ನಮ್ಮ ದೈನಂದಿನ ಜೀವನದಲ್ಲಿ ಸಂಭಾಷಣೆಯಲ್ಲೋ, ಯಾವುದಾದರೂ ಕೆಲಸ ಮಾಡುತ್ತಲೋ, ಓದುತ್ತಲೋ, ಇಲ್ಲವೇ ಯಾವುದೋ ವಿಷಯವನ್ನು ಕುರಿತು ಯೋಚನೆ ಮಾಡುತ್ತಲೋ ಇರುತ್ತೇವೆ. ಹೀಗೆ ಇರುವಾಗ ಹಲವಾರು ವಿಚಾರಗಳು ಪ್ರತಿಯೊಬ್ಬರ ಮನಸ್ಸಿನಲ್ಲ್ಲೂ ಸುಳಿದಾಡುತ್ತವೆ. ಎಚ್ಚರದಿಂದ ಇವುಗಳನ್ನು ಗುರುತಿಸಿದರೆ ಅವುಗಳಲ್ಲಿ ಕೆಲವು ವಿಶೇಷವಾಗಿ ಕಾಣಬಹುದು ಅಥವಾ ತೀರಾ ಸಾಮಾನ್ಯವಾಗಿರಬಹುದು. ಆದರೂ ಆ ವಾಕ್ಯಗಳು ಚಿಂತನಾರ್ಹವಾಗಿರುತ್ತದೆ. ಇದು ಎಲ್ಲರ ಅನುಭವವೂ ಹೌದು. ಇಂತಹಾ ಒಂದು ವಾಕ್ಯ ಸಮಯೋಚಿತವಾಗಿ ಮನಸಿಗೆ ಬಂದಲ್ಲಿ ಅದು ಇಡೀ ದಿನವನ್ನೇ ಸಮಾಧಾನ ವಾಗಿಡಬಲ್ಲದು. ಇವುಗಳು ಕೆಲವೊಮ್ಮೆ ವ್ಕಕ್ತಿತ್ವ ವಿಕಸನ ಹಾಗೂ ಆತ್ಮ ಶೋಧನೆಗೆ ಸಹಾಯಕವಾಗಬಲ್ಲದು. ಆದ್ದರಿಂದ ನನ್ನ ಮನಸಿಗೆ ಬಂದ ಕೆಲವು ಇಂತಹಾ ವಿಚಾರಗಳನ್ನು ಇಲ್ಲಿ ತಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಓದುಗರಿಗೆ ಇದರ ಉಪಯೋಗವಾದರೆ ಸಂತಸದ ವಿಷಯ.
1 | ಎಲ್ಲಿ ಆದರ್ಶ ಇದೆಯೋ, ಅಲ್ಲಿ ಅನುಭವದ ಕೃಷಿ ಇರಬೇಕು. ಕೇವಲ ಮಾತಿರಬಾರದು. ಕೃತಿ ಇಲ್ಲದ ಶಬ್ಧಗಳು ಆದರ್ಶವನ್ನು ಕೊಲೆ ಮಾಡುತ್ತವೆ. |
2 | ನಮ್ಮನ್ನು ನಾವು ಸಂತೈಸಿಕೊಳ್ಳುವುದೇ ನಮ್ಮ ಎಲ್ಲಾ ದು:ಖಗಳಿಂದ ಮತ್ತು ಚಿಂತೆಗಳಿಂದ ಹೊರಬರಲು ಸಮರ್ಥವಾದ ಮಾರ್ಗ. |
3 | ಹಾಗೆ ಮಾಡಿದರೆ ಒಳ್ಳೆಯದು, ಹೀಗೆ ಮಾಡಿದರೆ ಕೆಟ್ಟದ್ದು - ಇಂತಹಾ ಸಲಹೆ ಕೊಡುವುದು ಸುಲಭ. ಅನುಸರಿಸುವುದೇ ಕಷ್ಟ. ಆದರೂ ನಾವು ಸಲಹೆ ಕೊಡದೆ ಸುಮ್ಮನಿರುವುದಿಲ್ಲ. |
4 | ಸಂಬಂಧದ ಸಾಮರಸ್ಯ ವೃದ್ಧಿಸುವ ಏಕೈಕ ಸಾಧನ ಕ್ಷಮೆ. ಕ್ಷಮಿಸುವ ಹೃದಯ ವೈಶಾಲ್ಯತೆ ನಮ್ಮದಾಗಲಿ. |
5 | ಜೀವನವನ್ನು ಇದ್ದಂತೆ ಒಪ್ಪಿಕೊಂಡರೆ ಅದೇ ನೆಮ್ಮದಿ. |
6 | ಜೀವನದಲ್ಲಿ ಅಳವಡಿಸಿಕೊಂಡ ಪದ ಹೆಚ್ಚು ಮೌಲ್ಯಯುತ. |
7 | ನಮ್ಮ ಕಂಡರಾಗದ ಎಲ್ಲರೂ ಒಂದು ಕಾಲದಲ್ಲಿ ನಮಗೆ ತೀರಾ ಬೇಕಾದವರೇ ಆಗಿರುತ್ತಾರೆ. |
8 | ಜಗತ್ತಿನಲ್ಲಿನ ಎಲ್ಲರನ್ನೂ ಸುಖವಾಗಿಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಕೆಲವರನ್ನಾದರೂ ಸಂತಸಗೊಳಿಸುವ ಸಾಮರ್ಥ್ಯ ಪ್ರತಿಯೊಬ್ಬರಲ್ಲೂ ಇರುತ್ತದೆ. |
9 | ನಮ್ಮ ತಪ್ಪುಗಳಿಗೆ ನಾವು ಉತ್ತಮ ವಕೀಲರು ಹಾಗೂ ಪರರ ತಪ್ಪುಗಳಿಗೆ ಅತ್ಯುತ್ತಮ ನ್ಯಾಯಾಧೀಶರು. ಇದೇ ನಮ್ಮ ವಿಶೇಷತೆ. |
10 | ನಾವು ಎಲ್ಲಿಯವರೆಗೂ ಸಹಿಸಿಕೊಂಡು ಹೋಗುತ್ತೇವೆಯೋ, ಅಲ್ಲಿಯವರೆಗೂ ನಾವು ಅವರಿಗೆ ಒಳ್ಳೆಯವರು. |
11 | ಆರೋಗ್ಯವಿದ್ದರೆ ಆನಂದ, ಆರೋಗ್ಯದತ್ತ ಪ್ರತಿದಿನವೂ ಹೆಜ್ಜೆ ಹಾಕೋಣ. |
12 | ಸಮಾಧಾನ ಕೊಡುವುದೇ ಸಮಾಧಾನಕರ ಜೀವನ ಮಾರ್ಗ. |
13 | ಎಲ್ಲಾ ಸಮಯವೂ ಸರಿಯಾದುದೇ. ನಮ್ಮ ಗುರಿ ಸಾಧಿಸುವತ್ತ ಕಾಲದೊಂದಿಗೆ ನಮ್ಮ ಪ್ರಯಾಣದ ತಯಾರಿ ಸರಿಯಾಗಿರಬೇಕು. |
14 | ಹಣ ಮನುಷ್ಯರ ಜೀವನದ ಒಂದು ಅತೀ ಕೆಟ್ಟ ಸಂಶೋಧನೆ. ಆದರೆ ಅದು ಮನುಷ್ಯನು ನಂಬಿಕೆಗೆ ಅರ್ಹನೋ ಆಲ್ಲವೋ ಎಂಬುದನ್ನು ಹಾಗೂ ಮನುಷ್ಯನ ಸ್ವಭಾವವನ್ನು ಪರೀಕ್ಷೆ ಮಾಡುತ್ತದೆ. |
15 | ನಾವೂ ಬೆಳೆದು ಬೇರೆಯವರನ್ನು ಬೆಳೆಸುವುದೇ ಯಶಸ್ಸು. |
16 | ಪರ್ವತದಲ್ಲಿ ಕುಳಿತು ತಪಸ್ಸು ಮಾಡುವುದು ಸುಲಭ. ಆದರೆ ಅದೇ ಪರಿವಾರದ ಮಧ್ಯೆ ಇದ್ದುಕೊಂಡು ಎಲ್ಲರ ನಡುವೆ ತಾಳ್ಮೆಯ ಜೀವನ ತಪಸ್ಸು ನಡೆಸುವುದು ಬಲು ಕಠಿಣ. |
17 | ಜೀವನದಲ್ಲಿ ಕೆಟ್ಟ ವ್ಯಕ್ತಿಗಳನ್ನು ನಂಬಿ ಮೋಸ ಹೋಗುತ್ತೇವೆ. ನಂತರದ ದಿನಗಳಲ್ಲಿ ಒಳ್ಳೆಯ ವ್ಯಕ್ತಿಗಳನ್ನೂ ಅನುಮಾನಿಸುತ್ತೇವೆ. ಕೇಳಿದರೆ ಅನುಭವದಿಂದ ಕಲಿತದ್ದು ಎನ್ನುತ್ತೇವೆ. |
18 | ಅತಿಯಾದ ಯೋಚನೆಯೇ ನಮ್ಮ ಜೀವನದ ಸಂತೋಷವನ್ನು ಹಾಳುಮಾಡಿ, ನಾವು ದುಃಖಪಡಲು ಅತಿ ದೊಡ್ಡ ಕಾರಣವಾಗುತ್ತದೆ. |
19 | ಪರಿಶುದ್ಧವಾದ ಸ್ನೇಹ, ಸಹಾಯ, ಪ್ರೀತಿ ಮತ್ತು ಪ್ರೋತ್ಸಾಹ ಅತಿ ವಿರಳ. |
20 | ನಮ್ಮ ಜೀವನದ ಜವಾಬ್ದಾರಿಗಳು ಎಂದಿಗೂ ಕೊನೆಯಾಗುವುದಿಲ್ಲ. ಆದರೆ ನಮ್ಮ ಜೀವನ ಕಡೆಯಾಗುತ್ತದೆ. ಈ ಕೆಲಸ ಹಾಗೂ ಜವಾಬ್ದಾರಿಗಳ ನಡುವೆ ಸೇವೆ ಸತ್ಸಂಗಗಳಿಗೆ ಅವಕಾಶ ಮಾಡಿಕೊಳ್ಳಬೇಕು. |
21 | ನಮ್ಮ ಸಂತೋಷಕ್ಕೆ ನಾವೇ ಕಾರಣರು. ಬೇರೆಯವರಿಂದ ಅದು ಸಿಗುತ್ತದೆ ಎಂದುಕೊಂಡರೆ ನಿರಾಶೆಯೇ ಖಾತ್ರಿ. |
22 | ಭಯವನ್ನು ಒಮ್ಮೆಯೂ ಎದುರಿಸಲಾಗದಿದ್ದರೆ ಜೀವನವಿಡೀ ಓಡುತ್ತಲೇ ಇರಬೇಕಾಗುತ್ತದೆ. |
23 | ನಾವೇ ನಮ್ಮ ಜೀವನದ ಚಾಲಕರು. ಆ ಚಾಲನೆಯ ಅಧಿಕಾರವನ್ನು ಮತ್ತು ಆ ಸ್ಥಳವನ್ನು ಬೇರೆಯವರು ಕದಿಯಲು ಅವಕಾಶ ಮಾಡಬಾರದು. |
24 | ನಾವು ಮಾರ್ಪಡಿಸಲಾಗದ ವಿಷಯಗಳ ಬಗ್ಗೆ ಚಿಂತೆ ಮಾಡಬಾರದು. ಏಕೆಂದರೆ ಅದು ನಮಗೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಇನ್ನೂ ನಮ್ಮ ಆರೋಗ್ಯ ಹಾಳಾಗಬಹುದು. |
25 | ಪ್ರತಿಯೊಂದು ಮಹತ್ಸಾಧನೆಯೂ ಹಲವು ಬಾರಿ ಅಸಾಧ್ಯ ಎಂದು ತಿಳಿಯಲಾಗಿತ್ತು. |
26 | ಕಡೆಯ ಏಟಿಗೇ ಕಲ್ಲು ಒಡೆದಿರಬಹುದು. ಹಾಗೆಂದಾಕ್ಷಣಕ್ಕೆ ಮೊದಲ ಏಟುಗಳು ನಿರುಪಯೋಗಿ ಎನ್ನಲಾಗದು. ಅವ್ಯಾಹತ ಪ್ರಯತ್ನದ ಪರಿಣಾಮವೇ ಯಶಸ್ಸು. |
27 | ಸುಖದ ಬದುಕಿಗೆ ನಂಬಿಕೆ ಮತ್ತು ನೆಮ್ಮದಿಗಳು ಅನಿವಾರ್ಯ. |
28 | ತಾನು ಸ್ವಂತವಾಗಿ ಕಷ್ಟವನ್ನು ಅನುಭವಿಸದಿದ್ದವರಿಗೆ ಬೇರೆಯವರ ಕಷ್ಟ ಅರ್ಥವಾಗುವುದಿಲ್ಲ. |
29 | ಬೆಳಗಿನ ವೇಳೆಯಲ್ಲಿ ಮನದಲ್ಲಿ ಬರುವ ಧನಾತ್ಮಕ ಚಿಂತನೆ ಒಮ್ಮೊಮ್ಮೆ ಜೀವನವನ್ನೇ ಸುಖಮಯವಾಗಿ ಬದಲಾಯಿಸುತ್ತದೆ. |
30 | ನಾವು ಸುಳ್ಳು ಹೇಳಿದರೆ ಬಹಳ ಚೆನ್ನ. ಅದೇ ಬೇರೆಯವರು ಹೇಳಿದರೆ ನಮಗೆ ಕೋಪ. ಸುಳ್ಳನ್ನು ನಾವು ಸದಾ ಕಾಪಾಡಬೇಕು. ಆದರೆ ಸತ್ಯ ಮಾತ್ರ ನಮ್ಮನ್ನು ಅನುಗಾಲ ಕಾಪಾಡುತ್ತದೆ. ಇವೆಲ್ಲವೂ ಯಾರಿಗೂ ಗೊತ್ತಿಲ್ಲದ್ದೇನಲ್ಲ. |
31 | ನಾವು ಏನಾದರೂ ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆದಿರುತ್ತೇವೆ. ಅಂತೆಯೇ ಏನನ್ನಾದರೂ ಪಡೆದಿದ್ದರೆ ಅದಕ್ಕೆ ಪ್ರತಿಯಾಗಿ ಮತ್ತೇನನ್ನಾದರೂ ಕಳೆದುಕೊಂಡಿರುತ್ತೇವೆ. |
32 | ಪ್ರಯತ್ನವೇ ಬದುಕಿಗೆ ಮೂಲಾಧಾರ. |
33 | ತನ್ನನ್ನು ತಾನು ನೋಡಿಕೊಳ್ಳದೆ ಬೇರೆಯವರ ನ್ಯೂನತೆಯತ್ತ ಗಮನಹರಿಸುವುದೂ ಒಂದು ಮನುಜ ಸ್ವಭಾವ. |
34 | ಕಠಿಣ ಸಂದರ್ಭಗಳಲ್ಲಿಯೇ ನಮ್ಮ ನಿಜವಾದ ಸಾಮರ್ಥ್ಯ ಅನಾವರಣಗೊಳ್ಳುತ್ತವೆ ಹಾಗೆಯೇ ನಾವು ಅದನ್ನು ಎದುರಿಸಲು ಅಷ್ಟೇ ಕ್ರಿಯಾಶೀಲರಾಗುತ್ತೇವೆ. |
35 | ಆತ್ಮವಿಶ್ವಾಸದ ಮೇಲೆ ನಂಬಿಕೆ ಇದ್ದವರಿಗೆ ಯಶಸ್ಸು ಸಹಜ. |
36 | ಎಷ್ಟೇ ಕಷ್ಟಗಳಿದ್ದರೂ ಸುಖವಾಗಿ ಬದುಕುವಂತೆ ಮಾಡುವುದು ನಂಬಿಕೆ ಮತ್ತು ನೆಮ್ಮದಿ ಮಾತ್ರ. |
37 | ಒಂದು ಕ್ಷಣ ದಿನವನ್ನೇ ಬದಲಾಯಿಸುತ್ತದೆ. ಒಂದು ದಿನ ಜೀವನವನ್ನೇ ಬದಲಾಯಿಸುತ್ತದೆ. ಅಂತಹಾ ಜೀವನ ಇಡೀ ವಿಶ್ವವನ್ನೇ ಬದಲಾಯಿಸುತ್ತದೆ. ಅಂತಹಾ ಅತ್ಯುತ್ತಮ ಕ್ಷಣ ನಮ್ಮದಾಗಬೇಕು. |
38 | ನಾವು ಯಾರನ್ನು ಹುಡುಕಿಕೊಂಡು ಹೋಗುತ್ತೇವೆಯೋ ಅವರನ್ನು ನಮ್ಮವರು ಎಂದು ಭಾವಿಸುವುದರ ಬದಲು ಯಾರು ನಮ್ಮನ್ನು ಹುಡುಕಿಕೊಂಡು ಬರುವರೋ ಅವರನ್ನು ನಮ್ಮವರು ಎಂದು ತಿಳಿಯುವುದು ಅತ್ಯಂತ ಸಮಂಜಸ. |
39 | ಒಳ್ಳೆಯ ಸಂಬಂಧಗಳನ್ನು ಪ್ರೀತಿಯಿಂದ ಉಳಿಸಿಕೊಳ್ಳಬೇಕು. ಕೆಟ್ಟ ಸಂಬಂಧಗಳನ್ನು ಮೌನದಿಂದ ಕಳೆದುಕೊಳ್ಳಬೇಕು. |
40 | ಜೀವನದ ಏಳುಬೀಳುಗಳನ್ನು ಅರ್ಥಮಾಡಿಕೊಂಡು ಅದರಲ್ಲಿಯೇ ನೆಮ್ಮದಿ ಕಾಣುವುದೇ ಸಂತೋಷ. |
41 | ದುಡುಕಿನ ನಡೆ ಹಲವು ಬಾರಿ ಒಡಕಿಗೆ ಅವಕಾಶವಾಗುತ್ತದೆ. |
42 | ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸುವುದೇ ಸರಿ. ಸಮಯಕ್ಕೆ ಯಾವುದೇ ಭೇದಭಾವ ಇರುವುದಿಲ್ಲ. |
43 | ಪರಿಸ್ಥಿತಿಗಳು ಬಾರದೇ ವ್ಯಕ್ತಿಯ ಸಾಮರ್ಥ್ಯ ಅಥವಾ ಪ್ರಾಮಾಣಿಕತೆ ಅನಾವರಣಗೊಳ್ಳುವುದಿಲ್ಲ. |
44 | ಅನ್ಯರ ಟೀಕೆಗೆ ಆತ್ಮವಿಶ್ವಾಸ ಕಳೆದುಕೊಳ್ಳದೆ, ವಿಚಲಿತರಾಗದೆ, ಸಾಧನಾ ಪಥದಲ್ಲಿ, ಹೆಜ್ಜೆ ಹಾಕುವವರು ನಿಶ್ಚಯವಾಗಿ ವಿಜಯಿಗಳಾಗುತ್ತಾರೆ.. |
45 | ಗುರುತಿಗೆ ಗುಣವೇ ಸಾಕು |
46 | ಏನು ಮಾತನಾಡುತ್ತೇವೆ ಎನ್ನುವುದರ ಜೊತೆಗೆ ಯಾವ ಧ್ವನಿಯಲ್ಲಿ ಮಾತನಾಡುತ್ತೇವೆ ಎಂಬುದೂ ಪ್ರಮುಖವಾಗಿರುತ್ತದೆ. ಧ್ವನಿ ಬದಲಾದಾಗ ಬದುಕು ಬದಲಾಗುತ್ತದೆ. |
47 | ಸಂಬಂಧಗಳು ನೋವನ್ನು ಹಂಚಿಕೊಳ್ಳುವಂತಿರಬೇಕು. ಹಾಗೆಂದು ಹೆಚ್ಚಿಸಬಾರದು. |
48 | ಬದಲಾವಣೆಯಾಗಲು ಒಪ್ಪದಿದ್ದರೆ ಪ್ರಗತಿ ಅಸಾಧ್ಯ. ಯಾರು ತಮ್ಮ ಮನಸ್ಸನ್ನು ಬದಲಾಯಿಸಲು ಒಪ್ಪುವುದಿಲ್ಲವೋ ಅವರು ಏನನ್ನೂ ಬದಲಾಯಿಸಲಾರರು. |
49 | ದಾರಿಯಲ್ಲಿ ಬಿದ್ದಾಗ ಬೇರೆಯವರು ನೋಡದಂತೆ ಎದ್ದೇಳಬೇಕು. ಜೀವನದಲ್ಲಿ ಬಿದ್ದಾಗ ಎಲ್ಲರೂ ನೋಡುವಂತೆ ಎದ್ದೇಳಬೇಕು. |
50 | ನಂಬಿಕೆಯನ್ನು ಸಂಪಾದಿಸುವುದು ಬಲು ಕಷ್ಟ. ಇದು ಹಣಕ್ಕಿಂತಲೂ ದುಬಾರಿ. |
51 | ಕೈಲಾಗದ ಶತ್ರುವಿನ ಕಡೆಯ ಆಯುಧವೇ ಅಪಪ್ರಚಾರ. |
52 | ಪರಸ್ಪರ ಹಿತಕ್ಕೆ ಧಕ್ಕೆಯಾಗದಂತೆ ಜೀವಿಸುವುದೇ ಸ್ವಾತಂತ್ರ್ಯದ ಲಕ್ಷಣ. |
53 | ಕೆಲವೊಮ್ಮೆ ನಾವು ಸಾಧಿಸುವ ಯಶಸ್ಸುಗಳೇ ನಮಗೆ ಶತೃಗಳನ್ನು ಸೃಷ್ಟಿ ಮಾಡುತ್ತದೆ. |
54 | ಬೇರೆಯವರಲ್ಲಿ ಸಂತೋಷ ಕಾಣುವವರೇ ಸದಾ ಸುಖಿಗಳು. |
55 | ನಮ್ಮ ಪಾಲಿನ ಕೆಲಸವನ್ನು ನಾವು ಮೌನವಾಗಿ ನಿರ್ವಹಿಸುವುದನ್ನು ಧ್ಯಾನ ಎಂದು ಕರೆಯಬಹುದು. |
56 | ಪ್ರತಿದಿನ ಎದುರಿಸುವ ನೋವು ನಲಿವುಗಳು, ನಿರೀಕ್ಷೆ ನಿರಾಸೆಗಳು, ಎದುರಿಸುವ ಪರಿಸ್ಥಿತಿಯ ಪರೀಕ್ಷೆಗಳೇ ಬದುಕಿನ ಪಾಠಗಳು ಎಂದು ಭಾವಿಸಬೇಕು. |
57 | ನಮಗೆ ಬೇಕೆನಿಸುವುದೆಲ್ಲಾ ದುಬಾರಿಯಾದುದೇ. ಹಾಗೆ ನೋಡಿದರೆ ನಾವು ಜೀವಿಸಲು ಅಗತ್ಯವಿರುವ ಪ್ರೀತಿ, ಸಂತೋಷ ಹಾಗೂ ಬಾಂಧವ್ಯಗಳು ಉಚಿತವಾಗಿಯೇ ಸಿಗುತ್ತದೆ. |
58 | ಇರ್ಲಿ, ಪರ್ವಾಗಿಲ್ಲ ಎಂಬುವುದರಲ್ಲಿ ಇರುವ ನೋವನ್ನು, ಏನಾದರೂ ಮಾಡ್ಕೋ ಎಂಬುವುದರಲ್ಲಿ ಇರುವ ಕಾಳಜಿಯನ್ನು ಮತ್ತು ಸುಮ್ನೆ ತಮಾಷೆ ಮಾಡಿದೆ ಎಂಬುವುದರಲ್ಲಿರುವ ನಿಜವನ್ನು ಗಮನಿಸಬೇಕು. |
59 | ಎಲ್ಲಾ ಸಮಸ್ಯೆಗಳಿಗೂ ಪರಿಹಾರ ತಾಳ್ಮೆ ಒಂದೇ. |
60 | ಅನಗತ್ಯ ವಸ್ತುಗಳನ್ನು ಕೊಳ್ಳುತ್ತಾ ಹೋದಂತೆ ನಮ್ಮಲ್ಲಿರುವ ಅಗತ್ಯ ವಸ್ತುಗಳನ್ನು ಮಾರಬೇಕಾಗುತ್ತದೆ. |
61 | ಇತರರು ಬೆಳೆಯುತ್ತಿರುವಾಗ ನಾವೂ ಕೂಡ ಬೆಳೆಯಬಹುದು, ಇತರರಿಂದ ಸಾಧ್ಯವಾಗುವುದಾದರೆ ನಮ್ಮಿಂದಲೂ ಸಾಧ್ಯ ಎಂಬ ಭಾವನೆ ಸರಿಯಾದದ್ದು. |
62 | ದೇವರ ಮೇಲಿನ ಭಯವು ನಮಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ, ಸಮಾಜದಲ್ಲಿ ನಮ್ಮ ಸಂಬಂಧಗಳನ್ನು ಬಲ ಪಡಿಸಿಕೊಳ್ಳಲು ಸಹಾಯವಾಗುತ್ತದೆ. |
63 | ಆಕಸ್ಮಾತ್ ಕಾಲು ಎಡವಿದರೆ ದೇಹಕ್ಕಷ್ಟೇ ಗಾಯದ ಸಂಭವ. ನಾಲಿಗೆಯೇನಾದರೂ ಎಡವಿದರೆ ಸಂಬಂಧಗಳಿಗೇ ಅಪಾಯ. |
64 | ನಾವು ಎಲ್ಲರಿಗೂ ಹೊಂದಿಕೊಂಡಾಗ ಮಾತ್ರ ನಮಗೆ ಎಲ್ಲರಲ್ಲೂ ವಿಶ್ವಾಸ ಇರಲು ಸಾಧ್ಯ. |
65 | ನಮ್ಮ ಕಂಡರಾಗದ ಎಲ್ಲರೂ ಒಂದು ಕಾಲದಲ್ಲಿ ನಮಗೆ ತೀರಾ ಬೇಕಾದವರೇ ಆಗಿರುತ್ತಾರೆ. |
66 | ಈ ನಿಮಿಷವು ಎಷ್ಟೇ ಕಷ್ಟ, ನಷ್ಟ, ವಿರಸ ವಿಸ್ಮಯಗಳಿಂದ ಕೂಡಿದ್ದರೂ ಅದರಲ್ಲಿನ ರಸ ನಿಮಿಷವನ್ನು ಸಂತೋಷದಿಂದ ಅನುಭವಿಸುವ ವ್ಯಕ್ತಿಯೇ ಅತ್ಯಂತ ಸುಖಿ ಮನುಷ್ಯ. ಅಂತಹಾ ಮಾನಸಿಕ ಸ್ಥಿತಿಯನ್ನು ಗಳಿಸುವ ಸಾಮರ್ಥ್ಯ ನಮಗೆ ದೊರಕಲು ಯತ್ನಿಸಬೇಕು. |
67 | ಮನದಲ್ಲಿನ ಭಯವನ್ನು ನಿವಾರಿಸಲು ಮತ್ತು ಮನದಲ್ಲಿನ ನೋವನ್ನು ಕಾಣಿಸದಿರಲು ಮುಗುಳ್ನಗೆ ಒಂದೇ ಶ್ರೇಷ್ಠ ಮಾರ್ಗ. |
68 | ಕ್ಷಮೆಯೊಂದೇ ಮನಸಿನ ನೋವು ನಿವಾರಕ. |
69 | ಬದಲಾಯಿಸಲಾಗದ ಪರಿಸ್ಥಿತಿಯನ್ನು ಒಪ್ಪಿಕೊಂಡು ಮುಂದುವರಿದರೆ ಮಾತ್ರ ಜೀವನ ಚೆಂದ ಹಾಗೂ ಹಿತ. |
70 | ಜೀವನ ಅಂತ್ಯದವರೆಗೂ ಕ್ಷಣಮಾತ್ರವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುವ ಅಂಗ ಹೃದಯ. ಅದನ್ನು ಒಳ್ಳೆಯ ವಿಚಾರಗಳಿಂದ ಶುದ್ಧವಾಗಿಡಲು ಯತ್ನಿಸೋಣ. |
71 | ಸಾಕೆನಿಸುವಷ್ಟು ಕೆಲಸ, ನಿದ್ದೆ, ನೆಮ್ಮದಿ, ಪ್ರೀತಿಸುವವರು ಇದ್ದು, ಆರೋಗ್ಯದಿಂದ ಕೂಡಿದವರೇ ಜಗತ್ತಿನ ಅತಿ ಶ್ರೀಮಂತರು. |
72 | ಜೀವನದಲ್ಲಿ ಜಂಜಾಟವಿಲ್ಲದಿದ್ದರೆ ಪ್ರಗತಿ ಅಸಾಧ್ಯ. |
73 | ಕೆಲವು ಬಾರಿ ನಿಮ್ಮ ಸಂತೋಷದ ಸಂಗತಿಗಳನ್ನು ಕೆಲವು ಸಮಯದವರೆಗಾದರೂ ರಹಸ್ಯವಾಗಿಯೇ ಇಟ್ಟುಕೊಳ್ಳಬೇಕು. ಕೇಳಿದ ಎಲ್ಲರೂ ಪ್ರಾಮಾಣಿಕವಾಗಿ ಅದನ್ನು ಸ್ವೀಕರಿಸುವುದಿಲ್ಲ. ಅಸೂಯೆ ದ್ವೇಷ ಹೆಚ್ಚಿನವರಲ್ಲಿ ಸಹಜ. |
74 | ಆಯ್ಕೆ ಇದ್ದರೆ ಅತ್ಯುತ್ತಮವಾದ್ದನ್ನು ಆರಿಸಿಕೊಳ್ಳೋಣ. ಇಲ್ಲದಿದ್ದರೆ ಅತ್ಯುತ್ತಮವಾದ್ದನ್ನೇ ಮಾಡೋಣ. |
75 | ಎಲ್ಲಾ ವಯಸ್ಸಿನವರಿಗೂ ಮೈಗಳ್ಳತನವೇ ಶತ್ರು. ಉದ್ಯೋಗವಾಗಲಿ ವ್ಯಾಯಾಮವಾಗಲೀ ಶೃದ್ಧೆ ಇದ್ದರೆ ಮಾತ್ರ ಆರೋಗ್ಯ ಹಾಗೂ ಭಾಗ್ಯ. ಶ್ರಮವಿಲ್ಲದ ಉದ್ಯೋಗ ಹಾಗೂ ವ್ಯಾಯಾಮಗಳಿಲ್ಲ. |
76 | ಹಾಗೆ ಮಾಡಿ, ಹೀಗೆ ಮಾಡಿ ಎಂದು ಹೇಳುವುದು ಅತಿ ಸುಲಭ. ಕಠಿಣವೆನಿಸಿದರೂ ಸರಿಯಾದುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. |
77 | ಬದುಕಿನ ಪ್ರತಿಯೊಂದು ಘಟನೆಗಳೂ ಮೌಲ್ಯಯುತವಾದದ್ದೇ. ಆದರೆ ಅದು ತಿಳಿಯುವುದು ಅದನ್ನು ಅರಿಯಲು ಯತ್ನಿಸಿದಾಗ ಮಾತ್ರ. |
78 | ಎಲ್ಲಿಯವರೆಗೂ ಇರುವ ಸ್ಥಿತಿಗೆ ನಾವೇ ಹೊಣೆ ಎಂದು ಅರಿಯದೇ ಇತರರನ್ನು ಅಥವಾ ಸಂದರ್ಭಗಳನ್ನು ದೂಷಿಸುತ್ತಿರುವೆವೋ ಅಲ್ಲಿಯವರೆಗೂ ನಾವು ದುರ್ಬಲರೇ ಹೌದು. |
79 | ಕಷ್ಟದಲ್ಲಿದ್ದಾಗ ಸಹಾಯ ಮಾಡಿದವರ ನೆನಪು ಸುಖದಲ್ಲಿದ್ದಾಗ ಸ್ಮರಣೆಗೆ ಬರುವುದು ಅಪರೂಪ. |
80 | ನಮಗೆ ನಾವೇ ನಿಜವಾದ ಮಿತ್ರರು ಹಾಗೂ ಶತ್ರುವೂ ಹೌದು. |
81 | ಮರೆತು ಕ್ಷಮಿಸುವುದಾದರೆ ಕೊಡುವುದಾಗಲಿ ಪಡೆಯುವುದಾಗಲಿ ಹಿತಕರವೇ. |
82 | ತಪ್ಪುಗಳಿಗೆ ಶಿಕ್ಷೆಗಿಂತ, ತಪ್ಪನ್ನು ತಿದ್ದಿಕೊಳ್ಳುವುದೇ ಸರಿಯಾದ ಪರಿಹಾರ. ಇಲ್ಲಿ ಕೊಡುವವರಿಗಿಂತ ಪಡೆಯುವರ ಹೊಣೆ ಹೆಚ್ಚು. |
83 | ಮೌನ ಎಂಬುವುದು ಭಾಷೆಯೂ ಹೌದು ಮತ್ತು ಶಕ್ತಿಯುತ ಮಾತೂ ಹೌದು. |
84 | ಭಯವನ್ನು ಎದುರಿಸಿ ಅದರ ಮೇಲೆ ಜಯ ಸಾಧಿಸುವುದೇ ಧೈರ್ಯ. |
85 | ಮನಸ್ಸಿನಲ್ಲಿ ಮಾಡೋಣ ಎಂದು ಕೊಂಡ ಮಾತ್ರಕ್ಕೆ ಅಂದುಕೊಂಡಿದ್ದನ್ನು ಸಾಧಿಸಲಾಗುವುದಿಲ್ಲ. ಸೂಕ್ತ ಪ್ರಯತ್ನ ತುಂಬಾ ಅನಿವಾರ್ಯ. |
86 | ನಮಗಿಂತ ಹೆಚ್ಚು ಸಾಧನೆ ಮಾಡಿದವರು ಎಂದೂ ನಮ್ಮನ್ನು ಟೀಕಿಸುವುದಿಲ್ಲ. ನಮಗಿಂತ ಕಡಿಮೆ ಸಾಧನೆ ಮಾಡಿದವರೇ ನಮ್ಮನ್ನು ಟೀಕಿಸುವುದು ಎಂಬುದು ಗಮನಾರ್ಹ. |
87 | ನಮಗೆ ನಮ್ಮಲ್ಲಿರುವ ಹಣ ಎಷ್ಟು ಎಂದು ನಿಖರವಾಗಿ ಗೊತ್ತಿರುತ್ತದೆ. ಆದರೆ ನಮಗಿರುವ ಸಮಯ ಎಷ್ಟು ಎಂದು ತಿಳಿದಿರುವುದಿಲ್ಲ. |
88 | ಸ್ವಾವಲಂಬಿಗಳಾಗಿದ್ದಲ್ಲಿ ಮಾತ್ರ ನಾವು ಶಾಂತಿ ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯ ಎಂಬ ನಂಬಿಕೆಯೇ ಹೆಚ್ಚು. ಆದರೆ ಪ್ರಕೃತಿ ಅಥವಾ ಸಂಬಂಧಗಳ ಮೇಲೆ ಅವಲಂಬನೆ ಇಲ್ಲದೆ ಸಾಮಾನ್ಯ ಜೀವನ ಅಸಾಧ್ಯ. |
89 | ತಪ್ಪು ಯಾರದು ಎಂಬುದಕ್ಕಿಂತ ಆಗಿರುವ ತಪ್ಪು ಏನು ಮತ್ತು ಏಕೆ, ಹಾಗೂ ಇದನ್ನು ಸರಿಪಡಿಸುವ ಬಗೆ ಹೇಗೆ ಎಂಬ ವಿಶ್ಲೇಷಣೆ ಮುಖ್ಯ. |
90 | ಕೈತುಂಬಾ ಕೆಲಸ, ಸಾಕಷ್ಟು ನಿದ್ದೆ, ನೆಮ್ಮದಿ ಇರುವ ಮನಸು, ಆರೋಗ್ಯ ಹಾಗೂ ಎಲ್ಲರೊಂದಿಗೆ ವಿಶ್ವಾಸ ಮತ್ತು ಪ್ರೀತಿ. ಇವು ಸುಖದ ಬದುಕಿನ ಅನಿವಾರ್ಯತೆಗಳು. |
91 | ನಾವಿರುವ ಸ್ಥಿತಿಗೆ ನಾವೇ ಹೊಣೆಗಾರರು. ಅದಕ್ಕೆ ಸದಾ ಸಂದರ್ಭಗಳನ್ನಾಗಲಿ, ಇತರರನ್ನಾಗಲೀ ದೂಷಿಸುವುದು ತಪ್ಪು. |
92 | ಹೋಗುತ್ತಿರುವ ದಾರಿ ಬೇಕಾದ ಸ್ಥಳವನ್ನು ತಲುಪುವುದಿಲ್ಲ ಎಂದಾಗ ಅದೆಷ್ಟು ದೂರ ಕ್ರಮಿಸಿದ್ದರೂ ಬದಲಾಯಿಕೊಳ್ಳಲೇಬೇಕು. ತಿದ್ದಿಕೊಳ್ಳಲು ಕಾಲವನ್ನು ನಿಗದಿಸಲಾಗದು. |
93 | ಯಾರಿಗೆ ಯಾರೂ ಇಲ್ಲ. ಗುರಿಯೆಡೆಗೆ ಸಾಗಬೇಕೆಂದರೆ ನಮ್ಮನ್ನು ನಾವೇ ತಳ್ಳಿಕೊಳ್ಳಬೇಕು. ಯಾರಾದರೂ ಸಹಾಯ ಮಾಡುತ್ತಾರೆ ಎಂಬುದು ಹುಸಿ ನಂಬಿಕೆ. |
94 | ನಮ್ಮ ಜೀವನದಲ್ಲಿ ಸಂಪರ್ಕಕ್ಕೆ ಬರುವ ಪ್ರತಿಯೊಬ್ಬರೂ ನಮಗೆ ಒಂದಲ್ಲ ಒಂದು ಪಾಠವನ್ನು ಕಲಿಸಿಯೇ ಹೋಗುತ್ತಾರೆ. |
95 | ಜೀವನವೆಂದರೆ ನಗು, ಕಣ್ಣೀರು ಹಾಗೂ ನೆನಪುಗಳ ಸಮ್ಮಿಲನ. ಆದರೆ ನಗು ಮಂದವಾಗಿ, ಕಣ್ಣೀರು ಒಣಗಿ ಹೋದರೂ ನೆನಪುಗಳು ಮಾತ್ರ ಸದಾ ಇರುತ್ತದೆ. |
96 | ನಡೆಯುತ್ತಿರುವ ಘಟನೆ ಈಗೇನೋ ಚಿಕ್ಕದಾಗಿ ಕಾಣಬಹುದು. ಮುಂದೊಂದು ದಿನ ಕಳೆದ ದಿನಗಳತ್ತ ನೋಡಿದಾಗ ಅದು ರಸನಿಮಿಷವಾಗಿ ಕಾಣುತ್ತದೆ. ಆದ್ದರಿಂದ ಇಂದಿನ ಬಗ್ಗೆ ಗೌರವವಿರಬೇಕು. ಸಂತೋಷ ವಿರಬೇಕು. |
97 | ನಮ್ಮ ನಮ್ಮ ನೋವಿಗಾಗಲೀ ನಲಿವಿಗಾಗಲೀ ನಾವೇ ಕಾರಣರು. ಬೇರೆಯವರಿಂದ ಅದು ಎಂದೂ ದೊರೆಯದು. |
98 | ಕಾಲಿನ ಉಳುಕು ಮತ್ತು ಕ್ಷುಲ್ಲಕ ಚಿಂತನೆಗಳು ನಮ್ಮನ್ನು ಮುಂದೆ ಹೋಗಲು ಬಿಡುವುದಿಲ್ಲ. |
99 | ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ಗೊತ್ತಿಲ್ಲದಿದ್ದಲ್ಲಿ ಕೇಳಬೇಕು, ಒಪ್ಪಿಗೆಯಾಗದಿದ್ದಲ್ಲಿ ಚರ್ಚಿಸಬೇಕು. ಇಷ್ಟವಾಗದಿದ್ದಲ್ಲಿ ಸಮಾಧಾನದಿಂದ ಹೇಳಬೇಕು. ಆದರೆ ಮೌನದಿಂದ ನಿರ್ಣಯಿಸುವುದು ತಪ್ಪಾಗುತ್ತದೆ. |
100 | ತಿಳುವಳಿಕೆಗಿಂತ ನಡುವಳಿಕೆ ಬಲು ಮುಖ್ಯ. ಅನಾರೋಗ್ಯಾದಿ ಕಾರಣಗಳಿಂದ ತಿಳುವಳಿಕೆಗೆ ಧಕ್ಕೆಯಾಗಬಹುದು. ಆದರೆ ನಡುವಳಿಕೆ ಬದಲಾಗದು. |
101 | ತಮಗೆ ಅನ್ಯಾಯವಾದಾಗ ಮಾತ್ರ ಹೌದು ಎನಿಸುತ್ತದೆ. |
102 | ಬುದ್ಧಿವಂತರ ಮಾತಿಗಿಂತಲೂ ಅನುಭವಸ್ಥರ ಮಾತು ಪರಿಣಾಮಕಾರಿ |
103 | ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ ಆದರೆ ಎಂದಿಗೂ ನಮ್ಮ ತಪ್ಪು ಮಾತ್ರ ನಮಗೆ ಸಿಗುವುದಿಲ್ಲ. |
104 | ಜೀವನವೇ ಹಾಗೆ. ಬುದ್ಧಿ ಬರುವ ವೇಳೆಗೆ ತಿದ್ದಿಕೊಳ್ಳಲು ಸಮಯ ಉಳಿದಿರುವುದಿಲ್ಲ. |
105 | ಸದ್ಗುಣಗಳಿಂದ ಕುರೂಪವನ್ನೂ ಮುಚ್ಙಬಹುದು. ಆದರೆ ಎಂತಹಾ ರೂಪದಿಂದಲೂ ಕೆಟ್ಟ ನಡತೆಯನ್ನು ರಕ್ಷಿಸಲಾಗದು. |
106 | ಸಮಸ್ಯೆಗಳನ್ನು ಪ್ರೀತಿಸಿದಷ್ಟು ಅವು ನಮ್ಮಿಂದ ದೂರ ಓಡುತ್ತವೆ. |
107 | ದುರಾಸೆ ಹಾಗೂ ಸೋಮಾರಿತನ ಇವೇ ಉದ್ಧಾರವಾಗದಿರಲು ಪ್ರಧಾನ ಕಾರಣ. |
108 | ಎಲ್ಲಾ ಬಲ್ಲವರು ಇಲ್ಲ. ಆದರೆ ಒಬ್ಬೊಬ್ಬರೂ ಒಂದಲ್ಲಾ ಒಂದು ವಿಷಯವನ್ನು ಬಲ್ಲರು. ಆದ್ದರಿಂದ ಪ್ರತಿಯೊಬ್ಬರಿಂದಲೂ ಕಲಿಯಬೇಕಾದದ್ದು ಇದ್ದೇ ಇದೆ. ಪ್ರತಿಯೊಬ್ಬರ ಮಾತನ್ನು ಸಮಾಧಾನದಿಂದ ಕೇಳಬೇಕಾಗುತ್ತದೆ. ಇದು ಅನಿವಾರ್ಯವೂ ಹೌದು. |
109 | ಸಾಕು ಎಂಬ ತೃಪ್ತಿಯ ಭಾವನೆಯುಳ್ಳವನೇ ಶ್ರೀಮಂತ. |
110 | ಹೊರಗೆ ನಡೆಯುವುದು ಒಳ್ಳೆಯದು. ಅದರಲ್ಲೂ ಅನಗತ್ಯ ಮಾತಿನಿಂದ ಹೊರ ನಡೆಯುವುದು ಇನ್ನೂ ಒಳ್ಳೆಯದು. |
111 | ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಅಥವಾ ಅದಕ್ಕೆ ಬೆಲೆ ಕೊಡುವ ವ್ಯಕ್ತಿಗಳೊಂದಿಗೆ ಮಾತ್ರ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬೇಕು. |
112 | ಸಮಸ್ಯೆ ಸಾಯಬೇಕೆಂದರೆ ಅದನ್ನು ಸೃಷ್ಟಿಸುವವರು ಇಲ್ಲವಾಗಬೇಕು |
113 | ಯಾರಿಂದಲೂ ಏನನ್ನೂ ಬಯಸದೆ ಇರುವುದೇ ಸೌಖ್ಯ. |
114 | ತನ್ನ ಬಗ್ಗೆ ತಾನು ಹೆಚ್ಚು ಹೆಚ್ಚು ತಿಳಿಯುವುದೇ ಬ್ರಹ್ಮ ವಿದ್ಯೆ. ಅದಕ್ಕೂ ಮೀರಿದ ವಿದ್ಯೆಯಿಲ್ಲ. |
115 | ಜನಸಮೂಹವೇನೋ ಬೆಳೆಯುತ್ತಿದೆ. ಆದರೆ, ಜನರು ಮಾತ್ರ ಇನ್ನೂ ಒಬ್ಬಂಟಿಯೇ. ವಿಶ್ವಾಸ ಸಂವಹನದ ಕೊರತೆಯೇ ಇದಕ್ಕೆ ಕಾರಣ. |
116 | ಅರ್ಥವಿಲ್ಲದ ನೂರು ಆಡುವವರ ಎದುರು ಮೌನವಾಗಿರುವುದೇ ಲೇಸು. |
117 | ಸೋಮಾರಿತನವೆಂಬುದು ಅತಿ ದೊಡ್ಡ ಶತ್ರು. ಆದಾಯಕ್ಕಾಗಲಿ ಆರೋಗ್ಯಕ್ಕಾಗಲೀ ಚಟುವಟಿಕೆ ಅನಿವಾರ್ಯ. ಇದಕ್ಕಾಗಿ ಹುರುಪಿನ ಜೀವನ ನಮ್ಮದಾಗಬೇಕು. |
118 | ಬದುಕು ಎಂಬುದು ಕಲಿಯಲೇ ಬೇಕಾದ ಪಾಠ. ಜೀವನದ ವಾಸ್ತವವನ್ನು ತಿಳಿದು ಎಚ್ಚರಿಕೆಯ ಹೆಜ್ಜೆಗಳನ್ನು ಇಡಲು ಇದಕ್ಕಿಂತ ದೊಡ್ಡ ಗುರು ಇಲ್ಲ. |
119 | ಪಡೆಯುವ ಮುನ್ನ ಹಾಗೂ ಕಳೆದುಕೊಂಡ ನಂತರ ವಸ್ತುವಿನ ಬೆಲೆ ಹೆಚ್ಚು. |
120 | ಜನರೊಂದಿಗೆ ಇದ್ದಾಗ ನಾವು ಆಡುವ ಮಾತಿನ ಮೇಲೆ ನಿಗಾ ಇರಿಸಬೇಕು. ನಾವು ಒಬ್ಬರೇ ಇದ್ದಾಗ ನಮ್ಮ ಯೋಚನೆಗಳ ಮೇಲೆ ನಿಯಂತ್ರಣವಿರಬೇಕು. |
121 | ಪ್ರತಿ ಸಮಸ್ಯೆಗೂ ಒಂದು ಪರಿಹಾರವಿದೆ ಎಂಬ ವಿಶ್ವಾಸವನ್ನು ಕೊಡುವುದೇ ಗಣಿತ. |
122 | ಸಂತೋಷವಿಲ್ಲದೆ ಮಾಡಿದ ಕೆಲಸದಿಂದ ಮಾಡಿದವರ ಸಮಯವೂ ವ್ಯರ್ಥ. ಉಳಿದವರಿಗೂ ಆ ಕೆಲಸದಿಂದ ಪ್ರಯೋಜನವಿಲ್ಲ. |
123 | ನಿರೀಕ್ಷಿತ ಫಲ ದೊರೆಯಲೆಂದು ಮಾಡುವ ಪ್ರಯತ್ನ ಯಶಸ್ವಿಯಾಗಬೇಕಾದರೆ ಅದನ್ನು ಅನುಸರಿಸುವ ವಿಧಾನವೂ ಪ್ರಧಾನವಾಗಿರುತ್ತದೆ. |
124 | ಪ್ರತಿಯೊಂದಕ್ಕೂ ನಾವು ಪ್ರತಿಕ್ರಿಯಿಸಲೇ ಬೇಕೆಂದಿಲ್ಲ. ಸುಮ್ಮನಿದ್ದು ನಡೆಯುವುದನ್ನು ಗಮನಿಸಿದರೆ ಪರಿಸ್ಥಿತಿಯೂ ಸರಿಯಾಗುತ್ತದೆ. ಜೊತೆಗೆ ಹೆಚ್ಚೂ ಕಲಿಯಬಹುದು. |
125 | ಯಶಸ್ಸನ್ನಾಗಲಿ, ಸೋಲನ್ನಾಗಲೀ ಇದು ಕೊನೆಯದು ಎನ್ನಲಾಗದು. ಇವರೆಡನ್ನೂ ಸರಿದೂಗಿಸಿಕೊಂಡು ಹೋದಾಗ ಮಾತ್ರ ಅರ್ಥಪೂರ್ಣ ಜೀವನವಾಗುತ್ತದೆ. |
126 | ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುತ್ತಾರೆ. ಆದರೆ ಬುದ್ಧಿ ಬಂದಮೇಲೆ ಕೆಟ್ಟಿರುವವರೇ ಹೆಚ್ಚು ಕಾಣ ಸಿಗುತ್ತಾರೆ. |
127 | ಸೋಲಿನ ರುಚಿ ನೋಡದೆ ಅದನ್ನು ಗೆದ್ದ ಮಹಾಶೂರರು ಯಾರೂ ಇಲ್ಲ. ಸೋಲದೆ ಗೆಲ್ಲಲು ಸಾಧ್ಯವಿಲ್ಲ. |
128 | ನಮ್ಮ ಜೀವನ ಸಂಗಾತಿ ಮಾತ್ರ ನಮ್ಮ ಭಾವನೆಗಳಿಗೆ ಬೆಲೆ ಕೊಡುತ್ತಾಳೆ. ನಮ್ಮ ಏಳಿಗೆಯೇ ಅವರ ಏಳಿಗೆಯೂ ಆಗಿರುವುದರಿಂದ ಅದನ್ನು ಬಯಸುವ ಏಕೈಕ ವ್ಯಕ್ತಿಯೆಂದರೆ ಜೀವನ ಸಂಗಾತಿ ಮಾತ್ರ. |
129 | ವಿಶ್ವಾಸವಿದ್ದಾಗ ಮೌನದಿಂದಿದ್ದರೂ ಅರ್ಥವಾಗುತ್ತದೆ. ನಂಬಿಕೆ ಇಲ್ಲದಿದ್ದಾಗ ಆಡಿದ ಮಾತೂ ಅಪಾರ್ಥವಾಗುತ್ತದೆ. |
130 | ಒಮ್ಮೆ ಆವಶ್ಯಕತೆ ಮುಗಿಯಿತೆಂದರೆ ಇರುವ ಮನೆ, ತಂದೆ, ತಾಯಿ, ಗಂಡ, ಹೆಂಡತಿ, ಸಂಸಾರ, ಉದ್ಯೋಗ, ಕಡೆಯಲ್ಲಿ ದೇಹ ಹೀಗೆ ಏನೇ ಇರಲಿ ಅದು ಭಾರವಾಗುತ್ತದೆ. |
131 | ಯಾವುದೇ ಬದಲಾವಣೆಯೂ ಶಾಶ್ವತವಲ್ಲ. ಅಂತೆಯೇ ಇಂದಿನ ವಾತಾವರಣ ಕೂಡಾ. |
132 | ಯಾರು ಇನ್ನೊಬ್ಬರ ಸಂತೋಷ ಅಥವಾ ಸಮಾಧಾನಕ್ಕಾಗಿ ಸೋಲಲೂ ತಯಾರಿದ್ದಾರೆಯೋ ಅವರನ್ನು ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ. |
133 | ಒಬ್ಬರ ಬಗ್ಗೆ ಕೇಳಿದ ವಿಷಯವನ್ನು ನಂಬುವುದರ ಬದಲು ಅವರ ಬಗ್ಗೆ ನಮಗೆ ತಿಳಿದ ವಿಷಯವನ್ನು ನಂಬಿದಾಗ ಮಾತ್ರ ಅವರೊಂದಿಗೆ ಹೆಚ್ಚು ಕಾಲ ಪ್ರಾಮಾಣಿಕ ಸಂಬಂಧವಿರುತ್ತದೆ. |
134 | ಕೆಲವು ಜನರು, ವಸ್ತುಗಳು, ವ್ಯವಸ್ಥೆಗಳು ಬದಲಾಗುವುದೇ ಇಲ್ಲ. ಆದರೆ ಕೆಲವು ಕಾರಣಗಳಿಂದ ಅವು ಅನಿವಾರ್ಯ. ಅಂತಹಾ ಸ್ಥಿತಿಯಲ್ಲಿ ಬದಲಾಯಿಸಲಾಗದಿರುವುದನ್ನು ಸುಮ್ಮನೆ ಒಪ್ಪಿಕೊಳ್ಳಬೇಕು. |
135 | ಯಾರೇ ಆಗಲಿ ಮತ್ತು ಯಾವುದೇ ಆಗಲಿ ಕಡೆಯವರೆಗೂ ಶಾಶ್ವತವಲ್ಲ. |
136 | ಒಬ್ಬರು ನಮ್ಮೊಂದಿಗೆ ಒಪ್ಪುತ್ತಿಲ್ಲ ಎಂದಾಕ್ಷಣ ಅವರು ನಮ್ಮನ್ನು ದ್ವೇಷಿಸುತ್ತಾರೆ ಎಂದು ತಿಳಿಯಲಾಗದು. |
137 | ಏನೇ ಪ್ರಯತ್ನ ಮಾಡಿದರೂ ಎಲ್ಲರಿಗೂ ಒಳ್ಳೆಯವರಾಗಲು ಅಸಾಧ್ಯ. ಎಲ್ಲರಿಗೂ ಒಳ್ಳೆಯದಾಗಲೆಂಬ ಮಾರ್ಗದಲ್ಲಿ ನಡೆಯುವಾಗಲೇ ಹೊಸಶತ್ರುಗಳು ಹುಟ್ಟಿಕೊಳ್ಳುತ್ತಾರೆ. |
138 | ಕೆಲವೊಮ್ಮೆ ಕಣ್ಣೀರು ಸಂತಸದ ಸಂಕೇತವಾದರೆ, ಒಳಗಿನ ನೋವನ್ನು ತೋರಿಸಲು ಮುಗುಳ್ನಗೆ ಸಮರ್ಥವಾಗಿರುತ್ತವೆ. |
139 | ಹೆಚ್ಚು ಮಾತನಾಡುವುದು ಮತ್ತು ಬೇಗನೆ ಭಾವುಕರಾಗಿಬಿಡುವುದು ಯಾವಾಗಲೂ ಸಂಕಟವನ್ನು ತರುತ್ತದೆ. |
140 | ನಾನು ಯಾವಾಗಲೂ ಸರಿ ಎಂದು ಭಾವಿಸುವುದಾದರೆ ನಾವು ಜೀವನದಲ್ಲಿ ಏನನ್ನೂ ಕಲಿಯಲಾರೆವು. |
141 | ಒಂದು ಕ್ಷಣದಲ್ಲಿ ಜೀವನವನ್ನು ಬದಲಾಯಿಸಲು ಅಸಾಧ್ಯವಿರಬಹುದು. ಆದರೆ ಒಂದು ಕ್ಷಣದಲ್ಲಿ ತೆಗೆದುಕೊಂಡ ತೀರ್ಮಾನ ಇಡೀ ಜೀವನವನ್ನೇ ಬದಲಾಯಿಸುತ್ತದೆ. |
142 | ಜಗತ್ತಿನಲ್ಲಿ ಕಾಣುವ ಬಹುತೇಕ ಜನರು ಮುಖವಾಡಗಳನ್ನು ಹಾಕಿಕೊಂಡೇ ಇದ್ದಾರೆ. |
143 | ಸಾಮಾನ್ಯವಾಗಿ ಒಬ್ಬರ ಬಗ್ಗೆ ಮಾತನಾಡುವಾಗ ಅವರೆಷ್ಟು ಒಳ್ಳೆಯವರು ಅಥವಾ ಕೆಟ್ಟವರು ಎಂದು ಅವರ ನಡತೆಯ ಬಗ್ಗೆ ಮಾತನಾಡುತ್ತೇವೆ. ವಿನಾಕಾರಣ ಯಾರ ರೂಪದ ಬಗ್ಗೆಯೂ ಮಾತನಾಡುವುದಿಲ್ಲ. ಆದ್ದರಿಂದ ನಡೆಯೇ ಮುಖ್ಯವಾಗುತ್ತವೆ. |
144 | ನಾವು ಹೆಚ್ಚಾಗಿ ಯಾರನ್ನು ಹಚ್ಚಿಕೊಂಡು ಪ್ರೀತಿಸುತ್ತೇವೆಯೋ ಅವರೇ ನಮಗೆ ನೋವು ಮಾಡುತ್ತಾರೆ. |
145 | ಎಲ್ಲರನ್ನೂ ಎಲ್ಲ ಸಂದರ್ಭಗಳಲ್ಲಿ ಮೆಚ್ಚಿಸಲು ಸಾಧ್ಯವಿಲ್ಲ. |
146 | ಎಲ್ಲರೂ ಅವರವರ ಜೀವ ಮತ್ತು ಜೀವನಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡುತ್ತಾರೆ. ಬಹುತೇಕ ಎಲ್ಲರೂ ಸ್ವಾರ್ಥೀಗಳೇ. ಬೇರೆಯವರ ಹಿತದ ಬಗ್ಗೆ ಯಾರೂ ಯೋಚಿಸುವುದಿಲ್ಲ. |
147 | ನಾವು ಇಷ್ಟಪಟ್ಟಿದ್ದನ್ನು ಒಂದಲ್ಲ ಒಂದಿನ ಕಳೆದುಕೊಳ್ಳುತ್ತೇವೆ |
148 | ಪ್ರತಿಯೊಬ್ಬರ ಆಸೆ, ಆಕಾಂಕ್ಷೆ, ಆಲೋಚನೆಗಳು ಸದಾ ಬೇರೆಬೇರೆಯಾಗಿರುತ್ತವೆ. ಎಲ್ಲರೂ ಬೇರೆ ಬೇರೆಯವರೇ. ಅವರಿಗೆ ಹೋಲಿಸಿಕೊಂಡು ಕೊರಗಬಾರದು. |
149 | ನಾವು ಹೋಗುವ ದಾರಿಯಲ್ಲಿ ಕಷ್ಟಗಳೇ ಬರದಿದ್ದರೆ ನಾವು ದಾರಿ ತಪ್ಪಿದ್ದೇವೆ ಎಂದು ಕೊಳ್ಳಬೇಕು. |
150 | ನಮ್ಮ ಜೀವನ ಬಹಳ ಕಠಿಣ ಎನಿಸುತ್ತದೆ. ಆದರೆ ನಮ್ಮಲ್ಲಿ ಸಾಕಷ್ಟು ತಾಳ್ಮೆಯ ಜೊತೆಗೆ ಧೈರ್ಯವೂ ಇದ್ದರೆ ಬದುಕು ನಡೆಸುವುದು ಸುಲಭ ಸಾಧ್ಯ. |
151 | ಕಷ್ಟದ ಸಮಯದಲ್ಲಿಯೂ ಸಮಾಧಾನವಾಗಿರುವವರೇ ಶೂರರು. |
152 | ಸದ್ಗುಣಗಳಿಂದ ಕುರೂಪವನ್ನೂ ಮುಚ್ಙಬಹುದು. ಆದರೆ ಎಂತಹಾ ಸ್ಪುರದ್ರೂಪದಿಂದಲೂ ಕೆಟ್ಟ ನಡತೆಯನ್ನು ರಕ್ಷಿಸಲಾಗದು. |
153 | ವಿಶ್ವಾಸಾರ್ಹತೆಯೊಂದೇ ನಮ್ಮನ್ನು ಎಲ್ಲರಿಗೂ ಆಕರ್ಷಿಸುತ್ತದೆ. |
154 | ಬೇರೆಯವರು ನಮ್ಮನ್ನು ನೋಡಲಿ ಎಂದು ಏರುವುದಕ್ಕಿಂತ ನಾವು ಎಲ್ಲವನ್ನೂ ಕಾಣಲು ಮೇಲೇರುವುದು ಸೂಕ್ತ. |
155 | ಅನುಮಾನ ಮತ್ತು ಅಹಂಕಾರ ಎರಡೂ ಮಾನವನ ಶತೃಗಳು. ಒಮ್ಮೆ ಬಂದಿತೆಂದರೆ ಅವರಿಗೂ ಸುಖ ನೆಮ್ಮದಿ ಇರದು. ಇವರಿಂದ ಬೇರೆಯವರೂ ನೆಮ್ಮದಿಯಿಂದ ಇರಲಾಗದು. |
156 | ಜೀವ ನಮ್ಮ ಮಾತನ್ನು ಕೇಳುವುದಿಲ್ಲ. ಯಾವಾಗ ಬೇಕಾದರೂ ಹೋಗಬಹುದು. ಆದರೆ ಜೀವನ ನಮ್ಮ ಮಾತನ್ನು ಕೇಳುತ್ತದೆ. ಅದನ್ನು ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು |
157 | ಅನುಮಾನ ಎನ್ನುವುದು ಒಂದು ದೊಡ್ಡ ರೋಗ. ಅನುಮಾನದಿಂದ ನೋಡಿದರೆ, ಪ್ರತಿಯೊಂದು ಒಳ್ಳೆಯದರಲ್ಲಿ ಕೆಟ್ಟದ್ದೇ ಕಾಣುತ್ತದೆ. |
158 | ವೃತ್ತಿಯಲ್ಲಿರುವವರಿಗೆ ಅವರ ಮೊದಲ ಶತ್ರು ಎಂದರೆ ಅವರ ತಕ್ಷಣದ ಅಧಿಕಾರಿಯೇ ಆಗಿರುತ್ತಾರೆ. |
159 | ಒಟ್ಟಿನಲ್ಲಿ ನಂಬಿಕೆ, ಆತ್ಮವಿಶ್ವಾಸ, ಧೈರ್ಯ ಹಾಗೂ ಪರಿಶ್ರಮ - ಇವುಗಳೇ ಯಶಸ್ಸಿನ ರಹಸ್ಯ |
160 | ಸಹನೆಯಿಂದ ಸಕಲವನ್ನೂ ಗೆಲ್ಲಬಹುದು. ವಿನಯದಿಂದ ವಿಜಯವನ್ನು ಸಾಧಿಸಬಹುದು. |
161 | ಜಗತ್ತಿನಲ್ಲಿ ನಡೆದಷ್ಟೂ ದಾರಿ ಇದೆ, ಪಡೆಯುವಷ್ಟು ಭಾಗ್ಯವೂ ಇದೆ. ಜೊತೆಗೆ ಅದಕ್ಕೆ ಬೇಕಾದ ಮನಸು, ಆರೋಗ್ಯ, ಪ್ರಯತ್ನ - ಅವುಗಳೂ ನಮ್ಮಲ್ಲಿವೆ. ಆದರೆ ಅವುಗಳ ಹೊಂದಾಣಿಕೆಯ ಅಜ್ಞಾನವೇ ಪ್ರಧಾನವಾಗಿದೆ |
162 | ಸಾಧಿಸುವ ಮೊದಲು ಕಿವುಡನಾಗಬೇಕು. ಸಾಧಿಸಿದ ನಂತರ ಮೂಗನಾಗಬೇಕು. |
163 | ಪ್ರತಿಯೊಬ್ಬರಲ್ಲೂ ಅವರಿಗೆ ಗೊತ್ತಿಲ್ಲದ ಶಕ್ತಿಯೊಂದು ನಿಶ್ಚಯವಾಗಿ ಅಡಗಿರುತ್ತದೆ. ಆ ಆತ್ಮಬಲವನ್ನು ಒಮ್ಮೆ ಹೊರ ಹಾಕಬೇಕು. ಅದರಿಂದ ಇತಿಹಾಸ ಸೃಷ್ಟಿ ಮಾಡದಿರಬಹುದು. ಆದರೆ ಇತಿಹಾಸದ ಪುಟದಲ್ಲಿ ಅವರ ಹೆಸರು ದಾಖಲಾಗುವುದು ದಿಟ. |
164 | ನಾವು ಯಾವ ವಸ್ತುವಿನ ಮೇಲೂ ಆಸಕ್ತಿ ಹೊಂದಿರದಿದ್ದರೆ ಈ ಜೀವನವೇ ನೀರಸ. ನಾವು ಎಷ್ಟು ಆಸಕ್ತಿ ಹೊಂದಿರುತ್ತೇವೆಯೋ ಜೀವನ ಅಷ್ಟು ಸುಂದರ. |
165 | ಏನನ್ನಾದರೂ ಸಾಧಿಸಬೇಕು ಎಂದು ಮನಸ್ಸಿಗೆ ಬಂದ ಮೇಲೆ ಒಂದು ನಿಮಿಷವೂ ತಡಮಾಡಬಾರದು. ತಕ್ಷಣವೇ ಆ ಬಗ್ಗೆ ಕಾರ್ಯಪ್ರವೃತ್ತರಾಗಬೇಕು . |
166 | ಗೊತ್ತಿಲ್ಲದಿರುವ ಯಾವುದನ್ನೇ ತಿಳಿಯಲು ನಮಗೆ ಗೊತ್ತಿರುವುದರ ಮೂಲಕವೇ ಪ್ರಯತ್ನಿಸಬೇಕು. |
167 | ಎಲ್ಲಕ್ಕಿಂತ ಹೆಚ್ಚಿನದು ಎಂದರೆ ನೆಮ್ಮದಿ. ಎಷ್ಟೇ ಹಣವನ್ನು ಕೊಟ್ಟರೂ ಅದು ಸಿಗಲಾರದು. ಆದರೂ ಎಷ್ಟು ಕೊಟ್ಟಾದರೂ ಅದನ್ನು ಪಡೆಯಲು ಪ್ರಯತ್ನಿಸುತ್ತೇವೆ. |
168 | ಆರಂಭದಲ್ಲಿ ಆರೋಗ್ಯ ಕೆಡಿಸಿಕೊಂಡು ದುಡಿಯುತ್ತೇವೆ. ಕಡೆಯ ದಿನಗಳಲ್ಲಿ ದುಡಿದಿದ್ದ ಎಲ್ಲವನ್ನೂ ಆರೋಗ್ಯಕ್ಕಾಗಿ ಕೊಡಲು ಸಿದ್ದವಿರುತ್ತೇವೆ. |
169 | ರೂಪವಾಗಲೀ ಕುರೂಪವಾಗಲೀ ಅವು ಪ್ರತ್ಯೇಕವಾಗಿರುವುದಿಲ್ಲ. ಅದು ನೋಡುವ ದೃಷ್ಟಿಯಲ್ಲಿರುತ್ತದೆ |
170 | ಅಭಿಮಾನ ಎಲ್ಲವನ್ನೂ ಕುರುಡು ಮಾಡುತ್ತದೆ. |
171 | ಸಾರ್ವಜನಿಕವಾಗಿ ನಮಗೆ ನಾವು ಬೈದುಕೊಳ್ಳುವುದು ಹಾಗೂ ಬೇರೆಯವರು ನಮ್ಮನ್ನು ಹೊಗಳುವುದು ಹೆಮ್ಮೆಯ ಸಂಗತಿ. ಇದು ಹಿಂದು ಮುಂದಾದರೆ ಅದು ನೋವಿನ ಸಂಗತಿ. |
172 | ನಮಗೆ ಯಾವುದೇ ರೀತಿ ಸಂಬಂಧವಿಲ್ಲದಿರುವ ವ್ಯಕ್ತಿ, ವಸ್ತು ಅಥವಾ ವಿಷಯಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. |
173 | ಆಯ್ಕೆಗಳಿದ್ದಾಗ ಯಾರೂ ಬದಲಾಗರು. ಬೇರೆ ಆಯ್ಕೆಯೇ ಇಲ್ಲ ಎಂದರಿತಾಗ ನಿಶ್ಚಯವಾಗಿಯೂ ಬದಲಾಗುವರು. |
174 | ಮಹತ್ವ ಹಾಗೂ ಸಡಗರವಿಲ್ಲದಿದ್ದರೆ ಹಬ್ಬವಾಗಲೀ, ಉತ್ಸವವಾಗಲೀ ಕಳೆಯಲು ಇನ್ನೊಂದು ದಿನ ಅಷ್ಟೇ. |
175 | ಇಷ್ಟವಾದ ಕೆಲಸವನ್ನು ಗಳಿಸಬೇಕು. ಇಲ್ಲವೇ ನಮಗೆ ಸಿಕ್ಕ ಕೆಲಸದಲ್ಲಿ ಸಂತೋಷವನ್ನು ಹುಡುಕಬೇಕು. ಇದೇ ಸಂತೃಪ್ತಿಯ ಹಾದಿ. |
176 | ಇನ್ನೊಬ್ಬರ ಬಗ್ಗೆ ಕಾಳಜಿ ಮಾಡುವುದು ಸುಲಭ. ಆದರೆ ಬೇರೆಯವರು ನಮ್ಮ ಬಗ್ಗೆ ಕಾಳಜಿ ಮಾಡುವಂತೆ ಮಾಡುವುದು ಅತಿ ಕಷ್ಟ. ಯಾವ ಕಾರಣಕ್ಕೂ ಆ ಸಂಬಂಧವನ್ನು ಮಾತ್ರ ಕಳೆದುಕೊಳ್ಳಬಾರದು. |
177 | ನಂಬಿಕೆ ಒಂದು ಕಾಣದ ನಾಣ್ಯ. ಗಳಿಸಲು ಕಷ್ಟ, ಕಳೆಯುವುದು ಸುಲಭ. |
178 | ತಪ್ಪುಗಳು ಸಹಜವಾಗಿ ಘಟಿಸುತ್ತವೆ. ಆದರೆ ಅದು ತಪ್ಪು ಎಂದು ಗೊತ್ತಿದ್ದರೂ ತಿದ್ದಿಕೊಳ್ಳದಿರುವುದು ನಿಜವಾಗಿಯೂ ತಪ್ಪಾಗುತ್ತದೆ. |
179 | ಯಶಸ್ಸು ಎಂಬುವುದು ಬೇರೆಯವರ ದೃಷ್ಟಿ. ತೃಪ್ತಿ ಎಂಬುವುದು ನಮ್ಮ ದೃಷ್ಟಿ. ಅದು ಬದುಕಿನ ಗುರಿಯೂ ಆಗಿರುತ್ತದೆ. |
180 | ಬೇರೆಯವರಂತೆ ನಾನಿಲ್ಲ ಎಂದು ಕೊರಗುವ ಬದಲು, ಬೇರೆಯವರು ನಮ್ಮನ್ನು ಅನುಕರಿಸುವಂತೆ ನಾವು ಬದುಕುವುದೇ ಸರಿಯಾದುದು. |
181 | ನಾವಿರುವ ಸ್ಥಿತಿಗೆ ನಾವೇ ಹೊಣೆಗಾರರು. ಅದಕ್ಕಾಗಿ ಬೇರೆಯವರನ್ನು ಅಥವಾ ಆ ಸಮಯವನ್ನು ಜವಾಬ್ದಾರಿಯಾಗಿ ಮಾಡಬಾರದು |
182 | ಕಷ್ಟಕ್ಕೆ ದುಡ್ಡಿದ್ದವರು ಅಥವಾ ಇಲ್ಲದವರು ಎಂಬ ತಾರತಮ್ಯವಿಲ್ಲ. ಎಲ್ಲರಿಗೂ ಅದು ಇದ್ದದ್ದೇ. |
183 | ಜೀವನವು ಪಾಠಗಳನ್ನು ಕಡ್ಡಾಯವಾಗಿ ಕಲಿಸುತ್ತದೆ. ಅದರಿಂದ ತಪ್ಪಿಸಿಕೊಳ್ಳಲು ಅಸಾಧ್ಯ. ಇದರಿಂದ ಜೀವನದ ಸತ್ಯ ಸರಿಯಾಗಿ ಅರಿವಾಗುತ್ತದೆ. |
184 | ವಿದ್ಯೆ, ದುಡಿಮೆ ಹಾಗೂ ತಾಳ್ಮೆ ಇವುಗಳಲ್ಲಿ ಎಲ್ಲವೂ ಅಥವಾ ಯಾವುದಾದರೂ ಇದ್ದವರೇ ಯಶಸ್ವಿಯಾಗುವುದು. |
185 | ಸಂತೋಷವಿಲ್ಲದೆ ಮಾಡಿದ ಕೆಲಸದಿಂದ ಮಾಡಿದವರ ಸಮಯವೂ ವ್ಯರ್ಥ ಉಳಿದವರಿಗೂ ಆ ಕೆಲಸದಿಂದ ಪ್ರಯೋಜನವಿಲ್ಲ. |
186 | ನೆಮ್ಮದಿ ಎಂಬುದು ಅತ್ಯಂತ ದುಬಾರಿ. ಸಾಲದೆಂಬಂತೆ ಇದನ್ನು ನಾವೇ ಗಳಿಸಬೇಕಾದದ್ದು. |
187 | ನಗುವವರೆಲ್ಲರೂ ಸುಖಿಗಳಲ್ಲ. ಹೆಚ್ಚಿನ ಹಲವರ ನಗುವಿನ ಹಿಂದೆ ನೋವಿನ ನೆರಳಿದೆ. ನೋವಲ್ಲಿಯೂ ನಗುವವರನ್ನು ನೋಡಿ ನಾವು ನಮ್ಮ ಅಳುವನ್ನು ಮರೆಯಬೇಕು. |
188 | ನಮಗೆ ಬೇಡದಿರುವುದನ್ನು ನಾವು ಸಂತೋಷದಿಂದ ಪರರಿಗೆ ಬಿಟ್ಟು ಕೊಡಬೇಕು. ಹಾಗೂ ನಮ್ಮದಲ್ಲದ ವಸ್ತುಗಳನ್ನು ಬಯಸಬಾರದು. ಇಲ್ಲದಿದ್ದರೆ ಅನಾವಶ್ಯಕವಾಗಿ ಘರ್ಷಣೆಗಳಾಗುವ ಸಂಭವ ಹೆಚ್ಚು. |
189 | ಕೆಟ್ಟ ಮೇಲೆ ಬುದ್ಧಿ ಬಂತು ಎಂಬ ಮಾತಿದೆ. ವಾಸ್ತವವಾಗಿ ಜನರಿಗೆ ಬುದ್ಧಿ ಬಂದ ಮೇಲೆ ಕೆಡುವವರೇ ಹೆಚ್ಚು. |
190 | ಮನುಷ್ಯನಿಗೆ ಅರವತ್ತು ವಯಸ್ಸಿನವರೆಗೂ ತಾನು ಎಷ್ಟು ಬೇಗ ಸಾಯುವೆನೋ ಎಂಬ ಚಿಂತೆ. ನಂತರದ ವರ್ಷಗಳಲ್ಲಿ ಎಷ್ಟು ಹೆಚ್ಚು ಬದುಕುವೆನೋ ಎಂಬ ಚಿಂತೆ. ಪರಾವಲಂಬನೆಯ ಭಯವೇ ಇದಕ್ಕೆ ಕಾರಣ. |
191 | ಐವತ್ತರ ವಯಸ್ಸಿನವರೆಗೂ ನಾವು ವಯಸ್ಸು ಎಷ್ಟು ಕಡಿಮೆ ಹೇಳಿದರೂ ಸಾಲದು. ನಂತರದಲ್ಲಿ ಎಷ್ಟು ಹೆಚ್ಚು ಹೇಳಿದರೂ ಸಾಲದು. ಎಂತಹಾ ವಿಪರ್ಯಾಸ. |
192 | ಗೆಲುವು, ಸಂತೋಷ ಸಡಗರದ ವಿಷಯಗಳನ್ನು ತಕ್ಷಣ ಹೇಳಲು ಚೆಂದ. ಸೋಲು, ದುಃಖ ಹಾಗೂ ನೋವಿನ ವಿಚಾರಗಳನ್ನು ಹಳತಾದ ಮೇಲೆ ಹೇಳಲು ಚೆಂದ. |
193 | ಪ್ರತಿ ಕಾಯಿಲೆಗೂ ಪಥ್ಯ ಅಥವಾ ಪರಿಹಾರ ಹೇಳದವರೇ ಇಲ್ಲ ಎನಿಸುತ್ತದೆ |
194 | ಹಲ್ಲು ನೋವು, ಕಾಲು ನೋವು ಹೀಗೆ ಯಾವುದೇ ನೋವು ಬಂದಾಗ ಅದಕ್ಕಿಂತ ಹೆಚ್ಚಿನ ನೋವು ಬೇರೆ ಯಾವುದೂ ಇಲ್ಲ ಎಂದೆನಿಸುತ್ತದೆ. |
195 | ನಮ್ಮದೇ ಅತೀ ಕಷ್ಟದ ಜೀವನ ಎಂಬ ಭಾವನೆ ಎಲ್ಲರಲ್ಲಿಯೂ ಇದೆ |
196 | ಬೇರೆಯವರಂತೆ ನಾನಿಲ್ಲ ಎಂದು ಕೊರಗುವ ಬದಲು ಬೇರೆಯವರು ನಮ್ಮನ್ನು ಅನುಕರಿಸುವಂತೆ ನಾವು ಬದುಕುವುದೇ ಸರಿಯಾದುದು. |
197 | ಸರ್ವಸಂಗ ಪರಿತ್ಯಾಗಿಗೂ ಕನಿಷ್ಠ ತನ್ನ ಜ್ಞಾನವನ್ನು ಇನ್ನೊಬ್ಬರಿಗೆ ಹಂಚುವ ಆಸೆ. ಆಸೆ ಇಲ್ಲದ ಜೀವಿಯೇ ಇಲ್ಲ. ದುರಾಸೆಯೇ ದುಃಖಕ್ಕೆ ಮೂಲ ಎಂದು ಓದಿಕೊಳ್ಳುವುದೇ ಸರಿ. |
198 | ಮನಃಶ್ಶಾಂತಿಯೊಂದಿಗಿನ ಸಂಪತ್ತು, ಆರೋಗ್ಯ ಜೊತೆಗೆ ಇರುವ ಆಯುಷ್ಯ. ಸಂಬಂಧಗಳನ್ನು ಅರ್ಥಮಾಡಿಕೊಳ್ಳುವ ಬಂಧುಗಳು ಇರುವವರೇ ಸುಖಿಗಳು. |
199 | ಹೊಸದಾಗಿದ್ದಾಗ ಯಾವುದೇ ವಸ್ತು ಅಥವಾ ಬಂಧುಗಳು ತೀರಾ ಪರಮಾಪ್ತ ಹಾಗೂ ಹೆಚ್ಚು ಪ್ರಾಶಸ್ತ್ಯ ವಾಗಿರುತ್ತದೆ. |
200 | ತಂದೆ, ತಾಯಿ, ಅತ್ತೆ, ಮಾವ ಹಾಗೂ ಸಂಗಾತಿ ಹೊರತು ಎಲ್ಲಾ ಬಂಧುಗಳೂ ನಮ್ಮ ಪ್ರತಿಸ್ಪರ್ಧಿಗಳೇ. ಅಂತೆಯೇ ನಮ್ಮ ಅಂತರ್ಯದಲ್ಲಿ ಅವರನ್ನು ನಾವು ಅಪೇಕ್ಷಿಸುವುದಿಲ್ಲ. |
ಈ ವಾಕ್ಯಗಳನ್ನು ಓದಿದ ನಂತರ ತಮ್ಮಲ್ಲಿರುವ ವಾಕ್ಯ ಸಂಗ್ರಹಗಳ ಬಗ್ಗೆಯೂ ತಿಳಿಸಿ. ನನಗೂ ಕಲಿಯಲು ಅವಕಾಶವಾಗುತ್ತದೆ. ಎಂದಿನಂತೆ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಭಾಗದಲ್ಲಿ ತಿಳಿಸಿರಿ.
ನಮಸ್ಕಾರ,
ReplyDeleteದೈನಂದಿನ ಲೌಕಿಕ ಜೀವನವನ್ನು ಸಮಾಧಾನಕರವಾಗಿ ನಡೆಸಲು ಹಾಗೂ ಸಮಾಜದಲ್ಲಿ ಅಜಾತಶತ್ರುವಾಗಿ ಬೆಳೆದು ಸೈ ಎನಿಸಿಕೊಳ್ಳಲು ತಾವು ಸಿಡಿಸಿದ ದ್ವಿಶತಕ ಅಣಿಮುತ್ತುಗಳು ಅವಿಸ್ಮರಣೀಯ ಮತ್ತು ಮನನಯೋಗ್ಯವಾಗಿದೆ. ತಾವೇ ಹೇಳಿದಂತೆ ಆತ್ಮಸಂಶೋಧನೆಗೆ ಈ ಮಹಾವಾಕ್ಯಗಳು ಏಣಿಮೆಟ್ಟಿಲುಗಳಾಗಬಹುದು. ನಾವು ಈ ದೇಹದಲ್ಲಿರುವವರೆಗೂ ಈ ಎಲ್ಲ ವಾಕ್ಯಗಳನ್ನು ಜೀವನದಲ್ಲಿ ಅಡವಳಿಸಿಕೊಳ್ಳುವುದರಿಂದ (ಮುಖ್ಯವಾಗಿ 4,5,11,16,19,20,21,27,52,55 ಹಾಗೂ 80) ಪರಕ್ಕಿಂತ ಇಹದಲ್ಲಿ ಸುಖಜೀವನ ನಡೆಸಬಹುದು. ನಮ್ಮ ಜೀವನೋದ್ಧಾರಕ್ಕೆ ನಮ್ಮ ಸ್ವಪ್ರಯತ್ನವೇ ಸತ್ಯವಾದರೂ ಒಮ್ಮೊಮ್ಮೆ 128ನೇ ವಾಕ್ಯವು ಸರಿಎಂಬ ಭ್ರಮೆಯುಂಟಾಗುತ್ತದೆ. ಮುಗಿಸುವಮುನ್ನ, ಸಮಾಜದ ಬಹಳಷ್ಟು ಮಂದಿಗೆ ಮುಖವಾಡದ ಅವಶ್ಯಕತೆ ಇರುವುದರಿಂದ(142) ಹಿರಿಯರು ಹೇಳುವುದೇನೆಂದರೆ - ಸಂಬಂಧದ ಸಂತೆಯಲ್ಲಿ ನಿಜ ಹೇಳುವವನು ಏಕಾಂಗಿ. ತಮ್ಮ ಸಮಯೋಚಿತ ವಾಕ್ಯ ಸಂದೇಶಕ್ಕಾಗಿ ಧನ್ಯವಾದಗಳು.
ಎಲ್ಲಾ ನುಡಿಮುತ್ತುಗಳೂ ಅದೆಷ್ಟು ಅಮೂಲ್ಯ.... ಸಂಗ್ರಹಕ್ಕೊಂದು ಅಭಿನಂದನೆಗಳು....ಅದ್ಭುತ ಬರಹ
ReplyDeleteಆರಿಸಿ ಸಾಂಗ್ರಹಿಸಿರುವಾ ಆಣಿಮುತ್ತುಗಳ ಸರಮಾಲೆ, ಚಿಂತನ ಮತ್ತು ಮನನ ಮಾಡಿ ಬದುಕಿನಲ್ಲಿ ಸುಖಸಂತೋಷಗಳಿಂದ ಇರಲು ಅಳವಡಿಸಿಕೊಳ್ಳ ಬಹುದಾದ ಸರಳ ಸೂತ್ರಗಳು. ಸಂಗ್ರಹಿಸಿ ಕೊಟ್ಟಿರುವ ಲೇಖಕರಿಗೆ ನಮನಗಳು
ReplyDeleteಬಹಳ ಸ್ವಭಾವಿಕ ಹಾಗು ಅರ್ಥಪೂರ್ಣ ವಿಮರ್ಶೆ ನಮ್ಮ ದೈನಂಧಿಕ ಜೀವನ ಹೇಗಿದೆ ಹಾಗು ಹೇಗಿರಬೇಕು ಎಂಬುದರ ಅರ್ಥಪೂರ್ಣ ವಿವರಣೆ. ಇದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಿದರೆ ಜೀವನ ಸಾರ್ಥಕ. ಧನ್ಯವಾದಗಳು 🙏🏻🙏🏻🙏🏻
ReplyDeleteಒಂದೊಂದು ವಿಚಾರವು ಸತ್ವಯುತವಾದ ಬೀಜ. ಓದಿ ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸು, ಕುಟು೦ಬ ಮತ್ತು ಸಮಾಜದಲ್ಲಿ ನೆಮ್ಮದಿಯಿಂದರಲು ಅನುಕೂಲ. ಸುಲಭ, ಸರಳ ಮತ್ತು ತಿಳಿದಿದೆ ಎನಿಸಿದರೂ, ಕೆಲವೊಮ್ಮ ಕೋಪ, ದು:ಖ, ದ್ವೇಷಗಳಂತಹ ಭಾವಗಳಿಗೆ ತುತ್ತಾಗಿ ಇವುಗಳನ್ನು ಕಡೆಗಣಿಸಿಬಿಡುತ್ತೇವೆ.
ReplyDeleteಎಲ್ಲವನ್ನು ಒಂದೆಡೆ ಸ೦ಗ್ರಹಿಸಿ ನೆನೆಪಿಸಿದ್ದೀರಿ. ಧನ್ಯವಾದಗಳು
ತುಂಬ ಹಿಡಿಸಿದ ಕೆಲವು ಉಕ್ತಿಗಳು
10, 23, 27, 30, 140, 181
ಅತ್ಯುತ್ತಮ ಸಂಗ್ರಹ. ಅನೇಕ ಬಾರಿ ಓದಿದರೂ, ಮತ್ತೆ ಮತ್ತೆ ಓದಬೇಕೆನಿಸುತ್ತದೆ. "ಹೌದಲ್ಲವೇ ?" ಎಂಬ ಉದ್ಗಾರ ತಾನಾಗಿಯೇ ಹೊರಬರುತ್ತದೆ. ಒಳ್ಳೆಯ ಅಭ್ಯಾಸ ಮುಂದುವರಿಸಿಕೊಂಡು ಹೋಗು. ನನ್ನಂತೆ ಅನೇಕರಿಗೆ ಉಪಯೋಗವಾಗುತ್ತದೆ. ಕ್ರಮಾಂಕ ೭ ಮತ್ತು ೬೫ ಒಂದೇ ಪುನರುಕ್ತಿಯಾಗಿದೆ.
ReplyDeleteಇತಿ ನಿನ್ನಣ್ಣ ಹಿರಿಯಣ್ಣ
ಪ್ರಿಯ ರಾಮಚಂದ್ರ,
ReplyDeleteನೀವು ಇಲ್ಲಿ ಕಾಣಿಸಿರುವ ಅನುಭವದ ಮುತ್ತುಗಳನ್ನು ನನ್ನದೇ ಅನುಭವದ ಬೆಳಕಿನಲ್ಲಿ ನೋಡಿ ಪ್ರತಿಕ್ರಯಿಸಿದ್ದೇನೆ.
7 repeats in 65
71. Almost repeats in 90
72. ಕರ್ಮವನ್ನು ನೀಗಿಕೊಳ್ಳುವ ಮಾರ್ಗವೂ ಅದೇ.
81. ಅಭಿಪ್ರಾಯ ತಿಳಿಯಲಿಲ್ಲ
94. ಅನಾರೋಗ್ಯದಿಂದ ಶೇಷ ಆಯುಸ್ಸು ಪೂರ್ತಿ ಹಾಸಿಗೆ ಹಿಡಿದು ಮಲಗಿ ನರಳುತ್ತಾ "ನನಗೆ ಸಾವು ಬರಬಾರದೇ" ಎಂದು ಹಂಬಲಿಸುವವರೂ (ಅವರಿಗಿವಿಲ್ಲದೆಯೇ) ಉಳಿದವರಿಗೆ (ಸಹನೆ, ಶುಷ್ರೂಷೆ, ಸೇವಾರ್ಪಣೆಯ) ಪಾಠ ಕಲಿಸುತ್ತಿರುತ್ತಾರೆ.
124. ಅನುಭವಗಳ ಪರಿಣಾಮವಾಗಿ ಇದನ್ನು ಮನನ ಮಾಡಿಕೊಳ್ಳುತ್ತಿದ್ದೇನೆ
139. ವಯಸ್ಸಾದಂತೆ ಮಾತು ಹೆಚ್ಚಾಗದಿದ್ದರೂ ಹೆಚ್ಚುಹೆಚ್ಚು ಭಾವುಕನಾಗುತ್ತಿದ್ದೇನೆ. ಅಸಹಾಯಕತೆಯಿಂದ ಅಳುತ್ತಿರುವ ಮಗು, ಇಂಪಾಗಿ ಹಾಡುವ ಎಳೆಯರು, ಬವಣೆಪಡುತ್ತಿರುವ ರಕ್ತಸಂಬಂಧಿಗಳು..... ಇಂತಹ ಸಂದರ್ಭಗಳಿಂದ ಬಹುಬೇಗ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಇದೇನು, ಮುದಿತನದಿಂದ ಮನಸ್ಥೈರ್ಯ ಕುಗ್ಗುತ್ತಿರುವ ಚಿಹ್ನೆಯೋ!
148. ನಿಜ. ಜೊತೆಗೆ ಒಬ್ಬೊಬ್ಬರ ಕರ್ಮಫಲಗಳ ಹೊರೆಯೂ ಭಿನ್ನವಾಗಿರುತ್ತವೆ. ಅನ್ಯರ ಅದ್ದೂರಿ, ವೈಭವಗಳು ಕಣ್ಣಿಗೆ ರಾಚುತ್ತವೆ. ಆದರೆ, ಅವರ ಕರ್ಮಫಲಗಳ ಹೊರೆ ಏನೂ ಕಾಣದು.
163. ಇಲ್ಲಪ್ಪಾ, ಹಾಗಲ್ಲ ಅದು!
ಇತಿಹಾಸವನ್ನು ಸೃಷ್ಟಿ ಮಾಡಿದವರೇ ಹೇಳಹೆಸರಿಲ್ಲದಂತೆ ಮರೆಯಾಗಿದ್ದಾರೆ.
_ಅಕ್ಕಿಯೊಳಗನ್ನವನು ಮೊದಲಾರು ಕಂಡವನು?_
_ಅಕ್ಕರದ ಬರಹಕ್ಕೆ ಮೊದಲಿಗನದಾರು?|_
_ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ_
_ದಕ್ಕುವುದೆ ನಿನಗೆ ಜಸ ಮಂಕುತಿಮ್ಮ||_
166. ಜ್ಞಾನಬೋಧನೆಯ ಕ್ರಮವೂ ಅದೇ. From known to unknown
180. 196_ರ ಪುನರಾವರ್ತನೆ
183. ಶಾಲಾಕಾಲೇಜುಗಳಲ್ಲಿನ ಕಲಿಕೆಗೂ, ಜೀವನದಲ್ಲಿನ ಕಲಿಕೆಗೂ ಇರುವ ವ್ಯತ್ಯಾಸ:
ಶಾಲಾಕಾಲೇಜುಗಳಲ್ಲಿ ಮೊದಲು ಪಾಠ ಕಲಿಸಲಾಗುತ್ತದೆ. ನಂತರ ಅದರ ಬಗ್ಗೆ ನಮ್ಮನ್ನು ಪರೀಕ್ಷಿಸಲಾಗುತ್ತದೆ.
ಜೀವನದಲ್ಲಾದರೋ ಮೊದಲು ನಮ್ಮನ್ನು ಪರೀಕ್ಷೆಗೊಡ್ಡಲಾಗುತ್ತದೆ. ನಂತರ ಮಾತ್ರವೇ ಅದರ ಬಗ್ಗೆ ನಾವು ಪಾಠ ಕಲಿಯುವುದು.
189. ಮೊದಲ *ಬುದ್ಧಿ* ಮತ್ತು ಎರಡನೆಯ *ಬುದ್ಧಿ* ಇವೆರಡೂ ಭಿನ್ನ ಅರ್ಥವಿರುವ ಒಂದೇ ಪದಗಳು
196. 180ರ ಪುನರಾವರ್ತನೆ