ಮುಗಿಯಿತ್ಹೇಗೆ ದಿನಗಳು ಕರಗಿ ಹೋಯಿತೇ
ಮುಪ್ಪು ದಿನಗಳಿಷ್ಟು ಬೇಗ ಬಂದು ಬಿಟ್ಟಿತೇ
ಕುಳಿತು ಯೋಚಿಸಿ ತಿಳಿದು ಕೊಂಡ ಸಂಗತಿ
ಕೆಳಗೆ ಬರೆದ ವಿಷಯಗಳೇ ಹಲವರಾ ಸ್ಥಿತಿ
ಮೊದಲೆ ಕಂಡ ತಂದೆತಾಯಿ ಮತ್ತೆ ಅಜ್ಜ ಅಜ್ಜಿ
ಬಂಧು ಬಳಗವೆಲ್ಲಾ ಹೋದರೇ ಕಾಲದಲ್ಲಿ ಜಜ್ಜಿ
ಬಳಗದಲ್ಲಿ ನನ್ನಲ್ಲಿದ್ದ ಪ್ರೀತಿ ದ್ವೇಷ ಅಹಂಕಾರ
ಮುಂದುವರೆದರೇನು ಚೆನ್ನ ಲೋಕ ವ್ಯವಹಾರ
ಹಾದು ಬಂದ ದಾರಿಯತ್ತ ಯೋಚಿಸುವಾ ದೃಷ್ಟಿ
ಬಾಲ್ಯ ತರುಣಗಳ ದಾಟಲು ಆಗಿದ್ಹೇಗೆ ಪುಷ್ಟಿ
ನೆಲದ ಮೇಲೆ ಪಾಟಿ ಹಿಡಿದು ತಿದ್ದಿ ಬರೆದ ಅಕ್ಷರ
ಆಟ ಊಟ ಓಟವೆಂಬ ಪಾಠಗಳಂದು ಅಕ್ಕರ
ಮೊದಲಬಾರಿ ಕೈಗೆ ಬಂದ ಪೆನ್ ಪೆನ್ಸಿಲ್ಲು ಜಾಮಿತಿ
ಕಲಿತ ವಿಜ್ಞಾನ ಸಮಾಜ ಗಣಿತಕೆ ಇಲ್ಲವಂತೆ ಮಿತಿ
ಕನ್ನಡತಾಯಿಯೊಂದಿಗೆ ಕಲಿತ ಹಿಂದಿ ಇಂಗ್ಲೀಷ್
ಆಳದಲ್ಲಿ ಕಲಿತುಕೊಂಡು ಎನಿಸಿಕೊಂಡೆ ಭೇಷ್
ಯೌವನದಲ್ಲಿ ತಿಳಿದು ಮೆರೆದ ಕಾಲೇಜು ವಿದ್ಯೆಯು
ಉದ್ಯೋಗಕ್ಕೆ ಆಸರೆಯಾಯಿತು ಕಲಿತ ಬುದ್ದಿಯು
ಹಾಗೊ ಹೀಗೋ ಯಶಸ್ವಿಯಾಗಿ ಬದುಕು ಕಂಡೆವು
ಬದುಕ ಕಟ್ಟಲೆಂದು ಸಂಗಾತಿ ಸಂತಾನ ಪಡೆದೆವು
ಮಸಿಯಲ್ಲಿ ಲೇಖನಿ ಅದ್ದಿ ಬರೆದು ಕಲಿತ ಪಾಠ
ದುಡಿಮೆ ಆದಾಯ ನಡುವೆ ಕಾಣದಿರದು ಕಾಟ
ಎಂದು ಅಂದ ಗುರುಗಳು ಎಂದು ಮರೆಯರು
ಅವರ ನೆನಪೇ ಸದಾಕಾಲ ಎಂದೂ ಮಾಸರು
ಇತಿಹಾಸದಲ್ಲಿ ಅಡಗಿಹೋದ ಗುರು ಹಿರಿಯರು
ಅದೇ ಹಾದಿಯಲ್ಲಿ ನಡೆಯುವದನ್ಯಾರೂ ಅರಿಯರು
ನಾನೆ ಎಲ್ಲಾ ನಂದೇ ಎಲ್ಲಾ ನನ್ನ ಬಿಟ್ಟು ಏನೂ ಇಲ್ಲ
ಈ ಬದುಕು ಸುಳ್ಳೆಯೆಲ್ಲ ಎಂಬುದನ್ನು ಅರಿಯಲಿಲ್ಲ
ವೃತ್ತಿಯಿಂದ ನಿವೃತ್ತಿಯತ್ತ ಹೊರಟ ಬಾಳ ಬಂಡಿ
ಆರೋಗ್ಯ ತಪ್ಪಿದಾಗ ಕಂಡೆ ಅನಾರೋಗ್ಯದ ಕಿಂಡಿ
ಬೆಲೆಯ ಕಳೆದು ಕೊಳ್ಳುತಿಹುದೇ ಸಲಹೆ ಸಹಾಯ
ತೋರುತಿದೆ ನಿಧಾನವಾಗಿ ನನ್ನ ದಾರಿಯ ವಿದಾಯ
ಬಾಳಲ್ಲಿ ಕಂಡ ಪದಪುಂಜಗಳೆಷ್ಟು ನಮಗೆ ಗೊತ್ತು
ಕಿಚ್ಚು ಹುಚ್ಚು ಅಂಕು ಡೊಂಕುಗಳ ಗತ್ತು ಗಮ್ಮತ್ತು
ಸವಿನೆನಪು ಸಂಗಾತಿ ಸಂತತಿ ಗಳೆಂಬುದೆಲ್ಲ ಸುಳ್ಳು
ವಿಧಿಯ ಮುಂದೆ ಸುಖದ ಬಾಳೆಲ್ಲ ಪೂರ್ತಿ ಜೊಳ್ಳು
ಕಳೆವ ಮುನ್ನ ಇರಬೇಕು ಸ್ವಲ್ಪವಾದರೂ ಸತ್ಸಂಗ
ಜೀವ ಸಾರ್ಥತೆಗಾಗಿ ಹುಡುಕು ಅಧ್ಯಾತ್ಮ ಪ್ರಸಂಗ
ಈಗಾಗಲಿಲ್ಲ ನಾಳೆ ದಿಟ ಎಂದು ನೀ ಅಂದುಕೊಂಡಿ
ಕೊನೆಗೂ ಬಂದು ಬಿಟ್ಟಿತೇ ಬದುಕ ಕಡೆಯ ಕೊಂಡಿ
ಮುಗಿಯಿತ್ಹೇಗೆ ದಿನಗಳು ಕರಗಿ ಹೋಯಿತೇ
ಮುಪ್ಪು ದಿನಗಳಿಷ್ಟು ಬೇಗ ಬಂದು ಬಿಟ್ಟಿತೇ
ಯಾಕೋ ಗೊತ್ತಿಲ್ಲ ಇವತ್ತು ಬೆಳಿಗ್ಗೆ ಕಾಲ್ನಡಿಗೆ ಮಾಡುತ್ತಿರುವಾಗ ಸುಮಾರು ಮುಕ್ಕಾಲು ಗಂಟೆ
ReplyDeleteನನ್ನ ಜೀವನದ flash back ಮನಸ್ಸಿನಲ್ಲಿ ಓಡ್ತಾ ಇತ್ತು
ನಮ್ಮ ಊರಿನ ಶಾಲೆಯ ದಿನಗಳಿಂದ, ಬೆಂಗಳೂರಿನ ಜೀವನದ ವರೆಗೆ ಎಲ್ಲಾ ಮೆಲುಕು ಹಾಕಿದ್ದೆ, ಎಲ್ಲರ ಜೀವನದಲ್ಲಿ ಸುಮಾರು ಶೇಕಡ 90ರಷ್ಟು ನೀವು ಬರೆದಿರುವ ಕವನದ ಅನುಭವವೇ ಆಗಿದೆ. ಕಾಕತಾಳೀಯ ಎನ್ನುವಂತೆ ನೀವೂ ಇಂದೇ ಕಳುಹಿಸಿದ್ದೀರಿ. ಕವನ ಚೆನ್ನಾಗಿದೆ.
ಸಮಯ ಕಳೆಯುತಿದೆ
ದಿನಗಳು ಕರಗುತಿವೆ, ಮುಪ್ಪು ದಿನವೂ ಅಷ್ಟಷ್ಟೂ
ಅವರಿಸುತ್ತಿದೆ. ನಿತ್ಯ ಸತ್ಯ
ಧನ್ಯವಾದಗಳು
ಕವನ ತುಂಬಾ ಅರ್ಥವತ್ತಾಗಿದೆ. ಬಾಲ್ಯದಿಂದ ಮುಪ್ಪಿನವರೆಗಿನ ಹಾಗು ಹೋಗುಗಳನ್ನ ಪ್ರಾಸ ಬದ್ದವಾಗಿ ಮಂಡಿಸಿದ್ದೀರಿ. ಧನ್ಯವಾದಗಳು.
ReplyDelete
ReplyDeleteಅಣ್ಣ ನಮಸ್ತೆ ..
ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮ, ಹೃದಯ ಸ್ಪರ್ಶಿ, ಸತ್ಯಗವಿತೆ. ಬಹುಷಃ ೫೦+ ಆದವರ ಜೀವನ ಚಿತ್ರ ಎಂಬುವಂತಿದೆ.
ಧನ್ಯವಾದಗಳು. ಕವನ ಬಹಳ ಸೊಗಸಾಗಿದೆ ಹಾಗು ಅರ್ಥಪೂರ್ಣವಾಗಿದೆ. ಅರ್ಥ ಮಾಡಿಕೊಂಡರೆ ನಿಜಕ್ಕೂ ಜೀವನ ಇಷ್ಟೇ ಎಂದು ಬಹಳ ಸೊಗಸಾಗಿದೆ ಎಂದು ವರ್ಣನೆಯಾಗಿದೆ 🙏🏻🙏🏻
ReplyDeleteಲೇಖನ ಚೆನ್ನಾಗಿದೆ.
ReplyDeleteನಮ್ಮ ಮನಸ್ಸಿನಲ್ಲಿ ಇದ್ದುದನ್ನೇ ನೀವೂ ಸಹ ಬರೆದಿದ್ದೀರಿ. ಬಹುಶಃ ನಮಗೆ ನಿಮ್ಮಷ್ಠು ಉತ್ತಮವಾಗಿ ಬರೆಯಲು ಅನುಭವ ಇಲ್ಲ.
ವಂದನೆಗಳೊಂದಿಗೆ
ಗೋಪೀನಾಧ್
ಕಾಲಪ್ರವಾಹದಲ್ಲಿ ಸದ್ದಿಲ್ಲದೇ ಯಾಂತ್ರಿಕವಾಗಿ ನಡೆಯುವ ಜೀವನದ ವಿವಿಧ ಮಜಲುಗಳನ್ನು ನೆನಪುಮಾಡಿದ್ದಕ್ಕೆ ಧನ್ಯವಾದಗಳು.
ReplyDeleteಬಾಳ ಪಯಣವೆಂಬುದೊಂದು ಆಟವಲ್ಲವೆ
ReplyDeleteಸೋಲು ಗೆಲವುಗಳುವುಂಟೆಬುದು ವೆದ್ಯವಲ್ಲವೆ
ನಿಮ್ಮನುಭವ ಮತ್ತು ಅಲೋಚಿಸುವ ರೀತಿ
ಕೊಟ್ಟಿತೆಮಗೆ ಸುಂದರ ʼತಿರುನೋಟʼ ಕೃತಿ
- ನಾಗೇಶ್ ರಾವ್
ಜೀವನದಿ ಈವರೆವಿಗೂ ತುಳಿದ ಬಂದ ಹೆಜ್ಜೆಗಳ ಹಿನ್ನೋಟದಲ್ಲಿ, ಪ್ರತಿಯೊಂದು ಹಂತದಲ್ಲಿ ಕಾಣಸಿಗಬಹುದಾದ ಘಟನೆಗಳು ಹಾಗೂ ಅನುಭವಗಳು ಪ್ರತಿಯೊಬ್ಬರ ಜೀವನದಲ್ಲಿ ಕಾಲಾನುಸಾರ ವಿಭಿನ್ನವಾಗಿರುವುದು ಸಹಜ.
ReplyDeleteನಮ್ಮ ಬಾಲ್ಯ ತದನಂತರದ ಜೀವನದ ಚಿತ್ರಣವನ್ನು ಹಂತ ಹಂತವಾಗಿ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿಸಿ, ಕೊನೆಗೆ ಜೀವ(ನ)ದ ಸಾರ್ಥಕತೆಗೆ ಆಧ್ಯಾತ್ಮ, ಸತ್ಸಂಗದ ಅತ್ಯಾವಶ್ಯಕ ಎಂದು ಜ್ಞಾಪಿಸಿದ ಕವನಕ್ಕೆ ವಂದನೆಗಳು.
ಸುಂದರವಾದ, ಮನಮುಟ್ಟುವ ಕವನ. ಬಾಲ್ಯದಿಂದ ಹಿಡಿದು ಮುಪ್ಪಿನ ವರೆಗೂ ಇರುವ ಜೀವನಚಕ್ರ ಬಹಳ ಸೊಗಸಾಗಿದೆ. ಜೀವನದ ತಿರುಳನ್ನು ಮನಮುಟ್ಟುವಂತೆ ಬರೆದಿರುವ ಶೈಲಿ, ಆಧ್ಯಾತ್ಮದ ಅವಶ್ಯಕತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಬರೆದಿರುವ ರೀತಿ ಚೆನ್ನಾಗಿದೆ.
ReplyDeleteHuttidagi ninda illayavaregu Namma payana nadedu banda hadi chennagi niroopisiddiri. Namage tiliyada Hage Namma jeevana sagi konegondu Dina nammanu kade nildanakke karedu kondu hogi bidutte. Navu Namma jeevitavadiyalli swalpa vadru paropakara maduva manassu namage devaru karunisidre nave danyaru. Namminda yarigadru novu anyaya agidre adu kandita tilidu madida aparada vagiralla. Namma agnana namminda eneno madisira beku. Innu munde adru namage sariyada buddikottu Namma ulidiruva samaya mattobgarige sahaya maduvante nnammannu nadesu endu bagavantanalli prarthisona.
ReplyDeleteಜೀವನಸಾರವನ್ನೊಳಗೊಂಡ ,ಪದ್ಯರೂಪದಲ್ಲಿರುವ ಸುಂದರವಾದ ತಿರುನೋಟ ಕೃತಿ ಅತ್ಯಂತ ಸೊಗಸಾಗಿದೆ. ಧನ್ಯವಾದಗಳು🙏😊
ReplyDeleteಇಳಿವಯಸ್ಸಿನಲ್ಲಿ ಈ ರೀತಿ ಒಮ್ಮೆ ನಿಂತು, ಹಿಂತಿರುಗಿ ನಡೆದುಬಂದ ದಾರಿಯನ್ನು ಒಂದರೆಕ್ಷಣ ಅವಲೋಕಿಸುವುದು ಮನುಷ್ಯ ಸಹಜವಾದ ಕ್ರಿಯೆ.
ReplyDeleteಕಳೆದುಹೋದ ಕಾಲ, ಮುಗಿದ ಸಂಬಂಧಗಳು ಇವುಗಳನ್ನು ವಿಷಾದ ಛಾಯೆಯ ನೆರಳಿನಲ್ಲಿಯೇ ನೆನಪಿಸಿಕೊಳ್ಳುವವುದು ಸಾಮಾನ್ಯ. ನಿಮ್ಮೀ ಕವನರೂಪದ ಬ್ಲಾಗ್ ಅನ್ನು ಓದುತ್ತಿದ್ದಂತೆ ಅದೇ ಜಾಡಿನಲ್ಲಿ ಇದ್ದೀರಿ ಅನಿಸಿತು.
ಇಂಥ ಸಂದರ್ಭಗಳಲ್ಲಿ ವಿಷಾದ ಭಾವಗಳು ಸ್ಪುರಿಸುವುದನ್ನು ನಿವಾರಿಸಿಕೊಳ್ಳಲು ಆಧ್ಯಾತ್ಮ / ಪಾರಮಾರ್ಥ ಒಂದೇ ದಾರಿ ಎಂದು ನಂಬಿರುವವನು ನಾನು.
ಕವನದ ಕೊನೆಯ ಭಾಗಕ್ಕೆ ಬಂದಾಗ ನಿಮ್ಮ ಗ್ರಹಿಕೆಯೂ ಅದೇ ಎಂದು ತಿಳಿಯಿತು.
ಕಾಲಗರ್ಭದಲ್ಲಿ ಮರೆಯಾಗಿರುವ ನಮ್ಮ ಜೀವಿತದ ವಿವರಗಳು ನಮ್ಮನ್ನು ವಿಷಾದಕ್ಕೆ ಈಡುಮಾಡದಿರಲಿ, ಶಾಂತಿಯುಕ್ತ, ಸಾರ್ಥಕತೆಯ ಮನೋನೆಲೆ ನಮ್ಮದಾಗಿ ಇರಲಿ.....
ಶಾಂತಿ..... ಶಾಂತಿ..... ಶಾಂತಿಃ