Skip to main content

ತಳಮಳದ ವ್ಯಾಧಿ

ಏನೋ ತಳಮಳ, ಅದೇನೋ ಗೊಂದಲ
ಮನೆಯಲ್ಲೇ ಇದ್ದರೂ ಎಲ್ಲರೂ ದೂರ ದೂರ
ಕೇಳಿದ್ದೆಲ್ಲ ಮಾಡಿ ಬಡಿಸಲು ಮಡದಿ ರೆಡಿ
ಕೇಳುವ ಹೇಳುವ ಸಂಭ್ರಮವಿಲ್ಲ ಮನಸಿನಡಿ

ಅಜ್ಞಾತ ಕಣ್ಣುಗಳು ನನ್ನನ್ನೇ ಅನುಸರಿಸುತಿದೆಯೇ
ಯಾವ ಕ್ಷಣದಲಿ ಹೇಗೆ ಇವನ ಬೇಟೆಯಾಡಲೆಂದೇ
ಹೊಸದಾಗಿ ಬಂದಿರುವ ಲೋಕದ ಹೊಸ ವ್ಯಾಧಿ
ಸದಾ ಚಿಂತೆ ನರಳಿಸುತ ಜೀವ ಪಡೆಯುವ ಹಾದಿ

ಬೇಡದ ರಜೆಯಲ್ಲಿ ಕೇಳುತಿದೆ ಬರೀ ಕಳೆದುಕೊಂಡ ಸುದ್ದಿ 
ಬೇಕಾದವರ ಸಾವು ಭಯ ಹುಟ್ಟಿಸುತ್ತಿದೆ ಮನವ ಗುದ್ದಿ 
ಸರತಿಯ ಸಾಲಲ್ಲಿ ಇರಬಹುದೇ ನಾನು ನನ್ನವರ ಹೆಸರು 
ಹಾಗೆಂಬ ಯೋಚನೆಯೇ ತೋರುವುದೇ ಮನದ ಕೆಸರು

ಜೀವನವು ಲೊಳಲೊಟ್ಟೆ ದಾಸವಾಣಿ ಹೇಳುತಿದೆ
ಎಂತೆಲ್ಲ ಅಧ್ಯಾತ್ಮ ವಿಚಾರಗಳು ಮನದಲಿ ಬರುತಿದೆ
ಬಂಧು ಮಿತ್ರರ ನಡುವೆ ಎಂದಿದ್ದರೂ ನೀನು ಒಂಟಿ
ಯಾವಾಗ ಕರೆದರೂ ಬರಬೇಕು ತಕ್ಷಣ ಹೊಂಟಿ

ಚಂದಿರನ ಕಂಡಿವೆವು ಕಾಣುವೆವು ನಾಳೆ ಮಂಗಳನ
ಎಂದವರು ಹೆಣಗಾಡುತಿಹರೇ ಎದುರಿಸಲು ಕೊರೋನ
ಎಲ್ಲಿ ಹೋಯಿತು ಎಲ್ಲವನು ಗೆಲ್ಲುವೆನೆಂಬ ಸಾಮರ್ಥ್ಯ
ಇರುವ ಭೂಮಿಯಲೆ ತಪ್ಪುತಿದೆಯೇ ನಮ್ಮ ಅಧಿಪತ್ಯ

ಅಣುಬಾಂಬಿನಲ್ಲೇ ಜಗವ ಗೆಲುವೆ ಎನ್ನುವ ಸಖನೇ
ಅಣುವೊಂದರ ಮೂಲ ತಿಳಿಯದೆ ಒದ್ದಾಡುತ್ತಿಹನೇ
ಎಲ್ಲಿ ಹೋಯಿತು ನಮ್ಮ ದಿಟ್ಟತನ ದರ್ಪ ಅಹಂಕಾರ
ದಾರಿ ತಿಳಿಯದೆ ಮುದುರಿ ಕುಳಿತಿಹುದೇ ಅಲಂಕಾರ

ಎಲ್ಲಿ ಹೋಯಿತು ನಮ್ಮಪಾಂಡಿತ್ಯ ಜ್ಞಾನ ವಿಜ್ಞಾನ
ನರರ ಸಂಹಾರ ತೋರಿಸುತಿದೆ ನಮ್ಮಯ ಅಜ್ಞಾನ
ನಾನಿರುವೆ ನಾ ನಿಮ್ಮ ಬದುಕಿಸುವೆ ಎನ್ನುವಾ ಮದ್ದು
ಇಲ್ಲದೆ ಪ್ರಾಣ ಮಲಗಿದೆ ಐಸಿಯುನಲಿ ಹೊದಿಕೆ ಹೊದ್ದು

ನಮ್ಮೆಲ್ಲರ ದುಷ್ಟ ಅಹಂಕಾರ ತೋರಿಸುತಿದೆ ಕನ್ನಡಿ
ಅಣಕಿಸಿ ಕೇಳುವ ನಗು ಆಗುವುದೇ ಏಳಿಗೆಯ ಮುನ್ನುಡಿ
ಯುದ್ಧ ಬಿಡುವೆ ಹಠವನ್ನು ಬಿಡುವೆ ಶತ್ರುತ್ವ ನಾ ಬಿಡುವೆ
ಬಂದಿರುವ ವ್ಯಾಧಿ ಕಳೆಯಲು ಸರ್ವ ಆಸೆಯ ಬಿಡುವೆ

ಶರಣಾದೆ ಶಕ್ತಿಯೇ ಲೋಕದ ಪ್ರಾಣ ಹರಣವ ನಿಲಿಸು
ಕರುಣೆಯ ತೋರಿ ಲೋಕ ಬಂದುಬಾಂಧವರ ಉಳಿಸು
ಶಿರಬಾಗಿ ಹೇಳುವೆನು ಇನ್ಮುಂದೆ ನಾಶಮಾಡೆನು ಪ್ರಕೃತಿ
ಮಾತು ಕೊಡುವೆನು ಬದುಕಲಿ ನಿಲ್ಲಿಸುವೆ ಎಲ್ಲ ವಿಕೃತಿ


Comments

  1. ಮನದಲ್ಲಿಯ ಆಸೆ,ಮನದಲ್ಲಿಹ ದುಗುಡ, ಮನಸ್ಸಿನ ಬೇಗುದಿ, ಹೇಳಿಕೊಳ್ಳಲಾಗದ ಭಯ, ಎಲ್ಲರ ಮನಸ್ಸಿನ ಸ್ಥಿತಿ, ಎಲ್ಲರ ತಳಮಳ,ಸೊಗಸಾಗಿದೆ. ಕವನ ಬಹಳ ಚೆನ್ನಾಗಿ ಮೂಡಿ ಬಂದಿದೆ.

    ReplyDelete

  2. ಅಣುಬಾಂಬಿನಂತೆ ಬಂದ ಕೊರೋನ ವ್ಯಾಧಿಯ ಪದ್ಯ, ಚೆನ್ನಾಗಿ ಪ್ರಕಟಿಸಿದ್ಧಾರ

    ReplyDelete
  3. ಅಣುವೊಂದು ಜಗತ್ತನ್ನು ಕೈಗೊಂಬೆ ಮಾಡಿಕೊಂಡು ಆಡಿಸುವ ಬಗೆ, ನಮ್ಮಲಿನ ತೊಳಲಾಟ ಬಹಳ ಚೆನ್ನಾಗಿ ಕವನದಲ್ಲಿ ಮೂಡಿಬಂದಿದೆ, ಬದುಕೆಂದರೆ ಭಯನಾ

    ReplyDelete
  4. ವಾಸ್ತವತೆಯ ತಳಮಳದ ಈ ಕವಿತೆ ಚೆನ್ನಾಗಿ ಬಂದಿದೆ

    ReplyDelete
  5. ಇವತ್ತಿನ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಇದೆ ಈ ಕವನ

    ReplyDelete
  6. ಕರೋನಾ ಮಹಾಮಾರಿಯ ಮುಂದೆ ಮಂಡಿಯೂರಿ ಕುಳಿತು ಜೀವಕ್ಕಾಗಿ ಹೊಣೆಬೇಡುತ್ತಿರುವ ಈಗಿನ ನಮ್ಮ ಪರಿಸ್ಥಿತಿಯ ಮುಂದೆ, ಬೇಡಿದ್ದನ್ನು ಬೇಯ್ಸಿ ಮಾಡಿಹಾಕುವ ಧರ್ಮಪತ್ನಿ ಯಾಗಲೀ, ಕಛೇರಿಗೆ ಬರಬೇಡಿಯನ್ನುವ ಸ್ಥಿತಿಯಾಗಲೀ, ಆಧ್ಯಾತ್ಮ ಕಲಿಸುವ ದಾಸವಾಣಿಯಾಗಲೀ, ಬಾಹ್ಯಾಕಾಶ ದಲ್ಲಿ ಮಾಡಿದ ಸಾಧನೆಯಾಗಲೀ, ದೇಶದೇಶದ ನಡುವಿನ ಗಡಿ ಸಂಘರ್ಷವಾಗಲೀ, ಅಭ್ಯಾಸದಿಂದ ಪಡೆದ ಪಾಂಡಿತ್ಯವಾಗಲೀ ಪ್ರಯೋಜನಕ್ಕೆ ಬಾರದೇ ನಮ್ಮ ಸ್ವಯಂಕೃತಾಪರಾಧದಿಂದ ಒದಗಿದ ಈಗಿನ ಸ್ಥಿತಿಯು ಮರುಕಳಿಸದಂತೆ ನೋಡಿಕೊಳ್ಳುವ ಆಶ್ವಾಸನೆಯೊಂದಿಗೆ, ಕಾಣದಂತೆ ಕಾಡುವ ಆ ದೈತ್ಯ ಶಕ್ತಿಯನ್ನು ಬೇಡಿಕೊಳ್ಳುವ ತಮ್ಮ ಕವನ ಅತ್ಯದ್ಭುತ ಹಾಗೂ ಪ್ರಶಂಸನೀಯ.

    ReplyDelete
  7. ಅದ್ಭುತವಾಗಿ ಕವನ ಮೂಡಿ ಬಂಧಿದೆ.

    ReplyDelete

  8. ರಮೇಶ್ ನಾಡಿಗ್ ಹೊಸಬಾಳೆ.
    ಎಲ್ಲರಿಗೂ ಎಲ್ಲರ ಮೇಲೆ ಅನುಮಾನ ಹುಟ್ಟಿಸುವ, ನಿರ್ದಿಷ್ಟ ಲಕ್ಷಣಗಳಿಲ್ಲದ, ಎಲ್ಲ ಲಕ್ಷಣಗಳು ತನ್ನದೇ ಎನ್ನುವ, ಮಾರು ವೇಷದ ಖಾಯಿಲೆ ಬಗ್ಗೆ ಬಹಳ ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು..

    ReplyDelete
  9. ಕವನ ಓದಿ ಸಂತೋಷ ಪಡಲು ಸಹ ತಳಮಳ
    ನಿಜವಾಗಿ ಕವನ ಚೆನ್ನಾಗಿ ಮೂಡಿಬಂದಿದೆ
    ರಾಮಚಂದ್ರ ಅವರೇ

    ReplyDelete
  10. ಬಹಳ ದಕ್ಷತೆಯಿಂದ ಮನಸ್ಸಿನ ವಿಚಾರವನ್ನು ಪ್ರಕಟಿಸಿದ್ದಾರೆ ಮಿತ್ರ ರಾಮಚಂದ್ರ.
    ೯೮ ಪ್ರತಿಶತ ಮನುಷ್ಯರು ಗುಣವಾಗುತ್ತಿದ್ದಾರೆ.
    ಕಾಳಜಿ ವಹಿಸೋಣ. ಸಹನೆಯು ಮತ್ತೆ ಕರುಣೆಯೂ ಹಾಗೂ ಸಹಕಾರವನ್ನು ಪ್ರಕಟಿಸಿ ಬದುಕೋಣ. ನನ್ನ ಕೈಯಲ್ಲಿ ಇರುವುದೇ ಇಷ್ಟು.
    ಗುರುರಾಜ್

    ReplyDelete
  11. ರಾಜೇಶ್May 16, 2021 at 4:13 PM


    ಸಾರ, ವಾಸ್ತವ ಪರಿಸ್ತ್ಗಿತಿಯನ್ನು ಸ್ಪಷ್ಟವಾಗಿ ಕಾವ್ಯವಾಗಿ ಪ್ರಕಟಿಸಿದ್ದೀರಿ. ಮನಸ್ಸಿನ ತಳಮಳ ಎಲ್ಲರಿಗೂ ಆವರಿಸಿರುವುದು ಸತ್ಯದ ಸಂಗತಿ.

    ಬಹಳ ಚೆನ್ನಾಗಿ ಮೂಡಿ ಬಂದಿದೆ.

    ReplyDelete
  12. ಮದ್ದಿಲ್ಲಾದ manada ತಳಮಳದ ವ್ಯಾಧಿ ಸೊಗಸಾಗಿ ಕಾವ್ಯಶೈಲಿಯಲ್ಲಿ ಅದರ ನಾನಾ ರೂಪಗಳನ್ನೂ, ಅದರ ಕಾರಣವಾದವುಗಳನ್ನೂ ಸೂಕ್ಷ್ಮಆದರೆ ಸ್ಪಷ್ಟವಾಗಿ ಬಿಂಬಿಸಿದೀರ.

    ReplyDelete
  13. ನಾಲ್ಕು ಸಾಲುಗಳ, 9 ನುಡಿಗಳ ಪದ್ಯರೂಪದಲ್ಲಿ ಬಂದಿರುವ ತಳಮಳದ ವ್ಯಾಧಿಯು, ಹೊಸ ವ್ಯಾಧಿಯು ತಂದ ಬವಣೆಗಳು, ಭಯ,ಚಿಂತೆ, ಸಾವು ನೋವಿನ ಸುದ್ದಿಗಳು, ಅದರೊಂದಿಗೇ ಮಾನವನ ಜ್ಞಾನ- ವಿಜ್ಞಾನಗಳ ಅಹಂಕಾರವೆಂಬ ಭಾವಗಳಿಗೆ ವ್ಯಾಧಿಯ ನೆಪದಲ್ಲಿ ಹಿಡಿದ ಎಚ್ಚರಿಕೆಯ ಕನ್ನಡಿ, ಇರಬೇಕಾದ ಜೀವನ ಶೈಲಿ, ಉಪಸಂಹಾರದ ಶರಣಾಗತ ವೈಖರಿ ಒಂದಾದ ಮೇಲೊಂದು ಮಳೆಯಂತೆ ಮೂಡಿ ಬಂದಿದೆ. ಕಾವ್ಯದಲ್ಲೂ ಪ್ರತಿಭೆ ಮೆರೆದಿರುವ ಲೇಖಕರಿಗೆ ನಮೋ

    ReplyDelete
  14. ಅಣ್ಣ,
    ತುಂಬ ಪ್ರಸ್ತುತವಾಗಿದೆ ಈ ಕವನ..

    ಚಂದಿರನ ಕಂಡಿವೆವು ಕಾಣುವೆವು ನಾಳೆ ಮಂಗಳನ
    ಎಂದವರು ಹೆಣಗಾಡುತಿಹರೇ ಎದುರಿಸಲು ಕೊರೋನ ..

    ReplyDelete
  15. ಪ್ರಿಯ ರಾಮಚಂದ್ರ,
    ನಿಮ್ಮೀ ಕವನವನ್ನೋದಲು ಏಳು ತಿಂಗಳಾದಮೇಲೆ ಇಂದು ಸಾಧ್ಯವಾಯಿತು!
    ನೀವು ಕವಿತೆ/ಕವನ ಮಾಧ್ಯಮದಲ್ಲಿಯೂ ಕೃಷಿ ಮಾಡಿರುವಿರಿ ಎಂಬುದು ಈಗ ನೆನಪಿಗೆ ಬಂತು. ಇದು ನಿಮ್ಮ ಚೊಚ್ಚಲ ರಚನೆಯಂತೂ ಅಲ್ಲ! ನಲವತ್ತು ವರ್ಷಗಳ ಹಿಂದೆಯೇ (ನಾವು ಸಹೋದ್ಯೋಗಿಗಳಾದ ಹೊಸತರಲ್ಲಿ) ನೀವು ಒಮ್ಮೆ ನಿಮ್ಮ ಒಂದು ರಚನೆಯನ್ನು ನನ್ನ ಜೊತೆ ಹಂಚಿಕೊಂಡದ್ದುಂಟು!

    ಈ ಕವನದ ಕೆಲವು ಸಾಲುಗಳು ಸುಲಲಿತವಾಗಿ, ಕವಿತೆ/ಕವನಗಳ architecture ಗೆ ಹೊಂದಿಕೊಳ್ಳುತ್ತವೆ.

    ಈ ಸಾಂಕ್ರಾಮಿಕ ಪೀಡೆಯು ಮನುಕುಲದಲ್ಲಿ ಎಬ್ಬಿಸುತ್ತಿರುವ ಹಾವಳಿಯ ಬಗ್ಗೆ ನಿಮ್ಮ ಕಾಳಜಿ, ಕಳವಳಗಳನ್ನು ಈ ಕವನದಲ್ಲಿ ಸಮರ್ಥವಾಗಿ ವ್ಯಕ್ತಪಡಿಸಿದ್ದೀರಿ.

    ಸುಜ್ಞಾನ, ಪಾಂಡಿತ್ಯ ಇವುಗಳು ದುಷ್ಟ ಮನಸ್ಸುಗಳು ನಡೆಸುವ ಕಾರುಬಾರುಗಳನ್ನು ಎದುರಿಸುವಲ್ಲಿ ಮೊದಮೊದಲು ಸೋಲುತ್ತವೆ. ಆದರೆ ಕೊನೆಯಲ್ಲಿ ಜಯಶೀಲವಾಗುತ್ತವೆ.

    ಕರ್ತನು ತನ್ನ ಸೃಷ್ಠಿಯ ಸಂಪೂರ್ಣ ವಿನಾಶಕ್ಕೆ ಎಡೆಮಾಡಿಕೊಡನು.

    ನಿಮ್ಮವ
    ಸುಬ್ರಹ್ಮಣ್ಯಂ

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...