Skip to main content

ತಿರುನೋಟ

ಮುಗಿಯಿತ್ಹೇಗೆ ದಿನಗಳು ಕರಗಿ ಹೋಯಿತೇ
ಮುಪ್ಪು ದಿನಗಳಿಷ್ಟು ಬೇಗ ಬಂದು ಬಿಟ್ಟಿತೇ
ಕುಳಿತು ಯೋಚಿಸಿ ತಿಳಿದು ಕೊಂಡ ಸಂಗತಿ
ಕೆಳಗೆ ಬರೆದ ವಿಷಯಗಳೇ ‌‌‌‌‌‌‌‌‌‌‌‌‌‌‌‌‌‌ಹಲವರಾ ಸ್ಥಿತಿ 

ಮೊದಲೆ ಕಂಡ ತಂದೆತಾಯಿ ಮತ್ತೆ ಅಜ್ಜ ಅಜ್ಜಿ
ಬಂಧು ಬಳಗವೆಲ್ಲಾ ಹೋದರೇ ಕಾಲದಲ್ಲಿ ಜಜ್ಜಿ
ಬಳಗದಲ್ಲಿ ನನ್ನಲ್ಲಿದ್ದ  ಪ್ರೀತಿ ದ್ವೇಷ ಅಹಂಕಾರ
ಮುಂದುವರೆದರೇನು ಚೆನ್ನ ಲೋಕ ವ್ಯವಹಾರ

ಹಾದು ಬಂದ ದಾರಿಯತ್ತ ಯೋಚಿಸುವಾ ದೃಷ್ಟಿ
ಬಾಲ್ಯ ತರುಣಗಳ ದಾಟಲು ಆಗಿದ್ಹೇಗೆ  ಪುಷ್ಟಿ
ನೆಲದ ಮೇಲೆ ಪಾಟಿ ಹಿಡಿದು ತಿದ್ದಿ ಬರೆದ ಅಕ್ಷರ
ಆಟ ಊಟ ಓಟವೆಂಬ ಪಾಠಗಳಂದು ಅಕ್ಕರ

ಮೊದಲಬಾರಿ ಕೈಗೆ ಬಂದ ಪೆನ್ ಪೆನ್ಸಿಲ್ಲು ಜಾಮಿತಿ
ಕಲಿತ ವಿಜ್ಞಾನ ಸಮಾಜ ಗಣಿತಕೆ ಇಲ್ಲವಂತೆ ಮಿತಿ
ಕನ್ನಡತಾಯಿಯೊಂದಿಗೆ ಕಲಿತ ಹಿಂದಿ ಇಂಗ್ಲೀಷ್
ಆಳದಲ್ಲಿ ಕಲಿತುಕೊಂಡು ಎನಿಸಿಕೊಂಡೆ ಭೇಷ್

ಯೌವನದಲ್ಲಿ ತಿಳಿದು ಮೆರೆದ ಕಾಲೇಜು ವಿದ್ಯೆಯು
ಉದ್ಯೋಗಕ್ಕೆ ಆಸರೆಯಾಯಿತು ಕಲಿತ ಬುದ್ದಿಯು
ಹಾಗೊ ಹೀಗೋ ಯಶಸ್ವಿಯಾಗಿ ಬದುಕು ಕಂಡೆವು
ಬದುಕ ಕಟ್ಟಲೆಂದು ಸಂಗಾತಿ ಸಂತಾನ ಪಡೆದೆವು

ಮಸಿಯಲ್ಲಿ ಲೇಖನಿ ಅದ್ದಿ ಬರೆದು ಕಲಿತ ಪಾಠ
ದುಡಿಮೆ ಆದಾಯ ನಡುವೆ ಕಾಣದಿರದು ಕಾಟ
ಎಂದು ಅಂದ ಗುರುಗಳು ಎಂದು ಮರೆಯರು
ಅವರ ನೆನಪೇ ಸದಾಕಾಲ ಎಂದೂ ಮಾಸರು

ಇತಿಹಾಸದಲ್ಲಿ ಅಡಗಿಹೋದ ಗುರು ಹಿರಿಯರು
ಅದೇ ಹಾದಿಯಲ್ಲಿ ನಡೆಯುವದನ್ಯಾರೂ ಅರಿಯರು
ನಾನೆ ಎಲ್ಲಾ ನಂದೇ ಎಲ್ಲಾ ನನ್ನ ಬಿಟ್ಟು ಏನೂ ಇಲ್ಲ
ಈ ಬದುಕು ಸುಳ್ಳೆಯೆಲ್ಲ ಎಂಬುದನ್ನು ಅರಿಯಲಿಲ್ಲ

ವೃತ್ತಿಯಿಂದ ನಿವೃತ್ತಿಯತ್ತ ಹೊರಟ ಬಾಳ ಬಂಡಿ
ಆರೋಗ್ಯ ತಪ್ಪಿದಾಗ ಕಂಡೆ ಅನಾರೋಗ್ಯದ ಕಿಂಡಿ
ಬೆಲೆಯ ಕಳೆದು ಕೊಳ್ಳುತಿಹುದೇ  ಸಲಹೆ ಸಹಾಯ
ತೋರುತಿದೆ ನಿಧಾನವಾಗಿ ನನ್ನ ದಾರಿಯ ವಿದಾಯ

ಬಾಳಲ್ಲಿ ಕಂಡ ಪದಪುಂಜಗಳೆಷ್ಟು ನಮಗೆ ಗೊತ್ತು
ಕಿಚ್ಚು ಹುಚ್ಚು ಅಂಕು ಡೊಂಕುಗಳ ಗತ್ತು ಗಮ್ಮತ್ತು
ಸವಿನೆನಪು ಸಂಗಾತಿ ಸಂತತಿ ಗಳೆಂಬುದೆಲ್ಲ ಸುಳ್ಳು
ವಿಧಿಯ ಮುಂದೆ ಸುಖದ ಬಾಳೆಲ್ಲ ಪೂರ್ತಿ ಜೊಳ್ಳು

ಕಳೆವ ಮುನ್ನ ಇರಬೇಕು ಸ್ವಲ್ಪವಾದರೂ ಸತ್ಸಂಗ
ಜೀವ ಸಾರ್ಥತೆಗಾಗಿ ಹುಡುಕು ಅಧ್ಯಾತ್ಮ ಪ್ರಸಂಗ 
ಈಗಾಗಲಿಲ್ಲ ನಾಳೆ ದಿಟ ಎಂದು ನೀ ಅಂದುಕೊಂಡಿ 
ಕೊನೆಗೂ ಬಂದು ಬಿಟ್ಟಿತೇ ಬದುಕ ಕಡೆಯ ಕೊಂಡಿ 

ಮುಗಿಯಿತ್ಹೇಗೆ ದಿನಗಳು ಕರಗಿ ಹೋಯಿತೇ
ಮುಪ್ಪು ದಿನಗಳಿಷ್ಟು ಬೇಗ ಬಂದು ಬಿಟ್ಟಿತೇ

Comments

  1. ಯಾಕೋ ಗೊತ್ತಿಲ್ಲ ಇವತ್ತು ಬೆಳಿಗ್ಗೆ ಕಾಲ್ನಡಿಗೆ ಮಾಡುತ್ತಿರುವಾಗ ಸುಮಾರು ಮುಕ್ಕಾಲು ಗಂಟೆ
    ನನ್ನ ಜೀವನದ flash back ಮನಸ್ಸಿನಲ್ಲಿ ಓಡ್ತಾ ಇತ್ತು
    ನಮ್ಮ ಊರಿನ ಶಾಲೆಯ ದಿನಗಳಿಂದ, ಬೆಂಗಳೂರಿನ ಜೀವನದ ವರೆಗೆ ಎಲ್ಲಾ ಮೆಲುಕು ಹಾಕಿದ್ದೆ, ಎಲ್ಲರ ಜೀವನದಲ್ಲಿ ಸುಮಾರು ಶೇಕಡ 90ರಷ್ಟು ನೀವು ಬರೆದಿರುವ ಕವನದ ಅನುಭವವೇ ಆಗಿದೆ. ಕಾಕತಾಳೀಯ ಎನ್ನುವಂತೆ ನೀವೂ ಇಂದೇ ಕಳುಹಿಸಿದ್ದೀರಿ. ಕವನ ಚೆನ್ನಾಗಿದೆ.
    ಸಮಯ ಕಳೆಯುತಿದೆ
    ದಿನಗಳು ಕರಗುತಿವೆ, ಮುಪ್ಪು ದಿನವೂ ಅಷ್ಟಷ್ಟೂ
    ಅವರಿಸುತ್ತಿದೆ. ನಿತ್ಯ ಸತ್ಯ

    ಧನ್ಯವಾದಗಳು

    ReplyDelete
  2. ಕವನ ತುಂಬಾ ಅರ್ಥವತ್ತಾಗಿದೆ. ಬಾಲ್ಯದಿಂದ ಮುಪ್ಪಿನವರೆಗಿನ ಹಾಗು ಹೋಗುಗಳನ್ನ ಪ್ರಾಸ ಬದ್ದವಾಗಿ ಮಂಡಿಸಿದ್ದೀರಿ. ಧನ್ಯವಾದಗಳು.

    ReplyDelete

  3. ಅಣ್ಣ ನಮಸ್ತೆ ..
    ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮ, ಹೃದಯ ಸ್ಪರ್ಶಿ, ಸತ್ಯಗವಿತೆ. ಬಹುಷಃ ೫೦+ ಆದವರ ಜೀವನ ಚಿತ್ರ ಎಂಬುವಂತಿದೆ.

    ReplyDelete
  4. ಧನ್ಯವಾದಗಳು. ಕವನ ಬಹಳ ಸೊಗಸಾಗಿದೆ ಹಾಗು ಅರ್ಥಪೂರ್ಣವಾಗಿದೆ. ಅರ್ಥ ಮಾಡಿಕೊಂಡರೆ ನಿಜಕ್ಕೂ ಜೀವನ ಇಷ್ಟೇ ಎಂದು ಬಹಳ ಸೊಗಸಾಗಿದೆ ಎಂದು ವರ್ಣನೆಯಾಗಿದೆ 🙏🏻🙏🏻

    ReplyDelete
  5. ಲೇಖನ ಚೆನ್ನಾಗಿದೆ.
    ನಮ್ಮ ಮನಸ್ಸಿನಲ್ಲಿ ಇದ್ದುದನ್ನೇ ನೀವೂ ಸಹ ಬರೆದಿದ್ದೀರಿ. ಬಹುಶಃ ನಮಗೆ ನಿಮ್ಮಷ್ಠು ಉತ್ತಮವಾಗಿ ಬರೆಯಲು ಅನುಭವ ಇಲ್ಲ.
    ವಂದನೆಗಳೊಂದಿಗೆ
    ಗೋಪೀನಾಧ್

    ReplyDelete
  6. ಕಾಲಪ್ರವಾಹದಲ್ಲಿ ಸದ್ದಿಲ್ಲದೇ ಯಾಂತ್ರಿಕವಾಗಿ ನಡೆಯುವ ಜೀವನದ ವಿವಿಧ ಮಜಲುಗಳನ್ನು ನೆನಪುಮಾಡಿದ್ದಕ್ಕೆ ಧನ್ಯವಾದಗಳು.

    ReplyDelete
  7. ಬಾಳ ಪಯಣವೆಂಬುದೊಂದು ಆಟವಲ್ಲವೆ
    ಸೋಲು ಗೆಲವುಗಳುವುಂಟೆಬುದು ವೆದ್ಯವಲ್ಲವೆ
    ನಿಮ್ಮನುಭವ ಮತ್ತು ಅಲೋಚಿಸುವ ರೀತಿ
    ಕೊಟ್ಟಿತೆಮಗೆ ಸುಂದರ ʼತಿರುನೋಟʼ ಕೃತಿ
    - ನಾಗೇಶ್‌ ರಾವ್

    ReplyDelete
  8. ಜೀವನದಿ ಈವರೆವಿಗೂ ತುಳಿದ ಬಂದ ಹೆಜ್ಜೆಗಳ ಹಿನ್ನೋಟದಲ್ಲಿ, ಪ್ರತಿಯೊಂದು ಹಂತದಲ್ಲಿ ಕಾಣಸಿಗಬಹುದಾದ ಘಟನೆಗಳು ಹಾಗೂ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲಿ ಕಾಲಾನುಸಾರ ವಿಭಿನ್ನವಾಗಿರುವುದು ಸಹಜ.
    ನಮ್ಮ ಬಾಲ್ಯ ತದನಂತರದ ಜೀವನದ ಚಿತ್ರಣವನ್ನು ಹಂತ ಹಂತವಾಗಿ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಸಿ, ಕೊನೆಗೆ ಜೀವ(ನ)ದ ಸಾರ್ಥಕತೆಗೆ ಆಧ್ಯಾತ್ಮ, ಸತ್ಸಂಗದ ಅತ್ಯಾವಶ್ಯಕ ಎಂದು ಜ್ಞಾಪಿಸಿದ ಕವನಕ್ಕೆ ವಂದನೆಗಳು.

    ReplyDelete
  9. ಸುಂದರವಾದ, ಮನಮುಟ್ಟುವ ಕವನ. ಬಾಲ್ಯದಿಂದ ಹಿಡಿದು ಮುಪ್ಪಿನ ವರೆಗೂ ಇರುವ ಜೀವನಚಕ್ರ ಬಹಳ ಸೊಗಸಾಗಿದೆ. ಜೀವನದ ತಿರುಳನ್ನು ಮನಮುಟ್ಟುವಂತೆ ಬರೆದಿರುವ ಶೈಲಿ, ಆಧ್ಯಾತ್ಮದ ಅವಶ್ಯಕತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಬರೆದಿರುವ ರೀತಿ ಚೆನ್ನಾಗಿದೆ.

    ReplyDelete
  10. Huttidagi ninda illayavaregu Namma payana nadedu banda hadi chennagi niroopisiddiri. Namage tiliyada Hage Namma jeevana sagi konegondu Dina nammanu kade nildanakke karedu kondu hogi bidutte. Navu Namma jeevitavadiyalli swalpa vadru paropakara maduva manassu namage devaru karunisidre nave danyaru. Namminda yarigadru novu anyaya agidre adu kandita tilidu madida aparada vagiralla. Namma agnana namminda eneno madisira beku. Innu munde adru namage sariyada buddikottu Namma ulidiruva samaya mattobgarige sahaya maduvante nnammannu nadesu endu bagavantanalli prarthisona.

    ReplyDelete
  11. ಜೀವನಸಾರವನ್ನೊಳಗೊಂಡ ,ಪದ್ಯರೂಪದಲ್ಲಿರುವ ಸುಂದರವಾದ ತಿರುನೋಟ ಕೃತಿ ಅತ್ಯಂತ ಸೊಗಸಾಗಿದೆ. ಧನ್ಯವಾದಗಳು🙏😊

    ReplyDelete
  12. ಇಳಿವಯಸ್ಸಿನಲ್ಲಿ ಈ ರೀತಿ ಒಮ್ಮೆ ನಿಂತು, ಹಿಂತಿರುಗಿ ನಡೆದುಬಂದ ದಾರಿಯನ್ನು ಒಂದರೆಕ್ಷಣ ಅವಲೋಕಿಸುವುದು ಮನುಷ್ಯ ಸಹಜವಾದ ಕ್ರಿಯೆ.

    ಕಳೆದುಹೋದ ಕಾಲ, ಮುಗಿದ ಸಂಬಂಧಗಳು ಇವುಗಳನ್ನು ವಿಷಾದ ಛಾಯೆಯ ನೆರಳಿನಲ್ಲಿಯೇ ನೆನಪಿಸಿಕೊಳ್ಳುವವುದು ಸಾಮಾನ್ಯ. ನಿಮ್ಮೀ ಕವನರೂಪದ ಬ್ಲಾಗ್ ಅನ್ನು ಓದುತ್ತಿದ್ದಂತೆ ಅದೇ ಜಾಡಿನಲ್ಲಿ ಇದ್ದೀರಿ ಅನಿಸಿತು.

    ಇಂಥ ಸಂದರ್ಭಗಳಲ್ಲಿ ವಿಷಾದ ಭಾವಗಳು ಸ್ಪುರಿಸುವುದನ್ನು ನಿವಾರಿಸಿಕೊಳ್ಳಲು ಆಧ್ಯಾತ್ಮ / ಪಾರಮಾರ್ಥ ಒಂದೇ ದಾರಿ ಎಂದು ನಂಬಿರುವವನು ನಾನು.

    ಕವನದ ಕೊನೆಯ ಭಾಗಕ್ಕೆ ಬಂದಾಗ ನಿಮ್ಮ ಗ್ರಹಿಕೆಯೂ ಅದೇ ಎಂದು ತಿಳಿಯಿತು.

    ಕಾಲಗರ್ಭದಲ್ಲಿ ಮರೆಯಾಗಿರುವ ನಮ್ಮ ಜೀವಿತದ ವಿವರಗಳು ನಮ್ಮನ್ನು ವಿಷಾದಕ್ಕೆ ಈಡುಮಾಡದಿರಲಿ, ಶಾಂತಿಯುಕ್ತ, ಸಾರ್ಥಕತೆಯ ಮನೋನೆಲೆ ನಮ್ಮದಾಗಿ ಇರಲಿ.....

    ಶಾಂತಿ..... ಶಾಂತಿ..... ಶಾಂತಿಃ

    ReplyDelete

Post a Comment

Popular posts from this blog

ಆರೋಗ್ಯ ಕವಚ

ಮನುಷ್ಯ ತಾನು ಸುಖವಾಗಿರಲು ದುಡಿಯುತ್ತಾನೆ. ಹಣ ಕೂಡಿಡುತ್ತಾನೆ. ಆಸ್ತಿ ಗಳಿಸುತ್ತಾನೆ. ತಾನು ಮತ್ತು ತನ್ನ ಪ್ರೀತಿಯ ಕುಟುಂಬವನ್ನು ಸುಖವಾಗಿಡುವ ಕನಸುಗಳು ಸದಾ ನಡೆಯುತ್ತಲೇ ಇರುತ್ತವೆ. ಈ ಕನಸಿನ ಮಾರ್ಗದಲ್ಲಿ ಆಕಸ್ಮಿಕವಾಗಿ ಅವನ ದೇಹಕ್ಕೆ ದೊಡ್ಡ ಅನಾರೋಗ್ಯವೇನಾದರೂ ಎದುರಾದರೆ ಬಹಳ ಕಷ್ಟವಾಗುತ್ತದೆ. ಸುಧಾರಿಸಿಕೊಳ್ಳಲು ಸಾಧ್ಯವಾಗದಂತೆ ಗಳಿಸಿದ್ದೆಲ್ಲವೂ ನೀರಿನಂತೆ ಕರಗಿ ಹೋಗುತ್ತದೆ. ಇದರಿಂದ ಜೀವನದಲ್ಲಿ ಹಾಕಿಕೊಂಡ ಗುರಿಯನ್ನು ಸಾಧಿಸಲಾಗುವುದಿಲ್ಲ. ಇಂತಹ ಪರಿಸ್ಥಿತಿಯನ್ನು ಆರ್ಥಿಕವಾಗಿ ಸಮರ್ಥವಾಗಿ ಎದುರಿಸಲು ಬೇಕಾಗಿರುವುದು ಆರೋಗ್ಯ ವಿಮೆ. ಇದನ್ನು ಹೆಲ್ತ್ ಇನ್ಶುರೆನ್ಸ್ ( Heath Insurance) ಅಥವಾ ಮೆಡಿಕಲ್ ಇನ್ಸೂರೆನ್ಸ್ (Medical Insurance) ಎಂದೂ ಹೇಳಲಾಗುತ್ತದೆ. ಇದು ಆರೋಗ್ಯ ರಕ್ಷಣೆಗಾಗಿ ಎಂದೇ ಪಡೆದರೂ ಮುಂದಿನ ನಮ್ಮ ಜೀವನಕ್ಕಾಗಿ, ಪರೋಕ್ಷವಾಗಿ ಕೂಡಿಟ್ಟಿರುವ ಆಸ್ತಿಯನ್ನು ರಕ್ಷಣೆ ಮಾಡುತ್ತದೆ. ಈ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳ ಅನಿವಾರ್ಯ. ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಿ ಹೇಳುವ ಪ್ರಯತ್ನವೇ ಈ ಲೇಖನ. ಆರೋಗ್ಯ ವಿಮೆ ಎಂದರೇನು? ನಾವು ಸದಾ ಆರೋಗ್ಯದಿಂದ ಇರಬೇಕೆಂದು ಬಯಸುವೆವಾದರೂ "ಮನುಷ್ಯ ಎಂದಮೇಲೆ ಏನಾದರೂ ಕಾಯಿಲೆ ಇದ್ದೇ ಇರುತ್ತದೆ" ಎಂಬಂತೆ ಹಲವು ಸಾರಿ ತಲೆನೋವು, ಜ್ವರ, ನೆಗಡಿ ಮೈ ಕೈ ನೋವು ಎಂದು ನರಳುತ್ತೇವೆ. ಚಿಕೂನ್ ಗುನ್ಯಾ, ಡೆಂಗ್ಯೂ, ಕೊರೋನಾ ಇತ್ಯಾದಿ ಕಾಯಿಲೆಗಳ...

ಮಿತ್ರನೊಬ್ಬನ ಆತ್ಮಾವಲೋಕನ

ಮಿತ್ರ ಶಂಕರ ಒಮ್ಮೆ ಹೇಳಿದ್ದ, ಕೇಳಿ ಹಳತಾದರೂ ಓದುಗರಿಗೆ ಹೊಸತಾಗಿ, ಆತ್ಮೊನ್ನತಿಗೆ ಸಹಾಯ ವೆನಿಸುವ, ಆತ್ಮಾವಲೋಕನದ ಸಾಲುಗಳು ನಿಜವಾಗಿಯೂ ಕುತೂಹಲಕಾರಿಯಾಗಿದೆ. ಅದನ್ನು ಅವನಿಂದಲೇ ಕೇಳಿ: ಕಛೇರಿಯಲ್ಲಿ ವಿಶೇಷವಾದ ಕೆಲಸವೊಂದನ್ನು ನಿರೀಕ್ಷೆಗಿಂತ ಮೊದಲೇ ಯಶಸ್ವಿಯಾಗಿ ಪೂರೈಸಿದ್ದರಿಂದ ತುಂಬಾ ಸಂತೋಷವಾಗಿತ್ತು. ಆದ್ದರಿಂದ ಮನೆಗೆ ಸ್ವಲ್ಪ ಬೇಗನೆ ಬಂದಿದ್ದೆ. ಪ್ರತಿದಿನ ಯಾಕೆ ಲೇಟು ಎಂಬ ಮುಖವನ್ನು ಮಾಡುತ್ತಿದ್ದ ಮಡದಿ ಪ್ರೇಮ ಕೊಟ್ಟ ಒಂದು ಬಿಸಿಯಾದ ಸ್ಟ್ರಾಂಗ್ ಕಾಫಿ ಕುಡಿದು ನಿಧಾನವಾಗಿ ಸೋಫಾದ ಮೇಲೆ ಕಾಲು ಚಾಚುತ್ತಿದ್ದಂತೆಯೇ ನಿದ್ರಾ ದೇವಿಗೆ ವಶನಾಗಿ ಕೆಲವು ಸಮಯವಾಗಿರಬಹುದು. ಕೆಲವೇ ನಿಮಿಷಗಳಲ್ಲಿ ನಿದ್ದೆ ಬಂದಿತ್ತಾದರೂ ತಾಳಲಾರೆನೆಂಬ ಎದೆನೋವು, ಇದ್ದಕ್ಕಿದ್ದಂತೆ ಉಸಿರುಗಟ್ಟಿಸುವಂತಹ ಅನುಭವ. ಏನು ಗೊತ್ತಾಗುತ್ತಿಲ್ಲ. ಕೆಲವೇ ನಿಮಿಷಗಳಲ್ಲಿ ಗಾಬರಿಯಿಂದ ಪ್ರೇಮಾ, ಮಗಳು - ಅಳಿಯನನ್ನು ಕರೆಯುತ್ತಿದ್ದಾಳೆ. ಕಾಲು ಕೈ ಎದೆ ಭಾಗಗಳನ್ನು ಹಿತವಾಗಿ ಯಾರೋ ತಡವುತ್ತಿದ್ದಾರೇನೋ. ಹಾಗೆಯೇ ನನ್ನನ್ನು ಎತ್ತಿದಂತಹ ಅನುಭವ. ಎಲ್ಲಿಗೋ ಕರೆದುಕೊಂಡು ಹೋಗುತ್ತಿರಬಹುದು. ಯಾವುದೋ ವಾಹನದ ಸದ್ದು. ನನ್ನ ಕೈಗಳನ್ನು ಯಾರೋ ಎತ್ತುತ್ತಿದ್ದಾರೆ, ಏನಾಗುತ್ತಿದೆ? ಹೊಸತರದ ಹಾಸಿಗೆ. ಮೂಗು ಬಾಯಿಗೆ ಏನೋ ತಡೆ. ಸಣ್ಣದಾಗಿ ಬಿಟ್ಟು ಬಿಟ್ಟು ಕೇಳುವ ಏಕತಾನದ ಸದ್ದು. ಹಠಾತ್ತಾಗಿ ನಿಶ್ಯಬ್ದ. ನೀರವ ವಾತಾವರಣ. ಈಗ ನನಗೆ ನೋವು ಇದೆಯೇ. ಟಿವಿಯಲ್ಲಿ ಯಾವುದೋ ಕ...

ಬಾಳ ರೂಪಿಸಿದ ವಿಮೆ

ನಾವು ಸಮಾಜದಲ್ಲಿ ನಮಗಾಗಿ ನಾವು ಅನೇಕ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಅದನ್ನು ಒದಗಿಸಲು ಅದರದೇ ಆದ ಸಂಸ್ಥೆ ಹಾಗೂ ಸೇವಾ ಸಿಬ್ಬಂದಿಗಳಿದ್ದಾರೆ. ಇವು ನಮ್ಮ ಬದುಕು ಸುಗಮವಾಗಲು ಸಹಾಯಕವಾಗಿ ವೆ . ಇವಲ್ಲದೆ  ಜೀವನದಲ್ಲಿ ನಮ್ಮ ಉನ್ನತಿಗೆ ಬಂಧುಮಿತ್ರರ ಪಾತ್ರ ತೀರಾ ಸಾಮಾನ್ಯ. ಆದರೆ ಸಂಸ್ಥೆಯೊಂದು ಕೊಡುವ ಸೇವೆಯೇ ಒಬ್ಬರ ಬದುಕನ್ನು ರೂಪಿಸಿಕೊಳ್ಳಲು ಅವಕಾಶವಾದ  ಘಟನೆಯ ಸ್ಮರಣೆಯೇ ಈ ಕಥೆಯ ಜೀವಾಳ. ಈ ಬೆಳಿಗ್ಗೆ ಬೆಂಗಳೂರಿನಿಂದ ಲಂಡನ್ ವರೆಗಿನ ಆಕಾಶ ಪಯಣ. ಇದಕ್ಕಾಗಿ ನಿನ್ನೆಯಿಂದಲೇ ನಿದ್ದೆ ಇಲ್ಲ. ರಾತ್ರಿ ಪೂರ್ತಿ ವಿಮಾನ ನಿಲ್ದಾಣದಲ್ಲಿ ಸಮಯ ಕಳೆದೆವು. ಲಂಡನ್ನಿನ ಸಮಯದಂತೆ ಮಧ್ಯಾಹ್ನವೇ ಬಂದೆವು. ಅಮೇರಿಕಾಕ್ಕೆ ಹೋಗುವ ವಿಮಾನ ಸಂಜೆ ಐದು ಗಂಟೆಗೆ. ಆದ್ದರಿಂದ ಕಾಯಲೇಬೇಕು. ವಿಮಾನ ನಿಲ್ದಾಣದಲ್ಲಿ ಆಯಾಸದಿಂದ ನಿದ್ದೆ ಬರುತ್ತಿದ್ದರೂ ಎಚ್ಚರವಾಗದಷ್ಟು ನಿದ್ದೆ ಬಂದು ಮುಂದಿನ ವಿಮಾನ ತಪ್ಪಿ ಹೋದರೆ ಎಂಬ ಭಯದಿಂದ ಕಣ್ಣು ಮುಚ್ಚಲಿಲ್ಲ. ಈಗ ಅಮೇರಿಕಾದ ವಾಶಿಂಗ್ಟನ್ಗೆ ಹೋಗುವ ವಿಮಾನದಲ್ಲಿ ಕುಳಿತಿದ್ದೇನೆ. ಪಕ್ಕದಲ್ಲಿ ಕುಳಿತ ನಮ್ಮವರಿಗೆ ಗಾಢ ನಿದ್ರೆ. ವಿಮಾನ ಪ್ರಯಾಣವೇನೋ ಹೆಮ್ಮೆಯ ವಿಷಯವೇ. ಆದರೆ ಇದೇ ಮೊದಲ ಪ್ರಯಾಣವಾದ್ದರಿಂದ ಏನೋ ಆತಂಕ, ಸಂತೋಷ, ದುಗುಡ ಜೊತೆಗೆ ಸಡಗರ. ಸುತ್ತ ನೋಡುತ್ತಾ ನನ್ನ ಬಗ್ಗೆ ನಾನು ಯೋಚಿಸುತ್ತಿದ್ದೇನೆ. ನಾನು ಎಲ್ಲಿದ್ದೇನೆ. ಎಲ್ಲಿಗೆ ಬಂದೆ. ಇರುವನೊಬ್ಬ ಮಗ ಆನಂದನೇ ನಮಗೆ ಸರ್ವಸ್ವ. ಆದ್ದ...