿತ ಅಥವಾ ಮರುಪಾವತಿ ಸೌಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಪಾಲಿಸಿಗಳಲ್ಲಿ ಸಾಮಾನ್ಯವಾಗಿ ಆಯುರ್ವೇದ ಯುನಾನಿ, ಹೋಮಿಯೋಪತಿ, ಸಿದ್ಧ ಪದ್ದತಿಗಳ ವೈದ್ಯಕೀಯ ಚಿಕಿತ್ಸೆಗಳಿಗೆ ಸೌಲಭ್ಯ ಸಿಗುವ ಸಾಧ್ಯತೆ ಕಡಿಮೆ. ಇವುಗಳ ವೆಚ್ಚಕ್ಕಾಗಿ ವಿಮಾ ಸೌಲಭ್ಯವನ್ನು ಪಡೆಯುವುದು ಖರ್ಚಿನ ದೃಷ್ಟಿಯಿಂದ ಒಳ್ಳೆಯದಲ್ಲ

ಆಸ್ಪತ್ರೆಯ ವೆಚ್ಚದಲ್ಲಿ ನಿಮಗೆ ಇರುವ ವೆಚ್ಚದ ಪರಿಮಿತಿಯಲ್ಲೇ ಆಸ್ಪತ್ರೆಯ ಕೊಠಡಿಯನ್ನು ಪಡೆಯುವುದು ಒಳ್ಳೆಯದು. ಕೊಠಡಿ ಬಾಡಿಗೆಗೆ ಅನುಗುಣವಾಗಿ ಸರ್ಜರಿ ಇತ್ಯಾದಿ ವೆಚ್ಚಗಳು ತೀರ್ಮಾನವಾಗುತ್ತವೆ. ಆದ್ದರಿಂದ ನಿಮ್ಮ ವ್ಯಾಪ್ತಿಯ ಕೊಠಡಿಯನ್ನೇ ಆಯ್ಕೆ ಮಾಡಬೇಕು. ಅದನ್ನು ಬದಲಾಯಿಸಿಕೊಂಡರೆ ಸಂಬಂಧ ಪಟ್ಟ ಇತರ ಎಲ್ಲಾ ಖರ್ಚುಗಳು ಸಮಾನುಪಾತವಾಗಿ ಹೆಚ್ಚಾಗುವುದರಿಂದ ಅದು ಲಾಭದಾಯಕವಲ್ಲ.

ಪಾಲಿಸಿಯನ್ನು ಪಡೆಯುವಾಗ ನಾವು ಕೊಡುವ ಎಲ್ಲ ಮಾಹಿತಿಗಳು ಸತ್ಯವೇ ಆಗಿರಬೇಕು. ಆದ್ದರಿಂದ ಈಗ ನಮಗೆ ಇರುವ ಕಾಯಿಲೆ, ನಮ್ಮ ಹವ್ಯಾಸ, ನಮ್ಮ ಕುಟುಂಬದ ಆರೋಗ್ಯ, ಇತಿಹಾಸ ಇವುಗಳನ್ನು ಮರೆಮಾಚಬಾರದು. ಹಾಗೇನಾದರೂ ತಪ್ಪು ಮಾಹಿತಿಯನ್ನು ಕೊಟ್ಟಲ್ಲಿ, ನಾವು ಕೊಟ್ಟ ಮಾಹಿತಿ ತಪ್ಪು ಎಂದು ಕಂಡುಬಂದಲ್ಲಿ ನಮಗೆ ದೊರಕ ಬಹುದಾದ ಪಾಲಸಿಯ ಸೌಲಭ್ಯ ನಿರಾಕರಣೆಯಾಗಬಹುದು. ಆಗ ನಂಬಿಕೊಂಡ ಮೂಲದಿಂದ ಹಣವು ದೊರೆಯದಿರುವುದರಿಂದ ಆರ್ಥಿಕ ಸ್ಥಿತಿ ಪೂರ್ಣ ಹದಗೆಡುತ್ತದೆ. ಪಾಲಿಸಿ ಕೊಳ್ಳುವ ಮೊದಲು ಕಾಯಿಲೆಗಳಿದ್ದಾಗ ನಮಗೆ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲು ಹೇಳಬಹುದು. ಅವುಗಳನ್ನು ತಪ್ಪದೆ ಮಾಡಿಸಬೇಕಾಗುತ್ತದೆ. ಇದು ಅನಿವಾರ್ಯ. ಒಮ್ಮೆ ಪಾಲಿಸಿಯನ್ನು ಪ್ರಾರಂಭಿಸಿದ ಬಳಿಕ ಮಧ್ಯದಲ್ಲಿ ಯಾವುದೇ ಕಾರಣದಿಂದಲೂ ಪ್ರೀಮಿಯಂ ಪಾವತಿ ಮಾಡುವುದನ್ನು ಮರೆಯಬೇಡಿ. ಪಾಲಸಿ ತೆಗೆದುಕೊಳ್ಳ ಮುನ್ನವೇ ಉತ್ತಮವಾದ ವಿಮಾ ಪಾಲಿಸಿಯನ್ನ ಪಡೆಯಿರಿ. ಪ್ರೀಮಿಯಂ ಕಡಿಮೆಯಾಗುತ್ತದೆ ಎಂದು ಸಂಸ್ಥೆಯನ್ನು ಪದೇ ಪದೇ ಬದಲಾಯಿಸಬೇಡಿ. ಹಾಗೆ ಬದಲಾಯಿಸಲೇಬೇಕಾದ ಸಂದರ್ಭ ಬಂದಲ್ಲಿ ಮುಂದಿನ ಪ್ರೀಮಿಯಂ ಕಟ್ಟುವ ಅರವತ್ತು ದಿನಗಳ ಮೊದಲು ಇವುಗಳ ಬಗ್ಗೆ ನಿರ್ಧರಿಸಿ ಮುಂದುವರಿಯಿರಿ. ಎಲ್ಲಾ ಕಾಲಕ್ಕೂ ನಿಮ್ಮ ಪರವಾಗಿ, ನಿಮ್ಮ ಚಿಕಿತ್ಸೆಗಾಗಿ ಹಣ ಕೊಡುವವರು ಇರಬೇಕು ಎಂಬುದು ನಿಮ್ಮ ಗುರಿಯಾಗಿರಲಿ.

ಎಷ್ಟು ವಿಮೆಯನ್ನು ಪಡೆಯಬೇಕು.

ಇಂದಿನ ಆರೋಗ್ಯ ಪರಿಸ್ಥಿತಿ ಮತ್ತು ಅದಕ್ಕಾಗುವ ವೆಚ್ಚವನ್ನು ಪರಿಗಣಿಸಿದಾಗ ನಮಗೆ ವೈಯಕ್ತಿಕವಾಗಿ ಆಗಲಿ ಅಥವಾ ಫ್ಯಾಮಿಲಿ ಫ್ಲೋಟರ್ ಪಾಲಿಸಿ ಆಗಲಿ ಕನಿಷ್ಠ ೩೦ ಲಕ್ಷಕ್ಕೆ ಆರೋಗ್ಯ ವಿಮೆ ಇರಬೇಕಾಗುತ್ತದೆ. ಪರಿಸ್ಥಿತಿಗೆ ಅನುಗುಣವಾಗಿ ಹೆಚ್ಚಿನ ವೆಚ್ಚ ಬಂದಾಗ ಉಪಯೋಗ ವಾಗಲು ಹೆಚ್ಚಿನ ವಿಮೆ ಬೇಕಾಗುತ್ತದೆ. ಇದಕ್ಕಾಗಿ ವಿಮಾ ಟಾಪ್ ಅಪ್ ಅಂದರೆ ಹೆಚ್ಚಿನ ಪ್ರೀಮಿಯಂ ಕೊಟ್ಟು ಪಾಲಿಸಿ ಕೊಳ್ಳಬಹುದು. ಇದನ್ನು ಮೂಲ ಪಾಲಿಸಿ ಇದ್ದಾಗಲೂ ಅಥವಾ ಮೂಲ ಪಾಲಿಸಿ ಮೊತ್ತ ಮುಗಿಯುವಾಗಲೂ ಕೊಳ್ಳಬಹುದು. ಇದನ್ನು ಮೂಲ ಪಾಲಿಸಿ ಸಂಸ್ಥೆಯಿಂದ ಅಥವಾ ಬೇರೆ ಸಂಸ್ಥೆಯಿಂದಲೂ ಕೊಳ್ಳ ಬಹುದು. ಈ ಪಾಲಸಿಗೆ ಪ್ರೀಮಿಯಂ ಕಡಿಮೆ ಇರುತ್ತದೆ.

ಸರ್ಕಾರಿ ಆರೋಗ್ಯ ವಿಮೆ ಇದ್ದವರಿಗೆ ಈ ವಿಷಯ ಬೇಕೇ?

ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನ ಅಥವಾ ಸಮಾನವಾಗಿರುವ ಸರ್ಕಾರಿ ಆರೋಗ್ಯ ಯೋಜನೆಗಳಲ್ಲಿ ಸೌಲಭ್ಯದ ಕಾರ್ಡ್ ಪಡೆದವರಿಗೆ ವಿಮಾ ಯೋಜನೆ ಇರುತ್ತದೆ. ಸದ್ಯಕ್ಕೆ ವರ್ಷಕ್ಕೆ, ಒಂದು ಕುಟುಂಬಕ್ಕೆ ಐದು ಲಕ್ಷ ರೂಪಾಯಿ ವಿಮೆ ಇರುತ್ತದೆ. ಇದರ ಅಡಿಯಲ್ಲಿ ಸೌಲಭ್ಯ ಒದಗಿಸುವ ಹಲವಾರು ಆಸ್ಪತ್ರೆಗಳು, ದೊರೆಯುವ ವಿವಿಧ ಸೌಲಭ್ಯಗಳು, ಸೇವೆಯಲ್ಲಿ ಕೊರತೆ ಕಂಡರೆ ಹೇಳಲು ಕುಂದು ಕೊರತೆಗಳ ವಿಭಾಗ ಹೀಗೆ ಹಲವು ವ್ಯವಸ್ಥೆಗಳು ಇರುವುದು ಸಂತೋಷದ ಸಂಗತಿ. ಆದರೆ ಇದನ್ನು ಪಡೆಯಲು ಕುಟುಂಬದ ಆದಾಯವೂ ಸೇರಿದಂತೆ ಸಾಕಷ್ಟು ಅರ್ಹತಾ ಮಾನದಂಡಗಳು ಮತ್ತು ನಿಬಂಧನೆಗಳಿವೆ. ಕಾಲಕಾಲಕ್ಕೆ ಇವು ಬದಲಾವಣೆ ಆಗುತ್ತಿವೆ. ಸರ್ಕಾರದೊಂದಿಗೆ ಸಂವಹನದಲ್ಲಿ ವಿಳಂಬವನ್ನು ನಿರೀಕ್ಷಿಸಿ ಹಲವು ಆಸ್ಪತ್ರೆಗಳಲ್ಲಿ ಸೇವೆಯನ್ನು ನಿರಾಕರಿಸಿದ ಉದಾಹರಣೆಗಳೂ ಇವೆ. ಆದ್ದರಿಂದ ಇಂತಹಾ ಕಾರ್ಡುಗಳು ಇರುವವರು ಸಹ ಎಂತಹಾ ಪರಿಸ್ಥಿತಿಯಲ್ಲಿಯೂ ತಮಗೆ ಆರೋಗ್ಯ ವ್ಯವಸ್ಥೆಗೆ ಸದಾ ಸಹಾಯವಾಗಲು, ಸಣ್ಣ ಮೊತ್ತಕ್ಕಾದರೂ, ತಮ್ಮದೇ ಆದ ಆರೋಗ್ಯ ವಿಮೆಯನ್ನು ಹೊಂದುವುದು ಒಳ್ಳೆಯದು.

ತಾತ್ಕಾಲಿಕ ವಿಮೆ

ಇನ್ನೊಂದು ವಿಷಯ. ಕೆಲವು ಉದ್ಯೋಗಿಗಳು ಗುತ್ತಿಗೆ ಆಧಾರದಲ್ಲಿ ಕೆಲವೇ ಅವಧಿಗೆ ಕೆಲಸ ಮಾಡಬೇಕಾಗುತ್ತದೆ. ಅಂತಹಾ ಕೆಲಸಗಳು ತಾತ್ಕಾಲಿಕವಾದರೂ ಅಪಾಯಕಾರಿ ರೀತಿಯಲ್ಲಿ ಇರುವುದು ಸಾಮಾನ್ಯ. ಆದ್ದರಿಂದಲೇ ಈ ಉದ್ಯೋಗಿಗಳಿಗೆ ಅಪಘಾತ ವಿಮೆ ಇದ್ದಲ್ಲಿ ಮಾತ್ರ ಆ ಕೆಲಸಕ್ಕೆ ಅವಕಾಶವಿರುತ್ತದೆ. ಇಂತಹಾ ಸಣ್ಣ ಅವಧಿಗೆ ಅಥವಾ ಕನಿಷ್ಠ ಒಂದು ವರ್ಷಕ್ಕೆ ಅತಿ ಕಡಿಮೆ ಪ್ರೀಮಿಯಂನಲ್ಲಿ ಒಳ್ಳೆಯ ವಿಮೆ ಪಡೆಯಬಹುದು.

ಇನ್ನು ಪ್ರಯಾಣ ವಿಮೆ ಬಗ್ಗೆ ಈಗಾಗಲೇ ಆಯುಷ್ಮಾನ್ ಭವ ಎಂಬ ಶೀರ್ಷಿಕೆಯಲ್ಲಿ ಪ್ರತ್ಯೇಕ ಲೇಖನದಲ್ಲಿ ವಿವರವಾಗಿ ಹೇಳಲಾಗಿದೆ.   

ನಮಗೆ ಅತ್ಯಂತ ಪ್ರೀತಿಪಾತ್ರದವರು ಯಾರು ಎಂದು ಕೇಳಿದರೆ, ಯಾರು ಏನೇ ಹೇಳಿದರೂ ಒಂದಂತೂ ಸತ್ಯ, ಅದು ನಾವೇ. ನಮ್ಮ ಶರೀರ ನಮ್ಮ ಸ್ವಂತ ಆಸ್ತಿ. ನಾವು ಇರುವವರೆಗೂ ಎಡೆಬಿಡದೆ ನಮ್ಮೊಂದಿಗೆ ಇರುವ ಈ ದೇಹವನ್ನು ನಾವೇ ಕಾಪಾಡಬೇಕು. ಪ್ರೀತಿಸಬೇಕು. ಈ ವಿಷಯದಲ್ಲಿ ನಮ್ಮ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯಾ ಎಂಬುದು ಮನದಲ್ಲಿರಲಿ.

ತಮಗೆ ಬೇಕಾದ ವಿಮೆಯ ಬಗ್ಗೆ ಸಮಗ್ರವಾಗಿ ಮಾಹಿತಿ ಕೊಡಲಾಗದಿದ್ದರೂ ಹೆಚ್ಚಿನ ವಿಷಯಗಳನ್ನು ಚರ್ಚಿಸಿದ್ದೇನೆ. ಕೊಟ್ಟಿರುವ ವಿಷಯದ ಜೊತೆಗೆ ಬೇಕಾದ ವಿಷಯಗಳನ್ನು ಸಂಬಂಧಿಸಿದ ಸಂಸ್ಥೆಯಿಂದ ಮಾಹಿತಿಯನ್ನು ಪೂರ್ಣವಾಗಿ ಪಡೆದು, ಶೀಘ್ರವಾಗಿ ತೀರ್ಮಾನಿಸಿ, ಪಾಲಿಸಿ ಪಡೆಯಲು ಮುಂದುವರೆಯಿರಿ.

Comments

  1. ಅಬ್ಬ ಓದುತ್ತಿದ್ದರೆ ಹೆದರಿಕೆನೇ ಅಯ್ತು ಅದರೆ ಇದು ಸತ್ಯ ,ಮಾಹಿತಿಯೂ ಸಹ ಹೆಲ್ತ್ ಇನ್ಶುರೆನ್ಸ್ ಬ್ರೊಚರ್ ಓದಿದಂತೆ ಅಯ್ತು,ಇನ್ನೇನು ಅಧಿಕ ಪರಚಲಿತ ಕಂ . ನೋಡಿ ಮಾಡ್ಸಿಬಿಡೋದೆ .ಮಾಹಿತಿ,ಕಳಜಿಗೆ ಧನ್ಯವಾದಗಳು

    ReplyDelete
  2. ಅತ್ಯಂತ ಉಪಯುಕ್ತ ಮಾಹಿತಿಗಳು, ನಿಖರವಾಗಿ ಮೂಡಿಬಂದಿದೆ, ಆರೋಗ್ಯ ವಿಮೆಯ ವಿಷಯದಲ್ಲಿ ಮಾಹಿತಿ ಉತ್ತಮ ವಾಗಿದೆ. ಒಂದು ಲೇಖನದಲ್ಲಿ ಪ್ರಶ್ನೆಗಳನ್ನು ಹುಟ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಧನ್ಯವಾದಗಳು

    ReplyDelete
  3. ಆರೋಗ್ಯ ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೀರಿ. ಯಾವ ವಿಮಾ ಕಂಪೆನಿಯು ಕೂಡ ಇಷ್ಟು ವಿವರಗಳನ್ನು ತಮ್ಮ ಗ್ರಾಹಕರಿಗೆ ಕೊಡಲಾರರು ಎಂಬುದು ನನ್ನ ಅಭಿಪ್ರಾಯ. ಈ ನಿಮ್ಮ ಲೇಖನವು ಬಹಳಷ್ಟು ಮಂದಿಗೆ ದಾರಿ ದೀಪವಾಗಲೆಂದು ಆಶಿಸುತ್ತೇನೆ. ಧನ್ಯವಾದಗಳು.

    ReplyDelete
  4. ತುಂಬಾ ಒಳ್ಳೆಯ ಮಾಹಿತಿಯನ್ನು ಕೊಟ್ಟಿರುವುದಕ್ಕೆ ಮೊದಲು ಧನ್ಯವಾದಗಳು. ಈಗಿನ ಕಾಲದ ಕಾಯಿಲೆಗಳಿಗೆ ಬಿಲ್ ನೋಡಿದ ಮೇಲೆ ಹಾರ್ಟ್ ಅಟ್ಯಾಕ್ ಆಗುವ ಸಂಭವಗಲೇ ಹೆಜ್ಜು. ಹೀಗಿರುವಾಗ ಇಂತಹ ಪಾಲಿಸಿಗಳು ಭಹಳ ಉಪಯುಕ್ತ.
    ಸುರೇಶ, ಕೆಂಗೇರಿ

    ReplyDelete
  5. ಉಪಯುಕ್ತ ಮಾಹಿತಿ, ಶರಣು ಶರಣಾರ್ಥಿ,

    ReplyDelete
  6. ಆರೋಗ್ಯ ಕ್ಷೇತ್ರದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಕಾಲಿಟ್ಟಾಗಿನಿಂದ, ವೈದ್ಯಕೀಯ ರಂಗದಲ್ಲಿರುವ ಮಾಫಿಯಾದಿಂದ, ಆರ್ಥಿಕ ವ ಸಾಮಾಜಿಕ ಪ್ರಗತಿ ಮತ್ತು ಬದಲಾವಣೆ ಇತ್ಯಾದಿ ಅನೇಕ ಕಾರಣಗಳಿಂದ ಮುಂದುವರಿಯತ್ತಿರುವ ಆರ್ಥಿಕ ವ್ಯವಸ್ಥೆಯಲ್ಲಿ, ಕಳೆದ ಕೆಲವು ದಶಕಗಳಲ್ಲಿ ವೈದ್ಯಕೀಯ ವೆಚ್ಚ ಗಗನಕ್ಕೇರಿದ್ದು ನಿಜ. ಅದು ಜನರಿಗೆ ಹೊರೆ ಆಗಬಾರದು ಎಂಬ ಉದ್ದೇಶದೊಂದಿಗೆ ಬಂದ ಸೌಲಭ್ಯವೇ ಆರೋಗ್ಯ ವಿಮೆ! ಪ್ರಸಕ್ತ ಸಂದರ್ಭದಲ್ಲಿ ಅನಿವಾರ್ಯವೆನಿಸುತ್ತಿರುವ ಆರೋಗ್ಯ ವಿಮೆ ಬಗ್ಗೆ ಸರಳವಾಗಿ ಪಾಮರರಿಗೂ ಅರ್ಥವಾಗುವಂತೆ ಶ್ರೀ ರಾಮಚಂದ್ರರಾಯರು ಬರೆದಿದ್ದಾರೆ. ಆರೋಗ್ಯ ವಿಮೆ ಏಕೆ, ಹೇಗೆ, ಎಷ್ಟು, ಎತ್ತ ಮುಂತಾದ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಗುತ್ತದೆ! ಇಂಥ ಅಗಾಧವಾದ ವಿಷಯವನ್ನು ಅಸ್ಖಲಿತವಾಗಿ, ಚಿಕ್ಕ-ಚೊಕ್ಕದಾಗಿ, ವಿಳಂಬಿಸದೇ, ಯಾವುದೇ ಸೂಕ್ಷ್ಮವನ್ನೂ ಬಿಡದೇ ಅದರ ಎಲ್ಲಾ ಆಯಾಮಗಳನ್ನು ತಮ್ಮ ಎಂದಿನ ಸುಲಲಿತ ಶೈಲಿಯಲ್ಲಿ ಮನಗಾಣುವಂತೆ ಭಟ್ಟಿ ಇಳಿಸಿದ್ದಾರೆ! ಆರೋಗ್ಯ ವಿಮೆ ಬಗ್ಗೆ ಹಲವಾರು ಯೂಟ್ಯೂಬ್ ವಿಡಿಯೋ, ಪವರ್ ಪಾಯಿಂಟ್ ಪ್ರೆಸೆಂಟೇಷನ್ (ಪ್ರಸ್ತುತಿ) ನೋಡಿ, ಆಂಗ್ಲ ಲೇಖನಗಳನ್ನೂ ಓದಿದ್ದೇನೆ. ನಮ್ಮ ಸವಿಗನ್ನಡದಲ್ಲಿ ಇಂಥ ಸವಿವರ, ನಿಖರ ಮಾಹಿತಿಯನ್ನು ಇಷ್ಟು ಕ್ಲುಪ್ತವಾಗಿ ಕಾಣಿಸಿದ ಶ್ರೀ ಕೆ.ಬಿ.ರಾಮಚಂದ್ರರಾಯರಿಗೆ ಮನಸಾರೆ ಅಭಿನಂದಿಸುತ್ತೇನೆ! ಹಾಗೆಯೇ ಒಂದು ಆಲೋಚನೆ : ಇಂಥ ಜನೋಪಯೋಗಿ ಮಾಹಿತಿ ಎಲ್ಲ ಕನ್ನಡಿಗರಿಗೂ ತಲುಪುವ ಉದ್ದೇಶದಿಂದ ಇಂಥವುಗಳನ್ನು ಕನ್ನಡ ದಿನ, ವಾರ ಪತ್ರಿಕೆಗಳಿಗೆ ಪ್ರಕಟಣೆಗೆ ಕಳುಹಿಸಿದರೆ ಖಂಡಿತ ಅದೊಂದು ಸದ್ದಿಲ್ಲದ ಜನ ಜಾಗೃತಿಯಾದೀತು.

    ನನ್ನ ವೃತ್ತಿ ಜೀವನದಲ್ಲಿ ಕಣ್ಣಾರೆ ಕಂಡ ಎರಡು ಪ್ರಸಂಗಗಳನ್ನು ಇಲ್ಲಿ ಹೇಳಬಯಸುತ್ತೇನೆ : ಎಂಭತ್ತರ ದಶಕದಲ್ಲಿ ಉನ್ನತ ಹುದ್ದೆಯಲ್ಲಿ ನಿವೃತ್ತರಾದ ಒಬ್ಬ ಅಧಿಕಾರಿಗೆ ತೆರೆದ ಹೃದಯದ ಶಸ್ತ್ರಕ್ರಿಯೆ. ಬಂದ ಪಿ.ಎಫ್. ಹಾಗೂ ಇತರ ಉಳಿತಾಯದ ಹಣ ಕಟ್ಟಿ ಅವರನ್ನು ಉಳಿಸಿಕೊಂಡ ಕುಟುಂಬ ಬರಿಗೈಲಿ ಆಕಾಶ ನೋಡಿತು! (ಆಗ ಪಿಂಚಣಿ ಸೌಲಭ್ಯ ಸಹ ಇರಲಿಲ್ಲ!) ಇನ್ನೊಬ್ಬರು ವೃತ್ತಿ ಅಂಚಿನಲ್ಲಿ ವಕ್ಕರಿಸಿದ ಕ್ಯಾನ್ಸರ್ ಚಿಕಿತ್ಸೆಗೆ ವೆಚ್ಚ ಭರಿಸಲಾಗದೆ, ಉದ್ಯೋಗಿಗಳೆಲ್ಲ ವಂತಿಗೆ ನೀಡಿದರೂ ದುರ್ದೈವವಶಾತ್ ತೀರಿಹೋದರು. ಆಗೆಲ್ಲ ಇಂದಿನಂತೆ ಆರೋಗ್ಯ ವಿಮೆ ಇದ್ದರೆ ಎಷ್ಟು ಚೆನ್ನಿತ್ತು ಎನಿಸಿತು! ~ ಮಹಾಂತೇಶ ತಳಗೇರಿ, ವಿಶ್ರಾಂತ ವಿಭಾಗಾಧಿಕಾರಿ, ಭಾರತೀಯ ಜೀವ ವಿಮಾ ನಿಗಮ, ಜಯಪ್ರಕಾಶ ನಗರ, 7ನೇ ಹಂತ, ಬೆಂಗಳೂರು.

    ReplyDelete
    Replies
    1. Very useful and informative article which is most essential for present generation. Please give wide publicity by discussing with your friends and relatives and make use of the insurance benefit.

      Delete
  7. ದೇವರಾಜ ನಾ ಮುJuly 7, 2023 at 10:23 PM

    ಇಂದಿನ ಜೀವನ ಶೈಲಿಗೆ ಅಗತ್ಯವಾಗಿ ಬೇಕಾದುದು ಈ ವೈದ್ಯಕೀಯ ವಿಮೆ. ಇದರ ಬಗ್ಗೆ ಕೂಲಂಕುಷವಾಗಿ ಬರೆದಿರುವ ನಿಮಗೆ ಧನ್ಯವಾದಗಳು.
    ಇಂದಿನ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯ ವಾಗಿದೆ, ಸರ್ಕಾರಿ ಆಸ್ಪತ್ರೆಗಳು ಸೌಲಭ್ಯ ಹಾಗೂ ನುರಿತ ವೈದ್ಯರ ಕೊರತೆಯಿಂದ ನರಳುತ್ತಿವೆ. ಉತ್ತಮ ಲೇಖನ.

    ReplyDelete
  8. Very useful and informative article which is most essential for present generation. Please give wide publicity by discussing with your friends and relatives and make use of the insurance benefit.

    ReplyDelete
  9. Sir, very exhaustive and like an encyclopedia. It answers all questions about health Insurance. We appreciate your efforts. 🙏👌

    ReplyDelete
  10. ಒಂದು ವಿಮಾ ಸಂಸ್ಥೆ ಮಾಡಬೇಕಾಗಿದ್ದ ಗ್ರಾಹಕರ
    ಕೈಪಿಡಿಯಂತಿದೆ ನಿಮ್ಮ ಲೇಖನ, ಬಹಳ ವಿಸ್ತಾರವಾಗಿ
    ಎಲ್ಲಾ ವಿಷಯವನ್ನು ಒಳಗೊಂಡಿದೆ . ಬಹುಶಃ
    Premium ಸಹಾ ಇದ್ದಿದ್ದರೆ ಒಂದು ಸಂಸ್ಥೆ ಇದನ್ನೇ
    ಬಳಸಿಕೊಳ್ಳಬಹುದು, ಅಷ್ಟರ ಮಟ್ಟಿಗೆ ಚೆನ್ನಾಗಿದೆ

    ReplyDelete
  11. Exhaustive and informative write up about Health Insurance. Most essential for the present day situation.
    Thank you.

    ReplyDelete
  12. ಅತ್ಯಂತ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ. ವಿಶೇಷವಾಗಿ ಎಲ್ಲಾ ವರ್ಗದ ಆಸಕ್ತರೂ ಕೊಂಡುಕೊಳ್ಳಬಹುದಾದ ಯಾವುದೇ ರೀತಿಯ ವಿಮಾ ಕಂಪನಿಗಳ‌ ಪ್ರಸಾವನೆಯ ವಿವರಣೆ ಅದ್ಭುತವಾಗಿದ್ದು, ಸರಳವಾದ ವಿವರಣೆಯನ್ನು ನೀಡುತ್ತದೆ. ಅಭಿನಂದನೆಗಳು ಸಾರ್

    ReplyDelete
  13. Narendra Kumar h rJuly 11, 2023 at 9:27 PM

    Ton of helpful information, thought provoking.

    ReplyDelete
  14. ವಿಮೆಯ ಬಗ್ಗೆ ಬರೆದಿರುವ ಮಾಹಿತಿ ಬಹಳ ಚೆನ್ನಾಗಿದೆ. ಆರೋಗ್ಯ ವಿಮೆಎಷ್ಟು ಉಪಯುಕ್ತ  ಎನ್ನುವುದು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಬಂದಿದೆ .

    ReplyDelete
  15. Some comments received on WhatsApp
    It's really useful information..
    Covered all the information about medical insurance n it's really helpful to select which package one should select .. Thanks
    MP GOVINDA RAJU

    Well thought, very clear in providing information & need of the hour 🙏🙏🙏
    HK SRIDHAR

    ನಿಮ್ಮ ಲೇಖನ ಎಲ್ಲ ವಿವರಗಳನ್ನು , ಎಲ್ಲ ಆಯಾಮಗಳನ್ನು, ಎಲ್ಲ ವಯಸ್ಸಿನವರನ್ನು , ಎಲ್ಲ ವಿವರಗಳನ್ನು ಒಳಗೊ೦ಡಿದೆ.
    ಅದ್ಭುತವಾದ / ಗುಣಮಟ್ಟದ/ ಸಾಕಷ್ಟು ತಯಾರಿ ಮಾಡಿಕೊಂಡು ಬರೆದ ಲೇಖನ.
    ನಿಮಗೆ ಹೃತ್ಪೂರ್ವಕ ಅಭಿನಂದನೆಗಳು.
    🙏🙏🙏🙏🙏🙏🙏🙏
    Vinayaka Mysore

    Hi, uncle The article is written in a very detailed manner.... We tried to comment there but it is not publishing...
    Manjunath Hegde

    ReplyDelete
  16. ಆರೋಗ್ಯಭಾಗ್ಯಕ್ಕೆ ಕಾಲಮಿತಿ ಅರಿತವರಿಲ್ಲ. ಮಾನಸಿಕವಾಗಿಯೂ, ಆರ್ಥಿಕವಾಗಿಯೂ ಆಸರೆಯಾಗಬಲ್ಲ ಆರೋಗ್ಯವಿಮೆಯ ಬಗ್ಗೆ ಎಲ್ಲ ವರ್ಗದ ಜನರಿಗೂ ಅವರವರ ಸ್ಥಿತಿಗತಿಗಳಿಗೆ ತಕ್ಕಂತೆ ಆಯ್ಕೆ ಮಾಡಬಹುದಾದ ವಿವರಗಳನ್ನು ತಮ್ಮೆಲ್ಲ ಜ್ಞಾನ, ಅನುಭವಗಳನ್ನು ಧಾರೆ ಎರೆದು ಹೊರತಂದಿರುವ ಈ ಲೇಖನ ಶ್ಲಾಘನೀಯ. ನಾವು ವಿಮೆ ಮಾಡಿಸಿದ್ದರೆ ಅದು ನಮಗೆ ಮಾನಸಿಕ, ಆರ್ಥಿಕ ಶಕ್ತಿಯಾಗಿ ಆಸರೆಯಾಗಬಲ್ಲದು. ಲೇಖಕರೇ ಕೂಲಂಕಷವಾಗಿ ಹೇಳಿರುವಂತೆ ವಿಮೆ ಯಾರಿಗೆ, ಯಾವಾಗ, ಹೇಗೆ, ಎಲ್ಲಿ, ಎಷ್ಟು ಎಂಬ ಮಾಹಿತಿ ಅರಿತು ಮಾಡುವುದು ಕ್ಷೇಮ. ಹಾಗೂ ವಿಮಾ ಸಂಸ್ಥೆಯನ್ನು ಆಯ್ಕೆ ಮಾಡುವಾಗ ಕ್ಲೈಮ್ ರೇಶಿಯೋ, ಸಾಲ್ವೆನ್ಸಿ ರೇಶಿಯೋಗಳನ್ನು ತಿಳಿಯಲೇಬೇಕಾದ ಅಂಶ. ಅದರೊಂದಿಗೇ ವಿಮೆಯ ಮಾದರಿಗಳು, ಮೊತ್ತ, ಆಸ್ಪತ್ರೆಗಳ ಆಯ್ಕೆ, ಒಂದಕ್ಕಿಂತ ಹೆಚ್ಚು ಸಂಸ್ಥೆಗಳೊಂದ ಪಡೆಯಬಹುದಾದ ವಿಮೆ, ಪಡೆಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆಯೂ ಬೆಳಕು ಚೆಲ್ಲಿದ್ದಾರೆ.
    ಇಂತಹ ವಿವರಗಳನ್ನೊಳಗೊಂಡ ಲೇಖನವು ಜನಮಾನಸವನ್ನು ತಲುಪಲು ಪತ್ರಕರ್ತರುಗಳು ಆಯ್ದು ಪ್ರಕಟಿಸುವರೆಂದು ಆಶಿಸೋಣ.

    ReplyDelete
  17. ಸರ್, ಆರೋಗ್ಯ ವಿಮೆಯ ಸವಿಸ್ತಾರವಾದ ವಿವರಣೆಯಿದೆ, ಕನ್ನಡದಲ್ಲಿ ವಿಷಯ ಮಂಡನೆ ಅದ್ಭುತವಾಗಿದೆ. ತಮ್ಮ ಶ್ರಮದಿಂದ ಆರೋಗ್ಯ ವಿಮೆಯ ಮಹತ್ವ ಓದುಗರಿಗೆ ನೀಡಿದ್ದೀರಿ. ಹೀಗೆಯೇ ನಿಮ್ಮ ಮಾಹಿತಿ ಪೂರ್ಣ ಲೇಖನಗಳು ಬರಲಿ. ತಮಗೆ ಹೃದಯ ಪೂರ್ವಕ ಧನ್ಯವಾದಗಳು🙏🙏

    ReplyDelete
  18. ಮನುಷ್ಯನ ಹುಟ್ಟು ಒಂದು ನಿಗೂಢ ಎಲ್ಲಿ ಯಾರ ಮನೆಯಲ್ಲಿ, ಕುಲದಲ್ಲಿ, ಶ್ರೀಮಂತ, ಬಡವ ಎಂಬ ಆಯ್ಕೆ ಇಲ್ಲದ ಪ್ರಕ್ರಿಯೆಯಾಗಿದೆ. ಮನುಷ್ಯ ಜೀವನ ಹುಟ್ಟಿನಿಂದ ಪ್ರಾರಂಭವಾಗಿ, ವಯೋವೃದ್ದರಾಗುವವರೆಗೆ ಅನುಭವಿಸಬೇಕಾದ್ದುದ್ದನ್ನು ಅನುಭವಿಸಲೇ ಬೇಕು ಎಂಬುದು ಎಲ್ಲರಿಗೂ ನಿಶ್ಷಲವಾಗಿ ತಿಳಿದ ವಿಚಾರವಾಗಿದೆ. ಅವರವರ ಕುಟುಂಬದ ಮನೆಸ್ಥಿತಿ, ಮನಸ್ಥಿತಿ ಹಾಗೂ ವಿಜ್ಞಾನದಲ್ಲಿ ಪ್ರಸ್ತಾಪಿಸಿದಂತೆ ನಮ್ಮಅನುವಂಶಿಯಕ್ಕೆ ಅನುಗುಣವಾಗಿ ಆರೋಗ್ಯ ಜೀವನ ಸಾಗುತ್ತದೆ. ನಾವು ವಯೋಮಾನಕ್ಕೆ ಅನುಸಾರವಾಗಿ ಕೆಲವು ಅಲ್ಪಸ್ವಲ್ಪ ಜೀವನ ಶೈಲಿಯನ್ನು ಬದಲಿಸಿಕೊಂಡು ಎಚ್ಚರದಿಂದ ಆರೋಗ್ಯದ ಕಡೆ ಗಮನಹರಿಸುವುದು ಅನಿವಾರ್ಯವಾದರೂ ಕೆಲವೊಮ್ಮೆ ನಮಗೆ ಅರಿಯದೇ ಅನಾರೋಗ್ಯ ಕಾಡುವ ಸಂದರ್ಭಗಳು ಕಾಣಸಿಗುತ್ತದೆ. ಅನಾರೊಗ್ಯವಾದಾಗ ಆಗುವ ಆತಂಕ ಹಾಗೂ ಚಿಕಿತ್ಸೆಗಾಗಿ ಬೇಕಾಗಬಹುದಾದ ಹಣದ ಅವಶ್ಯಕತೆಯನ್ನು ಸರಿಹೊಂದಿಸುವ ಚಿಂತೆ ಕಾಡದೇ ಇರದು.
    ಈ ಮೇಲೆ ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಕೂಲಂಕುಷವಾಗಿ ಎಲ್ಲರಿಗೂ (ಜನಸಾಮಾನ್ಯರಿಗೆ) ಅರ್ಥವಾಗುವಂತೆ ಆರೋಗ್ಯ ವಿಮೆಯ ಬಗ್ಗೆ ಸುದೀರ್ಘವಾಗಿ, ಸವಿವರವಾಗಿ ನೀಡಿರುವುದು ಶ್ಲಾಘನೀಯವಾದ ವಿಚಾರವಾಗಿದೆ. ಶ್ರೀ.ಕೆ.ಬಿ.ರಾಮಾಚಂದ್ರರವರು ಆಸಕ್ತಿವಹಿಸಿ ಸಂಪೂರ್ಣವಾಗಿ ಅಧ್ಯಯನವನ್ನು ಮಾಡಿ, ಈ ರೀತಿಯ ಅದ್ಬುತವಾದ ಮಾಹಿತಿಯನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಿರುತ್ತಾರೆ.ಈ ರೀತಿಯ ಮಾಹಿತಿಯು ಬಹುಷಃ ಆರೋಗ್ಯ ವಿಮೆ ಮಾಡಿಸುವ ಸಂಸ್ಥೆಯವರ ಬಳಿಯೂ ಇರಲಿಕ್ಕಿಲ್ಲ ಸದರಿಯವರ ಈ ಪ್ರಯತ್ನಕ್ಕೆ ನನ್ನ ಹೃದಯಪೂರ್ವಕ ವಂದನೆಗಳು….

    ReplyDelete
  19. ಮಾಹಿತಿ ಪೂರ್ಣವೂ ಬೋಧಪ್ರದವೂ ಆದ ಲೇಖನ

    ReplyDelete

Post a Comment

Popular posts from this blog

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...