ಇತ್ತೀಚೆಗೆ ವಿದೇಶಕ್ಕೆ ಪ್ರಯಾಣಿಸುತಿದ್ದೆ. ಮಾರ್ಗ ಮಧ್ಯೆ ಸಮಯ ಕಳೆಯಲು ನನ್ನ ಪ್ರಯಾಣದ ದಾಖಲೆಗಳನ್ನು ನೋಡಲು ಕಣ್ಣಾಡಿಸಿದೆ. ವಿಮಾನ ಟಿಕೆಟ್ ಜೊತೆಯಲ್ಲಿ ಕಂಡ ಪ್ರಯಾಣ ವಿಮೆ ಗಮನ ಸೆಳೆಯಿತು. ಈ ವಿಮಾ ಪಾಲಿಸಿಯ ವಿಶೇಷವೆಂದರೆ ನಮ್ಮ ವಿದೇಶ ಪ್ರವಾಸದಲ್ಲಿ ಆಕಸ್ಮಿಕವಾಗಿ ನಮಗೆ ವೈದ್ಯಕೀಯ ಸೌಲಭ್ಯ ಬೇಕಾದಲ್ಲಿ ಅದರ ಖರ್ಚಿಗೆ ವ್ಯವಸ್ಥೆಯಾಗುತ್ತದೆ. ಇದರ ಜೊತೆಯಲ್ಲಿ ದೊರೆಯಬಹುದಾದ ಇತರ ಸೌಲಭ್ಯಗಳೆಂದರೆ ವೈಯಕ್ತಿಕ ಅಪಘಾತ ವೆಚ್ಚ, ಆಕಸ್ಮಿಕವಾಗಿ ಮೃತಪಟ್ಟಲ್ಲಿ ಜೀವವಿಮೆ, ಪ್ರಯಾಣಿಕನ ಪಾರ್ಥಿವ ಶರೀರವನ್ನು ಹೊರಟ ಸ್ಥಳಕ್ಕೆ ರವಾನೆ ಮಾಡುವ ಖರ್ಚುಗಳು ಇದರಲ್ಲಿ ಸೇರಿರುತ್ತದೆ. ಇದಲ್ಲದೆ ಜೊತೆಯಲ್ಲಿ ಕೊಂಡೊಯ್ಧ ಬ್ಯಾಗೇಜ್ ಕಳೆದುಹೋದರೆ ಅಥವಾ ಅದು ತಡವಾಗಿ ತಲುಪಿದರೆ ಅಥವಾ ಪಾಸ್ಪೋರ್ಟ್ ಕಳೆದುಹೋದರೆ ಪರಿಹಾರ ದೊರೆಯುತ್ತದೆ. ಅಲ್ಲದೆ ಪ್ರಯಾಣದಲ್ಲಿ ಆಗಬಹುದಾದ ವಿಳಂಬ, ಸಂಕಷ್ಟದ ಸಮಯದಲ್ಲಿ ಆತನ ಸ್ವದೇಶದ ಮನೆಗೆ ಹಿಂದಿರುಗುವ ವೆಚ್ಚವನ್ನು ಒದಗಿಸುವ ವಿಶಿಷ್ಟ ಪಾಲಿಸಿ. ಪ್ರಯಾಣಿಕನಿಗೆ ಈಗಾಗಲೇ ಇರುವ ಕಾಯಿಲೆಗಳು, ಅವನಿಗೆ ಒದಗಬಹುದಾದ ಯುದ್ಧದ ಅಪಾಯಗಳು, ಅವನ ಆತ್ಮಹತ್ಯೆ ಮತ್ತು ಬುದ್ಧಿಭ್ರಮಣೆ, ಅವನಿಗೆ ಒದಗಬಹುದಾದ ಅಪಾಯದ ಕ್ರೀಡೆಗಳ ಪರಿಣಾಮಗಳು ಇದರಲ್ಲಿ ಸೇರುವುದಿಲ್ಲ. ಈ ವಿಮೆಯನ್ನು ಪ್ರಯಾಣಕ್ಕೆ ಹೊರಡುವ ಮುನ್ನ ವಿಮಾನ ಟಿಕೆಟ್ ಖರೀದಿಸುವ ಜೊತೆಗೆ ಹೆಚ್ಚುವರಿ ವಿಮಾ ಪ್ರೀಮಿಯಂ ಪಾವತಿ ಮಾಡಿ ಈ ಪಾಲಸಿ ಪಡೆಯಬಹುದು ಅಥವಾ ತಮಗಿಷ್ಟ ಬಂದ ಸಂಸ್ಥೆಯಿಂದ ಪ್ರತ್ಯೇಕವಾಗಿಯೂ ಪಡೆಯಬಹುದು. ಆಕಸ್ಮಿಕವಾಗಿ ಕ್ಲೈಮ್ ಸಂಭವಿಸಿದರೆ ದಾಖಲೆಗಳೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಸಂಬಂಧಿಸಿದ ಸಂಸ್ಥೆಯಿಂದ ಈ ಎಲ್ಲಾ ವಿಮಾ ಸೌಲಭ್ಯ ಪಡೆಯಬೇಕಾಗುತ್ತದೆ ಎಂದು ತಿಳಿಯಿತು.
ಪ್ರಯಾಣಕ್ಕೆ ವೇಳೆಯಲ್ಲೇನೋ ಈ ಆರೋಗ್ಯ ವಿಮೆ ಬೇಕು. ಪಡೆದೆವು. ಆದರೆ ನಮ್ಮದೇ ದೇಶದಲ್ಲಿದ್ದಾಗ ಎಲ್ಲರಿಗೂ ಬೇಕಾದರೂ ಎಷ್ಟು ಜನ ಇದನ್ನು ಪಡೆದಿದ್ದಾರೆ? ನಮ್ಮ ಪರಿಚಯದವರಲ್ಲಿ ಯಾರ್ಯಾರು ಈ ವಿಮೆ ಪಡೆಯದೆ ನರಳಿದ್ದಾರೆ ಎಂಬುವತ್ತ ಒಂದು ಯೋಚನೆ ಬಂತು. ನರಳಿರುವ ಹಲವು ಬಂಧುಗಳು ನೆನಪಾದರು. ನನ್ನ ಸ್ಮೃತಿ ಪಟಲದಲ್ಲಿ ಹಾಗೆ ಬಂದುಹೋದ ಹಲವರ ಘಟನೆಗಳು ವಿಮೆ ಬಗ್ಗೆ ಹೇಳಲು ಉಪಯುಕ್ತ ವಿಷಯ ಎಂದೆನಿಸಿತು. ಆದ್ದರಿಂದ ಅವುಗಳ ಚರ್ಚೆಯೇ ಈ ಲೇಖನ.
ಕೆಲವು ವರ್ಷಗಳ ಹಿಂದೆ ನಮ್ಮ ಬಂಧು ಒಬ್ಬರು ಆಗಾಗ್ಗೆ ನಾಲಿಗೆ ಕಡಿಯುತ್ತದೆ, ವೈದ್ಯರು ಅದು ಚಿಕ್ಕ ಅಲ್ಸರ್, ಆ ಬಗ್ಗೆ ಗಮನ ಇರಲಿ ಎಂದು ಔಷಧಿ ಕೊಟ್ಟಿದ್ದಾರೆ ಎಂದು ಬಹಳ ದಿನಗಳಿಂದ ಹೇಳುತ್ತಲೇ ಇದ್ದರು. ಸಾಮಾನ್ಯವಾಗಿ ಯಾರಾದರೂ ಸುಮ್ಮನೆ ಮಾತನಾಡುತ್ತಿದ್ದರೆ ಅವರಿಗೆ ವ್ಯಂಗ್ಯವಾಗಿ ನಿನಗೇನಾದರೂ ನಾಲಿಗೆ ಕಡಿಯುತ್ತದೆಯೇ ಎಂದು ತಮಾಷೆಯಾಗಿ ಆಡುವ ಮಾತು. ಹಾಗೆ ಮತ್ತೊಮ್ಮೆ ಅವರು ಭೇಟಿಯಾದಾಗ ಹೇಗಿದೆ, ನಿಮ್ಮ ನಾಲಿಗೆ ಕಡಿತ? ಎಂದೆ. ಅದು ಹೆಚ್ಚಾಗಿದೆ, ಏನು ಮಾಡುವುದು, ತಜ್ಞ ವೈದ್ಯರಲ್ಲಿ ತೋರಿಸೋಣ ಎಂದರೆ ದುಡ್ಡಿನ ತೊಂದರೆ ಇದೆ, ಎಂದು ಮುಂದಿನ ತಿಂಗಳು ಹೋಗುವ ಬಗ್ಗೆ ಹೇಳಿದರು. ದುಡ್ಡಿನ ವಿಷಯ ಆಮೇಲೆ ನೋಡೋಣ ಎಂದುಕೊಂಡು ನನಗೆ ಗೊತ್ತಿರುವ ವೈದ್ಯರಲ್ಲಿ ಕರೆದೊಯ್ದು ತೋರಿಸಿದಾಗ, ಇದು ನಾಲಿಗೆ ಕ್ಯಾನ್ಸರ್, ಈಗಾಗಲೇ ಉಲ್ಬಣಿಸಿದೆ ಎಂದರು. ಆ ಬಂಧುವಿನ ದೈನಂದಿನ ಜೀವನ ಹೇಗೋ ನಡೆಯುತ್ತಿತ್ತು. ಆದರೆ ಈ ಚಿಕಿತ್ಸೆಗೆ ಕೈನಲ್ಲಿ ಹಣವಿಲ್ಲ, ಆದ್ದರಿಂದ ಮುಂದಿನ ದಿನಗಳಲ್ಲಿ ಹಣದ ವ್ಯವಸ್ಥೆ ಆದ ಮೇಲೆ ಚಿಕಿತ್ಸೆ ಪಡೆಯುತ್ತೇನೆ ಎಂದರು. ಇವರಿಗೆ ಅನುಕೂಲ ಆಗುವವರೆಗೂ ಕಾಯಿಲೆ ಇವರಿಗೆ ಕಾಯುತ್ತದೆಯೇ, ಹೆಚ್ಚಾಗುತ್ತದೆ. ಆದ್ದರಿಂದ ನಾವೇ ತಿಳಿವು ಹೇಳಿ ನಮ್ಮ ಖರ್ಚಲ್ಲೇ ಚಿಕಿತ್ಸೆ ಕೊಡಿಸಿದೆವು. ಆ ವೇಳೆಗೆ ನಾಲಿಗೆಯ ಬಹು ಭಾಗದಲ್ಲಿ ಕ್ಯಾನ್ಸರ್ ವ್ಯಾಪಿಸಿತ್ತು. ಅದನ್ನು ತುಂಡರಿಸಿ ಚಿಕಿತ್ಸೆ ಮುಗಿಸಿದರು. ಈಗ ತುಂಬಾ ಕೃಶರಾಗಿ ಕಂಡರೂ ಆರೋಗ್ಯವಾಗಿದ್ದಾರೆ ಎಂಬುದು ನಮಗೂ ಸಂತೋಷದ ಸಂಗತಿ. ಅವರು ನಮಗೆ ತೀರಾ ಬೇಕಾದವರು. ಆದ್ದರಿಂದಲೇ ನಮಗೆ ಅವರ ಆರೋಗ್ಯದ ಬಗ್ಗೆ ಕಾಳಜಿ. ಇಲ್ಲದಿದ್ದರೆ ಅವರು ಗೊತ್ತಿಲ್ಲದ ದಿನಗಳಿಗೆ ಸಹಜವಾಗಿ ನರಳುತ್ತಾ ಕಾಯಬೇಕಿತ್ತು. ಇನ್ನೂ ಮೊದಲೇ ಗಮನ ವಹಿಸಿದ್ದರೆ ಔಷಧಿಯಲ್ಲೇ ವಾಸಿಯಾಗುತ್ತಿತ್ತೇನೋ?
ಕೆಲವು ವರ್ಷಗಳ ಹಿಂದೆ, ಸುಮಾರು 42ರ ಪ್ರಾಯದ ಮಿತ್ರರೊಬ್ಬರು ಮಾತಿನ ಮಧ್ಯೆ ನಮ್ಮಂತಹ ಆರೋಗ್ಯವಂತರಿಗೆ ಆರೋಗ್ಯ ವಿಮೆ ಬೇಕಾಗಿಯೇ ಇಲ್ಲ. ನಮ್ಮನ್ನು ನಂಬಿಕೊಂಡು ವಿಮಾ ಸಂಸ್ಥೆ ಇದ್ದರೆ ಮುಚ್ಚಿ ಕೊಂಡು ಹೋಗಬೇಕು ಅಷ್ಟೇ. ನಾವು ಆರೋಗ್ಯವಾಗಿರುವುದರಿಂದ ನಮಗೆ ಅದರ ಅಗತ್ಯವೇ ಇಲ್ಲ. ನಮ್ಮ ಮನೆಯಲ್ಲಿ ಎಲ್ಲ ಹಿರಿಯರೂ 90ರ ವಯಸ್ಸಿಗೂ ಬದುಕಿದ್ದಾರೆ. ಸದ್ಯಕ್ಕೆ ವಿಮೆ ಚಿಂತೆ ಮಾಡುವುದಿಲ್ಲ ಎನ್ನುತ್ತಿದ್ದರು. ಅಲ್ಲದೆ ಸದ್ಯಕ್ಕೆ ತಾವು ಸಾಯುವುದಿಲ್ಲ ಎಂದು ವಿಮೆಯನ್ನು ತಿರಸ್ಕರಿಸಿ ಮಾತನಾಡಿದರು. ಅದೇನಾಯಿತೋ ಮುಂದಿನ ತಿಂಗಳ ಒಂದು ಸಂಜೆ ತಮಗೆ ಮೂತ್ರ ಆಗದ ಬಗ್ಗೆ, ಕಿಬ್ಬೊಟ್ಟೆ ನೋವಿನ ಬಗ್ಗೆ ದೂರಿದರು. ಪರೀಕ್ಷೆ ಮಾಡಿ ನೋಡಿದಾಗ ಅವರಿಗೆ ಮೂತ್ರ ಪಿಂಡದ ಕಾಯಿಲೆ ಮೈದೋರಿತ್ತು. ಆಗ ವಿಮೆಯ ಪಡೆಯಲು ಪ್ರಯತ್ನಿಸಿದರು. ಪಾಲಿಸಿ ದೊರೆಯದೆ ಕೈನಲ್ಲಿರುವ ಹಣವೂ ಪೂರ್ಣ ಖಾಲಿ ಆಯಿತು. ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಅವರು ಉಳಿಯಲಿಲ್ಲ. ಮನೆಯವರಿಗೆ ಇವರ ದುಡಿಮೆ ಲಾಭವೂ ಸಿಗಲಿಲ್ಲ. ಆವರೆಗೂ ಶ್ರೀಮಂತರಾಗಿ ಬದುಕಿದ್ದ ಕುಟುಂಬದವರು ಈಗ ದಿಡೀರ್ ಆಗಿ ಬಡವರಾಗಿದ್ದಾರೆ. ಅವಕಾಶ ಇದ್ದೂ ಆರೋಗ್ಯ ವಿಮೆಯನ್ನು ಪಡೆಯದೆ ತೊಂದರೆಯಾಯಿತು.
ಮತ್ತೊಬ್ಬ ಮಿತ್ರರು ಪ್ರತಿಭಾನ್ವಿತರು. ಹೆಚ್ಚಿನ ವ್ಯಾಸಂಗ ಮಾಡಿದವರು. ವಿದೇಶದಲ್ಲಿ ಹೆಸರಾಂತ ಸಂಸ್ಥೆಯಲ್ಲಿ ದೊಡ್ಡ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಅತ್ಯುತ್ತಮ ವೇತನದ ಜೊತೆಗೆ ಆರೋಗ್ಯ ವಿಮಾ ಸೌಲಭ್ಯ ಇತ್ತು. ಸಂತೋಷವಾಗಿ ಜೀವನ ನಡೆಯುತ್ತಿತ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಹಣೆನೋವು ವೈದ್ಯರನ್ನು ಅನಿವಾರ್ಯವಾಗಿ ನೋಡುವಂತೆ ಮಾಡಿತು. ಬಹಳಷ್ಟು ಪರೀಕ್ಷೆ ನಂತರ ಅವರಿಗೆ ಮೆದುಳು ಕ್ಯಾನ್ಸರ್ ಎಂದು ಗೊತ್ತಾಯಿತು. ಉದ್ಯೋಗದಾತ ಸಂಸ್ಥೆ ಅವರಿಗೆ ಕೆಲವು ತಿಂಗಳ ವೇತನ ಪರಿಹಾರ ಕೊಟ್ಟು ಕೆಲಸದಿಂದ ತೆಗೆದು ಹಾಕಿತು. ವೀಸಾ ರದ್ದಾದ ಬಳಿಕ ಅವರು ಚಿಕಿತ್ಸೆಗಾಗಿ ಭಾರತಕ್ಕೆ ವಾಪಸ್ಸಾಗ ಬೇಕಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಎರಡು ವರ್ಷಗಳ ಕಾಲ ಚಿಕಿತ್ಸೆ ಪಡೆದರು. ಆವರೆಗೂ ದುಡಿದಿದ್ದ ಹಣ ಪೂರ್ತಿ ಖಾಲಿ ಆಯಿತು. ಅವರು ಉದ್ಯೋಗದಲ್ಲಿದ್ದಾಗ ಅವರಿಗೆ ಇದ್ದ ವಿಮೆ ನಂತರದ ದಿನಗಳಲ್ಲಿ ಇಲ್ಲವಾಗಿತ್ತು. ಈಗಾಗಲೇ ಕಾಯಿಲೆ ಇರುವುದರಿಂದ ಹೊಸ ವಿಮೆ ಪಡೆಯಲಾಗಲಿಲ್ಲ. ಚಿಕಿತ್ಸೆಗೆ ಹಣ ಸಾಲದೆ ಹಾಗೂ ಹೀಗೂ ನರಳುತ್ತಾ ದಿನವನ್ನು ನೂಕಿ ಸಾವಿಗೆ ಶರಣಾದರು. ಅವರ ವೈಭವದ ಜೀವನ ಕುಟುಂಬದವರಿಗೆ ಈಗ ಕೇವಲ ನೆನಪು ಮಾತ್ರ.
ನಮ್ಮ ಪರಿಚಯದ ಒಬ್ಬ ಚಾರ್ಟೆಡ್ ಅಕೌಂಟ್ ಕಚೇರಿಯಲ್ಲಿ ಮಧ್ಯಮ ಆದಾಯದ ಯುವತಿಯೊಬ್ಬರು ಕೆಲಸ ಮಾಡುತ್ತಿದ್ದರು. ಅವರಿಗೆ ವಿವಾಹ ಗೊತ್ತಾಗಿದ್ದು, ರಜೆ ಮೇಲೆ ಹೋಗುವವರಿದ್ದರು. ಅದೇ ಸಮಯದಲ್ಲಿ ಅವರ ತಂದೆಗೆ ಕಾಲು ನೋವು ಕಂಡು ಬಂದಿದೆ. ವೈದ್ಯರಲ್ಲಿ ಪರೀಕ್ಷಿಸಲಾಗಿ ಅವರಿಗಿದ್ದ ಸಿಹಿಮೂತ್ರ ರೋಗ ಹೆಚ್ಚಾಗುತ್ತಿದೆ ಎಂದು ಗೊತ್ತಾಯಿತು. ಅಂದಿನಿಂದ ಚಿಕಿತ್ಸೆ ಪ್ರಾರಂಭವಾಯಿತು. ತಕ್ಷಣ ಡಯಾಲಿಸಿಸ್ ಪ್ರಾರಂಭಿಸಬೇಕೆಂದರು. ಇವಳ ಮದುವೆಗಾಗಿ ಇಟ್ಟುಕೊಂಡ ಹಣ ಖರ್ಚಾಗಲು ಶುರುವಾಯಿತು. ಖರ್ಚು ಹೆಚ್ಚಾಗಲು ಮದುವೆಗೆಂದು ಕೂಡಿಟ್ಟ ಹಣ ಮುಗಿಯಿತು, ವಿಮೆಯೂ ಇಲ್ಲದುದರಿಂದ ಅಲ್ಲಲ್ಲಿ ಸಾಲ ಮಾಡಿದರು. ಅಂದುಕೊಂಡಂತೆ ವಿವಾಹವನ್ನು ಮಾಡಲಾಗಲಿಲ್ಲ. ಈ ನೋವಿನಿಂದಾಗಿ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡರು. ಈ ಸಾವಿಗೆ ತಂದೆ ಮತ್ತು ಮಗಳೇ ಕಾರಣ ಎಂಬ ಆಪಾದನೆಯೊಂದಿಗೆ ಓಡಾಟವಾಯಿತು. ಕೆಲವು ದಿನಗಳಲ್ಲಿ ಆ ತಂದೆಯೂ ಮರಣ ಹೊಂದಿದರು. ಕೆಲವೇ ದಿನಗಳಲ್ಲಿ ಈಕೆಯು ನಿರಪರಾಧಿ ಎಂದು ತೀರ್ಮಾನವಾಯಿತು. ಹಣದ ವ್ಯವಸ್ಥೆ ಮಾಡಿಕೊಂಡು ವಿವಾಹಕ್ಕೆ ತಯಾರಾಗುವ ವೇಳೆಗೆ ಆಕೆಯ ವಯಸ್ಸು ದಾಟಿತ್ತು. ಕಡೆಗೆ ವಿವಾಹವಾಗಲೇ ಇಲ್ಲ. ವಿಮೆ ಇದ್ದಿದ್ದರೆ ಸ್ಥಿತಿ ಇನ್ನೂ ಚೆನ್ನಾಗಿರುತ್ತಿತ್ತು.
ಇದೆಲ್ಲಾ ಯೋಚಿಸಿದಾಗ, ಕಾಯಿಲೆ ಬರದ ಹೊರತು ಅದರ ಬಗ್ಗೆ ಚಿಂತೆ ನಮಗೆ ಇರುವುದಿಲ್ಲ. ನರಳುವಿಕೆಯನ್ನು ನಾವು ಕನಸಿನಲ್ಲೂ ಎಣಿಸುವುದಿಲ್ಲ. ನಾವು ಸದಾ ಶಾಶ್ವತ, ಯಾವುದೇ ಕಾಯಿಲೆ ಅಥವಾ ಮರಣ ನಮಗೆ ಸಂಭವಿಸುವುದೇ ಇಲ್ಲ ಎಂಬುದು ದೃಢವಾದ ನಂಬಿಕೆ. ಆದ್ದರಿಂದಲೇ ಆರೋಗ್ಯವಿರುವಷ್ಟು ದಿನವೂ ಅತಿಹೆಚ್ಚಿನ ಆತ್ಮವಿಶ್ವಾಸ ನಮ್ಮದು. ನಿಜವಾಗಿಯೂ ಸಮಸ್ಯೆ ಬಂದಾಗ ನಮ್ಮನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಮೇಲ್ಕಂಡ ಎಲ್ಲಾ ದೃಷ್ಟಾಂತಗಳನ್ನು ನೋಡಿದಾಗ, ಸಾವನ್ನು ತಪ್ಪಿಸಿಕೊಳ್ಳಲಾಗದಿದ್ದರೂ ಕನಿಷ್ಠ ನರಳುವಿಕೆಯನ್ನು ತಪ್ಪಿಸಿಕೊಳ್ಳಬಹುದಾಗಿತ್ತು. ಪರಿಸ್ಥಿತಿಯನ್ನು ಉತ್ತಮಗೊಳಿಸಬಹುದಾಗಿತ್ತು ಎನಿಸುತ್ತದೆ. ಹಾಗೆ ಸಮಯಕ್ಕೆ ಸಹಾಯವಾಗಲು ಹಣ ಯಾರು ಕೊಡುತ್ತಾರೆ ಎಂದು ಯೋಚಿಸಿದರೆ ಆರೋಗ್ಯ ವಿಮೆ ಮಾತ್ರ ಇದಕ್ಕೆ ಪರಿಹಾರ ಎಂದೆನಿಸುತ್ತದೆ. ಓದುಗರ ಅಭಿಪ್ರಾಯವೂ ಅದೇ ಆದರೆ, ಆರೋಗ್ಯ ವಿಮೆಯ ವಿವರ ಸಹಜವಾಗಿ ಬೇಕೆನಿಸುತ್ತದೆ. ಹಾಗಾದರೆ ಆರೋಗ್ಯ ವಿಮೆ ಎಂದರೇನು, ಯಾವ ಯಾವ ರೀತಿಯ ವಿಮಾ ಸೌಲಭ್ಯಗಳಿವೆ, ಹೇಗೆ ಪಡೆಯಬೇಕು, ಎಲ್ಲಿ ಪಡೆಯಬೇಕು, ಇಂತಹ ಹಲವು ಪ್ರಶ್ನೆಗಳಿಗೆ ಆಸಕ್ತಿ ಇದ್ದವರಿಗಾಗಿ ಪ್ರತ್ಯೇಕ ಲೇಖನ ಕೊಡಲಾಗಿದೆ. ಆಸಕ್ತಿ ಇದ್ದವರು ಈ ಲೇಖಕರ ಆರೋಗ್ಯ ಕವಚ ಬರಹವನ್ನು ಓದುವುದರ ಮೂಲಕ ತಿಳಿಯಬಹುದು.
ಈ ಲೇಖನದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಮ್ಮ ಹೆಸರಿನೊಂದಿಗೆ ಬ್ಲಾಗಿನ ಕೆಳಭಾಗದಲ್ಲಿ ಕಾಣುವ ಕಾಮೆಂಟ್ ವಿಭಾಗದಲ್ಲಿ ತಿಳಿಸಿದಲ್ಲಿ ಮುಂದಿನ ಲೇಖನಗಳನ್ನು ಉತ್ತಮಗೊಳಿಸಲು ಸಹಾಯವಾಗುತ್ತದೆ .
ಹಲವಾರು ನೈಜ ಉದಾಹರಣೆಗಳೊಂದಿಗೆ, ಆರೋಗ್ಯ ವಿಮೆಯ ಅವಶ್ಯಕತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಮಂಡಿಸಿರುತ್ತೀರಿ. ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಜೀವ ವಿಮೆಯ ಜೊತೆಗೆ ಆರೋಗ್ಯ ವಿಮೆಯನ್ನೂ ಹೊಂದುವುದು ಅತ್ಯವಶ್ಯಕವೆಂಬುದು ನನ್ನ ಅಭಿಪ್ರಾಯವಾಗಿದೆ. ಧನ್ಯವಾದಗಳು.
ReplyDeleteಪ್ರಚಲಿತ ಉದಾಹರಣೆಗಳೊಂದಿಗೆ ಲೇಖನದ ಮೂಲಕ ಅಭಿವ್ಯಕ್ತಿಸಿದ ವಿವರಣೆ ಎಲ್ಲರ ಮನವನ್ನು ಮುಟ್ಟುವಂತಿದ್ದು, ಬದುಕಿನಲ್ಲಿ ಎಲ್ಲಾ ಪ್ರಮುಖ ತೆರನಾದ ಹಾಗೂ ಸಂಪೂರ್ಣವಾದ ವಿಮಾ ಮಾಹಿತಿಯನ್ನು ನೀಡಿದೆ. ಧನ್ಯವಾದಗಳು ಸಾರ್
ReplyDeleteನಮಗೇನು ರೋಗ ಬರೋಲ್ಲ ಗಟ್ಟಿಮುಟ್ಟಾಗಿ ಇದೀವಿ ಅಂತ ಬಹಳಷ್ಟು ಜನ ಅಂದುಕೊಂಡು ಈ ವಿಮೆಯ ಬಗ್ಗೆ ನಿರ್ಲಕ್ಷ್ಯ ಮಾಡಿಬಿಡುತ್ತೇವೆ.ದಿಢೀರ್ ಅಂತ ಅನಾರೋಗ್ಯ ಅಪ್ಪಳಿಸಿದಾಗ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಆಗುತ್ತದೆ.ಈಗಿನ ದುಬಾರಿ ಜೀವನದಲ್ಲಿ ಆಸ್ಪತ್ರೆಯ ಖರ್ಚಿಗೆ ಎಲ್ಲವನ್ನೂ ಕಳೆದುಕೊಂಡ ಉದಾಹರಣೆಗೆ ನಾವೇ ಇದೀವಿ.ಹಾಗಾಗಿ ಆರೋಗ್ಯ ವಿಮೆ ಇರಲೇಬೇಕು ಇದು ಅನಿವಾರ್ಯವೂ ಆಗಿದೆ ಆವಶ್ಯಕತೆಯೂ ಆಗಿದೆ.
ReplyDeleteವಿಮೆ ಯನ್ನು ವಿಪತ್ತಿನ ಮಿತ್ರ ಎನ್ನಬಹುದು, ಗೃಹ ಸಾಲವಿಮೆ, ವಾಹನವಿಮೆ, ಆರೋಗ್ಯ, ಅಪಘಾತ, ಜೀವವವಿಮೆ, ಪ್ರಯಾಣ ವಿಮೆ, ಹೀಗೆ ಎಷ್ಟೋ ವಿಪತ್ತಿನಲ್ಲಿ, ಮಿತ್ರನಾಗಿ ಬರುವ ವಿಮೆ ಎಲ್ಲರಿಗೂ ಅವಶ್ಯಕ. ವಿಮೆಯ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತಿರುವ ತಮ್ಮ ಪ್ರಯತ್ನಕ್ಕೆ ದೊಡ್ಡ ಅಭಿನಂದನೆಗಳು.
ReplyDeleteಉಪಯುಕ್ತ ಮಾಹಿತಿ, ಸವಿಸ್ತಾರವಾಗಿ ಅರುವಿದ ತಮಗೆ ಧನ್ಯವಾದಗಳು.
ReplyDeleteವಿಮೆಯ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲದೆ, ಕಾಯಿಲೆ ಬಂದಾಗ ನರಳುವ ಜನರೇ ಹೆಜ್ಜು. ಇದರ ಬಗ್ಗೆ ತಿಳಿ ಹೇಳಿದರೆ ಯೋಜನೆ ಮಾಡುವ ರೀತಿಯೇ ಬೇರೆ. ಕಷ್ಟ ಬಂದಾಗ ವೇಕಟರಮಣ ಎಂದರೆ ಏನು ಪ್ರಯೋಜನ. ಈ ಲೇಖನವನ್ನು ಓದಿದ ಮೇಲಾದರೂ ಪ್ರಯೋಜನವಾಗಬಹುದು ಎಂದು ಆಶಿಸುತ್ತೇನೆ.
ReplyDeleteಸುರೇಶ BHEL
Majority of people will not read terms and conditions of insurance policies, bank loan documents before signing (including bank staff). My brother is sharing the terms and conditions of flight insurance and discussed the usage of Health Insurance policies at this period (Very essential and necessary to every one). Besides conveying thanks and regards please share this information by discussing with your friends and other family members.
ReplyDeleteHiriyanna K P
GE sir. Excellent points and useful tips regarding Health Insurance and Normal Insurance..Definitely this will help to people to coverage insurance
ReplyDelete