ಅನಾರೋಗ್ಯ ಪರ್ವ-೧
೧೯೯೨ರಲ್ಲಿ ಒಂದು ಸಂಜೆ.ನಮ್ಮ ೨ವರ್ಷದ ಮಗನ ಎತ್ತಿ ಕೊಂಡು ಆಡಿಸುತ್ತಿದ್ದೆ.ಆಡುತ್ತಿದ್ದವನು ಇದ್ದಕ್ಕಿದ್ದಂತೆ ಕಣ್ಣಿಗೆ ಬೆರಳು ಹಾಕಿದನು.ಕಣ್ಣಿನ ನೋವು ಹೆಚ್ಚಾಗಿ ಅವನನ್ನು ಕೆಳಗೆ ಆಡಲು ಬಿಟ್ಟು ಕಣ್ಣು ನೇವರಿಸಿ ಕೊಳ್ಳಲು ಪ್ರಾರಂಭಿಸಿದೆ.ನೋವು ಶಮನಗೊಳಿಸಲು ಗೊತ್ತಿರುವ ತೊಂದರೆಯಾಗದಂತಹ ಮನೆಯ ಚಿಕಿತ್ಸೆ.ರಾತ್ರಿ ಮಲಗಿ ಬೆಳಿಗ್ಗೆ ಎದ್ದಮೇಲೂ ಕಣ್ಣು ಸಣ್ಣದಾಗಿ ನೋವುತ್ತಿತ್ತು.ಆದರೂ ಎಂದಿನಂತೆ ಬೆಳಿಗ್ಗೆ ೭ಘಂಟೆಗೆ ಸ್ಕೂಟರ್ ನಲ್ಲಿ ಕೆಲಸಕ್ಕೆ ಹೋದೆ.ಸುಮಾರು ೮.೩೦ ರ ವೇಳೆಗೆ ಕಣ್ಣು ಮಂಜು ಕವಿದಂತಾಯಿತು.ತೀವ್ರ ತಲೆನೋವು.ಅಲ್ಲೇ ದೊರೆಯುವ ಪ್ರಥಮ ಚಿಕಿತ್ಸೆ ವೈದ್ಯರಲ್ಲಿಗೆ ಹೋದೆನು. ಪರೀಕ್ಷಿಸಿ ಕಣ್ಣಿನ ವೈದ್ಯರನ್ನು ಭೇಟಿ ಮಾಡುವುದು ಅನಿವಾರ್ಯ ಎಂದು ಅವರು ಅಂದಾಗ ಸ್ವಲ್ಪ ಗಾಬರಿಯಾದೆ.
ನಿಧಾನವಾಗಿ ಸ್ಕೂಟರ್ ನಲ್ಲಿ ೬ ಕಿಲೋಮೀಟರ್ ದೂರದಲ್ಲಿನ ಮನೆಯ ಬಳಿಯ ನೇತ್ರಾಲಯದತ್ತ ಹೊರಟೆ. ಮನೆಗೆ ಇನ್ನೂ ಎರಡು ಕಿಲೋಮೀಟರ್ ಇರುವಾಗ ಕಣ್ಣಿಗೆ ತೀರಾ ಮೋಡ ಕವಿದ ವಾತಾವರಣ.ಸಂಜೆಗತ್ತಲು. ಹೇಗೋ ಸುಧಾರಿಸಿಕೊಂಡು ಸ್ಕೂಟರ್ ಚಾಲನೆ ಮಾಡಿ ಕೊಂಡೇ ಬಂದೆ. ಬೆಳಿಗ್ಗೆ ೯.೩೦ ಘಂಟೆ.ಎನ್ ಆರ್ ಕಾಲೋನಿಯ ಬಳಿ ಬರುವಾಗ ಮುಂದೆ ಏನೇನೂ ಕಾಣದು.ಅಲ್ಲಿಯೇ ಮುಖ್ಯ ರಸ್ತೆಯ ಬದಿಯಲ್ಲಿ ಕಾಲುದಾರಿ ಸಮೀಪದಲ್ಲಿ ಸ್ಕೂಟರ್ ನಿಲ್ಲಿಸಿ ಬೀಗ ಹಾಕಿದೆ.ಕತ್ತಲು ಆದರೆ ಬಿಸಿಲಿಗೆ ಮೈ ಸುಡುತ್ತಿತ್ತು. ರಸ್ತೆಯಲ್ಲಿನ ಪ್ರಯಾಣಿಕರೊಬ್ಬರಲ್ಲಿ ಸಹಾಯ ಕೇಳಿ ಅಲ್ಲಿಯ ಕಣ್ಣಾಸ್ಪತ್ರೆಗೆ ಹೋದೆನು.ಈಗಾಗಲೇ ಮುಂಚಿತವಾಗಿ ಭೇಟಿಗೆ ಅವಕಾಶ ಮಾಡಿ ಕೊಂಡವರನ್ನಷ್ಟೇ ಪರೀಕ್ಷಿಸಲು ಪ್ರಾರಂಭಿಸಿದ್ದರು. ನನ್ನನ್ನು ನೋಡುವ ವೇಳೆಗೆ ಸಮಯ ಮಧ್ಯಾಹ್ನ ೨ಘಂಟೆ. ಆ ವೇಳೆಗೆ ಕಣ್ಣು ನೋವು ಕಡಿಮೆಯಾಗಿತ್ತು.ದೃಷ್ಟಿಯೂ ಸರಿಯಾಗಿತ್ತು.ಸರಿ, ಮನೆಗೆ ಹೋಗಲೇ ಅಥವಾ ಬಂದಿದ್ದಕ್ಕೆ ಕಣ್ಣು ಪರೀಕ್ಷೆ ಮುಗಿಸಿ ಕೊಂಡೇ ಹೋಗಲೇ.ಏನೋ ಜಿಜ್ಞಾಸೆ. ಆದರೂ ಅನುಭವಿಸಿದ್ದ ಸಮಸ್ಯೆ ಮರುಕಳಿಸ ಬಾರದೆಂದು ಪರೀಕ್ಷೆ ಮಾಡಿಸಲು ನಿರ್ಧಾರ. ವೈದ್ಯರಿಂದ ಅನೇಕ ಪರೀಕ್ಷೆಗಳು. ಯಾವುದೋ ವಿಶೇಷ ಪರೀಕ್ಷೆ ಮಾಡಬೇಕೆಂದು ಅದಕ್ಕಾಗಿ ಹತ್ತಿರದಲ್ಲಿರುವ ಪ್ರಖ್ಯಾತ ವೈದ್ಯರ ಲ್ಯಾಬೋರೇಟರಿ ಗೆ ಕಳಿಸಿದರು.ಅಲ್ಲಿಗೆ ಹೋಗಿ ಪರೀಕ್ಷೆ ಮಾಡಿಸಲಾಗಿ ಅವರು ಮಾಂಟೆಕ್ ಟೆಸ್ಟ್ ಪಾಸಿಟಿವ್ ಎಂದೂ ಅದಕ್ಕೆ ತಾವೇ ಚಿಕಿತ್ಸೆ ಕೊಡುವುದಾಗಿಯೂ ಕಣ್ಣಿನ ವೈದ್ಯರೊಂದಿಗೆ ದೂರವಾಣಿ ಯಲ್ಲಿ ಚರ್ಚಿಸಿ ತಿಳಿಸಿದರು.
ಮರುದಿನದಿಂದಲೇ ನಾನು ಹೊಸ ಖಾಯಿಲೆಯ ರೋಗಿ.ಚಿಕಿತ್ಸೆ ಪ್ರಾರಂಭವಾಯಿತು . ಅವರು ಹೇಳಿದ ಎಚ್ಚರಿಕೆ ಪ್ರಕಾರ ಹತ್ತಿರಕ್ಕೆ ಯಾರನ್ನೂ ಸೇರಿಸಬೇಡಿ. ಮಕ್ಕಳು ಹೆಂಡತಿ ಹೀಗೆ ಯಾರೂ ಬೇಡ.ಕೆಮ್ಮು ಬಂದರೆ ಇನ್ನೂ ಎಚ್ಚರವಾಗಿರಬೇಕು. ಬೇರೆಯವರಿಗೆ ಕ್ಷಯರೋಗ ಬರಬಾರದಲ್ಲವೇ ಎಂದಿದ್ದು ತೀರಾ ಯೋಚನೆಗೀಡು ಮಾಡಿತು.ನನ್ನ ಖಾಯಿಲೆಯನ್ನು ಬೇರೆಯವರಿಗೆ ಹೇಳಿದರೆ ನಿಕೃಷ್ಟವಾಗಿ ನೋಡುವರು.ಭಯ ಗೊಳ್ಳುವರು. ಹೇಳದಿದ್ದರೆ ನನಗೆ ಉಪಚರಿಸುವುದು ಹೇಗೆ.ಜೊತೆಗೆ ಬೇರೆಯವರಿಗೆ ನನ್ನಿಂದ ಖಾಯಿಲೆ ಹರಡಬಾರದೆಂಬ ನನ್ನ ಕಾಳಜಿ ಬೇರೆ.ಎಲ್ಲಾ ಅಯೋಮಯ.ಮನಸ್ಸಿಗೆ ನೆಮ್ಮದಿ ಇಲ್ಲ.ಮಕ್ಕಳನ್ನು ಎತ್ತುವಂತಿಲ್ಲ, ಮುದ್ದಾಡುವಂತಿಲ್ಲ.ಯಾರಿಗೂ ಹೆಚ್ಚಿನ ಮಾಹಿತಿ ಕೊಡದೆ ತೊಂದರೆಯೂ ಆಗದಂತೆ ವ್ಯವಹರಿಸುತ್ತಿರುವೆ. ಇನ್ನೆಷ್ಟು ದಿನ. ವೈದ್ಯರ ಪ್ರಕಾರ ವಾಸಿ ಕಾಣಲು ೩-೪ತಿಂಗಳು ಬೇಕು.ಪ್ರತಿನಿತ್ಯ ಪಶುಗಳಿಗೆ ಕೊಡುವಂತಹ ದೊಡ್ಡ ದೊಡ್ಡ ಮಾತ್ರೆಗಳು ಹೊತ್ತಿಗೆರಡು.ದಿನಕ್ಕೆರಡು ಬಾರಿ.ಮಾತ್ರೆ ಹತ್ತಿರದ ಮೆಡಿಕಲ್ ಶಾಪ್ ನಲ್ಲಿ ಸಿಗುವುದಿಲ್ಲ.ಎಲ್ಲಕ್ಕೂ ಹೋಗಬೇಕು ವಿಕ್ಟೋರಿಯಾ ಆಸ್ಪತ್ರೆ ಹತ್ತಿರದ ಅಂಗಡಿಗೆ.ದೊಡ್ಡ ಖಾಯಿಲೆ.ದೊಡ್ಡ ಶಾಪು.ಆದರೆ ಬೆಲೆ ಕಡಿಮೆ.ಮಾತ್ರೆಯ ಗಾತ್ರ ದೊಡ್ಡದು.ಎಲ್ಲ ಕೆಲಸಕ್ಕೂ ನಿರುತ್ಸಾಹ.ಏನೋ ಆಧ್ಯಾತ್ಮಿಕತೆ.
ಒಂದು ತಿಂಗಳು ಕಳೆಯಿತು.ಕಂಪನಿಯ ಮುಖ್ಯಾಧಿಕಾರಿಗಳ ಕಛೇರಿಯಲ್ಲಿ ಕೆಲಸವೊಂದಕ್ಕೆ ಕಾಯುತ್ತಾ ಕುಳಿತಿದ್ದೆ.ಆಕಸ್ಮಿಕವಾಗಿ ಅಲ್ಲಿಗೆ ಬಂದಿದ್ದ ಪ್ರಥಮ ಚಿಕಿತ್ಸೆ ಮಾಡಿದ್ದ ವೈದ್ಯರ ಭೇಟಿಯಾಯಿತು.ಅವರು ಹೇಗಿದೇರಿ ಕಣ್ಣು ನೋವು ಎಂದಾಗ ವಿಸ್ತಾರವಾಗಿ ನನ್ನ ರೋಗ ಔಷಧೋಪಚಾರದ ಬಗ್ಗೆ ಹೇಳಿದೆ.ಬೇರೆ ವೈದ್ಯರನ್ನು ಕಂಡು ಬಂದ ಬಳಿಕ ನನಗೆ ತಿಳಿಸಬೇಕಾಗಿತ್ತು.ಎಂದ ಅವರು ಹೇಳಿದ ಖಾಯಿಲೆ ಯನ್ನು ಒಪ್ಪಲಿಲ್ಲ.ಬದಲು ಇನ್ನೊಬ್ಬ ಕಣ್ಣಿನ ತಜ್ಞ ವೈದ್ಯರ ಬಳಿ ಹೋಗಲು ಹೇಳಿದರು.ಈಗ ಹೊಸ ವೈದ್ಯರ ಬಳಿ ಪುನಃ ಕಣ್ಣಿನ ಪರೀಕ್ಷೆ. ಖಾಯಿಲೆಯ ಲಕ್ಷಣಗಳಾದ ಮಂದ ದೃಷ್ಟಿ, ತಲೆನೋವಿನೊಂದಿಗೆ ನರಳಿ ಕೆಲವು ಘಂಟೆಗಳ ನಂತರ ಎಂದಿನಂತೆ ಸರಿಯಾಗಿದ್ದು ಹೀಗೆ ವಿವರಗಳನ್ನು ಕೂಲಂಕಷವಾಗಿ ಕೇಳಿಕೊಂಡರು.ನಂತರ ಕಣ್ಣು ಶುದ್ದಿ ಮಾಡಿ ಪರೀಕ್ಷೆ ಯಾಯಿತು.ಅವರ ಧೀರ್ಘ ತಪಾಸಣೆಯ ತರುವಾಯ ಅವರ ತೀರ್ಮಾನ ನೆಮ್ಮದಿ ತರುವುದಾಗಿತ್ತು. ಇದು ಸೀಎಸ್ಆರ್ ಎಂಬ ತಾತ್ಕಾಲಿಕ ಕಣ್ಣಿನ ದೋಷವಾಗಿದ್ದು ವಿಶ್ವದಲ್ಲಿ ಅತಿ ಕಡಿಮೆ ಮಂದಿ ಇದರಿಂದ ನರಳುತ್ತಿರುವರು, ಇದಕ್ಕೆ ತೊಂದರೆ ಇದ್ದಾಗ ಕೆಲವು ಘಂಟೆಗಳ ವಿಶ್ರಾಂತಿ ಸಾಕು, ನಂತರ ಎಂದಿನಂತೆ ಮಾಮೂಲು ಕೆಲಸಗಳಿಗೆ ಹಿಂದಿರುಗಬಹುದು, ಇದಕ್ಕೆ ಯಾವುದೇ ಔಷಧಿಗಳೂ ಇಲ್ಲ ಅದರ ಅಗತ್ಯವೂ ಇಲ್ಲ ಎಂದರು .ಹಾಗಾದರೆ ಆದ ಟೆಸ್ಟ್,ಅದರ ಫಲಿತಾಂಶ, ನಡೆದ ಔಷಧಿ ಸೇವನೆ ಏಕಾಯಿತು.ಎಂದಾಗ ಆ ಬಗ್ಗೆ ನಾನೇನು ಹೇಳಲಾರೆ. ನಿಮಗಂತೂ ಇರೋ ಸಮಸ್ಯೆ ಇದು.ಔಷಧಿ ಪಥ್ಯ ಎಲ್ಲಾ ನಿಲ್ಲಿಸಿ, ಎಂದಿನಂತೆ ಹಸನ್ಮುಖಿ ಜೀವನ ನಡೆಸಿ ಎಂದಿದ್ದು ಜೀವನದಲ್ಲಿ ಒಂದು ಹೊಸ ಅಧ್ಯಾಯ ವಾದಂತಾಯಿತು.
ಮನೆಯಲ್ಲಿ ತಂದಿಟ್ಟ ಔಷಧಿ ಗಳನ್ನು ಅಗತ್ಯವಿದ್ದವರಿಗೆ ಕೊಡಿ ಎಂದು ಅಂಗಡಿಯವನಿಗೆ ಹೇಳಿದರೆ ಅವನಿಗೂ ಬೇಡವಾಯಿತು.ಆ ವರೆಗೆ ತಿಂದ ಮಾತ್ರೆಗಳನ್ನು ನೀರು ಎಳನೀರು ಕುಡಿದು ಪರಿಹಾರ ಮಾಡಿಕೊಂಡರೆ ಉಳಿದ ಮಾತ್ರೆಗಳನ್ನು ಕೊಳಚೆ ಚರಂಡಿ ನೀರಿಗೆ ಎಸೆದು ನಿಶ್ಚಿಂತನಾದೆ. ಅಂದಿನಿಂದ ಕೆಲವು ಬಾರಿ ಮಂದ ದೃಷ್ಟಿಯ ತಲೆನೋವು ಭಾಧಿಸಿದೆ. ಆದರೆ ಕೆಲವು ನಿಮಿಷಗಳಿಗೆ ಮಾತ್ರ.ಯಾವ ವೈದ್ಯರೇ ಆಗಲಿ ಧೀರ್ಘಕಾಲಿಕ ಔಷಧಿ ಸೇವನೆ ಹೇಳಿದರೆ, ದೊಡ್ಡ ಖಾಯಿಲೆಯ ಹೆಸರು ಹೇಳಿದರೆ ನಂಬಿ, ಆದರೆ ಇನ್ನೊಬ್ಬ ವೈದ್ಯರಲ್ಲಿ ತೋರಿಸಿ ಮುಂದುವರಿಯುವುದು ಅತ್ಯಂತ ಸೂಕ್ತ.
Good presentation
ReplyDeleteThank you
ReplyDeleteಅನುಭವದ ಎಳೆ, ಅದರ ಸಾಂದರ್ಭಿಕ ವರ್ಣನೆಗಳು ಚೆನ್ನಾಗಿವೆ.ಅದರೊಂದಿಗೇ ಅದಕ್ಕೆ ತಕ್ಕ ಪರಿಹಾರದ ಹಾದಿ ಮತ್ತು ಕೊನೆಯಲ್ಲಿ ರುವ ಸಲಹೆಗಳು ಅನುಕರಣೀಯ.
ReplyDeleteನೀನು ಇತರರಿಗೆ "ಎರಡನೇ ಅಭಿಪ್ರಾಯ" ಪಡೆಯಲು ಸೂಚಿಸುವುದು ಅನುಭವಜನ್ಯ ಅಲ್ಲವೇ ?
ReplyDeleteನಿಜ. ಯಾವುದೇ ಅನಾರೋಗ್ಯ ಬಂದು, ವೈದ್ಯರು ದೀರ್ಘ ಕಾಲ ಆಗಬಹುದು ಎಂದರೆ, ಖಂಡಿತಾ ಮತ್ತೊಂದು ವೈದ್ಯರಿಗೆ ತೋರಿಸುವುದು ಉತ್ತಮ.
ReplyDeleteಈ ಕಾಯಿಲೆಯ ಅನುಭವ ಇದೆಯಲ್ಲಾ ಇದು ಸಂಸಾರ ಗುಟ್ಟು ವ್ಯಾಧಿ ರಟ್ಟು ಅನ್ನುವ ಹಾಗೆ ಇರಬೇಕು. ಇದರಿಂದಾದ ಕಹಿ ಅನುಭವಗಳಿಂದ ಬೇರೆಯವರಿಗೆ ಅನುಕೂಲವಾಗುವ ಸಂಭವವಿರುತ್ತದೆ. ನಾವು ರೋಗಿಗಳನ್ನು ನೋಡಲು ಹೋಗುವುದು ಅವರಿಗೆ
ReplyDeleteಧೈರ್ಯ ಹೇಳುವುದಲ್ಲದೆ , ಅವರ ಅನುಭವ ಮತ್ತು ಕಾಯಿಲೆಯಿಂದ ಗುಣವಾದ ಬಗ್ಗೆ ತಿಳಿಯು ವುದರಿಂದ
ಕೆಲವು ಸಲ ನಮಗೆ ತಿಳಿದ ಸಲಹೆ ಕೊಡಲು ಸಹಾಯವಾಗುತ್ತದೆ. ನಿಮ್ಮ ಅನುಭವ ಬರಹದ
ಮೂಲಕ ತಿಳಿಸುತ್ತಿರುವುದಕ್ಕೆ ಧನ್ಯವಾದಗಳು
Yes,Second opinion is always good.
ReplyDelete