ನಾವು ಚಿಕ್ಕವರಿದ್ದಾಗ, ಆಟ ಆಡುವಾಗ ಆಟದ ಮಧ್ಯೆ ಕೇವಲ ಒಬ್ಬರನ್ನು ಗುರುತಿಸ ಬೇಕಾದಾಗ ಈ ಕೆಳಕಂಡ ಪ್ರಾಸಬದ್ಧವಾಗಿ ಜೋಡಿಸಿದ ಪದಗಳ ಸಾಲನ್ನು ಹಾಡಿನ ರೂಪದಲ್ಲಿ ಹೇಳುತ್ತಿದ್ದವು:
"ಅವಲಕ್ಕಿ ಪವಲಕ್ಕಿ ಕಾಂಚಣ ಮಿಣಮಿಣ,
ಡಾಂ ಡೂಂ, ಟಸ್ ಪುಸ್, ಕೊಯ್ ಕೊಟಾರ್"
ಈ ಪದಗಳನ್ನು ಒಬ್ಬೊಬ್ಬರಿಗೆ ಒಂದೊಂದು ಪದವಂತೆ ತೋರಿಸುತ್ತಾ ಹೇಳುತ್ತಿದ್ದೆವು. ಕಡೆಯಲ್ಲಿ ಕೊಟಾರ್ ಎಂಬ ಶಬ್ದವು ಯಾರಿಗೆ ಬರುತ್ತದೆಯೋ ಅವರನ್ನು ಸೋತಿದ್ದಾರೆಂದೋ ಅಥವಾ ಗೆದ್ದಿದ್ದಾರೆಂದೋ ಎಂದು ಗುರುತಿಸಿದ್ದೆವು. ಇದು ಅಂದು ಕೇವಲ ಆಟವೇ ಆಗಿದ್ದರೂ ಇದರಲ್ಲಿ ಪ್ರತಿಯೊಬ್ಬರ ಜೀವನದ ಹಲವು ಹಂತಗಳನ್ನು ವಿವರಿಸುವ ತತ್ವವೇ ಅಡಗಿದೆ ಎಂಬುವುದನ್ನು ತಿಳಿದಿರಲಿಲ್ಲ. ಆದರೆ ಅವುಗಳ ಅರ್ಥವೇ ಗಹನ.
ಅವಲಕ್ಕಿ - ಮನುಷ್ಯ ಜೀವಿ ಬಾಲ್ಯದಲ್ಲಿದ್ದಾಗ ಮೃದುವಾದ ಆಹಾರವನ್ನು ಸೇವಿಸುತ್ತದೆ . ಇರತಕ್ಕ ಆಹಾರವನ್ನು ನೆನೆಸಿ ಅಥವಾ ಬೇಯಿಸಿ ಹಿಸುಕಿ ಅವಲಕ್ಕಿ ಯಂತೆ ಮಾಡಿ ಸೇವಿಸುತ್ತದೆ . ಇದನ್ನು ಸಂಕ್ಷಿಪ್ತವಾಗಿ ಅವಲಕ್ಕಿ ಎಂದು ಕರೆಯುತ್ತಾರೆ.
ಪವಲಕ್ಕಿ - ದೊಡ್ಡವನಾದಂತೆ ಈ ಜೀವಿಗೆ ಆಹಾರದ ಪ್ರಮಾಣ ಕನಿಷ್ಠ ಒಂದು ಪಾವು ಬೇಕಾಗುತ್ತದೆ. ಆಹಾರವನ್ನು ಅದರ ಮೂಲರೂಪವಾದ ಅಕ್ಕಿ ಎಂದು ಗುರುತಿಸಿ ಅದರ ಪ್ರಮಾಣಕ್ಕೆ ಸೇರಿಸಿದಾಗ ಅದು ಪಾವಲಕ್ಕಿ ಅಥವಾ ಪವಲಕ್ಕಿ ಎಂದಾಗುತ್ತದೆ. (ವಯೋಮಾನ ಸುಮಾರು ೨೫ ರವರೆಗೆ )
ಕಾಂಚಾಣ - ಇನ್ನು ಜೀವಿ ಬೆಳೆದಂತೆ ಅದು ದುಡಿಯಲು ಪ್ರಾರಂಭಿಸುತ್ತದೆ . ಅದರಲ್ಲಿ ಹಣ ಅಥವಾ ದ್ರವ್ಯ ಅಥವಾ ಅದರ ಮೂಲರೂಪವಾದ ಬಂಗಾರ ಸಂಗ್ರಹವಾಗುತ್ತದೆ. ಬಂಗಾರವನ್ನು ಕಾಂಚಾಣ ಎಂದು ಕರೆಯುತ್ತಾರೆ. ಈ ವೇಳೆಯಲ್ಲಿ ಜೀವಿಗೆ ವಿವಾಹವಾಗಿ ಸಂಗಾತಿ ಮಕ್ಕಳ ಜೊತೆ ಸಡಗರ ಸಂತೋಷದ ಜೀವನ (ವಯೋಮಾನ ೨೫ ರಿಂದ ೩೫)
ಮಿಣ ಮಿಣ - ಕೈನಲ್ಲಿ ದ್ರವ್ಯಗಳು ಓಡಾಡುತ್ತಿದ್ದಾಗ ಚೆನ್ನಾಗಿರತಕ್ಕಂತಹ ಬಟ್ಟೆಗಳು, ಒಳ್ಳೆಯ ಸೀರೆಗಳು, ಉಂಗುರ, ವಾಚ್, ನೆಕ್ಲೆಸ್ ಸರಗಳು ಬ್ರೇಸ್ಲೆಟ್, ಇತ್ಯಾದಿ ಆಭರಣಗಳು ಸೇರ್ಪಡೆಯಾಗುತ್ತದೆ. ಆಭರಣಗಳಿಗೆ ತಕ್ಕಂತಹ ಯವ್ವನದ ದೇಹದ ಮೈಕಟ್ಟು ಅವನನ್ನು ಮಿಣ ಮಿಣ ವಾಗಿ ಚೆನ್ನಾಗಿ ಹೊಳೆಯುವಂತೆ ಕಾಣಿಸುತ್ತದೆ. (ವಯೋಮಾನ ೩೫ ರಿಂದ ೪೫)
ಡಾಂ ಡೂಂ - ಹಣದ ಅನುಕೂಲತೆ, ಹೊಳೆಯುವ ಯೌವ್ವನ, ಸುತ್ತಮುತ್ತಲೂ ಇಷ್ಟಪಡುವ ಜನಗಳು ಸಮಾಜದಲ್ಲಿನ ಸ್ಥಾನಮಾನಗಳು ಅವರನ್ನು ಸಂತೋಷವಾಗಿಡಲು ಅವನು ಧಾರಾಳವಾಗಿ ಮಾಡುವ ಖರ್ಚನ್ನು ಡಾಂ ಡೂಂ ಎಂದು ಕರೆಯುತ್ತಾರೆ. (ವಯೋಮಾನ ೪೫ ರಿಂದ ೫೫)
ಟಸ್ ಪುಸ್ - ಈ ವೇಳೆಗೆ ಮಕ್ಕಳ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿರುತ್ತಾರೆ ಅಥವಾ ಆ ಪ್ರಯತ್ನದಲ್ಲಿ ಇರುತ್ತಾರೆ. ಕೆಲವು ಮಕ್ಕಳಿಗೆ ಮದುವೆಯಾಗಿರುತ್ತದೆ. ಅವರೂ ಸಹ ಮನೆಯಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವವರಾದ್ದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಪ್ರಾರಂಭವಾಗಿರುತ್ತದೆ. ಅವರ ಧ್ವನಿ ದೊಡ್ಡದಾದಾಗ ನಿಧಾನವಾಗಿ ಟಸ್ ಎಂದು ಉಸಿರು ಬಿಡ ಬೇಕಾಗುತ್ತದೆ.
ಸಂಸಾರ ಮಕ್ಕಳೊಂದಿಗೆ ವಾದಗಳು ಹೆಚ್ಚಾದಾಗ ಪುಸ್ ಎಂದುಕೊಳ್ಳುತ್ತಾ ಸೋಲೊಪ್ಪಿ ಸುಮ್ಮನೆ ಕುಳಿತುಕೊಳ್ಳಬೇಕಾಗುತ್ತದೆ. ಟಸ್ಪುಸ್ ಎಂದು ತನ್ನಲ್ಲಿಯೇ ತಾನು ಹೇಳಿಕೊಳ್ಳುವ ಬೇಸರದ ಸ್ವಗತ ಪ್ರಾರಂಭವಾಗುತ್ತದೆ. ನಿಶ್ಶಕ್ತಿ ಅಥವಾ ನಿವೃತ್ತಿಯು ಆನಿಶ್ಚಿತತೆಯ ಯೋಚನೆ ಮಾಡಿಸುತ್ತದೆ (ವಯೋಮಾನ ೫೫ ರಿಂದ ೬೫).
ಕೊಯ್ ಕೊಟಾರ್ - ವಯೋಮಾನಕ್ಕೆ ತಕ್ಕಂತಹ ಕಾಯಿಲೆಗಳು, ಓಡಾಡಲಾಗದ ನಿಶ್ಶಕ್ತಿ, ಮಕ್ಕಳು ಸಂಸಾರದವರಿಂದ ಇವನ ಬಗ್ಗೆ ನಡೆಯುವ ತಾತ್ಸಾರ, ವಿಷಯ ಹಂಚಿಕೊಳ್ಳಲು ಸಿಗದ ಮಿತ್ರರು ಇವುಗಳೆಲ್ಲವೂ ಕೊಯ್ ಕೊಯ್ ಎಂದು ನರಳುತ್ತಾ ಒಂದು ದಿನ ಕೊಟಾರ್ ಎಂದು ಪ್ರಾಣ ಬಿಡುತ್ತದೆ. ಹೀಗೆ ಕೊಟಾರ್ ಎನ್ನುತ್ತಾ ಅದು ಬದುಕಲು ಸೋತರೂ ಒಂದು ರೀತಿಯಲ್ಲಿ ಈ ಭವಬಂಧನದಿಂದ ಗೆದ್ದಂತೆಯೇ.
ಇಂತಹ ಜೀವನ ಚಕ್ರವನ್ನು ವಿವರಿಸುವ ನಾಲ್ಕು ಸಾಲಿನ ಹಾಡಿನ ರೂಪ ತುಂಬಾ ಮಾರ್ಮಿಕವಾಗಿದೆ. ಈ ಕಥೆ ಓದಿ ಮನನ ಮಾಡಿಕೊಂಡರೆ ತನ್ನ ಜೀವನ ಹೇಗೆ ಸಾಗುತ್ತದೆ ಎಂದು ಯೋಚಿಸಿ ಜೀವನಕ್ರಮವನ್ನು ತಿದ್ದಿಕೊಳ್ಳಲು ಅವಕಾಶವಾಗುತ್ತದೆ. ಅಲ್ಲವೇ.
"ಅದ್ಭುತವಾದ ಅರ್ಥ ವಿಶ್ಲೇಷಣೆ" ಮೆಚ್ಚಿದೆ ತಮ್ಮಾ ನಿನ್ನ ಸಂಸ್ಕಾರಯುತ ಶೈಲಿಯ. ನಿನ್ನ ಪ್ರೀತಿಯ ಹಿರಿಯಣ್ಣ.
ReplyDelete